Adi Parva: Chapter 171

ಆದಿ ಪರ್ವ: ಚೈತ್ರರಥ ಪರ್ವ

೧೭೧

ತನ್ನಲ್ಲಿದ್ದ ಕೋಪವನ್ನು ಎಲ್ಲಿ ಹಾಕಬೇಕೆಂದು ಔರ್ವನು ಕೇಳಲು ಪಿತೃಗಳು ಅದನ್ನು ವರುಣಾಲಯದಲ್ಲಿ ಇರಿಸಿದುದು (೧-೨೩).

01171001 ಔರ್ವ ಉವಾಚ|

01171001a ಉಕ್ತವಾನಸ್ಮಿ ಯಾಂ ಕ್ರೋಧಾತ್ಪ್ರತಿಜ್ಞಾಂ ಪಿತರಸ್ತದಾ|

01171001c ಸರ್ವಲೋಕವಿನಾಶಾಯ ನ ಸಾ ಮೇ ವಿತಥಾ ಭವೇತ್||

ಔರ್ವನು ಹೇಳಿದನು: “ಪಿತೃಗಳೇ! ಕ್ರೋಧದಿಂದ ಸರ್ವಲೋಕಗಳನ್ನೂ ವಿನಾಶ ಮಾಡುತ್ತೇನೆ ಎಂದು ಹೇಳಿದ ನನ್ನ ಆ ಪ್ರತಿಜ್ಞೆಯ ಮಾತುಗಳು ಮಿಥ್ಯವಾಗಲಾರದು.

01171002a ವೃಥಾರೋಷಪ್ರತಿಜ್ಞೋ ಹಿ ನಾಹಂ ಜೀವಿತುಮುತ್ಸಹೇ|

01171002c ಅನಿಸ್ತೀರ್ಣೋ ಹಿ ಮಾಂ ರೋಷೋ ದಹೇದಗ್ನಿರಿವಾರಣಿಂ||

ವೃಥಾ ರೋಷ ಮತ್ತು ಪ್ರತಿಜ್ಞೆಗಳನ್ನು ಮಾಡುವವನ ಜೀವನವನ್ನು ಜೀವಿಸುವುದು ನನಗೆ ಇಷ್ಟವಿಲ್ಲ. ಅದನ್ನು ನಾನು ಬೇರೆಕಡೆ ತಿರುಗಿಸದಿದ್ದರೆ ಇಟ್ಟಿಗೆಯನ್ನು ಸುಡುವ ಬೆಂಕಿಯಂತೆ ಅದು ನನ್ನನ್ನೇ ಸುಟ್ಟುಬಿಡುತ್ತದೆ.

01171003a ಯೋ ಹಿ ಕಾರಣತಃ ಕ್ರೋಧಂ ಸಂಜಾತಂ ಕ್ಷಂತುಮರ್ಹತಿ|

01171003c ನಾಲಂ ಸ ಮನುಜಃ ಸಮ್ಯಕ್ತ್ರಿವರ್ಗಂ ಪರಿರಕ್ಷಿತುಂ||

ಯಾವ ಕಾರಣಕ್ಕಾಗಿ ಕ್ರೋಧವು ಹುಟ್ಟಿದೆಯೋ ಅದು ಶಾಂತವಾಗಬೇಕು. ಇಲ್ಲದಿದ್ದರೆ ಆ ಮನುಷ್ಯನು ತ್ರಿವರ್ಗಗಳನ್ನು ಸರಿಯಾಗಿ ಪರಿರಕ್ಷಿಸಲು ಸಾದ್ಯವಾಗುವುದಿಲ್ಲ.

01171004a ಅಶಿಷ್ಟಾನಾಂ ನಿಯಂತಾ ಹಿ ಶಿಷ್ಟಾನಾಂ ಪರಿರಕ್ಷತಾ|

01171004c ಸ್ಥಾನೇ ರೋಷಃ ಪ್ರಯುಕ್ತಃ ಸ್ಯಾನ್ನೃಪೈಃ ಸ್ವರ್ಗಜಿಗೀಷುಭಿಃ||

ಅಶಿಷ್ಟರನ್ನು ಶಿಕ್ಷಿಸುವುದೇ ಶಿಷ್ಟರನ್ನು ಪರಿರಕ್ಷಿಸಿದಂತೆ. ಸ್ವರ್ಗವನ್ನು ಗೆಲ್ಲ ಬಯಸುವ ನೃಪರು ತಮ್ಮ ರೋಷವನ್ನು ಸರಿಯಾದ ಕಡೆಯಲ್ಲೇ ಪ್ರಯೋಗಿಸುತ್ತಾರೆ.

01171005a ಅಶ್ರೌಷಮಹಮೂರುಸ್ಥೋ ಗರ್ಭಶಯ್ಯಾಗತಸ್ತದಾ|

01171005c ಆರಾವಂ ಮಾತೃವರ್ಗಸ್ಯ ಭೃಗೂಣಾಂ ಕ್ಷತ್ರಿಯೈರ್ವಧೇ||

ನಾನಿನ್ನೂ ಹುಟ್ಟದಿದ್ದಾಗ, ತಾಯಿಯ ತೊಡೆಯಲ್ಲಿ ಗರ್ಭಶಯ್ಯಾಗತನಾಗಿದ್ದಾಗ ನಾನು ಕ್ಷತ್ರಿಯರಿಂದ ವಧೆಗೈಯಲ್ಪಟ್ಟ ಭೃಗುಗಣ ಮತ್ತು ಮಾತೃವರ್ಗದವರ ಕೂಗನ್ನು ಕೇಳಿದ್ದೆ.

01171006a ಸಾಮರೈರ್ಹಿ ಯದಾ ಲೋಕೈರ್ಭೃಗೂಣಾಂ ಕ್ಷತ್ರಿಯಾಧಮೈಃ|

01171006c ಆಗರ್ಭೋತ್ಸಾದನಂ ಕ್ಷಾಂತಂ ತದಾ ಮಾಂ ಮನ್ಯುರಾವಿಷತ್||

ಕ್ಷತ್ರಿಯಾಧಮರಿಂದ ಗರ್ಭದಲ್ಲಿರುವ ಭೃಗುಗಳ ನಾಶವಾಗುತ್ತಿರುವುದನ್ನು ಲೋಕಗಳು ಮತ್ತು ಅವುಗಳಲ್ಲಿರುವ ಅಮರರು ಪ್ರತಿಭಟಿಸದೇ ಸುಮ್ಮನೆ ಇದ್ದುದನ್ನು ನೋಡಿ ಕೋಪ ಬಂದಿತು.

01171007a ಆಪೂರ್ಣಕೋಶಾಃ ಕಿಲ ಮೇ ಮಾತರಃ ಪಿತರಸ್ತಥಾ|

01171007c ಭಯಾತ್ಸರ್ವೇಷು ಲೋಕೇಷು ನಾಧಿಜಗ್ಮುಃ ಪರಾಯಣಂ||

ತುಂಬು ಗರ್ಭಿಣಿಯರಾದ ನನ್ನ ತಾಯಂದಿರು ಮತ್ತು ತಂದೆಯರು ಭಯದಿಂದಿದ್ದಾಗ ಯಾವ ಲೋಕದ ಯಾರಿಂದಲೂ ರಕ್ಷಣೆಯು ದೊರೆಯಲಿಲ್ಲ.

01171008a ತಾನ್ಭೃಗೂಣಾಂ ತದಾ ದಾರಾನ್ಕಶ್ಚಿನ್ನಾಭ್ಯವಪದ್ಯತ|

01171008c ಯದಾ ತದಾ ದಧಾರೇಯಮೂರುಣೈಕೇನ ಮಾಂ ಶುಭಾ||

ಆ ಭೃಗುಗಳ ಪತ್ನಿಯರಿಗೆ ಎಲ್ಲಿಂದಲೂ ಸಹಾಯವು ದೊರೆಯದಿದ್ದುದರಿಂದ ನನ್ನ ಶುಭೆ ತಾಯಿಯು ನನ್ನನ್ನು ತನ್ನ ತೊಡೆಯಲ್ಲಿ ಇಟ್ಟುಕೊಂಡಳು.

01171009a ಪ್ರತಿಷೇದ್ಧಾ ಹಿ ಪಾಪಸ್ಯ ಯದಾ ಲೋಕೇಷು ವಿದ್ಯತೇ|

01171009c ತದಾ ಸರ್ವೇಷು ಲೋಕೇಷು ಪಾಪಕೃನ್ನೋಪಪದ್ಯತೇ||

ಲೋಕಗಳಲ್ಲಿ ಪಾಪವನ್ನು ತಡೆಗಟ್ಟುವವರು ಯಾರಾದರೂ ಇದ್ದರೆ ಲೋಕಗಳಲ್ಲಿ ಪಾಪವೇ ನಡೆಯುವುದಿಲ್ಲ.

01171010a ಯದಾ ತು ಪ್ರತಿಷೇದ್ಧಾರಂ ಪಾಪೋ ನ ಲಭತೇ ಕ್ವ ಚಿತ್|

01171010c ತಿಷ್ಠಂತಿ ಬಹವೋ ಲೋಕೇ ತದಾ ಪಾಪೇಷು ಕರ್ಮಸು||

ಆದರೆ ಪಾಪಿಯು ತನ್ನನ್ನು ಎದುರಿಸಿ ತಡೆಯುವವನು ಯಾರೂ ಸಿಗದಿದ್ದಾಗ ಲೋಕದಲ್ಲಿ ಬಹಳಷ್ಟು ಜನರು ಪಾಪಕರ್ಮದಲ್ಲಿ ತೊಡಗುತ್ತಾರೆ.

01171011a ಜಾನನ್ನಪಿ ಚ ಯಃ ಪಾಪಂ ಶಕ್ತಿಮಾನ್ನ ನಿಯಚ್ಛತಿ|

01171011c ಈಶಃ ಸನ್ಸೋಽಪಿ ತೇನೈವ ಕರ್ಮಣಾ ಸಂಪ್ರಯುಜ್ಯತೇ||

ಅದು ಪಾಪವೆಂದು ತಿಳಿದಿದ್ದರೂ ಮತ್ತು ತಡೆಗಟ್ಟುವ ಶಕ್ತಿಯಿದ್ದರೂ ಅದನ್ನು ನಿಯಂತ್ರಿಸದೇ ಇದ್ದವನು ಈಶ್ವರನಾಗಿದ್ದರೂ ಅವನಿಗೂ ಆ ಕರ್ಮದ ಪಾಪವು ತಗಲುತ್ತದೆ.

01171012a ರಾಜಭಿಶ್ಚೇಶ್ವರೈಶ್ಚೈವ ಯದಿ ವೈ ಪಿತರೋ ಮಮ|

01171012c ಶಕ್ತೈರ್ನ ಶಕಿತಾ ತ್ರಾತುಮಿಷ್ಟಂ ಮತ್ವೇಹ ಜೀವಿತಂ||

01171013a ಅತ ಏಷಾಮಹಂ ಕ್ರುದ್ಧೋ ಲೋಕಾನಾಮೀಶ್ವರೋಽದ್ಯ ಸನ್|

01171013c ಭವತಾಂ ತು ವಚೋ ನಾಹಮಲಂ ಸಮತಿವರ್ತಿತುಂ||

ರಾಜರು ಮತ್ತು ಈಶ್ವರರು ಸಮರ್ಥರಿದ್ದರೂ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದು ಯೋಚಿಸಿ ನನ್ನ ತಂದೆಯರನ್ನು ಉಳಿಸಲಿಲ್ಲ ಎಂದಾಗ ನಾನು ಲೋಕಗಳ ಮತ್ತು ಅವುಗಳ ಈಶ್ವರರ ಮೇಲೆ ಕೃದ್ಧನಾಗಿದ್ದೇನೆ. ಆದರೂ ನಾನು ನಿಮ್ಮ ಮಾತುಗಳನ್ನು ಉಲ್ಲಂಘಿಸಲಾರೆ.

01171014a ಮಮ ಚಾಪಿ ಭವೇದೇತದೀಶ್ವರಸ್ಯ ಸತೋ ಮಹತ್|

01171014c ಉಪೇಕ್ಷಮಾಣಸ್ಯ ಪುನರ್ಲೋಕಾನಾಂ ಕಿಲ್ಬಿಷಾದ್ಭಯಂ||

ನಾನು ನಿಮ್ಮ ಮಾತಿನಂತೆ ನಡೆದುಕೊಳ್ಳದಿದ್ದರೆ ಪುನಃ ಲೋಕಗಳ ಕಷ್ಟವನ್ನು ತಿಳಿದೂ ಸಮರ್ಥನಾಗಿದ್ದರೂ ಉಪೇಕ್ಷೆಮಾಡಿದುದರ ಪಾಪವು ನನಗೆ ಬರುತ್ತದೆ.

01171015a ಯಶ್ಚಾಯಂ ಮನ್ಯುಜೋ ಮೇಽಗ್ನಿರ್ಲೋಕಾನಾದಾತುಮಿಚ್ಛತಿ|

01171015c ದಹೇದೇಷ ಚ ಮಾಮೇವ ನಿಗೃಹೀತಃ ಸ್ವತೇಜಸಾ||

ಲೋಕವನ್ನೇ ಸುಡಲು ಹೊರಟಿರುವ ನನ್ನ ಸಿಟ್ಟಿನಿಂದ ಹುಟ್ಟಿದ ಈ ಅಗ್ನಿಯನ್ನು ನಾನು ನಿಗ್ರಹಿಸಿದೆನೆಂದಾದರೆ ನನ್ನನ್ನೇ ತನ್ನ ತೇಜಸ್ಸಿನಿಂದ ಸುಟ್ಟುಬಿಡುತ್ತದೆ.

01171016a ಭವತಾಂ ಚ ವಿಜಾನಾಮಿ ಸರ್ವಲೋಕಹಿತೇಪ್ಸುತಾಂ|

01171016c ತಸ್ಮಾದ್ವಿದಧ್ವಂ ಯಚ್ಶ್ರೇಯೋ ಲೋಕಾನಾಂ ಮಮ ಚೇಶ್ವರಾಃ||

ನೀವೆಲ್ಲರೂ ಸರ್ವಲೋಕಹಿತಾಕಾಂಕ್ಷಿಗಳೆಂದು ತಿಳಿದಿದ್ದೇನೆ. ಆದುದರಿಂದ ಈಶ್ವರರೇ! ನನಗೂ ಲೋಕಗಳಿಗೂ ಒಳ್ಳೆಯದಾಗುವಂಥಹ ಉಪಾಯವನ್ನು ಹೇಳಿ.”

01171017 ಪಿತರ ಊಚುಃ

01171017a ಯ ಏಷ ಮನ್ಯುಜಸ್ತೇಽಗ್ನಿರ್ಲೋಕಾನಾದಾತುಮಿಚ್ಛತಿ|

01171017c ಅಪ್ಸು ತಂ ಮುಂಚ ಭದ್ರಂ ತೇ ಲೋಕಾ ಹ್ಯಪ್ಸು ಪ್ರತಿಷ್ಠಿತಾಃ||

ಪಿತೃಗಳು ಹೇಳಿದರು: “ಲೋಕಗಳನ್ನು ಸುಡಲು ಇಚ್ಛಿಸುವ ನಿನ್ನ ಸಿಟ್ಟಿನಿಂದ ಹುಟ್ಟಿದ ಅಗ್ನಿಯನ್ನು ನೀರಿನಲ್ಲಿ ಬಿಟ್ಟು ಬಿಡು. ಲೋಕಗಳು ನೀರಿನ ಮೇಲೆಯೇ ನಿಂತಿವೆ. ನಿನಗೆ ಮಂಗಳವಾಗಲಿ.

01171018a ಆಪೋಮಯಾಃ ಸರ್ವರಸಾಃ ಸರ್ವಮಾಪೋಮಯಂ ಜಗತ್|

01171018c ತಸ್ಮಾದಪ್ಸು ವಿಮುಂಚೇಮಂ ಕ್ರೋಧಾಗ್ನಿಂ ದ್ವಿಜಸತ್ತಮ||

ಸರ್ವ ರಸಗಳೂ ಆಪೋಮಯ ಮತ್ತು ಸರ್ವ ಜಗತ್ತೂ ಆಪೋಮಯ. ಆದುದರಿಂದ ದ್ವಿಜಸತ್ತಮ! ನಿನ್ನ ಈ ಕ್ರೋಧಾಗ್ನಿಯನ್ನು ನೀರಿನಲ್ಲಿಯೇ ಬಿಟ್ಟುಬಿಡು.

01171019a ಅಯಂ ತಿಷ್ಠತು ತೇ ವಿಪ್ರ ಯದೀಚ್ಛಸಿ ಮಹೋದಧೌ|

01171019c ಮನ್ಯುಜೋಽಗ್ನಿರ್ದಹನ್ನಾಪೋ ಲೋಕಾ ಹ್ಯಾಪೋಮಯಾಃ ಸ್ಮೃತಾಃ||

01171020a ಏವಂ ಪ್ರತಿಜ್ಞಾ ಸತ್ಯೇಯಂ ತವಾನಘ ಭವಿಷ್ಯತಿ|

01171020c ನ ಚೈವ ಸಾಮರಾ ಲೋಕಾ ಗಮಿಷ್ಯಂತಿ ಪರಾಭವಂ||

ಅನಘ! ಈ ರೀತಿ ನಿನ್ನ ಪ್ರತಿಜ್ಞೆಯೂ ಸತ್ಯವಾಗುತ್ತದೆ ಮತ್ತು ಅಮರರಿಂದ ಕೂಡಿದ ಲೋಕಗಳು ಪರಾಭವಹೊಂದುವುದಿಲ್ಲ.””

01171021 ವಸಿಷ್ಠ ಉವಾಚ|

01171021a ತತಸ್ತಂ ಕ್ರೋಧಜಂ ತಾತ ಔರ್ವೋಽಗ್ನಿಂ ವರುಣಾಲಯೇ|

01171021c ಉತ್ಸಸರ್ಜ ಸ ಚೈವಾಪ ಉಪಯುಂಕ್ತೇ ಮಹೋದಧೌ||

ವಸಿಷ್ಠನು ಹೇಳಿದನು: “ಮಗೂ! ನಂತರ ಔರ್ವನು ಕ್ರೋಧದಿಂದ ಜನಿಸಿದ ಆ ಅಗ್ನಿಯನ್ನು ವರುಣಾಲಯದಲ್ಲಿ ವಿಸರ್ಜಿಸಿದನು.

01171022a ಮಹದ್ಧಯಶಿರೋ ಭೂತ್ವಾ ಯತ್ತದ್ವೇದವಿದೋ ವಿದುಃ|

01171022c ತಮಗ್ನಿಮುದ್ಗಿರನ್ವಕ್ತ್ರಾತ್ಪಿಬತ್ಯಾಪೋ ಮಹೋದಧೌ||

ಅದು ಒಂದು ಮಹಾ ಹಯಶಿರವಾಗಿ ಅದರ ಬಾಯಿಯಿಂದ ಅಗ್ನಿಯನ್ನು ಉಗುಳುತ್ತಾ ಮಹೋದಧಿಯ ನೀರನ್ನು ಕುಡಿಯುತ್ತದೆ ಎಂದು ವೇದವಿದರು ತಿಳಿದಿದ್ದಾರೆ.

01171023a ತಸ್ಮಾತ್ತ್ವಮಪಿ ಭದ್ರಂ ತೇ ನ ಲೋಕಾನ್ ಹಂತುಮರ್ಹಸಿ|

01171023c ಪರಾಶರ ಪರಾನ್ಧರ್ಮಾಂಜಾನಂಜ್ಞಾನವತಾಂ ವರ||

ಪರಾಶರ! ಜ್ಞಾನವಂತರಲ್ಲಿ ಶ್ರೇಷ್ಠ! ಆದುದರಿಂದ ಪರಮ ಧರ್ಮವನ್ನು ಅರಿತಿರುವ ನೀನೂ ಕೂಡ ಲೋಕವನ್ನು ನಾಶಪಡಿಸುವುದು ಸರಿಯಲ್ಲ. ನಿನಗೆ ಮಂಗಳವಾಗಲಿ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಔರ್ವೋಪಾಖ್ಯಾನೇ ಏಕಸಪ್ತತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಔರ್ವೋಪಾಖ್ಯಾನದಲ್ಲಿ ನೂರಾಎಪ್ಪತ್ತೊಂದನೆಯ ಅಧ್ಯಾಯವು.

Image result for indian flowers

Comments are closed.