ಶಾಂತಿ ಪರ್ವ: ರಾಜಧರ್ಮ ಪರ್ವ
೩೧
12031001 ವೈಶಂಪಾಯನ ಉವಾಚ
12031001a ತತೋ ರಾಜಾ ಪಾಂಡುಸುತೋ ನಾರದಂ ಪ್ರತ್ಯಭಾಷತ|
12031001c ಭಗವನ್ಶ್ರೋತುಮಿಚ್ಚಾಮಿ ಸುವರ್ಣಷ್ಠೀವಿಸಂಭವಮ್||
ವೈಶಂಪಾಯನನು ಹೇಳಿದನು: “ಆಗ ರಾಜಾ ಪಾಂಡುಸುತನು ನಾರದನಿಗೆ “ಭಗವನ್! ಸ್ವರ್ಣಷ್ಠೀವಿಯ ಹುಟ್ಟಿನ ಕುರಿತು ಕೇಳಲು ಬಯಸುತ್ತೇನೆ!” ಎಂದನು.
12031002a ಏವಮುಕ್ತಃ ಸ ಚ ಮುನಿರ್ಧರ್ಮರಾಜೇನ ನಾರದಃ|
12031002c ಆಚಚಕ್ಷೇ ಯಥಾ ವೃತ್ತಂ ಸುವರ್ಣಷ್ಠೀವಿನಂ ಪ್ರತಿ||
ಧರ್ಮರಾಜನು ಹೀಗೆ ಹೇಳಲು ಮುನಿ ನಾರದನು ಸ್ವರ್ಣಷ್ಠೀವಿಯ ಕುರಿತು ನಡೆದುದೆಲ್ಲವನ್ನೂ ವಿವರಿಸಿ ಹೇಳಿದನು.
12031003a ಏವಮೇತನ್ಮಹಾರಾಜ ಯಥಾಯಂ ಕೇಶವೋಽಬ್ರವೀತ್|
12031003c ಕಾರ್ಯಸ್ಯಾಸ್ಯ ತು ಯಚ್ಚೇಷಂ ತತ್ತೇ ವಕ್ಷ್ಯಾಮಿ ಪೃಚ್ಚತಃ||
“ಮಹಾರಾಜ! ಕೇಶವನು ಹೇಳಿದಂತೆಯೇ ನಡೆಯಿತು. ಇದರಲ್ಲಿ ಉಳಿದಿರುವ ವಿಷಯಗಳನ್ನು ನೀನು ಕೇಳಿದೆಯೆಂದು ನಾನು ಹೇಳುತ್ತೇನೆ.
12031004a ಅಹಂ ಚ ಪರ್ವತಶ್ಚೈವ ಸ್ವಸ್ರೀಯೋ ಮೇ ಮಹಾಮುನಿಃ|
12031004c ವಸ್ತುಕಾಮಾವಭಿಗತೌ ಸೃಂಜಯಂ ಜಯತಾಂ ವರಮ್||
ನಾನು ಮತ್ತು ನನ್ನ ಸೋದರಿಯ ಮಗ ಮಹಾಮುನಿ ಪರ್ವತನೂ ವಿಜಯಿಗಳಲ್ಲಿ ಶ್ರೇಷ್ಠ ಸೃಂಜಯನಲ್ಲಿ ಸ್ವಲ್ಪಕಾಲ ಉಳಿಯಲು ಹೋಗಿದ್ದೆವು.
12031005a ತತ್ರ ಸಂಪೂಜಿತೌ ತೇನ ವಿಧಿದೃಷ್ಟೇನ ಕರ್ಮಣಾ|
12031005c ಸರ್ವಕಾಮೈಃ ಸುವಿಹಿತೌ ನಿವಸಾವೋಽಸ್ಯ ವೇಶ್ಮನಿ||
ಅಲ್ಲಿ ಅವನಿಂದ ವಿಧಿಪೂರ್ವಕ ಕರ್ಮಗಳಿಂದ ಸಂಪೂಜಿತರಾಗಿ, ಸರ್ವಕಾಮನ ವಸ್ತುಗಳಿಂದ ಸುವಿಹಿತರಾಗಿ ಅವನ ಮನೆಯಲ್ಲಿ ಉಳಿದುಕೊಂಡಿದ್ದೆವು.
12031006a ವ್ಯತಿಕ್ರಾಂತಾಸು ವರ್ಷಾಸು ಸಮಯೇ ಗಮನಸ್ಯ ಚ|
12031006c ಪರ್ವತೋ ಮಾಮುವಾಚೇದಂ ಕಾಲೇ ವಚನಮರ್ಥವತ್||
ಅನೇಕ ವರ್ಷಗಳು ಕಳೆದು ನಾವು ಹೊರಡುವ ಸಮಯ ಬಂದಾಗ ಪರ್ವತನು ನನ್ನೊಡನೆ ಕಾಲಕ್ಕೆ ಉಚಿತವಾದ ಈ ಮಾತನ್ನು ಹೇಳಿದನು:
12031007a ಆವಾಮಸ್ಯ ನರೇಂದ್ರಸ್ಯ ಗೃಹೇ ಪರಮಪೂಜಿತೌ|
12031007c ಉಷಿತೌ ಸಮಯೇ ಬ್ರಹ್ಮಂಶ್ಚಿಂತ್ಯತಾಮತ್ರ ಸಾಂಪ್ರತಮ್||
“ಬ್ರಹ್ಮನ್! ನಾವಿಬ್ಬರೂ ಪರಮಪೂಜಿತರಾಗಿ ಈ ನರೇಂದ್ರನ ಮನೆಯಲ್ಲಿ ವಾಸಮಾಡಿಕೊಂಡಿದ್ದೇವೆ. ಈಗ ಹೊರಡುವ ಸಮಯದಲ್ಲಿ ಅವನಿಗೆ ಉಪಕಾರವನ್ನೆಸಗುವ ಕುರಿತು ಚಿಂತಿಸಬೇಕು.”
12031008a ತತೋಽಹಮಬ್ರುವಂ ರಾಜನ್ಪರ್ವತಂ ಶುಭದರ್ಶನಮ್|
12031008c ಸರ್ವಮೇತತ್ತ್ವಯಿ ವಿಭೋ ಭಾಗಿನೇಯೋಪಪದ್ಯತೇ||
12031009a ವರೇಣ ಚಂದ್ಯತಾಂ ರಾಜಾ ಲಭತಾಂ ಯದ್ಯದಿಚ್ಚತಿ|
12031009c ಆವಯೋಸ್ತಪಸಾ ಸಿದ್ಧಿಂ ಪ್ರಾಪ್ನೋತು ಯದಿ ಮನ್ಯಸೇ||
ರಾಜನ್! ಆಗ ನಾನು ಶುಭದರ್ಶನ ಪರ್ವತನಿಗೆ ಇಂತೆಂದೆನು: “ಅಳಿಯನೇ! ವಿಭೋ! ನೀನೇ ಎಲ್ಲವನ್ನೂ ನಿರ್ಧರಿಸು. ರಾಜನು ಬಯಸಿದ ವರವನ್ನು ನೀಡಿ ಸಂತುಷ್ಟಿಗೊಳಿಸೋಣ! ನಿನಗೆ ಒಪ್ಪಿಗೆಯಿದ್ದರೆ ನಮ್ಮ ತಪಸ್ಸಿನ ಸಿದ್ಧಿಯಿಂದ ಅವನಿಗೆ ಇಷ್ಟವಾದುದನ್ನು ಮಾಡಿಕೊಡೋಣ!”
12031010a ತತ ಆಹೂಯ ರಾಜಾನಂ ಸೃಂಜಯಂ ಶುಭದರ್ಶನಮ್|
12031010c ಪರ್ವತೋಽನುಮತಂ ವಾಕ್ಯಮುವಾಚ ಮುನಿಪುಂಗವಃ||
ಹೀಗೆ ನನ್ನ ಅನುಮತಿಯನ್ನು ಪಡೆದ ಮುನಿಪುಂಗವ ಪರ್ವತನು ಶುಭದರ್ಶನ ಸೃಂಜಯನನ್ನು ಕರೆಯಿಸಿ ಈ ಮಾತನ್ನಾಡಿದನು:
12031011a ಪ್ರೀತೌ ಸ್ವೋ ನೃಪ ಸತ್ಕಾರೈಸ್ತವ ಹ್ಯಾರ್ಜವಸಂಭೃತೈಃ|
12031011c ಆವಾಭ್ಯಾಮಭ್ಯನುಜ್ಞಾತೋ ವರಂ ನೃವರ ಚಿಂತಯ||
“ನೃಪ! ಅತ್ಯಂತ ಸರಳತೆಯಿಂದಲೂ ಪ್ರೀತಿ-ವಿಶ್ವಾಸಗಳಿಂದಲೂ ನೀನು ಮಾಡಿದ ಸತ್ಕಾರದಿಂದ ನಾವಿಬ್ಬರೂ ಸಂತೋಷಗೊಂಡಿದ್ದೇವೆ. ನಿನಗೆ ವರವನ್ನು ನೀಡಲು ನಮ್ಮಿಬ್ಬರಲ್ಲೂ ಅನುಮತಿಯಿದೆ. ಯಾವ ವರಬೇಕೆಂದು ಯೋಚಿಸಿ ಹೇಳು!
12031012a ದೇವಾನಾಮವಿಹಿಂಸಾಯಾಂ ಯದ್ಭವೇನ್ಮಾನುಷಕ್ಷಮಮ್|
12031012c ತದ್ಗೃಹಾಣ ಮಹಾರಾಜ ಪೂಜಾರ್ಹೋ ನೌ ಮತೋ ಭವಾನ್||
ಮಹಾರಾಜ! ದೇವತೆಗಳಿಗೆ ಹಿಂಸೆಯಾಗದಂಥಹ ಮತ್ತು ಮನುಷ್ಯರು ನಾಶವಾಗದಂಥಹ ವರವನ್ನು ಪಡೆ! ನೀನು ಪೂಜಾರ್ಹನೆಂದು ನಮ್ಮಿಬ್ಬರ ಮತ!”
12031013 ಸೃಂಜಯ ಉವಾಚ
12031013a ಪ್ರೀತೌ ಭವಂತೌ ಯದಿ ಮೇ ಕೃತಮೇತಾವತಾ ಮಮ|
12031013c ಏಷ ಏವ ಪರೋ ಲಾಭೋ ನಿರ್ವೃತ್ತೋ ಮೇ ಮಹಾಫಲಃ||
ಸೃಂಜಯನು ಹೇಳಿದನು: “ನೀವು ಸುಪ್ರೀತರಾಗಿದ್ದೀರಿ ಎನ್ನುವುದರಿಂದಲೇ ನಾನು ಕೃತಕೃತ್ಯನಾಗಿದ್ದೇನೆ. ಇದೇ ನನಗೆ ದೊರಕಿರುವ ಪರಮ ಮಹಾ ಫಲವಾಗಿದೆ!””
12031014 ನಾರದ ಉವಾಚ
12031014a ತಮೇವಂವಾದಿನಂ ಭೂಯಃ ಪರ್ವತಃ ಪ್ರತ್ಯಭಾಷತ|
12031014c ವೃಣೀಷ್ವ ರಾಜನ್ಸಂಕಲ್ಪೋ ಯಸ್ತೇ ಹೃದಿ ಚಿರಂ ಸ್ಥಿತಃ||
ನಾರದನು ಹೇಳಿದನು: “ಇದನ್ನೇ ಮತ್ತೆ ಮತ್ತೆ ಹೇಳುತ್ತಿದ್ದ ಅವನಿಗೆ ಪರ್ವತನು ಪುನಃ ಹೇಳಿದನು: “ರಾಜನ್! ನಿನ್ನ ಹೃದಯದಲ್ಲಿ ಬಹುಕಾಲದಿಂದ ಸಂಕಲ್ಪವೇನಿದೆಯೋ ಅದನ್ನೇ ಕೇಳಿಕೋ!”
12031015 ಸೃಂಜಯ ಉವಾಚ
12031015a ಅಭೀಪ್ಸಾಮಿ ಸುತಂ ವೀರಂ ವೀರ್ಯವಂತಂ ದೃಢವ್ರತಮ್|
12031015c ಆಯುಷ್ಮಂತಂ ಮಹಾಭಾಗಂ ದೇವರಾಜಸಮದ್ಯುತಿಮ್||
ಸೃಂಜಯನು ಹೇಳಿದನು: “ವೀರನೂ, ವೀರ್ಯವಂತನೂ, ದೃಢವ್ರತನೂ, ಆಯುಷ್ಮಂತನೂ, ದೇವರಾಜನ ಸಮದ್ಯುತಿಯೂ ಆದ ಮಹಾಭಾಗ ಪುತ್ರನನ್ನು ಬಯಸುತ್ತೇನೆ!”
12031016 ಪರ್ವತ ಉವಾಚ
12031016a ಭವಿಷ್ಯತ್ಯೇಷ ತೇ ಕಾಮೋ ನ ತ್ವಾಯುಷ್ಮಾನ್ಭವಿಷ್ಯತಿ|
12031016c ದೇವರಾಜಾಭಿಭೂತ್ಯರ್ಥಂ ಸಂಕಲ್ಪೋ ಹ್ಯೇಷ ತೇ ಹೃದಿ||
ಪರ್ವತನು ಹೇಳಿದನು: “ನಿನ್ನ ಈ ಕಾಮನೆಯು ಈಡೇರುತ್ತದೆ. ಆದರೆ ಅವನು ಆಯುಷ್ಮಾನನಾಗುವುದಿಲ್ಲ. ಏಕೆಂದರೆ ನಿನ್ನ ಹೃದಯದಲ್ಲಿ ದೇವರಾಜನನ್ನು ಪರಾಭವಗೊಳಿಸುವ ಸಂಕಲ್ಪವಿದೆ!
12031017a ಸುವರ್ಣಷ್ಠೀವನಾಚ್ಚೈವ ಸ್ವರ್ಣಷ್ಠೀವೀ ಭವಿಷ್ಯತಿ|
12031017c ರಕ್ಷ್ಯಶ್ಚ ದೇವರಾಜಾತ್ಸ ದೇವರಾಜಸಮದ್ಯುತಿಃ||
ಸುವರ್ಣಷ್ಠೀವನಾಗಿರುವುದರಿಂದ ಅವನು ಸ್ವರ್ಣಷ್ಠೀವಿ ಎಂದೆನಿಸಿಕೊಳ್ಳುತ್ತಾನೆ. ದೇವರಾಜ ಸಮದ್ಯುತಿಯಾದ ಅವನನ್ನು ದೇವರಾಜನಿಂದ ರಕ್ಷಿಸಿಕೊಳ್ಳಬೇಕು!””
12031018 ನಾರದ ಉವಾಚ
12031018a ತಚ್ಚ್ರುತ್ವಾ ಸೃಂಜಯೋ ವಾಕ್ಯಂ ಪರ್ವತಸ್ಯ ಮಹಾತ್ಮನಃ|
12031018c ಪ್ರಸಾದಯಾಮಾಸ ತದಾ ನೈತದೇವಂ ಭವೇದಿತಿ||
ನಾರದನು ಹೇಳಿದನು: “ಮಹಾತ್ಮ ಪರ್ವತನ ಆ ಮಾತನ್ನು ಕೇಳಿದ ಸೃಂಜಯನು “ಹೀಗಾಗಬಾರದು!” ಎಂದು ಪ್ರಸನ್ನಗೊಳಿಸಲು ಪ್ರಾರ್ಥಿಸಿದನು.
12031019a ಆಯುಷ್ಮಾನ್ಮೇ ಭವೇತ್ಪುತ್ರೋ ಭವತಸ್ತಪಸಾ ಮುನೇ|
12031019c ನ ಚ ತಂ ಪರ್ವತಃ ಕಿಂ ಚಿದುವಾಚೇಂದ್ರವ್ಯಪೇಕ್ಷಯಾ||
“ಮುನೇ! ನಿಮ್ಮ ತಪಸ್ಸಿನಿಂದ ನನ್ನ ಮಗನು ಆಯುಷ್ಮಂತನಾಗಬೇಕು!” ಆದರೂ ಇಂದ್ರನ ಮೇಲಿನ ಗೌರವದಿಂದ ಪರ್ವತನು ಏನನ್ನೂ ಹೇಳಲಿಲ್ಲ.
12031020a ತಮಹಂ ನೃಪತಿಂ ದೀನಮಬ್ರುವಂ ಪುನರೇವ ತು|
12031020c ಸ್ಮರ್ತವ್ಯೋಽಹಂ ಮಹಾರಾಜ ದರ್ಶಯಿಷ್ಯಾಮಿ ತೇ ಸ್ಮೃತಃ||
ದೀನನಾಗಿದ್ದ ಆ ನೃಪತಿಗೆ ನಾನು ಪುನಃ ಹೇಳಿದೆನು: “ಮಹಾರಾಜ! ನನ್ನನ್ನು ಸ್ಮರಿಸಿಕೋ! ಸ್ಮರಿಸಿದಾಗಲೆಲ್ಲಾ ನಾನು ನಿನಗೆ ಕಾಣಿಸಿಕೊಳ್ಳುತ್ತೇನೆ!
12031021a ಅಹಂ ತೇ ದಯಿತಂ ಪುತ್ರಂ ಪ್ರೇತರಾಜವಶಂ ಗತಮ್|
12031021c ಪುನರ್ದಾಸ್ಯಾಮಿ ತದ್ರೂಪಂ ಮಾ ಶುಚಃ ಪೃಥಿವೀಪತೇ||
ಪೃಥಿವೀಪತೇ! ಪ್ರೇತರಾಜನ ವಶನಾಗುವ ನಿನ್ನ ಪ್ರಿಯಪುತ್ರನನ್ನು ಅದೇ ರೂಪದಲ್ಲಿ ಪುನಃ ನಿನಗೆ ದೊರಕಿಸಿಕೊಡುತ್ತೇನೆ. ಶೋಕಿಸದಿರು!”
12031022a ಏವಮುಕ್ತ್ವಾ ತು ನೃಪತಿಂ ಪ್ರಯಾತೌ ಸ್ವೋ ಯಥೇಪ್ಸಿತಮ್|
12031022c ಸೃಂಜಯಶ್ಚ ಯಥಾಕಾಮಂ ಪ್ರವಿವೇಶ ಸ್ವಮಂದಿರಮ್||
ನೃಪತಿಗೆ ಹೀಗೆ ಹೇಳಿ ನಾವಿಬ್ಬರೂ ಬೇಕಾದಲ್ಲಿಗೆ ಹೊರಟುಹೋದೆವು. ಸೃಂಜಯನೂ ಕೂಡ ಇಚ್ಛಾನುಸಾರವಾಗಿ ತನ್ನ ಅರಮನೆಯನ್ನು ಪ್ರವೇಶಿಸಿದನು.
12031023a ಸೃಂಜಯಸ್ಯಾಥ ರಾಜರ್ಷೇಃ ಕಸ್ಮಿಂಶ್ಚಿತ್ಕಾಲಪರ್ಯಯೇ|
12031023c ಜಜ್ಞೇ ಪುತ್ರೋ ಮಹಾವೀರ್ಯಸ್ತೇಜಸಾ ಪ್ರಜ್ವಲನ್ನಿವ||
ಕೆಲವು ಸಮಯವು ಕಳೆಯಲು ಆ ರಾಜರ್ಷಿ ಸೃಂಜಯನಿಗೆ ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವಂಥಹ ಮಹಾವೀರ್ಯ ಪುತ್ರನು ಜನಿಸಿದನು.
12031024a ವವೃಧೇ ಸ ಯಥಾಕಾಲಂ ಸರಸೀವ ಮಹೋತ್ಪಲಮ್|
12031024c ಬಭೂವ ಕಾಂಚನಷ್ಠೀವೀ ಯಥಾರ್ಥಂ ನಾಮ ತಸ್ಯ ತತ್||
ಸರೋವರದಲ್ಲಿ ನೈದಿಲೆಯು ಹೇಗೋ ಹಾಗೆ ಸಮಯಹೋದಂತೆ ಅವನು ಬೆಳೆಯತೊಡಗಿದನು. ಅವನ ಹೆಸರಿನ ಯಥಾರ್ಥದಂತೆ ಅವನು ಸುವರ್ಣವನ್ನೇ ಉಗುಳುತ್ತಿದ್ದನು.
12031025a ತದದ್ಭುತತಮಂ ಲೋಕೇ ಪಪ್ರಥೇ ಕುರುಸತ್ತಮ|
12031025c ಬುಬುಧೇ ತಚ್ಚ ದೇವೇಂದ್ರೋ ವರದಾನಂ ಮಹಾತ್ಮನೋಃ||
ಕುರುಸತ್ತಮ! ಆ ಅದ್ಭುತವು ಲೋಕದಲ್ಲಿಯೇ ಪ್ರಚಾರವಾಯಿತು. ಮಹಾತ್ಮರ ವರದಾನದಿಂದ ಅವನು ಹುಟ್ಟಿರುವನೆಂದು ದೇವೇಂದ್ರನೂ ತಿಳಿದುಕೊಂಡನು.
12031026a ತತಸ್ತ್ವಭಿಭವಾದ್ಭೀತೋ ಬೃಹಸ್ಪತಿಮತೇ ಸ್ಥಿತಃ|
12031026c ಕುಮಾರಸ್ಯಾಂತರಪ್ರೇಕ್ಷೀ ಬಭೂವ ಬಲವೃತ್ರಹಾ||
ಬೃಹಸ್ಪತಿಯ ಸಲಹೆಯಂತೆ ನಡೆದುಕೊಳ್ಳುತ್ತಿದ್ದ ಆ ಬಲವೃತ್ರಹನು ಕುಮಾರ ಸ್ವರ್ಣಷ್ಠೀವಿಯ ಭಯದಿಂದ ಅವನನ್ನು ವಧಿಸಲು ಅವಕಾಶವನ್ನು ಹುಡುಕುತ್ತಿದ್ದನು.
12031027a ಚೋದಯಾಮಾಸ ವಜ್ರಂ ಸ ದಿವ್ಯಾಸ್ತ್ರಂ ಮೂರ್ತಿಸಂಸ್ಥಿತಮ್|
12031027c ವ್ಯಾಘ್ರೋ ಭೂತ್ವಾ ಜಹೀಮಂ ತ್ವಂ ರಾಜಪುತ್ರಮಿತಿ ಪ್ರಭೋ||
ಪ್ರಭು ಇಂದ್ರನು ಮೂರ್ತಿಮತ್ತಾಗಿ ನಿಂತಿದ್ದ ದಿವ್ಯಾಸ್ತ್ರ ವಜ್ರಕ್ಕೆ “ವ್ಯಾಘ್ರನಾಗಿ ಆ ರಾಜಪುತ್ರನನ್ನು ಸಂಹರಿಸು!” ಎಂದು ಪ್ರಚೋದಿಸಿದನು.
12031028a ವಿವೃದ್ಧಃ ಕಿಲ ವೀರ್ಯೇಣ ಮಾಮೇಷೋಽಭಿಭವಿಷ್ಯತಿ|
12031028c ಸೃಂಜಯಸ್ಯ ಸುತೋ ವಜ್ರ ಯಥೈನಂ ಪರ್ವತೋ ದದೌ||
“ವಜ್ರ! ವೀರ್ಯದಿಂದ ಪ್ರವೃದ್ಧನಾಗುತ್ತಿರುವ ಸೃಂಜಯನ ಈ ಮಗನು ನನ್ನನ್ನೇ ಪರಾಜಯಗೊಳಿಸುತ್ತಾನೆ. ಹಾಗೆಯೇ ಪರ್ವತನು ವರವನ್ನಿತ್ತಿದ್ದನು!”
12031029a ಏವಮುಕ್ತಸ್ತು ಶಕ್ರೇಣ ವಜ್ರಃ ಪರಪುರಂಜಯಃ|
12031029c ಕುಮಾರಸ್ಯಾಂತರಪ್ರೇಕ್ಷೀ ನಿತ್ಯಮೇವಾನ್ವಪದ್ಯತ||
ಶಕ್ರನು ಹೀಗೆ ಹೇಳಲು ಪರಪುರಂಜಯ ವಜ್ರವು ಕುಮಾರನನ್ನು ಸಂಹರಿಸುವ ಸಲುವಾಗಿ ಸಮಯವನ್ನೇ ಕಾಯುತ್ತಾ ನಿತ್ಯವೂ ಅವನನ್ನು ಅನುಸರಿಸಿಯೇ ಇರುತ್ತಿತ್ತು.
12031030a ಸೃಂಜಯೋಽಪಿ ಸುತಂ ಪ್ರಾಪ್ಯ ದೇವರಾಜಸಮದ್ಯುತಿಮ್|
12031030c ಹೃಷ್ಟಃ ಸಾಂತಃಪುರೋ ರಾಜಾ ವನನಿತ್ಯೋಽಭವತ್ತದಾ||
ಸೃಂಜಯನೂ ಕೂಡ ಕಾಂತಿಯಲ್ಲಿ ದೇವರಾಜನ ಸಮನಾಗಿದ್ದ ಪುತ್ರನನ್ನು ಪಡೆದು ಪರಮ ಹೃಷ್ಟನಾಗಿ ಪತ್ನಿಯೊಡನೆ ಯಾವಾಗಲೂ ವನದಲ್ಲಿಯೇ ಇರುತ್ತಿದ್ದನು.
12031031a ತತೋ ಭಾಗೀರಥೀತೀರೇ ಕದಾ ಚಿದ್ವನನಿರ್ಝರೇ|
12031031c ಧಾತ್ರೀದ್ವಿತೀಯೋ ಬಾಲಃ ಸ ಕ್ರೀಡಾರ್ಥಂ ಪರ್ಯಧಾವತ||
ಹೀಗಿರಲು ಒಮ್ಮೆ ಭಾಗಿರಥೀತೀರದ ನಿರ್ಜನ ಪ್ರದೇಶದಲ್ಲಿ ದಾಯಿಯೊಬ್ಬಳೊಡನಿದ್ದ ಬಾಲಕನು ಅತ್ತಿತ್ತ ಓಡುತ್ತಾ ಆಟವಾಡುತ್ತಿದ್ದನು.
12031032a ಪಂಚವರ್ಷಕದೇಶೀಯೋ ಬಾಲೋ ನಾಗೇಂದ್ರವಿಕ್ರಮಃ|
12031032c ಸಹಸೋತ್ಪತಿತಂ ವ್ಯಾಘ್ರಮಾಸಸಾದ ಮಹಾಬಲಃ||
ಐದುವರ್ಷದ ಬಾಲಕನಾಗಿದ್ದರೂ ಆನೆಯಂತೆ ವಿಕ್ರಮಿಯಾಗಿದ್ದ ಆ ಮಹಾಬಲಶಾಲಿಯ ಮೇಲೆ ಒಮ್ಮೆಲೇ ಹುಲಿಯೊಂದು ಎರಗಿ ಬಿದ್ದಿತು.
12031033a ತೇನ ಚೈವ ವಿನಿಷ್ಪಿಷ್ಟೋ ವೇಪಮಾನೋ ನೃಪಾತ್ಮಜಃ|
12031033c ವ್ಯಸುಃ ಪಪಾತ ಮೇದಿನ್ಯಾಂ ತತೋ ಧಾತ್ರೀ ವಿಚುಕ್ರುಶೇ||
ತನ್ನನ್ನು ನೋಡಿ ನಡುಗುತ್ತಿದ್ದ ಆ ರಾಜಕುಮಾರನನ್ನು ಹುಲಿಯು ಅಗೆಯಲು ಪ್ರಾಣಶೂನ್ಯನಾದ ಬಾಲಕನು ನೆಲದ ಮೇಲೆ ಬಿದ್ದನು. ದಾಯಿಯು ಗಟ್ಟಿಯಾಗಿ ಚೀರಿಕೊಂಡಳು.
12031034a ಹತ್ವಾ ತು ರಾಜಪುತ್ರಂ ಸ ತತ್ರೈವಾಂತರಧೀಯತ|
12031034c ಶಾರ್ದೂಲೋ ದೇವರಾಜಸ್ಯ ಮಾಯಯಾಂತರ್ಹಿತಸ್ತದಾ||
ದೇವರಾಜನ ಮಾಯೆಯಿಂದ ಬಂದಿದ್ದ ಆ ಹುಲಿಯು ರಾಜಪುತ್ರನನ್ನು ಸಂಹರಿಸಿ ಅಲ್ಲಿಯೇ ಅಂತರ್ಧಾನವಾಯಿತು.
12031035a ಧಾತ್ರ್ಯಾಸ್ತು ನಿನದಂ ಶ್ರುತ್ವಾ ರುದತ್ಯಾಃ ಪರಮಾರ್ತವತ್|
12031035c ಅಭ್ಯಧಾವತ ತಂ ದೇಶಂ ಸ್ವಯಮೇವ ಮಹೀಪತಿಃ||
ಪರಮ ಆರ್ತಳಾಗಿ ರೋದಿಸುತ್ತಿರುವ ದಾಯಿಯ ನಿನಾದವನ್ನು ಕೇಳಿ ಸ್ವಯಂ ಮಹೀಪತಿಯೇ ಆ ಸ್ಥಳಕ್ಕೆ ಧಾವಿಸಿ ಬಂದನು.
12031036a ಸ ದದರ್ಶ ಗತಾಸುಂ ತಂ ಶಯಾನಂ ಪೀತಶೋಣಿತಮ್|
12031036c ಕುಮಾರಂ ವಿಗತಾನಂದಂ ನಿಶಾಕರಮಿವ ಚ್ಯುತಮ್||
ಅಸುನೀಗಿ ಮಲಗಿದ್ದ, ರಕ್ತವನ್ನು ಕಳೆದುಕೊಂಡಿದ್ದ, ಆಕಾಶದಿಂದ ಕೆಳಬಿದ್ದ ಚಂದ್ರನಂತೆ ಆನಂದವನ್ನು ಕಳೆದುಕೊಂಡಿದ್ದ ಮಗನನ್ನು ರಾಜನು ನೋಡಿದನು.
12031037a ಸ ತಮುತ್ಸಂಗಮಾರೋಪ್ಯ ಪರಿಪೀಡಿತವಕ್ಷಸಮ್|
12031037c ಪುತ್ರಂ ರುಧಿರಸಂಸಿಕ್ತಂ ಪರ್ಯದೇವಯದಾತುರಃ||
ಪರಿಪೀಡಿತ ಹೃದಯನಾಗಿ ಅವನು ರಕ್ತದಿಂದ ತೋಯ್ದುಹೋಗಿದ್ದ ಪುತ್ರನನ್ನು ತನ್ನ ತೊಡೆಯಮೇಲಿರಿಸಿಕೊಂಡು ಆತುರನಾಗಿ ಪರಿತಪಿಸಿದನು.
12031038a ತತಸ್ತಾ ಮಾತರಸ್ತಸ್ಯ ರುದಂತ್ಯಃ ಶೋಕಕರ್ಶಿತಾಃ|
12031038c ಅಭ್ಯಧಾವಂತ ತಂ ದೇಶಂ ಯತ್ರ ರಾಜಾ ಸ ಸೃಂಜಯಃ||
ಅವನ ತಾಯಂದಿರೂ ಕೂಡ ಶೋಕಕರ್ಶಿತರಾಗಿ ರೋದಿಸುತ್ತಾ ರಾಜಾ ಸೃಂಜಯನಿದ್ದ ಪ್ರದೇಶಕ್ಕೆ ಓಡಿ ಬಂದರು.
12031039a ತತಃ ಸ ರಾಜಾ ಸಸ್ಮಾರ ಮಾಮಂತರ್ಗತಮಾನಸಃ|
12031039c ತಚ್ಚಾಹಂ ಚಿಂತಿತಂ ಜ್ಞಾತ್ವಾ ಗತವಾಂಸ್ತಸ್ಯ ದರ್ಶನಮ್||
ಆಗ ಆ ರಾಜನು ತನ್ನ ಮನಸ್ಸಿನಲ್ಲಿಯೇ ನನ್ನನ್ನು ಸ್ಮರಿಸಿದನು. ಅವನು ನನ್ನನ್ನೇ ಧ್ಯಾನಿಸುತ್ತಿದ್ದಾನೆಂದು ತಿಳಿದು ನಾನು ಅಲ್ಲಿಗೆ ಹೋಗಿ ದರ್ಶನ ನೀಡಿದೆನು.
12031040a ಸ ಮಯೈತಾನಿ ವಾಕ್ಯಾನಿ ಶ್ರಾವಿತಃ ಶೋಕಲಾಲಸಃ|
12031040c ಯಾನಿ ತೇ ಯದುವೀರೇಣ ಕಥಿತಾನಿ ಮಹೀಪತೇ||
ಮಹೀಪತೇ! ಯದುವೀರನು ಈ ಮೊದಲು ನಿನಗೆ ಏನು ಹೇಳಿದ್ದನೋ ಅದನ್ನು ನಾನು ಶೋಕಲಾಲಸನಾದ ಅವನಿಗೆ ಹೇಳಿದೆನು.
12031041a ಸಂಜೀವಿತಶ್ಚಾಪಿ ಮಯಾ ವಾಸವಾನುಮತೇ ತದಾ|
12031041c ಭವಿತವ್ಯಂ ತಥಾ ತಚ್ಚ ನ ತಚ್ಚಕ್ಯಮತೋಽನ್ಯಥಾ||
ವಾಸವನ ಅನುಮತಿಯನ್ನು ಪಡೆದು ನಾನು ಆ ಮಗುವನ್ನು ಪುನಃ ಬದುಕಿಸಿದೆ ಕೂಡ. ಅದು ಹಾಗೆಯೇ ಆಗಬೇಕಾಗಿದ್ದಿತು. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
12031042a ಅತ ಊರ್ಧ್ವಂ ಕುಮಾರಃ ಸ ಸ್ವರ್ಣಷ್ಠೀವೀ ಮಹಾಯಶಾಃ|
12031042c ಚಿತ್ತಂ ಪ್ರಸಾದಯಾಮಾಸ ಪಿತುರ್ಮಾತುಶ್ಚ ವೀರ್ಯವಾನ್||
ಬಳಿಕ ಮಹಾಯಶೋವಂತನೂ ವೀರ್ಯವಂತನೂ ಆದ ಕುಮಾರ ಸ್ವರ್ಣಷ್ಠೀವಿಯು ತನ್ನ ತಂದೆ-ತಾಯಿಗಳ ಚಿತ್ತವನ್ನು ಪ್ರಸನ್ನಗೊಳಿಸಿದನು.
12031043a ಕಾರಯಾಮಾಸ ರಾಜ್ಯಂ ಸ ಪಿತರಿ ಸ್ವರ್ಗತೇ ವಿಭುಃ|
12031043c ವರ್ಷಾಣಾಮೇಕಶತವತ್ಸಹಸ್ರಂ ಭೀಮವಿಕ್ರಮಃ||
ತನ್ನ ತಂದೆಯು ಸ್ವರ್ಗಗತನಾದ ನಂತರ ಆ ಭೀಮವಿಕ್ರಮಿ ವಿಭುವು ಹನ್ನೊಂದು ಸಾವಿರ ವರ್ಷಗಳ ಪರ್ಯಂತ ರಾಜ್ಯಭಾರವನ್ನು ಮಾಡಿದನು.
12031044a ತತ ಇಷ್ಟ್ವಾ ಮಹಾಯಜ್ಞೈರ್ಬಹುಭಿರ್ಭೂರಿದಕ್ಷಿಣೈಃ|
12031044c ತರ್ಪಯಾಮಾಸ ದೇವಾಂಶ್ಚ ಪಿತೃಂಶ್ಚೈವ ಮಹಾದ್ಯುತಿಃ||
ಆ ಮಹಾದ್ಯುತಿಯು ಆಗ ಅನೇಕ ಭೂರಿದಕ್ಷಿಣೆಗಳಿಂದ ಕೂಡಿದ ಮಹಾಯಜ್ಞಗಳಿಂದ ದೇವತೆಗಳನ್ನೂ ಪಿತೃಗಳನ್ನೂ ತೃಪ್ತಿಪಡಿಸಿದನು.
12031045a ಉತ್ಪಾದ್ಯ ಚ ಬಹೂನ್ಪುತ್ರಾನ್ಕುಲಸಂತಾನಕಾರಿಣಃ|
12031045c ಕಾಲೇನ ಮಹತಾ ರಾಜನ್ಕಾಲಧರ್ಮಮುಪೇಯಿವಾನ್||
ರಾಜನ್! ಕುಲದ ಸಂತಾನವನ್ನು ಮುಂದುವರಿಸಿಕೊಂಡು ಹೋಗುವ ಅನೇಕ ಪುತ್ರರನ್ನು ಹುಟ್ಟಿಸಿ ದೀರ್ಘ ಸಮಯದ ನಂತರ ಅವನು ಕಾಲಧರ್ಮಕ್ಕೊಳಗಾದನು.
12031046a ಸ ತ್ವಂ ರಾಜೇಂದ್ರ ಸಂಜಾತಂ ಶೋಕಮೇತನ್ನಿವರ್ತಯ|
12031046c ಯಥಾ ತ್ವಾಂ ಕೇಶವಃ ಪ್ರಾಹ ವ್ಯಾಸಶ್ಚ ಸುಮಹಾತಪಾಃ||
ರಾಜೇಂದ್ರ! ಕೇಶವ ಮತ್ತು ಮಹಾತಪಸ್ವಿ ವ್ಯಾಸರು ಹೇಳಿದಂತೆ ನೀನೂ ಕೂಡ ನಿನ್ನಲ್ಲಿ ಉಂಟಾಗಿರುವ ಈ ಶೋಕದಿಂದ ಹೊರಟು ಬಾ!
12031047a ಪಿತೃಪೈತಾಮಹಂ ರಾಜ್ಯಮಾಸ್ಥಾಯ ದುರಮುದ್ವಹ|
12031047c ಇಷ್ಟ್ವಾ ಪುಣ್ಯೈರ್ಮಹಾಯಜ್ಞೈರಿಷ್ಟಾಽಲ್ಲೋಕಾನವಾಪ್ಸ್ಯಸಿ||
ಪಿತೃಪಿತಾಮಹರ ಈ ರಾಜ್ಯದಲ್ಲಿ ಅಭಿಷಿಕ್ತನಾಗಿ ರಾಜ್ಯಭಾರನಡೆಸು. ಪುಣ್ಯಕರವಾದ ಮಹಾ ಯಜ್ಞ-ಇಷ್ಟಿಗಳಿಂದ ನಿನಗಿಷ್ಟವಾದ ಲೋಕಗಳನ್ನು ಪಡೆಯುತ್ತೀಯೆ!””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸ್ವರ್ಣಸ್ಠೀವಿಸಂಭವೋಪಾಖ್ಯಾನೇ ಏಕತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸ್ವರ್ಣಸ್ಠೀವಿಸಂಭವೋಪಾಖ್ಯಾನ ಎನ್ನುವ ಮೂವತ್ತೊಂದನೇ ಅಧ್ಯಾಯವು.