ಶಾಂತಿ ಪರ್ವ: ರಾಜಧರ್ಮ ಪರ್ವ
೩೫
12035001 ಯುಧಿಷ್ಠಿರ ಉವಾಚ
12035001a ಕಾನಿ ಕೃತ್ವೇಹ ಕರ್ಮಾಣಿ ಪ್ರಾಯಶ್ಚಿತ್ತೀಯತೇ ನರಃ|
12035001c ಕಿಂ ಕೃತ್ವಾ ಚೈವ ಮುಚ್ಯೇತ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಯಾವಕರ್ಮಗಳನ್ನು ಮಾಡಿ ಮನುಷ್ಯನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು? ಯಾವುದನ್ನು ಮಾಡುವುದರಿಂದ ಅವನಿಗೆ ಪಾಪದ ಬಿಡುಗಡೆಯಾಗುತ್ತದೆ? ಅದನ್ನು ನನಗೆ ಹೇಳು!”
12035002 ವ್ಯಾಸ ಉವಾಚ
12035002a ಅಕುರ್ವನ್ವಿಹಿತಂ ಕರ್ಮ ಪ್ರತಿಷಿದ್ಧಾನಿ ಚಾಚರನ್|
12035002c ಪ್ರಾಯಶ್ಚಿತ್ತೀಯತೇ ಹ್ಯೇವಂ ನರೋ ಮಿಥ್ಯಾ ಚ ವರ್ತಯನ್||
ವ್ಯಾಸನು ಹೇಳಿದನು: “ವಿಹಿತ ಕರ್ಮಗಳನ್ನು ಮಾಡದಿರುವವನೂ, ಪ್ರತಿಷಿದ್ಧ ಕರ್ಮಗಳನ್ನು ಮಾಡುವವನೂ, ಸುಳ್ಳಾಗಿ ನಡೆದುಕೊಳ್ಳುವವನೂ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು.
12035003a ಸೂರ್ಯೇಣಾಭ್ಯುದಿತೋ ಯಶ್ಚ ಬ್ರಹ್ಮಚಾರೀ ಭವತ್ಯುತ|
12035003c ತಥಾ ಸೂರ್ಯಾಭಿನಿರ್ಮುಕ್ತಃ ಕುನಖೀ ಶ್ಯಾವದನ್ನಪಿ||
ಸೂರ್ಯೋದಯ-ಸೂರ್ಯಾಸ್ತಮ ಸಮಯಗಳಲ್ಲಿ ನಿದ್ರೆಮಾಡುವ ಬ್ರಹ್ಮಚಾರಿಯೂ, ಹಾಗೆಯೇ ಉಗುರುಗಳು ಕಪ್ಪಾಗಿರುವವನೂ, ಹಲ್ಲುಗಳು ಕಪ್ಪಾಗಿರುವವನೂ ಪ್ರಾಯಶ್ಚಿತ್ತಕ್ಕೆ ಭಾಗಿಯಾಗುತ್ತಾನೆ.
12035004a ಪರಿವಿತ್ತಿಃ ಪರಿವೇತ್ತಾ ಬ್ರಹ್ಮಘ್ನೋ ಯಶ್ಚ ಕುತ್ಸಕಃ|
12035004c ದಿಧಿಷೂಪತಿಸ್ತಥಾ ಯಃ ಸ್ಯಾದಗ್ರೇದಿಧಿಷುರೇವ ಚ||
12035005a ಅವಕೀರ್ಣೀ ಭವೇದ್ಯಶ್ಚ ದ್ವಿಜಾತಿವಧಕಸ್ತಥಾ|
12035005c ಅತೀರ್ಥೇ ಬ್ರಹ್ಮಣಸ್ತ್ಯಾಗೀ ತೀರ್ಥೇ ಚಾಪ್ರತಿಪಾದಕಃ||
12035006a ಗ್ರಾಮಯಾಜೀ ಚ ಕೌಂತೇಯ ರಾಜ್ಞಶ್ಚ ಪರಿವಿಕ್ರಯೀ|
12035006c ಶೂದ್ರಸ್ತ್ರೀವಧಕೋ ಯಶ್ಚ ಪೂರ್ವಃ ಪೂರ್ವಸ್ತು ಗರ್ಹಿತಃ||
ತಮ್ಮನಿಗೆ ವಿವಾಹವಾದರೂ ವಿವಾಹಿತನಾದಗೇ ಇರುವ ಅಣ್ಣ, ಅಣ್ಣನಿಗೆ ಮದುವೆಯಾಗುವ ಮೊದಲೇ ವಿವಾಹವಾದ ತಮ್ಮ, ಬ್ರಹ್ಮಹತ್ಯೆ ಮಾಡಿದವನು, ಇತರರನ್ನು ನಿಂದೆಮಾಡಿದವನು, ಎರಡನೆಯ ಮದುವೆ ಮಾಡಿಕೊಂಡವಳು, ಉಪಪತಿಯನ್ನಿಟ್ಟುಕೊಂಡವಳು, ಮತ್ತು ಬ್ರಾಹ್ಮಣನನ್ನು ಉಪಪತಿಯನ್ನಿಟ್ಟುಕೊಂಡವಳು, ವ್ರತಭಂಗನಾದ ಬ್ರಹ್ಮಚಾರಿ, ದ್ವಿಜರನ್ನು ಕೊಂದವನು, ಅಪಾತ್ರರಲ್ಲಿ ದಾನಮಾಡಿದವನು, ಸತ್ಪಾತ್ರರಲ್ಲಿ ದಾನಮಾಡದವನು, ಗ್ರಾಮಗಳನ್ನು ನಾಶಗೊಳಿಸಿದವನು, ಮಾಂಸವನ್ನು ಮಾರುವವನು, ಅಗ್ನಿಯನ್ನು ತಿರಸ್ಕರಿಸಿದವನು, ವೇದವನ್ನು ಮಾರುವವನು, ಶೂದ್ರರು ಅಥವಾ ಸ್ತ್ರೀಯರನ್ನು ವಧಿಸಿದವನು - ಇವರಲ್ಲಿ ಮೊದಲಿನವರು ನಂತರದವರಿಗಿಂಥ ಹೆಚ್ಚು ಪಾಪಿಷ್ಠರಾಗಿರುತ್ತಾರೆ.
12035007a ವೃಥಾಪಶುಸಮಾಲಂಭೀ ವನದಾಹಸ್ಯ ಕಾರಕಃ|
12035007c ಅನೃತೇನೋಪಚರ್ತಾ ಚ ಪ್ರತಿರೋದ್ಧಾ ಗುರೋಸ್ತಥಾ||
12035008a ಯಶ್ಚಾಗ್ನೀನಪವಿಧ್ಯೇತ ತಥೈವ ಬ್ರಹ್ಮವಿಕ್ರಯೀ|
12035008c ಏತಾನ್ಯೇನಾಂಸಿ ಸರ್ವಾಣಿ ವ್ಯುತ್ಕ್ರಾಂತಸಮಯಶ್ಚ ಯಃ||
ಪಶುಗಳನ್ನು ವಧಿಸಿದವನು, ವನಕ್ಕೆ ಬೆಂಕಿಹಚ್ಚಿಸಿದವನು, ಸುಳ್ಳು ಹೇಳಿಕೊಂಡು ಜೀವನ ನಡೆಸುವವನು, ಗುರುವನ್ನು ಅಪಮಾನಗೊಳಿಸಿದವನು, ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿದವನು, ಸದಾಚಾರ-ಮರ್ಯಾದೆಗಳನ್ನು ಉಲ್ಲಂಘಿಸಿದವನು – ಇವರೆಲ್ಲರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ.
12035009a ಅಕಾರ್ಯಾಣ್ಯಪಿ ವಕ್ಷ್ಯಾಮಿ ಯಾನಿ ತಾನಿ ನಿಬೋಧ ಮೇ|
12035009c ಲೋಕವೇದವಿರುದ್ಧಾನಿ ತಾನ್ಯೇಕಾಗ್ರಮನಾಃ ಶೃಣು||
ಲೋಕಕ್ಕೂ ವೇದಕ್ಕೂ ವಿರುದ್ಧವಾಗಿರುವ ಮತ್ತು ಮಾಡಬಾರದಿರುವ ಕಾರ್ಯಗಳ ಕುರಿತು ಹೇಳುತ್ತೇನೆ. ಅವುಗಳನ್ನು ಏಕಾಗ್ರಮನಸ್ಸಿನಿಂದ ಕೇಳು!
12035010a ಸ್ವಧರ್ಮಸ್ಯ ಪರಿತ್ಯಾಗಃ ಪರಧರ್ಮಸ್ಯ ಚ ಕ್ರಿಯಾ|
12035010c ಅಯಾಜ್ಯಯಾಜನಂ ಚೈವ ತಥಾಭಕ್ಷ್ಯಸ್ಯ ಭಕ್ಷಣಮ್||
12035011a ಶರಣಾಗತಸಂತ್ಯಾಗೋ ಭೃತ್ಯಸ್ಯಾಭರಣಂ ತಥಾ|
12035011c ರಸಾನಾಂ ವಿಕ್ರಯಶ್ಚಾಪಿ ತಿರ್ಯಗ್ಯೋನಿವಧಸ್ತಥಾ||
12035012a ಆಧಾನಾದೀನಿ ಕರ್ಮಾಣಿ ಶಕ್ತಿಮಾನ್ನ ಕರೋತಿ ಯಃ|
12035012c ಅಪ್ರಯಚ್ಚಂಶ್ಚ ಸರ್ವಾಣಿ ನಿತ್ಯಂ ದೇಯಾನಿ ಭಾರತ||
12035013a ದಕ್ಷಿಣಾನಾಮದಾನಂ ಚ ಬ್ರಾಹ್ಮಣಸ್ವಾಭಿಮರ್ಶನಮ್|
12035013c ಸರ್ವಾಣ್ಯೇತಾನ್ಯಕಾರ್ಯಾಣಿ ಪ್ರಾಹುರ್ಧರ್ಮವಿದೋ ಜನಾಃ||
ಸ್ವಧರ್ಮವನ್ನು ಬಿಡುವುದು, ಪರಧರ್ಮವನ್ನು ಆಚರಿಸುವುದು, ಯಜ್ಞವನ್ನು ಮಾಡಿಸಬಾರದವನಿಂದ ಯಜ್ಞಮಾಡಿಸುವುದು, ತಿನ್ನ ಬಾರದವುಗಳನ್ನು ತಿನ್ನುವುದು, ಶರಣಾಗತರಾದವನ್ನು ತೊರೆಯುವುದು, ಸೇವಕರ ಭರಣ-ಪೋಷಣೆ ಮಾಡದಿರುವುದು, ಉಪ್ಪು-ಬೆಲ್ಲ ಮುಂತಾದವುಗಳನ್ನು ಮಾರುವುದು, ಪಶು-ಪಕ್ಷಿಗಳನ್ನು ಕೊಲ್ಲುವುದು, ಶಕ್ತಿಯಿದ್ದರೂ ಆಧಾನವೇ ಮೊದಲಾದ ಕರ್ಮಗಳನ್ನು ಮಾಡದೇ ಇರುವುದು, ನಿತ್ಯಕರ್ಮಗಳಾದ ಗೋಗ್ರಾಸ ನೀಡುವುದು ಮುಂತಾದವುಗಳನ್ನು ಮಾಡದೇ ಇರುವುದು, ಬ್ರಾಹ್ಮಣರಿಗೆ ದಕ್ಷಿಣೆಗಳನ್ನು ಕೊಡದೇ ಇರುವುದು, ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದು – ಇವುಗಳು ಮಾಡಬಾರದ ಕರ್ಮಗಳು ಎಂದು ಧರ್ಮವನ್ನು ತಿಳಿದುಕೊಂಡಿರುವವರು ಹೇಳುತ್ತಾರೆ.
12035014a ಪಿತ್ರಾ ವಿಭಜತೇ ಪುತ್ರೋ ಯಶ್ಚ ಸ್ಯಾದ್ಗುರುತಲ್ಪಗಃ|
12035014c ಅಪ್ರಜಾಯನ್ನಧರ್ಮೇಣ ಭವತ್ಯಾಧರ್ಮಿಕೋ ಜನಃ||
ತಂದೆಯಿಂದ ಜಗಳವಾಡಿ ಬೇರೆಯಾಗುವ ಮಗ, ಗುರುಪತ್ನಿಯೊಡನೆ ಮಲಗಿದ ಶಿಷ್ಯ, ಮತ್ತು ಅಧರ್ಮದಿಂದ ಮಕ್ಕಳನ್ನು ಪಡೆಯದೇ ಇರುವವನು - ಇವರು ಅಧಾರ್ಮಿಕ ಜನರು.
12035015a ಉಕ್ತಾನ್ಯೇತಾನಿ ಕರ್ಮಾಣಿ ವಿಸ್ತರೇಣೇತರೇಣ ಚ|
12035015c ಯಾನಿ ಕುರ್ವನ್ನಕುರ್ವಂಶ್ಚ ಪ್ರಾಯಶ್ಚಿತ್ತೀಯತೇ ಜನಃ||
ಯಾವುದನ್ನು ಮಾಡುವುದರಿಂದ ಮತ್ತು ಮಾಡದೇ ಇರುವುದರಿಂದ ಜನರು ಪ್ರಾಯಶ್ಚಿತ್ತಕ್ಕೆ ಭಾಗಿಯಾಗುತ್ತಾರೆ ಎನ್ನುವುದನ್ನು ವಿಸ್ತಾರವಾಗಿ ಹೇಳಿದ್ದಾಯಿತು.
12035016a ಏತಾನ್ಯೇವ ತು ಕರ್ಮಾಣಿ ಕ್ರಿಯಮಾಣಾನಿ ಮಾನವಾನ್|
12035016c ಯೇಷು ಯೇಷು ನಿಮಿತ್ತೇಷು ನ ಲಿಂಪಂತ್ಯಥ ತಚ್ಚೃಣು||
ಈಗ ಮಾನವನು ಯಾವುದೇ ಕರ್ಮಗಳನ್ನು ಮಾಡಿದರೂ ಯಾವ ಕಾರಣಗಳಿಂದ ಅವನಿಗೆ ಪಾಪಗಳು ಅಂಟಿಕೊಳ್ಳುವುದಿಲ್ಲ ಎನ್ನುವುದನ್ನು ಕೇಳು.
12035017a ಪ್ರಗೃಹ್ಯ ಶಸ್ತ್ರಮಾಯಾಂತಮಪಿ ವೇದಾಂತಗಂ ರಣೇ|
12035017c ಜಿಘಾಂಸಂತಂ ನಿಹತ್ಯಾಜೌ ನ ತೇನ ಬ್ರಹ್ಮಹಾ ಭವೇತ್||
ವೇದಾಂತಿ ಬ್ರಾಹ್ಮಣನು ರಣದಲ್ಲಿ ಶಸ್ತ್ರವನ್ನು ಹಿಡಿದು ಕೊಲ್ಲಲು ಬಂದಾಗ ಅವನನ್ನು ಸಂಹರಿಸಿದರೆ ಬ್ರಹ್ಮಹತ್ಯಾ ದೋಷವು ತಗಲುವುದಿಲ್ಲ.
12035018a ಅಪಿ ಚಾಪ್ಯತ್ರ ಕೌಂತೇಯ ಮಂತ್ರೋ ವೇದೇಷು ಪಠ್ಯತೇ|
12035018c ವೇದಪ್ರಮಾಣವಿಹಿತಂ ತಂ ಧರ್ಮಂ ಪ್ರಬ್ರವೀಮಿ ತೇ||
ಕೌಂತೇಯ! ಇದರ ಕುರಿತಾಗಿ ವೇದದಲ್ಲಿ ಮಂತ್ರವೊಂದು ಹೇಳಲ್ಪಟ್ಟಿದೆ. ವೇದಪ್ರಮಾಣವಿಹಿತವಾದ ಆ ಧರ್ಮವನ್ನೇ ನಾನು ನಿನಗೆ ಹೇಳುತ್ತಿದ್ದೇನೆ.
12035019a ಅಪೇತಂ ಬ್ರಾಹ್ಮಣಂ ವೃತ್ತಾದ್ಯೋ ಹನ್ಯಾದಾತತಾಯಿನಮ್|
12035019c ನ ತೇನ ಬ್ರಹ್ಮಹಾ ಸ ಸ್ಯಾನ್ಮನ್ಯುಸ್ತಂ ಮನ್ಯುಮೃಚ್ಚತಿ||
ಬ್ರಾಹ್ಮಣೋಚಿತ ಕರ್ಮಗಳಿಂದ ಭ್ರಷ್ಟನಾಗಿರುವ ಆತತಾಯಿಯನ್ನು ಕೊಲ್ಲುವುದರಿಂದ ಬ್ರಹ್ಮಹಂತಕನಾಗುವುದಿಲ್ಲ. ಕ್ರೋಧವೇ ಕ್ರೋಧವನ್ನು ಎದುರಿಸುತ್ತದೆ.
12035020a ಪ್ರಾಣಾತ್ಯಯೇ ತಥಾಜ್ಞಾನಾದಾಚರನ್ಮದಿರಾಮಪಿ|
12035020c ಅಚೋದಿತೋ ಧರ್ಮಪರಃ ಪುನಃ ಸಂಸ್ಕಾರಮರ್ಹತಿ||
ಪ್ರಾಣಹೋಗುವ ಸಮಯದಲ್ಲಿ ಮತ್ತು ಹಾಗೆಯೇ ಅಜ್ಞಾನದಿಂದ ಮದ್ಯವನ್ನು ಸೇವಿಸಿದರೂ ಧರ್ಮಪರರ ಪ್ರಕಾರ ಅವರಿಗೆ ಪುನಃ ಸಂಸ್ಕಾರವಾಗಲೇಬೇಕು.
12035021a ಏತತ್ತೇ ಸರ್ವಮಾಖ್ಯಾತಂ ಕೌಂತೇಯಾಭಕ್ಷ್ಯಭಕ್ಷಣಮ್|
12035021c ಪ್ರಾಯಶ್ಚಿತ್ತವಿಧಾನೇನ ಸರ್ವಮೇತೇನ ಶುಧ್ಯತಿ||
ಕೌಂತೇಯ! ತಿನ್ನಬಹುದಾದುದರ ಮತ್ತು ತಿನ್ನಬಾರದ ವಿಷಯಗಳ ಕುರಿತು ಎಲ್ಲವನ್ನೂ ಹೇಳಿದ್ದಾಯಿತು. ಪ್ರಾಯಶ್ಚಿತ್ತ ವಿಧಾನದಿಂದ ಈ ಎಲ್ಲ ಪಾಪಗಳಿಂದಲೂ ಶುದ್ಧಿಯಾಗುತ್ತದೆ.
12035022a ಗುರುತಲ್ಪಂ ಹಿ ಗುರ್ವರ್ಥೇ ನ ದೂಷಯತಿ ಮಾನವಮ್|
12035022c ಉದ್ದಾಲಕಃ ಶ್ವೇತಕೇತುಂ ಜನಯಾಮಾಸ ಶಿಷ್ಯತಃ||
ಗುರುವಿನ ಕಾರ್ಯಸಿದ್ಧಿಗಾಗಿ ಗುರುಪತ್ನಿಯೊಡನೆ ಸಂಭೋಗಿಸಿದರೆ ಮನುಷ್ಯನು ದೂಷಿತನಾಗುವುದಿಲ್ಲ. ಉದ್ದಾಲಕನು ಶ್ವೇತಕೇತುವನ್ನು ಶಿಷ್ಯನಿಂದಲೇ ಪಡೆದುಕೊಂಡನು.
12035023a ಸ್ತೇಯಂ ಕುರ್ವಂಸ್ತು ಗುರ್ವರ್ಥಮಾಪತ್ಸು ನ ನಿಬಧ್ಯತೇ|
12035023c ಬಹುಶಃ ಕಾಮಕಾರೇಣ ನ ಚೇದ್ಯಃ ಸಂಪ್ರವರ್ತತೇ||
12035024a ಅನ್ಯತ್ರ ಬ್ರಾಹ್ಮಣಸ್ವೇಭ್ಯ ಆದದಾನೋ ನ ದುಷ್ಯತಿ|
12035024c ಸ್ವಯಮಪ್ರಾಶಿತಾ ಯಶ್ಚ ನ ಸ ಪಾಪೇನ ಲಿಪ್ಯತೇ||
ಗುರುವಿಗಾಗಿ ಮತ್ತು ಆಪತ್ತು ಬಂದಾಗ ಕಳ್ಳತನ ಮಾಡುವುದು ನಿಷೇಧವಲ್ಲ. ಮನಸ್ಸಿನಲ್ಲಿ ಯಾವುದೇ ಕಾಮನೆಗಳನ್ನು ಇಟ್ಟುಕೊಳ್ಳದೇ, ಪುನಃ ಪುನಃ ಕಳ್ಳತನ ಮಾಡದೇ, ಬ್ರಾಹ್ಮಣರದಲ್ಲದವುಗಳನ್ನು ಕಳ್ಳತನ ಮಾಡುವುದರಿಂದ ಮತ್ತು ಕಳ್ಳತನ ಮಾಡಿದುದನ್ನು ಇತರರಿಗೆ ನೀಡುವುದರಿಂದ ದೋಷವೆನಿಸುವುದಿಲ್ಲ. ಕದಿದ ವಸ್ತುವನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಳದೇ ಇರುವವನೂ ಪಾಪಲಿಪ್ತನಾಗುವುದಿಲ್ಲ.
12035025a ಪ್ರಾಣತ್ರಾಣೇಽನೃತಂ ವಾಚ್ಯಮಾತ್ಮನೋ ವಾ ಪರಸ್ಯ ವಾ|
12035025c ಗುರ್ವರ್ಥೇ ಸ್ತ್ರೀಷು ಚೈವ ಸ್ಯಾದ್ವಿವಾಹಕರಣೇಷು ಚ||
ತನ್ನ ಅಥವಾ ಇತರರ ಪ್ರಾಣಾಪತ್ತಿನ ಕಾಲದಲ್ಲಿ, ಗುರುವಿಗಾಗಿ, ಸ್ತ್ರೀಯರಲ್ಲಿ ಮತ್ತು ವಿವಾಹಮಾಡಿಸುವಲ್ಲಿ ಸುಳ್ಳುಹೇಳುವವನು ದೋಷಿಯಾಗುವುದಿಲ್ಲ.
12035026a ನಾವರ್ತತೇ ವ್ರತಂ ಸ್ವಪ್ನೇ ಶುಕ್ರಮೋಕ್ಷೇ ಕಥಂ ಚನ|
12035026c ಆಜ್ಯಹೋಮಃ ಸಮಿದ್ಧೇಽಗ್ನೌ ಪ್ರಾಯಶ್ಚಿತ್ತಂ ವಿಧೀಯತೇ||
ಸ್ವಪ್ನದಲ್ಲಿ ವೀರ್ಯಸ್ಖಲನವಾದರೆ ಬ್ರಹ್ಮಚಾರಿಯ ವ್ರತದಲ್ಲಿ ಭಂಗವಾಯಿತೆನಿಸುವುದಿಲ್ಲ. ಅದಕ್ಕೆ ಅಗ್ನಿಯಲ್ಲಿ ಸಮಿತ್ತು ಮತ್ತು ತುಪ್ಪದ ಹೋಮವನ್ನೇ ಪ್ರಾಯಶ್ಚಿತ್ತವೆಂದು ಹೇಳುತ್ತಾರೆ.
12035027a ಪಾರಿವಿತ್ತ್ಯಂ ಚ ಪತಿತೇ ನಾಸ್ತಿ ಪ್ರವ್ರಜಿತೇ ತಥಾ|
12035027c ಭಿಕ್ಷಿತೇ ಪಾರದಾರ್ಯಂ ಚ ನ ತದ್ಧರ್ಮಸ್ಯ ದೂಷಕಮ್||
ಅಣ್ಣನು ಪತಿತನಾಗಿದ್ದರೆ ಅಥವಾ ಪರಿವ್ರಾಜಕನಾಗಿದ್ದರೆ ತಮ್ಮನು ಮೊದಲು ವಿವಾಹಮಾಡಿಕೊಂಡರೂ ದೂಷಿತನಾಗುವುದಿಲ್ಲ. ಹಾಗೆಯೇ ಇನ್ನೊಬ್ಬನ ಸ್ತ್ರೀಯು ಸಂತಾನಕ್ಕಾಗಿ ಭಿಕ್ಷೆ ಬೇಡಿದಾಗ ಅವಳೊಡನೆ ಸಂಗಮಾಡಿದರೆ ಅದು ಧರ್ಮದ ದೂಷಕವೆನಿಸಿಕೊಳ್ಳುವುದಿಲ್ಲ.
12035028a ವೃಥಾಪಶುಸಮಾಲಂಭಂ ನೈವ ಕುರ್ಯಾನ್ನ ಕಾರಯೇತ್|
12035028c ಅನುಗ್ರಹಃ ಪಶೂಣಾಂ ಹಿ ಸಂಸ್ಕಾರೋ ವಿಧಿಚೋದಿತಃ||
ಸುಮ್ಮ ಸುಮ್ಮನೇ ವ್ಯರ್ಥವಾಗಿ ಪಶುವಧೆಯನ್ನು ಮಾಡಬಾರದು. ವಿಧಿವತ್ತಾಗಿ ಸಂಸ್ಕಾರಸಹಿತವಾಗಿ ಪಶುವಧೆಯನ್ನು ಮಾಡಿದರೆ ಅದು ಪಶುಗಳಿಗೆ ಅನುಗ್ರಹವನ್ನು ಮಾಡಿದ ಹಾಗೆಯೇ ಆಗುತ್ತದೆ.
12035029a ಅನರ್ಹೇ ಬ್ರಾಹ್ಮಣೇ ದತ್ತಮಜ್ಞಾನಾತ್ತನ್ನ ದೂಷಕಮ್|
12035029c ಸಕಾರಣಂ ತಥಾ ತೀರ್ಥೇಽತೀರ್ಥೇ ವಾ ಪ್ರತಿಪಾದನಮ್||
ಅಜ್ಞಾನದಿಂದ ಅನರ್ಹ ಬ್ರಾಹ್ಮಣನಿಗೆ ದಾನಮಾದಡಿದರೆ ಅದರಲ್ಲಿ ದೋಷವಿಲ್ಲ. ಅಪಾತ್ರನೆಂದು ತಿಳಿದೂ ದಾನಮಾಡಬಾರದು. ಅಥವಾ ಸತ್ಪಾತ್ರನೆಂದು ತಿಳಿದೂ ದಾನಕೊಡದೇ ಇರಬಾರದು.
12035030a ಸ್ತ್ರಿಯಸ್ತಥಾಪಚಾರಿಣ್ಯೋ ನಿಷ್ಕೃತಿಃ ಸ್ಯಾದದೂಷಿಕಾ|
12035030c ಅಪಿ ಸಾ ಪೂಯತೇ ತೇನ ನ ತು ಭರ್ತಾ ಪ್ರದುಷ್ಯತೇ||
ವ್ಯಭಿಚಾರಿಣಿಯಾದ ಪತ್ನಿಯನ್ನು ತಿರಸ್ಕರಿಸುವುದು ಪಾಪವಲ್ಲ. ಅದರಿಂದ ಅವಳೂ ಪವಿತ್ರಳಾಗುವಳು ಮತ್ತು ಪತಿಯೂ ದೋಷವಿಲ್ಲದವನಾಗುವನು.
12035031a ತತ್ತ್ವಂ ಜ್ಞಾತ್ವಾ ತು ಸೋಮಸ್ಯ ವಿಕ್ರಯಃ ಸ್ಯಾದದೂಷಕಃ|
12035031c ಅಸಮರ್ಥಸ್ಯ ಭೃತ್ಯಸ್ಯ ವಿಸರ್ಗಃ ಸ್ಯಾದದೋಷವಾನ್||
12035031e ವನದಾಹೋ ಗವಾಮರ್ಥೇ ಕ್ರಿಯಮಾಣೋ ನ ದೂಷಕಃ||
ಸೋಮದ ತತ್ತ್ವವನ್ನು ತಿಳಿದು ಅದನ್ನು ಮಾರಿದರೆ ಅದರಲ್ಲಿ ದೋಷವಿಲ್ಲ. ಅಸಮರ್ಥನಾದ ಸೇವಕನನ್ನು ವಿಸರ್ಜಿಸುವುದರಲ್ಲಿ ದೋಷವಿಲ್ಲ. ಗೋವುಗಳ ಸಲುವಾಗಿ ಹುಲ್ಲು ಬರಲೆಂದು ಕಾಡನ್ನು ಸುಟ್ಟರೂ ಅದು ದೋಷವೆನಿಸುವುದಿಲ್ಲ.
12035032a ಉಕ್ತಾನ್ಯೇತಾನಿ ಕರ್ಮಾಣಿ ಯಾನಿ ಕುರ್ವನ್ನ ದುಷ್ಯತಿ|
12035032c ಪ್ರಾಯಶ್ಚಿತ್ತಾನಿ ವಕ್ಷ್ಯಾಮಿ ವಿಸ್ತರೇಣೈವ ಭಾರತ||
ಭಾರತ! ಯಾವ ಕರ್ಮಗಳನ್ನು ಮಾಡಿದರೆ ದೋಷವೆಲ್ಲವೆಂದು ಹೇಳಿದ್ದಾಯಿತು. ಈಗ ಪ್ರಾಯಶ್ಚಿತ್ತಗಳ ಕುರಿತು ವಿಸ್ತಾರವಾಗಿ ಹೇಳುತ್ತೇನೆ.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತೀಯೇ ಪಂಚಸ್ತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತೀಯ ಎನ್ನುವ ಮೂವತ್ತೈದನೇ ಅಧ್ಯಾಯವು.