ಶಾಂತಿ ಪರ್ವ: ರಾಜಧರ್ಮ ಪರ್ವ

೫೭

12057001 ಭೀಷ್ಮ ಉವಾಚ

12057001a ನಿತ್ಯೋದ್ಯುಕ್ತೇನ ವೈ ರಾಜ್ಞಾ ಭವಿತವ್ಯಂ ಯುಧಿಷ್ಠಿರ|

12057001c ಪ್ರಶಾಮ್ಯತೇ ಚ ರಾಜಾ ಹಿ ನಾರೀವೋದ್ಯಮವರ್ಜಿತಃ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ರಾಜನು ನಿತ್ಯವೂ ಉದ್ಯೋಗಶೀಲನಾಗಿರಬೇಕು. ಗೃಹಕೃತ್ಯಗಳಲ್ಲಿ ಅನಾಸಕ್ತಳಾದ ನಾರಿಯಂತೆ ನಿರುದ್ಯೋಗಿಯಾದ ರಾಜನು ಪ್ರಶಂಸೆಗೆ ಪಾತ್ರನಾಗುವುದಿಲ್ಲ.

12057002a ಭಗವಾನುಶನಾ ಚಾಹ ಶ್ಲೋಕಮತ್ರ ವಿಶಾಂ ಪತೇ|

12057002c ತಮಿಹೈಕಮನಾ ರಾಜನ್ಗದತಸ್ತ್ವಂ ನಿಬೋಧ ಮೇ||

ವಿಶಾಂಪತೇ! ಇದಕ್ಕೆ ಸಂಬಂಧಿಸಿದಂತೆ ಭಗವಾನ್ ಉಶನನು ಒಂದು ಶ್ಲೋಕವನ್ನು ಹೇಳಿದ್ದಾನೆ. ರಾಜನ್! ನಿನಗೆ ಅದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

12057003a ದ್ವಾವೇತೌ ಗ್ರಸತೇ ಭೂಮಿಃ ಸರ್ಪೋ ಬಿಲಶಯಾನಿವ|

12057003c ರಾಜಾನಂ ಚಾವಿರೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಮ್||

“ಬಿಲದಲ್ಲಿರುವ ಇಲಿ-ಕಪ್ಪೆಗಳನ್ನು ಸರ್ಪವು ನುಂಗಿಬಿಡುವಂತೆ ಶತ್ರುಗಳೊಡನೆ ಯುದ್ಧಮಾಡದಿರುವ ರಾಜ ಮತ್ತು ದೇಶಸಂಚಾರ ಮಾಡದಿರುವ ಬ್ರಾಹ್ಮಣ ಇಬ್ಬರನ್ನೂ ಭೂಮಿಯು ನುಂಗಿಹಾಕುತ್ತದೆ.”

12057004a ತದೇತನ್ನರಶಾರ್ದೂಲ ಹೃದಿ ತ್ವಂ ಕರ್ತುಮರ್ಹಸಿ|

12057004c ಸಂಧೇಯಾನಪಿ ಸಂಧತ್ಸ್ವ ವಿರೋಧ್ಯಾಂಶ್ಚ ವಿರೋಧಯ||

ನರಶಾರ್ದೂಲ! ಆದುದರಿಂದ ಇದನ್ನು ನೀನು ಹೃದ್ಗತಮಾಡಿಕೊಳ್ಳಬೇಕು. ಸಂಧಿಗೆ ಯೋಗ್ಯರಾದವರೊಡನೆ ಸಂಧಿಮಾಡಿಕೋ ಮತ್ತು ವಿರೋಧಿಸಬೇಕಾದವರನ್ನು ವಿರೋಧಿಸು.

12057005a ಸಪ್ತಾಂಗೇ ಯಶ್ಚ ತೇ ರಾಜ್ಯೇ ವೈಪರೀತ್ಯಂ ಸಮಾಚರೇತ್|

12057005c ಗುರುರ್ವಾ ಯದಿ ವಾ ಮಿತ್ರಂ ಪ್ರತಿಹಂತವ್ಯ ಏವ ಸಃ||

ರಾಜ್ಯದ ಸಪ್ತಾಂಗ[1]ಗಳಿಗೆ ವಿರುದ್ಧವಾಗಿ ಯಾರು ನಡೆದುಕೊಳ್ಳುತ್ತಾರೋ ಅವನನ್ನು, ಗುರುವಾಗಿರಲಿ ಅಥವಾ ಮಿತ್ರನಾಗಿರಲಿ, ಸಂಹರಿಸಲೇ ಬೇಕು.

12057006a ಮರುತ್ತೇನ ಹಿ ರಾಜ್ಞಾಯಂ ಗೀತಃ ಶ್ಲೋಕಃ ಪುರಾತನಃ|

12057006c ರಾಜ್ಯಾಧಿಕಾರೇ ರಾಜೇಂದ್ರ ಬೃಹಸ್ಪತಿಮತಃ ಪುರಾ||

ರಾಜೇಂದ್ರ! ಬೃಹಸ್ಪತಿಯ ಅಭಿಪ್ರಾಯದಂತೆ ರಾಜಾಧಿಕಾರದ ವಿಷಯದಲ್ಲಿ ಹಿಂದೆ ಮರುತ್ತನು ಹೇಳಿದ ಈ ಪುರಾತನ ಶ್ಲೋಕವನ್ನು ಉದಾಹರಿಸುತ್ತೇನೆ.

12057007a ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|

12057007c ಉತ್ಪಥಪ್ರತಿಪನ್ನಸ್ಯ ಪರಿತ್ಯಾಗೋ ವಿಧೀಯತೇ||

“ದುರಹಂಕಾರದಿಂದ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂದು ತಿಳಿಯದೇ ತಪ್ಪು ಹಾದಿಯನ್ನು ಹಿಡಿದಿರುವವನು ಆಚಾರ್ಯನೇ ಆಗಿದ್ದರೂ ಪರಿತ್ಯಜಿಸಬೇಕೆಂದು ಹೇಳುತ್ತಾರೆ.”

12057008a ಬಾಹೋಃ ಪುತ್ರೇಣ ರಾಜ್ಞಾ ಚ ಸಗರೇಣೇಹ ಧೀಮತಾ|

12057008c ಅಸಮಂಜಾಃ ಸುತೋ ಜ್ಯೇಷ್ಠಸ್ತ್ಯಕ್ತಃ ಪೌರಹಿತೈಷಿಣಾ||

ಬಾಹುವಿನ ಮಗ, ಧೀಮಂತ ರಾಜ ಸಗರನು ತನ್ನ ಜ್ಯೇಷ್ಠ ಪುತ್ರ ಅಸಮಂಜಸನನ್ನು ಪೌರರ ಹಿತವನ್ನು ಬಯಸಿ ತ್ಯಜಿಸಿದನು.

12057009a ಅಸಮಂಜಾಃ ಸರಯ್ವಾಂ ಪ್ರಾಕ್ಪೌರಾಣಾಂ ಬಾಲಕಾನ್ನೃಪ|

12057009c ನ್ಯಮಜ್ಜಯದತಃ ಪಿತ್ರಾ ನಿರ್ಭರ್ತ್ಸ್ಯ ಸ ವಿವಾಸಿತಃ||

ನೃಪ! ಅಸಮಂಜಸನು ಪೌರರ ಬಾಲಕರನ್ನು ಸರಯೂ ನದಿಯಲ್ಲಿ ಮುಳುಗಿಸಿಬಿಡುತ್ತಿದ್ದನು. ಆದುದರಿಂದ ಅವನ ತಂದೆಯು ಅವನನ್ನು ರಾಜ್ಯದಿಂದ ಹೊರಗಟ್ಟಿದನು.

12057010a ಋಷಿಣೋದ್ದಾಲಕೇನಾಪಿ ಶ್ವೇತಕೇತುರ್ಮಹಾತಪಾಃ|

12057010c ಮಿಥ್ಯಾ ವಿಪ್ರಾನುಪಚರನ್ಸಂತ್ಯಕ್ತೋ ದಯಿತಃ ಸುತಃ||

ಋಷಿ ಉದ್ದಾಲಕನೂ ಕೂಡ ತನ್ನ ಪ್ರಿಯ ಮಗ ಮಹಾತಪಸ್ವಿ ಶ್ವೇತಕೇತುವನ್ನು ವಿಪ್ರರೊಡನೆ ವಂಚನೆಯಿಂದ ವರ್ತಿಸಿದುದರಿಂದ ತ್ಯಜಿಸಿದನು.

12057011a ಲೋಕರಂಜನಮೇವಾತ್ರ ರಾಜ್ಞಾಂ ಧರ್ಮಃ ಸನಾತನಃ|

12057011c ಸತ್ಯಸ್ಯ ರಕ್ಷಣಂ ಚೈವ ವ್ಯವಹಾರಸ್ಯ ಚಾರ್ಜವಮ್||

ಪ್ರಜಾರಂಜನೆ, ಸತ್ಯದ ರಕ್ಷಣೆ ಮತ್ತು ವ್ಯವಹಾರಗಳಲ್ಲಿ ಸರಳತೆ ಇವೇ  ರಾಜನ ಸನಾತನ ಧರ್ಮವಾಗಿದೆ.

12057012a ನ ಹಿಂಸ್ಯಾತ್ಪರವಿತ್ತಾನಿ ದೇಯಂ ಕಾಲೇ ಚ ದಾಪಯೇತ್|

12057012c ವಿಕ್ರಾಂತಃ ಸತ್ಯವಾಕ್ಕ್ಷಾಂತೋ ನೃಪೋ ನ ಚಲತೇ ಪಥಃ||

ಪರರ ಸ್ವತ್ತನ್ನು ನಾಶಗೊಳಿಸಬಾರದು. ಕೊಡಬೇಕಾದುದನ್ನು ಕಾಲಕ್ಕೆ ಸರಿಯಾಗಿ ಕೊಟ್ಟುಬಿಡಬೇಕು. ಪರಾಕ್ರಮಿಯಾದ, ಸತ್ಯವಾಗ್ಮಿಯಾದ, ಮತ್ತು ದಯಾಪರನಾದ ರಾಜನು ಧರ್ಮಮಾರ್ಗದಿಂದ ವಿಚಲಿತನಾಗುವುದಿಲ್ಲ.

12057013a ಗುಪ್ತಮಂತ್ರೋ ಜಿತಕ್ರೋಧೋ ಶಾಸ್ತ್ರಾರ್ಥಗತನಿಶ್ಚಯಃ|

12057013c ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಸತತಂ ರತಃ||

12057014a ತ್ರಯ್ಯಾ ಸಂವೃತರಂಧ್ರಶ್ಚ ರಾಜಾ ಭವಿತುಮರ್ಹತಿ|

12057014c ವೃಜಿನಸ್ಯ ನರೇಂದ್ರಾಣಾಂ ನಾನ್ಯತ್ಸಂವರಣಾತ್ಪರಮ್||

ಗುಪ್ತವಾಗಿ ಮಂತ್ರಾಲೋಚನೆ ಮಾಡುವವನು, ಕ್ರೋಧವನ್ನು ಜಯಿಸಿದವನು, ಶಾಸ್ತ್ರಗಳ ಅರ್ಥ-ನಿಶ್ಚಯಗಳನ್ನು ಅರಿತವನು, ಸತತವೂ ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ನಿರತನಾದವನು, ಮೂರು ವೇದಗಳ ರಹಸ್ಯವನ್ನು ತಿಳಿದಿರುವವನು, ಗುಪ್ತಾಲೋಚನೆಗಳನ್ನು ಗೌಪ್ಯವಾಗಿಯೇ ಇಟ್ಟಿರುವವನು ರಾಜನಾಗಲು ಯೋಗ್ಯನಾಗುತ್ತಾನೆ. ನರೇಂದ್ರರಿಗೆ ಪ್ರಜಾಪಾಲನೆಯ ಹೊರತಾಗಿ ಬೇರೆ ಪರಮ ಧರ್ಮವೇ ಇಲ್ಲ.

12057015a ಚಾತುರ್ವರ್ಣ್ಯಸ್ಯ ಧರ್ಮಾಶ್ಚ ರಕ್ಷಿತವ್ಯಾ ಮಹೀಕ್ಷಿತಾ|

12057015c ಧರ್ಮಸಂಕರರಕ್ಷಾ ಹಿ ರಾಜ್ಞಾಂ ಧರ್ಮಃ ಸನಾತನಃ||

ಭೂಮಿಯಲ್ಲಿ ಚಾತುರ್ವರ್ಣ್ಯಗಳ ಧರ್ಮಗಳನ್ನು ರಕ್ಷಿಸಬೇಕು. ಧರ್ಮವನ್ನು ಸಂಕರದಿಂದ ರಕ್ಷಿಸುವುದೇ ರಾಜನ ಸನಾತನ ಧರ್ಮವು.

12057016a ನ ವಿಶ್ವಸೇಚ್ಚ ನೃಪತಿರ್ನ ಚಾತ್ಯರ್ಥಂ ನ ವಿಶ್ವಸೇತ್|

12057016c ಷಾಡ್ಗುಣ್ಯಗುಣದೋಷಾಂಶ್ಚ ನಿತ್ಯಂ ಬುದ್ಧ್ಯಾವಲೋಕಯೇತ್||

ನೃಪತಿಯು ಯಾರಲ್ಲಿಯೂ ವಿಶ್ವಾಸವನ್ನಿಡಬಾರದು. ವಿಶ್ವಾಸಕ್ಕೆ ಪಾತ್ರರಾದವರೊಡನೆಯೂ ಅತಿಯಾದ ವಿಶ್ವಾಸವನ್ನಿಡಬಾರದು. ಆರು ವಿಷಯಗಳಲ್ಲಿ[2] ಗುಣ-ದೋಷಗಳಿವೆಯೇ ಎನ್ನುವುದದ್ನ್ನು ತನ್ನ ಬುದ್ಧಿಯಿಂದ ನಿತ್ಯವೂ ಪರಿಶೀಲಿಸುತ್ತಿರಬೇಕು.

12057017a ದ್ವಿಟ್ಚಿದ್ರದರ್ಶೀ ನೃಪತಿರ್ನಿತ್ಯಮೇವ ಪ್ರಶಸ್ಯತೇ|

12057017c ತ್ರಿವರ್ಗವಿದಿತಾರ್ಥಶ್ಚ ಯುಕ್ತಚಾರೋಪಧಿಶ್ಚ ಯಃ||

ನಿತ್ಯವೂ ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಳ್ಳುವ, ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳ ಅರ್ಥವನ್ನು ತಿಳಿದುಕೊಂಡಿರುವ, ಮತ್ತು ಚಾರರನ್ನು ಬಳಸುತ್ತಿರುವ ನೃಪತಿಯು ಪ್ರಶಂಸೆಗೆ ಪಾತ್ರನಾಗುತ್ತಾನೆ.

12057018a ಕೋಶಸ್ಯೋಪಾರ್ಜನರತಿರ್ಯಮವೈಶ್ರವಣೋಪಮಃ|

12057018c ವೇತ್ತಾ ಚ ದಶವರ್ಗಸ್ಯ ಸ್ಥಾನವೃದ್ಧಿಕ್ಷಯಾತ್ಮನಃ||

ನ್ಯಾಯದಲ್ಲಿ ಯಮನಂತೆಯೂ ಕೋಶವನ್ನು ತುಂಬುವುದರಲ್ಲಿ ವೈಶ್ರವಣನಂತೆಯೂ ಇರಬೇಕು. ಸ್ಥಾನ, ವೃದ್ಧಿ ಮತ್ತು ಕ್ಷಯಗಳಿಗೆ ಕಾರಣಗಳಾದ ದಶವರ್ಗಗಳನ್ನೂ[3] ತಿಳಿದುಕೊಂಡಿರಬೇಕು.

12057019a ಅಭೃತಾನಾಂ ಭವೇದ್ಭರ್ತಾ ಭೃತಾನಾಂ ಚಾನ್ವವೇಕ್ಷಕಃ|

12057019c ನೃಪತಿಃ ಸುಮುಖಶ್ಚ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ||

ಭರಣ-ಪೋಷಣೆಗಳಿಲ್ಲದವರಿಗೆ ರಾಜನು ಭರಣ-ಪೋಷಕನಾಗಿರಬೇಕು. ಸೇವಕರ ಮೇಲ್ವಿಚಾರಣೆ ಮಾಡುತ್ತಿರಬೇಕು. ರಾಜನಾದವನು ಪ್ರಸನ್ನಮುಖನಾಗಿರಬೇಕು. ಮಾತನಾಡುವಾಗ ಮಂದಸ್ಮಿತನಾಗಿರಬೇಕು.

12057020a ಉಪಾಸಿತಾ ಚ ವೃದ್ಧಾನಾಂ ಜಿತತಂದ್ರೀರಲೋಲುಪಃ|

12057020c ಸತಾಂ ವೃತ್ತೇ ಸ್ಥಿತಮತಿಃ ಸಂತೋ ಹ್ಯಾಚಾರದರ್ಶಿನಃ||

ವೃದ್ಧರ ಸೇವೆಯನ್ನು ಮಾಡಬೇಕು. ಆಲಸ್ಯವನ್ನು ಜಯಿಸಬೇಕು. ವ್ಯಸನಲೋಲುಪನಾಗಿರಬಾರದು. ಸತ್ಪುರುಷರ ನಡತೆಗಳಲ್ಲಿಯೇ ಸ್ಥಿರವಾಗಿ ಬುದ್ಧಿಯನ್ನಿರಿಸಿರಬೇಕು. ಏಕೆಂದರೆ ಸಂತರೇ ಆಚಾರಗಳನ್ನು ತೋರಿಸಿಕೊಡುವವರು.

12057021a ನ ಚಾದದೀತ ವಿತ್ತಾನಿ ಸತಾಂ ಹಸ್ತಾತ್ಕದಾ ಚನ|

12057021c ಅಸದ್ಭ್ಯಸ್ತು ಸಮಾದದ್ಯಾತ್ಸದ್ಭ್ಯಃ ಸಂಪ್ರತಿಪಾದಯೇತ್||

ಸತ್ಪುರುಷರ ಕೈಯಿಂದ ಎಂದೂ ಧನವನ್ನು ತೆಗೆದುಕೊಳ್ಳಬಾರದು. ಅಸಾಧುಪುರುಷರಿಂದ ಧನವನ್ನು ಸಂಗ್ರಹಿಸಿ, ಸತ್ಪುರುಷರಲ್ಲಿ ದಾನಮಾಡಬೇಕು.

12057022a ಸ್ವಯಂ ಪ್ರಹರ್ತಾದಾತಾ ಚ ವಶ್ಯಾತ್ಮಾ ವಶ್ಯಸಾಧನಃ|

12057022c ಕಾಲೇ ದಾತಾ ಚ ಭೋಕ್ತಾ ಚ ಶುದ್ಧಾಚಾರಸ್ತಥೈವ ಚ||

ಸ್ವಯಂ ತಾನೇ ದಂಡಿಸಬೇಕು. ದಾನಶೀಲನಾಗಿರಬೇಕು. ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರಬೇಕು. ಸಾಧನಗಳನ್ನು ಹೊಂದಿರಬೇಕು. ಕಾಲಕಾಲಕ್ಕೆ ದಾನಗಳನ್ನು ನೀಡುತ್ತಿರಬೇಕು. ಶುದ್ಧಾಚಾರಗಳಿಂದ ಭೋಗಿಸಲೂ ಬೇಕು.

12057023a ಶೂರಾನ್ಭಕ್ತಾನಸಂಹಾರ್ಯಾನ್ಕುಲೇ ಜಾತಾನರೋಗಿಣಃ|

12057023c ಶಿಷ್ಟಾನ್ಶಿಷ್ಟಾಭಿಸಂಬಂಧಾನ್ಮಾನಿನೋ ನಾವಮಾನಿನಃ||

12057024a ವಿದ್ಯಾವಿದೋ ಲೋಕವಿದಃ ಪರಲೋಕಾನ್ವವೇಕ್ಷಕಾನ್|

12057024c ಧರ್ಮೇಷು ನಿರತಾನ್ಸಾಧೂನಚಲಾನಚಲಾನಿವ||

12057025a ಸಹಾಯಾನ್ಸತತಂ ಕುರ್ಯಾದ್ರಾಜಾ ಭೂತಿಪುರಸ್ಕೃತಃ|

12057025c ತೈಸ್ತುಲ್ಯಶ್ಚ ಭವೇದ್ಭೋಗೈಶ್ಚತ್ರಮಾತ್ರಾಜ್ಞಯಾಧಿಕಃ||

ಶೂರರನ್ನೂ, ಭಕ್ತರನ್ನೂ, ಲೋಭಕ್ಕೆ ಒಳಗಾಗದವರನ್ನೂ, ಸತ್ಕುಲದಲ್ಲಿ ಜನಿಸಿದವರನ್ನೂ, ನಿರೋಗಿಗಳನ್ನೂ, ಶಿಷ್ಟರನ್ನೂ, ಶಿಷ್ಟರ ಬಂಧುಗಳನ್ನೂ, ಮಾನನಿಷ್ಟರನ್ನೂ, ಬೇರೆಯವರನ್ನು ಅಪಮಾನಿಸದವರನ್ನೂ, ವಿದ್ಯಾವಂತರನ್ನೂ, ಲೋಕವ್ಯವಹಾರಗಳನ್ನು ತಿಳಿದುಕೊಂಡಿರುವವರನ್ನೂ, ಪುಣ್ಯಲೋಕಾಪೇಕ್ಷಿಗಳನ್ನೂ, ಧರ್ಮದಲ್ಲಿ ನಿರತರಾದವರನ್ನೂ, ಸತ್ಪುರುಷರನ್ನೂ, ಪರ್ವತದಂತೆ ಸ್ಥಿರವಾಗಿರುವವರನ್ನೂ ರಾಜನಾದವನು ತನ್ನ ಸಹಾಯಕರನಾಗಿ ಇಟ್ಟುಕೊಂಡಿರಬೇಕು. ಅವರನ್ನು ಪುರಸ್ಕರಿಸುತ್ತಿರಬೇಕು. ತನ್ನಲ್ಲಿರುವಂತಹ ಸುಖ-ಭೋಗಗಳನ್ನು ಅವರಿಗೂ ಒದಗಿಸಿಕೊಡಬೇಕು. ಶ್ವೇತ ಛತ್ರ ಮತ್ತು ಆಜ್ಞೆ ಈ ಎರಡರಲ್ಲಿ ಮಾತ್ರ ಅವರಿಗಿಂತ ರಾಜನು ಅಧಿಕನಾಗಿರಬೇಕು.

12057026a ಪ್ರತ್ಯಕ್ಷಾ ಚ ಪರೋಕ್ಷಾ ಚ ವೃತ್ತಿಶ್ಚಾಸ್ಯ ಭವೇತ್ಸದಾ|

12057026c ಏವಂ ಕೃತ್ವಾ ನರೇಂದ್ರೋ ಹಿ ನ ಖೇದಮಿಹ ವಿಂದತಿ||

ಪ್ರತ್ಯಕ್ಷ್ಯದಲ್ಲಾಗಲೀ ಪರೋಕ್ಷದಲ್ಲಾಗಲೀ ಇವರೊಂದಿಗೆ ರಾಜನ ವರ್ತನೆಯು ಒಂದೇ ಸಮನಾಗಿರಬೇಕು. ಹೀಗೆ ಮಾಡಿದ ನರೇಂದ್ರನು ಇಲ್ಲಿ ಖೇದವನ್ನೇ ಹೊಂದುವುದಿಲ್ಲ.

12057027a ಸರ್ವಾತಿಶಂಕೀ ನೃಪತಿರ್ಯಶ್ಚ ಸರ್ವಹರೋ ಭವೇತ್|

12057027c ಸ ಕ್ಷಿಪ್ರಮನೃಜುರ್ಲುಬ್ಧಃ ಸ್ವಜನೇನೈವ ಬಾಧ್ಯತೇ||

ಎಲ್ಲರನ್ನೂ ಅತಿಯಾಗಿ ಶಂಕಿಸುವ ರಾಜನು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಕಪಟಿಯೂ ಲುಬ್ಧನೂ ಆದ ರಾಜನು ಬೇಗನೆ ಸ್ವಜನರ ಬಾಧೆಗೊಳಗಾಗುತ್ತಾನೆ.

12057028a ಶುಚಿಸ್ತು ಪೃಥಿವೀಪಾಲೋ ಲೋಕಚಿತ್ತಗ್ರಹೇ ರತಃ|

12057028c ನ ಪತತ್ಯರಿಭಿರ್ಗ್ರಸ್ತಃ ಪತಿತಶ್ಚಾವತಿಷ್ಠತೇ||

ಶುಚಿಯಾಗಿರುವ ಮತ್ತು ಪ್ರಜೆಗಳ ಚಿತ್ತವನ್ನು ಆಕರ್ಶಿಸುವುದರಲ್ಲಿ ನಿರತನಾಗಿರುವ ಪೃಥ್ವೀಪಾಲನು ಅರಿಗಳಿಂದ ಪತನಹೊಂದುವುದಿಲ್ಲ. ಒಂದುವೇಳೆ ಶತ್ರುಗಳಿಂದ ಕೆಳಗುರುಳಿಸಲ್ಪಟ್ಟರೂ ಬೇಗನೆ ರಾಜ್ಯವನ್ನು ಪಡೆದುಕೊಳ್ಳುತ್ತಾನೆ.

12057029a ಅಕ್ರೋಧನೋಽಥಾವ್ಯಸನೀ ಮೃದುದಂಡೋ ಜಿತೇಂದ್ರಿಯಃ|

12057029c ರಾಜಾ ಭವತಿ ಭೂತಾನಾಂ ವಿಶ್ವಾಸ್ಯೋ ಹಿಮವಾನಿವ||

ಕ್ರೋಧವಿಲ್ಲದ, ವ್ಯಸನಗಳಿಲ್ಲದ, ಮೃದುವಾಗಿ ಶಿಕ್ಷಿಸುವ, ಜಿತೇಂದ್ರಿಯನಾದ ರಾಜನು ಹಿಮವತ್ಪರ್ವತದಂತೆ ಪ್ರಜೆಗಳ ವಿಶ್ವಾಸವನ್ನು ಗಳಿಸುತ್ತಾನೆ.

12057030a ಪ್ರಾಜ್ಞೋ ನ್ಯಾಯಗುಣೋಪೇತಃ ಪರರಂಧ್ರೇಷು ತತ್ಪರಃ|

12057030c ಸುದರ್ಶಃ ಸರ್ವವರ್ಣಾನಾಂ ನಯಾಪನಯವಿತ್ತಥಾ||

12057031a ಕ್ಷಿಪ್ರಕಾರೀ ಜಿತಕ್ರೋಧಃ ಸುಪ್ರಸಾದೋ ಮಹಾಮನಾಃ|

12057031c ಅರೋಗಪ್ರಕೃತಿರ್ಯುಕ್ತಃ ಕ್ರಿಯಾವಾನವಿಕತ್ಥನಃ||

12057032a ಆರಬ್ಧಾನ್ಯೇವ ಕಾರ್ಯಾಣಿ ನ ಪರ್ಯವಸಿತಾನಿ ಚ|

12057032c ಯಸ್ಯ ರಾಜ್ಞಃ ಪ್ರದೃಶ್ಯಂತೇ ಸ ರಾಜಾ ರಾಜಸತ್ತಮಃ||

ಪ್ರಾಜ್ಞನೂ, ನ್ಯಾಯಗುಣೋಪೇತನೂ, ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಳ್ಳುವುದರಲ್ಲಿ ತತ್ಪರನಾದವನೂ, ಸರ್ವವರ್ಣದವರನ್ನೂ ಚೆನ್ನಾಗಿ ನೋಡಿಕೊಳ್ಳುವವನೂ, ಸುನೀತಿ-ದುರ್ನೀತಿಗಳನ್ನು ಅರಿತವನೂ, ಕಾರ್ಯಗಳನ್ನು ಕ್ಷಿಪ್ರವಾಗಿ ಪೂರೈಸುವವನೂ, ಕ್ರೋಧವನ್ನು ಗೆದ್ದವನೂ, ಪ್ರಸನ್ನನೂ, ವಿಶಾಲಹೃದಯಿಯೂ, ಅರೋಗಪ್ರಕೃತಿಯುಳ್ಳವನೂ, ಕ್ರಿಯಾಶೀಲನೂ, ಆತ್ಮಪ್ರಶಂಸೆ ಮಾಡಿಕೊಳ್ಳದವನೂ, ಆರಂಭಿಸಿದ ಕಾರ್ಯಗಳನ್ನು ಮುಗಿಸುವ ರಾಜನೆಂದು ತೋರಿಸಿಕೊಡುವವನೂ ಆದ ರಾಜನು ಸರ್ವಶ್ರೇಷ್ಠ ರಾಜನಾಗುತ್ತಾನೆ.

12057033a ಪುತ್ರಾ ಇವ ಪಿತುರ್ಗೇಹೇ ವಿಷಯೇ ಯಸ್ಯ ಮಾನವಾಃ|

12057033c ನಿರ್ಭಯಾ ವಿಚರಿಷ್ಯಂತಿ ಸ ರಾಜಾ ರಾಜಸತ್ತಮಃ||

ತಂದೆಯ ಮನೆಯಲ್ಲಿ ಮಕ್ಕಳು ಹೇಗೋ ಹಾಗೆ ಯಾರ ರಾಜ್ಯದಲ್ಲಿ ಪ್ರಜೆಗಳು ನಿರ್ಭಯರಾಗಿ ಜೀವನವನ್ನು ನಡೆಸುತ್ತಿರುತ್ತಾರೋ ಆ ರಾಜನು ಸರ್ವಶ್ರೇಷ್ಠ ರಾಜನೆನಿಸಿಕೊಳ್ಳುತ್ತಾನೆ.

12057034a ಅಗೂಢವಿಭವಾ ಯಸ್ಯ ಪೌರಾ ರಾಷ್ಟ್ರನಿವಾಸಿನಃ|

12057034c ನಯಾಪನಯವೇತ್ತಾರಃ ಸ ರಾಜಾ ರಾಜಸತ್ತಮಃ||

ಯಾರ ರಾಷ್ಟ್ರದಲ್ಲಿ ವಾಸಿಸಿರುವ ಪ್ರಜೆಗಳು ತಮ್ಮಲ್ಲಿರುವ ವೈಭವವನ್ನು ಬಹಿರಂಗವಾಗಿಯೇ ತೋರಿಸಿಕೊಳ್ಳುತ್ತಾರೆಯೋ ಮತ್ತು ನ್ಯಾಯ-ಅನ್ಯಾಯಗಳನ್ನು ತಿಳಿದಿರುತ್ತಾರೋ ಆ ರಾಜನೇ ರಾಜಸತ್ತಮನು.

12057035a ಸ್ವಕರ್ಮನಿರತಾ ಯಸ್ಯ ಜನಾ ವಿಷಯವಾಸಿನಃ|

12057035c ಅಸಂಘಾತರತಾ ದಾಂತಾಃ ಪಾಲ್ಯಮಾನಾ ಯಥಾವಿಧಿ||

12057036a ವಶ್ಯಾ ನೇಯಾ ವಿನೀತಾಶ್ಚ ನ ಚ ಸಂಘರ್ಷಶೀಲಿನಃ|

12057036c ವಿಷಯೇ ದಾನರುಚಯೋ ನರಾ ಯಸ್ಯ ಸ ಪಾರ್ಥಿವಃ||

ಯಾರ ರಾಜ್ಯದಲ್ಲಿ ವಾಸಿಸಿರುವ ಜನರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿ, ಪರಸ್ಪರರನ್ನು ದ್ವೇಷಿಸದೇ, ಜಿತೇಂದ್ರಿಯರಾಗಿ ಯಥಾವಿಧಿಯಾಗಿ ಪರಿಪಾಲಿಸಲ್ಪಟ್ಟಿರುವರೋ, ನ್ಯಾಯದ ವಶದಲ್ಲಿದ್ದುಕೊಂಡು ವಿನೀತರಾಗಿ, ಸಂಘರ್ಷಶೀಲರಾಗಿರದೇ ಇರುತ್ತಾರೋ, ಯಾರ ರಾಜ್ಯದಲ್ಲಿ ಜನರು ದಾನಮಾಡುವುದರಲ್ಲಿ ರುಚಿಯನ್ನಿಟ್ಟುಕೊಂಡಿರುತ್ತಾರೋ ಅವನೇ ಪಾರ್ಥಿವನೆನಿಸಿಕೊಳ್ಳುತ್ತಾನೆ.

12057037a ನ ಯಸ್ಯ ಕೂಟಕಪಟಂ ನ ಮಾಯಾ ನ ಚ ಮತ್ಸರಃ|

12057037c ವಿಷಯೇ ಭೂಮಿಪಾಲಸ್ಯ ತಸ್ಯ ಧರ್ಮಃ ಸನಾತನಃ||

ಯಾವ ಭೂಮಿಪಾಲನ ರಾಜ್ಯದಲ್ಲಿ ಕೂಟ (ಸುಳ್ಳು), ಕಪಟ, ಮಾಯೆ, ಮತ್ಸರಗಳಿಲ್ಲವೋ ಅವನ ಧರ್ಮವೇ ಸನಾತನ ಧರ್ಮವು.

12057038a ಯಃ ಸತ್ಕರೋತಿ ಜ್ಞಾನಾನಿ ನೇಯಃ ಪೌರಹಿತೇ ರತಃ|

12057038c ಸತಾಂ ಧರ್ಮಾನುಗಸ್ತ್ಯಾಗೀ ಸ ರಾಜಾ ರಾಜ್ಯಮರ್ಹತಿ||

ಯಾವ ರಾಜನು ಜ್ಞಾನ-ಜ್ಞಾನಿಗಳನ್ನು ಸತ್ಕರಿಸುತ್ತಾನೋ, ಪೌರರ ಹಿತದಲ್ಲಿ ನಿರತನಾಗಿರುತ್ತಾನೋ ಆ ರಾಜನು ರಾಜ್ಯಕ್ಕೆ ಅರ್ಹನಾಗುತ್ತಾನೆ.

12057039a ಯಸ್ಯ ಚಾರಶ್ಚ ಮಂತ್ರಶ್ಚ ನಿತ್ಯಂ ಚೈವ ಕೃತಾಕೃತೇ|

12057039c ನ ಜ್ಞಾಯತೇ ಹಿ ರಿಪುಭಿಃ ಸ ರಾಜಾ ರಾಜ್ಯಮರ್ಹತಿ||

ಯಾವ ರಾಜನು ನಿತ್ಯವೂ ಮಾಡುವ ಗೂಢಾಚರಿ ಮತ್ತು ಗುಪ್ತ ಸಮಾಲೋಚನೆಗಳು ಶತ್ರುಗಳಿಗೆ ತಿಳಿಯುವುದಿಲ್ಲವೋ ಅಂಥಹ ರಾಜನೇ ರಾಜ್ಯಭಾರಮಾಡಲು ಅರ್ಹನೆನಿಸಿಕೊಳ್ಳುತ್ತಾನೆ.

12057040a ಶ್ಲೋಕಶ್ಚಾಯಂ ಪುರಾ ಗೀತೋ ಭಾರ್ಗವೇಣ ಮಹಾತ್ಮನಾ|

12057040c ಆಖ್ಯಾತೇ ರಾಮಚರಿತೇ ನೃಪತಿಂ ಪ್ರತಿ ಭಾರತ||

ಭಾರತ! ಹಿಂದೆ ಮಹಾತ್ಮ ಭಾರ್ಗವ ರಾಮನು ನೃಪತಿಯ ಕುರಿತಾಗಿ ಹೇಳಿದ ಗೀತೆಯ ಈ ಶ್ಲೋಕವನ್ನು ಕೇಳು.

12057041a ರಾಜಾನಂ ಪ್ರಥಮಂ ವಿಂದೇತ್ತತೋ ಭಾರ್ಯಾಂ ತತೋ ಧನಮ್|

12057041c ರಾಜನ್ಯಸತಿ ಲೋಕಸ್ಯ ಕುತೋ ಭಾರ್ಯಾ ಕುತೋ ಧನಮ್||

“ಮೊದಲು ರಾಜನನ್ನು ಪಡೆದುಕೊಳ್ಳಬೇಕು. ಅನಂತರ ಪತ್ನಿ ಮತ್ತು ಧನಗಳನ್ನು ಪಡೆದುಕೊಳ್ಳಬೇಕು. ಲೋಕದಲ್ಲಿ ರಾಜನೇ ಇಲ್ಲದಿದ್ದರೆ ಪತ್ನಿಯು ಏಕೆ? ಧನವು ಏಕೆ?”

12057042a ತದ್ರಾಜನ್ರಾಜಸಿಂಹಾನಾಂ ನಾನ್ಯೋ ಧರ್ಮಃ ಸನಾತನಃ|

12057042c ಋತೇ ರಕ್ಷಾಂ ಸುವಿಸ್ಪಷ್ಟಾಂ ರಕ್ಷಾ ಲೋಕಸ್ಯ ಧಾರಣಮ್||

ರಾಜನ್! ಆದುದರಿಂದ ರಾಜಸಿಂಹರಿಗೆ ಸ್ಪಷ್ಟವಾಗಿ ಲೋಕದ ಧಾರಣೆಯನ್ನು ರಕ್ಷಿಸುವುದನ್ನು ಬಿಟ್ಟು ಬೇರೆ ಯಾವ ಸನಾತನ ಧರ್ಮವೂ ಇರುವುದಿಲ್ಲ.

12057043a ಪ್ರಾಚೇತಸೇನ ಮನುನಾ ಶ್ಲೋಕೌ ಚೇಮಾವುದಾಹೃತೌ|

12057043c ರಾಜಧರ್ಮೇಷು ರಾಜೇಂದ್ರ ತಾವಿಹೈಕಮನಾಃ ಶೃಣು||

ಪ್ರಚೇತಸನ ಮಗ ಮನುವು ರಾಜಧರ್ಮದ ಕುರಿತು ಈ ಎರಡು ಶ್ಲೋಕಗಳನ್ನು ಹೇಳಿದ್ದಾನೆ. ರಾಜೇಂದ್ರ! ಅವೆರಡನ್ನೂ ಏಕಾಗ್ರಮನಸ್ಸಿನಿಂದ ಕೇಳು.

12057044a ಷಡೇತಾನ್ಪುರುಷೋ ಜಹ್ಯಾದ್ಭಿನ್ನಾಂ ನಾವಮಿವಾರ್ಣವೇ|

12057044c ಅಪ್ರವಕ್ತಾರಮಾಚಾರ್ಯಮನಧೀಯಾನಮೃತ್ವಿಜಮ್||

12057045a ಅರಕ್ಷಿತಾರಂ ರಾಜಾನಂ ಭಾರ್ಯಾಂ ಚಾಪ್ರಿಯವಾದಿನೀಮ್|

12057045c ಗ್ರಾಮಕಾಮಂ ಚ ಗೋಪಾಲಂ ವನಕಾಮಂ ಚ ನಾಪಿತಮ್||

“ಸಮುದ್ರದಲ್ಲಿ ಒಡೆದುಹೋದ ನಾವೆಯನ್ನು ತ್ಯಜಿಸುವಂತೆ ಈ ಆರು ಪುರುಷರನ್ನು ತ್ಯಜಿಸಬೇಕು: ಉಪದೇಶಿಸದ ಆಚಾರ್ಯ, ವೇದಾಧ್ಯಯನ ಮಾಡಿರದ ಋತ್ವಿಜ, ರಕ್ಷಿಸದೇ ಇರುವ ರಾಜ, ಅಪ್ರಿಯವಾಗಿ ಮಾತನಾಡುವ ಪತ್ನಿ, ಗ್ರಾಮದಲ್ಲಿಯೇ ಇರುವ ಗೋಪಾಲಕ ಮತ್ತು ಅರಣ್ಯದಲ್ಲಿಯೇ ವಾಸಿಸಲಿಚ್ಛಿಸುವ ನಾಪಿತ ಅಥವಾ ಕ್ಷೌರಕ.””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸಪ್ತಪಂಚಶತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಐವತ್ತೇಳನೇ ಅಧ್ಯಾಯವು.

[1] ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ ಮತ್ತು ಬಲಗಳೇ ರಾಜ್ಯದ ಸಪ್ತಾಂಗಗಳು.

[2] ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ, ಮತ್ತು ಸಮಾಶ್ರಯಗಳು – ಇವು ಆರು ವಿಷಯಗಳು.

[3] ಮಂತ್ರಿ, ರಾಷ್ಟ್ರ, ದುರ್ಗ, ಕೋಶ ಮತ್ತು ದಂಡ – ಈ ಐದನ್ನು ಪ್ರಕೃತಿ ಎಂದು ಕರೆಯುತ್ತಾರೆ. ತನ್ನ ಕಡೆಯ ಈ ಐದು ಮತ್ತು ಶತ್ರುಗಳ ಕಡೆಯ ಈ ಐದು ಸೇರಿ ದಶವರ್ಗವಾಗುತ್ತದೆ.

Comments are closed.