Adi Parva: Chapter 163

ಆದಿ ಪರ್ವ: ಚೈತ್ರರಥ ಪರ್ವ

೧೬೩

ಸಂವರಣ-ತಪತಿಯರ ವಿವಾಹ, ಹನ್ನೆರಡು ವರ್ಷಗಳು ಗಿರಿಯಲ್ಲಿ ವಿಹಾರ (೧-೧೩). ರಾಜನಿಲ್ಲದ ರಾಜ್ಯದಲ್ಲಿ ಬರಗಾಲ, ವಸಿಷ್ಠನು ತಪತಿಯೊಂದಿಗೆ ರಾಜನನ್ನು ಹಿಂದೆ ಕರೆದುಕೊಂಡು ಬಂದುದು (೧೪-೧೮). ಸಂವರಣನಲ್ಲಿ ಕುರುವಿನ ಜನನ (೧೯-೨೩).

01163001 ವಸಿಷ್ಠ ಉವಾಚ|

01163001a ಯೈಷಾ ತೇ ತಪತೀ ನಾಮ ಸಾವಿತ್ರ್ಯವರಜಾ ಸುತಾ|

01163001c ತಾಂ ತ್ವಾಂ ಸಂವರಣಸ್ಯಾರ್ಥೇ ವರಯಾಮಿ ವಿಭಾವಸೋ||

ವಸಿಷ್ಠನು ಹೇಳಿದನು: “ವಿಭಾವಸೋ! ಸಂವರಣನಿಗಾಗಿ ತಪತೀ ಎಂಬ ಹೆಸರಿನ ನಿನ್ನ ಮಗಳು ಮತ್ತು ಸಾವಿತ್ರಿಯ ತಂಗಿಯನ್ನು ಕೇಳಿಕೊಂಡು ಬಂದಿದ್ದೇನೆ.

01163002a ಸ ಹಿ ರಾಜಾ ಬೃಹತ್ಕೀರ್ತಿರ್ಧರ್ಮಾರ್ಥವಿದುದಾರಧೀಃ|

01163002c ಯುಕ್ತಃ ಸಂವರಣೋ ಭರ್ತಾ ದುಹಿತುಸ್ತೇ ವಿಹಂಗಮ||

ವಿಹಂಗಮ! ಉದಾರ ಮನಸ್ಕನಾದ, ಬೃಹತ್ಕೀರ್ತಿ, ಧರ್ಮ, ಮತ್ತು ಅರ್ಥವನ್ನು ಹೊಂದಿರುವ ರಾಜ ಸಂವರಣನು ನಿನ್ನ ಮಗಳಿಗೆ ಯೋಗ್ಯ ವರನಾಗುತ್ತಾನೆ.””

01163003 ಗಂಧರ್ವ ಉವಾಚ|

01163003a ಇತ್ಯುಕ್ತಃ ಸವಿತಾ ತೇನ ದದಾನೀತ್ಯೇವ ನಿಶ್ಚಿತಃ|

01163003c ಪ್ರತ್ಯಭಾಷತ ತಂ ವಿಪ್ರಂ ಪ್ರತಿನಂದ್ಯ ದಿವಾಕರಃ||

ಗಂಧರ್ವನು ಹೇಳಿದನು: “ಅವಳನ್ನು ಅವನಿಗೇ ಕೊಡಬೇಕೆಂದು ಮೊದಲೇ ನಿಶ್ಚಯಿಸಿದ್ದ ಸವಿತು ದಿವಾಕರನು ಆ ವಿಪ್ರನನ್ನು ನಮಸ್ಕರಿಸಿ ಉತ್ತರಿಸಿದನು:

01163004a ವರಃ ಸಂವರಣೋ ರಾಜ್ಞಾಂ ತ್ವಮೃಷೀಣಾಂ ವರೋ ಮುನೇ|

01163004c ತಪತೀ ಯೋಷಿತಾಂ ಶ್ರೇಷ್ಠಾ ಕಿಮನ್ಯತ್ರಾಪವರ್ಜನಾತ್||

“ನೀನು ಋಷಿಗಳಲ್ಲಿ ಶ್ರೇಷ್ಠನು ಹೇಗೋ ಹಾಗೆ ರಾಜರಲ್ಲಿ ಸಂವರಣನು ಶ್ರೇಷ್ಠ ಮತ್ತು ಕನ್ಯೆಯರಲ್ಲಿ ತಪತಿಯು ಶ್ರೇಷ್ಠೆ. ಹೀಗಿರುವಾಗ ಅವಳನ್ನು ಬೇರೆ ಎಲ್ಲಿ ಯಾಕೆ ಕೊಡಬೇಕು?”

01163005a ತತಃ ಸರ್ವಾನವದ್ಯಾಗ್ನೀಂ ತಪತೀಂ ತಪನಃ ಸ್ವಯಂ|

01163005c ದದೌ ಸಂವರಣಸ್ಯಾರ್ಥೇ ವಸಿಷ್ಠಾಯ ಮಹಾತ್ಮನೇ|

01163005e ಪ್ರತಿಜಗ್ರಾಹ ತಾಂ ಕನ್ಯಾಂ ಮಹರ್ಷಿಸ್ತಪತೀಂ ತದಾ||

01163006a ವಸಿಷ್ಠೋಽಥ ವಿಸೃಷ್ಟಶ್ಚ ಪುನರೇವಾಜಗಾಮ ಹ|

01163006c ಯತ್ರ ವಿಖ್ಯತಕೀರ್ತಿಃ ಸ ಕುರೂಣಾಮೃಷಭೋಽಭವತ್||

ಆಗ ಸ್ವಯಂ ತಪನನು ಸರ್ವಾನವದ್ಯಾಂಗಿ ತಪತಿಯನ್ನು ಸಂವರಣನಿಗಾಗಿ ಮಹಾತ್ಮ ವಸಿಷ್ಠನಿಗೆ ಕೊಟ್ಟನು. ಮಹರ್ಷಿಯು ಕನ್ಯೆ ತಪತಿಯನ್ನು ಸ್ವೀಕರಿಸಿದನು. ಅವನಿಂದ ಬೀಳ್ಕೊಂಡ ವಸಿಷ್ಠನು ಪುನಃ ವಿಖ್ಯಾತಕೀರ್ತಿ ಕುರುಗಳ ವೃಷಭನಿದ್ದಲ್ಲಿಗೆ ಬಂದನು.

01163007a ಸ ರಾಜಾ ಮನ್ಮಥಾವಿಷ್ಟಸ್ತದ್ಗತೇನಾಂತರಾತ್ಮನಾ|

01163007c ದೃಷ್ಟ್ವಾ ಚ ದೇವಕನ್ಯಾಂ ತಾಂ ತಪತೀಂ ಚಾರುಹಾಸಿನೀಂ|

01163007e ವಸಿಷ್ಠೇನ ಸಹಾಯಾಂತೀಂ ಸಂಹೃಷ್ಟೋಽಭ್ಯಧಿಕಂ ಬಭೌ||

ಮನ್ಮಥಾವಿಷ್ಠನಾಗಿ ಅಂತರಾತ್ಮವನ್ನೇ ಅವಳೊಡನೆ ಕಳುಹಿಸಿಕೊಟ್ಟಿದ್ದ ರಾಜನು ವಸಿಷ್ಠನೊಡನೆ ಬಂದಿದ್ದ ಚಾರುಹಾಸಿನಿ ದೇವಕನ್ಯೆ ತಪತಿಯನ್ನು ನೋಡಿ ಅತ್ಯಧಿಕ ಹರ್ಷಗೊಂಡನು.

01163008a ಕೃಚ್ಛ್ರೇ ದ್ವಾದಶರಾತ್ರೇ ತು ತಸ್ಯ ರಾಜ್ಞಃ ಸಮಾಪಿತೇ|

01163008c ಆಜಗಾಮ ವಿಶುದ್ಧಾತ್ಮಾ ವಸಿಷ್ಠೋ ಭಗವಾನೃಷಿಃ||

01163009a ತಪಸಾರಾಧ್ಯ ವರದಂ ದೇವಂ ಗೋಪತಿಮೀಶ್ವರಂ|

01163009c ಲೇಭೇ ಸಂವರಣೋ ಭಾರ್ಯಾಂ ವಸಿಷ್ಠಸ್ಯೈವ ತೇಜಸಾ||

ರಾಜನು ದ್ವಾದಶ ರಾತ್ರಿಗಳ ಕೃಚ್ಛ್ರವನ್ನು ಪೂರೈಸುತ್ತಿದ್ದಂತೆಯೇ ವಿಶುದ್ಧಾತ್ಮ ಭಗವಾನೃಷಿ ವಸಿಷ್ಠನು ಬಂದನು. ವರದ, ದೇವ, ಗೋಪತಿ, ಈಶ್ವರನನ್ನು ತಪಸ್ಸಿನಿಂದ ಆರಾಧಿಸಿ ವಸಿಷ್ಠನ ತೇಜಸ್ಸಿನಿಂದ ಸಂವರಣನು ಭಾರ್ಯೆಯನ್ನು ಪಡೆದನು.

01163010a ತತಸ್ತಸ್ಮಿನ್ಗಿರಿಶ್ರೇಷ್ಠೇ ದೇವಗಂಧರ್ವಸೇವಿತೇ|

01163010c ಜಗ್ರಾಹ ವಿಧಿವತ್ಪಾಣಿಂ ತಪತ್ಯಾಃ ಸ ನರರ್ಷಭಃ||

ಆಗ ದೇವಗಂಧರ್ವಸೇವಿತ ಆ ಶ್ರೇಷ್ಠ ಗಿರಿಯಲ್ಲಿಯೇ ಆ ನರರ್ಷಭನು ವಿಧಿವತ್ತಾಗಿ ತಪತಿಯ ಪಾಣಿಗ್ರಹಣ ಮಾಡಿದನು.

01163011a ವಸಿಷ್ಠೇನಾಭ್ಯನುಜ್ಞಾತಸ್ತಸ್ಮಿನ್ನೇವ ಧರಾಧರೇ|

01163011c ಸೋಽಕಾಮಯತ ರಾಜರ್ಷಿರ್ವಿಹರ್ತುಂ ಸಹ ಭಾರ್ಯಯಾ||

01163012a ತತಃ ಪುರೇ ಚ ರಾಷ್ಟ್ರೇ ಚ ವಾಹನೇಷು ಬಲೇಷು ಚ|

01163012c ಆದಿದೇಶ ಮಹೀಪಾಲಸ್ತಮೇವ ಸಚಿವಂ ತದಾ||

ವಸಿಷ್ಠನ ಅನುಜ್ಞೆಯನ್ನು ಪಡೆದು ಆ ರಾಜರ್ಷಿಯು ತನ್ನ ಭಾರ್ಯೆಯೊಂದಿಗೆ ಅದೇ ಧರಾಧರದಲ್ಲಿ ಕಾಮಿಸಿದನು. ಮಹೀಪಾಲನು ಅದೇ ಸಚಿವನನ್ನು ಪುರ, ರಾಷ್ಟ್ರ, ವಾಹನ ಮತ್ತು ಸೇನೆಗಳ ಮೇಲ್ವಿಚಾರಣೆಗೆ ನೇಮಿಸಿದನು.

01163013a ನೃಪತಿಂ ತ್ವಭ್ಯನುಜ್ಞಾಯ ವಸಿಷ್ಠೋಽಥಾಪಚಕ್ರಮೇ|

01163013c ಸೋಽಪಿ ರಾಜಾ ಗಿರೌ ತಸ್ಮಿನ್ವಿಜಹಾರಾಮರೋಪಮಃ||

ನೃಪತಿಯಿಂದ ಬೀಳ್ಕೊಂಡ ವಸಿಷ್ಠನು ಹಿಂದಿರುಗಿದನು. ರಾಜನಾದರೋ ಆ ಗಿರಿಯಲ್ಲಿ ಅಮರನಂತೆ ವಿಹರಿಸಿದನು.

01163014a ತತೋ ದ್ವಾದಶ ವರ್ಷಾಣಿ ಕಾನನೇಷು ಜಲೇಷು ಚ|

01163014c ರೇಮೇ ತಸ್ಮಿನ್ಗಿರೌ ರಾಜಾ ತಯೈವ ಸಹ ಭಾರ್ಯಯಾ||

ರಾಜನು ತನ್ನ ಪತ್ನಿಯೊಡನೆ ಹನ್ನೆರಡು ವರ್ಷಗಳು ಆ ಗಿರಿಯ ಕಾನನಗಳಲ್ಲಿ ಮತ್ತು ಜಲದಲ್ಲಿ ರಮಿಸಿದನು.

01163015a ತಸ್ಯ ರಾಜ್ಞಃ ಪುರೇ ತಸ್ಮಿನ್ಸಮಾ ದ್ವಾದಶ ಸರ್ವಶಃ|

01163015c ನ ವವರ್ಷ ಸಹಸ್ರಾಕ್ಷೋ ರಾಷ್ಟ್ರೇ ಚೈವಾಸ್ಯ ಸರ್ವಶಃ||

ಆ ರಾಜನ ಪುರ ಮತ್ತು ರಾಷ್ಟ್ರದ ಎಲ್ಲೆಡೆಯಲ್ಲಿಯೂ ಹನ್ನೆರಡು ವರ್ಷಗಳ ಪರ್ಯಂತ ಸಹಸ್ರಾಕ್ಷನು ಮಳೆಯನ್ನು ಸುರಿಸಲಿಲ್ಲ[1].

01163016a ತತ್ಕ್ಷುಧಾರ್ತೈರ್ನಿರಾನಂದೈಃ ಶವಭೂತೈಸ್ತದಾ ನರೈಃ|

01163016c ಅಭವತ್ಪ್ರೇತರಾಜಸ್ಯ ಪುರಂ ಪ್ರೇತೈರಿವಾವೃತಂ||

ಬರಗಾಲ ಪೀಡಿತರಾಗಿ ಸುಖವನ್ನೇ ಕಾಣದ ನರರು ಶವಗಳಾಗಿ ಪ್ರೇತರಾಜನ ಪುರವನ್ನು ಮುತ್ತುವಂತೆ ಮುತ್ತಿಗೆ ಹಾಕಿದರು.

01163017a ತತಸ್ತತ್ತಾದೃಶಂ ದೃಷ್ಟ್ವಾ ಸ ಏವ ಭಗವಾನೃಷಿಃ|

01163017c ಅಭ್ಯಪದ್ಯತ ಧರ್ಮಾತ್ಮಾ ವಸಿಷ್ಠೋ ರಾಜಸತ್ತಮಂ||

01163018a ತಂ ಚ ಪಾರ್ಥಿವಶಾರ್ದೂಲಮಾನಯಾಮಾಸ ತತ್ಪುರಂ|

01163018c ತಪತ್ಯಾ ಸಹಿತಂ ರಾಜನ್ನುಷಿತಂ ದ್ವಾದಶೀಃ ಸಮಾಃ||

ಆ ದೃಶ್ಯವನ್ನು ನೋಡಿದ ಧರ್ಮಾತ್ಮ ಭಗವಾನೃಷಿ ವಸಿಷ್ಠನು ರಾಜಶರ್ದೂಲನಿದ್ದಲ್ಲಿಗೆ ಹೋಗಿ ಹನ್ನೆರಡು ವರ್ಷಗಳು ರಾಜ್ಯದಿಂದ ಹೊರಗೆ ವಾಸಿಸುತ್ತಿದ್ದ ಆ ಪಾರ್ಥಿವ ಶಾರ್ದೂಲನನ್ನು ತಪತಿಯ ಸಹಿತ ಪುರಕ್ಕೆ ಮರಳಿ ಕರೆತಂದನು.

01163019a ತತಃ ಪ್ರವೃಷ್ಟಸ್ತತ್ರಾಸೀದ್ಯಥಾಪೂರ್ವಂ ಸುರಾರಿಹಾ|

01163019c ತಸ್ಮಿನ್ನೃಪತಿಶಾರ್ದೂಲೇ ಪ್ರವಿಷ್ಟೇ ನಗರಂ ಪುನಃ||

ಆ ನೃಪತಿಶಾರ್ದೂಲನು ಪುನಃ ನಗರವನ್ನು ಪ್ರವೇಶಿಸಿದ ನಂತರ ಸುರಾರಿಹನು ಅಲ್ಲಿ ಮೊದಲಿನಂತೆಯೇ ಮಳೆಯನ್ನು ಸುರಿಸಿದನು.

01163020a ತತಃ ಸರಾಷ್ಟ್ರಂ ಮುಮುದೇ ತತ್ಪುರಂ ಪರಯಾ ಮುದಾ|

01163020c ತೇನ ಪಾರ್ಥಿವಮುಖ್ಯೇನ ಭಾವಿತಂ ಭಾವಿತಾತ್ಮನಾ||

ಭಾವಿತಾತ್ಮ ಪಾರ್ಥಿವ ಮುಖ್ಯನ ಮೂಲಕ ಅವರ ರಾಷ್ಟ್ರ ಮತ್ತು ಪುರವು ಪರಮ ಸಂತಸವನ್ನು ಹೊಂದಿತು.

01163021a ತತೋ ದ್ವಾದಶ ವರ್ಷಾಣಿ ಪುನರೀಜೇ ನರಾಧಿಪಃ|

01163021c ಪತ್ನ್ಯಾ ತಪತ್ಯಾ ಸಹಿತೋ ಯಥಾ ಶಕ್ರೋ ಮರುತ್ಪತಿಃ||

ಪತ್ನಿ ತಪತಿಯ ಸಹಿತ ನರಾಧಿಪನು ಇನ್ನೂ ಹನ್ನೆರಡು ವರ್ಷಗಳು ಮರುತ್ಪತಿ ಶಕ್ರನ ಹಾಗೆ ಯಜ್ಞಗಳನ್ನು ನೆರವೇರಿಸಿದನು.

01163022a ಏವಮಾಸೀನ್ಮಹಾಭಾಗಾ ತಪತೀ ನಾಮ ಪೌರ್ವಿಕೀ|

01163022c ತವ ವೈವಸ್ವತೀ ಪಾರ್ಥ ತಾಪತ್ಯಸ್ತ್ವಂ ಯಯಾ ಮತಃ||

ಪಾರ್ಥ! ಈ ರೀತಿ ತಪತಿ ಎಂಬ ಹೆಸರಿನ ಮಹಾಭಾಗೆಯು ನಿನ್ನ ಪೂರ್ವಜಳಾಗಿದ್ದಳು. ಆ ವೈವಸ್ವತಿಯಿಂದಾಗಿ ನೀನು ತಾಪತ್ಯ ಎಂದು ಕರೆಯಲ್ಪಡುತ್ತೀಯೆ.

01163023a ತಸ್ಯಾಂ ಸಂಜನಯಾಮಾಸ ಕುರುಂ ಸಂವರಣೋ ನೃಪಃ|

01163023c ತಪತ್ಯಾಂ ತಪತಾಂ ಶ್ರೇಷ್ಠ ತಾಪತ್ಯಸ್ತ್ವಂ ತತೋಽರ್ಜುನ||

ನೃಪ ಸಂವರಣನು ಅವಳಲ್ಲಿ ಕುರುವನ್ನು ಪಡೆದನು. ಅರ್ಜುನ! ತಪತಿಯಿಂದಾಗಿ ತಾಪಸಿಗಳಲ್ಲಿ ಶ್ರೇಷ್ಠನಾದ ನೀನು ತಾಪತ್ಯನಾದೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನಸಮಾಪ್ತೇ ದೈಪಂಚಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನಸಮಾಪ್ತಿಯಲ್ಲಿ ನೂರಾಅರವತ್ತ್ಮೂರನೆಯ ಅಧ್ಯಾಯವು.

Image result for indian flowers

[1] ರಾಜನಿಲ್ಲದ ನಾಡಿನಲ್ಲಿ ಇಂದ್ರನು ಮಳೆಸುರಿಸುವುದಿಲ್ಲ ಎಂಬ ನಂಬಿಕೆಯನ್ನು ಹಿಂದೆ ಸತ್ಯವತೀ-ಭೀಷ್ಮರ ಸಂಭಾಷಣೆಯಲ್ಲಿ ಕೇಳಿದ್ದೇವೆ. ಮತ್ತು ಅವಳು ವ್ಯಾಸನನ್ನು ಕಾಯಲು ಸಮಯವಿಲ್ಲವೆಂದು ತಕ್ಷಣವೇ ಕುರುನಾಡಿಗೆ ರಾಜನನ್ನು ಕೊಡಬೇಕು ಎಂದು ಒತ್ತಾಯಿಸುವುದರ ಕಾರಣವನ್ನು ಇದು ಸೂಚಿಸುತ್ತದೆಯೇನೋ?

Comments are closed.