Adi Parva: Chapter 164

ಆದಿ ಪರ್ವ: ಚೈತ್ರರಥ ಪರ್ವ

೧೬೪

ವಸಿಷ್ಠೋಪಾಽಖ್ಯಾನ

ಋಷಿ ವಸಿಷ್ಠನ ಕುರಿತು ಕೇಳಲು, ಗಂಧರ್ವನು ಅರ್ಜುನನಿಗೆ ಅವನ ಸಾಧನೆಗಳನ್ನು ವರ್ಣಿಸಿದುದು (೧-೧೪).

01164001 ವೈಶಂಪಾಯನ ಉವಾಚ|

01164001a ಸ ಗಂಧರ್ವವಚಃ ಶ್ರುತ್ವಾ ತತ್ತದಾ ಭರತರ್ಷಭ|

01164001c ಅರ್ಜುನಃ ಪರಯಾ ಪ್ರೀತ್ಯಾ ಪೂರ್ಣಚಂದ್ರ ಇವಾಬಭೌ||

ವೈಶಂಪಾಯನನು ಹೇಳಿದನು: “ಗಂಧರ್ವನ ಈ ಮಾತುಗಳನ್ನು ಕೇಳಿದ ಭರತರ್ಷಭ ಅರ್ಜುನನು ಪರಮ ಸಂತುಷ್ಟನಾಗಿ ಪೂರ್ಣ ಚಂದ್ರನಂತೆ ಕಾಂತಿಯುಕ್ತನಾದನು.

01164002a ಉವಾಚ ಚ ಮಹೇಷ್ವಾಸೋ ಗಂಧರ್ವಂ ಕುರುಸತ್ತಮಃ|

01164002c ಜಾತಕೌತೂಹಲೋಽತೀವ ವಸಿಷ್ಠಸ್ಯ ತಪೋಬಲಾತ್||

ವಸಿಷ್ಠನ ಅತೀವ ತಪೋಬಲದ ಕುರಿತು ಕುತೂಹಲ ಹುಟ್ಟಿದ ಕುರುಸತ್ತಮನು ಮಹೇಷ್ವಾಸ ಗಂಧರ್ವನಲ್ಲಿ ಕೇಳಿಕೊಂಡನು:

01164003a ವಸಿಷ್ಠ ಇತಿ ಯಸ್ಯೈತದೃಷೇರ್ನಾಮ ತ್ವಯೇರಿತಂ|

01164003c ಏತದಿಚ್ಛಾಮ್ಯಹಂ ಶ್ರೋತುಂ ಯಥಾವತ್ತದ್ವದಸ್ವ ಮೇ||

“ವಸಿಷ್ಠ ಎಂಬ ಹೆಸರಿನ ಋಷಿಯ ಕುರಿತು ಹೇಳಿದೆಯಲ್ಲ ಅವನ ಕುರಿತು ಕೇಳಲು ಬಯಸುತ್ತೇನೆ. ಯಥಾವತ್ತಾಗಿ ನನಗೆ ಹೇಳು.

01164004a ಯ ಏಷ ಗಂಧರ್ವಪತೇ ಪೂರ್ವೇಷಾಂ ನಃ ಪುರೋಹಿತಃ|

01164004c ಆಸೀದೇತನ್ಮಮಾಚಕ್ಷ್ವ ಕ ಏಷ ಭಗವಾನೃಷಿಃ||

ಗಂಧರ್ವಪತೇ! ನನ್ನ ಪೂರ್ವಜರ ಪುರೋಹಿತನಾಗಿದ್ದ ಭಗವಾನೃಷಿಯ ಕುರಿತು ನನಗೆ ಹೇಳು.”

01164005 ಗಂಧರ್ವ ಉವಾಚ|

01164005a ತಪಸಾ ನಿರ್ಜಿತೌ ಶಶ್ವದಜೇಯಾವಮರೈರಪಿ|

01164005c ಕಾಮಕ್ರೋಧಾವುಭೌ ಯಸ್ಯ ಚರಣೌ ಸಂವವಾಹತುಃ||

ಗಂಧರ್ವನು ಹೇಳಿದನು: “ಅಮರರಿಂದಲೂ ಜಯಿಸಲಾಧ್ಯ ಕಾಮ ಕ್ರೋಧಗಳನ್ನು ತಪಸ್ಸಿನಿಂದ ಜಯಿಸಿ ಅವು ತನ್ನ ಚರಣಗಳನ್ನು ಒತ್ತುವಂತೆ ಮಾಡಿದವನೇ ಅವನು.

01164006a ಯಸ್ತು ನೋಚ್ಛೇದನಂ ಚಕ್ರೇ ಕುಶಿಕಾನಾಮುದಾರಧೀಃ|

01164006c ವಿಶ್ವಾಮಿತ್ರಾಪರಾಧೇನ ಧಾರಯನ್ಮನ್ಯುಮುತ್ತಮಂ||

ವಿಶ್ವಾಮಿತ್ರನ ಅಪರಾಧದಿಂದ ಉಂಟಾದ ಅತ್ಯಂತ ಕೋಪವನ್ನು ಸಹಿಸಿಕೊಂಡು ಕುಶಿಕರನನ್ನು ನಾಶಪಡಿಸದೇ ಇದ್ದವನು ಅವನು.

01164007a ಪುತ್ರವ್ಯಸನಸಂತಪ್ತಃ ಶಕ್ತಿಮಾನಪಿ ಯಃ ಪ್ರಭುಃ|

01164007c ವಿಶ್ವಾಮಿತ್ರವಿನಾಶಾಯ ನ ಮೇನೇ ಕರ್ಮ ದಾರುಣಂ||

ಪುತ್ರವ್ಯಸನ ಸಂತಪ್ತನಾದಾಗ ಶಕ್ತಿವಂತನಾಗಿದ್ದರೂ ವಿಶ್ವಾಮಿತ್ರನ ವಿನಾಶಕ್ಕಾಗಿ ಯಾವುದೇ ದಾರುಣ ಕೃತ್ಯವನ್ನೂ ಮಾಡದ ಪ್ರಭುವು ಅವನು.

01164008a ಮೃತಾಂಶ್ಚ ಪುನರಾಹರ್ತುಂ ಯಃ ಸ ಪುತ್ರಾನ್ಯಮಕ್ಷಯಾತ್|

01164008c ಕೃತಾಂತಂ ನಾತಿಚಕ್ರಾಮ ವೇಲಾಮಿವ ಮಹೋದಧಿಃ||

ಸಾಗರವು ಹೇಗೆ ಒಂದು ಗಡಿಯನ್ನು ದಾಟಿ ಮುಂದೆ ಬರುವುದಿಲ್ಲವೋ ಹಾಗೆ ಅವನು ಯಮಕ್ಷಯದಿಂದ ಮೃತರಾದ ತನ್ನ ಪುತ್ರರನ್ನು ಪುನಃ ಕರೆಯಿಸಿಕೊಳ್ಳಲಿಲ್ಲ.

01164009a ಯಂ ಪ್ರಾಪ್ಯ ವಿಜಿತಾತ್ಮಾನಂ ಮಹಾತ್ಮಾನಂ ನರಾಧಿಪಾಃ|

01164009c ಇಕ್ಷ್ವಾಕವೋ ಮಹೀಪಾಲಾ ಲೇಭಿರೇ ಪೃಥಿವೀಮಿಮಾಂ||

ಈ ವಿಜಿತಾತ್ಮ ಮಹಾತ್ಮನನ್ನು ಪಡೆದ ಇಕ್ಷ್ವಾಕು ವಂಶದ ನರಾಧಿಪರು ಇಡೀ ಪೃಥ್ವಿಯನ್ನೇ ಪಡೆದು ಮಹೀಪಾಲರಾದರು.

01164010a ಪುರೋಹಿತವರಂ ಪ್ರಾಪ್ಯ ವಸಿಷ್ಠಮೃಷಿಸತ್ತಮಂ|

01164010c ಈಜಿರೇ ಕ್ರತುಭಿಶ್ಚಾಪಿ ನೃಪಾಸ್ತೇ ಕುರುನಂದನ||

ಕುರುನಂದನ! ಋಷಿಸತ್ತಮ ವಸಿಷ್ಠನನ್ನು ಶ್ರೇಷ್ಠ ಪುರೋಹಿತನನ್ನಾಗಿ ಪಡೆದ ಆ ನೃಪರು ಹಲವಾರು ಕ್ರತುಗಳನ್ನು ಯಾಜಿಸಿದರು.

01164011a ಸ ಹಿ ತಾನ್ಯಾಜಯಾಮಾಸ ಸರ್ವಾನ್ನೃಪತಿಸತ್ತಮಾನ್|

01164011c ಬ್ರಹ್ಮರ್ಷಿಃ ಪಾಂಡವಶ್ರೇಷ್ಠ ಬೃಹಸ್ಪತಿರಿವಾಮರಾನ್||

ಪಾಂಡವಶ್ರೇಷ್ಠ! ಅಮರರಿಗೆ ಬೃಹಸ್ಪತಿಯು ಹೇಗೋ ಹಾಗೆ ಆ ಎಲ್ಲ ನೃಪಸತ್ತಮರಿಗೆ ಈ ಬ್ರಹ್ಮರ್ಷಿಯು ಯಜ್ಞಯಾಗಾದಿಗಳನ್ನು ಮಾಡಿಸಿಕೊಟ್ಟನು.

01164012a ತಸ್ಮಾದ್ಧರ್ಮಪ್ರಧಾನಾತ್ಮಾ ವೇದಧರ್ಮವಿದೀಪ್ಸಿತಃ|

01164012c ಬ್ರಾಹ್ಮಣೋ ಗುಣವಾನ್ಕಶ್ಚಿತ್ಪುರೋಧಾಃ ಪ್ರವಿಮೃಶ್ಯತಾಂ||

ಆದುದರಿಂದ ಧರ್ಮಪ್ರಧಾನಾತ್ಮ ವೇದಧರ್ಮವಿದೀಪ್ಸಿತ ಗುಣವಂತ ಬ್ರಾಹ್ಮಣ ಯಾರನ್ನಾದರೂ ನಿನ್ನ ಪುರೋಹಿತನನ್ನಾಗಿ ಮಾಡಿಕೊಳ್ಳಲು ಹುಡುಕು.

01164013a ಕ್ಷತ್ರಿಯೇಣ ಹಿ ಜಾತೇನ ಪೃಥಿವೀಂ ಜೇತುಮಿಚ್ಛತಾ|

01164013c ಪೂರ್ವಂ ಪುರೋಹಿತಃ ಕಾರ್ಯಃ ಪಾರ್ಥ ರಾಜ್ಯಾಭಿವೃದ್ಧಯೇ||

ಪಾರ್ಥ! ಕ್ಷತ್ರಿಯನಾಗಿ ಹುಟ್ಟಿದವನು, ಪೃಥ್ವಿಯನ್ನು ಜಯಿಸುವ ಇಚ್ಛೆಯುಳ್ಳವನು ರಾಜ್ಯಾಭಿವೃದ್ಧಿಗಾಗಿ ಮೊದಲು ಪುರೋಹಿತನನ್ನು ಪಡೆಯುವ ಕಾರ್ಯವನ್ನು ಮಾಡಬೇಕು.

01164014a ಮಹೀಂ ಜಿಗೀಷತಾ ರಾಜ್ಞಾ ಬ್ರಹ್ಮ ಕಾರ್ಯಂ ಪುರಃಸರಂ|

01164014c ತಸ್ಮಾತ್ಪುರೋಹಿತಃ ಕಶ್ಚಿದ್ಗುಣವಾನಸ್ತು ವೋ ದ್ವಿಜಃ||

ಮಹಿಯನ್ನು ಜಯಿಸಲಿಚ್ಛಿಸುವ ರಾಜನು ತನ್ನ ಪುರಸ್ಸರದಲ್ಲಿ ಬ್ರಹ್ಮಕಾರ್ಯವನ್ನು ಮಾಡಬೇಕು. ಆದುದರಿಂದ ಗುಣವಂತ ದ್ವಿಜ ಯಾರಾದರೂ ನಿಮ್ಮ ಪುರೋಹಿತನಾಗಲಿ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಪುರೋಹಿತಕರಣಕಥನೇ ಚತುಃಷಷ್ಟ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಪುರೋಹಿತಕರಣಕಥನದಲ್ಲಿ ನೂರಾಅರವತ್ತ್ನಾಲ್ಕನೆಯ ಅಧ್ಯಾಯವು.

Image result for indian flowers

Comments are closed.