|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ಆಸ್ತೀಕ ಪರ್ವ
೧೩
ಆಸ್ತೀಕನ ಕಥೆಯನ್ನು ಹೇಳಲು ಶೌನಕನು ಉಗ್ರಶ್ರವನನ್ನು ಕೇಳುತ್ತಾನೆ (೧-೫). ಆಸ್ತೀಕನ ಕಥೆಯ ಸಾರಾಂಶ (೬-೪೫).
01013001 ಶೌನಕ ಉವಾಚ|
01013001a ಕಿಮರ್ಥಂ ರಾಜಶಾರ್ದೂಲಃ ಸ ರಾಜಾ ಜನಮೇಜಯಃ|
01013001c ಸರ್ಪಸತ್ರೇಣ ಸರ್ಪಾಣಾಂ ಗತೋಽಂತಂ ತದ್ವದಸ್ವ ಮೇ||
ಶೌನಕನು ಹೇಳಿದನು: “ರಾಜಶಾರ್ದೂಲ ರಾಜ ಜನಮೇಜಯನು ಯಾವ ಕಾರಣಕ್ಕಾಗಿ ಸರ್ಪಸತ್ರದಲ್ಲಿ ಸರ್ಪಗಳನ್ನು ನಾಶಗೊಳಿಸಲು ನಿರ್ಧರಿಸಿದನು ಎನ್ನುವುದನ್ನು ನನಗೆ ಹೇಳು.
01013002a ಆಸ್ತೀಕಶ್ಚ ದ್ವಿಜಶ್ರೇಷ್ಠಃ ಕಿಮರ್ಥಂ ಜಪತಾಂ ವರಃ|
01013002c ಮೋಕ್ಷಯಾಮಾಸ ಭುಜಗಾನ್ದೀಪ್ತಾತ್ತಸ್ಮಾದ್ ಹುತಾಶನಾತ್||
ಜಪಿಸುವರಲ್ಲಿ ಶ್ರೇಷ್ಠ ದ್ವಿಜಶ್ರೇಷ್ಠ ಆಸ್ತೀಕನಾದರೋ ಯಾವ ಕಾರಣಕ್ಕಾಗಿ ಉರಿಯುತ್ತಿರುವ ಬೆಂಕಿಯಿಂದ ಆ ಭುಜಗಗಳನ್ನು ರಕ್ಷಿಸಿದನು?
01013003a ಕಸ್ಯ ಪುತ್ರಃ ಸ ರಾಜಾಸೀತ್ಸರ್ಪಸತ್ರಂ ಯ ಆಹರತ್|
01013003c ಸ ಚ ದ್ವಿಜಾತಿಪ್ರವರಃ ಕಸ್ಯ ಪುತ್ರೋ ವದಸ್ವ ಮೇ||
ಆ ಸರ್ಪಸತ್ರವನ್ನು ಕೈಗೊಂಡ ರಾಜನು ಯಾರ ಪುತ್ರ? ಮತ್ತು ಆ ದ್ವಿಜಾತಿಪ್ರವರನು ಯಾರ ಪುತ್ರ? ನನಗೆ ಹೇಳು.”
01013004 ಸೂತ ಉವಾಚ|
01013004a ಮಹದಾಖ್ಯಾನಮಾಸ್ತೀಕಂ ಯತ್ರೈತತ್ಪ್ರೋಚ್ಯತೇ ದ್ವಿಜ|
01013004c ಸರ್ವಮೇತದಶೇಷೇಣ ಶೃಣು ಮೇ ವದತಾಂ ವರ||
ಸೂತನು ಹೇಳಿದನು: “ಉತ್ತಮ ವಾಗ್ಮಿ ದ್ವಿಜನೇ! ಹಿಂದಿನಿಂದ ಹೇಳಿಕೊಂಡು ಬಂದಿರುವ ಆಸ್ತೀಕ ಎನ್ನುವ ಈ ಮಹದಾಖ್ಯಾನವನ್ನು ಸಂಪೂರ್ಣವಾಗಿ ಕೇಳು.”
01013005 ಶೌನಕ ಉವಾಚ|
01013005a ಶ್ರೋತುಮಿಚ್ಛಾಮ್ಯಶೇಷೇಣ ಕಥಾಮೇತಾಂ ಮನೋರಮಾಂ|
01013005c ಆಸ್ತೀಕಸ್ಯ ಪುರಾಣಸ್ಯ ಬ್ರಾಹ್ಮಣಸ್ಯ ಯಶಸ್ವಿನಃ||
ಶೌನಕನು ಹೇಳಿದನು: “ಆ ಯಶಸ್ವಿ ಬ್ರಾಹ್ಮಣ ಆಸ್ತೀಕನ ಮನೋಹರ ಪುರಾಣ ಕಥೆಯನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ.”
01013006 ಸೂತ ಉವಾಚ|
01013006a ಇತಿಹಾಸಮಿಮಂ ವೃದ್ಧಾಃ ಪುರಾಣಂ ಪರಿಚಕ್ಷತೇ|
01013006c ಕೃಷ್ಣದ್ವೈಪಾಯನಪ್ರೋಕ್ತಂ ನೈಮಿಷಾರಣ್ಯವಾಸಿನಃ||
ಸೂತನು ಹೇಳಿದನು: “ಹಿರಿಯರು ಈ ಇತಿಹಾಸವನ್ನು ನೈಮಿಷಾರಣ್ಯವಾಸಿಗಳಿಗೆ ಕೃಷ್ಣದ್ವೈಪಾಯನನು ಹೇಳಿದ ಪುರಾಣವೆಂದು ಪರಿಗಣಿಸುತ್ತಾರೆ.
[1]01013007a ಪೂರ್ವಂ ಪ್ರಚೋದಿತಃ ಸೂತಃ ಪಿತಾ ಮೇ ಲೋಮಹರ್ಷಣಃ|
01013007c ಶಿಷ್ಯೋ ವ್ಯಾಸಸ್ಯ ಮೇಧಾವೀ ಬ್ರಾಹ್ಮಣೈರಿದಮುಕ್ತವಾನ್||
ಹಿಂದೆ ನನ್ನ ತಂದೆ ವ್ಯಾಸಶಿಷ್ಯ, ಮೇಧಾವಿ, ಸೂತ ಲೋಮಹರ್ಷಣನು ಬ್ರಾಹ್ಮಣರ ಕೇಳಿಕೆಯಂತೆ ಇದನ್ನು ಹೇಳಿದನು.
01013008a ತಸ್ಮಾದಹಮುಪಶ್ರುತ್ಯ ಪ್ರವಕ್ಷ್ಯಾಮಿ ಯಥಾತಥಂ|
01013008c ಇದಮಾಸ್ತೀಕಮಾಖ್ಯಾನಂ ತುಭ್ಯಂ ಶೌನಕ ಪೃಚ್ಛತೇ||
ಶೌನಕ! ನಿನ್ನ ಕೇಳಿಕೆಯಂತೆ ನಾನು ನಿನಗೆ ಅಲ್ಲಿ ಕೇಳಿದ ಈ ಆಸ್ತೀಕ ಆಖ್ಯಾನವನ್ನು ಯಥಾವತ್ತಾಗಿ ಹೇಳುತ್ತೇನೆ.
01013009a ಆಸ್ತೀಕಸ್ಯ ಪಿತಾ ಹ್ಯಾಸೀತ್ಪ್ರಜಾಪತಿಸಮಃ ಪ್ರಭುಃ|
01013009c ಬ್ರಹ್ಮಚಾರೀ ಯತಾಹಾರಸ್ತಪಸ್ಯುಗ್ರೇ ರತಃ ಸದಾ||
01013010a ಜರತ್ಕಾರುರಿತಿ ಖ್ಯಾತ ಊರ್ಧ್ವರೇತಾ ಮಹಾನೃಷಿಃ|
01013010c ಯಾಯಾವರಾಣಾಂ ಧರ್ಮಜ್ಞಃ ಪ್ರವರಃ ಸಂಶಿತವ್ರತಃ||
ಪ್ರಭು ಪ್ರಜಾಪತಿಯ ಸರಿಸಮ, ಸದಾ ಉಗ್ರತಪಸ್ಸಿನಲ್ಲಿ ನಿರತ ಬ್ರಹ್ಮಚಾರಿಯು ಆಸ್ತೀಕನ ತಂದೆ. ಯಾಯಾವರರ ಕುಲದಲ್ಲಿ[2] ಹುಟ್ಟಿದ, ಆ ಧರ್ಮಜ್ಞ, ಸಂಶಿತವ್ರತ ಮಹಾನ್ ಋಷಿಯು ಜರತ್ಕಾರು ಎಂದು ಖ್ಯಾತನಾಗಿದ್ದನು.
[3]01013011a ಅಟಮಾನಃ ಕದಾ ಚಿತ್ಸ ಸ್ವಾನ್ದದರ್ಶ ಪಿತಾಮಹಾನ್|
01013011c ಲಂಬಮಾನಾನ್ಮಹಾಗರ್ತೇ ಪಾದೈರೂರ್ಧ್ವೈರಧೋಮುಖಾನ್||
ಒಮ್ಮೆ ತಿರುಗಾಡುತ್ತಿರುವಾಗ ಅವನು ಒಂದು ಆಳವಾದ ಬಾವಿಯಲ್ಲಿ ತಲೆ ಕೆಳಗೆ ಮತ್ತು ಕಾಲುಗಳನ್ನು ಮೇಲೆ ಮಾಡಿಕೊಂಡು ನೇಲುತ್ತಿರುವ ತನ್ನ ಪಿತಾಮಹರನ್ನು ಕಂಡನು.
01013012a ತಾನಬ್ರವೀತ್ಸ ದೃಷ್ಟೈವ ಜರತ್ಕಾರುಃ ಪಿತಾಮಹಾನ್|
01013012c ಕೇ ಭವಂತೋಽವಲಂಬಂತೇ ಗರ್ತೇಽಸ್ಮಿನ್ವಾ ಅಧೋಮುಖಾಃ||
01013013a ವೀರಣಸ್ತಂಬಕೇ ಲಗ್ನಾಃ ಸರ್ವತಃ ಪರಿಭಕ್ಷಿತೇ|
01013013c ಮೂಷಕೇನ ನಿಗೂಢೇನ ಗರ್ತೇಽಸ್ಮಿನ್ನಿತ್ಯವಾಸಿನಾ||
ತನ್ನ ಪಿತಾಮಹರನ್ನು ಕಂಡ ಜರತ್ಕಾರುವು ಅವರನ್ನುದ್ದೇಶಿಸಿ ಹೇಳಿದನು: “ಹತ್ತಿರದಲ್ಲಿಯೇ ನಿಗೂಢವಾಗಿ ವಾಸಿಸುತ್ತಿರುವ ಇಲಿಗಳು ಸಂಪೂರ್ಣವಾಗಿ ತಿನ್ನುತ್ತಿರುವ ಈ ವೀರಣ ದಾರವನ್ನು ಹಿಡಿದು ಅಧೋಮುಖರಾಗಿ ನೇಲುತ್ತಿರುವ ನೀವು ಯಾರು?”
01013014 ಪಿತರ ಊಚುಃ|
01013014a ಯಾಯಾವರಾ ನಾಮ ವಯಂ ಋಷಯಃ ಸಂಶಿತವ್ರತಾಃ|
01013014c ಸಂತಾನಪ್ರಕ್ಷಯಾದ್ಬ್ರಹ್ಮನ್ನಧೋ ಗಚ್ಛಾಮ ಮೇದಿನೀಂ||
ಪಿತೃಗಳು ಹೇಳಿದರು: “ಸಂಶಿತವ್ರತ ಯಾಯಾವರ ಎಂಬ ಹೆಸರಿನ ಋಷಿಗಳು ನಾವು. ಸಂತಾನದ ಕೊರತೆಯಿಂದಾಗಿ ನಾವು ಈ ಮೇದಿನಿಯ ಕೆಳಗೆ ಬೀಳುತ್ತಿದ್ದೇವೆ.
01013015a ಅಸ್ಮಾಕಂ ಸಂತತಿಸ್ತ್ವೇಕೋ ಜರತ್ಕಾರುರಿತಿ ಶ್ರುತಃ|
01013015c ಮಂದಭಾಗ್ಯೋಽಲ್ಪಭಾಗ್ಯಾನಾಂ ತಪ ಏವ ಸಮಾಸ್ಥಿತಃ||
ಅಲ್ಪಭಾಗ್ಯರಾದ ನಮ್ಮ ಒಬ್ಬನೇ ಸಂತತಿ ಪ್ರಸಿದ್ಧ ಜರತ್ಕಾರು. ಆ ಮಂದಭಾಗ್ಯನು ನಿರಂತರವಾಗಿ ತಪಸ್ಸಿನಲ್ಲಿಯೇ ತೊಡಗಿದ್ದಾನೆ.
01013016a ನ ಸ ಪುತ್ರಾನ್ಜನಯಿತುಂ ದಾರಾನ್ಮೂಢಶ್ಚಿಕೀರ್ಷತಿ|
01013016c ತೇನ ಲಂಬಾಮಹೇ ಗರ್ತೇ ಸಂತಾನಪ್ರಕ್ಷಯಾದಿಹ||
ಆ ಮೂಢನು ಪತ್ನಿಯಿಂದ ಪುತ್ರರನ್ನು ಪಡೆಯಲು ಪ್ರಯತ್ನಿಸುತ್ತಿಲ್ಲ. ಹಾಗಾಗಿ ಸಂತಾನಾಪೇಕ್ಷೆಯಿಂದ ನಾವು ಈ ಬಾವಿಯಲ್ಲಿ ಈ ರೀತಿ ನೇಲಿಕೊಂಡಿದ್ದೇವೆ.
01013017a ಅನಾಥಾಸ್ತೇನ ನಾಥೇನ ಯಥಾ ದುಷ್ಕೃತಿನಸ್ತಥಾ|
01013017c ಕಸ್ತ್ವಂ ಬಂಧುರಿವಾಸ್ಮಾಕಮನುಶೋಚಸಿ ಸತ್ತಮ||
ಸಾಧನಗಳಿದ್ದರೂ ಈ ಅನಾಥ ದುಷ್ಕೃತಿಗೆ ಇಳಿದಿದ್ದೇವೆ. ಸತ್ತಮ! ನಮ್ಮ ಬಂಧುವೋ ಎಂಬಂತೆ ನಮ್ಮ ಮೇಲೆ ಅನುಕಂಪ ತೋರುತ್ತಿರುವ ನೀನು ಯಾರು?
01013018a ಜ್ಞಾತುಮಿಚ್ಛಾಮಹೇ ಬ್ರಹ್ಮನ್ಕೋ ಭವಾನಿಹ ದಿಷ್ಟಿತಃ|
01013018c ಕಿಮರ್ಥಂ ಚೈವ ನಃ ಶೋಚ್ಯಾನನುಕಂಪಿತುಮರ್ಹಸಿ||
ಬ್ರಾಹ್ಮಣ! ಇಲ್ಲಿ ನಿಂತಿರುವ ನೀನು ಯಾರು ಮತ್ತು ನಮ್ಮ ಮೇಲೆ ಅನುಕಂಪನಾಗಿ ಏಕೆ ಶೋಚಿಸುತ್ತಿದ್ದೀಯೆ ಎಂದು ತಿಳಿಯಲು ಬಯಸುತ್ತೇವೆ.”
01013019 ಜರತ್ಕಾರುರುವಾಚ|
01013019a ಮಮ ಪೂರ್ವೇ ಭವಂತೋ ವೈ ಪಿತರಃ ಸಪಿತಾಮಹಾಃ|
01013019c ಬ್ರೂತ ಕಿಂ ಕರವಾಣ್ಯದ್ಯ ಜರತ್ಕಾರುರಹಂ ಸ್ವಯಂ||
ಜರತ್ಕಾರುವು ಹೇಳಿದನು: “ನೀವು ನನ್ನ ಪೂರ್ವಜರು, ಪಿತೃ-ಪಿತಾಮಹರು. ಆ ಜರತ್ಕಾರುವು ನಾನೇ. ನಿಮಗಾಗಿ ಏನು ಮಾಡಬೇಕು ಹೇಳಿ.”
01013020 ಪಿತರ ಊಚುಃ|
01013020a ಯತಸ್ವ ಯತ್ನವಾಂಸ್ತಾತ ಸಂತಾನಾಯ ಕುಲಸ್ಯ ನಃ|
01013020c ಆತ್ಮನೋಽರ್ಥೇಽಸ್ಮದರ್ಥೇ ಚ ಧರ್ಮ ಇತ್ಯೇವ ಚಾಭಿಭೋ||
01013021a ನ ಹಿ ಧರ್ಮಫಲೈಸ್ತಾತ ನ ತಪೋಭಿಃ ಸುಸಂಚಿತೈಃ|
ಪಿತೃಗಳು ಹೇಳಿದರು: “ಮಗು! ನಿನ್ನ ಸ್ವಂತಕ್ಕಾಗಿ ಮತ್ತು ನಮಗಾಗಿ ಕುಲ ಸಂತಾನಕ್ಕೆ ಪ್ರಯತ್ನಿಸು. ಇದೇ ಧರ್ಮ. ಮಗು! ಪುತ್ರರಿಂದ ದೊರೆಯುವ ಗತಿಯು ಧರ್ಮ-ತಪೋಫಲಗಳನ್ನು ಕೂಡಿಡುವುದರಿಂದ ದೊರೆಯುವುದಿಲ್ಲ.
01013021c ತಾಂ ಗತಿಂ ಪ್ರಾಪ್ನುವಂತೀಹ ಪುತ್ರಿಣೋ ಯಾಂ ವ್ರಜಂತಿ ಹ||
01013022a ತದ್ದಾರಗ್ರಹಣೇ ಯತ್ನಂ ಸಂತತ್ಯಾಂ ಚ ಮನಃ ಕುರು|
01013022c ಪುತ್ರಕಾಸ್ಮನ್ನಿಯೋಗಾತ್ತ್ವಮೇತನ್ನಃ ಪರಮಂ ಹಿತಂ||
ಆದುದರಿಂದ ಪುತ್ರ! ಪತ್ನಿ ಮತ್ತು ಸಂತತಿಗೋಸ್ಕರ ಮನಸ್ಸಿಟ್ಟು ಪ್ರಯತ್ನ ಮಾಡು. ಕೇವಲ ಇದರಿಂದ ನಮಗೆ ಪರಮ ಹಿತವಾಗುತ್ತದೆ.”
01013023 ಜರತ್ಕಾರುರುವಾಚ|
01013023a ನ ದಾರಾನ್ವೈ ಕರಿಷ್ಯಾಮಿ ಸದಾ ಮೇ ಭಾವಿತಂ ಮನಃ|
01013023c ಭವತಾಂ ತು ಹಿತಾರ್ಥಾಯ ಕರಿಷ್ಯೇ ದಾರಸಂಗ್ರಹಂ||
ಜರತ್ಕಾರುವು ಹೇಳಿದನು: “ಪತ್ನಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಸದಾ ನನ್ನ ಮನಸ್ಸಿನಲ್ಲಿತ್ತು. ಆದರೆ ನಿಮ್ಮ ಹಿತಕ್ಕಾಗಿ ಪತ್ನಿಯನ್ನು ಪಡೆಯುವ ಕಾರ್ಯವನ್ನು ಮಾಡುತ್ತೇನೆ.
01013024a ಸಮಯೇನ ಚ ಕರ್ತಾಹಮನೇನ ವಿಧಿಪೂರ್ವಕಂ|
01013024c ತಥಾ ಯದ್ಯುಪಲಪ್ಸ್ಯಾಮಿ ಕರಿಷ್ಯೇ ನಾನ್ಯಥಾ ತ್ವಹಂ||
ಸಮಯ ಬಂದಾಗ ವಿಧಿಪೂರ್ವಕವಾಗಿ ಅದನ್ನೂ ಮಾಡುತ್ತೇನೆ. ಆದರೆ ನನ್ನದೇ ನಿಯಮಗಳ ಮೇಲೆ. ಅನ್ಯಥಾ ಇಲ್ಲ.
01013025a ಸನಾಮ್ನೀ ಯಾ ಭವಿತ್ರೀ ಮೇ ದಿತ್ಸಿತಾ ಚೈವ ಬಂಧುಭಿಃ|
01013025c ಭೈಕ್ಷವತ್ತಾಮಹಂ ಕನ್ಯಾಮುಪಯಂಸ್ಯೇ ವಿಧಾನತಃ||
ಆ ಕನ್ಯೆಯು ನನ್ನ ಹೆಸರನ್ನೇ ಹೊಂದಿರಬೇಕು ಮತ್ತು ಅವಳನ್ನು ಅವಳ ಬಂಧುಗಳು ಸ್ವ-ಇಚ್ಛೆಯಿಂದ ನನಗೆ ಭಿಕ್ಷವಾಗಿ ಕೊಟ್ಟಿರಬೇಕು.
01013026a ದರಿದ್ರಾಯ ಹಿ ಮೇ ಭಾರ್ಯಾಂ ಕೋ ದಾಸ್ಯತಿ ವಿಶೇಷತಃ|
01013026c ಪ್ರತಿಗ್ರಹೀಷ್ಯೇ ಭಿಕ್ಷಾಂ ತು ಯದಿ ಕಶ್ಚಿತ್ಪ್ರದಾಸ್ಯತಿ||
ವಿಶೇಷವಾಗಿ ದರಿದ್ರನಾಗಿರುವ ನನಗೆ ಹೆಂಡತಿಯನ್ನು ಯಾರು ತಾನೆ ನೀಡುವರು? ಆದರೆ ಯಾರಾದರೂ ನನಗೆ ಭಿಕ್ಷೆಯಾಗಿ ಕೊಟ್ಟರೆ ಅವಳನ್ನು ಸ್ವೀಕರಿಸುತ್ತೇನೆ.
01013027a ಏವಂ ದಾರಕ್ರಿಯಾಹೇತೋಃ ಪ್ರಯತಿಷ್ಯೇ ಪಿತಾಮಹಾಃ|
01013027c ಅನೇನ ವಿಧಿನಾ ಶಶ್ವನ್ನ ಕರಿಷ್ಯೇಽಹಮನ್ಯಥಾ||
ಪಿತಾಮಹರೆ! ಈ ರೀತಿ ದೊರಕಿದ ಪತ್ನಿಯನ್ನು ಮದುವೆಯಾಗುತ್ತೇನೆ. ಬೇರೆ ಯಾವರೀತಿಯಲ್ಲಿ ದೊರೆತರೂ ನಾನು ಮದುವೆಯಾಗುವುದಿಲ್ಲ.
01013028a ತತ್ರ ಚೋತ್ಪತ್ಸ್ಯತೇ ಜಂತುರ್ಭವತಾಂ ತಾರಣಾಯ ವೈ|
01013028c ಶಾಶ್ವತಂ ಸ್ಥಾನಮಾಸಾದ್ಯ ಮೋದಂತಾಂ ಪಿತರೋ ಮಮ||
ನನ್ನ ಪಿತೃಗಳಾದ ನಿಮ್ಮ ಉದ್ಧಾರಕ್ಕಾಗಿ ಮತ್ತು ನೀವು ಶಾಶ್ವತ ಸ್ಥಾನವನ್ನು ಪಡೆದು ಸುಖದಿಂದಿರಬೇಕೆಂದು ನಾನು ಅವಳಲ್ಲಿ ಮಗನನ್ನು ಪಡೆಯುತ್ತೇನೆ.””
01013029 ಸೂತ ಉವಾಚ|
01013029a ತತೋ ನಿವೇಶಾಯ ತದಾ ಸ ವಿಪ್ರಃ ಸಂಶಿತವ್ರತಃ|
01013029c ಮಹೀಂ ಚಚಾರ ದಾರಾರ್ಥೀ ನ ಚ ದಾರಾನವಿಂದತ||
ಸೂತನು ಹೇಳಿದನು: “ನಂತರ ಸಂಶಿತವ್ರತ ವಿಪ್ರನು ಹೊರಟು ಪತ್ನಿಗೋಸ್ಕರ ಮಹಿಯನ್ನೆಲ್ಲಾ ತಿರುಗಾಡಿದನು. ಆದರೂ ಅವನಿಗೆ ಪತ್ನಿಯು ದೊರೆಯಲಿಲ್ಲ.
01013030a ಸ ಕದಾಚಿದ್ವನಂ ಗತ್ವಾ ವಿಪ್ರಃ ಪಿತೃವಚಃ ಸ್ಮರನ್|
01013030c ಚುಕ್ರೋಶ ಕನ್ಯಾಭಿಕ್ಷಾರ್ಥೀ ತಿಸ್ರೋ ವಾಚಃ ಶನೈರಿವ||
ಒಮ್ಮೆ ಆ ವಿಪ್ರನು ವನಕ್ಕೆ ಹೋಗಿ ತನ್ನ ಪಿತೃಗಳ ಮಾತನ್ನು ಸ್ಮರಿಸುತ್ತಾ, ಕನ್ಯಾಭಿಕ್ಷಾರ್ಥಿಯಾಗಿ ಮೂರು ಬಾರಿ ಸಣ್ಣ ಧ್ವನಿಯಲ್ಲಿ ಕೂಗಿದನು.
01013031a ತಂ ವಾಸುಕಿಃ ಪ್ರತ್ಯಗೃಹ್ಣಾದುದ್ಯಮ್ಯ ಭಗಿನೀಂ ತದಾ|
01013031c ನ ಸ ತಾಂ ಪ್ರತಿಜಗ್ರಾಹ ನ ಸನಾಮ್ನೀತಿ ಚಿಂತಯನ್||
ಆಗ ವಾಸುಕಿ[4]ಯು ತನ್ನ ತಂಗಿ[5]ಯನ್ನು ಕರೆತಂದು ಒಪ್ಪಿಸಿದನು. ಆದರೆ ಅವಳ ಹೆಸರು ಮತ್ತು ತನ್ನ ಹೆಸರು ಒಂದೇ ಇರಲಿಕ್ಕಿಲ್ಲ ಎಂದು ಯೋಚಿಸಿ ಅವನು ಅವಳನ್ನು ಸ್ವೀಕರಿಸಲಿಲ್ಲ.
01013032a ಸನಾಮ್ನೀಮುದ್ಯತಾಂ ಭಾರ್ಯಾಂ ಗೃಹ್ಣೀಯಾಮಿತಿ ತಸ್ಯ ಹಿ|
01013032c ಮನೋ ನಿವಿಷ್ಟಮಭವಜ್ಜರತ್ಕಾರೋರ್ಮಹಾತ್ಮನಃ||
ಮಹಾತ್ಮ ಜರತ್ಕಾರುವು ತನ್ನ ಮನಸ್ಸಿನಲ್ಲಿಯೇ ಯೋಚಿಸಿದನು: “ನನ್ನ ಹೆಸರನ್ನೇ ಹೊಂದಿರದಿದ್ದ ಯಾರನ್ನೂ ನಾನು ಭಾರ್ಯೆಯನ್ನಾಗಿ ಸ್ವೀಕರಿಸುವುದಿಲ್ಲ.”
01013033a ತಮುವಾಚ ಮಹಾಪ್ರಾಜ್ಞೋ ಜರತ್ಕಾರುರ್ಮಹಾತಪಾಃ|
01013033c ಕಿಮ್ನಾಮ್ನೀ ಭಗಿನೀಯಂ ತೇ ಬ್ರೂಹಿ ಸತ್ಯಂ ಭುಜಂಗಮ||
ಆಗ ಮಹಾಪ್ರಾಜ್ಞ ಮಹಾತಪಸ್ವಿ ಜರತ್ಕಾರುವು ಅವನಿಗೆ ಕೇಳಿದನು: “ಭುಜಂಗಮ! ನಿನ್ನ ಈ ತಂಗಿಯ ಹೆಸರೇನು? ಸತ್ಯವನ್ನು ನುಡಿ.”
01013034 ವಾಸುಕಿರುವಾಚ|
01013034a ಜರತ್ಕಾರೋ ಜರತ್ಕಾರುಃ ಸ್ವಸೇಯಮನುಜಾ ಮಮ|
01013034c ತ್ವದರ್ಥಂ ರಕ್ಷಿತಾ ಪೂರ್ವಂ ಪ್ರತೀಚ್ಛೇಮಾಂ ದ್ವಿಜೋತ್ತಮ||
ವಾಸುಕಿಯು ಹೇಳಿದನು: “ಜರತ್ಕಾರು! ನನ್ನ ಅನುಜೆಯ ಹೆಸರೂ ಜರತ್ಕಾರು. ಬಹುಕಾಲದಿಂದ ನಿನಗಾಗಿ ಇವಳನ್ನು ರಕ್ಷಿಸಿಟ್ಟಿದ್ದೇನೆ. ದ್ವಿಜೋತ್ತಮ! ಸಂತೋಷದಿಂದ ಇವಳನ್ನು ಸ್ವೀಕರಿಸು.””
01013035 ಸೂತ ಉವಾಚ|
01013035a ಮಾತ್ರಾ ಹಿ ಭುಜಗಾಃ ಶಪ್ತಾಃ ಪೂರ್ವಂ ಬ್ರಹ್ಮವಿದಾಂ ವರ|
01013035c ಜನಮೇಜಯಸ್ಯ ವೋ ಯಜ್ಞೇ ಧಕ್ಷ್ಯತ್ಯನಿಲಸಾರಥಿಃ||
ಸೂತನು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ! ಪೂರ್ವದಲ್ಲಿ ಸರ್ಪಗಳು "ಜನಮೇಜಯನ ಯಜ್ಞದಲ್ಲಿ ಅನಿಲಸಾರಥಿ ಅಗ್ನಿಯಿಂದ ಸುಟ್ಟುಹೋಗಿ” ಎಂದು ಅವರ ಮಾತೆಯಿಂದಲೇ ಶಪಿಸಲ್ಪಟ್ಟಿದ್ದರು.
01013036a ತಸ್ಯ ಶಾಪಸ್ಯ ಶಾಂತ್ಯರ್ಥಂ ಪ್ರದದೌ ಪನ್ನಗೋತ್ತಮಃ|
01013036c ಸ್ವಸಾರಂ ಋಷಯೇ ತಸ್ಮೈ ಸುವ್ರತಾಯ ತಪಸ್ವಿನೇ||
ಆ ಶಾಪವನ್ನು ಶಾಂತಗೊಳಿಸಲು ಪನ್ನಗೋತ್ತಮ ವಾಸುಕಿಯು ತನ್ನ ತಂಗಿಯನ್ನು ಆ ಸುವ್ರತ ತಪಸ್ವಿ ಋಷಿಗೆ ಕೊಟ್ಟನು.
01013037a ಸ ಚ ತಾಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ|
01013037c ಆಸ್ತೀಕೋ ನಾಮ ಪುತ್ರಶ್ಚ ತಸ್ಯಾಂ ಜಜ್ಞೇ ಮಹಾತ್ಮನಃ||
ವಿಧಿವತ್ತಾದ ಕರ್ಮಗಳಿಂದ ಆ ಮಹಾತ್ಮನು ಅವಳನ್ನು ಸ್ವೀಕರಿಸಿದನು ಮತ್ತು ಅವಳಲ್ಲಿ ಆಸ್ತೀಕ ಎಂಬ ಹೆಸರಿನ ಪುತ್ರನನ್ನು ಪಡೆದನು.
01013038a ತಪಸ್ವೀ ಚ ಮಹಾತ್ಮಾ ಚ ವೇದವೇದಾಂಗಪಾರಗಃ|
01013038c ಸಮಃ ಸರ್ವಸ್ಯ ಲೋಕಸ್ಯ ಪಿತೃಮಾತೃಭಯಾಪಹಃ||
ಅವನು ತಪಸ್ವಿಯೂ, ಮಹಾತ್ಮನೂ, ವೇದವೇದಾಂಗ ಪಾರಂಗತನೂ, ಲೋಕದ ಸರ್ವವನ್ನೂ ಸಮವಾಗಿ ಕಾಣುವವನೂ, ತಂದೆತಾಯಿಗಳ ಭಯವನ್ನು ದೂರಪಡಿಸುವವನೂ ಆಗಿದ್ದನು.
01013039a ಅಥ ಕಾಲಸ್ಯ ಮಹತಃ ಪಾಂಡವೇಯೋ ನರಾಧಿಪಃ|
01013039c ಆಜಹಾರ ಮಹಾಯಜ್ಞಂ ಸರ್ಪಸತ್ರಮಿತಿ ಶ್ರುತಿಃ||
ಬಹಳ ಕಾಲದ ನಂತರ ಪಾಂಡವರ ವಂಶದಲ್ಲಿ ಜನಿಸಿದ ನರಾಧಿಪನು ಸರ್ಪಸತ್ರವೆಂದು ಖ್ಯಾತಿಯಾದ ಮಹಾಯಜ್ಞವನ್ನು ಕೈಗೊಂಡನು.
01013040a ತಸ್ಮಿನ್ಪ್ರವೃತ್ತೇ ಸತ್ರೇ ತು ಸರ್ಪಾಣಾಮಂತಕಾಯ ವೈ|
01013040c ಮೋಚಯಾಮಾಸ ತಂ ಶಾಪಮಾಸ್ತೀಕಃ ಸುಮಹಾಯಶಾಃ||
ಆ ಸತ್ರದಲ್ಲಿ ಸರ್ಪಗಳ ವಿನಾಶವು ನಡೆಯುತ್ತಿರುವಾಗ ಸುಮಹಾಯಶ ಆಸ್ತೀಕನು ಅವುಗಳನ್ನು ಶಾಪದಿಂದ ಮುಕ್ತಗೊಳಿಸಿದನು.
01013041a ನಾಗಾಂಶ್ಚ ಮಾತುಲಾಂಶ್ಚೈವ ತಥಾ ಚಾನ್ಯಾನ್ಸ ಬಾಂಧವಾನ್|
01013041c ಪಿತೄಂಶ್ಚ ತಾರಯಾಮಾಸ ಸಂತತ್ಯಾ ತಪಸಾ ತಥಾ|
01013041e ವ್ರತೈಶ್ಚ ವಿವಿಧೈರ್ಬ್ರಹ್ಮನ್ಸ್ವಾಧ್ಯಾಯೈಶ್ಚಾನೃಣೋಽಭವತ್||
ತನ್ನ ಸ್ವಾಧ್ಯಾಯ, ವಿವಿಧ ವ್ರತ-ತಪಸ್ಸುಗಳ ಮೂಲಕ ಆ ಬ್ರಾಹ್ಮಣನು ನಾಗಗಳನ್ನು, ಸೋದರ ಮಾವನನ್ನು, ಇತರ ಬಾಂಧವರನ್ನು, ಪಿತೃಗಳನ್ನು ಮತ್ತು ಮುಂದಿನ ಸಂತತಿಯನ್ನು ಉದ್ಧಾರಮಾಡಿ ಅವರಿಂದ ಋಣ[6]ಮುಕ್ತನಾದನು.
01013042a ದೇವಾಂಶ್ಚ ತರ್ಪಯಾಮಾಸ ಯಜ್ಞೈರ್ವಿವಿಧದಕ್ಷಿಣೈಃ|
01013042c ಋಷೀಂಶ್ಚ ಬ್ರಹ್ಮಚರ್ಯೇಣ ಸಂತತ್ಯಾ ಚ ಪಿತಾಮಹಾನ್||
ದಕ್ಷಿಣೆಗಳಿಂದೊಡಗೂಡಿದ ವಿವಿಧ ಯಜ್ಞಗಳಿಂದ ದೇವತೆಗಳನ್ನು, ಬ್ರಹ್ಮಚರ್ಯದಿಂದ ಋಷಿಗಳನ್ನು ಮತ್ತು ಸಂತತಿಯಿಂದ ಪಿತಾಮಹರನ್ನು ತೃಪ್ತಿಪಡಿಸಿದನು.
01013043a ಅಪಹೃತ್ಯ ಗುರುಂ ಭಾರಂ ಪಿತೄಣಾಂ ಸಂಶಿತವ್ರತಃ|
01013043c ಜರತ್ಕಾರುರ್ಗತಃ ಸ್ವರ್ಗಂ ಸಹಿತಃ ಸ್ವೈಃ ಪಿತಾಮಹೈಃ||
ಈ ರೀತಿ ಪಿತೃಗಳ ದೊಡ್ಡ ಋಣವನ್ನು ತೀರಿಸಿ ಜರತ್ಕಾರುವು ತನ್ನ ಪಿತಾಮಹರ ಸಹಿತ ಸ್ವರ್ಗವನ್ನು ಸೇರಿದನು.
01013044a ಆಸ್ತೀಕಂ ಚ ಸುತಂ ಪ್ರಾಪ್ಯ ಧರ್ಮಂ ಚಾನುತ್ತಮಂ ಮುನಿಃ|
01013044c ಜರತ್ಕಾರುಃ ಸುಮಹತಾ ಕಾಲೇನ ಸ್ವರ್ಗಮೀಯಿವಾನ್||
ಆಸ್ತೀಕನನ್ನು ಮಗನನ್ನಾಗಿ ಪಡೆದ ಧಾರ್ಮಿಕ ಮುನಿಗಳಲ್ಲಿ ಉತ್ತಮ ಜರತ್ಕಾರುವು ಬಹಳ ಸಮಯದ ನಂತರ ಸ್ವರ್ಗವನ್ನು ಸೇರಿದನು.
01013045a ಏತದಾಖ್ಯಾನಮಾಸ್ತೀಕಂ ಯಥಾವತ್ಕೀರ್ತಿತಂ ಮಯಾ|
01013045c ಪ್ರಬ್ರೂಹಿ ಭೃಗುಶಾರ್ದೂಲ ಕಿಂ ಭೂಯಃ ಕಥ್ಯತಾಮಿತಿ||
ನಾನು ಈಗ ಹೇಳಿದುದು ಆಸ್ತೀಕನ ಆಖ್ಯಾನ. ಭೃಗುಶಾರ್ದೂಲ! ಇನ್ನು ಯಾವ ಕಥೆಯನ್ನು ಹೇಳಲಿ?”
ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಜರತ್ಕಾರುತತ್ಪಿತೃಸಂವಾದೋ ನಾಮ ತ್ರಯೋದಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಜರತ್ಕಾರುತತ್ಪಿತೃಸಂವಾದವೆಂಬ ಹದಿಮೂರನೆಯ ಅಧ್ಯಾಯವು.
[1]ನೀಲಕಂಠೀಯದಲ್ಲಿ ಇದಕ್ಕೆ ಮೊದಲಿರುವ ಈ ಶ್ಲೋಕವು ಆಸ್ತೀಕನ ಕಥೆಯನ್ನು ಮೊದಲು ವ್ಯಾಸನು ನೈಮಿಷಾರಣ್ಯದಲ್ಲಿ ಹೇಳಿದನು ಎಂದು ಸೂಚಿಸುತ್ತದೆ: ಇತಿಹಾಸಮಿಮಂ ವಿಪ್ರಾಃ ಪುರಾಣಂ ಪರಿಚಕ್ಷತೇ| ಕೃಷ್ಣದ್ವೈಪಾನಯಪ್ರೋಕ್ತಂ ನೈಮಿಷಾರಣ್ಯವಾಸಿಷು||
[2]ಯಾಯಾವರಾ ನಾಮ ಬ್ರಾಹ್ಮಣಾ ಅಸಂಸ್ತೇ ಅರ್ಧಮಾಸಾದಗ್ನಿಹೋತ್ರಮಜುಹ್ವನ್ (ಭರದ್ವಾಜಃ) ಅರ್ಥಾತ್: ಒಂದೊಂದು ಹಳ್ಳಿಯಲ್ಲಿ ಒಂದೊಂದು ರಾತ್ರಿ ಕಳೆಯುತ್ತಾ ಪ್ರತಿಪಕ್ಷದಲ್ಲಿಯೂ ಅಗ್ನಿಹೋತ್ರಮಾಡಿಕೊಂಡು ಸಂಚರಿಸುವ ಬ್ರಾಹ್ಮಣರಿಗೆ ಯಾಯಾವರರೆಂದು ಹೆಸರು.
[3] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಯಾಯಾವರ ಕುಲದ ಲಕ್ಷಣವನ್ನು ವರ್ಣಿಸುವ ಈ ಶ್ಲೋಕಗಳಿವೆ: ಸ ಕದಾಚಿನ್ಮಹಾಭಾಗಸ್ತಪೋಬಲಸಮನ್ವಿತಃ| ಚಚಾರ ಪೃಥಿವೀಂ ಸರ್ವಾಂ ಯತ್ರಸಾಯಂಗೃಹೋ ಮುನಿಃ|| ತೀರ್ಥೇಷು ಚ ಸಮಾಪ್ಲಾನಂ ಕುರ್ವನ್ನಟತಿ ಸರ್ವಶಃ| ಚರನ್ದೀಕ್ಷಾಂ ಮಹಾತೇಜಾ ದುಶ್ಚರಾಮಕೃತಾತ್ಮಭಿಃ|| ವಾಯುಭಕ್ಷೋ ನಿರಾಹಾರಃ ಶುಷ್ಯನ್ನನಿಮಿಷೋ ಮುನಿಃ| ಇತಸ್ತತಃ ಪರಿಚರನ್ದೀಪ್ತಪಾವಕಸಪ್ರಭಃ|| ಅರ್ಥಾತ್ ಆ ತಪೋಬಲಸಮನ್ವಿತನು ಒಮ್ಮೆ ಪ್ರಪಂಚಪರ್ಯಟನ ಮಾಡಲು ಹೊರಟನು. ಪುಣ್ಯಪ್ರದ ತೀರ್ಥಗಳಿಗೆ ಹೋಗಿ ಯಥಾವಿಧಿ ಸ್ನಾನ-ಪಿತೃಪೂಜೆಗಳನ್ನು ಮಾಡಿ ಮುಂದುವರೆಯುವುದು, ಸಾಯಂಕಾಲವಾಗುತ್ತಲೇ ಒಂದೆಡೆ ತಂಗುವುದು, ಇದು ಅವನ ದಿನಚರಿಯಾಗಿತ್ತು. ಆಹಾರದ ಬಯಕೆಯಿರದ ಅವನು ನಿರಾಹಾರನಾಗಿ ಗಾಳಿಯನ್ನೇ ಸೇವಿಸುತ್ತಿರುತ್ತಿದ್ದನು. ಧಗಧಗಿಸುವ ಬೆಂಕಿಯ ತೇಜಸ್ಸಿದ್ದ ಅವನು ಅಲ್ಲಲ್ಲಿ ಸಂಚರಿಸುತ್ತಿದ್ದನು.
[4]ಶಿವನ ಕಂಠದಲ್ಲಿರುವ ನಾಗರಾಜನೇ ವಾಸುಕಿ. ಇವನೂ ಕೂಡ ಅನಂತ ಶೇಷನಾಗನಂತೆ ಕದ್ರು ಮತ್ತು ಕಶ್ಯಪರ ಮಗ ನಾಗ. ಅವನ ಹೆಡೆಯ ಮೇಲೆ ನಾಗಮಣಿಯಿದೆ.
[5]ದೇವೀ ಪುರಾಣದ ಪ್ರಕಾರ ವಾಸುಕಿಯ ತಂಗಿ, ಆಸ್ತೀಕನ ತಾಯಿಯ ಹೆಸರು ಮಾನಸಾ.
[6] ಮನುಷ್ಯನಿಗೆ ಮೂರು ಋಣಗಳಿವೆಯೆಂದು ಹೇಳುತ್ತಾರೆ: ದೇವ ಋಣ, ಋಷಿ ಋಣ ಮತ್ತು ಪಿತೃ ಋಣ. ದೇವಋಣವನ್ನು ಪೂಜೆ-ವ್ರತ-ಯಾಗಗಳಿಂದಲೂ, ಋಷಿ ಋಣವನ್ನು ಬ್ರಹ್ಮಚರ್ಯ-ಸ್ವಾಧ್ಯಾಯ-ತಪಸ್ಸುಗಳ ಮೂಲಕವೂ, ಪಿತೃ ಋಣವನ್ನು ಸಂತತಿಯಿಂದಲೂ ಪೂರೈಸಬಹುದೆಂದು ಹೇಳುತ್ತಾರೆ.