ಯುಧಿಷ್ಠಿರನ ಪಟ್ಟಾಭಿಷೇಕ

ಅನಂತರ ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟ ಚಂದ್ರಮನಂತೆ ರಾಜ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ತನ್ನ ಪುರವನ್ನು ಪ್ರವೇಶಿಸಿದನು. ಪುರ ಪ್ರವೇಶಮಾಡುವಾಗ ಧರ್ಮಜ್ಞ ಕುಂತೀಪುತ್ರ ಯುಧಿಷ್ಠಿರನು ದೇವತೆಗಳನ್ನೂ, ಸಹಸ್ರಾರು ಬ್ರಾಹ್ಮಣರನ್ನೂ ಅರ್ಚಿಸಿದನು. ಅನಂತರ ದೇವ ಸೋಮನು ಅಮೃತಮಯ ರಥವನ್ನು ಏರುವಂತೆ ಅವನು ಹೊಸತಾದ, ಶುಭ್ರವಾದ, ಕಂಬಳಿ-ಜಿನಗಳನ್ನು ಹೊದೆಸಿದ್ದ, ಶುಭಲಕ್ಷಣಗಳುಳ್ಳ ಬಿಳಿಯಾದ ಹದಿನಾರು ಎತ್ತುಗಳನ್ನು ಕಟ್ಟಿದ್ದ, ಮಂತ್ರಗಳಿಂದ ಅರ್ಚಿತಗೊಂಡಿದ್ದ, ಪುಣ್ಯ ಮಹರ್ಷಿಗಳಿಂದ ಸ್ತುತಿಸಲ್ಪಡುತ್ತಿದ್ದ ರಥವನ್ನು ಏರಿದನು. ಕೌಂತೇಯ ಭೀಮಪರಾಕ್ರಮಿ ಭೀಮನು ಕಡಿವಾಣಗಳನ್ನು ಹಿಡಿದನು. ಅರ್ಜುನನು ಭಾನುವಂತೆ ಬಿಳುಪಾದ ಚತ್ರವನ್ನು ಹಿಡಿದನು. ಅವನ ನೆತ್ತಿಯ ಮೇಲೆ ಹಿಡಿದಿದ್ದ ಆ ಬಿಳುಪಾದ ಕೊಡೆಯು ಆಕಾಶದಲ್ಲಿ ನಕ್ಷತ್ರಗಳಿಂದ ಸಮಾಕುಲವಾದ ಬಿಳಿಯ ಮೋಡದಂತೆ ಪ್ರಕಾಶಿಸುತ್ತಿತ್ತು. ವೀರರಾದ ಮಾದ್ರೀಪುತ್ರರಿಬ್ಬರೂ ಚಂದ್ರನ ಕಿರಣಗಳ ಪ್ರಭೆಯುಳ್ಳ ಅಲಂಕೃತವಾದ ಚಾಮರ-ಬೀಸಣಿಗೆಗಳನ್ನು ಹಿಡಿದಿದ್ದರು. ಹಾಗೆ ಸಮಲಂಕೃತರಾಗಿ ರಥದಲ್ಲಿದ್ದ ಆ ಐವರು ಸಹೋದರರು ಪಂಚಮಹಾಭೂತಗಳಂತೆಯೇ ಕಾಣುತ್ತಿದ್ದರು. ಯುಯುತ್ಸುವು ಮಹಾವೇಗದ ಕುದುರೆಗಳನ್ನು ಕಟ್ಟಿದ್ದ ಶುಭ್ರ ರಥದಲ್ಲಿ ಕುಳಿತು ಪಾಂಡವಾಗ್ರಜನನ್ನು ಹಿಂಬಾಲಿಸಿ ಹೋದನು. ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ಹೇಮಮಯ ರಥದಲ್ಲಿ ಸಾತ್ಯಕಿಯೊಂದಿಗೆ ಕುಳಿತಿದ್ದ ಕೃಷ್ಣನು ಕುರುಗಳನ್ನು ಹಿಂಬಾಲಿಸಿ ಹೋದನು. ಪಾರ್ಥನ ಜ್ಯೇಷ್ಠ ಪಿತ ಧೃತರಾಷ್ಟ್ರನು ಗಾಂಧಾರಿಯ ಸಹಿತ ಮನುಷ್ಯರು ಹೊತ್ತಿದ್ದ ಪಲ್ಲಕ್ಕಿಯಲ್ಲಿ ಕುಳಿತು ಧರ್ಮರಾಜನ ರಥದ ಮುಂಭಾಗದಲ್ಲಿ ಹೋಗುತ್ತಿದ್ದನು. ಕುಂತಿ, ಕೃಷ್ಣೆ ದ್ರೌಪದಿ ಮತ್ತು ಎಲ್ಲ ಕುರುಸ್ತ್ರೀಯರು ವಿದುರನನನ್ನು ಮುಂದಿಟ್ಟುಕೊಂಡು ತಮತಮಗೆ ಯೋಗ್ಯ ವಾದ ಪಲ್ಲಕ್ಕಿಗಳಲ್ಲಿ ಕುಳಿತು ಹೋದರು. ಅವರ ಹಿಂದೆ ಅನೇಕ ಸಮಲಂಕೃತ ರಥಗಳೂ, ಆನೆಗಳೂ, ಪದಾತಿಗಳೂ ಮತ್ತು ಕುದುರೆಗಳೂ ಸಾಗುತ್ತಿದ್ದವು. ಆಗ ವೈತಾಲಿಕರು ಮತ್ತು ಸೂತ-ಮಾಗಧರು ಸುಂದರ ವಾಣಿಯಲ್ಲಿ ಸ್ತುತಿಸುತ್ತಿರುವಾಗ ರಾಜನು ಹಸ್ತಿನಾಪುರ ನಗರಕ್ಕೆ ಪ್ರಯಾಣಿಸಿದನು. ಹೃಷ್ಟ-ಪುಷ್ಟ ಜನರಿಂದಲೂ ಜಯಘೋಷಮಾಡುತ್ತಿದ್ದ ಜನರಿಂದಲೂ ಸಮಾಕುಲವಾಗಿದ್ದ ಆ ಮಹಾಬಾಹುವಿನ ಪ್ರಯಾಣವು ಭುವಿಯಲ್ಲಿಯೇ ಅಪ್ರತಿಮವಾಗಿತ್ತು.

ಪಾರ್ಥನು ಪ್ರಯಾಣಿಸುತ್ತಿರುವಾಗ ನಗರವಾಸಿಗಳು ನಗರವನ್ನೂ ರಾಜಮಾರ್ಗವನ್ನೂ ಯಥಾವತ್ತಾಗಿ ಅಲಂಕರಿಸಿದ್ದರು. ಬಿಳಿಯ ಹೂಮಾಲೆಗಳಿಂದಲೂ, ಪತಾಕೆಗಳಿಂದಲೂ ಅಲಂಕೃತ ರಾಜಮಾರ್ಗವು ಧೂಪಗಳಿಂದ ಸುಗಂಧಮಯವಾಗಿತ್ತು. ಚೂರ್ಣಗಳಿಂದಲೂ, ಗಂಧಗಳಿಂದಲೂ, ನಾನಾ ಪುಷ್ಪಗಳ ಗುಚ್ಚಗಳಿಂದಲೂ, ಮಾಲೆಗಳಿಂದಲೂ ರಾಜನ ಅರಮನೆಯು ಅಲಂಕರಿಸಲ್ಪಟ್ಟಿತ್ತು. ನಗರದ್ವಾರದಲ್ಲಿ ನೀರಿನಿಂದ ತುಂಬಿದ್ದ ಗಟ್ಟಿಯಾದ ಹೊಸ ಕುಂಭಗಳನ್ನಿಟ್ಟಿದ್ದರು ಮತ್ತು ಸುಮನಸರಾದ ಕನ್ಯೆಯರೂ ಅಲ್ಲಲ್ಲಿ ನಿಂತಿದ್ದರು. ಹಾಗೆ ಸ್ವಲಂಕೃತವಾದ ನಗರದ್ವಾರವನ್ನು ಶುಭವಾಕ್ಯಗಳಿಂದ ಸ್ತುತಿಸಲ್ಪಡುತ್ತಾ ಸುಹೃದಯರೊಂದಿಗೆ ಪಾಂಡುನಂದನನು ಪ್ರವೇಶಿಸಿದನು.

ಪಾರ್ಥರು ಪ್ರವೇಶಿಸುತ್ತಿದ್ದಂತೆ ಅವರನ್ನು ನೋಡಲು ಸಹಸ್ರಾರು ಪುರವಾಸೀ ಜನರು ಬಂದು ಸೇರಿದರು. ಚಂದ್ರೋದಯದ ಸಮಯದಲ್ಲಿ ಉಕ್ಕಿಬರುವ ಸಮುದ್ರದಂತೆ ಸಿಂಗರಿಸಿದ ರಾಜಮಾರ್ಗವು ಚೌಕದಲ್ಲಿ ಅಸಂಖ್ಯಾತ ಜನಸ್ತೋಮದಿಂದ ಶೋಭಿಸುತ್ತಿತ್ತು. ರಾಜಮಾರ್ಗದಲ್ಲಿದ್ದ ವಿಶಾಲ ರತ್ನಖಚಿತ ಭವನಗಳು ಸ್ತ್ರೀಯರಿಂದ ತುಂಬಿಹೋಗಿ ಅವರ ಭಾರದಿಂದ ಕಂಪಿಸುತ್ತಿವೆಯೋ ಎಂಬಂತೆ ತೋರುತ್ತಿದ್ದವು. ಆ ಸ್ತ್ರೀಯರು ನಾಚಿಕೊಂಡು ಮೆಲ್ಲನೇ ಯುಧಿಷ್ಠಿರನನ್ನು, ಭೀಮಸೇನ-ಅರ್ಜುನರನ್ನು ಮತ್ತು ಇಬ್ಬರು ಮಾದ್ರೀಪುತ್ರ ಪಾಂಡವರನ್ನು ಪ್ರಶಂಸಿಸುತ್ತಿದ್ದರು. “ಪಾಂಚಾಲೀ! ಮಹರ್ಷಿಗಳನ್ನು ಸೇವಿಸುತ್ತಿದ್ದ ಗೌತಮಿಯಂತೆ[1] ಈ ಪುರುಷಸತ್ತಮರನ್ನು ಸೇವಿಸುತ್ತಿದ್ದ ನೀನೇ ಧನ್ಯಳು! ನೀನು ಮಾಡಿರುವ ವ್ರತಚರ್ಯೆಗಳೂ ಕರ್ಮಗಳೂ ಅಮೋಘವಾದವುಗಳು!” ಹೀಗೆ ಸ್ತ್ರೀಯರು ಕೃಷ್ಣೆಯನ್ನು ಪ್ರಶಂಸಿಸುತ್ತಿದ್ದರು. ರಹಸ್ಯವಾಗಿ ಆಡಿಕೊಳ್ಳುತ್ತಿದ್ದ ಆ ಪ್ರಶಂಸೆಯ ಮಾತುಗಳಿಂದಲೂ ಪ್ರೀತಿಯುಕ್ತ ಮಾತುಗಳಿಂದಲೂ ಆ ಪುರವು ತುಂಬಿಹೋಗಿತ್ತು. ಯಥಾಯುಕ್ತವಾಗಿ ರಾಜಮಾರ್ಗವನ್ನು ದಾಟಿ, ಶೋಭಾಯಮಾನವಾಗಿ ಅಲಂಕೃತಗೊಂಡಿದ್ದ ರಾಜಭವನವನ್ನು ಯುಧಿಷ್ಠಿರನು ಪ್ರವೇಶಿಸಿದನು. ಆಗ ಎಲ್ಲ ಸಾಮಾನ್ಯ ಜನರೂ, ಪೌರಜನರೂ ಅಲ್ಲಲ್ಲಿ ಸೇರಿಕೊಂಡು ಕರ್ಣಾನಂದಕರವಾದ ಮಾತುಗಳನ್ನಾಡುತ್ತಿದ್ದರು: “ರಾಜೇಂದ್ರ! ಸೌಭಾಗ್ಯವಶಾತ್ ನೀನು ಶತ್ರುಗಳನ್ನು ಜಯಿಸಿರುವೆ. ಸೌಭಾಗ್ಯವಶಾತ್ ನೀನು ಪುನಃ ಧರ್ಮ-ಬಲಗಳನ್ನುಪಯೋಗಿಸಿ ರಾಜ್ಯವನ್ನು ಪಡೆದಿರುವೆ! ನೀನು ನೂರು ವರ್ಷಗಳ ಪರ್ಯಂತವಾಗಿ ನಮ್ಮ ರಾಜನಾಗಿರು. ಇಂದ್ರನು ದಿವವನ್ನು ಹೇಗೋ ಹಾಗೆ ಧರ್ಮದಿಂದ ಪ್ರಜೆಗಳನ್ನು ಪಾಲಿಸು!”

ರಾಜಭವನದ ದ್ವಾರದಲ್ಲಿ ಈ ರೀತಿ ಮಂಗಲದ್ರವ್ಯಗಳಿಂದ ಪೂಜಿತನಾಗಿ ಅವನು ಎಲ್ಲಕಡೆಗಳಿಂದ ಹೇಳುತ್ತಿದ್ದ ದ್ವಿಜರ ಆಶೀರ್ವಾದಗಳನ್ನು ಸ್ವೀಕರಿಸಿದನು. ದೇವರಾಜನ ಭವನದಂತಿದ್ದ ರಾಜಭವನವನ್ನು ಪ್ರವೇಶಿಸಿ ವಿಜಯ ಘೋಷಗಳಿಂದ ಸಂಯುಕ್ತವಾಗಿದ್ದ ರಥದಿಂದ ಕೆಳಕ್ಕೆಳಿದನು. ಶ್ರೀಯಿಂದ ಬೆಳಗುತ್ತಿದ್ದ ಅರಮನೆಯ ಒಳಭಾಗವನ್ನು ಪ್ರವೇಶಿಸಿ ಅವನು ಕುಲದೇವತೆಗಳ ಸನ್ನಿಧಿಗೆ ಹೋಗಿ ದೇವತೆಗಳೆಲ್ಲರನ್ನೂ ರತ್ನ-ಗಂಧ-ಮಾಲೆಗಳಿಂದ ಪೂಜಿಸಿದನು. ಶ್ರೀಮಂತನೂ ಮಹಾಯಶಸ್ವಿಯೂ ಆಗಿದ್ದ ಅವನು ಪುನಃ ರಾಜಭವನದಿಂದ ಹೊರಟು ಎದುರಿಗೆ ನೆರೆದಿದ್ದ ಬ್ರಾಹ್ಮಣರನ್ನು ನೋಡಿದನು. ಆಶೀರ್ವದಿಸಲು ಅಲ್ಲಿಗೆ ಬಂದು ಸೇರಿದ್ದ ವಿಪ್ರರಿಂದ ಪರಿವೃತನಾದ ಅವನು ವಿಮಲ ಆಕಾಶದಲ್ಲಿ ತಾರಾಗಣಗಳಿಂದ ಸುತ್ತುವರೆಯಲ್ಪಟ್ಟ ಚಂದ್ರನಂತೆ ಶೋಭಿಸಿದನು. ಆ ದ್ವಿಜರನ್ನು ಕೌಂತೇಯನು ಗುರು ಧೌಮ್ಯ ಮತ್ತು ದೊಡ್ಡಪ್ಪರನ್ನು ಮುಂದಿಟ್ಟುಕೊಂಡು ಪುಷ್ಪಗಳಿಂದಲೂ, ಮೋದಕಗಳಿಂದಲೂ, ರತ್ನ-ಹಿರಣ್ಯಗಳಿಂದಲೂ, ಗೋವುಗಳಿಂದಲೂ ಮತ್ತು ವಿವಿಧ ವಸ್ತುಗಳಿಂದ ಪೂಜಿಸಿದನು. ಆಗ ಆಕಾಶವನ್ನೇ ಸ್ತಬ್ಧಗೊಳಿವಂಥಹ ಪುಣ್ಯಾಹ ಘೋಷವು ಕೇಳಿಬಂದಿತು. ಸುಹೃದಯರಿಗೆ ಕೇಳಿದರೆ ಪುಣ್ಯವನ್ನೂ ಹರ್ಷವನ್ನೂ ತರುವ ಘೋಷಗಳು ಕೇಳಿಬಂದವು. ಅಲ್ಲಿ ಹಂಸಗಳಂತೆ ಘೋಷಿಸುತ್ತಿದ್ದ ವೇದವಿದುಷ ದ್ವಿಜರ ಶ್ರೇಷ್ಠ ಪದಾಕ್ಷರಸಂಪನ್ನ ವಾಣಿಯು ಎಲ್ಲರಿಗೂ ಸ್ಪಷ್ಟವಾಗಿ ಕೇಳಿಬರುತ್ತಿತ್ತು. ಆಗ ಮನೋರಮ ದುಂದುಭಿ ಮತ್ತು ಶಂಖಗಳ ನಿರ್ಘೋಷವೂ ಜಯಕಾರ ಧ್ವನಿಯೂ ಕೇಳಿಬಂದವು.

ಚರ್ವಾಕಚರಿತ ಕಥನ

ಆಗ ಅಲ್ಲಿ ವಿಪ್ರಜನರು ಪುನಃ ನಿಃಷಬ್ಧರಾಗಿರಲು ಬ್ರಾಹ್ಮಣ ವೇಷಧರಿಸಿದ್ದ ರಾಕ್ಷಸ ಚಾರ್ವಾಕನು ರಾಜನನ್ನು ಉದ್ದೇಶಿಸಿ ಹೇಳಿದನು. ಆ ದುರ್ಯೋಧನನ ಸಖನು ಭಿಕ್ಷುವಿನ ರೂಪವನ್ನು ಧರಿಸಿ ಅಕ್ಷಮಾಲೆಯನ್ನು ಹಿಡಿದು ಶಿಖಾಧಾರಿಯಾಗಿ ತ್ರಿದಂಡವನ್ನು ಹಿಡಿದು ಧೈರ್ಯಶಾಲಿಯಾಗಿ ತನ್ನ ನಿಜರೂಪವನ್ನು ಮರೆಸಿಕೊಂಡಿದ್ದನು. ಆಶೀರ್ವಾದವನ್ನು ನೀಡಲು ಬಂದಿದ್ದ ಆ ಎಲ್ಲ ತಪೋನಿಯಮ ಸಂಸ್ಥಿತ ಸಹಸ್ರಾರು ವಿಪ್ರರ ಮಧ್ಯದಿಂದ ಆ ದುಷ್ಟನು ಮುಂದೆ ಬಂದು ಆ ವಿಪ್ರರ ಅನುಮತಿಯನ್ನು ಕೇಳದೇ ಮಹಾತ್ಮ ಪಾಂಡವರಿಗೆ ಕೇಡನ್ನೇ ಬಯಸುತ್ತಿದ್ದ ಆ ದುಷ್ಟನು ಮಹೀಪತಿಗೆ ಹೇಳತೊಡಗಿದನು. “ಈ ಎಲ್ಲ ದ್ವಿಜರೂ ನಿನಗೆ ಇದನ್ನು ಹೇಳುವ ಭಾರವನ್ನು ನನಗೆ ವಹಿಸಿದ್ದಾರೆ. ಜ್ಞಾತಿಬಾಂಧವರನ್ನು ಸಂಹರಿಸಿದ ಕುನೃಪತಿ ನಿನಗೆ ಧಿಕ್ಕಾರ! ಕೌಂತೇಯ! ಕುಲನಾಶವನ್ನು ಮಾಡಿರುವ ನಿನಗೆ ಈ ರಾಜ್ಯದಿಂದ ಏನು ಪ್ರಯೋಜನ? ಗುರುಜನರನ್ನೂ ಸಂಹರಿಸಿದ ನಿನಗೆ ಬದುಕಿರುವುದಕ್ಕಿಂತಲೂ ಮರಣವೇ ಶ್ರೇಯಸ್ಕರವಾದುದು!”

ಆ ಘೋರ ರಾಕ್ಷಸನ ಕಠೋರ ಮಾತನ್ನು ಕೇಳಿ ದ್ವಿಜರು ವ್ಯಥಿತರಾಗಿ ಶೋಕಿಸಿದರು. ಆಗ ಆ ಬ್ರಾಹ್ಮಣರೆಲ್ಲರೂ ರಾಜಾ ಯುಧಿಷ್ಠಿರನೂ ಪರಮ ಉದ್ವಿಗ್ನರೂ ಲಜ್ಜಿತರೂ ಆಗಿ ಏನನ್ನೂ ಮಾತನಾಡದೇ ಸುಮ್ಮನಿದ್ದರು. ಯುಧಿಷ್ಠಿರನು ಹೇಳಿದನು: “ನಾನು ನಿಮಗೆ ನಮಸ್ಕರಿಸಿ ಕೇಳಿಕೊಳ್ಳುತ್ತಿದ್ದೇನೆ. ನನ್ನ ಮೇಲೆ ಪ್ರಸನ್ನರಾಗಿರಿ! ಎಲ್ಲೆಡೆಯಿಂದ ವ್ಯಸನಭರಿತನಾಗಿರುವ ನನ್ನನ್ನು ನೀವು ಹೀಗೆ ಧಿಕ್ಕರಿಸುವುದು ಉಚಿತವಲ್ಲ!”

ಆಗ ಆ ಎಲ್ಲ ಬ್ರಾಹ್ಮಣರೂ ಇಂತೆಂದರು: “ಪಾರ್ಥಿವ! ಇವನು ಹೇಳಿದುದು ನಮ್ಮ ಮಾತಲ್ಲ! ಈ ರಾಜ್ಯಶ್ರೀಯು ನಿನ್ನದೇ ಆಗಿರಲಿ!” ವೇದವಿದ್ವಾಂಸರಾದ ಮತ್ತು ತಪಸ್ಸಿನಿಂದ ಪವಿತ್ರರಾಗಿದ್ದ ಆ ಮಹಾತ್ಮ ಬ್ರಾಹ್ಮಣರು ತಮ್ಮ ಜ್ಞಾನದೃಷ್ಟಿಯಿಂದ ಚಾರ್ವಾಕನು ಯಾರೆಂದು ತಿಳಿದುಕೊಂಡರು.

ಬ್ರಾಹ್ಮಣರು ಹೇಳಿದರು: “ಇವನು ದುರ್ಯೋಧನನ ಮಿತ್ರ. ಚಾರ್ವಾಕ ಎಂಬ ಹೆಸರಿನ ರಾಕ್ಷಸ. ಪರಿವ್ರಾಜಕನ ರೂಪದಲ್ಲಿ ಇವನು ಅವನ ಹಿತಕ್ಕಾಗಿ ಹೀಗೆ ಮಾಡುತ್ತಿದ್ದಾನೆ. ಧರ್ಮಾತ್ಮನ್! ನಾವು ಹೀಗೆ ಹೇಳಲಾರೆವು. ಈ ಭಯವು ನಿನ್ನಿಂದ ದೂರವಾಗಲಿ! ಎದ್ದೇಳು! ಸಹೋದರರೊಂದಿಗೆ ನಿನ್ನ ಕಲ್ಯಾಣವಾಗಲಿ!”

ಅನಂತರ ಆ ಶುಚಿ ಬ್ರಾಹ್ಮಣರೆಲ್ಲರೂ ಕ್ರೋಧಮೂರ್ಚಿತರಾಗಿ ಹುಂಕಾರಗಳಿಂದ ಆ ಪಾಪರಾಕ್ಷಸನನ್ನು ಬೆದರಿಸಿ ಸಂಹರಿಸಿದರು. ಇಂದ್ರನ ವಜ್ರಾಘಾತದಿಂದ ಚಿಗುರುಗಳೂ ಸೇರಿ ಭಸ್ಮೀಭೂತವಾಗುವ ವೃಕ್ಷದಂತೆ ಆ ಬ್ರಹ್ಮವಾದಿಗಳ ತೇಜಸ್ಸಿನಿಂದ ಚರ್ವಾಕನು ಭಸ್ಮೀಭೂತನಾಗಿ ಕೆಳಗೆ ಬಿದ್ದನು. ಬಳಿಕ ರಾಜನಿಂದ ಸತ್ಕೃತರಾದ ವಿಪ್ರರು ರಾಜನನ್ನು ಅಭಿನಂದಿಸಿ ತೆರಳಿದರು. ರಾಜಾ ಪಾಂಡವನೂ ಕೂಡ ತನ್ನ ಸುಹೃಜ್ಜನರೊಂದಿಗೆ ಹರ್ಷಿತನಾದನು.

ವಾಸುದೇವನು ಹೇಳಿದನು: “ಅಯ್ಯಾ! ಬ್ರಾಹ್ಮಣರು ಈ ಲೋಕದಲ್ಲಿ ನನಗೆ ಸದಾ ಅರ್ಚನೀಯರಾಗಿದ್ದಾರೆ. ಇವರು ಭೂಮಿಯಲ್ಲಿ ಸಂಚರಿಸುವ ದೇವತೆಗಳು! ಇವರು ಕುಪಿತರಾದರೆ ಇವರ ಮಾತುಗಳು ವಿಷವಾಗಿರುತ್ತವೆ. ಹಿಂದೆ ಕೃತಯುಗದಲ್ಲಿ ಚಾರ್ವಾಕನೆಂಬ ರಾಕ್ಷಸನು ಬದರಿಯಲ್ಲಿ ಅನೇಕ ವರ್ಷಗಳು ತಪಸ್ಸನ್ನು ಮಾಡಿದನು. ಬ್ರಹ್ಮನು ಅವನಿಗೆ ವರವನ್ನು ಕೇಳಿಕೊಳ್ಳುವಂತೆ ಪುನಃ ಪುನಃ ಒತ್ತಾಯಿಸಲು ಅವನು ಸರ್ವಭೂತಗಳಿಂದಲೂ ಅಭಯವನ್ನು ವರವನ್ನಾಗಿ ಕೇಳಿಕೊಂಡನು. ಆಗ ಜಗತ್ಪಭುವು ದ್ವಿಜರಿಗೆ ಅವಮಾನಮಾಡದೇ ಇದ್ದರೆ ಸರ್ವಭೂತಗಳಿಂದಲೂ ಅಭಯವಾಗಲಿ ಎಂದು ಅವನಿಗೆ ಆ ಉತ್ತಮ ವರವನ್ನು ಇತ್ತನು. ಆ ವರವನ್ನು ಪಡೆದು ಪಾಪಿ ತೀವ್ರಕರ್ಮಿ ಮಹಾಬಲಿ ಅಮಿತವಿಕ್ರಮಿ ರಾಕ್ಷಸನು ದೇವತೆಗಳನ್ನೂ ಪರಿತಪಿಸತೊಡಗಿದನು. ಆ ರಾಕ್ಷಸನ ಬಲದಿಂದ ಪೀಡಿತರಾದ ದೇವತೆಗಳು ಒಟ್ಟಾಗಿ ಅವನ ವಧೆಗಾಗಿ ಬ್ರಹ್ಮನಲ್ಲಿ ಕೇಳಿಕೊಂಡರು. ಅವ್ಯವ ದೇವನು ಆಗ ಅವರಿಗೆ ಹೇಳಿದನು: “ಅದರ ಕುರಿತು ನಾನು ಈಗಲೇ ನಿರ್ಧರಿಸಿದ್ದೇನೆ. ಬೇಗನೇ ಇವನ ಮರಣವಾಗಲಿದೆ! ಇವನು ದುರ್ಯೋಧನನೆಂಬ ರಾಜನ ಸಖನಾಗುವನು. ಅವನ ಸ್ನೇಹಪಾಶದ ಬಂಧನಕ್ಕೊಳಗಾಗಿ ಇವನು ಬ್ರಾಹ್ಮಣರನ್ನು ಅಪಮಾನಿಸುವನು. ಇವನ ವಿರುದ್ಧಾಚರಣೆಯ ವಾಕ್ಶಲ್ಯದಿಂದ ಅಪಮಾನಿತರಾದ ಬ್ರಾಹ್ಮಣರು ಕೋಪದಿಂದ ತಮ್ಮ ವಾಗ್ಬಲಗಳಿಂದ ಇವನನ್ನು ಸುಡುತ್ತಾರೆ. ಆಗ ಈ ಪಾಪಿಯು ನಾಶಹೊಂದುತ್ತಾನೆ!” ಆ ರಾಕ್ಶಸ ಚಾರ್ವಾಕನೇ ಇಂದು ಹೀಗೆ ಬ್ರಹ್ಮದಂಡದಿಂದ ಹತನಾಗಿ ಬಿದ್ದಿದ್ದಾನೆ. ಇದಕ್ಕಾಗಿ ಶೋಕಿಸಬೇಡ! ಕ್ಷತ್ರಿಯಧರ್ಮದಿಂದ ನಿನ್ನ ಜ್ಞಾತಿಬಾಂಧವ ಮಹಾತ್ಮ ವೀರ ಕ್ಷತ್ರಿಯ ಪುಂಗವರು ಸ್ವರ್ಗಸ್ಥರಾಗಿದ್ದಾರೆ. ನೀನು ಈಗ ಕಲ್ಯಾಣಕರ ಕರ್ತವ್ಯಗಳನ್ನು ಮಾಡು. ಶೋಕದಿಂದ ದುರ್ಬಲನಾಗಬೇಡ! ಶತ್ರುಗಳನ್ನು ಸಂಹರಿಸು! ಪ್ರಜೆಗಳನ್ನು ರಕ್ಷಿಸು! ಮತ್ತು ದ್ವಿಜರನ್ನು ಪಾಲಿಸು!”

ಯುಧಿಷ್ಠಿರನ ರಾಜ್ಯಾಭಿಷೇಕ

ಆಗ ರಾಜಾ ಕುಂತೀಸುತನು ಕೋಪ-ವ್ಯಸನಗಳನ್ನು ತೊರೆದು ಹೃಷ್ಟನಾಗಿ ಉತ್ತರಾಭಿಮುಖವಾಗಿ ಕಾಂಚನದ ಪರಮಾಸನದಲ್ಲಿ ಕುಳಿತುಕೊಂಡನು. ಅವನಿಗೆ ಅಭಿಮುಖವಾಗಿ ಪ್ರಜ್ವಲಿಸುತ್ತಿದ್ದ ಸುವರ್ಣಸಿಂಹಾಸನಗಳಲ್ಲಿ ಅರಿಂದಮ ಸಾತ್ಯಕಿ-ವಾಸುದೇವರು ಕುಳಿತುಕೊಂಡರು. ರಾಜನನ್ನು ಮಧ್ಯದಲ್ಲಿರಿಸಿಕೊಂಡು ಮಹಾತ್ಮ ಭೀಮಸೇನ-ಅರ್ಜುನರಿಬ್ಬರೂ ಎರಡೂ ಕಡೆಗಳಲ್ಲಿ ಸುಂದರ ಮಣಿಮಯ ಪೀಠಗಳಲ್ಲಿ ಕುಳಿತುಕೊಂಡರು. ಕುಂತಿಯು ಶುಭ್ರವಗಿದ್ದ, ಸುವರ್ಣದಿಂದ ಸಮಲಂಕೃತವಾಗಿದ್ದ ದಂತಸಿಂಹಾಸನದಲ್ಲಿ ನಕುಲ-ಸಹದೇವರೊಡನೆ ಕುಳಿತುಕೊಂಡಳು. ಸುಧರ್ಮ, ವಿದುರ, ಧೌಮ್ಯ ಮತ್ತು ಕೌರವ ಧೃತರಾಷ್ಟ್ರರು ಯಜ್ಞೇಶ್ವರನಂತೆ ಪ್ರಕಾಶಿಸುತ್ತಿದ್ದ ಸಿಂಹಾಸನಗಳಲ್ಲಿ ಪ್ರತ್ಯೇಕ-ಪ್ರತ್ಯೇಕವಾಗಿ ಕುಳಿತುಕೊಂಡರು. ರಾಜಾ ಧೃತರಾಷ್ಟ್ರನು ಕುಳಿತಿದ್ದಲ್ಲಿಯೇ ಯುಯುತ್ಸು, ಸಂಜಯ ಮತ್ತು ಯಶಸ್ವಿನೀ ಗಾಂಧಾರಿಯರೆಲ್ಲರೂ ಕುಳಿತುಕೊಂಡರು. ಅಲ್ಲಿ ಕುಳಿತಿದ್ದ ಧರ್ಮಾತ್ಮ ಯುಧಿಷ್ಠಿರನು ಸುಮನಸ್ಕನಾಗಿ ಶ್ವೇತಪುಷ್ಪಗಳನ್ನೂ, ಸ್ವಸ್ತಿಕಗಳನ್ನೂ, ಅಕ್ಷತೆಗಳನ್ನೂ, ಭೂಮಿಯನ್ನೂ, ಸುವರ್ಣವನ್ನೂ, ಬೆಳ್ಳಿಯನ್ನೂ, ಮಣಿಗಳನ್ನೂ ಸ್ಪರ್ಷಿಸಿದನು. ಬಳಿಕ ಅಮಾತ್ಯ-ಸೇನಾಪತಿಗಳೇ ಮೊದಲಾದ ಪ್ರಕೃತಿವರ್ಗದವರೆಲ್ಲರೂ  ಪುರೋಹಿತ ಧೌಮ್ಯನನ್ನು ಮುಂದೆಮಾಡಿಕೊಂಡು ಅನೇಕವಿಧದ ಮಂಗಲ ದ್ರವ್ಯಗಳನ್ನು - ಮೃತ್ತಿಕೆ, ಚಿನ್ನ, ವಿವಿಧ ರತ್ನಗಳು, ಅಭಿಷೇಕಕ್ಕಾಗಿ ತಂದ ಚಿನ್ನ, ತಾಮ್ರ ಮತ್ತು ಬೆಳ್ಳಿಯ ಕಲಶಗಳು, ಮತ್ತು ನೀರು ತುಂಬಿದ ಬೆಳ್ಳಿಯ ಪೂರ್ಣಕುಂಭಗಳು, ಪುಷ್ಪಗಳು, ಬತ್ತದರಳು, ದರ್ಭೆ, ಗೋರಸ, ಬನ್ನಿ, ಅರಳಿ ಮತ್ತು ಮುತ್ತುಗದ ಸಮಿತ್ತುಗಳು, ಜೇನುತುಪ್ಪ, ತುಪ್ಪ, ಅತ್ತಿಯ ಮರದಿಂದ ಮಾಡಿದ ಸ್ರುವ, ಸುವರ್ಣ ಭೂಷಿತ ಶಂಖ – ತಂದು ರಾಜನಿಗೆ ದರ್ಶಿಸಿದರು.

ಅನಂತರ ದಾಶಾರ್ಹನ ಅನುಮತಿಯನ್ನು ಪಡೆದು ಪುರೋಹಿತ ಧೌಮ್ಯನು ಪೂರ್ವೋತ್ತರ ದಿಕ್ಕುಗಳ (ಈಶಾನ್ಯ) ಕಡೆಗೆ ಸ್ವಲ್ಪ ಇಳಿಜಾರಾಗಿದ್ದ ಒಂದು ವೇದಿಯನ್ನು ಸಿದ್ಧಗೊಳಿಸಿದನು. ಆ ವೇದಿಯನ್ನು ಗೋಮಯದಿಂದ ಸಾರಿಸಿ, ಲಕ್ಷಣಯುಕ್ತವಾಗುವಂತೆ ಮಾಡಿ, ದೃಢಪಾದಗಳಿದ್ದ ಯಜ್ಞೇಶ್ವರನ ಜ್ವಾಲೆಗೆ ಸಮಾನ ಕಾಂತಿಯುತ್ಕವಾದ ಸರ್ವತೋಭದ್ರವೆಂಬ ಆಸನದ ಮೇಲೆ ವ್ಯಾಘ್ರಚರ್ಮವನ್ನೂ ಅದರ ಮೇಲೆ ಬಿಳಿಯ ವಸ್ತ್ರವನ್ನೂ ಹೊದ್ದಿಸಿ ಮಹಾತ್ಮ ಯುಧಿಷ್ಠಿರನನ್ನೂ, ದೃಪದಾತ್ಮಜೆ ಕೃಷ್ಣೆಯನ್ನೂ ಕುಳ್ಳಿರಿಸಿದನು. ಅನಂತರ ಧೀಮಂತ ಧೌಮ್ಯನು ಅಗ್ನಿಯನ್ನು ಪ್ರತಿಷ್ಠಾಪಿಸಿ ವಿಧಿಮಂತ್ರ ಪೂರ್ವಕವಾಗಿ ಪಟ್ಟಾಭಿಷೇಕಕ್ಕೆ ಸಂಬಂಧಿಸಿದಂತೆ ಯಜ್ಞೇಶ್ವರನಲ್ಲಿ ಆಜ್ಯಾಹುತಿಗಳನ್ನು ಸಮರ್ಪಿಸಿದನು. ಅನಂತರ ರಾಜರ್ಷಿ ಧೃತರಾಷ್ಟ್ರನೂ ಸರ್ವಪ್ರಜೆಗಳೂ ಕುಂತೀಪುತ್ರ ಯುಧಿಷ್ಠಿರನನ್ನು ಪೃಥ್ವೀಪತಿಯನ್ನಾಗಿ ಅಭಿಷೇಕಿಸಿದರು. ಬಳಿಕ ಪಣವ-ಅನಕ-ದುಂದುಭಿಗಳನ್ನು ಬಾರಿಸಲಾಯಿತು.

ಧರ್ಮರಾಜನಾದರೋ ಅವೆಲ್ಲವನ್ನೂ ಧರ್ಮಪೂರ್ವಕವಾಗಿ ಸ್ವೀಕರಿಸಿದನು. ಭೂರಿದಕ್ಷಿಣ ಯುಧಿಷ್ಠಿರನು ಸ್ವಸ್ತಿವಾಚನ ಮಾಡಿದ ವೇದಾಧ್ಯಯನ ಸಂಪನ್ನರೂ ಶೀಲವರ್ತನ ಸಮನ್ವಿತರೂ ಆದ ಬ್ರಾಹ್ಮಣರನ್ನು ಸಹಸ್ರಾರು ನಿಷ್ಕಗಳನ್ನಿತ್ತು ವಿಧಿವತ್ತಾಗಿ ಪೂಜಿಸಿದನು. ಪ್ರೀತರಾದ ಬ್ರಾಹ್ಮಣರು ಹಂಸಗಳಂತೆ ಉಚ್ಛಸ್ವರಗಳಲ್ಲಿ ಯುಧಿಷ್ಠಿರನಿಗೆ ಜಯಕಾರಗಳನ್ನೂ ಸ್ವಸ್ತಿಮಂತ್ರಗಳನ್ನೂ ಹೇಳಿದರು. “ಯುಧಿಷ್ಠಿರ! ಅದೃಷ್ಟವಶಾತ್ ನೀನು ನಿನ್ನ ವಿಕ್ರಮದಿಂದ ವಿಜಯಿಯಾಗಿರುವೆ. ಅದೃಷ್ಟವಶಾತ್ ಸ್ವಧರ್ಮವನ್ನು ಪಾಲಿಸಿರುವೆ! ಅದೃಷ್ಟದಿಂದಲೇ ನೀನು, ಗಾಂಡೀವಧನ್ವಿ ಪಾಂಡವ, ಭೀಮಸೇನ ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ಕುಶಲಿಗಳಾಗಿರುವಿರಿ! ಈ ವೀರಕ್ಷಯಕಾರಕ ಯುದ್ಧದಲ್ಲಿ ಹೋರಾಡಿ ಶತ್ರುಗಳಿಂದ ಮುಕ್ತರಾಗಿರುವಿರಿ! ಈಗ ಕ್ಷಿಪ್ರವಾಗಿ ಮುಂದೆ ಮಾಡಬೇಕಾದ ಕಾರ್ಯಗಳನ್ನು ಮಾಡು!” ಅನಂತರ ಪುನಃ ಸತ್ಪುರುಷರಿಂದ ಅರ್ಚಿತನಾದ ಯುಧಿಷ್ಠಿರನು ಸುಹೃದಯರೊಂದಿಗೆ ಆ ಮಹಾ ರಾಜ್ಯವನ್ನು ಪಡೆದುಕೊಂಡನು.

ಪ್ರಜೆಗಳ ದೇಶ-ಕಾಲೋಚಿತವಾದ ಆ ಮಾತುಗಳನ್ನು ಕೇಳಿ ರಾಜಾ ಯುಧಿಷ್ಠಿರನು ಉತ್ತರಪೂರ್ವಕವಾಗಿ ಈ ಮಾತನ್ನಾಡಿದನು: “ಇಲ್ಲಿ ಸೇರಿರುವ ಬ್ರಾಹ್ಮಣಪುಂಗವರು ನಮ್ಮಲ್ಲಿರುವ ಗುಣಾವಗುಣಗಳನ್ನು ಗಮನಿಸದೇ ಕೇವಲ ಪ್ರೀತಿಯಿಂದ ನಮ್ಮನ್ನು ಗುಣವಂತರೆಂದೇ ಪ್ರಶಂಸಿಸಿರುವುದರಿಂದ ಈ ಲೋಕದಲ್ಲಿ ಪಾಂಡುಪುತ್ರರಾದ ನಾವೇ ಧನ್ಯರು! ನಾವು ನಿಮ್ಮೆಲ್ಲರ ಅನುಗ್ರಹಕ್ಕೆ ಪಾತ್ರರಾಗಿದ್ದೇವೆಂದು ನನ್ನ ಅಭಿಪ್ರಾಯವಾಗಿದೆ. ಅಸೂಯಾರಹಿತರಾದ ನೀವು ನಮ್ಮನ್ನು ಗುಣಸಂಪನ್ನರೆಂದು ಹೇಳಿದ್ದೀರಿ. ಮಹಾರಾಜ ಧೃತರಾಷ್ಟ್ರನು ನನ್ನ ಪಿತನೂ ಪರಮ ದೈವವೂ ಆಗಿದ್ದಾನೆ. ನನಗೆ ಪ್ರಿಯವನ್ನುಂಟುಮಾಡಲು ಅಪೇಕ್ಷಿಸುವವರು ಅವನ ಶಾಸನದಂತೆಯೇ ನಡೆದುಕೊಳ್ಳಬೇಕು. ಈ ಮಹಾ ಜ್ಞಾತಿವಧೆಯನ್ನು ಮಾಡಿ ನಾನು ಅವನ ಸಲುವಾಗಿಯೇ ಜೀವಿಸಿರುತ್ತೇನೆ. ಆಲಸನಾಗಿರದೇ ನಿತ್ಯವೂ ಇವನ ಶುಶ್ರೂಷಣೆಯನ್ನು ಮಾಡುವುದೇ ನನ್ನ ಕಾರ್ಯವಾಗಿದೆ. ನಾನು ಸುಹೃದಯರಾದ ನಿಮ್ಮ ಅನುಗ್ರಹಕ್ಕೆ ಪಾತ್ರನಾಗಿರುವುದೇ ಆದರೆ ಧೃತರಾಷ್ಟ್ರನ ವಿಷಯದಲ್ಲಿ ನೀವು ಹಿಂದೆ ಹೇಗೆ ನಡೆದುಕೊಳ್ಳುತ್ತಿದ್ದರೋ ಈಗಲೂ ಹಾಗೆಯೇ ನಡೆದುಕೊಳ್ಳಬೇಕಾಗಿದೆ. ನನಗು, ನಿಮಗೂ ಮತ್ತು ಈ ಜಗತ್ತಿಗೂ ಇವನೇ ಒಡೆಯನು. ಈ ಇಡೀ ಪೃಥ್ವಿ, ಪಾಂಡವರೆಲ್ಲರೂ ಮತ್ತು ನೀವೂ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆದುಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ.” ಕುರುನಂದನನು ರಾಜರನ್ನು ಮತ್ತು ಪೌರಜನಪದದ ಎಲ್ಲರನ್ನೂ ಇಷ್ಟಬಂದಂತೆ ಹೋಗಬಹುದೆಂದು ಅನುಮತಿಯನ್ನಿತ್ತನು.

ಕೌರವ್ಯನು ಭೀಮಸೇನನನ್ನು ಯುವರಾಜನನ್ನಾಗಿ ನಿಯಮಿಸಿಕೊಂಡನು. ಗುಪ್ತಸಲಹೆಗಳಿಗೆ ಮತ್ತು ನಿರ್ಧಾರಗಳಿಗೆ ಮತ್ತು ಆರುಗುಣ[2]ಗಳ ವಿಷಯವಾಗಿ ಸಮಾಲೋಚಿಸಲು ಪ್ರೀತಿಪಾತ್ರನಾದ ಬುದ್ಧಿಸಂಪನ್ನನಾದ ವಿದುರನನ್ನು ನಿಯಮಿಸಿಕೊಂಡನು. ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಕುರಿತು ಪರಿಜ್ಞಾನವನ್ನು ನೀಡಲು ಹಾಗೆಯೇ ಆದಾಯ-ವೆಚ್ಚಗಳ ಕುರಿತು ಸಮಾಲೋಚಿಸಲು ವೃದ್ಧ-ಪ್ರಾಮಾಣಿಕ ಗುಣಗಳಿಂದ ಸಂಪನ್ನನಾದ ಸಂಜಯನನ್ನು ನಿಯೋಜಿಸಿದನು. ಬಲದ ಅಳತೆಗೂ, ಭತ್ಯ-ವೇತನಗ ವಿತರಣೆಗೂ ಮತ್ತು ಕಾರ್ಮಿಕರ ಮೇಲ್ವಿಚಾರಣೆಗೂ ರಾಜನು ನಕುಲನನ್ನು ನಿಯಮಿಸಿಕೊಂಡನು. ಶತ್ರುಗಳ ಆಕ್ರಮಣಕ್ಕೂ ದರ್ಪದಲ್ಲಿರುವವರನ್ನು ಮರ್ದಿಸುವುದಕ್ಕೂ ಮಹಾರಾಜ ಯುಧಿಷ್ಠಿರನು ಫಲ್ಗುನನನ್ನು ನಿಯೋಜಿಸಿದನು. ದ್ವಿಜರ ವೇದಕಾರ್ಯಗಳಿಗೆ ಮತ್ತು ಅನ್ಯ ಕಾರ್ಯಗಳಿಗೆ ಪುರೋಹಿತ ಧೌಮ್ಯನನ್ನು ಆ ಪರಂತಪನು ನಿಯಮಿಸಿಕೊಂಡನು. ನೃಪತಿಯು ಸಹದೇವನನ್ನು ನಿತ್ಯವೂ ಸಮೀಪದಲ್ಲಿರುವ ಮತ್ತು ತನ್ನನ್ನು ರಕ್ಷಿಸುವ ಕಾರ್ಯವನ್ನು ವಹಿಸಿದನು. ಅನಂತರ ಪ್ರಸನ್ನಚಿತ್ತನಾದ ಮಹೀಪತಿಯು ಯಾರ್ಯಾರು ಯಾವ್ಯಾವ ಕರ್ಮಗಳಲ್ಲಿ ಸಮರ್ಥರೆಂದು ತಿಳಿದು ಅದರಂತೆಯೇ ಕಾರ್ಯಗಳನ್ನು ವಹಿಸಿಕೊಟ್ಟನು.

ಪರವೀರಘ್ನ ಧರ್ಮಾತ್ಮಾ ಧರ್ಮವತ್ಸಲ ಯುಧಿಷ್ಠಿರನು ವಿದುರ-ಸಂಜಯ ಮತ್ತು ಮಹಾಮತಿ ಯುಯುತ್ಸುವಿಗೆ ಈ ರೀತಿ ಹೇಳಿದನು: “ಬೆಳಗಾದೊಡನೆಯೇ ಎದ್ದು ಈ ನನ್ನ ತಂದೆ ರಾಜನ ಕಾರ್ಯವೆಲ್ಲವನ್ನೂ ಯಥಾವತ್ತಾಗಿ ಮಾಡಿಕೊಡಬೇಕಾಗಿರುವುದು ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಪೌರ-ಜನಪದರ ಎಲ್ಲ ಕಾರ್ಯಗಳನ್ನೂ ರಾಜನ ಅಪ್ಪಣೆಯಂತೆ ನಿತ್ಯವೂ ಪೂರ್ಣಗೊಳಿಸುವುದೂ ನಿಮ್ಮ ಕರ್ತವ್ಯವಾಗಿರುತ್ತದೆ.”

ಅನಂತರ ಉದಾರಮತಿ ರಾಜಾ ಯುಧಿಷ್ಠಿರನು ಯುದ್ಧದಲ್ಲಿ ಹತರಾದ ಜ್ಞಾತಿ-ಬಾಂಧವರಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ಶ್ರಾದ್ಧಗಳನ್ನು ಮಾಡಿಸಿದನು. ಮಹಾಯಶಸ್ವೀ ರಾಜಾ ಧೃತರಾಷ್ಟ್ರನು ತನ್ನ ಮಕ್ಕಳ ದೇಹಾವಸಾನದ ನಂತರದ ಕರ್ಮಗಳನ್ನು ಮಾಡಿ ಸರ್ವಕಾಮಗುಣೋಪೇತ ಅನ್ನ, ಗೋವುಗಳು, ಧನ, ವಿಚಿತ್ರ ಬೆಲೆಬಾಳುವ ರತ್ನಗಳನ್ನಿತ್ತು ನೆರವೇರಿಸಿದನು. ಯುಧಿಷ್ಠಿರನು ದ್ರೌಪದಿ ಸಮೇತನಾಗಿ ಮಹಾತ್ಮ ದ್ರೋಣ, ಧೃಷ್ಟದ್ಯುಮ್ನ, ಅಭಿಮನ್ಯು, ರಾಕ್ಷಸ ಹೈಡಿಂಬಿ, ವಿರಾಟನೇ ಮೊದಲಾದ ಸುಹೃದಯ-ಉಪಕಾರಿಗಳ, ದ್ರುಪದ-ದ್ರೌಪದೇಯರಿಗೂ ಒಬ್ಬೊಬ್ಬರನ್ನೂ ಉದ್ದೇಶಿಸಿ ಸಹಸ್ರಾರು ಬ್ರಾಹ್ಮಣರಿಗೆ ಧನ-ವಸ್ತ್ರ-ರತ್ನ-ಗೋವುಗಳನ್ನಿತ್ತು ತರ್ಪಣಗಳನ್ನಿತ್ತನು. ಸುಹೃಜ್ಜನರು ಯಾರೂ ಇಲ್ಲದಿದ್ದ ಇನ್ನೂ ಅನ್ಯ ಪೃಥಿವೀಪಾಲರನ್ನು ಉದ್ದೇಶಿಸಿ ಅವರ ಔರ್ಧ್ವದೈಹಿಕ ಕರ್ಮಗಳನ್ನೂ ಮಾಡಿದನು. ಆ ಪಾಂಡವನು ಸಭೆಗಳನ್ನೂ, ಅರವಟ್ಟಿಗೆಗಳನ್ನೂ, ವಿವಿಧ ತಟಾಕಗಳನ್ನೂ ನಿರ್ಮಿಸಿ ಸರ್ವ ಸುಹೃದಯರ ಶ್ರಾದ್ಧಕರ್ಮಗಳನ್ನು ನೆರವೇರಿಸಿದನು. ಅವರ ಋಣಗಳಿಂದ ಮುಕ್ತನಾಗಿ, ಯಾರ ಆಕ್ಷೇಪ-ನಿಂದೆಗಳಿಗೂ ಒಳಗಾಗದೇ ಧರ್ಮದಿಂದ ಪ್ರಜೆಗಳನ್ನು ಪಾಲಿಸಿ ರಾಜನು ಕೃತಕೃತ್ಯನಾದನು. ಹಿಂದಿನಂತೆ ಧೃತರಾಷ್ಟ್ರ, ಗಾಂಧಾರೀ, ವಿದುರ, ಕೌರವರ ಸರ್ವ ಅಮಾತ್ಯರನ್ನೂ ಸೇವಕರನ್ನೂ ಸಮನಾಗಿ ಪೂಜಿಸಿದನು. ವೀರಪತಿಗಳನ್ನು ಮತ್ತು ಮಕ್ಕಳನ್ನು ಕಳೆದುಕೊಂಡಿದ್ದ ಸ್ತ್ರೀಯರೆಲ್ಲರನ್ನೂ ದಯಾಪರ ಕೌರವ ರಾಜನು ಗೌರವಿಸಿ ಪಾಲಿಸಿದನು. ರಾಜಾ ಪ್ರಭುವು ದೀನರನ್ನೂ, ಅಂಧ-ಕೃಪಣರನ್ನೂ ಮನೆ-ವಸ್ತ್ರ-ಬೋಜನಗಳಿಂದ ಕೃಪದೋರಿಸಿ ಅನುಗ್ರಹಿಸಿದನು. ಅಖಂಡ ಭೂಮಂಡಲವನ್ನೂ ಜಯಿಸಿ, ವೈರಿಗಳ ಋಣಗಳಿಂದಲೂ ಮುಕ್ತನಾಗಿ, ಶತ್ರುರಹಿತನಾದ ರಾಜಾ ಯುಧಿಷ್ಠಿರನು ಸುಖಿಯಾಗಿ ವಿಹರಿಸತೊಡಗಿದನು.

ಕೃಷ್ಣನಾಮಶತಸ್ತುತಿ

ರಾಜ್ಯವನ್ನು ಪಡೆದು ಅಭಿಷಿಕ್ತನಾದ ಮಹಾಪ್ರಾಜ್ಞ ಯುಧಿಷ್ಠಿರನು ಶುಚಿಯಾಗಿ ಕೈಮುಗಿದು ದಾಶಾರ್ಹ ಪುಂಡರೀಕಾಕ್ಷನಿಗೆ ಹೇಳಿದನು: “ಕೃಷ್ಣ! ಯದುಶಾರ್ದೂಲ! ನಿನ್ನ ಪ್ರಸಾದದಿಂದ, ನೀತಿ-ಬಲಗಳಿಂದ, ಬುದ್ಧಿ-ವಿಕ್ರಮಗಳಿಂದ ನಾನು ಪಿತೃ-ಪಿತಾಮಹರ ಈ ರಾಜ್ಯವನ್ನು ಪುನಃ ಪಡೆದುಕೊಂಡಿದ್ದೇನೆ. ಪುಂಡರೀಕಾಕ್ಷ! ಅರಿಂದಮ! ಪುನಃ ಪುನಃ ನಿನಗೆ ನಮಸ್ಕರಿಸುತ್ತೇನೆ. ನಿನ್ನನ್ನು ಏಕನೆಂದೂ, ಪುರುಷನೆಂದೂ, ಸಾತ್ವತರ ಪತಿಯೆಂದೂ ಪರಮರುಷಿಗಳು ಅನೇಕ ನಾಮಗಳಿಂದ ಬಹುವಿಧಗಳಲ್ಲಿ ಸ್ತುತಿಸುತ್ತಾರೆ! ವಿಶ್ವಕರ್ಮ! ವಿಶ್ವಾತ್ಮನ್! ವಿಶ್ವಸಂಭವ! ವಿಷ್ಣು! ಜಿಷ್ಣು! ಹರಿ! ಕೃಷ್ಣ! ವೈಕುಂಠ! ಪುರುಷೋತ್ತಮ! ನಿನಗೆ ನಮಸ್ಕಾರ! ಹಿಂದೆ ನೀನು ಏಳು ಬಾರಿ ಅದಿತಿಯ ಗರ್ಭದಲ್ಲಿ ಅವತರಿಸಿದೆ[3]! ನೀನೊಬ್ಬನೇ ಪೃಶ್ನಿಗರ್ಭ[4]ನೆಂದು ಕರೆಯಿಸಿಕೊಂಡಿರುವೆ! ತ್ರಿಯುಗ[5]ನೆಂದೂ ನಿನ್ನನ್ನು ಕರೆಯುತ್ತಾರೆ! ನಿನ್ನನ್ನು ಶುಚಿಶ್ರವ[6], ಹೃಷೀಕೇಶ[7], ಘೃತಾರ್ಚಿ[8], ಹಂಸ ಎಂದು ಕರೆಯುತ್ತಾರೆ. ಮುಕ್ಕಣ್ಣ ಶಂಭು ಮತ್ತು ನೀನು ಒಂದೇ ಆಗಿರುವಿರಿ! ನೀನು ವಿಭು[9] ಮತ್ತು ದಾಮೋದರ[10]!  ನೀನೇ ವರಾಹ, ಅಗ್ನಿ, ಬೃಹದ್ಭಾನು[11], ವೃಷಣ[12], ತಾರ್ಕ್ಷ್ಯಲಕ್ಷಣ[13], ಅನೀಕಸಾಹ[14], ಪುರುಷ[15], ಶಿಪಿವಿಷ್ಟ[16], ಉರುಕ್ರಮ[17], ವಾಚಿಷ್ಠ, ಉಗ್ರ, ಸೇನಾನೀ, ಸತ್ಯ, ವಾಜಸನಿ[18], ಗುಹ, ಅಚ್ಯುತ, ಅರಿಗಳ ವಿನಾಶಕ, ಸಂಕೃತಿ[19], ವಿಕೃತಿ[20], ವೃಷ[21], ಕೃತವರ್ತ್ಮಾ[22], ಅದ್ರಿ[23], ವೃಷಗರ್ಭ[24], ವೃಷಾಕಪಿ[25], ಸಿಂಧುಕ್ಷಿದೂರ್ಮಿ[26], ತ್ರಿಕಕು[27], ತ್ರಿಧಾಮ, ತ್ರಿವೃದಚ್ಯುತ[28]!  ನೀನೇ ಸಾಮ್ರಾಟ, ವಿರಾಟ, ಸ್ವರಾಟ, ಮತ್ತು ಸುರರಾಜ! ನೀನೇ ಧರ್ಮದ, ಭವ[29], ವಿಭು[30], ಭೂ, ಅಭಿಭು. ಕೃಷ್ಣ[31], ಕೃಷ್ಣವರ್ತ್ಮಾ[32]! ನಿನ್ನನ್ನು ಸ್ವಿಷ್ಟಕೃತು[33]ವೆಂದೂ, ಭಿಷಗಾವರ್ತ[34]ನೆಂದೂ, ಕಪಿಲ, ವಾಮನ, ಯಜ್ಞ, ಧ್ರುವ, ಪತಂಗ[35], ಮತ್ತು ಜಯತ್ಸೇನನೆಂದೂ ಕರೆಯುತ್ತಾರೆ. ನಿನ್ನನ್ನು ಶಿಖಂಡೀ[36], ನಹುಷ, ಬಭ್ರು[37], ದಿವಸ್ಪೃಕ್[38], ಪುನರ್ವಸು[39], ಸುಬಭ್ರು[40], ಸುಷೇಣ[41], ದುಂದುಭಿ[42], ಗಭಸ್ತಿನೇಮಿ[43], ಶ್ರೀಪದ್ಮ, ಪುಷ್ಕರ, ಪುಷ್ಪಧಾರೀ, ಋಭು, ವಿಭು, ಸರ್ವಸೂಕ್ಷ್ಮ, ಸಾವಿತ್ರ ಎಂದೂ ಕರೆಯುತ್ತಾರೆ. ನೀನು ಅಂಭೋನಿಧಿ[44]ಯು. ನೀನು ಬ್ರಹ್ಮ, ಪವಿತ್ರ ಧಾಮ ಮತ್ತು ಧನ್ವ. ಕೇಶವ! ನಿನ್ನನ್ನು ಹಿರಣ್ಯಗರ್ಭನೆಂದೂ, ಸ್ವಧಾ ಮತ್ತು ಸ್ವಾಹಾ ಎಂದೂ ಕರೆಯುತ್ತಾರೆ. ಕೃಷ್ಣ! ಯಾವುದರ ಯೋನಿ ಮತ್ತು ಪ್ರಲಯನೂ ನೀನಾಗಿರುವೆಯೋ ಆ ವಿಶ್ವವನ್ನು ಮೊದಲು ನೀನೇ ಸೃಷ್ಟಿಸುವೆ. ವಿಶ್ವಯೋನೇ! ಈ ವಿಶ್ವವು ನಿನ್ನದೇ ವಶದಲ್ಲಿದ್ದೆ. ಶಾರ್ಙ್ಗ-ಚಕ್ರ-ಖಡ್ಗಪಾಣಿಯೇ! ನಿನಗೆ ನಮಸ್ಕಾರವು!”  ಸಭಾಮಧ್ಯದಲ್ಲಿ ಧರ್ಮರಾಜನು ಹೀಗೆ ಸ್ತುತಿಸಲು ಪ್ರಸನ್ನನಾದ ಯಾದವಾಗ್ರ್ಯ ಪುಷ್ಕರಾಕ್ಷ ಕೃಷ್ಣನು ಜ್ಯೇಷ್ಠ ಪಾಂಡವ ಭಾರತನನ್ನು ಉತ್ತಮ ಮಾತುಗಳಿಂದ ಅಭಿನಂದಿಸಿದನು.”

ಅನಂತರ ನೃಪನು ಪ್ರಜೆಗಳೆಲ್ಲರನ್ನೂ ಬೀಳ್ಕೊಟ್ಟನು. ಅವನ ಅಪ್ಪಣೆಪಡೆದು ಅವರು ತಮ್ಮ ತಮ್ಮ ಮನೆಗಳಿಗೆ ಹೋದರು. ರಾಜಾ ಯುಧಿಷ್ಠಿರನು ಭೀಮಪರಾಕ್ರಮಿ ಭೀಮನನ್ನು ಸಂತವಿಸುತ್ತಾ ಅರ್ಜುನ ಮತ್ತು ಯಮಳರಿಗೆ ಹೇಳಿದನು: “ಮಹಾರಣದಲ್ಲಿ ಶತ್ರುಗಳ ವಿವಿಧ ಶಸ್ತ್ರಗಳಿಂದ ನಿಮ್ಮ ಶರೀರಗಳು ಗಾಯಗೊಂಡಿವೆ. ಶೋಕ-ಕ್ರೋಧಗಳಿಂದ ತಪಿಸಿ ಬಳಲಿದ್ದೀರಿ. ಪುರುಷೋತ್ತಮರಾದ ನೀವು ನನ್ನಿಂದಾಗಿ ಅರಣ್ಯದಲ್ಲಿ, ಭಾಗ್ಯಹೀನರಂತೆ ವಾಸಿಸಿ ದುಃಖಗಳನ್ನು ಅನುಭವಿಸಿದಿರಿ. ಯಥಾಸುಖವಾಗಿ ಯಥೇಚ್ಛೆಯಿಂದ ಈ ಜಯವನ್ನು ಅನಂದಿಸಿರಿ! ಸಂಪೂರ್ಣ ವಿಶ್ರಾಂತಿಯನ್ನು ಪಡೆದು ಸ್ವಸ್ಥಚಿತ್ತರಾದನಂತರ ನಾಳೆ ಪುನಃ ನಿಮ್ಮೊಡನೆ ಸೇರುತ್ತೇನೆ.”

ಅನಂತರ ಧೃತರಾಷ್ಟ್ರನ ಅನುಮತಿಯನ್ನು ಪಡೆದು ಅವನು ಪ್ರಾಸಾದಗಳಿಂದ ಶೋಭಿಸುತ್ತಿದ್ದ, ಅನೇಕ ರತ್ನಗಳಿಂದ ಕೂಡಿದ್ದ, ದಾಸೀ-ದಾಸರ ಗುಂಪುಗಳಿದ್ದ ದುರ್ಯೋಧನನ ಅರಮನೆಯನ್ನು ಸಹೋದರ ವೃಕೋದರನಿಗಿತ್ತನು. ಮಂದರವನ್ನು ಇಂದ್ರನು ಹೇಗೋ ಹಾಗೆ ಮಹಾಬಾಹು ಭೀಮಸೇನನು ಅದನ್ನು ಸ್ವೀಕರಿಸಿದನು. ದುರ್ಯೋಧನನ ಅರಮನೆಯಂತೆಯೇ ಪ್ರಾಸಾದಗಳ ಸಾಲುಗಳಿಂದ ಕೂಡಿದ್ದ, ಹೇಮತೋರಣಭೂಷಿತವಾದ, ದಾಸೀ-ದಾಸರಿಂದ ಸಂಪೂರ್ಣವಾಗಿದ್ದ, ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ದುಃಶಾಸನನ ಅರಮನೆಯನ್ನು ರಾಜಶಾಸನದಂತೆ ಮಹಾಬಾಹು ಅರ್ಜುನನು ಪಡೆದುಕೊಂಡನು. ದುಃಶಾಸನನ ಅರಮನೆಗಿಂತಲೂ ಶ್ರೇಷ್ಠವಾಗಿದ್ದ, ಕುಬೇರಭವನದಂತಿದ್ದ, ಮಣಿಹೇಮವಿಭೂಷಿತವಾಗಿದ್ದ ದುರ್ಮರ್ಷಣನ ಅರಮನೆಯನ್ನು ಮಹಾವನದಲ್ಲಿ ಅನೇಕ ಕಷ್ಟಗಳನ್ನನುಭವಿಸಿ, ಬಹುಮಾನಕ್ಕೆ ಯೋಗ್ಯನಾಗಿದ್ದ ನಕುಲನಿಗೆ ಧರ್ಮರಾಜ ಯುಧಿಷ್ಠಿರನು ಪ್ರೀತಿಯಿಂದ ಕೊಟ್ಟನು. ಕಾಂತಿಯುಕ್ತವಾಗಿದ್ದ, ಕನಕಭೂಷಿತ, ಪದ್ಮದಲಯಾತಕ್ಷೀ ಸ್ತ್ರೀಯರ ಶಯನಮಂದಿರಗಳಿಂದ ಸಂಪನ್ನವಾಗಿದ್ದ ದುರ್ಮುಖನ ಅಗ್ರ ಅರಮನೆಯನ್ನು ಯುಧಿಷ್ಠಿರನು ಸತತವೂ ಪ್ರಿಯಕಾರಣಿಯಾಗಿದ್ದ ಸಹದೇವನಿಗೆ ಕೊಟ್ಟನು. ಕೈಲಾಸವನ್ನು ಪಡೆದ ಕುಬೇರನಂತೆ ಆ ಅರಮನೆಯನ್ನು ಪಡೆದ ಸಹದೇವನು ಮುದಿತನಾದನು. ಯುಯುತ್ಸು, ವಿದುರ, ಮಹಾದ್ಯುತಿ ಸಂಜಯ, ಸುಧರ್ಮಾ ಮತ್ತು ಧೌಮ್ಯರು ತಾವು ಹಿಂದೆ ವಾಸಮಾಡುತ್ತಿದ್ದ ಮನೆಗಳಿಗೇ ತೆರಳಿದರು. ಸಾತ್ಯಕಿಯೊಂದಿಗೆ ಪುರುಷವ್ಯಾಘ್ರ ಶೌರಿಯು, ಗಿರಿಗುಹೆಯನ್ನು ಪ್ರವೇಶಿಸುವ ವ್ಯಾಘ್ರದಂತೆ, ಅರ್ಜುನನ ಅರಮನೆಯನ್ನು ಪ್ರವೇಶಿಸಿದನು. ಅಲ್ಲಿ ಭಕ್ಷಾನ್ನ ಪಾನೀಯಗಳಿಂದ ತೃಪ್ತರಾಗಿ, ಸುಖವಾಗಿ ರಾತ್ರಿಯನ್ನು ಕಳೆದು, ಸುಖಿಗಳಾಗಿಯೇ ಎಚ್ಚೆತ್ತು ರಾಜ ಯುಧಿಷ್ಠಿರನ ಬಳಿ ಹೋದರು.

ಮಹಾತೇಜಸ್ವಿ ಧರ್ಮರಾಜ ಯುಧಿಷ್ಠಿರನು ರಾಜ್ಯವನ್ನು ಪಡೆದು ನಾಲ್ಕು ವರ್ಣದವರೂ ತಮ್ಮ ತಮ್ಮ ಧರ್ಮಗಳಲ್ಲಿ ಯಥಾಯೋಗವಾಗಿ ಇರುವಂತೆ ವ್ಯವಸ್ಥೆಮಾಡಿದನು. ಪಾಂಡವನು ಸಾವಿರ ಮಹಾತ್ಮ ಸ್ನಾತಕ ಬ್ರಾಹ್ಮಣರಿಗೆ ಒಬ್ಬೊಬ್ಬರಿಗೂ ಒಂದೊಂದು ಸಾವಿರ ಸುವರ್ಣನಾಣ್ಯಗಳನ್ನು ದಾನಮಾಡಿದನು. ತನ್ನನ್ನೇ ಆಶ್ರಯಿಸಿ ಜೀವಿಸುತ್ತಿದ್ದ ಸೇವಕರನ್ನು, ಆಶ್ರಿತ ಅತಿಥಿಗಳನ್ನೂ, ದೀನ ಯಾಚಕರನ್ನೂ ಅವರಿಗೆ ಬೇಕಾದವುಗಳನ್ನಿತ್ತು ತೃಪ್ತಿಪಡಿಸಿದನು. ಪುರೋಹಿತ ಧೌಮ್ಯನಿಗೆ ಹತ್ತುಸಾವಿರ ಗೋವುಗಳನ್ನೂ, ಧನ, ಸುವರ್ಣ-ಬೆಳ್ಳಿಗಳ ವಸ್ತುಗಳನ್ನೂ, ವಿವಿಧ ವಸ್ತ್ರಗಳನ್ನೂ ದಾನಮಾಡಿದನು. ಕೃಪನಿಗೆ ಗುರುವೃತ್ತಿಯಿಂದ ವಿಶ್ರಾಂತಿಯನ್ನು ದೊರಕಿಸಿದನು. ಆ ಯತವ್ರತ ಧರ್ಮಾತ್ಮನು ವಿದುರನಿಗೂ ಗೌರವಿಸಿದನು. ಆ ದಾನಿಗಳಲ್ಲಿ ಶ್ರೇಷ್ಠನು ಆಶ್ರಿತ ಜನರೆಲ್ಲರನ್ನೂ ಭಕ್ಷ್ಯ-ಅನ್ನ-ಪಾನಗಳಿಂದ, ವಿವಿಧ ವಸ್ತ್ರಗಳಿಂದ, ಶಯನಾಸನಗಳಿಂದ ಸಂತೋಷಗೊಳಿಸಿದನು. ದೊರಕಿರುವುದರಿಂದ ಎಲ್ಲರನ್ನೂ ತೃಪ್ತಿಪಡಿಸಿ ರಾಜನು ಮಹಾಯಶಸ್ವಿ ಧಾರ್ತರಾಷ್ಟ್ರ ಯುಯುತ್ಸುವನ್ನೂ ಗೌರವಿಸಿದನು. ಆ ರಾಜ್ಯವನ್ನು ಧೃತರಾಷ್ಟ್ರನಿಗೂ, ಗಾಂಧಾರಿಗೂ ಮತ್ತು ವಿದುರನಿಗೂ ಸಮರ್ಪಿಸಿ ರಾಜಾ ಯುಧಿಷ್ಠಿರನು ಸ್ವಸ್ಥಚಿತ್ತನಾದನು.

[1] ಜಟಿಲಾ

[2] ಸಂಧಿ-ವಿಗ್ರಹ-ಯಾನ-ಆಸನ-ದ್ವೈಧೀಭಾವ-ಸಮಾಶ್ರಯಗಳೆಂಬ ದೇಶಕ್ಕೆ ಸಂಬಂಧಿಸಿದ ಆರು ಗುಣಗಳು.

[3] ಸಪ್ತಧಾ ವಿಷ್ಣ್ವಾಖ್ಯ ಆದಿತ್ಯೋ ವಾಮನಶ್ಚೇತಿ ದ್ವೇಧಾ ಆದಿತ್ಯಾಮೇವ ಜನ್ಮ| ತತಃ ಆದಿತೇಃ ರೂಪಾಂತರೇಷು ಪೃಶ್ನಿಪ್ರಭೃತಿಷು ಕ್ರಮಾತ್ಪೃಶ್ನಿಗರ್ಭ ಪರಶುರಾಮಃ ದಾಶರಥೀರಾಮಃ ಯಾದವೌ ರಾಮಕೃಷ್ಣೌ ಚೇತಿ ಸರ್ವೇಷು ಗರ್ಭೇಷು ಏಕ ಏವ ತ್ವಂ ನ ತು ಪ್ರತಿಗರ್ಭಂ ಭಿನ್ನಃ - ಅರ್ಥಾತ್ ಆದಿತ್ಯ ಮತ್ತು ವಾಮನನಾಗಿ ಎರಡು ಬಾರಿ ಅದಿತಿಯಲ್ಲಿ ಗರ್ಭಸ್ಥನಾಗಿದ್ದನೆಂದೂ, ಅದಿತಿಯ ಪೃಶ್ನಿಯೇ ಮೊದಲಾದ ಜನ್ಮಾಂತರಗಳಲ್ಲಿ ಪರಶುರಾಮ, ರಾಮ, ಬಲರಾಮ ಮತ್ತು ಕೃಷ್ಣರಾಗಿ ಹುಟ್ಟಿದವನು ಒಬ್ಬನೇ ಎಂದು ವ್ಯಾಖ್ಯಾನಕಾರರು ಅರ್ಥೈಸಿದ್ದಾರೆ. [ಭಾರತ ದರ್ಶನ, ಸಂಪುಟ ೨೧, ಪುಟಸಂಖ್ಯೆ ೩೬೫-೩೬೬]

[4] ಪೃಶ್ನಿಯು ಕೃಷ್ಣನ ತಾಯಿ ದೇವಕಿಯು ತನ್ನ ಪೂರ್ವ ಜನ್ಮದಲ್ಲಿ ಸುತಪ ಎಂಬ ಪ್ರಜಾಪತಿಯಾಗಿದ್ದ ವಸುದೇವನ ಪತ್ನಿಯಾಗಿದ್ದಳು. ಆದುದರಿಂದ ಕೃಷ್ಣನಿಗೆ ಪೃಶ್ಣಿಗರ್ಭನೆಂಬ ಹೆಸರು. ವಸುದೇವ-ದೇವಕಿಯರು ಸುತಪ-ಪೃಶ್ನಿಯರಾಗಿದ್ದಾಗ ಉಗ್ರ ತಪಸ್ಸನ್ನಾಚರಿಸಿ ಪರಮಾತ್ಮನಲ್ಲಿ ಅವನಂಥಹ ಪುತ್ರನಾಗಬೇಕೆಂದು ಬೇಡಿಕೊಂಡಿದ್ದರು.

[5] ತ್ರಿಯುಗಂ ಎನ್ನುವುದಕ್ಕೆ ವ್ಯಾಖ್ಯಾನಕಾರರು ಮೂರು ಯುಗ್ಮಗಳು ಇರುವಂಥವನು ಎಂದು ಅರ್ಥೈಸಿದ್ದಾರೆ. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯ-ಶ್ರೀ-ಯಶಸ್ಸು ಇವೇ ಆ ಮೂರು ಯುಗ್ಮಗಳು. [ಭಾರತ ದರ್ಶನ, ಸಂಪುಟ ೨೧, ಪುಟಸಂಖ್ಯೆ ೩೬೭]

[6] ನಿನ್ನ ಕೀರ್ತಿಯು ಪರಮಪವಿತ್ರವಾದುದು.

[7] ಇಂದ್ರಿಯಗಳ ಪ್ರೇರಕ

[8] ಘೃತದಿಂದ ಹತ್ತಿ ಉರಿಯುವ ಯಜ್ಞೇಶ್ವರ

[9] ಸರ್ವತ್ರವ್ಯಾಪಕ

[10] ಕೃಷ್ಣನ ತುಂಟತನವನ್ನು ತಡೆಯಲಾರದೇ ಯಶೋದೆಯು ಹಗ್ಗದಿಂದ ಅವನ ಹೊಟ್ಟೆಯನ್ನು ಕಟ್ಟಿ ಆ ಹಗ್ಗವನ್ನು ಒರಳುಕಲ್ಲಿಗೆ ಕಟ್ಟಿದುದರಿಂದ ಕೃಷ್ಣನಿಗೆ ದಾಮೋದರನೆಂಬ ಹೆಸರಾಯಿತು.

[11] ಸೂರ್ಯ

[12] ಧರ್ಮ

[13] ಗರುಡಧ್ವಜ

[14] ಸೇನೆಗಳನ್ನು ಸಹಿಸಿಕೊಳ್ಳತಕ್ಕವನು

[15] ಅಂತರ್ಯಾಮಿ ಪರಮಾತ್ಮ

[16] ಎಲ್ಲರಲ್ಲಿಯೂ ಆತ್ಮರೂಪನಾಗಿರುವವನು

[17] ವಾಮನ

[18] ಅನ್ನದಾತ

[19] ಸಂಸ್ಕಾರ ಸಂಪನ್ನ

[20] ಸಂಸ್ಕಾರಗಳಿಲ್ಲದವನು

[21] ಧರ್ಮ

[22] ಯಜ್ಞಸ್ವರೂಪ

[23] ಎಲ್ಲಕ್ಕೂ ಮೂಲ ಕಾರಣನು

[24] ಧರ್ಮಗರ್ಭ

[25] ಹರಿ-ಹರ ರೂಪಿ

[26] ಸಮುದ್ರಸ್ವರೂಪಿ

[27] ಕರ್ಮಮಾಡಲು ಯೋಗ್ಯವಾದ ಪೂರ್ವೋತ್ತರ ಮತ್ತು ಈಶಾನ್ಯ ದಿಕ್ಕುಗಳ ಸ್ವರೂಪಿ

[28] ಸ್ವರ್ಗದಿಂದ ಚ್ಯುತನಾಗಿ ಅವತರಿಸಿದವನು

[29] ಎಲ್ಲವುಗಳ ಉತ್ಪತ್ತಿ ಕಾರಣ

[30] ಸರ್ವತ್ರ ವ್ಯಾಪೀ

[31] ಎಲ್ಲವನ್ನೂ ತನ್ನ ಕಡೆಗೆ ಆಕರ್ಷಿಸಿಕೊಳ್ಳುವ

[32] ಅಗ್ನಿ

[33] ಸಕಲಾಭಿಷ್ಟಗಳನ್ನೂ ನೆರವೇರಿಸಿಕೊಡುವವನು

[34] ಅಶ್ವಿನೀ ದೇವತೆಗಳ ತಂದೆ ಸೂರ್ಯ

[35] ಗರುಡ

[36] ನವಿಲುಗರಿಯನ್ನು ಧರಿಸಿದವನು

[37] ಭೂಮಿಯನ್ನು ಧರಿಸಿರುವ ಅನಂತರೂಪೀ

[38] ಒಂದೇ ಕಾಲಿನಲ್ಲಿ ಆಕಾಶವನ್ನು ಅಳೆದವನು

[39] ಬ್ರಹ್ಮಾದಿದೇವತೆಗಳಲಿ ಅಂತರಾತ್ಮರೂಪನಾಗಿ ಪುನಃ ವಾಸಮಾಡುವವನು

[40] ಕಂದುಬಣ್ಣದವನು

[41] ಯಜ್ಞದಲ್ಲಿ ಹೇರಳ ಸುವರ್ಣವನ್ನು ದಕ್ಷಿಣೆಯಾಗಿ ಕೊಟ್ಟವನು

[42] ದುಂದುಭಿ ಎನ್ನುವ ರಾಕ್ಷಸನನ್ನು ಸಂಹರಿಸಿದವನು

[43] ಕಿರಣಗಳೇ ರಥದ ಚಕ್ರಗಳಾಗಿರುವ ಸೂರ್ಯ

[44] ಸಮುದ್ರ

Leave a Reply

Your email address will not be published. Required fields are marked *