ಆದಿ ಪರ್ವ: ಆಸ್ತೀಕ ಪರ್ವ
೧೭
ಸೂರ್ಯ-ಚಂದ್ರರ ಸೂಚನೆಯಂತೆ ಮೋಸದಿಂದ ಅಮೃತವನ್ನು ಕುಡಿಯುತ್ತಿದ್ದ ರಾಹುವಿನ ಶಿರವನ್ನು ಮೋಹಿನೀ ರೂಪದಲ್ಲಿದ್ದ ನಾರಾಯಣನು ಕತ್ತರಿಸುವುದು (೧-೧೦). ಅಮೃತಕ್ಕಾಗಿ ದೇವಾಸುರರ ಸಂಗ್ರಾಮ, ನರ-ನಾರಾಯಣರು ದೇವತೆಗಳಿಗೆ ವಿಜಯವನ್ನು ತಂದುದು (೧೧-೨೫). ದೇವತೆಗಳು ಅಮೃತಕ್ಕೆ ಕಡುಕಾವಲನ್ನಿರಿಸುದುದು (೨೬-೩೦).
01017001a ಅಥಾವರಣಮುಖ್ಯಾನಿ ನಾನಾಪ್ರಹರಣಾನಿ ಚ|
01017001c ಪ್ರಗೃಹ್ಯಾಭ್ಯದ್ರವನ್ದೇವಾನ್ಸಹಿತಾ ದೈತ್ಯದಾನವಾಃ||
ಸೂತನು ಹೇಳಿದನು: “ಆಗ ಪ್ರಮುಖ ದೈತ್ಯ-ದಾನವರು ಕವಚ ಮತ್ತು ನಾನಾ ಆಯುಧಗಳನ್ನು ಹಿಡಿದು ದೇವತೆಗಳನ್ನು ಬೆನ್ನಟ್ಟಿದರು.
01017002a ತತಸ್ತದಮೃತಂ ದೇವೋ ವಿಷ್ಣುರಾದಾಯ ವೀರ್ಯವಾನ್|
01017002c ಜಹಾರ ದಾನವೇಂದ್ರೇಭ್ಯೋ ನರೇಣ ಸಹಿತಃ ಪ್ರಭುಃ||
ಈ ಮಧ್ಯದಲ್ಲಿ ವೀರ್ಯವಾನ್ ಪ್ರಭು ವಿಷ್ಣುದೇವನು ನರನ ಜೊತೆಗೂಡಿ ದಾನವೇಂದ್ರರಿಂದ ಅಮೃತವನ್ನು ಕೊಂಡೊಯ್ದನು.
01017003a ತತೋ ದೇವಗಣಾಃ ಸರ್ವೇ ಪಪುಸ್ತದಮೃತಂ ತದಾ|
01017003c ವಿಷ್ಣೋಃ ಸಕಾಶಾತ್ಸಂಪ್ರಾಪ್ಯ ಸಂಭ್ರಮೇ ತುಮುಲೇ ಸತಿ||
ಆಗ ದೇವಗಣ ಸರ್ವರೂ ವಿಷ್ಣುವಿನಿಂದ ಅಮೃತವನ್ನು ಪಡೆದು ಸಂಭ್ರಮ ತುಮುಲಗಳಿಂದೊಡಗೂಡಿ ಕುಡಿದರು.
01017004a ತತಃ ಪಿಬತ್ಸು ತತ್ಕಾಲಂ ದೇವೇಷ್ವಮೃತಮೀಪ್ಸಿತಂ|
01017004c ರಾಹುರ್ವಿಬುಧರೂಪೇಣ ದಾನವಃ ಪ್ರಾಪಿಬತ್ತದಾ||
ದೇವತೆಗಳು ಬಹಳ ಆಸೆಯಿಂದ ಅಮೃತವನ್ನು ಕುಡಿಯುತ್ತಿರುವ ಸಮಯದಲ್ಲಿ ದೇವತೆಗಳ ರೂಪದಲ್ಲಿದ್ದ ದಾನವ ರಾಹುವೂ ಅದನ್ನು ಕುಡಿದನು.
01017005a ತಸ್ಯ ಕಂಠಮನುಪ್ರಾಪ್ತೇ ದಾನವಸ್ಯಾಮೃತೇ ತದಾ|
01017005c ಆಖ್ಯಾತಂ ಚಂದ್ರಸೂರ್ಯಾಭ್ಯಾಂ ಸುರಾಣಾಂ ಹಿತಕಾಮ್ಯಯಾ||
ಅಮೃತವು ಆ ದಾನವನ ಕಂಠವನ್ನು ಸೇರುವ ಸಮಯದಲ್ಲಿಯೇ ಸುರ ಹಿತಕಾಮಿ ಚಂದ್ರ-ಸೂರ್ಯರು ವಿಷಯವನ್ನು ತಿಳಿಸಿದರು.
01017006a ತತೋ ಭಗವತಾ ತಸ್ಯ ಶಿರಶ್ಚಿನ್ನಮಲಂಕೃತಂ|
01017006c ಚಕ್ರಾಯುಧೇನ ಚಕ್ರೇಣ ಪಿಬತೋಽಮೃತಮೋಜಸಾ||
ತಕ್ಷಣವೇ ಭಗವಂತನು ತನ್ನ ಚಕ್ರಾಯುಧದಿಂದ ಅಮೃತವನ್ನು ಕುಡಿಯುತ್ತಿದ್ದ ಅವನ ಅಲಂಕೃತ ಶಿರಸ್ಸನ್ನು ತುಂಡರಿಸಿದನು.
01017007a ತಚ್ಛೈಲಶೃಂಗಪ್ರತಿಮಂ ದಾನವಸ್ಯ ಶಿರೋ ಮಹತ್|
01017007c ಚಕ್ರೇಣೋತ್ಕೃತ್ತಮಪತಚ್ಚಾಲಯದ್ವಸುಧಾತಲಂ||
ಆ ದಾನವನ ಶೈಲಶೃಂಗ ಸಮಾನ ಮಹಾ ಶಿರವು ಚಕ್ರದಿಂದ ಕತ್ತರಿಸಲ್ಪಟ್ಟು ಆಕಾಶವನ್ನೇರಿತು ಮತ್ತು ಶಿರರಹಿತ ದೇಹವು ಭೂತಲದಲ್ಲಿ ಬಿದ್ದಿತು.
01017008a ತತೋ ವೈರವಿನಿರ್ಬಂಧಃ ಕೃತೋ ರಾಹುಮುಖೇನ ವೈ|
01017008c ಶಾಶ್ವತಶ್ಚಂದ್ರಸೂರ್ಯಾಭ್ಯಾಂ ಗ್ರಸತ್ಯದ್ಯಾಪಿ ಚೈವ ತೌ||
ಅಂದಿನಿಂದ ರಾಹುವಿನ ಮುಖ ಮತ್ತು ಚಂದ್ರ-ಸೂರ್ಯರ ನಡುವೆ ಶಾಶ್ವತ ವೈರತ್ವ ಬೆಳೆಯಿತು ಮತ್ತು ಅವರೀರ್ವರ ಗ್ರಹಣಗಳು ನಿರಂತರವಾಗಿ ನಡೆಯುತ್ತಿವೆ.
01017009a ವಿಹಾಯ ಭಗವಾಂಶ್ಚಾಪಿ ಸ್ತ್ರೀರೂಪಮತುಲಂ ಹರಿಃ|
01017009c ನಾನಾಪ್ರಹರಣೈರ್ಭೀಮೈರ್ದಾನವಾನ್ಸಮಕಂಪಯತ್||
ನಂತರ ಭಗವಾನ್ ಹರಿಯು ಸರಿಸಾಟಿಯಿಲ್ಲದ ಸ್ತ್ರೀರೂಪವನ್ನು ತೊರೆದು ನಾನಾ ತರಹದ ಭೀಷಣ ಆಯುಧಗಳನ್ನು ಎಸೆಯುತ್ತಾ ದಾನವರು ತತ್ತರಿಸುವಂತೆ ಮಾಡಿದನು.
01017010a ತತಃ ಪ್ರವೃತ್ತಃ ಸಂಗ್ರಾಮಃ ಸಮೀಪೇ ಲವಣಾಂಭಸಃ|
01017010c ಸುರಾಣಾಮಸುರಾಣಾಂ ಚ ಸರ್ವಘೋರತರೋ ಮಹಾನ್||
ಆಗ ಲವಣಾಂಭಸದ ತೀರದಲ್ಲಿ ಸುರಾಸುರರ ಸರ್ವ ಘೋರತರ ಮಹಾ ಸಂಗ್ರಾಮ[1]ವು ಪ್ರಾರಂಭವಾಯಿತು.
01017011a ಪ್ರಾಸಾಃ ಸುವಿಪುಲಾಸ್ತೀಕ್ಷ್ಣಾ ನ್ಯಪತಂತ ಸಹಸ್ರಶಃ|
01017011c ತೋಮರಾಶ್ಚ ಸುತೀಕ್ಷ್ಣಾಗ್ರಾಃ ಶಸ್ತ್ರಾಣಿ ವಿವಿಧಾನಿ ಚ||
ಸಹಸ್ರಾರು ಪ್ರಾಸಗಳು, ತೀಕ್ಷ್ಣ ಈಟಿಗಳು, ಮೊನಚಾದ ತುದಿಗಳ ತೋಮರಗಳು ಮತ್ತು ವಿವಿಧ ಶಸ್ತ್ರಗಳನ್ನು ಎಲ್ಲೆಡೆಯಿಂದ ಎಸೆಯಲಾಯಿತು.
01017012a ತತೋಽಸುರಾಶ್ಚಕ್ರಭಿನ್ನಾ ವಮಂತೋ ರುಧಿರಂ ಬಹು|
01017012c ಅಸಿಶಕ್ತಿಗದಾರುಗ್ಣಾ ನಿಪೇತುರ್ಧರಣೀತಲೇ||
ಚಕ್ರದಿಂದ ತುಂಡಾದ ಅಸುರರು ರಕ್ತವನ್ನು ಕಾರಿದರು ಮತ್ತು ಬಹಳಷ್ಟು ಮಂದಿ ಖಡ್ಗ, ಈಟಿ ಮತ್ತು ಗದೆಗಳ ಪ್ರಹಾರದಿಂದ ಭೂಮಿಯ ಮೇಲೆ ಉರುಳಿ ಬಿದ್ದರು.
01017013a ಛಿನ್ನಾನಿ ಪಟ್ಟಿಶೈಶ್ಚಾಪಿ ಶಿರಾಂಸಿ ಯುಧಿ ದಾರುಣೇ|
01017013c ತಪ್ತಕಾಂಚನಜಾಲಾನಿ ನಿಪೇತುರನಿಶಂ ತದಾ||
ದಾರುಣ ಯುದ್ಧದಲ್ಲಿ ಬಂಗಾರದ ಕಿರೀಟಗಳಿಂದ ಅಲಂಕೃತ ಹೊಳೆಯುತ್ತಿರುವ ಶಿರಗಳು ಚಕ್ರದಿಂದ ಕತ್ತರಿಸಲ್ಪಟ್ಟು ಬೀಳುತ್ತಲೇ ಇದ್ದವು.
01017014a ರುಧಿರೇಣಾವಲಿಪ್ತಾಂಗಾ ನಿಹತಾಶ್ಚ ಮಹಾಸುರಾಃ|
01017014c ಅದ್ರೀಣಾಮಿವ ಕೂಟಾನಿ ಧಾತುರಕ್ತಾನಿ ಶೇರತೇ||
ರಕ್ತಲಿಪ್ತಾಂಗರಾಗಿ ಎಲ್ಲೆಲ್ಲಿಯೂ ಸತ್ತು ಬಿದ್ದಿದ್ದ ಮಹಾ ಅಸುರರು ರಕ್ತದಿಂದ ಬಳಿಯಲ್ಪಟ್ಟ ಪರ್ವತ ಶಿಖರಗಳಂತೆ ಕಾಣುತ್ತಿದ್ದರು.
01017015a ಹಾಹಾಕಾರಃ ಸಮಭವತ್ತತ್ರ ತತ್ರ ಸಹಸ್ರಶಃ|
01017015c ಅನ್ಯೋನ್ಯಂ ಚಿಂದತಾಂ ಶಸ್ತ್ರೈರಾದಿತ್ಯೇ ಲೋಹಿತಾಯತಿ||
ಸೂರ್ಯಾಸ್ತವಾಗುತ್ತಿದ್ದಂತೆ ಅನ್ಯೋನ್ಯರ ಶಸ್ತ್ರಗಳ ಗಾಯದಿಂದ ಸಾಯುತ್ತಿರುವ ಸಾವಿರಾರು ಅಸುರರ ಹಾಹಾಕಾರವು ಎಲ್ಲ ಕಡೆಯಿಂದಲೂ ಕೇಳಿಬರುತ್ತಿತ್ತು.
01017016a ಪರಿಘೈಶ್ಚಾಯಸೈಃ ಪೀತೈಃ ಸನ್ನಿಕರ್ಷೇ ಚ ಮುಷ್ಟಿಭಿಃ|
01017016c ನಿಘ್ನತಾಂ ಸಮರೇಽನ್ಯೋನ್ಯಂ ಶಬ್ದೋ ದಿವಮಿವಾಸ್ಪೃಶತ್||
ಸಮರದಲ್ಲಿ ಒಬ್ಬರನ್ನೊಬ್ಬರು ಪರಿಘಗಳಿಂದ ತುಂಡರಿಸುವ ಮತ್ತು ಮುಷ್ಠಿಗಳಿಂದ ಹೊಡೆದಾಡುವ ಶಬ್ಧವು ಆಕಾಶವನ್ನೇರಿತು.
01017017a ಛಿಂಧಿ ಭಿಂಧಿ ಪ್ರಧಾವಧ್ವಂ ಪಾತಯಾಭಿಸರೇತಿ ಚ|
01017017c ವ್ಯಶ್ರೂಯಂತ ಮಹಾಘೋರಾಃ ಶಬ್ದಾಸ್ತತ್ರ ಸಮಂತತಃ||
“ಕತ್ತರಿಸು! ಚುಚ್ಚು! ಬೆನ್ನಟ್ಟು! ಮುನ್ನುಗ್ಗು!” ಮೊದಲಾದ ಮಹಾಘೋರ ಕದನ ಕೂಗುಗಳು ಕೇಳಿಬರುತ್ತಿದ್ದವು.
01017018a ಏವಂ ಸುತುಮುಲೇ ಯುದ್ಧೇ ವರ್ತಮಾನೇ ಭಯಾವಹೇ|
01017018c ನರನಾರಾಯಣೌ ದೇವೌ ಸಮಾಜಗ್ಮತುರಾಹವಂ||
ಈ ರೀತಿ ಭಯಾನಕ ಯುದ್ದವು ನಡೆಯುತ್ತಿರುವಾಗ, ದೇವ ನರ ಮತ್ತು ನಾರಾಯಣರು[2] ಸಮರವನ್ನು ಪ್ರವೇಶಿಸಿದರು.
01017019a ತತ್ರ ದಿವ್ಯಂ ಧನುರ್ದೃಷ್ಟ್ವಾ ನರಸ್ಯ ಭಗವಾನಪಿ|
01017019c ಚಿಂತಯಾಮಾಸ ವೈ ಚಕ್ರಂ ವಿಷ್ಣುರ್ದಾನವಸೂದನಂ||
ನರನಲ್ಲಿರುವ ದಿವ್ಯ ಧನುಸ್ಸನ್ನು ನೋಡಿ ದಾನವಸೂದನ ಭಗವಾನ್ ವಿಷ್ಣುವು ಚಕ್ರವನ್ನು ಸ್ಮರಿಸಿದನು.
01017020a ತತೋಽಂಬರಾಚ್ಚಿಂತಿತಮಾತ್ರಮಾಗತಂ
ಮಹಾಪ್ರಭಂಚಕ್ರಮಮಿತ್ರತಾಪನಂ|
01017020c ವಿಭಾವಸೋಸ್ತುಲ್ಯಮಕುಂಠಮಂಡಲಂ
ಸುದರ್ಶನಂ ಭೀಮಮಜಯ್ಯಮುತ್ತಮಂ||
ಅವನು ಸ್ಮರಿಸುತ್ತಿದ್ದಂತೆಯೇ ಆಕಾಶದಿಂದ ಶತ್ರುತಾಪನ, ತೇಜಸ್ಸಿನಲ್ಲಿ ವಿಭಾವಸುವಿನ ಸರಿಸಮಾನ, ಯುದ್ಧ ಭಯಂಕರ, ಮಹಾಪ್ರಭೆಯ, ಉತ್ತಮ ಸುದರ್ಶನ ಚಕ್ರ[3]ವು ಆಗಮಿಸಿತು.
01017021a ತದಾಗತಂ ಜ್ವಲಿತಹುತಾಶನಪ್ರಭಂ
ಭಯಂಕರಂ ಕರಿಕರಬಾಹುರಚ್ಯುತಃ|
01017021c ಮುಮೋಚ ವೈ ಚಪಲಮುದಗ್ರವೇಗವನ್
ಮಹಾಪ್ರಭಂ ಪರನಗರಾವದಾರಣಂ||
ಅದು ಬಂದಕೂಡಲೇ ಪ್ರಜ್ವಲಿಸುತ್ತಿರುವ ಅಗ್ನಿಪ್ರಭೆಯ ಭಯಂಕರ ಅಚ್ಯುತನು ಆನೆಯ ಸೊಂಡಿಲಿನಂತಿದ್ದ ಬಾಹುಗಳಿಂದ ಅತಿ ವೇಗದಲ್ಲಿ ಆ ಮಹಾಪ್ರಭೆಯ ಶತ್ರುಗಳ ನಗರವನ್ನಿಡೀ ನಾಶಪಡಿಸಬಲ್ಲಂಥಹ ಚಕ್ರವನ್ನು ಎಸೆದನು.
01017022a ತದಂತಕಜ್ವಲನಸಮಾನವರ್ಚಸಂ
ಪುನಃ ಪುನರ್ನ್ಯಪತತ ವೇಗವತ್ತದಾ|
01017022c ವಿದಾರಯದ್ದಿತಿದನುಜಾನ್ಸಹಸ್ರಶಃ
ಕರೇರಿತಂ ಪುರುಷವರೇಣ ಸಂಯುಗೇ||
ಪುರುಷಶ್ರೇಷ್ಠನಿಂದ ಎಸೆಯಲ್ಪಟ್ಟ ಪ್ರಳಯಾಗ್ನಿಯ ಹಾಗೆ ಉರಿಯುತ್ತಿರುವ ಆ ಚಕ್ರವು ಸಹಸ್ರಾರು ದೈತ್ಯರನ್ನು ನಾಶಪಡಿಸಿತು.
01017023a ದಹತ್ಕ್ವಚಿಜ್ಜ್ವಲನೈವಾವಲೇಲಿಹತ್
ಪ್ರಸಹ್ಯ ತಾನಸುರಗಣಾನ್ನ್ಯಕೃಂತತ|
01017023c ಪ್ರವೇರಿತಂ ವಿಯತಿ ಮುಹುಃ ಕ್ಷಿತೌ ತದಾ
ಪಪೌ ರಣೇ ರುಧಿರಮಥೋ ಪಿಶಾಚವತ್||
ಕೆಲವೊಮ್ಮೆ ಅಗ್ನಿಯ ಹಾಗೆ ಉರಿದು ಅವರೆನ್ನೆಲ್ಲಾ ಭಸ್ಮಮಾಡುತ್ತಿತ್ತು, ಕೆಲವೊಮ್ಮೆ ಕ್ಷಿಪಣಿಯಂತೆ ಅವರ ಮೇಲೆ ಬಿದ್ದು ಹೊಡೆಯುತ್ತಿತ್ತು, ಕೆಲವೊಮ್ಮೆ ಪಿಶಾಚಿಯಂತೆ ಭೂಮ್ಯಾಕಾಶದಲ್ಲಿ ತಿರುಗಾಡುತ್ತಾ ಕೆಳಗೆ ಬಿದ್ದಿದ್ದ ಅಸುರರ ರಕ್ತವನ್ನು ಕುಡಿಯುತ್ತಿತ್ತು.
01017024a ಅಥಾಸುರಾ ಗಿರಿಭಿರದೀನಚೇತಸೋ
ಮುಹುರ್ಮುಹುಃ ಸುರಗಣಮರ್ದಯಂಸ್ತದಾ|
01017024c ಮಹಾಬಲಾ ವಿಗಲಿತಮೇಘವರ್ಚಸಃ
ಸಹಸ್ರಶೋ ಗಗನಮಭಿಪ್ರಪದ್ಯ ಹ||
ನೀರಿಲ್ಲದ ಮೇಘಗಳಂತೆ ತೋರುತ್ತಿದ್ದ ಮಹಾಬಲಶಾಲಿ ಅಸುರರು ಗಗನವನ್ನೇರಿ ಸಹಸ್ರಾರು ಪರ್ವತಗಳನ್ನು ಸುರಗಣಗಳ ಮೇಲೆ ಬೀಳಿಸಿ ಹಿಂಸಿಸತೊಡಗಿದರು.
01017025a ಅಥಾಂಬರಾದ್ಭಯಜನನಾಃ ಪ್ರಪೇದಿರೇ
ಸಪಾದಪಾ ಬಹುವಿಧಮೇಘರೂಪಿಣಃ|
01017025c ಮಹಾದ್ರಯಃ ಪ್ರವಿಗಲಿತಾಗ್ರಸಾನವಃ
ಪರಸ್ಪರಂ ದ್ರುತಮಭಿಹತ್ಯ ಸಸ್ವನಾಃ||
ಕಾಡು ಕಣಿವೆಗಳ ಆ ಮಹಾ ಪರ್ವತಗಳು ಆಕಾಶದಿಂದ ಕೆಳಗೆ ಬೀಳುವಾಗ ಮೇಘಗಳಂತೆ ಪರಸ್ಪರರರಿಗೆ ತಾಗಿ ಮಹಾ ಘರ್ಜನೆಯನ್ನೇ ಉಂಟುಮಾಡಿದವು.
01017026a ತತೋ ಮಹೀ ಪ್ರವಿಚಲಿತಾ ಸಕಾನನಾ
ಮಹಾದ್ರಿಪಾತಾಭಿಹತಾ ಸಮಂತತಃ|
01017026c ಪರಸ್ಪರಂ ಭೃಶಮಭಿಗರ್ಜತಾಂ ಮುಹೂ
ರಣಾಜಿರೇ ಭೃಶಮಭಿಸಂಪ್ರವರ್ತಿತೇ||
ಸಹಸ್ರಾರು ಯೋಧರು ರಣಭೂಮಿಯಲ್ಲಿ ಘರ್ಜನೆಯಿಂದ ಮತ್ತು ಕಾಡುಗಳನ್ನೊಡಗೂಡಿದ ಪರ್ವತಗಳು ಬೀಳುತ್ತಿರಲು ಭೂಮಿಯು ತತ್ತರಿಸಿತು.
01017027a ನರಸ್ತತೋ ವರಕನಕಾಗ್ರಭೂಷಣೈಃ
ಮಹೇಷುಭಿರ್ಗಗನಪಥಂ ಸಮಾವೃಣೋತ್|
01017027c ವಿದಾರಯನ್ಗಿರಿಶಿಖರಾಣಿ ಪತ್ರಿಭಿಃ
ಮಹಾಭಯೇಽಸುರಗಣವಿಗ್ರಹೇ ತದಾ||
ಆಗ ನರನು ಸುರಾಸುರರಲ್ಲಿ ನಡೆಯುತ್ತಿದ್ದ ಆ ಮಹಾಭಯಂಕರ ಯುದ್ಧವನ್ನು ಪ್ರವೇಶಿಸಿ, ಶ್ರೇಷ್ಠ ಕನಕಾಗ್ರದಿಂದ ಅಲಂಕೃತ ಶರಗಳಿಂದ ಆ ಪರ್ವತಗಳನ್ನು ಪುಡಿಪುಡಿಮಾಡಿ ಅಂತರಿಕ್ಷವನ್ನು ಧೂಳಿನಿಂದ ತುಂಬಿಸಿದನು.
01017028a ತತೋ ಮಹೀಂ ಲವಣಜಲಂ ಚ ಸಾಗರಂ
ಮಹಾಸುರಾಃ ಪ್ರವಿವಿಶುರರ್ದಿತಾಃ ಸುರೈಃ|
01017028c ವಿಯದ್ಗತಂ ಜ್ವಲಿತಹುತಾಶನಪ್ರಭಂ
ಸುದರ್ಶನಂ ಪರಿಕುಪಿತಂ ನಿಶಾಮ್ಯ ಚ||
ರಣಭೂಮಿಯಲ್ಲಿ ತಿರುಗುತ್ತಾ ಪ್ರಜ್ವಲಿಸುತ್ತಿರುವ ಬೆಂಕಿಯಂತೆ ಉರಿಯುತ್ತಿದ್ದ ಪರಿಕುಪಿತ ಸುದರ್ಶನವನ್ನು ನೋಡಿ ಸುರರಿಂದ ಪರಾಭವಗೊಂಡ ಮಹಾ ಅಸುರರು ಭೂಮಿ ಮತ್ತು ಉಪ್ಪುನೀರಿನ ಸಮುದ್ರವನ್ನು ಪ್ರವೇಶಿಸಿದರು.
01017029a ತತಃ ಸುರೈರ್ವಿಜಯಮವಾಪ್ಯ ಮಂದರಃ
ಸ್ವಮೇವ ದೇಶಂ ಗಮಿತಃ ಸುಪೂಜಿತಃ|
01017029c ವಿನಾದ್ಯ ಖಂ ದಿವಮಪಿ ಚೈವ ಸರ್ವಶಃ
ತತೋ ಗತಾಃ ಸಲಿಲಧರಾ ಯಥಾಗತಂ||
ವಿಜಯಿ ಸುರರು ಮಂದರವನ್ನು ಅದರ ಸ್ಥಳದಲ್ಲಿಯೇ ಕೊಂಡೊಯ್ದಿಟ್ಟು ಪೂಜಿಸಿ, ತಮ್ಮ ಸಂತಸಭರಿತ ಘೋಷಗಳಿಂದ ಆಕಾಶ ಮತ್ತು ಸ್ವರ್ಗವನ್ನು ತುಂಬಿಸುತ್ತಾ ತಮ್ಮ ತಮ್ಮ ಸ್ಥಾನಗಳನ್ನು ಸೇರಿದರು.
01017030a ತತೋಽಮೃತಂ ಸುನಿಹಿತಮೇವ ಚಕ್ರಿರೇ
ಸುರಾಃ ಪರಾಂ ಮುದಮಭಿಗಮ್ಯ ಪುಷ್ಕಲಾಂ|
01017030c ದದೌ ಚ ತಂ ನಿಧಿಮಮೃತಸ್ಯ ರಕ್ಷಿತುಂ
ಕಿರೀಟಿನೇ ಬಲಭಿದಥಾಮರೈಃ ಸಹ||
ಸ್ವರ್ಗವನ್ನು ಸೇರಿ ಸುರರು ಅತ್ಯಂತ ಸಂತೋಷದಿಂದ ಅಮೃತವನ್ನು ಜಾಗೃತೆಯಲ್ಲಿ ಕಾದುಕೊಂಡರು. ಇಂದ್ರ ಮತ್ತು ಇತರ ಅಮರರು ಅದನ್ನು ಒಂದು ಪಾತ್ರೆಯಲ್ಲಿ ಇಟ್ಟು ರಕ್ಷಣೆಗೆಂದು ಕಿರೀಟಿ ನರನಿಗೆ ಕೊಟ್ಟರು.”
ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಅಮೃತಮಂಥನಸಮಾಪ್ತಿರ್ನಾಮ ಸಪ್ತದಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಅಮೃತಮಂಥನಸಮಾಪ್ತಿ ಎಂಬ ಹದಿನೇಳನೆಯ ಅಧ್ಯಾಯವು.
[1] ಪುರಾಣಗಳ ಪ್ರಕಾರ ಒಟ್ಟು ೧೨ ದೇವಾಸುರರ ಸಂಗ್ರಾಮಗಳು ನಡೆದವು. ಅಮೃತಮಂಥನದ ಕಾಲದಲ್ಲಿ ನಡೆದ ಈ ದೇವಾಸುರ ಸಂಗ್ರಾಮವು ಏಳನೆಯದು.
[2] ನರ-ನಾರಾಯಣರು ಮಹಾವಿಷ್ಣುವಿನ ಅವಳಿ ಅವತಾರಗಳೆಂದು ಹೇಳುತ್ತಾರೆ. ನಾರಾಯಣನು ದೈವತ್ವದ ಪ್ರತೀಕ ಮತ್ತು ನರನು ದೈವತ್ವದ ಸಹಾಯಕನಾಗಿರುವ ಮನುಷ್ಯತ್ವದ ಪ್ರತೀಕ. ನರ-ನಾರಾಯಣ ಋಷಿಗಳು ಬದರಿಕಾಶ್ರಮದಲ್ಲಿ ಘೋರ ತಪಸ್ಸನ್ನು ನಡೆಸಿದರು. ಅವರಿಬ್ಬರೂ ದಕ್ಷನ ಮಗಳಾದ ಮೂರ್ತಿ ಅಥವಾ ಅಹಿಂಸಾಳಲ್ಲಿ ಹುಟ್ಟಿದ ಧರ್ಮನ ಮಕ್ಕಳು. ದ್ವಾಪರಯುಗದಲ್ಲಿ ಕೃಷ್ಣಾರ್ಜುನರೇ ನರ-ನಾರಾಯಣರೆಂಬ ವಿಷಯವು ಮಹಾಭಾರತದಲ್ಲಿ ಆಗಾಗ ಬರುತ್ತಿರುತ್ತದೆ. ಊರ್ವಶಿಯು ನರ-ನಾರಾಯಣರಿಂದ ಹುಟ್ಟಿದಳೆಂದು ಭಾಗವತ ಪುರಾಣವು ಹೇಳುತ್ತದೆ.
[3] ಸುದರ್ಶನ (ಅರ್ಥಾತ್ ನೋಡಲು ಶುಭಕರವಾದುದು) ಚಕ್ರವು ವಿಷ್ಣುವಿನ ಆಯುಧಗಳಲ್ಲೊಂದು. ಇದಕ್ಕೆ ೧೦೮ ಅಲಗುಗಳಿವೆ. ಪೂಜೆ-ಹವನಗಳಲ್ಲಿ ಕೆಟ್ಟ ಶಕ್ತಿಗಳನ್ನು ದೂರವಿಡಲು ಸುದರ್ಶನ ಚಕ್ರವನ್ನು ಪೂಜಿಸುತ್ತಾರೆ. ತನ್ನ ಮಗಳು ಸಂಜನಾಳು ಅವಳ ಪತಿ ಸೂರ್ಯನ ತಾಪವನ್ನು ತಡೆಯಲಾರೆನೆಂದಾಗ ದೇವಶಿಲ್ಪಿ ವಿಶ್ವಕರ್ಮನು ಸೂರ್ಯನ ತೇಜಸ್ಸನ್ನು ಕಡಿಮೆಮಾಡಲೋಸುಗ ಅವನ ತೇಜಸ್ಸಿನ ಅಂಶಗಳಿಂದ ಪುಷ್ಪಕ ವಿಮಾನ, ತ್ರಿಶೂಲ ಮತ್ತು ಸುದರ್ಶನ ಚಕ್ರಗಳನ್ನು ನಿರ್ಮಿಸಿದನೆಂದು ಪುರಾಣಗಳು ಹೇಳುತ್ತವೆ. ಸುದರ್ಶನ ಚಕ್ರವನ್ನು ವಿಷ್ಣುವು ಸತಿಯ ಮೃತಶರೀರವನ್ನು ಕತ್ತರಿಸಲು ಬಳಸಿದ್ದನು. ಸುದರ್ಶನ ಚಕ್ರವು ವಿಷ್ಣು ಭಕ್ತ ಅಂಬರೀಷನನ್ನು ದುರ್ವಾಸನ ಮಾಯಾ ಆಸುರನಿಂದ ರಕ್ಷಿಸಿದ ಕಥೆಯು ಇದೇ ಮಹಾಭಾರತದಲ್ಲಿ ಬರುತ್ತದೆ.