Adi Parva: Chapter 159

ಆದಿ ಪರ್ವ: ಚೈತ್ರರಥ ಪರ್ವ

೧೫೯

ರಾತ್ರಿಯಲ್ಲಿ ಪ್ರಯಾಣಮಾಡುತ್ತಿರುವಾಗ ಧಾಳಿ ಮಾಡಿದುದಕ್ಕೆ ಕಾರಣವನ್ನು ಕೇಳಲು ಗಂಧರ್ವನು ಅರ್ಜುನನಿಗೆ ಕ್ಷತ್ರಿಯರು ಪುರೋಹಿತರನ್ನು ಇರಿಸಿಕೊಳ್ಳುವುದರ ಮಹತ್ವವನ್ನು ವಿವರಿಸಿದುದು (೧-೨೨).

01159001 ಅರ್ಜುನ ಉವಾಚ|

01159001a ಕಾರಣಂ ಬ್ರೂಹಿ ಗಂಧರ್ವ ಕಿಂ ತದ್ಯೇನ ಸ್ಮ ಧರ್ಷಿತಾಃ|

01159001c ಯಾಂತೋ ಬ್ರಹ್ಮವಿದಃ ಸಂತಃ ಸರ್ವೇ ರಾತ್ರಾವರಿಂದಮ||

ಅರ್ಜುನನು ಹೇಳಿದನು: “ಅರಿಂದಮ! ಗಂಧರ್ವ! ಬ್ರಹ್ಮವಿದ ನಾವೆಲ್ಲರೂ ರಾತ್ರಿಯಲ್ಲಿ ಪ್ರಯಾಣಮಾಡುತ್ತಿರುವಾಗ ನಮ್ಮ ಮೇಲೆ ನೀನು ಧಾಳಿಮಾಡಿದುದರ ಕಾರಣವನ್ನು ಹೇಳು.”

01159002 ಗಂಧರ್ವ ಉವಾಚ|

01159002a ಅನಗ್ನಯೋಽನಾಹುತಯೋ ನ ಚ ವಿಪ್ರಪುರಸ್ಕೃತಾಃ|

01159002c ಯೂಯಂ ತತೋ ಧರ್ಷಿತಾಃ ಸ್ಥ ಮಯಾ ಪಾಂಡವನಂದನ||

ಗಂಧರ್ವನು ಹೇಳಿದನು: “ಪಾಂಡವನಂದನ! ಅನಗ್ನ, ಅನಾಹುತ ಮತ್ತು ವಿಪ್ರನನ್ನು ಮುಂದುಮಾಡಿಕೊಂಡಿರದೇ ಹೋಗುತ್ತಿದ್ದ ನಿಮ್ಮನ್ನು ನಾನು ತಡೆದು ಧಾಳಿಮಾಡಿದೆನು.

01159003a ಯಕ್ಷರಾಕ್ಷಸಗಂಧರ್ವಾಃ ಪಿಶಾಚೋರಗಮಾನವಾಃ|

01159003c ವಿಸ್ತರಂ ಕುರುವಂಶಸ್ಯ ಶ್ರೀಮತಃ ಕಥಯಂತಿ ತೇ||

ಯಕ್ಷ, ರಾಕ್ಷಸ, ಗಂಧರ್ವ, ಪಿಶಾಚ, ಉರಗ ಮತ್ತು ಮಾನವರು ವಿಸ್ತಾರ ಶ್ರೀಮಂತ ಕುರುವಂಶದ ಚರಿತ್ರೆಯನ್ನು ಹೇಳುತ್ತಿರುತ್ತಾರೆ.

01159004a ನಾರದಪ್ರಭೃತೀನಾಂ ಚ ದೇವರ್ಷೀಣಾಂ ಮಯಾ ಶ್ರುತಂ|

01159004c ಗುಣಾನ್ಕಥಯತಾಂ ವೀರ ಪೂರ್ವೇಷಾಂ ತವ ಧೀಮತಾಂ||

ವೀರ! ನಾರದರೇ ಮೊದಲಾದ ದೇವರ್ಷಿಗಳಿಂದ ನಿನ್ನ ಧೀಮಂತ ಪೂರ್ವಜರ ಗುಣಗಳನ್ನು ನಾನು ಕೇಳಿದ್ದೇನೆ.

01159005a ಸ್ವಯಂ ಚಾಪಿ ಮಯಾ ದೃಷ್ಟಶ್ಚರತಾ ಸಾಗರಾಂಬರಾಂ|

01159005c ಇಮಾಂ ವಸುಮತೀಂ ಕೃತ್ಸ್ನಾಂ ಪ್ರಭಾವಃ ಸ್ವಕುಲಸ್ಯ ತೇ||

ಸಾಗರಾಂಬರಿ ಈ ವಸುಮತಿಯಲ್ಲಿ ಸಂಚರಿಸುತ್ತಿರುವಾಗ ಸ್ವಯಂ ನಾನೇ ನಿನ್ನ ಕುಲದ ಶ್ರೇಷ್ಠ ಪ್ರಭಾವವನ್ನು ಕಂಡಿದ್ದೇನೆ.

01159006a ವೇದೇ ಧನುಷಿ ಚಾಚಾರ್ಯಮಭಿಜಾನಾಮಿ ತೇಽರ್ಜುನ|

01159006c ವಿಶ್ರುತಂ ತ್ರಿಷು ಲೋಕೇಷು ಭಾರದ್ವಾಜಂ ಯಶಸ್ವಿನಂ||

ಅರ್ಜುನ! ಧನುರ್ವಿದ್ಯೆಯಲ್ಲಿ ನಿನ್ನ ಆಚಾರ್ಯ ಮೂರೂ ಲೋಕಗಳಲ್ಲಿ ವಿಶೃತ ಯಶಸ್ವಿ ಭಾರದ್ವಾಜನೂ ನನಗೆ ಗೊತ್ತು.

01159007a ಧರ್ಮಂ ವಾಯುಂ ಚ ಶಕ್ರಂ ಚ ವಿಜಾನಾಮ್ಯಶ್ವಿನೌ ತಥಾ|

01159007c ಪಾಂಡುಂ ಚ ಕುರುಶಾರ್ದೂಲ ಷಡೇತಾನ್ಕುಲವರ್ಧನಾನ್|

01159007e ಪಿತೄನೇತಾನಹಂ ಪಾರ್ಥ ದೇವಮಾನುಷಸತ್ತಮಾನ್||

ಪಾರ್ಥ! ಧರ್ಮ, ವಾಯು, ಶಕ್ರ, ಅಶ್ವಿನಿಯರು ಮತ್ತು ದೇವಮಾನುಷಸತ್ತಮ ನಿನ್ನ ತಂದೆ ಕುರುಶಾರ್ದೂಲ ಪಾಂಡು ಈ ಆರು ಕುಲವರ್ಧನರೂ ನನಗೆ ಗೊತ್ತು.

01159008a ದಿವ್ಯಾತ್ಮಾನೋ ಮಹಾತ್ಮಾನಃ ಸರ್ವಶಸ್ತ್ರಭೃತಾಂ ವರಾಃ|

01159008c ಭವಂತೋ ಭ್ರಾತರಃ ಶೂರಾಃ ಸರ್ವೇ ಸುಚರಿತವ್ರತಾಃ||

ನಿನ್ನ ಭ್ರಾತೃಗಳೆಲ್ಲರೂ ದಿವ್ಯಾತ್ಮರೂ, ಮಹಾತ್ಮರೂ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠರೂ, ಸುಚರಿತವ್ರತರೂ ಆಗಿದ್ದಾರೆ.

01159009a ಉತ್ತಮಾಂ ತು ಮನೋಬುದ್ಧಿಂ ಭವತಾಂ ಭಾವಿತಾತ್ಮನಾಂ|

01159009c ಜಾನನ್ನಪಿ ಚ ವಃ ಪಾರ್ಥ ಕೃತವಾನಿಹ ಧರ್ಷಣಾಂ||

ಪಾರ್ಥ! ನಿಮ್ಮೆಲ್ಲರ ಉತ್ತಮ ಮನೋಬುದ್ಧಿಯನ್ನು ಮತ್ತು ಭಾವಿತ ಆತ್ಮಗಳನ್ನು ತಿಳಿದಿದ್ದರೂ ನಾನು ನಿಮ್ಮ ಮೇಲೆ ಇಲ್ಲಿ ಧಾಳಿಮಾಡಿದೆ.

01159010a ಸ್ತ್ರೀಸಕಾಶೇ ಚ ಕೌರವ್ಯ ನ ಪುಮಾನ್ ಕ್ಷಂತುಮರ್ಹತಿ|

01159010c ಧರ್ಷಣಾಮಾತ್ಮನಃ ಪಶ್ಯನ್ಬಾಹುದ್ರವಿಣಮಾಶ್ರಿತಃ||

ಕೌರವ್ಯ! ಸ್ತ್ರೀಯರ ಎದಿರು ಉಲ್ಲಂಘನೆ ಮಾಡುವವರನ್ನು ನೋಡಿದ ಬಾಹುದ್ರವಿಣ ಆಶ್ರಿತ ಯಾರೂ ಕ್ಷಮಿಸುವುದಿಲ್ಲ.

01159011a ನಕ್ತಂ ಚ ಬಲಮಸ್ಮಾಕಂ ಭೂಯ ಏವಾಭಿವರ್ಧತೇ|

01159011c ಯತಸ್ತತೋ ಮಾಂ ಕೌಂತೇಯ ಸದಾರಂ ಮನ್ಯುರಾವಿಶತ್||

ರಾತ್ರಿವೇಳೆಯಲ್ಲಿ ನಮ್ಮ ಬಲವು ವೃದ್ಧಿಯಾಗುತ್ತದೆ. ಆದುದರಿಂದ ಕೌಂತೇಯ! ಪತ್ನಿಯೊಡನಿದ್ದ ನಾನು ಕೋಪಾವಿಷ್ಟನಾಗಿಬಿಟ್ಟೆ.

01159012a ಸೋಽಹಂ ತ್ವಯೇಹ ವಿಜಿತಃ ಸಂಖ್ಯೇ ತಾಪತ್ಯವರ್ಧನ|

01159012c ಯೇನ ತೇನೇಹ ವಿಧಿನಾ ಕೀರ್ತ್ಯಮಾನಂ ನಿಬೋಧ ಮೇ||

ತಾಪತ್ಯವರ್ಧನ! ಈಗ ನಾನು ನಿನ್ನಿಂದ ಯುದ್ಧದಲ್ಲಿ ಸೋಲಲ್ಪಟ್ಟು ಸಖನಾಗಿ ನಿಂತಿದ್ದೇನೆ. ಯಾವ ರೀತಿಯಲ್ಲಿ ಇದನ್ನು ಆಚರಿಸಬೇಕು ಎನ್ನುವುದನ್ನು ಹೇಳು.

01159013a ಬ್ರಹ್ಮಚರ್ಯಂ ಪರೋ ಧರ್ಮಃ ಸ ಚಾಪಿ ನಿಯತಸ್ತ್ವಯಿ|

01159013c ಯಸ್ಮಾತ್ತಸ್ಮಾದಹಂ ಪಾರ್ಥ ರಣೇಽಸ್ಮಿನ್ವಿಜಿತಸ್ತ್ವಯಾ||

ಬ್ರಹ್ಮಚರ್ಯವು ಪರಮ ಧರ್ಮ ಮತ್ತು ಇದು ನಿನ್ನಲ್ಲಿ ಗಟ್ಟಿಯಾಗಿ ನಿಂತುಕೊಂಡಿದೆ. ಪಾರ್ಥ! ಇದರಿಂದಲೇ ನೀನು ಇಂದು ರಣದಲ್ಲಿ ನನ್ನನ್ನು ಗೆದ್ದೆ.

01159014a ಯಸ್ತು ಸ್ಯಾತ್ ಕ್ಷತ್ರಿಯಃ ಕಶ್ಚಿತ್ಕಾಮವೃತ್ತಃ ಪರಂತಪ|

01159014c ನಕ್ತಂ ಚ ಯುಧಿ ಯುಧ್ಯೇತ ನ ಸ ಜೀವೇತ್ಕಥಂ ಚನ||

ಆದರೆ ಪರಂತಪ! ಕಾಮವೃತ ಕ್ಷತ್ರಿಯರು ಎಂದೂ ಯಾವರೀತಿಯಲ್ಲಿಯೂ ರಾತ್ರಿ ವೇಳೆ ನಮ್ಮಲ್ಲಿ ಯುದ್ಧಮಾಡಿ ಜೀವಿತವಾಗಿರಲು ಸಾಧ್ಯವಿಲ್ಲ.

01159015a ಯಸ್ತು ಸ್ಯಾತ್ಕಾಮವೃತ್ತೋಽಪಿ ರಾಜಾ ತಾಪತ್ಯ ಸಂಗರೇ|

01159015c ಜಯೇನ್ನಕ್ತಂಚರಾನ್ಸರ್ವಾನ್ಸ ಪುರೋಹಿತಧೂರ್ಗತಃ||

ತಾಪತ್ಯ! ಕಾಮವೃತ ರಾಜನೂ ಕೂಡ ಪುರೋಹಿತನನ್ನು ಮುಂದಿಟ್ಟುಕೊಂಡು ಬಂದರೆ ರಾತ್ರಿವೇಳೆ ಸಂಗರದಲ್ಲಿ ಎಲ್ಲ ನಿಶಾಚರರ ಮೇಲೆ ಜಯವನ್ನು ಪಡೆಯಬಹುದು.

01159016a ತಸ್ಮಾತ್ತಾಪತ್ಯ ಯತ್ಕಿಂ ಚಿನ್ನೃಣಾಂ ಶ್ರೇಯ ಇಹೇಪ್ಸಿತಂ|

01159016c ತಸ್ಮಿನ್ಕರ್ಮಣಿ ಯೋಕ್ತವ್ಯಾ ದಾಂತಾತ್ಮಾನಃ ಪುರೋಹಿತಾಃ||

ತಾಪತ್ಯ! ಆದುದರಿಂದಲೇ ಮನುಷ್ಯನು ಇಲ್ಲಿ ಏನೇ ಶ್ರೇಯಸ್ಸನ್ನು ಬಯಸಿದರೂ ಆ ಕರ್ಮದಲ್ಲಿ ದಾಂತಾತ್ಮ ಪುರೋಹಿತನನ್ನು ಬಳಸಿಕೊಳ್ಳಬೇಕು.

01159017a ವೇದೇ ಷಡಂಗೇ ನಿರತಾಃ ಶುಚಯಃ ಸತ್ಯವಾದಿನಃ|

01159017c ಧರ್ಮಾತ್ಮಾನಃ ಕೃತಾತ್ಮಾನಃ ಸ್ಯುರ್ನೃಪಾಣಾಂ ಪುರೋಹಿತಾಃ||

ಎಲ್ಲ ನೃಪರೂ ಷಡಂಗಸಹಿತ ವೇದಗಳಲ್ಲಿ ನಿರತ, ಶುಚ, ಸತ್ಯವಾದಿ, ಧರ್ಮಾತ್ಮ, ಮತ್ತು ಕೃತಾತ್ಮ ಪುರೋಹಿತರನ್ನು ಪಡೆದಿರಬೇಕು.

01159018a ಜಯಶ್ಚ ನಿಯತೋ ರಾಜ್ಞಃ ಸ್ವರ್ಗಶ್ಚ ಸ್ಯಾದನಂತರಂ|

01159018c ಯಸ್ಯ ಸ್ಯಾದ್ಧರ್ಮವಿದ್ವಾಗ್ಮೀ ಪುರೋಧಾಃ ಶೀಲವಾಂಶುಚಿಃ||

ಶೀಲವಂತ, ಶುಚಿ, ವಾಗ್ಮಿ ಮತ್ತು ಧರ್ಮವಿದ ಪುರೋಹಿತನನ್ನು ಪಡೆದಿದ್ದ ರಾಜನಿಗೆ ಇಲ್ಲಿ ಜಯ ಮತ್ತು ನಂತರ ಸ್ವರ್ಗವು ನಿಶ್ಚಯವಾದದ್ದು.

01159019a ಲಾಭಂ ಲಬ್ಧುಮಲಬ್ಧಂ ಹಿ ಲಬ್ಧಂ ಚ ಪರಿರಕ್ಷಿತುಂ|

01159019c ಪುರೋಹಿತಂ ಪ್ರಕುರ್ವೀತ ರಾಜಾ ಗುಣಸಮನ್ವಿತಂ||

ಅಲಬ್ಧವನ್ನು ಪಡೆಯಲು ಮತ್ತು ಪಡೆದುದನ್ನು ಪರಿರಕ್ಷಿಸಲು ರಾಜನು ಗುಣಸಮನ್ವಿತ ಪುರೋಹಿತನನ್ನು ಇಟ್ಟುಕೊಳ್ಳಬೇಕು.

01159020a ಪುರೋಹಿತಮತೇ ತಿಷ್ಠೇದ್ಯ ಇಚ್ಛೇತ್ಪೃಥಿವೀಂ ನೃಪಃ|

01159020c ಪ್ರಾಪ್ತುಂ ಮೇರುವರೋತ್ತಂಸಾಂ ಸರ್ವಶಃ ಸಾಗರಾಂಬರಾಂ||

ಪುರೋಹಿತನ ಸಲಹೆಯಂತೆಯೇ ನಡೆದುಕೊಂಡರೆ ನೃಪನು ಮೇರುವರೋತ್ತಂಸೆ ಸಾಗರಾಂಬರೆ ಸರ್ವ ಪೃಥ್ವಿಯನ್ನೂ ಹೊಂದಲು ಇಚ್ಛಿಸಬಹುದು.

01159021a ನ ಹಿ ಕೇವಲಶೌರ್ಯೇಣ ತಾಪತ್ಯಾಭಿಜನೇನ ಚ|

01159021c ಜಯೇದಬ್ರಾಹ್ಮಣಃ ಕಶ್ಚಿದ್ಭೂಮಿಂ ಭೂಮಿಪತಿಃ ಕ್ವ ಚಿತ್||

ತಾಪತ್ಯ! ಅಬ್ರಾಹ್ಮಣ ಭೂಮಿಪತಿಯು ಕೇವಲ ಶೌರ್ಯದಿಂದ ಅಥವಾ ಉತ್ತಮ ಜನ್ಮದಿಂದ ಎಂದೂ ಯಾವುದೇ ರೀತಿಯಲ್ಲಿಯೂ ಭೂಮಿಯನ್ನು ಜಯಿಸಲು ಶಕ್ಯನಾಗಲಾರ.

01159022a ತಸ್ಮಾದೇವಂ ವಿಜಾನೀಹಿ ಕುರೂಣಾಂ ವಂಶವರ್ಧನ|

01159022c ಬ್ರಾಹ್ಮಣಪ್ರಮುಖಂ ರಾಜ್ಯಂ ಶಕ್ಯಂ ಪಾಲಯಿತುಂ ಚಿರಂ||

ಕುರುವಂಶವರ್ಧನ! ಆದುದರಿಂದ ಬ್ರಾಹ್ಮಣಪ್ರಮುಖ ರಾಜ್ಯವನ್ನು ಚಿರವಾಗಿ ಪಾಲಿಸಲು ಸಾಧ್ಯ ಎನ್ನುವುದನ್ನು ತಿಳಿದುಕೋ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಗಂಧರ್ವಪರಾಭವೇ ಏಕೋನಷಷ್ಟ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಗಂಧರ್ವಪರಾಭವದಲ್ಲಿ ನೂರಾಐವತ್ತೊಂಭತ್ತನೆಯ ಅಧ್ಯಾಯವು.

Image result for indian flowers

Comments are closed.