Adi Parva: Chapter 157

ಆದಿ ಪರ್ವ: ಚೈತ್ರರಥ ಪರ್ವ

೧೫೭

ವ್ಯಾಸನು ಪಾಂಡವರಿಗೆ ದ್ರೌಪದಿಯ ಪೂರ್ವ ಜನ್ಮದ ವೃತ್ತಾಂತವನ್ನು ಹೇಳುವುದು (೧-೧೩). ಅವಳು ಪಾಂಡವರ ಪತ್ನಿಯಾಗುತ್ತಾಳೆಂದು ಹೇಳಿ ಹೊರಟುಹೋದುದು (೧೪-೧೫).

01157001 ವೈಶಂಪಾಯನ ಉವಾಚ|

01157001a ವಸತ್ಸು ತೇಷು ಪ್ರಚ್ಛನ್ನಂ ಪಾಂಡವೇಷು ಮಹಾತ್ಮಸು|

01157001c ಆಜಗಾಮಾಥ ತಾನ್ದ್ರಷ್ಟುಂ ವ್ಯಾಸಃ ಸತ್ಯವತೀಸುತಃ||

ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರು ಅಲ್ಲಿ ಪ್ರಚ್ಛನ್ನರಾಗಿ ವಾಸಿಸುತ್ತಿದ್ದಾಗ ಅವರನ್ನು ನೋಡಲು ಸತ್ಯವತೀಸುತ ವ್ಯಾಸನು ಬಂದಿದ್ದನು.

01157002a ತಮಾಗತಮಭಿಪ್ರೇಕ್ಷ್ಯ ಪ್ರತ್ಯುದ್ಗಮ್ಯ ಪರಂತಪಾಃ|

01157002c ಪ್ರಣಿಪತ್ಯಾಭಿವಾದ್ಯೈನಂ ತಸ್ಥುಃ ಪ್ರಾಂಜಲಯಸ್ತದಾ||

ಅವನು ಆಗಮಿಸುತ್ತಿರುವುದನ್ನು ನೋಡಿದ ಪರಂತಪರು ಅವನನ್ನು ಭೆಟ್ಟಿಯಾಗಲು ಮೇಲೆದ್ದು ಕೈಗಳನ್ನು ಜೋಡಿಸಿ ಅಭಿವಂದಿಸಿ ಅವನ ಎದಿರು ನಿಂತುಕೊಂಡರು.

01157003a ಸಮನುಜ್ಞಾಪ್ಯ ತಾನ್ಸರ್ವಾನಾಸೀನಾನ್ಮುನಿರಬ್ರವೀತ್|

01157003c ಪ್ರಸನ್ನಃ ಪೂಜಿತಃ ಪಾರ್ಥೈಃ ಪ್ರೀತಿಪೂರ್ವಮಿದಂ ವಚಃ||

ಪಾರ್ಥರಿಂದ ಪೂಜಿತನಾಗಿ ಪ್ರಸನ್ನನಾದ ಮುನಿಯು ಅವರೆಲ್ಲರಿಗೂ ಸುಖಾಸೀನರಾಗಲು ಅನುಜ್ಞೆಯನ್ನಿತ್ತು ಈ ಪ್ರೀತಿಪೂರ್ವಕ ಮಾತುಗಳನ್ನಾಡಿದನು:

 01157004a ಅಪಿ ಧರ್ಮೇಣ ವರ್ತಧ್ವಂ ಶಾಸ್ತ್ರೇಣ ಚ ಪರಂತಪಾಃ|

01157004c ಅಪಿ ವಿಪ್ರೇಷು ವಃ ಪೂಜಾ ಪೂಜಾರ್ಹೇಷು ನ ಹೀಯತೇ||

“ಪರಂತಪರೇ! ನೀವು ಧರ್ಮ ಮತ್ತು ಶಾಸ್ತ್ರಗಳ ಪ್ರಕಾರವೇ ನಡೆದುಕೊಂಡು ಬಂದಿದ್ದೀರಾ? ಪೂಜಾರ್ಹ ವಿಪ್ರರಿಗೆ ಬೇಕಾದಷ್ಟು ಗೌರವ ನೀಡುತ್ತಿದ್ದೀರಾ?”

01157005a ಅಥ ಧರ್ಮಾರ್ಥವದ್ವಾಕ್ಯಮುಕ್ತ್ವಾ ಸ ಭಗವಾನೃಷಿಃ|

01157005c ವಿಚಿತ್ರಾಶ್ಚ ಕಥಾಸ್ತಾಸ್ತಾಃ ಪುನರೇವೇದಮಬ್ರವೀತ್||

ಈ ಧರ್ಮಾರ್ಥ ಮಾತುಗಳನ್ನಾಡಿದ ಭಗವಾನ್ ಋಷಿಯು ವಿಚಿತ್ರ ಕಥೆಗಳನ್ನು ಹೇಳುತ್ತಾ ಪುನಃ ಈ ಮಾತುಗಳನ್ನಾಡಿದನು.

01157006a ಆಸೀತ್ತಪೋವನೇ ಕಾ ಚಿದೃಷೇಃ ಕನ್ಯಾ ಮಹಾತ್ಮನಃ|

01157006c ವಿಲಗ್ನಮಧ್ಯಾ ಸುಶ್ರೋಣೀ ಸುಭ್ರೂಃ ಸರ್ವಗುಣಾನ್ವಿತಾ||

“ಹಿಂದೆ ಒಮ್ಮೆ ತಪೋವನದಲ್ಲಿ ತೆಳು ಸೊಂಟದ, ಸುಶ್ರೋಣಿ, ಸುಂದರ ಹುಬ್ಬಿನ, ಸರ್ವಗುಣಾನ್ವಿತೆ ಮಹಾತ್ಮ ಋಷಿಯ ಮಗಳೋರ್ವಳು ವಾಸಿಸುತ್ತಿದ್ದಳು.

01157007a ಕರ್ಮಭಿಃ ಸ್ವಕೃತೈಃ ಸಾ ತು ದುರ್ಭಗಾ ಸಮಪದ್ಯತ|

01157007c ನಾಧ್ಯಗಚ್ಛತ್ಪತಿಂ ಸಾ ತು ಕನ್ಯಾ ರೂಪವತೀ ಸತೀ||

ಅವಳು ಮಾಡಿದ ಕರ್ಮಗಳಿಂದಾಗಿ ಅವಳು ದುರ್ಭಗಳಾಗಿದ್ದಳು. ರೂಪವತಿಯಾಗಿದ್ದರೂ ಆ ಸತಿ ಕನ್ಯೆಯು ಪತಿಯನ್ನು ಪಡೆಯಲಿಲ್ಲ.

01157008a ತಪಸ್ತಪ್ತುಮಥಾರೇಭೇ ಪತ್ಯರ್ಥಮಸುಖಾ ತತಃ|

01157008c ತೋಷಯಾಮಾಸ ತಪಸಾ ಸಾ ಕಿಲೋಗ್ರೇಣ ಶಂಕರಂ||

ಅಸುಖಿಯಾದ ಅವಳು ಪತಿಯನ್ನು ಪಡೆಯಲೋಸುಗ ತಪಸ್ಸನ್ನು ಪ್ರಾರಂಭಿಸಿದಳು. ಅವಳು ಉಗ್ರ ತಪಸ್ಸಿನಿಂದ ಶಂಕರನನ್ನು ತೃಪ್ತಿಪಡಿಸಿದಳು.

01157009a ತಸ್ಯಾಃ ಸ ಭಗವಾಂಸ್ತುಷ್ಟಸ್ತಾಮುವಾಚ ತಪಸ್ವಿನೀಂ|

01157009c ವರಂ ವರಯ ಭದ್ರಂ ತೇ ವರದೋಽಸ್ಮೀತಿ ಭಾಮಿನಿ||

ಸಂತುಷ್ಟ ಭಗವಾನನು ಆ ತಪಸ್ವಿನಿಗೆ ಹೇಳಿದನು: “ಭದ್ರೇ!  ಭಾಮಿನೀ! ವರವನ್ನು ನೀಡುತ್ತೇನೆ. ಬೇಕಾದ ವರವನ್ನು ಕೇಳಿಕೋ.”

01157010a ಅಥೇಶ್ವರಮುವಾಚೇದಮಾತ್ಮನಃ ಸಾ ವಚೋ ಹಿತಂ|

01157010c ಪತಿಂ ಸರ್ವಗುಣೋಪೇತಮಿಚ್ಛಾಮೀತಿ ಪುನಃ ಪುನಃ||

ಆಗ ಅವಳು “ಸರ್ವಗುಣೋಪೇತ ಪತಿಯನ್ನು ಬಯಸುತ್ತೇನೆ!” ಎಂಬ ಅತ್ಮಹಿತ ಮಾತುಗಳನ್ನು ಪುನಃ ಪುನಃ ಈಶ್ವರನಲ್ಲಿ ಹೇಳಿಕೊಂಡಳು.

01157011a ತಾಮಥ ಪ್ರತ್ಯುವಾಚೇದಮೀಶಾನೋ ವದತಾಂ ವರಃ|

01157011c ಪಂಚ ತೇ ಪತಯೋ ಭದ್ರೇ ಭವಿಷ್ಯಂತೀತಿ ಶಂಕರಃ||

ಮಾತುನಾಡುವವರಲ್ಲಿ ಶ್ರೇಷ್ಠ ಈಶಾನ ಶಂಕರನು “ಭದ್ರೇ! ನಿನಗೆ ಐವರು ಪತಿಗಳಾಗುತ್ತಾರೆ!” ಎಂದು ಉತ್ತರಿಸಿದನು.

01157012a ಪ್ರತಿಬ್ರುವಂತೀಮೇಕಂ ಮೇ ಪತಿಂ ದೇಹೀತಿ ಶಂಕರಂ|

01157012c ಪುನರೇವಾಬ್ರವೀದ್ದೇವ ಇದಂ ವಚನಮುತ್ತಮಂ||

“ನನಗೆ ಒಬ್ಬನೇ ಪತಿಯನ್ನು ಕೊಡು!” ಎಂದು ಪುನಃ ಕೇಳಿಕೊಂಡಾಗ ದೇವ ಶಂಕರನು ಈ ಮಾತುಗಳನ್ನಾಡಿದನು:

01157013a ಪಂಚಕೃತ್ವಸ್ತ್ವಯಾ ಉಕ್ತಃ ಪತಿಂ ದೇಹೀತ್ಯಹಂ ಪುನಃ|

01157013c ದೇಹಮನ್ಯಂ ಗತಾಯಾಸ್ತೇ ಯಥೋಕ್ತಂ ತದ್ ಭವಿಷ್ಯತಿ||

“ನೀನು ಪುನಃ ಪುನಃ ಐದು ಬಾರಿ ಪತಿಯನ್ನು ಕೊಡು ಎಂದು ಕೇಳಿಕೊಂಡಿದ್ದೀಯೆ. ನೀನು ಅನ್ಯ ದೇಹವನ್ನು ಹೊಂದಿದಾಗ ನೀನು ಕೇಳಿಕೊಂಡಂತೆಯೇ ಆಗುತ್ತದೆ.”

01157014a ದ್ರುಪದಸ್ಯ ಕುಲೇ ಜಾತಾ ಕನ್ಯಾ ಸಾ ದೇವರೂಪಿಣೀ|

01157014c ನಿರ್ದಿಷ್ಟಾ ಭವತಾಂ ಪತ್ನೀ ಕೃಷ್ಣಾ ಪಾರ್ಷತ್ಯನಿಂದಿತಾ||

ಅದೇ ಕನ್ಯೆಯು ದ್ರುಪದ ಕುಲದಲ್ಲಿ ದೇವರೂಪಿಣಿಯಾಗಿ ಹುಟ್ಟಿದ್ದಾಳೆ. ಆ ಅನಿಂದಿತೆ ಪಾರ್ಷತಿ ಕೃಷ್ಣೆಯು ನಿರ್ದಿಷ್ಠವಾಗಿಯು ನಿಮ್ಮ ಪತ್ನಿಯಾಗುತ್ತಾಳೆ.

01157015a ಪಾಂಚಾಲನಗರಂ ತಸ್ಮಾತ್ಪ್ರವಿಶಧ್ವಂ ಮಹಾಬಲಾಃ|

01157015c ಸುಖಿನಸ್ತಾಮನುಪ್ರಾಪ್ಯ ಭವಿಷ್ಯಥ ನ ಸಂಶಯಃ||

ಮಹಾಬಲರೇ! ಆದುದರಿಂದ ಪಾಂಚಾಲನಗರವನ್ನು ಪ್ರವೇಶಿಸಿ. ಅವಳನ್ನು ಪಡೆದ ಭವಿಷ್ಯದಲ್ಲಿ ನೀವು ಸುಖಿಗಳಾಗುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ.”

01157016a ಏವಮುಕ್ತ್ವಾ ಮಹಾಭಾಗಃ ಪಾಂಡವಾನಾಂ ಪಿತಾಮಹಃ|

01157016c ಪಾರ್ಥಾನಾಮಂತ್ರ್ಯ ಕುಂತೀಂ ಚ ಪ್ರಾತಿಷ್ಠತ ಮಹಾತಪಾಃ||

ಪಾಂಡವ ಪಿತಾಮಹ ಮಹಾಭಾಗ ಪ್ರತಿಷ್ಠಿತ ಮಹಾತಪಸ್ವಿಯು ಹೀಗೆ ಹೇಳಿ ಕುಂತಿ ಮತ್ತು ಪಾರ್ಥರಿಂದ ಬೀಳ್ಕೊಂಡನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಜನ್ಮಾಂತರಕಥನೇ ಸಪ್ತಪಂಚಾದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಜನ್ಮಾಂತರಕಥನದಲ್ಲಿ ನೂರಾಐವತ್ತೇಳನೆಯ ಅಧ್ಯಾಯವು.

Image result for indian flowers

Comments are closed.