Adi Parva: Chapter 160

ಆದಿ ಪರ್ವ: ಚೈತ್ರರಥ ಪರ್ವ

೧೬೦

ಸಂವರಣ ಮತ್ತು ತಪತಿ

ತನ್ನನ್ನು ತಾಪತ್ಯ ಎಂದು ಕರೆದುದರ ಕಾರಣವನ್ನು ಅರ್ಜುನನು ಕೇಳಲು ಗಂಧರ್ವನು ಪುರುವಂಶಜ ಸಂವರಣನು ಸೂರ್ಯಪುತ್ರಿ ತಪತಿಯನ್ನು ಮೋಹಿಸಿದುದರ ಕುರಿತು ಹೇಳಿದುದು (೧-೪೧).

Image result for samvarana and tapati01160001 ಅರ್ಜುನ ಉವಾಚ|

01160001a ತಾಪತ್ಯ ಇತಿ ಯದ್ವಾಕ್ಯಮುಕ್ತವಾನಸಿ ಮಾಮಿಹ|

01160001c ತದಹಂ ಜ್ಞಾತುಮಿಚ್ಛಾಮಿ ತಾಪತ್ಯಾರ್ಥವಿನಿಶ್ಚಯಂ||

ಅರ್ಜುನನು ಹೇಳಿದನು: “ನೀನು ನನಗೆ ತಾಪತ್ಯ ಎನ್ನುವ ಮಾತಿನಿಂದ ಸಂಬೋಧಿಸಿದ್ದೀಯಲ್ಲ. ಆ ತಾಪತ್ಯದ ಅರ್ಥವನ್ನು ತಿಳಿಯಲು ಬಯಸುತ್ತೇನೆ.

01160002a ತಪತೀ ನಾಮ ಕಾ ಚೈಷಾ ತಾಪತ್ಯಾ ಯತ್ಕೃತೇ ವಯಂ|

01160002c ಕೌಂತೇಯಾ ಹಿ ವಯಂ ಸಾಧೋ ತತ್ತ್ವಮಿಚ್ಛಾಮಿ ವೇದಿತುಂ||

ನಾವು ಹೇಗೆ ಕೌಂತೇಯರೆಂದು ಕರೆದುಕೊಳ್ಳಲ್ಪಟ್ಟಿದ್ದೇವೋ ಹಾಗೆ ತಾಪತ್ಯ ಎಂದು ಕರೆದೆಯಲ್ಲ ಆ ತಪತಿಯು ಯಾರು ಮತ್ತು ಅವರ ಮಕ್ಕಳು ಯಾರು ಎಂದು ತಿಳಿಯಲು ಬಯಸುತ್ತೇನೆ.””

01160003 ವೈಶಂಪಾಯನ ಉವಾಚ|

01160003a ಏವಮುಕ್ತಃ ಸ ಗಂಧರ್ವಃ ಕುಂತೀಪುತ್ರಂ ಧನಂಜಯಂ|

01160003c ವಿಶ್ರುತಾಂ ತ್ರಿಷು ಲೋಕೇಷು ಶ್ರಾವಯಾಮಾಸ ವೈ ಕಥಾಂ||

ವೈಶಂಪಾಯನನು ಹೇಳಿದನು: “ಕುಂತೀಪುತ್ರ ಧನಂಜಯನ ಈ ಮಾತುಗಳನ್ನು ಕೇಳಿದ ಗಂಧರ್ವನು ತ್ರಿಲೋಕವಿಶ್ರುತ ಕಥೆಯನ್ನು ಹೇಳಲು ತೊಡಗಿದನು.

01160004 ಗಂಧರ್ವ ಉವಾಚ|

01160004a ಹಂತ ತೇ ಕಥಯಿಷ್ಯಾಮಿ ಕಥಾಮೇತಾಂ ಮನೋರಮಾಂ|

01160004c ಯಥಾವದಖಿಲಾಂ ಪಾರ್ಥ ಧರ್ಮ್ಯಾಂ ಧರ್ಮಭೃತಾಂ ವರ||

ಗಂಧರ್ವನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಪಾರ್ಥ! ಅಖಿಲ ಧರ್ಮಗಳಿಂದೊಡಗೂಡಿದ ಆ ಮನೋರಮ ಕಥೆಯನ್ನು ನಡೆದಂತೆ ಹೇಳುತ್ತೇನೆ.

01160005a ಉಕ್ತವಾನಸ್ಮಿ ಯೇನ ತ್ವಾಂ ತಾಪತ್ಯ ಇತಿ ಯದ್ವಚಃ|

01160005c ತತ್ತೇಽಹಂ ಕಥಯಿಷ್ಯಾಮಿ ಶೃಣುಷ್ವೈಕಮನಾ ಮಮ||

ನಿನ್ನನ್ನು ಏಕೆ ತಾಪತ್ಯ ಎಂದು ಕರೆದೆ ಎನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ನನ್ನನ್ನು ಕೇಳು.

01160006a ಯ ಏಷ ದಿವಿ ಧಿಷ್ಣ್ಯೇನ ನಾಕಂ ವ್ಯಾಪ್ನೋತಿ ತೇಜಸಾ|

01160006c ಏತಸ್ಯ ತಪತೀ ನಾಮ ಬಭೂವಾಸದೃಶೀ ಸುತಾ||

ದಿವಿಯಲ್ಲಿದ್ದುಕೊಂಡು ನಾಕದವರೆಗೂ ತನ್ನ ತೇಜಸ್ಸಿನಿಂದ ಬೆಳಗಿಸುವವನಿಗೆ ತಪತೀ ಎಂಬ ಹೆಸರಿನ ಅಸದೃಶಿ ಮಗಳಿದ್ದಳು.

01160007a ವಿವಸ್ವತೋ ವೈ ಕೌಂತೇಯ ಸಾವಿತ್ರ್ಯವರಜಾ ವಿಭೋ|

01160007c ವಿಶ್ರುತಾ ತ್ರಿಷು ಲೋಕೇಷು ತಪತೀ ತಪಸಾ ಯುತಾ||

ಕೌಂತೇಯ! ಸಾವಿತ್ರಿಯಿಂದ ವಿವಸ್ವತನಲ್ಲಿ ಹುಟ್ಟಿದ ಈ ತಪತಿಯು ಮೂರೂ ಲೋಕಗಳಲ್ಲಿ ತಪಸ್ಸಿನಿಂದ ಯುಕ್ತಳಾಗಿ ವಿಶ್ರುತಳಾಗಿದ್ದಳು.

01160008a ನ ದೇವೀ ನಾಸುರೀ ಚೈವ ನ ಯಕ್ಷೀ ನ ಚ ರಾಕ್ಷಸೀ|

01160008c ನಾಪ್ಸರಾ ನ ಚ ಗಂಧರ್ವೀ ತಥಾರೂಪೇಣ ಕಾ ಚನ||

ಯಾರೇ ದೇವಿಯಾಗಲೀ, ಅಸುರಿಯಾಗಲೀ, ಯಕ್ಷಿಯಾಗಲೀ, ರಾಕ್ಷಸಿಯಾಗಲೀ, ಅಪ್ಸರೆಯಾಗಲೀ, ಗಂಧರ್ವಿಯಾಗಲೀ ಅವಳಷ್ಟು ರೂಪವಂತಳಾಗಿರಲಿಲ್ಲ.

01160009a ಸುವಿಭಕ್ತಾನವದ್ಯಾಂಗೀ ಸ್ವಸಿತಾಯತಲೋಚನಾ|

01160009c ಸ್ವಾಚಾರಾ ಚೈವ ಸಾಧ್ವೀ ಚ ಸುವೇಷಾ ಚೈವ ಭಾಮಿನೀ||

ಆ ಭಾಮಿನಿಯು ಸುವಿಭಕ್ತಳಾಗಿದ್ದಳು (ಅವಳ ದೇಹವು ಅಳತೆಯಲ್ಲಿ ಒಳ್ಳೆಯದಾಗಿದ್ದಿತ್ತು), ಅನವದ್ಯಾಂಗಿಯಾಗಿದ್ದಳು, ಕಪ್ಪಾದ ಅಗಲ ಕಣ್ಣುಗಳುಳ್ಳವಳಾಗಿದ್ದಳು, ಒಳ್ಳೆಯ ನಡತೆಯುಳ್ಳವಳಾಗಿದ್ದಳು, ಸಾಧ್ವಿಯಾಗಿದ್ದಳು ಮತ್ತು ಸುಂದರ ವೇಷ ಭೂಷಣಗಳನ್ನು ಧರಿಸುತ್ತಿದ್ದಳು.

01160010a ನ ತಸ್ಯಾಃ ಸದೃಶಂ ಕಂ ಚಿತ್ತ್ರಿಷು ಲೋಕೇಷು ಭಾರತ|

01160010c ಭರ್ತಾರಂ ಸವಿತಾ ಮೇನೇ ರೂಪಶೀಲಕುಲಶ್ರುತೈಃ||

ಭಾರತ! ಸವಿತುವು ರೂಪ, ಶೀಲ, ಕುಲ ಮತ್ತು ಕಲಿಕೆ ಯಾವುದರಲ್ಲಿಯೂ ಅವಳ ಸದೃಶರಾದವನು ಈ ಮೂರೂ ಲೋಕಗಳಲ್ಲಿ ಯಾರೂ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದನು.

01160011a ಸಂಪ್ರಾಪ್ತಯೌವನಾಂ ಪಶ್ಯನ್ದೇಯಾಂ ದುಹಿತರಂ ತು ತಾಂ|

01160011c ನೋಪಲೇಭೇ ತತಃ ಶಾಂತಿಂ ಸಂಪ್ರದಾನಂ ವಿಚಿಂತಯನ್||

ಅವಳು ಯೌವನವನ್ನು ಹೊಂದಲು ಮಗಳನ್ನು ಕೊಡಬೇಕು ಎನ್ನುವುದನ್ನು ನೋಡಿದ ಅವನು ಅವಳ ಮದುವೆಯ ಕುರಿತು ಯೋಚಿಸುತ್ತಾ ಚಿಂತೆಗೊಳಗಾದನು.

01160012a ಅರ್ಥರ್ಕ್ಷಪುತ್ರಃ ಕೌಂತೇಯ ಕುರೂಣಾಂ ಋಷಭೋ ಬಲೀ|

01160012c ಸೂರ್ಯಮಾರಾಧಯಾಮಾಸ ನೃಪಃ ಸಂವರಣಃ ಸದಾ||

01160013a ಅರ್ಘ್ಯಮಾಲ್ಯೋಪಹಾರೈಶ್ಚ ಶಶ್ವಚ್ಚ ನೃಪತಿರ್ಯತಃ|

01160013c ನಿಯಮೈರುಪವಾಸೈಶ್ಚ ತಪೋಭಿರ್ವಿವಿಧೈರಪಿ||

ಕೌಂತೇಯ! ಆಗ ಅರ್ಕ್ಷಪುತ್ರ ಕುರು‌ಋಷಭ ಬಲಶಾಲಿ ರಾಜ ಸಂವರಣನು ಸದಾ ಅರ್ಘ್ಯ ಮಾಲೆ ಉಪಹಾರಗಳಿಂದ, ಉಪವಾಸ ವ್ರತಗಳಿಂದ ಮತ್ತು ವಿವಿಧ ತಪಸ್ಸುಗಳಿಂದ ನಿಯಮಬದ್ಧನಾಗಿ ಸೂರ್ಯಾರಾಧನೆಯಲ್ಲಿ ತೊಡಗಿದ್ದನು.

01160014a ಶುಶ್ರೂಷುರನಹಂವಾದೀ ಶುಚಿಃ ಪೌರವನಂದನಃ|

01160014c ಅಂಶುಮಂತಂ ಸಮುದ್ಯಂತಂ ಪೂಜಯಾಮಾಸ ಭಕ್ತಿಮಾನ್||

ಆ ಪೌರವನಂದನನು ವಿನಯದಿಂದ, ಅಹಂಕಾರವಿಲ್ಲದೆ ಶುಚಿರ್ಭೂತನಾಗಿ ಭಕ್ತಿಯಿಂದ ಆ ಅಂಶುಮಂತನನ್ನು ಪೂಜಿಸುತ್ತಿದ್ದನು.

01160015a ತತಃ ಕೃತಜ್ಞಂ ಧರ್ಮಜ್ಞಂ ರೂಪೇಣಾಸದೃಶಂ ಭುವಿ|

01160015c ತಪತ್ಯಾಃ ಸದೃಶಂ ಮೇನೇ ಸೂರ್ಯಃ ಸಂವರಣಂ ಪತಿಂ||

ಆಗ ಕೃತಜ್ಞನೂ, ಧರ್ಮಜ್ಞನೂ, ಭುಮಿಯಲ್ಲಿಯೇ ರೂಪದಲ್ಲಿ ಅಸದೃಶನೂ ಆದ ಸಂವರಣನು ತಪತಿಗೆ ಸದೃಶ ಪತಿಯೆಂದು ಸೂರ್ಯನು ಅಭಿಪ್ರಾಯಪಟ್ಟನು.

01160016a ದಾತುಮೈಚ್ಛತ್ತತಃ ಕನ್ಯಾಂ ತಸ್ಮೈ ಸಂವರಣಾಯ ತಾಂ|

01160016c ನೃಪೋತ್ತಮಾಯ ಕೌರವ್ಯ ವಿಶ್ರುತಾಭಿಜನಾಯ ವೈ||

ಕೌರವ್ಯ! ಆಗ ಅವನು ತನ್ನ ಕನ್ಯೆಯನ್ನು ವಿಶ್ರುತ ಅಭಿಜನ ನೃಪೋತ್ತಮ ಸಂವರಣನಿಗೆ ಕೊಡಲು ಇಚ್ಛಿಸಿದನು.

01160017a ಯಥಾ ಹಿ ದಿವಿ ದೀಪ್ತಾಂಶುಃ ಪ್ರಭಾಸಯತಿ ತೇಜಸಾ|

01160017c ತಥಾ ಭುವಿ ಮಹೀಪಾಲೋ ದೀಪ್ತ್ಯಾ ಸಂವರಣೋಽಭವತ್|

ದಿವಿಯಲ್ಲಿ ದೀಪ್ತಾಂಶುವು ತನ್ನ ತೇಜಸ್ಸಿನಿಂದ ಹೇಗೆ ಬೆಳಗುತ್ತಾನೋ ಹಾಗೆ ಭುವಿಯಲ್ಲಿ ಮಹೀಪಾಲ ಸಂವರಣನು ಬೆಳಗುತ್ತಿದ್ದನು.

01160018a ಯಥಾರ್ಚಯಂತಿ ಚಾದಿತ್ಯಮುದ್ಯಂತಂ ಬ್ರಹ್ಮವಾದಿನಃ|

01160018c ತಥಾ ಸಂವರಣಂ ಪಾರ್ಥ ಬ್ರಾಹ್ಮಣಾವರಜಾಃ ಪ್ರಜಾಃ||

ಬ್ರಹ್ಮವಾದಿಗಳು ಹೇಗೆ ಉದಯಿಸುತ್ತಿರುವ ಆದಿತ್ಯನನ್ನು ಅರ್ಚಿಸುತ್ತಾರೋ ಹಾಗೆ ಪಾರ್ಥ! ಬ್ರಾಹ್ಮಣರೇ ಮೊದಲಾದ ಪ್ರಜೆಗಳು ಸಂವರಣನನ್ನು ಪೂಜಿಸುತ್ತಿದ್ದರು.

01160019a ಸ ಸೋಮಮತಿ ಕಾಂತತ್ವಾದಾದಿತ್ಯಮತಿ ತೇಜಸಾ|

01160019c ಬಭೂವ ನೃಪತಿಃ ಶ್ರೀಮಾನ್ಸುಹೃದಾಂ ದುರ್ಹೃದಾಮಪಿ||

ಆ ಶ್ರೀಮಾನ್ ನೃಪತಿಯು ತನ್ನ ಸುಹೃದಯರಿಗೆ ಕಾಂತಿಯಲ್ಲಿ ಸೋಮನಂತಿದ್ದನು ಮತ್ತು ದುಹೃದಯರಿಗೆ ತೇಜಸ್ಸಿನಲ್ಲಿ ಆದಿತ್ಯನಂತಿದ್ದನು.

01160020a ಏವಂಗುಣಸ್ಯ ನೃಪತೇಸ್ತಥಾವೃತ್ತಸ್ಯ ಕೌರವ|

01160020c ತಸ್ಮೈ ದಾತುಂ ಮನಶ್ಚಕ್ರೇ ತಪತೀಂ ತಪನಃ ಸ್ವಯಂ||

ಕೌರವ! ಈ ರೀತಿಯ ಗುಣ ಚಾರಿತ್ರ್ಯವುಳ್ಳ ನೃಪತಿಗೆ ಸ್ವಯಂ ತಪನನೇ ತಪತಿಯನ್ನು ಕೊಡಲು ನಿಶ್ಚಯಿಸಿದನು.

01160021a ಸ ಕದಾ ಚಿದಥೋ ರಾಜಾ ಶ್ರೀಮಾನುರುಯಶಾ ಭುವಿ|

01160021c ಚಚಾರ ಮೃಗಯಾಂ ಪಾರ್ಥ ಪರ್ವತೋಪವನೇ ಕಿಲ|

ಪಾರ್ಥ! ಹೀಗಿರಲು ಭೂವಿಯಲ್ಲಿಯೇ ಅತ್ಯಂತ ಪ್ರಸಿದ್ಧ ಆ ಶ್ರೀಮಾನ್ ರಾಜನು ಒಮ್ಮೆ ಬೇಟೆಯಾಡಲು ಪರ್ವತದ ಉಪವನವೊಂದಕ್ಕೆ ಹೋದನು.

01160022a ಚರತೋ ಮೃಗಯಾಂ ತಸ್ಯ ಕ್ಷುತ್ಪಿಪಾಸಾಶ್ರಮಾನ್ವಿತಃ|

01160022c ಮಮಾರ ರಾಜ್ಞಃ ಕೌಂತೇಯ ಗಿರಾವಪ್ರತಿಮೋ ಹಯಃ||

ಕೌಂತೇಯ! ಬೇಟೆಯಾಡುತ್ತಿರುವಾಗ ಆ ರಾಜನ ಅಪ್ರತಿಮ ಕುದುರೆಯು ಹಸಿವು, ಬಾಯಾರಿಕೆ ಮತ್ತು ಆಯಾಸಗಳಿಂದ ಬಳಲಿ ಅಲ್ಲಿಯೇ ಬಿದ್ದು ಸತ್ತುಹೋಯಿತು.

01160023a ಸ ಮೃತಾಶ್ವಶ್ಚರನ್ಪಾರ್ಥ ಪದ್ಭ್ಯಾಮೇವ ಗಿರೌ ನೃಪಃ|

01160023c ದದರ್ಶಾಸದೃಶೀಂ ಲೋಕೇ ಕನ್ಯಾಮಾಯತಲೋಚನಾಂ||

ಪಾರ್ಥ! ಕುದುರೆಯು ಸಾಯಲು ನೃಪನು ನಡೆದುಕೊಂಡೇ ಆ ಗಿರಿಯಮೇಲೆ ಹೋದನು. ಅಲ್ಲಿ ಅವನು ಲೋಕದಲ್ಲಿಯೇ ಅಸದೃಷಿ ಆಯತಲೋಚನೆ ಕನ್ಯೆಯೋರ್ವಳನ್ನು ನೋಡಿದನು.

01160024a ಸ ಏಕ ಏಕಾಮಾಸಾದ್ಯ ಕನ್ಯಾಂ ತಾಮರಿಮರ್ದನಃ|

01160024c ತಸ್ಥೌ ನೃಪತಿಶಾರ್ದೂಲಃ ಪಶ್ಯನ್ನವಿಚಲೇಕ್ಷಣಃ||

ಅಲ್ಲಿ ಅವನು ಒಬ್ಬನೇ ಇದ್ದನು. ಅವಳೂ ಒಬ್ಬಳೇ ಇದ್ದಳು. ಆ ಅರಿಮರ್ದನ ನೃಪತಿಶಾರ್ದೂಲನು ಕನ್ಯೆಯನ್ನು ಅವಿಚಲೇಕ್ಷಣನಾಗಿ ನೋಡತೊಡಗಿದನು.

01160025a ಸ ಹಿ ತಾಂ ತರ್ಕಯಾಮಾಸ ರೂಪತೋ ನೃಪತಿಃ ಶ್ರಿಯಂ|

01160025c ಪುನಃ ಸಂತರ್ಕಯಾಮಾಸ ರವೇರ್ಭ್ರಷ್ಟಾಮಿವ ಪ್ರಭಾಂ||

ಅವಳ ರೂಪದಿಂದ ಅವಳು ಶ್ರೀಯಿರಬಹುದೆಂದು ನೃಪತಿಯು ತರ್ಕಿಸಿದನು. ಪುನಃ ಅವಳು ಭೂಮಿಯ ಮೇಲೆ ಬಿದ್ದಿರುವ ರವಿಯ ಪ್ರಭೆಯೇ ಇರಬಹುದು ಎಂದು ಯೋಚಿಸಿದನು.

01160026a ಗಿರಿಪ್ರಸ್ಥೇ ತು ಸಾ ಯಸ್ಮಿನ್ ಸ್ಥಿತಾ ಸ್ವಸಿತಲೋಚನಾ|

01160026c ಸ ಸವೃಕ್ಷಕ್ಷುಪಲತೋ ಹಿರಣ್ಮಯ ಇವಾಭವತ್||

ಆ ಅಸಿತಲೋಚನೆಯು ನಿಂತಿದ್ದ ಆ ಗಿರಿಪ್ರದೇಶವು, ಅಲ್ಲಿರುವ ವೃಕ್ಷ ಕ್ಷುಪ ಲತೆಗಳ ಜೊತೆಗೆ ಹಿರಣ್ಮಯದಂತೆ ತೋರುತ್ತಿತ್ತು.

01160027a ಅವಮೇನೇ ಚ ತಾಂ ದೃಷ್ಟ್ವಾ ಸರ್ವಪ್ರಾಣಭೃತಾಂ ವಪುಃ|

01160027c ಅವಾಪ್ತಂ ಚಾತ್ಮನೋ ಮೇನೇ ಸ ರಾಜಾ ಚಕ್ಷುಷಃ ಫಲಂ||

ಅವಳನ್ನು ನೋಡಿದ ಅವನು ಸರ್ವ ಪ್ರಾಣಿಗಳ ಸೌಂದರ್ಯವನ್ನು ಅವಹೇಳನ ಮಾಡಿದನು ಮತ್ತು ಆ ರಾಜನು ತನ್ನ ಕಣ್ಣುಗಳು ತಮ್ಮ ಉದ್ದೇಶಗಳ ಫಲವನ್ನು ಹೊಂದಿದವು ಎಂದು ತಿಳಿದನು.

01160028a ಜನ್ಮಪ್ರಭೃತಿ ಯತ್ಕಿಂ ಚಿದ್ದೃಷ್ಟವಾನ್ಸ ಮಹೀಪತಿಃ|

01160028c ರೂಪಂ ನ ಸದೃಶಂ ತಸ್ಯಾಸ್ತರ್ಕಯಾಮಾಸ ಕಿಂ ಚನ||

ಜನ್ಮಪ್ರಭೃತಿಯಾಗಿ ಏನೆಲ್ಲ ನೋಡಿದ್ದನೋ ರೂಪದಲ್ಲಿ ಅವಳ ಸದೃಶವಾದ ಬೇರೆ ಏನನ್ನೂ ನೋಡಲಿಲ್ಲ ಎಂದು ಆ ಮಹೀಪತಿಯು ತರ್ಕಿಸಿದನು.

01160029a ತಯಾ ಬದ್ಧಮನಶ್ಚಕ್ಷುಃ ಪಾಶೈರ್ಗುಣಮಯೈಸ್ತದಾ|

01160029c ನ ಚಚಾಲ ತತೋ ದೇಶಾದ್ಬುಬುಧೇ ನ ಚ ಕಿಂ ಚನ||

ಅವಳ ಗುಣಪಾಶಗಳಿಂದ ಅವನ ಬುದ್ಧಿ, ಮನಸ್ಸು ಮತ್ತು ಕಣ್ಣುಗಳು ಬಂಧಿತವಾಗಿ ಅವನು ಆ ಸ್ಥಳದಿಂದ ಚಂಚಲಿಸಲಿಲ್ಲ ಮತ್ತು ಅಲ್ಲಿರುವ ಯಾವುದರ ಪರಿಜ್ಞಾನವೂ ಅವನಿಗಿರಲಿಲ್ಲ.

01160030a ಅಸ್ಯಾ ನೂನಂ ವಿಶಾಲಾಕ್ಷ್ಯಾಃ ಸದೇವಾಸುರಮಾನುಷಂ|

01160030c ಲೋಕಂ ನಿರ್ಮಥ್ಯ ಧಾತ್ರೇದಂ ರೂಪಮಾವಿಷ್ಕೃತಂ ಕೃತಂ||

“ದೇವಾಸುರಮಾನುಷರ ಲೋಕವನ್ನೆಲ್ಲಾ ಮಥಿಸಿ ಧಾತ್ರಿಯು ಈ ವಿಶಾಲಾಕ್ಷಿಯ ರೂಪವನ್ನು ಆವಿಷ್ಕೃತಗೊಳಿಸಿರಬೇಕು!”

01160031a ಏವಂ ಸ ತರ್ಕಯಾಮಾಸ ರೂಪದ್ರವಿಣಸಂಪದಾ|

01160031c ಕನ್ಯಾಮಸದೃಶೀಂ ಲೋಕೇ ನೃಪಃ ಸಂವರಣಸ್ತದಾ||

ಈ ರೀತಿ ರೂಪದ್ರವಿಣಸಂಪನ್ನೆ ಲೋಕದಲ್ಲಿಯೇ ಅಸದೃಶಿ ಕನ್ಯೆಯ ಕುರಿತು ನೃಪ ಸಂವರಣನು ಯೋಚಿಸಿದನು.

01160032a ತಾಂ ಚ ದೃಷ್ಟ್ವೈವ ಕಲ್ಯಾಣೀಂ ಕಲ್ಯಾಣಾಭಿಜನೋ ನೃಪಃ|

01160032c ಜಗಾಮ ಮನಸಾ ಚಿಂತಾಂ ಕಾಮಮಾರ್ಗಣಪೀಡಿತಃ|

ಕಲ್ಯಾಣಾಭಿಜನ ನೃಪನು ಆ ಕಲ್ಯಾಣಿಯನ್ನು ನೋಡುತ್ತಲೇ ಮನಸ್ಸು ಕಾಮಮಾರ್ಗಪೀಡಿತವಾಗಿ ಅವನು ಚಿಂತೆಗೊಳಗಾದನು.

01160033a ದಹ್ಯಮಾನಃ ಸ ತೀವ್ರೇಣ ನೃಪತಿರ್ಮನ್ಮಥಾಗ್ನಿನಾ|

01160033c ಅಪ್ರಗಲ್ಭಾಂ ಪ್ರಗಲ್ಭಃ ಸ ತಾಮುವಾಚ ಯಶಸ್ವಿನೀಂ||

ಮನ್ಮಥಾಗ್ನಿಯಿಂದ ತೀವ್ರವಾಗಿ ದಹಿಸುತ್ತಿದ್ದ ಆ ನೃಪತಿಯು ಅಪ್ರಗಲ್ಭರಲ್ಲಿ ಪ್ರಗಲ್ಭಳಾದ ಯಶಸ್ವಿನಿಯನ್ನು ಕುರಿತು ಹೇಳಿದನು:

01160034a ಕಾಸಿ ಕಸ್ಯಾಸಿ ರಂಭೋರು ಕಿಮರ್ಥಂ ಚೇಹ ತಿಷ್ಠಸಿ|

01160034c ಕಥಂ ಚ ನಿರ್ಜನೇಽರಣ್ಯೇ ಚರಸ್ಯೇಕಾ ಶುಚಿಸ್ಮಿತೇ||

“ನೀನು ಯಾರು? ನೀನು ಯಾರವಳು? ರಂಭೋರು! ಇಲ್ಲಿ ಯಾವ ಕಾರಣಕ್ಕಾಗಿ ನಿಂತಿರುವೆ? ಶುಚಿಸ್ಮಿತೇ! ನಿರ್ಜನ ಅರಣ್ಯದಲ್ಲಿ ಒಬ್ಬಂಟಿಯಾಗಿ ಏಕೆ ತಿರುಗುತ್ತಿರುವೆ?

01160035a ತ್ವಂ ಹಿ ಸರ್ವಾನವದ್ಯಾಂಗೀ ಸರ್ವಾಭರಣಭೂಷಿತಾ|

01160035c ವಿಭೂಷಣಮಿವೈತೇಷಾಂ ಭೂಷಣಾನಾಮಭೀಪ್ಸಿತಂ||

ಸರ್ವಾನವದ್ಯಾಂಗಿ! ಸರ್ವಾಭರಣ ಭೂಷಿತೆಯಾದ ನಿನ್ನ ವಿಭೂಷಣಗಳೆಲ್ಲವೂ ನಿನ್ನನ್ನೇ ಭೂಷಣವನ್ನಾಗಿ ಬಯಸುತ್ತಿರುವಂತಿದೆ.

01160036a ನ ದೇವೀಂ ನಾಸುರೀಂ ಚೈವ ನ ಯಕ್ಷೀಂ ನ ಚ ರಾಕ್ಷಸೀಂ|

01160036c ನ ಚ ಭೋಗವತೀಂ ಮನ್ಯೇ ನ ಗಂಧರ್ವೀಂ ನ ಮಾನುಷೀಂ||

ನೀನು ದೇವಿ ಅಥವಾ ಅಸುರಿ ಅಥವಾ ಯಕ್ಷೀ ಅಥವಾ ರಾಕ್ಷಸೀ ಅಥವಾ ಭೋಗವತೀ ಅಥವಾ ಗಂಧರ್ವಿ ಅಥವಾ ಮಾನುಷಿಯೆಂದು ನನಗೆ ಅನ್ನಿಸುವುದಿಲ್ಲ.

01160037a ಯಾ ಹಿ ದೃಷ್ಟಾ ಮಯಾ ಕಾಶ್ಚಿಚ್ಛೃತಾ ವಾಪಿ ವರಾಂಗನಾಃ|

01160037c ನ ತಾಸಾಂ ಸದೃಶೀಂ ಮನ್ಯೇ ತ್ವಾಮಹಂ ಮತ್ತಕಾಶಿನಿ||

ಮತ್ತಕಾಶಿನೀ! ಇದೂವರೆಗೆ ನಾನು ಯಾವ ವರಾಂಗನೆಯರನ್ನು ನೋಡಿದ್ದೆನೋ ಅಥವಾ ಅವರ ಕುರಿತು ಕೇಳಿದ್ದೆನೋ ಅವರಲ್ಲಿ ಯಾರೂ ನಿನ್ನ ಸದೃಶರೆಂದು ನಾನು ತಿಳಿಯುವುದಿಲ್ಲ.”

01160038a ಏವಂ ತಾಂ ಸ ಮಹೀಪಾಲೋ ಬಭಾಷೇ ನ ತು ಸಾ ತದಾ|

01160038c ಕಾಮಾರ್ತಂ ನಿರ್ಜನೇಽರಣ್ಯೇ ಪ್ರತ್ಯಭಾಷತ ಕಿಂ ಚನ||

ಈ ರೀತಿ ಆ ಮಹೀಪಾಲನು ಅವಳಲ್ಲಿ ಮಾತನಾಡಿದನು. ಆದರೆ ಆ ನಿರ್ಜನ ಅರಣ್ಯದಲ್ಲಿ ಅವಳು ಕಾಮಾರ್ತನಿಗೆ ಏನನ್ನೂ ಪ್ರತ್ಯುತ್ತರಿಸಲಿಲ್ಲ.

01160039a ತತೋ ಲಾಲಪ್ಯಮಾನಸ್ಯ ಪಾರ್ಥಿವಸ್ಯಾಯತೇಕ್ಷಣಾ|

01160039c ಸೌದಾಮಿನೀವ ಸಾಭ್ರೇಷು ತತ್ರೈವಾಂತರಧೀಯತ||

ಆ ಪಾರ್ಥಿವನು ಈ ರೀತಿ ಲಾಲಪಿಸುತ್ತಿರಲು ಆ ಆಯತೇಕ್ಷಣೆಯು ಮೋಡಗಳಲ್ಲಿ ಮಿಂಚಿನಂತೆ ಅಲ್ಲಿಯೇ ಅಂತರ್ಧಾನಳಾದಳು.

01160040a ತಾಮನ್ವಿಚ್ಛನ್ಸ ನೃಪತಿಃ ಪರಿಚಕ್ರಾಮ ತತ್ತದಾ|

01160040c ವನಂ ವನಜಪತ್ರಾಕ್ಷೀಂ ಭ್ರಮನ್ನುನ್ಮತ್ತವತ್ತದಾ||

ಭ್ರಮೆಗೊಳಗಾದವನಂತೆ ಆ ನೃಪತಿಯು ಆ ವನಜಪತ್ರಾಕ್ಷಿಯನ್ನು ವನದಲ್ಲೆಲ್ಲಾ ಹುಡುಕಾಡತೊಡಗಿದನು.

01160041a ಅಪಶ್ಯಮಾನಃ ಸ ತು ತಾಂ ಬಹು ತತ್ರ ವಿಲಪ್ಯ ಚ|

01160041c ನಿಶ್ಚೇಷ್ಟಃ ಕೌರವಶ್ರೇಷ್ಠೋ ಮುಹೂರ್ತಂ ಸ ವ್ಯತಿಷ್ಠತ||

ಅವಳನ್ನು ಅಲ್ಲಿ ಕಾಣದಿರಲು ಆ ಕೌರವಶ್ರೇಷ್ಠನು ವಿಲಪಿಸುತ್ತಾ ಸ್ವಲ್ಪ ಹೊತ್ತು ಅಲ್ಲಿಯೇ ನಿಂತುಬಿಟ್ಟನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನೇ ಷಷ್ಟ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನದಲ್ಲಿ ನೂರಾಅರವತ್ತನೆಯ ಅಧ್ಯಾಯವು.

Image result for indian flowers

Comments are closed.