Adi Parva: Chapter 138

ಆದಿ ಪರ್ವ: ಜತುಗೃಹ ಪರ್ವ

೧೩೮

ವೇಗದಿಂದ ಹೋಗಿ ಭೀಮನು ಕಾಡನ್ನು ಸೇರಲು, ಅಲ್ಲಿ ಒಂದು ಮರದಡಿಯಲ್ಲಿ ಬಾಯಾರಿ ಬಳಲಿದ ತಾಯಿ ಸಹೋದರರನ್ನು ಇಳಿಸಿ ನೀರು ತರಲು ಹೋಗುವುದು (೧-೧೨). ಮರಳಿ ಬಂದಾಗ ಅಲ್ಲಿ ನೆಲದ ಮೇಲೆ ಮಲಗಿ ನಿದ್ರಿಸುತ್ತಿದ್ದ ತನ್ನವರನ್ನು ನೋಡಿ ಭೀಮನು ವಿಲಪಿಸುವುದು, ಕಾವಲು ನಿಲ್ಲುವುದು (೧೩-೩೧).

01138001 ವೈಶಂಪಾಯನ ಉವಾಚ|

01138001a ತೇನ ವಿಕ್ರಮತಾ ತೂರ್ಣಮೂರುವೇಗಸಮೀರಿತಂ|

01138001c ಪ್ರವವಾವನಿಲೋ ರಾಜನ್ ಶುಚಿಶುಕ್ರಾಗಮೇ ಯಥಾ||

ವೈಶಂಪಾಯನನು ಹೇಳಿದನು: “ರಾಜನ್! ಆ ವಿಕ್ರಮನು ವೇಗವಾಗಿ ಹೋಗುತ್ತಿರಲಾಗಿ ಅವನ ತೊಡೆಗಳ ವೇಗದಿಂದ ಆಷಾಢ ಮತ್ತು ಜ್ಯೇಷ್ಠ ಮಾಸಗಳ ಪ್ರಾರಂಭದಲ್ಲಿ ಕಂಡುಬರುವ ಭಿರುಗಾಳಿಯಂತೆ ಗಾಳಿಯೆದ್ದಿತು.

01138002a ಸ ಮೃದ್ನನ್ಪುಷ್ಪಿತಾಂಶ್ಚೈವ ಫಲಿತಾಂಶ್ಚ ವನಸ್ಪತೀನ್|

01138002c ಆರುಜನ್ದಾರುಗುಲ್ಮಾಂಶ್ಚ ಪಥಸ್ತಸ್ಯ ಸಮೀಪಜಾನ್||

ಅವನು ಹೂವು ಹಣ್ಣುಗಳನ್ನು ಹೊಂದಿದ್ದ ಮರಗಳನ್ನು ತುಳಿದು ಹಾಕಿದನು ಮತ್ತು ಅವನ ದಾರಿಯ ಬಳಿಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಇಲ್ಲದಂತೆ ಮಾಡಿದನು.

01138003a ತಥಾ ವೃಕ್ಷಾನ್ಭಂಜಮಾನೋ ಜಗಾಮಾಮಿತವಿಕ್ರಮಃ|

01138003c ತಸ್ಯ ವೇಗೇನ ಪಾಂಡೂನಾಂ ಮೂರ್ಚ್ಛೇವ ಸಮಜಾಯತ||

ಹೀಗೆ ಮರಗಳನ್ನು ಉರುಳಿಸಿ ಬೀಳಿಸುತ್ತಾ ಅತಿ ವೇಗದಲ್ಲಿ ಅವನು ಹೋದನು. ಅವನ ವೇಗದಿಂದ ಪಾಂಡವರು ಮೂರ್ಛಿತರಾದಂತಾದರು.

01138004a ಅಸಕೃಚ್ಚಾಪಿ ಸಂತೀರ್ಯ ದೂರಪಾರಂ ಭುಜಪ್ಲವೈಃ|

01138004c ಪಥಿ ಪ್ರಚ್ಛನ್ನಮಾಸೇದುರ್ಧಾರ್ತರಾಷ್ಟ್ರಭಯಾತ್ತದಾ||

ದೂರ ದೂರದಲ್ಲಿ ದಡಗಳನ್ನು ಹೊಂದಿರುವ ಹಲವಾರು ನದಿಗಳನ್ನು ತಮ್ಮ ಭುಜಗಳನ್ನೇ ದೋಣಿಯನ್ನಾಗಿ ಮಾಡಿಕೊಂಡು ದಾಟಿದರು. ಮತ್ತು ದಾರಿಯಲ್ಲಿ ಧಾರ್ತರಾಷ್ಟ್ರನ ಭಯದಿಂದ ವೇಷವನ್ನು ಬದಲಾಯಿಸಿಕೊಂಡರು.

01138005a ಕೃಚ್ಛ್ರೇಣ ಮಾತರಂ ತ್ವೇಕಾಂ ಸುಕುಮಾರೀಂ ಯಶಸ್ವಿನೀಂ|

01138005c ಅವಹತ್ತತ್ರ ಪೃಷ್ಠೇನ ರೋಧಃಸು ವಿಷಮೇಷು ಚ||

ದುಷ್ಕರವಾದಗಲೆಲ್ಲಾ ಸುಕುಮಾರೀ ಯಶಸ್ವಿನೀ ತಾಯಿಯನ್ನು ಮಾತ್ರ ತನ್ನ ಬೆನ್ನ ಮೇಲೆ ಎತ್ತಿಕೊಂಡು ದಡ ಮತ್ತು ಗುಡ್ಡಬೆಟ್ಟಗಳನ್ನು ಏರುತ್ತಿದ್ದನು.

01138006a ಆಗಮಂಸ್ತೇ ವನೋದ್ದೇಶಮಲ್ಪಮೂಲಫಲೋದಕಂ|

01138006c ಕ್ರೂರಪಕ್ಷಿಮೃಗಂ ಘೋರಂ ಸಾಯಾಹ್ನೇ ಭರತರ್ಷಭಾಃ||

ಸಾಯಂಕಾಲವಾಗುತ್ತಿದ್ದಂತೆ ಭರತರ್ಷಭರು ಗಡ್ಡೆಗೆಣಸುಗಳು, ಫಲಗಳು ಮತ್ತು ನೀರಿನ ಅಭಾವವಾಗಿದ್ದ ಕ್ರೂರ ಪಕ್ಷಿಮೃಗಗಳಿಂದ ಕೂಡಿದ ಘೋರ ವನವೊಂದರ ಸಮೀಪ ತಲುಪಿದರು.

01138007a ಘೋರಾ ಸಮಭವತ್ಸಂಧ್ಯಾ ದಾರುಣಾ ಮೃಗಪಕ್ಷಿಣಃ|

01138007c ಅಪ್ರಕಾಶಾ ದಿಶಃ ಸರ್ವಾ ವಾತೈರಾಸನ್ನನಾರ್ತವೈಃ||

ಘೋರ ಕತ್ತಲೆಯು ಆವರಿಸುತ್ತಿದ್ದಂತೆ ಮೃಗಪಕ್ಷಿಗಳು ದಾರುಣರಾಗಿ ಕಂಡವು; ಅಕಾಲಿಕವಾದ ಭಿರುಗಾಳಿಯಿಂದ ಸರ್ವ ದಿಕ್ಕುಗಳೂ ಕಾಣದಂತಾದವು.

01138008a ತೇ ಶ್ರಮೇಣ ಚ ಕೌರವ್ಯಾಸ್ತೃಷ್ಣಯಾ ಚ ಪ್ರಪೀಡಿತಾಃ|

01138008c ನಾಶಕ್ನುವಂಸ್ತದಾ ಗಂತುಂ ನಿದ್ರಯಾ ಚ ಪ್ರವೃದ್ಧಯಾ||

ಆಯಾಸ, ಬಾಯಾರಿಕೆ ಮತ್ತು ನಿದ್ದೆಯು ಆ ಕೌರವರನ್ನು ಪೀಡಿಸಿತು ಮತ್ತು ಇನ್ನು ಮುಂದುವರಿಯಲು ಅವರಿಗೆ ಅಸಾಧ್ಯವೆನಿಸಿತು.

01138009a ತತೋ ಭೀಮೋ ವನಂ ಘೋರಂ ಪ್ರವಿಶ್ಯ ವಿಜನಂ ಮಹತ್|

01138009c ನ್ಯಗ್ರೋಧಂ ವಿಪುಲಚ್ಛಾಯಂ ರಮಣೀಯಮುಪಾದ್ರವತ್||

ಆಗ ಭೀಮನು ಆ ಘೋರ ವನವನ್ನು ಪ್ರವೇಶಿಸಿ ವಿಶಾಲ ಏಕಾಂತಪ್ರದೇಶದಲ್ಲಿ ವಿಪುಲ ನೆರಳನ್ನು ನೀಡುತ್ತಿದ್ದ ರಮಣೀಯ ನ್ಯಗ್ರೋಧ ವೃಕ್ಷವನ್ನು ಕಂಡನು.

01138010a ತತ್ರ ನಿಕ್ಷಿಪ್ಯ ತಾನ್ಸರ್ವಾನುವಾಚ ಭರತರ್ಷಭಃ|

01138010c ಪಾನೀಯಂ ಮೃಗಯಾಮೀಹ ವಿಶ್ರಮಧ್ವಮಿತಿ ಪ್ರಭೋ||

ಪ್ರಭೋ! ಅವರನ್ನೆಲ್ಲ ಅಲ್ಲಿಯೇ ಕೆಳಗಿಳಿಸಿ ಭರತರ್ಷಭನು ಹೇಳಿದನು: “ನೀವೆಲ್ಲ ಇಲ್ಲಿಯೇ ವಿಶ್ರಮಿಸಿ. ನಾನು ನೀರನ್ನು ಹುಡುಕಿ ತರುತ್ತೇನೆ.

01138011a ಏತೇ ರುವಂತಿ ಮಧುರಂ ಸಾರಸಾ ಜಲಚಾರಿಣಃ|

01138011c ಧ್ರುವಮತ್ರ ಜಲಸ್ಥಾಯೋ ಮಹಾನಿತಿ ಮತಿರ್ಮಮ||

ಸರೋವರದಲ್ಲಿ ವಾಸಿಸುವ ಸಾರಸಗಳ ಮಧುರ ಕೂಗನ್ನು ಕೇಳುತ್ತಿದ್ದೇನೆ. ಖಂಡಿತವಾಗಿಯೂ ಅಲ್ಲಿ ವಿಶಾಲವಾದ ಸರೋವರವೊಂದು ಇದೆ ಎಂದು ನನ್ನ ಅಭಿಪ್ರಾಯ.”

01138012a ಅನುಜ್ಞಾತಃ ಸ ಗಚ್ಛೇತಿ ಭ್ರಾತ್ರಾ ಜ್ಯೇಷ್ಠೇನ ಭಾರತ|

01138012c ಜಗಾಮ ತತ್ರ ಯತ್ರ ಸ್ಮ ರುವಂತಿ ಜಲಚಾರಿಣಃ||

ಭಾರತ! ಜ್ಯೇಷ್ಠ ಅಣ್ಣನಿಂದ ಹೋಗಲು ಅನುಮತಿಯನ್ನು ಪಡೆದ ಅವನು ಆ ಜಲಚಾರಿಣಿಗಳು ಕೂಗುತ್ತಿರುವಲ್ಲಿಗೆ ಹೋದನು.

01138013a ಸ ತತ್ರ ಪೀತ್ವಾ ಪಾನೀಯಂ ಸ್ನಾತ್ವಾ ಚ ಭರತರ್ಷಭ|

01138013c ಉತ್ತರೀಯೇಣ ಪಾನೀಯಮಾಜಹಾರ ತದಾ ನೃಪ||

ನೃಪ! ಅಲ್ಲಿ ಆ ಭರತರ್ಷಭನು ನೀರನ್ನು ಕುಡಿದು, ಸ್ನಾನಮಾಡಿ ತನ್ನ ಉತ್ತರೀಯದಿಂದ ನೀರನ್ನು ಹಿಡಿದು ತಂದನು.

01138014a ಗವ್ಯೂತಿಮಾತ್ರಾದಾಗತ್ಯ ತ್ವರಿತೋ ಮಾತರಂ ಪ್ರತಿ|

01138014c ಸ ಸುಪ್ತಾಂ ಮಾತರಂ ದೃಷ್ಟ್ವಾ ಭ್ರಾತೄಂಶ್ಚ ವಸುಧಾತಲೇ|

01138014e ಭೃಶಂ ದುಃಖಪರೀತಾತ್ಮಾ ವಿಲಲಾಪ ವೃಕೋದರಃ||

ಹತ್ತಿರದಲ್ಲಿಯೇ ಇದ್ದ ತಾಯಿಯ ಕಡೆ ಬೇಗನೆ ಹಿಂದಿರುಗಿದನು. ಅಲ್ಲಿ ಬರಿಯ ನೆಲದಮೇಲೆ ಮಲಗಿದ್ದ ತನ್ನ ತಾಯಿ ಮತ್ತು ಸಹೋದರರನ್ನು ಕಂಡು ವೃಕೋದರನು ದುಃಖಿತನಾಗಿ ವಿಲಪಿಸಿದನು.

01138015a ಶಯನೇಷು ಪರಾರ್ಧ್ಯೇಷು ಯೇ ಪುರಾ ವಾರಣಾವತೇ|

01138015c ನಾಧಿಜಗ್ಮುಸ್ತದಾ ನಿದ್ರಾಂ ತೇಽದ್ಯ ಸುಪ್ತಾ ಮಹೀತಲೇ||

“ಹಿಂದೆ ವಾರಣಾವತದಲ್ಲಿ ಶ್ರೇಷ್ಠ ಹಾಸಿಗೆಗಳ ಮೇಲೆ ನಿದ್ದೆಯನ್ನೇ ಪಡೆಯದಿದ್ದ ಇವರು ಈಗ ನೆಲದಮೇಲೆ ಮಲಗಿ ನಿದ್ದೆಹೋಗಿದ್ದಾರಲ್ಲ?

01138016a ಸ್ವಸಾರಂ ವಸುದೇವಸ್ಯ ಶತ್ರುಸಂಘಾವಮರ್ದಿನಃ|

01138016c ಕುಂತಿಭೋಜಸುತಾಂ ಕುಂತೀಂ ಸರ್ವಲಕ್ಷಣಪೂಜಿತಾಂ||

01138017a ಸ್ನುಷಾಂ ವಿಚಿತ್ರವೀರ್ಯಸ್ಯ ಭಾರ್ಯಾಂ ಪಾಂಡೋರ್ಮಹಾತ್ಮನಃ|

01138017c ಪ್ರಾಸಾದಶಯನಾಂ ನಿತ್ಯಂ ಪುಂಡರೀಕಾಂತರಪ್ರಭಾಂ||

01138018a ಸುಕುಮಾರತರಾಂ ಸ್ತ್ರೀಣಾಂ ಮಹಾರ್ಹಶಯನೋಚಿತಾಂ|

01138018c ಶಯಾನಾಂ ಪಶ್ಯತಾದ್ಯೇಹ ಪೃಥಿವ್ಯಾಮತಥೋಚಿತಾಂ||

ಶತ್ರುಸಂಘಾವಮರ್ದಿನ ವಸುದೇವನ ತಂಗಿ, ಸರ್ಮಲಕ್ಷಣಪೂಜಿತೆ ಕುಂತಿಭೋಜಸುತೆ ಕುಂತಿ, ವಿಚಿತ್ರವೀರ್ಯನ ಸೊಸೆ, ಮಹಾತ್ಮ ಪಾಂಡುವಿನ ಭಾರ್ಯೆ, ನಿತ್ಯವೂ ಅರಮನೆಯಲ್ಲಿ ಮಲಗುವ ಪುಂಡರೀಕಾಂತರಪ್ರಭೆ, ಮಹಾ ಸ್ತ್ರೀಯರಲ್ಲಿ ಅತೀವ ಸುಕುಮಾರಿ, ಬೆಲೆಬಾಳುವ ಹಾಸಿಗೆಯ ಮೇಲೆ ಮಲಗುವವಳು ಈಗ ಅಯೋಚಿತ ನೆಲದ ಮೇಲೆ ಮಲಗಿದ್ದುದನ್ನು ನೋಡು!

01138019a ಧರ್ಮಾದಿಂದ್ರಾಚ್ಚ ವಾಯೋಶ್ಚ ಸುಷುವೇ ಯಾ ಸುತಾನಿಮಾನ್|

01138019c ಸೇಯಂ ಭೂಮೌ ಪರಿಶ್ರಾಂತಾ ಶೇತೇ ಹ್ಯದ್ಯಾತಥೋಚಿತಾ||

ಧರ್ಮ, ಇಂದ್ರ ಮತ್ತು ವಾಯುವಿನಿಂದ ಈ ಮಕ್ಕಳನ್ನು ಪಡೆದ ಅವಳು ಪರಿಶ್ರಾಂತಳಾಗಿ ನೆಲದಮೇಲೆ ಮಲಗಿದ್ದಾಳಲ್ಲ!

01138020a ಕಿಂ ನು ದುಃಖತರಂ ಶಕ್ಯಂ ಮಯಾ ದ್ರಷ್ಟುಮತಃ ಪರಂ|

01138020c ಯೋಽಹಮದ್ಯ ನರವ್ಯಾಘ್ರಾನ್ಸುಪ್ತಾನ್ಪಶ್ಯಾಮಿ ಭೂತಲೇ||

ಇದಕ್ಕಿಂತಲೂ ಹೆಚ್ಚಾದ ಯಾವ ದುಃಖವನ್ನು ನನಗೆ ಸಹಿಸಲು ಸಾಧ್ಯ? ಈ ನರವ್ಯಾಘ್ರರು ಇಂದು ಈ ನೆಲದಮೇಲೆ ಮಲಗಿದ್ದುದನ್ನು ನೋಡುತ್ತಿದ್ದೇನಲ್ಲ!

01138021a ತ್ರಿಷು ಲೋಕೇಷು ಯದ್ರಾಜ್ಯಂ ಧರ್ಮವಿದ್ಯೋಽರ್ಹತೇ ನೃಪಃ|

01138021c ಸೋಽಯಂ ಭೂಮೌ ಪರಿಶ್ರಾಂತಃ ಶೇತೇ ಪ್ರಾಕೃತವತ್ಕಥಂ||

ಮೂರೂ ಲೋಕಗಳನ್ನೂ ರಾಜ್ಯವನ್ನಾಗಿ ಆಳುವ ಅರ್ಹತೆಯುಳ್ಳ ಈ ಧರ್ಮವಿದ ನೃಪನು (ಯುಧಿಷ್ಠಿರನು) ಹೇಗೆ ತಾನೆ ಓರ್ವ ಸಾಮಾನ್ಯನಂತೆ ಆಯಾಸಗೊಂಡು ಭೂಮಿಯ ಮೇಲೆ ಮಲಗಿದ್ದಾನೆ?

01138022a ಅಯಂ ನೀಲಾಂಬುದಶ್ಯಾಮೋ ನರೇಷ್ವಪ್ರತಿಮೋ ಭುವಿ|

01138022c ಶೇತೇ ಪ್ರಾಕೃತವದ್ಭೂಮಾವತೋ ದುಃಖತರಂ ನು ಕಿಂ||

ಮೋಡದಂತೆ ಕಪ್ಪಾಗಿರುವ, ಭೂಮಿಯಲ್ಲಿರುವ ನರರಲ್ಲಿಯೇ ಅಪ್ರತಿಮನಾಗಿರುವ ಇವನು (ಅರ್ಜುನನು) ಸಾಮಾನ್ಯನೋರ್ವನಂತೆ ಭೂಮಿಯಮೇಲೆ ಮಲಗಿರುವುದು ದುಃಖತರವಲ್ಲವೇ?

01138023a ಅಶ್ವಿನಾವಿವ ದೇವಾನಾಂ ಯಾವಿಮೌ ರೂಪಸಂಪದಾ|

01138023c ತೌ ಪ್ರಾಕೃತವದದ್ಯೇಮೌ ಪ್ರಸುಪ್ತೌ ಧರಣೀತಲೇ|

ಅಶ್ವಿನಿದೇವತೆಗಳಂತೆ ರೂಪಸಂಪನ್ನರಾದ ಈ ಯಮಳರು ಸಾಮಾನ್ಯರಂತೆ ಧರಣೀತಲದಲ್ಲಿ ಮಲಗಿದ್ದಾರಲ್ಲ!

01138024a ಜ್ಞಾತಯೋ ಯಸ್ಯ ನೈವ ಸ್ಯುರ್ವಿಷಮಾಃ ಕುಲಪಾಂಸನಾಃ|

01138024c ಸ ಜೀವೇತ್ಸುಸುಖಂ ಲೋಕೇ ಗ್ರಾಮೇ ದ್ರುಮ ಇವೈಕಜಃ||

ಈ ಲೋಕದಲ್ಲಿ ವಿಷಮರಾಗಿರುವ ಮತ್ತು ಕುಲವನ್ನು ಕೆಡಿಸುವ ಬಂಧುಗಳು ಯಾರೂ ಇಲ್ಲದವನು ಗ್ರಾಮದಲ್ಲಿರುವ ಒಂಟಿ ಮರದಂತೆ ಸುಖವಾದ ಜೀವನವನ್ನು ಜೀವಿಸುತ್ತಾರೆ.

01138025a ಏಕೋ ವೃಕ್ಷೋ ಹಿ ಯೋ ಗ್ರಾಮೇ ಭವೇತ್ಪರ್ಣಫಲಾನ್ವಿತಃ|

01138025c ಚೈತ್ಯೋ ಭವತಿ ನಿರ್ಜ್ಞಾತಿರರ್ಚನೀಯಃ ಸುಪೂಜಿತಃ||

ಗ್ರಾಮದಲ್ಲಿ ಒಂಟಿಯಾಗಿರುವ ವೃಕ್ಷವು ಪರ್ಣ ಫಲಪೂರಿತವಾಗಿರುತ್ತದೆ ಯಾಕೆಂದರೆ ಬಂಧುಗಳು ಯಾರನ್ನೂ ಹೊಂದಿರದ ಅದನ್ನು ಪೂಜಿಸುತ್ತಾರೆ.

01138026a ಯೇಷಾಂ ಚ ಬಹವಃ ಶೂರಾ ಜ್ಞಾತಯೋ ಧರ್ಮಸಂಶ್ರಿತಾಃ|

01138026c ತೇ ಜೀವಂತಿ ಸುಖಂ ಲೋಕೇ ಭವಂತಿ ಚ ನಿರಾಮಯಾಃ||

ಬಹಳ ಮಂದಿ ಧರ್ಮಸಂಶ್ರಿತ ಶೂರ ನೆಂಟರನ್ನು ಹೊಂದಿದವರು ಈ ಲೋಕದಲ್ಲಿ ನಿರಾಮಯ ಸುಖ ಜೀವನವನ್ನು ಜೀವಿಸುತ್ತಾರೆ.

01138027a ಬಲವಂತಃ ಸಮೃದ್ಧಾರ್ಥಾ ಮಿತ್ರಬಾಂಧವನಂದನಾಃ|

01138027c ಜೀವಂತ್ಯನ್ಯೋನ್ಯಮಾಶ್ರಿತ್ಯ ದ್ರುಮಾಃ ಕಾನನಜಾ ಇವ||

ಬಾಂಧವರನ್ನು ಮಿತ್ರರನ್ನಾಗಿ ಪಡೆದ ಮಕ್ಕಳು ಅನ್ಯೋನ್ಯರಿಗೆ ಆಶ್ರಯವನ್ನು ನೀಡುತ್ತಾ ಕಾಡಿನಲ್ಲಿ ಬೆಳೆಯುವ ಮರಗಳಂತೆ ಬಲವಂತರಾಗಿ ಸಮೃದ್ಧ ಜೀವನವನ್ನು ಜೀವಿಸುತ್ತಾರೆ.

01138028a ವಯಂ ತು ಧೃತರಾಷ್ಟ್ರೇಣ ಸಪುತ್ರೇಣ ದುರಾತ್ಮನಾ|

01138028c ವಿವಾಸಿತಾ ನ ದಗ್ಧಾಶ್ಚ ಕಥಂ ಚಿತ್ತಸ್ಯ ಶಾಸನಾತ್||

ಧೃತರಾಷ್ಟ್ರ ಮತ್ತು ಅವನ ದುರಾತ್ಮ ಪುತ್ರನಿಂದ ಹೊರಗಟ್ಟಲ್ಪಟ್ಟ ನಾವು ಅವನೇ ಹೇಳಿ ಮಾಡಿಸಿದ್ದ ಬೆಂಕಿಯನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡೆವು.

01138029a ತಸ್ಮಾನ್ಮುಕ್ತಾ ವಯಂ ದಾಹಾದಿಮಂ ವೃಕ್ಷಮುಪಾಶ್ರಿತಾಃ|

01138029c ಕಾಂ ದಿಶಂ ಪ್ರತಿಪತ್ಸ್ಯಾಮಃ ಪ್ರಾಪ್ತಾಃ ಕ್ಲೇಶಮನುತ್ತಮಂ||

ಆ ಅಗ್ನಿಯಿಂದ ತಪ್ಪಿಸಿಕೊಂಡ ನಾವು ಈಗ ಈ ಮರದ ಆಶ್ರಯವನ್ನು ಬಯಸುತ್ತಿದ್ದೇವೆ. ಈ ಅನುತ್ತಮ ಕ್ಲೇಶವನ್ನು ಪಡೆದ ನಾವು ಯಾವ ದಿಕ್ಕಿನಲ್ಲಿ ಹೋಗಬಲ್ಲೆವು?

01138030a ನಾತಿದೂರೇ ಚ ನಗರಂ ವನಾದಸ್ಮಾದ್ಧಿ ಲಕ್ಷಯೇ|

01138030c ಜಾಗರ್ತವ್ಯೇ ಸ್ವಪಂತೀಮೇ ಹಂತ ಜಾಗರ್ಮ್ಯಹಂ ಸ್ವಯಂ||

ಈ ವನದಿಂದ ಹತ್ತಿರದಲ್ಲಿಯೇ ಒಂದು ನಗರವು ಕಂಡುಬರುತ್ತಿದೆ. ಆದರೆ ಅವರು ಮಲಗಿರುವಾಗ ಯಾರಾದರೂ ಒಬ್ಬರು ಎಚ್ಚರವಾಗಿರಬೇಕಲ್ಲ! ನಾನೇ ಎಚ್ಚರವಾಗಿರುತ್ತೇನೆ.

01138031a ಪಾಸ್ಯಂತೀಮೇ ಜಲಂ ಪಶ್ಚಾತ್ಪ್ರತಿಬುದ್ಧಾ ಜಿತಕ್ಲಮಾಃ|

01138031c ಇತಿ ಭೀಮೋ ವ್ಯವಸ್ಯೈವ ಜಜಾಗಾರ ಸ್ವಯಂ ತದಾ||

ಆಯಾಸವನ್ನು ತಣಿಸಿ ಎಚ್ಚೆತ್ತ ನಂತರ ಅವರು ನೀರನ್ನು ಕುಡಿಯುತ್ತಾರೆ ಎಂದು ನಿಶ್ಚಯಿಸಿದ ಭೀಮನು ಸ್ವಯಂ ರಾತ್ರಿಯಿಡೀ ಎಚ್ಚೆತ್ತೇ ಇದ್ದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಭೀಮಜಲಾಹರಣೇ ಅಷ್ಟಾತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಭೀಮಜಲಾಹರಣ ಎನ್ನುವ ನೂರಾಮೂವತ್ತೆಂಟನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೮/೧೦೦, ಅಧ್ಯಾಯಗಳು-೧೩೮/೧೯೯೫, ಶ್ಲೋಕಗಳು-೪೮೪೭/೭೩೭೮೪

Related image

Comments are closed.