ಕೌಶಿಕ-ಪತಿವ್ರತೆ-ಧರ್ಮವ್ಯಾಧ
ಓರ್ವ ದ್ವಿಜಾತಿಪ್ರವರ, ವೇದಧ್ಯಾಯೀ, ತಪೋಧನ, ಧರ್ಮಶೀಲ ಕೌಶಿಕ ಎಂಬ ಹೆಸರಿನ ತಪಸ್ವಿಯಿದ್ದನು. ಆ ದ್ವಿಜಸತ್ತಮನು ಉಪನಿಷತ್ತುಗಳೊಂದಿಗೆ ವೇದಗಳನ್ನು ತಿಳಿದುಕೊಂಡಿದ್ದನು. ಒಮ್ಮೆ ಅವನು ಒಂದು ಮರದ ಕೆಳಗೆ ವೇದಗಳನ್ನು ಉಚ್ಚರಿಸುತ್ತಾ ನಿಂತಿದ್ದನು. ಆ ವೃಕ್ಷದ ಮೇಲೆ ಒಂದು ಹೆಣ್ಣು ಬಲಾಕಾ ಪಕ್ಷಿಯು ಕುಳಿತಿತ್ತು. ಅದು ಬ್ರಾಹ್ಮಣನ ಮೇಲೆ ಪಿಷ್ಟವನ್ನು ಹಾಕಿತು. ಆಗ ಕೃದ್ಧನಾದ ದ್ವಿಜನು ಅದನ್ನು ನೋಡಿ, ಆ ಬಲಾಕದ ಮೇಲೆ ಕ್ರೋಧಯುಕ್ತವಾದ ಯೋಚನೆಯನ್ನು ಪ್ರಯೋಗಿಸಿದನು. ವಿಪ್ರನ ಆ ಯೋಚನೆಯ ಪೆಟ್ಟು ತಿಂದ ಬಲಾಕವು ನೆಲದಮೇಲೆ ಬಿದ್ದಿತು. ಸತ್ತು ಅಚೇತಸವಾಗಿ ಬಿದ್ದಿದ್ದ ಅದನ್ನು ನೋಡಿ ದ್ವಿಜನು ಕಾರುಣ್ಯದಿಂದ ಸಂತಪ್ತನಾಗಿ ಶೋಕಿಸಿದನು. “ರಾಗದ್ವೇಷಗಳ ಬಲಕ್ಕೆ ಬಂದು ನಾನು ಅಕಾರ್ಯವನ್ನು ಮಾಡಿಬಿಟ್ಟೆ!” ಎಂದು ಬಹುಬಾರಿ ಹೇಳಿಕೊಳ್ಳುತ್ತಾ ಆ ವಿದ್ವಾಂಸಿ ಸಂಶ್ರಿತನು ಗ್ರಾಮಕ್ಕೆ ಭಿಕ್ಷೆ ಬೇಡಲು ಹೋದನು.
ಗ್ರಾಮದಲ್ಲಿ ಶುಚಿಯಾದ ಕುಲಗಳನ್ನು ಸುತ್ತಾಡಿಕೊಂಡು ಹಿಂದೆ ಭೇಟಿಕೊಟ್ಟಿದ್ದ ಕುಲವನ್ನು ಪ್ರವೇಶಿಸಿದನು. “ದೇಹಿ!” ಎಂದು ಬೇಡುತ್ತಾ ನಿಂತಿದ್ದ ಅವನಿಗೆ “ನಿಲ್ಲು!” ಎಂದು ಸ್ತ್ರೀಯು ಹೇಳಿ, ಆ ಕುಂಟುಂಬಿನಿಯು ಪಾತ್ರೆಯನ್ನು ತೊಳೆಯತೊಡಗಿದಳು. ಇದೇ ಸಮಯದಲ್ಲಿ ತುಂಬಾ ಹಸಿವೆಯಿಂದ ಬಳಲಿದ ಅವಳ ಪತಿಯು ಅವಸರದಲ್ಲಿ ಪ್ರವೇಶಿಸಿದನು. ಪತಿಯನ್ನು ನೋಡಿ ಆ ಸಾಧ್ವಿಯು ಬ್ರಾಹ್ಮಣನನ್ನು ಮರೆತುಬಿಟ್ಟಳು. ಗಂಡನಿಗೆ ಪಾದ್ಯ ಆಚಮನೀಯಗಳನ್ನೂ ಆಸನವನ್ನು ನೀಡಿದಳು. ಆ ಕಪ್ಪುಕಣ್ಣಿನವಳು ವಿನಯದಿಂದ ಆಹಾರ-ಭಕ್ಷಗಳಿಂದ ಮತ್ತು ಸುಮಧುರ ಮಾತುಗಳಿಂದ ತನ್ನ ಪತಿಯ ಸೇವೆಗಳನ್ನು ಮಾಡಿದಳು. ನಿತ್ಯವೂ ಅವಳು ಪತಿಯು ತಿಂದು ಬಿಟ್ಟುದುದನ್ನು ತಿನ್ನುತ್ತಿದ್ದಳು. ಪತಿಯು ದೇವರೆಂದು ತಿಳಿದು ಪತಿಯ ಮನಸ್ಸಿನಂತೆ ನಡೆದುಕೊಳ್ಳುತ್ತಿದ್ದಳು. ಕರ್ಮದಲ್ಲಿಯಾಗಲೀ ಮನಸ್ಸಿನಲ್ಲಿಯಾಗಲೀ ಅವಳು ಅವನ ಮೊದಲು ಉಣ್ಣುತ್ತಿರಲಿಲ್ಲ; ಅವಳು ಎಲ್ಲ ಭಾವಗಳಲ್ಲಿ ಪತಿಯ ಸೇವೆಮಾಡುವುದರಲ್ಲಿ ಆನಂದ ಹೊಂದುತ್ತಿದ್ದಳು. ಒಳ್ಳೆಯ ನಡತೆಯ, ಶುಚಿ, ದಕ್ಷೆಯಾಗಿದ್ದು, ಕುಟುಂಬದ ಹಿತೈಷಿಣಿಯಾಗಿದ್ದು ಅವಳು ಸತತವೂ ತನ್ನ ಪತಿಯ ಒಳಿತಿಗಾಗಿ ನಡೆದುಕೊಳ್ಳುತ್ತಿದ್ದಳು. ಸತತವೂ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಅವಳು ದೇವತೆಗಳ, ಅತಿಥಿಗಳ, ಪತಿಯ, ಅತ್ತೆಮಾವಂದಿರ ಸೇವೆಯಲ್ಲಿ ನಿತ್ಯವೂ ನಿರತಳಾಗಿದ್ದಳು. ಅಗ ಪತಿಸೇವೆಯನ್ನು ಮಾಡುತ್ತಿದ್ದ ಆ ಶುಭೇಕ್ಷಣೆಯು ಭಿಕ್ಷೆಯನ್ನು ಬೇಡಿ ನಿಂತಿದ್ದ ಆ ಬ್ರಾಹ್ಮಣನನ್ನು ನೋಡಿ ನೆನಪಿಸಿಕೊಂಡಳು. ಆಗ ಆ ಯಶಸ್ವಿನೀ ಸಾಧ್ವಿಯು ನಾಚಿಕೊಂಡು ವಿಪ್ರನಿಗೆ ಭಿಕ್ಷವನ್ನು ತೆಗೆದುಕೊಂಡು ಹೊರಬಂದಳು.
ಬ್ರಾಹ್ಮಣನು ಹೇಳಿದನು: “ವರಾಂಗನೇ! ಇದೇನಾಯಿತು? ನನಗೆ ನಿಲ್ಲಲು ಹೇಳಿ, ಹೋಗು ಎಂದೂ ಹೇಳದೇ, ತಡಮಾಡಿದೆ!”
ಕ್ರೋಧಸಂತಪ್ತನಾದ ಬ್ರಾಹ್ಮಣನು ತೇಜಸ್ಸಿನಿಂದ ಸುಟ್ಟುಬಿಡುವನೋ ಎಂದು ಅವಳನ್ನು ನೋಡಲು, ಸಾಧ್ವಿಯು ಸಾಂತ್ವನದ ಮಾತುಗಳನ್ನಾಡಿದಳು: “ವಿಪ್ರ! ಕ್ಷಮಿಸಬೇಕು. ನನಗೆ ನನ್ನ ಪತಿಯು ಮಹಾ ದೇವತೆ. ಅವನೂ ಕೂಡ ಹಸಿದಿದ್ದ, ಬಳಲಿದ್ದ. ಅವನಿಗೆ ನಾನು ಶುಶ್ರೂಷೆ ಮಾಡುತ್ತಿದ್ದೆ.”
ಬ್ರಾಹ್ಮಣನು ಹೇಳಿದನು: “ಬ್ರಾಹ್ಮಣರು ಹೆಚ್ಚಿನವರಲ್ಲವೇ? ನೀನು ನಿನ್ನ ಪತಿಯನ್ನು ಹೆಚ್ಚಿನವನನ್ನಾಗಿ ಮಾಡಿಬಿಟ್ಟೆಯಲ್ಲ! ಗೃಹಸ್ಥ ಧರ್ಮದಲ್ಲಿದ್ದುಕೊಂಡು ನೀನು ಬ್ರಾಹ್ಮಣನನ್ನು ಕೀಳಾಗಿ ಮಾಡಿಬಿಟ್ಟೆಯಲ್ಲ! ಇಂದ್ರನೇ ಅವನಿಗೆ ತಲೆಬಾಗುವಾಗ ಭುವಿಯಲ್ಲಿರುವ ಮನುಷ್ಯರೇನು? ನಿನಗೆ ಇದು ತಿಳಿದಿಲ್ಲವೇ? ಹಿರಿಯರಿಂದ ಇದನ್ನು ನೀನು ಕೇಳಿಲ್ಲವೇ? ಅಗ್ನಿಯಂತೆ ಬ್ರಾಹ್ಮಣರು ಇಡೀ ಭೂಮಿಯನ್ನೇ ಸುಡಬಲ್ಲರು!”
ಸ್ತ್ರೀಯು ಹೇಳಿದಳು: “ವಿಪ್ರ! ನಾನು ದೇವಸಮರಾದ ಮನಸ್ವಿ ವಿಪ್ರರನ್ನು ಕೀಳಾಗಿ ನೋಡುತ್ತಿಲ್ಲ! ಈ ಅಪರಾಧವನ್ನು ಕ್ಷಮಿಸಬೇಕು. ಧೀಮಂತ ಮಹಾಭಾಗ್ಯ ವಿಪ್ರರ ತೇಜಸ್ಸನ್ನು ತಿಳಿದಿದ್ದೇನೆ. ಕ್ರೋಧದಿಂದ ಅವರು ಸಾಗರವನ್ನು ಉಪ್ಪಾಗಿ, ಕುಡಿಯಲು ಅಯೋಗ್ಯವಾಗಿ ಮಾಡಿದರು. ಹಾಗೆಯೇ ದೀಪ್ತತಪಸ್ವಿಗಳ, ಭಾವಿತಾತ್ಮ ಮುನಿಗಳ ಕ್ರೋಧಾಗ್ನಿಯು ಇಂದೂ ಕೂಡ ದಂಡಕದಲ್ಲಿ ಆರದೇ ಉರಿಯುತ್ತಿದೆ. ಬ್ರಾಹ್ಮಣರನ್ನು ಪೀಡಿಸುತ್ತಿದ್ದ ದುರಾತ್ಮ ಕ್ರೂರ ಮಹಾಸುರ ವಾತಾಪಿಯೂ ಕೂಡ ಅಗಸ್ತ್ಯಮುನಿಗಳಿಂದ ಜೀರ್ಣಗೊಂಡನು. ಬ್ರಹ್ಮವಾದಿಗಳ ಬಹಳಷ್ಟು ಪ್ರಭಾವಗಳ ಕುರಿತು ಕೇಳಿದ್ದೇವೆ. ಆ ಮಹಾತ್ಮರ ಕ್ರೋಧದಷ್ಟೇ ಪ್ರಸಾದವೂ ತುಂಬಾ ಫಲವನ್ನೀಯುತ್ತದೆ. ಈ ಅತಿಕ್ರಮವನ್ನು ಕ್ಷಮಿಸಬೇಕು. ಪತಿಶುಶ್ರೂಷವೇ ನನ್ನ ಧರ್ಮವೆಂದು ನನಗನ್ನಿಸುತ್ತದೆ. ಎಲ್ಲ ದೇವತೆಗಳಲ್ಲಿಯೂ ಕೂಡ ಪತಿಯು ನನ್ನ ಪರಮ ದೇವತೆ. ಏನನ್ನೂ ಬಿಡದೇ ಅವನ ಧರ್ಮವನ್ನು ನಾನು ಮಾಡುತ್ತೇನೆ. ಪತಿಯ ಶುಶ್ರೂಷೆಯ ಫಲವು ಎಂಥಹುದೆಂದು ನೋಡು! ನಿನ್ನ ರೋಷದಿಂದ ಬಲಾಕ ಪಕ್ಷಿಯೊಂದು ಸುಟ್ಟುಹೋಯಿತೆಂದು ನನಗೆ ತಿಳಿದಿದೆ. ಕ್ರೋಧವು ಮನುಷ್ಯರ ಶರೀರದಲ್ಲಿರುವ ಶತ್ರು. ಕ್ರೋಧ ಮೋಹಗಳನ್ನು ತ್ಯಜಿಸಿದವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ. ಯಾರು ಸತ್ಯವನ್ನೇ ಮಾತನಾಡುತ್ತಾರೋ, ಗುರುವನ್ನು ಸಂತೋಷಪಡಿಸುತ್ತಾರೋ, ಮತ್ತು ಹಿಂಸೆಯನ್ನು ಹಿಂಸೆಯಿಂದ ಉತ್ತರಿಸುವುದಿಲ್ಲವೋ ಅಂಥವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿಯುತ್ತಾರೆ. ಜಿತೇಂದ್ರಿಯರೂ, ದರ್ಮಪರರೂ, ಸ್ವಾಧ್ಯಾಯನಿರತರನ್ನೂ, ಶುಚಿಯಾಗಿರುವವರನ್ನೂ, ಕಾಮಕ್ರೋಧಗಳನ್ನು ವಶದಲ್ಲಿಟ್ಟುಕೊಂಡವರನ್ನೂ ದೇವತೆಗಳು ಬ್ರಾಹ್ಮಣರೆಂದು ತಿಳಿದಿದ್ದಾರೆ. ಲೋಕಗಳನ್ನು ತನ್ನಂತೆಯೇ ಕಾಣುವ, ಮನಸ್ವಿ, ಧರ್ಮಜ್ಞ, ಸರ್ವಧರ್ಮಗಳನ್ನೂ ಪ್ರೀತಿಸುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ. ಕಲಿಸುವ ಮತ್ತು ಕಲಿಯುವ, ಯಜ್ಞಗಳನ್ನು ಮಾಡುವ ಮತ್ತು ಮಾಡಿಸುವ, ಶಕ್ತಿಯಿದ್ದಷ್ಟು ದಾನಮಾಡುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ. ಬ್ರಹ್ಮಚಾರಿಯಾಗಿದ್ದು ಕೊಂಡು, ವೇದಗಳನ್ನು ಅಧ್ಯಯನ ಮಾಡುವ, ಸ್ವಾಧ್ಯಾಯದಲ್ಲಿ ಅಪ್ರಮತ್ತನಾಗದೇ ಇರುವ ದ್ವಿಜೋತ್ತಮನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ. ಬ್ರಾಹ್ಮಣರಿಗೆ ಕುಶಲವಾದುದೇನೆಂದು ಅವರೇ ಹೇಳುತ್ತಾರೆ. ಸತ್ಯದಲ್ಲಿಯೇ ವ್ಯವಹರಿಸುವ ಅವರ ಮನಸ್ಸು ಸುಳ್ಳಿನಲ್ಲಿ ಸಂತೋಷ ಹೊಂದುವುದಿಲ್ಲ. ಬ್ರಾಹ್ಮಣರ ಸಂಪತ್ತು ಅವರ ಸ್ವಾಧ್ಯಾಯ, ದಮ, ಆರ್ಜವ, ಮತ್ತು ಶಾಶ್ವತವಾದ ಇಂದ್ರಿಯಗಳ ನಿಗ್ರಹಗಳೆಂದು ಹೇಳುತ್ತಾರೆ. ಧರ್ಮವಿದರು ಸತ್ಯ ಮತ್ತು ಆರ್ಜವಗಳು ಪರಮ ಧರ್ಮವೆಂದು ಹೇಳುತ್ತಾರೆ. ಶಾಶ್ವತವಾದ ಧರ್ಮವನ್ನು ತಿಳಿದುಕೊಳ್ಳುವುದು ಕಷ್ಟ. ಅದು ಸತ್ಯದಲ್ಲಿ ಪ್ರತಿಷ್ಠಿತವಾಗಿದೆ. ಧರ್ಮವು ಶ್ರುತಿಪ್ರಮಾಣವಾಗಿರಬೇಕೆಂದು ವೃದ್ಧರು ಉಪದೇಶಿಸುತ್ತಾರೆ. ಬಹುಬಾರಿ ಧರ್ಮವು ಸೂಕ್ಷ್ಮವೆಂದು ತೋರುತ್ತದೆ. ನೀನಾದರೋ ಶುಚಿಯಾಗಿದ್ದು ಸ್ವಾಧ್ಯಾಯದಲ್ಲಿ ನಿರತನಾಗಿದ್ದು ಧರ್ಮವನ್ನು ತಿಳಿದುಕೊಂಡಿದ್ದೀಯೆ. ಆದರೂ ನೀನು ಧರ್ಮವನ್ನು ನಿಜವಾಗಿ ತಿಳಿದುಕೊಂಡಿಲ್ಲವೆಂದು ನನಗನ್ನಿಸುತ್ತದೆ. ಮಾತಾಪಿತೃಗಳ ಸೇವಾನಿರತನಾದ, ಸತ್ಯವಾದೀ, ಜಿತೇಂದ್ರಿಯ ವ್ಯಾಧನೊಬ್ಬನು ಮಿಥಿಲೆಯಲ್ಲಿ ವಾಸಿಸುತ್ತಾನೆ. ಅವನು ನಿನಗೆ ಧರ್ಮಗಳನ್ನು ತೋರಿಸಿಕೊಡುತ್ತಾನೆ. ನಿನಗಿಷ್ಟವಾದರೆ ಅಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ! ನಾನು ಹೆಚ್ಚಾಗಿಯೇ ಮಾತನಾಡಿದ್ದಿದ್ದರೆ ಅವೆಲ್ಲವನ್ನೂ ಕ್ಷಮಿಸಬೇಕು. ಯಾಕೆಂದರೆ ಧರ್ಮವಿದುಷ ಜನರಿಗೆ ಸ್ತ್ರೀಯರು ಅವಧ್ಯರಲ್ಲವೇ?”
ಬ್ರಾಹ್ಮಣನು ಹೇಳಿದನು: “ಶೋಭನೇ! ನಿನಗೆ ಮಂಗಳವಾಗಲಿ. ನಿನ್ನಿಂದ ಸಂತೋಷಗೊಂಡಿದ್ದೇನೆ. ಸಿಟ್ಟು ಹೊರಟುಹೋಗಿದೆ. ನೀನು ನೀಡಿದ ಟೀಕೆಗಳು ನನಗೆ ಪರಮ ಶ್ರೇಯಸ್ಕರವಾದವುಗಳು. ನಾನು ಹೋಗಿ ಉತ್ತಮ ಪುರುಷನಾಗುವುದನ್ನು ಸಾಧಿಸುತ್ತೇನೆ.”
ಅವಳಿಂದ ಬೀಳ್ಕೊಂಡು ಆ ದ್ವಿಜ ನರಸತ್ತಮ ಕೌಶಿಕನು ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ ತನ್ನ ಮನೆಗೆ ಹಿಂದಿರುಗಿದನು. ಸ್ತ್ರೀಯು ಹೇಳಿದ ಆಶ್ಚರ್ಯಕರ ವಿಷಯದ ಕುರಿತು ಸಂಪೂರ್ಣವಾಗಿ ಆಲೋಚಿಸಿ ದ್ವಿಜನು ತನ್ನನ್ನು ತಾನೇ ನಿಂದಿಸಿಕೊಂಡು ತಪ್ಪಿತಸ್ಥನಂತಾದನು. ಧರ್ಮದ ಸೂಕ್ಷ್ಮಗತಿಯ ಕುರಿತು ಚಿಂತಿಸುತ್ತಾ ಅವನು ತನ್ನಲ್ಲಿಯೇ ಹೇಳಿಕೊಂಡನು: “ಇದರಲ್ಲಿ ಶ್ರದ್ಧೆಯನ್ನಿಡಬೇಕು. ನಾನು ಮಿಥಿಲಿಗೆ ಹೋಗುತ್ತೇನೆ. ಅಲ್ಲಿ ಕೃತಾತ್ಮನಾದ, ಧರ್ಮಾತ್ಮನಾದ ವ್ಯಾಧನು ವಾಸಿಸುತ್ತಿದ್ದಾನೆಂದು ಅವಳು ಹೇಳಿಲ್ಲವೇ? ಇಂದೇ ನಾನು ಅಲ್ಲಿಗೆ ಹೋಗಿ ಆ ತಪೋಧನನಲ್ಲಿ ಧರ್ಮದ ಕುರಿತು ಕೇಳುತ್ತೇನೆ.” ಹೀಗೆ ಅವಳು ಬಲಾಕದ ಕುರಿತು ಹೇಳಿದ್ದುದನ್ನು, ಧರ್ಮಕರ ಶುಭವಚನಗಳನ್ನೂ ಮನಸ್ಸಿನಲ್ಲಿ ಆಲೋಚಿಸಿ ಅವನು ಸ್ತ್ರೀಯ ಮಾತುಗಳಲ್ಲಿ ಶ್ರದ್ಧೆಯನ್ನಿರಿಸಿದನು. ಮತ್ತು ಕುತೂಹಲದಿಂದ ಮಿಥಿಲೆಗೆ ಪ್ರಯಾಣ ಬೆಳೆಸಿದನು. ಅರಣ್ಯಗಳನ್ನೂ, ಗ್ರಾಮಗಳನ್ನೂ, ನಗರಗಳನ್ನು ದಾಟಿ ಜನಕನಿಂದ ಸುರಕ್ಷಿತವಾಗಿದ್ದ ಮಿಥಿಲೆಗೆ ಹೋದನು. ಧರ್ಮಕ್ಕನುಗುಣವಾಗಿ ವಿಭಜಿಸಲ್ಪಟ್ಟ ಆ ನಗರಿಯು ಯಜ್ಞ-ಉತ್ಸವಗಳಿಂದ ತುಂಬಿ ಪುಣ್ಯಕರವಾಗಿತ್ತು. ದ್ವಾರ-ಗೋಪುರಗಳಿಂದ ರಕ್ಷಿತವಾಗಿತ್ತು ಮತ್ತು ಗೃಹ-ಪ್ರಕಾರಗಳಿಂದ ಶೋಭಿಸುತ್ತಿತ್ತು. ಬಹಳಷ್ಟು ಐಶ್ವರ್ಯಗಳಿಂದ ತುಂಬಿದ್ದ, ಬಹು ವಿಮಾನಗಳಿಂದ ಆವೃತವಾಗಿದ್ದ, ಚೆನ್ನಾಗಿ ರಚಿಸಲ್ಪಟ್ಟ ಹೆದ್ದಾರಿಗಳನ್ನುಳ್ಳ, ಬಹುಸಂಖ್ಯೆಯ ಕುದುರೆ, ರಥ, ಮತ್ತು ಆನೆಗಳೇ ಮೊದಲಾದ ವಾಹನಗಳಿಂದ ತುಂಬಿದ್ದ, ಸಂತೋಷದಿಂದ, ಆರೋಗ್ಯದಿಂದ ಕೂಡಿರುವ ಜನಸಮೂಹಗಳನ್ನು ಹೊಂದಿದ್ದ, ನಿತ್ಯವೂ ಉತ್ಸವವೋ ಎಂಬಂತಿದ್ದ ಆ ರಮ್ಯ ಪುರಿಯನ್ನು ಪ್ರವೇಶಿಸಿದನು.
ಸಂಚರಿಸುತ್ತಾ ಆ ಬ್ರಾಹ್ಮಣನು ಅಲ್ಲಿ ನಡೆಯುತ್ತಿದ್ದ ಬಹಳಷ್ಟನ್ನು ನೋಡಿದನು; ಧರ್ಮವ್ಯಾಧನ ಕುರಿತು ಕೇಳಲು, ದ್ವಿಜರು ಅವನಿಗೆ ಹೇಳಿದರು. ಅಲ್ಲಿ, ಅಂಗಡಿಗಳ ಮಧ್ಯೆ ನೆಲಸಿದ್ದ, ಮಾರ್ಗ-ಮಾಹಿಷ ಮಾಂಸಗಳನ್ನು ಮಾರುತ್ತಿದ್ದ ತಪಸ್ವಿಯನ್ನು ಕಂಡನು. ಗ್ರಾಹಕರ ಗುಂಪನ್ನು ನೋಡಿ ದ್ವಿಜನು ಒಬ್ಬನೇ ಒಂದು ಸ್ಥಳದಲ್ಲಿ ನಿಂತುಕೊಂಡನು. ದ್ವಿಜನು ಬಂದಿದ್ದಾನೆಂದು ತಿಳಿದು ಅವನು ತಕ್ಷಣವೇ ಎದ್ದು ವಿಪ್ರನು ಏಕಾಂತನಾಗಿ ಕುಳಿತಿದ್ದಲ್ಲಿಗೆ ಬಂದು ಹೇಳಿದನು: “ಭಗವನ್! ನಿನಗೆ ನಮಸ್ಕಾರಗಳು. ನಿನಗೆ ಸ್ವಾಗತ! ನಾನು ವ್ಯಾಧ! ನಿನಗೆ ಮಂಗಳವಾಗಲಿ! ನಾನೇನು ಮಾಡಲಿ? ಚಿತ್ತೈಸು. ಓರ್ವ ಪತಿವ್ರತೆಯು ನಿನಗೆ ಮಿಥಿಲೆಗೆ ಹೋಗೆಂದು ಹೇಳಿದ್ದಾಳೆ. ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬ ಕಾರಣಗಳೆಲ್ಲವೂ ನನಗೆ ತಿಳಿದಿದೆ.”
ಅವನ ಆ ಮಾತುಗಳನ್ನು ಕೇಳಿದ ವಿಪ್ರನು ತುಂಬಾ ಹರ್ಷಿತನಾದನು. ಇದು ಎರಡನೆಯ ಆಶ್ಚರ್ಯವೆಂದು ದ್ವಿಜನು ಆಲೋಚಿಸಿದನು. “ನೀನು ನಿಲ್ಲಬಾರದ ಸ್ಥಳದಲ್ಲಿ ನಿಂತಿದ್ದೀಯೆ! ನಿನಗಿಷ್ಟವಾದರೆ ಭಗವನ್! ಮನೆಗೆ ಹೋಗೋಣ!” ಎಂದು ವ್ಯಾಧನು ದ್ವಿಜನಿಗೆ ಹೇಳಿದನು. ಸಂತೋಷದಿಂದ ವಿಪ್ರನು “ಧಾರಾಳವಾಗಿ!” ಎಂದು ಉತ್ತರಿಸಿದನು. ದ್ವಿಜನನ್ನು ಮುಂದಿರಿಸಿಕೊಂಡು ಅವನ ಮನೆಯ ಕಡೆ ನಡೆದನು. ಆ ಸುಂದರ ಗೃಹವನ್ನು ಪ್ರವೇಶಿಸಿ. ಆಸನ ಸತ್ಕಾರಗಳನ್ನೂ, ಪಾದ್ಯ ಆಚಮನೀಯಗಳನ್ನು ದ್ವಿಜೋತ್ತಮನು ಸ್ವೀಕರಿಸಿದನು. ಸುಖವಾಗಿ ಕುಳಿತುಕೊಂಡ ನಂತರ ವ್ಯಾಧನಿಗೆ ಹೇಳಿದನು: “ನೀನು ಮಾಡುವ ಕೆಲಸವು ನಿನಗೆ ಸರಿಯಾದುದಲ್ಲವೆಂದು ನನಗನ್ನಿಸುತ್ತದೆ. ನೀನು ಈ ರೀತಿಯ ಘೋರ ಕರ್ಮಗಳನ್ನು ಮಾಡುತ್ತಿರುವೆಯೆಂದು ನನಗೆ ಅನುತಾಪವುಂಟಾಗುತ್ತಿದೆ.”
ವ್ಯಾಧನು ಹೇಳಿದನು: “ಇದು ನನ್ನ ಪಿತೃಪಿತಾಮಹರಿಂದ ಬಂದ ಕುಲೋಚಿತವಾದ ಕರ್ಮ. ದ್ವಿಜ! ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆಂದು ಸಿಟ್ಟಾಗದಿರು. ಧಾತ್ರುವು ಮೊದಲೇ ವಿಹಿತಗೊಳಿಸಿದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹಿರಿಯರ ಮತ್ತು ವೃದ್ಧರ ಸೇವೆ ಮಾಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ಸತ್ಯವನ್ನು ಮಾತನಾಡುತ್ತೇನೆ. ಅಸೂಯೆ ಪಡುವುದಿಲ್ಲ. ಮತ್ತು ಯಥಾಶಕ್ತಿ ದಾನಮಾಡುತ್ತೇನೆ. ದೇವತೆಗಳು, ಅತಿಥಿಗಳು ಮತ್ತು ನನ್ನನ್ನೇ ಅವಲಂಬಿಸಿರುವವರು ಬಿಟ್ಟಿದ್ದುದನ್ನು ತಿಂದು ಬದುಕುತ್ತೇನೆ. ಏನನ್ನೂ ಅಲ್ಲಗಳೆಯುವುದಿಲ್ಲ. ನನಗಿಂತ ಬಲಶಾಲಿಗಳನ್ನು ತಿರಸ್ಕರಿಸುವುದಿಲ್ಲ. ಏಕೆಂದರೆ ಹಿಂದೆ ಮಾಡಿದ ಕರ್ಮಗಳು ಕರ್ತಾರನನ್ನು ಅನುಸರಿಸಿ ಬರುತ್ತವೆ. ಕೃಷಿ, ಗೋರಕ್ಷೆ, ವಾಣಿಜ್ಯ, ರಾಜಕೀಯಗಳು ಈ ಲೋಕದ ಜೀವನ. ಮೂರು ವೇದಗಳಿಂದ ಲೋಕಗಳು ನಡೆಯುತ್ತವೆ. ಶೂದ್ರರಿಗೆ ಕರ್ಮ, ವೈಶ್ಯರಿಗೆ ಕೃಷಿ ಮತ್ತು ಕ್ಷತ್ರಿಯರಿಗೆ ಸಂಗ್ರಾಮವೆಂದು ಕೇಳಿದ್ದೇವೆ. ಬ್ರಾಹ್ಮಣರಿಗೆ ಸದಾ ಬ್ರಹ್ಮಚರ್ಯೆ, ತಪಸ್ಸು, ಮಂತ್ರ, ಮತ್ತು ಸತ್ಯ. ಸ್ವಕರ್ಮದಲ್ಲಿ ನಿರತರಾದ ಪ್ರಜೆಗಳನ್ನು ರಾಜನು ಧರ್ಮದಿಂದ ಆಳುತ್ತಾನೆ. ಯಾರಾದರೂ ವಿಕರ್ಮಗಳಲ್ಲಿ ನಿರತರಾದರೆ ಅವರನ್ನು ಸ್ವಕರ್ಮದಲ್ಲಿ ತೊಡಗಿಸುತ್ತಾನೆ. ಪ್ರಜೆಗಳ ಅಧಿಪತಿಯಾದ ರಾಜನನ್ನು ಸದಾ ಭಯಪಡಬೇಕು. ವಿಕರ್ಮದಲ್ಲಿ ನಿರತರಾದವರನ್ನು ಅವನು ಮೃಗಗಳನ್ನು ಬಾಣಗಳಿಂದ ಹೊಡೆಯುವಂತೆ ವಧಿಸುತ್ತಾನೆ. ಜನಕನಲ್ಲಿ ಯಾರೂ ವಿಕರ್ಮಿಗಳಿರುವುದು ತಿಳಿದಿಲ್ಲ. ನಾಲ್ಕೂ ವರ್ಣದವರೂ ಅವರವರ ಕರ್ಮಗಳಲ್ಲಿ ನಿರತರಾಗಿದ್ದಾರೆ. ರಾಜ ಜನಕನು ದುರ್ವೃತ್ತಿಯು ತನ್ನ ಮಗನೇ ಆಗಿದ್ದರೂ ಅವನನ್ನು ದಂಡದಿಂದ ದಂಡಿಸಿ ಬೀಳಿಸುತ್ತಾನೆ. ಆದರೆ ಧಾರ್ಮಿಕನನ್ನು ಬಾಧಿಸುವುದಿಲ್ಲ. ಸುಯುಕ್ತಚಾರರಿಂದ ಕೂಡಿದ ನೃಪತಿಯು ಸರ್ವರನ್ನೂ ಧರ್ಮದಿಂದ ನೋಡುತ್ತಾನೆ. ಸಂಪತ್ತು, ರಾಜ್ಯ ಮತ್ತು ಸೇನೆಯು ಕ್ಷತ್ರಿಯರದ್ದು. ರಾಜನೂ ಕೂಡ ಸ್ವಧರ್ಮದಿಂದಲೇ ಹೆಚ್ಚಿನ ಸಂಪತ್ತನ್ನು ಬಯಸುತ್ತಾನೆ. ರಾಜನು ಎಲ್ಲ ವರ್ಣದವರ ತ್ರಾತನಾಗಿದ್ದಾನೆ. ವರಾಹ-ಮಹಿಷಗಳನ್ನು ಇತರರು ಕೊಲ್ಲುತ್ತಾರೆ. ಸ್ವಯಂ ನಾನು ಕೊಲ್ಲುವುದಿಲ್ಲ. ನಾನು ಸದಾ ಅವುಗಳನ್ನು ಮಾರುತ್ತೇನೆ ಮಾತ್ರ. ಮಾಂಸಗಳನ್ನು ನಾನು ತಿನ್ನುವುದಿಲ್ಲ. ಯಾವಾಗ ಮಾಡಬೇಕೋ ಆವಾಗ ಮಾತ್ರ ನಾನು ನನ್ನ ಪತ್ನಿಯನ್ನು ಕೂಡುತ್ತೇನೆ. ಸದಾ ಉಪವಾಸದಲ್ಲಿದ್ದುಕೊಂಡು, ರಾತ್ರಿ ಮಾತ್ರ ಊಟ ಮಾಡುತ್ತೇನೆ. ಅಶೀಲನಾಗಿದ್ದರೂ ಕೂಡ ಪುರುಷನು ಶೀಲವಂತನಾಗುತ್ತಾನೆ. ಪುನಃ ಧಾರ್ಮಿಕನೂ ಕೂಡ ಪ್ರಾಣಿಹಿಂಸೆಗಳಲ್ಲಿ ತೊಡಗುತ್ತಾನೆ. ರಾಜರ ವ್ಯಬಿಚಾರದಿಂದ ಧರ್ಮವು ಮಹಾ ಗೊಂದಲಕ್ಕೊಳಗಾಗುತ್ತದೆ. ಅಧರ್ಮವು ಹೆಚ್ಚಾಗುತ್ತದೆ ಮತ್ತು ಪ್ರಜೆಗಳು ಗೊಂದಲಗಳಿಗೊಳಗಾಗುತ್ತಾರೆ. ಜನರು ಸಣ್ಣವರಾಗಿ, ಕುಳ್ಳರಾಗಿ, ಕುಬ್ಜರಾಗಿ, ದೊಡ್ಡ ತಲೆಯುಳ್ಳವರಾಗಿ, ನಪುಂಸಕರಾಗಿ, ಕುರುಡರಾಗಿ, ಕಿವುಡರಾಗಿ, ಬಗ್ಗಿದವರಾಗಿ ಹುಟ್ಟುತ್ತಾರೆ. ರಾಜರ ಅಧರ್ಮದಿಂದ ಪ್ರಜೆಗಳು ಕಡಿಮೆಯಾಗುತ್ತಾರೆ. ನಮ್ಮ ಈ ರಾಜ ಜನಕನು ಎಲ್ಲವನ್ನೂ ಧರ್ಮದಿಂದ ನೋಡುತ್ತಾನೆ. ಸದಾ ಸ್ವಧರ್ಮನಿರತರಾದ ಪ್ರಜೆಗಳಿಗೆ ಅನುಗ್ರಹಿಸುತ್ತಾನೆ. ನನ್ನನ್ನು ಪ್ರಶಂಸಿಸುವವರಿರಲಿ ನಿಂದಿಸುವವರಿರಲಿ, ಎಲ್ಲ ಜನರಿಗೂ ನಾನು ನನ್ನ ಸುಪರಿಣಿತ ಕರ್ಮಗಳಿಂದ ತೃಪ್ತಗೊಳಿಸುತ್ತೇನೆ.
“ಸ್ವಧರ್ಮದಂತೆ ಯಾರು ಜೀವಿಸುತ್ತಾರೋ ಮತ್ತು ಭೋಗಿಸುತ್ತಾರೋ ಹಾಗೂ ಬೇರೆಯವರ ಅಥವಾ ಬೇರೊಂದನ್ನು ಆಧಾರಿಸಿ ಜೀವಿಸುವುದಿಲ್ಲವೋ ಅಂಥಹ ಪಾರ್ಥಿವರು ಉತ್ಥಾನಶೀಲರಾಗಿರುತ್ತಾರೆ. ಶಕ್ತಿಯಿದ್ದಷ್ಟು ಅನ್ನದಾನ ಮಾಡುವುದು, ಸತತ ತಾಳ್ಮೆಯಲ್ಲಿರುವುದು, ನಿತ್ಯವೂ ಧರ್ಮದಲ್ಲಿರುವುದು, ಯಥಾರ್ಹವಾಗಿ ಪ್ರತಿ ಗೌರವಿಸುವುದು, ಮತ್ತು ಸರ್ವಭೂತಗಳಲ್ಲಿ ದಯೆ ಮೊದಲಾದ ಉತ್ತಮ ಮನುಷ್ಯ ಗುಣಗಳು ಪುರುಷನ ತ್ಯಾಗದಿಂದಲ್ಲದೇ ಬೇರೆಯದರಿಂದ ಹುಟ್ಟುವುದಲ್ಲ. ಸುಳ್ಳನ್ನು ದೂರವಿಡಬೇಕು. ಕೇಳದೆಯೇ ಪ್ರಿಯವಾದುದನ್ನು ಮಾಡಬೇಕು. ಮತ್ತು ಕಾಮಕ್ಕಾಗಲೀ, ದುಡುಕಿಯಾಗಲೀ ದ್ವೇಷಕ್ಕಾಗಲೀ ಧರ್ಮವನ್ನು ಬಿಡಬಾರದು. ಬೇಕಾದದ್ದು ನಡೆದಾಗ ತುಂಬಾ ಸಂತೋಷಪಡಬಾರದು. ಬೇಡದಿದ್ದದು ನಡೆದಾಗ ಜ್ವರಪೀಡಿತರಾಗಬಾರದು. ಅಥವಾ ಕಷ್ಟಗಳು ಬಂದಾಗ ಧರ್ಮವನ್ನು ಬಿಟ್ಟುಬಿಡುವಷ್ಟು ಮೋಹಿತರಾಗಬಾರದು. ಯಾವ ಕರ್ಮವಾದರೂ ಒಂದು ವೇಳೆ ತಪ್ಪಾಗಿದ್ದರೆ ಅದನ್ನು ಪುನಃ ಮಾಡಬಾರದು. ತನಗೆ ಯಾವುದು ಸರಿಯೆನ್ನಿಸುತ್ತದೆಯೋ ಅದರಂತೆ ತನ್ನನ್ನು ತೊಡಗಿಸಿಕೊಳ್ಳಬೇಕು. ಪಾಪಕ್ಕೆ ಹಿಂದಿರುಗಿ ಪಾಪ ಮಾಡಬಾರದು. ಸದಾ ಸಾಧುವಾಗಿರಬೇಕು. ಪಾಪವನ್ನು ಮಾಡಬಯಸುವ ಪಾಪಿಯು ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ. ಕೆಟ್ಟ ಮೋಸಗಾರರ ಕರ್ಮಗಳು ಸಾಧುವಲ್ಲ. ಧರ್ಮವೇ ಇಲ್ಲವೆಂದು ಯೋಚಿಸಿ, ದರ್ಮದಲ್ಲಿ ಶ್ರದ್ಧೆಯನ್ನಿಡದೇ, ಶುಚಿಯಾಗಿದ್ದವರನ್ನು ಯಾರು ಅವಹೇಳನ ಮಾಡುತ್ತಾರೋ ಅವರು ನಾಶ ಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಪಾಪಿಷ್ಟನು ನಿತ್ಯವೂ ಗಾಳಿತುಂಬಿದ ಚೀಲದಂತೆ ಉಬ್ಬಿಕೊಂಡಿರುತ್ತಾನೆ. ಮೂಢರ ಮಾತುಗಳಲ್ಲಿ ಸಾರವಿರುವುದಿಲ್ಲ ಮತ್ತು ರವಿಯು ಹೇಗೆ ಎಲ್ಲವನ್ನೂ ತೋರಿಸುತ್ತಾನೋ ಹಾಗೆ ಅದು ಅವರ ಅಂತರಾತ್ಮವನ್ನು ತೋರಿಸುತ್ತದೆ. ಕೇವಲ ಆತ್ಮಪ್ರಶಂಸನೆಯಿಂದ ಮೂರ್ಖನು ಲೋಕದಲ್ಲಿ ರಾಜಿಸುವುದಿಲ್ಲ. ಆದರೆ ವಿದ್ಯಾವಂತನು, ಹೀನನಾಗಿದ್ದರೂ ಪ್ರಕಾಶಿಸುತ್ತಾನೆ. ಯಾರಿಗೂ ನಿಂದನೆಯನ್ನು ಮಾಡದ, ಆತ್ಮವರ್ಣನೆಯನ್ನು ಮಾಡಿ ಪೂಜಿಸಿಕೊಳ್ಳದವನು ಗುಣಸಂಪನ್ನನಾಗಿ ಭೂಮಿಯಲ್ಲಿ ಪ್ರಕಾಶಿತನಾಗಿ ಕಂಡುಬರುತ್ತಾನೆ.
“ತಪ್ಪುಗಳಿಗೆ ಪರಿತಪಿಸಿದರೆ ಅದರ ಪಾಪದಿಂದ ಮುಕ್ತನಾಗುತ್ತಾರೆ. ಪುನಃ ಇದನ್ನು ಮಾಡುವುದಿಲ್ಲ ಎಂದು ಮರುಕಳಿಸುವುದನ್ನು ತಪ್ಪಿಸಬೇಕು. ಈ ರೀತಿ ಯಾವುದೇ ಪಾಪದಿಂದ ಬಿಡುಗಡೆ ಹೊಂದಬಹುದು. ಇದು ಧರ್ಮಗಳಲ್ಲಿ ಕಂಡುಬಂದಿರುವುದು ಎಂದು ಕೇಳುತ್ತೇವೆ. ಹಿಂದೆ ಮಾಡಿದ ಪಾಪಗಳನ್ನು ತಿಳಿಯದೇ, ಧರ್ಮಶೀಲನು ನಂತರದಲ್ಲಿ ಅವುಗಳನ್ನು ನಾಶಪಡಿಸುತ್ತಾನೆ. ಧರ್ಮವು ತಪ್ಪಿತಸ್ಥ ಭಾವನೆಯನ್ನು, ಇಲ್ಲಿ ತಿಳಿಯದೇ ಮಾಡಿದ ಪಾಪವನ್ನು ಹೋಗಲಾಡಿಸುತ್ತದೆ. ಪಾಪವನ್ನು ಮಾಡಿ, ಇದು ನಾನಲ್ಲ ಎಂದು ತಿಳಿಯಬೇಕು. ಶ್ರದ್ಧೆಯಿಂದ ವಿರೋಧಿಸದೇ ಯಾವುದು ಸರಿಯೋ ಅದನ್ನು ಮಾಡಲು ನೋಡಬೇಕು. ಸಾಧುಗಳ ಬಟ್ಟೆಯ ಹರಕುಗಳನ್ನು ಮುಚ್ಚಿದರೂ ಕೂಡ ಪಾಪಗಳನ್ನು ಕಳೆದುಕೊಂಡು ಪುರುಷನು ಕಲ್ಯಾಣವನ್ನು ಹೊಂದುತ್ತಾನೆ. ಚಂದ್ರನು ಮಹಾಮೋಡಗಳಿಂದ ಹೇಗೋ ಹಾಗೆ ಸರ್ವ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ. ಉದಯವಾಗುವ ಸೂರ್ಯನು ಹೇಗೆ ಎಲ್ಲ ಕತ್ತಲೆಯನ್ನೂ ಕಳೆಯುತ್ತಾನೋ ಹಾಗೆ ಕಲ್ಯಾಣ ಕಾರ್ಯಗಳನ್ನು ಮಾಡುವುದರಿಂದ ಸರ್ವಪಾಪಗಳಿಂದ ಬಿಡುಗಡೆಯಾಗುತ್ತದೆ.
“ಲೋಭವೇ ಪಾಪಗಳ ಕೇಂದ್ರಬಿಂದುವೆಂದು ತಿಳಿ. ದುರಾಸಿ ನರರು, ಬಹಳಷ್ಟು ವಿವೇಕವಿಲ್ಲದೇ, ಪಾಪಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಹುಲ್ಲುಗಳಿಂದ ಮುಚ್ಚಲ್ಪಟ್ಟ ಬಾವಿಯಂತೆ ಧರ್ಮದ ರೂಪವನ್ನು ತೊಟ್ಟಿರುವ ಅವರು ಅಧರ್ಮಿಗಳು. ಅವರಲ್ಲಿ ದಮವಿದೆ. ಪವಿತ್ರ ಮಾತುಗಳನ್ನಾಡುತ್ತಾರೆ. ಧರ್ಮಸಂಶ್ರಿತರಾಗಿರುತ್ತಾರೆ. ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಆದರೆ ಅವರಲ್ಲಿ ಶಿಷ್ಟಾಚಾರವು ದುರ್ಲಭವಾಗಿರುತ್ತದೆ.”
ಆಗ ಮಹಾಪ್ರಾಜ್ಞ ವಿಪ್ರನು ಧರ್ಮವ್ಯಾಧನನ್ನು ಕೇಳಿದನು: “ಶಿಷ್ಟಾಚಾರವೆಂದರೆ ಏನೆಂದು ತಿಳಿಸು. ವ್ಯಾಧ! ಇದರ ಕುರಿತು ಯಥಾವತ್ತಾಗಿ ಹೇಳು.”
ವ್ಯಾಧನು ಹೇಳಿದನು: “ದ್ವಿಜಸತ್ತಮ! ಯಜ್ಞ, ದಾನ, ತಪಸ್ಸು, ವೇದಗಳು ಮತ್ತು ಸತ್ಯ ಈ ಐದು ನಿತ್ಯವೂ ಪವಿತ್ರವಾಗಿರುವ ಶಿಷ್ಟಾಚಾರಗಳು. ಕಾಮಕ್ರೋಧಗಳನ್ನು, ಜಂಬ, ಲೋಭ, ಮತ್ತು ಅಪ್ರಾಮಾಣೀಕತೆಗಳನ್ನು ವಶದಲ್ಲಿಟ್ಟುಕೊಂಡು ಶಿಷ್ಟರು, ಶಿಷ್ಟರಿಂದ ಒಪ್ಪಿಗೆಯನ್ನು ಪಡೆದು, ಧರ್ಮದಲ್ಲಿಯೇ ಸಂತುಷ್ಟರಾಗಿರುತ್ತಾರೆ. ಯಜ್ಞ ಮತ್ತು ಸ್ವಾಧ್ಯಾಯದಲ್ಲಿ ತೊಡಗಿಸಿಕೊಂಡವರಿಗೆ ವೃತ್ತಿಯಿಲ್ಲದೇ ಇರುವುದಿಲ್ಲ. ಅವರು ಸರಿಯಾದ ಆಚಾರಗಳನ್ನು ಪಾಲಿಸುತ್ತಾರೆ. ಇದು ಶಿಷ್ಟರ ಎರಡನೆಯ ಲಕ್ಷಣ. ಗುರುಶುಶ್ರೂಷಣ, ಸತ್ಯ, ಅಕ್ರೋಧ, ಮತ್ತು ದಾನ ಈ ನಾಲ್ಕು ನಿತ್ಯವೂ ಶಿಷ್ಟಾಚಾರಗಳು. ಶಿಷ್ಟಾಚಾರದಲ್ಲಿ ಮನಸ್ಸು ಮಾಡಿ ಯಾವಾಗಲೂ ಅದರಲ್ಲಿಯೇ ಇರುವವನು ಬೇರೆ ಯಾವುದರಿಂದಲೂ ಪಡೆಯಲಾಗದ ತೃಪ್ತಿಯನ್ನು ಪಡೆಯುತ್ತಾನೆ. ನಿತ್ಯದ ಶಿಷ್ಟಾಚಾರಗಳಲ್ಲಿ ವೇದದ ಗುಟ್ಟು ಸತ್ಯ, ಸತ್ಯದ ಗುಟ್ಟು ದಮ, ಮತ್ತು ದಮದ ಗುಟ್ಟು ತ್ಯಾಗ. ಯಾರು ಬುದ್ಧಿಮೋಹಾನ್ವಿತರಾದ, ಧರ್ಮವನ್ನು ವಿರೋಧಿಸಿ, ಬೇರೆಯೇ ಮಾರ್ಗದಲ್ಲಿ ಹೋಗುವವರನ್ನು ಹಿಂಬಾಲಿಸುತ್ತಾರೋ ಅವರೂ ಕೂಡ ಪೀಡೆಗೊಳಗಾಗುತ್ತಾರೆ. ಆದರೆ ಸುನಿಯತರಾದ, ಶ್ರುತಿತ್ಯಾಗಪರಾಯಣರಾದ ಶಿಷ್ಟರು ಧರ್ಮದ ದಾರಿಯನ್ನು ಏರಿ, ಸತ್ಯಧರ್ಮಪರಾಯಣರಾಗಿರುತ್ತಾರೆ. ಶಿಷ್ಟಾಚಾರದಂತೆ ನಡೆದುಕೊಳ್ಳುವ ನರರು ಪರಮ ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಧರ್ಮಾರ್ಥದರ್ಶಿಗಳಾಗಿದ್ದುಕೊಂಡು ತಮ್ಮ ಉಪಾಧ್ಯಾಯರಿಗೆ ವಿನೀತರಾಗಿರುತ್ತಾರೆ. ನಾಸ್ತಿಕರನ್ನು, ಮರ್ಯಾದೆಯನ್ನು ಮೀರುವವರನ್ನು, ಕ್ರೂರರನ್ನು ಮತ್ತು ಪಾಪಮತಿಗಳನ್ನು ತ್ಯಜಿಸು. ಜ್ಞಾನವನ್ನು ಅವಲಂಬಿಸಿ, ಧಾರ್ಮಿಕರನ್ನು ಅನುಸರಿಸು. ಧೃತಿಯೆನ್ನುವ ನಾವೆಯನ್ನು ಕಟ್ಟಿ ಕಾಮಲೋಭಗಳೆಂಬ ಮೊಸಳೆಗಳನ್ನುಳ್ಳ, ಪಂಚೇಂದ್ರಿಯಗಳೇ ನೀರಾಗಿ ಹರಿಯುವ ನದಿಯನ್ನು ದಾಟಿ ಜನ್ಮದ ಆಚೆ ಹೋಗು. ಕ್ರಮೇಣವಾಗಿ ಸಂಚಿತಗೊಳಿಸಿದ, ಬುದ್ಧಿಯೋಗಮಯವಾದ ಧರ್ಮವು ಬೆಳೆದು ಸಾಧುಗಳ ಶಿಷ್ಟಾಚಾರವಾಗಿ ಬಿಳೀ ಬಟ್ಟೆಯ ಮೇಲೆ ಕೆಂಪು ಬಿಂದುವಿನಂತೆ ತೋರುತ್ತದೆ. ಅಹಿಂಸೆ ಮತ್ತು ಸತ್ಯವಚನಗಳು ಸರ್ವಭೂತಗಳಿಗೂ ಪರಮ ಹಿತವಾದವುಗಳು. ಅಹಿಂಸೆಯು ಪರಮ ಧರ್ಮ ಮತ್ತು ಅದು ಸತ್ಯದಲ್ಲಿ ನೆಲೆಗೊಂಡಿದೆ. ಸತ್ಯದಲ್ಲಿದ್ದುಕೊಂಡು ಮಾಡುವವೆಲ್ಲವೂ ಪ್ರವೃತ್ತಿಯಂತೆ ವೃದ್ಧಿಯಾಗುತ್ತವೆ. ಶಿಷ್ಟಾಚಾರದಲ್ಲಿರುವವರ ಸತ್ಯವು ಇನ್ನೂ ಹೆಚ್ಚಿನದು. ಸತ್ಯವಂತರ ಆಚಾರವೇ ಧರ್ಮ. ಆಚಾರವೇ ಸತ್ಯವಂತರ ಲಕ್ಷಣ. ಪ್ರತಿಯೊಂದು ಜಂತುವೂ ಅದರದರ ಪ್ರಕೃತಿಯನ್ನು, ಅದು ಏನೇ ಇರಲಿ, ಅನುಸರಿಸುತ್ತದೆ. ತನ್ನನ್ನು ನಿಯಂತ್ರಣದಲ್ಲಿಟ್ಟುಕೊಂಡಿರದ ಪಾಪಾತ್ಮನು ಕಾಮ ಕ್ರೋಧಾದಿ ದೋಷಗಳನ್ನು ಹೊಂದುತ್ತಾನೆ. ನ್ಯಾಯಯುಕ್ತವಾಗಿ ಆರಂಭಿಸಿದುದನ್ನೇ ಧರ್ಮವೆಂದು ಹೇಳುತ್ತಾರೆ. ಅನಾಚಾರವು ಅಧರ್ಮ ಎಂದು ಶಿಷ್ಟಾಚಾರಿಗಳು ಹೇಳುತ್ತಾರೆ. ಕ್ರೋಧಗೊಳ್ಳದಿರುವವರು, ಅಸೂಯೆ ಪಡದವರು. ನಿರಹಂಕಾರಿಗಳು, ಮತ್ಸರ ಪಡೆದಿರುವವರು, ವಿಧೇಯರಾಗಿರುವವರು ಮತ್ತು ಶಾಂತರಾಗಿರುವವರು ಶಿಷ್ಟಾಚಾರಿಗಳು. ಮೂರು ವೇದಗಳಲ್ಲಿ ವೃದ್ಧರಾಗಿರುವವರು, ಶುಚಿಗಳು, ವೃತ್ತಿವಂತರು, ಮನಸ್ವಿಗಳು, ಗುರುಶುಶ್ರೂಷೆ ಮಾಡುವವರು ಮತ್ತು ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡಿರುವವರು ಶಿಷ್ಟಾಚಾರಿಗಳು. ದೀನರಲ್ಲದ, ಸತ್ವವುಳ್ಳವರ, ದುಷ್ಕರವಾದ ಆಚಾರಕರ್ಮಿಗಳಲ್ಲಿ, ಮತ್ತು ತಮ್ಮ ಕರ್ಮಗಳಿಂದ ಸತ್ಕೃತರಾದವರಲ್ಲಿ ಘೋರತ್ವವು ನಾಶಗೊಳ್ಳುತ್ತದೆ. ಈ ಸದಾಚಾರ ಧರ್ಮವನ್ನು ಆಶ್ಚರ್ಯ, ಪುರಾಣ, ಶಾಶ್ವತ, ಧ್ರುವವೆಂದು ಧರ್ಮದಿಂದ ನೋಡುವ ಮನೀಷಿಗಳು ಸ್ವರ್ಗಕ್ಕೆ ಹೋಗುತ್ತಾರೆ. ಆಸ್ತಿಕರು, ಜಂಬವಿಲ್ಲದವರು, ದ್ವಿಜಾತಿಯವರನ್ನು ಪೂಜಿಸುವವರು, ಮತ್ತು ಶ್ರುತಿಗಳಂತೆ ನಡೆದುಕೊಳ್ಳುವ ಸಂತರು ಸ್ವರ್ಗಗಾಮಿಗಳಾಗುತ್ತಾರೆ.
“ವೇದಗಳಲ್ಲಿ ಹೇಳಿದುದು ಪರಮ ಧರ್ಮ, ಧರ್ಮಶಾಸ್ತ್ರಗಳಲ್ಲಿರುವವು ಇನ್ನೊಂದು ಧರ್ಮ, ಶಿಷ್ಟರ ಶಿಷ್ಟಾಚಾರಗಳು, ಹೀಗೆ ಮೂರುವಿಧದ ಧರ್ಮ ಲಕ್ಷಣಗಳಿವೆ. ವೇದಗಳ ಪಾರಾಯಣ, ತೀರ್ಥಗಳಲ್ಲಿ ಸ್ನಾನ, ಕ್ಷಮೆ, ಸತ್ಯ, ವಿಧೇಯತೆ ಮತ್ತು ಶುಚಿ ಇವು ಶಿಷ್ಟಾಚಾರಿಗಳ ನಿದರ್ಶನಗಳು. ಸರ್ವಭೂತಗಳ ಮೇಲೂ ದಯಾವಂತನಾಗಿರುವ, ಸದಾ ಅಹಿಂಸ ನಿರತನಾಗಿರುವ, ದ್ವಿಜಪ್ರಿಯ ಪುರುಷನನ್ನು ಸದಾ ಸಂತನೆಂದು ಕರೆಯುತ್ತಾರೆ. ಶುಭಾಶುಭ ಕರ್ಮಗಳ ಫಲಸಂಚಯಗಳಿಂದ ಯಾವುದು ತಯಾರಾಗಿದೆ ಎಂದು ತಿಳಿದವರನ್ನು ಶಿಷ್ಟರು ಶಿಷ್ಟರೆಂದು ಒಪ್ಪಿಕೊಳ್ಳುತ್ತಾರೆ. ನ್ಯಾಯೋಪೇತರಾದ, ಗುಣೋಪೇತರಾದ, ಸರ್ವಲೋಕ ಹಿತೈಷಿಗಳಾದ, ಪರಿಶುದ್ಧ ಸಂತರು ಸ್ವರ್ಗವನ್ನು ಗೆದ್ದು ಸತ್ಪಥದಲ್ಲಿಯೇ ಇರುತ್ತಾರೆ. ಕೊಡುವವರು, ಹಂಚಿಕೊಳ್ಳುವವರು, ದೀನರಿಗೆ ಅನುಗ್ರಹವನ್ನು ಮಾಡುವವರು, ಸರ್ವಭೂತಗಳಿಗೂ ದಯೆಯನ್ನು ತೋರಿಸುವವರು ಶಿಷ್ಟರಿಂದ ಶಿಷ್ಟರಾಗಿ ಸ್ವೀಕೃತಗೊಳ್ಳುವರು. ಸರ್ವರಿಗೂ ಪೂಜ್ಯರಾಗಿ, ಶ್ರದ್ಧೆ ಮತ್ತು ತಪಸ್ಸುಗಳಿಂದ ಕೂಡಿಕೊಂಡು, ಸದಾ ದಾನವನ್ನು ನೀಡುವವರು ಸುಖ ಲೋಕಗಳನ್ನು ಮತ್ತು ಇಲ್ಲಿ ಸಂಪತ್ತನ್ನೂ ಹೊಂದುತ್ತಾರೆ. ಸಂತರು ಸಂತರನ್ನು ಕೂಡಿದಾಗ ಪತ್ನಿ ಮತ್ತು ಅವಲಂಬಿಗಳಿಗೆ ಪೀಡೆಯೊದಗಿದರೂ ಶಕ್ತಿಗಿಂತ ಅತಿಯಾದುದನ್ನು ಕೊಡುತ್ತಾರೆ. ಸಂತರು ಹೀಗೆ ಲೋಕಯಾತ್ರೆ, ಧರ್ಮ ಮತ್ತು ಆತ್ಮಹಿತವನ್ನು ನೋಡಿಕೊಂಡು, ಬಹು ವರ್ಷಗಳು ವೃದ್ಧಿ ಹೊಂದುತ್ತಾರೆ. ಅಹಿಂಸೆ, ಸತ್ಯವಚನ, ವೃದುತ್ವ, ವಿಧೇಯತೆಗಳಿರುವ, ಭಯದಿಂದ ದೂರವಿರುವ, ಜಂಬವಿಲ್ಲದಿರುವ, ಅದ್ರೋಹಿ, ವಿನಯ, ಧೀಮಂತ, ಧೃತಿವಂತ, ಭೂತಗಳ ಮೇಲೆ ಅನುಕಂಪವಿರುವ, ಕಾಮ ದ್ವೇಷರಹಿತರಾದ ಸಂತರು ಲೋಕದಲ್ಲಿ ಸತ್ಕೃತರಾಗಿರುತ್ತಾರೆ. ಈ ಮೂರು ಸಂತರ ಲಕ್ಷಣಗಳು ಮತ್ತು ಅನುತ್ತಮ ನಡತೆಯೆಂದು ಹೇಳುತ್ತಾರೆ: ದ್ರೋಹವೆಸಗದಿಲ್ಲದಿರುವುದು, ದಾನ ಮಾಡುವುದು, ಮತ್ತು ಸದಾ ಸತ್ಯವನ್ನೇ ಮಾತನಾಡುವುದು. ಎಲ್ಲರ ಮೇಲೂ ದಯಾವಂತರಾದ, ಕರುಣವೇದಿ ಸಂತರು ತುಂಬಾ ಸಂತುಷ್ಟರಾಗಿ, ಉತ್ತಮ ಧರ್ಮಮಾರ್ಗದಲ್ಲಿ ನಡೆಯುತ್ತಾರೆ. ಮಹಾತ್ಮ ಶಿಷ್ಟಾಚಾರಿಗಳು ಈ ಧರ್ಮವನ್ನು ಸುನಿಶ್ಚಿತ ಮಾಡಿಕೊಂಡು ಅಸೂಯೆ ಪಡೆಯುವುದಿಲ್ಲ. ಕಾಮಕ್ರೋಧವನ್ನು ಪರಿತ್ಯಜಿಸಿ, ಕ್ಷಮಾ, ಶಾಂತಿ, ಸಂತೋಷ, ಪ್ರಿಯವಾದಿ, ಶಿಷ್ಟಾಚಾರವನ್ನು ಪಾಲಿಸುತ್ತಾರೆ. ಧರ್ಮದಿಂದ ಆಯಾಸಗೊಳ್ಳದೇ ಇರುವವರು ಶಿಷ್ಟಾಚಾರಗಳಲ್ಲಿ ರುಚಿಯನ್ನಿಟ್ಟುಕೊಂಡಿರುತ್ತಾರೆ; ಮತ್ತು ಈ ಸಂತರ ಶ್ರುತಸಂಪನ್ನವಾದ ಅನುತ್ತಮ ಕರ್ಮ ಮಾರ್ಗವನ್ನು ಅನುಸರಿಸುತ್ತಾರೆ. ಪ್ರಜ್ಞೆಯೆನ್ನುವ ಮಹಡಿಯನ್ನೇರಿ ಮಹಾ ಜನತೆಯು ಗೊಂದಲದಲ್ಲಿದ್ದುಕೊಂಡು ವಿವಿಧ ಲೋಕವೃತ್ತಿಗಳಲ್ಲಿ ತೊಡಗಿರುವುದನ್ನು, ಅತಿಯಾದ ಪುಣ್ಯಗಳನ್ನೂ ಪಾಪಗಳನ್ನೂ ನೋಡುತ್ತಿರುತ್ತಾರೆ. ಶಿಷ್ಟಾಚಾರರ ಮುಖ್ಯ ಗುಣಗಳೆಂದು ನನಗೆ ತಿಳಿದಷ್ಟನ್ನು, ಕೇಳಿದುದನ್ನು ಹೇಳಿದ್ದೇನೆ.”
ಆಗ ಧರ್ಮವ್ಯಾಧನು ವಿಪ್ರನಿಗೆ ಹೇಳಿದನು. “ನಾನು ಆಚರಿಸುತ್ತಿರುವ ಈ ಕರ್ಮವು ಘೋರವಾದುದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಬ್ರಹ್ಮನ್! ಹಿಂದೆ ಮಾಡಿದ ಕರ್ಮಗಳ ವಿಧಿಯು ಬಲಶಾಲಿ ಮತ್ತು ದಾಟುವುದು ಕಷ್ಟ. ಇದು ನಾನು ಹಿಂದೆ ಮಾಡಿದ ಕರ್ಮದೋಷಗಳ ಫಲ. ಈ ದೋಷವನ್ನು ಕೊನೆಗೊಳಿಸಲು ನನಗಾದಷ್ಟು ಪ್ರಯತ್ನಿಸುತ್ತಿದ್ದೇನೆ. ಹಿಂದೆಯೇ ವಿಧಿಯಿಂದ ವಿಹಿತವಾದುದಕ್ಕೆ ಘಾತಕನು ನಿಮಿತ್ತಮಾತ್ರವಾಗುತ್ತಾನೆ. ಆದುದರಿಂದ ನಾವು ಹಿಂದಿನ ಕರ್ಮಗಳ ನಿಮಿತ್ತಗಳಾಗಿರುತ್ತೇವೆ. ಯಾರಿಗೆ ನಾವು ಕೊಲ್ಲಲ್ಪಟ್ಟಿದುದರ ಮಾಂಸವನ್ನು ಮಾರುತ್ತೇವೋ ಅವರಿಗೂ ದೇವತೆ, ಅತಿಥಿ, ಸೇವಕರು ಮತ್ತು ಪಿತೃಗಳನ್ನು ಪೂಜಿಸಿದ ನಂತರ ಅದನ್ನು ತಿಂದು ಭೋಗಿಸುವ ಧರ್ಮವಿರುತ್ತದೆ. ಔಷಧಗಳು, ತೋಟದ ಹಸಿರುಗಳು, ಪಶುಗಳು, ಮೃಗಪಕ್ಷಿಗಳು ಲೋಕದ ಅನ್ನಗಳು ಎಂದು ಶ್ರುತಿಗಳು ತಿಳಿಸುತ್ತವೆ. ನೃಪ ಔಶೀನರ ಕ್ಷಮವಂತ ಶಿಬಿಯು ತನ್ನದೇ ಮಾಂಸವನ್ನು ನೀಡಿ ತುಂಬಾ ದುರ್ಲಭವಾದ ಸ್ವರ್ಗವನ್ನು ಪಡೆದನು. ಹಿಂದೆ ರಾಜ ರಂತಿದೇವನ ಅಡುಗೆಮನೆಯಲ್ಲಿ ದಿನವೂ ಎರಡು ಸಾವಿರ ಪಶುಗಳನ್ನು ವಧಿಸಲಾಗುತ್ತಿತ್ತು. ರಂತಿದೇವನು ದಿನವೂ ಮಾಂಸವನ್ನು ಕೂಡಿದ ಊಟವನ್ನು ಬಡಿಸುತ್ತಿದ್ದನು. ಆ ನೃಪನು ಅತುಲ ಕೀರ್ತಿಯನ್ನು ಹೊಂದಿದನು. ಚಾತುರ್ಮಾಸದಲ್ಲಿ ನಿತ್ಯವೂ ಪಶುಗಳ ವಧೆಯಾಗುತ್ತಿತ್ತು. ಅಗ್ನಿಗಳು ಮಾಂಸವನ್ನು ಬಯಸುತ್ತವೆ ಎಂದು ಶ್ರುತಿಗಳೂ ಹೇಳುತ್ತವೆ. ಯಜ್ಞಗಳಲ್ಲಿ ಸತತವೂ ದ್ವಿಜರು ಪಶುಗಳನ್ನು ವಧಿಸುತ್ತಾರೆ. ಮಂತ್ರಗಳಿಂದ ಸಂಸ್ಕೃತರಾಗಿ ಅವೂ ಸ್ವರ್ಗವನ್ನು ತಲುಪುತ್ತವೆ ಎನ್ನುವುದಿಲ್ಲವೇ? ಹಿಂದೆ ಅಗ್ನಿಗಳು ಮಾಂಸಕಾಮಿಗಳಾಗಿರದಿದ್ದರೆ ಈಗ ಯಾರೂ ಮಾಂಸವನ್ನು ತಿನ್ನುತ್ತಿರಲಿಲ್ಲ. ಈಗಲೂ ಕೂಡ ಮುನಿಗಳು ಮಾಂಸಭಕ್ಷಣದ ವಿಷಯದಲ್ಲಿ ನಿಶ್ಚಯವನ್ನು ಹೇಳುತ್ತಾರೆ: ದೇವತೆಗಳಿಗೂ, ಪಿತೃಗಳಿಗೂ ಯಥಾವಿಧಿಯಾಗಿ ಯಥಾಶ್ರದ್ಧೆಯಿಂದ ನೀಡಿ ತಿಂದರೆ ತಿಂದಿದುದರ ಪಾಪವನ್ನು ಪಡೆಯುವುದಿಲ್ಲ. ಹೇಗೆ ಋತುಮತಿಯಾಗಿದ್ದಾಗ ಪತ್ನಿಯನ್ನು ಕೂಡುವ ಬ್ರಾಹ್ಮಣನು ಬ್ರಹ್ಮಚಾರಿಯಾಗಿಯೇ ಇರುತ್ತಾನೋ ಹಾಗೆ ಇದರಿಂದ ಮಾಂಸಾಹಾರಿಯಾಗುವುದಿಲ್ಲ ಎಂದು ಶ್ರುತಿಗಳು ಹೇಳುತ್ತವೆ. ಈಗಲೂ ಕೂಡ ಸತ್ಯ ಮತ್ತು ಸುಳ್ಳುಗಳನ್ನು ನಿಶ್ಚಯಿಸುವ ವಿಧಿಗಳನ್ನು ಹೇಳುತ್ತಾರೆ. ಹಿಂದೆ ಶಾಪದ ಮಹಾ ಪ್ರಭಾವಕ್ಕೆ ಸಿಲುಕಿದ ರಾಜ ಸೌದಾಸನು ನರಮಾಂಸವನ್ನು ಭಕ್ಷಿಸಿದನು. ಇದರ ಕುರಿತು ನಿನಗೆ ಏನನ್ನಿಸುತ್ತದೆ? ಇದು ನನ್ನ ಧರ್ಮವೆಂದು ಮಾಡುತ್ತೇನೆ. ಇದನ್ನು ಬಿಡುವುದಿಲ್ಲ. ಇದು ಹಿಂದೆ ಮಾಡಿದುದರಿಂದ ಎಂದು ತಿಳಿದು ಇದೇ ಕರ್ಮದಿಂದ ಜೀವಿಸುತ್ತೇನೆ. ಇಲ್ಲಿ ತನ್ನ ಕರ್ಮವನ್ನು ಬಿಡುವುದು ಅಧರ್ಮವೆಂದು ಕಾಣುತ್ತದೆ. ತನ್ನ ಕರ್ಮದಲ್ಲಿ ಯಾರು ನಿರತನಾಗಿರುತ್ತಾನೋ ಅದೇ ಧರ್ಮವೆಂದು ನಿಶ್ಚಿತಗೊಂಡಿದೆ. ಏಕೆಂದರೆ, ಹಿಂದೆಯೇ ವಿಹಿತವಾಗಿರುವ ಕರ್ಮವು ದೇಹಿಯನ್ನು ಬಿಡುವುದಿಲ್ಲ. ಕರ್ಮವನ್ನು ನಿರ್ಣಯಿಸುವಾಗ ಧಾತ್ರುವು ಈ ವಿಧಿಯನ್ನು ಬಹುರೀತಿಗಳಲ್ಲಿ ನೋಡಿದನು. ಕ್ರೂರಕರ್ಮಗಳಲ್ಲಿ ತೊಡಗಿರುವವನು ಹೇಗೆ ಆ ಕರ್ಮವನ್ನು ಶುಭವನ್ನಾಗಿ ಮಾಡಬೇಕು ಮತ್ತು ಹೇಗೆ ಪರಾಭವದಿಂದ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ನೋಡಬೇಕಾಗುತ್ತದೆ. ಈ ಘೋರ ಕರ್ಮಗಳ ಕುರಿತು ಬಹುರೀತಿಯ ನಿರ್ಣಯಗಳಾಗುತ್ತವೆ.
“ನಾನು ಸದಾ ದಾನ, ಸತ್ಯವಾಕ್ಯ, ಗುರುಶುಶ್ರೂಷೆ, ದ್ವಿಜರ ಪೂಜೆ ಮತ್ತು ಧರ್ಮದಲ್ಲಿ ನಿರತನಾಗಿದ್ದೇನೆ. ನಾನು ಅತಿಯಾಗಿ ಮಾತನಾಡುವುದರಿಂದ ಮತ್ತು ಅತಿಯಾಗಿ ಜಂಬಕೊಚ್ಚಿಕೊಳ್ಳುವುದರಿಂದ ದೂರವಿರುತ್ತೇನೆ. ಕೃಷಿಯು ಒಳ್ಳೆಯದೆಂದು ಅಭಿಪ್ರಾಯಪಡುತ್ತಾರೆ. ಅದರಲ್ಲಿಯೂ ಬಹಳಷ್ಟು ಹಿಂಸೆಗಳಾಗುತ್ತದೆ ಎಂದು ತಿಳಿದಿದೆ. ನೇಗಿಲನ್ನು ಎಳೆದು ಹೂಳುವ ನರರು ಭೂಮಿಯೊಳಗೆ ಜೀವಿಸುವ ಬಹಳ ಜೀವಿಗಳನ್ನು ಮತ್ತು ಇತರ ಅನೇಕಗಳನ್ನು ಕೊಲ್ಲುತ್ತಾರೆ. ನಿನಗೇನನ್ನಿಸುತ್ತದೆ? ಧಾನ್ಯಬೀಜಗಳೆಂದು ಕರೆಯಲ್ಪಡುವ ಭತ್ತ ಮೊದಲಾದವುಗಳೆಲ್ಲವೂ ಜೀವಿಗಳೇ. ನಿನಗೇನನ್ನಿಸುತ್ತದೆ? ಪುರುಷನು ಪಶುಗಳನ್ನು ಅತಿಕ್ರಮಿಸಿ ಕೊಂದು ತಿನ್ನುತ್ತಾನೆ. ಮರ ಔಷಧಗಳನ್ನೂ ಕಡಿಯುತ್ತಾನೆ. ಮರಗಳಲ್ಲಿ ಮತ್ತು ಫಲಗಳಲ್ಲಿಯೂ ಬಹಳಷ್ಟು ಜೀವಿಗಳಿರುತ್ತವೆ. ನೀರಿನಲ್ಲಿಯೂ ಕೂಡ ಅನೇಕವಿವೆ. ಇದರ ಕುರಿತು ನಿನಗೇನನ್ನಿಸುತ್ತದೆ? ಎಲ್ಲವೂ ಪ್ರಾಣವಿರುವವುಗಳಿಂದ ಪ್ರಾಣಿಜೀವಿಗಳಿಂದ ತುಂಬಿದೆ. ಮೀನುಗಳು ಮೀನುಗಳನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ? ಸತ್ವವುಳ್ಳವುಗಳು ಬಹಳಷ್ಟು ಸತ್ವವುಳ್ಳವುಗಳನ್ನು ಆಧರಿಸಿ ಜೀವಿಸುತ್ತವೆ. ಪ್ರಾಣಿಗಳು ಅನ್ಯೋನ್ಯರನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ? ಕೇವಲ ನೆಲದ ಮೇಲೆ ನಡೆಯುವುದರಿಂದ ನರರು ನೆಲಕ್ಕೆ ಅಂಟಿಕೊಂಡಿರುವ ಅನೇಕ ಜೀವಿಗಳನ್ನು ಕಾಲಿನಿಂದ ತುಳಿಯುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ? ಕುಳಿತಿರುವ, ಮಲಗಿರುವ, ಜ್ಞಾನ ವಿವೇಕಗಳಿರುವ ಅನೇಕಾನೇಕ ಜೀವಿಗಳು ನಾಶಹೊಂದುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ? ತಿಳಿಯದೆಯೇ ಅವರು ಈ ಆಕಾಶ ಮತ್ತು ಭೂಮಿಯಲ್ಲಿ ತುಂಬಿರುವ ಎಲ್ಲ ಜೀವಗಳನ್ನು ಹಿಂಸಿಸುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ? ಹಿಂದೆ ಪುರುಷರು ವಿಸ್ಮಿತರಾಗಿ ಅಹಿಂಸೆ ಎಂದು ಹೇಳಿದ್ದರು. ಆದರೆ ಈ ಲೋಕದಲ್ಲಿ ಯಾರುತಾನೇ ಜೀವವಿರುವ ಯಾವುದನ್ನೂ ಹಿಂಸಿಸದೇ ಇದ್ದಾನೆ? ಬಹಳಷ್ಟು ಚಿಂತಿಸಿದರೂ ಇಲ್ಲಿ ಅಹಿಂಸಕನು ಯಾರೂ ಇಲ್ಲ. ಅಹಿಂಸೆಯಲ್ಲಿ ನಿರತರಾದ ಯತಿಗಳೂ ಕೂಡ ಹಿಂಸೆಯನ್ನೆಸಗುತ್ತಾರೆ. ಆದರೆ ಅವರ ಪ್ರಯತ್ನದಿಂದ ಅವು ಕಡಿಮೆಯಾಗುತ್ತವೆ.
“ನಾವು ನೋಡುವಂತೆಯೇ ಮಹಾಗುಣಗಳ, ಉತ್ತಮ ಕುಲದಲ್ಲಿ ಜನಿಸಿದವರು ಮಹಾ ಘೋರ ಕರ್ಮಗಳನ್ನು ಮಾಡಿಯೂ ಅದರಿಂದ ನಾಚಿಕೆಪಟ್ಟುಕೊಂಡಿಲ್ಲ. ಸ್ನೇಹಿತರು ಸ್ನೇಹಿತರನ್ನು, ವೈರಿಗಳು ವೈರಿಗಳನ್ನು, ಒಳ್ಳೆಯ ನಡತೆಯುಳ್ಳವರು ಒಳ್ಳೆಯ ನಡತೆಯಲ್ಲಿರುವವರನ್ನು ಸ್ವಾಗತಿಸುವುದಿಲ್ಲ. ಬಾಂಧವರು ಶ್ರೀಮಂತ ಬಾಂಧವರನ್ನು ನೋಡಿ ಸಂತೋಷ ಪಡುವುದಿಲ್ಲ. ಪಂಡಿತರೆಂದು ತಿಳಿದುಕೊಂಡ ಮೂಢರು ಗುರುಗಳನ್ನೂ ನಿಂದಿಸುತ್ತಾರೆ. ಲೋಕದಲ್ಲಿ ಧರ್ಮ ಮತ್ತು ಅಧರ್ಮಯುಕ್ತವಾದ ಬಹಳಷ್ಟು ವಿಪರ್ಯಾಸಗಳು ಕಾಣುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ? ಧರ್ಮ ಮತ್ತು ಅಧರ್ಮ ಕರ್ಮಗಳ ಕುರಿತು ಬಹಳಷ್ಟನ್ನು ಹೇಳಬಹುದು. ಆದರೆ ಸ್ವಕರ್ಮದಲ್ಲಿ ನಿರತನಾದವನು ಮಹಾ ಯಶಸ್ಸನ್ನು ಪಡೆಯುತ್ತಾನೆ.”
ಸರ್ವಧರ್ಮಗಳನ್ನು ಎತ್ತಿಹಿಡಿಯುವವರಲ್ಲಿ ಶ್ರೇಷ್ಠ ನಿಪುಣ ಧರ್ಮವ್ಯಾಧನು ಪುನಃ ವಿಪ್ರರ್ಷನನ್ನುದ್ದೇಶಿಸಿ ಇದನ್ನು ಹೇಳಿದನು. “ಶೃತಿಪ್ರಮಾಣವಾದುದೇ ಧರ್ಮವೆಂದು ವೃದ್ಧರು ಹೇಳುತ್ತಾರೆ. ಏಕೆಂದರೆ ಧರ್ಮದ ಗತಿಯು ಸೂಕ್ಷ್ಮವಾದುದು. ಅದಕ್ಕೆ ಹಲವಾರು ಕವಲುಗಳಿವೆ ಮತ್ತು ಕೊನೆಯೇ ಇಲ್ಲ. ಮರಣಕಾಲದಲ್ಲಿ ಮತ್ತು ವಿವಾಹದಲ್ಲಿ ಸುಳ್ಳನ್ನು ಹೇಳಬಹುದು. ಆಗ ಸುಳ್ಳು ಸತ್ಯವಾಗಬಹುದು ಮತ್ತು ಸತ್ಯವು ಸುಳ್ಳಾಗಬಹುದು. ಇರುವವುಗಳಿಗೆ ಅತ್ಯಂತ ಹಿತವಾದುದು ಯಾವುದೋ ಅದೇ ಸತ್ಯವೆಂದೂ, ಇದಕ್ಕೆ ವಿಪರ್ಯಾಸವಾದುದನ್ನು ಅಧರ್ಮವೆಂದೂ ಅಭಿಪ್ರಾಯಪಡುತ್ತಾರೆ. ಧರ್ಮದ ಸೂಕ್ಷ್ಮತೆಯನ್ನು ನೋಡು! ಶುಭ ಅಥವಾ ಅಶುಭ ಯಾವುದೇ ಕರ್ಮವನ್ನು ಮಾಡಲಿ, ಅವಶ್ಯವಾಗಿ ಪುರುಷನು ಅದರ ಫಲವನ್ನು ಅನುಭವಿಸುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ. ಪಂಡಿತನಲ್ಲದವನು ವಿಷಮ ದಶೆಗಳನ್ನು ಹೊಂದಿ ದೇವತೆಗಳನ್ನು ಚೆನ್ನಾಗಿ ಬೈಯುತ್ತಾನೆ. ತನ್ನ ಕರ್ಮಗಳಲ್ಲಿರುವ ದೋಷಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಮೂಡನು, ಮೋಸಗಾರನು ಮತ್ತು ಚಪಲನು ಸುಖದುಃಖಗಳಲ್ಲಿ ವಿಪರ್ಯಾಸಗಳನ್ನು ಅನುಭವಿಸಿದಾಗ ಉತ್ತಮ ದಾರಿಗೆ ಕರೆದೊಯ್ಯುವ ಪ್ರಜ್ಞೆಯನ್ನಾಗಲೀ ತಮ್ಮನ್ನು ದಾಟಿಸಿಕೊಳ್ಳಲು ಪೌರುಷವನ್ನಾಗಲೀ ಹೊಂದಿರುವುದಿಲ್ಲ. ಪುರುಷನ ಕ್ರಿಯಾಫಲವು ಬೇರೆಯಾವುದರ ಅದೀನದಲ್ಲಿಲ್ಲವಾದರೆ, ಅವನು ಯಾವ ಯಾವ ಕಾಮವನ್ನು ಬಯಸುತ್ತಾನೋ ಆ ಆ ಕಾಮವನ್ನು ಪಡೆಯುತ್ತಾನೆ. ಸಂಯತ, ದಕ್ಷ, ಮತ್ತು ಮತಿಮಂತ ಮಾನವರು ನಿಷ್ಫಲರಾಗಿ ಸರ್ವ ಕರ್ಮಗಳನ್ನು ಕಳೆದುಕೊಂಡಿದುದನ್ನು ಮತ್ತು ಇರುವವುಗಳನ್ನು ಸದಾ ಹಿಂಸಿಸುವವರು ಲೋಕಕ್ಕೆ ಮೋಸಮಾಡಿಕೊಂಡು ಸುಖವಾಗಿ ಜೀವಿಸುತ್ತಾರೆ ಎನ್ನುವುದನ್ನೂ ಇನ್ನೂ ನೋಡಬೇಕಷ್ಟೆ.
“ಏನನ್ನೂ ಮಾಡದೇ ಕುಳಿತುಕೊಂಡಿರುವವನಿಗೆ ಅದೃಷ್ಟವು ಒಲಿಯಬಹುದು. ಕೆಲವೊಮ್ಮೆ ಕರ್ಮಗಳನ್ನು ಮಾಡುವವನು ತನ್ನ ಗುರಿಯನ್ನು ತಲುಪದೇ ಇರಬಹುದು. ಪುತ್ರನನ್ನು ಬಯಸಿ ಕೃಪಣರಾದವರು ದೇವನಿಷ್ಟರಾಗಿ ತಪಸ್ಸನ್ನು ತಪಿಸಿ ಹತ್ತು ತಿಂಗಳು ಗರ್ಭವನ್ನು ಧರಿಸಿ ಕುಲಪಾಂಸಕರಿಗೆ ಜನ್ಮ ನೀಡಬಹುದು. ಇದೇ ಮಂಗಲ ವಿಧಗಳಿಂದ ಪಡೆದರೂ ಹುಟ್ಟಿದವರು ತಂದೆತಾಯಿಗಳು ಕೂಡಿಟ್ಟ ಧನ-ಧಾನ್ಯ-ಭೋಗಗಳನ್ನು ಪಡೆಯುವ ಆಸೆಯುಳ್ಳವರಾಗಿರಬಹುದು. ಮನುಷ್ಯರ ರೋಗಗಳು ಕರ್ಮದಿಂದಲೇ ಹುಟ್ಟುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಬೇಟೆಯಲ್ಲಿ ಕ್ಷುದ್ರಮೃಗಗಳಂತೆ ಅವರು ವ್ಯಾಧಿಗಳ ಬಾಧೆಗೊಳಗಾಗುತ್ತಾರೆ. ಕುಶಲ ನಿಪುಣ ವೈದ್ಯರು ಔಷಧಿಗಳನ್ನು ಸಂಗ್ರಹಿಸಿಕೊಂಡು ವ್ಯಾಧನು ಮೃಗಗಳನ್ನು ಬೆನ್ನಟ್ಟಿ ಹೋಗುವಂತೆ ವ್ಯಾಧಿಗಳ ಹಿಂದೆ ಹೋಗುತ್ತಾರೆ. ಭೋಗಿಸಲು ಎಷ್ಟೇ ಇದ್ದರೂ ಅಜೀರ್ಣದಿಂದ ಪೀಡಿತರಾದವರು ಅದನ್ನು ಭೋಗಿಸಲು ಅಶಕ್ತರಾಗಿರುತ್ತಾರೆ. ಬಾಹುಬಲವುಳ್ಳ ಇತರ ಬಹುಜನರು ದುಃಖದಿಂದ ಭೋಜನವನ್ನು ಕಂಡುಕೊಳ್ಳಲಾರರು. ಹೀಗೆ ಲೋಕವು ಆಕ್ರಂದದಿಂದ, ಮೋಹಶೋಕಗಳಿಂದ ತುಂಬಿ, ಯಾವಾಗಲೂ ಬಲಶಾಲಿ ಪ್ರವಾಹದಿಂದ ಕೊಚ್ಚಿಕೊಂಡು ಹೋಗುತ್ತದೆ. ತಮ್ಮ ವಿಧಿಯ ಒಡೆಯರಾಗಿದ್ದರೆ ಯಾರೂ ಸಾಯುತ್ತಿರಲಿಲ್ಲ, ಯಾರೂ ವೃದ್ಧರಾಗುತ್ತಿರಲಿಲ್ಲ, ಎಲ್ಲರಿಗೂ ಬಯಸಿದುದೆಲ್ಲವೂ ದೊರೆಯುತ್ತಿದ್ದವು, ಯಾರೂ ಅಪ್ರಿಯವಾದುದನ್ನು ನೋಡುತ್ತಿರಲಿಲ್ಲ. ಲೋಕದಲ್ಲಿ ಎಲ್ಲರೂ ಇತರರಿಗಿಂತ ಮೇಲೆ ಹೋಗಲು ಬಯಸುತ್ತಾರೆ, ಯಥಾಶಕ್ತಿಯಾಗಿ ಪ್ರಯತ್ನಿಸುತ್ತಾರೆ. ಆದರೆ ಅದು ಹಾಗಾಗುವುದಿಲ್ಲ. ಬಹುಮಂದಿ ಒಂದೇ ನಕ್ಷತ್ರ ಮಂಗಲ ಕಾಲಗಳಲ್ಲಿ ಹುಟ್ಟಿದ್ದರೂ ಅವರ ಕರ್ಮಸಂಧಿಗಳಲ್ಲಿ ಪಡೆಯುವ ಫಲಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ನೋಡುತ್ತೇವೆ.
“ಸ್ವಯಂ ಯಾರೂ ತಮ್ಮ ವಿಧಿಯ ಈಶರಲ್ಲ. ಪ್ರಾಕೃತವಾಗಿ ಕರ್ಮಗಳು ಸಿದ್ಧಿಯಾಗುವುದನ್ನೇ ನಾವು ಇಲ್ಲಿ ಕಾಣುತ್ತೇವೆ. ಇದು ಶ್ರುತಿಗಳು ಹೇಳಿದಂತೆ: ಜೀವವು ಸನಾತನವಾದುದು. ಈ ಲೋಕದ ಎಲ್ಲ ಪ್ರಾಣಿಗಳ ಶರೀರಗಳೂ ನಿರ್ದಿಷ್ಟವಾದವುಗಳಲ್ಲ. ಶರೀರವನ್ನು ಕೊಲ್ಲುವಾಗ ದೇಹನಾಶವಾಗುತ್ತದೆ. ಜೀವವು ಕರ್ಮಬಂಧಗಳ ಪ್ರಕಾರ ಬೇರೆ ಕಡೆ ವರ್ಗಾಯಿಸಲ್ಪಡುತ್ತದೆ.”
ಬ್ರಾಹ್ಮಣನು ಹೇಳಿದನು: “ಧರ್ಮಬೃತರಲ್ಲಿ ಶ್ರೇಷ್ಠನೇ! ಜೀವವು ಹೇಗೆ ಶಾಶ್ವತವಾದುದು? ಇದನ್ನು ಇದ್ದಹಾಗೆ ಕೇಳಲು ಬಯಸುತ್ತೇನೆ.”
ವ್ಯಾಧನು ಹೇಳಿದನು: “ದೇಹಭೇದವಾದಾಗ ಜೀವವು ಸಾಯುವುದಿಲ್ಲ. ಆದರೆ ಮೂಡರು ಅದು ಕಳೆದುಹೋಗುತ್ತದೆ ಎಂದು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ದೇಹದೊಳಗಿರುವ ಜೀವವು ಮುಂದುವರೆದು ಹೋಗುತ್ತದೆ. ಬೇರೆಯಾದ ಶರೀರವು ಪಂಚಭೂತಗಳನ್ನು ಸೇರುತ್ತದೆ. ಮಾಡಿದ ಕರ್ಮಗಳನ್ನು ಬೇರೆ ಯಾರೂ ಪಡೆಯುವುದಿಲ್ಲ. ಕರ್ತನು ಮಾತ್ರ ಅವುಗಳಿಂದುಂಟಾಗುವ ಸುಖ ದುಃಖಗಳ ಭಾಗಿಯಾಗುತ್ತಾನೆ. ಏನೇ ಕರ್ಮಗಳನ್ನು ಮಾಡಿದ್ದರೂ ಅವನೇ ಅದನ್ನು ಪಡೆಯುತ್ತಾನೆ. ಕೃತನ ನಾಶವಾಗುವುದಿಲ್ಲ. ಅಪುಣ್ಯಶೀಲರು ಪುಣ್ಯಶೀಲರಾಗುತ್ತಾರೆ. ನರೋತ್ತಮರು ಪಾಪಕೃತರಾಗುತ್ತಾರೆ. ಕರ್ಮಗಳು ನರನ ಬೆನ್ನುಹತ್ತಿ ಹೋಗುತ್ತವೆ. ಅವನೇನಾಗಬೇಕೆಂದು ನಿರ್ಧರಿಸುತ್ತವೆ ಮತ್ತು ಅನಂತರ ಅವನು ಹುಟ್ಟುತ್ತಾನೆ.”
ಬ್ರಾಹ್ಮಣನು ಹೇಳಿದನು: “ಸತ್ತಮ! ಅವನು ಹೇಗೆ ಯೋನಿಗಳಲ್ಲಿ ಹುಟ್ಟಿಕೊಳ್ಳುತ್ತಾನೆ? ಮತ್ತು ಪುಣ್ಯಪಾಪಗಳಿಂದ ಪುಣ್ಯನು ಪುಣ್ಯನಾಗಿಯೇ ಮತ್ತು ಪಾಪಿಯು ಪಾಪಿಯಾಗಿಯೇ ಹೇಗೆ ಹುಟ್ಟಿಕೊಳ್ಳುತ್ತಾನೆ? ಅವನು ಹೇಗೆ ಹೋಗುತ್ತಾನೆ?”
ವ್ಯಾಧನು ಹೇಳಿದನು: “ಕರ್ಮವು ಗರ್ಭಾಧಾನದೊಂದಿಗೆ ಕೂಡಿರುತ್ತದೆಯೆಂದು ಕಾಣುತ್ತದೆ. ಇದರ ಕುರಿತು ಬೇಗನೇ ಸಂಕ್ಷಿಪ್ತವಾಗಿ ಹೇಳುತ್ತೇನೆ. ಒಟ್ಟುಹಾಕಿಕೊಂಡ ಸಂಭಾರ-ಸಾಮಾಗ್ರಿಗಳಿಗೆ ತಕ್ಕುದಾಗಿ ಶುಭಕಾರ್ಯಗಳನ್ನು ಮಾಡಿದವರು ಶುಭಯೋನಿಗಳಲ್ಲಿ ಮತ್ತು ಪಾಪಕಾರ್ಯಗಳನ್ನು ಮಾಡಿದವರು ಪಾಪಯೋನಿಗಳಲ್ಲಿ ಪುನಃ ಹುಟ್ಟುತ್ತಾರೆ. ಶುಭಕರ್ಮಗಳಿಂದ ದೇವತ್ವವನ್ನು ಪಡೆಯುತ್ತಾರೆ. ಮಿಶ್ರಕರ್ಮಗಳಿಂದ ಮನುಷ್ಯನಾಗುತ್ತಾರೆ. ಮೋಹದಿಂದ ಪ್ರಾಣಿಯೋನಿಗಳಲ್ಲಿ, ಮತ್ತು ಕಿಲ್ಬಿಷಗಳಿಂದ ಅಧೋಯೋನಿಗಳಲ್ಲಿ ಹುಟ್ಟುತ್ತಾರೆ. ಮನುಷ್ಯನು ತಾನೇ ಮಾಡಿದ ದೋಷಗಳಿಂದ ಸಂಸಾರದಲ್ಲಿ ಹುಟ್ಟು, ಮೃತ್ಯು, ವೃದ್ಧಾಪ್ಯಗಳಿಂದ ಸುಡಲ್ಪಡುತ್ತಾನೆ. ಕರ್ಮಬಂಧನ ನಿಬಂಧನೆಗಳಿಗೆ ಸಿಲುಕಿ ಜೀವಗಳು ನರಕಕ್ಕೂ ಹೋಗಿ ಸಹಸ್ರಾರು ಕೀಳು ಯೋನಿಗಳಲ್ಲಿ ತಿರುಗುತ್ತಿರುತ್ತವೆ. ತಾವೇ ಮಾಡುವ ಕರ್ಮಗಳಿಂದ ಮತ್ತು ದುಃಖಗಳಿಗೆ ನೀಡುವ ಪ್ರತಿಕ್ರಿಯೆಗಳಿಂದ ಜಂತುಗಳು ಅಪುಣ್ಯ ಯೋನಿಗಳನ್ನು ಹೊಂದುತ್ತವೆ. ಅಲ್ಲಿ ಪುನಃ ಅನ್ಯ ಹೊಸಕರ್ಮಗಳನ್ನು ಒಟ್ಟುಹಾಕಿಕೊಂಡು ಪುನಃ, ರೋಗಿಯು ಅಪಥ್ಯ ಆಹಾರವನ್ನು ಸೇವಿಸಿದರೆ ಹೇಗೋ ಹಾಗೆ, ದುಃಖವನ್ನು ಅನುಭವಿಸುತ್ತವೆ. ಆಗ ದುಃಖಾರ್ತರಾಗಿದ್ದರೂ ಅದುಃಖಿತರಾಗಿದ್ದೇವೆ ಸುಖವಾಗಿದ್ದೇವೆ ಎಂದು ತಪ್ಪು ತಿಳಿದುಕೊಂಡು ತಮ್ಮ ಸರಪಳಿಗಳನ್ನು ಕಳಚಿಕೊಳ್ಳದೇ ಹೊಸ ಕರ್ಮಗಳಿಂದ ಬಂಧನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹೀಗೆ ಬಹುವೇದನೆಯ ಸಂಸಾರಚಕ್ರದಲ್ಲಿ ತಿರುಗುತ್ತಿರುತ್ತವೆ.
“ವಿಶುದ್ಧ ಕರ್ಮಗಳ ಮೂಲಕ ಈ ಬಂಧನದಿಂದ ನಿವೃತ್ತನಾದವನು ಎಲ್ಲಿಗೆ ಹೋದರೆ ದುಃಖವಿಲ್ಲವೋ ಆ ಸುಕೃತ ಲೋಕಗಳನ್ನು ಪಡೆಯುತ್ತಾನೆ. ಪಾಪದಲ್ಲಿ ನಿರತನಾದವನು ಪಾಪವನ್ನೇ ಮಾಡಿಕೊಂಡು ಪಾಪದ ಅಂತ್ಯವನ್ನು ಪಡೆಯುವುದೇ ಇಲ್ಲ. ಆದುದರಿಂದ ಪಾತಕ ಕರ್ಮವನ್ನು ವರ್ಜಿಸಿ ಪುಣ್ಯವನ್ನು ಮಾಡಬೇಕು. ಅನಸೂಯನಾಗಿ, ಕೃತಜ್ಞನಾಗಿದ್ದುಕೊಂಡು ಕಲ್ಯಾಣಕರ ಸೇವೆಸಲ್ಲಿಸುವ ನರನು ಸುಖ-ಧರ್ಮ-ಅರ್ಥ-ಸ್ವರ್ಗಗಳನ್ನು ಪಡೆಯುತ್ತಾನೆ. ಉತ್ತಮ ನಡತೆಯುಳ್ಳವನು, ತಾಳ್ಮೆಯುಳ್ಳವನು, ನಿಯತನಾದವನು, ಮತ್ತು ಯತಾತ್ಮನು ನಿರಂತರ ಸುಖವನ್ನು ಇಲ್ಲಿಯೂ ಇದರ ನಂತರವೂ ಪಡೆಯುತ್ತಾನೆ. ಮನುಷ್ಯನು ಉತ್ತಮರ ಧರ್ಮದಂತೆ ನಡೆದುಕೊಳ್ಳಬೇಕು ಮತ್ತು ಶಿಷ್ಟರಂತೆ ಕ್ರಿಯೆಗಳನ್ನು ಆಚರಿಸಬೇಕು. ಲೋಕದ ವೃತ್ತಿಯನ್ನು ಅನುಸರಿಸುವುದರಿಂದ ಸಂಕ್ಲೇಶಗಳುಂಟಾಗುವುದಿಲ್ಲ. ವಿಜ್ಞಾನಿಗಳೂ, ಶಾಸ್ತ್ರಗಳನ್ನು ಕಂಡುಕೊಂಡವರೂ, ಶಿಷ್ಟರೂ ಇದ್ದಾರೆ. ಸ್ವಧರ್ಮದಂತೆ ಕ್ರಿಯೆಯಲ್ಲಿ ತೊಡಗಿರುವುದರಿಂದ ಲೋಕದಲ್ಲಿ ಕರ್ಮಸಂಕರವು ಆಗುವುದಿಲ್ಲ. ಪ್ರಾಜ್ಞರು ಧರ್ಮದಂತೆ ನಡೆದುಕೊಳ್ಳುವುದರಲ್ಲಿ ಸಂತೋಷವನ್ನು ಪಡೆಯುತ್ತಾರೆ. ಧರ್ಮದಿಂದ ಜೀವನವನ್ನು ನಡೆಸುತ್ತಾರೆ. ಅವನು ಧರ್ಮದಿಂದ ಧನವನ್ನು ಗಳಿಸುತ್ತಾನೆ. ಅದರಿಂದಲೇ ಬೇರಿಗೆ ನೀರನ್ನು ಹಾಕುತ್ತಾನೆ ಮತ್ತು ಎಲ್ಲಿಯೂ ಗುಣಗಳನ್ನು ಕಾಣುತ್ತಾನೆ. ಅಂಥವನು ಧರ್ಮಾತ್ಮನಾಗಿರುತ್ತಾನೆ. ಅವನ ಚಿತ್ತವು ಸದಾ ಸಂತೃಪ್ತವಾಗಿರುತ್ತದೆ. ಅವನು ಮಿತ್ರಜನರೊಡನೆ ಸಂತುಷ್ಟನಾಗಿ ಇಲ್ಲಿಯೂ ಮತ್ತು ನಂತರದಲ್ಲಿಯೂ ಆನಂದಿಸುತ್ತಾನೆ. ಧರ್ಮದಲ್ಲಿರುವವರು ಸುಖವನ್ನು ನೀಡುವ ಶಬ್ಧ, ಸ್ಪರ್ಶ, ರೂಪ, ಗಂಧಗಳ ಮೇಲೆ ಪ್ರಭುತ್ವವನ್ನು ಪಡೆಯುತ್ತಾರೆ. ಇವು ಧರ್ಮದ ಫಲವೆಂದು ತಿಳಿಯಲ್ಪಟ್ಟಿವೆ.
“ಜ್ಞಾನಚಕ್ಷುಷಿಯು ಧರ್ಮದ ಫಲವನ್ನು ಪಡೆದು ತೃಪ್ತನಾಗುವುದಿಲ್ಲ. ಅವನು ನೋವು ಸುಖಗಳಿಗೆ ನಿರ್ವೇದನಾಗುತ್ತಾನೆ. ಪ್ರಜ್ಞಾಚಕ್ಷು ನರನನ್ನು ಇಲ್ಲಿಯ ದೋಷಗಳು ತಾಗುವುದಿಲ್ಲ. ತಾನೇ ಬಯಸಿ ವೈರಾಗ್ಯನಾಗುತ್ತಾನೆ. ಆದರೆ ಧರ್ಮವನ್ನು ಬಿಡುವುದಿಲ್ಲ. ಲೋಕ ಮತ್ತು ತಾನೂ ಕ್ಷಯವಾಗುವವೆನ್ನುವುದನ್ನು ಕಂಡುಕೊಂಡು ಎಲ್ಲವನ್ನೂ ತ್ಯಜಿಸಲು ಪ್ರಯತ್ನಿಸುತ್ತಾನೆ. ಇನ್ನೂ ಉಪಾಯಗಳನ್ನು ಹುಡುಕಿಕೊಳ್ಳುತ್ತಾ ಮೋಕ್ಷಕ್ಕೆ ಪ್ರಯತ್ನಿಸುತ್ತಾನೆ. ಹೀಗೆ ನಿರ್ವೇದಭಾವವನ್ನು ತಳೆದು ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾನೆ. ಧಾರ್ಮಿಕನಾಗಿದ್ದುಕೊಂಡು ಪರಮ ಮೋಕ್ಷವನ್ನು ಪಡೆಯುತ್ತಾನೆ. ತಪಸ್ಸು ಜಂತುವಿನ ಶ್ರೇಯಸ್ಸಿಗೆ ಕಾರಣ ಮತ್ತು ಅದರ ಮೂಲವು ಶಮ ಮತ್ತು ದಮ. ಇವುಗಳ ಮೂಲಕ ಅವನ ಮನಸ್ಸು ಬಯಸಿದ ಕಾಮಗಳೆಲ್ಲವನ್ನೂ ಪಡೆಯುತ್ತಾನೆ. ಇಂದ್ರಿಯಗಳ ನಿರೋಧ, ಸತ್ಯ ಮತ್ತು ದಮಗಳ ಮೂಲಕ ಶ್ರೇಷ್ಠ ಬ್ರಹ್ಮಪದವನ್ನು ಪಡೆಯುತ್ತಾನೆ.”
ಬ್ರಾಹ್ಮಣನು ಹೇಳಿದನು: “ಯತವ್ರತ! ಇಂದ್ರಿಯಗಳೆಂದು ನೀನು ಹೇಳಿದೆಯಲ್ಲ ಅವು ಏನು? ಅವುಗಳ ನಿಗ್ರಹವನ್ನು ಹೇಗೆ ಮಾಡಬೇಕು ಮತ್ತು ನಿಗ್ರಹದ ಫಲವೇನು? ಇವುಗಳ ಫಲವನ್ನು ಹೇಗೆ ಪಡೆಯಬೇಕು? ತತ್ವದಿಂದ ಈ ಧರ್ಮವನ್ನು ತಿಳಿಯಲು ಬಯಸುತ್ತೇನೆ.””
ವಿಪ್ರನ ಈ ಮಾತುಗಳಿಗೆ ಧರ್ಮವ್ಯಾಧನು ಉತ್ತರಿಸಿದನು: “ದ್ವಿಜಸತ್ತಮ! ತಿಳಿದುಕೊಳ್ಳುವುದಕ್ಕಾಗಿ ಮನುಷ್ಯರಲ್ಲಿ ಮೊದಲು ಮನಸ್ಸು ಕಾರ್ಯಗತವಾಗುತ್ತದೆ. ಅದನ್ನು ಪಡೆದನಂತರ ಕಾಮ, ಪ್ರೇಮ, ಕ್ರೋಧಗಳುಂಟಾಗುತ್ತವೆ. ಅದನ್ನು ತೃಪ್ತಿಗೊಳಿಸಲು ಮಹಾ ಕರ್ಮಗಳನ್ನು ಮಾಡಲಾಗುತ್ತದೆ. ಇಷ್ಟವಾದ ರೂಪಗಂಧಗಳನ್ನು ಅಭ್ಯಾಸಬಲದಿಂದ ಸೇವಿಸಲಾಗುತ್ತದೆ. ಆಗ ರಾಗವು ಹುಟ್ಟುತ್ತದೆ ಮತ್ತು ಅದರ ನಂತರ ದ್ವೇಷ. ಅನಂತರ ಲೋಭವು ಹೊಟ್ಟುತ್ತದೆ ಮತ್ತು ಅದರ ನಂತರ ಮೋಹ. ಲೋಭದಿಂದ ಆಳಲ್ಪಡುತ್ತಾನೆ, ರಾಗದ್ವೇಷಗಳಿಂದ ಪೆಟ್ಟು ತಿನ್ನುತ್ತಾನೆ. ಬುದ್ಧಿಯು ಧರ್ಮದ ಕಡೆ ಹೋಗುವುದಿಲ್ಲ. ಧರ್ಮದಲ್ಲಿರುವಂತೆ ನಟಿಸುತ್ತಾನೆ. ಕಪಟ ಧರ್ಮದಲ್ಲಿ ನಡೆಯುತ್ತಾನೆ. ಕಪಟನಾಗಿ ಸಂಪತ್ತನ್ನು ಬಯಸುತ್ತಾನೆ. ಕಪಟತನದಲ್ಲಿ ಸಂಪತ್ತನ್ನು ಗಳಿಸುತ್ತಾನೆ. ಆಗ ಬುದ್ಧಿಯು ಅದರಲ್ಲಿಯೇ ರಮಿಸಿ ಪಾಪವನ್ನೆಸಗುತ್ತಾನೆ. ಸ್ನೇಹಿತರು ಮತ್ತು ಪಂಡಿತರು ಅವನನ್ನು ತಡೆದರೂ ಅವನು ಶ್ರುತಿಸಂಬದ್ಧವಾದ ಶ್ರುತಿಯೋಜಿತವಾದ ಉತ್ತರವನ್ನೇ ಅವರಿಗೆ ಹೇಳುತ್ತಾನೆ. ರಾಗ ದೋಷದಿಂದ ಅವನ ಅಧರ್ಮವು ಮೂರುವಿಧಗಳಲ್ಲಿ ಹೆಚ್ಚಾಗುತ್ತದೆ; ಪಾಪವನ್ನು ಯೋಚಿಸುತ್ತಾನೆ, ಮಾತನಾಡುತ್ತಾನೆ ಮತ್ತು ಮಾಡುತ್ತಾನೆ ಕೂಡ. ಅವನ ಅಧರ್ಮಪ್ರವೃತ್ತಿಯಿಂದ ಒಳ್ಳೆಯ ಗುಣಗಳು ನಾಶವಾಗುತ್ತವೆ. ಅದೇ ನಡತೆಯ ಪಾಪಕರ್ಮಿಗಳು ಅವನ ಮಿತ್ರತ್ವವನ್ನು ಬಯಸುತ್ತಾರೆ. ಅವನು ಅಸುಖವನ್ನೇ ಹೊಂದುತ್ತಾನೆ ಮತ್ತು ನಂತರದಲ್ಲಿ ನಾಶಹೊಂದುತ್ತಾನೆ. ಪಾಪಾತ್ಮನು ಹೀಗೆಯೇ ಆಗುತ್ತಾನೆ. ಈಗ ಧರ್ಮಲಾಭದ ಕುರಿತು ನನ್ನಿಂದ ಕೇಳು. ಯಾರು ತನ್ನ ಪ್ರಜ್ಞೆಯ ಮೂಲಕ ಈ ದೋಷಗಳನ್ನು ಮೊದಲೇ ಕಂಡುಕೊಳ್ಳುತ್ತಾನೋ ಮತ್ತು ಸುಖ ದುಃಖಗಳೇನೆಂದು ತಿಳಿದಿರುವನೋ ಅವನು ಒಳ್ಳೆಯ ಜನರೊಡನೆ ಒಡನಾಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸಿದುದರಿಂದ ಅವನ ಬುದ್ಧಿಯು ಧರ್ಮದ ಕಡೆ ನಡೆಯುತ್ತದೆ.”
ಬ್ರಾಹ್ಮಣನು ಹೇಳಿದನು: “ವಕ್ತಾರನೇ ಇಲ್ಲದ ಸುಖಕರವಾದ ಧರ್ಮದ ಕುರಿತು ನೀನು ಹೇಳುತ್ತಿರುವೆ. ನೀನು ಓರ್ವ ದಿವ್ಯದೃಷ್ಟಿಯ ಮಹಾ ಋಷಿಯೆಂದೇ ನನಗನ್ನಿಸುತ್ತದೆ.”
ವ್ಯಾಧನು ಹೇಳಿದನು: “ಪಿತೃಗಳಂತೆ ಮಹಾಭಾಗ ಬ್ರಾಹ್ಮಣರೂ ಸದಾ ಮೊದಲು ಆಹಾರಕ್ಕೆ ಅರ್ಹರು. ಈ ಲೋಕದಲ್ಲಿ ತಿಳಿದವನು ಅವರಿಗೆ ತೃಪ್ತಿಕೊಡುವ ಕಾರ್ಯವನ್ನು ಕೈಗೊಳ್ಳಬೇಕು. ಅವರಿಗೆ ಪ್ರಿಯವಾದುದು ಏನೆಂದು ಹೇಳುತ್ತೇನೆ. ಬ್ರಾಹ್ಮಣರಿಗೆ ನಮಸ್ಕರಿಸಿ, ಬ್ರಾಹ್ಮೀ ವಿದ್ಯೆಯನ್ನು ನನ್ನಿಂದ ಕೇಳು. ಯಾವುದರಿಂದಲೂ ಅಜೇಯವಾಗಿರುವ, ಈ ಸರ್ವ ವಿಶ್ವ, ಜಗತ್ತೂ, ಮಹಾಭೂತಗಳಿಂದ ಕೂಡಿದೆ. ಅವುಗಳಿಗೂ ಮಿಗಿಲಾದುದು ಬೇರೊಂದಿಲ್ಲ. ಈ ಮಹಾಭೂತಗಳು - ಆಕಾಶ, ವಾಯು, ಅಗ್ನಿ, ನೀರು, ಮತ್ತು ಭೂಮಿ. ಅವುಗಳ ಗುಣಗಳು - ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ. ಅವೆಲ್ಲವುಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಗುಣಗಳಿದ್ದರೂ, ಅವು ಪರಸ್ಪರರ ಗುಣಗಳನ್ನೂ ಹೊಂದಿವೆ. ಕ್ರಮವಾಗಿ ಪ್ರತಿಯೊಂದರಲ್ಲಿಯೂ ಅದರ ಹಿಂದಿನ ಮೂರು ಭೂತಗಳ ಗುಣಗಳೂ ಸೇರಿವೆ. ಆರನೆಯದು ಚೇತನ. ಇದನ್ನು ಮನಸ್ಸು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಏಳನೆಯದು ಬುದ್ಧಿ. ಅಹಂಕಾರವು ಅದರ ನಂತರದ್ದು. ಇಂದ್ರಿಯಗಳು ಐದು. ರಜ, ಸತ್ವ ಮತ್ತು ತಮಗಳು ಕೂಡ. ಈ ಹದಿನೇಳರ ಗುಂಪು ಅವ್ಯಕ್ತ ಎಂದು ತಿಳಿಯಲ್ಪಟ್ಟಿದೆ. ಎಲ್ಲ ಇಂದ್ರಿಯ ವಸ್ತುಗಳಲ್ಲಿ, ಮನಸ್ಸು ಮತ್ತು ಬುದ್ಧಿಗಳಲ್ಲಿ ಹುದುಗಿರುವ ವ್ಯಕ್ತ ಮತ್ತು ಅವ್ಯಕ್ತಗಳನ್ನೂ ಸೇರಿ ಇಪ್ಪತ್ನಾಲ್ಕು ವ್ಯಕ್ತ-ಅವ್ಯಕ್ತ ಗುಣಗಳೆಂದು ಕರೆಯಲ್ಪಟ್ಟಿದೆ. ಈ ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನು ಏನನ್ನು ಕೇಳ ಬಯಸುತ್ತೀಯೆ?”
ಧರ್ಮವ್ಯಾಧನು ಹೀಗೆ ಹೇಳಲು, ವಿಪ್ರನು ಮನಸ್ಸಿಗೆ ಸುಖವನ್ನು ನೀಡುವ ಈ ಮಾತುಕತೆಯನ್ನು ಮುಂದುವರೆಸಿ ಹೇಳಿದನು: “ಧರ್ಮವನ್ನು ತಿಳಿದವರಲ್ಲಿ ಶ್ರೇಷ್ಠನೇ! ಐದು ಮಹಾಭೂತಗಳಿವೆಯೆಂದು ಹೇಳುತ್ತಾರೆ. ಈ ಐದರಲ್ಲಿ ಪ್ರತಿಯೊಂದರ ಗುಣಗಳನ್ನು ಸರಿಯಾಗಿ ನನಗೆ ತಿಳಿಸಿ ಹೇಳು.”
ವ್ಯಾಧನು ಹೇಳಿದನು: “ಭೂಮಿ, ನೀರು, ಜ್ಯೋತಿ, ವಾಯು, ಆಕಾಶಗಳಿವೆ. ಅವೆಲ್ಲವುಗಳಲ್ಲಿ ಪ್ರತಿಯೊಂದರ ಗುಣಗಳನ್ನು ನಿನಗೆ ಹೇಳುತ್ತೇನೆ. ಭೂಮಿಯು ಐದು ಗುಣಗಳನ್ನು ಮತ್ತು ಉದಕವು ನಾಲ್ಕು ಗುಣಗಳನ್ನು ಹೊಂದಿವೆ. ತೇಜಕ್ಕೆ ಮೂರು ಗುಣಗಳಿವೆ ಮತ್ತು ಆಕಾಶ ವಾತಗಳ ಮಧ್ಯೆ ಮೂರು ಗುಣಗಳಿವೆ. ಎಲ್ಲಕ್ಕಿಂತಲೂ ಹೆಚ್ಚು ಗುಣಗಳನ್ನುಳ್ಳ ಭೂಮಿಯು ಈ ಐದು ಗುಣಗಳನ್ನು ಹೊಂದಿದೆ: ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ. ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ನೀರಿನ ಗುಣಗಳೆಂದು ಹೇಳುತ್ತಾರೆ. ಶಬ್ದ, ಸ್ಪರ್ಶ ಮತ್ತು ರೂಪ ಇವು ತೇಜಸ್ಸಿನ ಮೂರು ಗುಣಗಳು. ಗಾಳಿಯು ಶಬ್ದ ಸ್ಪರ್ಶಗಳನ್ನು ಹೊಂದಿದೆ ಮತ್ತು ಆಕಾಶಕ್ಕೆ ಶಬ್ದವು ಮಾತ್ರ. ಈ ಹದಿನೈದು ಗುಣಗಳು ಐದು ಭೂತಗಳಲ್ಲಿವೆ. ಮತ್ತು ಇವು ಲೋಕಗಳ ಆಧಾರವಾದ ಎಲ್ಲ ಭೂತಗಳಲ್ಲಿ ನಡೆಯುತ್ತವೆ. ಅವು ಅನ್ಯೋನ್ಯವನ್ನು ಅತಿಕ್ರಮಿಸುವುದಿಲ್ಲ; ಅವು ಒಂದಾಗಿರುತ್ತವೆ. ಆದರೆ ಚರಾಚರಗಳಲ್ಲಿ ಇವುಗಳ ವೈಷಮ್ಯವುಂಟಾದಾಗ, ಸಮಯದಲ್ಲಿ ದೇಹಿಯು ಅನ್ಯ ದೇಹವನ್ನು ಪ್ರವೇಶಿಸುತ್ತದೆ. ಧಾತುಗಳು ಒಂದರ ನಂತರ ಒಂದರಂತೆ ನಾಶಹೊಂದುತ್ತವೆ ಮತ್ತು ಒಂದರ ನಂತರ ಒಂದರಂತೆ ಹುಟ್ಟುತ್ತವೆ. ಪ್ರತಿ ಕ್ಷಣದಲ್ಲಿಯೂ ಪಂಚಭೌತಿಕಗಳ ಧಾತುಗಳು ಕಾಣಿಸಿಕೊಳ್ಳುತ್ತವೆ. ಅವು ಈ ಜಗತ್ತಿನ ಸ್ಥಾವರ ಜಂಗಮಗಳೆಲ್ಲವನ್ನೂ ಆವರಿಸಿವೆ. ಇಂದ್ರಿಯಗಳಿಂದ ಸೃಷ್ಟಿಸಿದವುಗಳನ್ನು ವ್ಯಕ್ತವೆಂದು ಹೇಳುತ್ತಾರೆ. ಅತೀಂದ್ರಿಯವಾದವುಗಳನ್ನು, ಲಿಂಗವೆಂದು ತಿಳಿಯಬೇಕಾದುದನ್ನು ಅವ್ಯಕ್ತವೆಂದು ಹೇಳುತ್ತಾರೆ. ಶಬ್ಧಾದಿಗಳನ್ನು ಯಾವುದರಿಂದ ಗ್ರಹಿಸುತ್ತಾನೋ ಆ ಇಂದ್ರಿಯಗಳು ತನ್ನವು ಎಂಬ ತಿಳುವಳಿಕೆಯಿಂದ ಇರುವಾಗ ದೇಹಿಯು ಪರಿತಪಿಸುತ್ತಾನೆ. ಆತ್ಮವನ್ನು ಮುಂದುವರೆಸಿ ಲೋಕವನ್ನೂ, ಲೋಕದಲ್ಲಿ ಆತ್ಮವನ್ನೂ ಕಾಣುವವನು ಮೇಲಿನ ಮತ್ತು ಕೆಳಗಿನ ಲೋಕಗಳೆರಡನ್ನೂ ತಿಳಿದುಕೊಂಡು, ಅಂಟಿಕೊಂಡಿದ್ದರೂ ಸರ್ವಭೂತಗಳನ್ನು ಕಾಣುತ್ತಾನೆ. ಸರ್ವದಾ ಸರ್ವ ಭೂತಗಳ ಸರ್ವಾವಸ್ಥೆಗಳನ್ನು ನೋಡುವವನು ಬ್ರಹ್ಮನಾಗುತ್ತಾನೆ. ಅವನು ಎಂದೂ ಅಶುಭದೊಂದಿಗೆ ಕೂಡುವುದಿಲ್ಲ. ಮೋಹದಿಂದ ಉಂಟಾಗುವ ಅತಿಕ್ಲೇಶದ ನಡತೆಯನ್ನು ಜ್ಞಾನದ ಮೂಲದಿಂದ ತೆಗೆಯಬಹುದು. ಜ್ಞಾನಮಾರ್ಗದ ಬುದ್ಧಿಪ್ರಕಾಶದಿಂದ ಲೋಕವು ಕಾಣುತ್ತದೆ. ಅಂಥವನು ಅನಾದಿನಿಧನ, ಸದಾ ಅವ್ಯಯನಾಗಿರುವ, ಅನೌಪಮ, ಅಮುಹೂರ್ತ, ಬುದ್ಧಿವಂತ ಪ್ರಾಣಿಯೋನಿಯಲ್ಲಿ ಹುಟ್ಟುತ್ತಾನೆ. ನೀನು ಏನು ನನ್ನನ್ನು ಕೇಳುತ್ತಿದ್ದೀಯೋ ಇವೆಲ್ಲವುಗಳ ಮೂಲವೂ ತಪಸ್ಸು. ಇಂದ್ರಿಯಗಳಿಂದಲೇ ಸ್ವರ್ಗ ನರಕಗಳೆರಡೂ ಇವೆ. ಅವುಗಳನ್ನು ನಿಗ್ರಹದಲ್ಲಿಟ್ಟುಕೊಂಡರೆ ಸ್ವರ್ಗ, ಸ್ವಚ್ಛಂದವಾಗಿ ಬಿಟ್ಟರೆ ನರಕ. ಈ ಇಂದ್ರಿಯ ಧಾರಣೆಯೇ ಸಂಪೂರ್ಣ ಯೋಗವಿಧಿ. ಇಂದ್ರಿಯಗಳೇ ನಮ್ಮ ತಪಸ್ಸಿನ ಅಥವಾ ನರಕದ ಮೂಲ. ಇಂದ್ರಿಯಗಳ ಪ್ರಸಂಗದಿಂದ ದೋಷವುಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವುಗಳನ್ನೇ ಸಂಯಮದಲ್ಲಿಟ್ಟುಕೊಂಡರೆ ಸಿದ್ಧಿಯನ್ನು ಹೊಂದುತ್ತೇವೆ. ನಮ್ಮಲ್ಲಿರುವ ಆರು ಇಂದ್ರಿಯಗಳ ಮೇಲೆ ಅಧಿಕಾರವನ್ನು ಸಾಧಿಸುವ ಜಿಂತೇಂದ್ರಿಯನನ್ನು ಪಾಪಗಳು ಅಂಟುವುದಿಲ್ಲ. ಅನರ್ಥವು ಎಲ್ಲಿಂದ? ಪುರುಷನ ಶರೀರವನ್ನು ರಥಕ್ಕೆ, ಆತ್ಮವನ್ನು ಸಾರಥಿಗೆ ಮತ್ತು ಇಂದ್ರಿಯಗಳನ್ನು ರಥಕ್ಕೆ ಕಟ್ಟಿದ ಕುದುರೆಗಳಿಗೆ ಹೋಲಿಸುತ್ತಾರೆ. ಕುಶಲ ಸಾರಥಿಯು ಅಪ್ರಮತ್ತನಾಗಿ ಅಶ್ವಗಳನ್ನು ನಡೆಸುತ್ತಾನೆ. ಮತ್ತು ಧೀರ ರಥಿಕನಿಗೆ ನಿಯಂತ್ರಣದ ಮೂಲಕ ಸುಖವನ್ನು ತರುತ್ತಾನೆ. ಅಶ್ವಗಳಂತಿರುವ ನಮ್ಮಲ್ಲಿರುವ ಆರು ಇಂದ್ರಿಯಗಳನ್ನು (ಪಂಚೇಂದ್ರಿಯಗಳು ಮತ್ತು ಮನಸ್ಸು) ಯಾರು ತಾಳ್ಮೆಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೋ ಆ ಧೀರನೇ ಪರಮ ಸಾರಥಿ. ಹೆದ್ದಾರಿಯಲ್ಲಿ ಹೋಗುತ್ತಿರುವ ಕುದುರೆಗಳನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಂಡಿರಬೇಕೋ ಹಾಗೆ ಸಾರಥಿಯು ಧೃತನಾಗಿದ್ದರೆ ಜಯವು ನಿರ್ಧಿಷ್ಟ. ಯಾರ ಇಂದ್ರಿಯವು ಮನಸ್ಸಿನ ಮೇಲೆ ಅತಿಯಾದ ನಿಯಂತ್ರಣವನ್ನು ಹಾಕುತ್ತದೆಯೋ ಅಂಥವನ ಬುದ್ಧಿಯು ಸಮುದ್ರದಲ್ಲಿ ಗಾಳಿಗೆ ಸಿಲುಕಿದ ನಾವೆಯಂತೆ ಕಳೆದುಹೋಗುತ್ತದೆ. ಈ ಆರು ಇಂದ್ರಿಯಗಳ ಫಲಗಳ ಆಸೆಯಿಂದ ಜನರು ಮೋಹಿತರಾಗುತ್ತಾರೆ. ಆದರೆ ಅವುಗಳನ್ನು ಅಧ್ಯಯನ ಮಾಡುವವನು ಧ್ಯಾನದ ಮೂಲಕವೇ ಅವುಗಳ ಫಲವನ್ನು ಅನುಭವಿಸುತ್ತಾನೆ.”
ಈ ರೀತಿ ಸೂಕ್ಷ್ಮವಾದ ವಿಚಾರಗಳನ್ನು ಧರ್ಮವ್ಯಾಧನು ಹೇಳಲು ಬ್ರಾಹ್ಮಣನು ಪುನಃ ಸುಸಮಾಹಿತನಾಗಿ ಸೂಕ್ಷ್ಮವಾದ ವಿಷಯದ ಕುರಿತು ಕೇಳಿದನು: “ಸತ್ವ, ರಜಸ ಮತ್ತು ತಮೋಗುಣಗಳ ತತ್ವಗಳನ್ನು ಯಥಾವತ್ತಾಗಿ ಕೇಳಿದುದಕ್ಕೆ ಇದ್ದಹಾಗೆ ಹೇಳು.”
ವ್ಯಾಧನು ಹೇಳಿದನು: “ನೀನು ನನಗೆ ಕೇಳಿದ್ದುದನ್ನು ನಿನಗೆ ಹೇಳುತ್ತೇನೆ. ಈ ಗುಣಗಳ ಕುರಿತು ಒಂದೊಂದಾಗಿ ಹೇಳುತ್ತೇನೆ. ಕೇಳು. ಅವುಗಳಲ್ಲಿ ತಮಸ್ಸು ಮೋಹಾತ್ಮಕವು. ಅವುಗಳಲ್ಲಿ ರಜಸ್ಸು ಪ್ರವರ್ತಕ. ಸತ್ವವು ಕತ್ತಲೆಗೆ ಪ್ರಕಾಶವನ್ನು ನೀಡುವುದು. ಆದುದರಿಂದ ಅದನ್ನು ಅತ್ಯುತ್ತಮವೆಂದು ಹೇಳುತ್ತಾರೆ. ಅವಿದ್ಯ, ಬಹಳ ಮೂಢ, ಸ್ವಪ್ನಶೀಲ, ವಿಚೇತನ, ಸೋಮಾರಿ, ಉತ್ಸಾಹವಿಲ್ಲದವನು, ಸಿಟ್ಟು ಮತ್ತು ಸೊಕ್ಕಿಗೆ ಸದಾ ಸಿಲುಕುವವನು ತಾಮಸನೆಂದು ಹೇಳುತ್ತಾರೆ. ಉತ್ತಮ ಮಾತನಾಡುವವನು, ಚೆನ್ನಾಗಿ ಯೋಚಿಸುವ, ಅನುರಾಗವುಳ್ಳ, ಅಸೂಯೆಪಡದ, ಫಲಿತಾಂಶವನ್ನು ಬಯಸಿ ಕಾರ್ಯಶೀಲನಾಗಿರುವ ಮತ್ತು ಸ್ನೇಹಭಾವದಿಂದಿರುವವನು ರಾಜಸನೆಂದು ತಿಳಿಯಬೇಕು. ಅಚಲನಾಗಿರುವ, ಧೀರನಾಗಿರುವ, ಫಲಿತಾಂಶಕ್ಕೆ ಮಾತ್ರ ಕಾರ್ಯನಿರತನಾಗಿರದ, ತಾಳ್ಮೆಯನ್ನಿಟ್ಟುಕೊಂಡಿರುವ, ಅಸೂಯೆಪಡದ, ಸಿಟ್ಟಿಗೇಳದ, ಧೀಮಾನ್, ನರನು ಸಾತ್ವಿಕ. ಸಾತ್ವಿಕನು ಲೋಕವೃತ್ತಿಯಲ್ಲಿ ಸಿಲುಕಿದಾಗ ಕಷ್ಟವನ್ನು ಅನುಭವಿಸುತ್ತಾನೆ. ತಿಳುವಳಿಕೆಯು ಬಂದಾಗ ಲೋಕವೃತ್ತಿಯ ಕುರಿತು ಜಿಗುಪ್ಸೆಯನ್ನು ತಾಳುತ್ತಾನೆ. ವೈರಾಗ್ಯದ ರೂಪವನ್ನು ಈ ಮೊದಲೇ ಹೇಳಿಯಾಗಿದೆ. ಅವನ ಅಹಂಕಾರವು ಕಡಿಮೆಯಾಗುತ್ತದೆ. ಮತ್ತು ಆರ್ಜವವು ಹೆಚ್ಚಾಗುತ್ತದೆ. ಆಗ ಅವನ ಎಲ್ಲ ದ್ವಂದ್ವಗಳೂ ಪರಸ್ಪರ ನಾಶಗೊಳ್ಳುತ್ತವೆ. ಆಗ ಅವನಿಗೆ ಸಂಯಮ ಎನ್ನುವುದು ಎಂದೂ ಬೇಕಾಗುವುದಿಲ್ಲ. ಶೂದ್ರಯೋನಿಯಲ್ಲಿ ಹುಟ್ಟಿದ್ದರೂ ಕೂಡ ಸದ್ಗುಣಗಳಿದ್ದರೆ ವೈಶ್ಯತ್ವವನ್ನು ಪಡೆಯಬಹುದು ಅಥವಾ ಕ್ಷತ್ರಿಯತ್ವವನ್ನೂ ಪಡೆಯಬಹುದು. ನಡತೆಯಲ್ಲಿ ಆರ್ಜವವಿದ್ದರೆ ಬ್ರಾಹ್ಮಣ್ಯತ್ವವನ್ನೂ ಪಡೆಯಬಹುದು. ಗುಣಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”
ಬ್ರಾಹ್ಮಣನು ಹೇಳಿದನು: “ಪಾರ್ಥಿವವು ಧಾತುವನ್ನು ಸೇರಿ ಹೇಗೆ ಶರೀರೋಗ್ನಿಯಾಗುತ್ತದೆ? ಗಾಳಿಯು ಅವಕಾಶ ವಿಶೇಷದಿಂದ ಜೀವಿಯನ್ನು ಹೇಗೆ ನಡೆಸುತ್ತದೆ?”
ಬ್ರಾಹ್ಮಣನಿಟ್ಟ ಈ ಪ್ರಶ್ನೆಗೆ ವ್ಯಾಧನು ಮಹಾತ್ಮ ಬ್ರಾಹ್ಮಣನಿಗೆ ಹೇಳಿದನು: “ಮೂರ್ಧನಿಯಲ್ಲಿ ಆಶ್ರಿತನಾಗಿರುವ ವಹ್ನಿಯು ಶರೀರವನ್ನು ಪರಿಪಾಲಿಸುತ್ತಾನೆ. ಪ್ರಾಣ ಮತ್ತು ಮೂರ್ಧನಿಗಳಲ್ಲಿರುವ ಅಗ್ನಿಗಳೆರಡೂ ಕ್ರಿಯೆಗಳನ್ನುಂಟುಮಾಡುತ್ತವೆ. ಭೂತ, ವರ್ತಮಾನ, ಭವಿಷ್ಯಗಳೆಲ್ಲವುಗಳಲ್ಲಿ ಪ್ರಾಣವು ಪ್ರತಿಷ್ಠಿತವಾಗಿರುತ್ತದೆ. ಇದೇ ಜೀವಿಗಳಿಗೆ ಶ್ರೇಷ್ಠವಾದುದು; ಬ್ರಹ್ಮಜ್ಯೋತಿಯೆಂದು ಉಪಾಸನೆಗೊಳ್ಳುವುದು. ಇದೇ ಎಲ್ಲ ಜಂತುಗಳ ಭೂತಾತ್ಮ, ಪುರುಷ, ಸನಾತನ. ಭೂತಗಳ ಮನಸ್ಸು, ಬುದ್ಧಿ, ಅಹಂಕಾರ ಮತ್ತು ವಿಷಯ. ಇಲ್ಲಿದ್ದುಕೊಂಡು ಪ್ರಾಣವು ಎಲ್ಲಕಡೆಯಿಂದಲೂ ಪರಿಪಾಲಿಸುತ್ತದೆ. ಮುಂದೆ ಅದು ಸಮಾನವಾಗಿ ಬೇರೆ ಬೇರೆ ದಾರಿಗಳಲ್ಲಿ ಮುಂದುವರೆಯುತ್ತದೆ. ಹೊಟ್ಟೆಯಲ್ಲಿ ಪಾವಕನೊಂದಿರುವ ಇದು (ಈ ಪ್ರಾಣವು) ಅಪಾನವಾಗಿ ಪರಿವರ್ತನೆಗೊಂಡು ಪಚನಮಾಡಿ ಮೂತ್ರ ಪುರೀಷಗಳನ್ನು ಕೊಂಡೊಯ್ದು ಗುದದಲ್ಲಿ ಹೊರಬರುತ್ತದೆ. ಇದೇ ಪ್ರಯತ್ನ, ಕೆಲಸ ಮತ್ತು ಬಲ ಈ ಮೂರರಲ್ಲಿ ಒಂದಾಗಿರುತ್ತದೆ. ಇದನ್ನು ಉದಾನ ಎಂದು ಆಧ್ಯಾತ್ಮ ವಿದುಷೀ ಜನರು ಹೇಳುತ್ತಾರೆ. ಮನುಷ್ಯರ ಶರೀರಗಳ ಎಲ್ಲ ಸಂಧಿ ಸಂಧಿಗಳಲ್ಲಿ ಸಮಾವೇಶಗೊಂಡು ಇರುವ ಅನಿಲಕ್ಕೆ ವ್ಯಾನವೆಂದು ಕರೆಯುತ್ತಾರೆ. ಧಾತುಗಳಲ್ಲಿರುವ ಅಗ್ನಿ ಮತ್ತು ಒಳಗಿರುವ ವಾಯು ಸೇರಿಕೊಂಡು ನಮ್ಮ ಆಹಾರವನ್ನು, ಧಾತುಗಳನ್ನು, ಮತ್ತು ದೋಷಗಳನ್ನು ಪರಿವರ್ತಿಸುತ್ತವೆ. ಈ ಪ್ರಾಣಗಳ ಮಿಲನದಿಂದ ಪ್ರತಿಕ್ರಿಯೆಗಳುಂಟಾಗಿ ಅದರಿಂದ ಉಂಟಾದ ಒಳಗಿನ ಅಗ್ನಿಯೇ ನಮ್ಮ ದೇಹದ ಅನ್ನವನ್ನು ಪಚನಗೊಳಿಸುತ್ತದೆ. ಅಪಾನ ಉದಾನಗಳ ಮಧ್ಯೆ ಪ್ರಾಣ ವ್ಯಾನಗಳು ಸೇರಿಕೊಂಡಿವೆ. ಅವುಗಳ ಸಮನ್ವಯದಿಂದುಂಟಾದ ಅಗ್ನಿಯು ಚೆನ್ನಾಗಿ ಪಚನ ಮಾಡಿಸುತ್ತದೆ. ಅದರ ಸ್ಥಾನದಿಂದ ಗುದದ ವರೆಗಿನ ಭಾಗವನ್ನು ಅಪಾನವೆಂದು ಕರೆಯುತ್ತಾರೆ. ಅದರಿಂದ ದೇಹಿಗಳ ಸರ್ವಪ್ರಾಣಗಳು ಹುಟ್ಟುತ್ತವೆ. ಅಗ್ನಿವೇಗದಿಂದ ಹರಿಯುವ ಪ್ರಾಣವು ಗುದದ ಕೊನೆಯಲ್ಲಿ ಹಿಂದಿರುಗುತ್ತದೆ. ಅದು ಮೇಲೆ ಬಂದು ಪುನಃ ಅಗ್ನಿಯನ್ನು ಉರಿಸಿ ಎಬ್ಬಿಸುತ್ತದೆ. ನಾಭಿಯ ಮೇಲೆ ಪಚನವಾಗದ ಆಹಾರದ ಭಾಗವಿದೆ. ಕೆಳಗಿರುವುದು ಪಚನವಾದ ಆಹಾರದ ಭಾಗ. ನಾಭಿಮಧ್ಯದಲ್ಲಿ ಶರೀರದ ಎಲ್ಲ ಪ್ರಾಣಗಳೂ ಪ್ರತಿಷ್ಠಿತವಾಗಿವೆ. ಹೃದಯದಿಂದ ಹೊರಟ ನಾಡಿಗಳು ಮೇಲೆ ಕೆಳಗೆ ಮತ್ತು ಅಡ್ದಗಳಾಗಿ ಅನ್ನರಸಗಳನ್ನು ಹತ್ತು ಪ್ರಾಣಗಳಿಂದ ಪ್ರಚೋದಿತವಾಗಿ ಕೊಂಡೊಯ್ಯುತ್ತವೆ. ಮೂರ್ಧನಿಯಲ್ಲಿರುವ ಆತ್ಮದಿಂದ ಎಲ್ಲವನ್ನೂ ಸಮನಾಗಿ ಕಾಣುವ, ದುಃಖಗಳನ್ನು ಜಯಿಸಿದ, ಧೀರ ಯೋಗಿಗಳು ಈ ಮಾರ್ಗದಲ್ಲಿಯೇ ಆ ತತ್ಪರವನ್ನು ಸೇರುತ್ತಾರೆ. ಹೀಗೆ ಎಲ್ಲ ದೇಹಿಗಳಲ್ಲಿ ಪ್ರಾಣಾಪಾನಗಳು ಸಂಚರಿಸುತ್ತಿರುತ್ತವೆ. ಹನ್ನೊಂದು (ಪ್ರಾಣ, ಇಂದ್ರಿಯ ಮೊದಲಾದ) ವಿಕಾರಗಳನ್ನು ಹೊಂದಿ, ಕಲಾಸಂಭಾರಸಂಭೃತನಾಗಿ ಕರ್ಮಜಿತಾತ್ಮಕನು ಮೂರ್ತಿಮಂತನಾಗಿ ನಿತ್ಯವೂ ಇರುತ್ತಾನೆಂದು ತಿಳಿ. ಪಾತ್ರೆಯಲ್ಲಿ ಇಡಲ್ಪಟ್ಟ ಅಗ್ನಿಯಂತೆ ಈ ಶರೀರಮಧ್ಯದಲ್ಲಿ ಜೀವವೆಂಬ ಅಗ್ನಿಯು ಉರಿಯುತ್ತಿರುತ್ತದೆ. ಯೋಗಜಿತಾತ್ಮಕನಾದ ಅವನನ್ನೇ ನಿತ್ಯ-ಆತ್ಮನೆಂದು ತಿಳಿ. ದೇಹದಲ್ಲಿ ಸಂಸ್ಥಿತವಾಗಿರುವ ಆ ದೇವನು ತಾವರೆಯ ಮೇಲಿರುವ ನೀರಿನ ಬಿಂದುವಿನಂತೆ. ಅವನೇ ತ್ಯಾಗಜಿತಾತ್ಮಕನಾದ ಆ ನಿತ್ಯ-ಕ್ಷೇತ್ರಜ್ಞನೆಂದು ತಿಳಿ. ರಜ, ಸತ್ವ ಮತ್ತು ತಮಗಳಿಗೂ ಇವನು ಜೀವಾತ್ಮಕನೆಂದು ತಿಳಿ. ಜೀವವು ಆತ್ಮಗುಣವೆಂದೂ ಆತ್ಮವು ಪರಾತ್ಮಕವೆಂದೂ ತಿಳಿ. ಸಚೇತನವು ಜೀವಗುಣವೆಂದು ಹೇಳುತ್ತಾರೆ. ಅದು ಎಲ್ಲವನ್ನೂ ಚೇಷ್ಟೆಗೊಳಪಡಿಸುತ್ತದೆ ಮತ್ತು ಚೇಷ್ಟೆಗೊಳಗಾಗುತ್ತದೆ. ಅದರ ನಂತರದ್ದನ್ನು, ಈ ಏಳು ಭುವನಗಳನ್ನೂ ನಡೆಸುವ ಕ್ಷೇತ್ರವಿದುವೆಂದು ಹೇಳುತ್ತಾರೆ. ಹೀಗೆ ಎಲ್ಲ ಭೂತಗಳಲ್ಲಿ ಭೂತಾತ್ಮನು ಪ್ರಕಾಶಿಸುತ್ತಾನೆ. ಜ್ಞಾನವೇದಿಗಳು ಅವನನ್ನು ಸೂಕ್ಷ್ಮ ಬುದ್ಧಿಯಿಂದ ನೋಡುತ್ತಾರೆ. ಚಿತ್ತದ ಪ್ರಸಾದದಿಂದಲೇ ಶುಭಾಶುಭಕರ್ಮಗಳನ್ನು ನಾಶಗೊಳಿಸಬಹುದು. ಆತ್ಮವನ್ನು ಆತ್ಮನಲ್ಲಿ ಪ್ರಸನ್ನವಾಗಿಟ್ಟುಕೊಂಡರೆ ಅನಂತ ಸುಖವು ದೊರೆಯುತ್ತದೆ. ಆ ಪ್ರಸಾದದ ಲಕ್ಷಣವನ್ನು ಸುಖವಾಗಿ ನಿದ್ರಿಸುವ ತೃಪ್ತನಿಗೂ ಕುಶಲತೆಯಿಂದ ಬತ್ತಿಯ ಕರಿಯನ್ನು ಉದುರಿಸಿ ಉರಿಸುವ ದೀಪದ ಬೆಳಕಿಗೂ ಹೋಲಿಸಬಹುದು. ಸಾಯಂಕಾಲ ಮುಂಜಾನೆಯ ಸಮಯಗಳಲ್ಲಿ ಸತತವಾಗಿ ಮನಸ್ಸನ್ನಿಟ್ಟು, ಲಘುಆಹಾರದಲ್ಲಿದ್ದುಕೊಂಡ ವಿಶುದ್ಧಾತ್ಮನು ತನ್ನಲ್ಲಿಯೇ ಆತ್ಮನನ್ನು ಕಂಡುಕೊಳ್ಳುತ್ತಾನೆ. ಚೆನ್ನಾಗಿ ಉರಿಯುತ್ತಿರುವ ದೀಪದಂತಿರುವ ಮನೋದೀಪದಲ್ಲಿಯೇ ಅವನು ನಿರಾತ್ಮನಾದ ಆತ್ಮನನ್ನು ಕಾಣುತ್ತಾನೆ ಮತ್ತು ಮುಕ್ತಿಯನ್ನು ಹೊಂದುತ್ತಾನೆ. ಸರ್ವೋಪಾಯಗಳಿಂದ ಲೋಭ ಕ್ರೋಧಗಳನ್ನು ನಿಗ್ರಹಿಸಬೇಕು. ಏಕೆಂದರೆ ಇದು ದಾಟಿಸಬಲ್ಲದೆಂದು ತಿಳಿಯಲ್ಪಟ್ಟ ಯಜ್ಞಗಳಲ್ಲಿಯೇ ಪವಿತ್ರವಾದ ತಪಸ್ಸು. ನಿತ್ಯವೂ ತಪಸ್ಸನ್ನು ಕ್ರೋಧದಿಂದ, ಸಂಪತ್ತನ್ನು ಮತ್ಸರದಿಂದ, ವಿದ್ಯೆಯನ್ನು ಮಾನಾಪಮಾನದಿಂದ ಮತ್ತು ಆತ್ಮವನ್ನು ಭ್ರಮೆಯಿಂದ ರಕ್ಷಿಸಿಕೊಳ್ಳಬೇಕು. ಸುಳ್ಳು ಹೇಳದೇ ಇರುವುದು ಪರಮ ಧರ್ಮ, ಕ್ಷಮೆಯು ಪರಮ ಬಲ, ಆತ್ಮಜ್ಞಾನವು ಪರಮಜ್ಞಾನ ಮತ್ತು ಸತ್ಯನಡತೆಯು ಪರಮ ವ್ರತ. ಸತ್ಯವಚನವು ಶ್ರೇಯಸ್ಕರವು; ಸತ್ಯ ಜ್ಞಾನವು ಹಿತವೆನಿಸುತ್ತದೆ. ಆದರೆ ಹೆಚ್ಚಿನ ಭೂತಗಳಿಗೆ ಹಿತವಾದುದೇ ಪರಮ ಸತ್ಯವೆಂದು ಮತವಿದೆ. ಯಾರ ಎಲ್ಲ ಕಾರ್ಯಗಳೂ ಆಸೆಗಳಿಲ್ಲದೇ ಬಂಧನಗಳಿಲ್ಲದೇ ಸದಾ ಇರುತ್ತವೆಯೋ ಮತ್ತು ಎಲ್ಲವನ್ನೂ ಯಾರು ತ್ಯಾಗದಿಂದ ತೊರೆದಿದ್ದಾನೋ ಅವನೇ ತ್ಯಾಗೀ ಮತ್ತು ಬುದ್ಧಿವಂತ. ಬ್ರಹ್ಮನೊಡನೆ ಸೇರುವ ವಿದ್ಯೆಯನ್ನು ಗುರುವೂ ಕೂಡ ನೀಡಲು ಸಾಧ್ಯವಿಲ್ಲ. ಆದುದರಿಂದ ವಿಯೋಗವನ್ನೇ ಯೋಗವೆಂದು ತಿಳಿಯಲ್ಪಟ್ಟಿದೆ. ಎಲ್ಲ ಭೂತಗಳ ಮೇಲೂ ಹಿಂಸೆಯನ್ನು ಮಾಡಬಾರದು; ಎಲ್ಲದರೊಡನೆ ಮಿತ್ರತ್ವದಿಂದ ನಡೆದುಕೊಳ್ಳಬೇಕು. ಈ ಜೀವಿತದಲ್ಲಿ ಯಾರೊಂದಿಗೂ ವೈರತ್ವವನ್ನು ಸಾಧಿಸಬಾರದು. ಅನ್ಯರನ್ನು ಕೀಳಾಗಿ ಕಾಣದೇ ಇರುವುದು, ಸಂತೋಷವಾಗಿರುವುದು, ಆಸೆಗಳನ್ನಿಟ್ಟುಕೊಳ್ಳದೇ ಇರುವುದು, ಚಪಲನಾಗದೇ ಇರುವುದು ಇವುಗಳಿಂದಲೇ ಪರಮ ಜ್ಞಾನವನ್ನು ಪಡೆಯಬಹುದು. ಸದಾತ್ಮಜ್ಞಾನವೇ ಉತ್ತಮವಾದುದು. ಹಿಡಿದಿಟ್ಟುಕೊಂಡಿದ್ದುದನ್ನು ಬಿಟ್ಟು ಬುದ್ಧಿಯಿಂದ ಯತವ್ರತನಾಗಿದ್ದರೆ, ಸ್ಥಾನದಲ್ಲಿ ನಿಶ್ಚಲನಾಗಿದ್ದರೆ ಇಲ್ಲಿಯೂ ಮತ್ತು ನಂತರದಲ್ಲಿಯೂ ಶೋಕವಿರುವುದಿಲ್ಲ. ಗಳಿಸಲಾಗದ ಭಾವವನ್ನು ಗಳಿಸಲು ಬಯಸುವ ಮುನಿಯು ನಿತ್ಯವೂ ತಪೋನಿರತನಾಗಿದ್ದು, ತಾಳ್ಮೆ, ಆತ್ಮನಲ್ಲಿ ಸಮತೆ ಮತ್ತು ಸಂಗಗಳಲ್ಲಿ ಅಸಂಗನಾಗಿರಬೇಕು. ಅಂಥಹವನಲ್ಲಿ ಗುಣಗಳು ಅಗುಣಗಳಾಗುತ್ತವೆ. ಅವನು ಅಸಂಗನಾಗಿರುತ್ತಾನೆ. ಅವನ ಈ ನಡತೆಯೇ ಸುಖಕ್ಕಿರುವ ಒಂದೇ ದಾರಿಯೆಂದು ಹೇಳುತ್ತಾರೆ. ದುಃಖ ಸುಖಗಳೆರಡನ್ನೂ ಯಾರು ತ್ಯಜಿಸುತ್ತಾನೋ ಅವನು ಬ್ರಹ್ಮನನ್ನು ಪಡೆಯುತ್ತಾನೆ ಮತ್ತು ಅತ್ಯಂತ ಅಸಂಗತ್ವದಿಂದ ನಡೆಯುತ್ತಾನೆ. ನಾನು ಕೇಳಿದುದೆಲ್ಲವನ್ನೂ ನಿನಗೆ ಸಂಕ್ಷಿಪ್ತವಾಗಿ ಹೇಳಿದ್ದೇನೆ. ಇನ್ನೂ ಏನನ್ನು ಕೇಳ ಬಯಸುತ್ತೀಯೆ?”
ಈ ರೀತಿ ಮೋಕ್ಷಧರ್ಮದ ಕುರಿತು ವಿವರಿಸಿ ಹೇಳಲು ನಿಶ್ಚಯವಾಗಿಯೂ ಸಂತೋಷಗೊಂಡ ವಿಪ್ರನು ಧರ್ಮವ್ಯಾಧನಿಗೆ ಹೇಳಿದನು: “ನೀನು ಹೇಳಿದುದೆಲ್ಲವೂ ನ್ಯಾಯಯುಕ್ತವಾಗಿವೆ. ಧರ್ಮದ ಕುರಿತು ನಿನಗೆ ತಿಳಿಯದೇ ಇರುವುದು ಏನೂ ಇಲ್ಲವೆಂದು ಕಾಣುತ್ತದೆ.”
ವ್ಯಾಧನು ಹೇಳಿದನು: “ದ್ವಿಜಸತ್ತಮ! ನನ್ನ ಧರ್ಮವೇನೆನ್ನುವುದನ್ನು ಮತ್ತು ಯಾವುದರಿಂದ ನಾನು ಈ ಸಿದ್ಧಿಯನ್ನು ಪಡೆದಿದ್ದೇನೆ ಎನ್ನುವುದನ್ನು ನೀನು ಪ್ರತ್ಯಕ್ಷವಾಗಿ ನೋಡು! ಕೂಡಲೇ ಏಳು! ಮನೆಯ ಒಳಗೆ ಪ್ರವೇಶಿಸು. ನನ್ನ ತಾಯಿ-ತಂದೆಯರನ್ನು ನೀನು ನೋಡಬೇಕು.”
ಹೀಗೆ ಹೇಳಲು ಅವನು ಒಳಗೆ ಪ್ರವೇಶಿಸಿ ಸುಂದರವಾದ ಮನೆಯನ್ನು ನೋಡಿದನು. ಅದು ನಾಲ್ಕು ಕೋಣೆಗಳಿಂದ ಕೂಡಿತ್ತು ಅತೀವ ಮನೋಹರವಾಗಿತ್ತು. ದೇವತೆಗಳಿಂದ ಸುಪೂಜಿತವಾದ ದೇವತೆಗಳ ಮನೆಯಂತಿದ್ದ ಅದು ಸುಂದರ ಆಸನ ಹಾಸಿಗೆಗಳಿಂದ ಕೂಡಿತ್ತು. ಪರಮ ಸುಗಂದದಿಂದ ಸೂಸುತ್ತಿತ್ತು. ಅಲ್ಲಿ ಬಿಳಿಯ ವಸ್ತ್ರಗಳನ್ನು ಧರಿಸಿದ್ದ ಸುಪೂಜಿತರಾದ, ಊಟಮಾಡಿ ತುಷ್ಟರಾಗಿ ವರಾಸನದಲ್ಲಿ ಕುಳಿತಿದ್ದ ಅವನ ತಂದೆತಾಯಿಯರನ್ನು ಧರ್ಮವ್ಯಾಧನು ನೋಡಿ ಅವರ ಪಾದಗಳಲ್ಲಿ ತನ್ನ ಶಿರವನ್ನಿಟ್ಟನು. ವೃದ್ಧರು ಹೇಳಿದರು: “ಧರ್ಮಜ್ಞ! ಮೇಲೇಳು! ಧರ್ಮವು ನಿನ್ನನ್ನು ರಕ್ಷಿಸಲಿ. ನಿನ್ನ ಶುಚಿತ್ವದಿಂದ ಪ್ರೀತರಾಗಿದ್ದೇವೆ. ದೀರ್ಘ ಆಯುಸ್ಸನ್ನು ಹೊಂದುತ್ತೀಯೆ. ಸತ್ಪುತ್ರನಾದ ನಿನ್ನಿಂದ ನಿತ್ಯಕಾಲವೂ ನಾವು ಸುಪೂಜಿತರಾಗಿದ್ದೇವೆ. ದೇವತೆಗಳಲ್ಲಿಯೂ ಕೂಡ ನಿನಗೆ ಅನ್ಯ ದೇವತೆಗಳಿಲ್ಲ. ಪ್ರಯತ್ನಪಟ್ಟು ನೀನು ದ್ವಿಜಾತಿಯವರ ದಮಗಳಿಂದ ಸಮನ್ವಿತನಾಗಿದ್ದೀಯೆ. ನಿನ್ನ ಈ ದಮ ಮತ್ತು ಪೂಜನೆಯಿಂದ ಪಿತ ಪಿತಾಮಹರು ಮತ್ತು ಪ್ರಪಿತಾಮಹರೂ ಪ್ರೀತರಾಗಿದ್ದಾರೆ. ಮನಸಾ, ಕರ್ಮಣಾ, ವಾಚಾ ನೀನು ನಮ್ಮ ಶುಶ್ರೂಷೆಯನ್ನು ಕಡೆಗಣಿಸಿಲ್ಲ. ಈಗಲೂ ಕೂಡ ನಿನ್ನ ಬುದ್ಧಿಯಲ್ಲಿ ಬೇರೆ ಏನೂ ಕಾಣುತ್ತಿಲ್ಲವೆಂದು ನಮಗನ್ನಿಸುತ್ತದೆ. ಜಾಮದಗ್ನ್ಯ ರಾಮನಿಂದ ವೃದ್ಧರು ಹೇಗೆ ಸುಪೂಜಿತರಾಗಿದ್ದರೋ ಹಾಗೆ ನೀನೂ ಕೂಡ ಎಲ್ಲ ವಿಶಿಷ್ಟಗಳನ್ನೂ ಮಾಡಿದ್ದೀಯೆ.”
ಆಗ ಧರ್ಮವ್ಯಾಧನು ಆ ಬ್ರಾಹ್ಮಣನನ್ನು ಅವರಿಬ್ಬರಿಗೆ ಪರಿಚಯಿಸಿದನು. ಅವರಿಬ್ಬರೂ ಅವನನ್ನು ಸ್ವಾಗತಿಸಲು ವಿಪ್ರನೂ ಅವರನ್ನು ಗೌರವಿಸಿದನು. ಅವರ ಪೂಜೆಯನ್ನು ಸ್ವೀಕರಿಸಿ ದ್ವಿಜನು ಅವರಿಬ್ಬರನ್ನೂ ಪುತ್ರರೊಂದಿಗೆ, ಸೇವಕರೊಂದಿಗೆ ಮತ್ತು ಮನೆಯಲ್ಲಿ ಉಳಿದವರೆಲ್ಲರೊಂದಿಗೆ ಅವರು ಕುಶಲವಾಗಿದ್ದಾರೆಯೇ ಮತ್ತು ಸದೈವ ಶರೀರಗಳಲ್ಲಿ ಅನಾಮಯರಾಗಿದ್ದಾರೆಯೇ ಎಂದು ಕೇಳಿದನು. ವೃದ್ಧರು ಹೇಳಿದರು: “ವಿಪ್ರ! ಮನೆಯಲ್ಲಿ ಎಲ್ಲರೂ, ಸೇವಕ ವರ್ಗವೂ ಕುಶಲರಾಗಿದ್ದಾರೆ. ನೀನೂ ಕೂಡ ನಿರ್ವಿಘ್ನವಾಗಿ ಇಲ್ಲಿಗೆ ಬಂದಿರುವೆಯಾ?” ಸಂತೋಷಗೊಂಡ ವಿಪ್ರನು “ಚೆನ್ನಾಗಿದ್ದೇನೆ” ಎಂದು ಅವರಿಬ್ಬರಿಗೆ ಉತ್ತರಿಸಿದನು. ಧರ್ಮವ್ಯಾಧನು ವಿಪ್ರನಿಗೆ ಅರ್ಥವತ್ತಾದ ಈ ಮಾತುಗಳನ್ನಾಡಿದನು: “ಭಗವನ್! ತಂದೆ ಮತ್ತು ತಾಯಿ ಇವರೇ ನನ್ನ ಪರಮ ದೇವರು. ದೇವತೆಗಳಿಗೆ ಮಾಡಬೇಕಾದುದನ್ನು ಇವರಿಬ್ಬರಿಗೆ ನಾನು ಮಾಡುತ್ತೇನೆ. ಇಂದ್ರನ ನಾಯಕತ್ವದಲ್ಲಿರುವ ಮೂವತ್ತುಮೂರು ದೇವತೆಗಳೆಲ್ಲರನ್ನೂ ಸರ್ವಲೋಕವು ಹೇಗೆ ಪೂಜಿಸುತ್ತದೆಯೋ ಹಾಗೆ ಈ ವೃದ್ಧರೀರ್ವರನ್ನು ನಾನು ಪೂಜಿಸುತ್ತೇನೆ. ದ್ವಿಜರು ದೇವತೆಗಳ ನೈವೇದ್ಯಕ್ಕೆ ಆಹಾರವನ್ನು ಹೇಗೆ ಶ್ರಮಪಟ್ಟು ತಯಾರಿಸುತ್ತಾರೋ ಹಾಗೆ ನಾನೂ ಕೂಡ ಇವರಿಬ್ಬರಿಗೆ ಮಾಡುತ್ತೇನೆ. ಈ ತಂದೆತಾಯಿಯರಿಬ್ಬರೂ ನನ್ನ ಪರಮ ದೇವರುಗಳು. ಇವರನ್ನು ನಾನು ಪುಷ್ಪ, ಫಲ ರತ್ನಗಳಿಂದ ಸಂತುಷ್ಟಗೊಳಿಸುತ್ತೇನೆ. ಮನೀಷಿಣರು ಹೇಳುವ ಮೂರು ಅಗ್ನಿಗಳು (ದಕ್ಷಿಣಾಗ್ನಿ, ಗಾರ್ಹಪತ್ಯ ಮತ್ತು ಆಹವನೀಯ) ನನಗೆ ಇವರೇ. ಇವರೇ ನನಗೆ ಯಜ್ಞ ಮತ್ತು ನಾಲ್ಕು ವೇದಗಳು ಮತ್ತು ಸರ್ವಸ್ವವೂ. ನನ್ನ ಪ್ರಾಣಗಳಾದ ಪತ್ನಿ, ಪುತ್ರರು ಮತ್ತು ಸುಪುತ್ರರು ಇವರಿಗಾಗಿಯೇ ಇದ್ದಾರೆ. ಪುತ್ರ ಮತ್ತು ಪತ್ನಿಯೊಂದಿಗೆ ನಾನು ನಿತ್ಯವೂ ಇವರ ಶುಶ್ರೂಷೆಯನ್ನು ಮಾಡುತ್ತೇನೆ. ಸ್ವಯಂ ನಾನೇ ಇವರಿಗೆ ಸ್ನಾನಮಾಡಿಸುತ್ತೇನೆ, ಪಾದಗಳನ್ನು ತೊಳೆಯುತ್ತೇನೆ, ಮತ್ತು ನಾನೇ ಅವರಿಗೆ ಆಹಾರವನ್ನು ಉಣಿಸುತ್ತೇನೆ. ವಿಪ್ರಿಯವಾದುದನ್ನು ವರ್ಜಿಸಿ ಅನುಕೂಲವಾದುದನ್ನೇ ಅವರಿಗೆ ಹೇಳುತ್ತೇನೆ. ಅಧರ್ಮವಾಗಿದ್ದರೂ ನಾನು ಇವರಿಬ್ಬರಿಗೆ ಪ್ರಿಯವಾದುದನ್ನು ನಿಜವಾಗಿಯೂ ಮಾಡುತ್ತೇನೆ. ಧರ್ಮವೇ ಗುರುವೆಂದು ತಿಳಿದು ಮಾಡುತ್ತೇನೆ. ಆಯಾಸಗೊಳ್ಳದೇ ಸದಾ ಇವರ ಶುಶ್ರೂಷೆಯನ್ನು ಮಾಡುತ್ತೇನೆ. ಪುರುಷನಿಗೆ ಐದೇ ಗುರುಗಳಿದ್ದಾರೆಂದು ಹೇಳುತ್ತಾರೆ: ತಂದೆ, ತಾಯಿ, ಅಗ್ನಿ, ಆತ್ಮ ಮತ್ತು ಗುರು. ಒಳ್ಳೆಯದನ್ನು ಬಯಸುವವರು ಇವರೊಂದಿಗೆ ಸರಿಯಾಗಿ ನಡೆದುಕೊಳ್ಳಬೇಕು. ಅವರನ್ನು ಸರಿಯಾಗಿ ಪೂಜಿಸುವುದು ಗಾರ್ಹಪತ್ಯ ಅಗ್ನಿಯನ್ನು ಕಾದಿರಿಸಿಕೊಂಡ ಹಾಗೆ. ಇದು ಸನಾತನ ಧರ್ಮ.”
ವಿಪ್ರನಿಗೆ ಹಿರಿಯರಾದ ತಂದೆ ತಾಯಂದಿರಿಬ್ಬರನ್ನೂ ಪರಿಚಯ ಮಾಡಿಸಿಕೊಟ್ಟು ಆ ಧರ್ಮಾತ್ಮ ವ್ಯಾಧನು ಬ್ರಾಹ್ಮಣನಿಗೆ ಪುನಃ ಹೇಳಿದನು: “ಅಂತರ್ಗತ ದೃಷ್ಟಿಯನ್ನು ನೀಡಿರುವ ನನ್ನ ತಪಸ್ಸಿನ ಬಲವನ್ನು ನೋಡು. ಆದುದರಿಂದಲೇ ತಾಳ್ಮೆಯಿಂದ ಮತ್ತು ಸತ್ಯಶೀಲತೆಯಿಂದ ಪತಿಶುಶ್ರೂಷಣೆಯಲ್ಲಿ ನಿರತಳಾಗಿರುವ ಅವಳು ನಿನಗೆ ಮಿಥಿಲೆಗೆ ಹೋಗು! ಮಿಥಿಲೆಯಲ್ಲಿ ವಾಸಿಸುವ ವ್ಯಾಧನು ನಿನಗೆ ಧರ್ಮಗಳ ಕುರಿತು ಹೇಳುತ್ತಾನೆ ಎಂದು ಹೇಳಿದಳು.”
ಬ್ರಾಹ್ಮಣನು ಹೇಳಿದನು: “ಧರ್ಮಜ್ಞ! ಆ ಪತಿವ್ರತೆ, ಸತ್ಯೆ, ಶೀಲಾಧ್ಯೆಯು ತಿಳಿದೇ ಹೇಳಿರಬೇಕು. ಏಕೆಂದರೆ ಅವೆಲ್ಲ ಗುಣಗಳೂ ನಿನ್ನಲ್ಲಿವೆ ಎಂದು ನನಗನ್ನಿಸುತ್ತದೆ.”
ವ್ಯಾಧನು ಹೇಳಿದನು: “ದ್ವಿಜಶ್ರೇಷ್ಠ! ನನ್ನ ಕುರಿತು ಅವಳು ನಿನಗೆ ಏನು ಹೇಳಿದ್ದಾಳೋ ಅದನ್ನು ಅವಳು ಎಲ್ಲವನ್ನು ನೋಡಿಯೇ ಹೇಳಿದ್ದಾಳೆ ಎನ್ನುವುದರಲ್ಲಿ ಸಂಶಯವಿಲ್ಲ. ನಿನಗೆ ಅನುಗ್ರಹಿಸಲೆಂದೇ ನಾನು ನಿನಗೆ ಇವೆಲ್ಲವನ್ನೂ ತಿಳಿಸಿದ್ದೇನೆ. ಈಗ ಕೇಳು. ನಿನಗೆ ಹಿತವಾದುದು ಏನೆಂದು ಹೇಳುತ್ತೇನೆ. ನೀನು ನಿನ್ನ ತಾಯಿ-ತಂದೆಯರೊಂದಿಗೆ ಸರಿಯಾಗಿ ನಡೆದುಕೊಂಡಿಲ್ಲ. ಅವರಿಗೆ ಹೇಳದೇ ನೀನು ವೇದೋಚ್ಛಾರಣಕ್ಕೆಂದು ಮನೆಯಿಂದ ಹೊರಗೆ ಹೋದೆ. ನಿನ್ನ ಶೋಕದಿಂದ ಆ ವೃದ್ಧ ತಪಸ್ವಿಗಳು ಕುರುಡರಾಗಿದ್ದಾರೆ. ಅವರನ್ನು ಸಂತವಿಸಲು ಹೋಗು. ನೀನು ಈ ಮಹಾ ಧರ್ಮದ ಮಾರ್ಗವನ್ನು ತಪ್ಪದಿರು. ನೀನು ತಪಸ್ವಿ ಮತ್ತು ಸದಾ ಧರ್ಮದಲ್ಲಿ ನಿರತನಾಗಿರುವೆ. ಆದರೆ ಇವೆಲ್ಲವೂ ನಿನಗೆ ಅಪಾರ್ಥಗಳಾಗಿವೆ. ತ್ವರೆಮಾಡಿ ಅವರೀರ್ವರನ್ನು ಸಂತವಿಸು. ನನ್ನಲ್ಲಿ ಶ್ರದ್ಧೆಯನ್ನಿಡು. ಅನ್ಯಥಾ ಮಾಡಬೇಡ! ಇಂದೇ ಹೋಗು. ನಿನಗೆ ಒಳ್ಳೆಯದಾಗುತ್ತದೆಯೆಂದು ನಾನು ಹೇಳುತ್ತೇನೆ.”
ಬ್ರಾಹ್ಮಣನು ಹೇಳಿದನು: “ನೀನು ಹೇಳುವುದೆಲ್ಲವೂ ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮಜ್ಞ! ನಿನ್ನಿಂದ ನಾನು ಸಂತೋಷಗೊಂಡಿದ್ದೇನೆ.”
ವ್ಯಾಧನು ಹೇಳಿದನು: “ನೀನು ದೈವತ ಪ್ರತಿಮೆಯಾಗಿದ್ದೀಯೆ. ನೀನು ಅನುಸರಿಸುವ ಧರ್ಮವು ಪುರಾಣವು, ಶಾಶ್ವತವು, ದಿವ್ಯವು. ಮತ್ತು ಕೃತಾತ್ಮರಿಗೂ ಕಷ್ಟಸಾಧ್ಯವಾದುದು. ಆದರೆ ಬೇಗನೆ ಹೋಗಿ ನೀನು ನಿನ್ನ ಮಾತಾಪಿತೃಗಳ ಪೂಜನೆಯನ್ನು ಮಾಡು. ಇದಕ್ಕಿಂತ ಹೆಚ್ಚಿನ ಧರ್ಮವನ್ನು ನಾನು ಬೇರೆ ಯಾವುದರಲ್ಲಿಯೂ ಕಾಣುವುದಿಲ್ಲ.”
ಬ್ರಾಹ್ಮಣನು ಹೇಳಿದನು: “ನಾನು ಇಲ್ಲಿಗೆ ಬಂದುದು ಒಳ್ಳೆಯದಾಯಿತು. ನಿನ್ನನ್ನು ಭೇಟಿಮಾಡಿದೆನೆಂದು ಒಳ್ಳೆಯದಾಯಿತು. ಈ ರೀತಿಯ ಧರ್ಮಪ್ರದರ್ಶಕ ನರರು ಲೋಕದಲ್ಲಿ ದುರ್ಲಭ. ಸಾವಿರರಲ್ಲಿ ಒಬ್ಬ ನರನು ಧರ್ಮವನ್ನು ತಿಳಿದಿರಬಹುದು. ನಿನ್ನ ಸತ್ಯದಿಂದ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ! ನರಕದಲ್ಲಿ ಬೀಳುತ್ತಿದ್ದ ನನ್ನನ್ನು ನೀನು ಮೇಲಕ್ಕೆತ್ತಿದ್ದೀಯೆ. ನೀನು ನನ್ನ ದಾರಿಯಲ್ಲಿ ದೊರೆಯಬೇಕೆಂದು ಮೊದಲೇ ನಿರ್ಧಿತವಾಗಿರಬೇಕು. ರಾಜಾ ಯಯಾತಿಯು ಕೆಳಗೆ ಬೀಳುತ್ತಿರುವಾಗ ಹೇಗೆ ಅವನ ಉತ್ತಮ ಮಗಳ ಮಕ್ಕಳಿಂದ ಪಾರುಗೊಳಿಸಲ್ಪಟ್ಟನೋ ಹಾಗೆ ನಿನ್ನಿಂದ ನಾನು ಪಾರುಗೊಂಡೆ. ನಿನ್ನ ಮಾತಿನಂತೆ ಮಾತಾಪಿತೃಗಳ ಶುಶ್ರೂಷೆಯನ್ನು ಮಾಡುತ್ತೇನೆ. ಏಕೆಂದರೆ ಅಕೃತಾತ್ಮನು ಧರ್ಮಾಧರ್ಮ ವಿನಿಶ್ಚಿಯವನ್ನು ತಿಳಿದಿರಲಾರ. ಶೂದ್ರಯೋನಿಯಲ್ಲಿ ಜನಿಸಿದವನಿಗೆ ಶಾಶ್ವತ ಧರ್ಮವನ್ನು ಅರಿತಿರುವುದು ಅಸಾಧ್ಯವಾದುದರಿಂದ ನಾನು ನಿನ್ನನ್ನು ಶೂದ್ರನೆಂದು ಪರಿಗಣಿಸುವುದಿಲ್ಲ. ನೀನು ಯಾವ ಕರ್ಮವಿಪಾಕದಿಂದ ಈ ಶೂದ್ರತ್ವವನ್ನು ಪಡೆದಿರುವೆಯೋ ಅದೂ ಕೂಡ ಭವಿತವ್ಯದ ಕಾರಣದಿಂದಿರಬಹುದು. ಇದನ್ನು ತಿಳಿಯಲು ಬಯಸುತ್ತೇನೆ. ಇದರ ತತ್ವವನ್ನು ನಿನಗಿಷ್ಟವಾದರೆ ಎಲ್ಲವನ್ನೂ ಇದ್ದಹಾಗೆ ನನಗೆ ಹೇಳುವವನಾಗು.”
ವ್ಯಾಧನು ಹೇಳಿದನು: “ದ್ವಿಜೋತ್ತಮ! ಬ್ರಾಹಣರು ಅನತಿಕ್ರಮಣೀಯರಲ್ಲವೇ? ನನ್ನ ಪೂರ್ವದೇಹದ ಎಲ್ಲ ಈ ವೃತ್ತಾಂತವನ್ನೂ ಕೇಳು. ಹಿಂದೆ ನಾನೂ ಕೂಡ ವಿದ್ಯಾಧ್ಯಾಯೀ, ಸುಕುಶಲ, ವೇದಾಂಗಗಳ ಪಾರಂಗತನಾದ ಬ್ರಾಹ್ಮಣನಾಗಿದ್ದೆ. ನಾನೇ ಮಾಡಿದ ದೋಷದಿಂದ ಈ ಅವಸ್ಥೆಯನ್ನು ಪಡೆದಿದ್ದೇನೆ. ಯಾರೋ ಒಬ್ಬ ಧನುರ್ವೇದಪರಾಯಣ ರಾಜನು ನನ್ನ ಸಖನಾಗಿದ್ದನು. ಅವನ ಸಂಸರ್ಗದಿಂದ ನಾನೂ ಕೂಡ ಶ್ರೇಷ್ಠ ಧನುಷಿಯಾದೆನು. ಹೀಗಿರುವಾಗ ಒಮ್ಮೆ ನೃಪನು ಸೇನಾಪತಿಗಳೊಂದಿಗೆ ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟು ಬೇಟೆಗೆ ಹೊರಟನು. ಒಂದು ಆಶ್ರಮದ ಬಳಿ ಬಹಳಷ್ಟು ಜಿಂಕೆಗಳನ್ನು ಅವನು ಬೇಟೆಯಾಡಿದನು. ಆಗ ನಾನೂ ಕೂಡ ಘೋರವಾದ ಬಾಣವನ್ನು ಬಿಟ್ಟೆನು. ಆ ಶರವು ಒಂದು ಮುನಿಯನ್ನು ಹೊಡೆದು ಮೊಂಡಾಯಿತು. ಭೂಮಿಯಲ್ಲಿ ಬಿದ್ದ ಬ್ರಾಹ್ಮಣನು ಜೋರಾಗಿ ಹೇಳಿದನು: “ನಾನು ಏನೂ ಅಪರಾಧವನ್ನು ಮಾಡಲಿಲ್ಲ. ಈ ಪಾಪವನ್ನು ಮಾಡಿದವನು ಯಾರು?” ಅದು ಮೃಗವೆಂದು ತಿಳಿದು ನಾನು ಒಮ್ಮೆಲೇ ಮುನಿಯ ಬಳಿಸಾರಿ ಆ ಋಷಿಯ ದೇಹವನ್ನು ನನ್ನ ಬಾಣವು ಸೀಳಿದ್ದುದನ್ನು ನೋಡಿದೆ. ನನ್ನ ಈ ಕೆಟ್ಟ ಕೆಲಸದಿಂದ ಮನಸ್ಸು ತುಂಬಾ ವ್ಯಥಿತಗೊಂಡಿತು. ಆಗ ನೆಲದಮೇಲೆ ಬಿದ್ದು ನರಳುತ್ತಿದ್ದ ಆ ಉಗ್ರತಪಸ್ವಿಗೆ ಹೇಳಿದೆನು: “ಬ್ರಹ್ಮನ್! ತಿಳಿಯದೇ ಈ ಕೆಲಸವನ್ನು ನಾನು ಮಾಡಿಬಿಟ್ಟೆ. ನನ್ನನ್ನು ಕ್ಷಮಿಸಬೇಕು.” ಆಗ ಕ್ರೋಧಮೂರ್ಛಿತನಾದ ಋಷಿಯು ನನಗೆ ಉತ್ತರಿಸಿದನು: “ಕ್ರೂರ! ದ್ವಿಜ! ನೀನು ಶೂದ್ರ ವ್ಯಾಧನಾಗುತ್ತೀಯೆ!” ಈ ರೀತಿ ಆ ಋಷಿಯಿಂದ ಶಪಿತನಾದ ನಾನು ಅವನನ್ನು ಪ್ರಸೀದಗೊಳಿಸಲು ಈ ಮಾತುಗಳನ್ನು ಹೇಳಿದೆನು: “ಮುನೇ! ತಿಳಿಯದೇ ಇಂದು ನನ್ನಿಂದ ಈ ಕಾರ್ಯವು ನಡೆದುಹೋಯಿತು. ಅವೆಲ್ಲವನ್ನೂ ನೀನು ಕ್ಷಮಿಸಬೇಕು. ಭಗವನ್! ಕರುಣೆತೋರು!” ಋಷಿಯು ಹೇಳಿದನು: “ಶಾಪವು ಅನ್ಯಥಾ ಆಗುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ. ಆದರೆ ನಿನಗೆ ಅನುಗ್ರಹಿಸಲು ನಾನು ಕೊಂಚ ಸುಳ್ಳಾಗಿಸುತ್ತೇನೆ. ಶೂದ್ರಯೋನಿಯಲ್ಲಿ ಹುಟ್ಟಿದರೂ ಧರ್ಮಜ್ಞನಾಗಿ ನಡೆಯುತ್ತೀಯೆ. ಮಾತಾಪಿತೃಗಳ ಶುಶ್ರೂಷೆಯನ್ನೂ ಮಾಡುತ್ತೀಯೆ. ಸಂಶಯವಿಲ್ಲ. ನಿನ್ನ ಶುಶ್ರೂಷೆಯಿಂದ ಮಹಾ ಸಿದ್ಧಿಯನ್ನು ಪಡೆಯುತ್ತೀಯೆ. ನಿನ್ನ ಹಿಂದಿನ ಜನ್ಮಗಳನ್ನು ನೆನಪಿಸಿಕೊಳ್ಳುತ್ತೀಯೆ ಮತ್ತು ಸ್ವರ್ಗಕ್ಕೆ ಹೋಗುತ್ತೀಯೆ. ಶಾಪವು ಮುಗಿದನಂತರ ಪುನಃ ದ್ವಿಜನಾಗಿ ಹುಟ್ಟುತ್ತೀಯೆ.” ಹಿಂದೆ ಹೀಗೆ ಆ ಉಗ್ರತೇಜಸ್ವಿ ಋಷಿಯಿಂದ ಶಪಿತನಾಗಿ, ಅವನಿಂದ ಕರುಣೆಯನ್ನೂ ಪಡೆದೆ. ಅವನ ಶರೀರದಿಂದ ಆ ಬಾಣವನ್ನು ಕಿತ್ತೆ, ಅವನನ್ನು ಆಶ್ರಮಕ್ಕೆ ಕರೆದೊಯ್ದೆ. ಆದರೆ ಅವನು ಪ್ರಾಣದಿಂದ ವಂಚಿತನಾದನು. ನನಗೆ ಹಿಂದೆ ಏನೆಲ್ಲ ಆಯಿತೋ ಅವೆಲ್ಲವನ್ನೂ ಮತ್ತು ಇಲ್ಲಿಂದ ನಾನು ಸ್ವರ್ಗಕ್ಕೆ ಹೋಗುವವನಿದ್ದೇನೆ ಎನ್ನುವುದನ್ನೂ ನಿನಗೆ ಹೇಳಿದ್ದೇನೆ.”
ಬ್ರಾಹ್ಮಣನು ಹೇಳಿದನು: “ಮಹಾಬುದ್ಧೇ! ಹೀಗೆ ಪುರುಷರು ದುಃಖ ಮತ್ತು ಸಖಗಳನ್ನು ಪಡೆಯುತ್ತಾರೆ. ಅದರಲ್ಲಿ ಶಂಕೆಯನ್ನು ಮಾಡಬಾರದು. ಮಿತ್ರ! ನಿನ್ನ ಹುಟ್ಟಿನ ಕುರಿತು ತಿಳಿದು ನೀನು ದುಷ್ಕರವಾದುದನ್ನೇ ಮಾಡಿದ್ದೀಯೆ. ವಿದ್ವನ್! ನಿನ್ನ ಜಾತಿಯ ಕೆಲಸವನ್ನು ಮಾಡುತ್ತಿರುವುದರಿಂದ ನಿನ್ನಲ್ಲಿ ಕರ್ಮದೋಷವುಂಟಾಗುವುದಿಲ್ಲ. ಕೆಲವು ಕಾಲ ಹೀಗಿದ್ದುಕೊಂಡು ನಂತರ ನೀನು ದ್ವಿಜನಾಗುತ್ತೀಯೆ. ಈಗಲೂ ನೀನು ನನ್ನ ಅಭಿಪ್ರಾಯದಲ್ಲಿ ಬ್ರಾಹ್ಮಣನೇ! ಅದರಲ್ಲಿ ಸಂಶಯವಿಲ್ಲ. ಕೀಳುರೀತಿಯಲ್ಲಿ ನಡೆದುಕೊಳ್ಳುವ, ಕೆಟ್ಟಕೆಲಸಗಳಲ್ಲಿ ನಿರತನಾಗಿರುವ, ಢಾಂಬಿಕ, ದುಷ್ಕೃತಪ್ರಾಯ ಬ್ರಾಹ್ಮಣನು ಶೂದ್ರನಂತೆಯೇ. ಯಾವ ಶೂದ್ರನು ದಮ, ಸತ್ಯ, ಮತ್ತು ಧರ್ಮಗಳಲ್ಲಿ ಸತತವೂ ನಿರತನಾಗಿರುತ್ತಾನೋ ಅವನನ್ನು ನಾನು ಬ್ರಾಹ್ಮಣನೆಂದು ಮನ್ನಿಸುತ್ತೇನೆ. ನಡತೆಯಿಂದಲೇ ದ್ವಿಜನಾಗುತ್ತಾನೆ ತಾನೇ? ತನ್ನದೇ ಕರ್ಮದೋಷಗಳಿಂದ ವಿಷಮವಾದ ದಾರುಣವಾದ ಗತಿಯನ್ನು ಹೊಂದುತ್ತಾನೆ. ನಿನ್ನ ದೋಷಗಳು ಕಡಿಮೆಯಾಗಿವೆ ಎಂದು ನನಗನ್ನಿಸುತ್ತದೆ. ಇದಕ್ಕೆ ನೀನು ಶೋಕಿಸಬೇಕಾದುದಿಲ್ಲ. ಲೋಕದ ಆಗುಹೋಗುಗಳ, ನಡವಳಿಕೆಗಳ ಜ್ಞಾನವಿರುವ ಮತ್ತು ನಿತ್ಯವೂ ಧರ್ಮ ಪರಾಯಣನಾಗಿರುವ ನೀನು ಶೋಕಿಸಲು ಕಾರಣವಿಲ್ಲ.”
ವ್ಯಾಧನು ಹೇಳಿದನು: “ಪ್ರಜ್ಞೆಯಿಂದ ಮನಸ್ಸಿನ ದುಃಖವನ್ನು, ಔಷಧಗಳಿಂದ ಶಾರೀರಿಕ ದುಃಖವನ್ನು ಹನನಮಾಡಿಕೊಳ್ಳಬೇಕು. ಇದು ವಿಜ್ಞಾನದ ಸಾಮರ್ಥ್ಯ. ಇದನ್ನು ತಿಳಿದವನು ಬಾಲಕನಂತೆ ನಡೆದುಕೊಳ್ಳುವುದನ್ನು ಬಿಟ್ಟುಬಿಡಬೇಕು. ಅಲ್ಪಬುದ್ಧಿಯ ಮನುಷ್ಯರು ತಮಗೆ ಪ್ರಿಯವಾಗದೇ ಇದ್ದ ಅನಿಷ್ಟ ಸಂಗತಿಗಳಾದಾಗ ಮಾನಸಿಕ ದುಃಖಗಳಿಂದ ಬಳಲುತ್ತಾರೆ. ಎಲ್ಲ ಭೂತಗಳೂ ಈ ಗುಣವನ್ನು ಹೊಂದಿರುತ್ತದೆ. ಯಾವುದೇ ಒಂದೇ ಈ ಶೋಕವನ್ನು ಪಡೆಯುತ್ತದೆ ಎನ್ನುವುದಿಲ್ಲ. ಈ ಅನಿಷ್ಟವನ್ನು ನೋಡಿ, ಜನರು ಬೇಗನೇ ತಮ್ಮ ರೀತಿಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಅದು ಬರುತ್ತಿರುವುದನ್ನು ಮೊದಲೇ ತಿಳಿದುಕೊಂಡಿದ್ದರೆ ಅದನ್ನು ನಿವಾರಿಸಲು ಸುಲಭವಾಗುತ್ತದೆ. ಇದರ ಕುರಿತು ಶೋಕಿಸುವವನು ತನ್ನನ್ನು ಕೇವಲ ಪರಿತಪಿಸಿಕೊಳ್ಳುತ್ತಾನೆ. ಜ್ಞಾನದಿಂದ ತೃಪ್ತರಾದ ಮತ್ತು ಸುಖವನ್ನು ಹೊಂದಿದ ತಿಳಿದ ನರರು ಮಾತ್ರ ಈ ಸುಖ ದುಃಖಗಳೆರಡನ್ನೂ ತೊರೆದು ನಿಜವಾಗಿಯೂ ಸುಖಿಗಳಾಗಿರುತ್ತಾರೆ. ಮೂಢರು ಯಾವಾಗಲೂ ಅಸಂತೋಷದಲ್ಲಿರುತ್ತಾರೆ ಮತ್ತು ಪಂಡಿತರು ಸಂತೋಷವನ್ನು ಹೊಂದಿರುತ್ತಾರೆ. ಅಸಂತೋಷಕ್ಕೆ ಅಂತ್ಯವೇ ಇಲ್ಲ. ತುಷ್ಟಿಯೇ ಪರಮ ಸುಖ. ಸರಿಯಾದ ಗತಿಯನ್ನು ಹೊಂದಿದವರು ಪರಮ ಗತಿಯನ್ನು ಕಂಡುಕೊಂಡು ದುಃಖಿಸುವುದಿಲ್ಲ. ಮನಸ್ಸನ್ನು ವಿಷಾದಕ್ಕೆ ಒಳಪಡಿಸಬಾರದು. ವಿಷಾದವು ಉತ್ತಮ ವಿಷದಂತೆ. ಪ್ರಜ್ಞೆಯು ಬೆಳೆದಿರುವವನನ್ನು ಅದು ಬಾಲಕನನ್ನು ಒಂದು ಕೃದ್ಧ ಸರ್ಪದಂತೆ ಕೊಲ್ಲುತ್ತದೆ. ವಿಷಮ ಪರಿಸ್ಥಿತಿಯಲ್ಲಿ ವಿಷಾದಪಡುವವನಲ್ಲಿ, ಆ ತೇಜಸ್ಸನ್ನು ಕಳೆದುಕೊಂಡವನಲ್ಲಿ ಪುರುಷಾರ್ಥವೇ ಇಲ್ಲ ಎಂದು ತಿಳಿಯಬೇಕು. ನಾವು ಮಾಡುವ ಕರ್ಮಗಳಿಗೆ ಅವಶ್ಯವಾಗಿಯೂ ಫಲವನ್ನು ಕಾಣುತ್ತೇವೆ. ಏನನ್ನೂ ಅರಿಯದೇ ಮಾಡುವುದರಿಂದ ಏನೂ ಒಳ್ಳೆಯದು ದೊರಕುವುದಿಲ್ಲ. ಶೋಕಿಸುವುದರ ಬದಲಾಗಿ ದುಃಖದ ಪರಿಮೋಕ್ಷಣದ ಉಪಾಯವನ್ನು ನೋಡಬೇಕು ಮತ್ತು ಅವ್ಯಸನಿಯಾಗಬೇಕು. ಪರಮ ಬುದ್ಧಿಯನ್ನು ಪಡೆದವನು ಎಲ್ಲ ಭೂತಗಳ ಅಭಾವದ ಕುರಿತು ಯಾವಾಗಲೂ ಚಿಂತಿಸುತ್ತಿರುತ್ತಾನೆ. ಕೃತಪ್ರಜ್ಞನು ಶೋಕಿಸುವುದಿಲ್ಲ. ಪರಮ ಗತಿಯನ್ನೇ ಕಾಣುತ್ತಿರುತ್ತಾನೆ. ನಾನೂ ಕೂಡ ಶೋಕಿಸುವುದಿಲ್ಲ. ಕಾಲಾಕಾಂಕ್ಷಿಯಾಗಿ ಇಲ್ಲಿಯೇ ನಿಂತಿರುತ್ತೇನೆ. ಆದುದರಿಂದ ನಾನು ಗೊಂದಲಕ್ಕೊಳಗಾಗುವುದಿಲ್ಲ.”
ಬ್ರಾಹ್ಮಣನು ಹೇಳಿದನು: “ಮೇಧಾವೀ! ನೀನು ಕೃತಪ್ರಜ್ಞನಾಗಿರುವೆ. ನಿನ್ನ ಬುದ್ಧಿಯು ವಿಪುಲವಾದುದು. ಧರ್ಮವಿದನಾದ ನೀನು ಜ್ಞಾನತೃಪ್ತನಾಗಿದ್ದೀಯೆ. ನಿನಗಾಗಿ ನಾನು ಚಿಂತಿಸುವುದಿಲ್ಲ. ನಿನಗೆ ಮಂಗಳವಾಗಲಿ. ನಿನ್ನಲ್ಲಿ ಅಪ್ಪಣೆಯನ್ನು ಕೇಳುತ್ತೇನೆ. ಧರ್ಮವು ನಿನ್ನನ್ನು ಪರಿರಕ್ಷಿಸಲಿ. ಧರ್ಮದ ಕರ್ತವ್ಯಗಳಲ್ಲಿ ನೀನು ತಪ್ಪದಿರುವಂತಾಗಲಿ.”
“ಹಾಗೆಯೇ ಆಗಲಿ” ಎಂದು ವ್ಯಾಧನು ಕೈಮುಗಿದು ಹೇಳಿದನು. ಆ ದ್ವಿಜಸತ್ತಮನು ಪ್ರದಕ್ಷಿಣೆಯನ್ನು ಹಾಕಿ ಹೊರಟನು. ಆ ದ್ವಿಜನಾದರೋ ಹೋಗಿ ವೃದ್ಧರಾಗಿದ್ದ ಮಾತಾಪಿತೃಗಳ ಯಥಾನ್ಯಾಯವಾಗಿ ಎಲ್ಲ ಶುಶ್ರೂಷೆಗಳನ್ನು ಮಾಡಿದನು.