ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು
ಯುಧಿಷ್ಠಿರ ವಾಕ್ಯ
ತನ್ನ ಪುತ್ರ-ಪೌತ್ರರನ್ನೂ ಸಂಬಂಧಿ-ಸ್ನೇಹಿತರನ್ನೂ ನೆನಪಿಸಿಕೊಂಡು ರಾಜನು ಉದ್ವಿಗ್ನ ಹೃದಯಿಯಾಗಿ ಅಸ್ವಸ್ಥಚೇತನನಾದನು. ಆಗ ಹೊಗೆಯಿಂದ ತುಂಬಿದ ಅಗ್ನಿಯಂತೆ ಶೋಕಪರೀತಾತ್ಮನಾದ ಆ ಧೀಮಾನ್ ರಾಜನು ಸಂತಾಪಪೀಡಿತನಾಗಿ ವೈರಾಗ್ಯವನ್ನು ತಾಳಿದನು. ಧರ್ಮಾತ್ಮ ಯುಧಿಷ್ಠಿರನಾದರೋ ಶೋಕವ್ಯಾಕುಲ ಚೇತನನಾಗಿ ಮಹಾರಥ ಕರ್ಣನನ್ನು ಸ್ಮರಿಸಿಕೊಂಡು ದುಃಖಸಂತಪ್ತನಾಗಿ ಶೋಕಿಸಿದನು. ದುಃಖ-ಶೋಕಗಳಿಂದ ಆವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಶೋಕಕರ್ಶಿತನಾಗಿ ಅರ್ಜುನನನ್ನು ನೋಡಿ ಹೀಗೆಂದನು: “ಒಂದು ವೇಳೆ ನಾವು ವೃಷ್ಣಿ-ಅಂಧಕರ ಪುರದಲ್ಲಿ ಭಿಕ್ಷಾಟನೆಯನ್ನೇ ಮಾಡಿದ್ದರೆ ಬಾಂಧವರನ್ನು ನಿರ್ಮೂಲನ ಮಾಡಿ ಈ ದುರ್ಗತಿಯನ್ನು ಪಡೆಯುತ್ತಿರಲಿಲ್ಲ. ನಮ್ಮ ಶತ್ರುಗಳಾದ ಕೌರವರೇ ಸಮೃದ್ಧರೂ ಪರಮಾರ್ಥವುಳ್ಳವರೂ ಆಗಲಿಲ್ಲವೇ? ನಮ್ಮವರನ್ನೇ ಕೊಂದ ನಾವಾದರೋ ಯಾವ ಧರ್ಮಫಲವನ್ನು ಪಡೆದೆವು? ಯಾವುದರಿಂದಾಗಿ ನಾವು ಈ ಆಪತ್ತನ್ನು ಪಡೆದಿದ್ದೇವೋ ಆ ಕ್ಷತ್ರಿಯ ಆಚಾರಕ್ಕೆ ಧಿಕ್ಕಾರ! ಬಲವಂತಿಕೆಗೆ ಧಿಕ್ಕಾರ! ಕ್ರೋಧಕ್ಕೆ ಧಿಕ್ಕಾರ! ವನಚಾರಿಗಳಿಗೆ ಕ್ಷಮೆ, ಇಂದ್ರಿಯನಿಗ್ರಹ, ಶುದ್ಧಿ, ವಿರೋಧಿಸದಿರುವುದು, ಅಸೂಯೆಪಡದಿರುವುದು, ಅಹಿಂಸೆ ಮತ್ತು ಸತ್ಯವಚನಗಳೇ ನಿತ್ಯವೂ ಸಾಧುವೆನಿಸಿಕೊಂಡಿರುವ ಧರ್ಮಗಳು. ನಾವಾದರೋ ರಾಜ್ಯವನ್ನು ಗಳಿಸಿ ಭೋಗಿಸುವ ಸಲುವಾಗಿ ಲೋಭ, ಮೋಹ, ದಂಭ-ದುರಭಿಮಾನಗಳನ್ನಾಶ್ರಯಿಸಿ ಈ ಅವಸ್ಥೆಯನ್ನು ಪಡೆದುಕೊಂಡಿದ್ದೇವೆ. ಭೂಮಿಯ ಆಸೆಯಿಂದಾಗಿ ಬಾಂಧವರು ಹತರಾಗಿರುವುದನ್ನು ನೋಡಿದರೆ ತ್ರೈಲೋಕ್ಯವೇ ನಮ್ಮ ರಾಜ್ಯವಾದರೂ ನಮಗೆ ಎಂದೂ ಸಂತೋಷವೆನಿಸುವುದಿಲ್ಲ! ಭೂಮಿಗಾಗಿ ನಾವು ಅವಧ್ಯರಾದ ಪೃಥ್ವೀಶರನ್ನು ಸಂಹರಿಸಿ ಈಗ ಬಾಂಧವರನ್ನು ಕಳೆದುಕೊಂಡು ಅರ್ಥವಿಹೀನರಾಗಿ ಜೀವಿಸಬೇಕಾಗಿದೆ! ಮಾಂಸದ ತುಂಡಿಗಾಗಿ ಕಚ್ಚಾಡುವ ನಾಯಿಗಳಂತೆ ನಾವು ಆಸೆಪಟ್ಟು ಯುದ್ಧಮಾಡಿದೆವು. ಆ ಮಾಂಸದ ತುಂಡನ್ನು ತಿನ್ನುವವರೇ ಇಲ್ಲವಾದಮೇಲೆ ಅದರ ಪ್ರಯೋಜನವಾದರೂ ಏನು? ಈ ಸಕಲ ಭೂಮಿಗಾಗಿಯಾಗಲೀ, ಸುವರ್ಣ ರಾಶಿಗಳಿಗಾಗಿಯಾಗಲೀ, ಸಮಸ್ತ ಗೋವು-ಕುದುರೆಗಳಿಗಾಗಿಯಾಗಲೀ ಇವರನ್ನು ಬಲಿಕೊಡಬಾರದಾಗಿತ್ತು! ಕಾಮ-ಕ್ರೋಧಗಳಿಂದ ಕೂಡಿದ್ದ, ಕ್ರೋಧ-ರೋಷಗಳಿಂದ ಕೂಡಿದ್ದ ಅವರು ಮೃತ್ಯುಯಾನಗಳನ್ನೇರಿ ವೈವಸ್ವತಕ್ಷಯಕ್ಕೆ ತೆರಳಿದರು. ಪಿತೃಗಳು ತಪಸ್ಸು, ಬ್ರಹ್ಮಚರ್ಯೆ, ಸತ್ಯನಿಷ್ಠೆ, ಮತ್ತು ಕ್ಷಮೆಗಳನ್ನು ಆಚರಿಸಿಕೊಂಡು ಕಲ್ಯಾಣಗುಣಸಂಪನ್ನ ಮಕ್ಕಳನ್ನು ಬಯಸುತ್ತಾರೆ. ಹಾಗೆಯೇ ತಾಯಂದಿರೂ ಉಪವಾಸ, ಯಜ್ಞ, ವ್ರತ ಮತ್ತು ಅನೇಕ ಮಂಗಲ ಕಾರ್ಯಗಳ ಮೂಲಕ ಗುಣಶಾಲೀ ಪುತ್ರರನ್ನು ಪಡೆಯಲೋಸುಗ ಹತ್ತು ತಿಂಗಳ ಗರ್ಭವನ್ನು ಹೊರುತ್ತಾರೆ. ದೀನರಾದ ತಂದೆ-ತಾಯಿಯರು “ಚೆನ್ನಾದ ಮಗುವು ಹುಟ್ಟುವುದೇ? ಹುಟ್ಟಿದ ಮಗು ಜೀವಿಸುತ್ತದೆಯೇ? ಬೆಳೆದ ಮೇಲೆ ಬಲಶಾಲಿಗಳಾಗುತ್ತಾರೆಯೇ? ನಮಗೆ ಸುಖವನ್ನು ನೀಡುತ್ತಾರೆಯೇ?” ಎಂದೆಲ್ಲ ಆಸೆಗಳನ್ನಿಟ್ಟುಕೊಂಡು ಯೋಚಿಸುತ್ತಿರುತ್ತಾರೆ. ಅವರ ಪ್ರಯತ್ನ-ಆಕಾಂಕ್ಷೆಗಳು ಈ ಯುದ್ಧದಿಂದಾಗಿ ನಿಷ್ಫಲವಾಗಿಬಿಟ್ಟವು. ಸುವರ್ಣಕುಂಡಲಗಳನ್ನು ಧರಿಸಿದ್ದ ಅವರ ಯುವ ಪುತ್ರರು ಹತರಾದರು! ಪಾರ್ಥಿವರು ಭೋಗಗಳನ್ನು ಭೋಗಿಸದೇ, ಪಿತೃ-ದೇವತೆಗಳ ಋಣಗಳನ್ನು ತೀರಿಸದೆಯೇ ವೈವಸ್ವತಕ್ಷಯಕ್ಕೆ ಹೋಗಿಬಿಟ್ಟರು! ತಂದೆ-ತಾಯಿಗಳು ಹುಟ್ಟಿದ ಮಕ್ಕಳ ಬಲ-ರೂಪಗಳನ್ನು ಅನುಭವಿಸಿ ಸಂತೋಷಪಡಬೇಕೆಂದಿರುವಾಗಲೇ ನೃಪರು ಹತರಾಗಿ ಹೋದರು. ಕಾಮ-ಕ್ರೋಧಗಳಿಂದ ಕೂಡಿರುವವರು ಮತ್ತು ಕ್ರೋಧ-ಹರ್ಷಗಳಲ್ಲಿ ಸಮತೋಲನವನ್ನಿಟ್ಟುಕೊಂಡಿರದೇ ಇದ್ದವರು ಜನ್ಮಫಲವನ್ನು ಎಂದೂ ಯಾವಕಾರಣಕ್ಕೂ ಭೋಗಿಸಲಾರರು. ಕುರು-ಪಾಂಚಾಲರು ಹತರಾದರೂ ಹತರಾಗಿಲ್ಲ[1]. ಆದರೆ ನಮ್ಮ ಕರ್ಮಗಳಿಂದ[2] ನಾವು ಮಾತ್ರ ಅಧಮ ಲೋಕಗಳನ್ನು ಪಡೆದುಕೊಳ್ಳುತ್ತೇವೆ. ಲೋಕದ ವಿನಾಶಕ್ಕೇ ನಾವೇ ಕಾರಣವೆಂದು ಹೇಳುತ್ತಾರೆ.
“ಆದರೆ ಇದಕ್ಕೆಲ್ಲ ಧೃತರಾಷ್ಟ್ರಪುತ್ರನ ದುಷ್ಟಕರ್ಮಗಳೇ ಸಂಪೂರ್ಣ ಕಾರಣವು. ದ್ವೇಷದಿಂದ ಅವನು ಸದೈವವೂ ವಂಚನೆಮಾಡುವುದನ್ನೇ ಯೋಚಿಸುತ್ತಿದ್ದನು. ಮಾಯೆಗಳನ್ನು ಬಳಸುತ್ತಿದ್ದನು. ಮಿಥ್ಯಾಚಾರಿಯಾಗಿದ್ದನು. ಸತತವೂ ನಮಗೆ ಅಪಕಾರ ಮಾಡುತ್ತಿದ್ದನು. ಬಯಸಿದ್ದಿದು ನಮಗೂ ಸಿಗಲಿಲ್ಲ, ಅವರಿಗೂ ದೊರಕಲಿಲ್ಲ. ನಾವೂ ಗೆಲ್ಲಲಿಲ್ಲ, ಅವರೂ ಗೆಲ್ಲಲಿಲ್ಲ. ಅವರು ಈ ಭೂಮಿಯನ್ನೂ, ನಾರಿಯರನ್ನೂ, ಗೀತವಾದ್ಯಗಳನ್ನೂ ಭೋಗಿಸಲಿಲ್ಲ. ಅವರು ಅಮಾತ್ಯರ ಸಲಹೆಗಳನ್ನಾಗಲೀ ತಿಳಿದವರ ಹಿತವಚನಗಳನ್ನಾಗಲೀ ಕೇಳಲೇ ಇಲ್ಲ. ರತ್ನಗಳಾಗಲೀ, ಭೂಮಿಯಾಗಲೀ, ಕಪ್ಪ-ಕಾಣಿಕೆಗಳಾಗಲೀ ಅವರಿಗೆ ಸಂತೋಷವನ್ನು ನೀಡಲಿಲ್ಲ. ನಮ್ಮ ಸಮೃದ್ಧಿಯನ್ನು ನೋಡಿ ದುರ್ಯೋಧನನು ಬಿಳಿಚಿಕೊಂಡು ವಿವರ್ಣನಾಗಿ ಕೃಶನಾಗಿಬಿಟ್ಟಿದ್ದನು. ಅದನ್ನು ಸೌಬಲನು ನೃಪತಿ ಧೃತರಾಷ್ಟ್ರನಿಗೆ ನಿವೇದಿಸಿದನು. ತಂದೆಯು ಮಗನ ಮೇಲಿನ ಪ್ರೀತಿಯಿಂದಾಗಿ ಅವನ ದುಷ್ಟಯೋಜನೆಗಳಿಗೆ ಅನುಮತಿಯನ್ನಿತ್ತನು. ತಂದೆ ಗಾಂಗೇಯ ಮತ್ತು ವಿದುರರ ಮಾತುಗಳನ್ನೂ ತಿರಸ್ಕರಿಸಿದನು. ಇದರಿಂದಾಗಿಯೇ ಇಂದು ಧೃತರಾಷ್ಟ್ರನು ನನ್ನಂತೆಯೇ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ. ಅಶುಚಿಯೂ, ಲುಬ್ಧನೂ, ಕಾಮವಶನಾಗಿ ನಡೆದುಕೊಳ್ಳುತ್ತಿದ್ದವನೂ ಆಗಿದ್ದ ಪುತ್ರನನ್ನು ನಿಯಂತ್ರಿಸದೇ ಧೃತರಾಷ್ಟ್ರನು ಆ ಸಹೋದರರ ಸಾವಿಗೆ ಕಾರಣನಾಗಿ ಉಜ್ವಲ ಯಶಸ್ಸಿನಿಂದ ಭ್ರಷ್ಟನಾಗಿದ್ದಾನೆ. ನಮ್ಮೊಡನೆ ಸದೈವವೂ ದ್ವೇಷಯುಕ್ತನಾಗಿದ್ದ ಆ ಪಾಪಬುದ್ಧಿ ಸುಯೋಧನನು ಈ ಇಬ್ಬರು ವೃದ್ಧರನ್ನೂ ಶೋಕಾಗ್ನಿಯಲ್ಲಿ ನೂಕಿ ಬೀಳಿಸಿ ಹೊರಟು ಹೋದನು! ವೃಷ್ಣಿವೀರರಾದ ಕೃಷ್ಣ ಮತ್ತು ಸಾತ್ಯಕಿಯರ ಸನ್ನಿಧಿಯಲ್ಲಿ ಯುದ್ಧೋತ್ಸುಕನಾಗಿ ಆ ಕ್ಷುದ್ರ ದುರ್ಯೋಧನನು ಹೇಳಿದ ಮಾತನ್ನು ಕುಲೀನನಾದ ಯಾವ ಬಂಧುವು ತಾನೇ ಸುಹೃದಯರ ವಿಷಯದಲ್ಲಿ ಆಡುತ್ತಾನೆ? ಭಾಸ್ಕರನು ತೇಜಸ್ಸಿನಿಂದ ಸರ್ವ ದಿಕ್ಕುಗಳನ್ನೂ ಸುಡುವಂತೆ ನಮ್ಮದೇ ದೋಷದಿಂದಾಗಿ ನಾವು ಶಾಶ್ವತವಾಗಿ ವಿನಾಶಹೊಂದಿದೆವು. ದುಷ್ಟಮಂತ್ರಿಗಳ ಹಿಡಿತದಲ್ಲಿದ್ದ ನಮ್ಮ ಆ ವೈರಪುರುಷ ದುರ್ಯೋಧನನು ಮಾಡಿದ ಕರ್ಮಗಳಿಂದಾಗಿಯೇ ನಮ್ಮ ಈ ಕುಲವು ವಿನಾಶವಾಗಿಹೋಯಿತು. ಅವಧ್ಯರ ವಧೆಗೈದು ನಾವು ಲೋಕನಿಂದೆಗೆ ಪಾತ್ರರಾದೆವು. ಕುಲದ ಅಂತಕನಂತಿದ್ದ ದುರ್ಮತಿ ಪಾಪಕಾರಿಣಿ ದುರ್ಯೋಧನನನ್ನು ರಾಷ್ಟ್ರೇಶ್ವರನನ್ನಾಗಿ ಮಾಡಿ ರಾಜಾ ಧೃತರಾಷ್ಟ್ರನು ಇಂದು ಶೋಕಿಸುತ್ತಿದ್ದಾನೆ. ಶೂರರು ಹತರಾದರು. ಪಾಪಕರ್ಮವು ನಡೆದುಹೋಯಿತು. ರಾಷ್ಟ್ರವೂ ವಿನಾಶವಾಯಿತು. ಶತ್ರುಗಳನ್ನು ಸಂಹರಿಸಿ ಕ್ರೋಧವೇನೋ ಹೊರಟುಹೋಯಿತು. ಆದರೆ ಈ ಶೋಕವು ನನ್ನನ್ನು ಪೀಡಿಸುತ್ತಿದೆ.
“ಧನಂಜಯ! ಮಾಡಿದ ಪಾಪವನ್ನು ಕಲ್ಯಾಣಕರ್ಮಗಳಿಂದ ಉಪಶಮನಗೊಳಿಸಬಹುದು. ಆದರೆ ತ್ಯಾಗಮಾಡಿದವನು ಪುನಃ ಪಾಪವನ್ನೇ ಮಾಡುವುದಿಲ್ಲ ಎಂದು ಶ್ರುತಿಗಳು ಹೇಳುತ್ತವೆ. ತ್ಯಾಗಿಯು ಜನನ-ಮರಣಗಳನ್ನೂ ಹೊಂದುವುದಿಲ್ಲವೆಂದು ಶ್ರುತಿಗಳು ಹೇಳುತ್ತವೆ. ತ್ಯಾಗಿಯು ನಿಯತ ಬುದ್ಧಿಯುಳ್ಳವನಾಗಿ ಬ್ರಹ್ಮಸಾಕ್ಷಾತ್ಕಾರವನ್ನು ಸುಲಭವಾಗಿ ಪಡೆದುಕೊಳ್ಳುತ್ತಾನೆ. ಜ್ಞಾನಸಮನ್ವಿತನಾದ ಮುನಿಯು ನಿರ್ದ್ವಂದ್ವನಾಗಿರುತ್ತಾನೆ. ನಿಮ್ಮೆಲ್ಲರ ಅನುಮತಿಯನ್ನು ಪಡೆದು ನಾನು ವನಕ್ಕೆ ಹೋಗುತ್ತೇನೆ. ತ್ಯಾಗಿಯಲ್ಲದವನಿಗೆ ಸಂಪೂರ್ಣ ಧರ್ಮಾಚರಣೆಯು ಶಕ್ಯವಿಲ್ಲವೆಂದು ಶ್ರುತಿಗಳು ಹೇಳುತ್ತವೆ. ಅದನ್ನು ನಾನು ಪ್ರತ್ಯಕ್ಷ್ಯವಾಗಿ ಕಂಡುಕೊಂಡಿದ್ದೇನೆ ಕೂಡ. ಪಡೆದುಕೊಳ್ಳಲು ಬಯಸುತ್ತಿದ್ದ ನಾನು ಪಾಪದ ರಾಶಿಯನ್ನೇ ಕೂಡಿಕೊಂಡೆನು. ಜನ್ಮ-ಮೃತ್ಯುಗಳಿಗೆ ಕಾರಣವಾದ ಇದು ಮುಕ್ತಿಯನ್ನು ನೀಡಲು ಶಕ್ಯವಿಲ್ಲವೆಂದು ಶ್ರುತಿಗಳು ಹೇಳುತ್ತವೆ. ಆ ಪಡೆದುಕೊಳ್ಳಬೇಕೆಂಬ ಆಸೆಯನ್ನು ಮತ್ತು ಸಂಪೂರ್ಣ ರಾಜ್ಯವನ್ನು ತೊರೆದು ವಿಮುಕ್ತನಾಗಿ, ಶೋಕರಹಿತನಾಗಿ, ಮಮತಾರಹಿತನಾಗಿ ಕಾಡಿಗೆ ಹೊರಟುಹೋಗುತ್ತೇನೆ! ಕಂಟಕರನ್ನು ಕಳೆದುಕೊಂಡು ಕ್ಷೇಮದಿಂದಿರುವ ಈ ಭೂಮಿಯನ್ನು ನೀನು ಆಳು. ನನಗೆ ಈ ರಾಜ್ಯವಾಗಲೀ ಭೋಗವಾಗಲೀ ಯಾವ ಪ್ರಯೋಜನಕ್ಕೂ ಇಲ್ಲ.”
ಹೀಗೆ ಹೇಳಿ ಧರ್ಮರಾಜ ಯುಧಿಷ್ಠಿರನು ಸುಮ್ಮನಾದನು.
ಅರ್ಜುನ ವಾಕ್ಯ
ಆಗ ವಾದದಲ್ಲಿ ದೃಢ ಪರಾಕ್ರಮಿಯಾಗಿದ್ದ ಮಹಾತೇಜಸ್ವೀ ಐಂದ್ರಿ ಅರ್ಜುನನು ತನ್ನ ಉಗ್ರ ಪರಾಕ್ರಮವನ್ನು ತೋರಿಸುತ್ತಾ ಅವಡುಗಳನ್ನು ಕಚ್ಚುತ್ತಾ, ಗಹ-ಗಹಿಸಿ ನಗುತ್ತಾ ಈ ನೀತಿತರ ವಾಕ್ಯಗಳನ್ನಾಡಿದನು: “ಅಯ್ಯೋ! ಅಮಾನುಷ ಕರ್ಮಗಳನ್ನು ಮಾಡಿ ಪಡೆದಿರುವ ಈ ಉತ್ತಮ ರಾಜ್ಯಲಕ್ಷ್ಮಿಯನ್ನು ತ್ಯಜಿಸಬೇಕೆಂದಿರುವ ನಿನ್ನ ಈ ನಿರ್ಧಾರವು ಅತ್ಯಂತ ದುಃಖಕರವೂ, ಕಷ್ಟಕರವೂ, ಮಿತಿಮೀರಿದುದೂ ಆಗಿದೆ. ಶತ್ರುಗಳನ್ನು ಸಂಹರಿಸಿ ಸ್ವಧರ್ಮದಿಂದ ಜಯಿಸಲ್ಪಟ್ಟಿರುವ ಈ ಭೂಮಿಯನ್ನು ಪಡೆದುಕೊಂಡ ನಂತರ ಎಲ್ಲ ಶತ್ರುಗಳನ್ನು ಕಳೆದುಕೊಂಡ ನೀನು ನಿನ್ನ ಅಲ್ಪಬುದ್ಧಿಯಿಂದ ಹೇಗೆ ತಾನೇ ತ್ಯಜಿಸಬಲ್ಲೆ? ಹೇಡಿಗಾಗಲೀ ಸೋಮಾರಿಗಾಗಲಿ ರಾಜ್ಯವು ಹೇಗೆ ಲಭಿಸೀತು? ನಿನಗೆ ರಾಜ್ಯವು ಬೇಡವಾಗಿದ್ದರೆ ಯಾವಕಾರಣಕ್ಕಾಗಿ ಕ್ರೋಧಮೂರ್ಛಿತನಾಗಿ ಮಹೀಪಾಲರನ್ನು ವಧಿಸಿದೆ? ಎಲ್ಲ ಸಾಧನಗಳೆಲ್ಲವೂ ನಷ್ಟವಾಗಿರುವವನು, ದಟ್ಟ ದರಿದ್ರನು, ಪ್ರಪಂಚದಲ್ಲಿ ಹೇಳಹೆಸರಿಲ್ಲದವನು, ಪುತ್ರ-ಪಶುಗಳಿಲ್ಲದವನು ಭಿಕ್ಷೆಯ ಜೀವನವನ್ನು ನಡೆಸಲು ಅಪೇಕ್ಷಿಸುವುದು ಯೋಗ್ಯವಾಗಿದೆ. ನೃಪ! ಸಮೃದ್ಧ ರಾಜ್ಯವನ್ನು ತೊರೆದು, ಕಪಾಲವನ್ನು ಹಿಡಿದು, ಅತ್ಯಂತ ನೀಚವೃತ್ತಿಯಿಂದ ಜೀವಿಸುವ ನಿನ್ನನ್ನು ನೋಡಿ ಈ ಲೋಕವಾದರೂ ಏನೆಂದೀತು? ಪ್ರಭೋ! ಎಲ್ಲವನ್ನೂ ಪರಿತ್ಯಜಿಸಿ, ಮಂಗಳಕರ ಕಾರ್ಯಗಳೆಲ್ಲವುಗಳ ವಿಹೀನನಾಗಿ, ಓರ್ವ ಸಾಮಾನ್ಯನಂತೆ ಏಕೆ ಭಿಕ್ಷುಕನಂತೆ ತಿರುಗಲು ಬಯಸುತ್ತಿರುವೆ? ಈ ರಾಜಕುಲದಲ್ಲಿ ಹುಟ್ಟಿ, ಇಡೀ ವಸುಂಧರೆಯನ್ನು ಗೆದ್ದು, ಧರ್ಮಾರ್ಥಗಳೆಲ್ಲವನ್ನೂ ತೊರೆದು ಮೂಢನಾಗಿ ವನಕ್ಕೆ ತೆರಳಲು ಸಿದ್ಧನಾಗಿರುವೆಯಲ್ಲ! ಒಂದು ವೇಳೆ ಈ ಹವಿಸ್ಸು-ಯಜ್ಞಸಾಮಗ್ರಿಗಳನ್ನು ದುಷ್ಟ ಜನರು ನಾಶಗೊಳಿಸಿದರೆ ನಿನ್ನಿಂದಲೇ ವಿಪ್ರರು ನಾಶರಾಗಿ ನಿನಗೇ ಪಾಪವು ತಗಲುತ್ತದೆ. ನಹುಷನು ನಿರ್ಧನನಾಗಿದ್ದಾಗ ಕ್ರೂರ ಕರ್ಮಗಳನ್ನೆಸಗಿ “ನಿರ್ಧನತ್ವಕ್ಕೆ ಧಿಕ್ಕಾರ! ಸರ್ವವನ್ನೂ ತ್ಯಾಗಮಾಡಿ ದಾರಿದ್ರ್ಯವನ್ನು ಅನುಭವಿಸುವುದು ಮುನಿಗಳ ಧರ್ಮವಾಗಿದೆ. ಅದು ರಾಜನ ಧರ್ಮವಲ್ಲ!” ನಾಳೆಗೆಂದು ಸಂಗ್ರಹಿಸದೇ ಆ ದಿನಕ್ಕೆ ಮಾತ್ರ ಭಿಕ್ಷೆಬೇಡುವುದು ಋಷಿಗಳ ಧರ್ಮವೆಂದು ನಿನಗೆ ತಿಳಿದೇ ಇದೆ. ಅದೇ ರೀತಿಯಲ್ಲಿ ಯಾವುದನ್ನು ಕ್ಷತ್ರಿಯ ಧರ್ಮವೆಂದು ಕರೆಯುತ್ತಾರೋ ಅದು ಧನದಿಂದಲೇ ಸಂಪನ್ನವಾಗುತ್ತದೆ. ಯಾರ ಧನವನ್ನು ಅಪಹರಿಸಿದರೂ ಅವರ ಧರ್ಮವನ್ನು ಅಪಹರಿಸಿದಂತೆ. ರಾಜನ್! ಧನವನ್ನೇ ಅಪಹರಿಸಿದರೆ ನಾವು ಯಾವ ಧರ್ಮಾಚರಣೆಯನ್ನು ಮಾಡಲು ಸಮರ್ಥರಾಗಿರುತ್ತೇವೆ? ಪಕ್ಕದಲ್ಲಿ ನಿಂತಿರುವ ದರಿದ್ರನನ್ನು ನೋಡಿ ಜನರು “ಇವನೆಲ್ಲೋ ಶಾಪಗ್ರಸ್ತನಾಗಿ ಹುಟ್ಟಿದ್ದಾನೆ!” ಎಂದು ಭಾವಿಸುತ್ತಾರೆ. ಲೋಕದಲ್ಲಿ ಪಾತಕವೆಂದೇ ತಿಳಿಯಲ್ಪಟ್ಟಿರುವ ದಾರಿದ್ರ್ಯವನ್ನು ನೀನು ಹೇಗೆ ಪ್ರಶಂಸಿಸುತ್ತಿರುವೆ? ರಾಜನ್! ಪತಿತನು ಶೋಕದಲ್ಲಿರುತ್ತಾನೆ. ನಿರ್ಧನನೂ ಶೋಕಿಸುತ್ತಿರುತ್ತಾನೆ. ಆದುದರಿಂದ ಪತಿತ ಮತ್ತು ನಿರ್ಧನಸ್ಯನಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಪರ್ವತಗಳಿಂದ ಅನೇಕ ನದಿಗಳು ಹುಟ್ಟಿ ಹರಿಯುವಂತೆ ಅಲ್ಲಲ್ಲಿಂದ ಕಪ್ಪ-ಕಾಣಿಕೆಗಳ ರೂಪದಲ್ಲಿ ವೃದ್ಧಿಹೊಂದುವ ಐಶ್ವರ್ಯಗಳಿಂದಲೇ ಎಲ್ಲ ಶುಭಕರ್ಮಗಳೂ ಪ್ರವೃತ್ತವಾಗುತ್ತವೆ. ನರಾಧಿಪ! ಅರ್ಥದಿಂದಲೇ ಧರ್ಮ, ಕಾಮ ಮತ್ತು ಸ್ವರ್ಗಗಳ ಸಾಧ್ಯತೆಗಳಿವೆ. ಅರ್ಥವಿಲ್ಲದೇ ಲೋಕದ ಪ್ರಾಣಯಾತ್ರೆಯೇ ನಡೆಯುವುದಿಲ್ಲ. ಗ್ರೀಷ್ಮಋತುವಿನಲ್ಲಿ ಚಿಕ್ಕ-ಪುಟ್ಟ ನದಿಗಳು ಒಣಗಿಹೋಗುವಂತೆ ಅಲ್ಪಬುದ್ಧಿಯುಳ್ಳ ಮತ್ತು ಧನವಿಹೀನನಾದ ಪುರುಷನ ಕಾರ್ಯಗಳೆಲ್ಲವೂ ನಾಮಾವಶೇಷವಾಗುತ್ತವೆ. ಧನವಿರುವವನಿಗೆ ಮಿತ್ರರಿರುತ್ತಾರೆ. ಧನವಿರುವವನಿಗೆ ಬಾಂಧವರಿರುತ್ತಾರೆ. ಧನವಿದ್ದರೇ ಲೋಕದಲ್ಲಿ ಪುರುಷನೆನಿಸಿಕೊಳ್ಳುತ್ತಾನೆ. ಐಶ್ವರ್ಯಗಳುಳವನನ್ನೇ ಪಂಡಿತನೆಂದೂ ಕರೆಯುವರು. ದರಿದ್ರನಾದವನು ಬಯಸಿದರೂ ಅಧಿಕ ಧನವನ್ನು ಸಂಪಾದಿಸಲು ಶಕ್ಯನಾಗುವುದಿಲ್ಲ. ಆನೆಗಳಿಂದ ಮಹಾಗಜಗಳು ಹುಟ್ಟುವಂತೆ ಧನದಿಂದಲೇ ಅಪಾರ ಸಂಪತ್ತನ್ನು ಗಳಿಸಬಲ್ಲೆವು. ನರಾಧಿಪ! ಧರ್ಮ, ಕಾಮ, ಸ್ವರ್ಗ, ಹರ್ಷ, ಕ್ರೋಧ, ವಿದ್ಯೆ, ದಮ, ಇವೆಲ್ಲವೂ ಧನದಿಂದಲೇ ಹುಟ್ಟುತ್ತವೆ. ಪುರುಷೋತ್ತಮ! ಧನದಿಂದ ಕುಲವು ವೃದ್ಧಿಹೊಂದುತ್ತದೆ ಮತ್ತು ಧನದಿಂದ ಧರ್ಮವು ಬೆಳೆಯುತ್ತದೆ. ಧನವಿಲ್ಲದವನಿಗೆ ಈ ಲೋಕದಲ್ಲಿ ಸುಖವಿಲ್ಲ. ನಿರ್ಧನನು ಧರ್ಮಕೃತ್ಯಗಳನ್ನು ಯಥಾಶಾಸ್ತ್ರವಾಗಿ ಅನುಷ್ಠಾನ ಮಾಡದ್ಲು ಸಾಧ್ಯವಿಲ್ಲ. ಶೈಲದಿಂದ ಗಿರಿನದಿಯು ಸ್ರವಿಸುವಂತೆ ಧನದಿಂದಲೇ ಧರ್ಮವು ಸ್ರವಿಸುತ್ತದೆ. ರಾಜನ್! ಕೇವಲ ಶರೀರದಲ್ಲಿ ಕೃಶನಾಗಿರುವವನಿಗೆ ಕೃಶನೆಂದು ಕರೆಯುವುದಿಲ್ಲ. ಅಶ್ವಧನವಿಲ್ಲದವನು, ಗೋಧನವಿಲ್ಲದವನು, ಸೇವಕರಿಲ್ಲದವನ್ನು ಮತ್ತು ಅತಿಥಿಗಳಿಲ್ಲದವನನ್ನೂ ಕೃಶನೆಂದೇ ಕರೆಯುತ್ತಾರೆ. ರಾಜನ್! ಯಥಾನ್ಯಾಯವಾಗಿ ದೇವಾಸುರರನ್ನು ನೋಡು! ದೇವತೆಗಳು ವೃದ್ಧಿಗಾಗಿ ತಮ್ಮ ದಾಯಾದಿಗಳಾದ ಅಸುರರ ವಧೆಯನ್ನಲ್ಲದೇ ಬೇರೆ ಏನನ್ನು ಬಯಸುತ್ತಾರೆ? ರಾಜನಾದವನು ಇನ್ನೊಬ್ಬರ ಧನವನ್ನು ತೆಗೆದುಕೊಳ್ಳದೇ ಧರ್ಮಕಾರ್ಯಗಳನ್ನು ಹೇಗೆ ಮಾಡಬಹುದು? ಇದನ್ನೇ ರಾಜಧರ್ಮವೆಂದು ತಿಳಿದವರು ವೇದಗಳಲ್ಲಿ ನಿಶ್ಚಯಿಸಿದ್ದಾರೆ. ರಾಜನಾದವನು ವೇದಾಧ್ಯಯನ ಮಾಡುತ್ತಿರಬೇಕು. ವಿದ್ವಾಂಸನಾಗಿರಬೇಕು. ಸರ್ವಪ್ರಕಾರಗಳಿಂದಲೂ ಧನವನ್ನು ಸಂಗ್ರಹಿಸಬೇಕು ಮತ್ತು ಪ್ರಯತ್ನಪಟ್ಟು ಯಜ್ಞಗಳನ್ನು ಮಾಡಬೇಕು. ದ್ರೋಹದಿಂದಲೇ ದೇವತೆಗಳು ದಿವಿಯಲ್ಲಿ ಎಲ್ಲ ಸ್ಥಾನಗಳನ್ನೂ ಪಡೆದಿದ್ದಾರೆ. ಇದನ್ನೇ ದೇವತೆಗಳು ಲೋಕವ್ಯವಸ್ಥೆಯನ್ನಾಗಿ ಮಾಡಿರುತ್ತಾರೆ. ಶಾಶ್ವತ ವೇದಗಳೂ ಇವನ್ನೇ ಹೇಳುತ್ತವೆ. ಧನದಿಂದಲೇ ಬ್ರಾಹ್ಮಣರು ಅಧ್ಯಯನಮಾಡುತ್ತಾರೆ. ತಪಸ್ಸನ್ನಾಚರಿಸುತ್ತಾರೆ. ಯಜ್ಞಮಾಡುತ್ತಾರೆ ಮತ್ತು ಮಾಡಿಸುತ್ತಾರೆ. ಇವೆಲ್ಲವೂ ಮತ್ತು ಶ್ರೇಯಸ್ಸೂ ಧನದಿಂದಲೇ ದೊರೆಯುತ್ತದೆ. ಬೇರೆಯಾವುದರಿಂದಲೂ ಅಲ್ಲ. ಇನ್ನೊಬ್ಬನಿಂದ ಅಪಹರಿಸದೇ ಸಂಪಾದಿಸಿರುವ ಕಿಂಚಿತ್ತು ಧನವನ್ನೂ ನಾವು ಕಾಣುವುದಿಲ್ಲ. ಇದೇ ರೀತಿಯಲ್ಲಿ ರಾಜರು ಈ ಭೂಮಿಯನ್ನು ಜಯಿಸುತ್ತಾರೆ. ಮಕ್ಕಳು ತಂದೆಯ ಆಸ್ತಿಯನ್ನು ತಮ್ಮದೆಂದೇ ಹೇಳಿಕೊಳ್ಳುವಂತೆ ಶತ್ರುವಿನಿಂದ ಗೆದ್ದ ಭೂಮಿಯನ್ನೂ ರಾಜರು ತಮ್ಮದೆಂದೇ ಹೇಳಿಕೊಳ್ಳುತ್ತಾರೆ. ಈ ರೀತಿ ಧರ್ಮಮಾರ್ಗದಲ್ಲಿ ನಡೆದು ರಾಜರ್ಷಿಗಳು ಸ್ವರ್ಗಗಳನ್ನು ಗೆದ್ದಿದ್ದಾರೆ. ಮೋಡಗಳ ಮೂಲಕ ಸಮುದ್ರದ ನೀರು ಹತ್ತು ದಿಕ್ಕುಗಳಿಗೂ ಪಸರಿಸುವಂತೆ ರಾಜಕುಲದ ವಿತ್ತದಿಂದ ಪೃಥ್ವಿಯಲ್ಲಿ ಪಸರಿಸಿಕೊಳ್ಳುತ್ತದೆ. ಈ ಪೃಥ್ವಿಯು ಹಿಂದೆ ದಿಲೀಪನದಾಗಿತ್ತು. ನೃಗ, ನಹುಷ, ಅಂಬರೀಷ ಮತ್ತು ಮಾಂಧಾತರದ್ದಾಗಿತ್ತು. ಅದೇ ಭೂಮಿಯು ಈಗ ನಿನ್ನನ್ನು ಅವಲಂಬಿಸಿದೆ. ರಾಜನ್! ಸರ್ವದಕ್ಷಿಣೆಗಳಿಂದ ಕೂಡಿದ ದ್ರವ್ಯಮಯ ಯಜ್ಞಗಳನ್ನು ನೀನು ಯಜಿಸದೇ ಇದ್ದರೆ ದೇವತೆಗಳಿಗೆಸಗುವ ಪಾಪವನ್ನು ಪಡೆದುಕೊಳ್ಳುವೆ. ರಾಜನು ದಕ್ಷಿಣೆಗಳಿಂದ ಕೂಡಿದ ಅಶ್ವಮೇಧಯಜ್ಞವನ್ನು ಯಜಿಸಿದರೆ ಅದರ ಅವಭೃಥಕ್ಕೆ ಸೇರಿದ ಎಲ್ಲರೂ ಪವಿತ್ರರಾಗುತ್ತಾರೆ. ವಿಶ್ವರೂಪೀ ಮಹಾದೇವನು ಸರ್ವಮೇಧವೆಂಬ ಮಹಾ ಯಜ್ಞದಲ್ಲಿ ಸರ್ವಭೂತಗಳನ್ನೂ ಆಹುತಿಯನ್ನಾಗಿತ್ತು ಅತ್ಮಾರ್ಪಣೆಯನ್ನೂ ಮಾಡಿಕೊಂಡನು. ರಾಜನ್! ಇದೊಂದು ಶಾಶ್ವತ ಮಾರ್ಗವಾಗಿರುವುದು. ಇದೊ ಕೊನೆಗೊಂಡಿದುದರ ಕುರಿತು ನಾವು ಕೇಳೇ ಇಲ್ಲ. ಹತ್ತು ರಥಗಳುಳ್ಳ ಈ ಯಜ್ಞಗಳ ಮಹಾ ಮಾರ್ಗವನ್ನು ಬಿಟ್ಟು ಕೆಟ್ಟದಾರಿಯಲ್ಲಿ ಹೋಗಬೇಡ!”
ಯುಧಿಷ್ಠಿರನು ಹೇಳಿದನು: “ನನ್ನ ಈ ಮಾತನ್ನು ಏಕಾಗ್ರಚಿತ್ತನಾಗಿ ಕೇಳಿ ಮುಹೂರ್ತಕಾಲ ಮನಸ್ಸು-ಕಿವಿಗಳನ್ನು ಅಂತರಾತ್ಮನಲ್ಲಿ ಸ್ಥಾಪಿಸಿ ಧ್ಯಾನಮಾಡು. ಅನಂತರ ನಾನು ಹೇಳುವುದು ನಿನಗೆ ಹಿತಕರವೆನಿಸಬಹುದು. ನೀನು ಆಗ್ರಹಿಸುತ್ತಿರುವ ಧನದಿಂದ ಕೂಡಿರುವ ಮಾರ್ಗದಲ್ಲಿ ನಾನು ಪುನಃ ಹೋಗುವುದಿಲ್ಲ. ಗ್ರಾಮ್ಯಸುಖಗಳನ್ನು ತೊರೆದು ಹೋಗುವಂತಹ ಮಾರ್ಗದಲ್ಲಿ ಹೋಗುತ್ತೇನೆ. ಏಕಾಕಿಯಾಗಿ ಹೋಗುವ ಕ್ಷೇಮಮಾರ್ಗವು ಯಾವುದು ಎಂದು ನನ್ನನ್ನು ಕೇಳು. ಅಥವಾ ನನ್ನನ್ನು ಕೇಳಲು ಇಚ್ಛಿಸದಿದ್ದರೆ, ಆದರೂ ನಾನು ಹೇಳುವುದನ್ನು ಕೇಳು. ಗ್ರಾಮ್ಯ ಸುಖಾಚಾರವನ್ನು ತೊರೆದು ಮಹಾತಪಸ್ಸನ್ನು ತಪಿಸುತ್ತಾ, ಅರಣ್ಯದಲ್ಲಿ ಫಲಮೂಲಗಳನ್ನು ತಿಂದುಕೊಂಡು ಮೃಗಗಳೊಂದಿಗೆ ಸಂಚರಿಸುತ್ತೇನೆ. ಎರಡೂ ಕಾಲಗಳಲ್ಲಿ ಕಾಲಕ್ಕೆ ತಕ್ಕಂತೆ ಶುಚಿಯಾಗಿ ಅಗ್ನಿಯಲ್ಲಿ ಆಹುತಿಗಳನ್ನು ನೀಡುತ್ತೇನೆ. ಮಿತ ಆಹಾರವನ್ನು ಸೇವಿಸಿಕೊಂಡು ನನ್ನ ಶರೀರವನ್ನು ಕೃಶಗೊಳಿಸುತ್ತೇನೆ. ವಲ್ಕಲಗಳನ್ನು ಧರಿಸುತ್ತೇನೆ. ಜಟೆಯನ್ನು ಧರಿಸುತ್ತೇನೆ. ಛಳಿ-ಗಾಳಿ-ಬಿಸಿಲುಗಳನ್ನು ಸಹಿಸಿಕೊಳ್ಳುತ್ತೇನೆ. ಹಸಿವು-ಬಾಯಾರಿಕೆ-ಆಯಾಸಗಳನ್ನು ಸಹಿಸಿಕೊಳ್ಳುತ್ತೇನೆ. ವಿಧಿದೃಷ್ಟವಾದ ತಪಸ್ಸಿನಿಂದ ಶರೀರವನ್ನು ಶೋಷಿಸುತ್ತೇನೆ. ಅರಣ್ಯದಲ್ಲಿ ವಾಸಿಸುವ ಮುದಿತ ಮೃಗ-ಪಕ್ಷಿಗಳ ಜೋರಾಗಿ ಕೂಗುವ ಧ್ವನಿಗಳನ್ನು ಕೇಳಿ ಮನಸ್ಸು-ಕಿವಿಗಳಿಗೆ ಸುಖವನ್ನು ಹೊಂದುತ್ತೇನೆ. ಹೂಬಿಟ್ಟಿರುವ ಮರ-ಗಿಡ-ಬಳ್ಳಿಗಳ ಸುಗಂಧಗಳನ್ನು ಸೇವಿಸುತ್ತಾ, ರಮಣೀಯರಾದ ನಾನಾರೂಪದ ವನವಾಸಿಗಳನ್ನು ನೋಡುತ್ತಾ ಇರುತ್ತೇನೆ. ವಾನಪ್ರಸ್ಥದಲ್ಲಿರುವವರನ್ನೂ, ಗುರುಕುಲ ವಾಸಿಗಳನ್ನೂ ಸಂದರ್ಶಿಸುತ್ತೇನೆ. ಅವರಿಗೆ ಅಪ್ರಿಯವಾಗದಂತೆ ನಡೆದುಕೊಳ್ಳುತ್ತೇನೆ. ಇನ್ನು ಪುನಃ ಗ್ರಾಮವಾಸಿಗಳ ಕುರಿತೇನು? ಏಕಾಂತದಲ್ಲಿದ್ದುಕೊಂಡು ವಿಮರ್ಶಿಸುತ್ತೇನೆ. ಪಕ್ವವಾಗಿರಲಿ ಪಕ್ವವಾಗದಿರಲಿ, ದೊರಕಿದ ಆಹಾರವನ್ನು ಸೇವಿಸಿಕೊಂಡಿರುತ್ತೇನೆ. ವನದಲ್ಲಿ ದೊರಕುವ ಕಂದಮೂಲ-ಫಲಗಳಿಂದ, ನೀರಿನಿಂದ ಮತ್ತು ಉತ್ತಮ ಮಾತುಗಳಿಂದ ಪಿತೃಗಳನ್ನೂ ದೇವತೆಗಳನ್ನೂ ತೃಪ್ತಿಪಡಿಸುತ್ತೇನೆ. ಈ ರೀತಿ ಅರಣ್ಯವಾಸಿಗಳಿಗೆ ಶಾಸ್ತ್ರಗಳಲ್ಲಿ ಹೇಳಿರುವ ಉಗ್ರವೂ ಅತಿ ಉಗ್ರವೂ ಆದ ವಿಧಿಗಳನ್ನು ಆಚರಿಸುತ್ತಾ ಈ ದೇಹದ ಸಮಾಪನವನ್ನು ಪ್ರತೀಕ್ಷಿಸುತ್ತಿರುತ್ತೇನೆ. ಅಥವಾ ಮುಂಡನ ಮಾಡಿಕೊಂಡು ಮುನಿಯಾಗಿ ಪ್ರತಿದಿನವೂ ಒಂದೊಂದೇ ವೃಕ್ಷದಿಂದ ಆ ದಿನ ಬಿದ್ದ ಹಣ್ಣನ್ನು ಮಾತ್ರ ಸೇವಿಸುತ್ತಾ ಈ ಶರೀರವನ್ನು ಕ್ಷಯಿಸುತ್ತೇನೆ. ಧೂಳಿನಿಂದ ತುಂಬಿಕೊಂಡಿದ್ದು, ಶೂನ್ಯ ಗೃಗದಲ್ಲಿ ಅಥವಾ ಮರದ ಬುಡದಲ್ಲಿ ವಾಸಿಸುತ್ತೇನೆ. ಮತ್ತು ಪ್ರಿಯ-ಅಪ್ರಿಯ ಎಲ್ಲವನ್ನೂ ಪರಿತ್ಯಜಿಸುತ್ತೇನೆ. ನಿಂದನೆ-ಸಂಸ್ತುತಿಗಳನ್ನು ಸಮನಾಗಿ ಕಾಣುತ್ತಾ ಶೋಕಿಸುವುದೂ ಇಲ್ಲ ಮತ್ತು ಹರ್ಷಿತನಾಗುವುದೂ ಇಲ್ಲ. ಏನನ್ನೂ ಬಯಸದೇ, ಯಾವುದನ್ನೂ ಅತಿಯಾಗಿ ಪ್ರೀತಿಸದೇ ನಿರ್ದ್ವಂದ್ವನಾಗಿಯೂ ಆವುದನ್ನೂ ತೆಗೆದುಕೊಳ್ಳದೆಯೂ ಇರುತ್ತೇನೆ. ಆತ್ಮಾರಾಮನಾಗಿದ್ದುಕೊಂಡು ಪ್ರಸನ್ನಾತ್ಮನಾಗಿರುತ್ತೇನೆ. ಜಡ-ಅಂಧ-ಕಿವುಡನಂತಿರುತ್ತೇನೆ. ಇನ್ನೊಬ್ಬರಿಂದ ಏನನ್ನೂ ಮಾಡಿಸಿಕೊಳ್ಳುವುದಿಲ್ಲ. ಯಾರೊಂದಿಗೂ ಮಾತನ್ನೂ ಆಡುವುದಿಲ್ಲ. ನಾಲ್ಕು ವಿಧದ ಚರಾಚರ ಪ್ರಾಣಿಗಳಲ್ಲಿ ಯಾರನ್ನೂ ಹಿಂಸಿಸುವುದಿಲ್ಲ. ಸ್ವಧರ್ಮನಿರತರಾಗಿರುವ ಎಲ್ಲ ಪ್ರಜೆಗಳನ್ನೂ ಪ್ರಾಣವಿರುವವನ್ನೂ ಸಮನಾಗಿ ಕಾಣುತ್ತೇನೆ. ಯಾರನ್ನೂ ಹಾಸ್ಯಮಾಡುವುದಿಲ್ಲ. ಯಾರ ಮೇಲೂ ಕುಪಿತನಾಗುವುದಿಲ್ಲ. ನಿತ್ಯವೋ ಸರ್ಮ ಇಂದ್ರಿಯಗಳನ್ನೂ ನಿಯಂತ್ರಿಸಿಕೊಂಡು ಪ್ರಸನ್ನವದನನಾಗಿರುತ್ತೇನೆ. ಈ ದಾರಿಯು ಎಲ್ಲಿಗೆ ಹೋಗುತ್ತದೆ ಎಂದು ಯಾರನ್ನೂ ಕೇಳದೇ, ಯಾವುದೋ ಒಂದು ದಾರಿಯನ್ನು ಹಿಡಿದುಕೊಂಡು ಹೋಗುತ್ತೇನೆ. ವಿಶೇಷವಾಗಿ ಯಾವುದೇ ದೇಶ-ದಿಕ್ಕುಗಳಿಗೆ ಹೋಗಲು ಬಯಸದೇ ಹೋಗುತ್ತಿರುತ್ತೇನೆ. ಹೋಗುವಾಗ ಏನನ್ನೂ ಅಪೇಕ್ಷಿಸುವುದಿಲ್ಲ. ಹಿಂದಿರುಗಿ ನೋಡುವುದಿಲ್ಲ. ಸರಳ ಭಾವದಿಂದಿದ್ದು, ಯಾವಾಗಲೂ ಅಂತರ್ಮುಖನಾಗಿರುತ್ತೇನೆ. ಸ್ಥಾವರ-ಜಂಗಮಗಳನ್ನು ತೊರೆದು ಮುಂದೆಹೋಗುತ್ತಿರುತ್ತೇನೆ. ಸ್ವಾಭಾವಿಕವಾಗಿಯೇ ಮುಂದೆ ಏನಾಗುತ್ತದೆಯೋ ಏನು ದೊರೆಯುತ್ತದೆಯೋ ಅದನ್ನೇ ತಿನ್ನುತ್ತೇನೆ. ದ್ವಂದ್ವಗಳನ್ನೂ ವಿರುದ್ಧಗಳನ್ನೂ ಯೋಚಿಸದೇ ಮುಂದುವರೆಯುತ್ತಿರುತ್ತೇನೆ. ಅಲ್ಪವಾಗಿರಲೀ ಅಥವಾ ರುಚಿಯಾಗಿರದೇ ಇರಲಿ ಮೊದಲು ಸಿಕ್ಕಿದುದನ್ನು ತಿನ್ನುತ್ತೇನೆ. ಮೊದಲ ಮನೆಯಲ್ಲಿ ಭಿಕ್ಷೆಯು ಸಿಗದಿದ್ದರೆ ಅನ್ಯ ಏಳು ಮನೆಗಳಿಗೆ ಹೋಗುತ್ತೇನೆ. ಹೊಗೆಯಾಡದೇ ಇರುವ ಮನೆಗೆ, ಒನಕೆಯನ್ನು ತೆಗೆದಿಟ್ಟಿರುವ ಮನೆಗೆ, ಒಲೆಯ ಬೆಂಕಿಯನ್ನು ಆರಿಸಿದ ಮನೆಗೆ, ಮನೆಯವರೆಲ್ಲರೂ ಊಟಮಾಡಿಯಾಗಿರುವ ಮನೆಗೆ, ಅಡಿಗೆ ಪಾತ್ರೆಗಳನ್ನು ತೊಳೆದು ತೆಗೆದಿಟ್ಟ ಮನೆಗೆ, ಭಿಕ್ಷುಕರು ಬಂದು ಹೋಗುವ ಸಮಯವು ಕಳೆದುಹೋದ ನಂತರ ನಾನು ಭಿಕ್ಷೆಗೆ ಹೋಗುವುದಿಲ್ಲ. ಎರಡು ಅಥವಾ ಮೂರು ಅಥವಾ ಐದು ಮನೆಗಳಿಗೆ ದಿನದಲ್ಲಿ ಒಂದೇ ಸಾರಿ ಭಿಕ್ಷೆಗೆ ಹೋಗುತ್ತೇನೆ. ಸ್ನೇಹಪಾಶಗಳನ್ನು ತೊರೆದು ಈ ಭೂಮಿಯಲ್ಲಿ ಸಂಚರಿಸುತ್ತೇನೆ. ಜೀವಿಸಲು ಇಚ್ಛಿಸುವವನಂತೆ ಅಥವಾ ಸಾಯಲು ಇಚ್ಛಿಸುವವನಂತೆ ವರ್ತಿಸದೇ ಜೀವ-ಮರಣಗಳನ್ನು ಶ್ಲಾಘಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ. ನನ್ನ ಒಂದು ಬಾಹುವನ್ನು ಖಡ್ಗದಿಂದ ಗಾಯಗೊಳಿಸಿದವ ಮತ್ತು ಇನ್ನೊಂದಕ್ಕೆ ಚಂದನವನ್ನು ಲೇಪಿಸುವವ ಈ ಇಬ್ಬರ ಕುರಿತೂ ಮಂಗಳವಾದದ್ದನ್ನಾಗಲೀ ಅಮಂಗಳವಾದದ್ದನ್ನಾಗಲೀ ಯೋಚಿಸುವುದಿಲ್ಲ. ಜೀವಿಸಿರುವವನಿಗೆ ಶಕ್ಯವಾದ ಅಭ್ಯುದಯಕ್ರಿಯೆಗಳನ್ನೆಲ್ಲಾ ತ್ಯಜಿಸಿ ಕೇವಲ ಕಣ್ಣು ರೆಪ್ಪೆ ಬಡಿಯುವುದು ಮುಂತಾದ ಕಾರ್ಯಗಳನ್ನೇ ಮಾಡುತ್ತಿರುತ್ತೇನೆ. ಇಂದ್ರಿಯಕ್ರಿಯೆಗಳೆಲ್ಲವನ್ನೂ ತ್ಯಜಿಸಿ ಸಂಕಲ್ಪಶೂನ್ಯನಾಗಿರುತ್ತೇನೆ. ಆತ್ಮಕ್ಕೆ ಅಂಟಿಕೊಂಡಿರುವ ಕಲ್ಮಷಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತೇನೆ. ನಿತ್ಯವೂ ಇವುಗಳಲ್ಲಿ ಆಸಕ್ತನಾಗಿರುತ್ತೇನೆ. ಸರ್ವಸಂಗಗಳಿಂದ ವಿಮುಕ್ತನಾಗಿ, ಸರ್ವ ಸ್ನೇಹಬಂಧನಗಳಿಂದ ಅತೀತನಾಗಿ ಯಾರ ವಶದಲ್ಲಿಯೂ ಬಾರದೇ ವಾಯುವಿನ ಧರ್ಮದಂತೆ ಎಲ್ಲಕಡೆ ಸಂಚರಿಸುತ್ತೇನೆ. ಈ ರೀತಿ ವೀತರಾಗನಾಗಿ ಸಂಚರಿಸುತ್ತಾ ಶಾಶ್ವತ ತೃಪ್ತಿಯನ್ನು ಪಡೆಯುತ್ತೇನೆ. ಅಜ್ಞಾನದ ತೃಷ್ಣೆಯಿಂದಾಗಿ ನಾನು ಮಹಾ ಪಾಪವನ್ನು ಮಾಡಿದ್ದೇನೆ. ಕೆಲವು ಮಾನವರು ಕುಶಲ-ಅಕುಶಲ ಕರ್ಮಗಳನ್ನು ಮಾಡಿ, ಕಾರ್ಯ-ಕಾರಣ ನಿಮಿತ್ತದಿಂದ ಸ್ವಜನರನ್ನು ಪಾಲಿಸುತ್ತಾರೆ. ಆಯುಷ್ಯವು ಕಳೆಯಲು ಕ್ಷೀಣಶರೀರವನ್ನು ಬಿಟ್ಟು ಆ ಪಾಪವನ್ನು ಸ್ವೀಕರಿಸುತ್ತಾರೆ. ಏಕೆಂದರೆ ಕರ್ಮಫಲವು ಕರ್ಮಮಾಡುವವನಿಗೇ ಸೇರುತ್ತವೆ. ರಥದ ಚಕ್ರದಂತೆ ನಿರಂತರವಾಗಿ ತಿರುಗುತ್ತಿರುವ ಈ ಸಂಸಾರಚಕ್ರದಲ್ಲಿ ಭೂತಗ್ರಾಮಗಳು ಒಂದುಸೇರುತ್ತವೆ ಮತ್ತು ಭೂತಗ್ರಾಮಗಳಿಂದ ಕಾರ್ಯನಿರತವಾಗುತ್ತವೆ. ಜನ್ಮ-ಮೃತ್ಯು-ಮುಪ್ಪು-ವ್ಯಾಧಿ-ವೇದನೆಗಳಿಂದ ಆಕ್ರಮಿಸಲ್ಪಟ್ಟಿರುವ, ಸಾರವಿಲ್ಲದ ಅಸ್ವಾಸ್ಥ್ಯ ಸಂಸಾರವನ್ನು ತ್ಯಜಿಸಿದವನೇ ಸುಖಿಯು. ದೇವತೆಗಳೂ ದಿವದಿಂದ ಮತ್ತು ಮಹರ್ಷಿಗಳೂ ತಮ್ಮ ಸ್ಥಾನಗಳಿಂದ ಕೆಳಕ್ಕೆ ಬೀಳುತ್ತಾರೆ. ಹೀಗಿರುವಾಗ ಕಾರಣತತ್ತ್ವವನ್ನು ತಿಳಿದಿರುವ ಯಾರು ತಾನೇ ಈ ಸಂಸಾರವನ್ನು ಬಯಸುತ್ತಾನೆ? ವಿವಿಧ ಲಕ್ಷಣಗಳುಳ್ಳ ವಿವಿಧ ಕರ್ಮಗಳನ್ನು ಮಾಡಿದ ರಾಜನನ್ನು ಸ್ವಲ್ಪವೇ ಕಾರಣಕ್ಕಾಗಿ ಅನೇಕ ರಾಜರು ಬಂಧಿಸುತ್ತಾರೆ. ಆದುದರಿಂದ ಈ ಜ್ಞಾನಾಮೃತವು ಬಹುಕಾಲದಿಂದ ನನ್ನಲ್ಲಿ ಮನೆಮಾಡಿಕೊಂಡಿದೆ. ಇದರ ಮೂಲಕವೇ ನಾನು ಅವ್ಯಯವೂ ಶಾಶ್ವತವೂ ಸ್ಥಿರವೂ ಆದ ಸ್ಥಾನವನ್ನು ಬಯಸುತ್ತೇನೆ. ಈ ನಿರ್ಭಯ ಮಾರ್ಗವನ್ನನುಸರಿಸಿ, ಸತತವೂ ಅದರಂತೆಯೇ ನಡೆದುಕೊಂಡು ಇದೇಪ್ರಕಾರವಾಗಿ ಸಂಚರಿಸುತ್ತಾ ದೇಹವನ್ನು ಸಮಾಪನಗೊಳಿಸುತ್ತೇನೆ.”
ಭೀಮಸೇನ ವಾಕ್ಯ
ಭೀಮಸೇನನು ಹೇಳಿದನು: “ರಾಜನ್! ಶ್ರೋತ್ರಿಯಂತೆಯೇ ನಿನ್ನ ಬುದ್ಧಿಯೂ ಮಂದವಾಗಿಹೋಗಿದೆ! ತತ್ತ್ವಾರ್ಥಗಳನ್ನು ತಿಳಿಯದೇ ಕೇವಲ ಪಠಣಮಾಡುವವನ ಬುದ್ಧಿಯಂತಾಗಿದೆ ನಿನ್ನ ಬುದ್ಧಿಯೂ ಕೂಡ! ರಾಜಧರ್ಮವನ್ನು ನಿಂದಿಸಿ ಆಲಸ್ಯದ ಜೀವನವನ್ನು ನಡೆಸಲು ಯೋಚಿಸಿರುವ ನಿನಗೆ ಧಾರ್ತರಾಷ್ಟ್ರರ ವಿನಾಶದಿಂದ ಯಾವ ಫಲವುಂಟಾಯಿತು? ಕ್ಷತ್ರಧರ್ಮವನ್ನು ಆಚರಿಸುವವನ ಮಾರ್ಗದಲ್ಲಿ ಬಂಧುಗಳ ಕುರಿತು ಕ್ಷಮೆ, ಅನುಕಂಪ, ಕಾರುಣ್ಯ, ಮತ್ತು ಮೃದುತ್ವಗಳು ಇರುವುದಿಲ್ಲ. ನಿನ್ನ ಬುದ್ಧಿಯು ಈ ರೀತಿಯಿದೆಯೆಂದು ಮೊದಲೇ ನಮಗೆ ತಿಳಿದಿದ್ದರೆ ನಾವು ಶಸ್ತ್ರಗಳನ್ನು ಹಿಡಿಯುತ್ತಲೇ ಇರಲಿಲ್ಲ ಮತ್ತು ಯಾರೊಬ್ಬರನ್ನೂ ವಶಿಸುತ್ತಲೂ ಇರಲಿಲ್ಲ. ಈ ಶರೀರದ ವಿಮೋಚನೆಗಾಗಿ ಭಿಕ್ಷಾವೃತ್ತಿಯನ್ನೇ ಅನುಸರಿಸುತ್ತಿದ್ದೆವು. ಮಹೀಕ್ಷಿತರ ಈ ದಾರುಣ ಯುದ್ಧವೇ ನಡೆಯುತ್ತಿರಲಿಲ್ಲ. ಇವೆಲ್ಲವೂ ಬಲಿಷ್ಠನಾದವನ ಅನ್ನವೆಂದು ತಿಳಿದವರು ಹೇಳುತ್ತಾರೆ. ಸ್ಥಾವರ-ಜಂಗಮಗಳೆಲ್ಲವೂ ಬಲಿಷ್ಠನ ಭೋಜನ! ರಾಜ್ಯವನ್ನು ಸ್ವೀಕರಿಸುವಾಗ ವಿರೋಧಿಸುವವರನ್ನು ಸಂಹರಿಸಬೇಕೆಂದು ಕ್ಷತ್ರಧರ್ಮವನ್ನು ತಿಳಿದ ಪ್ರಾಜ್ಞರು ಹೇಳುತ್ತಾರೆ. ರಾಜ್ಯವನ್ನು ಪಡೆದುಕೊಳ್ಳಲು ಅಡ್ಡಿಯನ್ನುಂಟುಮಾಡಿದ ವೈರಿಗಳನ್ನು ನಾವು ಸಂಹರಿಸಿದ್ದೇವೆ. ಧರ್ಮಪೂರ್ವಕವಾಗಿ ಅವರನ್ನು ಸಂಹರಿಸಿ ಪಡೆದ ಈ ಭೂಮಿಯನ್ನು ಭೋಗಿಸು! ಬಾವಿಯನ್ನು ತೋಡಿ ನೀರನ್ನು ಪಡೆಯದೇ ಕೇವಲ ಕೆಸರನ್ನು ಮೈಗೆ ಹಚ್ಚಿಕೊಂಡು ಮೇಲೆ ಬಂದವನಂತೆ ನಮ್ಮ ಈ ಕರ್ಮವು ಆಗಬಾರದು! ಮಹಾವೃಕ್ಷವನ್ನೇರಿ ಜೇನನ್ನು ಅಪಹರಿಸಿ ಅದನ್ನು ಸವಿಯುವ ಮೊದಲೇ ನಿಧನಹೊಂದಿದವನಂತೆ ನಮ್ಮ ಈ ಕರ್ಮವು ಆಗಬಾರದು! ಯಾವುದೋ ದೊಡ್ಡ ನಿಧಿಯು ಸಿಗುವ ಆಶಯದಿಂದ ಬಹುದೂರ ಹೋಗಿ ನಿರಾಶನಾಗಿ ಹಿಂದಿರುಗಿದವನಂತೆ ನಮ್ಮ ಈ ಕರ್ಮವು ಆಗದಿರಲಿ! ಶತ್ರುಗಳನ್ನು ಸಂಹರಿಸಿ ನಂತರ ಆತ್ಮಹತ್ಯೆಯನ್ನು ಮಾಡಿಕೊಂಡವನಂತೆ ನಮ್ಮ ಈ ಕರ್ಮವು ಆಗದಿರಲಿ! ಹಸಿವಿನಿಂದ ಬಳಲುತ್ತಿದ್ದವು ಅನ್ನವನ್ನು ಪಡೆದು ತಿನ್ನಲು ಅಶಕ್ಯನಾದವನಂತೆ, ಕಾಮಿಯು ಕಾಮಿನಿಯನ್ನು ಪಡೆದೂ ಅವಳನ್ನು ಭೋಗಿಸಲು ಅಶಕ್ಯನಾದವನಂತೆ ನಮ್ಮ ಈ ಕರ್ಮವು ಆಗದಿರಲಿ! ಹಿರಿಯವನೆಂದು ತಿಳಿದು ಮಂದಚೇತಸನಾದ ನಿನ್ನನ್ನೇ ಅನುಸರಿಸಿ ಬರುತ್ತಿರುವ ನಾವೇ ನಿಂದನೀಯರು! ಬಾಹುಬಲಿಗಳಾದ, ವಿದ್ಯಾವಂತರಾದ, ಜಿತೇಂದ್ರಿಯರಾದ ನಾವೂ ಕೂಡ ಅಸಮರ್ಥರಂತೆ ಒಬ್ಬ ನಪುಂಸಕನ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ! ಅನಾಥರಕ್ಷಕರಾದ ನಾವು ಅರ್ಥಹೀನರಾಗಿರುವುದನ್ನು ಜನಗಳು ಹೇಗೆತಾನೇ ನೋಡದೇ ಇರುತ್ತಾರೆ? ಆದುದರಿಂದ ನಾನು ಹೇಳುವುದು ಯುಕ್ತವೋ ಅಯುಕ್ತವೋ ಎನ್ನುವುದನ್ನು ಎಲ್ಲರೂ ಯೋಚಿಸಿರಿ. ಸಮರ್ಥರಾದವರು ಸ್ವಾರ್ಥಸಿದ್ಧಿಗಾಗಿ ಪ್ರಯತ್ನಿಸಲೇ ಬೇಕೆಂದು ನನ್ನ ಅಭಿಪ್ರಾಯ! ಆಪತ್ಕಾಲದಲ್ಲಿ ಮಾತ್ರ ಸಂನ್ಯಾಸವನ್ನು ತೆಗೆದುಕೊಳ್ಳಬೇಕೆಂದು ಉಪದೇಶವಿದೆ. ಮುಪ್ಪಿನಿಂದ ಗಲಿತ ಶರೀರವುಳ್ಳವನೂ, ಶತ್ರುಗಳಿಂದ ವಂಚಿತನಾದವನೂ ಸಂನ್ಯಾಸವನ್ನು ತೆಗೆದುಕೊಳ್ಳಬಹುದು. ಆದುದರಿಂದ ಕೃತಪ್ರಜ್ಞರು ಇದನ್ನು ತ್ಯಾಗವೆಂದು ಪರಿಗಣಿಸುವುದಿಲ್ಲ. ಸೂಕ್ಷ್ಮದರ್ಶಿಗಳು ಇದನ್ನು ಧರ್ಮದ ಅತಿಕ್ರಮವೆಂದೇ ತಿಳಿಯುತ್ತಾರೆ. ಅದರಲ್ಲಿಯೇ ಹುಟ್ಟಿ, ಅದರಲ್ಲಿಯೇ ನಿರತನಾಗಿದ್ದುಕೊಂಡಿರುವ, ಮತ್ತು ಅದನ್ನು ಆಶ್ರಯಿಸಿಯೇ ಜೀವಿಸುತ್ತಿರುವ ಯಾರು ತಾನೇ ಕ್ಷತ್ರಿಯ ಧರ್ಮವನ್ನು ನಿಂದಿಸಬಹುದು? ಅವನಲ್ಲಿ ಶ್ರದ್ಧೆಯಿಲ್ಲವೆಂದಾಯಿತಲ್ಲವೇ? ಶ್ರೀಯಿಂದ ವಿಹೀನರಾದವರು, ನಿರ್ಧನರು ಮತ್ತು ನಾಸ್ತಿಕರಿಂದ ಸುತ್ತುವರೆಯಲ್ಪಟ್ಟವನು ವೇದವಾಕ್ಯವಾದ ವಿಜ್ಞಾನವನ್ನು ಸತ್ಯದ ಅಭಾಸವೆಂದೂ ಸುಳ್ಳೆಂದೂ ಪ್ರಚಾರಮಾಡುತ್ತಾರೆ. ಮುಂಡನಾಗಿ ಧರ್ಮದ ಸೋಗನ್ನು ಹಾಕಿಕೊಂಡು ತನ್ನ ಹೊಟ್ಟೆಯನ್ನು ಮಾತ್ರ ಹೊರೆದುಕೊಳ್ಳುತ್ತಾ ಇರಬಹುದು. ಆದರೆ ಇದರಿಂದ ಕಾಲಕಳೆಯಬಹುದೇ ಹೊರತು ಜೀವನದ ಸಾರ್ಥಕ್ಯವನ್ನು ಹೊಂದಲು ಸಾಧ್ಯವಾಗುವುದಿಲ್ಲ. ಪುತ್ರ-ಪೌತ್ರರನ್ನು ಸಾಕಲಾಗದವನು ಮತ್ತು ದೇವರ್ಷಿ-ಅತಿಥಿ-ಪಿತೃಗಳನ್ನು ತೃಪ್ತಿಪಡಿಸಲಾಗದವನು ಏಕಾಕಿಯಾಗಿ ಅರಣ್ಯದಲ್ಲಿ ಸುಖವಾಗಿ ಜೀವಿಸಬಹುದು. ಅರಣ್ಯದಲ್ಲಿ ಜೀವಿಸುವುದರಿಂದ ಮಾತ್ರಕ್ಕೆ ಸ್ವರ್ಗವು ದೊರೆಯುವುದಿಲ್ಲ. ಹಾಗಿದ್ದರೆ ಅರಣ್ಯದಲ್ಲಿ ವಾಸಿಸುವ ಜಿಂಕೆ-ಹಂದಿ-ಪಕ್ಷಿಗಳು ಅದೇ ಪ್ರಕಾರವಾಗಿ ಪುಣ್ಯವಂತರೆಂದು ಜನರು ಹೇಳುತ್ತಿದ್ದರು. ಒಂದು ವೇಳೆ ಸಂನ್ಯಾಸದಿಂದ ಸಿದ್ಧಿಯು ದೊರಕುತ್ತದೆಯೆಂತಾದರೆ ಪರ್ವತ-ವೃಕ್ಷಗಳು ಕ್ಷಿಪ್ರವಾಗಿ ಸಿದ್ಧಿಯನ್ನು ಪಡೆದುಕೊಂಡು ಬಿಡುತ್ತಿದ್ದವು! ಇವುಗಳು ನಿತ್ಯ ಸಂನ್ಯಾಸಿಗಳಂತೆಯೇ ತೋರುತ್ತವೆ. ಯಾರಿಗೂ ಉಪದ್ರವವನ್ನು ಕೊಡುವುದಿಲ್ಲ. ಯಾರಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ. ಸತತವೂ ಆತ್ಮವ್ರತದಲ್ಲಿಯೇ ಇರುತ್ತವೆ. ನಮ್ಮ ಭಾಗ್ಯಗಳಲ್ಲಿ ಅನ್ಯರ ಸಿದ್ಧಿಗಳು ಪಾಲ್ಗೊಳ್ಳುವುದಿಲ್ಲ. ಆದುದರಿಂದ ಕರ್ಮ-ಕರ್ತವ್ಯಗಳಿಂದಲೇ ಸಿದ್ಧಿಯು ನಮಗೆ ದೊರೆಯುತ್ತದೆ. ಕರ್ಮಗಳನ್ನು ತ್ಯಜಿಸುವುದರಿಂದಲ್ಲ! ಅನ್ಯರ ಭರಣ-ಪೋಷಣ ಮಾಡದೇ ತನ್ನನ್ನೇ ನೋಡಿಕೊಳ್ಳುವುದರಿಂದ ಸಿದ್ಧಿಯು ದೊರೆಯುತ್ತದೆ ಎಂತಾದರೆ ಭೂಮಿಯ ಮೇಲಿರುವ ಎಲ್ಲ ಜಲಚರ ಪ್ರಾಣಿಗಳೂ ಸಿದ್ಧಿಯನ್ನು ಪಡೆಯಬೇಕಾಗಿದ್ದಿತು. ತಮ್ಮ ತಮ್ಮ ಕರ್ಮಗಳಿಂದ ಈ ಅಖಂಡ ವಿಶ್ವವೂ ಬಂಧಿಸಿಕೊಂಡಿರುವುದನ್ನು ನೋಡು. ಆದುದರಿಂದ ಕರ್ಮವೇ ಕರ್ತವ್ಯ. ಕರ್ಮಗಳನ್ನು ಮಾಡದೇ ಇರುವುದರಿಂದ ಸಿದ್ಧಿಯು ಇಲ್ಲ.”
ಅರ್ಜುನನು ಹೇಳಿದನು: “ಭರತರ್ಷಭ! ಈ ವಿಷಯದಲ್ಲಿ ಪುರಾತನ ಇತಿಹಾಸವಾಗಿರುವ ತಾಪಸರು ಮತ್ತು ಶಕ್ರನ ನಡುವೆ ನಡೆದ ಸಂವಾದವನ್ನು ಉದಾಹರಿಸಿ ಹೇಳುತ್ತಾರೆ.” ಆಗ ಅರ್ಜುನನು ಯುಧಿಷ್ಠಿರನಿಗೆ ತಾಪಸರು ಮತ್ತು ಇಂದ್ರನ ನಡುವೆ ಸಂವಾದವನ್ನು ವರ್ಣಿಸಿ, ನೀನೂ ಕೂಡ ಧೈರ್ಯವನ್ನು ತಾಳಿ ಶತ್ರುಗಳಿಂದ ರಹಿತವಾಗಿರುವ ಈ ಇಡೀ ಭೂಮಿಯನ್ನು ಆಳು!” ಎಂದನು.
ನಕುಲ ವಾಕ್ಯ
ಅರ್ಜುನನ ಮಾತನ್ನು ಕೇಳಿ ಅರಿಂದಮ ಮಹಾಬಾಹು ವಿಶಾಲವಕ್ಷ ಮಿತಭಾಷೀ ಮಹಾಪ್ರಾಜ್ಞ ನಕುಲನು ಅಣ್ಣನ ಮನಸ್ಸನ್ನು ಬದಲಾಯಿಸಲು ಧರ್ಮಭೃತರೆಲ್ಲರಲ್ಲಿ ಶ್ರೇಷ್ಠನಾದ ರಾಜ ಯುಧಿಷ್ಠಿರನನ್ನು ನೋಡಿ ಹೀಗೆ ಹೇಳಿದನು: “ಮಹಾರಾಜ! ವಿಶಾಖಯೂಪದಲ್ಲಿ ದೇವತೆಗಳೆಲ್ಲರೂ ಅಗ್ನಿಗಳನ್ನು ಪ್ರತಿಷ್ಠಾಪಿಸಿದ್ದರು. ಇದರಿಂದ ದೇವತೆಗಳೂ ಕರ್ಮಪಥದಲ್ಲಿ ನಿರತರಾಗಿರುತ್ತಾರೆ ಎಂದು ತಿಳಿಯಬಹುದು. ಆಸ್ತಿಕ-ಅನಾಸ್ತಿಕರಿಗೆ ಅನ್ನವನ್ನು ದಯಪಾಲಿಸುವ ಪಿತೃಗಳೂ ಕೂಡ ವಿಧಿದೃಷ್ಟವಾದ ಕರ್ಮಗಳನ್ನೇ ಮಾಡುತ್ತಾರೆ ನೋಡು! ವೇದವಾದಗಳಿಂದ ಮೋಹಗೊಂಡವರು ಹೆಚ್ಚು ನಾಸ್ತಿಕರೆಂದು ತಿಳಿ. ಎಲ್ಲ ಕರ್ಮಗಳಲ್ಲಿ ವೇದೋಕ್ತವಾದವುಗಳನ್ನು ಬಿಟ್ಟುಮಾಡುವ ವಿಪ್ರನು ದೇವಯಾನದ ಮೂಲಕ ಮೇಲಿನ ಸ್ವರ್ಗವನ್ನು ತಲುಪಲಾರ! ವೇದನಿಶ್ಚಯಗಳನ್ನು ತಿಳಿದಿರುವ ಮತ್ತು ಶೃತಿಸಂಪನ್ನರಾದ ಬ್ರಾಹ್ಮಣರು ಈ ಗೃಹಸ್ಥಾಶ್ರಮವು ಎಲ್ಲ ಆಶ್ರಮಗಳಿಗಿಂತ ಅತಿಶಯವಾದುದು ಎನ್ನುತ್ತಾರೆ. ಅವರು ಹೇಳುವುದನ್ನು ಕೇಳು. ಧರ್ಮದಿಂದ ಗಳಿಸಿದ ವಿತ್ತವನ್ನು ಮುಖ್ಯ ಕ್ರತುಗಳಿಗೆ ಉಪಯೋಗಿಸಿ ಕೃತಾತ್ಮನಾದ ನರನನ್ನೇ ತ್ಯಾಗೀ ಎಂದು ಹೇಳುತ್ತಾರೆ. ಗೃಹಸ್ಥಾಶ್ರಮದಲ್ಲಿರುವ ಸುಖವನ್ನು ತ್ಯಜಿಸಿ ನಂತರದ ವಾನಪ್ರಸ್ಥ-ಸನ್ಯಾಸ ಆಶ್ರಮಗಳಲ್ಲಿ ನಿಷ್ಠೆಯನ್ನು ಹೊಂದಿ ಆತ್ಮತ್ಯಾಗ ಮಾಡುವವನನ್ನು ತಾಮಸತ್ಯಾಗೀ ಎಂದು ಹೇಳುತ್ತಾರೆ. ಮನೆಯಿಲ್ಲದೇ ತನ್ನ ಆಹಾರವನ್ನು ತಾನೇ ತಯಾರಿಸದೇ ಭಿಕ್ಷೆಗಾಗಿ ಎಲ್ಲೆಲ್ಲಿಯೋ ತಿರುಗಾಡುತ್ತಾ ಮರಗಳ ಬುಡವನ್ನೇ ಆಶ್ರಯಿಸಿ ಸದಾ ಯೋಗಯುಕ್ತನಾಗಿ ಸರ್ವಕರ್ಮಗಳನ್ನು ತ್ಯಾಗಮಾಡಿದವನನ್ನು ಭಿಕ್ಷುಕನೆಂದು ಹೇಳುತ್ತಾರೆ. ಕ್ರೋಧ-ಹರ್ಷಗಳನ್ನು ಅನಾದರಿಸಿ, ಅದರಲ್ಲೂ ವಿಶೇಷವಾಗಿ, ಇನ್ನೊಬ್ಬರನ್ನು ದ್ವೇಷಿಸುವುದನ್ನು ಬಿಟ್ಟು, ವೇದಾಧ್ಯಯನದಲ್ಲಿ ನಿರತನಾಗಿ ಗುರುಪೂಜಕನಾದ ವಿಪ್ರನೇ ತ್ಯಾಗಿ. ಒಮ್ಮೆ ವಿದ್ವಾಂಸರು ಒಂದು ಕಡೆ ಗೃಹಸ್ಥಾಶ್ರಮವನ್ನೂ ಮತ್ತೊಂದು ಕಡೆ ಉಳಿದ – ಬ್ರಹ್ಮಚರ್ಯ, ವಾನಪ್ರಸ್ಥ ಮತ್ತು ಸನ್ಯಾಸ – ಈ ಮೂರು ಆಶ್ರಮಗಳನ್ನು ಇಟ್ಟು ಸರ್ವ ಆಶ್ರಮಗಳನ್ನೂ ತುಲನೆಮಾಡಿದರೆಂದು ಹೇಳುತ್ತಾರೆ. ಸಮೀಕ್ಷಿಸಿದಾಗ ಗೃಹಸ್ಥಾಶ್ರಮವೇ ಹೆಚ್ಚಿನದೆಂದು ತಿಳಿಯುತ್ತದೆ. ಏಕೆಂದರೆ ಈ ಆಶ್ರಮದಿಂದ ಇಹದಲ್ಲಿ ಕಾಮಭೋಗಗಳನ್ನೂ ನಂತರ ಸ್ವರ್ಗವನ್ನೂ ಪಡೆಯಬಹುದು. ಇದೇ ಮಹರ್ಷಿಗಳೂ ಲೋಕವಿದರೂ ಬಳಸುವ ಮಾರ್ಗ. ಈ ಭಾವದಂತೆ ಮಾಡುವವನೇ ತ್ಯಾಗೀ. ಮನೆಗಳನ್ನು ಪರಿತ್ಯಜಿಸಿ ವಿಮೂಢನಾಗಿ ವನಕ್ಕೆ ಹೋಗುವವನಲ್ಲ! ಧರ್ಮದ ಸೋಗಿನಿಂದ ಅರಣ್ಯದಲ್ಲಿ ವಾಸಮಾಡುವವನು ಕಾಮಾಸಕ್ತನಾದರೆ ಮೃತ್ಯುರಾಜನು ಕೂಡಲೇ ಅವನ ಕುತ್ತಿಗೆಯನ್ನು ಮೃತ್ಯುಪಾಶದಿಂದ ಬಂಧಿಸುತ್ತಾನೆ. ಅಭಿಮಾನದಿಂದ ಮಾಡಿದ ಕರ್ಮಗಳು ಎಂದಿಗೂ ಫಲವನ್ನು ಕೊಡುವುದಿಲ್ಲವೆಂದು ಹೇಳುತ್ತಾರೆ. ತ್ಯಾಗಬುದ್ಧಿಯಿಂದ ಮಾಡಿದುದೆಲ್ಲವೂ ಮಹಾಫಲಗಳನ್ನು ಕೊಡುತ್ತವೆ. ಶಮ, ದಮ, ತಪಸ್ಸು, ದಾನ, ಸತ್ಯ, ಶೌಚ, ಸರಳತೆ, ಯಜ್ಞ, ಧೃತಿ, ಧರ್ಮ – ಇವು ಋಷಿಗಳ ನಿತ್ಯವಿಧಿಯೆಂದು ಹೇಳುತ್ತಾರೆ. ಗೃಹಸ್ಥಾಶ್ರಮದಲ್ಲಿ ಪಿತೃ-ದೇವತೆಗಳು ಮತ್ತು ಅತಿಥಿಗಳ ಪೂಜೆಗಳು ಕೂಡಿಕೊಂಡಿರುವುದರಿಂದ ಅದನ್ನು ಪ್ರಶಂಸಿಸಿದ್ದಾರೆ. ಇದರಲ್ಲಿಯೇ ಧರ್ಮ-ಅರ್ಥ-ಕಾಮಗಳೆಂಬ ಮೂರು ಫಲಗಳು ಪ್ರಾಪ್ತವಾಗುತ್ತವೆ. ಗೃಹಸ್ಥಾಶ್ರಮದಲ್ಲಿಯೇ ಇದ್ದುಕೊಂಡು ವೇದವಿಹಿತ ವಿಪ್ರಕರ್ಮಗಳನ್ನು ಫಲಾಪೇಕ್ಷೆಗಳಿಲ್ಲದೇ ನಿಷ್ಠೆಯಿಂದ ಮಾಡುತ್ತಿರುವ ತ್ಯಾಗಿಗೆ ಪರಲೌಕಿಕ ಉನ್ನತಿಯೂ ಕಡಿದುಹೋಗುವುದಿಲ್ಲ. ವಿವಿಧ ದಕ್ಷಿಣೆಗಳಿಂದ ಯುಕ್ತವಾದ ಯಜ್ಞಗಳಿಂದ ನನ್ನನ್ನು ಆರಾಧಿಸುತ್ತಾರೆ ಎಂದೇ ಶಾಂತಾತ್ಮಾ ಅಕಲ್ಮಷ ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿದನು. ಯಜ್ಞಕ್ಕಾಗಿಯೇ ಅವನು ಔಷಧಿಲತೆಗಳನ್ನೂ, ವೃಕ್ಷಗಳನ್ನೂ, ಪಶುಗಳನ್ನೂ ಮತ್ತು ಮೇಧ-ಅನ್ನಗಳನ್ನೂ, ಹವಿಸ್ಸುಗಳನ್ನೂ ಸೃಷ್ಟಿಸಿದನು. ಗೃಹಸ್ಥಾಶ್ರಮಿಗೆ ಯಜ್ಞಕರ್ಮಗಳು ಮಾಡಲೇ ಬೇಕಾದ ಒಂದು ಬಂಧನ[3]. ಇದರಿಂದಾಗಿ ಗೃಹಸ್ಥಾಶ್ರಮವು ದುಷ್ಕರವೂ ದುರ್ಲಭವೂ ಆಗಿರುತ್ತದೆ. ಪಶುಧಾನ್ಯಗಳನ್ನು ಸಂಪಾದಿಸಿದ ಯಾವ ಗೃಹಸ್ಥನು ಯಜ್ಞ ಮಾಡುವುದಿಲ್ಲವೋ ಅವನು ಶಾಶ್ವತ ಪಾಪಿಯಾಗುತ್ತಾನೆ. ಋಷಿಗಳು ಸ್ವಾಧ್ಯಾಯವೆಂಬ ಯಜ್ಞವನ್ನು ಮಾಡುತ್ತಾರೆ. ಇನ್ನು ಕೆಲವರು ಜ್ಞಾನಯಜ್ಞವನ್ನು ಮಾಡುತ್ತಾರೆ. ಇನ್ನೂ ಇತರರು ಮನಸ್ಸಿನಲ್ಲಿಯೇ ಮಹಾಯಜ್ಞಗಳನ್ನು ಮಾಡುತ್ತಿರುತ್ತಾರೆ. ಹೀಗೆ ದಾನ-ಸಮಾಧಾನಗಳ ಮಾರ್ಗವನ್ನು ಹಿಡಿದಿರುವ ಬ್ರಹ್ಮಭೂತ ದ್ವಿಜರನ್ನು ನೋಡಲು ದೇವತೆಗಳೂ ಅಪೇಕ್ಷಿಸುತ್ತಾರೆ. ಅಲ್ಲಲ್ಲಿಂದ ಸಂಗ್ರಹಿಸಿರುವ ವಿಚಿತ್ರ ರತ್ನಗಳನ್ನು ನಾವು ಯಜ್ಞಗಳ ಮೂಲಕವಾಗಿ ಹಂಚಬೇಕಾಗಿದೆ. ಹೀಗಿರುವಾಗ ನೀನು ನಾಸ್ತಿಕನಂತೆ ಮಾತನಾಡುತ್ತಿರುವೆ! ಕುಟುಂಬದಲ್ಲಿದ್ದುಕೊಂಡು ಸರ್ವಸಂಗಪರಿತ್ಯಾಗಿಯಾಗುವುದನ್ನು ನಾನೆಲ್ಲೂ ನೋಡಿಲ್ಲ. ದೇವಪತಿ ಶಕ್ರನಂತೆ ರಾಜಸೂಯ, ಅಶ್ವಮೇಧ, ಸರ್ವಮೇಧ ಅಥವಾ ಬ್ರಾಹ್ಮಣರಿಂದ ಪೂಜಿತವಾದ ಇನ್ನು ಬೇರೆ ಯಾವುದೇ ಕ್ರತುಗಳನ್ನು ಯಾಜಿಸು. ಯಾವ ರಾಜನು ಪ್ರಮಾದದೋಷದಿಂದ ಪ್ರಜೆಗಳಿಗೆ ಕಳ್ಳ-ಕಾಕರಿಂದ ರಕ್ಷಣೆಯನ್ನು ನೀಡುವುದಿಲ್ಲವೋ ಅಂತಹ ರಾಜನಿಗೆ ಕಲಿ ಎಂದು ಕರೆಯುತ್ತಾರೆ. ಕುದುರೆಗಳು, ಗೋವುಗಳು, ದಾಸಿಯರು, ಅಲಂಕೃತ ಆನೆಗಳು, ಗ್ರಾಮಗಳು, ಜನಪದಗಳು, ಕ್ಷೇತ್ರಗಳು ಮತ್ತು ಗೃಹಗಳನ್ನು ಮಾತ್ಸರ್ಯವಿಲ್ಲದೇ ದ್ವಿಜರಿಗೆ ಕೊಡದೇ ಇದ್ದರೆ ನಾವೂ ಕೂಡ ಕಲಿರಾಜರಾಗುತ್ತೇವೆ. ದಾನಮಾಡದಿರುವವರು ಮತ್ತು ರಕ್ಷಣೆನೀಡದಿರುವವರು ರಾಜಕಿಲ್ಬಿಷಗಳಿಗೆ ಭಾಗಿಗಳಾಗುತ್ತಾರೆ ಮತ್ತು ದುಃಖವನ್ನೇ ಅನುಭವಿಸುತ್ತಾರೆಯೇ ಹೊರತು ಎಂದೂ ಸುಖಿಗಳಾಗುವುದಿಲ್ಲ. ಇಷ್ಟಿಗಳನ್ನು ಮತ್ತು ಮಹಾಯಜ್ಞಗಳನ್ನು ಮಾಡದೇ, ಪಿತೃಗಳನ್ನು ಪೂಜಿಸದೇ, ತೀರ್ಥಗಳಲ್ಲಿ ಮೀಯದೇ ನೀನು ಅರಣ್ಯಕ್ಕೆ ಹೊರಟೆಯೆಂದಾದರೆ ಭಿರುಗಾಳಿಯ ಹೊಡೆತಕ್ಕೆ ಸಿಲುಕಿ ಒಡೆದು ಚದುರಿಹೋಗುವ ಮೋಡದಂತೆ ನಾಶವಾಗುವೆ. ಇಹ-ಪರ ಲೋಕಗಳೆರಡರಿಂದಲೂ ಭ್ರಷ್ಟನಾಗಿ ಮಧ್ಯದಲ್ಲಿಯೇ ಸಿಲುಕಿಗೊಳ್ಳುವೆ! ಬಹಿರಂಗವಾಗಿ ಮತ್ತು ಅಂತರಂಗವಾಗಿ ಮನಸ್ಸನ್ನು ಯಾವಾಗಲೂ ಸಂಗದಲ್ಲಿ ತೊಡಗಿಸುವಂತಹ ಅಹಂಕಾರ-ಮಮಕಾರಗಳನ್ನು ತೊರೆಯುವುದರಿಂದ ಮಾತ್ರ ತ್ಯಾಗೀ ಎನಿಸಿಕೊಳ್ಳುತ್ತಾನೆಯೇ ಹೊರತು ಕೇವಲ ಗೃಹಸ್ಥಾಶ್ರಮವನ್ನು ತೊರೆಯುವುದರಿಂದಲ್ಲ. ಇಂತಹ ಗೃಹಸ್ಥಾಶ್ರಮದಲ್ಲಿದ್ದುಕೊಂಡು ವೇದಪ್ರಣೀತವಾದ ಮತ್ತು ವಿಪ್ರರು ಗೌರವಿಸುವ ರೀತಿಯಲ್ಲಿ ನಡೆದುಕೊಂಡ ಬ್ರಾಹ್ಮಣನಿಗೆ ಎಂದೂ ಪತನವೆನ್ನುವುದಿರುವುದಿಲ್ಲ. ಯುದ್ಧದಲ್ಲಿ ಶಕ್ರನು ಹೇಗೆ ದೈತ್ಯಬಲಗಳನ್ನೋ ಹಾಗೆ ಸಮೃದ್ಧರಾಗಿದ್ದ ಶತ್ರುಗಳನ್ನು ಬೇಗನೆ ಸಂಹರಿಸಿ ಶೋಕಿಸುತ್ತಿರುವ ನಿನ್ನಂತೆ ಈ ಹಿಂದೆ ರಾಜರಿಗೆ ತಕ್ಕದೆನಿಸಿದ ಸ್ವಧರ್ಮದಲ್ಲಿ ನಿರತನಾಗಿದ್ದ ಯಾವ ರಾಜನು ತಾನೇ ಶೋಕಿಸಿದ್ದನು? ಕ್ಷಾತ್ರಧರ್ಮದ ಪ್ರಕಾರ ಪರಾಕ್ರಮದಿಂದ ಈ ಮಹಿಯನ್ನು ಗೆದ್ದು, ಮಂತ್ರವತ್ತಾಗಿ ಅದನ್ನು ದ್ವಿಜರಿಗೆ ದಾನಮಾಡಿ, ನಾಕಕ್ಕಿಂತಲೂ ಮೇಲಿರುವ ಲೋಕಗಳಿಗೆ ಹೋಗುತ್ತೀಯೆ. ಆದುದರಿಂದ ನೀನು ಶೋಕಿಸುವ ಅವಶ್ಯಕತೆಯಿಲ್ಲ.”
ಸಹದೇವ ವಾಕ್ಯ
ಸಹದೇವನು ಹೇಳಿದನು: “ಭಾರತ! ಬಾಹ್ಯದ್ರವ್ಯಗಳನ್ನು ತ್ಯಜಿಸುವುದರಿಂದ ಸಿದ್ಧಿಯಾಗುವುದಿಲ್ಲ. ಶಾರೀರಿಕ ದ್ರವ್ಯಗಳಾದ ಅಹಂಕಾರ-ಮಮಕಾರಗಳನ್ನು ತೊರೆಯುವುದರಿಂದ ಸಿದ್ಧಿಯುಂಟಾಗಬಹುದು ಅಥವಾ ಆಗದೆಯೂ ಇರಬಹುದು. ಬಾಹ್ಯದ್ರವ್ಯಗಳಿಂದ ವಿಹೀನನಾಗಿ ಶಾರೀರಿಕ ದ್ರವ್ಯಗಳಲ್ಲಿ ಆಸಕ್ತಿಯಿರುವವನ ಧರ್ಮವು ಯಾವುದೋ ಮತ್ತು ಅಂಥವನಿಗೆ ಯಾವ ಸುಖವು ದೊರೆಯುವುದೋ ಅದು ನಮ್ಮ ಶತ್ರುಗಳ ಧರ್ಮ-ಸುಖಗಳಾಗಲಿ. ಶಾರೀರಿಕ ದ್ರವ್ಯಗಳನ್ನು ತ್ಯಜಿಸಿ ಪೃಥ್ವಿಯನ್ನು ಆಳುವವನ ಧರ್ಮವು ಯೋವುದೋ ಮತ್ತು ಅಂಥವನಿಗೆ ಯಾವ ಸುಖವು ದೊರೆಯುವುದೋ ಆ ಧರ್ಮ-ಸುಖಗಳು ನಮ್ಮ ಆತ್ಮೀಯರದ್ದಾಗಲಿ. “ಮಮ” ಎನ್ನುವ ಎರಡಕ್ಷರಗಳನ್ನು ಅನುಸಂಧಾನ ಮಾಡುವುದರಿಂದ ಮೃತ್ಯುವುಂಟಾಗುತ್ತದೆ. “ನ ಮಮ” ಎಂಬ ಮೂರಕ್ಷರಗಳನ್ನು ಅನುಸಂಧಾನಮಾಡುವುದರಿಂದ ಶಾಶ್ವತವಾದ ಬ್ರಹ್ಮಲೋಕವು ಪ್ರಾಪ್ತವಾಗುತ್ತದೆ. ಈ ಬ್ರಹ್ಮ-ಮೃತ್ಯುಗಳು ಭೂತಗಳ ಆತ್ಮದಲ್ಲಿಯೇ ಅದೃಶ್ಯರಾಗಿ ಇದ್ದುಕೊಂಡು ಪರಸ್ಪರರ ವಿರುದ್ಧವಾಗಿ ಹೋರಾಡುತ್ತಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಸತ್ತ್ವವು ಅವಿನಾಶೀ ಎಂದು ನಿಯಮವಿರುವುದರಿಂದ ಜೀವಿಗಳ ಶರೀರವನ್ನು ಕತ್ತರಿಸಿದರೂ ಆ ಸತ್ತ್ವಕ್ಕೆ ಹಿಂಸೆಯಾಗುವುದಿಲ್ಲ ಎಂದಲ್ಲವೇ? ಆದರೆ ಶರೀರದೊಂದಿಗೆ ಸತ್ತ್ವವು ಹುಟ್ಟುತ್ತದೆ ಮತ್ತು ಅದರೊಂದಿಗೆ ವಿನಾಶವೂ ಆಗುತ್ತದೆ ಎಂದು ತಿಳಿದುಕೊಂಡರೆ ನಾವು ಮಾಡುವ ಕ್ರಿಯೆಗಳೆಲ್ಲವೂ ವ್ಯರ್ಥವೇ ಎಂದಾಯಿತಲ್ಲವೇ? ಆದುದರಿಂದ ತಿಳಿದವನು ಏಕಾಂತವನ್ನು ತ್ಯಜಿಸಿ ನಮ್ಮ ಪೂರ್ವಜರು ಮತ್ತು ಅವರ ಪೂರ್ವಜರು ಹಾಗೂ ಸತ್ಪುರುಷರು ಅನುಸರಿಸುವ ಮಾರ್ಗವನ್ನೇ ಅನುಸರಿಸಬೇಕು. ಸ್ಥಾವರ-ಜಂಗಮಗಳೊಡನೆ ಇಡೀ ಪೃಥ್ವಿಯನ್ನು ಪಡೆದರೂ ಯಾವ ನೃಪನು ಅದನ್ನು ಭೋಗಿಸುವುದಿಲ್ಲವೋ ಅಂಥವನ ಜೀವನವು ಸಂಪೂರ್ಣವಾಗಿ ನಿಷ್ಫಲವೇ ಸರಿ. ವನದಲ್ಲಿ ವಾಸವಾಗಿರಲಿ ಅಥವಾ ವನ್ಯಪದಾರ್ಥಗಳಿಂದ ಜೀವನ ನಡೆಸುತ್ತಿರಲಿ – ಯಾರ ಮಮತೆಯು ದ್ರವ್ಯಗಳ ಮೇಲಿರುವುದೋ ಅವನು ಮೃತ್ಯುವಶನಾದಂತೆಯೇ ಸರಿ. ಜೀವಿಗಳ ಹೊರಗಿನ ಮತ್ತು ಒಳಗಿನ ಸ್ವಭಾವವನ್ನು ನೋಡು. ಅವುಗಳ ಭಾವಗಳನ್ನು ತಿಳಿದವನು ಮಹಾಭಯದಿಂದ ಮುಕ್ತನಾಗುತ್ತಾನೆ. ನೀನೇ ನನ್ನ ತಂದೆ, ತಾಯಿ, ಅಣ್ಣ ಮತ್ತು ಗುರು. ದುಃಖದಿಂದ ಪ್ರಲಪಿಸುತ್ತಿರುವ ಈ ಆರ್ತನನ್ನು ನೀನು ಕ್ಷಮಿಸಬೇಕು. ಕೇವಲ ಭಕ್ತಿಯಿಂದ ನಾನು ನಿಜವಾಗಿರುವ ಅಥವಾ ಸುಳ್ಳಾಗಿರುವ ಈ ಮಾತುಗಳನ್ನಾಡಿದ್ದೇನೆಂದು ನೀನು ತಿಳಿದುಕೊಳ್ಳಬೇಕು.”
ದ್ರೌಪದಿ ವಾಕ್ಯ
ವಿವಿಧ ವೇದನಿಶ್ಚಯಗಳ ಕುರಿತು ತಮ್ಮಂದಿರು ಹೇಳುತ್ತಿದ್ದರೂ ಕೌಂತೇಯ ಧರ್ಮರಾಜ ಯುಧಿಷ್ಠಿರನು ಸುಮ್ಮನಿರಲು ಸತ್ಕುಲಸಂಪನ್ನೆ ವಿಶಾಲಾಕ್ಷಿ ಸ್ತ್ರೀಯರಲ್ಲಿ ಶ್ರೇಷ್ಠೆ ನಿತ್ಯವೂ ವಿಶೇಷ ಅಭಿಮಾನದಿಂದ ಯುಧಿಷ್ಠಿರನನ್ನು ಸೇವೆಗೈಯುತ್ತಿದ್ದ, ವಿಪುಲಶ್ರೋಣೀ ಧರ್ಮಜ್ಞೆ ಧರ್ಮದರ್ಶಿನೀ ದ್ರೌಪದಿಯು ಆನೆಗಳಿಂದ ಸುತ್ತುವರೆಯಲ್ಪಟ್ಟ ಸಲಗದಂತೆ ಸಹೋದರರ ಮಧ್ಯದಲ್ಲಿ ಕುಳಿತಿದ್ದ ಸಿಂಹಶಾರ್ದೂಲ ರಾಜ ಪತಿಯನ್ನು ನೋಡಿ ಸಾಂತ್ವನ ಪೂರ್ಣವಾದ ಈ ಮಧುರ ಮಾತುಗಳನ್ನಾಡಿದಳು: “ಪಾರ್ಥ! ನಿನ್ನ ಈ ಸಹೋದರರು ಬಾಡಿದ ಮುಖವುಳ್ಳವರಾಗಿದ್ದಾರೆ. ನಿನ್ನನ್ನು ಬೇಡಿಕೊಳ್ಳುತ್ತಿದ್ದರೂ ನೀನು ಅವರನ್ನು ಅಭಿನಂದಿಸುತ್ತಿಲ್ಲ! ಮಹಾರಾಜ! ಮದಿಸಿದ ಮಹಾಗಜಗಳಂತಿರುವ ಇವರನ್ನು ಸಂತೋಷಗೊಳಿಸು. ಸತತವೂ ದುಃಖವನ್ನೇ ಅನುಭವಿಸುತ್ತಿರುವ ಅವರನ್ನು ನಿನ್ನ ಮಾತುಗಳಿಂದ ಸಮಾಧಾನಗೊಳಿಸು. ಹಿಂದೆ ದ್ವೈತವನದಲ್ಲಿ ಸಹೋದರರ ಸಹಿತ ಛಳಿ-ಗಾಳಿ-ಬಿಸಿಲುಗಳಿಂದ ಪೀಡಿತರಾಗಿದ್ದಾರ ನೀನು ಅವರಿಗೆ ಹೇಳಿದ್ದ ಈ ಮಾತುಗಳು ನಿನಗೆ ಹೇಗೆ ಈಗ ನೆನಪಿಲ್ಲ? “ವಿಜಯೇಚ್ಛುಗಳಾದ ನಾವು ಯುದ್ಧದಲ್ಲಿ ದುರ್ಯೋಧನನನ್ನು ವಧಿಸಿ, ರಥಿಗಳನ್ನು ರಥಹೀನರನ್ನಾಗಿಸಿ, ಮಹಾಗಜಗಳನ್ನು ಸಂಹರಿಸಿ, ಕುದುರೆ ಸವಾರರಿಂದ ಕೂಡಿದ ರಥಗಳಿಂದ ಈ ಭೂಮಿಯನ್ನು ಮುಚ್ಚಿ ಸಕಲ ಕಾಮನವಸ್ತುಗಳಿಂದಲೂ ಸಮೃದ್ಧವಾದ ಈ ಮೇದಿನಿಯನ್ನು ಭೋಗಿಸೋಣ. ಸಮೃದ್ಧ ದಾನ-ದಕ್ಷಿಣೆಗಳಿಂದ ಕೂಡಿದ ವಿವಿಧ ಯಜ್ಞಗಳನ್ನು ಯಜಿಸಿ ವನವಾಸದಲ್ಲಿ ಪಡೆದ ದುಃಖವು ಮುಂದೆ ಸುಖದಲ್ಲಿಯೇ ಕೊನೆಗೊಳ್ಳುವಂತೆ ಮಾಡೋಣ!” ಇದೇ ಮುಂತಾಗಿ ಆಗ ಸ್ವಯಂ ನೀನೇ ಮಾತನಾಡಿ ಈಗ ಪುನಃ ನಮ್ಮ ಮನಸ್ಸನ್ನು ಏಕೆ ನೋಯಿಸುತ್ತಿರುವೆ? ಹೇಡಿಯು ವಸುಧೆಯನ್ನು ಭೋಗಿಸಲಾರ. ಹೇಡಿಯು ಧನವನ್ನು ಸಂಗ್ರಹಿಸಲಾರ. ಕೆಸರಿನಲ್ಲಿ ಮೀನುಗಳು ಇರಲಾರದಂತೆ ಹೇಡಿಯ ಮನೆಯಲ್ಲಿ ಪುತ್ರರೂ ಇರಲಾರರು. ದಂಡಧಾರಿಯಲ್ಲದ ಕ್ಷತ್ರಿಯನು ಶೋಭಿಸುವುದಿಲ್ಲ. ದಂಡಧಾರಿಯಲ್ಲದವನು ಭೂಮಿಯನ್ನು ಭೋಗಿಸುವುದಿಲ್ಲ. ದಂಡಧಾರಿಯಲ್ಲದ ರಾಜನ ಪ್ರಜೆಗಳು ಸುಖವಾಗಿರುವುದಿಲ್ಲ. ಸರ್ವಭೂತಗಳಲ್ಲಿ ಮಿತ್ರತ್ವ, ದಾನ, ಅಧ್ಯಯನ ಮತ್ತು ತಪಸ್ಸು ಇವು ಬ್ರಾಹ್ಮಣನ ಧರ್ಮ. ರಾಜನದ್ದಲ್ಲ. ದುಷ್ಟನಿಗ್ರಹ, ಶಿಷ್ಟ ಪರಿಪಾಲನೆ ಮತ್ತು ಯುದ್ಧದಲ್ಲಿ ಪಲಾಯನ ಮಾಡದಿರುವುದು ಇವು ರಾಜರ ಪರಮ ಧರ್ಮ. ಯಾರಲ್ಲಿ ಕ್ಷಮೆ ಮತ್ತು ಕ್ರೋಧಗಳೆರಡೂ, ದಾನ-ಆದಾನಗಳೆರಡೂ, ಭಯ-ಅಭಯಗಳೆರಡೂ, ನಿಗ್ರಹ-ಅನುಗ್ರಹಗಳೆರಡೂ ಇರುತ್ತವೆಯೋ ಆ ರಾಜನೇ ಧರ್ಮವಿದುವೆಂದು ಹೇಳಬಹುದು. ನೀನು ಈ ರಾಜ್ಯವನ್ನು ವೇದಾಧ್ಯಯನದಿಂದಾಗಲೀ, ದಾನಗಳಿಂದಾಗಲೀ, ಇತರರನ್ನು ಸಾಂತ್ವನಗೊಳಿಸಿದೆಯೆಂದಾಗಲೀ, ಯಜ್ಞ-ಯಾಗಗಳನ್ನು ಮಾಡಿದೆಯೆಂದಾಗಲೀ, ಅಥವಾ ಇತರರನ್ನು ಬೇಡಿ ಪಡೆದುಕೊಳ್ಳಲಿಲ್ಲ. ಅತ್ಯಂತ ವೀರರಾಗಿದ್ದ, ಆನೆ-ಕುದುರೆ-ರಥಗಳೆಂಬ ಮೂರು ಶ್ರೇಷ್ಠ ಸೇನಾಭಾಗಗಳಿಂದ ಸಂಪನ್ನವಾಗಿದ್ದ, ದ್ರೋಣ-ಕರ್ಣ-ಅಶ್ವತ್ಥಾಮ-ಕೃಪರಿಂದ ರಕ್ಷಿತವಾಗಿದ್ದ ಶತ್ರುಸೇನೆಗಳನ್ನು ಸಂಹರಿಸಿ ಗಳಿಸಿದ ಈ ವಸುಂಧರೆಯನ್ನು ನೀನು ಭೋಗಿಸು! ನಾನಾ ಜನಪದಗಳಿಂದ ಕೂಡಿರುವ ಈ ಜಂಬೂದ್ವೀಪವನ್ನು ನೀನು ದಂಡದಿಂದ ಶತ್ರುಗಳನ್ನು ಮರ್ದಿಸಿ ಪಡೆದುಕೊಂಡಿರುವೆ. ಮಹಾಮೇರುವಿನ ಕೆಳಭಾಗದಲ್ಲಿರುವ ಜಂಬೂದ್ವೀಪದಂತೆಯೇ ಇರುವ ಇನ್ನೊಂದು ದ್ವೀಪ ಕ್ರೌಂಚವನ್ನು ನೀನು ದಂಡದಿಂಡ ಮರ್ದಿಸಿ ಪಡೆದುಕೊಂಡಿರುವೆ. ಮಹಾಮೇರು ಪರ್ವತದ ಪೂರ್ವದಲ್ಲಿರುವ ಮತ್ತು ಕ್ರೌಂಚದ್ವೀಪದಂತಿರುವ ಶಾಕದ್ವೀಪವನ್ನೂ ಕೂಡ ನೀನು ದಂಡದಿಂದ ಶತ್ರುಗಳನ್ನು ಮರ್ದಿಸಿ ಸ್ವಾಧೀನಪಡೆಸಿಕೊಂಡಿರುವೆ. ಮಹಾಮೇರುವಿನ ಉತ್ತರದಲ್ಲಿರುವ ಶಾಕದ್ವೀಪಕ್ಕೆ ಕೂಡಿಕೊಂಡಿರುವ ಭದ್ರಾಶ್ವವನ್ನೂ ನೀನು ದಂಡದಿಂದ ಶತ್ರುಗಳನ್ನು ಮದಿಸಿ ಪಡೆದುಕೊಂಡಿರುವೆ. ಅನೇಕ ದೇಶಗಳಿಂದ ಕೂಡಿರುವ ದ್ವೀಪ-ದ್ವೀಪಾಂತರಗಳನ್ನೂ, ಸಮುದ್ರದ ಆಚೆ ಇರುವ ಎಲ್ಲ ಪ್ರದೇಶಗಳನ್ನೂ ದಂಡದಿಂದಲೇ ಅಧಿಕಾರಕ್ಕೊಳಪಡೆಸಿಕೊಂಡಿರುವೆ. ಈ ಅಪ್ರತಿಮ ಕರ್ಮಗಳನ್ನು ಮಾಡಿ ದ್ವಿಜರಿಂದ ಗೌರವಿಸಲ್ಪಡುತ್ತಿದ್ದರೂ ನಿನಗದು ಸಂತೋಷವನ್ನು ನೀಡುತ್ತಿಲ್ಲ! ನಿನ್ನೊಡನೆ ಸಹಕರಿಸಿರುವ ಈ ನಿನ್ನ ಮದಿಸಿದ ಆನೆಗಳಂತೆ ಮತ್ತು ಗೂಳಿಗಳಂತಿರುವ ಸಹೋದರರನ್ನು ನೋಡಿ ಆನಂದಿಸು! ಅಮರರಂತಿರುವ, ಶತ್ರುಗಳ ವೇಗವನ್ನು ತಡೆಯಬಲ್ಲ, ಪರಂತಪರು ಒಬ್ಬೊಬ್ಬರೂ ನನ್ನನ್ನು ಸುಖದಿಂದಿಟ್ಟಿರಲು ಸಮರ್ಥರೆಂದು ನನಗನ್ನಿಸುತ್ತದೆ. ಶರೀರದ ಸರ್ವೇಂದ್ರಿಯಗಳೂ ಮನುಷ್ಯನನ್ನು ಸುಖಪಡಿಸಲು ಶ್ರಮಿಸುವಂತೆ ಈ ಎಲ್ಲ ಪುರುಷವ್ಯಾಘ್ರ ನರರ್ಷಭ ಪತಿಗಳೂ ಪ್ರಯತ್ನಿಸುತ್ತಿದ್ದಾರೆ! ಸರ್ವದರ್ಶಿನಿಯಾದ ಸರ್ವಜ್ಞೆ ನನ್ನ ಅತ್ತೆ ಕುಂತಿಯು ನನಗೆ ಈ ಸತ್ಯವನ್ನೇ ಹೇಳುತ್ತಿದ್ದಳು: “ಪಾಂಚಾಲೀ! ತನ್ನ ಪರಾಕ್ರಮದಿಂಡ ಸಹಸ್ರಾರು ರಾಜರನ್ನು ಸಂಹರಿಸಿ ಯುಧಿಷ್ಠಿರನು ನಿನಗೆ ಸುಖವನ್ನು ನೀಡುತ್ತಾನೆ!” ಆದರೆ ನಿನ್ನ ಮೋಹದಿಂದಾಗಿ ಆ ಮಾತು ವ್ಯರ್ಥವಾಯಿತೆಂದೇ ನನಗನ್ನಿಸುತ್ತಿದೆ. ಅಣ್ಣನು ಮರುಳಾದರೆ ತಮ್ಮಂದಿರೂ ಅವನನ್ನು ಅನುಸರಿಸುತ್ತಾರೆ. ನಿನ್ನ ಮರುಳುತನದಿಂದಾಗಿ ಪಾಂಡವರೆಲ್ಲರೂ ಮರುಳಾಗುತ್ತಾರೆ! ಒಂದುವೇಳೆ ನಿನ್ನ ಸಹೋದರರು ಮರುಳಾಗಿರದಿದ್ದರೆ ಇಷ್ಟರಲ್ಲಿ ಉಳಿದ ನಾಸ್ತಿಕರೊಂದಿಗೆ ನಿನ್ನನ್ನು ಬಂಧಿಸಿ ಭೂಮಿಯನ್ನು ಆಳುತ್ತಿದ್ದರು! ಈ ರೀತಿ ಮೂಢನಂತೆ ನಡೆದುಕೊಳ್ಳುವವನಿಗೆ ಎಂದಿಗೂ ಶ್ರೇಯಸ್ಸು ದೊರೆಯುವುದಿಲ್ಲ. ಹೀಗೆ ಅಪಮಾರ್ಗದಲ್ಲಿ ಹೋಗುವವನಿಗೆ ಧೂಪಗಳಿಂದಲೂ, ಕಣ್ಣಿಗೆ ಅಂಜನಾದಿಗಳನ್ನು ಹಚ್ಚುವುದರಿಂದಲೂ, ಮೂಗಿಗೆ ಚೂರ್ಣವನ್ನು ಹಾಕುವುದರಿಂದಲೂ, ಮತ್ತು ಇತರ ಔಷಧಿಗಳಿಂದಲೂ ಚಿಕೆತ್ಸೆಗಳನ್ನು ನಡೆಸಬೇಕಾಗುತ್ತದೆ! ನಾನು ಲೋಕದ ಸ್ತ್ರೀಯರಿಗಿಂಥಲೂ ಅಧಮಳೆಂದು ಭಾವಿಸುತ್ತೇನೆ. ಶತ್ರುಗಳಿಂದ ಈ ರೀತಿ ಮೋಸಗೊಂಡೆನಾದರೂ ಜೀವಿಸಿರಲು ಇಚ್ಛಿಸುತ್ತೇನೆ! ಇವರು ನಿನ್ನನ್ನು ಸಮಾಧಾನ ಪಡೆಸಲು ಪ್ರಯತ್ನಿಸುತ್ತಿದ್ದಾರೆ. ನೀನಾದರೋ ಇಡೀ ಭೂಮಿಯನ್ನೇ ಪಡೆದರೂ ಸ್ವಯಂ ನಿನಗೇ ಆಪತ್ತನ್ನು ತಂದುಕೊಳ್ಳುತ್ತಿದ್ದೀಯೆ! ರಾಜಸತ್ತಮರಾದ ಮಾಂಧಾತಾ-ಅಂಬರೀಷರಂತೆ ಎಲ್ಲ ರಾಜರಿಂದಲೂ ಪುರಸ್ಕೃತರಾಗಿ ರಾಜ್ಯಭಾರಮಾಡಿ ನೀನೂ ಕೂಡ ವಿರಾಜಿಸು! ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ ಈ ಪರ್ವತ-ವನ-ದ್ವೀಪಗಳಿಂದ ಕೂಡಿದ ದೇವೀ ಪೃಥ್ವಿಯನ್ನು ಆಳುವುದರ ಕುರಿತು ಉದಾಸೀನನಾಗಬೇಡ. ವಿವಿಧ ಯಜ್ಞಗಳಿಂದ ದೇವತೆಗಳನ್ನು ಆರಾಧಿಸು. ಪುರಗಳನ್ನೂ, ಭೋಗವಸ್ತುಗಳನ್ನೂ, ವಸ್ತ್ರಗಳನ್ನೂ ಬ್ರಾಹ್ಮಣರಿಗೆ ದಾನಮಾಡು!”
ಯಾಜ್ಞಸೇನಿಯ ಮಾತನ್ನು ಕೇಳಿ ಪುನಃ ಅರ್ಜುನನು ಮಹಾಬಾಹು ಜ್ಯೇಷ್ಠ ಭ್ರಾತಾ ಈಶ್ವರ ಯುಧಿಷ್ಠಿರನನ್ನು ಗೌರವಿಸಿ ಈ ಮಾತುಗಳನ್ನಾಡಿದನು: “ದಂಡವು ಪ್ರಜೆಗಳನ್ನು ಆಳುತ್ತದೆ ಹಾಗೂ ರಕ್ಷಿಸುತ್ತದೆ. ಎಲ್ಲರೂ ಮಲಗಿರುವಾಗ ದಂಡವು ಎಚ್ಚೆತ್ತಿರುತ್ತದೆ. ಆದುದರಿಂದ ತಿಳಿದವರು ದಂಡವೇ ಧರ್ಮವೆಂದೂ ಹೇಳುತ್ತಾರೆ. ದಂಡವು ಧರ್ಮವನ್ನು ರಕ್ಷಿಸುತ್ತದೆ. ದಂಡವು ಅರ್ಥವನ್ನೂ ಹಾಗೆಯೇ ಕಾಮವನ್ನೂ ರಕ್ಷಿಸುತ್ತದೆ. ಆದುದರಿಂದ ದಂಡವ್ವು ತ್ರಿವರ್ಗರೂಪವಾಗಿರುವುದೆಂದು ಹೇಳುತ್ತಾರೆ. ದಂಡದಿಂದ ಧಾನ್ಯದ ರಕ್ಷಣೆಯಾಗುತ್ತದೆ. ದಂಡದಿಂದ ಧನದ ರಕ್ಷಣೆಯೂ ಆಗುತ್ತದೆ. ಆದುದರಿಂದ ನೀನೂ ದಂಡಧಾರಣೆಮಾಡು ಮತ್ತು ಲೋಕದ ಸ್ವಭಾವದ ಕಡೆ ಗಮನಹರಿಸು! ರಾಜದಂಡದ ಭಯದಿಂದ ಕೆಲವು ಪಾಪಿಗಳು ಪಾಪಕರ್ಮಗಳನ್ನೆಸಗುವುದಿಲ್ಲ. ಇನ್ನು ಕೆಲವು ಪಾಪಿಗಳು ಯಮದಂಡದ ಭಯದಿಂದ ಮತ್ತು ಪರಲೋಕದ ಭಯದಿಂದ ಪಾಪಕರ್ಮಗಳನ್ನೆಸಗುವುದಿಲ್ಲ. ಕೆಲವು ಪಾಪಿಗಳು ಪರಸ್ಪರರ ಭಯದಿಂದಾಗಿ ಪಾಪಕರ್ಮಗಳನ್ನೆಸಗುವುದಿಲ್ಲ. ಈ ರೀತಿ ಎಲ್ಲವೂ ದಂಡವನ್ನವಲಂಬಿಸಿವೆ ಎಂದು ಲೋಕದಲ್ಲಿ ಸಿದ್ಧವಾಗಿದೆ. ದಂಡದ ಭಯವೊಂದರಿಂದಲೇ ಪರಸ್ಪರರನ್ನು ನುಂಗಿಹಾಕುತ್ತಿಲ್ಲ! ರಾಜನು ದಂಡದಿಂದ ಪ್ರಜೆಗಳನ್ನು ಪಾಲಿಸದೇ ಇದ್ದರೆ ಪ್ರಜೆಗಳೆಲ್ಲರೂ ಅನಾಯಕತ್ವವೆಂಬ ಅಂಧಕಾರದಲ್ಲಿ ಮುಳುಗಿಹೋಗುತ್ತಿದ್ದರು! ಸ್ವೇಚ್ಛಾಚಾರಿಗಳನ್ನು ದಮನಮಾಡುವುದರಿಂದ, ಮತ್ತು ದುಷ್ಟರನ್ನು ಶಿಕ್ಷಿಸುವುದರಿಂದ ಇದನ್ನು ದಂಡವೆನ್ನುತ್ತಾರೆ. ದಮನ-ದಂಡನೆಗಳನ್ನು ಮಾಡುವುದರಿಂದ ಇದನ್ನು ತಿಳಿದವರು ದಂಡ ಎನ್ನುತ್ತಾರೆ. ಬ್ರಾಹ್ಮಣರನ್ನು ಮಾತಿನಿಂದ ದಂಡಿಸಬೇಕು. ಕ್ಷತ್ರಿಯರನ್ನು ಅವರ ಊಟಕ್ಕೆ ಸಾಕಾಗುವಷ್ಟೇ ವೇತನವನ್ನು ನೀಡುವುದರಿಂದ ದಂಡಿಸಬೇಕು. ಕಪ್ಪ-ಕಾಣಿಕೆಗಳನ್ನು ತೆಗೆದುಕೊಳ್ಳುವುದರ ಮೂಲಕ ವೈಶ್ಯರನ್ನು ದಂಡಿಸಬೇಕು. ಮತ್ತು ಶೂದ್ರರಿಗೆ ದಂಡನೆಯೇ ಇಲ್ಲ ಎಂದು ಹೇಳುತ್ತಾರೆ. ಲೋಕದಲ್ಲಿ ಮನುಷ್ಯರು ಮೋಹಪರವಶರಾಗದಂತೆ ಮಾಡಲು ಮತ್ತು ಧನದ ಸಂರಕ್ಷಣೆಗಾಗಿ ದಂಡವೆಂದು ಕರೆಯಲ್ಪಡುವ ಮರ್ಯಾದೆಯು ಸ್ಥಾಪಿತವಾಗಿದೆ. ಎಲ್ಲಿ ಶ್ಯಾಮಲವರ್ಣದ ಕೆಂಪುಕಣ್ಣುಗಳುಳ್ಳ ದಂಡವನ್ನು ಸರಿಯಾದ ರೀತಿಯಲ್ಲಿ ಪ್ರಯೋಗಿಸುತ್ತಾರೆಯೋ ಅಲ್ಲಿ ಪ್ರಜೆಗಳು ಮೋಹಪರವಶರಾಗಿರುವುದಿಲ್ಲ ಮತ್ತು ಅಲ್ಲಿ ಅಸಾಧು ಜನರು ಕಂಡುಬರುವುದಿಲ್ಲ. ದಂಡದ ಭಯದಿಂದಲೇ ಮನುಷ್ಯರು ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ ಮತ್ತು ಭಿಕ್ಷುಕ ಮೊದಲಾದ ಆಶ್ರಮಗಳಲ್ಲಿ ಸರಿಯಾಗಿ ನಡೆದುಕೊಂಡಿರುತ್ತಾರೆ. ಭಯವಿಲ್ಲದವನು ಯಜ್ಞಮಾಡುವುದಿಲ್ಲ. ಭಯವಿಲ್ಲದವನು ದಾನವನ್ನೂ ನೀಡಲು ಇಚ್ಛಿಸುವುದಿಲ್ಲ. ಭಯವಿಲ್ಲದ ಪುರುಷನು ತಾನು ಮಾಡಿದ ಪ್ರಮಾಣವಚನಗಳಂತೆಯೂ ನಡೆದುಕೊಳ್ಳುವುದಿಲ್ಲ. ಬೆಸ್ತನಂತೆ ಶತ್ರುಗಳ ಮರ್ಮಸ್ಥಾನಗಳನ್ನು ಸೀಳದೇ, ದಾರುಣ ಕರ್ಮಗಳನ್ನೆಸಗದೆ, ಸಂಹರಿಸದೇ ಮಹದೈಶ್ವರ್ಯವನ್ನು ಸಂಪಾದಿಸಲು ಸಾಧ್ಯವಿಲ್ಲ. ಶತ್ರುಗಳನ್ನು ಸಂಹರಿಸದೇ ಕೀರ್ತಿಯಿಲ್ಲ, ಸಂಪತ್ತಿಲ್ಲ ಮತ್ತು ಪ್ರಜೆಗಳೂ ಇರುವುದಿಲ್ಲ. ವೃತ್ರನ ವಧೆಗೈದೇ ಇಂದ್ರನು ಮಹೇಂದ್ರಪದವಿಯನ್ನು ಪಡೆದನು! ಈ ರೀತಿ ಹಂತಕರಾದ ದೇವತೆಗಳನ್ನೇ ಲೋಕಗಳು ಬಹಳವಾಗಿ ಪೂಜಿಸುತ್ತವೆ. ರುದ್ರ ಮತ್ತು ಹಾಗೆಯೇ ಸ್ಕಂದ, ಶಕ್ರ, ವರುಣ ಮತ್ತು ಯಮರೂ ಹಂತಾರರೇ! ಕಾಲ, ವಾಯು, ಮೃತ್ಯು, ವೈಶ್ರವಣ, ರವಿ, ವಸವರು, ಮರುತರು, ಸಾಧ್ಯರು, ಮತ್ತು ವಿಶ್ವೇದೇವರೂ ಕೂಡ ಹಂತಾರರೇ! ಪ್ರತಾಪಗಳಿಂದ ಕೂಡಿರುವ ಈ ದೇವತೆಗಳನ್ನೇ ಜನರು ನಮಸ್ಕರಿಸುತ್ತಾರೆ. ಬ್ರಹ್ಮನನ್ನಲ್ಲ, ಧಾತಾರನನ್ನಲ್ಲ ಮತ್ತು ಪೂಷಾಣನನ್ನಲ್ಲ! ಸರ್ವಭೂತಗಳಲ್ಲೂ ಸಮಭಾವದಿಂದಿರುವ ಜಿತೇಂದ್ರಿಯ ಶಾಂತಿಪರಾಯಣ ದೇವತೆಗಳನ್ನು ಪ್ರಶಾಂತರಾದ ಕೆಲವೇ ಮಾನವರು ಸರ್ವಕರ್ಮಗಳಲ್ಲಿ ಪೂಜಿಸುತ್ತಾರೆ. ಲೋಕದಲ್ಲಿ ಕೇವಲ ಅಹಿಂಸೆಯಿಂದ ಜೀವಿಸುತ್ತಿರುವವರ್ಯಾರನ್ನೂ ನಾನು ಕಾಣುತ್ತಿಲ್ಲ! ಬಲಶಾಲೀ ಸತ್ತ್ವಗಳು ದುರ್ಬಲರ ಸತ್ತ್ವಗಳಿಂದ ಜೀವಿಸುತ್ತವೆ. ಮುಂಗುಸಿಯು ಇಲಿಗಳನ್ನು, ಬೆಕ್ಕು ಮುಂಗುಸಿಯನ್ನು, ಬೆಕ್ಕನ್ನು ನಾಯಿ ಮತ್ತು ನಾಯಿಯನ್ನು ಚಿರತೆ ಹೀಗೆ ಒಂದು ಇನ್ನೊಂದನ್ನು ತಿನ್ನುತ್ತಿರುತ್ತವೆ! ಇವೆಲ್ಲವುಗಳನ್ನೂ ಮನುಷ್ಯನು ಕೊಂದು ತಿನ್ನುತ್ತಾನೆ. ಹೀಗೆ ನಡೆದುಕೊಂಡುಬಂದಿರುವ ಧರ್ಮವನ್ನಾದರೋ ನೀನು ನೋಡು! ಸ್ಥಾವರ-ಜಂಗಮಗಳೆಲ್ಲವೂ ಪ್ರಾಣಧಾರಣೆಗೆ ಅನ್ನರೂಪವಾಗಿಯೇ ಇವೆ. ಪ್ರಾಣಿಗಳು ಪ್ರಾಣಿಗಳನ್ನವಲಂಬಿಸಿಯೇ ಜೀವಿಸಬೇಕು ಎಂಬ ಈ ವಿಧಾನವು ದೇವವಿಹಿತವಾದುದು. ತಿಳಿದವನು ಈ ವಿಷಯದಲ್ಲಿ ಭ್ರಾಂತನಾಗುವುದಿಲ್ಲ. ನೀನು ಹೇಗೆ ಸೃಷ್ಟಿಸಲ್ಪಟ್ಟಿರುವಿಯೋ ಅದೇರೀತಿ ನೀನು ಇರಬೇಕಾಗುತ್ತದೆ! ಕ್ರೋಧ-ಹರ್ಷಗಳನ್ನು ಹತೋಟಿಯಲ್ಲಿಟ್ಟುಕೊಂಡು ವನವನ್ನು ಸೇರುವ ಮೂಢ ಕ್ಷತ್ರಿಯ ತಾಪಸರು ವಧೆಗೈಯದೇ ಜೀವಂತವಾಗಿರಲಾರರು! ಕುಡಿಯುವ ನೀರಿನಲ್ಲಿ, ಗೆಡ್ಡೆ-ಗೆಣಸುಗಳಲ್ಲಿ ಮತ್ತು ಹಣ್ಣುಗಳಲ್ಲಿ ಅನೇಕ ಜೀವಿಗಳಿರುತ್ತವೆ. ಇವುಗಳನ್ನು ಕೊಲ್ಲದೇ ಯಾರೂ ಜೀವಂತವಾಗಿರಲಾರರು! ಸೂಕ್ಷ್ಮಯೋನಿಗಳ ಇರುವಿಕೆಯನ್ನು ಕೇವಲ ತರ್ಕದಿಂದ ಪ್ರಮಾಣೀಕರಿಸಬಹುದು. ನಮ್ಮ ಒಂದು ರೆಪ್ಪೆಯ ಕೂದಲೂ ಅವುಗಳ ಮೇಲೆ ಬಿದ್ದರೆ ಅವುಗಳ ಅವಯವಗಳು ಮುರಿದುಹೋಗುತ್ತವೆ! ಕ್ರೋಧ-ಮತ್ಸರಗಳನ್ನು ತೊರೆದು ಮುನಿಗಳು ಗ್ರಾಮದಿಂದ ಹೊರಟು ವನದಲ್ಲಿ ಮೋಹಿತರಾಗಿ ಕುಟುಂಬಧರ್ಮವನ್ನು ಅನುಸರಿಸುತ್ತಿರುವುದನ್ನು ನಾವು ನೋಡುತ್ತೇವೆ. ಭೂಮಿಯನ್ನು ಹೂಳಿ, ಅಲ್ಲಿರುವ ಔಷಧಿ-ಲತೆಗಳನ್ನು ಕಿತ್ತು, ವೃಕ್ಷ-ಪಕ್ಷಿ-ಪ್ರಾಣಿಗಳನ್ನು ಹನನಮಾಡಿ, ಯಜ್ಞಗಳನ್ನು ಮಾಡುವ ಮನುಷ್ಯನು ಸ್ವರ್ಗವನ್ನು ಪಡೆಯುತ್ತಾನೆ. ದಂಡನೀತಿಯನ್ನು ಅನುಸರಿಸಿದ್ದೇ ಆದರೆ ಸರ್ವಭೂತಗಳೂ ಪ್ರಯತ್ನಿಸುವ ಸಿದ್ಧಿಗಳು ದೊರೆಯುತ್ತವೆ ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ. ಲೋಕದಲ್ಲಿ ದಂಡನೀತಿಯೇ ಇರದಿದ್ದರೆ ಈ ಪ್ರಜೆಗಳು ವಿನಾಶಹೊಂದುತ್ತಿದ್ದರು. ದೊಡ್ಡ ಮೀನುಗಳು ಚಿಕ್ಕಮೀನುಗಳನ್ನು ತಿನ್ನುವಂತೆ ಬಲಶಾಲಿಗಳು ದುರ್ಬಲರನ್ನು ವಿನಾಶಗೊಳಿಸಿಬಿಡುತ್ತಿದ್ದರು. ಸರಿಯಾದ ರೀತಿಯಲ್ಲಿ ಬಳಸಿದ ದಂಡನೀತಿಯು ಪ್ರಜೆಗಳನ್ನು ರಕ್ಷಿಸುತ್ತದೆಯೆಂಬ ಸತ್ಯವನ್ನು ಬ್ರಹ್ಮನೇ ಹಿಂದೆ ಹೇಳಿದ್ದನು. ಈ ಅಗ್ನಿಗಳನ್ನಾದರೂ ನೋಡು! ಆರಿಹೋಗುತ್ತಿರುವ ಬೆಂಕಿಯನ್ನು ಊದಿದಾಗ ದಂಡಭಯದಿಂದಲೇ ಅದು ಪುನಃ ಹತ್ತಿಕೊಂಡು ಉರಿಯುತ್ತದೆ! ಒಳ್ಳೆಯದು ಯಾವುದು ಮತ್ತು ಕೆಟ್ಟದು ಯಾವುದು ಎನ್ನುವುದನ್ನು ವಿಭಜಿಸುವ ದಂಡನೀತಿಯೇ ಈ ಲೋಕದಲ್ಲಿ ಇರದಿದ್ದರೆ ಪ್ರಜೆಗಳೆಲ್ಲರೂ ಕುರುಡರ ಅಂಧಕಾರವನ್ನು ಅನುಭವಿಸುತ್ತಿದ್ದರು. ಮರ್ಯಾದೆಗಳನ್ನು ಒಡೆದು ವೇದಗಳನ್ನು ನಿಂದಿಸುವ ನಾಸ್ತಿಕರೂ ಕೂಡ ದಂಡದ ಪೀಡೆಗೊಳಪಟ್ಟು ಮರ್ಯಾದೆಗಳನ್ನು ಮೀರದೇ ಸುಖಪಡುವಂತವರಾಗುತ್ತಾರೆ. ದಂಡದಿಂದಲೇ ಎಲ್ಲವನ್ನೂ ಗೆಲ್ಲಬಹುದು. ಸ್ವಭಾವದಿಂದಲೇ ಶುಚಿಯಾಗಿರುವ ಮನುಷ್ಯರು ಈ ಲೋಕದಲ್ಲಿ ದುರ್ಲಭ. ದಂಡದ ಭಯದಿಂದಲೇ ಭೀತರಾಗಿ ಮನುಷ್ಯರು ಧರ್ಮವನ್ನನುಸರಿಸಿ ನಡೆದುಕೊಳ್ಳುತ್ತಾರೆ. ನಾಲ್ಕುವರ್ಣದವರೂ ಆನಂದದಿಂದಿರಲು, ನೀತಿವಂತರಾಗಿ ಬಾಳಲು ಮತ್ತು ಧರ್ಮ-ಅರ್ಥಗಳನ್ನು ರಕ್ಷಿಸುವುದಕ್ಕಾಗಿಯೇ ವಿಧಾತನು ದಂಡವನ್ನು ವಿಧಿಸಿದ್ದಾನೆ. ದಂಡದ ಭಯವೇ ಇರದಿದ್ದರೆ ಕ್ರೂರಮೃಗಗಳಾಗಲೀ ಪಕ್ಷಿಗಳಾಗಲೀ ಇದೂವರೆಗೆ ಯಜ್ಞ ಪಶುಗಳನ್ನು, ಮನುಷ್ಯರನ್ನು, ಯಜ್ಞಸಲಕರಣೆಗಳನ್ನು ಮತ್ತು ಹವಿಸ್ಸುಗಳನ್ನು ತಿಂದುಹಾಕಿಬಿಡುತ್ತಿದ್ದವು. ದಂಡವೆನ್ನುವುದು ಇಲ್ಲದೇ ಇದ್ದಿದ್ದರೆ ಬ್ರಹ್ಮಚಾರಿಯು ಅಧ್ಯಯನ ಮಾಡುತ್ತಿರಲಿಲ್ಲ, ಕಲ್ಯಾಣೀ ಗೋವು ಹಾಲನ್ನು ನೀಡುತ್ತಿರಲಿಲ್ಲ, ಮತ್ತು ಕನ್ಯೆಯು ವಿವಾಹವಾಗುತ್ತಿರಲಿಲ್ಲ. ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ವಿಶ್ವದಲ್ಲಿ ಧರ್ಮಲೋಪವಾಗುತ್ತಿತ್ತು. ಸರ್ವ ಸೇತುವೆಗಳೂ ಮುರಿದುಬೀಳುತ್ತಿದ್ದವು. ನನ್ನದ್ಯಾವುದು ಮತ್ತು ನನ್ನದು ಯಾವುದಲ್ಲ ಎನ್ನುವ ಭಾವನೆಯೇ ಹುಟ್ಟುತ್ತಿರಲಿಲ್ಲ. ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ನಿರ್ಭಯದಿಂದ ವಿಧಿವತ್ತಾಗಿ ಮತ್ತು ದಕ್ಷಿಣೆಗಳೊಂದಿಗೆ ನಡೆಯುತ್ತಿದ್ದ ಸಂವತ್ಸರ ಸತ್ರಗಳು ನಿಂತುಹೋಗುತ್ತಿದ್ದವು. ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ವಿಧಿಯನ್ನನುಸರಿಸಿ ಯಥೋಕ್ತವಾದ ಆಶ್ರಮ ಧರ್ಮಗಳನ್ನು ನಡೆಸುತ್ತಿರಲಿಲ್ಲ ಮತ್ತು ಯಾರೂ ವಿದ್ಯೆಯನ್ನು ಪಡೆಯುತ್ತಿರಲಿಲ್ಲ. ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ಒಂಟೆ-ಎತ್ತು-ಕುದುರೆ-ಹೇಸರಗತ್ತೆ ಮತ್ತು ಕತ್ತೆಗಳನ್ನು ಕಟ್ಟಿದ್ದರೂ ಅವು ಯಾನಗಳನ್ನು ಎಳೆದುಕೊಂಡು ಹೋಗುತ್ತಿರಲಿಲ್ಲ! ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ಸೇವಕರು ಯಜಮಾನನ ಮಾತಿನಂತೆ ನಡೆಯುತ್ತಿರಲಿಲ್ಲ, ಮತ್ತು ಬಾಲಕರು ತಂದೆಯ ಧರ್ಮವನ್ನು ಪಾಲಿಸುತ್ತಿರಲಿಲ್ಲ. ದಂಡದಿಂದ ಮತ್ತು ದಂಡದ ಭಯದಿಂದಾಗಿ ಪ್ರಜೆಗಳೆಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿ ನೆಲೆಸಿದ್ದಾರೆ ಎಂದು ತಿಳಿದವರು ತಿಳಿದುಕೊಂಡಿರುತ್ತಾರೆ. ಮನುಷ್ಯರ ಸ್ವರ್ಗವೂ ಈ ಲೋಕವೂ ದಂಡದ ಮೇಲೆಯೇ ಅವಲಂಬಿಸಿದೆ. ಶತ್ರುನಾಶಕ ದಂಡನೀತಿಯು ಎಲ್ಲಿ ಚೆನ್ನಾಗಿ ಬಳಸಲ್ಪಟ್ಟಿದೆಯೋ ಅಲ್ಲಿ ಮೋಸವಾಗಲೀ, ಪಾಪಕರ್ಮಗಳಾಗಲೀ ಅಥವಾ ವಂಚನೆಯಾಗಲೀ ಕಂಡುಬರುವುದಿಲ್ಲ. ದಂಡದಿಂದ ಆಳದೇ ಇದ್ದರೆ ಹವಿಸ್ಸನ್ನು ನೋಡಿದ ನಾಯಿಯು ಅದನ್ನು ನೆಕ್ಕಲು ಹೋಗುತ್ತದೆ. ಕಾಗೆಯು ಪುರೋಡಾಶವನ್ನೇ ಎತ್ತಿಕೊಂಡು ಹೋಗುತ್ತದೆ. ಈ ರಾಜ್ಯವನ್ನು ನಾವು ಧರ್ಮದಿಂದ ಪಡೆದವೋ ಅಥವಾ ಅಧರ್ಮದಿಂದ ಪಡೆದವೋ ಎನ್ನುವುದರ ಕುರಿತು ಯೋಚಿಸುವ ಕಾಲವಿದಲ್ಲ. ಶೋಕಪಡಬೇಡ! ಭೋಗಗಳನ್ನು ಭೋಗಿಸು ಮತ್ತು ಯಜ್ಞಗಳನ್ನು ಮಾಡು! ಶ್ರೀಮಂತರು ಸುಖದಿಂದಲೇ ಶುಭ್ರವಸ್ತ್ರಗಳನ್ನು ಧರಿಸಿ ಧರ್ಮವನ್ನಾಚರಿಸುತ್ತಾರೆ. ಅವರು ಪ್ರಿಯ ಪತ್ನಿಯರೊಂದಿಗೆ ವಾಸಿಸುತ್ತಾರೆ ಮತ್ತು ಉತ್ತಮ ಆಹಾರವನ್ನು ಸೇವಿಸುತ್ತಾರೆ. ಸರ್ವ ಸಮಾರಂಭಗಳೂ ಧನದ ಮೇಲೆ ಅವಲಂಬಿಸಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಧನವು ದಂಡವನ್ನು ಅವಲಂಬಿಸಿದೆ. ದಂಡಕ್ಕಿರುವ ಗೌರವವನ್ನಾದರೂ ನೋಡು! ಲೋಕಯಾತ್ರೆಯ ನಿರ್ವಹಣೆಗೆ ಅಹಿಂಸೆಯು ಸಾಧುವೆಂದು ಧರ್ಮಪ್ರವಚನವನ್ನು ಮಾಡುತ್ತಾರೆ. ಆದರೆ ಹಿಂಸೆಯು ಕೆಲವು ಸಮಯಗಳಲ್ಲಿ ಶ್ರೇಯಸ್ಸನ್ನು ನೀಡುವ ಧರ್ಮಕಾರ್ಯವಾಗಬಹುದು. ಯಾವುದೇ ಕಾರ್ಯವು ಅತ್ಯಂತ ಗುಣಯುಕ್ತವಾಗಿಯೂ ಅಥವಾ ಅತ್ಯಂತ ನಿರ್ಗುಣವಾಗಿಯೂ ಇರುವುದಿಲ್ಲ. ಸರ್ವಕಾರ್ಯಗಳಲ್ಲಿ ಒಳ್ಳೆಯದು ಯಾವುದು ಮತ್ತು ಯಾವುದು ಒಳ್ಳೆಯದಲ್ಲ ಈ ಎರಡನ್ನೂ ನೋಡಬೇಕಾಗುತ್ತದೆ. ಹೋರಿಯ ಬೀಜವನ್ನು ಒಡೆದು, ಕೋಡುಗಳನ್ನು ಕತ್ತರಿಸುತ್ತಾರೆ. ಹೀಗೆ ಕಷ್ಟಕ್ಕೊಳಗಾದ ಹೋರಿಯು ಅತಿ ಭಾರವನ್ನು ಹೊರುತ್ತದೆ ಮತ್ತು ಕಟ್ಟಿದರೆ ಬಂಡಿಯನ್ನು ಎಳೆದುಕೊಂಡೂ ಹೋಗುತ್ತದೆ. ಅಧರ್ಮದಿಂದ ಜರ್ಜರಗೊಂಡು ಒಡೆದುಹೋಗುತ್ತಿರುವ ಲೋಕವನ್ನು ನ್ಯಾಯ ಮತ್ತು ಪುರಾತನ ಧರ್ಮವನ್ನು ಆಚರಿಸಿ ಆಳು! ಯಜ್ಞಮಾಡು. ದಾನಗಳನ್ನು ನೀಡು. ಪ್ರಜೆಗಳನ್ನು ರಕ್ಷಿಸಿ ಧರ್ಮವನ್ನು ಪಾಲಿಸು. ಶತ್ರುಗಳನ್ನು ಸಂಹರಿಸುತ್ ಮತ್ತು ಮಿತ್ರರನ್ನು ಪರಿಪಾಲಿಸು! ಶತ್ರುಗಳನ್ನು ಸಂಹರಿಸುವಾಗ ನಿನಗೆ ದೀನತೆಯುಂಟಾಗದಿರಲಿ! ಶತ್ರುವಿನಾಶದಲ್ಲಿ ಸ್ವಲ್ಪವೂ ಪಾಪವಿಲ್ಲ. ಆಯುಧಗಳನ್ನು ಹಿಡಿದು ಎದುರಾದವನನ್ನು ಆಯುಧಗಳಿಂದ ಸಂಹರಿಸುವುದರಿಂದ ಭ್ರೂಣಹತ್ಯೆಯ ದೋಷವು ಬರುವುದಿಲ್ಲ. ಏಕೆಂದರೆ ಅಲ್ಲಿ ಕೋಪವು ಕೋಪವನ್ನು ಎದುರಿಸಿ ಹೋರಾಡುತ್ತದೆ. ಸರ್ವಜೀವಿಗಳಲ್ಲಿರುವ ಅಂತರಾತ್ಮನು ಅವಧ್ಯ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವಧ್ಯವಾದ ಆತ್ಮವನ್ನು ಯಾರುತಾನೇ ಹೇಗೆ ವಧಿಸಬಲ್ಲರು? ಮನುಷ್ಯನು ಹೊಸ ಹೊಸ ಮನೆಗಳಲ್ಲಿ ವಾಸಮಾಡುವಂತೆ ಜೀವನು ಬೇರೆ ಬೇರೆ ಶರೀರಗಳನ್ನು ಪಡೆಯುತ್ತದೆ. ಹಳೆಯದಾದ ದೇಹಗಳನ್ನು ವಿಸರ್ಜಿಸಿ ಹೊಸ ಶರೀರಗಳನ್ನು ಪಡೆಯುತ್ತದೆ. ಇದನ್ನೇ ತತ್ತ್ವದರ್ಶೀ ಜನರು ಮೃತ್ಯುಮುಖವೆಂದು ಹೇಳುತ್ತಾರೆ.”
ಅರ್ಜುನನ ಮಾತನ್ನು ಕೇಳಿ ಅತಿ ಅಸಹನಶೀಲನಾದ ತೇಜಸ್ವೀ ಭೀಮಸೇನನು ಧೈರ್ಯವನ್ನು ತಾಳಿ ಹಿರಿಯಣ್ಣನಿಗೆ ಹೇಳಿದನು: “ರಾಜನ್! ನೀನು ಧರ್ಮವನ್ನು ತಿಳಿದಿದ್ದೀಯೆ. ಭುವಿಯಲ್ಲಿ ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ನಿನ್ನಿಂದಲೇ ನಾವು ಸದೈವ ಉಪದೇಶಗಳನ್ನು ಪಡೆಯುತ್ತಾ ಬಂದಿದ್ದೇವೆ. “ನಾನು ಮಾತನಾಡುವುದಿಲ್ಲ! ನಾನು ಮಾತನಾಡುವುದಿಲ್ಲ!” ಎಂದು ನನ್ನ ಮನಸ್ಸಿನ ನಿರ್ಧಾರವಾಗಿತ್ತು. ಆದರೆ ಈಗ ಅತಿ ದುಃಖದಿಂದ ಹೇಳುತ್ತಿದ್ದೇನೆ. ಜನಾಧಿಪ! ಅದನ್ನು ಕೇಳು! ನಿನ್ನ ಮೋಹಪರವಶದಿಂದಾಗಿ ನಾವು ಮಾಡಿದುದೆಲ್ಲವೂ ಸಂಶಯಾಸ್ಪದವೆನ್ನಿಸುತ್ತಿದೆ. ನಾವು ವ್ಯಾಕುಲಗೊಂಡಿದ್ದೇವೆ ಮತ್ತು ದುರ್ಬಲರಾಗಿದ್ದೇವೆ ಎಂದನ್ನಿಸುತ್ತಿದೆ. ಸರ್ವಶಾಸ್ತ್ರವಿಶಾರದನಾದ ಲೋಕದ ರಾಜನಾಗಿರುವ ನೀನು ಏಕೆ ಹೀಗೆ ಹೇಡಿಯಂತೆ ದೈನ್ಯದಿಂದ ಮೋಹಪರವಶನಾಗಿರುವೆ? ಲೋಕದಲ್ಲಿ ನಡೆದುಹೋಗಿರುವ ಮತ್ತು ನಡೆಯುತ್ತಿರುವುದು ನಿನಗೆ ತಿಳಿದೇ ಇದೆ. ದುರ್ಮಾರ್ಗ-ಸನ್ಮಾರ್ಗಗಳೂ ನಿನಗೆ ತಿಳಿದಿವೆ. ಹೀಗಿರುವಾಗ ರಾಜ್ಯದ ಕುರಿತು ನಾವು ಹೇಳುತ್ತಿರುದು ಏಕೆನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು! ಶಾರೀರಕ ಮತ್ತು ಮಾನಸಿಕ ಎನ್ನುವ ಎರಡು ರೀತಿಯ ವ್ಯಾಧಿಗಳುಂಟಾಗುತ್ತವೆ. ಒಂದನ್ನಾಶ್ರಯಿಸಿ ಇನ್ನೊಂದು ವ್ಯಾಧಿಯೂ ಹುಟ್ಟಿಕೊಳ್ಳಬಹುದು. ಆದರೆ ಒಂದು ಹುಟ್ಟದೇ ಇನ್ನೊಂದು ಹುಟ್ಟಲಾರದು. ಶರೀರದಿಂದ ವ್ಯಾಧಿಯು ಹುಟ್ಟಿ ಅದರಿಂದಲೇ ಮನೋವ್ಯಾಧಿಯು ಹುಟ್ಟಿಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮನೋವ್ಯಾಧಿಯಿಂದ ಶಾರೀರಿಕ ವ್ಯಾಧಿಯೂ ಉಂಟಾಗುತ್ತದೆ ಎನ್ನುವುದು ನಿಶ್ಚಯವಾದುದು. ಮುಗಿದುಹೋಗಿರುವ ಶಾರೀರಿಕ ಮತ್ತು ಮಾನಸಿಕ ದುಃಖಗಳನ್ನು ನೆನಪಿಸಿಕೊಂಡು ಶೋಕಿಸುವವನಿಗೆ ದುಃಖದಿಂದ ದುಃಖವು ದೊರಕುವುದೇ ಹೊರತು ಧರ್ಮಾರ್ಥಗಳು ದೊರಕುವುದಿಲ್ಲ. ಶೀತ, ಉಷ್ಣ ಮತ್ತು ವಾಯು ಈ ಮೂರು ಶರೀರದಲ್ಲಿರುವ ಗುಣಗಳು. ಈ ಗುಣಗಳ ಸಮಾನತೆಯನ್ನು ಆರೋಗ್ಯದ ಲಕ್ಷಣವೆಂದು ಹೇಳುತ್ತಾರೆ. ಅವುಗಳಲ್ಲಿ ಯಾವುದಾದರೂ ಒಂದು ಉದ್ರೇಕಗೊಂಡರೆ ಅದರ ಚಿಕಿತ್ಸೆಕೆಗೆ ಈ ವಿಧಾನವನ್ನು ಹೇಳಿದ್ದಾರೆ: ಉಷ್ಣದಿಂದ ಶೀತವನ್ನೂ ಶೀತವನ್ನು ಉಷ್ಣದಿಂದಲೂ ಪರಿಹರಿಸಬಹುದು. ಸತ್ವ, ರಜಸ್ಸು ಮತ್ತು ತಮ ಈ ಮೂರು ಮನಸ್ಸಿನ ಗುಣಗಳು. ಹರ್ಷದಿಂದ ಶೋಕವು ಉಪಶಮನಗೊಳ್ಳುತ್ತದೆ ಮತ್ತು ಶೋಕದಿಂದ ಹರ್ಷವು ಕುಂದುತ್ತದೆ. ವರ್ತಮಾನದಲ್ಲಿ ಸುಖದಿಂದಿದ್ದರೆ ಕಳೆದುಹೋದ ದುಃಖವನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ವರ್ತಮಾನದಲ್ಲಿ ದುಃಖದಿಂದಿದ್ದರೆ ಹಿಂದೆ ಪಟ್ಟಿರುವ ಸುಖವನ್ನು ನೆನಪಿಸಿಕೊಳ್ಳಬೇಕು. ಆದರೆ ನೀನು ಮಾತ್ರ ಈಗ ದುಃಖಿಯಾಗಿದ್ದು ಹಿಂದಿನ ನಮ್ಮ ದುಃಖಗಳನ್ನು ಸ್ಮರಿಸುತ್ತಿಲ್ಲ ಅಥವಾ ಈಗ ಸುಖಿಯಾಗಿದ್ದು ಹಿಂದಿನ ನಮ್ಮ ಸುಖಗಳನ್ನು ಸ್ಮರಿಸುತ್ತಿಲ್ಲ ಅಥವಾ ಈಗ ದುಃಖಿಯಾಗಿದ್ದು ನಮ್ಮ ಹಿಂದಿನ ಸುಖಗಳನ್ನು ಸ್ಮರಿಸುತ್ತಿಲ್ಲ ಅಥವಾ ಈಗ ಸುಖಿಯಾಗಿದ್ದು ಹಿಂದಿನ ನಮ್ಮ ದುಃಖಗಳನ್ನು ಸ್ಮರಿಸಿಕೊಳ್ಳುತ್ತಿಲ್ಲ. ಕೌರವ್ಯ! ದೈವವು ಎಷ್ಟು ಬಲವತ್ತರವಾಗಿದೆ ಎನ್ನುವುದನ್ನು ಸ್ಮರಿಸಿಕೊಳ್ಳಬೇಕು. ಅಥವಾ ಸ್ವಭಾವತಃ ನೀನು ಶೋಕಪಡುವವನಾಗಿರುವುದರಿಂದ ಈ ರೀತಿ ಶೋಕಿಸುತ್ತಿರುವೆ! ಪಾಂಡುಪುತ್ರರು ನೋಡುತ್ತಿದ್ದಂತೆಯೇ ರಜಸ್ವಲೆಯಾಗಿ ಏಕವಸ್ತ್ರಳಾಗಿದ್ದ ಕೃಷ್ಣೆಯನ್ನು ಸಭೆಗೆ ಎಳೆತಂದಿರುವುದನ್ನು ನೋಡಿಯೂ ನೀನು ಅದನ್ನು ನೆನಪಿಸಿಕೊಳ್ಳುತ್ತಿಲ್ಲ! ಜಿನವಸ್ತ್ರಗಳನ್ನುಡಿಸಿ ನಗರದಿಂದ ಹೊರಗಟ್ಟಿದುದನ್ನು ಮತ್ತು ಮಹಾ ಅರಣ್ಯದಲ್ಲಿ ನಮ್ಮ ವಾಸವನ್ನು ನೀನು ನೆನಪಿಸಿಕೊಳ್ಳುತ್ತಿಲ್ಲ! ಜಟಾಸುರನಿಂದಾದ ಕಷ್ಟವನ್ನೂ, ಚಿತ್ರಸೇನನೊಡನೆ ಮಾಡಿದ ಯುದ್ಧವನ್ನೂ ಮತ್ತು ಸೈಂಧವನ ಉಪಟಳವನ್ನೂ ನೀನು ಹೇಗೆ ಮರೆತುಬಿಟ್ಟಿದ್ದೀಯೆ? ಅನಂತರ ಅಜ್ಞಾತವಾಸದಲ್ಲಿ ಕೀಚಕನು ದ್ರೌಪದಿಯನ್ನು ಕಾಲಿನಿಂದ ಒದೆದನು. ದ್ರೋಣ-ಭೀಷ್ಮರೊಡನೆ ಹೇಗೆ ಯುದ್ಧವನ್ನು ನಡೆಸಿದೆಯೋ ಹಾಗೆ ನಿನ್ನ ಮನಸ್ಸಿನಲ್ಲಿಯೂ ಈ ಘೋರ ಯುದ್ಧವು ನಡೆಯುತ್ತಿದೆ. ಈಗ ಬಂದೊದಗಿರುವ ಯುದ್ಧದಲ್ಲಿ ನೀನು ನಿನ್ನ ಆತ್ಮದೊಂದಿಗೇ ಯುದ್ಧಮಾಡಬೇಕಾಗುತ್ತದೆ. ಈ ಯುದ್ಧದಲ್ಲಿ ಬಾಣಗಳ ಅಥವಾ ಮಿತ್ರ-ಬಂಧುಗಳ ಕೆಲಸವೇನೂ ಇಲ್ಲ. ನೀನೇನಾದರೂ ಈ ಯುದ್ಧದಲ್ಲಿ ಸೋತು ಪ್ರಾಣಗಳನ್ನು ತೊರೆಯುತ್ತೀಯೋ ಆಗ ಅನ್ಯ ದೇಹವನ್ನು ಹೊತ್ತು ಪುನಃ ಈ ಶತ್ರುಗಳೊಂದಿಗೆ ಹೋರಾಡಬೇಕಾಗುತ್ತದೆ! ಆದುದರಿಂದ ಇಂದೇ ನೀನು ಈ ಯುದ್ಧವನ್ನು ಮಾಡಬೇಕು. ಇದನ್ನು ಗೆದ್ದು ನೀನು ಕೃತಕೃತ್ಯನಾಗುವೆ! ಇರುವವುಗಳು ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ ಎಂಬ ನಿಶ್ಚಯವನ್ನು ಮಾಡಿ ಪಿತೃ-ಪಿತಾಮಹರು ನಡೆದುಕೊಂಡ ರೀತಿಯಲ್ಲಿ ಮನಸ್ಸು ಮಾಡಿ ಯಥೋಚಿತವಾದ ರಾಜ್ಯವನ್ನು ಆಳು! ದೈವವು ನಡೆಸಿದಂತೆ ಯುದ್ಧದಲ್ಲಿ ಪಾಪೀ ದುರ್ಯೋಧನನು ಅವನ ಅನುಯಾಯಿಗಳೊಂದಿಗೆ ಹತನಾದನು. ಸೌಭಾಗ್ಯವಶಾತ್ ನೀನು ದ್ರೌಪದಿಯ ಕೇಶಪಾಶದ ಅಧಿಕಾರವನ್ನು ಪುನಃ ಪಡೆದುಕೊಂಡಿರುವೆ! ವಿವಿಧ ದಕ್ಷಿಣಾಯುಕ್ತವಾದ ಅಶ್ವಮೇಧವನ್ನು ಯಾಜಿಸು. ನಾವು ಮತ್ತು ವೀರ್ಯವಾನ್ ವಾಸುದೇವನೂ ನಿನ್ನ ಕಿಂಕರರಾಗಿದ್ದೇವೆ!”
ಯುಧಿಷ್ಠಿರನು ಹೇಳಿದನು: “ಅಸಂತೋಷ, ಪ್ರಮಾದ, ಮದ, ರಾಗ, ಅಪ್ರಶಾಂತತೆ, ಬಲ, ಮೋಹ, ಅಭಿಮಾನ, ಉದ್ವೇಗ ಈ ಎಲ್ಲ ಪಾಪಗುಣಗಳಿಂದ ನೀನು ಆವಿಷ್ಟನಾಗಿರುವೆ. ಆದುದರಿಂದಲೇ ನೀನು ರಾಜ್ಯದ ಕುರಿತು ಆಸೆಪಡುತ್ತಿದ್ದೀಯೆ! ಆಸೆಗಳನ್ನು ತೊರೆದು ಸಂಸಾರಬಂಧನದಿಂದ ವಿಮುಕ್ತನಾಗಿ ಪ್ರಶಾಂತನಾಗಿ ಸುಖದಿಂದ ಬಾಳು! ಇಡೀ ಭೂಮಂಡಲವನ್ನೇ ಆಳುವ ಮಹೀಪತಿಗೂ ಇರುವುದು ಒಂದೇ ಹೊಟ್ಟೆ. ಹೀಗಿದ್ದರೂ ನೀನು ಏಕೆ ಚಕ್ರಾಧಿಪತ್ಯವನ್ನು ಪ್ರಶಂಸಿಸುತ್ತಿರುವೆ? ಮನುಷ್ಯನ ಆಸೆಗಳನ್ನು ಒಂದು ದಿನದಲ್ಲಿ ಅಥವಾ ಒಂದು ತಿಂಗಳಿನಲ್ಲಿ ಪೂರೈಸಲು ಸಾಧ್ಯವಿಲ್ಲ. ಅಪೂರ್ಣವಾಗಿಯೇ ಇರುವ ಈ ಇಚ್ಛೆಗಳನ್ನು ಪೂರೈಸಲು ಇಡೀ ಜೀವಮಾನವೇ ಸಾಕಾಗುವುದಿಲ್ಲ. ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಸಮಿದ್ಧವನ್ನು ಹಾಕದೇ ಹೇಗೆ ಪ್ರಶಾಂತಗೊಳಿಸಬಹುದೋ ಹಾಗೆ ಅಲ್ಪಾಹಾರದಿಂದ ಹೊಟ್ಟೆಯಲ್ಲಿ ಉರಿಯುವ ಹಸಿವೆಯೆಂಬ ಅಗ್ನಿಯನ್ನು ಶಮನಗೊಳಿಸಬಹುದು. ಹೊಟ್ಟೆಯನ್ನು ಗೆಲ್ಲುವುದು ಭೂಮಿಯನ್ನು ಗೆಲ್ಲುವುದಕ್ಕಿಂತಲೂ ಶ್ರೇಯಸ್ಕರವಾದುದು. ಮನುಷ್ಯಲೋಕಕ್ಕೆ ಸಂಬಂಧಿಸಿದ ಭೋಗೈಶ್ವರ್ಯಗಳನ್ನು ನೀನು ಪ್ರಶಂಸಿಸುತ್ತಿರುವೆ! ಆದರೆ ಭೋಗಿಸದಿರುವವರು ಮತ್ತು ಅಬಲರೂ ಕೂಡ ಉತ್ತಮ ಸ್ಥಾನಗಳಿಗೆ ಹೋಗುತ್ತಾರೆ! ರಾಷ್ಟ್ರದ ಯೋಗ-ಕ್ಷೇಮಗಳೂ, ಧರ್ಮಾಧರ್ಮಗಳೂ ನಿನ್ನಲ್ಲಿಯೇ ನೆಲಸಿವೆ. ತ್ಯಾಗವನ್ನವಲಂಬಿಸಿ ಈ ಮಹಾಭಾರದ ಹೊರೆಯಿಂದ ಮುಕ್ತಿಹೊಂದು! ಒಂದೇ ಹೊಟ್ಟೆಯುಳ್ಳದ್ದಾದರೂ ಹುಲಿಯು ಬಹಳಷ್ಟು ಎಂಜಲನ್ನು ಚೆಲ್ಲುತ್ತದೆ. ಅನ್ಯ ಮೃಗಗಳು ನಿಧಾನವಾಗಿ ಅದನ್ನೇ ಅನುಸರಿಸಿ ಹೋಗಿ, ಅದು ಚೆಲ್ಲಿರುವ ಆಹಾರವನ್ನು ತಿಂದು ತಮ್ಮ ಜೀವನವನ್ನು ನಡೆಸಿಕೊಳ್ಳುತ್ತವೆ. ವಿಷಯಗಳಿಂದ ತನ್ನ ಮನಸ್ಸನ್ನು ಸೆಳೆದುಕೊಂಡು ಯತಿಯು ಸಂನ್ಯಾಸದಲ್ಲಿರುತ್ತಾನೆ. ಆದರೆ ರಾಜನು ವಿಷಯಗಳಿಂದ ತೃಪ್ತನೇ ಆಗುವುದಿಲ್ಲ. ಇವರೀರ್ವರ ಬುದ್ಧಿಗಳಲ್ಲಿರುವ ಅಂತರವನ್ನಾದರೂ ನೋಡು! ಎಲೆಗಳನ್ನು ತಿನ್ನುವವರು, ಕಲ್ಲಮೇಲಿಟ್ಟು ಕುಟ್ಟಿದ ಧಾನ್ಯವನ್ನು ತಿನ್ನುವವರು, ಹಲ್ಲಿನಿಂದ ಕಚ್ಚಿ ತಿನ್ನುವುದನ್ನು ಮಾತ್ರ ತಿನ್ನುವವರು, ನೀರನ್ನೇ ಕುಡಿದು ಜೀವಿಸಿರುವವರು, ಮತ್ತು ಗಾಳಿಯನ್ನೇ ಸೇವಿಸಿ ಜೀವಿಸಿರುವವರು ಇವರು ನರಕವನ್ನು ಗೆದ್ದವರು. ಅಖಿಲ ಭೂಮಂಡಲವನ್ನೂ ಆಳುವ ನೃಪ ಮತ್ತು ಕಲ್ಲು-ಕಾಂಚನಗಳನ್ನು ಒಂದಾಗಿಯೇ ಕಾಣುವ ಯತಿ ಇವರಿಬ್ಬರಲ್ಲಿ ರಾಜನು ಎಂದೂ ಕೃತಾರ್ಥನೆನಿಸಿಕೊಳ್ಳಲಾರ! ಸಂಕಲ್ಪಗಳನ್ನು ಆರಂಭಿಸಬೇಡ. ಆಸೆ ಮತ್ತು ಮಮತೆಗಳಿಲ್ಲದವನಾಗು. ಶೋಕವಿಲ್ಲದ ಅವ್ಯಯವಾದ ಪರಲೋಕದ ಸ್ಥಾನವನ್ನು ಹೊಂದು. ಆಸೆಗಳಿಲ್ಲದವರು ಶೋಕಿಸುವುದಿಲ್ಲ. ನೀನೇಕೆ ಆಸೆಗಳಿಗಾಗಿ ಶೋಕಿಸುತ್ತಿರುವೆ? ಆಸೆಗಳೆಲ್ಲವನ್ನೂ ತ್ಯಜಿಸಿದರೆ ಮಿಥ್ಯಾವಾದದಿಂದ ಮುಕ್ತನಾಗುವೆ. ಪಿತೃಯಾನ ಮಾತು ದೇವಯಾನಗಳೆಂಬ ಎರಡು ದಾರಿಗಳಿವೆ ಎಂದು ಕೇಳಿದ್ದೇವೆ. ಯಜ್ಞಗಳನ್ನು ಮಾಡಿದವರು ಪಿತೃಯಾನದಲ್ಲಿಯೂ, ಮೋಕ್ಷವನ್ನು ಪಡೆದವರು ದೇವಯಾನದಲ್ಲಿಯೂ ಹೋಗುತ್ತಾರೆ. ತಪಸ್ಸು, ಬ್ರಹ್ಮಚರ್ಯ ಮತ್ತು ಸ್ವಾಧ್ಯಾಯಗಳಿಂದ ಪವಿತ್ರರಾದವರು ದೇಹಗಳನ್ನು ತೊರೆದು ಮೃತ್ಯುವಿಗೆ ತುತ್ತಾಗದೇ ಹೊಳೆಯುತ್ತಾ ಬ್ರಹ್ಮಲೋಕವನ್ನು ಸೇರುತ್ತಾರೆ. ಲೋಕದಲ್ಲಿ ಆಸೆಯು ಒಂದು ಬಂಧನ. ಫಲಸಂಬಂಧಿತ ಕರ್ಮಗಳೂ ಆಸೆಗಳೇ. ಈ ಎರಡರ ಪಾಶಗಳಿಂದ ವಿಮುಕ್ತನಾದವನು ಶ್ರೇಷ್ಠ ಪರಮಪದವನ್ನು ಪಡೆಯುತ್ತಾನೆ. ಇದರ ಕುರಿತು ದ್ವಂದ್ವಗಳಿಂದ ಮುಕ್ತನಾಗಿ, ಮೋಕ್ಷವನ್ನು ಚೆನ್ನಾಗಿ ತಿಳಿದುಕೊಂಡಿದ್ದ ಜನಕನು ಹೇಳಿದ ಈ ಶ್ಲೋಕಗಳನ್ನು ಉದಾಹರಿಸುತ್ತಾರೆ. “ನನ್ನಲ್ಲಿರುವ ಸಂಪತ್ತು ಅನಂತವಾದುದು ಎಮ್ದು ಹೇಳುತ್ತಾರೆ. ಆದರೆ ನನ್ನಲ್ಲಿ ಏನೂ ಇಲ್ಲ. ಮಿಥಿಲೆಯೇ ಹತ್ತಿ ಉರಿದುಹೋದರೂ ಯಾವುದೂ ನನ್ನನ್ನು ಸುಡುವುದಿಲ್ಲ! ಪರ್ವತದ ಮೇಲೆ ನಿಂತು ಕೆಳಗಿನ ಜಗತ್ತನ್ನು ನೋಡುವಂತೆ ಪ್ರಜ್ಞೆಯೆಂಬ ಪ್ರಾಸಾದವನ್ನೇರಿ ಶೋಕರಹಿತನಾದ ಜ್ಞಾನಿಯು ಶೋಕಿಸುತ್ತಿರುವ ಮಂದಬುದ್ಧಿಯ ಜನರನ್ನು ನೋಡುತ್ತಿರುತ್ತಾನೆ. ನೋಡಿ ಅದನ್ನು ಅರ್ಥಮಾಡಿಕೊಂಡವನೇ ಕಣ್ಣುಗಳುಳ್ಳವನು ಮತ್ತು ಬುದ್ಧಿವಂತನು. ತಿಳಿಯದೇ ಇರುವುದನ್ನು ಅನುಭವ ಪೂರ್ವಕವಾಗಿ ತಿಳಿಸುವುದೇ ಬುದ್ಧಿ ಎಂದೆನಿಸಿಕೊಳ್ಳುತ್ತದೆ. ಯಾರು ಬ್ರಹ್ಮಭಾವವನ್ನು ಹೊಂದಿರುವ, ವೈದ್ಯರ ಮತ್ತು ಭಾವಿತಾತ್ಮರ ಮಾತುಗಳನ್ನು ತಿಳಿದುಕೊಳ್ಳುತ್ತಾರೋ ಅವರು ಹೆಚ್ಚು ಗೌರವಕ್ಕೆ ಪಾತ್ರರು. ಯಾವಾಗ ಇರುವವುಗಳ ಪ್ರತ್ಯೇಕತೆಗಳು ಒಂದರಲ್ಲಿಯೇ ನೆಲೆಗೊಂಡಿವೆಯೆನ್ನುವುದನ್ನು ಕಾಣುತ್ತಾನೋ ಆಗಲೇ ವಿಸ್ತಾರವಾದ ಬ್ರಹ್ಮದ ಅನುಭವವುಂಟಾಗುತ್ತದೆ. ವಿದ್ವಾಂಸನಲ್ಲದವನು, ಸಣ್ಣಬುದ್ಧಿಯುಳ್ಳವನು, ತಿಳಿಯದವನು, ತಪಸ್ಸು ಮಾಡದವನು ಆ ಗತಿಯನ್ನು ಹೊಂದಲಾರ. ಎಲ್ಲವೂ ಬುದ್ಧಿಯಲ್ಲಿಯೇ ಪ್ರತಿಷ್ಠಿತವಾಗಿವೆ!”
ಅರ್ಜುನ ವಾಕ್ಯ
ರಾಜನ ಮಾತಿನ ಮುಳ್ಳುಗಳಿಂದ ಪೀಡಿತನಾದ ಮತ್ತು ಶೋಕ-ದುಃಖಗಳಿಂದ ಸಂತಪ್ತನಾದ ಅರ್ಜುನನು ಸುಮ್ಮನಾಗಿ ಕುಳಿತಿದ್ದ ರಾಜನಿಗೆ ಪುನಃ ಹೇಳಿದನು: “ಭಾರತ! ಹಿಂದೆ ವಿದೇಹರಾಜ ಮತ್ತು ಅವನ ಪತ್ನಿ ಇವರ ನಡುವೆ ನಡೆದ ಸಂವಾದವನ್ನು ಜನರು ಉದಾಹರಿಸುತ್ತಾರೆ. ರಾಜ್ಯವನ್ನು ತ್ಯಜಿಸಿ ಭಿಕ್ಷುವಾಗಿರಲು ನಿಶ್ಚಯಿಸಿದ ಜನೇಶ್ವರ ವಿದೇಹರಾಜನಿಗೆ ದುಃಖಿತಳಾದ ರಾಣಿಯು ಹೇಳಿದುದನ್ನು ಕೇಳು.
“ಐಶ್ವರ್ಯ, ಮಕ್ಕಳು, ಮಿತ್ರರು, ವಿವಿಧ ರತ್ನಗಳು, ಮತ್ತು ಪಾವನ ಗೃಹಸ್ಥಾಶ್ರಮವನ್ನು ತ್ಯಜಿಸಿ ಜನಕನು ತಲೆಬೋಳಿಸಿಕೊಂಡು ಭಿಕ್ಷುವಾಗಲು ನಿಶ್ಚಯಿಸಿದನು. ಭಿಕ್ಷಾವೃತ್ತಿಯನ್ನು ಅವಲಂಬಿಸಿ ಒಂದು ಮುಷ್ಟಿ ಧಾನ್ಯದ ಹಿಟ್ಟನ್ನೇ ತಿನ್ನುತ್ತಿದ್ದ, ನಿರೀಹನಾಗಿದ್ದ, ಮತ್ಸರವನ್ನು ತೊರೆದಿದ್ದ ಅವನನ್ನು ಅವನ ಪ್ರಿಯ ಭಾರ್ಯೆಯು ನೋಡಿದಳು. ಆ ಮನಸ್ವಿನೀ ಪತ್ನಿಯು ಕ್ರುದ್ಧಳಾಗಿ ಭಯವನ್ನೇ ತೊರೆದಿದ್ದ ಪತಿಯ ಬಳಿಸಾರಿ ಯುಕ್ತಿಯುಕ್ತವಾದ ಈ ಮಾತುಗಳನ್ನಾಡಿದಳು: “ಧನ-ಧಾನ್ಯ ಸಮೃದ್ಧವಾಗಿರುವ ನಿನ್ನ ಈ ರಾಜ್ಯವನ್ನು ನೀನೇ ತೊರೆದು ಕಾಪಾಲ ವೃತ್ತಿಯನ್ನೇಗೆ ಹಿಡಿದಿರುವೆ? ಮುಷ್ಟಿ ಧಾನ್ಯವನ್ನು ತಿನ್ನುವುದು ವನಚರರಿಗೆ ಸರಿಯಾದುದು! ರಾಜನ್! ನಿನ್ನ ಪ್ರತಿಜ್ಞೆಯೇ ಒಂದಾಗಿದ್ದರೆ ನೀನು ಮಾಡುತ್ತಿರುವುದು ಇನ್ನೊಂದಾಗಿದೆ! ಮಹಾರಾಜ್ಯವನ್ನು ತ್ಯಜಿಸಿ ಸ್ವಲ್ಪದಲ್ಲಿಯೇ ತೃಪ್ತಿಪಡೆಯುವವನಾಗಿಬಿಟ್ಟೆಯಲ್ಲ! ಇಂದು ನೀನು ಅತಿಥಿಗಳನ್ನು, ದೇವರ್ಷಿ-ಪಿತೃಗಳನ್ನು ಸತ್ಕರಿಸಲು ಶಕ್ಯನಾಗಿಲ್ಲ. ನಿನ್ನ ಪರಿಶ್ರಮಗಳೆಲ್ಲವೂ ವ್ಯರ್ಥವಾದಂತೆಯೇ! ದೇವತೆಗಳು, ಅತಿಥಿಗಳು ಮತ್ತು ಪಿತೃಗಳು ಎಲ್ಲರನ್ನೂ ಪರಿತ್ಯಜಿಸಿ ನೀನು ನಿಷ್ಕರ್ಮಿಯಾಗಿದ್ದುಕೊಂಡು ತಿರುಗುವೆ! ಮೂರುವೇದಗಳನ್ನು ತಿಳಿದಿರುವ ಸಹಸ್ರಾರು ವೃದ್ಧ ಬ್ರಾಹ್ಮಣರ ಪೋಷಕನಾಗಿದ್ದುಕೊಂಡು ಈಗ ಲೋಕದ ಅನ್ಯರಿಂದ ಪೋಷಣೆಗೊಳ್ಳಲು ಬಯಸುತ್ತಿರುವೆ! ಬೆಳಗುತ್ತಿರುವ ಸಂಪತ್ತನ್ನು ತ್ಯಜಿಸಿ ನೀನು ನಾಯಿಯಂತೆಯೇ ತೋರುತ್ತಿರುವೆ! ಇಂದು ನಿನ್ನ ತಾಯಿಯು ಬಂಜೆಯಾದಳು ಮತ್ತು ನಿನ್ನ ಪತ್ನಿಯಾದ ನಾನು ಕೌಸಲ್ಯೆಯು ಪತಿಹೀನಳಾದೆನು! ಧರ್ಮ-ಕಾಮನೆಗಳನ್ನು ಸಾಧಿಸಿಕೊಳ್ಳಲು ಈ ಕ್ಷತ್ರಿಯರು ನಿನ್ನನ್ನೇ ಉಪಾಸನೆಮಾಡುತ್ತಿದ್ದಾರೆ. ಆಕಾಂಕ್ಷೆಗಳನ್ನು ಹೊಂದಿರುವ ಈ ದೀನರು ಫಲಕ್ಕಾಗಿ ನಿನ್ನ ಸೇವೆಯಲ್ಲಿ ತತ್ಪರರಾಗಿದ್ದಾರೆ. ಇವರನ್ನು ವಿಫಲರನ್ನಾಗಿಸಿ ನೀನು ಯಾವ ಲೋಕಗಳಿಗೆ ಹೋಗುತ್ತೀಯೆ? ಪರತಂತ್ರರಾದ ಮನುಷ್ಯರಿಗೆ ಮೋಕ್ಷವು ನಿಶ್ಚಯವಾದುದಲ್ಲ. ಧರ್ಮಪತ್ನಿಯನ್ನು ಪರಿತ್ಯಜಿಸಿ ಜೀವಿಸಲು ಬಯಸುವ ನಿನಗೆ ಈ ಪಾಪಕರ್ಮದಿಂದ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವು ದೊರಕಲಾರದು. ಹಾರ-ಗಂಧ-ಅಲಂಕಾರ ಮತ್ತು ವಿವಿಧ ವಸ್ತ್ರಗಳನ್ನು ತ್ಯಜಿಸಿ ಕರ್ತವ್ಯ ಹೀನನಾಗಿ ನೀನು ಏಕೆ ಪರಿವ್ರಾಜಕನಾಗಲು ಬಯಸುವೆ? ಸರ್ವಭೂತಗಳಿಗೂ ಸರೋವರದಂತಿದ್ದು ನೀನು ಮಹಾ ಪಾವನನಾಗಿದ್ದೆ. ವಿಶಾಲ ವೃಕ್ಷದಂತೆ ನೀನು ಎಲ್ಲರಿಗೂ ನೆರಳನ್ನಿತ್ತು ಸೇವೆಸಲ್ಲಿಸುತ್ತಿದ್ದೆ. ಎಲ್ಲವನ್ನೂ ತೊರೆದು ಬಿದ್ದಿರುವ ಆನೆಯನ್ನು ಮಾಂಸಾಶಿ ಪ್ರಾಣಿಗಳೂ ಕ್ರಿಮಿಗಳೂ ಜೀವಸಹಿತ ತಿಂದುಹಾಕಿಬಿಡುತ್ತವೆ. ಇನ್ನು ನಿಷ್ಕರ್ಮಿಯಾಗುವ ನಿನ್ನ ಕುರಿತೇನು ಹೇಳುವುದಿದೆ? ನಿನ್ನ ಈ ಕಮಂಡಲುವನ್ನು ಯಾರಾದರೂ ಅಪಹರಿಸಿಕೊಳ್ಳಬಹುದು. ನಿನ್ನ ಈ ತ್ರಿದಂಡವನ್ನೇ ಅಪಹರಿಸಿಕೊಂಡು ಹೋಗಬಹುದು. ನೀನು ಉಟ್ಟಿರುವ ವಸ್ತ್ರವನ್ನೂ ಕಿತ್ತುಕೊಳ್ಳಬಹುದು. ಆಗ ನಿನ್ನ ಮನೋಸ್ಥಿತಿಯು ಹೇಗಿರುತ್ತದೆ? ಎಲ್ಲವನ್ನೂ ತ್ಯಾಗಮಾಡಿ ಒಂದು ಮುಷ್ಟಿ ಹುರಿಧಾನ್ಯವನ್ನು ಅವಲಂಬಿಸಲು ಹೊರಟ ನಿನಗೆ ಎಲ್ಲವೂ ಸಮವೆಂದು ಹೇಗೆ ತೋರುತ್ತಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ! ಮುಷ್ಟಿ ಹುರಿಧಾನ್ಯವನ್ನು ಕೇಳುವುದರಿಂದ ನಿನ್ನ ಈ ಎಲ್ಲವನ್ನೂ ಸಮವೆಂದು ಕಾಣುವೆ ಎನ್ನುವ ಪ್ರತಿಜ್ಞೆಯು ಭಂಗವಾಗುವುದಿಲ್ಲವೇ?[4] ಆಗ ನಾನು ನಿನಗೆ ಎನಾಗುತ್ತೇನೆ? ಇಂದು ಮೇಲೆ ನಿನಗಿರುವ ಅನುಗ್ರಹಕ್ಕೆ ಏನಾಗುತ್ತದೆ? ನಿನ್ನ ಅನುಗ್ರಹವಿದ್ದರೆ ಭೂಮಿಯನ್ನು ಆಳು! ಅರಮನೆ, ಉತ್ತಮ ಹಾಸಿಗೆ, ವಾಹನ, ವಸ್ತ್ರಾ-ಭರಣಗಳನ್ನು ಭೋಗಿಸು! ಶ್ರೀಯಿಂದ ನಿರಾಶೆಗೊಂಡ, ನಿರ್ಧನ, ಬಂಧು-ಮಿತ್ರರಿಲ್ಲದ ಮತ್ತು ಅಕಿಂಚನರಾದ ಸಂನ್ಯಾಸಿಗಳು ಸುಖಕ್ಕಾಗಿಯೇ ತಮಗೆ ಬೇಕಾದ ಸಲಕರಣೆಗಳನ್ನು (ಕಮಂಡಲು-ಕೃಷ್ಣಾಜಿನ ಇತ್ಯಾದಿ) ಸಂಗಹಿಸಿಟ್ಟುಕೊಂಡಿರುತ್ತಾರೆ.[5] ಯಾವಾಗಲೂ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ನಿರತರಾದವರ ಮತ್ತು ಯಾವಾಗಲೂ ದಾನಮಾಡುವವರ ನಡುವಿನ ಅಂತರವನ್ನು ತಿಳಿದುಕೋ! ಇವರಿಬ್ಬರಲ್ಲಿ ಯಾರು ಶ್ರೇಷ್ಠರೆನಿಸಿಕೊಳ್ಳುತ್ತಾರೆ? ಸಾಧುಗಳಲ್ಲಿ ಮತ್ತು ದಂಭವನ್ನು ತೊರೆದವರಲ್ಲಿ ಯಾವಾಗಲೂ ಬೇಡುವವರಿಗೆ ದಾನಮಾಡಿದ ದಕ್ಷಿಣೆಯು ದಾವಾಗ್ನಿಯಲ್ಲಿ ಹೋಮಮಾಡಿದಂತೆ ವ್ಯರ್ಥವಾಗುತ್ತದೆ. ರಾಜನ್! ತನ್ನಲ್ಲಿ ಹಾಕಿದ ಕಟ್ಟಿಗೆಯನ್ನು ಸಂಪೂರ್ಣವಾಗಿ ಸುಡದೇ ಅಗ್ನಿಯು ಹೇಗೆ ಪ್ರಶಮನಗೊಳ್ಳುವುದಿಲ್ಲವೋ ಹಾಗೆ ಸದಾ ಬೇಡುವ ದ್ವಿಜನು ಬೇಡುತ್ತಿರುವುದು ದೊರೆಯದೇ ಶಾಂತನಾಗುವುದಿಲ್ಲ. ಸತ್ಪುರುಷರು, ವೇದಗಳು ಮತ್ತು ಅನ್ನಗಳನ್ನು ಅವಲಂಬಿಸಿಯೇ ಈ ಲೋಕದಲ್ಲಿ ಪ್ರಕೃತಿಯು ಸ್ಥಿರವಾಗಿ ನೆಲೆಸಿದೆ. ದಾನಮಾಡುವ ದಾನಿಗಳು ಇರದಿದ್ದರೆ ಮೋಕ್ಷಗಳನ್ನು ಬಯಸುವ ಮುನಿಗಳು ಎಲ್ಲಿರುತ್ತಿದ್ದರು? ಈ ಲೋಕದಲ್ಲಿ ಅನ್ನವನ್ನು ದಾನಮಾಡುವುದರಿಂದ ಗೃಹಸ್ಥನೆನಿಸಿಕೊಳ್ಳುತ್ತಾನೆ. ಅದೇ ಅನ್ನವನ್ನು ಬೇಡುವವರು ಸಂನ್ಯಾಸಿಗಳೆನಿಸಿಕೊಳ್ಳುತ್ತಾರೆ. ಅನ್ನದಿಂದಲೇ ಪ್ರಾಣವು ಬೆಳೆಯುತ್ತದೆ. ಆದುದರಿಂದ ಅನ್ನವನ್ನು ದಾನಮಾಡುವವನು ಪ್ರಾಣವನ್ನು ದಾನಮಾಡುವವನಾಗುತ್ತಾನೆ. ಸಂನ್ಯಾಸಿಗಳು ಗೃಹಸ್ಥಾಶ್ರಮದಿಂದ ನಿರ್ವೃತ್ತರಾದರೂ ಗೃಹಸ್ಥರನ್ನೇ ಆಶ್ರಯಿಸಿರುತ್ತಾರೆ. ಆದುದರಿಂದ ಗೃಹಸ್ಥಾಶ್ರಮವೇ ಸಂನ್ಯಾಸದ ಉಗಮ, ನೆಲೆ ಮತ್ತು ಆಶ್ರಯವಾಗಿದೆ. ತ್ಯಾಗದಿಂದ, ವಿದ್ಯೆಯಿಂದ ಮತ್ತು ಮುಂಡನಮಾಡಿಕೊಂಡಿರುವುದರಿಂದ ಮತ್ತು ಬೇಡುವುದರಿಂದ ಭಿಕ್ಷುವೆನಿಸಿಕೊಳ್ಳುವುದಿಲ್ಲ. ಸರಳನಾಗಿದ್ದು ಆಸಕ್ತಿಯಿಲ್ಲದಿದ್ದರೂ ಆಸಕ್ತನಂತೆ ಲೋಕವ್ಯವಹಾರಗಳನ್ನು ನಡೆಸಿಕೊಂಡು ಹೋಗುತ್ತಾ ನಿಸ್ಸಂಗನಾಗಿ ಬಂಧನಗಳಿಂದ ಮುಕ್ತನಾಗಿ, ಮಿತ್ರ-ಶತ್ರುಗಳಲ್ಲಿ ಸಮಭಾವದಿಂದ ಇರುವವನು ರಾಜನಾಗಿದ್ದರೂ ಮುಕ್ತನಾದಂತೆ. ಮುಂಡನಮಾಡಿಕೊಂಡು ಕಾಷಾಯವಸ್ತ್ರಗಳನ್ನು ಧರಿಸಿ ದಾನಗಳಿಗೆ ಅಲೆದಾಡುವವರು ಅನೇಕವಿಧದ ಪಾಶಗಳಿಂದ ಬದ್ಧರಾಗಿ ವೃಥಾ ಕೂಡಿಸಿಕೊಳ್ಳುವ ಆಸೆಯಿಂದಿರುತ್ತಾರೆ. ಯಾರು ಮೂರು ವೇದಗಳನ್ನೂ, ಅವುಗಳು ಹೇಳಿರುವ ಕರ್ಮಗಳನ್ನೂ, ಪುತ್ರರನ್ನೂ ಪರಿತ್ಯಜಿಸಿ ತಿದಂಡವನ್ನು ಹಿಡಿದು ಕಾಷಾಯವಸ್ತ್ರವನ್ನು ಪರಿಗ್ರಹಿಸುತ್ತಾರೋ ಅವರು ಬುದ್ಧಿಹೀನರೇ ಸರಿ! ಹೃದಯದಲ್ಲಿ ಆಸೆಗಳನ್ನಿಟ್ಟುಕೊಂಡು ಕಾಷಾಯವನ್ನು ಧರಿಸುವುದು ಒಂದು ಸೋಗು ಎಂದೇ ನೀನು ತಿಳಿ. ಧರ್ಮದ ಸೋಗನ್ನು ಹಾಕಿಕೊಂಡು ತಿರುಗಾಡುವ ಮುಂಡರಿಗೆ ಸಂನ್ಯಾಸಿಗಳೆನ್ನುವುದು ವ್ಯರ್ಥವೇ ಸರಿ ಎಂದು ನನಗನ್ನಿಸುತ್ತದೆ. ನೀನು ಜಿತೇಂದ್ರಿಯನಾಗಿದ್ದುಕೊಂಡು ಕಾಷಾಯವಸ್ತ್ರಧಾರಿಗಳನ್ನು, ಕೃಷ್ಣಾಜಿನ-ವಲ್ಕಲಗಳನ್ನು ಉಟ್ಟವರನ್ನೂ, ದಿಗಂಬರರಾದ ಅವಧೂತರನ್ನೂ, ಮುಂಡನ ಮಾಡಿಸಿಕೊಂಡವರನ್ನೂ, ಜಟಾಧಾರಿಗಳನ್ನೂ, ಸಾಧುಗಳನ್ನೂ ಪಾಲಿಸುತ್ತಾ ಲೋಕಗಳನ್ನು ಗೆಲ್ಲು! ಗುರುಗಳ ಅಗ್ನಿಕಾರ್ಯ-ದಾನಗಳಿಗೆ, ಮತ್ತು ಪಶು-ದಕ್ಷಿಣೆಗಳಿಂದ ಕೂಡಿದ ಕ್ರತುಗಳಿಗೆ ದ್ರವ್ಯಸಂಗ್ರಹಗಳನ್ನು ಮಾಡುವವರಿಗಿಂತಲೂ ಹೆಚ್ಚು ಧರ್ಮಪರಾಯಣರಾದವರು ಬೇರೆ ಯಾರಿದ್ದಾರೆ?”
“ತತ್ತ್ವಜ್ಞ ರಾಜಾ ಜನಕನ ಕುರಿತು ಲೋಕವು ಈ ಗೀತೆಯನ್ನು ಹಾಡುತ್ತದೆ. ಅವನೂ ಕೂಡ ಮೋಹಸಂಪನ್ನನಾಗಿದ್ದನು. ಅವನಂತೆ ನೀನು ಮೋಹವಶನಾಗಬೇಡ! ಹೀಗೆ ನಾವೂ ಕೂಡ ಧರ್ಮವನ್ನನುಸರಿಸುತ್ತಾ ಸಧಾ ಇತರರಿಗೆ ದಾನಗಳನ್ನು ನೀಡುತ್ತಾ, ದಯಾಗುಣಸಂಪನ್ನರಾಗಿ, ಕಾಮ-ಕ್ರೋಧಗಳನ್ನು ತೊರೆದು, ಉತ್ತಮ ದಾನಗಳನ್ನು ನೀಡುತ್ತಾ ಪ್ರಜೆಗಳನ್ನು ಪಾಲಿಸೋಣ! ಬ್ರಾಹ್ಮಣಪ್ರಿಯರಾಗಿದ್ದು ಸತ್ಯವಾದಿಗಳಾಗಿದ್ದುಕೊಂಡು ಇಷ್ಟವಾದ ಲೋಕಗಳನ್ನು ಪಡೆದುಕೊಳ್ಳೋಣ!”
ಯುಧಿಷ್ಠಿರನು ಹೇಳಿದನು: “ಅಯ್ಯಾ! ನಾನು ಅಪರ ಮತ್ತು ಪರ ಶಾಸ್ತ್ರಗಳೆರಡನ್ನೂ ತಿಳಿದುಕೊಂಡಿದ್ದೇನೆ. ಕರ್ಮವನ್ನು ಮಾಡು ಮತ್ತು ತ್ಯಜಿಸು ಇವೆರಡೂ ವೇದವಚನಗಳೇ! ವಿರೋಧಾಭಾಸವಾದಂತಿರುವ ಚಿತ್ರಿತವಾಗಿರುವ ಈ ಶಾಸ್ತ್ರವಾಕ್ಯಗಳನ್ನು ಅವುಗಳ ಕಾರಣ-ನಿಶ್ಚಯಗಳೊಂದಿಗೆ ಯಥಾವಿಧಿಯಾಗಿ ನಾನು ತಿಳಿದುಕೊಂಡಿರುವೆನು. ನೀನಾದರೋ ಕೇವಲ ಅಸ್ತ್ರಗಳನ್ನು ತಿಳಿದವನು. ವೀರವ್ರತಾನುಷ್ಠಾನದಲ್ಲಿರುವವನು. ಶಾಸ್ತ್ರಾರ್ಥವನ್ನು ತತ್ತ್ವತಃ ತಿಳಿದುಕೊಳ್ಳಲು ನೀನು ಎಂದಿಗೂ ಸಮರ್ಥನಲ್ಲ! ನೀನು ಶಾಸ್ತ್ರಗಳ ಸೂಕ್ಷ್ಮಾರ್ಥಗಳನ್ನು ಕಂಡುಕೊಂಡಿದ್ದರೆ ಮತ್ತು ಧರ್ಮನಿಶ್ಚಯಗಳಲ್ಲಿ ಕೋವಿದನಾಗಿದ್ದರೆ, ಧರ್ಮವನ್ನು ಕಂಡುಕೊಂಡಿದ್ದರೆ ನೀನೂ ಕೂಡ ನನಗೆ ಈ ಮಾತುಗಳನ್ನಾಡುತ್ತಿರಲಿಲ್ಲ! ಅರ್ಜುನ! ಅಣ್ಣನ ಸುಹೃದಯವನ್ನು ತಾಳಿ ನೀನು ಹೇಳಿದ ನ್ಯಾಯವೂ ಯುಕ್ತವೂ ಆದ ಮಾತಿನಿಂದ ಸಂತೋಷಗೊಂಡಿದ್ದೇನೆ. ಯುದ್ಧಧರ್ಮದ ಸರ್ವ ಕ್ರಿಯೆಗಳಲ್ಲಿ ಮತ್ತು ನೈಪುಣ್ಯತೆಯಲ್ಲಿ ನಿನ್ನ ಸಮನಾಗಿರುವವರು ಮೂರು ಲೋಕಗಳಲ್ಲೀ ಯಾರೂ ಇಲ್ಲವೆಂದು ತಿಳಿಯುತ್ತದೆ. ಆದರೆ ನೀನು ಈಗ ಹೇಳಿರುವ ಧರ್ಮಸೂಕ್ಷ್ಮದ ಮಾತುಗಳು ನನ್ನ ಬುದ್ಧಿಗೆ ತಿಳಿಯಲಿಲ್ಲ ಎಂದು ಶಂಕಿಸಬಾರದು. ನೀನು ಯುದ್ಧಶಾಸ್ತ್ರವನ್ನು ಮಾತ್ರವೇ ತಿಳಿದಿರುವೆ. ನೀನೆಂದೂ ವೃದ್ಧರ ಸೇವೆಯನ್ನು ಮಾಡಿದವನಲ್ಲ. ಆದುದರಿಂದ ಸಂಕ್ಷಿಪ್ತವಾಗಿಯೂ ವಿಸ್ತಾರವಾಗಿಯೂ ಇರುವ ಧರ್ಮ ನಿಶ್ಚಯವು ನಿನಗೆ ತಿಳಿಯಲಾರದು! ತಪಸ್ಸು-ತ್ಯಾಗ ಮತ್ತು ಬ್ರಹ್ಮಜ್ಞಾನ ಇವು ಶ್ರೇಯಸ್ಕರವೆಂದು ತಿಳಿದವರ ನಿಶ್ಚಯ. ಈ ಮೂರರಲ್ಲಿ ಮೊದಲನೆಯದಕ್ಕಿಂತಲೂ ಎರಡನೆಯದು ಶ್ರೇಷ್ಠವು ಮತ್ತು ಎರಡನೆಯದಕ್ಕಿಂತಲೂ ಮೂರನೆಯದು ಶ್ರೇಷ್ಠವು. ಧನಕ್ಕಿಂತಲೂ ಮಿಗಿಲಾದುದು ಇಲ್ಲವೆಂದು ನಿನ್ನ ಅಭಿಪ್ರಾಯವಾಗಿದೆ. ಆದರೆ, ಅದು ಪ್ರಧಾನವಾದುದಲ್ಲವೆನ್ನುವುದನ್ನು ನಾನು ನಿನಗೆ ಹೇಳುತ್ತಿದ್ದೇನೆ. ತಪಸ್ಸು ಮತ್ತು ಸ್ವಾಧ್ಯಾಯಗಳಲ್ಲಿ ನಿರತರಾದ ಧಾರ್ಮಿಕ ಜನರು ಕಾಣಸಿಗುತ್ತಾರೆ. ತಪಸ್ಸಿನಿಂದ ಯುಕ್ತರಾದ ಋಷಿಗಳಿಗೆ ಸನಾತನ ಲೋಕಗಳು ದೊರೆಯುತ್ತವೆ. ಶತ್ರುಗಳೇ ಇಲ್ಲದ ಅನ್ಯ ಧೀರ ವನವಾಸಿಗಳು ಬಹಳ ಕಾಲ ಧನವಿಲ್ಲದೇ ಸ್ವಾಧ್ಯಾಯದಲ್ಲಿ ನಿರತರಾಗಿದ್ದುಕೊಂಡು ಸ್ವರ್ಗಕ್ಕೆ ಹೋಗುತ್ತಾರೆ. ಅನೇಕ ಆರ್ಯರು ವಿಷಯನಿಗ್ರಹದಿಂದ ಮೌಢ್ಯದಿಂದ ಉಂಟಾದ ಕತ್ತಲೆಯನ್ನು ತ್ಯಜಿಸಿ ಉತ್ತರ[6] ಮಾರ್ಗವಾಗಿ ಉತ್ತಮ ಲೋಕಗಳಿಗೆ ಹೋಗಿದ್ದಾರೆ. ದಕ್ಷಿಣ[7] ಮಾರ್ಗದಲ್ಲಿ ತೋರುವ ಪ್ರಕಾಶಮಾನ ಲೋಕಗಳು ಸದಾ ಶ್ಮಶಾನ ಯಾತ್ರೆಗಳನ್ನು ಮಾಡುತ್ತಿರುವ ಕ್ರಿಯಾವಂತರಿಗಿರುವವು. ಮೋಕ್ಷಿಣಿಗಳು ಯಾವ ಮಾರ್ಗದಲ್ಲಿ ಹೋದರೆನ್ನುವುದನ್ನು ನಿರ್ಧಿಷ್ಠವಾಗಿ ಹೇಳುವುದು ಕಷ್ಟ. ಆದುದರಿಂದ ತ್ಯಾಗವು ಪ್ರಧಾನವಾದುದು. ಆದರೆ ಅದನ್ನು ತಿಳಿದುಕೊಳ್ಳುವುದು ಕಷ್ಟ. ವಿದ್ವಾಂಸರು ಒಂದೆಡೆ ಸೇರಿ ಶಾಸ್ತ್ರಗಳ ಸಾರಾಸಾರಗಳನ್ನು ಪರಿಶೀಲಿಸಿ ಇವುಗಳಲ್ಲಿ ಯಾವುದು ಬ್ರಹ್ಮಸಾಕ್ಷಾತ್ಕಾರವು ಸಾಧ್ಯ ಎನ್ನುವುದನ್ನು ಅವಲೋಕಿಸಿದ್ದಾರೆ. ಕಡಿದುರುಳಿಸಿದ ಬಾಳೆಯ ದಿಂಡಿನಲ್ಲಿ ಸಾರವನ್ನು ಕಾಣದಂತೆ ವೇದವಾದಗಳನ್ನೂ ದಾಟಿ ಮುಂದೆ ಹೋಗಿ ಶಾಸ್ತ್ರ-ಅರಣ್ಯಕಗಳನ್ನೂ ಪರಿಶೀಲಿಸಿದರೂ ಅವುಗಳಲ್ಲಿ ಅವರು ಸಾರವನ್ನು ಕಾಣಲಿಲ್ಲ. ಕೆಲವರು ಪಂಚಭೌತಿಕವಾದ ಈ ಶರೀರದಲ್ಲಿರುವ ಆತ್ಮನು ಸ್ವಭಾವತಃ ಇಚ್ಛೆ-ದ್ವೇಷಗಳಿಂದ ಕೂಡಿದವನು ಎಂದು ಹೇಳುತ್ತಾರೆ. ಆದರೆ ಈ ಆತ್ಮವು ಕಣ್ಣಿಗೆ ಕಾಣಿಸುವುದಿಲ್ಲ. ಮಾತಿನ ಮೂಲಕ ವರ್ಣಿಸಲಾಗುವುದಿಲ್ಲ. ಅದರ ಎದುರಿರುವ ಕರ್ಮಕಾರಣಗಳು ಜೀವಿಗಳಲ್ಲಿ ಪರಿವರ್ತನೆ ಹೊಂದುತ್ತಿರುತ್ತವೆಯೇ ಹೊರತು ಆತ್ಮವು ಪರಿವರ್ತಿತವಾಗದಕ್ಕುದಲ್ಲ. ಮನಸ್ಸನ್ನು ಕಲ್ಯಾಣಮಾರ್ಗದಲ್ಲಿ ತೊಡಗಿಸಿ, ಮನಸ್ಸಿನ ಬಾಯಾರಿಕೆಯನ್ನು ನಿಗ್ರಹಿಸಿಕೊಂಡು ಕರ್ಮಗಳ ಪರಂಪರೆಯನ್ನು ತ್ಯಜಿಸಿ ನಿರಾಲಂಬನಾಗಿರುವವನೇ ಪರಮ ಸುಖಿಯು. ಅರ್ಜುನ! ಸಾಧುಗಳು ಬಳಸುವ ಈ ಸೂಕ್ಷ್ಮಗಮ್ಯ ಮಾರ್ಗವಿರುವಾಗ ಅನರ್ಥವಾಗಿರುವ ಅರ್ಥವನ್ನೇಕೆ ನೀನು ಪ್ರಶಂಸಿಸುತ್ತಿರುವೆ? ಭಾರತ! ನಿತ್ಯವೂ ಯಜ್ಞ-ದಾನ ಕರ್ಮಗಳಲ್ಲಿ ನಿರತರಾಗಿದ್ದ ಹಿಂದಿನ ಶಾಸ್ತ್ರವಿದ್ವಾಂಸ ಜನರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವನ್ನು ತಾಳಿದ್ದರು. ಆದರೆ ಕಾರಣಗಳನ್ನು ತಿಳಿದುಕೊಂಡಿರುವ ಪಂಡಿತರೂ ಕೂಡ ತಮ್ಮ ಹಿಂದಿನ ದೃಢಸಂಸ್ಕಾರದಿಂದ ಪ್ರಭಾವಿತರಾಗಿ ದುರಾವರ್ತ ಮೂಢರಾಗಿ ಇದು ಹಾಗಲ್ಲ ಎಂದು ವಾದಿಸುತ್ತಾರೆ. ಆತ್ಮನ ಅಮೃತತ್ವವನ್ನು ಒಪ್ಪಿಕೊಳ್ಳದೇ ಬಹುವಿದ್ವಾಂಸರೂ ಜನಸಂಸದಿಗಳಲ್ಲಿ ಅನೃತವಾದಿಗಳಾಗಿ ಇಡೀ ಭೂಮಿಯನ್ನು ಸಂಚರಿಸುತ್ತಿರುತ್ತಾರೆ. ಅಂಥವರನ್ನು ನಾವೇ ತಿಳಿಯಲಾರೆವು ಎಂದಾದಮೇಲೆ ಸಾಧಾರಣ ಮನುಷ್ಯರು ತಾನೇ ಹೇಗೆ ತಿಳಿದುಕೊಳ್ಳುತ್ತಾರೆ? ಮಹಾ ಪ್ರಾಜ್ಞರಾದ ಸಾಧು ಶಾಸ್ತ್ರಪಂಡಿತರೂ ಇದ್ದಾರೆ. ಕೌಂತೇಯ! ಬುದ್ಧಿಯಿಂದ ಮಹತ್ತನ್ನು ತಿಳಿದುಕೊಂಡವನು ಮಹಾ ತಪಸ್ಸಿನ ಫಲವನ್ನು ಪಡೆಯುತ್ತಾನೆ. ತತ್ತ್ವವಿದನು ಸದಾ ತ್ಯಾಗದಿಂದ ಸುಖವನ್ನು ಹೊಂದುತ್ತಾನೆ.”
ದೇವಸ್ಥಾನ ವಾಕ್ಯ
ಈ ಮಧ್ಯದಲ್ಲಿ ಮಹಾತಪಸ್ವಿ ದೇವಸ್ಥಾನನು ಯುಧಿಷ್ಠಿರನಿಗೆ ನೀತಿಯುಕ್ತವಾದ ಈ ಮಾತುಗಳನ್ನು ಹೇಳಿದನು: “ಧನಕ್ಕಿಂತಲೂ ಹೆಚ್ಚಿನದಾದುದ್ದು ಇಲ್ಲ ಎಂದು ಫಲ್ಗುನನು ಏನು ಹೇಳಿದನೋ ಅದೇ ವಿಷಯದಲ್ಲಿ ನಾನೂ ಕೂಡ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ರಾಜನ್! ಧರ್ಮದಿಂದಲೇ ನೀನು ಈ ಸಂಪೂರ್ಣ ವಸುಧೆಯನ್ನು ಗೆದ್ದಿರುವೆ. ಹಾಗೆ ಗೆದ್ದಿರುವ ರಾಜ್ಯವನ್ನು ವೃಥಾ ಪರಿತ್ಯಜಿಸುವುದು ಸರಿಯಲ್ಲ. ಬ್ರಹ್ಮ ಸಾಕ್ಷಾತ್ಕಾರಕ್ಕೆ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂದ ನಾಲ್ಕು ಆಶ್ರಮಧರ್ಮಗಳಿಗೆ. ಇವುಗಳಲ್ಲಿ ಶ್ರೇಣಿಯೆಂಬುದಿಲ್ಲ. ಇವೆಲ್ಲವೂ ಕರ್ಮದಲ್ಲಿಯೇ ಪ್ರತಿಷ್ಠಿತವಾಗಿವೆ. ಇವುಗಳನ್ನು ಕ್ರಮೇಣವಾಗಿ ಒಂದಾದ ನಂತರ ಮತ್ತೊಂದನ್ನು ಜಯಿಸುತ್ತಾ ಬಾ! ಆದುದರಿಂದ ಬಹುದಕ್ಷಿಣೆಗಳಿಂದ ಯುಕ್ತವಾದ ಮಹಾಯಜ್ಞಗಳನ್ನು ಯಾಜಿಸು. ಸ್ವಾಧ್ಯಾಯ ಯಜ್ಞದಲ್ಲಿ ನಿರತರಾಗಿರುವವರು ಋಷಿಗಳು. ಜ್ಞಾನಯಜ್ಞದಲ್ಲಿ ನಿರತರಾಗಿರುವವರು ಸಂನ್ಯಾಸಿಗಳು. ಕರ್ಮನಿಷ್ಠರು ಮತ್ತು ತಪೋನಿಷ್ಠರು ಇವರ ಕುರಿತು ತಿಳಿದುಕೊಳ್ಳಬೇಕು. ಈ ವಿಷಯದಲ್ಲಿ ವೈಖಾನಸರು ಈ ರೀತಿ ಹೇಳಿದ್ದಾರೆ: ಧನವನ್ನು ಕೂಡಿಡಬೇಕೆಂದೇ ಧನವನ್ನು ಬಯಸುವುದಕ್ಕಿಂತ ಅದನ್ನು ಬಯಸದೇ ಇರುವುದೇ ಶ್ರೇಷ್ಠವಾದುದು. ಧನವನ್ನೇ ಆಶ್ರಯಿಸಿರುವವನಲ್ಲಿ ಅನೇಕ ದೋಷಗಳು ಪುನಃ ಪುನಃ ಬೆಳೆಯುತ್ತಿರುತ್ತವೆ. ಧನದ ಕಾರಣದಿಂದ ದ್ರವ್ಯವನ್ನು ಹೇಗೆ ವ್ಯಯಮಾಡಬೇಕೆಂದೂ ಕಷ್ಟಪಡುತ್ತಾರೆ. ಧನವನ್ನು ಹೇಗೆ ವ್ಯಯಮಾಡಬೇಕೆಂದು ತಿಳಿಯದೇ ಭ್ರೂಣಹತ್ಯಾದೋಷಕ್ಕೂ ಗುರಿಯಾಗುತ್ತಾರೆ. ಅನರ್ಹರಿಗೆ ದಾನನೀಡುವವನು ಮತ್ತು ಅರ್ಹನಾದವನಿಗೆ ದಾನನೀಡದಿರುವವನು ಇವೆರಡೂ ಪಾಪಕರ್ಮಗಳೇ. ಅನರ್ಹರ್ಯಾರು ಮತ್ತು ಅರ್ಹರ್ಯಾರು ಎಂದು ಪರಿಜ್ಞಾನವಿಲ್ಲದಿರುವುದರಿಂದ ದಾನಧರ್ಮಗಳೂ ದುಷ್ಕರವೇ ಸರಿ! ಧಾತ್ರನು ಧನವನ್ನು ಯಜ್ಞಕ್ಕಾಗಿಯೇ ಸೃಷ್ಟಿಸಿದ್ದಾನೆ. ಸೃಷ್ಟಿಯ ಮುಖ್ಯ ಉದ್ದೇಶವಾದ ಯಜ್ಞಕ್ಕಾಗಿಯೇ ಮನುಷ್ಯನ ಸೃಷ್ಟಿಯೂ ರಕ್ಷಣೆಯೂ ನಡೆಯುತ್ತಿದೆ. ಆದುದರಿಂದ ಸರ್ವ ಧನವನ್ನೂ ಯಜ್ಞಕ್ಕಾಗಿಯೇ ಉಪಯೋಗಿಸಬೇಕು. ಧನವನ್ನು ಈ ರೀತಿ ಬಳಸಿದ ನಂತರವೇ ಮನುಷ್ಯನು ತನಗೆ ಬೇಕಾದುದನ್ನು ಪಡೆದುಕೊಳ್ಳುತ್ತಾನೆ. ಇಂದ್ರನು ವಿವಿಧ ಅನ್ನಗಳಿಂದ ಕೂಡಿದ ಯಜ್ಞಗಳನ್ನು ಮಾಡಿಯೇ ಎಲ್ಲ ದೇವತೆಗಳಿಗಿಂತಲೂ ಹೆಚ್ಚಿನ ಓಜಸ್ಸುಳ್ಳವನಾದನು. ಅದರಿಂದಲೇ ಅವನು ಇಂದ್ರತ್ವವನ್ನು ಪಡೆದುಕೊಂಡು ರಾರಾಜಿಸುತ್ತಿದ್ದಾನೆ. ಆದುದರಿಂದ ಯಜ್ಞಕ್ಕಾಗಿಯೇ ಸರ್ವ ಸಂಪತ್ತನ್ನೂ ವಿನಿಯೋಜಿಸಬೇಕು. ಮಹಾತ್ಮ ಮಹಾದೇವನೂ ಕೂಡ ಸರ್ವಮೇಧದಲ್ಲಿ ತನ್ನನ್ನು ತಾನೇ ಯಜ್ಞೇಶ್ವರನಿಗೆ ಸಮರ್ಪಿಸಿಕೊಂಡು ದೇವತೆಗಳಿಗೂ ದೇವನಾದನು. ಇದರಿಂದಲೇ ಆ ಕೃತ್ತಿವಾಸನು ಉತ್ತಮ ಕೀರ್ತಿಯಿಂದ ವಿಶ್ವಗಳನ್ನೂ ಲೋಕಗಳನ್ನೂ ವ್ಯಾಪಿಸಿ ಕಾಂತಿಮಂತನಾಗಿ ವಿರಾಜಿಸುತ್ತಾನೆ. ಅವಿಕ್ಷಿತನ ಮಗ ಪಾರ್ಥಿವ ಮರುತ್ತನು[8] ಯಜ್ಞದಿಂದಲೇ ಮರ್ತ್ಯನಾಗಿದ್ದರೂ ದೇವರಾಜನನ್ನು ಜಯಿಸಿದ್ದನು. ಅವನ ಯಜ್ಞದಲ್ಲಿ ಸ್ವಯಂ ಲಕ್ಷ್ಮಿಯೇ ಸನ್ನಿಹಿತಳಾಗಿದ್ದಳು. ಅವನ ಯಜ್ಞದಲ್ಲಿ ಎಲ್ಲ ಪಾತ್ರೆಗಳೂ ಸ್ವರ್ಣಮಯವಾಗಿದ್ದವು. ಪಾರ್ಥಿವೇಂದ್ರ ಹರಿಶ್ಚಂದ್ರನ ಕುರಿತು ನೀನು ಕೇಳಿರುವೆ! ಅವನು ಮನುಷ್ಯನೇ ಆಗಿದ್ದರೂ ಶಕ್ರನನ್ನೂ ಪರಾಜಯಗೊಳಿಸಿದ್ದನು. ಅನೇಕ ಯಜ್ಞ-ಇಷ್ಟಿಗಳಿಂದ ಶೋಕರಹಿತನಾಗಿ ಪುಣ್ಯಗಳನ್ನು ಗಳಿಸಿದನು. ಆದುದರಿಂದ ಎಲ್ಲ ಐಶ್ವರ್ಯವನ್ನೂ ಯಜ್ಞಕ್ಕಾಗಿಯೇ ನಿಯೋಗಿಸಬೇಕು.
“ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ. ಆಗ ಇಂದ್ರನು ಕೇಳಿದಾಗ ಬೃಹಸ್ಪತಿಯು ಇದನ್ನು ಹೇಳಿದ್ದನು. ಸಂತೋಷವೇ ಸ್ವರ್ಗಕ್ಕೆ ಸಮಾನವಾದುದು. ಸಂತೋಷವೇ ಪರಮ ಸುಖಕರವಾದುದು. ಸಂತೋಷವು ನೆಲೆಗೊಂಡಿತೆಂದರೆ ಆ ತೃಪ್ತಿಗಿಂತ ಹೆಚ್ಚಿನದು ಬೇರೆ ಯಾವುದೂ ಇಲ್ಲ. ಆಮೆಯು ತನ್ನ ಎಲ್ಲ ಅವಯವಗಳನ್ನೂ ಚಿಪ್ಪಿನೊಳಗೆ ಸಂಕೋಚಿಸಿಕೊಳ್ಳುವಂತೆ ಕಾಮಗಳೆಲ್ಲವನ್ನೂ ಒಳಸೆಳೆದುಕೊಂಡಾಗ ಜ್ಯೋತಿಸ್ವರೂಪನಾದ ಅಂತರಾತ್ಮನು ಅಂತಃಕರಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಯಾವುದಕ್ಕೂ ಭಯಪಡದಿದ್ದಾಗ, ಯಾವುದೂ ಭಯವನ್ನುಂಟುಮಾಡದಿದ್ದಾಗ, ಮತ್ತು ಕಾಮ-ದ್ವೇಷಗಳನ್ನು ಜಯಿಸಿದಾಗ ಪರಮಾತ್ಮನು ಕಾಣಿಸಿಕೊಳ್ಳುತ್ತಾನೆ. ಯಾವಾಗ ಕಾರ್ಯದಿಂದಾಗಲೀ, ಮನಸ್ಸಿನಿಂದಾಗಲೀ ಅಥವಾ ಮಾತಿನಿಂದಾಗಲೀ ಸರ್ವಭೂತಗಳಿಗೂ ದ್ರೋಹವನ್ನೆಸಗುವುದಿಲ್ಲವೋ ಮತ್ತು ಇನ್ನೊಬ್ಬರಿಂದ ದ್ರೋಹವಾಗಲೆಂದು ಬಯಸುವುದಿಲ್ಲವೋ ಆಗ ಬ್ರಹ್ಮನ ಅರಿವಾಗುತ್ತದೆ. ಹೀಗೆ ಇರುವವು ತಮ್ಮ ತಮ್ಮ ಧರ್ಮಗಳನ್ನು ಆಗಾಗ ಅನುಸರಿಸಿಕೊಂಡು ಆಗಾಗ ಬ್ರಹ್ಮನನ್ನು ಕಾಣುತ್ತಿರುತ್ತವೆ. ಅದನ್ನು ತಿಳಿದುಕೋ! ಕೆಲವರು ಶಾಂತಿಯನ್ನು ಪ್ರಶಂಸಿಸುತ್ತಾರೆ. ಇನ್ನು ಕೆಲವರು ವ್ಯಾಯಾಮವನ್ನು ಪ್ರಶಂಸಿಸುತ್ತಾರೆ. ಒಂದನ್ನು ಪ್ರಶಂಸಿಸುವವರು ಇನ್ನೊಂದನ್ನು ಪ್ರಶಂಸಿಸುವುದಿಲ್ಲ. ಕೆಲವರು ಮಾತ್ರ ಇವೆರಡನ್ನೂ ಪ್ರಶಂಸಿಸುತ್ತಾರೆ. ಒಬ್ಬನು ಯಜ್ಞವನ್ನು ಪ್ರಶಂಸಿಸಿದರೆ ಇತರ ಜನರು ಸಂನ್ಯಾಸವನ್ನು ಪ್ರಶಂಸಿಸುತ್ತಾರೆ. ಒಬ್ಬರು ದಾನವನ್ನು ಪ್ರಶಂಸಿಸಿದರೆ ಇತರರು ದಾನಸ್ವೀಕರಣೆಯನ್ನೇ ಪ್ರಶಂಸಿಸುತ್ತಾರೆ. ಕೆಲವರಾದರೋ ಎಲ್ಲವನ್ನು ಪರಿತ್ಯಜಿಸಿ ಸುಮ್ಮನಾಗಿ ಧ್ಯಾನದಲ್ಲಿ ಕುಳಿತುಕೊಂಡುಬಿಡುತ್ತಾರೆ. ಕೆಲವರು ಕೊಂದಾಗಲೀ, ತುಂಡರಿಸಿಯಾಗಲೀ, ಕಸಿದುಕೊಂಡಾಗಲೀ ರಾಜ್ಯವನ್ನು ಪಡೆದು ಎಲ್ಲರ ಪರಿಪಾಲನೆಯನ್ನು ಪ್ರಶಂಸಿಸುತ್ತಾರೆ. ಇನ್ನು ಕೆಲವರು ಏಕಾಂತದಲ್ಲಿರುವುದನ್ನು ಪ್ರಶಂಸಿಸುತ್ತಾರೆ. ಇವೆಲ್ಲವನ್ನೂ ಚೆನ್ನಾಗಿ ಅವಲೋಕಿಸಿ ವಿದ್ವಾಂಸರು ಈ ನಿರ್ಣಯಕ್ಕೆ ಬಂದಿರುತ್ತಾರೆ. ಇರುವ ಯಾವುದರ ಕುರಿತೂ ದ್ರೋಹವನ್ನೆಸಗದಿರುವುದೇ ಧರ್ಮವೆಂದು ಸತ್ಯವಂತರ ಅಭಿಪ್ರಾಯವಾಗಿದೆ. ಯಾರಿಗೂ ದ್ರೋಹಮಾಡದಿರುವುದು, ಸತ್ಯವನ್ನೇ ಹೇಳುವುದು, ಎಲ್ಲವಕ್ಕೂ ಯಥಾಯೋಗ್ಯವಾದ ಭಾಗಗಳನ್ನು ನೀಡುವುದು, ದಯೆ, ಕ್ಷಮೆ, ತನ್ನ ಪತ್ನಿಯರಲ್ಲಿ ಮಕ್ಕಳನ್ನು ಪಡೆಯುವುದು, ಮೃದುಸ್ವಭಾವ, ನಾಚಿಕೆ ಮತ್ತು ಚಾಪಲ್ಯಗಳನ್ನು[9] ತೊರೆದಿರುವುದು ಇವೇ ಧರ್ಮ. ಧನವೇ ಧರ್ಮಕ್ಕೆ ಪ್ರಧಾನವಾದುದು ಎಂದು ಸ್ವಾಯಂಭು ಮನುವೇ ಹೇಳಿದ್ದಾನೆ. ಆದುದರಿಂದ ನೀನು ಅದನ್ನೇ ಪರಿಪಾಲಿಸು. ರಾಜ್ಯಸಿಂಹಾಸನಾರೂಢನಾಗಿ ಯಾವ ರಾಜನು ಇಂದ್ರಿಯಗಳನ್ನು ವಶಪಡಿಸಿಕೊಂಡು, ಪ್ರಿಯ-ಅಪ್ರಿಯಗಳನ್ನು ಸಮಾನವಾಗು ಕಾಣುತ್ತಾ, ಯಜ್ಞಗಳನ್ನು ಯಾಜಿಸಿ ವಿಘಸಗಳನ್ನು ಭುಂಜಿಸುತ್ತಾ, ರಾಜನೀತಿಯ ಅರ್ಥವನ್ನು ತತ್ತ್ವಶಃ ತಿಳಿದುಕೊಂಡು, ದುಷ್ಟರನ್ನು ಶಿಕ್ಷಿಸುವುದರಲ್ಲಿಯೂ ಶಿಷ್ಟರನ್ನು ರಕ್ಷಿಸುವುದರಲ್ಲಿಯೂ ನಿರತನಾಗಿದ್ದುಕೊಂಡು, ತಾನೂ ಧರ್ಮದಲ್ಲಿ ನಡೆದುಕೊಂಡಿದ್ದು ಪ್ರಜೆಗಳನ್ನೂ ಧರ್ಮವಿದರನ್ನಾಗಿಸಿ ಧರ್ಮದಲ್ಲಿ ನಡೆದುಕೊಳ್ಳುವಂತೆ ಮಾಡಿ, ಮುಪ್ಪಿನಲ್ಲಿ ಸಂಪತ್ತನ್ನು ಪುತ್ರನಿಗಿತ್ತು ವನದಲ್ಲಿ ವಾನಪ್ರಸ್ಥಾಶ್ರಮದಲ್ಲಿ ಇದ್ದು, ಅರಣ್ಯದಲ್ಲಿಯೂ ವಿಧಿವತ್ತಾಗಿ ಶಾಸ್ತ್ರಗಳ ಶ್ರವಣ ಮತ್ತು ಕರ್ಮಗಳನ್ನು ಮಾಡುತ್ತಿರುವುದು – ಈ ರೀತಿ ನಡೆದುಕೊಳ್ಳುವವನನ್ನು ರಾಜಧರ್ಮದಲ್ಲಿರುವವನು ಎಂದು ನಿಶ್ಚಯಿಸಿದ್ದಾರೆ. ಇಂಥವನಿಗೆ ಇಹ-ಪರಗಳೆರಡರಲ್ಲೂ ಶುಭ ಫಲಗಳೇ ದೊರಕುತ್ತವೆ. ಸಂನ್ಯಾಸವು ಬಹಳ ಕಷ್ಟಕರವಾದುದು ಮತ್ತು ಬಹು ವಿಘ್ನಗಳಿಂದ ಕೂಡಿದುದು ಎಂದು ನನ್ನ ಅಭಿಪ್ರಾಯ. ಹೀಗೆ ಧರ್ಮಾನುಸರಣೆಯನ್ನು ಮಾಡುವ, ಸತ್ಯನಿಷ್ಠರಾದ, ದಾನಶೀಲರಾದ, ತಪೋನಿರತರಾದ, ದಯೆಯೇ ಮುಂತಾದ ಸದ್ಗುಣಗಳಿಂದ ಪರಿಪೂರ್ಣರಾದ, ಕಾಮ-ಕ್ರೋಧಗಳನ್ನು ಸಂಪೂರ್ಣವಾಗಿ ವರ್ಜಿಸಿ ಪ್ರಜೆಗಳ ಪಾಲನೆಯಲ್ಲಿಯೇ ನಿರತರಾದ, ಶ್ರೇಷ್ಠ ಧರ್ಮವನ್ನಾಶ್ರಯಿಸಿರುವ ರಾಜರು ಗೋ-ಬ್ರಾಹ್ಮಣರ ಸಲುವಾಗಿಯೇ ಯುದ್ಧಮಾಡುತ್ತಾ ಅವಸಾನಾನಂತರದಲ್ಲಿ ಸದ್ಗತಿಯನ್ನು ಹೊಂದುತ್ತಾರೆ. ರುದ್ರರೂ, ವಸುಗಳೂ, ಆದಿತ್ಯರೂ, ಸಾಧ್ಯರೂ, ಅನೇಕ ರಾಜರ್ಷಿಗಳೂ ಅಪ್ರಮತ್ತರಾಗಿ ಇದೇ ಧರ್ಮವನ್ನಾಶ್ರಯಿಸಿಸ್ ತಮ್ಮ ತಮ್ಮ ಪುಣ್ಯ ಕರ್ಮಗಳಿಂದ ಸ್ವರ್ಗಲೋಕವನ್ನು ಪಡೆದುಕೊಂಡಿರುವರು.”
ಈ ಮಧ್ಯದಲ್ಲಿ ಅರ್ಜುನನು ಖಿನ್ನಮನಸ್ಕನಾಗಿದ ಹಿರಿಯಣ್ಣ ರಾಜನಿಗೆ ಪುನಃ ಈ ಮಾತನ್ನಾಡಿದನು: “ಧರ್ಮಜ್ಞ! ಕ್ಷತ್ರಧರ್ಮದಿಂದ ಈ ಅನುತ್ತಮ ರಾಜ್ಯವನ್ನು ಪಡೆದೂ, ಶತ್ರುಗಳನ್ನು ಗೆದ್ದೂ ಕೂಡ ನೀನು ಏಕೆ ಹೀಗೆ ತುಂಬಾ ಪರಿತಪಿಸುತ್ತಿರುವೆ? ಕ್ಷತ್ರಿಯ ಧರ್ಮವೇನು ಎನ್ನುವುದನ್ನು ನೆನಪಿಸಿಕೋ! ಅನೇಕ ಯಜ್ಞಗಳನ್ನು ಮಾಡುವುದಕ್ಕಿಂತಲೂ ಕ್ಷತ್ರಿಯರಿಗೆ ಸಂಗ್ರಾಮದಲ್ಲಿ ನಿಧನವೇ ವಿಶಿಷ್ಠವಾದುದು. ಬ್ರಾಹ್ಮಣರಿಗೆ ತಪಸ್ಸು ಮತ್ತು ತ್ಯಾಗ ಇವೇ ಮರಣಾನಂತರ ಪುಣ್ಯಲೋಕಗಳನ್ನು ನೀಡುವ ಧರ್ಮವಿಧಿಯೆಂದು ಹೇಳಿದ್ದಾರೆ. ಕ್ಷತ್ರಿಯರಿಗೆ ಸಂಗ್ರಾಮದಲ್ಲಿ ನಿಧನವು ವಿಹಿತವಾದುದು. ನಿತ್ಯವೂ ಶಸ್ತ್ರಧಾರಣೆಮಾಡಬೇಕಾದ, ಯುದ್ಧದಲ್ಲಿ ಸಮಯವೊದಗಿದಾಗ ಶಸ್ತ್ರಗಳಿಂದ ವಧೆಯನ್ನೂ ಮಾಡಬೇಕಾದ ಕ್ಷತ್ರಧರ್ಮವನ್ನು ಮಹಾರೌದ್ರವಾದುದು ಎಂದು ಹೇಳುತ್ತಾರೆ. ಬ್ರಾಹ್ಮಣನಿಗೆ ಕೂಡ ಕ್ಷತ್ರಧರ್ಮಾನುಸಾರವಾಗಿ ಜೀವಿಸುವುದು ಪ್ರಶಸ್ತವಾದುದೇ. ಏಕೆಂದರೆ ಲೋಕದಲ್ಲಿ ಬ್ರಾಹ್ಮಣರಿಂದಲೇ ಕ್ಷತ್ರಿಯರು ಜನಿಸಿದ್ದುದು. ಕ್ಷತ್ರಿಯನಿಗೆ ತ್ಯಾಗ, ನಂತರ ಯಾಚನೆ ಮತ್ತು ತಪಸ್ಸುಗಳು ಹಾಗು ಇತರರ ಸ್ವತ್ತಿನಿಂದ ಜೀವನ ನಿರ್ವಹಣೆ ಇವು ವಿಹಿತವಾಗಿಲ್ಲ. ಸರ್ವಾತ್ಮನಾಗಿರುವ ನೀನು ಸರ್ವಧರ್ಮಗಳನ್ನೂ ತಿಳಿದಿರುವೆ. ಲೋಕದಲ್ಲಿ ನೀನು ಶ್ರೇಷ್ಠವಾದವುಗಳನ್ನು ಮತ್ತು ಶ್ರೇಷ್ಠವಲ್ಲದವುಗಳನ್ನು ಚೆನ್ನಾಗಿ ತಿಳಿದುಕೊಂಡಿರುವೆ. ಸಂತಾಪದಿಂದ ಹುಟ್ಟಿರುವ ಶೋಕವನ್ನು ತ್ಯಜಿಸಿ ಮಾಡಬೇಕಾದ ಕರ್ಮಗಳ ಕವಚವನ್ನು ತೊಡು! ಕ್ಷತ್ರಿಯನ ಹೃದಯವು ವಿಶೇಷವಾಗಿ ವಜ್ರದಂತೆ ಕಠಿಣವಾದುದೆಂದು ಹೇಳುತ್ತಾರೆ. ಕ್ಷತ್ರಧರ್ಮದಿಂದ ಶತ್ರುಗಳನ್ನು ಗೆದ್ದು, ಕಂಟಕಗಳಿಲ್ಲದ ರಾಜ್ಯವನ್ನು ಪಡೆದು ವಿಜಿತಾತ್ಮನಾಗಿ ಯಜ್ಞದಾನಪರನಾಗಿರು. ಬ್ರಾಹ್ಮಣ ಪುತ್ರನಾಗಿದ್ದ ಇಂದ್ರನು ತನ್ನ ಕರ್ಮಗಳಿಂದ ಕ್ಷತ್ರಿಯನಾದನು. ಪಾಪವೃತ್ತಿಗಳಲ್ಲಿ ತೊಡಗಿದ್ದ ಎಂಟುನೂರಾಹತ್ತು ಜ್ಞಾತಿಬಾಂಧವರನ್ನು ಸಂಹರಿಸಿದನು. ಅವನ ಆ ಕರ್ಮವನ್ನು ಗೌರವಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ. ಅದರಿಂದಲೇ ಅವನಿಗೆ ದೇವತೆಗಳ ಇಂದ್ರತ್ವವು ದೊರಕಿತೆಂದು ನಾವು ಕೇಳಿದ್ದೇವೆ. ನೀನೂ ಕೂಡ ಇಂದ್ರನಂತೆ ಬಹುದಕ್ಷಿಣೆಗಳಿಂದ ಯುಕ್ತವಾದ ಯಜ್ಞಗಳನ್ನು ಮಾಡಿ ಬಹುಕಾಲ ನಿಶ್ಚಿಂತನಾಗಿರು. ಹೀಗೆ ಹಿಂದೆಯೂ ನಡೆದುಹೋಗಿದ್ದುದರಿಂದ ನೀನು ಸ್ವಲ್ವವೂ ಶೋಕಿಸಬೇಕಾಗಿಲ್ಲ. ಕ್ಷತ್ರಧರ್ಮಾನುಸಾರವಾಗಿ ಶಸ್ತ್ರಗಳಿಂದ ಪವಿತ್ರರಾದ ಅವರು ಪರಮ ಗತಿಯನ್ನು ಹೊಂದಿದ್ದಾರೆ. ಈಗ ನಡೆದುಹೋದುದು ಹಾಗೆಯೇ ಆಗಬೇಕಾಗಿತ್ತು. ದೈವದ ನಿಯಮವನ್ನು ಉಲ್ಲಂಘಿಸಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ!”
ವ್ಯಾಸ ವಾಕ್ಯ
ಕೌಂತೇಯ ಗುಡಾಕೇಶನು ಹೀಗೆ ಹೇಳಲು ಕೌರವ್ಯನು ಏನನ್ನೂ ಮಾತನಾಡಲಿಲ್ಲ. ಆಗ ದ್ವೈಪಾಯನನು ಹೇಳಿದನು: “ಯುಧಿಷ್ಠಿರ! ಬೀಭತ್ಸುವಿನ ಮಾತು ಸತ್ಯ. ಗೃಹಸ್ಥಾಶ್ರಮವು ಶಾಸ್ತ್ರ-ಸ್ಮೃತಿಗಳಲ್ಲಿ ತೋರಿಸಿಕೊಟ್ಟಿರುವ ಪರಮ ಧರ್ಮವು. ಶಾಸ್ತ್ರಗಳಲ್ಲಿರುವಂತೆ ಯಥಾವಿಧಿಯಾಗಿ ಸ್ವಧರ್ಮದಲ್ಲಿ ನಡೆದುಕೋ. ಗೃಹಸ್ಥಧರ್ಮವನ್ನು ತ್ಯಜಿಸಿ ಅರಣ್ಯವನ್ನು ಸೇರುವುದು ನಿನಗೆ ವಿಹಿತವಾದುದಲ್ಲ. ದೇವತೆಗಳು, ಪಿತೃಗಳು, ಋಷಿಗಳು ಮತ್ತು ಸೇವಕರು ಗೃಹಸ್ಥರನ್ನೇ ಆಶ್ರಯಿಸಿ ಉಪಜೀವನ ಮಾಡುತ್ತಾರೆ. ಆದುದರಿಂದ ನೀನು ಅವರ ಭರಣ-ಪೋಷಣೆಯನ್ನು ಮಾಡು. ಪಶು-ಪಕ್ಷಿಗಳು ಮತ್ತು ಇತರ ಪ್ರಾಣಿಗಳು ಗೃಹಸ್ಥರನ್ನೇ ಅವಲಂಬಿಸಿವೆ. ಆದುದರಿಂದ ಗೃಹಸ್ಥಾಶ್ರಮವೇ ಹಿರಿದಾದುದು. ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮದ ಆಚರಣೆಯು ಅತ್ಯಂತ ಕಠಿನವಾದುದು. ದುರ್ಬಲ ಇಂದ್ರಿಯಗಳಿರುವವರಿಗೆ ಕಷ್ಟಕರವಾದ ಗೃಹಸ್ಥಾಶ್ರಮವನ್ನು ವಿಮನಸ್ಕನಾಗಿ ನೀನು ಪಾಲಿಸು! ನಿನ್ನಲ್ಲಿ ಸಂಪೂರ್ಣ ವೇದಜ್ಞಾನವಿದೆ. ಮಹಾ ತಪಸ್ಸನ್ನೂ ತಪಿಸಿದ್ದೀಯೆ. ಪಿತೃ-ಪಿತಾಮಹರ ಈ ರಾಜ್ಯದ ಭಾರವನ್ನು ನೀನು ಹೊರಬಲ್ಲೆ! ತಪಸ್ಸು, ಯಜ್ಞ, ವಿದ್ಯೆ, ಭಿಕ್ಷಾಟನೆ, ಇಂದ್ರಿಯನಿಗ್ರಹ, ಧ್ಯಾನ. ಏಕಾಂತಶೀಲತ್ವ, ತೃಪ್ತಿ, ಶಕ್ತಿಯಿದ್ದಷ್ಟು ದಾನ – ಇವು ಬ್ರಾಹ್ಮಣರಿಗೆ ಸಿದ್ಧಿಯನ್ನು ನೀಡುವ ಕ್ರಿಯೆಗಳು. ನಿನಗೆ ತಿಳಿದಿದ್ದರೂ ಕ್ಷತ್ರಿಯರು ಏನು ಮಾಡಬೇಕು ಎನ್ನುವುದನ್ನು ಹೇಳುತ್ತೇನೆ. ಯಜ್ಞ, ವಿದ್ಯಾಭ್ಯಾಸ, ಶತ್ರುಗಳ ಮೇಲೆ ಆಕ್ರಮಣ ಮಾಡುವುದು, ಸಂಪತ್ತಿನ ಕುರಿತು ಅಸಂತೋಷದಿಂದಿರುವುದು, ದಂಡಧಾರಣ, ಉಗ್ರತೆ, ಪ್ರಜೆಗಳ ಪರಿಪಾಲನೆ, ಸಂಪೂರ್ಣ ವೇದಜ್ಞಾನ, ತಪಸ್ಸು, ಸಧಾಚಾರ, ಅಪಾರ ಐಶ್ವರ್ಯವನ್ನು ಗಳಿಸುವುದು, ಸತ್ಪಾತ್ರರಲ್ಲಿ ದಾನಮಾಡುವುದು – ಇವು ರಾಜರು ಮಾಡುವ ಪುಣ್ಯ ಕರ್ಮಗಳು. ಇವುಗಳನ್ನು ಮಾಡುವ ರಾಜರು ಇಹ-ಪರಗಳೆರಡನ್ನೂ ಸಾಧಿಸುತ್ತಾರೆಂದು ಕೇಳಿದ್ದೇವೆ. ಇವುಗಳಲ್ಲಿ ದಂಡಧಾರಣೆಯೇ ಶ್ರೇಷ್ಠವಾದುದೆಂದು ಹೇಳುತ್ತಾರೆ. ಕ್ಷತ್ರಿಯನಿಗೆ ಬಲವೇ ನಿತ್ಯ. ಬಲದಲ್ಲಿಯೇ ದಂಡವು ಸಮಾಹಿತವಾಗಿರುವುದು. ಈ ಶ್ರೇಷ್ಠ ಕರ್ಮಗಳು ಕ್ಷತ್ರಿಯರಿಗೆ ಸಂಸಿದ್ಧಿಕಾರಕಗಳು. ಇದರ ಕುರಿತು ಬೃಹಸ್ಪತಿಯು ಒಂದು ಗೀತೆಯನ್ನು ಹಾಡಿದ್ದಾನೆ: “ಸರ್ಪವು ಬಿಲದಲ್ಲಿರುವ ಇಲಿಗಳನ್ನು ನುಂಗುವಂತೆ ಭೂಮಿಯು ಶತ್ರುವನ್ನು ವಿರೋಧಿಸದೇ ಇರುವ ರಾಜನನ್ನೂ ದೇಶಪರ್ಯಟನೆಮಾಡದ ಬ್ರಾಹ್ಮಣನನ್ನೂ ನುಂಗಿಹಾಕುತ್ತದೆ!” ರಾಜರ್ಷಿ ಸುದ್ಯುಮ್ನನೂ ಕೂಡ ದಂಡಧಾರಣೆಯಿಂದಾಗಿ ಪ್ರಾಚೇತಸ ದಕ್ಷನಂತೆ ಪರಮ ಸಿದ್ಧಿಯನ್ನು ಪಡೆದನೆಂದು ಕೇಳಿದ್ದೇವೆ.”
ಯುಧಿಷ್ಠಿರನು ಹೇಳಿದನು: “ಭಗವನ್! ವಸುಧಾಧಿಪ ನೃಪ ಸುದ್ಯುಮ್ನನು ಯಾವ ಕರ್ಮದಿಂದ ಪರಮ ಸಂಸಿದ್ಧಿಯನ್ನು ಪಡೆದನು ಎನ್ನುವುದನ್ನು ಕೇಳಲು ಬಯಸುತ್ತೇನೆ.”
ಆಗ ವ್ಯಾಸನು ಯುಧಿಷ್ಠಿರನಿಗೆ ಶಂಖ-ಲಿಖಿತೋಽಪಖ್ಯಾನವನ್ನು ಹೇಳಿ “ಪಾಂಡವಶ್ರೇಷ್ಠ! ದಂಡಧಾರಣೆಯ ಶ್ರೇಷ್ಠ ಕರ್ಮದಿಂದಾಗಿ ರಾಜಾ ಸುದ್ಯುಮ್ನನು ದಕ್ಷ ಪ್ರಾಚೇತಸನಂತೆ ಪರಮ ಸಿದ್ಧಿಯನ್ನು ಪಡೆದನು. ಪ್ರಜೆಗಳ ಪರಿಪಾಲನೆಯೇ ಕ್ಷತ್ರಿಯರ ಧರ್ಮ. ಆದುದರಿಂದ ಇದರ ಕುರಿತು ಶೋಕಿಸಬೇಡ! ತಮ್ಮನ ಹಿತವಾಕ್ಯವನ್ನು ಕೇಳು. ದಂಡವೇ ಕ್ಷತ್ರಧರ್ಮ. ಮುಂಡನವಲ್ಲ!”
ಅಜಾತಶತ್ರು ಕೌಂತೇಯನಿಗೆ ಮಹರ್ಷಿ ಕೃಷ್ಣದ್ವೈಪಾಯನನು ಪುನಃ ಈ ಅರ್ಥವತ್ತಾದ ಮಾತುಗಳನ್ನಾಡಿದನು: “ಯುಧಿಷ್ಠಿರ! ಅರಣ್ಯದಲ್ಲಿ ವಾಸಿಸುತ್ತಿರುವಾಗ ತಪಸ್ವಿಗಳಾಗಿದ್ದ ನಿನ್ನ ಮಹಾರಥ ಸಹೋದರರು ಇಟ್ಟುಕೊಂಡಿದ್ದ ಮನೋರಥಗಳನ್ನು ಈಗ ಪೂರೈಸಿಕೊಳ್ಳಲಿ! ನಹುಷನ ಮಗ ಯಯಾತಿಯಂತೆ ಈ ಭೂಮಿಯ ಮೇಲೆ ಶಾಸನ ಮಾಡು! ಆ ತಪಸ್ವಿಗಳು ಅರಣ್ಯದಲ್ಲಿ ವಾಸಿಸುತ್ತಿರುವಾಗ ದುಃಖಗಳನ್ನು ಅನುಭವಿಸಿದರು. ಆ ದುಃಖದ ಅಂತ್ಯದಲ್ಲಿ ನರವ್ಯಾಘ್ರರು ಈಗಲಾದರೂ ಸುಖವನ್ನು ಅನುಭವಿಸಲಿ. ಧರ್ಮ, ಅರ್ಥ, ಮತ್ತು ಕಾಮಗಳನ್ನು ಸಹೋದರರೊಂದಿಗೆ ಅನುಭವಿಸಿ, ಅದರ ನಂತರ ನೀನು ವಾನಪ್ರಸ್ಥವನ್ನು ಕೈಗೊಳ್ಳಬಹುದು. ಅತಿಥಿಗಳ, ಪಿತೃಗಳ ಮತ್ತು ದೇವತೆಗಳ ಋಣಮುಕ್ತನಾದ ನಂತರ ಹೋಗು! ಆಗ ಸ್ವರ್ಗಕ್ಕೇ ಹೋಗುತ್ತೀಯೆ! ಸರ್ವಮೇಧ-ಅಶ್ವಮೇಧ ಯಜ್ಞಗಳನ್ನು ಯಾಜಿಸು. ಅದರನಂತರ ಪರಮ ಗತಿಯನ್ನು ಪಡೆಯುವಿಯಂತೆ. ಬಹುದಕ್ಷಿಣೆಗಳಿಂದ ಯುಕ್ತವಾದ ಆ ಎಲ್ಲ ಕ್ರತುಗಳಲ್ಲಿ ನಿನ್ನ ಸಹೋದರರನ್ನೂ ಜೋಡಿಸಿಕೋ! ಇದರಿಂದ ನೀನು ಅಪಾರ ಕೀರ್ತಿಯನ್ನು ಪಡೆಯುತ್ತೀಯೆ. ನಿನ್ನ ಮಾತುಗಳು ನಮಗೆ ಚೆನ್ನಾಗಿ ಅರ್ಥವಾಗುತ್ತಿವೆ. ಏನು ಮಾಡಿದರೆ ನೃಪನು ಧರ್ಮಚ್ಯುತನಾಗುವುದಿಲ್ಲ ಎನ್ನುವುದನ್ನು ಕೇಳು. ಧನ ಸಂಗ್ರಹಣೆ ಮತ್ತು ದುಷ್ಟ ನಿಗ್ರಹ ಇವೆರಡೂ ಸಮಾನ ಕ್ಷತ್ರಿಯ ಧರ್ಮಗಳೆಂದು ಧರ್ಮಕುಶಲರು ಸಿದ್ಧಪಡಿಸಿದ್ದಾರೆ. ದೇಶಕಾಲಗಳನ್ನು ನೋಡಿಕೊಂಡು ಶಾಸ್ತ್ರಗಳಲ್ಲಿ ತೋರಿಸಿರುವ ಬುದ್ಧಿಯನ್ನು ಬಳಸಿ ದಸ್ಯುಗಳನ್ನು ಕಾಣುವ ನೃಪನಿಗೆ ಪಾಪವು ತಗಲುವುದಿಲ್ಲ. ಪ್ರಜೆಗಳ ಆರನೆಯ ಒಂದು ಭಾಗವನ್ನು ಪಡೆದೂ ಯಾವ ರಾಜನು ರಾಷ್ಟ್ರವನ್ನು ರಕ್ಷಿಸುವುದಿಲ್ಲವೋ ಅವನು ಪ್ರಜೆಗಳು ಮಾಡುವ ಪಾಪಗಳ ನಾಲ್ಕನೆಯ ಒಂದು ಭಾಗವನ್ನೂ ಅನುಭವಿಸುತ್ತಾನೆ. ಹೇಗಿದ್ದರೆ ರಾಜನು ಧರ್ಮಗಳಿಂದ ಚ್ಯುತನಾಗುವುದಿಲ್ಲ, ಧರ್ಮಶಾಸ್ತ್ರಗಳಂತೆ ನಡೆದುಕೊಂಡರೆ ಅಥವಾ ಅವುಗಳಿಗೆ ವಿರೋಧವಾಗಿ ನಡೆದುಕೊಂಡರೆ ಯಾವ ಅಧೋಗತಿಗಿಳಿಯುತ್ತಾನೆ ಎನ್ನುವುದನ್ನು ಕೇಳು. ಕಾಮ-ಕ್ರೋಧಗಳನ್ನು ಅನಾದರಿಸಿ ತಂದೆಯಂತೆ ಎಲ್ಲರನ್ನೂ ಸಮನಾಗಿ ಕಾಣುವವನಿಗೆ ಪಾಪವಿಲ್ಲ. ಪ್ರಜೆಗಳ ಕರ್ಮವನ್ನು ಮಾಡುತ್ತಿರುವಾಗಲೇ ರಾಜನು ದೈವವಶನಾದರೆ ಅದನ್ನು ಪ್ರಮಾದವೆಂದಾಗಲೀ ಧರ್ಮದ ಅತಿಕ್ರಮವೆಂದಾಗಲೀ ಹೇಳಲಾಗುವುದಿಲ್ಲ. ಮೊದಲೇ ಯೋಚಿಸಿಯೋ ಅಥವಾ ತಕ್ಷಣವೋ ಶತ್ರುಗಳನ್ನು ನಿಗ್ರಹಿಸಲೇಬೇಕು. ಪಾಪಿಗಳೊಂದಿಗೆ ಸಂಧಿಮಾಡಿಕೊಳ್ಳಬಾರದು. ರಾಷ್ಟ್ರವನ್ನು ಮಾರುಕಟ್ಟೆಯ ವಸ್ತುವನ್ನಾಗಿ ಮಾಡಬಾರದು. ಶೂರರನ್ನೂ, ಆರ್ಯರನ್ನೂ, ವಿದ್ವಾಂಸರನ್ನೂ ಸತ್ಕರಿಸಬೇಕು. ಗೋವುಗಳನ್ನು ಪಡೆದಿರುವವರಿಗೂ ಧನಿಗಳಿಗೂ ವಿಶೇಷವಾದ ರಕ್ಷಣೆಯನ್ನು ನೀಡಬೇಕು. ಧರ್ಮದ ವ್ಯವಹಾರಗಳಲ್ಲಿ ಸಕಲಶಾಸ್ತ್ರಜ್ಞರನ್ನೂ ನಿಯೋಜಿಸಬೇಕು. ಗುಣಯುಕ್ತನಾದರೂ ಒಬ್ಬನಲ್ಲಿಯೇ ರಾಜನು ವಿಶ್ವಾಸವನ್ನಿಡಬಾರದು. ಪ್ರಜೆಗಳನ್ನು ರಕ್ಷಿಸದ, ಉದ್ಧತನಾದ, ದುರಭಿಮಾನೀ, ಮಾನ್ಯರಲ್ಲಿ ಅವಿನೀತನಾಗಿರುವ, ಅನ್ಯರಲ್ಲಿ ದೋಷವನ್ನೇ ಹುಡುಕುವ ರಾಜನು ಪಾಪಯುಕ್ತನನೆಂದು ಹೇಳುತ್ತಾರೆ. ರಾಜನಿಂದ ರಕ್ಷಿಸಲ್ಪಡದ ಪ್ರಜೆಗಳು ದೈವಿಕ ಆಪತ್ತಿನಿಂದಲೂ ಕಳ್ಳ-ಕಾಕರಿಂದಲೂ ವಿನಾಶಹೊಂದುತ್ತಾರೆ. ಅವರ ವಿನಾಶಕ್ಕೆ ಕಾರಣನಾದ ನೃಪನೇ ಮಹಾಪಾಪಕ್ಕೆ ಗುರಿಯಾಗುತ್ತಾನೆ. ಚೆನ್ನಾಗಿ ಸಮಾಲೋಚಿಸಿ, ನೀತಿಯನ್ನನುಸರಿಸಿ, ಸರ್ವಪ್ರಕಾರದಿಂದಲೂ ಮನುಷ್ಯಪ್ರಯತ್ನವನ್ನು ಮಾಡಿದರೆ ರಾಜನು ಅಧರ್ಮಿಯೆಂದೆನಿಸಿಕೊಳ್ಳುವುದಿಲ್ಲ. ಉತ್ತಮವಾಗಿ ಆರಂಭಿಸಿದ ಕಾರ್ಯಗಳು ದೈವವಶದಿಂದ ಸಿದ್ಧಿಯಾಗದೆಯೂ ಇರಬಹುದು. ಆದರೆ ಪುರುಷಪ್ರಯತ್ನವನ್ನು ಮಾಡಿದ ಪಾರ್ಥಿವನಿಗೆ ಪಾಪವು ತಗಲುವುದಿಲ್ಲ. ಇದಕ್ಕೆ ಸಂಬಂಧಿಸಿದಂತಹ ಹಿಂದಿನ ರಾಜರ್ಷಿ ಹಯಗ್ರೀವನ ಕಥೆಯನ್ನು ನಿನಗೆ ಹೇಳುತ್ತೇನೆ. ಆ ಅಕ್ಲಿಷ್ಟಕರ್ಮಿಯು ಅಸಹಾಯಕನಾಗಿದ್ದೂ ಧೀರನಾಗಿ ಶೂರತನದಿಂದ ಶತ್ರುಗಳನ್ನು ಸಂಹರಿಸಿ ಜಯಿಸಿದುದನ್ನು ಹೇಳುತ್ತೇನೆ. ಮಾನವರ ಯೋಗಪಾಲನೆಯಲ್ಲಿ ಅಗ್ರಗಣ್ಯನಾದ ಅವನು ಶತ್ರುಗಳನ್ನು ನಿಗ್ರಹಿಸುವ ಕರ್ಮವನ್ನೆಸಗಿದನು. ಉತ್ತಮ ಯುದ್ಧದಲ್ಲಿ ಈ ಕರ್ಮವನ್ನೆಸಗಿ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ. ಸಮರದಲ್ಲಿ ದಸ್ಯುಗಳ ಶಸ್ತ್ರಗಳಿಂದ ಛಿನ್ನನ್ನಾಗಿ ಈ ಆತತಾಯಿಯು ಅಸುನೀಗಿದ ಈ ಕರ್ಮಶೀಲ ಮಹಾತ್ಮ ಸಿದ್ಧಾತ್ಮ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ. ಧನುಸ್ಸೇ ಯೂಪಸ್ತಂಭವಾಗಿದ್ದ, ಮೌರ್ವಿಯೇ ರಜ್ಜುವಾಗಿದ್ದ, ಬಾಣವೇ ಸ್ರುಕ್ಕಾಗಿದ್ದ, ಖಡ್ಗವೇ ಸ್ರುವವಾಗಿದ್ದ, ರಕ್ತವೇ ಆಜ್ಯವಾಗಿದ್ದ, ಬೇಕಾದಲ್ಲಿ ಹೋಗುತ್ತಿದ್ದ ರಥವೇ ವೇದಿಯಾಗಿದ್ದ, ಯುದ್ಧವೇ ಅಗ್ನಿಯಾಗಿದ್ದ, ನಾಲ್ಕು ಕುದುರೆಗಳು ನಾಲ್ಕು ಹೋತೃಗಳಾಗಿದ್ದ, ಆ ಯಜ್ಞದಲ್ಲಿ ವೇಗಶಾಲೀ ರಾಜಸಿಂಹನು ಶತ್ರುಗಳನ್ನು ಆಹುತಿಯನ್ನಾಗಿತ್ತು ಪಾಪದಿಂದ ಮುಕ್ತನಾಗಿ ರಣದ ಅವಭೃತದಲ್ಲಿ ತನ್ನ ಪ್ರಾಣವನ್ನೇ ಹೋಮಮಾಡಿದ ಹಯಗ್ರೀಯನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ. ಯಜ್ಞಶೀಲ ಮಹಾತ್ಮ ಮನನಶೀಲ ಹಯಗ್ರೀವನು ಬುದ್ಧಿಪೂರ್ವಕ ಸುನೀತಿಯಿಂದ ರಾಷ್ಟ್ರವನ್ನು ರಕ್ಷಿಸುತ್ತಾ ಪ್ರಾಣವನ್ನು ತೊರೆದು ತನ್ನ ಕೀರ್ತಿಯು ಸರ್ವ ಲೋಕಗಳಲ್ಲಿ ವ್ಯಾಪಿಸುವಂತೆ ಮಾಡಿ ದೇವಲೋಕದಲ್ಲಿ ಮೋದಿಸುತ್ತಿದ್ದಾನೆ. ಧರ್ಮಶೀಲ ಮಹಾತ್ಮ ರಾಜಾ ಹಯಗ್ರೀವನು ದೈವೀ ಸಿದ್ಧಿಯನ್ನೂ ಮಾನುಷ ದಂಡನೀತಿಯನ್ನೂ ಬಳಸಿ ಯೋಗ-ನ್ಯಾಯಗಳಿಂದ ಭೂಮಿಯನ್ನು ಆಳಿ ಸ್ವರ್ಗಲೋಕದಲ್ಲಿ ಮೋದಿಸುತ್ತಿದ್ದಾನೆ. ವಿಧ್ವಾಂಸನೂ, ತ್ಯಾಗಿಯೂ, ಶದ್ಧಾಳುವೂ, ಕೃತಜ್ಞನೂ ಆಗಿದ್ದ ರಾಜಾ ಹಯಗ್ರೀವನು ಮಾನುಷ ಕರ್ಮವನ್ನು ಮಾಡಿ ದೇಹವನ್ನು ತ್ಯಜಿಸಿ ಮೇಧಾವಿಗಳಿಗೂ, ಸರ್ವಸನ್ಮಾನ್ಯರಿಗೂ, ಜ್ಞಾನಿಗಳಿಗೂ ದೊರಕುವ ಲೋಕವನ್ನು ಆಕ್ರಮಣಿಸಿದ್ದಾನೆ. ಸರ್ವವೇದಗಳನ್ನೂ ಪಡೆದು ಶಾಸ್ತ್ರಗಳನ್ನು ತಿಳಿದುಕೊಂಡು ಸಂಪೂರ್ಣ ರಾಷ್ಟ್ರವನ್ನು ಪಾಲಿಸುತ್ತ, ಸ್ವಧರ್ಮದಿಂದ ಚಾತುರ್ವರ್ಣಗಳನ್ನು ಸಂಸ್ಥಾಪಿಸಿ ಆ ಮಹಾತ್ಮ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ. ಸಂಗ್ರಾಮಗಳನ್ನು ಗೆದ್ದು, ಪ್ರಜೆಗಳನ್ನು ಪಾಲಿಸಿ, ಸೋಮವನ್ನು ಕುಡಿದು, ದ್ವಿಜಾಗ್ರರಿಗೆ ತರ್ಪಣೆಗಳನ್ನಿತ್ತು, ದಂಡನೀತಿಯನ್ನು ಧರಿಸಿ ಪ್ರಜೆಗಳನ್ನು ಪಾಲಿಸಿ, ಯುದ್ಧದಲ್ಲಿ ಅಸುನೀಗಿದ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ. ಸಂತರೂ ವಿಧ್ವಾಂಸರೂ ಆದ ಮನುಷ್ಯರು ಯಾರ ನಡತೆಯನ್ನು ಅರ್ಹರೀತಿಯಲ್ಲಿ ಶ್ಲಾಘಿಸುತ್ತಿರುವರೋ ಆ ಮಹಾತ್ಮನು ಸ್ವರ್ಗವನ್ನು ಗೆದ್ದು, ವೀರಲೋಕಗಳನ್ನು ಸೇರಿ, ಸಿದ್ಧಿಯನ್ನು ಪಡೆದು ಪುಣ್ಯಕೀರ್ತಿಯನ್ನೂ ಪಡೆದನು.”
ಧನಂಜಯನು ಕುಪಿತನಾಗಿರಲು, ದ್ವೈಪಾಯನನ ಮಾತನ್ನು ಕೇಳಿ ಕೌಂತೇಯ ಯುಧಿಷ್ಠಿರನು ವ್ಯಾಸನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದನು: “ಭೂಮಿಯ ಈ ರಾಜ್ಯವೂ ನಾನಾವಿಧದ ಭೋಗಗಳೂ ಇಂದು ನನ್ನ ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿಲ್ಲ. ಶೋಕವೇ ನನ್ನನ್ನು ಹಿಂಡುತ್ತಿದೆ. ಮುನೇ! ವೀರಪತಿಗಳಿಂದಲೂ, ಪುತ್ರರಿಂದಲೂ ವಿಹೀನರಾದ ಸ್ತ್ರೀಯರ ವಿಲಾಪಗಳಿಂದ ನನ್ನ ಮನಸ್ಸಿಗೆ ಶಾಂತಿಯೇ ದೊರೆಯದಂತಾಗಿದೆ.”
ಹೀಗೆ ಹೇಳಲು ಯೋಗಜ್ಞಾನಿಗಳಲ್ಲಿ ಶ್ರೇಷ್ಠ ಧರ್ಮಜ್ಞ ವೇದಪಾರಗ ವ್ಯಾಸನು ಮಹಾಪ್ರಾಜ್ಞ ಯುಧಿಷ್ಠಿರನಿಗೆ ಇಂತೆಂದನು: “ಕರ್ಮಮಾಡುವುದರಿಂದಾಗಲೀ ಚಿಂತಿಸುತ್ತಿರುವುದರಿಂದಾಗಲೀ ಬೇಕಾಗಿರುವುದು ಸಿಗುವುದಿಲ್ಲ. ಮನುಷ್ಯನಿಗೆ ಬೇಕಾದುದನ್ನು ಕೊಡುವವರು ಯಾರೂ ಇಲ್ಲ. ಪರ್ಯಾಯಯೋಗದಿಂದ ವಿಧಾತ್ರನು ವಿಹಿಸಿದುದನ್ನು ಎಲ್ಲವನ್ನೂ ಮನುಷ್ಯನು ಕಾಲ ಬಂದಾಗ ಪಡೆಯುತ್ತಾನೆ. ಬುದ್ಧಿಯಿಂದಾಗಲೀ, ಶಾಸ್ತ್ರಾಧ್ಯಯನದಿಂದಾಗಲೀ ಮನುಷ್ಯನು ಯೋಗವಿರದ ಕಾಲದಲ್ಲಿ ವಿಶೇಷ ಫಲವನ್ನು ಹೊಂದಲು ಸಾಧ್ಯವಿಲ್ಲ. ಕಾಲವು ಒದಗಿಬಂದಿತೆಂದರೆ ಮೂರ್ಖನೂ ಯಥೇಚ್ಛ ಐಶ್ವರ್ಯವನ್ನು ಪಡೆದುಕೊಳ್ಳುತ್ತಾನೆ. ಏಕೆಂದರೆ ಕಾರ್ಯಫಲಗಳಲ್ಲಿ ಕಾಲವೇ ವಿಶೇಷಪಾತ್ರವನ್ನು ವಹಿಸುತ್ತದೆ. ಯೋಗವಿಲ್ಲದಿರುವಾಗ ಶಿಲ್ಪವಾಗಲೀ, ಮಂತ್ರಗಳಾಗಲೀ, ಔಷಧಿಗಳಾಗಲೀ ಫಲವನ್ನೀಯುವುದಿಲ್ಲ. ಆದರೆ ಇವೇ ಉತ್ತಮ ಯೋಗವಿರುವಾಗ ಕಾಲದ ಪ್ರೇರಣೆಯಿಂದ ಸಿದ್ಧಿಯುಂಟಾಗುತ್ತವೆ. ಕಾಲಕ್ಕೆ ಸರಿಯಾಗಿಯೇ ಭಿರುಗಾಳಿಯು ಬೀಸುತ್ತದೆ. ಕಾಲಕ್ಕೆ ತಕ್ಕಂತೆಯೇ ಮೋಡಗಳು ಮಳೆಯನ್ನು ಸುರಿಸುತ್ತವೆ. ಕಾಲಕ್ಕೆ ಸರಿಯಾಗಿಯೇ ಪದ್ಮಗಳು ಅರಳುತ್ತವೆ. ಕಾಲಕ್ಕೆ ತಕ್ಕಂತೆಯೇ ಅರಣ್ಯದ ವೃಕ್ಷಗಳು ಚಿಗುರಿ ಹುಲುಸಾಗುತ್ತವೆ. ಕಾಲಾನುಗುಣವಾಗಿ ರಾತ್ರಿಗಳು ಕಪ್ಪಾಗಿಯೂ ಬೆಳದಿಂಗಳಾಗಿಯೂ ಇರುತ್ತವೆ. ಕಾಲಕ್ಕೆ ತಕ್ಕಂತೆಯೇ ಚಂದ್ರನು ಪರಿಪೂರ್ಣಬಿಂಬನಾಗುತ್ತಾನೆ. ಅಕಾಲದಲ್ಲಿ ವೃಕ್ಷಗಳು ಪುಷ್ಪ-ಫಲಗಳನ್ನು ಪಡೆಯುವುದಿಲ್ಲ. ಅಕಾಲದಲ್ಲಿ ನದಿಗಳು ಪೂರ್ಣವೇಗದಲ್ಲಿ ಹರಿಯುವುದಿಲ್ಲ. ಪಕ್ಷಿಗಳಾಗಲೀ, ಸರ್ಪಗಳಾಗಲೀ, ಮೃಗಗಳಾಗಲೀ, ಆನೆಗಳಾಗಲೀ, ಪರ್ವತಗಳಲ್ಲಿ ವಾಸಿಸುವ ಮಹಾಮೃಗಗಳಾಗಲೀ ಅವುಗಳ ಕಾಲವು ಬಾರದೇ ಮದಿಸುವುದಿಲ್ಲ. ಸ್ತ್ರೀಯರು ತಮ್ಮ ಕಾಲವು ಬರದೇ ಗರ್ಭವನ್ನು ಧರಿಸುವುದಿಲ್ಲ. ಅಕಾಲದಲ್ಲಿ ಛಳಿ, ಸೆಖೆ ಮತ್ತು ಮಳೆಗಳಾಗುವುದಿಲ್ಲ. ಕಾಲ ಬಾರದೇ ಶಿಶುವು ಹುಟ್ಟುವುದಿಲ್ಲ. ಕಾಲ ಬಾರದೇ ಅದು ಮಾತನಾಡುವುದೂ ಇಲ್ಲ. ಕಾಲಬಾರದೇ ಅದು ಯೌವನವನ್ನು ಹೊಂದುವುದಿಲ್ಲ. ಹಾಗೆಯೇ ಕಾಲಬಾರದೇ ಅದು ಸಾಯುವುದೂ ಇಲ್ಲ. ಅಕಾಲದಲ್ಲಿ ಸೂರ್ಯನು ಉದಯಿಸುವುದಿಲ್ಲ ಮತ್ತು ಅಕಾಲದಲ್ಲಿ ಸೂರ್ಯನು ಅಸ್ತಂಗತನೂ ಆಗುವುದಿಲ್ಲ. ಅಕಾಲದಲ್ಲಿ ಚಂದ್ರನಾಗಲೀ ಮಹಾ ಅಲೆಗಳುಳ್ಳ ಸಮುದ್ರವಾಗಲೀ ವರ್ಧಿಸುವುದಿಲ್ಲ ಮತ್ತು ಕ್ಷೀಣಿಸುವುದೂ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ, ದುಃಖಾರ್ತನಾಗಿದ್ದ ರಾಜಾ ಸೇನಜಿತುವು ಹೇಳಿದ ಗೀತವನ್ನು ಉದಾಹರಿಸುತ್ತಾರೆ.
““ದುಸ್ತರವಾಗಿ ತಿರುಗುತ್ತಿರುವ ಕಾಲವು ಸರ್ವಮನುಷ್ಯರ ಮೇಲೂ ಪ್ರಭಾವಬೀರುತ್ತದೆ. ಸರ್ವಮಾನವರೂ ಕಾಲವು ಪರಿಪಕ್ವವಾಗಿ ಮರಣಹೊಂದುತ್ತಾರೆ. ಕೆಲವು ಮನುಷ್ಯರು ಕೆಲವರನ್ನು ಸಂಹರಿಸುತ್ತಾರೆ. ಸಂಹರಿಸಿದ ಅವರನ್ನೂ ಇನ್ನು ಕೆಲವರು ಸಂಹರಿಸುತ್ತಾರೆ. ಆದರೆ ಒಬ್ಬರು ಇನ್ನೊಬ್ಬರನ್ನು ಕೊಂದರೆನ್ನುವುದು ಒಂದು ಲೌಕಿಕವಾದ ಸಂಜ್ಞೆಯಾಗಿರುತ್ತದೆ. ನಿಜವಾಗಿ ನೋಡಿದರೆ ಯಾರೂ ಕೊಲ್ಲುವುದಿಲ್ಲ ಯಾರೂ ಕೊಲ್ಲಲ್ಪಡುವುದೂ ಇಲ್ಲ. ಕೊಲ್ಲುತ್ತಾರೆ ಎಂದು ಕೆಲವರು ಅಭಿಪ್ರಾಯಪಟ್ಟರೆ ಕೊಲ್ಲಲ್ಪಡಲಿಲ್ಲ ಎಂದು ಇತರರು ತಿಳಿದುಕೊಳ್ಳುತ್ತಾರೆ. ಸ್ವಭಾವತಃ ಪ್ರಾಣಿಗಳ ಹುಟ್ಟು ಮತ್ತು ಮರಣ ಇವೆರಡೂ ವಿಧಿವಿಹಿತವಾಗಿವೆ. ಧನವು ನಷ್ಟವಾಗಲೀ ಅಥವಾ ಪತ್ನಿಯಾಗಲೀ, ಪುತ್ರನಾಗಲೀ ಅಥವಾ ಪಿತನಾಗಲೀ ಮೃತನಾಗಲೀ “ಅಯ್ಯೋ ಕಷ್ಟವೇ!” ಎಂದು ಯೋಚಿಸಿ, ಶೋಕವನ್ನು ಕಡಿಮೆಮಾಡಿಕೊಳ್ಳಬೇಕು. ಆದರೆ ನೀನು ಏಕೆ ಹೀಗೆ ಮೂಢನಾಗಿ ಶೋಕವನ್ನು ಹೆಚ್ಚಿಸಿಕೊಳ್ಳುತ್ತಿರುವೆ? ದುಃಖಪಡುವುದರಿಂದ ದುಃಖವೂ ಮತ್ತು ಭಯಪಡುವುದರಿಂದ ಭಯವೂ ಹೆಚ್ಚಾಗುತ್ತದೆ. ನನಗೆ ನಾನೂ ಮತ್ತು ಈ ಸರ್ವ ಭೂಮಿಯೂ ಹೇಗೆ ನನ್ನದಲ್ಲವೋ ಹಾಗೆ ಅನ್ಯರ ದೇಹಗಳೂ, ರಾಜ್ಯಗಳೂ ಅವರದ್ದಲ್ಲ ಎಂದು ಕಾಣುವವನು ಹೀಗೆ ಮೋಹಪಡುವುದಿಲ್ಲ. ಶೋಕಪಡುವುದಕ್ಕೆ ಸಹಸ್ರಾರು ಕಾರಣಗಳೂ, ಹರ್ಷಿಸುವುದಕ್ಕೆ ನೂರಾರು ಕಾರಣಗಳೂ ಪ್ರತಿದಿನ ಮೂಢನನ್ನು ಕಾಡುತ್ತಿರುತ್ತವೆ. ಆದರೆ ಪಂಡಿತನನ್ನಲ್ಲ! ಹೀಗೆ ಪ್ರಿಯ-ಅಪ್ರಿಯ ಸಮಯಗಳು ಮತ್ತು ದುಃಖ-ಸುಖಗಳು ಜೀವಿಗೆ ಕಾಲಾನುಗುಣವಾಗಿ ಒಂದರ ನಂತರ ಇನ್ನೊಂದು ತಿರುಗಿ ತಿರುಗಿ ಬರುತ್ತಲೇ ಇರುತ್ತವೆ. ಜೀವಿಗಳಿಗೆ ದುಃಖವೇ ಇರುವುದೇ ಹೊರತು ಸುಖವೆನ್ನುವುದು ಇಲ್ಲ. ಆದುದರಿಂದಲೇ ಅಡಿಗಡಿಗೆ ದುಃಖವೇ ಆಗುತ್ತಿರುತ್ತದೆ. ಆಸೆಗಳಿಂದಲೇ ದುಃಖವು ಹುಟ್ಟುತ್ತದೆ. ದುಃಖದ ವಿನಾಶವೇ ಸುಖ. ಸುಖದ ನಂತರ ದುಃಖ ಮತ್ತು ದುಃಖದ ನಂತರ ಸುಖ. ದುಃಖವು ಯಾವಾಗಲೂ ಇರುವುದಿಲ್ಲ ಮತು ಸುಖವೂ ಯಾವಾಗಲೂ ಇರುವುದಿಲ್ಲ. ಏಕೆಂದರೆ ಸುಖದ ಅಂತ್ಯವೇ ದುಃಖ ಮತ್ತು ದುಃಖದ ಅಂತ್ಯವೇ ಸುಖ. ಆದುದರಿಂದ ಇವೆರಡನ್ನೂ ತ್ಯಜಿಸಿ ಇಂದು ಶಾಶ್ವತ ಸುಖವನ್ನು ಬಯಸು. ಯಾವಕಾರಣದಿಂದ ಶೋಕವಾಗಲೀ, ತಾಪವಾಗಲೀ, ದುಃಖವಾಗಲೀ, ಆಯಾಸವಾಗಲೀ ಉಂಟಾಗುತ್ತದೆಯೋ ಅದರ ಮೂಲವನ್ನೇ, ಅದು ಶರೀರದ ಒಂದು ಅಂಗವಾಗಿದ್ದರೂ, ಕಿತ್ತೊಗೆಯಬೇಕು. ಸುಖವಾಗಲೀ, ದುಃಖವಾಗಲೀ, ಪ್ರಿಯವಾದದ್ದಾಗಲೀ, ಅಪ್ರಿಯವಾದದ್ದಾಗಲೀ ಅವುಗಳ ಬಂದಹಾಗೆಯೇ, ಸೋಲನ್ನಪ್ಪಿಕೊಳ್ಳದೇ, ಸಂತೋಷದಿಂದ ಅನುಭವಿಸಬೇಕು. ನಿನ್ನ ಪತ್ನಿಯರಿಗೆ ಅಥವಾ ಮಕ್ಕಳಿಗೆ ಸ್ವಲ್ಪವಾದರೂ ಅಪ್ರಿಯವಾದುದನ್ನು ಮಾಡು. ಆಗ ನೀನು ಯಾರು, ಯಾರಿಗೆ ಸೇರಿದವನು, ಯಾರಿಂದ ಇಲ್ಲಿಗೆ ಬಂದಿರುವೆ ಮತ್ತು ಹೇಗೆ ಬಂದಿರುವೆ ಎನ್ನುವುದನ್ನು ತಿಳಿದುಕೊಳ್ಳುತ್ತೀಯೆ. ಅತ್ಯಂತ ಮೂಢರಾದವರು ಮತ್ತು ಅತ್ಯಂತ ಬುದ್ಧಿಶಾಲಿಗಳು ಮಾತ್ರ ಈ ಲೋಕದಲ್ಲಿ ಪರಮ ಸುಖವನ್ನು ಹೊಂದುತ್ತಾರೆ. ಮಧ್ಯವರ್ತಿಗಳು ಕ್ಲೇಶಪಡುತ್ತಲೇ ಇರುತ್ತಾರೆ.”
“ಯುಧಿಷ್ಠಿರ! ಭೂತ-ಭವಿಷ್ಯಗಳನ್ನೂ ಲೋಕಗಳ ಧರ್ಮವನ್ನೂ, ಸುಖ-ದುಃಖಗಳನ್ನೂ ತಿಳಿದಿದ್ದ ಮಹಾಪ್ರಾಜ್ಞ ಸೇನಜಿತುವು ಹೀಗೆ ಹೇಳಿದನು: ಇತರರ ದುಃಖವನ್ನು ನೋಡಿ ಖುಷಿಪಡುವವನಿಗೆ ಸುಖವೆಂಬುದೇ ಇರುವುದಿಲ್ಲ. ದುಃಖಗಳಿಗೆ ಕೊನೆಯೆಂಬುದೇ ಇಲ್ಲ. ಒಂದರ ಮೇಲೆ ಒಂದು ದುಃಖವು ಬರುತ್ತಲೇ ಇರುತ್ತದೆ. ಸುಖ-ದುಃಖಗಳೂ, ಲಾಭ-ನಷ್ಟಗಳೂ, ಜನನ-ಮರಣಗಳು, ಉತ್ಪತ್ತಿ-ವಿನಾಶಗಳೂ ಒಂದಾದ ಮೇಲೆ ಇನ್ನೊಂದರಂತೆ ಪರ್ಯಾಯವಾಗಿ ಜೀವಿಗಳಿಗೆ ತಟ್ಟುತ್ತಲೇ ಇರುತ್ತವೆ. ಆದುದರಿಂದ ಧೀರನಾದವನು ಇವುಗಳ ಕುರಿತು ಹರ್ಷಿಸುವುದೂ ಇಲ್ಲ, ಕುಪಿತನಾಗುವುದೂ ಇಲ್ಲ. ಯುದ್ಧವೇ ಯಜ್ಞ ದೀಕ್ಷೆಯೆಂದೂ, ರಾಷ್ಟ್ರವನ್ನು ದಂಡನೀತಿಯಿಂದ ಪಾಲಿಸುವುದನ್ನು ಯೋಗವೆಂದೂ, ಯಜ್ಞಗಳಲ್ಲಿ ಸಂಪತ್ತನ್ನು ದಕ್ಷಿಣೆಯಾಗಿ ಕೊಡುವುದನ್ನು ತ್ಯಾಗವನ್ನೂ ರಾಜರಿಗೆ ಪಾವನವಾದುವೆಂದು ಹೇಳುತ್ತಾರೆ. ಅವುಗಳ ಸಂಪೂರ್ಣ ಜ್ಞಾನವಿರಬೇಕು. ಬುದ್ಧಿಪೂರ್ವಕವಾಗಿ ಸುನೀತಿಯಿಂದ ತನ್ನದೆನ್ನುವುದನ್ನು ತ್ಯಜಿಸಿ ರಾಷ್ಟ್ರವನ್ನು ರಕ್ಷಿಸುತ್ತಾ, ಯಜ್ಞಶೀಲನಾಗಿ ಧರ್ಮವನ್ನು ರಕ್ಷಿಸಲು ಸರ್ವ ಲೋಕಗಳನ್ನೂ ಚರಿಸುವ ಮಹಾತ್ಮನು ದೇಹಾವಸಾನದ ನಂತರ ದೇವಲೋಕದಲ್ಲಿ ಮೋದಿಸುತ್ತಾನೆ. ಸಂಗ್ರಾಮಗಳನ್ನು ಗೆದ್ದು, ರಾಷ್ಟ್ರವನ್ನು ಪಾಲಿಸುತ್ತಾ, ಸೋಮವನ್ನು ಕುಡಿಯುತ್ತಾ, ಪ್ರಜೆಗಳನ್ನು ಅಭಿವೃದ್ಧಿಗೊಳಿಸುತ್ತಾ, ದಂಡಯುಕ್ತನಾಗಿ ಪ್ರಜೆಗಳನ್ನು ಪಾಲಿಸುತ್ತಾ ಯುದ್ಧದಲ್ಲಿ ಮಡಿದ ರಾಜನು ದೇವಲೋಕದಲ್ಲಿ ಮೋದಿಸುತ್ತಾನೆ. ಸಂಪೂರ್ಣ ವೇದಗಳನ್ನು ಪಡೆದು, ಶಾಸ್ತ್ರಗಳನ್ನು ಅಧ್ಯಯನ ಮಾಡಿ, ರಾಜ್ಯವನ್ನು ಚೆನ್ನಾಗಿ ಪಾಲಿಸುತ್ತಾ ಚಾತುರ್ವರ್ಣ್ಯವನ್ನು ಸ್ಥಾಪಿಸಿ, ಸ್ವಧರ್ಮದಲ್ಲಿಯೇ ಪೂತಾತ್ಮನಾಗಿರುವ ರಾಜನು ದೇವಲೋಕದಲ್ಲಿ ಮೋದಿಸುತ್ತಾನೆ. ಸ್ವರ್ಗಸ್ಥನಾದಮೇಲೂ ಯಾರ ನಡತೆಗಳನ್ನು ಮಾನವರು, ಪೌರಜಾನಪದರು ಮತ್ತು ಅಮಾತ್ಯರು ನಮಸ್ಕರಿಸುತ್ತಾರೋ ಆ ರಾಜನೇ ರಾಜಸತ್ತಮನು.”
ಯುಧಿಷ್ಠಿರನು ಹೇಳಿದನು: “ಬಾಲಕ ಅಭಿಮನ್ಯು, ದ್ರೌಪದಿಯ ಐವರು ಮಕ್ಕಳು, ಧೃಷ್ಟದ್ಯುಮ್ನ, ಮಹೀಪತಿಗಳಾದ ದ್ರುಪದ-ವಿರಾಟರು, ಧರ್ಮಜ್ಞ ಪಾರ್ಥಿವ ವಸುಷೇಣ[10]-ಧೃಷ್ಟಕೇತುಗಳು, ಹಾಗೆಯೇ ನಾನಾದೇಶಗಳಿಂದ ಬಂದಿದ್ದ ಅನ್ಯ ನರೇಂದ್ರರು ಯುದ್ಧದಲ್ಲಿ ಮಡಿದುದರಿಂದ ಜ್ಞಾತಿಘಾತಿಕನಾದ ನನ್ನನ್ನು ಶೋಕವು ಬಿಡುತ್ತಿಲ್ಲ. ರಾಜ್ಯಲೋಭದಿಂದಾಗಿ ನಾನೇ ಈ ಉಗ್ರಕರ್ಮವನ್ನೆಸಗಿದೆನು! ಯಾರ ತೊಡೆಯಮೇಲೆ ಹೊರಳಾಡಿ ಆಡುತ್ತಿದ್ದೆನೋ ಆ ಗಾಂಗೇಯನನ್ನೇ ನಾನು ರಾಜಲೋಭದಿಂದ ಕೆಳಗುರುಳಿಸಿದೆನು! ಮುದಿಸಿಂಹದಂತಿದ್ದ, ಉನ್ನತ ಕಾಯ ನರಶ್ರೇಷ್ಠ ಪಿತಾಮಹ ಭೀಷ್ಮನು ಅರ್ಜುನನ ವಜ್ರಸದೃಶ ಬಾಣಗಳಿಂದ ಪೀಡಿತನಾಗಿ ಕಂಪಿಸುತ್ತಿರುವಾದ ಶಿಖಂಡಿಯು ಅವನನ್ನು ಎವೆಯಿಕ್ಕದೇ ನೋಡುತ್ತಿದ್ದನು. ಆಗ ಅರ್ಜುನನ ಬಾಣಗಳಿಂದ ಶರೀರಾದ್ಯಂತ ಮುಚ್ಚಲ್ಪಟ್ಟ ನನ್ನ ಆ ನರಸಿಂಹ ಪಿತಾಮಹನನ್ನು ನೋಡಿ ನನ್ನ ಮನಸ್ಸು ಬಹಳವಾಗಿ ವ್ಯಥೆಗೊಂಡಿತ್ತು. ರಥದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಶರಗಳಿಂದ ಪೀಡಿತನಾಗಿ ಅವನು ಕುಸಿಯುತ್ತಿರಲು ಮತ್ತು ಪರ್ವತದಂತೆ ಕಂಪಿಸುತ್ತಿರಲು ನನಗೆ ಮೂರ್ಛೆಯೇ ಬಂದಂತಾಗಿತ್ತು. ಯಾವ ಕೌರವ್ಯನು ಬಾಣ-ಧನುಷ್ಪಾಣಿಯಾಗಿ ಕುರುಕ್ಷೇತ್ರದ ಮಹಾಯುದ್ಧದಲ್ಲಿ ಭಾರ್ಗವ ಪರುಶುರಾಮನೊಡನೆ ಅನೇಕ ದಿನಗಳು ಹೋರಾಡಿದನೋ ಆ ಮಹಾವೀರ ಉಗ್ರಾಯುಧ ರಾಜಾ ಜಕ್ರವರ್ತಿ ದುರಾಸದ ನದೀಸುತನು ವಾರಾಣಸಿಯಲ್ಲಿ ಕನ್ಯಾರ್ಥಿಗಳಾಗಿ ಕ್ಷತ್ರಿಯ ರಾಜರೆಲ್ಲಾ ಸೇರಿದ್ದಾಗ ಯುದ್ಧದಲ್ಲಿ ಒಂದೇ ರಥದಿಂದ ಶಸ್ತ್ರಪ್ರತಾಪದಿಂದ ಸುಟ್ಟುಹಾಕಿದ್ದನು. ಅವನನ್ನೇ ನಾನು ಯುದ್ಧದಲ್ಲಿ ಕೊಲ್ಲಿಸಿದೆ! ತನಗೇ ಮೃತ್ಯುವಾಗಿದ್ದ ಪಾಂಚಾಲ್ಯ ಶಿಖಂಡಿಯನ್ನು ಸ್ವಯಂ ತಾನೇ ರಕ್ಷಿಸಿಕೊಂಡು ಬಂದಿದ್ದ ಅವನನ್ನು ಅರ್ಜುನನು ಬಾಣಗಳಿಂದ ಕೆಳಗುರುಳಿಸಿದನು. ಮುನಿಸತ್ತಮ! ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಅವನು ಬೀಳುತ್ತಲೇ ಉಗ್ರ ಜ್ವರವು ನನ್ನನ್ನು ಆವರಿಸಿತು. ಬಾಲ್ಯದಲ್ಲಿ ಯಾರಿಂದ ಬೆಳೆಯಿಸಲ್ಪಟ್ಟೆವೋ ಮತ್ತು ಯಾರಿಂದ ಪರಿರಕ್ಷಿತಗೊಂಡೆವೋ ಅವನನ್ನೇ ರಾಜ್ಯಲೋಭದಿಂದ ನಾನು ಅಲ್ಪಕಾಲವೇ ಭೋಗಿಸಬಲ್ಲ ಈ ರಾಜ್ಯಕ್ಕಾಗಿ ಸಂಹರಿಸಿದೆನು. ಆದುದರಿಂದ ನಾನು ಪಾಪಿ, ಗುರುಘಾತಿ ಮತ್ತು ಮೂಢನಾಗಿದ್ದೇನೆ. ಮಹೇಷ್ವಾಸ, ಸರ್ವಪಾರ್ಥಿವರಿಂದ ಪೂಜಿಸಲ್ಪಡುತ್ತಿದ್ದ ಆಚಾರ್ಯನಿಗೆ ರಣರಂಗದಲ್ಲಿ ಅವನ ಮಗನ ಸಂಬಂಧದಲ್ಲಿ ಪಾಪಿಯಾದ ನಾನು ಸುಳ್ಳನ್ನೇ ಹೇಳಿದೆ. ಆ ಸಮಯದಲ್ಲಿ ಗುರುವು ನನ್ನೊಡನೆ “ರಾಜನ್! ನನ್ನ ಮಗನು ಜೀವಿಸಿರುವನೋ ಇಲ್ಲವೋ ಸತ್ಯವನ್ನೇ ನುಡಿ!” ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ನನ್ನ ದೇಹವೇ ಸುಡುತ್ತಿದೆ. ಸತ್ಯವನ್ನು ನಿರ್ಣಯಿಸುವ ಸಲುವಾಗಿ ವಿಪ್ರನು ನನ್ನಲ್ಲಿ ಹೀಗೆ ಪ್ರಶ್ನಿಸಿದ್ದನು. ನಾನು ಆನೆಯನ್ನು ನೆಪವಾಗಿ ಮಾಡಿಕೊಂಡು ಸುಳ್ಳನಾಗಿ ನಡೆದುಕೊಂಡೆನು. ರಾಜ್ಯಕ್ಕಾಗಿ ಅತ್ಯಂತ ಲೋಭಿಯಾಗಿದ್ದ ಪಾಪಿ ಗುರುಘಾತಿ ನಾನು ಸತ್ಯವೆಂಬ ನನ್ನ ಅಂಗಿಯನ್ನು ತೆಗೆದುಹಾಕಿ ಯುದ್ಧದಲ್ಲಿ ಆನೆಯು ಕೆಳಗುರುಳಲು ಅಶ್ವತ್ಥಾಮನು ಹತನಾದನೆಂದು ಗುರುವಿಗೆ ಹೇಳಿದೆನು. ಆ ದಾರುಣ ಕರ್ಮವನ್ನೆಸಗಿದ ನಾನು ಯಾವ ಲೋಕಗಳಿಗೆ ಹೋಗುತ್ತೇನೋ! ಸಮರದಲ್ಲಿ ಹಿಂದೆಸರಿಯದೇ ಇದ್ದ ಉಗ್ರನಾಗಿದ್ದ ಹಿರಿಯಣ್ಣ ಕರ್ಣನನ್ನು ಕೊಲ್ಲಿಸಿದೆನು. ನನಗಿಂತಲೂ ಹೆಚ್ಚು ಪಾಪಕೃತ್ಯಗಳನ್ನು ಮಾಡಿದವರು ಬೇರೆ ಯಾರಾದರೂ ಇದ್ದಾರೆಯೇ? ಗಿರಿಯಲ್ಲಿ ಹುಟ್ಟಿದ ಸಿಂಹದಂತಿದ್ದ ಬಾಲಕ ಅಭಿಮನ್ಯುವನ್ನು ನಾನು ರಾಜ್ಯಲುಬ್ಧನಾಗಿ ದ್ರೋಣನಿಂದ ರಕ್ಷಿತಗೊಂಡಿದ್ದ ವಾಹಿನಿಯನ್ನು ಪ್ರವೇಶಿಸಲು ಬಿಟ್ಟೆನು! ಅಂದಿನಿಂದ ನಾನು ಭ್ರೂಣಹತ್ಯೆಯನ್ನು ಮಾಡಿದ ಪಾಪಿಯಂತೆ ಬೀಭತ್ಸುವನ್ನಾಗಲೀ ಪುಂಡರೀಕಾಕ್ಷ ಕೃಷ್ಣನನ್ನಾಗಲೀ ಕಣ್ಣೆತ್ತಿ ನೋಡಲೂ ಅಸಮರ್ಥನಾಗಿದ್ದೇನೆ. ಐದು ಪರ್ವತಗಳನ್ನು ಕಳೆದುಕೊಂಡ ಪೃಥ್ವಿಯಂತೆ ಐದು ಪುತ್ರರನ್ನು ಕಳೆದುಕೊಂಡ ದ್ರೌಪದಿಯ ದುಃಖವನ್ನು ನೋಡಿ ನಾನೂ ಕೂಡ ಶೋಕಿಸುತ್ತಿದ್ದೇನೆ. ಆದುದರಿಂದ ನಾನು ಅಪರಾಧಿಯೂ ಪೃಥ್ವಿಯನ್ನು ನಾಶಪಡೆಸಿದ ಪಾಪಿಯೂ ಆಗಿದ್ದೇನೆ. ಅದಕ್ಕಾಗಿ ನಾನು ಇಲ್ಲಿಯೇ ಕುಳಿತುಕೊಂಡು ಈ ಶರೀರವನ್ನು ಶೋಷಿಸಿಬಿಡುತ್ತೇನೆ. ಗುರುಘಾತಿಯಾದ ನಾನು ಇಂದು ಪ್ರಾಯೋಪವೇಶವನ್ನು ಮಾಡಿದ್ದೇನೆಂದು ತಿಳಿಯಿರಿ. ಇನ್ನೊಂದು ಜನ್ಮದಲ್ಲಿಯಾದರೂ ನಾನು ಕುಲಾಂತಕನಾಗದೇ ಇರಲಿ. ನಾನೂ ಇನ್ನು ಯಾವುದೇ ಕಾರಣಕ್ಕೂ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. ಇಲ್ಲಿಯೇ ಕುಳಿತು ಪ್ರಿಯ ಪ್ರಾಣಗಳನ್ನು ಬಿಡುತ್ತೇನೆ. ನಿಮಗಿಷ್ಟಬಂದಲ್ಲಿಗೆ ಹೋಗಲು ಅನುಮತಿಯನ್ನು ಕೊಡುತ್ತಿದ್ದೇನೆ. ನೀವೆಲ್ಲರೂ ಪ್ರಸನ್ನರಾಗಿ ಈ ಶರೀರವನ್ನು ತ್ಯಜಿಸಲು ನನಗೆ ಅನುಮತಿಯನ್ನು ನೀಡಿ!”
ಬಂಧುಶೋಕದಿಂದ ವಿಹ್ವಲನಾಗಿ ಹೀಗೆ ಮಾತನಾಡುತ್ತಿದ್ದ ಪಾರ್ಥನಿಗೆ ಹೀಗೆಂದೂ ಮಾಡಬಾರದೆಂದು ಹೇಳುತ್ತಾ ಮುನಿಸತ್ತಮನು ಅವನನ್ನು ತಡೆದನು. “ಮಹಾರಾಜ! ಉಕ್ಕಿಬರುತ್ತಿರುವ ಅಲೆಗಳಂತೆ ಈ ರೀತಿ ನೀನು ಶೋಕಿಸಕೂಡದು. ಆದುದೆಲ್ಲವೂ ಒಳ್ಳೆಯದಾಯಿತೆಂದೇ ನಾನು ನಿನಗೆ ಪುನಃ ಹೇಳುತ್ತೇನೆ. ಹುಟ್ಟಿದ ಪ್ರಾಣಿಗಳಿಗೆ ಸೇರುವಿಕೆಯು ಅಗಲಿಕೆಯಿಂದಲೇ ಅಂತ್ಯವಾಗುತ್ತದೆ ಎನ್ನುವುದು ನಿಶ್ಚಯವಾದುದು. ನೀರಿನ ಮೇಲಿನ ಗುಳ್ಳೆಗಳಂತೆ ಹುಟ್ಟುತ್ತಿರುತ್ತಾರೆ ಮತ್ತು ಸಾಯುತ್ತಿರುತ್ತಾರೆ. ಕೂಡಿಟ್ಟ ಐಶ್ವರ್ಯವು ವಿನಾಶದೊಂದಿಗೆ ಕೊನೆಗೊಳ್ಳುತ್ತವೆ. ಸೇರುವಿಕೆಯು ಅಗಲುವಿಕೆಯಿಂದ ಮತ್ತು ಜನನವು ಮರಣದಿಂದ ಪರ್ಯಾವಸಾನಹೊಂದುತ್ತದೆ. ಆಲಸಿಗೆ ಸುಖವೂ ದುಃಖವಾಗಿ ಪರಿಣಮಿಸುತ್ತದೆ ಮತ್ತು ದಕ್ಷನಾದವನಿಗೆ ದುಃಖವೂ ಸುಖೋದಯಕ್ಕೆ ಕಾರಣವಾಗುತ್ತದೆ. ಐಶ್ವರ್ಯ, ಲಕ್ಷ್ಮಿ, ಲಜ್ಜೆ, ಧೈರ್ಯ ಮತ್ತು ಕೀರ್ತಿಗಳು ದಕ್ಷನಾದವನಲ್ಲಿ ವಾಸಿಸುತ್ತವೆಯೇ ಹೊರತು ಆಲಸಿಯಲ್ಲಲ್ಲ. ಸ್ನೇಹಿತರು ಸುಖವನ್ನೀಡಲು ಸಮರ್ಥರಲ್ಲ. ಶತ್ರುಗಳು ದುಃಖವನ್ನು ನೀಡಲೂ ಸಮರ್ಥರಲ್ಲ. ಪ್ರಜೆಗಳು ಸಂಪತ್ತನ್ನು ನೀಡಲು ಸಮರ್ಥರಲ್ಲಿ ಮತ್ತು ಧನವು ಸುಖವನ್ನು ನೀಡಲು ಸಮರ್ಥವಿಲ್ಲ. ಬ್ರಹ್ಮನು ಯಾವ ಕರ್ಮಕ್ಕೆಂದು ನಿನ್ನನ್ನು ಸೃಷ್ಟಿಸಿರುವನೋ ಅದನ್ನೇ ಮಾಡು. ಅದರಿಂದಲೇ ನಿನಗೆ ಸಿದ್ಧಿಯಾಗುತ್ತದೆ. ಏಕೆಂದರೆ ನೀನು ಮಾಡಬೇಕಾದ ಕರ್ಮಗಳ ಮೇಲೆ ನಿನಗೆ ಅಧಿಕಾರವಿಲ್ಲ!”
ಜ್ಞಾತಿಶೋಕದಿಂದ ತಪಿಸುತ್ತಾ ಪ್ರಾಣಗಳನ್ನೇ ತೊರೆಯಲು ಸಿದ್ಧನಾಗಿದ್ದ ಪಾಂಡುಪುತ್ರರ ಜ್ಯೇಷ್ಠ ಯುಧಿಷ್ಠಿರನ ಶೋಕವನ್ನು ನೀಗಿಸಲು ವ್ಯಾಸನು ಹೀಗೆ ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಅಶ್ಮಗೀತವೆನ್ನುವ ಪುರಾತನ ಇತಿಹಾಸವೊಂದನ್ನು ಕೇಳು. ಹಾಗೆಯೇ ನೀನೂ ಕೂಡ ಶೋಕವನ್ನು ತೊರೆ! ಎದ್ದೇಳು! ಹರ್ಷವನ್ನು ತಾಳು! ಕ್ಷಾತ್ರಧರ್ಮದಿಂದ ಮಹಿಯನ್ನು ಗೆದ್ದ ನೀನು ಅದನ್ನು ಭೋಗಿಸು! ವಿಷಾದಿಸಬೇಡ!”
ಕೌಂತೇಯ ಧರ್ಮಪುತ್ರ ಯುಧಿಷ್ಠಿರನು ಸುಮ್ಮನೇ ಕುಳಿತುಕೊಂಡಿರಲು ಗುಡಾಕೇಶ ಪಾಂಡವನು ಹೃಷೀಕೇಶನಿಗೆ ಇಂತೆಂದನು: “ಮಾಧವ! ಜ್ಞಾತಿಶೋಕದಿಂದ ಸಂತಪ್ತನಾಗಿರುವ ಧರ್ಮರಾಜ ಪರಂತಪನು ಈ ಶೋಕಸಾಗರದಲ್ಲಿ ಮುಳುಗಿಹೋಗಿದ್ದಾನೆ. ಅವನಿಗೆ ಸಮಾಧಾನ ಹೇಳು! ನಾವೆಲ್ಲರೂ ಪುನಃ ಸಂಶಯಕ್ಕೆ ಸಿಲುಕಿದ್ದೇವೆ. ಈ ಶೋಕವನ್ನು ಹೋಗಲಾಡಿಸಬೇಕು!”
ಕೃಷ್ಣ ವಾಕ್ಯ
ಮಹಾತ್ಮ ವಿಜಯನು ಹೀಗೆ ಹೇಳಲು ಅಚ್ಯುತ ಗೋವಿಂದನು ತಿರುಗಿ ರಾಜನಿಗೆ ಅಭಿಮುಖನಾಗಿ ಕುಳಿತನು. ಧರ್ಮರಾಜನು ಕೇಶವನ ಮಾತನ್ನು ಯಾವಾಗಲೂ ಉಲ್ಲಂಘಿಸಿದವನೇ ಅಲ್ಲ. ಏಕೆಂದರೆ ಬಾಲ್ಯದಿಂದಲೂ ಅರ್ಜುನನಿಗಿಂತ ಅಧಿಕನಾಗಿ ಗೋವಿಂದನ ಮೇಲೆಯೇ ಪ್ರೀತಿಯಿದ್ದಿತು. ಆ ಮಹಾಬಾಹು ಶೌರಿಯು ಯುಧಿಷ್ಠಿರನ ಶೈಲಸ್ತಂಭದಂತಿದ್ದ ಚಂದನಭೂಷಿತ ಭುಜಗಳನ್ನು ಹಿಡಿದು ವಿನೋದದಿಂದ ಮಾತನಾಡತೊಡಗಿದನು. ಸುಂದರ ಹಲ್ಲುಗಳಿಂದಲೂ ಸುಂದರ ಕಣ್ಣುಗಳಿಂದಲೂ ಕೂಡಿದ್ದ ಅವನ ಮುಖವು ಸೂರ್ಯೋದಯದ ಸಮಯದಲ್ಲಿ ಸಂಪೂರ್ಣವಾಗಿ ಅರಳಿದ ಕಮಲದಂತೆ ಪ್ರಕಾಶಿಸುತ್ತಿತ್ತು. “ಪುರುಷವ್ಯಾಘ್ರ! ಶೋಕಿಸಬೇಡ! ಶೋಕವು ನಿನ್ನ ಶರೀರವನ್ನೇ ಶೋಷಿಸುತ್ತಿದೆ. ರಣರಂಗದಲ್ಲಿ ಹತರಾಗಿರುವವರು ಪುನಃ ನಿನಗೆ ಸುಲಭದಲ್ಲಿ ದೊರಕುವವರಲ್ಲ! ಸ್ವಪ್ನದಲ್ಲಿ ಪಡೆದುಕೊಂಡ ಧನವು ಎಚ್ಚರವಾದೊಡನೆಯೇ ಇಲ್ಲವಾಗಿಬಿಡುವಂತೆ ಮಹಾರಣದಲ್ಲಿ ವಿನಾಶಹೊಂದಿರುವ ಕ್ಷತ್ರಿಯರು ಪುನಃ ದೊರಕಲಾರರು. ರಣಶೋಭಿಗಳಾಗಿದ್ದ ಆ ಎಲ್ಲ ಶೂರರೂ ಯುದ್ಧಕ್ಕೆ ಅಭಿಮುಖರಾಗಿಯೇ ಪ್ರಾಣಬಿಟ್ಟಿರುವರು. ಅವರಲ್ಲಿ ಯಾರೂ ಬೆನ್ನುಹಾಕಿ ಅಥವಾ ಪಲಾಯನಮಾಡಿ ಕೆಳಗುರುಳಲಿಲ್ಲ. ಆ ವೀರರೆಲ್ಲರೂ ಮಹಾಹವದಲ್ಲಿ ಯುದ್ಧಮಾಡಿ ತಮ್ಮ ಪ್ರಾಣಗಳನ್ನು ತೊರೆದಿದ್ದಾರೆ. ಶಸ್ತ್ರಗಳಿಂದ ಪವಿತ್ರರಾಗಿ ಸ್ವರ್ಗವನ್ನು ಪಡೆದಿದ್ದಾರೆ. ಅವರ ಕುರಿತು ಶೋಕಿಸಬಾರದು. ಇದಕ್ಕೆ ಸಂಬಂಧಿಸಿದಂತೆ ಈ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ.” ಅನಂತರ ಕೃಷ್ಣನು ಯುಧಿಷ್ಠಿರನಿಗೆ ಷೋಡಶ-ರಾಜಕೀಯೋಽಪಖ್ಯಾನವನ್ನು ತಿಳಿಸಿದನು. ಆ ಆಖ್ಯಾನದ ಪಾತ್ರನಾಗಿದ್ದ ನಾರದನೂ ಯುಧಿಷ್ಠಿರನಿಗೆ “ಕೇಶವ ಮತ್ತು ಮಹಾತಪಸ್ವಿ ವ್ಯಾಸರು ಹೇಳಿದಂತೆ ನೀನೂ ಕೂಡ ನಿನ್ನಲ್ಲಿ ಉಂಟಾಗಿರುವ ಈ ಶೋಕದಿಂದ ಹೊರಬಾ! ಪಿತೃಪಿತಾಮಹರ ಈ ರಾಜ್ಯದಲ್ಲಿ ಅಭಿಷಿಕ್ತನಾಗಿ ರಾಜ್ಯಭಾರನಡೆಸು. ಪುಣ್ಯಕರವಾದ ಮಹಾ ಯಜ್ಞ-ಇಷ್ಟಿಗಳಿಂದ ನಿನಗಿಷ್ಟವಾದ ಲೋಕಗಳನ್ನು ಪಡೆಯುತ್ತೀಯೆ!” ಎಂದನು.
ಶೋಕಿಸುತ್ತಾ ಸುಮ್ಮನೇ ಕುಳಿತಿದ್ದ ರಾಜಾ ಯುಧಿಷ್ಠಿರನಿಗೆ ಧರ್ಮತತ್ತ್ವಜ್ಞ ತಪಸ್ವೀ ಕೃಷ್ಣದ್ವೈಪಾಯನನು ಇಂತೆಂದನು: “ರಾಜೀವಲೋಚನ! ಪ್ರಜೆಗಳನ್ನು ಪಾಲಿಸುವುದು ರಾಜರ ಧರ್ಮ. ನಿತ್ಯವೂ ಧರ್ಮವನ್ನು ಅನುಸರಿಸುವವನೇ ಲೋಕದಲ್ಲಿ ಧರ್ಮದ ಪ್ರಮಾಣನಾಗಿರುತ್ತಾನೆ. ಪಿತೃ-ಪಿತಾಮಹರ ದಾರಿಯನ್ನು ಅನುಸರಿಸು. ಬ್ರಾಹ್ಮಣರ ನಿತ್ಯ ಧರ್ಮವೇನೆನ್ನುವುದನ್ನು ವೇದವೇ ನಿಶ್ಚಯಿಸಿದೆ. ಅದರ ಕುರಿತಾದ ಪ್ರಮಾಣಗಳು ಶಾಶ್ವತವಾಗಿ ವೇದದಲ್ಲಿವೆ. ಬ್ರಾಹ್ಮಣದ ಧರ್ಮವೆಲ್ಲವನ್ನೂ ಕ್ಷತ್ರಿಯನು ರಕ್ಷಿಸುತ್ತಾನೆ. ಯಾವ ಮನುಷ್ಯನು ವಿಷಯಾಸಕ್ತನಾಗಿ ಬ್ರಾಹ್ಮಣರ ಧರ್ಮವನ್ನು ಉಲ್ಲಂಘಿಸುತ್ತಾನೆಯೋ ಅಂಥಹ ಲೋಕಯಾತ್ರಾವಿಘಾತಕನನ್ನು ಕ್ಷತ್ರಿಯನು ಎರಡು ಬಾಹುಗಳಿಂದಲೂ ದಮನಮಾಡಬೇಕು. ಮೋಹವಶನಾಗಿ ಯಾರು ಪ್ರಮಾಣವಿರುವ ಧರ್ಮವನ್ನು ಪ್ರಮಾಣವಿಲ್ಲದ್ದು ಎಂದು ಸಾಧಿಸುತ್ತಾನೆಯೋ ಅವನು ಸೇವಕನೇ ಆಗಿರಲಿ, ಮಗನೇ ಆಗಿರಲಿ, ತಪಸ್ವಿಯೇ ಆಗಿರಲಿ, ಅಥವಾ ಬೇರೆ ಯಾರೇ ಆಗಿರಲಿ, ಸರ್ವ ಉಪಾಯಗಳಿಂದ ಆ ಪಾಪಿಯನ್ನು ದಮನಮಾಡಬೇಕು. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ರಾಜನು ದೋಷವನ್ನು ಹೊಂದುತ್ತಾನೆ. ನಶಿಸಿಹೋಗುತ್ತಿರುವ ಧರ್ಮವನ್ನು ಯಾವ ರಾಜನು ರಕ್ಷಿಸುವುದಿಲ್ಲವೋ ಅವನೂ ಕೂಡ ಧರ್ಮಹಂತಕನಾಗುತ್ತಾನೆ. ಸ್ವಧರ್ಮದಲ್ಲಿ ನಡೆದುಕೊಳ್ಳುತ್ತಿದ್ದ ನೀನು ಧರ್ಮಹಂತಕರನ್ನು, ಅವರ ಅನುಯಾಯಿಗಳೊಂದಿಗೆ, ಸಂಹರಿಸಿದ್ದೀಯೆ. ಇದಕ್ಕೆ ಏಕೆ ಶೋಕಿಸುತ್ತಿರುವೆ? ರಾಜನು ತನ್ನ ಶತ್ರುಗಳನ್ನು ಸಂಹರಿಸಬೇಕು ಮತ್ತು ಪ್ರಜೆಗಳನ್ನು ಧರ್ಮಪೂರ್ವಕವಾಗಿ ರಕ್ಷಿಸಬೇಕು!”
ಯುಧಿಷ್ಠಿರನು ಹೇಳಿದನು: “ತಪೋಧನ! ನೀನು ಸಮಗ್ರ ಧರ್ಮಗಳನ್ನೂ ಪ್ರತ್ಯಕ್ಷ್ಯವಾಗಿಯೇ ಕಾಣುತ್ತಿರುವಿರಿ. ನೀವು ಹೇಳುವ ಮಾತಿನಲ್ಲಿ ನನಗೆ ಸ್ವಲ್ಪವೂ ಶಂಕೆಯಿಲ್ಲ. ರಾಜ್ಯದ ಕಾರಣದಿಂದಾಗಿ ನಾನು ಅವಧ್ಯರಾದ ಅನೇಕರನ್ನು ಸಂಹರಿಸಿದ್ದೇನೆ. ಈ ಅಕಾರ್ಯದಿಂದಲೇ ನಾನು ಸುಡುತ್ತಿದ್ದೇನೆ. ತಪಿಸುತ್ತಿದ್ದೇನೆ.”
ವ್ಯಾಸ ವಾಕ್ಯ
ವ್ಯಾಸನು ಹೇಳಿದನು: “ಭಾರತ! ಆಗಿಹೋದುದಕ್ಕೆ ಈಶ್ವರನೇ ಕರ್ತನಿರಬಹುದು ಅಥವಾ ಪುರುಷನೇ ಕರ್ತನಿರಬಹುದು. ಅದು ಆಕಸ್ಮಿಕವಾಗಿ ಆದುದಾಗಿರಬಹುದು ಅಥವಾ ಮಾಡಿದ ಕರ್ಮಗಳ ಫಲವೇ ಆಗಿರಬಹುದು ಎಂದು ಸ್ಮೃತಿಗಳು ಹೇಳುತ್ತವೆ. ಈಶ್ವರನ ನಿಯೋಗದಂತೆಯೇ ಮನುಷ್ಯನು ಒಳ್ಳೆಯ-ಕೆಟ್ಟ ಕರ್ಮಗಳನ್ನು ಮಾಡುತ್ತಾನೆ. ವನದಲ್ಲಿ ಕೊಡಲಿಯಿಂದ ಮರವನ್ನು ಕಡಿಯುವ ಮನುಷ್ಯನಿಗೆ ಪಾಪ ತಗಲುವುದೇ ಹೊರತು ಕೊಡಲಿಗೆ ಎಂದೂ ಪಾಪವು ತಗಲುವುದಿಲ್ಲ. ಅದರಂತೆ ಪುರುಷನು ಮಾಡಿದ ಕರ್ಮಗಳ ಫಲಗಳೆಲ್ಲವೂ ಈಶ್ವರನಿಗೇ ಸಲ್ಲುತ್ತವೆ. ಅಥವಾ ಕೊಡಲಿಯನ್ನು ತಯಾರಿಸಿದ ಪುರುಷನೇ ಅದನ್ನು ಹಿಡಿದವನ ಕರ್ಮಗಳ ಫಲವನ್ನು ಪಡೆಯುತ್ತಾನೆ ಎನ್ನಬಹುದಲ್ಲವೇ?[11] ಆದರೆ ಒಬ್ಬನು ಮಾಡಿದ ಕಾರ್ಯಕ್ಕೆ ಮತ್ತೊಬ್ಬನನ್ನು ಹೊಣೆಗಾರನನ್ನಾಗಿಸುವುದು ಸರಿಯಲ್ಲ. ಆದುದರಿಂದ ಕರ್ಮಗಳ ಫಲಗಳನ್ನು ಈಶ್ವರನಲ್ಲಿಯೇ ಇರಿಸು! ಅಥವಾ ಪುರುಷನೇ ಶುಭಾಶುಭ ಕರ್ಮಗಳ ಕರ್ತನೆಂದುಕೊಂಡರೂ ಈಗ ನೀನು ಮಾಡಿದುದು ಅಶುಭಕರ್ಮವೆಂದು ತಿಳಿದುಕೊಳ್ಳಬೇಕಾಗಿಲ್ಲ. ಎಂದೂ ಯಾರೂ ವಿಧಿನಿಯಮವನ್ನು ಉಲ್ಲಂಘಿಸಿ ಕಾರ್ಯಗಳನ್ನು ಮಾಡುವುದಿಲ್ಲ. ಆದುದರಿಂದ ಕೊಡಲಿಯನ್ನು ತಯಾರಿಸಿದವನಿಗೂ ಕೊಡಲಿಯನ್ನು ಹಿಡಿದು ವೃಕ್ಷವನ್ನು ಕತ್ತರಿಸಿದ ಪುರುಷನಿಗೂ ಪಾಪವಿಲ್ಲವೆಂದು ತಿಳಿಯಬಹುದು. ಒಂದು ವೇಳೆ ನೀನು ಲೋಕವು ಆಕಸ್ಮಿಕವಾಗಿ ಅಥವಾ ಸ್ವಾಭಾವಿಕವಾಗಿಯೇ ನಡೆಯುತ್ತದೆ ಎಂದು ತಿಳಿದುಕೊಂಡರೆ ಹಿಂದಿನ ಕರ್ಮಗಳಲ್ಲಿಯೂ ಮುಂದೆ ಮಾಡುವ ಕರ್ಮಗಳಲ್ಲಿಯೂ ಅಶುಭವೆನ್ನುವುದು ಏನೂ ಇಲ್ಲ[12]. ಈಗ ಲೋಕದಲ್ಲಿ ಶುಭ-ಪಾಪ ಕರ್ಮಗಳ ನಿರ್ಣಯವಿದೆ. ಇದಕ್ಕಾಗಿಯೇ ಲೋಕದಲ್ಲಿ ರಾಜನ ದಂಡವು ಸದಾ ಸಿದ್ಧವಾಗಿರುತ್ತದೆ. ಹೀಗಿದ್ದರೂ ಲೋಕದಲ್ಲಿ ಶುಭಾಶುಭಕರ್ಮಗಳು ಚಕ್ರದಂತೆ ಸುತ್ತುತ್ತಲೇ ಇರುತ್ತವೆ. ಆ ಕರ್ಮಗಳಿಗೆ ತಕ್ಕಂತೆ ಕರ್ಮಗಳನ್ನು ಮಾಡಿದವರು ಶುಭಾಶುಭ ಫಲಗಳನ್ನು ಪಡೆಯುತ್ತಾರೆಂದು ನನ್ನ ಅಭಿಪ್ರಾಯ. ಶುಭಕರ್ಮಗಳಿಗೆ ಫಲವು ನಿಶ್ಚಯ. ಇದೇ ಸತ್ಯವಾಗಿರುವಾಗ ನೀನು ಮನಸ್ಸಿನ ಶೋಕವನ್ನು ತ್ಯಜಿಸು. ಸ್ವಧರ್ಮದಲ್ಲಿ ನಡೆದುಕೊಳ್ಳುವವನಿಗೂ ಅಪವಾದವೆನ್ನುವುದು ಇದ್ದೇ ಇರುತ್ತದೆ. ಈ ರೀತಿಯ ಆತ್ಮಪರಿತ್ಯಾಗವು ನಿನಗೆ ಶೋಭಿಸುವುದಿಲ್ಲ. ಎಲ್ಲ ಕರ್ಮಗಳಿಗೂ ಪ್ರಾಯಶ್ಚಿತ್ತವೆನ್ನುವುದು ಇದ್ದೇ ಇದೆ. ಶರೀರವಿದ್ದವನು ಈ ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳಬಹುದು. ಶರೀರವನ್ನು ತ್ಯಜಿಸುವುದು ಪರಾಭವಹೊಂದಿದಂತೆ! ನೀನು ಜೀವಿತನಾಗಿದ್ದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬಹುದು. ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳದೇ ಮರಣಹೊಂದಿದರೆ ನೀನು ಲೋಕಾಂತರಗಳಲ್ಲಿಯ ಪರಿತಪಿಸಬೇಕಾಗುತ್ತದೆ.”
ಯುಧಿಷ್ಠಿರನು ಹೇಳಿದನು: “ಪಿತಾಮಹ! ಪುತ್ರ-ಪೌತ್ರರು, ಸಹೋದರರು, ತಂದೆಯರು, ಮಾವಂದಿರು, ಗುರುಗಳು, ಸೋದರಮಾವಂದಿರು, ಪಿತಾಮಹರು, ಹಾಗೆಯೇ ಮಹಾತ್ಮ ಕ್ಷತ್ರಿಯ ಸಂಬಂಧಿಗಳು, ಸಮಾನ ವಯಸ್ಕರು, ಬಾಂಧವರು ಮತ್ತು ಭ್ರಾತರರು ಹತರಾದರು! ನಾನಾ ದೇಶಗಳಿಂದ ಬಂದು ಸೇರಿದ್ದ ಅನೇಕ ಮನುಷ್ಯೇಂದ್ರರೂ ಕೂಡ ನನ್ನ ಒಬ್ಬನ ರಾಜ್ಯಲೋಭದಿಂದಾಗಿ ಹತರಾದರು! ಅಂಥಹ ಧರ್ಮನಿತ್ಯ ರಾಜರನ್ನು, ಸೋಮವನ್ನು ಕುಡಿದಿದ್ದ ವೀರರನ್ನು ಸಂಹರಿಸಿದ ನಾನು ಎಂಥಹ ಫಲವನ್ನು ಅನುಭವಿಸಿಯೇನು? ಶ್ರೀಮಂತರಾಗಿದ್ದ ಪಾರ್ಥಿವಸಿಂಹರಿಂದ ಹೀನಗೊಂಡಿರುವ ಈ ಪೃಥ್ವಿಯ ಕುರಿತು ಪುನಃ ಪುನಃ ಚಿಂತಿಸುತ್ತಾ ಸಂಕಟದಿಂದ ಬೆಂದುಹೋಗಿದ್ದೇನೆ. ಘೋರವಾದ ಕುಲವಧೆಯನ್ನೂ, ನೂರಾರು ಶತ್ರುಗಳು ಮತ್ತು ಕೋಟಿ-ಕೋಟಿ ಅನ್ಯರು ಹತರಾದುದನ್ನು ನೋಡಿ ಪರಿತಪಿಸುತ್ತಿದ್ದೇನೆ. ತಮ್ಮ ಪುತ್ರರು ಮತ್ತು ಪತಿಯಂದಿರಿಂದ ವಿಹೀನರಾದ ಈ ವರಸ್ತ್ರೀಯರ ಅವಸ್ಥೆಯು ಏನಾಗುವುದಕ್ಕುಂಟು? ಅವರು ಘೋರವಾದ ಅಂತಕಕ್ಕೆ ಕಾರಣರಾದ ನಾವು ಪಾಂಡವರು ಮತ್ತು ವೃಷ್ಣಿಗಳನ್ನು ಒಟ್ಟಿಗೇ ಸೇರಿಸಿ ಶಪಿಸುತ್ತಾ ಕೃಶರಾಗಿ ಮತ್ತು ದೀನರಾಗಿ ಭೂಮಿಯ ಮೇಲೆ ಬೀಳುತ್ತಿದ್ದಾರೆ. ತಂದೆಯರು, ಸಹೋದರರು, ಪತಿಗಳು, ಮತ್ತು ಪುತ್ರರನ್ನು ಕಾಣದೇ ಈ ಎಲ್ಲ ಸ್ತ್ರೀಯರೂ ಅವರ ಮೇಲಿನ ವಾತ್ಸಲ್ಯದಿಂದ ತಮ್ಮ ಪ್ರಿಯ ಪ್ರಾಣಗಳನ್ನೇ ತೊರೆದು ಯಮಕ್ಷಯಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ! ಧರ್ಮದ ಸೂಕ್ಷ್ಮತೆಯನ್ನು ನೋಡಿದರೆ ಈ ಸ್ತ್ರೀವಧೆಯ ಪಾಪವನ್ನೂ ನಾವು ಪಡೆಯುತ್ತೇವೆ ಎನ್ನುವುದು ವ್ಯಕ್ತವಾಗುತ್ತಿದೆ. ಸುಹೃದಯರ ಈ ವಧೆಯನ್ನು ಮಾಡಿ ನಾವು ಮುಗಿಯದಂಥಹ ಪಾಪವನ್ನು ಮಾಡಿದ್ದೇವೆ. ಇದಕ್ಕಾಗಿ ನಾವು ನರಕದಲ್ಲಿ ತಲೆಕೆಳಗಾಗಿ ಬಿದ್ದಿರುತ್ತೇವೆ! ಆದುದರಿಂದ ಉಗ್ರ ತಪಸ್ಸಿನಿಂದ ಈ ಶರೀರಗಳನ್ನು ತೊರೆಯುತ್ತೇವೆ. ಈ ಆಶ್ರಮಗಳ ವಿಶೇಷಗುಣಗಳನ್ನು ತಿಳಿಸು!”
ಯುಧಿಷ್ಠಿರನ ಆ ಮಾತನ್ನು ಕೇಳಿ ಋಷಿ ದ್ವೈಪಾಯನನು ನಿಪುಣ ಬುದ್ಧಿಯಿಂದ ಸಮೀಕ್ಷಿಸಿ ಪಾಂಡವನಿಗೆ ಇಂತೆಂದನು: “ರಾಜನ್! ವಿಷಾದಿಸಬೇಡ! ಕ್ಷತ್ರಿಯ ಧರ್ಮವನ್ನು ಸ್ಮರಿಸಿಕೋ! ಈ ಕ್ಷತ್ರಿಯರೆಲ್ಲರೂ ಸ್ವಧರ್ಮಾನುಸಾರವಾಗಿಯೇ ಹತರಾಗಿದ್ದಾರೆ. ಪೃಥ್ವಿಯ ಸಮಗ್ರ ರಾಜ್ಯಲಕ್ಷ್ಮಿಯನ್ನೂ ಮಹಾ ಯಶಸ್ಸನ್ನೂ ಆಕಾಂಕ್ಷಿಸುತ್ತಾ ಇವರು ಯಮನು ವಿಧಿಸಿದ ಕಾಲವು ಸನ್ನಿಹಿತವಾಗುತ್ತಲೇ ನಿಧನ ಹೊಂದಿದರು. ನೀನು ಅವರನ್ನು ಸಂಹರಿಸಲಿಲ್ಲ. ಭೀಮನಾಗಲೀ, ಅರ್ಜುನನಾಗಲೀ ಅಥವಾ ನಕುಲ-ಸಹದೇವರಾಗಲೀ ಅವರನ್ನು ಸಂಹರಿಸಿಲ್ಲ. ಪರ್ಯಾಯಧರ್ಮದ ಪ್ರಕಾರ ಕಾಲನು ಆ ದೇಹಿಗಳ ಪ್ರಾಣಗಳನ್ನು ತೆಗೆದುಕೊಂಡಿದ್ದಾನೆ! ಯಾರಿಗೆ ತಾಯಿ-ತಂದೆಯರಿಲ್ಲವೋ, ಯಾರು ಯಾರಿಗೂ ಎಂದೂ ಅನುಗ್ರಹಮಾಡುವುದಿಲ್ಲವೋ ಆ ಪ್ರಜೆಗಳ ಕರ್ಮಸಾಕ್ಷೀ ಕಾಲನಿಂದ ಅವರೆಲ್ಲರೂ ಹತರಾದರು. ಪ್ರಾಣಿಗಳನ್ನು ಪ್ರಾಣಿಗಳ ಮೂಲಕವೇ ಸಂಹರಿಸುವ ಈಶ್ವರೀಯ ರೂಪವಿರುವ ಕಾಲನಿಗೆ ಇದೊಂದು ಕೇವಲ ನಿಮಿತ್ತವಾಗಿತ್ತು. ಶುಭ-ಪಾಪಕರ್ಮಗಳಿಗೆ ಸಾಕ್ಷಿಯಾಗಿರುವ, ಕರ್ಮಗಳ ಮೂರ್ತಿಮತ್ತಾಗಿರುವ ಆ ಕಾಲನೇ ಕಾಲಾಂತರದಲ್ಲಿ ಪ್ರಾಣಿಗಳಿಗೆ ಸುಖದುಃಖಗಳ ರೂಪದಲ್ಲಿ ಕರ್ಮಫಲಗಳನ್ನು ನೀಡುತ್ತಾನೆ. ಅವರ ಕರ್ಮಗಳ ಕುರಿತು ಕೂಡ ಆಲೋಚಿಸು! ವಿನಾಶಕಾರ್ಯಗಳನ್ನೇ ಮಾಡಿದ ಅವರು ಕಾಲವಶರಾದರು! ನಿನ್ನ ನಿಯಮ-ವ್ರತಶೀಲತೆಗಳನ್ನಾದರೂ ಗಮನಿಸು. ವಿಧಿಯು ನಿನ್ನಂಥವನನ್ನು ಅಧೀನನನ್ನಾಗಿಸಿ ಅವರ ವಿನಾಶದ ಕರ್ಮವನ್ನು ಮಾಡಿಸಿದೆ! ಬಡಗಿಯು ಮಾಡಿದ ಯಂತ್ರವು ಆಡಿಸುವವನ ವಶದಲ್ಲಿದ್ದು ಆಡಿಸಿದಂತೆ ಆಡುತ್ತಿರುತ್ತದೆಯೋ ಅದೇ ರೀತಿ ಬ್ರಹ್ಮನಿರ್ಮಿತ ಈ ಜಗತ್ತು ಕಾಲನ ವಶವಾಗಿ ಕಾಲವು ಆಡಿಸಿದಂತೆಯೇ ಆಡುತ್ತಿರುತ್ತದೆ! ಕಾರಣವೇನೆಂದು ತಿಳಿಯದ ಪುರುಷನ ಹುಟ್ಟು ಮತ್ತು ಸಾವುಗಳು ಕಾಲದ ವಶದಲ್ಲಿವೆ. ಆದುದರಿಂದ ಅವುಗಳಿಗೆ ಶೋಕ-ಹರ್ಷಗಳನ್ನು ತಾಳುವುದಕ್ಕೆ ಅರ್ಥವಿಲ್ಲ. ಆದರೂ ಇವೆಲ್ಲವನ್ನೂ ನೀನೇ ಮಾಡಿರುವೆಯೆಂದು ನಿನ್ನ ಮನಸ್ಸನ್ನು ಕಲಕುವ ಪೀಡೆಯು ನಿನ್ನನ್ನು ಕಾಡುತ್ತಿದೆ. ಅದಕ್ಕಾಗಿ ಪ್ರಾಯಶ್ಚಿತ್ತವಿದೆ. ಅದನ್ನು ಮಾಡಿಕೋ! ಹಿಂದೆ ದೇವಾಸುರರ ನಡುವೆ ನಡೆದ ಯುದ್ಧದ ಕುರಿತು ಕೇಳು.
“ಸಹೋದರರಾದ ಅಸುರರು ಹಿರಿಯರೂ ದೇವತೆಗಳು ಕಿರಿಯರೂ ಆಗಿದ್ದರು. ಸಂಪತ್ತಿನ ಕಾರಣದಿಂದಾಗಿ ಅವರ ನಡುವೆ ಕೂಡ ಮಹಾ ಯುದ್ಧವೇ ನಡೆಯಿತು. ಆ ಯುದ್ಧವು ಮೂವತ್ತೆರಡು ಸಾವಿರ ವರ್ಷಗಳ ಪರ್ಯಂತ ನಡೆಯಿತಂತೆ! ಭೂಮಿಯನ್ನು ರಕ್ತದಲ್ಲಿಯೇ ಮುಳುಗಿಸಿ ದೈತ್ಯರನ್ನು ಸಂಹರಿಸಿ ದೇವತೆಗಳು ಸ್ವರ್ಗವನ್ನು ಪಡೆದರು. ವೇದಪಾರಂಗತರಾಗಿದ್ದ ಶಾಲಾವೃಕರೆಂದು ಮೂರೂ ಲೋಕಗಳಲ್ಲಿ ಪ್ರಸಿದ್ಧರಾಗಿದ್ದ ಎಂಬತ್ತೆಂಟು ಸಾವಿರ ಬ್ರಾಹ್ಮಣರೂ ದರ್ಪಮೋಹಿತರಾಗಿ ದಾನವರ ಸಹಾಯಾರ್ಥವಾಗಿ ಅವರ ಪಕ್ಷವನ್ನು ಸೇರಿದ್ದರು. ಅವರನ್ನು ಕೂಡ ಸಂಹರಿಸಿ ದೇವತೆಗಳು ಭೂಮಿಯನ್ನು ಪಡೆದರು. ಧರ್ಮಮಾರ್ಗವೇ ಸಂಪೂರ್ಣವಾಗಿ ಕಡಿದುಹೋಗಬೇಕೆಂದು ಬಯಸಿ ಯಾರು ಅಧರ್ಮಪ್ರವರ್ತಕರಾಗುತ್ತಾರೋ ಅಂತಹ ದುರಾತ್ಮರನ್ನು ದೇವತೆಗಳು ಉದ್ಧತರಾದ ದೈತ್ಯರನ್ನು ಹೇಗೋ ಹಾಗೆ ಸಂಹರಿಸುತ್ತಾರೆ. ಕುಲದಲ್ಲಿ ಒಬ್ಬನನ್ನು ಸಂಹರಿಸುವುದರಿಂದ ಉಳಿದ ಶಿಷ್ಟರಿಗೆ ಕ್ಷೇಮವುಂಟಾಗುತ್ತದೆ ಎಂದಾದರೆ ಅವನನ್ನು ಸಂಹರಿಸುವುದೇ ಯುಕ್ತವಾದುದು. ಹಾಗೆಯೇ ಒಂದು ಕುಲವನ್ನು ಸಂಹರಿಸಿ ರಾಷ್ಟ್ರವನ್ನು ವಿಪತ್ತಿನಿಂದ ಪಾರುಮಾಡಬಹುದಾದರೆ ಅಂತಹ ಕುಲವನ್ನೇ ವಿನಾಶಗೊಳಿಸಬೇಕು. ಕೆಲವೊಮ್ಮೆ ಅಧರ್ಮವಾಗಿ ಕಾಣುವ ಕಾರ್ಯವು ಧರ್ಮಕಾರ್ಯವೇ ಆಗಿರುತ್ತದೆ. ಹಾಗೆಯೇ ಧರ್ಮಕಾರ್ಯವಾಗಿ ಕಾಣುವ ಕಾರ್ಯವು ಅಧರ್ಮಕಾರ್ಯವೇ ಆಗಿರಬಹುದು. ಅದನ್ನು ವಿಚಾರಿಸಿ ತಿಳಿದುಕೊಳ್ಳಬೇಕಾಗುತ್ತದೆ. ನೀನು ತಿಳಿದವನು. ಆದುದರಿಂದ ನಿನ್ನನ್ನು ನೀನು ಸ್ಥಿರಗೊಳಿಸಿಕೋ! ಹಿಂದೆ ದೇವತೆಗಳು ಹಿಡಿದ ಮಾರ್ಗವನ್ನೇ ನೀನೂ ಕೂಡ ಅನುಸರಿಸಿವೆ! ಹೀಗಿರುವಾಗ ನೀನು ನರಕಕ್ಕೆ ಹೋಗುವುದಿಲ್ಲ. ನಿನ್ನ ಸಹೋದರರನ್ನೂ ಸುಹೃದಯರನ್ನೂ ಸಂತಯಿಸು! ಯಾರು ಪಾಪಭಾವದಿಂದ ಕಾರ್ಯವನ್ನು ಪ್ರಾರಂಭಿಸಿ ಅದೇ ಪಾಪಭಾವದಿಂದ ಮುಂದುವರೆದು ಕಾರ್ಯವನ್ನು ಪೂರ್ಣಗೊಳಿಸಿದ ನಂತರವೂ ನಾಚಿಕೆಪಟ್ಟುಕೊಳ್ಳುವುದಿಲ್ಲವೋ ಅಂಥವನಲ್ಲಿ ಆ ಮಹಾಪಾಪವು ಸಂಪೂರ್ಣವಾಗಿ ಪ್ರತಿಷ್ಠಿತವಾಗಿರುತ್ತದೆ ಎಂದು ಹೇಳುತ್ತಾರೆ. ಅಂಥವನಿಗೆ ಯಾವ ಪ್ರಾಯಶ್ಚಿತ್ತವೂ ಇರುವುದಿಲ್ಲ. ಆ ಪಾಪಕರ್ಮಿಯ ಪಾಪವು ಸ್ವಲ್ಪವೂ ಕಡಿಮೆಯಾಗುವುದಿಲ್ಲ. ನೀನಾದರೋ ಹುಟ್ಟಿನಿಂದಲೇ ಶುದ್ಧಸ್ವಭಾವನಾಗಿರುವೆ! ಇತರರು ಮಾಡಿದ ದೋಷಗಳಿಂದಾಗಿ, ನಿನಗಿಷ್ಟವಿಲ್ಲದಿದ್ದರೂ, ಯುದ್ಧವೆಂಬ ಈ ಕರ್ಮವನ್ನು ನಡೆಸಿ, ಈಗ ಪರಿತಪಿಸುತ್ತಿದ್ದೀಯೆ! ಇದಕ್ಕೆ ಅಶ್ವಮೇಧ ಮಹಾಯಜ್ಞವು ಪ್ರಾಯಶ್ಚಿತ್ತವೆಂದು ಹೇಳಲ್ಪಟ್ಟಿದೆ. ಅದನ್ನು ಮಾಡು. ಅದರಿಂದ ಪಾಪವನ್ನು ಕಳೆದುಕೊಳ್ಳುವೆ! ಮರುತ್ತುಗಳೊಂದಿಗೆ ಶತ್ರುಗಳನ್ನು ಜಯಿಸುತ್ತಾ ಮಘವಾನ್ ಪಾಕಶಾಸನನು, ಗೆದ್ದಾಗಲೆಲ್ಲಾ ಒಂದೊಂದು ಅಶ್ವಮೇಧವನ್ನು – ಹಾಗೆ ನೂರು ಯಾಗಗಳನ್ನು ಮಾಡಿ – ಶತ್ರುಕ್ರತುವೆಂದೆನಿಸಿಕೊಂಡನು. ಪಾಪರಹಿತನಾಗಿ ಸ್ವರ್ಗವನ್ನು ಜಯಿಸಿ ಸುಖೋದಯ ಲೋಕಗಳನ್ನು ಪಡೆದು ಮರುದ್ಗಣಗಳಿಂದ ಆವೃತನಾಗಿ ಶಕ್ರನು ದಿಕ್ಕುಗಳನ್ನು ಬೆಳಗಿಸುತ್ತಾ ಶೋಭಿಸುತ್ತಿದ್ದಾನೆ. ಸ್ವರ್ಗಲೋಕದಲ್ಲಿ ಮೆರೆಯುತ್ತಿರುವ ಶಚೀಪತಿ ವಿಬುಧೇಶ್ವರನನ್ನು ಅಪ್ಸರೆಯರೂ, ಋಷಿಗಳೂ ಮತ್ತು ದೇವತೆಗಳೂ ಉಪಾಸನೆಗೈಯುತ್ತಾರೆ. ನೀನೂ ಕೂಡ ವಿಕ್ರಮದಿಂದ ಮಹೀಪಾಲರನ್ನು ಸೋಲಿಸಿ ಈ ವಸುಂಧರೆಯನ್ನು ವಶಪಡೆಸಿಕೊಂಡಿರುವೆ! ಸುಹೃದಯರೊಂದಿಗೆ ಕೂಡಿಕೊಂಡು ನಿನ್ನಿಂದ ಹತರಾದವರ ರಾಷ್ಟ್ರ-ಪುರಗಳಿಗೆ ಹೋಗಿ ಅಲ್ಲಿ ಅವರ ಸಹೋದರರನ್ನೋ, ಪುತ್ರರನ್ನೋ, ಪೌತ್ರರನ್ನೋ, ರಾಜ್ಯಾಭಿಷೇಕ ಮಾಡು. ಬಾಲಕರನ್ನಾಗಲೀ ಗರ್ಭದಲ್ಲಿರುವವರನ್ನಾಗಲೀ ರಾಜನನ್ನಾಗಿಸುವುದಾಗಿ ಸಂತವಿಸಿ ಎಲ್ಲ ಪ್ರಜೆಗಳನ್ನೂ ರಂಜಿಸುತ್ತಾ ಈ ವಸುಂಧರೆಯನ್ನು ಪಾಲಿಸು! ಕುಮಾರರ್ಯಾರೂ ಇಲ್ಲದಿದ್ದ ರಾಜವಂಶದಲ್ಲಿ ಕನ್ಯೆಯರಿದ್ದರೆ ಅವರಿಗೇ ಪಟ್ಟಾಭಿಷೇಕವನ್ನು ಮಾಡಿಸು. ಹೀಗೆ ಸ್ತ್ರೀವರ್ಗದ ಕಾಮನೆಗಳನ್ನು ಪೂರೈಸಿ ಅವರ ಶೋಕವನ್ನೂ ದೂರಮಾಡಿದಂತಾಗುತ್ತದೆ. ಹೀಗೆ ಸರ್ವರಾಷ್ಟ್ರಗಳಿಗೂ ಆಶ್ವಾಸನೆಯನ್ನಿತ್ತು ಹಿಂದೆ ವಿಜಯೀ ಇಂದ್ರನಂತೆ ಅಶ್ವಮೇಧಯಾಗವನ್ನು ಮಾಡು! ತಮ್ಮದೇ ಕರ್ಮಗಳಿಂದ ಮತ್ತು ಕೃತಾಂತನ ಬಲಕ್ಕೆ ಸಿಲುಕಿ ಮೋಹಿತರಾದ ಮಹಾತ್ಮ ಕ್ಷತ್ರಿಯರ ಕುರಿತು ನೀನು ಶೋಕಿಸಬೇಕಾಗಿಲ್ಲ! ಕ್ಷತ್ರಧರ್ಮದ ಪ್ರಕಾರವಾಗಿ ದೊರಕಿರುವ ಈ ಅಕಲ್ಮಷವಾದ ರಾಜ್ಯವನ್ನು ಪಡೆದು, ಇಹದಲ್ಲಿ ಮತ್ತು ಪರದಲ್ಲಿ ಶ್ರೇಯಸ್ಕರವಾಗಿರುವ ಧರ್ಮದಲ್ಲಿಯೇ ನಡೆದುಕೋ!”
ಆಗ ಯುಧಿಷ್ಠಿರನು ಪ್ರಶ್ನಿಸಿದಂತೆ ವ್ಯಾಸನು ಅವನಿಗೆ ಪ್ರಾಯಶ್ಚಿತ್ತಗಳ ಕುರಿತು ವಿವರಿಸಿ ಹೇಳಿದನು. ಅನಂತರ ಯುಧಿಷ್ಠಿರನು ಹೇಳಿದನು: “ಭಗವನ್! ರಾಜಧರ್ಮಗಳನ್ನೂ ಚಾತುರ್ವರ್ಣಗಳ ಧರ್ಮಗಳನ್ನೂ ಸಂಪೂರ್ಣವಾಗಿ ವಿಸ್ತಾರವಾಗಿ ಕೇಳ ಬಯಸುತ್ತೇನೆ. ಮಹೀಕ್ಷಿತನಾಗಿ ನಾನು ಆಪತ್ಕಾಲಗಳಲ್ಲಿ ಯಾವ ನೀತಿಗಳನ್ನು ಬಳಸಬೇಕು? ಧರ್ಮದ ಮಾರ್ಗವನ್ನೇ ಅನುಸರಿಸಿ ನಾನು ಹೇಗೆ ಈ ಭೂಮಿಯನ್ನು ಜಯಿಸಬಲ್ಲೆ? ಭಕ್ಷ್ಯ-ಅಭಕ್ಷ್ಯಗಳಿಂದ ಕೂಡಿದ ಪ್ರಾಯಶ್ಚಿತ್ತ ಪ್ರಕರಣವು ನನ್ನಲ್ಲಿ ಕುತೂಹಲವನ್ನುಂಟುಮಾಡಿದೆ. ಅದನ್ನು ಕೇಳಿ ನನಗೆ ಹರ್ಷವೂ ಆಗುತ್ತಿದೆ. ಧರ್ಮಾಚರಣೆ ಮತ್ತು ರಾಜ್ಯಾಡಳಿತ ಇವೆರಡೂ ನಿತ್ಯವೋ ಒಂದಕ್ಕೊಂದು ವಿರೋಧವಾಗಿಯೇ ಇರುತ್ತವೆ. ಇದನ್ನೇ ಸದಾ ಚಿಂತಿಸುತ್ತಿರುವ ನಾನು ಒಮ್ಮೊಮ್ಮೆ ಮೋಹಿತನಾಗುತ್ತೇನೆ.”
ಆಗ ಮಹಾತೇಜಸ್ವಿ ವೇದವಿದರಲ್ಲಿ ಶ್ರೇಷ್ಠ ವ್ಯಾಸನು ಸರ್ವಜ್ಞ ಪುರಾತನ ನಾರದನನ್ನು ನೋಡಿ ಯುಧಿಷ್ಠಿರನಿಗೆ ಹೇಳಿದನು: “ಯುಧಿಷ್ಠಿರ! ಅಖಿಲ ಧರ್ಮಗಳನ್ನೂ ತಿಳಿಯಬಯಸಿದರೆ ನೀನು ವೃದ್ಧ ಕುರುಪಿತಾಮಹ ಭೀಷ್ಮನ ಬಳಿ ಹೋಗು! ಆ ಭಾಗೀರಥೀಪುತ್ರ ಸರ್ವಜ್ಞ ಸರ್ವಧರ್ಮಗಳನ್ನೂ ತಿಳಿದುಕೊಂಡಿರುವ ಭೀಷ್ಮನು ನಿನ್ನ ಮನದಲ್ಲಿ ನೆಲೆಸಿರುವ ಸರ್ವ ಸಂಶಯಗಳನ್ನು ನಿವಾರಿಸುತ್ತಾನೆ. ಯಾರ ಜನನಿಯು ದೇವೀ ದಿವ್ಯ ತ್ರಿಪಥಗಾ ಗಂಗಾನದಿಯೋ, ಯಾರು ಇಂದ್ರನೇ ಮೊದಲಾದ ಸರ್ವ ದೇವತೆಗಳನ್ನು ಸಾಕ್ಷಾತ್ ಕಂಡಿರುವನೋ, ಆ ಕುರುಸತ್ತಮ ಪ್ರಭುವು ಬೃಹಸ್ಪತಿಯೇ ಮೊದಲಾದ ದೇವರ್ಷಿಗಳನ್ನು ಉಪಚಾರಗಳಿಂದ ತೃಪ್ತಿಪಡಿಸಿ ರಾಜನೀತಿಯನ್ನೂ, ದೇವಾಸುರರ ಗುರುವಾದ ದ್ವಿಜ ಶುಕ್ರನಿಂದ ಸರ್ವ ಶಾಸ್ತ್ರಗಳನ್ನೂ ವ್ಯಾಖ್ಯಾನ ಸಹಿತವಾಗಿ ತಿಳಿದುಕೊಂಡಿದ್ದಾನೆ. ಆ ಮಹಾಬುದ್ಧಿಯು ಭಾರ್ಗವ ಚ್ಯವನನಿಂದ ಮತ್ತು ಯತವ್ರತ ವಸಿಷ್ಠನಿಂದ ವೇದಗಳನ್ನೂ ಅವುಗಳ ಅಂಗಗಳೊಂದಿಗೆ ಪಡೆದಿರುತ್ತಾನೆ. ಭೀಷ್ಮನು ಪಿತಾಮಹಬ್ರಹ್ಮನ ಜ್ಯೇಷ್ಠ ಪುತ್ರ ದೀಪ್ತತೇಜಸ್ವಿ ಅಧ್ಯಾತ್ಮಗತಿಯ ತತ್ತ್ವಗಳನ್ನು ತಿಳಿದುಕೊಂಡಿರುವ ಸನತ್ಕುಮಾರನಿಂದ ಹಿಂದೆ ಶಿಕ್ಷಣವನ್ನು ಪಡೆದಿದ್ದನು. ಅವನು ಮಾರ್ಕಂಡೇಯ ಮುಖೇನ ಯತಿಧರ್ಮವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವನು. ಪರಶುರಾಮನಿಂದ ಮತ್ತು ಇಂದ್ರನಿಂದ ಅಸ್ತ್ರಗಳನ್ನು ಪಡೆದುಕೊಂಡಿರುವನು. ಮನುಷ್ಯನಾಗಿ ಹುಟ್ಟಿದ್ದರೂ ಮೃತ್ಯುವು ಅವನ ಇಚ್ಛೆಯಂತೆಯೇ ಬರುತ್ತದೆ. ಮಕ್ಕಳಿಲ್ಲದವನಾಗಿದ್ದರೂ ಅವನಿಗೆ ದಿವಿಯ ಪುಣ್ಯಲೋಕಗಳು ದೊರೆಯುತ್ತವೆ ಎಂದು ಕೇಳಿದ್ದೇವೆ. ಪುಣ್ಯ ಬ್ರಹ್ಮರ್ಷಿಗಳು ನಿತ್ಯವು ಯಾರ ಸಭಾಸದರಾಗಿ ಉಪಸ್ಥಿತರಾಗಿರುತ್ತಿದ್ದರೋ, ತಿಳಿದುಕೊಂಡಿರಬೇಕಾದ ಜ್ಞಾನಗಳಲ್ಲಿ ಯಾರಿಗೆ ಯಾವುದೂ ತಿಳಿಯದೇ ಇಲ್ಲವೋ, ಆ ಧರ್ಮಜ್ಞ ಧರ್ಮದ ಸೂಕ್ಷ್ಮ ಅರ್ಥಗಳನ್ನು ಯಥಾವತ್ತಾಗಿ ತಿಳಿದುಕೊಂಡಿರುವ ಆ ಧರ್ಮವಿದುವು ಪ್ರಾಣಗಳನ್ನು ತೊರೆಯುವ ಮೊದಲು ನೀನು ಅವನ ಬಳಿಗೆ ಹೋಗು.”
ಇದನ್ನು ಕೇಳಿದ ದೀರ್ಘಪ್ರಜ್ಞ ಮಹಾದ್ಯುತಿ ಕೌಂತೇಯನು ಸತ್ಯವತೀ ಸುತ ಮಾತನಾಡುವವರಲ್ಲಿ ಶ್ರೇಷ್ಠ ವ್ಯಾಸನಿಗೆ ಇಂತೆಂದನು: “ರೋಮಾಂಚನಗೊಳ್ಳುವಂಥಹ ಈ ಮಹಾ ಬಂಧುವಧೆಯನ್ನು ನಡೆಸಿ ನಾನು ಸರ್ವಲೋಕಕ್ಕೇ ಪೃಥ್ವೀನಾಶಕಾರಕವಾದ ಅಪರಾಧವನ್ನೆಸಗಿದ್ದೇನೆ. ಋಜುಮಾರ್ಗದಲ್ಲಿಯೇ ಹೋರಾಡುತ್ತಿದ್ದ ಆ ಭೀಷ್ಮನನ್ನು ವಂಚನೆಯಿಂದ ಘಾತಿಗೊಳಿಸಿ ಈಗ ನಾನು ಯಾವ ಮುಖವನ್ನಿಟ್ಟುಕೊಂಡು ಧರ್ಮದ ವಿಷಯವಾಗಿ ಅವನನ್ನು ಪ್ರಶ್ನಿಸಲು ಹೋಗಲಿ? ಅದನ್ನು ಕೇಳುವ ಯೋಗ್ಯತೆಯಾದರೂ ನನಗೆಲ್ಲಿದೆ?”
ಆಗ ಚಾತುರ್ವರ್ಣದವರ ಹಿತವನ್ನೇ ಬಯಸುವ ಮಹಾಬಾಹು ಮಹಾದ್ಯುತಿ ಯದುಶ್ರೇಷ್ಠ ಕೃಷ್ಣನು ಆ ನೃಪತಿಶ್ರೇಷ್ಠನಿಗೆ ಹೇಳಿದನು: “ನೃಪೋತ್ತಮ! ನಿರ್ಬಂಧಪೂರ್ವಕವಾಗಿ ಈ ರೀತಿ ಶೋಕಪಡುವುದು ನಿನಗೆ ಸರಿಯಲ್ಲ. ಭಗವಾನ್ ವ್ಯಾಸನು ಹೇಳಿದಂತೆಯೇ ಮಾಡು! ಬೇಸಗೆಯ ಕೊನೆಯಲ್ಲಿ ಜನರು ಮಳೆಗಾಗಿ ಪರ್ಜನ್ಯನನ್ನು ಹೇಗೋ ಹಾಗೆ ಈ ಬ್ರಾಹ್ಮಣರು ಮತ್ತು ಮಹಾತೇಜಸ್ವೀ ಸಹೋದರರು ನಿನ್ನನ್ನೇ ಉಪಾಸಿಸುತ್ತಿದ್ದಾರೆ. ಅಳಿದುಳಿದ ರಾಜರೆಲ್ಲರೂ ಮತ್ತು ನಿನ್ನ ರಾಷ್ಟ್ರ ಕುರುಜಾಂಗಲದ ನಾಲ್ಕೂ ವರ್ಣದವರೂ ಇಲ್ಲಿಗೆ ಬಂದು ಸೇರಿದ್ದಾರೆ. ಈ ಮಹಾತ್ಮ ಬ್ರಾಹ್ಮಣರ ಸಂತೋಷಕ್ಕಾಗಿ, ಅಮಿತ ತೇಜಸ್ವಿ ಗುರು ವ್ಯಾಸನ ನಿಯೋಗದಂತೆ, ದ್ರೌಪದಿಯೇ ಮೊದಲಾದ ನಮ್ಮ ಸುಹೃದಯರಿಗೆ ಸಂತೋಷವಾಗುವಂತೆ ಮಾಡು. ಲೋಕಕ್ಕೆ ಹಿತವನ್ನುಂಟುಮಾಡು!”
ಕೃಷ್ಣನು ಹೀಗೆ ಹೇಳಲು ರಾಜೀವಲೋಚನ ರಾಜಾ ಮಹಾತಪಸ್ವಿ ಯುಧಿಷ್ಠಿರನು ಸರ್ವಲೋಕಗಳ ಹಿತಕ್ಕಾಗಿ ಕುಳಿತಲ್ಲಿಂದ ಮೇಲೆದ್ದನು. ಹೀಗೆ ಸ್ವಯಂ ಕೃಷ್ಣನಿಂದಲೂ, ದ್ವೈಪಾಯನನಿಂದಲೂ, ದೇವಸ್ಥಾನನಿಂದಲೂ, ಅರ್ಜುನನಿಂದಲೂ ಮತ್ತು ಇತರ ಅನೇಕರಿಂದ ಸಮಾಧಾನಗೊಳಿಸಲ್ಪಟ್ಟ ನರವ್ಯಾಘ್ರ ಯುಧಿಷ್ಠಿರನು ಮಾನಸಿಕ ದುಃಖ-ಸಂತಾಪಗಳನ್ನು ಪರಿತ್ಯಜಿಸಿದನು. ಶ್ರುತಿಗಳ ವಾಕ್ಯವನ್ನು ಕೇಳಿ, ಶ್ರುತಿಗಳ ಕುರಿತು ಕೇಳುವುದರಲ್ಲಿ ವಿಶಾರದನಾದ ಆ ಶ್ರುತನಿಧಿ ಪಾಂಡುನಂದನನು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಶಾಂತಿಯುತನಾದನು.
[1] ಕೀರ್ತಿ-ಸ್ವರ್ಗಗಳನ್ನು ಪಡೆದು ಅಮರರೇ ಆಗಿದ್ದಾರೆ.
[2] ಅವರ ಸಾವಿಗೆ ಕಾರಣರಾದುದರಿಂದ
[3] ಸಾಧಾರಣವಾಗಿ ವಿರೋಧಕಂ ಎಂಬ ಶಬ್ಧಕ್ಕೆ ವಿರೋಧ ಅಥವಾ ತೊಂದರೆಯನ್ನುಂಟುಮಾಡುವುದು ಎಂಬ ಅರ್ಥವಿದೆ. ಆದರೆ ಈ ಶ್ಲೋಕದಲ್ಲಿ ಈ ಶಬ್ಧಕ್ಕೆ ವ್ಯಾಖ್ಯಾನಕಾರರು – ನಿಗಡಂ ವಿಶೇಷಣಂ ರೋಧಕಂ – ಸರಪಳಿಯಂತೆ ವಿಶೇಷವಾಗಿ ಬಂಧಿಸತಕ್ಕುದು – ಎಂಬ ಅರ್ಥವನ್ನು ಕೊಟ್ಟಿದ್ದಾರೆ. ಗೃಹಸ್ಥನಿಗೆ ಯಜ್ಞಕರ್ಮವು ಒಂದು ಬಂಧನ. ಮಾಡಲೇ ಬೇಕಾದ ಕರ್ಮ ಎಂದು ಅರ್ಥೈಸಿದ್ದಾರೆ.
[4] ನೀನು ಸಂನ್ಯಾಸಿಯಾದರೂ ನಿನಗೊಂದು ವಸ್ತುವಿನ ಅಗತ್ಯವಿದೆ ಎಂದಾಯಿತು. ಹುರಿದ ಹಿಟ್ಟಿಗೂ ರಾಜ್ಯಕ್ಕೂ ಯಾವ ವ್ಯತ್ಯಾಸವನ್ನೂ ನೀನು ಕಾಣದ ನಂತರ ರಾಜ್ಯವನ್ನಾದರೂ ನೀನು ಏಕೆ ತ್ಯಜಿಸುವೆ? ಕಲ್ಲಿಗೂ ಚಿನ್ನಕ್ಕೂ ವ್ಯತ್ಯಾಸವಿಲ್ಲವೆಂದು ತಿಳಿದ ಮಾತ್ರಕ್ಕೆ ಇರುವ ಚಿನ್ನವೆಲ್ಲವನ್ನೂ ಹೊರಗೆ ಎಸೆಯುವುದಕ್ಕೆ ಅರ್ಥವಿಲ್ಲ. ಜೀವನಕ್ಕಾಗಿ ಹುರಿದ ಹಿಟ್ಟಾದರೂ ಬೇಕೇ ಬೇಕು. ಒಂದು ಬೇಕಾದರೆ ಇನ್ನೊಂದು ಏಕೆ ಬೇಡ? ಯಾವುದೂ ಬೇಡ ಎಂದು ಹೇಳಿಕೊಂಡು ಮನುಷ್ಯನು ಜೀವಿಸಿರಲಾರನು. ಹುರಿದ ಹಿಟ್ಟನು ಬಿಡಲಾರದಂತೆ ರಾಜ್ಯವನ್ನೂ ಬಿಡುವ ಅಗತ್ಯವಿಲ್ಲ.
[5] ನೀಲಕಂಠರು ಈ ಶ್ಲೋಕಕ್ಕೆ ಹೀಗೆ ಅರ್ಥೈಸಿದ್ದಾರೆ: ಸೌಖಿಕೈಃ ಪರಮ ಸುಖಾರ್ಥಿಭಿಃ ಸಂನ್ಯಾಸಿಭಿಃ ಸಂಭೃತಾನರ್ಥಾನ್ ಕುಂಡಿಕಾದೀನ್ ವೀಕ್ಷ್ಯ ಯಃ ಸ್ವಯಮಪಿ ತಥಾ ಕರೋತಿ ಕಿಂ ನು ತತ್ ರಾಜ್ಯಾದಿಕಂ ತ್ಯಜತ್ಯಪಿ ನೈವ ತ್ಯಜತಿ ಕಿಂ ತು ಉಚಿತಂ ಪರಿಗ್ರಹಂ ತ್ಯಕ್ತ್ವಾ ದೈವೋಪಹತತ್ತ್ವಾದನುಚಿತಂ ಪರಿಗ್ರಹಾಂತರಮೇವ ಕರೋತಿ. ಇತ್ಯಸಂಗತ್ಯಂ ಅಸ್ಯ ದುರ್ಲಭಮಿತ್ಯರ್ಥಃ – ಅರ್ಥಾತ್ – ಪರಮಸುಖಾಭಿಲಾಷಿಗಳಾದ ಸಂನ್ಯಾಸಿಗಳಿಂದ ಸಂಪಾದಿಸಲ್ಪಟ್ಟ ಕಮಂಡಲುವೇ ಮೊದಲಾದವುಗಳನ್ನು ನೋಡಿ ಯಾವನು ತಾನೂ ಹಾಗೆಯೇ ಮಾಡಲು ಹೋಗುತ್ತಾನೋ ಅವನು ರಾಜ್ಯಾದಿಗಳನ್ನು ಪರಿತ್ಯಾಗಮಾಡಿದರೂ ರಾಜೋಚಿತವಾದ ಪರಿಗ್ರಹಕಾರ್ಯವನ್ನು ತ್ಯಜಿಸಿ ದೈವೋಪಹತನಾದುದರಿಂದ ಅನುಚಿತವಾದ ಬೇರೆ ರೀತಿಯ ಪರಿಗ್ರಹವನ್ನೇ ಮಾಡುತ್ತಾನೆ. ರಾಜನಿಗೆ ಯುಕ್ತವಾದ ಕರಾದಿ ಪರಿಗ್ರಹವನ್ನು ಬಿಟ್ಟಂತಾಯಿತು. ಅಹಿತವಾದ ಧಾನಾಮುಷ್ಟಿಯನ್ನು ಪರಿಗ್ರಹಿಸಿದಂತಾಯಿತು. ಆದುದರಿಂದ ಸಂನ್ಯಾಸಿಯಾದರೂ ಸಂಗವು ತಪ್ಪಲೇ ಇಲ್ಲ.
[6] ದೇವಯಾನದ ಮೂಲಕ
[7] ಪಿತೃಮಾರ್ಗ
[8] ಈ ಮರುತ್ತನ ಕಥೆಯನ್ನು ಮುಂದೆ ಅಶ್ವಮೇಧಪರ್ವದಲ್ಲಿ ವ್ಯಾಸನು ಯುಧಿಷ್ಠಿರನಿಗೆ ಹೇಳುತ್ತಾನೆ.
[9] ಜಿಹ್ವಾ ಚಾಪಲ್ಯ, ದೃಷ್ಟಿ ಚಾಪಲ್ಯ, ಶ್ರವಣಚಾಪಲ್ಯ, ಸ್ಪರ್ಶಚಾಪಲ್ಯ
[10] ಕರ್ಣ
[11] ಕೊಡಲಿಯು ಜಡವಸ್ತು. ಅದಕ್ಕೆ ಕರ್ಮಮಾಡುವ ಸ್ವಾತಂತ್ರ್ಯವೇ ಇಲ್ಲ. ಆದುದರಿಂದ ಅದಕ್ಕೆ ಪಾಪ-ಪುಣ್ಯಗಳ ಲೇಪವೇ ಇಲ್ಲ. ಕೊಡಲಿಯನ್ನು ಹಿಡಿಯುವ ಮನುಷ್ಯನೇ ಕತೃವಾಗುತ್ತಾನೆ. ಆದುದರಿಂದ ಕೊಡಲಿಯನ್ನು ಹಿಡಿದು ವೃಕ್ಷವನ್ನು ಕತ್ತರಿಸಿವನಿಗೇ ಪಾಪವು ತಗಲುತ್ತದೆ. ಹಾಗಾದರೆ ಕೊಡಲಿಯನ್ನು ಮಾಡಿದವನಿಗಾದರೂ ವೃಕ್ಷವನ್ನು ಕಡಿದ ಪಾಪವು ಬರಬೇಕಾಗಿದ್ದಿತು. ಏಕೆಂದರೆ ವೃಕ್ಷಗಳ ನಾಶಕ್ಕೆ ಕೊಡಲಿಯನ್ನು ತಯಾರಿಸುವವನೇ ಮೂಲ ಕಾರಣನಾಗುತ್ತಾನೆ. ಕೊಡಲಿಯನ್ನ ತಯಾರಿಸಿದುದರಿಂದಲೇ ಮತ್ತೊಬ್ಬನು ವೃಕ್ಷವನ್ನು ಕತ್ತರಿಸಿದುದಲ್ಲವೇ? ಆದುದರಿಂದ ವೃಕ್ಷವನ್ನು ಕತ್ತರಿಸಿದವನಿಗೆ ಪಾಪವಿಲ್ಲ ಎಂದೂ ಹೇಳಬಹುದು.
[12] ಇದ್ದಕ್ಕಿದ್ದಂತೆಯೇ ಭೂಕಂಪವಾಗುತ್ತದೆ, ಊರುಗಳೇ ನೆಲದಲ್ಲಿ ಹುದುಗಿಹೋಗುತ್ತವೆ. ಸಾವಿರಾರು ಜನರು ಸಾಯುತ್ತಾರೆ. ಇಲ್ಲಿ ಕರ್ತೃ ಯಾರು? ಕಾರಣ ಯಾವುದು? ಫಲಾಫಲಗಳು ಯಾರಿಗೆ? ಎನ್ನುವುದನ್ನು ನಿರ್ಧರಿಸಿ ಹೇಳಲು ಸಾಧ್ಯವೇ ಇಲ್ಲ. ಅಂತೆಯೇ ಭಾರತಯುದ್ಧವು ನಡೆದುದು ಸ್ವಾಭಾವಿಕ. ಇದಕ್ಕೆ ಯಾರೂ ಕಾರಣರಲ್ಲ. ಇದರ ಫಲಾಫಲಗಳೂ ಯಾರಿಗೂ ಸೇರುವುದಿಲ್ಲ!