ಆದಿ ಪರ್ವ: ಚೈತ್ರರಥ ಪರ್ವ
೧೬೮
ವಸಿಷ್ಠನು ಕಲ್ಮಾಷಪಾದನನ್ನು ರಾಕ್ಷಸನಿಂದ ಬಿಡುಗಡೆಗೊಳಿಸಿದುದು (೧-೬). ತನ್ನ ಪತ್ನಿಯಲ್ಲಿ ಸಂತಾನವನ್ನು ನೀಡಬೇಕೆಂದು ಕಲ್ಮಾಷಪಾದನು ಕೇಳಿಕೊಳ್ಳಲು ವಸಿಷ್ಠನು ಒಪ್ಪಿಕೊಂಡಿದುದು, ಅಶ್ಮಕನ ಜನನ (೭-೨೫).
01168001 ವಸಿಷ್ಠ ಉವಾಚ|
01168001a ಮಾ ಭೈಃ ಪುತ್ರಿ ನ ಭೇತವ್ಯಂ ರಕ್ಷಸಸ್ತೇ ಕಥಂ ಚನ|
01168001c ನೈತದ್ರಕ್ಷೋ ಭಯಂ ಯಸ್ಮಾತ್ಪಶ್ಯಸಿ ತ್ವಮುಪಸ್ಥಿತಂ||
ವಸಿಷ್ಠನು ಹೇಳಿದನು: “ಪುತ್ರಿ! ಭಯಪಡಬೇಡ! ರಾಕ್ಷಸನಿಂದ ನಿನಗೆ ಯಾವುದೇ ರೀತಿಯ ಭಯವೂ ಇಲ್ಲ. ನೀನು ನೋಡುತ್ತಿರುವ ಭಯವನ್ನುಂಟುಮಾಡುವ ಇವನು ರಾಕ್ಷಸನಲ್ಲ.
01168002a ರಾಜಾ ಕಲ್ಮಾಷಪಾದೋಽಯಂ ವೀರ್ಯವಾನ್ಪ್ರಥಿತೋ ಭುವಿ|
01168002c ಸ ಏಷೋಽಸ್ಮಿನ್ವನೋದ್ದೇಶೇ ನಿವಸತ್ಯತಿಭೀಷಣಃ||
ಅವನು ಭುವಿಯಲ್ಲಿಯೇ ಪ್ರಥಿತ ವೀರ್ಯವಾನ್ ರಾಜ ಕಲ್ಮಾಷಪಾದ. ಅವನು ಈ ವನ ಪ್ರದೇಶದಲ್ಲಿ ಭೀಷಣನಾಗಿ ವಾಸಿಸುತ್ತಿದ್ದಾನೆ.””
01168003 ಗಂಧರ್ವ ಉವಾಚ|
01168003a ತಮಾಪತಂತಂ ಸಂಪ್ರೇಕ್ಷ್ಯ ವಸಿಷ್ಠೋ ಭಗವಾನೃಷಿಃ|
01168003c ವಾರಯಾಮಾಸ ತೇಜಸ್ವೀ ಹುಂಕರೇಣೈವ ಭಾರತ||
ಗಂಧರ್ವನು ಹೇಳಿದನು: “ಭಾರತ! ತನ್ನ ಮೇಲೆ ಬೀಳುತ್ತಿರುವ ಅವನನ್ನು ನೋಡಿದ ಭಗವಾನೃಷಿ ತೇಜಸ್ವಿ ವಸಿಷ್ಠನು ಹುಂಕಾರ ಮಾತ್ರದಿಂದಲೇ ಅವನನ್ನು ತಡೆಹಿಡಿದನು.
01168004a ಮಂತ್ರಪೂತೇನ ಚ ಪುನಃ ಸ ತಮಭ್ಯುಕ್ಷ್ಯ ವಾರಿಣಾ|
01168004c ಮೋಕ್ಷಯಾಮಾಸ ವೈ ಘೋರಾದ್ರಾಕ್ಷಸಾದ್ರಾಜಸತ್ತಮಂ||
ಮಂತ್ರಗಳಿಂದ ಪುನೀತಗೊಂಡಿದ್ದ ನೀರನ್ನು ಅವನ ಮೇಲೆ ಚಿಮುಕಿಸಿ ಆ ರಾಜಸತ್ತಮನನ್ನು ಘೋರ ರಾಕ್ಷಸನಿಂದ ಬಿಡುಗಡೆಗೊಳಿಸಿದನು.
01168005a ಸ ಹಿ ದ್ವಾದಶ ವರ್ಷಾಣಿ ವಸಿಷ್ಠಸ್ಯೈವ ತೇಜಸಾ|
01168005c ಗ್ರಸ್ತ ಆಸೀದ್ಗೃಹೇಣೇವ ಪರ್ವಕಾಲೇ ದಿವಾಕರಃ||
ಹನ್ನೆರಡು ವರ್ಷಗಳ ನಂತರ ಅವನು ಪರ್ವಕಾಲದಲ್ಲಿ ದಿವಾಕರನು ಗ್ರಹಣದಿಂದ ಹೇಗೋ ಹಾಗೆ ವಸಿಷ್ಠನ ತೇಜಸ್ಸಿನಿಂದ ಬಿಡುಗಡೆ ಹೊಂದಿದನು.
01168006a ರಕ್ಷಸಾ ವಿಪ್ರಮುಕ್ತೋಽಥ ಸ ನೃಪಸ್ತದ್ವನಂ ಮಹತ್|
01168006c ತೇಜಸಾ ರಂಜಯಾಮಾಸ ಸಂಧ್ಯಾಭ್ರಮಿವ ಭಾಸ್ಕರಃ||
ರಾಕ್ಷಸನಿಂದ ವಿಮುಕ್ತ ಆ ನೃಪತಿಯು ತನ್ನ ತೇಜಸ್ಸಿನಿಂದ ಆ ಮಹಾ ವನವನ್ನು ಭಾಸ್ಕರನು ತನ್ನ ಸಂಧ್ಯಾಕಿರಣಗಳಿಂದ ಹೇಗೋ ಹಾಗೆ ಕೆಂಪಾಗಿಸಿದನು.
01168007a ಪ್ರತಿಲಭ್ಯ ತತಃ ಸಂಜ್ಞಾಮಭಿವಾದ್ಯ ಕೃತಾಂಜಲಿಃ|
01168007c ಉವಾಚ ನೃಪತಿಃ ಕಾಲೇ ವಸಿಷ್ಠಮೃಷಿಸತ್ತಮಂ||
ಜ್ಞಾನವನ್ನು ಪುನಃ ಗಳಿಸಿದ ನೃಪತಿಯು ಅಂಜಲೀ ಬದ್ಧನಾಗಿ ಅಭಿವಂದಿಸಿ ಋಷಿಸತ್ತಮ ವಸಿಷ್ಠನಲ್ಲಿ ಹೇಳಿದನು:
01168008a ಸೌದಾಸೋಽಹಂ ಮಹಾಭಾಗ ಯಾಜ್ಯಸ್ತೇ ದ್ವಿಜಸತ್ತಮ|
01168008c ಅಸ್ಮಿನ್ಕಾಲೇ ಯದಿಷ್ಟಂ ತೇ ಬ್ರೂಹಿ ಕಿಂ ಕರವಾಣಿ ತೇ||
“ಮಹಾಭಾಗ! ದ್ವಿಜಸತ್ತಮ! ನಾನು ಸೌದಾಸ. ನಿನ್ನ ಯಾಜಿ. ಈಗ ನಿಮಗಿಷ್ಟವಾದದನ್ನು ಹೇಳು. ನಾನು ಏನು ಮಾಡಬೇಕು ಎನ್ನುವುದನ್ನು ಹೇಳು.”
01168009 ವಸಿಷ್ಠ ಉವಾಚ|
01168009a ವೃತ್ತಮೇತದ್ಯಥಾಕಾಲಂ ಗಚ್ಛ ರಾಜ್ಯಂ ಪ್ರಶಾಧಿ ತತ್|
01168009c ಬ್ರಾಹ್ಮಣಾಂಶ್ಚ ಮನುಷ್ಯೇಂದ್ರ ಮಾವಮಂಸ್ಥಾಃ ಕದಾ ಚನ||
ವಸಿಷ್ಠನು ಹೇಳಿದನು: “ಕಾಲವು ನಿಶ್ಚಯಿಸಿದ ಹಾಗೆ ನಡೆದು ಹೋಯಿತು. ಹೋಗು. ರಾಜ್ಯವನ್ನು ಆಳು. ಮನುಷ್ಯೇಂದ್ರ! ಎಂದೂ ಬ್ರಾಹ್ಮಣರನ್ನು ಅವಮಾನಗೊಳಿಸಬೇಡ.”
01168010 ರಾಜೋವಾಚ|
01168010a ನಾವಮಂಸ್ಯಾಮ್ಯಹಂ ಬ್ರಹ್ಮನ್ಕದಾ ಚಿದ್ಬ್ರಾಹ್ಮಣರ್ಷಭಾನ್|
01168010c ತ್ವನ್ನಿದೇಶೇ ಸ್ಥಿತಃ ಶಶ್ವತ್ಪುಜಯಿಷ್ಯಾಮ್ಯಹಂ ದ್ವಿಜಾನ್||
ರಾಜನು ಹೇಳಿದನು: “ಬ್ರಾಹ್ಮಣ! ಬ್ರಾಹ್ಮಣರ್ಷಭರನ್ನು ಎಂದೂ ನಾನು ಅವಮಾನಿಸುವುದಿಲ್ಲ. ನಿನ್ನ ನಿದೇಶದಂತೆ ನಾನು ದ್ವಿಜರನ್ನು ಎಂದೂ ಪೂಜಿಸುತ್ತೇನೆ.
01168011a ಇಕ್ಷ್ವಾಕೂಣಾಂ ತು ಯೇನಾಹಮನೃಣಃ ಸ್ಯಾಂ ದ್ವಿಜೋತ್ತಮ|
01168011c ತತ್ತ್ವತ್ತಃ ಪ್ರಾಪ್ತುಮಿಚ್ಛಾಮಿ ವರಂ ವೇದವಿದಾಂ ವರ||
ವೇದವಿದರಲ್ಲಿ ಶ್ರೇಷ್ಠನೇ! ದ್ವಿಜೋತ್ತಮ! ನಾನು ಇಕ್ಷ್ವಾಕು ಕುಲದ ಋಣವನ್ನು ತೀರಿಸಬಲ್ಲಂಥಹ ಒಂದು ವರವನ್ನು ನಿನ್ನಿಂದ ಪಡೆಯಲು ಬಯಸುತ್ತೇನೆ.
01168012a ಅಪತ್ಯಾಯೇಪ್ಸಿತಾಂ ಮಹ್ಯಂ ಮಹಿಷೀಂ ಗಂತುಮರ್ಹಸಿ|
01168012c ಶೀಲರೂಪಗುಣೋಪೇತಾಮಿಕ್ಷ್ವಾಕುಕುಲವೃದ್ಧಯೇ||
ಇಕ್ಷ್ವಾಕುಕುಲದ ವೃದ್ಧಿಗೋಸ್ಕರ ಶೀಲರೂಪಗುಣೋಪೇತಳಾದ ನನ್ನ ಮಹಿಷಿಯಲ್ಲಿ ನೀನು ಮಕ್ಕಳನ್ನು ಪಡೆಯಬೇಕು.””
01168013 ಗಂಧರ್ವ ಉವಾಚ|
01168013a ದದಾನೀತ್ಯೇವ ತಂ ತತ್ರ ರಾಜಾನಂ ಪ್ರತ್ಯುವಾಚ ಹ|
01168013c ವಸಿಷ್ಠಃ ಪರಮೇಷ್ವಾಸಂ ಸತ್ಯಸಂಧೋ ದ್ವಿಜೋತ್ತಮಃ||
ಗಂಧರ್ವನು ಹೇಳಿದನು: “ಆಗ ಪರಮೇಷ್ವಾಸ ಸತ್ಯಸಂಧ ದ್ವಿಜೋತ್ತಮ ವಸಿಷ್ಠನು “ನಾನು ನಿನಗೆ ಕೊಡುತ್ತೇನೆ!” ಎಂದು ರಾಜನಿಗೆ ಹೇಳಿದನು.
01168014a ತತಃ ಪ್ರತಿಯಯೌ ಕಾಲೇ ವಸಿಷ್ಠಸಹಿತೋಽನಘ|
01168014c ಖ್ಯಾತಂ ಪುರವರಂ ಲೋಕೇಷ್ವಯೋಧ್ಯಾಂ ಮನುಜೇಶ್ವರಃ||
ಅನಘ! ನಂತರ ಆ ಮನುಜೇಶ್ವರನು ವಸಿಷ್ಠನ ಸಹಿತ ಲೋಕಗಳಲ್ಲಿಯೇ ಶ್ರೇಷ್ಠ ನಗರಿಯೆಂದು ಖ್ಯಾತ ಅಯೋಧ್ಯೆಗೆ ಹಿಂದಿರುಗಿದನು.
01168015a ತಂ ಪ್ರಜಾಃ ಪ್ರತಿಮೋದಂತ್ಯಃ ಸರ್ವಾಃ ಪ್ರತ್ಯುದ್ಯಯುಸ್ತದಾ|
01168015c ವಿಪಾಪ್ಮಾನಂ ಮಹಾತ್ಮಾನಂ ದಿವೌಕಸ ಇವೇಶ್ವರಂ||
ದಿವೌಕಸರು ತಮ್ಮ ಈಶ್ವರನನ್ನು ಸ್ವಾಗತಿಸುವಂತೆ ಪ್ರಜೆಗಳೆಲ್ಲರೂ ಸಂತೋಷದಿಂದ ವಿಪತ್ತಿನಿಂದ ಮುಕ್ತ ಮಹಾತ್ಮನನ್ನು ಸ್ವಾಗತಿಸಿದರು.
01168016a ಅಚಿರಾತ್ಸ ಮನುಷ್ಯೇಂದ್ರೋ ನಗರೀಂ ಪುಣ್ಯಕರ್ಮಣಾಂ|
01168016c ವಿವೇಶ ಸಹಿತಸ್ತೇನ ವಸಿಷ್ಠೇನ ಮಹಾತ್ಮನಾ||
ತಕ್ಷಣವೇ ಆ ಮುನುಷ್ಯೇಂದ್ರನು ಪುಣ್ಯಕರ್ಮಿಗಳ ನಗರಿಯನ್ನು ಮಹಾತ್ಮ ವಸಿಷ್ಠನ ಸಹಿತ ಪ್ರವೇಶಿಸಿದನು.
01168017a ದದೃಶುಸ್ತಂ ತತೋ ರಾಜನ್ನಯೋಧ್ಯಾವಾಸಿನೋ ಜನಾಃ|
01168017c ಪುಷ್ಯೇಣ ಸಹಿತಂ ಕಾಲೇ ದಿವಾಕರಮಿವೋದಿತಂ||
ಅಯೋಧ್ಯಾವಾಸಿ ಜನರು ಪುಷ್ಯದ ಸಹಿತವಿರುವ ದಿವಾಕರನನ್ನು ನೋಡುವಂತೆ ರಾಜನನ್ನು ನೋಡಿ ಸಂತಸಗೊಂಡರು.
01168018a ಸ ಹಿ ತಾಂ ಪೂರಯಾಮಾಸ ಲಕ್ಷ್ಮ್ಯಾ ಲಕ್ಷ್ಮೀವತಾಂ ವರಃ|
01168018c ಅಯೋಧ್ಯಾಂ ವ್ಯೋಮ ಶೀತಾಂಶುಃ ಶರತ್ಕಾಲ ಇವೋದಿತಃ||
ಲಕ್ಷ್ಮೀವಂತರಲ್ಲಿಯೇ ಶ್ರೇಷ್ಠ ಶ್ರೀಮಂತನು ಶರತ್ಕಾಲದ ಶೀತಾಂಶುವು ದಿಗಂತದಲ್ಲಿ ಉದಯವಾಗುತ್ತಿರುವಂತೆ ಅಯೋಧ್ಯೆಯಲ್ಲಿ ಕಾಣಿಸಿಕೊಂಡನು.
01168019a ಸಂಸಿಕ್ತಮೃಷ್ಟಪಂಥಾನಂ ಪತಾಕೋಚ್ಛ್ರಯಭೂಷಿತಂ|
01168019c ಮನಃ ಪ್ರಹ್ಲಾದಯಾಮಾಸಾ ತಸ್ಯ ತತ್ಪುರಮುತ್ತಮಂ||
ತೊಳೆದು ಸಿದ್ಧಪಡಿಸಿದ್ದ ರಸ್ತೆಗಳು ಮತ್ತು ಪತಾಕೆಗಳಿಂದ ಭೂಷಿತ ಮೇಲ್ಮಹಡಿಗಳು ಮತ್ತು ಆ ಅನುತ್ತಮ ಪುರವನ್ನು ನೋಡಿ ರಾಜನ ಮನಸ್ಸೂ ಆಹ್ಲಾದಗೊಂಡಿತು.
01168020a ತುಷ್ಟಪುಷ್ಟಜನಾಕೀರ್ಣಾ ಸಾ ಪುರೀ ಕುರುನಂದನ|
01168020c ಅಶೋಭತ ತದಾ ತೇನ ಶಕ್ರೇಣೇವಾಮರಾವತೀ||
ಕುರುನಂದನ! ತುಷ್ಟ ಪುಷ್ಟ ಜನರಿಂದ ತುಂಬಿದ್ದ ಆ ಪುರವು ಶಕ್ರನೊಂದಿಗೆ ಹೊಳೆಯುತ್ತಿರುವ ಅಮರಾವತಿಯಂತೆ ತೋರಿತು.
01168021a ತತಃ ಪ್ರವಿಷ್ಟೇ ರಾಜೇಂದ್ರೇ ತಸ್ಮಿನ್ರಾಜನಿ ತಾಂ ಪುರೀಂ|
01168021c ತಸ್ಯ ರಾಜ್ಞೋಽಜ್ಞಯಾ ದೇವೀ ವಸಿಷ್ಠಮುಪಚಕ್ರಮೇ||
ರಾಜೇಂದ್ರ ರಾಜನು ಆ ಪುರಿಯನ್ನು ಪ್ರವೇಶಿಸಿದ ನಂತರ ಅವನ ಆಜ್ಞೆಯಂತೆ ರಾಣಿ ದೇವಿಯು ವಸಿಷ್ಠನ ಬಳಿಸಾರಿದಳು.
01168022a ಋತಾವಥ ಮಹರ್ಷಿಃ ಸ ಸಂಬಭೂವ ತಯಾ ಸಹ|
01168022c ದೇವ್ಯಾ ದಿವ್ಯೇನ ವಿಧಿನಾ ವಸಿಷ್ಠಃ ಶ್ರೇಷ್ಠಭಾಗೃಷಿಃ||
ಋತುಕಾಲ ಬಂದಾಗ ಶ್ರೇಷ್ಠಭಾಗಿ ಋಷಿ ಮಹರ್ಷಿ ಮಸಿಷ್ಠನು ದೇವಿಯೊಡನೆ ದಿವ್ಯ ವಿಧಿಯಲ್ಲಿ ಕೂಡಿದನು.
01168023a ಅಥ ತಸ್ಯಾಂ ಸಮುತ್ಪನ್ನೇ ಗರ್ಭೇ ಸ ಮುನಿಸತ್ತಮಃ|
01168023c ರಾಜ್ಞಾಭಿವಾದಿತಸ್ತೇನ ಜಗಾಮ ಪುನರಾಶ್ರಮಂ||
ಅವಳಲ್ಲಿ ಮುನಿಸತ್ತಮನ ಗರ್ಭವು ತಾಳಿದ ನಂತರ ರಾಜನಿಂದ ಬೀಳ್ಕೊಂಡು ಅವನು ಪುನಃ ಆಶ್ರಮಕ್ಕೆ ತೆರಳಿದನು.
01168024a ದೀರ್ಘಕಾಲಧೃತಂ ಗರ್ಭಂ ಸುಷಾವ ನ ತು ತಂ ಯದಾ|
01168024c ಸಾಥ ದೇವ್ಯಶ್ಮನಾ ಕುಕ್ಷಿಂ ನಿರ್ಬಿಭೇದ ತದಾ ಸ್ವಕಂ||
ಅವಳು ಆ ಗರ್ಭವನ್ನು ದೀರ್ಘಕಾಲದವರೆಗೆ ಹೊತ್ತಳು. ನಂತರ ಅವಳು ಗರ್ಭವನ್ನು ಒಂದು ಕಲ್ಲಿನಿಂದ ಹೊಡೆದು ಸೀಳಿದಳು.
01168025a ದ್ವಾದಶೇಽಥ ತತೋ ವರ್ಷೇ ಸ ಜಜ್ಞೇ ಮನುಜರ್ಷಭ|
01168025c ಅಶ್ಮಕೋ ನಾಮ ರಾಜರ್ಷಿಃ ಪೋತನಂ ಯೋ ನ್ಯವೇಶಯತ್||
ಮನುಜರ್ಷಭ! ಅದು ಹನ್ನೆರಡನೆಯ ವರ್ಷವಾಗಿತ್ತು. ಆಗ ಪೋತನದಲ್ಲಿ ವಾಸಿಸುತ್ತಿದ್ದ ಅಶ್ಮಕ ಎಂಬ ರಾಜರ್ಷಿಯು ಹುಟ್ಟಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಸೌದಾಮಸುತೋತ್ಪತ್ತೌ ಅಷ್ಟಶಷ್ಟ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಸೌದಾಮಸುತೋತ್ಪತ್ತಿಯಲ್ಲಿ ನೂರಾಅರವತ್ತೆಂಟನೆಯ ಅಧ್ಯಾಯವು.