ಸರಸ್ವತೀ ಗೀತೆ
ಧೀಮಂತ ತಾರ್ಕ್ಷ್ಯ ಮುನಿಯು ಸರಸ್ವತಿಯಲ್ಲಿ ಕೇಳಿದನು: “ಭದ್ರೇ! ಇಲ್ಲಿ ಪುರುಷರಿಗೆ ಯಾವುದು ಶ್ರೇಯಸ್ಸು? ಸ್ವಧರ್ಮದಿಂದ ಚ್ಯುತಿಹೊಂದದಿರಲು ಏನನ್ನು ಮಾಡಬೇಕು? ನನಗೆ ಎಲ್ಲವನ್ನೂ ಹೇಳು. ನಿನ್ನಿಂದ ಉಪದೇಶಿಸಲ್ಪಟ್ಟ ನಾನು ಸ್ವಧರ್ಮದಿಂದ ಚ್ಯುತನಾಗುವುದಿಲ್ಲ. ಧರ್ಮವು ನಷ್ಟವಾಗದ ರೀತಿಯಲ್ಲಿ ಹೇಗೆ ಮತ್ತು ಯಾವಾಗ ಅಗ್ನಿಯನ್ನು ಪೂಜಿಸಬೇಕು ಮತ್ತು ಅವನಲ್ಲಿ ಆಹುತಿಯನ್ನು ನೀಡಬೇಕು? ಇವೆಲ್ಲವನ್ನೂ ಹೇಳು. ಇದರಿಂದ ನಾನು ಲೋಕಗಳಲ್ಲಿ ವಿರಜನಾಗಿ ಸಂಚರಿಸಬಲ್ಲೆ.”
ಪ್ರೀತಿಯುಕ್ತನಾದ ಅವನು ಹೀಗೆ ಕೇಳಲು ಅವನ ಉತ್ತಮ ಬುದ್ಧಿಯನ್ನು ಬೆಳೆಸುವ ಇಚ್ಛೆಯಿಂದ ಆ ಧರ್ಮಯುಕ್ತ ಮತ್ತು ಹಿತನಾದ ವಿಪ್ರ ತಾರ್ಕ್ಷ್ಯನಿಗೆ ಸರಸ್ವತಿಯು ಈ ಮಾತುಗಳನ್ನಾಡಿದಳು: “ಪ್ರದೇಶವನ್ನು ಹೇಗೋ ಹಾಗೆ ಬ್ರಹ್ಮನನ್ನು ಯಾರು ತಿಳಿದಿರುವನೋ, ನಿತ್ಯವೂ ಸ್ವಾಧ್ಯಾಯದಲ್ಲಿದ್ದು, ಶುಚಿಯೂ ಅಪ್ರಮತ್ತನೂ ಆಗಿರುತ್ತಾನೋ ಅವನೇ ದೇವಪುರದ ಪುರಕ್ಕೆ ಹೋಗುತ್ತಾನೆ ಮತ್ತು ಅಲ್ಲಿ ಅಮರರೊಂದಿಗೆ ಪ್ರೀತಿಯೋಗವನ್ನು ಪಡೆಯುತ್ತಾನೆ. ಅಲ್ಲಿ ವಿಶಾಲವಾದ ವಿಶೋಕವಾದ ರಮ್ಯ ಪುಷ್ಪಭರಿತ ಸುಪುಣ್ಯ ಪುಷ್ಕರಿಣಿಗಳಿವೆ. ಕೆಸರಿಲ್ಲದ ಮೀನುಗಳನ್ನು ಹೊಂದಿದ, ಹಿರಣ್ಮಯ ಪುಂಡರೀಕಗಳಿಂದ ಆವೃತವಾದ ಪುಣ್ಯತೀರ್ಥಗಳಿವೆ. ಅವುಗಳ ತೀರದಲ್ಲಿ ಪುಣ್ಯಕರ್ಮಿಯು ಸುಪುಣ್ಯ ಗಂಧ ಮತ್ತು ಅಲಂಕಾರಗಳಿಂದ ಶೋಭಿತ, ಮತ್ತು ಬಂಗಾರದ ಮೈಬಣ್ಣವುಳ್ಳ ಅಪ್ಸರೆಯರಿಂದ ಗೌರವಿಸಿಕೊಂಡು ವಾಸಿಸುತ್ತಾನೆ.
“ಗೋವುಗಳನ್ನು ದಾನವಾಗಿತ್ತವರು ಪರಮ ಲೋಕವನ್ನು ಪಡೆಯುತ್ತಾರೆ. ಹೋರಿಯನ್ನು ದಾನವನ್ನಾಗಿತ್ತವರು ಸೋರ್ಯಲೋಕವನ್ನು ಪಡೆಯುತ್ತಾರೆ. ಮನೆಗಳನ್ನು ದಾನವನ್ನಾಗಿತ್ತವರು ಚಂದ್ರಲೋಕಕ್ಕೆ ಹೋಗುತ್ತಾರೆ. ಬಂಗಾರವನ್ನು ದಾನವನ್ನಾಗಿತ್ತವರು ಅಮೃತತ್ವವನ್ನು ಪಡೆಯುತ್ತಾರೆ. ಸುವ್ರತ, ಚೆನ್ನಾಗಿ ಹಾಲುಕೊಡುವ, ಕಲ್ಯಾಣ ಕರುವಿದ್ದ, ಬಿಟ್ಟು ಹೋಗದೇ ಇರುವ ಧೇನುವನ್ನು ದಾನವನ್ನಾಗಿತ್ತವನು ಅದರಲ್ಲಿ ರೋಮಗಳು ಎಷ್ಟಿವೆಯೋ ಅಷ್ಟು ವರ್ಷಗಳ ಪರ್ಯಂತ ಸ್ವರ್ಗಲೋಕವನ್ನು ಸುಖಿಸುತ್ತಾನೆ. ಯಾರು ಸುವ್ರತವೂ, ನೇಗಿಲನ್ನು ಎಳೆಯುವಂಥಹ, ಅನಂತವೀರ್ಯವುಳ್ಳ, ಧುರಂಧರ, ಬಲವಂತ, ಯುವ ಹೋರಿಯನ್ನು ದಾನವನ್ನಾಗಿ ಕೊಡುತ್ತಾನೋ ಅವನು ಗೋವನ್ನು ಕೊಟ್ಟವನಿಗಿಂತ ಹತ್ತುಪಟ್ಟು ಲೋಕಗಳನ್ನು ಪಡೆಯುತ್ತಾನೆ.
“ಏಳು ವರ್ಷಗಳು ಅಗ್ನಿಯಲ್ಲಿ ಹವ್ಯವನ್ನಿಡುವವನು, ಸುವ್ರತನು, ಸಾಧುಶೀಲನು ತನ್ನ ಹಿಂದಿನ ಏಳು ಪಿತಾಮಹರನ್ನು ಮತ್ತು ಮುಂದಿನ ಏಳು ಪೀಳಿಗೆಗಳನ್ನು ತನ್ನ ಸ್ವಕರ್ಮಗಳಿಂದ ಪುನೀತಗೊಳಿಸುತ್ತಾನೆ.”
ತಾರ್ಕ್ಷ್ಯನು ಹೇಳಿದನು: “ಚಾರುರೂಪೇ! ಪುರಾಣವ್ರತವಾದ ಅಗ್ನಿಹೋತ್ರವು ಏನೆಂದು ಕೇಳುವ ನನಗೆ ಹೇಳು. ನಿನ್ನಿಂದ ಉಪದೇಶಿಸಲ್ಪಟ್ಟ ನಾನು ಪುರಾಣವ್ರತ ಅಗ್ನಿಹೋತ್ರವೇನೆಂದು ತಿಳಿದುಕೊಳ್ಳುತ್ತೇನೆ.”
ಸರಸ್ವತಿಯು ಹೇಳಿದಳು: “ಅಶುಚಿಯಾದವನು, ಕೈತೊಳೆಯದೇ ಇರುವವನು, ಬ್ರಹ್ಮವಿದುವಲ್ಲದವನು ಅಗ್ನಿಯಲ್ಲಿ ಆಹುತಿಗಳನ್ನು ನೀಡಬಾರದು. ಹವಿಸ್ಸು ಶುಚಿಯಾಗಿರಬೇಕೆಂದು ಭೋಗಿಸುವ ದೇವತೆಗಳು ಬಯಸುತ್ತಾರೆ ಮತ್ತು ನಂಬಿಕೆಯಿಲ್ಲದಿರುವವನಿಂದ ಹವಿಸ್ಸನ್ನು ಸ್ವೀಕರಿಸುವುದಿಲ್ಲ. ದೇವಹವ್ಯಕ್ಕೆ ಶ್ರೋತ್ರಿಯನ್ನು ನಿಯೋಜಿಸಬೇಕು. ಇತರರು ಆಹುತಿಯನ್ನು ಎಲ್ಲೆಡೆ ಚೆಲ್ಲಿಬಿಡುತ್ತಾರೆ. ತಾರ್ಕ್ಷ್ಯ! ಶ್ರೋತ್ರಿಯಲ್ಲದೆ ಬೇರೆ ಯಾರೂ ಅಗ್ನಿಹೋತ್ರಕ್ಕೆ ಆಹುತಿಯನ್ನು ಕೊಡಬಾರದೆಂದು ನಾನು ಹೇಳುತ್ತೇನೆ. ಯಾರು ಶ್ರದ್ಧೆಯಿಂದ ಅಗ್ನಿಯಲ್ಲಿ ಹವಿಸ್ಸನ್ನು ಹಾಕುತ್ತಾನೋ ಮತ್ತು ಉಳಿದ ಹವಿಸ್ಸನ್ನು ತಿನ್ನುತ್ತಾನೋ ಅಂತಹ ಸತ್ಯವ್ರತನು ಪುಣ್ಯಗಂಧದ ಗೋಲೋಕವನ್ನು ಹೊಂದಿ ಅಲ್ಲಿ ಪರಮ ಸತ್ಯ ದೇವನನ್ನು ಕಾಣುತ್ತಾನೆ.”
ತಾರ್ಕ್ಷ್ಯನು ಹೇಳಿದನು: “ಕ್ಷೇತ್ರಜ್ಞಭೂತೇ! ಪರಲೋಕಭಾವೇ! ಕರ್ಮದಿಂದಾಗುವ ಫಲಗಳನ್ನು ಚೆನ್ನಾಗಿ ತಿಳಿದಿರುವವಳೇ! ಪ್ರಾಜ್ಞೆ! ದೇವೀ! ಸುಭಗೇ! ಚಾರುರೂಪೇ! ನೀನು ಯಾರೆಂದು ಕೇಳುತ್ತೇನೆ.”
ಸರಸ್ವತಿಯು ಹೇಳಿದಳು: “ವಿಪ್ರರ್ಷಭರ ಸಂಶಯವನ್ನು ಹೋಗಲಾಡಿಸಲು ನಾನು ಅಗ್ನಿಹೋತ್ರದಿಂದ ಎದ್ದು ಬಂದವಳಾಗಿದ್ದೇನೆ. ನಿನ್ನನ್ನು ಭೇಟಿಯಾಗಿ ಸಂತೋಷಗೊಂಡು ಅವುಗಳ ಅರ್ಥವನ್ನು ಯಥಾವತ್ತಾಗಿ ನಿನಗೆ ಹೇಳಿದ್ದೇನೆ.”
ತಾರ್ಕ್ಷ್ಯನು ಹೇಳಿದನು: “ಶ್ರೀಯಷ್ಟೇ ವಿಭ್ರಾಜಿಸುವ ನಿನ್ನಂಥಹ ಬೇರೆ ಯಾರೂ ಇಲ್ಲ. ನಿನ್ನ ರೂಪವೂ ದಿವ್ಯವಾಗಿದ್ದು ಅತ್ಯಂತ ಆಕರ್ಷಣೀಯವಾಗಿದೆ. ಸುಭಗೇ! ದೇವಿ! ನೀನು ದೇವತೆಗಳ ಪ್ರಜ್ಞೆಯನ್ನು ಪ್ರದರ್ಶಿಸುತ್ತಿದ್ದೀಯೆ.”
ಸರಸ್ವತಿಯು ಹೇಳಿದಳು: “ಮನುಷ್ಯಶ್ರೇಷ್ಠ! ವಿಪ್ರ! ಯಜ್ಞಗಳಲ್ಲಿ ಆಹುತಿಗಳನ್ನು ಹಾಕುತ್ತಿರುವಾಗ ಮತ್ತು ಅಲ್ಲಿಯ ದಕ್ಷಿಣೆಗಳಿಂದ ನಾನು ಬೆಳೆದಿದ್ದೇನೆ ಮತ್ತು ಆಕರ್ಷಣೀಯ ರೂಪವತಿಯೂ ಆಗಿದ್ದೇನೆ. ಯಾವುದೇ ದ್ರವ್ಯವನ್ನು ದಾನದ ವಸ್ತುವನ್ನಾಗಿ ಕೊಡಲಿ – ಮರದಿಂದ ಮಾಡಿದ್ದಿರಬಹುದು, ಕಬ್ಬಿಣವಾಗಿರಬಹುದು ಅಥವಾ ಮಣ್ಣಿನದೇ ಆಗಿರಬಹುದು - ಅವನು ದಿವ್ಯವಾದ ರೂಪ ಮತ್ತು ಪ್ರಜ್ಞೆಯನ್ನು ಪಡೆಯುತ್ತಾನೆ.”
ತಾರ್ಕ್ಷ್ಯನು ಹೇಳಿದನು: “ಇದು ಪರಮ ಶ್ರೇಯಸ್ಕರವೆಂದು ಮನ್ನಿಸಿ ಮುನಿಗಳು ಸಂಪ್ರತೀತರಾಗಿ ಇದನ್ನು ಅರಸುತ್ತಾರೆ. ನನ್ನನು ಕೇಳಿದರೆ ಆ ಪರಮ ವಿಶೋಕವಾದದ್ದು ತಿಳಿದವರು ಪಡೆಯಲು ಪ್ರಯತ್ನಿಸುವ ಪರಮ ಮೋಕ್ಷವೇ ಸರಿ.”
ಸರಸ್ವತಿಯು ಹೇಳಿದಳು: “ವೇದವಿದರು ಅದೇ ಪರಮ ಪರ ಪ್ರಥಿತ ಪುರಾಣನಿಗೆ ಮೊರೆಹೋಗುತ್ತಾರೆ. ಸ್ವಧ್ಯಾಯದಿಂದ, ದಾನ, ವ್ರತ ಮತ್ತು ಪುಣ್ಯಯೋಗಗಳಿಂದ ತಪೋಧನರು ಶೋಕವನ್ನು ಕಳೆದುಕೊಂಡು ವಿಮುಕ್ತರಾಗುತ್ತಾರೆ. ಅದರ ಮಧ್ಯೆ ಪುಣ್ಯಗಂಧವನ್ನು ನೀಡುವ, ಸಹಸ್ರ ಶಾಖೆಗಳ, ವಿಮಲವಾಗಿ ಹೊಳೆಯುತ್ತಿರುವ ಬಿದಿರು ಮೆಳೆಯು ನಿಂತಿದೆ. ಅದರ ಮೂಲದಲ್ಲಿ ಸಿಹಿ ನೀರಿನ ರಮ್ಯ ನದಿಗಳು ಹರಿಯುತ್ತವೆ. ಮಹಾನದಿಗಳು ಶಾಖೆ ಶಾಖೆಗಳ ಮೇಲೆ ಮರಳಿನಂತೆ ಧಾನ್ಯ, ಪೂಪ, ಮಾಂಸ, ತರಕಾರಿಗಳು, ಪಾಯಸಗಳನ್ನು ಸದಾ ಸಿಂಪಡಿಸುತ್ತಿರುತ್ತವೆ. ಕ್ರತುಗಳ ಮೂಲಕ ಅಗ್ನಿಮುಖದಲ್ಲಿ ಇಂದ್ರ-ಮರುದ್ಗಣಗಳೊಂದಿಗೆ ದೇವತೆಗಳಿಗೆ ಹವಿಸ್ಸನ್ನು ನೀಡುವುದೇ ಶ್ರೇಷ್ಠವಾದ ಪರಮ ಪದ.”