Adi Parva: Chapter 170

ಆದಿ ಪರ್ವ: ಚೈತ್ರರಥ ಪರ್ವ

೧೭೦

ಶರಣುಬಂದ ಕ್ಷತ್ರಿಯರಿಗೆ ಔರ್ವನು ದೃಷ್ಟಿಪ್ರದಾನ ಮಾಡಿದ್ದುದು (೧-೮). ಲೋಕವಿನಾಶಕ್ಕೆ ತಪಸ್ಸನ್ನು ತಪಿಸುತ್ತಿದ್ದ ಔರ್ವನನ್ನು ಪಿತೃಗಳು ಬಂದು ತಡೆದುದು (೯-೨೧).

01170001 ಬ್ರಾಹ್ಮಣ್ಯುವಾಚ|

01170001a ನಾಹಂ ಗೃಹ್ಣಾಮಿ ವಸ್ತಾತ ದೃಷ್ಟೀರ್ನಾಸ್ತಿ ರುಷಾನ್ವಿತಾ|

01170001c ಅಯಂ ತು ಭಾರ್ಗವೋ ನೂನಮೂರುಜಃ ಕುಪಿತೋಽದ್ಯ ವಃ||

ಬ್ರಾಹ್ಮಣಿಯು ಹೇಳಿದಳು: “ನಾನೇನೂ ನಿಮ್ಮ ಕಣ್ಣುಗಳನ್ನು ತೆಗೆದುಕೊಂಡಿಲ್ಲ ಆಥವಾ ನಾನು ರೋಶಾನ್ವಿತಳೂ ಆಗಿಲ್ಲ. ನನ್ನ ತೊಡೆಯಿಂದ ಹುಟ್ಟಿದ ಈ ಭಾರ್ಗವನು ನಿಮ್ಮ ಮೇಲೆ ಕುಪಿತನಾಗಿದ್ದಾನೆ.

01170002a ತೇನ ಚಕ್ಷೂಂಷಿ ವಸ್ತಾತ ನೂನಂ ಕೋಪಾನ್ಮಹಾತ್ಮನಾ|

01170002c ಸ್ಮರತಾ ನಿಹತಾನ್ಬಂಧೂನಾದತ್ತಾನಿ ನ ಸಂಶಯಃ||

ಅವನೇ ನಿಮ್ಮ ಕಣ್ಣುಗಳನ್ನು ತೆಗೆದುಕೊಂಡ. ಏಕೆಂದರೆ ಆ ಮಹಾತ್ಮನು ಅವನ ಬಂಧುಗಳ ವಧೆಗೈದ ನಿಮ್ಮನ್ನು ನೆನಪಿಸಿಕೊಂಡು ನಿಸ್ಸಂಶಯವಾಗಿ ನಿಮ್ಮ ಮೇಲೆ ಕುಪಿತನಾಗಿರಬಹುದು.

01170003a ಗರ್ಭಾನಪಿ ಯದಾ ಯೂಯಂ ಭೃಗೂಣಾಂ ಘ್ನತ ಪುತ್ರಕಾಃ|

01170003c ತದಾಯಮೂರುಣಾ ಗರ್ಭೋ ಮಯಾ ವರ್ಷಶತಂ ಧೃತಃ||

ಗರ್ಭದಲ್ಲಿರುವ ಭೃಗು ಮಕ್ಕಳನ್ನು ನೀವು ಕೊಲ್ಲುತ್ತಿದ್ದುದರಿಂದ ನಾನು ನನ್ನ ಈ ಗರ್ಭವನ್ನು ಒಂದು ನೂರು ವರ್ಷಗಳ ಪರ್ಯಂತ ನನ್ನ ತೊಡೆಯಲ್ಲಿಯೇ ಇರಿಸಿಕೊಂಡಿದ್ದೆ.

01170004a ಷಡಂಗಶ್ಚಾಖಿಲೋ ವೇದ ಇಮಂ ಗರ್ಭಸ್ಥಮೇವ ಹಿ|

01170004c ವಿವೇಶ ಭೃಗುವಂಶಸ್ಯ ಭೂಯಃ ಪ್ರಿಯಚಿಕೀರ್ಷಯಾ||

ಭವಿಷ್ಯದಲ್ಲಿ ಭೃಗುವಂಶಕ್ಕೆ ಒಳ್ಳೆಯದಾಗಲೆಂದು ಗರ್ಭಧಾರಣೆಯ ಸಮಯದಲ್ಲಿಯೇ ಷಡಂಗಸಮೇತ ಅಖಿಲ ವೇದವೂ ಇವನನ್ನು ಪ್ರವೇಶಿಸಿತ್ತು.

01170005a ಸೋಽಯಂ ಪಿತೃವಧಾನ್ನೂನಂ ಕ್ರೋಧಾದ್ವೋ ಹಂತುಮಿಚ್ಛತಿ|

01170005c ತೇಜಸಾ ಯಸ್ಯ ದಿವ್ಯೇನ ಚಕ್ಷೂಂಷಿ ಮುಷಿತಾನಿ ವಃ||

ಪಿತೃವಧೆಗೈದವರನ್ನು ಕ್ರೋಧದಿಂದ ಕೊಲ್ಲಲ್ಲು ಬಯಸುತ್ತಿದ್ದಾನೆ ಮತ್ತು ತನ್ನ ದಿವ್ಯ ತೇಜಸ್ಸಿನಿಂದ ನಿಮ್ಮ ದೃಷ್ಟಿಗಳನ್ನು ಕುರುಡುಮಾಡಿದ್ದಾನೆ.

01170006a ತಮಿಮಂ ತಾತ ಯಾಚಧ್ವಮೌರ್ವಂ ಮಮ ಸುತೋತ್ತಮಂ|

01170006c ಅಯಂ ವಃ ಪ್ರಣಿಪಾತೇನ ತುಷ್ಟೋ ದೃಷ್ಟೀರ್ವಿಮೋಕ್ಷ್ಯತಿ||

ನನ್ನ ಸುತೋತ್ತಮ ಔರ್ವನಲ್ಲಿ ಯಾಚಿಸಿರಿ. ನೀವು ಅವನಿಗೆ ಶರಣು ಬೀಳುವುದರಿಂದ ತುಷ್ಟನಾಗಿ ನಿಮಗೆ ದೃಷ್ಟಿಯನ್ನು ನೀಡುತ್ತಾನೆ.””

01170007 ವಸಿಷ್ಠ ಉವಾಚ|

01170007a ಏವಮುಕ್ತಾಸ್ತತಃ ಸರ್ವೇ ರಾಜಾನಸ್ತೇ ತಮೂರುಜಂ|

01170007c ಊಚುಃ ಪ್ರಸೀದೇತಿ ತದಾ ಪ್ರಸಾದಂ ಚ ಚಕಾರ ಸಃ||

ವಸಿಷ್ಠನು ಹೇಳಿದನು: “ಇದನ್ನು ಕೇಳಿದ ಸರ್ವ ರಾಜರುಗಳೂ ಆ ಊರುಜನನ್ನು ಪ್ರಸೀದ ಎಂದು ಕೇಳಿಕೊಂಡಾಗ ಅವನು ಸಂತುಷ್ಟನಾದನು.

01170008a ಅನೇನೈವ ಚ ವಿಖ್ಯಾತೋ ನಾಮ್ನಾ ಲೋಕೇಷು ಸತ್ತಮಃ|

01170008c ಸ ಔರ್ವ ಇತಿ ವಿಪ್ರರ್ಷಿರೂರುಂ ಭಿತ್ತ್ವಾ ವ್ಯಜಾಯತ||

ಊರುವನ್ನು ಸೀಳಿ ಹೊರಬಂದ ಆ ವಿಪ್ರರ್ಷಿ ಸತ್ತಮನು ಔರ್ವ ಎಂಬ ಹೆಸರಿನಿಂದ ಲೋಕಗಳಲ್ಲಿ ವಿಖ್ಯಾತನಾದನು.

01170009a ಚಕ್ಷೂಂಷಿ ಪ್ರತಿಲಭ್ಯಾಥ ಪ್ರತಿಜಗ್ಮುಸ್ತತೋ ನೃಪಾಃ|

01170009c ಭಾರ್ಗವಸ್ತು ಮುನಿರ್ಮೇನೇ ಸರ್ವಲೋಕಪರಾಭವಂ||

ದೃಷ್ಟಿಯನ್ನು ಹಿಂದಕ್ಕೆ ಪಡೆದು ನೃಪರು ಹಿಂದಿರುಗಿದರು. ಆದರೆ ಆ ಭಾರ್ಗವ ಮುನಿಯು ಮಾತ್ರ ಸರ್ವ ಲೋಕಪರಾಭವದ ಕುರಿತು ಯೋಚಿಸಿದನು.

01170010a ಸ ಚಕ್ರೇ ತಾತ ಲೋಕಾನಾಂ ವಿನಾಶಾಯ ಮಹಾಮನಾಃ|

01170010c ಸರ್ವೇಷಾಮೇವ ಕಾರ್ತ್ಸ್ನ್ಯೆನ ಮನಃ ಪ್ರವಣಮಾತ್ಮನಃ||

ಮಗೂ! ಆ ಮಹಾತ್ಮನು ಲೋಕಗಳ ವಿನಾಶಕ್ಕೆ ತೊಡಗಿದನು. ತನ್ನ ಸಂಪೂರ್ಣ ಮನಸ್ಸನ್ನೂ ಅದೊಂದಕ್ಕೇ ತೊಡಗಿಸಿದನು.

01170011a ಇಚ್ಛನ್ನಪಚಿತಿಂ ಕರ್ತುಂ ಭೃಗೂಣಾಂ ಭೃಗುಸತ್ತಮಃ|

01170011c ಸರ್ವಲೋಕವಿನಾಶಾಯ ತಪಸಾ ಮಹತೈಧಿತಃ||

ಭೃಗುಗಳಿಗೆ ಕೀರ್ತಿಯನ್ನು ತರಲೋಸುಗ ಆ ಭೃಗುಸತ್ತಮನು ಸರ್ವಲೋಕವಿನಾಶಕ್ಕಾಗಿ ಮಹಾ ತಪಸ್ಸಿನಲ್ಲಿ ತೊಡಗಿದನು.

01170012a ತಾಪಯಾಮಾಸ ಲೋಕಾನ್ಸ ಸದೇವಾಸುರಮಾನುಷಾನ್|

01170012c ತಪಸೋಗ್ರೇಣ ಮಹತಾ ನಂದಯಿಷ್ಯನ್ಪಿತಾಮಹಾನ್||

ತನ್ನ ಪಿತಾಮಹರಿಗೆ ಮಹತ್ತರ ಆನಂದವನ್ನು ತರಲು ಉಗ್ರ ತಪಸ್ಸಿನಿಂದ ದೇವಾಸುರಮನುಷ್ಯರಿಂದೊಡಗೂಡಿದ ಲೋಕಗಳನ್ನು ಸುಡತೊಡಗಿದನು.

01170013a ತತಸ್ತಂ ಪಿತರಸ್ತಾತ ವಿಜ್ಞಾಯ ಭೃಗುಸತ್ತಮಂ|

01170013c ಪಿತೃಲೋಕಾದುಪಾಗಮ್ಯ ಸರ್ವ ಊಚುರಿದಂ ವಚಃ||

ಆ ಭೃಗುಸತ್ತಮನನ್ನು ಅರ್ಥಮಾಡಿಕೊಂಡ ಅವನ ಸರ್ವ ಪಿತೃಗಳು ಪಿತೃಲೋಕದಿಂದ ಕೆಳಗಿಳಿದು ಬಂದು ಅವನಿಗೆ ಈ ಮಾತುಗಳನ್ನು ಹೇಳಿದರು:

01170014a ಔರ್ವ ದೃಷ್ಟಃ ಪ್ರಭಾವಸ್ತೇ ತಪಸೋಗ್ರಸ್ಯ ಪುತ್ರಕ|

01170014c ಪ್ರಸಾದಂ ಕುರು ಲೋಕಾನಾಂ ನಿಯಚ್ಛ ಕ್ರೋಧಮಾತ್ಮನಃ||

“ಔರ್ವ! ಪುತ್ರಕ! ನಿನ್ನ ಈ ಉಗ್ರ ತಪಸ್ಸಿನ ಪ್ರಭಾವವನ್ನು ನೋಡಿದ್ದೇವೆ. ಲೋಕಗಳ ಮೇಲೆ ಕರುಣೆತೋರು. ನಿನ್ನ ಸಿಟ್ಟನ್ನು ಹಿಂತೆಗೆದುಕೋ.

01170015a ನಾನೀಶೈರ್ಹಿ ತದಾ ತಾತ ಭೃಗುಭಿರ್ಭಾವಿತಾತ್ಮಭಿಃ|

01170015c ವಧೋಽಭ್ಯುಪೇಕ್ಷಿತಃ ಸರ್ವೈಃ ಕ್ಷತ್ರಿಯಾಣಾಂ ವಿಹಿಂಸತಾಂ||

ಮಗೂ! ಭಾವಿತಾತ್ಮ ಭೃಗುಗಳಲ್ಲಿ ಶಕ್ತಿ ಇರಲಿಲ್ಲವೆಂದು ಅವರು ಕ್ಷತ್ರಿಯರಿಂದ ಸರ್ವರ ಹಿಂಸಾತ್ಮಕ ವಧೆಯನ್ನು ನಿರ್ಲಕ್ಷಿಸಲಿಲ್ಲ.

01170016a ಆಯುಷಾ ಹಿ ಪ್ರಕೃಷ್ಟೇನ ಯದಾ ನಃ ಖೇದ ಆವಿಶತ್|

01170016c ತದಾಸ್ಮಾಭಿರ್ವಧಸ್ತಾತ ಕ್ಷತ್ರಿಯೈರೀಪ್ಸಿತಃ ಸ್ವಯಂ||

ಆಯುಷ್ಯ ತುಂಬಾ ಹೆಚ್ಚಿದ್ದ ನಾವೇ ಬೇಸತ್ತು ನಾವೆಲ್ಲರೂ ಕ್ಷತ್ರಿಯರಿಂದ ಹತರಾಗಬೇಕೆಂದು ಬಯಸಿದ್ದೆವು.

01170017a ನಿಖಾತಂ ತದ್ಧಿ ವೈ ವಿತ್ತಂ ಕೇನ ಚಿದ್ಭೃಗುವೇಶ್ಮನಿ|

01170017c ವೈರಾಯೈವ ತದಾ ನ್ಯಸ್ತಂ ಕ್ಷತ್ರಿಯಾನ್ಕೋಪಯಿಷ್ಣುಭಿಃ|

01170017e ಕಿಂ ಹಿ ವಿತ್ತೇನ ನಃ ಕಾರ್ಯಂ ಸ್ವರ್ಗೇಪ್ಸೂನಾಂ ದ್ವಿಜರ್ಷಭ||

ಆದುದರಿಂದ ನಮ್ಮಲ್ಲಿಯೇ ಒಬ್ಬರು ಕ್ಷತ್ರಿಯರಿಗೆ ನಮ್ಮ ಮೇಲೆ ಕೋಪ ಬರಲಿ ಎನ್ನುವ ಉದ್ದೇಶದಿಂದ ಭೃಗುವಿನ ಮನೆಯಲ್ಲಿ ವಿತ್ತವನ್ನು ಹುಗಿದಿಟ್ಟಿದ್ದೆವು. ದ್ವಿಜರ್ಷಭ! ಸ್ವರ್ಗವನ್ನೇ ಬಯಸುವ ನಮಗೆ ವಿತ್ತದಲ್ಲಿ ಏನು ಆಸಕ್ತಿ?

01170018a ಯದಾ ತು ಮೃತ್ಯುರಾದಾತುಂ ನ ನಃ ಶಕ್ನೋತಿ ಸರ್ವಶಃ|

01170018c ತದಾಸ್ಮಾಭಿರಯಂ ದೃಷ್ಟ ಉಪಾಯಸ್ತಾತ ಸಮ್ಮತಃ||

ಮಗೂ! ನಮ್ಮೆಲ್ಲರನ್ನೂ ತೆಗೆದುಕೊಂಡು ಹೋಗಲು ಮೃತ್ಯುವೂ ಅಶಕ್ಯನೆಂದು ನೋಡಿ ಈ ಉಪಾಯವನ್ನು ಸಮ್ಮತಿಯಿಂದ ಮಾಡಿದೆವು. 

01170019a ಆತ್ಮಹಾ ಚ ಪುಮಾಂಸ್ತಾತ ನ ಲೋಕಾಽಲ್ಲಭತೇ ಶುಭಾನ್|

01170019c ತತೋಽಸ್ಮಾಭಿಃ ಸಮೀಕ್ಷ್ಯೈವಂ ನಾತ್ಮನಾತ್ಮಾ ವಿನಾಶಿತಃ||

ಆತ್ಮಹತ್ಯೆ ಮಾಡಿಕೊಳ್ಳುವವನು ಶ್ರೇಷ್ಠ ಶುಭ ಲೋಕಗಳನ್ನು ಪಡೆಯುವುದಿಲ್ಲ. ಈ ಕಾರಣದಿಂದಲೇ ನಮ್ಮನ್ನು ನಾವೇ ನಾಶಪಡಿಸಿಕೊಳ್ಳಲಿಲ್ಲ.

01170020a ನ ಚೈತನ್ನಃ ಪ್ರಿಯಂ ತಾತ ಯದಿದಂ ಕರ್ತುಮಿಚ್ಛಸಿ|

01170020c ನಿಯಚ್ಛೇದಂ ಮನಃ ಪಾಪಾತ್ಸರ್ವಲೋಕಪರಾಭವಾತ್||

ಮಗೂ! ಆದುದರಿಂದ ನೀನು ಈಗ ಮಾಡಲು ಇಚ್ಛಿಸಿರುವುದು ನಮಗೆ ಸ್ವಲ್ಪವೂ ಇಷ್ಟವಿಲ್ಲ. ಸರ್ವಲೋಕಪರಾಭವದ ಪಾಪ ಮನಸ್ಸನ್ನು ತಡೆಹಿಡಿದುಕೋ.

01170021a ನ ಹಿ ನಃ ಕ್ಷತ್ರಿಯಾಃ ಕೇ ಚಿನ್ನ ಲೋಕಾಃ ಸಪ್ತ ಪುತ್ರಕ|

01170021c ದೂಷಯಂತಿ ತಪಸ್ತೇಜಃ ಕ್ರೋಧಮುತ್ಪತಿತಂ ಜಹಿ||

ಪುತ್ರಕ! ಕ್ಷತ್ರಿಯರಾಗಲೀ ಈ ಸಪ್ತ ಲೋಕಗಳೇ ಆಗಲಿ ನಮ್ಮ ಈ ತಪೋ ತೇಜಸ್ಸನ್ನು ದೂಷಿಸಲು ಸಾದ್ಯವಿಲ್ಲ. ನಿನ್ನಲ್ಲಿರುವ ಕ್ರೋಧವನ್ನು ಕಿತ್ತು ಹಾಕು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಔರ್ವವಾರಣೇ ಸಪ್ತತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಔರ್ವವಾರಣದಲ್ಲಿ ನೂರಾಎಪ್ಪತ್ತನೆಯ ಅಧ್ಯಾಯವು.

Image result for indian flowers

Comments are closed.