ಮಧು-ಕೈಟಭ ವಧೆ
ಮಧು-ಕೈಟಭರ ವಧೆಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೯೪) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು.
ಘೋರವಾದ ಸಾಗರವೊಂದೇ ಇದ್ದಾಗ, ಸ್ಥಾವರಜಂಗಮಗಳು ಸರ್ವ ಭೂತಗಳು ನಷ್ಟವಾಗಿದ್ದಾಗ, ಸರ್ವಭೂತಗಳ ಪ್ರಭವ, ಶಾಶ್ವತ, ಪುರುಷ, ಅವ್ಯಯ, ಭಗವಾನ್ ವಿಷ್ಣುವು ಈ ನೀರಿನ ಹಾಸಿಗೆಯ ಮೇಲೆ ಏಕಾಂಗಿಯಾಗಿ, ಅಮಿತ ತೇಜಸ್ವಿ ನಾಗ ಶೇಷನ ಸುರಳಿಯಲ್ಲಿ ಮಲಗಿದ್ದನು. ಲೋಕಕರ್ತ, ಮಹಾಭಾಗ, ಭಗವಾನ, ಅಚ್ಯುತ ಹರಿಯು ನಾಗನ ಮಹಾಸುರುಳಿಯಲ್ಲಿ ಈ ಮಹಿಯನ್ನು ಸುತ್ತುವರೆದು ಮಲಗಿದ್ದನು. ದೇವನು ಮಲಗಿರಲು ಅವನ ಹೊಕ್ಕಳಿನಿಂದ ಸೂರ್ಯಸಮಪ್ರಭೆಯ ಪದ್ಮವು ಅರಳಿತು. ಸೂರ್ಯ-ಚಂದ್ರರ ಪ್ರಭೆಯುಳ್ಳ ಆ ಪದ್ಮದಲ್ಲಿ ಸಾಕ್ಷಾತ್ ಲೋಕಗುರು ಪಿತಾಮಹ ಬ್ರಹ್ಮನು - ಚತುರ್ವೇದ, ಚತುರ್ಮೂರ್ತಿ, ಚತುರ್ಮುಖ, ಸ್ವಪ್ರಭಾವದಿಂದ ದುರಾಧರ್ಷ ಮಹಾಬಲಪರಾಕ್ರಮಿಯು - ಉತ್ಪನ್ನನಾದನು. ಇದೇ ಕಾಲದಲ್ಲಿ ವೀರ್ಯವಂತರಾದ ಮಧು-ಕೈಟಭರು ಜನಿಸಿದರು. ಮಧುಕೈಟಭರು ಬಹುಯೋಜನ ವಿಸ್ತೀರ್ಣದ ಬಹು ಯೋಜನ ಅಗಲದ ದಿವ್ಯವಾದ ನಾಗಭೋಗದ ಶಯನದಲ್ಲಿ ಮಲಗಿದ್ದ ಮಹಾದ್ಯುತಿ, ಕಿರೀಟ-ಕೌಸ್ತುಭಗಳನ್ನು ಧರಿಸಿದ್ದ, ಪೀತಕೌಶೇಯವನ್ನು ಉಟ್ಟಿದ್ದ, ಸಹಸ್ರಸೂರ್ಯಪ್ರತಿಮನಾದ, ಅದ್ಭುತವಾಗಿ ತೋರುತ್ತಿದ್ದ ಹರಿ ಪ್ರಭುವನ್ನು ನೋಡಿದರು. ಪದ್ಮದಲ್ಲಿ ಪದ್ಮನಿಭೇಕ್ಷಣ ಪಿತಾಮಹನನ್ನು ನೋಡಿ ವಧುಕೈಟಭರಿಗೆ ಮಹಾ ವಿಸ್ಮಯವುಂಟಾಯಿತು. ಅವರಿಬ್ಬರೂ ಆಗ ಅಮಿತೌಜಸ ಬ್ರಹ್ಮನನ್ನು ಪೀಡಿಸತೊಡಗಿದರು. ಆ ಮಹಾಯಶರಿಂದ ಬಹಳಷ್ಟು ಪೀಡಿತನಾದ ಬ್ರಹ್ಮನು ಪದ್ಮದ ತೊಟ್ಟನ್ನು ಅಲುಗಾಡಿಸಲು, ಅದರಿಂದ ಕೇಶವನು ಎಚ್ಚೆತ್ತನು. ಆಗ ಗೋವಿಂದನು ವೀರ್ಯವತ್ತರರಾದ ಈರ್ವರು ದಾನವರನ್ನು ನೋಡಿದನು. ನೋಡಿ ಅವರಿಗೆ ದೇವನು ಹೇಳಿದನು: “ನೀವಿಬ್ಬರು ಮಹಾಬಲರಿಗೆ ಸ್ವಾಗತ! ಶ್ರೇಷ್ಠವಾದ ವರವನ್ನು ನೀಡುತ್ತೇನೆ. ನಿಮ್ಮಮೇಲೆ ನನಗೆ ಪ್ರೀತಿಯುಂಟಾಗಿದೆ.”
ಆ ಮಹಾವೀರ್ಯ ಮಹಾಸುರರು ಹೃಷೀಕೇಶನ ಮೇಲೇ ನಗತೊಡಗಿದರು. ಒಟ್ಟಿಗೇ ಮಧುಸೂದನನಿಗೆ ಉತ್ತರಿಸಿದರು: “ದೇವ! ನೀನೇ ನಮ್ಮಲ್ಲಿ ವರವನ್ನು ಕೇಳು! ನಾವೇ ನಿನಗೆ ನಿಜಯಾಗಿಯೂ ವರವನ್ನು ನೀಡುತ್ತೇವೆ. ವಿಚಾರಿಸದೇ ಕೇಳು.”
ಭಗವಂತನು ಹೇಳಿದನು: “ವೀರರೇ! ನಿಮ್ಮ ವರವನ್ನು ಸ್ವೀಕರಿಸುತ್ತೇನೆ. ನಾನು ಬಯಸುವ ವರವೊಂದಿದೆ. ನೀವಿಬ್ಬರೂ ವೀರ್ಯ ಸಂಪನ್ನರು. ನಿಮ್ಮ ಸಮನಾದ ಪುರುಷನು ಇಲ್ಲವೇ ಇಲ್ಲ. ಸತ್ಯಪರಾಕ್ರಮಿಗಳಾದ ನೀವಿಬ್ಬರೂ ನನ್ನ ಕೈಗಳಿಂದ ವಧಿಸಲ್ಪಡಿರಿ. ಲೋಕಕ್ಕೆ ಹಿತವನ್ನುಂಟುಮಾಡಲು ಬಯಸಿ ನಾನು ಇದನ್ನು ಇಚ್ಛಿಸುತ್ತೇನೆ.”
ಮಧುಕೈಟಭರು ಹೇಳಿದರು: “ವಿನೋದಕ್ಕಾಗಿಯಾದರೂ ನಾವು ಇದೂವರೆಗೆ ಸುಳ್ಳನ್ನು ಹೇಳಲಿಲ್ಲ. ಅನ್ಯಥಾ ಏನು? ನಾವಿಬ್ಬರೂ ಸತ್ಯ ಮತ್ತು ಧರ್ಮಗಳಲ್ಲಿ ನಿರತರಾಗಿದ್ದೇವೆಂದು ತಿಳಿ. ಬಲದಲ್ಲಿ, ರೂಪದಲ್ಲಿ, ವೀರ್ಯದಲ್ಲಿ, ಶಮದಲ್ಲಿ, ಧರ್ಮದಲ್ಲಿ, ತಪಸ್ಸಿನಲ್ಲಿ, ಶೀಲ, ಸತ್ವ, ದಮಗಳಲ್ಲಿ ನಮ್ಮೀರ್ವರ ಸಮರಿಲ್ಲ. ಕೇಶವ! ಒಂದು ಮಹಾ ಉಪಪ್ಲವವು ನಮಗೆ ಬಂದೊದಗಿದೆ. ಆದರೆ ನೀನು ಹೇಳಿದಂತೆ ಮಾಡು. ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಆದರೆ ನಿನ್ನಿಂದ ಒಂದು ಆಗಬೇಕೆಂದು ಬಯಸುತ್ತೇವೆ. ಆಕಾಶವು ಅನಾವೃತವಾದಲ್ಲಿ ನಮ್ಮನ್ನು ವಧಿಸು. ನಿನ್ನ ಪುತ್ರರಾಗಲು ಬಯಸುತ್ತೇವೆ. ಇದೇ ನಮ್ಮ ವರವೆಂದು ತಿಳಿ.”
ಭಗವಂತನು ಹೇಳಿದನು: “ಅವಶ್ಯವಾಗಿ ನಾನು ಅದನ್ನು ಮಾಡುತ್ತೇನೆ. ಎಲ್ಲವೂ ಹಾಗೆಯೇ ಆಗುತ್ತದೆ.”
ಆಗ ಮಧುಸೂದನ ಗೋವಿಂದನು ಅನಾವೃತವಾದ ಅವಕಾಶವನ್ನು ಭೂಮಿಯಲ್ಲಾಗಲೀ ದಿವಿಯಲ್ಲಾಗಲೇ ಕಾಣದೇ ಚಿಂತಿಸಿದನು. ಆಗ ಅನಾವೃತವಾಗಿದ್ದ ತನ್ನ ತೊಡೆಗಳನ್ನೇ ನೋಡಿ, ದೇವವರ ಮಧುಸೂದನನು ಮಹಾಯಶ ಮಧುಕೈಟಭರ ಶಿರಗಳನ್ನು ಹರಿತವಾದ ಚಕ್ರದಿಂದ ಕತ್ತರಿಸಿದನು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ