ಶಾಂತಿ ಪರ್ವ: ರಾಜಧರ್ಮ ಪರ್ವ

೨೬

12026001 ವೈಶಂಪಾಯನ ಉವಾಚ

12026001a ದ್ವೈಪಾಯನವಚಃ ಶ್ರುತ್ವಾ ಕುಪಿತೇ ಚ ಧನಂಜಯೇ|

12026001c ವ್ಯಾಸಮಾಮಂತ್ರ್ಯ ಕೌಂತೇಯಃ ಪ್ರತ್ಯುವಾಚ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಧನಂಜಯನು ಕುಪಿತನಾಗಿರಲು, ದ್ವೈಪಾಯನನ ಮಾತನ್ನು ಕೇಳಿ ಕೌಂತೇಯ ಯುಧಿಷ್ಠಿರನು ವ್ಯಾಸನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದನು:

12026002a ನ ಪಾರ್ಥಿವಮಿದಂ ರಾಜ್ಯಂ ನ ಚ ಭೋಗಾಃ ಪೃಥಗ್ವಿಧಾಃ|

12026002c ಪ್ರೀಣಯಂತಿ ಮನೋ ಮೇಽದ್ಯ ಶೋಕೋ ಮಾಂ ನರ್ದಯತ್ಯಯಮ್||

“ಭೂಮಿಯ ಈ ರಾಜ್ಯವೂ ನಾನಾವಿಧದ ಭೋಗಗಳೂ ಇಂದು ನನ್ನ ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿಲ್ಲ. ಶೋಕವೇ ನನ್ನನ್ನು ಹಿಂಡುತ್ತಿದೆ.

12026003a ಶ್ರುತ್ವಾ ಚ ವೀರಹೀನಾನಾಮಪುತ್ರಾಣಾಂ ಚ ಯೋಷಿತಾಮ್|

12026003c ಪರಿದೇವಯಮಾನಾನಾಂ ಶಾಂತಿಂ ನೋಪಲಭೇ ಮುನೇ||

ಮುನೇ! ವೀರಪತಿಗಳಿಂದಲೂ, ಪುತ್ರರಿಂದಲೂ ವಿಹೀನರಾದ ಸ್ತ್ರೀಯರ ವಿಲಾಪಗಳಿಂದ ನನ್ನ ಮನಸ್ಸಿಗೆ ಶಾಂತಿಯೇ ದೊರೆಯದಂತಾಗಿದೆ.”

12026004a ಇತ್ಯುಕ್ತಃ ಪ್ರತ್ಯುವಾಚೇದಂ ವ್ಯಾಸೋ ಯೋಗವಿದಾಂ ವರಃ|

12026004c ಯುಧಿಷ್ಠಿರಂ ಮಹಾಪ್ರಾಜ್ಞಂ ಧರ್ಮಜ್ಞೋ ವೇದಪಾರಗಃ||

ಹೀಗೆ ಹೇಳಲು ಯೋಗಜ್ಞಾನಿಗಳಲ್ಲಿ ಶ್ರೇಷ್ಠ ಧರ್ಮಜ್ಞ ವೇದಪಾರಗ ವ್ಯಾಸನು ಮಹಾಪ್ರಾಜ್ಞ ಯುಧಿಷ್ಠಿರನಿಗೆ ಇಂತೆಂದನು:

12026005a ನ ಕರ್ಮಣಾ ಲಭ್ಯತೇ ಚಿಂತಯಾ ವಾ| ನಾಪ್ಯಸ್ಯ ದಾತಾ ಪುರುಷಸ್ಯ ಕಶ್ಚಿತ್|

12026005c ಪರ್ಯಾಯಯೋಗಾದ್ವಿಹಿತಂ ವಿಧಾತ್ರಾ| ಕಾಲೇನ ಸರ್ವಂ ಲಭತೇ ಮನುಷ್ಯಃ||

“ಕರ್ಮಮಾಡುವುದರಿಂದಾಗಲೀ ಚಿಂತಿಸುತ್ತಿರುವುದರಿಂದಾಗಲೀ ಬೇಕಾಗಿರುವುದು ಸಿಗುವುದಿಲ್ಲ. ಮನುಷ್ಯನಿಗೆ ಬೇಕಾದುದನ್ನು ಕೊಡುವವರೂ ಯಾರೂ ಇಲ್ಲ. ಪರ್ಯಾಯಯೋಗದಿಂದ ವಿಧಾತ್ರನು ವಿಹಿಸಿದುದೆಲ್ಲವನ್ನೂ ಮನುಷ್ಯನು ಕಾಲ ಬಂದಾಗ ಪಡೆಯುತ್ತಾನೆ.

12026006a ನ ಬುದ್ಧಿಶಾಸ್ತ್ರಾಧ್ಯಯನೇನ ಶಕ್ಯಂ| ಪ್ರಾಪ್ತುಂ ವಿಶೇಷೈರ್ಮನುಜೈರಕಾಲೇ|

12026006c ಮೂರ್ಖೋಽಪಿ ಪ್ರಾಪ್ನೋತಿ ಕದಾ ಚಿದರ್ಥಾನ್| ಕಾಲೋ ಹಿ ಕಾರ್ಯಂ ಪ್ರತಿ ನಿರ್ವಿಶೇಷಃ||

ಬುದ್ಧಿಯಿಂದಾಗಲೀ, ಶಾಸ್ತ್ರಾಧ್ಯಯನದಿಂದಾಗಲೀ ಮನುಷ್ಯನು ಯೋಗವಿರದ ಕಾಲದಲ್ಲಿ ವಿಶೇಷ ಫಲವನ್ನು ಹೊಂದಲು ಸಾಧ್ಯವಿಲ್ಲ. ಕಾಲವು ಒದಗಿಬಂದಿತೆಂದರೆ ಮೂರ್ಖನೂ ಯಥೇಚ್ಛ ಐಶ್ವರ್ಯವನ್ನು ಪಡೆದುಕೊಳ್ಳುತ್ತಾನೆ. ಏಕೆಂದರೆ ಕಾರ್ಯಫಲಗಳಲ್ಲಿ ಕಾಲವೇ ವಿಶೇಷಪಾತ್ರವನ್ನು ವಹಿಸುತ್ತದೆ.

12026007a ನಾಭೂತಿಕಾಲೇ ಚ ಫಲಂ ದದಾತಿ| ಶಿಲ್ಪಂ ನ ಮಂತ್ರಾಶ್ಚ ತಥೌಷಧಾನಿ|

12026007c ತಾನ್ಯೇವ ಕಾಲೇನ ಸಮಾಹಿತಾನಿ| ಸಿಧ್ಯಂತಿ ಚೇಧ್ಯಂತಿ ಚ ಭೂತಿಕಾಲೇ||

ಯೋಗವಿಲ್ಲದಿರುವಾಗ ಶಿಲ್ಪವಾಗಲೀ, ಮಂತ್ರಗಳಾಗಲೀ, ಔಷಧಿಗಳಾಗಲೀ ಫಲವನ್ನೀಯುವುದಿಲ್ಲ. ಆದರೆ ಇವೇ ಉತ್ತಮ ಯೋಗವಿರುವಾಗ ಕಾಲದ ಪ್ರೇರಣೆಯಿಂದ ಸಿದ್ಧಿಯುಂಟಾಗುತ್ತವೆ.

12026008a ಕಾಲೇನ ಶೀಘ್ರಾಃ ಪ್ರವಿವಾಂತಿ ವಾತಾಃ| ಕಾಲೇನ ವೃಷ್ಟಿರ್ಜಲದಾನುಪೈತಿ|

12026008c ಕಾಲೇನ ಪದ್ಮೋತ್ಪಲವಜ್ಜಲಂ ಚ| ಕಾಲೇನ ಪುಷ್ಯಂತಿ ನಗಾ ವನೇಷು||

ಕಾಲಕ್ಕೆ ಸರಿಯಾಗಿಯೇ ಭಿರುಗಾಳಿಯು ಬೀಸುತ್ತದೆ. ಕಾಲಕ್ಕೆ ತಕ್ಕಂತೆಯೇ ಮೋಡಗಳು ಮಳೆಯನ್ನು ಸುರಿಸುತ್ತವೆ. ಕಾಲಕ್ಕೆ ಸರಿಯಾಗಿಯೇ ಪದ್ಮಗಳು ಅರಳುತ್ತವೆ. ಕಾಲಕ್ಕೆ ತಕ್ಕಂತೆಯೇ ಅರಣ್ಯದ ವೃಕ್ಷಗಳು ಚಿಗುರಿ ಹುಲುಸಾಗುತ್ತವೆ.

12026009a ಕಾಲೇನ ಕೃಷ್ಣಾಶ್ಚ ಸಿತಾಶ್ಚ ರಾತ್ರ್ಯಃ| ಕಾಲೇನ ಚಂದ್ರಃ ಪರಿಪೂರ್ಣಬಿಂಬಃ|

12026009c ನಾಕಾಲತಃ ಪುಷ್ಪಫಲಂ ನಗಾನಾಂ| ನಾಕಾಲವೇಗಾಃ ಸರಿತೋ ವಹಂತಿ||

ಕಾಲಾನುಗುಣವಾಗಿ ರಾತ್ರಿಗಳು ಕಪ್ಪಾಗಿಯೂ ಬೆಳದಿಂಗಳಾಗಿಯೂ ಇರುತ್ತವೆ. ಕಾಲಕ್ಕೆ ತಕ್ಕಂತೆಯೇ ಚಂದ್ರನು ಪರಿಪೂರ್ಣಬಿಂಬನಾಗುತ್ತಾನೆ. ಅಕಾಲದಲ್ಲಿ ವೃಕ್ಷಗಳು ಪುಷ್ಪ-ಫಲಗಳನ್ನು ಪಡೆಯುವುದಿಲ್ಲ. ಅಕಾಲದಲ್ಲಿ ನದಿಗಳು ಪೂರ್ಣವೇಗದಲ್ಲಿ ಹರಿಯುವುದಿಲ್ಲ.

12026010a ನಾಕಾಲಮತ್ತಾಃ ಖಗಪನ್ನಗಾಶ್ಚ| ಮೃಗದ್ವಿಪಾಃ ಶೈಲಮಹಾಗ್ರಹಾಶ್ಚ|

12026010c ನಾಕಾಲತಃ ಸ್ತ್ರೀಷು ಭವಂತಿ ಗರ್ಭಾ| ನಾಯಾಂತ್ಯಕಾಲೇ ಶಿಶಿರೋಷ್ಣವರ್ಷಾಃ||

ಪಕ್ಷಿಗಳಾಗಲೀ, ಸರ್ಪಗಳಾಗಲೀ, ಮೃಗಗಳಾಗಲೀ, ಆನೆಗಳಾಗಲೀ, ಪರ್ವತಗಳಲ್ಲಿ ವಾಸಿಸುವ ಮಹಾಮೃಗಗಳಾಗಲೀ ಅವುಗಳ ಕಾಲವು ಬಾರದೇ ಮದಿಸುವುದಿಲ್ಲ. ಸ್ತ್ರೀಯರು ತಮ್ಮ ಕಾಲವು ಬರದೇ ಗರ್ಭವನ್ನು ಧರಿಸುವುದಿಲ್ಲ. ಅಕಾಲದಲ್ಲಿ ಛಳಿ, ಸೆಖೆ ಮತ್ತು ಮಳೆಗಳಾಗುವುದಿಲ್ಲ.

12026011a ನಾಕಾಲತೋ ಮ್ರಿಯತೇ ಜಾಯತೇ ವಾ| ನಾಕಾಲತೋ ವ್ಯಾಹರತೇ ಚ ಬಾಲಃ|

12026011c ನಾಕಾಲತೋ ಯೌವನಮಭ್ಯುಪೈತಿ| ನಾಕಾಲತೋ ರೋಹತಿ ಬೀಜಮುಪ್ತಮ್||

ಕಾಲ ಬಾರದೇ ಶಿಶುವು ಹುಟ್ಟುವುದಿಲ್ಲ. ಕಾಲ ಬಾರದೇ ಅದು ಮಾತನಾಡುವುದೂ ಇಲ್ಲ. ಕಾಲಬಾರದೇ ಅದು ಯೌವನವನ್ನು ಹೊಂದುವುದಿಲ್ಲ. ಹಾಗೆಯೇ ಕಾಲಬಾರದೇ ಅದು ಸಾಯುವುದೂ ಇಲ್ಲ.

12026012a ನಾಕಾಲತೋ ಭಾನುರುಪೈತಿ ಯೋಗಂ| ನಾಕಾಲತೋಽಸ್ತಂ ಗಿರಿಮಭ್ಯುಪೈತಿ|

12026012c ನಾಕಾಲತೋ ವರ್ಧತೇ ಹೀಯತೇ ಚ| ಚಂದ್ರಃ ಸಮುದ್ರಶ್ಚ ಮಹೋರ್ಮಿಮಾಲೀ||

ಅಕಾಲದಲ್ಲಿ ಸೂರ್ಯನು ಉದಯಿಸುವುದಿಲ್ಲ ಮತ್ತು ಅಕಾಲದಲ್ಲಿ ಸೂರ್ಯನು ಅಸ್ತಂಗತನೂ ಆಗುವುದಿಲ್ಲ. ಅಕಾಲದಲ್ಲಿ ಚಂದ್ರನಾಗಲೀ ಮಹಾ ಅಲೆಗಳುಳ್ಳ ಸಮುದ್ರವಾಗಲೀ ವರ್ಧಿಸುವುದಿಲ್ಲ ಮತ್ತು ಕ್ಷೀಣಿಸುವುದೂ ಇಲ್ಲ.

12026013a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12026013c ಗೀತಂ ರಾಜ್ಞಾ ಸೇನಜಿತಾ ದುಃಖಾರ್ತೇನ ಯುಧಿಷ್ಠಿರ||

ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ, ದುಃಖಾರ್ತನಾಗಿದ್ದ ರಾಜಾ ಸೇನಜಿತುವು ಹೇಳಿದ ಗೀತವನ್ನು ಉದಾಹರಿಸುತ್ತಾರೆ.

12026014a ಸರ್ವಾನೇವೈಷ ಪರ್ಯಾಯೋ ಮರ್ತ್ಯಾನ್ ಸ್ಪೃಶತಿ ದುಸ್ತರಃ|

12026014c ಕಾಲೇನ ಪರಿಪಕ್ವಾ ಹಿ ಮ್ರಿಯಂತೇ ಸರ್ವಮಾನವಾಃ||

“ದುಸ್ತರವಾಗಿ ತಿರುಗುತ್ತಿರುವ ಕಾಲವು ಸರ್ವಮನುಷ್ಯರ ಮೇಲೂ ಪ್ರಭಾವಬೀರುತ್ತದೆ. ಸರ್ವಮಾನವರೂ ಕಾಲವು ಪರಿಪಕ್ವವಾಗಿ ಮರಣಹೊಂದುತ್ತಾರೆ.

12026015a ಘ್ನಂತಿ ಚಾನ್ಯಾನ್ನರಾ ರಾಜಂಸ್ತಾನಪ್ಯನ್ಯೇ ನರಾಸ್ತಥಾ|

12026015c ಸಂಜ್ಞೈಷಾ ಲೌಕಿಕೀ ರಾಜನ್ನ ಹಿನಸ್ತಿ ನ ಹನ್ಯತೇ||

ರಾಜನ್! ಕೆಲವು ಮನುಷ್ಯರು ಕೆಲವರನ್ನು ಸಂಹರಿಸುತ್ತಾರೆ. ಸಂಹರಿಸಿದ ಅವರನ್ನೂ ಇನ್ನು ಕೆಲವರು ಸಂಹರಿಸುತ್ತಾರೆ. ಆದರೆ ಒಬ್ಬರು ಇನ್ನೊಬ್ಬರನ್ನು ಕೊಂದರೆನ್ನುವುದು ಒಂದು ಲೌಕಿಕವಾದ ಸಂಜ್ಞೆಯಾಗಿರುತ್ತದೆ. ನಿಜವಾಗಿ ನೋಡಿದರೆ ಯಾರೂ ಕೊಲ್ಲುವುದಿಲ್ಲ ಯಾರೂ ಕೊಲ್ಲಲ್ಪಡುವುದೂ ಇಲ್ಲ.

12026016a ಹಂತೀತಿ ಮನ್ಯತೇ ಕಶ್ಚಿನ್ನ ಹಂತೀತ್ಯಪಿ ಚಾಪರೇ|

12026016c ಸ್ವಭಾವತಸ್ತು ನಿಯತೌ ಭೂತಾನಾಂ ಪ್ರಭವಾಪ್ಯಯೌ||

ಕೊಲ್ಲುತ್ತಾರೆ ಎಂದು ಕೆಲವರು ಅಭಿಪ್ರಾಯಪಟ್ಟರೆ ಕೊಲ್ಲಲ್ಪಡಲಿಲ್ಲ ಎಂದು ಇತರರು ತಿಳಿದುಕೊಳ್ಳುತ್ತಾರೆ. ಸ್ವಭಾವತಃ ಪ್ರಾಣಿಗಳ ಹುಟ್ಟು ಮತ್ತು ಮರಣ ಇವೆರಡೂ ವಿಧಿವಿಹಿತವಾಗಿವೆ.

12026017a ನಷ್ಟೇ ಧನೇ ವಾ ದಾರೇ ವಾ ಪುತ್ರೇ ಪಿತರಿ ವಾ ಮೃತೇ|

12026017c ಅಹೋ ಕಷ್ಟಮಿತಿ ಧ್ಯಾಯನ್ಶೋಕಸ್ಯಾಪಚಿತಿಂ ಚರೇತ್||

ಧನವು ನಷ್ಟವಾಗಲೀ ಅಥವಾ ಪತ್ನಿಯಾಗಲೀ, ಪುತ್ರನಾಗಲೀ ಅಥವಾ ಪಿತನಾಗಲೀ ಮೃತನಾಗಲೀ “ಅಯ್ಯೋ ಕಷ್ಟವೇ!” ಎಂದು ಯೋಚಿಸಿ, ಶೋಕವನ್ನು ಕಡಿಮೆಮಾಡಿಕೊಳ್ಳಬೇಕು.

12026018a ಸ ಕಿಂ ಶೋಚಸಿ ಮೂಢಃ ಸನ್ಶೋಚ್ಯಃ ಕಿಮನುಶೋಚಸಿ|

12026018c ಪಶ್ಯ ದುಃಖೇಷು ದುಃಖಾನಿ ಭಯೇಷು ಚ ಭಯಾನ್ಯಪಿ||

ಆದರೆ ನೀನು ಏಕೆ ಹೀಗೆ ಮೂಢನಾಗಿ ಶೋಕವನ್ನು ಹೆಚ್ಚಿಸಿಕೊಳ್ಳುತ್ತಿರುವೆ? ದುಃಖಪಡುವುದರಿಂದ ದುಃಖವೂ ಮತ್ತು ಭಯಪಡುವುದರಿಂದ ಭಯವೂ ಹೆಚ್ಚಾಗುತ್ತದೆ.

12026019a ಆತ್ಮಾಪಿ ಚಾಯಂ ನ ಮಮ ಸರ್ವಾಪಿ ಪೃಥಿವೀ ಮಮ|

12026019c ಯಥಾ ಮಮ ತಥಾನ್ಯೇಷಾಮಿತಿ ಪಶ್ಯನ್ನ ಮುಹ್ಯತಿ||

ನನಗೆ ನಾನೂ ಮತ್ತು ಈ ಸರ್ವ ಭೂಮಿಯೂ ಹೇಗೆ ನನ್ನದಲ್ಲವೋ ಹಾಗೆ ಅನ್ಯರ ದೇಹಗಳೂ, ರಾಜ್ಯಗಳೂ ಅವರದ್ದಲ್ಲ ಎಂದು ಕಾಣುವವನು ಹೀಗೆ ಮೋಹಪಡುವುದಿಲ್ಲ.

12026020a ಶೋಕಸ್ಥಾನಸಹಸ್ರಾಣಿ ಹರ್ಷಸ್ಥಾನಶತಾನಿ ಚ|

12026020c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್||

ಶೋಕಪಡುವುದಕ್ಕೆ ಸಹಸ್ರಾರು ಕಾರಣಗಳೂ, ಹರ್ಷಿಸುವುದಕ್ಕೆ ನೂರಾರು ಕಾರಣಗಳೂ ಪ್ರತಿದಿನ ಮೂಢನನ್ನು ಕಾಡುತ್ತಿರುತ್ತವೆ. ಆದರೆ ಪಂಡಿತನನ್ನಲ್ಲ!

12026021a ಏವಮೇತಾನಿ ಕಾಲೇನ ಪ್ರಿಯದ್ವೇಷ್ಯಾಣಿ ಭಾಗಶಃ|

12026021c ಜೀವೇಷು ಪರಿವರ್ತಂತೇ ದುಃಖಾನಿ ಚ ಸುಖಾನಿ ಚ||

ಹೀಗೆ ಪ್ರಿಯ-ಅಪ್ರಿಯ ಸಮಯಗಳು ಮತ್ತು ದುಃಖ-ಸುಖಗಳು ಜೀವಿಗೆ ಕಾಲಾನುಗುಣವಾಗಿ ಒಂದರ ನಂತರ ಇನ್ನೊಂದು ತಿರುಗಿ ತಿರುಗಿ ಬರುತ್ತಲೇ ಇರುತ್ತವೆ.

12026022a ದುಃಖಮೇವಾಸ್ತಿ ನ ಸುಖಂ ತಸ್ಮಾತ್ತದುಪಲಭ್ಯತೇ|

12026022c ತೃಷ್ಣಾರ್ತಿಪ್ರಭವಂ ದುಃಖಂ ದುಃಖಾರ್ತಿಪ್ರಭವಂ ಸುಖಮ್||

ಜೀವಿಗಳಿಗೆ ದುಃಖವಿರುವುದೇ ಹೊರತು ಸುಖವೆನ್ನುವುದು ಇಲ್ಲ. ಆದುದರಿಂದಲೇ ಅಡಿಗಡಿಗೆ ದುಃಖವೇ ಆಗುತ್ತಿರುತ್ತದೆ. ಆಸೆಗಳಿಂದಲೇ ದುಃಖವು ಹುಟ್ಟುತ್ತದೆ. ದುಃಖದ ವಿನಾಶವೇ ಸುಖ.

12026023a ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್|

12026023c ನ ನಿತ್ಯಂ ಲಭತೇ ದುಃಖಂ ನ ನಿತ್ಯಂ ಲಭತೇ ಸುಖಮ್||

ಸುಖದ ನಂತರ ದುಃಖ ಮತ್ತು ದುಃಖದ ನಂತರ ಸುಖ. ದುಃಖವು ಯಾವಾಗಲೂ ಇರುವುದಿಲ್ಲ ಮತು ಸುಖವೂ ಯಾವಾಗಲೂ ಇರುವುದಿಲ್ಲ.

12026024a ಸುಖಮಂತೇ ಹಿ ದುಃಖಾನಾಂ ದುಃಖಮಂತೇ ಸುಖಸ್ಯ ಚ|

12026024c ತಸ್ಮಾದೇತದ್ದ್ವಯಂ ಜಹ್ಯಾದ್ಯ ಇಚ್ಚೇಚ್ಚಾಶ್ವತಂ ಸುಖಮ್||

ಏಕೆಂದರೆ ಸುಖದ ಅಂತ್ಯವೇ ದುಃಖ ಮತ್ತು ದುಃಖದ ಅಂತ್ಯವೇ ಸುಖ. ಆದುದರಿಂದ ಇವೆರಡನ್ನೂ ತ್ಯಜಿಸಿ ಇಂದು ಶಾಶ್ವತ ಸುಖವನ್ನು ಬಯಸು.

12026025a ಯನ್ನಿಮಿತ್ತಂ ಭವೇಚ್ಚೋಕಸ್ತಾಪೋ ವಾ ದುಃಖಮೂರ್ಚಿತಃ|

12026025c ಆಯಾಸೋ ವಾಪಿ ಯನ್ಮೂಲಸ್ತದೇಕಾಂಗಮಪಿ ತ್ಯಜೇತ್||

ಯಾವಕಾರಣದಿಂದ ಶೋಕವಾಗಲೀ, ತಾಪವಾಗಲೀ, ದುಃಖವಾಗಲೀ, ಆಯಾಸವಾಗಲೀ ಉಂಟಾಗುತ್ತದೆಯೋ ಅದರ ಮೂಲವನ್ನೇ, ಅದು ಶರೀರದ ಒಂದು ಅಂಗವಾಗಿದ್ದರೂ, ಕಿತ್ತೊಗೆಯಬೇಕು.

12026026a ಸುಖಂ ವಾ ಯದಿ ವಾ ದುಃಖಂ ಪ್ರಿಯಂ ವಾ ಯದಿ ವಾಪ್ರಿಯಮ್|

12026026c ಪ್ರಾಪ್ತಂ ಪ್ರಾಪ್ತಮುಪಾಸೀತ ಹೃದಯೇನಾಪರಾಜಿತಃ||

ಸುಖವಾಗಲೀ, ದುಃಖವಾಗಲೀ, ಪ್ರಿಯವಾದದ್ದಾಗಲೀ, ಅಪ್ರಿಯವಾದದ್ದಾಗಲೀ ಅವುಗಳು ಬಂದಹಾಗೆಯೇ, ಸೋಲನ್ನಪ್ಪಿಕೊಳ್ಳದೇ, ಸಂತೋಷದಿಂದ ಅನುಭವಿಸಬೇಕು.

12026027a ಈಷದಪ್ಯಂಗ ದಾರಾಣಾಂ ಪುತ್ರಾಣಾಂ ವಾ ಚರಾಪ್ರಿಯಮ್|

12026027c ತತೋ ಜ್ಞಾಸ್ಯಸಿ ಕಃ ಕಸ್ಯ ಕೇನ ವಾ ಕಥಮೇವ ವಾ||

ಅಂಗ! ನಿನ್ನ ಪತ್ನಿಯರಿಗೆ ಅಥವಾ ಮಕ್ಕಳಿಗೆ ಸ್ವಲ್ಪವಾದರೂ ಅಪ್ರಿಯವಾದುದನ್ನು ಮಾಡು. ಆಗ ನೀನು ಯಾರು, ಯಾರಿಗೆ ಸೇರಿದವನು, ಯಾರಿಂದ ಇಲ್ಲಿಗೆ ಬಂದಿರುವೆ ಮತ್ತು ಹೇಗೆ ಬಂದಿರುವೆ ಎನ್ನುವುದನ್ನು ತಿಳಿದುಕೊಳ್ಳುತ್ತೀಯೆ.

12026028a ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂ ಗತಾಃ|

12026028c ತ ಏವ ಸುಖಮೇಧಂತೇ ಮಧ್ಯಃ ಕ್ಲೇಶೇನ ಯುಜ್ಯತೇ||

ಅತ್ಯಂತ ಮೂಢರಾದವರು ಮತ್ತು ಅತ್ಯಂತ ಬುದ್ಧಿಶಾಲಿಗಳು ಮಾತ್ರ ಈ ಲೋಕದಲ್ಲಿ ಪರಮ ಸುಖವನ್ನು ಹೊಂದುತ್ತಾರೆ. ಮಧ್ಯವರ್ತಿಗಳು ಕ್ಲೇಶಪಡುತ್ತಲೇ ಇರುತ್ತಾರೆ.”

12026029a ಇತ್ಯಬ್ರವೀನ್ಮಹಾಪ್ರಾಜ್ಞೋ ಯುಧಿಷ್ಠಿರ ಸ ಸೇನಜಿತ್|

12026029c ಪರಾವರಜ್ಞೋ ಲೋಕಸ್ಯ ಧರ್ಮವಿತ್ಸುಖದುಃಖವಿತ್||

ಯುಧಿಷ್ಠಿರ! ಭೂತ-ಭವಿಷ್ಯಗಳನ್ನೂ ಲೋಕಗಳ ಧರ್ಮವನ್ನೂ, ಸುಖ-ದುಃಖಗಳನ್ನೂ ತಿಳಿದಿದ್ದ ಮಹಾಪ್ರಾಜ್ಞ ಸೇನಜಿತುವು ಹೀಗೆ ಹೇಳಿದನು:

12026030a ಸುಖೀ ಪರಸ್ಯ ಯೋ ದುಃಖೇ ನ ಜಾತು ಸ ಸುಖೀ ಭವೇತ್|[1]

12026030c ದುಃಖಾನಾಂ ಹಿ ಕ್ಷಯೋ ನಾಸ್ತಿ ಜಾಯತೇ ಹ್ಯಪರಾತ್ಪರಮ್||

ಇತರರ ದುಃಖವನ್ನು ನೋಡಿ ಖುಷಿಪಡುವವನಿಗೆ ಸುಖವೆಂಬುದೇ ಇರುವುದಿಲ್ಲ. ದುಃಖಗಳಿಗೆ ಕೊನೆಯೆಂಬುದೇ ಇಲ್ಲ. ಒಂದರ ಮೇಲೆ ಒಂದು ದುಃಖವು ಬರುತ್ತಲೇ ಇರುತ್ತದೆ.

12026031a ಸುಖಂ ಚ ದುಃಖಂ ಚ ಭವಾಭವೌ ಚ| ಲಾಭಾಲಾಭೌ ಮರಣಂ ಜೀವಿತಂ ಚ|

12026031c ಪರ್ಯಾಯಶಃ ಸರ್ವಮಿಹ ಸ್ಪೃಶಂತಿ| ತಸ್ಮಾದ್ಧೀರೋ ನೈವ ಹೃಷ್ಯೇನ್ನ ಕುಪ್ಯೇತ್[2]||

ಸುಖ-ದುಃಖಗಳೂ, ಲಾಭ-ನಷ್ಟಗಳೂ, ಜನನ-ಮರಣಗಳು, ಉತ್ಪತ್ತಿ-ವಿನಾಶಗಳೂ ಒಂದಾದ ಮೇಲೆ ಇನ್ನೊಂದರಂತೆ ಪರ್ಯಾಯವಾಗಿ ಜೀವಿಗಳಿಗೆ ತಟ್ಟುತ್ತಲೇ ಇರುತ್ತವೆ. ಆದುದರಿಂದ ಧೀರನಾದವನು ಇವುಗಳ ಕುರಿತು ಹರ್ಷಿಸುವುದೂ ಇಲ್ಲ, ಕುಪಿತನಾಗುವುದೂ ಇಲ್ಲ.

12026032a ದೀಕ್ಷಾಂ ಯಜ್ಞೇ ಪಾಲನಂ ಯುದ್ಧಮಾಹುರ್| ಯೋಗಂ ರಾಷ್ಟ್ರೇ ದಂಡನೀತ್ಯಾ ಚ ಸಮ್ಯಕ್|

12026032c ವಿತ್ತತ್ಯಾಗಂ ದಕ್ಷಿಣಾನಾಂ ಚ ಯಜ್ಞೇ| ಸಮ್ಯಗ್ ಜ್ಞಾನಂ ಪಾವನಾನೀತಿ ವಿದ್ಯಾತ್||

ಯುದ್ಧವೇ ಯಜ್ಞ ದೀಕ್ಷೆಯೆಂದೂ, ರಾಷ್ಟ್ರವನ್ನು ದಂಡನೀತಿಯಿಂದ ಪಾಲಿಸುವುದನ್ನು ಯೋಗವೆಂದೂ, ಯಜ್ಞಗಳಲ್ಲಿ ಸಂಪತ್ತನ್ನು ದಕ್ಷಿಣೆಯಾಗಿ ಕೊಡುವುದನ್ನು ತ್ಯಾಗವನ್ನೂ ರಾಜರಿಗೆ ಪಾವನವಾದುವೆಂದು ಹೇಳುತ್ತಾರೆ. ಅವುಗಳ ಸಂಪೂರ್ಣ ಜ್ಞಾನವಿರಬೇಕು.

12026033a ರಕ್ಷನ್ರಾಷ್ಟ್ರಂ ಬುದ್ಧಿಪೂರ್ವಂ ನಯೇನ| ಸಂತ್ಯಕ್ತಾತ್ಮಾ ಯಜ್ಞಶೀಲೋ ಮಹಾತ್ಮಾ|

12026033c ಸರ್ವಾಽಲ್ಲೋಕಾನ್ಧರ್ಮಮೂರ್ತ್ಯಾ ಚರಂಶ್ಚಾಪ್ಯ್| ಊರ್ಧ್ವಂ ದೇಹಾನ್ಮೋದತೇ ದೇವಲೋಕೇ||

ಬುದ್ಧಿಪೂರ್ವಕವಾಗಿ ಸುನೀತಿಯಿಂದ ತನ್ನದೆನ್ನುವುದನ್ನು ತ್ಯಜಿಸಿ ರಾಷ್ಟ್ರವನ್ನು ರಕ್ಷಿಸುತ್ತಾ, ಯಜ್ಞಶೀಲನಾಗಿ ಧರ್ಮವನ್ನು ರಕ್ಷಿಸಲು ಸರ್ವ ಲೋಕಗಳನ್ನೂ ಚರಿಸುವ ಮಹಾತ್ಮನು ದೇಹಾವಸಾನದ ನಂತರ ದೇವಲೋಕದಲ್ಲಿ ಮೋದಿಸುತ್ತಾನೆ.

12026034a ಜಿತ್ವಾ ಸಂಗ್ರಾಮಾನ್ಪಾಲಯಿತ್ವಾ ಚ ರಾಷ್ಟ್ರಂ| ಸೋಮಂ ಪೀತ್ವಾ ವರ್ಧಯಿತ್ವಾ ಪ್ರಜಾಶ್ಚ|

12026034c ಯುಕ್ತ್ಯಾ ದಂಡಂ ಧಾರಯಿತ್ವಾ ಪ್ರಜಾನಾಂ| ಯುದ್ಧೇ ಕ್ಷೀಣೋ ಮೋದತೇ ದೇವಲೋಕೇ||

ಸಂಗ್ರಾಮಗಳನ್ನು ಗೆದ್ದು, ರಾಷ್ಟ್ರವನ್ನು ಪಾಲಿಸುತ್ತಾ, ಸೋಮವನ್ನು ಕುಡಿಯುತ್ತಾ, ಪ್ರಜೆಗಳನ್ನು ಅಭಿವೃದ್ಧಿಗೊಳಿಸುತ್ತಾ, ದಂಡಯುಕ್ತನಾಗಿ ಪ್ರಜೆಗಳನ್ನು ಪಾಲಿಸುತ್ತಾ ಯುದ್ಧದಲ್ಲಿ ಮಡಿದ ರಾಜನು ದೇವಲೋಕದಲ್ಲಿ ಮೋದಿಸುತ್ತಾನೆ.

12026035a ಸಮ್ಯಗ್ವೇದಾನ್ಪ್ರಾಪ್ಯ ಶಾಸ್ತ್ರಾಣ್ಯಧೀತ್ಯ| ಸಮ್ಯಗ್ರಾಷ್ಟ್ರಂ ಪಾಲಯಿತ್ವಾ ಚ ರಾಜಾ|

12026035c ಚಾತುರ್ವರ್ಣ್ಯಂ ಸ್ಥಾಪಯಿತ್ವಾ ಸ್ವಧರ್ಮೇ| ಪೂತಾತ್ಮಾ ವೈ ಮೋದತೇ ದೇವಲೋಕೇ||

ಸಂಪೂರ್ಣ ವೇದಗಳನ್ನು ಪಡೆದು, ಶಾಸ್ತ್ರಗಳನ್ನು ಅಧ್ಯಯನ ಮಾಡಿ, ರಾಜ್ಯವನ್ನು ಚೆನ್ನಾಗಿ ಪಾಲಿಸುತ್ತಾ ಚಾತುರ್ವರ್ಣ್ಯವನ್ನು ಸ್ಥಾಪಿಸಿ, ಸ್ವಧರ್ಮದಲ್ಲಿಯೇ ಪೂತಾತ್ಮನಾಗಿರುವ ರಾಜನು ದೇವಲೋಕದಲ್ಲಿ ಮೋದಿಸುತ್ತಾನೆ.

12026036a ಯಸ್ಯ ವೃತ್ತಂ ನಮಸ್ಯಂತಿ ಸ್ವರ್ಗಸ್ಥಸ್ಯಾಪಿ ಮಾನವಾಃ|

12026036c ಪೌರಜಾನಪದಾಮಾತ್ಯಾಃ ಸ ರಾಜಾ ರಾಜಸತ್ತಮಃ||

ಸ್ವರ್ಗಸ್ಥನಾದಮೇಲೂ ಯಾರ ನಡತೆಗಳನ್ನು ಮಾನವರು, ಪೌರಜಾನಪದರು ಮತ್ತು ಅಮಾತ್ಯರು ನಮಸ್ಕರಿಸುತ್ತಾರೋ ಆ ರಾಜನೇ ರಾಜಸತ್ತಮನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸೇನಜಿದುಪಾಖ್ಯಾನೇ ಷಡ್ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸೇನಜಿದುಪಾಖ್ಯಾನ ಎನ್ನುವ ಇಪ್ಪತ್ತಾರನೇ ಅಧ್ಯಾಯವು.

[1] ಯೇನ ದುಃಖೇನ ಯೋ ದುಃಖೀ ನ ಸ ಜಾತು ಸುಖೀ ಭವೇತ್| ಅರ್ಥಾತ್ ಯಾವನು ತನಗೆ ಒದಗಿದ ಯಾವುದೋ ದುಃಖದಿಂದ ದುಃಖಶೀಲನಾಗಿಯೇ ಇರುತ್ತಾನೆಯೋ ಅವನು ಎಂದಿಗೂ ಸುಖಿಯಾಗುವುದೇ ಇಲ್ಲ ಎಂದು ಭಾರತ ದರ್ಶನದಲ್ಲಿದೆ.

[2] ಭಾರತ ದರ್ಶನದಲ್ಲಿ “ನ ಕುಪ್ಯೇತ್” ಎಂಬುದರ ಬದಲಾಗಿ “ನ ಶೋಚೇತ್” ಅಂದರೆ “ಶೋಕಿಸಬಾರದು” ಎಂದಿದೆ.

Comments are closed.