ಆದಿ ಪರ್ವ: ಚೈತ್ರರಥ ಪರ್ವ
೧೬೫
ಬೇಟೆಯಾಡಿ ಬಳಲಿ ಬಂದಿದ್ದ ರಾಜಾ ವಿಶ್ವಾಮಿತ್ರ ಮತ್ತು ಅವನ ಸೇನೆಯನ್ನು ವಸಿಷ್ಠನು ತನ್ನ ಆಶ್ರಮದಲ್ಲಿದ್ದ ಸುರಧೇನು ನಂದಿನಿಯ ಸಹಾಯದಿಂದ ತೃಪ್ತಿಗೊಳಿಸಿದುದು (೧-೧೨). ನಂದಿನಿಯನ್ನು ಬಯಸಿದ ವಿಶ್ವಾಮಿತ್ರನಿಗೆ ವಸಿಷ್ಠನು ನಿರಾಕರಿಸಲು, ವಿಶ್ವಾಮಿತ್ರನು ಅವಳನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಪ್ರಯತ್ನಿಸಿದುದು (೧೩-೨೧). ವಸಿಷ್ಠನು ಕ್ಷಮಾಗುಣವನ್ನು ತನ್ನದಾಗಿಸಿಕೊಂಡು, ತನ್ನ ಅಸಹಾಯಕತೆಯನ್ನು ತೋರಿಸಲು ನಂದಿನಿಯು ತನ್ನಿಂದಲೇ ಸೇನೆಯನ್ನು ಸೃಷ್ಟಿಸಿ ವಿಶ್ವಾಮಿತ್ರನ ಸೇನೆಯನ್ನು ಧ್ವಂಸಗೊಳಿಸಿದುದು (೨೨-೪೦). ಕ್ಷತ್ರಿಯ ಬಲಕ್ಕಿಂತ ಬ್ರಹ್ಮಬಲವೇ ಮೇಲೆಂದು ತಿಳಿದು ವಿಶ್ವಾಮಿತ್ರನು ಘೋರ ತಪಸ್ಸನ್ನು ತಪಿಸಿ ಬ್ರಾಹ್ಮಣತ್ವವನ್ನು ಪಡೆದುದು (೪೧-೪೪).
01165001a ಕಿಂನಿಮಿತ್ತಮಭೂದ್ವೈರಂ ವಿಶ್ವಾಮಿತ್ರವಸಿಷ್ಠಯೋಃ|
01165001c ವಸತೋರಾಶ್ರಮೇ ಪುಣ್ಯೇ ಶಂಸ ನಃ ಸರ್ವಮೇವ ತತ್||
ಅರ್ಜುನನು ಹೇಳಿದನು: “ಪುಣ್ಯಾಶ್ರಮಗಳಲ್ಲಿ ವಾಸಿಸುವ ವಸಿಷ್ಠ ಮತ್ತು ವಿಶ್ವಾಮಿತ್ರರಲ್ಲಿ ಯಾವ ಕಾರಣಕ್ಕಾಗಿ ವಿರಸವುಂಟಾಯಿತು? ಸರ್ವವನ್ನೂ ಹೇಳು!”
01165002 ಗಂಧರ್ವ ಉವಾಚ|
01165002a ಇದಂ ವಾಸಿಷ್ಠಮಾಖ್ಯಾನಂ ಪುರಾಣಂ ಪರಿಚಕ್ಷತೇ|
01165002c ಪಾರ್ಥ ಸರ್ವೇಷು ಲೋಕೇಷು ಯಥಾವತ್ತನ್ನಿಬೋಧ ಮೇ||
ಗಂಧರ್ವನು ಹೇಳಿದನು: “ಪಾರ್ಥ! ವಸಿಷ್ಠನ ಈ ಆಖ್ಯಾನವು ಮೂರೂ ಲೋಕಗಳ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅದನ್ನು ಯಥಾವತ್ತಾಗಿ ನಾನು ಹೇಳುತ್ತೇನೆ. ಕೇಳು.
01165003a ಕನ್ಯಕುಬ್ಜೇ ಮಹಾನಾಸೀತ್ಪಾರ್ಥಿವೋ ಭರತರ್ಷಭ|
01165003c ಗಾಧೀತಿ ವಿಶ್ರುತೋ ಲೋಕೇ ಸತ್ಯಧರ್ಮಪರಾಯಣಃ||
ಭರತರ್ಷಭ! ಕನ್ಯಕುಬ್ಜದಲ್ಲಿ ಮಹಾ ಪಾರ್ಥಿವನಿರುತ್ತಿದ್ದನು. ಸತ್ಯಧರ್ಮಪರಾಯಣನಾದ ಅವನು ಲೋಕಗಳಲ್ಲಿ ಗಾಧೀ ಎಂದು ವಿಶ್ರುತನಾಗಿದ್ದನು.
01165004a ತಸ್ಯ ಧರ್ಮಾತ್ಮನಃ ಪುತ್ರಃ ಸಮೃದ್ಧಬಲವಾಹನಃ|
01165004c ವಿಶ್ವಾಮಿತ್ರ ಇತಿ ಖ್ಯಾತೋ ಬಭೂವ ರಿಪುಮರ್ದನಃ||
ಈ ಧರ್ಮಾತ್ಮನಿಗೆ ಸಮೃದ್ಧಬಲವಾಹನ ರಿಪುಮರ್ದನ ವಿಶ್ವಾಮಿತ್ರ ಎಂಬ ಖ್ಯಾತ ಮಗನೊಬ್ಬನಿದ್ದನು.
01165005a ಸ ಚಚಾರ ಸಹಾಮಾತ್ಯೋ ಮೃಗಯಾಂ ಗಹನೇ ವನೇ|
01165005c ಮೃಗಾನ್ವಿಧ್ಯನ್ವರಾಹಾಂಶ್ಚ ರಮ್ಯೇಷು ಮರುಧನ್ವಸು||
ಅವನು ಅಮಾತ್ಯರೊಂದಿಗೆ ಬೇಟೆಯಾಡುತ್ತಾ ರಮ್ಯ ಮರುಭೂಮಿ ಮತ್ತು ಹುಲ್ಲುಗಾವಲುಗಳಲ್ಲಿ ಜಿಂಕೆ ವರಾಹಗಳನ್ನು ಕೊಲ್ಲುತ್ತಾ ಗಹನ ವನಕ್ಕೆ ಹೋದನು.
01165006a ವ್ಯಾಯಾಮಕರ್ಶಿತಃ ಸೋಽಥ ಮೃಗಲಿಪ್ಸುಃ ಪಿಪಾಸಿತಃ|
01165006c ಆಜಗಾಮ ನರಶ್ರೇಷ್ಠ ವಸಿಷ್ಠಸ್ಯಾಶ್ರಮಂ ಪ್ರತಿ||
ಒಮ್ಮೆ ಜಿಂಕೆಯೊಂದನ್ನು ಅರಸುತ್ತಾ ಬರುತ್ತಿರುವಾಗ ಬಾಯಾರಿಕೆಯಿಂದ ಬಳಲಿದ ಆ ನರಶ್ರೇಷ್ಠನು ವಸಿಷ್ಠನ ಆಶ್ರಮದ ಬಳಿ ಬಂದನು.
01165007a ತಮಾಗತಮಭಿಪ್ರೇಕ್ಷ್ಯ ವಸಿಷ್ಠಃ ಶ್ರೇಷ್ಠಭಾಗೃಷಿಃ|
01165007c ವಿಶ್ವಾಮಿತ್ರಂ ನರಶ್ರೇಷ್ಠಂ ಪ್ರತಿಜಗ್ರಾಹ ಪೂಜಯಾ||
ಅವನ ಆಗಮನವನ್ನು ಕಂಡ ಶ್ರೇಷ್ಠ ಮಹಾಋಷಿ ವಸಿಷ್ಠನು ನರಶ್ರೇಷ್ಠ ವಿಶ್ವಾಮಿತ್ರನನ್ನು ಆದರದಿಂದ ಸ್ವಾಗತಿಸಿದನು.
01165008a ಪಾದ್ಯಾರ್ಘ್ಯಾಚಮನೀಯೇನ ಸ್ವಾಗತೇನ ಚ ಭಾರತ|
01165008c ತಥೈವ ಪ್ರತಿಜಗ್ರಾಹ ವನ್ಯೇನ ಹವಿಷಾ ತಥಾ||
ಭಾರತ! ಅವನನ್ನು ಪಾದ್ಯಾರ್ಘ್ಯ, ಆಚಮನೀಯಗಳಿಂದ ಸ್ವಾಗತಿಸಿ, ವನಗಳಲ್ಲಿ ದೊರೆಯುವ ಸಂಗ್ರಹಗಳನ್ನು ಅರ್ಪಿಸಿದನು.
01165009a ತಸ್ಯಾಥ ಕಾಮಧುಗ್ಧೇನುರ್ವಸಿಷ್ಠಸ್ಯ ಮಹಾತ್ಮನಃ|
01165009c ಉಕ್ತಾ ಕಾಮಾನ್ಪ್ರಯಚ್ಛೇತಿ ಸಾ ಕಾಮಾನ್ದುದುಹೇ ತತಃ||
ಮಹಾತ್ಮ ವಸಿಷ್ಠನಲ್ಲಿ ಕಾಮಧುಗ್ಧೇನುವೊಂದಿತ್ತು: ಅದು ಅವನು ಇಷ್ಟಪಟ್ಟು ಕೊಡಲು ಹೇಳಿದ ಯಾವುದನ್ನೂ ಕೊಡುತ್ತಿತ್ತು.
01165010a ಗ್ರಾಮ್ಯಾರಣ್ಯಾ ಓಷಧೀಶ್ಚ ದುದುಹೇ ಪಯ ಏವ ಚ|
01165010c ಷಡ್ರಸಂ ಚಾಮೃತರಸಂ ರಸಾಯನಮನುತ್ತಮಂ||
01165011a ಭೋಜನೀಯಾನಿ ಪೇಯಾನಿ ಭಕ್ಷ್ಯಾಣಿ ವಿವಿಧಾನಿ ಚ|
01165011c ಲೇಹ್ಯಾನ್ಯಮೃತಕಲ್ಪಾನಿ ಚೋಷ್ಯಾಣಿ ಚ ತಥಾರ್ಜುನ||
ಅರ್ಜುನ! ಗ್ರಾಮ ಮತ್ತು ಅರಣ್ಯಗಳ ಔಷಧಿಗಳು, ಹಾಲು, ಷಡ್ರಸ, ಅಮೃತರಸ, ಉತ್ತಮ ರಸಾಯನ, ಭೋಜನ, ಪಾನೀಯಗಳು, ವಿವಿಧ ಭಕ್ಷ್ಯಗಳು, ಲೇಹ, ಮತ್ತು ಇತರ ಅಮೃತಕಲ್ಪಗಳನ್ನು, ರುಚಿಯಾಗಿ ಅವಳು ನೀಡುತ್ತಿದ್ದಳು.
01165012a ತೈಃ ಕಾಮೈಃ ಸರ್ವಸಂಪೂರ್ಣೈಃ ಪೂಜಿತಃ ಸ ಮಹೀಪತಿಃ|
01165012c ಸಾಮಾತ್ಯಃ ಸಬಲಶ್ಚೈವ ತುತೋಷ ಸ ಭೃಶಂ ನೃಪಃ||
ಮಹೀಪತಿಯು ಬಯಸಿದ ಎಲ್ಲವುಗಳನ್ನು ಸಂಪೂರ್ಣವಾಗಿ ಪಡೆದನು. ಸೇನೆ ಮತ್ತು ಅಮಾತ್ಯರ ಸಹಿತ ನೃಪನು ಅತ್ಯಂತ ತೃಪ್ತಿಹೊಂದಿದನು.
01165013a ಷಡಾಯತಾಂ ಸುಪಾರ್ಶ್ವೋರುಂ ತ್ರಿಪೃಥುಂ ಪಂಚ ಸಂವೃತಾಂ|
01165013c ಮಂಡೂಕನೇತ್ರಾಂ ಸ್ವಾಕಾರಾಂ ಪೀನೋಧಸಮನಿಂದಿತಾಂ||
01165014a ಸುವಾಲಧಿಂ ಶಂಕುಕರ್ಣಾಂ ಚಾರುಶೃಂಗಾಂ ಮನೋರಮಾಂ|
01165014c ಪುಷ್ಟಾಯತಶಿರೋಗ್ರೀವಾಂ ವಿಸ್ಮಿತಃ ಸೋಽಭಿವೀಕ್ಷ್ಯ ತಾಂ||
ಆರು ಅಳತೆ ಉದ್ದ, ಮೂರು ಅಳತೆ ಅಗಲ, ಮತ್ತು ಐದು ಅಳತೆ ಸುತ್ತಳತೆಯನ್ನು ಹೊಂದಿದ್ದ, ಸುಂದರ ಕಾಲು-ತೊಡೆಗಳ, ಕಪ್ಪೆಯಂಥ ಕಣ್ಣುಗಳ, ಒಳ್ಳೆಯ ನಡುಗೆಯ, ತುಂಬಿದ ಮೊಲೆಗಳ, ಸುಂದರ ಬಾಲವುಳ್ಳ, ಶಂಖದಂತಹ ಕಿವಿಗಳನ್ನು ಹೊಂದಿದ್ದ, ಸುಂದರ ಕೊಂಬಿನ, ಉದ್ದ ಮತ್ತು ದಪ್ಪನಾಗಿರುವ ತಲೆ ಮತ್ತು ಕುತ್ತಿಗೆಯನ್ನು ಹೊಂದಿದ್ದ ಆ ಮನೋರಮೆ ಹಸುವನ್ನು ವಿಶ್ವಾಮಿತ್ರನು ವಿಸ್ಮಿತನಾಗಿ ನೋಡಿದನು.
01165015a ಅಭಿನಂದತಿ ತಾಂ ನಂದೀಂ ವಸಿಷ್ಠಸ್ಯ ಪಯಸ್ವಿನೀಂ|
01165015c ಅಬ್ರವೀಚ್ಚ ಭೃಶಂ ತುಷ್ಟೋ ವಿಶ್ವಾಮಿತ್ರೋ ಮುನಿಂ ತದಾ||
01165016a ಅರ್ಬುದೇನ ಗವಾಂ ಬ್ರಹ್ಮನ್ಮಮ ರಾಜ್ಯೇನ ವಾ ಪುನಃ|
01165016c ನಂದಿನೀಂ ಸಂಪ್ರಯಚ್ಛಸ್ವ ಭುಂಕ್ಷ್ವ ರಾಜ್ಯಂ ಮಹಾಮುನೇ||
ವಸಿಷ್ಠನ ಆ ಪಯಸ್ವಿನೀ ನಂದಿನಿಯನ್ನು ಅಭಿನಂದಿಸಿ ಅತೀವ ತೃಪ್ತನಾದ ವಿಶ್ವಾಮಿತ್ರನು ಮುನಿಯನ್ನುದ್ದೇಶಿಸಿ ಹೇಳಿದನು: “ಬ್ರಹ್ಮನ್! ಮಹಾಮುನಿ! ಲೆಕ್ಕವಿಲ್ಲದಷ್ಟು ಗೋವುಗಳು ಅಥವಾ ನನ್ನ ರಾಜ್ಯಕ್ಕೆ ಬದಲಾಗಿ ಈ ನಂದಿನಿಯನ್ನು ನನಗಿತ್ತು ನನ್ನ ರಾಜ್ಯವನ್ನು ಆಳು.”
01165017 ವಸಿಷ್ಠ ಉವಾಚ|
01165017a ದೇವತಾತಿಥಿಪಿತ್ರರ್ಥಮಾಜ್ಯಾರ್ಥಂ ಚ ಪಯಸ್ವಿನೀ|
01165017c ಅದೇಯಾ ನಂದಿನೀಯಂ ಮೇ ರಾಜ್ಯೇನಾಪಿ ತವಾನಘ||
ವಸಿಷ್ಠನು ಹೇಳಿದನು: “ದೇವತೆ, ಅತಿಥಿ, ಮತ್ತು ಪಿತೃಗಳಿಗೆ ಊಟಕ್ಕೆ ನೀಡಲು ಮತ್ತು ತುಪ್ಪಕ್ಕಾಗಿ ಈ ಯಶಸ್ವಿನಿ ನಂದಿನಿಯು ನನ್ನಲ್ಲಿದ್ದಾಳೆ. ಅನಘ! ರಾಜ್ಯವನ್ನಿತ್ತರೂ ಇದನ್ನು ನಿನಗೆ ಕೊಡಲಾರೆ.”
01165018 ವಿಶ್ವಾಮಿತ್ರ ಉವಾಚ|
01165018a ಕ್ಷತ್ರಿಯೋಽಹಂ ಭವಾನ್ವಿಪ್ರಸ್ತಪಃಸ್ವಾಧ್ಯಾಯಸಾಧನಃ|
01165018c ಬ್ರಾಹ್ಮಣೇಷು ಕುತೋ ವೀರ್ಯಂ ಪ್ರಶಾಂತೇಷು ಧೃತಾತ್ಮಸು||
ವಿಶ್ವಾಮಿತ್ರನು ಹೇಳಿದನು: “ನಾನು ಕ್ಷತ್ರಿಯ ಮತ್ತು ನೀನು ತಪಸ್ಸು, ಅಧ್ಯಾಯ, ಸಾಧನೆಗಳಲ್ಲಿರುವ ವಿಪ್ರ. ಅತ್ಮವನ್ನು ಗೆದ್ದ ಪ್ರಶಾಂತ ಬ್ರಾಹ್ಮಣರಲ್ಲಿ ಇಂಥಹ ಪ್ರತಿಭಟನೆ ಎಲ್ಲಿಂದ ಬರುತ್ತದೆ?
01165019a ಅರ್ಬುದೇನ ಗವಾಂ ಯಸ್ತ್ವಂ ನ ದದಾಸಿ ಮಮೇಪ್ಸಿತಾಂ|
01165019c ಸ್ವಧರ್ಮಂ ನ ಪ್ರಹಾಸ್ಯಾಮಿ ನಯಿಷ್ಯೇ ತೇ ಬಲೇನ ಗಾಂ||
ನನಗೆ ಬೇಕಾದ ಗೋವನ್ನು ಅರ್ಬುದ ಗೋವುಗಳಿಗೂ ನೀನು ಕೊಡದೇ ಇದ್ದರೆ ಸ್ವಧರ್ಮವನ್ನು ನಾನು ಬಿಡುವುದಿಲ್ಲ. ಗೋವನ್ನು ನಾನು ಬಲವಂತವಾಗಿ ನಿನ್ನಿಂದ ಹಿಡಿದೊಯ್ಯುತ್ತೇನೆ.”
01165020 ವಸಿಷ್ಠ ಉವಾಚ|
01165020a ಬಲಸ್ಥಶ್ಚಾಸಿ ರಾಜಾ ಚ ಬಾಹುವೀರ್ಯಶ್ಚ ಕ್ಷತ್ರಿಯಃ|
01165020c ಯಥೇಚ್ಛಸಿ ತಥಾ ಕ್ಷಿಪ್ರಂ ಕುರು ತ್ವಂ ಮಾ ವಿಚಾರಯ||
ವಸಿಷ್ಠನು ಹೇಳಿದನು: “ರಾಜ! ನಿನ್ನಲ್ಲಿ ಸೇನೆಯಿದೆ ಮತ್ತು ಕ್ಷತ್ರಿಯನ ಬಾಹುವೀರ್ಯವಿದೆ. ತಡಮಾಡದೇ, ಏನನ್ನೂ ವಿಚಾರಮಾಡದೇ ನಿನಗಿಷ್ಟಬಂದಂತೆ ಮಾಡು.””
01165021 ಗಂಧರ್ವ ಉವಾಚ|
01165021a ಏವಮುಕ್ತಸ್ತದಾ ಪಾರ್ಥ ವಿಶ್ವಾಮಿತ್ರೋ ಬಲಾದಿವ|
01165021c ಹಂಸಚಂದ್ರಪ್ರತೀಕಾಶಾಂ ನಂದಿನೀಂ ತಾಂ ಜಹಾರ ಗಾಂ||
ಗಂಧರ್ವನು ಹೇಳಿದನು: “ಪಾರ್ಥ! ಈ ಮಾತುಗಳನ್ನು ಕೇಳಿದ ವಿಶ್ವಾಮಿತ್ರನು ಬಲವಂತವಾಗಿ ಹಂಸ ಅಥವ ಚಂದ್ರನಂತಿರುವ ನಂದಿನಿಯನ್ನು ಎಳೆದುಕೊಂಡು ಹೊರಟನು.
01165022a ಕಶಾದಂಡಪ್ರತಿಹತಾ ಕಾಲ್ಯಮಾನಾ ತತಸ್ತತಃ|
01165022c ಹಂಭಾಯಮಾನಾ ಕಲ್ಯಾಣೀ ವಸಿಷ್ಠಸ್ಯಾಥ ನಂದಿನೀ||
ಕಾಶ ಮತ್ತು ದಂಡಗಳಿಂದ ಹೊಡೆತ ತಿನ್ನುತ್ತಾ ಎಳೆದುಕೊಂಡು ಕರೆದೊಯ್ಯಲ್ಪಟ್ಟ ವಸಿಷ್ಠನ ಕಲ್ಯಾಣಿ ನಂದಿನಿಯು ಕೂಗತೊಡಗಿದಳು.
01165023a ಆಗಮ್ಯಾಭಿಮುಖೀ ಪಾರ್ಥ ತಸ್ಥೌ ಭಗವದುನ್ಮುಖೀ|
01165023c ಭೃಶಂ ಚ ತಾಡ್ಯಮಾನಾಪಿ ನ ಜಗಾಮಾಶ್ರಮಾತ್ತತಃ||
ಪಾರ್ಥ! ಅವಳು ಹಿಂದಿರುಗಿ ಬಂದು ಭಗವಾನ್ ಋಷಿಯ ಎದುರಿಗೆ ನಿಂತುಕೊಂಡಳು ಮತ್ತು ಎಷ್ಟೇ ಜೋರಾಗಿ ಹೊಡೆದರೂ ಆಶ್ರಮದಿಂದ ಹೊರಹೋಗಲಿಲ್ಲ.
01165024 ವಸಿಷ್ಠ ಉವಾಚ|
01165024a ಶೃಣೋಮಿ ತೇ ರವಂ ಭದ್ರೇ ವಿನದಂತ್ಯಾಃ ಪುನಃ ಪುನಃ|
01165024c ಬಲಾದ್ಧ್ರಿಯಸಿ ಮೇ ನಂದಿ ಕ್ಷಮಾವಾನ್ಬ್ರಾಹ್ಮಣೋ ಹ್ಯಹಂ||
ವಸಿಷ್ಠನು ಹೇಳಿದನು: “ಭದ್ರೇ! ನೋವಿನಿಂದ ನರಳುತ್ತಿರುವ ನಿನ್ನ ಕೂಗನ್ನು ಪುನಃ ಪುನಃ ಕೇಳುತ್ತಿದ್ದೇನೆ. ನಾನೋರ್ವ ಕ್ಷಮಾವಂತ ಬ್ರಾಹ್ಮಣನಾದುದರಿಂದ ನಿನ್ನನ್ನು ನನ್ನಿಂದ ಬಲಾತ್ಕಾರವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ.””
01165025 ಗಂಧರ್ವ ಉವಾಚ|
01165025a ಸಾ ತು ತೇಷಾಂ ಬಲಾನ್ನಂದೀ ಬಲಾನಾಂ ಭರತರ್ಷಭ|
01165025c ವಿಶ್ವಾಮಿತ್ರಭಯೋದ್ವಿಗ್ನಾ ವಸಿಷ್ಠಂ ಸಮುಪಾಗಮತ್||
ಗಂಧರ್ವನು ಹೇಳಿದನು: “ಭರತರ್ಷಭ! ಆ ಸೈನಿಕರ ಬಲ ಮತ್ತು ವಿಶ್ವಾಮಿತ್ರರಿಂದ ಭಯೋದ್ವಿಗ್ನಳಾಗ ಆ ನಂದಿನಿಯು ವಸಿಷ್ಠನ ಇನ್ನೂ ಹತ್ತಿರ ಬಂದಳು.
01165026 ಗೌರುವಾಚ|
01165026a ಪಾಷಾಣದಂಡಾಭಿಹತಾಂ ಕ್ರಂದಂತೀಂ ಮಾಮನಾಥವತ್|
01165026c ವಿಶ್ವಾಮಿತ್ರಬಲೈರ್ಘೋರೈರ್ಭಗವನ್ಕಿಮುಪೇಕ್ಷಸೇ||
ಗೋವು ಹೇಳಿತು: “ಭಗವನ್! ವಿಶ್ವಾಮಿತ್ರನ ಬಲದಿಂದ ಘೋರವಾಗಿ ಪಾಷಾಣ ದಂಡಗಳಿಂದ ಹೊಡೆತತಿಂದು ಅನಾಥಳಂತೆ ಕೂಗುತ್ತಿರುವ ನನ್ನನ್ನು ಏಕೆ ಉಪೇಕ್ಷಿಸುತ್ತಿರುವೆ?””
01165027 ಗಂಧರ್ವ ಉವಾಚ|
01165027a ಏವಂ ತಸ್ಯಾಂ ತದಾ ಪರ್ಥ ಧರ್ಷಿತಾಯಾಂ ಮಹಾಮುನಿಃ|
01165027c ನ ಚುಕ್ಷುಭೇ ನ ಧೈರ್ಯಾಚ್ಚ ವಿಚಚಾಲ ಧೃತವ್ರತಃ||
ಗಂಧರ್ವನು ಹೇಳಿದನು: “ಪಾರ್ಥ! ಈ ರೀತಿ ಗೋವು ಆಕ್ರಮಣಕ್ಕೊಳಗಾದಾಗ ಆ ಮಹಾಮುನಿ ಧೃತವ್ರತನು ಯಾವುದೇ ರೀತಿಯ ಆತಂಕವನ್ನಾಗಲೀ ಕೋಪವನ್ನಾಗಲೀ ಹೊಂದದೇ ವಿಚಲಿತನಾಗಲಿಲ್ಲ.
01165028 ವಸಿಷ್ಠ ಉವಾಚ|
01165028a ಕ್ಷತ್ರಿಯಾಣಾಂ ಬಲಂ ತೇಜೋ ಬ್ರಾಹ್ಮಣಾನಾಂ ಕ್ಷಮಾ ಬಲಂ|
01165028c ಕ್ಷಮಾ ಮಾಂ ಭಜತೇ ತಸ್ಮಾದ್ಗಮ್ಯತಾಂ ಯದಿ ರೋಚತೇ||
ವಸಿಷ್ಠನು ಹೇಳಿದನು: “ಕ್ಷತ್ರಿಯರಿಗೆ ತೇಜಸ್ಸು ಬಲ ಮತ್ತು ಬ್ರಾಹ್ಮಣರಿಗೆ ಕ್ಷಮೆಯೇ ಬಲ. ಕ್ಷಮೆಯೇ ನನ್ನನ್ನು ಆವರಿಸಿದೆ. ಆದುದರಿಂದ ನಿನಗಿಷ್ಟವಾದರೆ ನೀನು ಹೋಗಬಹುದು.”
01165029 ಗೌರುವಾಚ|
01165029a ಕಿಂ ನು ತ್ಯಕ್ತಾಸ್ಮಿ ಭಗವನ್ಯದೇವಂ ಮಾಂ ಪ್ರಭಾಷಸೇ|
01165029c ಅತ್ಯಕ್ತಾಹಂ ತ್ವಯಾ ಬ್ರಹ್ಮನ್ನ ಶಕ್ಯಾ ನಯಿತುಂ ಬಲಾತ್||
ಗೋವು ಹೇಳಿತು: “ಭಗವನ್! ನೀನು ಈ ರೀತಿ ಮಾತನಾಡುತ್ತಿದ್ದೀಯಲ್ಲ! ನನ್ನನ್ನು ತ್ಯಜಿಸಿಬಿಟ್ಟಿದ್ದೀಯಾ ಹೇಗೆ? ಬ್ರಹ್ಮನ್! ನೀನು ನನ್ನನ್ನು ತೊರೆದಿಲ್ಲವೆಂದಾದರೆ ಅವರು ನನ್ನನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಶಕ್ಯರಾಗುವುದಿಲ್ಲ.”
01165030 ವಸಿಷ್ಠ ಉವಾಚ|
01165030a ನ ತ್ವಾಂ ತ್ಯಜಾಮಿ ಕಲ್ಯಾಣಿ ಸ್ಥೀಯತಾಂ ಯದಿ ಶಕ್ಯತೇ|
01165030c ದೃಢೇನ ದಾಮ್ನಾ ಬದ್ಧ್ವೈಷ ವತ್ಸಸ್ತೇ ಹ್ರಿಯತೇ ಬಲಾತ್||
ವಸಿಷ್ಠನು ಹೇಳಿದನು: “ನಾನು ನಿನ್ನನ್ನು ತ್ಯಜಿಸಿಲ್ಲ ಕಲ್ಯಾಣಿ! ಶಕ್ಯವಾದರೆ ಇಲ್ಲಿಯೇ ಇರು. ಅವರು ನಿನ್ನ ಕರುವನ್ನು ಗಟ್ಟಿಯಾಗಿ ಕಟ್ಟಿಹಾಕಿ ಬಲಾತ್ಕಾರವಾಗಿ ಕೊಂಡೊಯ್ಯುತ್ತಿದ್ದಾರೆ.””
01165031 ಗಂಧರ್ವ ಉವಾಚ|
01165031a ಸ್ಥೀಯತಾಮಿತಿ ತಚ್ಛೃತ್ವಾ ವಸಿಷ್ಠಸ್ಯ ಪಯಸ್ವಿನೀ|
01165031c ಊರ್ಧ್ವಾಂಚಿತಶಿರೋಗ್ರೀವಾ ಪ್ರಬಭೌ ಘೋರದರ್ಶನಾ||
ಗಂಧರ್ವನು ಹೇಳಿದನು: “ನಿಲ್ಲು! ಎಂಬ ವಶಿಷ್ಠನ ಮಾತನ್ನು ಕೇಳಿದ ಆ ಯಶಸ್ವಿನಿಯು ತನ್ನ ತಲೆ ಮತ್ತು ಕುತ್ತಿಗೆಯನ್ನು ಮೇಲೆತ್ತಲು ಅವಳು ಘೋರರೂಪಿಣಿಯಾಗಿ ಕಂಡಳು.
01165032a ಕ್ರೋಧರಕ್ತೇಕ್ಷಣಾ ಸಾ ಗೌರ್ಹಂಭಾರವಘನಸ್ವನಾ|
01165032c ವಿಶ್ವಾಮಿತ್ರಸ್ಯ ತತ್ಸೈನ್ಯಂ ವ್ಯದ್ರಾವಯತ ಸರ್ವಶಃ||
ಕ್ರೋಧದಿಂದ ಅವಳ ಕಣ್ಣುಗಳು ಕೆಂಪಾದವು. ಗುಡುಗಿನಂತೆ “ಅಂಭಾ!” ಎಂದು ಕೂಗುತ್ತಾ ಅವಳು ವಿಶ್ವಾಮಿತ್ರನ ಸೇನೆಯನ್ನು ಎಲ್ಲಕಡೆ ಓಡಿಸಿದಳು.
01165033a ಕಶಾಗ್ರದಂಡಾಭಿಹತಾ ಕಾಲ್ಯಮಾನಾ ತತಸ್ತತಃ|
01165033c ಕ್ರೋಧದೀಪ್ತೇಕ್ಷಣಾ ಕ್ರೋಧಂ ಭೂಯ ಏವ ಸಮಾದಧೇ||
ಕಟ್ಟಿಗೆ ದಂಡಗಳಿಂದ ಪೆಟ್ಟುತಿಂದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡುತ್ತಿರುವಾಗ ಅವಳ ಕಣ್ಣುಗಳು ಕ್ರೋಧದಿಂದ ಉರಿದೆದ್ದವು ಮತ್ತು ಕ್ರೋಧವು ಹೆಚ್ಚಾಗುತ್ತಲೇ ಹೋಯಿತು.
01165034a ಆದಿತ್ಯ ಇವ ಮಧ್ಯಾಹ್ನೇ ಕ್ರೋಧದೀಪ್ತವಪುರ್ಬಭೌ|
01165034c ಅಂಗಾರವರ್ಷಂ ಮುಂಚಂತೀ ಮುಹುರ್ವಾಲಧಿತೋ ಮಹತ್||
ಮಧ್ಯಾಹ್ನದ ಆದಿತ್ಯನಂತೆ ಅವಳ ದೇಹವು ಕ್ರೋಧದಿಂದ ಉರಿದೆದ್ದಿತು ಮತ್ತು ಅವಳ ಬಾಯಿ-ಬಾಲಗಳಿಂದ ಮಹಾ ಕೆಂಡಗಳ ಸುರಿಮಳೆಯೇ ಹೊರಹೊಮ್ಮಿತು.
01165035a ಅಸೃಜತ್ಪಹ್ಲವಾನ್ಪುಚ್ಛಾಚ್ಚಕೃತಃ ಶಬರಾಂಶಕಾನ್|
01165035c ಮೂತ್ರತಶ್ಚಾಸೃಜಚ್ಚಾಪಿ ಯವನಾನ್ಕ್ರೋಧಮೂರ್ಚ್ಛಿತಾ||
ಕ್ರೋಧಮೂರ್ಛಿತಳಾದ ಅವಳು ಹಿಂಭಾಗದಿಂದ ಪಹ್ಲವರನ್ನು ಸೃಷ್ಟಿಸಿದಳು, ಶಬರ-ಶಕರನ್ನು ಸಗಣಿಯಿಂದ, ಮತ್ತು ಮೂತ್ರದಿಂದ ಯವನರನ್ನು ಸೃಷ್ಟಿಸಿದಳು.
01165036a ಪುಂಡ್ರಾನ್ಕಿರಾತಾನ್ದ್ರಮಿಡಾನ್ಸಿಂಹಲಾನ್ಬರ್ಬರಾಂಸ್ತಥಾ|
01165036c ತಥೈವ ದರದಾನ್ಮ್ಲೇಚ್ಛಾನ್ಫೇನತಃ ಸಾ ಸಸರ್ಜ ಹ||
ಹಾಲಿನ ನೊರೆಯಿಂದ ಪುಂಡ್ರ, ಕಿರಾತ, ದ್ರಮಿಡ, ಸಿಂಹಲ, ಬರ್ಬರ, ದರದ, ಮತ್ತು ಮ್ಲೇಚ್ಛರನ್ನು ಸೃಷ್ಟಿಸಿದಳು.
01165037a ತೈರ್ವಿಸೃಷ್ಟೈರ್ಮಹತ್ಸೈನ್ಯಂ ನಾನಾಂಲೇಚ್ಛಗಣೈಸ್ತದಾ|
01165037c ನಾನಾವರಣಸಂಚನ್ನೈರ್ನಾನಾಯುಧಧರೈಸ್ತಥಾ|
01165037e ಅವಾಕೀರ್ಯತ ಸಂರಬ್ಧೈರ್ವಿಶ್ವಾಮಿತ್ರಸ್ಯ ಪಶ್ಯತಃ||
ಈ ರೀತಿ ಅವಳು ಸೃಷ್ಟಿಸಿದ ಮ್ಲೇಚ್ಛರ ನಾನಾ ಗುಂಪಿನ ಮಹಾ ಸೇನೆಯು ನಾನಾ ರೀತಿಯ ಕವಚಗಳನ್ನು ಮತ್ತು ನಾನಾರೀತಿಯ ಆಯುಧಗಳನ್ನು ಧರಿಸಿದವರಾಗಿ, ವಿಶ್ವಾಮಿತ್ರನು ನೋಡುತ್ತಿದ್ದಂತೆಯೇ ಅವನ ಸೇನೆಯನ್ನು ಚದುರಿಸಿ ಓಡಿಸಿತು.
01165038a ಏಕೈಕಶ್ಚ ತದಾ ಯೋಧಃ ಪಂಚಭಿಃ ಸಪ್ತಭಿರ್ವೃತಃ|
01165038c ಅಸ್ತ್ರವರ್ಷೇಣ ಮಹತಾ ಕಾಲ್ಯಮಾನಂ ಬಲಂ ತತಃ|
01165038e ಪ್ರಭಗ್ನಂ ಸರ್ವತಸ್ತ್ರಸ್ತಂ ವಿಶ್ವಾಮಿತ್ರಸ್ಯ ಪಶ್ಯತಃ||
ಪ್ರತಿಯೊಬ್ಬ ಯೋಧನೂ ಇನ್ನೂ ಐದು ಯೋಧರಿಂದ ಸುತ್ತುವರೆಯಲ್ಪಟ್ಟಿದ್ದನು. ವಿಶ್ವಾಮಿತ್ರನು ನೋಡುತ್ತಿದ್ದಂತೆಯೇ ಅವನ ಬಲವು ಎಲ್ಲಾ ಕಡೆಯಿಂದಲೂ ಮಹಾ ಅಸ್ತ್ರವರ್ಷಗಳಿಗೆ ಸಿಲುಕಿ ಎಲ್ಲಕಡೆಯಿಂದಲೂ ನಾಶಹೊಂದಿತು.
01165039a ನ ಚ ಪ್ರಾಣೈರ್ವಿಯುಜ್ಯಂತ ಕೇ ಚಿತ್ತೇ ಸೈನಿಕಾಸ್ತದಾ|
01165039c ವಿಶ್ವಾಮಿತ್ರಸ್ಯ ಸಂಕ್ರುದ್ಧೈರ್ವಾಸಿಷ್ಠೈರ್ಭರತರ್ಷಭ||
ಭರತರ್ಷಭ! ಆದರೂ ವಿಶ್ವಾಮಿತ್ರನ ಯಾರೊಬ್ಬ ಸೈನಿಕನೂ ವಸಿಷ್ಠನ ಸಂಕೃದ್ಧ ಸೈನಿಕರಿಂದ ಪ್ರಾಣವನ್ನು ಕಳೆದುಕೊಳ್ಳಲಿಲ್ಲ
01165040a ವಿಶ್ವಾಮಿತ್ರಸ್ಯ ಸೈನ್ಯಂ ತು ಕಾಲ್ಯಮಾನಂ ತ್ರಿಯೋಜನಂ|
01165040c ಕ್ರೋಶಮಾನಂ ಭಯೋದ್ವಿಗ್ನಂ ತ್ರಾತಾರಂ ನಾಧ್ಯಗಚ್ಛತ||
ಭಯೋದ್ವಿಗ್ನವಾಗಿ ಕೂಗುತ್ತಿದ್ದರೂ ಯಾವ ತ್ರಾತಾರನನ್ನೂ ಕಾಣದ ವಿಶ್ವಾಮಿತ್ರನ ಸೈನ್ಯವು ಮೂರು ಯೋಜನೆಗಳವರೆಗೆ ಓಡಿಹೋಯಿತು.
01165041a ದೃಷ್ಟ್ವಾ ತನ್ಮಹದಾಶ್ಚರ್ಯಂ ಬ್ರಹ್ಮತೇಜೋಭವಂ ತದಾ|
01165041c ವಿಶ್ವಾಮಿತ್ರಃ ಕ್ಷತ್ರಭಾವಾನ್ನಿರ್ವಿಣ್ಣೋ ವಾಕ್ಯಮಬ್ರವೀತ್||
ಬ್ರಹ್ಮತೇಜಸ್ಸಿನಿಂದ ಹುಟ್ಟಿದ ಆ ಮಹದಾಶ್ಚರ್ಯವನ್ನು ಕಂಡ ವಿಶ್ವಾಮಿತ್ರನು ತನ್ನ ಕ್ಷಾತ್ರಭಾವದಿಂದ ನಿರ್ವಿಣ್ಣನಾಗಿ ಈ ಮಾತುಗಳನ್ನಾಡಿದನು:
01165042a ಧಿಗ್ಬಲಂ ಕ್ಷತ್ರಿಯಬಲಂ ಬ್ರಹ್ಮತೇಜೋಬಲಂ ಬಲಂ|
01165042c ಬಲಾಬಲಂ ವಿನಿಶ್ಚಿತ್ಯ ತಪ ಏವ ಪರಂ ಬಲಂ||
“ಕ್ಷತ್ರಿಯಬಲವೆಂದೆನಿಸಿಕೊಂಡ ಬಲಕ್ಕೆ ಧಿಕ್ಕಾರ! ಬ್ರಹ್ಮತೇಜೋಬಲವೇ ಬಲವು. ಬಲಾಬಲವನ್ನು ನೋಡಿದರೆ ತಪಸ್ಸಿನ ಬಲವೇ ಪರಮ ಬಲವೆಂದು ನಿಶ್ಚಿತವಾಗುತ್ತದೆ.”
01165043a ಸ ರಾಜ್ಯಂ ಸ್ಫೀತಮುತ್ಸೃಜ್ಯ ತಾಂ ಚ ದೀಪ್ತಾಂ ನೃಪಶ್ರಿಯಂ|
01165043c ಭೋಗಾಂಶ್ಚ ಪೃಷ್ಠತಃ ಕೃತ್ವಾ ತಪಸ್ಯೇವ ಮನೋ ದಧೇ||
ಅವನು ತನ್ನ ಶ್ರೀಮಂತ ರಾಜ್ಯ ಮತ್ತು ಬೆಳಗುತ್ತಿರುವ ನೃಪಶ್ರೀಯನ್ನು ತಿರಸ್ಕರಿಸಿ ಎಲ್ಲ ಭೋಗಗಳನ್ನು ಹಿಂದಕ್ಕೆ ತಳ್ಳಿ ತಪಸ್ಸಿನಲ್ಲಿಯೇ ತನ್ನ ಮನಸ್ಸನ್ನು ತೊಡಗಿಸಿದನು.
01165044a ಸ ಗತ್ವಾ ತಪಸಾ ಸಿದ್ಧಿಂ ಲೋಕಾನ್ವಿಷ್ಟಭ್ಯ ತೇಜಸಾ|
01165044c ತತಾಪ ಸರ್ವಾನ್ದೀಪ್ತೌಜಾ ಬ್ರಾಹ್ಮಣತ್ವಮವಾಪ ಚ|
01165044e ಅಪಿಬಚ್ಚ ಸುತಂ ಸೋಮಮಿಂದ್ರೇಣ ಸಹ ಕೌಶಿಕಃ||
ಅವನು ತಪಸ್ಸಿನಲ್ಲಿ ಸಿದ್ಧಿಯನ್ನು ಪಡೆದು ತನ್ನ ತೇಜಸ್ಸಿನಿಂದ ಲೋಕಗಳನ್ನೆಲ್ಲಾ ತುಂಬಿಸಿ ತನ್ನ ಓಜಸ್ಸಿನ ದೀಪದಿಂದ ಎಲ್ಲವನ್ನು ಬೆಳಗಿಸಿ ಬ್ರಾಹ್ಮಣತ್ವವನ್ನು ಪಡೆದನು. ಇಂದ್ರನ ಸಹಿತ ಕೌಶಿಕನು ಸೋಮವನ್ನು ಸೇವಿಸಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ವಿಶ್ವಾಮಿತ್ರಪರಾಭವೇ ಷಷ್ಟಷಷ್ಟ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ವಿಶ್ವಾಮಿತ್ರಪರಾಭವದಲ್ಲಿ ನೂರಾಅರವತ್ತೈದನೆಯ ಅಧ್ಯಾಯವು.