ಕರ್ಣನ ಕುರಿತು ಯುಧಿಷ್ಠಿರನ ಶೋಕ; ನಾರದನಿಂದ ಸಮಾಧಾನ
ಪಾಂಡುನಂದನರು, ವಿದುರ, ಧೃತರಾಷ್ಟ್ರ ಮತ್ತು ಸರ್ವ ಭರತಸ್ತ್ರೀಯರು ಎಲ್ಲ ಸುಹೃದಯರಿಗೂ ಉದಕ ಕ್ರಿಯೆಗಳನ್ನು ಪೂರೈಸಿದರು. ಬಳಿಕ ಮಹಾತ್ಮ ಕುರುನಂದನರು ಶುದ್ಧಿಕಾರ್ಯಗಳನ್ನಾಚರಿಸುತ್ತಾ ಒಂದು ತಿಂಗಳ ಕಾಲ ಪುರದಿಂದ ಹೊರಗೆ ಗಂಗಾತೀರದಲ್ಲಿಯೇ ಉಳಿದುಕೊಂಡರು. ಉದಕ ಕ್ರಿಯೆಗಳನ್ನು ಪೂರೈಸಿದ ರಾಜಾ ಧರ್ಮಾತ್ಮ ಯುಧಿಷ್ಠಿರನಲ್ಲಿಗೆ ಮಹಾತ್ಮ ಸಿದ್ಧ ಬ್ರಹ್ಮರ್ಷಿಸತ್ತಮರು ಆಗಮಿಸಿದರು. ದ್ವೈಪಾಯನ, ನಾರದ, ಮಹಾನ್ ಋಷಿ ದೇವಲ, ದೇವಸ್ಥಾನ, ಕಣ್ವ ಮತ್ತು ಅವನ ಸತ್ತಮ ಶಿಷ್ಯರು, ಅನ್ಯ ವೇದವಿದ್ವಾಂಸರೂ, ಕೃತಪ್ರಜ್ಞ ದ್ವಿಜಾತಿಯರೂ, ಗೃಹಸ್ಥರೂ, ಸ್ನಾತಕರೂ ಎಲ್ಲರೂ ಕುರುಸತ್ತಮನನ್ನು ಕಂಡರು. ಆಗಮಿಸಿದ ಮಹಾಋಷಿಗಳು ಯಥಾವಿಧಿಯಾಗಿ ಪೂಜಿಸಲ್ಪಟ್ಟು ಅಮೂಲ್ಯ ಆಸನಗಳಲ್ಲಿ ಕುಳಿತುಕೊಂಡರು. ಆ ಶೋಕಸಮಯಕ್ಕೆ ತಕ್ಕುದಾದ ಪೂಜೆಗಳನ್ನು ಸ್ವೀಕರಿಸಿ ನೂರಾರು ಸಹಸ್ರಾರು ವಿಪ್ರರು ಆ ಪುಣ್ಯ ಭಾಗೀರಥೀ ತೀರದಲ್ಲಿ ಶೋಕವ್ಯಾಕುಲ ಚೇತಸ ರಾಜ ಯುಧಿಷ್ಠಿರನನ್ನು ಯಥಾನ್ಯಾಯವಾಗಿ ಗೌರವಿಸಿ ಸುತ್ತುವರೆದು ಕುಳಿತು ಸಮಾಧಾನಪಡಿಸುತ್ತಿದ್ದರು.
ಆ ಸಮಯದಲ್ಲಿ ಇತರ ಮುನಿಗಳೊಂದಿಗೆ ವಿಚಾರಿಸಿ ನಾರದನು ಆ ಕಾಲಕ್ಕೆ ತಕ್ಕುದಾದ ಈ ಮಾತುಗಳನ್ನು ಧರ್ಮಾತ್ಮ ಯುಧಿಷ್ಠಿರನಿಗೆ ಹೇಳಿದನು: “ಯುಧಿಷ್ಠಿರ! ನಿನ್ನ ಬಾಹುವೀರ್ಯದಿಂದ ಮತ್ತು ಮಾಧವನ ಪ್ರಸಾದದಿಂದ ನೀನು ಈ ಇಡೀ ಭೂಮಿಯನ್ನು ಧರ್ಮಪೂರ್ವಕವಾಗಿ ಗೆದ್ದಿರುವೆ! ಸೌಭಾಗ್ಯವಾಶಾತ್ ನೀನು ಆ ಲೋಕಭಯಂಕರ ಸಂಗ್ರಾಮದಿಂದ ಮುಕ್ತನಾಗಿರುವೆ. ಕ್ಷತ್ರಧರ್ಮರತನಾಗಿದ್ದುಕೊಂಡು ಈಗಲಾದರೂ ಸಂತೋಷದಿಂದಿರುವೆಯಲ್ಲವೇ? ಅಮಿತ್ರರನ್ನು ಸಂಹರಿಸಿ ಮಿತ್ರರಿಗೆ ಪ್ರೀತಿಯನ್ನುಂಟುಮಾಡಿರುವೆ ತಾನೇ? ಈ ಶ್ರೀಯನ್ನು ಪಡೆದ ನಿನ್ನನ್ನು ಬೇರೆ ಯಾವ ಶೋಕವೂ ಬಾಧಿಸುತ್ತಿಲ್ಲ ತಾನೇ?”
ಯುಧಿಷ್ಠಿರನು ಹೇಳಿದನು: “ಕೃಷ್ಣನ ಬಾಹುಬಲವನ್ನಾಶ್ತ್ರಯಿಸಿ, ಬ್ರಾಹ್ಮಣರ ಪ್ರಸಾದದಿಂದ ಮತ್ತು ಭೀಮಾರ್ಜುನರ ಬಲದಿಂದ ಇಡೀ ಭೂಮಿಯನ್ನೇ ಗೆದ್ದದ್ದಾಯಿತು! ಆದರೆ ಲೋಭಕ್ಕಾಗಿ ಈ ಮಹಾ ಜ್ಞಾತಿಕ್ಷಯವನ್ನು ಮಾಡಿದೆನಲ್ಲಾ ಎಂಬ ಮಹಾದುಃಖವು ನಿತ್ಯವೂ ನನ್ನ ಹೃದಯದಲ್ಲಿ ನೆಲೆಗೊಂಡಿದೆ! ಭಗವನ್! ಪ್ರಿಯ ಸುತರಾದ ಸೌಭದ್ರ ಮತ್ತು ದ್ರೌಪದೇಯರನ್ನು ಸಾಯಗೊಳಿಸಿ ನನಗೆ ಈ ಜಯವೂ ಸೋಲಾಗಿ ಕಾಣುತ್ತಿದೆ. ಇಲ್ಲಿಂದ ಕೃಷ್ಣನು ಹಿಂದಿರುಗಿದಾಗ ನನ್ನ ಸೊಸೆ ವಾರ್ಷ್ಣೇಯೀ ಸುಭದ್ರೆಯು ಮಧುಸೂದನನಿಗೆ ಏನೆನ್ನುವಳು? ದ್ವಾರಕಾವಾಸಿಗಳು ಹರಿಯನ್ನು ಏನೆಂದು ಪ್ರಶ್ನಿಸುವರು? ಪುತ್ರರನ್ನೂ ಬಾಂಧವರನ್ನೂ ಕಳೆದುಕೊಂಡ ದ್ರೌಪದಿಯು ದೀನಳಾಗಿದ್ದಾಳೆ. ನಮ್ಮ ಪ್ರಿಯಹಿತದಲ್ಲಿಯೇ ನಿರತಳಾಗಿದ್ದ ಅವಳು ಈಗ ನನ್ನನ್ನು ಪೀಡಿಸುತ್ತಿರುವಳೋ ಎನ್ನುವಂತೆ ನನಗನ್ನಿಸುತ್ತದೆ. ಜೊತೆಗೆ ಇನ್ನೊಂದು ದುಃಖದ ಕುರಿತು ನಿನಗೆ ಹೇಳುತ್ತೇನೆ. ಕುಂತಿಯು ರಹಸ್ಯವಾಗಿಟ್ಟಿದ್ದುದನ್ನು ಕೇಳಿ ಅತೀವ ದುಃಖಿತನಾಗಿದ್ದೇನೆ. ಹತ್ತುಸಾವಿರ ಆನೆಗಳ ಬಲವಿದ್ದ, ಲೋಕದಲ್ಲಿಯೇ ಅಪ್ರತಿಮ ಮಹಾರಥ, ರಣದಲ್ಲಿ ಸಿಂಹದಂತೆ ಸಂಚರಿಸುತ್ತಿದ್ದ ಧೀಮಾನ್, ದಯಾಳು, ಅಭಿಮಾನೀ, ತೀಕ್ಷ್ಣ ಪರಾಕ್ರಮಿ, ಧಾರ್ತರಾಷ್ಟ್ರರ ಆಶ್ರಯ, ಅಸಹನಶೀಲ, ನಿತ್ಯಕೋಪೀ, ರಣರಣದಲ್ಲಿಯೂ ನಮ್ಮನ್ನು ಸೋಲಿಸುತ್ತಿದ್ದ ಆ ಶೀಘ್ರಾಸ್ತ್ರ, ಚಿತ್ರಯೋಧೀ, ಧನುರ್ವೇದ ಪಂಡಿತ, ಅದ್ಭುತ ವಿಕ್ರಮಿಯು ರಹಸ್ಯದಲ್ಲಿ ಹುಟ್ಟಿದ ಕುಂತಿಯ ಮಗ ಮತ್ತು ನಮ್ಮ ಸಹೋದರ ಅಣ್ಣನಾಗಿದ್ದನು! ಉದಕಕ್ರಿಯೆಗಳನ್ನು ಮಾಡುತ್ತಿದ್ದಾಗ ಕುಂತಿಯು ಸೂರ್ಯನಿಂದ ಹುಟ್ಟಿದ ಆ ಸರ್ವಗುಣೋಪೇತ ಪುತ್ರನನ್ನು ಹಿಂದೆ ನೀರಿನಲ್ಲಿ ತೇಲಿಸಿ ಬಿಟ್ಟಿದುದನ್ನು ನಮಗೆ ಹೇಳಿದಳು. ಈ ಲೋಕವು ಯಾರನ್ನು ರಾಧೇಯ ಸೂತಪುತ್ರನೆಂದು ಅಪಮಾನಿಸುತ್ತಿತ್ತೋ ಅವನು ಕುಂತಿಯ ಜ್ಯೇಷ್ಠಪುತ್ರ ಮತ್ತು ನಮ್ಮ ತಾಯಲ್ಲಿ ಹುಟ್ಟಿದ ನಮ್ಮ ಅಣ್ಣನಾಗಿದ್ದನು. ಅದನ್ನು ತಿಳಿಯದೇ ನಾನು ರಾಜ್ಯಲೋಭದಿಂದ ರಣದಲ್ಲಿ ಅವನನ್ನು ಕೊಲ್ಲಿಸಿದೆ. ಅಗ್ನಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಅದು ನನ್ನ ಅಂಗಾಂಗಳನ್ನು ಸುಡುತ್ತಿದೆ. ಅವನು ಅಣ್ಣನೆಂದು ಶ್ವೇತವಾಹನ ಪಾರ್ಥನಿಗಾಗಲೀ, ನನಗಾಗಲೀ, ಭೀಮನಿಗಾಗಲೀ, ಯಮಳರಿಗಾಗಲೀ ತಿಳಿದಿರಲಿಲ್ಲ. ಆದರೆ ನಾವು ಅವನ ಸಹೊದರರೆಂದು ಆ ಸುವ್ರತನಿಗೆ ತಿಳಿದಿತ್ತು! ನಮ್ಮೊಡನೆ ಶಾಂತಿಯನ್ನು ಬಯಸಿ ಪೃಥೆಯು ಅವಳ ಬಳಿ ಹೋಗಿ “ನೀನು ನನ್ನ ಮಗ” ಎಂದು ಹೇಳಿದ್ದಳೆಂದು ನಾವು ಕೇಳಿದ್ದೇವೆ. ಆದರೆ ಆ ಮಹಾತ್ಮನು ಪೃಥೆಯು ಬಯಸಿದಂತೆ ಮಾಡಲಿಲ್ಲ. ಅದೂ ಅಲ್ಲದೆ ಅವನು ತಾಯಿಗೆ ಇದನ್ನು ಹೇಳಿದನೆಂದು ನಾವು ಕೇಳಿದ್ದೇವೆ. “ರಣದಲ್ಲಿ ನೃಪ ದುರ್ಯೋಧನನನ್ನು ತ್ಯಜಿಸಲು ನಾನು ಶಕ್ತನಿಲ್ಲ. ನಾನು ಅನಾರ್ಯನೂ, ಕ್ರೂರಿಯೂ, ಕೃತಘ್ನನು ಆಗುವುದು ಬೇಡ! ನಿನ್ನ ಸಲಹೆಯಂತೆ ನಾನೇನಾದರೂ ಯುಧಿಷ್ಠಿರನೊಡನೆ ಸಂಧಿಮಾಡಿಕೊಂಡರೆ ರಣದಲ್ಲಿ ಶ್ವೇತವಾಹನನಿಗೆ ಹೆದರಿ ಹೀಗೆ ಮಾಡಿದೆನೆಂದು ಜನರು ತಿಳಿದುಕೊಳ್ಳುತ್ತಾರೆ. ಸಮರದಲ್ಲಿ ನಾನು ಕೇಶವನೊಡನೆ ವಿಜಯ ಅರ್ಜುನನನ್ನು ಸೋಲಿಸಿದ ನಂತರ ನಾನು ಧರ್ಮಪುತ್ರನೊಂದಿಗೆ ಸಂಧಿಮಾಡಿಕೊಳ್ಳುತ್ತೇನೆ” ಎಂದು ಅವನು ಹೇಳಿದನಂತೆ. ಪುನಃ ಪೃಥೆಯು ಆ ವಿಶಾಲವಕ್ಷಸ್ಥಳನಿಗೆ “ಬೇಕಾದರೆ ಫಲ್ಗುನನೊಡನೆ ಯುದ್ಧಮಾಡು, ಆದರೆ ಉಳಿದ ನಾಲ್ವರಿಗೆ ಅಭಯವನ್ನು ನೀಡು” ಎಂದು ಕೇಳಿಕೊಂಡಳಂತೆ! ಆಗ ಆ ಧೀಮಂತನು ನಡುಗುತ್ತಾ ಅಂಜಲೀಬದ್ಧನಾಗಿ ತಾಯಿಗೆ “ನಿನ್ನ ಆ ನಾಲ್ವರು ಮಕ್ಕಳೂ ನನ್ನಿಂದಾಗಿ ವಿಷಮ ಸ್ಥಿತಿಯನ್ನು ಹೊಂದಿದರೂ ನಾನು ಅವರನ್ನು ಸಂಹರಿಸುವುದಿಲ್ಲ. ಪಾರ್ಥನು ಹತನಾದರೆ ಕರ್ಣ ಮತ್ತು ನಾನು ಹತನಾದರೆ ಅರ್ಜುನನೂ ಸೇರಿ ನಿನಗೆ ಐವರು ಮಕ್ಕಳು ಇರುತ್ತಾರೆ. ಮಾತೇ! ಇದು ಸತ್ಯ!” ಪುತ್ರಪ್ರಿಯಳಾದ ಆ ಮಾತೆಯು ತನ್ನ ಮಗನಿಗೆ ಪುನಃ “ನೀನು ಯಾರಿಗೆ ಮಂಗಳವನ್ನುಂಟುಮಾಡಲು ಬಯಸುತ್ತೀಯೋ ಆ ಸಹೋದರರಿಗೆ ಮಂಗಳವನ್ನುಂಟುಮಾಡು!” ಎಂದು ಹೇಳಿದಳಂತೆ. ಪೃಥೆಯು ಹಾಗೆ ಹೇಳಲು ಅವರಿಬ್ಬರೂ ಬೀಳ್ಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರಂತೆ. ಆ ವೀರನೇ ಅರ್ಜುನನಿಂದ ಹತನಾದನು. ಅಣ್ಣನನ್ನು ತಮ್ಮನು ಸಂಹರಿಸಿದನು! ಈ ರಹಸ್ಯವನ್ನು ಪೃಥೆಯಾಗಲೀ ಕರ್ಣನಾಗಲೀ ಅಂತ್ಯದವರೆಗೂ ಹೊರಗೆಡಹಲೇ ಇಲ್ಲ! ಈಗ ಆ ಶೂರ ಮಹೇಷ್ವಾಸನು ಪಾರ್ಥನಿಂದ ಹತನಾಗಿದ್ದಾನೆ. ಅವನ ಮರಣಾನಂತರವೇ ನಾನು ಪೃಥೆಯ ವಚನದಂತೆ ಕರ್ಣನು ನಮ್ಮ ಸಹೋದರನೆಂದೂ, ನಮ್ಮೆಲ್ಲರ ಮೊದಲು ಹುಟ್ಟಿದ ಅಣ್ಣನೆಂದೂ ತಿಳಿದುಕೊಂಡೆನು. ಸಹೋದರನನ್ನು ಕೊಲ್ಲಿಸಿದ ನನ್ನ ಈ ಹೃದಯವು ಅತೀವವಾಗಿ ದುಃಖಿಸುತ್ತಿದೆ. ಕರ್ಣಾರ್ಜುನರ ಸಹಾಯದಿಂದ ನಾನು ವಾಸವನನ್ನೂ ಜಯಿಸಬಹುದಾಗಿತ್ತು! ಸಭೆಯಲ್ಲಿ ದುರಾತ್ಮ ಧಾರ್ಥರಾಷ್ಟ್ರರಿಂದ ಕಷ್ಟಕ್ಕೊಳಗಾದಾಗ ಒಮ್ಮೆಲೇ ಮೇಲೇರುತ್ತಿದ್ದ ನನ್ನ ಕ್ರೋಧವು ಕರ್ಣನನ್ನು ನೋಡಿದೊಡನೆಯೇ ತಣ್ಣಗಾಗುತ್ತಿತ್ತು! ಸಭೆಯಲ್ಲಿ ದ್ಯೂತವನ್ನಾಡುತ್ತಿದ್ದಾಗ ದುರ್ಯೋಧನನ ಹಿತೈಷಿ ಕರ್ಣನ ಕಠೋರ ಚುಚ್ಚುಮಾತುಗಳನ್ನು ಕೇಳಿ ಉಂಟಾದ ನನ್ನ ಕೋಪವು ಅವನ ಪಾದಗಳನ್ನು ನೋಡಿದೊಡನೆಯೇ ನಾಶವಾಗುತ್ತಿತ್ತು. ಕರ್ಣನ ಆ ಎರಡು ಪಾದಗಳು ಕುಂತಿಯ ಪಾದಗಳಂತಿದ್ದವು ಎಂದು ನನಗೆ ಅನ್ನಿಸುತ್ತಿತ್ತು. ಪೃಥೆಯ ಮತ್ತು ಅವನ ಪಾದಗಳ ಸಾದೃಶ್ಯತೆಯ ಕಾರಣವೇನೆಂದು ಎಷ್ಟೇ ಚಿಂತಿಸಿದರೂ ನನಗೆ ಆ ಕಾರಣವು ತಿಳಿದಿರಲಿಲ್ಲ. ಸಂಗ್ರಾಮದಲ್ಲಿ ಅವನ ರಥಚಕ್ರಗಳನ್ನು ಭೂಮಿಯು ಹೇಗೆ ನುಂಗಿಬಿಟ್ಟಳು? ನನ್ನ ಸಹೋದರನು ಹೇಗೆ ಶಪಿತನಾದನು? ಇದನ್ನು ನೀನು ನನಗೆ ಹೇಳಬೇಕು! ಭಗವನ್! ಅವೆಲ್ಲವನ್ನೂ ಯಥಾವತ್ತಾಗಿ ಕೇಳಬಯಸುತ್ತೇನೆ. ನೀನು ಲೋಕದಲ್ಲಿ ನಡೆದುಹೋದ ಮತ್ತು ನಡೆಯಲಿರುವ ಎಲ್ಲವನ್ನೂ ತಿಳಿದಿದ್ದೀಯೆ.”
ನಾರದನು ಕರ್ಣನ ರಹಸ್ಯಗಳನ್ನು ವಿವರಿಸಿದುದು
ಯುಧಿಷ್ಠಿರನು ಹೀಗೆ ಹೇಳಲು ಮಾತನಾಡುವವರಲ್ಲಿ ಶ್ರೇಷ್ಠ ಮುನಿ ನಾರದನು ಸೂತಜನು ಹೇಗೆ ಶಪಿತನಾದನೆನ್ನುದೆಲ್ಲವನ್ನೂ ಹೇಳಿದನು: “ಭಾರತ! ರಣದಲ್ಲಿ ಕರ್ಣಾರ್ಜುನರು ಜಯಿಸಲಾರದವರು ಯಾರೂ ಇಲ್ಲ ಎಂದು ನೀನು ಹೇಳಿದುದು ಸತ್ಯ. ದೇವತೆಗಳ ಈ ರಹಸ್ಯವನ್ನು ನಿನಗೆ ಹೇಳುತ್ತೇನೆ. ಹಿಂದೆ ನಡೆದುದನ್ನು ಕೇಳು. ಶಸ್ತ್ರಗಳಿಂದ ಪವಿತ್ರರನ್ನಾಗಿಸಿ ಕ್ಷತ್ರಿಯರನ್ನು ಸ್ವರ್ಗಕ್ಕೆ ಹೇಗೆ ಕರೆಯಿಸಿಕೊಳ್ಳಬೇಕೆಂದು ನಿಶ್ಚಯಿಸಿ ಸಂಘರ್ಷವನ್ನು ಹುಟ್ಟಿಸುವುದಕ್ಕೋಸ್ಕರ ಕನ್ಯೆ ಕುಂತಿಯಲ್ಲಿ ಗರ್ಭವನ್ನಿರಸಲಾಯಿತು. ತೇಜಾಯುಕ್ತನಾದ ಆ ಬಾಲಕನು ಸೂತಪುತ್ರತ್ವವನ್ನು ಪಡೆದನು. ನಿನ್ನ ಗುರುವಾದ ಆಂಗಿರಸ ಶ್ರೇಷ್ಠ ದ್ರೋಣನಲ್ಲಿ ಧನುರ್ವೇದವನ್ನು ಕಲಿತನು. ಅವನು ಭೀಮಸೇನನ ಬಲವನ್ನೂ, ಫಲ್ಗುನನ ಹಸ್ತಲಾಘವವನ್ನೂ, ನಿನ್ನ ಬುದ್ಧಿಯನ್ನೂ, ಯಮಳರ ವಿನಯವನ್ನೂ, ಗಾಂಡೀವಧನ್ವಿಯೊಡನೆ ವಾಸುದೇವನಿಗಿದ್ದ ಸಖ್ಯವನ್ನೂ, ನಿಮ್ಮ ಮೇಲೆ ಪ್ರಜೆಗಳಿಗಿದ್ದ ಅನುರಾಗವನ್ನೂ ನೋಡಿ ಬಾಲ್ಯದಲ್ಲಿಯೇ ಅಸೂಯೆಯಿಂದ ಸುಡುತ್ತಿದ್ದನು. ಬಾಲ್ಯದಲ್ಲಿಯೇ ಅವನು ರಾಜಾ ದುರ್ಯೋಧನನ ಸಖ್ಯದಲ್ಲಿ ಬಂದನು. ದೈವೇಚ್ಛೆಯಿಂದ ಸ್ವಭಾವತಃ ಅವನು ನಿತ್ಯವೂ ನಿಮ್ಮನ್ನು ದ್ವೇಷಿಸುತ್ತಿದ್ದನು. ಧನಂಜಯನು ಧನುರ್ವೇದವಿಧ್ಯೆಯಲ್ಲಿ ತನ್ನನ್ನೂ ಮೀರಿಸಿರುವುದನ್ನು ನೋಡಿ ಕರ್ಣನು ರಹಸ್ಯದಲ್ಲಿ ದ್ರೋಣನ ಬಳಿಸಾರಿ ಹೀಗೆಂದನು: “ಅದನ್ನು ಹಿಂತೆಗೆದುಕೊಳ್ಳುವ ರಹಸ್ಯದೊಂದಿಗೆ ಬ್ರಹ್ಮಾಸ್ತ್ರವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಯುದ್ಧದಲ್ಲಿ ಅರ್ಜುನನ ಸಮನಾಗಬೇಕೆಂದು ನನ್ನ ನಿಶ್ಚಯ. ನಿಮ್ಮ ಸ್ನೇಹವು ನಿಶ್ಚಯವಾಗಿಯೂ ಪುತ್ರರಲ್ಲಿ ಮತ್ತು ಶಿಷ್ಯರಲ್ಲಿ ಸಮನಾಗಿದೆ. ಆದುದರಿಂದ ನನ್ನನ್ನು ಅಸ್ತ್ರಗಳಲ್ಲಿ ಅಸಂಪೂರ್ಣನೆಂದು ತಿಳಿದವರು ಕರೆಯುವಂತಾಗದಿರದಂತೆ ಅನುಗ್ರಹಿಸಿ.” ಕರ್ಣನು ಹಾಗೆ ಹೇಳಲು ಕರ್ಣನ ದುರಾತ್ಮತೆಯನ್ನು ತಿಳಿದು, ಫಲ್ಗುನನ ಕುರಿತು ಪಕ್ಷಪಾತವಿದ್ದ ದ್ರೋಣನು ಅವನಿಗೆ ಹೇಳಿದನು: “ವ್ರತನಿರತನಾಗಿರುವ ಬ್ರಾಹ್ಮಣನಾಗಲೀ ತಪಸ್ವಿಯಾದ ಕ್ಷತ್ರಿಯನಾಗಲೀ ಬ್ರಹ್ಮಾಸ್ತ್ರವನ್ನು ತಿಳಿದುಕೊಳ್ಳಬಹುದು. ಬೇರೆ ಯಾರೂ ಎಂದೂ ಅದನ್ನು ತಿಳಿದುಕೊಳ್ಳಲಾರರು!”
“ಆಂಗಿರಸ ಶ್ರೇಷ್ಠನು ಹೀಗೆ ಹೇಳಲು ಅವನನ್ನು ಪ್ರತಿಪೂಜಿಸಿ ಅನುಮತಿಯನ್ನು ಪಡೆದು ಕೂಡಲೇ ಮಹೇಂದ್ರ ಪರ್ವತದಲ್ಲಿದ್ದ ರಾಮನ ಬಳಿ ನಡೆದನು. ಅವನು ರಾಮನ ಬಳಿಸಾರಿ ಗೌರವದಿಂದ ಶಿರಸಾ ಸಮಸ್ಕರಿಸಿ “ನಾನು ಭಾರ್ಗವ ವಂಶದ ಬ್ರಾಹ್ಮಣ!” ಎಂದು ಹೇಳಿದನು. ಗೋತ್ರ ಮೊದಲಾದ ಎಲ್ಲವನ್ನೂ ಕೇಳಿ ತಿಳಿದುಕೊಂಡು ರಾಮನು ಅವನನ್ನು “ಸ್ವಾಗತ! ಇಲ್ಲಿಯೇ ಇರು!” ಎಂದು ಅವನನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದನು. ಉತ್ತಮ ಮಹೇಂದ್ರಪರ್ವತದಲ್ಲಿ ವಾಸಿಸುತ್ತಿರುವಾಗ ಗಂಧರ್ವ-ರಾಕ್ಷಸ-ಯಕ್ಷ-ದೇವತೆಗಳೊಂದಿಗೆ ಕರ್ಣನ ಸಂದರ್ಶನವೂ ಆಯಿತು. ಅಲ್ಲಿ ಅವನು ಭೃಗುಶ್ರೇಷ್ಠನಿಂದ ಯಥಾವಿಧಿಯಾಗಿ ಅಸ್ತ್ರಗಳನ್ನು ಕಲಿತುಕೊಂಡನು ಮತ್ತು ದೇವ-ಗಂಧರ್ವ-ರಾಕ್ಷಸರ ಪ್ರಿಯಪಾತ್ರನೂ ಆದನು.
“ಒಮ್ಮೆ ಸೂತಜ ಕರ್ಣನು ಆಶ್ರಮ ಸಮೀಪದಲ್ಲಿ ಸಮುದ್ರತೀರದಲ್ಲಿ ಖಡ್ಗ-ಧನುಷ್ಪಾಣಿಯಾಗಿ ಒಬ್ಬನೇ ಸಂಚರಿಸುತ್ತಿದ್ದನು. ಅಲ್ಲಿ ಅವನು ಅಗ್ನಿಹೋತ್ರದಲ್ಲಿ ತೊಡಗಿದ್ದ ಯಾರೋ ಒಬ್ಬ ಬ್ರಹ್ಮವಾದಿನಿಯ ಹೋಮಧೇನುವನ್ನು ತಿಳಿಯದೇ ಆಕಸ್ಮಿಕವಾಗಿ ಕೊಂದುಬಿಟ್ಟನು. ತಾನು ತಿಳಿಯದೇ ಮಾಡಿದ ಆ ಕೃತ್ಯವನ್ನು ಬ್ರಾಹ್ಮಣನಿಗೆ ಹೇಳಿಕೊಂಡನು. ಅವನನ್ನು ಪ್ರಸನ್ನಗೊಳಿಸಲು ಕರ್ಣನು ಈ ಮಾತನ್ನಾಡಿದನು: “ಭಗವನ್! ಮೊದಲೇ ತಿಳಿದುಕೊಳ್ಳದೇ ಅಜ್ಞಾನದಿಂದ ನಿನ್ನ ಈ ಹಸುವನ್ನು ಕೊಂದುಬಿಟ್ಟೆನು! ನನ್ನ ಮೇಲೆ ಕರುಣೆ ತೋರಬೇಕು” ಎಂದು ಪುನಃ ಪುನಃ ಕೇಳಿಕೊಂಡನು. ಆ ವಿಪ್ರನಾದರೋ ಕ್ರುದ್ಧನಾಗಿ ಅವನನ್ನು ಹೆದರಿಸುವನೋ ಎನ್ನುವಂತೆ ಹೀಗೆ ಹೇಳಿದನು: “ದುರ್ಮತೇ! ನಿನ್ನ ಈ ದುರಾಚಾರವು ವಧಾರ್ಹವು. ಇದರ ಫಲವನ್ನು ನೀನು ಪಡೆಯುತ್ತೀಯೆ! ಯಾರೊಂದಿಗೆ ನೀನು ನಿತ್ಯವೂ ಸ್ಪರ್ಧಿಸುತ್ತೀಯೋ ಮತ್ತು ಯಾರನ್ನು ಕೊಲ್ಲಲು ನೀನು ಅಹೋರಾತ್ರಿ ಪ್ರಯತ್ನಿಸುವೆಯೋ ಅವನೊಡನೆ ಯುದ್ಧಮಾಡುವಾಗ ಪಾಪಿಯಾದ ನಿನ್ನ ರಥಚಕ್ರವನ್ನು ಭೂಮಿಯು ನುಂಗಿಬಿಡುತ್ತದೆ! ನೆಲದಲ್ಲಿ ಹುಗಿದುಹೋದ ಚಕ್ರವನ್ನು ನೋಡಿ ಕಂಗಾಲಾದ ನಿನ್ನ ಶಿರವನ್ನು ಶತ್ರುವು ವಿಕ್ರಮದಿಂದ ಕೆಳಗುರುಳಿಸುತ್ತಾನೆ! ಹೊರಟುಹೋಗುಮೂಢ! ಹೇಗೆ ನೀನು ಪ್ರಮತ್ತತೆಯಿಂದ ನನ್ನ ಗೋವನ್ನು ಸಂಹರಿಸಿದೆಯೋ ಹಾಗೆ ನೀನು ಪ್ರಮತ್ತನಾಗಿದ್ದಾಗ ಅನ್ಯನು ನಿನ್ನ ಶಿರವನ್ನು ಕೆಳಗುರುಳಿಸುತ್ತಾನೆ!” ಅನಂತರ ಕರ್ಣನು ಆ ದ್ವಿಜಸತ್ತಮನನ್ನು ಪುನಃ ಗೋವು-ಧನ-ರತ್ನಗಳಿಂದ ಪ್ರಸನ್ನಗೊಳಿಸಲು ಪ್ರಯತ್ನಿಸಲು, ಅವನು ಪುನಃ ಹೀಗೆ ಹೇಳಿದನು: “ಸರ್ವಲೋಕಗಳಿಗೂ ಇದನ್ನು ಸುಳ್ಳನ್ನಾಗಿಸಲು ಸಾಧ್ಯವಿಲ್ಲ! ಹೋಗು ಅಥವಾ ಇಲ್ಲಿಯೇ ಇರು! ನೀನು ಏನು ಮಾಡಿದರೂ ವ್ಯರ್ಥವೇ ಸರಿ!” ಬ್ರಾಹ್ಮಣನು ಹೀಗೆ ಹೇಳಲು ಕರ್ಣನು ದೈನ್ಯದಿಂದ ಅಧೋಮುಖನಾಗಿ ಅದನ್ನೇ ಮನಸ್ಸಿನಲ್ಲಿ ಚಿಂತಿಸುತ್ತಾ ಭಯಗೊಂಡವನಾಗಿ ರಾಮನ ಬಳಿ ಹೋದನು.
“ಕರ್ಣನ ಬಾಹುವೀರ್ಯ, ಪರಿಶ್ರಮ, ಜಿತೇಂದ್ರಿಯತೆ ಮತ್ತು ಗುರುಶುಶ್ರೂಷೆಗಳಿಂದ ಭೃಗುಶಾರ್ದೂಲನು ಸಂತುಷ್ಟನಾದನು. ಉತ್ತಮ ತಪೋನಿರತನಾಗಿದ್ದ ತಪಸ್ವಿ ರಾಮನು ಅವ್ಯಗ್ರ ಕರ್ಣನಿಗೆ ವಿಧಿವತ್ತಾಗಿ ಸಂಪೂರ್ಣ ಬ್ರಹ್ಮಾಸ್ತ್ರ ಪ್ರಯೋಗ-ಉಪಸಂಹಾರಗಳೊಂದಿಗೆ ಎಲ್ಲವನ್ನೂ ಉಪದೇಶಿಸಿದನು. ಬ್ರಹ್ಮಾಸ್ತ್ರವನ್ನು ಕಲಿತುಕೊಂಡ ಅದ್ಭುತವಿಕ್ರಮಿ ಕರ್ಣನು ಭೃಗುವಿನ ಆ ಆಶ್ರಮದಲ್ಲಿ ಸಂತೋಷದಿಂದಲೇ ಇದ್ದುಕೊಂಡು ಧನುರ್ವೇದವನ್ನು ಹಸ್ತಗತಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದನು.
“ಅನಂತರ ಒಮ್ಮೆ ರಾಮನು ಕರ್ಣನ ಸಹಿತ ಆಶ್ರಮದ ಬಳಿಯಲ್ಲಿಯೇ ತಿರುಗಾಡುತ್ತಿದ್ದನು. ಆ ಧೀಮಂತನು ಉಪವಾಸದಿಂದ ಕೃಶನಾಗಿದ್ದನು. ಅವನ ಮನಸ್ಸೂ ಕೂಡ ಬಹಳವಾಗಿ ಆಯಾಸಗೊಂಡಿತ್ತು. ಆಗ ಗುರು ಜಾಮದಗ್ನಿಯು ಸೌಹಾರ್ದತೆಯು ಬೆಳೆದಿದ್ದ ಕರ್ಣನ ತೊಡೆಯ ಮೇಲೆ ತನ್ನ ಶಿರವನ್ನಿತ್ತು ವಿಶ್ವಾಸದಿಂದ ಮಲಗಿದನು.
ಅದೇ ಸಮಯದಲ್ಲಿ ಕಫ, ಮೇಧಸ್ಸು, ಮಾಂಸ-ರಕ್ತಗಳನ್ನೇ ಭುಂಜಿಸುವ, ದಾರುಣವಾಗಿ ಕಚ್ಚಬಲ್ಲ, ದಾರುಣ ಕ್ರಿಮಿಯೊಂದ ಕರ್ಣನ ಬಳಿ ಬಂದಿತು. ರಕ್ತಾಹಾರಿಯಾದ ಆ ಕ್ರಿಮಿಯು ಅವನ ತೊಡೆಯ ಮೇಲೆ ಕುಳಿತು ತೊಡೆಯನ್ನು ಕೊರೆಯ ತೊಡಗಿತು. ಗುರುವಿನ ಭಯದಿಂದ ಅದನ್ನು ಎತ್ತಿ ಒಗೆಯಲು ಅಥವಾ ಕೊಲ್ಲಲು ಅವನಿಗೆ ಸಾಧ್ಯವಾಗಲಿಲ್ಲ. ಆ ಕೃಮಿಯು ತನ್ನನ್ನು ಕೊರೆಯುತ್ತಿದ್ದರೂ ಗುರುವಿಗೆ ಎಚ್ಚರವಾಗಬಹುದೆಂಬ ಶಂಕೆಯಿಂದ ಸೂತಜನು ಅದನ್ನು ಉಪೇಕ್ಷಿಸಿದನು. ವೇದನೆಯು ಸಹಿಸಲಸಾಧ್ಯವಾಗಿದ್ದರೂ ಕರ್ಣನು ಧೈರ್ಯದಿಂದ ಅದನ್ನು ಸಹಿಸಿಕೊಂಡು, ತನ್ನ ದೇಹವನ್ನು ಕಂಪಿಸದೇ ಭಾರ್ಗವನನ್ನು ತೊಡೆಯಮೇಲೆ ಮಲಗಿಸಿಕೊಂಡೇ ಇದ್ದನು. ಕರ್ಣನ ತೊಡೆಯಿಂದ ಹರಿಯುತ್ತಿದ್ದ ರಕ್ತವು ಭೃಗೂದ್ವಹನನ್ನು ಸ್ಪರ್ಷಿಸಲು ಆ ತೇಜಸ್ವಿಯು ಎಚ್ಚೆದ್ದು ಸಂತಪ್ತನಾಗಿ ಹೇಳಿದನು: “ಅಯ್ಯೋ! ರಕ್ತಸ್ಪರ್ಷದಿಂದ ನಾನು ಅಶುಚಿಯಾಗಿಬಿಟ್ಟೆನು! ನೀನೇನು ಮಾಡಿಬಿಟ್ಟೆ? ಭಯವನ್ನು ತೊರೆದು ಯಥಾವತ್ತಾಗಿ ಏನಾಯಿತೆಂದು ನನ್ನೊಡನೆ ಹೇಳು!” ಕರ್ಣನು ಅವನಿಗೆ ಕ್ರಿಮಿಯು ತನ್ನ ತೊಡೆಯನ್ನು ಕೊರೆದು ತಿನ್ನುತ್ತಿದ್ದುದನ್ನು ಹೇಳಿದನು. ರಾಮನೂ ಕೂಡ ಹಂದಿಯಂತಿದ್ದ ಆ ಕ್ರಿಮಿಯನ್ನು ನೋಡಿದನು. ಎಂಟು ಕಾಲುಗಳಿದ್ದ, ತೀಕ್ಷ್ಣ ಹಲ್ಲುಗಳಿದ್ದ, ಸೂಜಿಗಳಂಥ ರೋಮಗಳಿಂದ ಆವೃತವಾಗಿದ್ದ, ಅಂಗಾಂಗಗಳನ್ನು ಸಂಕೋಚಿಸಿಕೊಂಡಿದ್ದ ಆ ಕ್ರಿಮಿಯು ಅಲರ್ಕ ಎಂಬ ನಾಮದಿಂದ ತಿಳಿಯಲ್ಪಟ್ಟಿತ್ತು. ರಾಮನ ದೃಷ್ಟಿಮಾತ್ರದಿಂದಲೇ ಕರ್ಣನ ರಕ್ತದಿಂದ ತೋಯ್ದುಹೋಗಿದ್ದ ಆ ಕೃಮಿಯು ಪ್ರಾಣವನ್ನು ತೊರೆಯಿತು. ಅದೊಂದು ಅದ್ಭುತವಾಗಿತ್ತು.
“ಆಗ ಅಂತರಿಕ್ಷದಲ್ಲಿ ಕರಾಲ ರೂಪಧರಿಸಿದ್ದ, ಕೆಂಪುಕುತ್ತಿಗೆಯ, ಕಪ್ಪು ದೇಹದ, ಮೇಘವಾಹನ ರಾಕ್ಷಸನು ಕಾಣಿಸಿಕೊಂಡನು. ಪೂರ್ಣಮನಸ್ಕನಾದ ಅವನು ರಾಮನಿಗೆ ಕೈಮುಗಿದು ಹೇಳಿದನು: “ಭೃಗುಶಾರ್ದೂಲ! ನಿನಗೆ ಮಂಗಳವಾಗಲಿ! ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟು ಹೋಗುತ್ತೇನೆ! ಈ ನರಕದಿಂದ ನೀನು ನನಗೆ ಬಿಡುಗಡೆಯನ್ನು ನೀಡಿರುವೆ! ನಿನಗೆ ಮಂಗಳವಾಗಲಿ! ನೀನು ನನಗೆ ಪ್ರಿಯವಾದುದನ್ನೇ ಮಾಡಿ ಸಂತೋಷವನ್ನಿತ್ತಿರುವೆ!” ಮಹಾಬಾಹು ಜಾಮದಗ್ನ್ಯ ಪ್ರತಾಪವಾನನು ಅವನಿಗೆ ಹೇಳಿದನು: “ನೀನು ಯಾರು? ಯಾವ ಕಾರಣದಿಂದ ಈ ನರಕದಲ್ಲಿ ಬಿದ್ದಿರುವೆ? ಅದನ್ನು ಹೇಳು!” ಅವನು ಹೇಳಿದನು: “ಅಯ್ಯಾ! ನಾನು ಹಿಂದೆ ಸತ್ಯಯುಗದಲ್ಲಿ ಗೃತ್ಸ ಎಂಬ ಹೆಸರಿನ ಮಹಾಸುರನಾಗಿದ್ದೆನು. ವಯಸ್ಸಿನಲ್ಲಿ ನಾನು ಭೃಗುವಿನ ಸಮನಾಗಿದ್ದೆನು. ಭೃಗುವಿನ ಪ್ರಿಯ ಭಾರ್ಯೆಯನ್ನು ನಾನು ಬಲಾತ್ಕಾರದಿಂದ ಅಪಹರಿಸಿದ್ದೆನು. ಆ ಮಹರ್ಷಿಯ ಶಾಪದಿಂದ ಕ್ರಿಮಿಯಾಗಿ ಭೂಮಿಯ ಮೇಲೆ ಬಿದ್ದೆನು. ಕ್ರೋಧಿತನಾದ ನಿನ್ನ ಮುತ್ತಜ್ಜನು ನನಗೆ “ಮೂತ್ರ-ಕಫಗಳನ್ನು ತಿನ್ನುತ್ತಾ ನೀನು ಪಾಪ ನರಕದಲ್ಲಿ ಬೀಳುವೆ!” ಎಂದು ಹೇಳಿದನು. “ಬ್ರಹ್ಮನ್! ಈ ಶಾಪವು ಅಂತ್ಯವಾಗುವಂತೆ ಅನುಗ್ರಹಿಸು!” ಎಂದು ನಾನು ಕೇಳಿಕೊಳ್ಳಲು “ಭಾರ್ಗವ ರಾಮನಿಂದ ಶಾಪವಿಮೋಚನೆಯಾಗುತ್ತದೆ” ಎಂದು ಭೃಗುವು ಹೇಳಿದನು. ಯಾವರೀತಿಯ ಕುಶಲವನ್ನೂ ಕಾಣದೇ ನಾನು ಈ ದುರ್ಗತಿಯನ್ನು ಅನುಭವಿಸಿದೆನು. ಸಾಧುವೇ! ನಿನ್ನ ಸಮಾಗಮದಿಂದಾಗಿ ನಾನು ಈ ಪಾಪಜನ್ಮದಿಂದ ಮುಕ್ತನಾಗಿದ್ದೇನೆ!” ಹೀಗೆ ಹೇಳಿ ರಾಮನಿಗೆ ನಮಸ್ಕರಿಸಿ ಮಹಾಸುರನು ಹೊರಟುಹೋದನು.
“ರಾಮನಾದರೋ ಕ್ರೋಧದಿಂದ ಕರ್ಣನಿಗೆ ಹೀಗೆ ಹೇಳಿದನು: “ಮೂಢ! ಇಂಥಹ ಅತಿದುಃಖವನ್ನು ಬ್ರಾಹ್ಮಣನಾದವನು ಎಂದಿಗೂ ಸಹಿಸಿಕೊಳ್ಳಲಾರ! ನಿನ್ನ ಈ ಧೈರ್ಯವು ಕ್ಷತ್ರಿಯನದ್ದೇ! ನೀನಾಗಿಯೇ ಸತ್ಯವನ್ನು ಹೇಳು!” ಶಾಪಕ್ಕೆ ಹೆದರಿದ ಕರ್ಣನು ಅವನನ್ನು ಪ್ರಸನ್ನಗೊಳಿಸುತ್ತಾ ಹೇಳಿದನು: “ಭಾರ್ಗವ! ಬ್ರಾಹ್ಮಣ-ಕ್ಷತ್ರಿಯರಿಗೆ ಭಿನ್ನರಾದ ಸೂತರಲ್ಲಿ ಹುಟ್ಟಿದವನೆಂದು ತಿಳಿ. ರಾಧೇಯ ಕರ್ಣನೆಂದು ಭುವಿಯಲ್ಲಿ ಜನರು ನನ್ನನ್ನು ಕರೆಯುತ್ತಾರೆ. ಅಸ್ತ್ರಲೋಭಿಯಾದ ನನ್ನ ಮೇಲೆ ಕುರುಣೆತೋರಿಸು! ವೇದವಿದ್ಯೆಗಳನ್ನು ನೀಡುವ ಪ್ರಭು ಗುರುವು ತಂದೆಯಂತೆ ಎಂದು ನನಗೆ ಸಂದೇಹವಿರಲಿಲ್ಲ. ಆದುದರಿಂದ ನನ್ನದು ಭಾರ್ಗವ ಗೋತ್ರವೆಂದು ಹೇಳಿ ನಿನ್ನ ಬಳಿ ಬಂದೆ!” ನೆಲದ ಮೇಲೆ ಬಿದ್ದು ದೀನನಾಗಿ ಕೈಮುಗಿದು ನಡುಗುತ್ತಿದ್ದ ಅವನಿಗೆ ರೋಷದಿಂದ ನಗುತ್ತಿರುವನೋ ಎನ್ನುವಂತೆ ಆ ಭೃಗುಶ್ರೇಷ್ಠನು ಹೇಳಿದನು: “ಮೂಢ! ಅಸ್ತ್ರಲೋಭದಿಂದ ನೀನು ನನ್ನೊಡನೆ ಸುಳ್ಳಾಗಿ ನಡೆದುಕೊಂಡಿದುದರಿಂದ ನಿನ್ನ ವಧೆಯ ಕಾಲವಲ್ಲದಾಗ ಮತ್ತು ನಿನ್ನ ಸಮಾನರೊಡನೆ ಯುದ್ಧಮಾಡುವಾಗ ಮಾತ್ರ ಬ್ರಹ್ಮಾಸ್ತ್ರವು ನಿನಗೆ ಹೊಳೆಯುತ್ತದೆಯೆಂದು ತಿಳಿದುಕೋ! ಅಬ್ರಾಹ್ಮನಲ್ಲಿ ಬ್ರಹ್ಮಾಸ್ತ್ರವು ಎಂದೂ ನಿಲ್ಲುವುದಿಲ್ಲವೆನ್ನುವುದು ಸತ್ಯ! ಅನೃತವಾದಿಗೆ ಇಲ್ಲಿ ಯಾವ ಸ್ಥಾನವೂ ಇಲ್ಲ. ಕೂಡಲೇ ಇಲ್ಲಿಂದ ಹೊರಟು ಹೋಗು! ಯುದ್ಧದಲ್ಲಿ ನಿನ್ನ ಸಮಾನನಾದ ಕ್ಷತ್ರಿಯನು ಭುವಿಯಲ್ಲಿಯೇ ಇರುವುದಿಲ್ಲ!” ರಾಮನು ಹೀಗೆ ಹೇಳಲು ನ್ಯಾಯರೀತಿಯಲ್ಲಿ ಅವನಿಂದ ಬೀಳ್ಕೊಂಡು ದುರ್ಯೋಧನನ ಬಳಿಸಾರಿ “ನಾನು ಅಸ್ತ್ರವಿದ್ಯಾಪಾರಂಗತನಾಗಿದ್ದೇನೆ!” ಎಂದು ಹೇಳಿದನು. ಭಾರ್ಗವನಂದನನಿಂದ ಆ ಅಸ್ತ್ರವನ್ನು ಪಡೆದು ಕರ್ಣನು ದುರ್ಯೋಧನನೊಂದಿಗೆ ಆನಂದಿಸಿದನು.
“ಅನಂತರ ಒಮ್ಮೆ ಕಲಿಂಗದೇಶದ ರಾಜ ಚಿತ್ರಾಂಗದನಲ್ಲಿಗೆ ಸ್ವಯಂವರಕ್ಕೆಂದು ರಾಜರು ಬಂದು ಸೇರಿದರು. ಆ ನಗರದ ಹೆಸರು ಶ್ರೀಮದ್ರಾಜಪುರವೆಂದಿತ್ತು. ಅಲ್ಲಿಗೆ ಕನ್ಯೆಗೋಸ್ಕರವಾಗಿ ನೂರಾರು ರಾಜರು ಆಗಮಿಸಿದರು. ಸರ್ವ ಪಾರ್ಥಿವರೂ ಅಲ್ಲಿ ಸೇರಿರುವರೆಂದು ಕೇಳಿದ ದುರ್ಯೋಧನನು ಕರ್ಣನೊಂದಿಗೆ ಕಾಂಚನ ರಥದಲ್ಲಿ ಕುಳಿತು ಹೋದನು. ನಡೆಯುತ್ತಿದ್ದ ಆ ಸ್ವಯಂವರ ಮಹೋತ್ಸವಕ್ಕೆ ಕನ್ಯೆಗಾಗಿ ಈ ಎಲ್ಲ ನೃಪತಿಯರು ಸೇರಿದ್ದರು: ಶಿಶುಪಾಲ, ಜರಾಸಂಧ, ಭೀಷ್ಮಕ, ವಕ್ರ, ಕಪೋತರೋಮ, ನೀಲ, ರುಕ್ಮಿ, ಸ್ತ್ರೀರಾಜ್ಯಾಧಿಪತಿ ಸೃಗಾಲ, ಅಶೋಕ, ಶತಧನ್ವ, ಭೋಜ ಮತ್ತು ವೀರನೆನ್ನುವ ರಾಜ. ಇವರಲ್ಲದೇ ಇನ್ನೂ ಇತರ ಅನೇಕ ದಕ್ಷಿಣದೇಶದವರು, ಮ್ಲೇಚ್ಛರು, ಆರ್ಯರು, ಪೂರ್ವೋತ್ತರ ದಿಕ್ಕಿನ ರಾಜರು ಬಂದಿದ್ದರು. ಅವರೆಲ್ಲರೂ ಕಾಂಚನ ಅಂಗದಗಳನ್ನೂ, ಚಿನ್ನದ ಹಾರಗಳನ್ನೂ ಧರಿಸಿದ್ದರು. ಎಲ್ಲರ ದೇಹಗಳೂ ಕಾಂತಿಯುಕ್ತವಾಗಿದ್ದವು ಮತ್ತು ಎಲ್ಲರೂ ವ್ಯಾಘ್ರರಂತೆ ಮದೋತ್ಕಟರಾಗಿದ್ದರು. ಆ ರಾಜರು ಕುಳಿತುಕೊಂಡಿರಲು ಕನ್ಯೆಯು ಅನೇಕ ಸೇವಕಿಯರಿಂದ ಸುತ್ತುವರೆಯಲ್ಪಟ್ಟು ರಂಗವನ್ನು ಪ್ರವೇಶಿಸಿದಳು. ರಾಜರ ಹೆಸರುಗಳನ್ನು ಹೇಳುತ್ತಿರುವಾಗ ಆ ವರವರ್ಣಿನೀ ಕನ್ಯೆಯು ಧಾರ್ತರಾಷ್ಟ್ರ ದುರ್ಯೋಧನನನ್ನು ದಾಟಿ ಮುಂದುವರೆದಳು. ಆ ರೀತಿ ಅವಳು ತನ್ನನ್ನು ದಾಟಿಹೋದುದನ್ನು ಕೌರವ್ಯ ದುರ್ಯೋಧನನು ಸಹಿಸಿಕೊಳ್ಳಲಿಲ್ಲ. ಅಲ್ಲಿದ್ದ ನರಾಧಿಪರನ್ನು ಕಡೆಗಣಿಸಿ ಅವನು ಆ ಕನ್ಯೆಯನ್ನು ತಡೆದನು. ಭೀಷ್ಮ-ದ್ರೋಣರ ಆಶ್ರಯವನ್ನು ಪಡೆದಿದ್ದ ವೀರ್ಯಮದದಿಂದ ಮತ್ತನಾಗಿದ್ದ ಅವನು ಆ ಕನ್ಯೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅಪಹರಿಸಿದನು. ಆಗ ಗೋಧಾಂಗುಲಿಗಳನ್ನು ಕಟ್ಟಿಕೊಂಡು ಖಡ್ಗಧಾರಿಯಾಗಿ ರಥವೇರಿ ಶಸ್ತ್ರಭೃತರಲ್ಲಿ ಶ್ರೇಷ್ಠ ಕರ್ಣನು ಅವನನ್ನು ಅನುಸರಿಸಿ ಹೋದನು. ಆಗ ರಾಜರ ಮಹಾ ಯುದ್ಧವೇ ನಡೆಯಿತು. ಕುಪಿತರಾದ ರಾಜರು ಕವಚಗಳನ್ನು ಧರಿಸಿ ರಥಗಳನ್ನು ಸಿದ್ಧಗೊಳಿಸಿದರು. ಮೇಘಗಳು ಪರ್ವತಗಳ ಮೇಲೆ ಹೇಗೋ ಹಾಗೆ ಸಂಕ್ರುದ್ಧರಾದ ಅವರು ಕರ್ಣ-ದುರ್ಯೋಧನರ ಮೇಲೆ ಶರವರ್ಷಗಳನ್ನು ಸುರಿಸಿದರು. ಕರ್ಣನು ತನ್ನ ಮೇಲೆ ಬೀಳುತ್ತಿದ್ದ ಅವರ ಬಾಣಗಳನ್ನು ಒಂದೊಂದಾಗಿ ಕ್ಷುರದಿಂದ ಕತ್ತರಿಸಿ ಅವರ ಧನುಸ್ಸು-ಬತ್ತಳಿಕೆಗಳನ್ನೂ ಭೂಮಿಯ ಮೇಲೆ ಬೀಳಿಸಿದನು. ಆಗ ಕೆಲವರು ಧನುಸ್ಸುಗಳನ್ನು ಕಳೆದುಕೊಂಡಿದ್ದರು. ಕೆಲವರು ಬಾಣಗಳಲ್ಲಿದೇ ಕೇವಲ ಧನುಸ್ಸುಗಳನ್ನು ಎತ್ತಿ ಹಿಡಿದಿದ್ದರು. ಕೆಲವರು ಬಾಣಗಳನ್ನೂ, ರಥ-ಶಕ್ತಿ-ಗದೆಗಳನ್ನೂ ಕಳೆದುಕೊಂಡಿದ್ದರು. ಪ್ರಹರಿಗಳಲ್ಲಿ ಶ್ರೇಷ್ಠ ಕರ್ಣನು ತನ್ನ ಹಸ್ತಲಾಘವದಿಂದ ಅವರನ್ನು ಆಯುಧಹೀನರನ್ನಾಗಿಸಿ, ಅವರ ಸಾರಥಿಗಳನ್ನೂ ಸಂಹರಿಸಿ, ಆ ನರಾಧಿಪರನ್ನು ಇನ್ನೂ ಹೆಚ್ಚಿನ ಕಷ್ಟಗಳಿಗೀಡುಮಾಡಿದನು. ಸ್ವಯಂ ರಾಜರೇ ಹೋಗು ಹೋಗೆಂದು ಕುದುರೆಗಳನ್ನು ಓಡಿಸುತ್ತಾ, ಭಗ್ನಮಾನಸರಾಗಿ ರಣವನ್ನು ತೊರೆದು ಹೊರಟು ಹೋದರು. ದುರ್ಯೋಧನನಾದರೋ ಕರ್ಣನಿಂದ ರಕ್ಷಿಸಲ್ಪಟ್ಟು ಸಂತೋಷದಿಂದ ಕನ್ಯೆಯನ್ನು ಕರೆದುಕೊಂದು ಹಸ್ತಿನಾಪುರ ನಗರಕ್ಕೆ ಪ್ರಯಾಣಿಸಿದನು.
“ಸರ್ವತ್ರ ಖ್ಯಾತವಾಗಿದ್ದ ಕರ್ಣನ ಬಲವನ್ನು ಕೇಳಿ ಮಗಧ ದೇಶದ ರಾಜ ಮಹೀಪತಿ ಜರಾಸಂಧನು ಅವನನ್ನು ದ್ವೈರಥಯುದ್ಧಕ್ಕೆ ಆಹ್ವಾನಿಸಿದನು. ದಿವ್ಯಾಸ್ತ್ರಗಳಲ್ಲಿ ಪರಿಣಿತರಾಗಿದ್ದ ಅವರಿಬ್ಬರ ನಡುವೆ ಯುದ್ಧವು ಪ್ರಾರಂಭವಾಯಿತು. ಯುದ್ಧದಲ್ಲಿ ನಾನಾ ಪ್ರಹಾರಗಳಿಂದ ಅನ್ಯೋನ್ಯರನ್ನು ತೋಯಿಸಿದರು. ಬಾಣಗಳು ಮುಗಿದುಹೋಗಲು, ಧನುಸ್ಸೂ ಇಲ್ಲವಾಗಲು, ಮತ್ತು ಖಡ್ಗಗಳು ತುಂಡಾಗಲು ಆ ಇಬ್ಬರು ಬಲಾನ್ವಿತರೂ ನೆಲದ ಮೇಲೆ ನಿಂತು ಬಾಹುಯುದ್ಧದಲ್ಲಿ ತೊಡಗಿದರು. ಬಾಹುಕಂಟಕ[1] ಯುದ್ಧದಲ್ಲಿ ತೊಡಗಿದ್ದ ಕರ್ಣನು ಜರೆಯು ಜೋಡಿಸಿದ್ದ ಜರಾಸಂಧನ ಸಂಧಿಬಂಧವನ್ನು ಭೇದಿಸತೊಡಗಿದನು. ತನ್ನ ಶರೀರವು ವಿಕಾರವಾಗುತ್ತಿರುವನ್ನು ನೋಡಿ ಆ ನೃಪತಿಯು ವೈರವನ್ನು ತೊರೆದು “ನಿನ್ನಿಂದ ನಾನು ಪ್ರೀತನಾಗಿದ್ದೇನೆ!” ಎಂದು ಕರ್ಣನಿಗೆ ಹೇಳಿದನು. ಅವನು ಪ್ರೀತಿಯಿಂದ ಕರ್ಣನಿಗೆ ಮಾಲಿನೀ ನಗರವನ್ನು ಕೊಟ್ಟನು. ಶತ್ರುವಿಜಯಿ ಅಂಗದ ರಾಜನು ಅದನ್ನು ಆಳಿದನು. ಪರಬಲಾರ್ದನ ಕರ್ಣನು ದುರ್ಯೋಧನನ ಅನುಮತಿಯಂತೆ ಚಂಪಾಪುರವನ್ನೂ ಆಳುತ್ತಿದ್ದನು. ಹೀಗೆ ಶಸ್ತ್ರಪ್ರತಾಪದಿಂದ ಅವನು ಭೂಮಿಯಲ್ಲಿ ಖ್ಯಾತನಾದನು.
“ನಿನ್ನ ಹಿತಕ್ಕಾಗಿ ಸುರೇಂದ್ರನು ಅವನ ಕವಚ-ಕುಂಡಲಗಳನ್ನು ಭಿಕ್ಷೆಯಾಗಿ ಬೇಡಿದನು. ದೇವಮಾಯೆಯಿಂದ ಮೋಹಿತನಾದ ಅವನು ಹುಟ್ಟುವಾಗಲೇ ಇದ್ದಿದ್ದ ಕುಂಡಲಗಳನ್ನೂ ಹುಟ್ಟುವಾಗಲೇ ಇದ್ದಿದ್ದ ಕವಚವನ್ನೂ ಇಂದ್ರನಿಗೆ ಕೊಟ್ಟುಬಿಟ್ಟನು. ಸಹಜ ಕವಚ-ಕುಂಡಲಗಳಿಂದ ವಿಹೀನನಾಗಿದ್ದ ಅವನನ್ನು ವಿಜಯ ಅರ್ಜುನನು ವಾಸುದೇವನ ಸಮಕ್ಷಮದಲ್ಲಿಯೇ ಸಂಹರಿಸಿದನು. ಬ್ರಾಹ್ಮಣನ ಮತ್ತು ಮಹಾತ್ಮ ರಾಮನ ಶಾಪದಿಂದ, ಕುಂತಿಯ ಮತ್ತು ಶತುಕ್ರತುವಿಗೆ ಮೋಸಹೋಗಿ ನೀಡಿದ ವರದಿಂದ, ರಥಾಥಿರಥರನ್ನು ಎಣಿಸುವಾಗ ಭೀಷ್ಮನು ಅವನನ್ನು ಅರ್ಧರಥನೆಂದು ಹೇಳಿದುದರಿಂದ, ಶಲ್ಯನ ತೇಜೋವಧೆಯಿಂದ, ವಾಸುದೇವನ ನೀತಿ, ಮತ್ತು ರದ್ರ-ದೇವರಾಜ-ಯಮ-ವರುಣ-ಕುಬೇರ-ದ್ರೋಣ ಮತ್ತು ಮಹಾತ್ಮಕೃಪರಿಂದ ದಿವ್ಯಾಸ್ತ್ರಗಳನ್ನು ಪಡೆದಿದ್ದ ಗಾಂಡೀವ ಧನ್ವಿ ಇವೆಲ್ಲ ಕಾರಣಗಳಿಂದ ದಿವಾಕರ ಸಮಾನ ಕಾಂತಿಯಿದ್ದ ವೈಕರ್ತನ ಕರ್ಣನು ಯುದ್ಧದಲ್ಲಿ ಹತನಾದನು. ಹೀಗೆ ಅನೇಕರಿಂದ ಶಾಪಗ್ರಸ್ತನಾಗಿ ಮತ್ತು ಅನೇಕರಿಂದ ವಂಚಿತನಾಗಿ ನಿನ್ನ ಅಣ್ಣ ನರವ್ಯಾಘ್ರನು ಯುದ್ಧದಲ್ಲಿ ನಿಧನಹೊಂದಿದನು. ಅವನಿಗಾಗಿ ಶೋಕಿಸಬೇಡ!”
ಯುಧಿಷ್ಠಿರನು ಸ್ತ್ರೀಯರಿಗಿತ್ತ ಶಾಪ
ಹೀಗೆ ಹೇಳಿ ದೇವರ್ಷಿ ನಾರದನು ಸುಮ್ಮನಾದನು. ರಾಜರ್ಷಿ ಯುಧಿಷ್ಠಿರನಾದರೋ ಶೋಕಸಾಗರದಲ್ಲಿ ಮುಳುಗಿಹೋದನು. ದೀನಮನಸ್ಕನಾಗಿ ಮುಖ ಕೆಳಗೆಮಾಡಿಕೊಂಡು, ಆತುರನಾಗಿ ನಾಗದಂತೆ ನಿಟ್ಟುಸಿರುಬಿಡುತ್ತಾ ಕಣ್ಣೀರನ್ನು ಸುರಿಸುತ್ತಿದ್ದ ಅವನಿಗೆ ಶೋಕದಿಂದ ಸುಡುತ್ತಿದ್ದ, ದುಃಖದಿಂದ ಚೇತನವನ್ನೇ ಕಳೆದುಕೊಂಡಿದ್ದ ಕುಂತಿಯು ಮಧುರಭಾಷೆಯಲ್ಲಿ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದಳು: “ಯುಧಿಷ್ಠಿರ! ನೀನು ಈ ರೀತಿ ಶೋಕಿಸಬಾರದು! ಶೋಕವನ್ನು ತೊರೆ! ನನ್ನ ಈ ಮಾತನ್ನು ಕೇಳು! ನೀವು ಸಹೋದರರೆಂದು ಮೊದಲೇ ಅವನಿಗೆ ತಿಳಿಸಲು ನಾನೂ ಮತ್ತು ಅವನ ತಂದೆ ದೇವ ಭಾಸ್ಕರನೂ ಪ್ರಯತ್ನಿಸಿದ್ದೆವು. ಹಿತವನ್ನು ಬಯಸಿ ಸುಹೃದಯರಿಗೆ ಏನನ್ನು ಹೇಳಬೇಕೋ ಅದನ್ನೇ ದಿವಾಕರನು ಸ್ವಪ್ನದಲ್ಲಿ ಮತ್ತು ನನ್ನ ಸಮಕ್ಷಮದಲ್ಲಿ ಕರ್ಣನಿಗೆ ಹೇಳಿದ್ದನು. ದುರ್ಯೋಧನನೊಂದಿಗೆ ಅವನಿಗಿದ್ದ ಸ್ನೇಹದ ಕಾರಣದಿಂದಾಗಿ ಭಾನುವಾಗಲೀ ನಾನಾಗಲೀ ಕರ್ಣನು ನಿನ್ನೊಡನೆ ಸೇರಿಸುವಂತೆ ಅಥವಾ ಒಂದಾಗಿರುವಂತೆ ಮಾಡಲು ಶಕ್ಯರಾಗಲಿಲ್ಲ. ಅನಂತರ ಕಾಲವಶದಿಂದಾಗಿ ಅವನು ನಿಮ್ಮೊಡನೆ ವೈರವನ್ನು ಬೆಳೆಸುವುದರಲ್ಲಿಯೇ ನಿರತನಾಗಿದ್ದನು ಮತ್ತು ನಿಮಗೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದನು. ಆದುದರಿಂದ ನಾನು ಅವನನ್ನು ಉಪೇಕ್ಷಿಸಿದೆ!”
ತಾಯಿಯು ಹೀಗೆ ಹೇಳಲು ಕಣ್ಣಿರುತುಂಬಿದ ಶೋಕವ್ಯಾಕುಲಚೇತನನಾಗಿದ್ದ ಧರ್ಮಾತ್ಮ ಧರ್ಮರಾಜನು “ನೀನು ಈ ವಿಷಯವನ್ನು ರಹಸ್ಯವಾಗಿಯೇ ಇಟ್ಟಿದುದರಿಂದ ನಾನು ಬಹಳ ಪೀಡಿತನಾಗಿದ್ದೇನೆ!” ಎಂದು ತಾಯಿಗೆ ಹೇಳಿದನು. ಅತಿ ದುಃಖ ಸಮನ್ವಿತನಾದ ಆ ಮಹಾತೇಜಸ್ವಿಯು ಸರ್ವಲೋಕಗಳಲ್ಲಿನ ಸ್ತ್ರೀಯರಿಗೆ “ರಹಸ್ಯವನ್ನು ಹಿಡಿದಿಟ್ಟುಕೊಳ್ಳಲಾರಿರಿ!” ಎಂದು ಶಪಿಸಿದನು.
[1] ಬಾಹುಕಂಟಕ ಯುದ್ಧವನ್ನು ಈ ರೀತಿ ವರ್ಣಿಸಿದ್ದಾರೆ: ಏಕಾಂ ಜಂಘಾಂ ಪದಾಕ್ರಮ್ಯ ಪರಾಮುದ್ಯಮ್ಯ ಪಾಟ್ಯತೇ| ಕೇತಕೀಪತ್ರವಚ್ಚತ್ರೋರ್ಯುದ್ಧಂ ತದ್ಬಾಹುಕಂಟಕಂ|| ಅರ್ಥಾತ್ ಕೇದಗೆಯ ಗರಿಯನ್ನು ಎರಡಾಗಿ ಸೀಳುವಂತೆ ಶತ್ರುವಿನ ಒಂದು ಮೊಣಕಾಲನ್ನು ಮೆಟ್ಟಿಕೊಂಡು ಮತ್ತೊಂದು ಮೊಣಕಾಲನ್ನು ಮೇಲಕ್ಕೆತ್ತಿ ಸೀಳುವುದಕ್ಕೆ ಬಾಹುಕಂಟಕಯುದ್ಧವೆಂದು ಹೆಸರು.