ಏಳನೆಯ ದಿನದ ಯುದ್ಧ

ಪರಸ್ಪರರ ಅಪರಾಧಿಗಳಾಗಿ ಶೂರರು ರಕ್ತದಿಂದ ತೋಯ್ದು ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು. ಯಥಾನ್ಯಾಯವಾಗಿ ವಿಶ್ರಮಿಸಿ ಪರಸ್ಪರರನ್ನು ಗೌರವಿಸಿ ಪುನಃ ಯುದ್ಧಮಾಡಲು ಬಯಸಿ ಸನ್ನದ್ಧರಾಗುತ್ತಿರುವುದು ಕಂಡುಬಂದಿತು. ಆಗ ಅಂಗಗಳಿಂದ ರಕ್ತವು ಸುರಿಯುತ್ತಿರಲು ದುರ್ಯೋಧನನು ಚಿಂತೆಯಲ್ಲಿ ಮುಳುಗಿ ಪಿತಾಮಹನನ್ನು ಪ್ರಶ್ನಿಸಿದನು: ರೌದ್ರವೂ ಭಯಾನಕವೂ ಆಗಿರುವ, ಅನೇಕ ಧ್ವಜಗಳಿರುವ, ಚೆನ್ನಾಗಿ ವ್ಯೂಹದಲ್ಲಿ ರಚಿತವಾಗಿರುವ ಸೇನೆಯನ್ನೂ ಕೂಡ ಪಾಂಡವರು ಬೇಗನೇ ಭೇದಿಸಿ, ಪೀಡಿಸಿ, ರಥಗಳಲ್ಲಿ ಹೊರಟುಹೋಗುತ್ತಿದ್ದಾರೆ. ವಜ್ರದಂತಿರುವ ಮಕರವ್ಯೂಹವನ್ನು ಕೂಡ ಎಲ್ಲವನ್ನೂ ಸಮ್ಮೋಹಗೊಳಿಸಿ ಯುದ್ಧದಲ್ಲಿ ಕೀರ್ತಿಮಂತರಾಗಿದ್ದಾರೆ. ವ್ಯೂಹವನ್ನು ಪ್ರವೇಶಿಸಿದ ಭೀಮನ ಮೃತ್ಯುದಂಡದಂತೆ ಹೊಳೆಯುತ್ತಿದ್ದ ಘೋರ ಶರಗಳಿಂದ ಗಾಯಗೊಂಡಿದ್ದೇನೆ. ಕ್ರುದ್ಧನಾದ ಅವನನ್ನು ನೋಡಿಯೇ ಭಯದಿಂದ ನಾನು ಮೂರ್ಛಿತನಾಗುತ್ತೇನೆ. ಸತ್ಯಸಂಧ! ಇಂದು ನನಗೆ ಶಾಂತಿಯೇ ಇಲ್ಲದಾಗಿದೆ. ಕೇವಲ ನಿನ್ನ ಪ್ರಸಾದದಿಂದ ಪಾಂಡವೇಯರನ್ನು ಕೊಂದು ಜಯವನ್ನು ಗಳಿಸಲು ಶಕ್ಯನಾಗಿದ್ದೇನೆ.

ಅವನು ಹೀಗೆ ಹೇಳಲು ಮಹಾತ್ಮಾ ಮನಸ್ವೀ ಶಸ್ತ್ರಭೃತರಲ್ಲಿ ವರಿಷ್ಠ ಗಂಗಾಸುತನು ವಿನಯನಾಗಿ ಕೇಳಿಕೊಂಡರೂ ಅವನು ಕುಪಿತನಾಗಿದ್ದಾನೆಂದು ತಿಳಿದು ದುರ್ಯೋಧನನಿಗೆ ನಗುತ್ತಾ ಹೇಳಿದನು: ರಾಜಪುತ್ರ! ಸೇನೆಯನ್ನು ಹೊಕ್ಕು ಸರ್ವಾತ್ಮದಿಂದ ನಿನಗೆ ವಿಜಯವನ್ನೂ ಸುಖವನ್ನೂ ಕೊಡಲು ಬಯಸಿ ಪರಮ ಪ್ರಯತ್ನವನ್ನು ಮಾಡುತ್ತಿದ್ದೇನೆ. ಅದರಿಂದಾಗಿ ನನ್ನ ರಕ್ಷಣೆಯ ಕುರಿತೂ ನಾನು ಯೋಚಿಸುತ್ತಿಲ್ಲ. ಸಮರದಲ್ಲಿ ಪಾಂಡವರ ಸಹಾಯಕ್ಕೆಂದು ಬಂದ ಅನೇಕ ಮಹಾರಥರು ರೌದ್ರರು, ಯಶಸ್ವಿಗಳು, ಶೂರತಮರು, ಕೃತಾಸ್ತ್ರರು, ಆಯಾಸವನ್ನು ಗೆದ್ದವರು ಮತ್ತು ಕ್ರೋಧವಿಷವನ್ನು ಕಾರುವವರು. ನಿನ್ನೊಂದಿಗೆ ವೈರವನ್ನಿಟ್ಟುಕೊಂಡಿರುವ, ವೀರ್ಯದಿಂದ ಉನ್ಮತ್ತರಾಗಿರುವ ಅವರನ್ನು ಶೀಘ್ರವಾಗಿ ಸೋಲಿಸಲು ಶಕ್ಯವಿಲ್ಲ. ನಾನಾದರೋ ಮನಃಪೂರ್ವಕವಾಗಿ ಜೀವವನ್ನೇ ತೊರೆದು ಇವರೊಂದಿಗೆ ಯುದ್ಧ ಮಾಡುತ್ತೇನೆ. ನಿನಗೋಸ್ಕರವಾಗಿ ನಾನು ನನ್ನ ಜೀವವನ್ನು ರಸಿಕೊಳ್ಳುವ ಆಸೆಯನ್ನಿಟ್ಟುಕೊಂಡಿಲ್ಲ. ನಿನಗೋಸ್ಕರವಾಗಿ ದೇವ-ದೈತ್ಯರೊಂದಿಗೆ ಸರ್ವಲೋಕಗಳನ್ನೂ ನಾನು ದಹಿಸಬಲ್ಲೆ. ಇನ್ನು ನಿನ್ನ ಈ ಶತ್ರುಗಳು ಯಾವ ಲೆಕ್ಕಕ್ಕೆ? ಆ ಪಾಂಡವರೊಡನೆಯೂ ಯುದ್ಧ ಮಾಡುತ್ತೇನೆ. ನಿನಗೆ ಪ್ರಿಯವಾದುದೆಲ್ಲವನ್ನೂ ನಾನು ಮಾಡುತ್ತೇನೆ.

ಆಗ ಚಿಂತಾಮಗ್ನನಾಗಿದ್ದ ದುರ್ಯೋಧನನಿಗೆ ಪುನಃ ಭರತಶ್ರೇಷ್ಠ ಗಾಂಗೇಯನು ಹರ್ಷವನ್ನುಂಟುಮಾಡುವ ಈ ಮಾತುಗಳನ್ನಾಡಿದನು: ರಾಜನ್! ನಾನು, ದ್ರೋಣ, ಶಲ್ಯ, ಕೃತವರ್ಮ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಸೈಂಧವ, ಅವಂತಿಯ ವಿಂದಾನುವಿದರು, ಬಾಹ್ಲಿಕರೊಂದಿಗೆ ಬಾಹ್ಲಿಕ, ತ್ರಿಗರ್ತರಾಜ, ಮಾಗಧ, ಕೌಸಲ್ಯ ಬೃಹದ್ಬಲ, ಚಿತ್ರಸೇನ, ವಿವಿಂಶತಿ, ಮಹಾಧ್ವಜಗಳಿಂದ ಶೋಭಿಸುವ ಅನೇಕ ಸಹಸ್ರ ರಥಗಳು, ಕುದುರೆ ಸವಾರರಿಂದ ಯುಕ್ತವಾದ ದೇಶೀಯ ಕುದುರೆಗಳು, ಗಂಡಸ್ಥಲದಿಂದ ಮದೋದಕವನ್ನು ಸುರಿಸುತ್ತಿರುವ ಮದೋನ್ಮತ್ತ ಗಜೇಂದ್ರರು, ನಾನಾ ಪ್ರಹರಣಾಯುಧಗಳನ್ನು ಹಿಡಿದಿರುವ ನಾನಾದೇಶಗಳಿಂದ ಬಂದಿರುವ ಶೂರ ಪದಾತಿಗಳು - ಇವರೆಲ್ಲರೂ ನಿನ್ನ ಸಲುವಾಗಿಯೇ ಯುದ್ಧಮಾಡಲು ಸಿದ್ಧರಾಗಿದ್ದಾರೆ. ಇವರಲ್ಲದೇ ಇನ್ನೂ ಅನ್ಯ ಅನೇಕರು ನಿನಗೋಸ್ಕರ ಜೀವವನ್ನು ಬಿಡಲು ಸಿದ್ಧರಾಗಿದ್ದಾರೆ. ಇವರು ರಣದಲ್ಲಿ ದೇವತೆಗಳನ್ನೂ ಗೆಲ್ಲಲು ಸಮರ್ಥರು ಎಂದು ನನ್ನ ಅಭಿಪ್ರಾಯ. ಆದರೆ ನಾನು ನಿನಗೆ ಹಿತ ವಚನಗಳನ್ನು ಸದಾ ಹೇಳುವುದು ಅವಶ್ಯಕ. ವಾಸುದೇವನ ಸಹಾಯವನ್ನು ಪಡೆದಿರುವ ಮತ್ತು ವಿಕ್ರಮದಲ್ಲಿ ಮಹೇಂದ್ರನ ಸಮನಾಗಿರುವ ಪಾಂಡವರನ್ನು ಗೆಲ್ಲಲು ವಾಸವನೊಂದಿಗೆ ದೇವತೆಗಳೂ ಕೂಡ ಅಶಕ್ಯರು. ಆದರೆ ಸರ್ವಪ್ರಯತ್ನದಿಂದಲೂ ನಿನ್ನ ಮಾತನ್ನು ನಾನು ಮಾಡುತ್ತೇನೆ. ರಣದಲ್ಲಿ ಪಾಂಡವರನ್ನು ನಾನು ಗೆಲ್ಲುತ್ತೇನೆ. ಅಥವಾ ಪಾಂಡವರು ನನ್ನನ್ನು ಗೆಲ್ಲುತ್ತಾರೆ.

ಹೀಗೆ ಹೇಳಿ ಅವನಿಗೆ ಶುಭವಾದ ವಿಶಲ್ಯಕರಣೀ ಔಷಧಿಯನ್ನು ಕೊಟ್ಟನು. ಅದರಿಂದ ಅವನು ವಿಶಲ್ಯನಾಗಿ (ಅಂಗಾಂಗಗಳಿಗೆ ಚುಚ್ಚಿಕೊಂಡಿದ್ದ ಬಾಣಗಳು ಸುಲಭವಾಗಿ ಹೊರಬಿದ್ದವು ಮತ್ತು ವೇದನೆಯು ಹೊರಟುಹೋದವು) ವೀರ್ಯಸಂಪನ್ನನಾದನು.

ಅವನ ಆ ಮಾತುಗಳನ್ನು ಕೇಳಿ ದುರ್ಯೋಧನನು ಪರಮ ಪ್ರತೀತನಾದನು. ಆಗ ಪ್ರಹೃಷ್ಟನಾಗಿ ಎಲ್ಲ ಸೈನ್ಯಗಳಿಗೂ ಎಲ್ಲ ರಾಜರಿಗೂ “ಹೊರಡಿ!” ಎಂದು ಹೇಳಿದನು. ಅವನ ಆಜ್ಞಾನುಸಾರವಾಗಿ ಹತ್ತತ್ತು ಸಾವಿರ ರಥ-ಅಶ್ವ-ಪದಾತಿ-ಗಜಗಳಿಂದ ಕೂಡಿದ ಮಹಾಸೇನೆಯು ಹೊರಟಿತು. ನಾನಾವಿಧದ ಶಸ್ತ್ರಗಳನ್ನು ಹೊಂದಿದ್ದ, ನಾಗಾಶ್ವಪದಾತಿಗಳಿಂದ ತುಂಬಿದ್ದ ಕೌರವ ಸೇನೆಗಳು ಹರ್ಷಿತವಾಗಿ ಅತ್ಯಂತ ರಾರಾಜಿಸುತ್ತಿದ್ದವು. ಕೌರವ ಸೈನ್ಯಗಣಗಳು ಶಸ್ತ್ರಾಸ್ತ್ರಗಳನ್ನು ತಿಳಿದಿರುವ ಯೋಧರಿಂದ ನಿಯಂತ್ರಿಸಲ್ಪಟ್ಟಿದ್ದವು. ವಿಧಿವತ್ತಾಗಿ ಅನುಶಾಸಿತರಾಗಿ ರಣರಂಗಕ್ಕೆ ಪ್ರಯಾಣಮಾಡುತ್ತಿದ್ದ ರಥ-ಪದಾತಿ-ಗಜ-ಅಶ್ವ ಸಮೂಹಗಳಿಂದ ಮೇಲೆದ್ದ ಧೂಳು ಸೂರ್ಯನ ಕಿರಣಗಳನ್ನು ಮುಸುಕಿ ಬಾಲಸೂರ್ಯನ ರಶ್ಮಿಗಳಂತೆ ತೋರುತ್ತಿದ್ದವು. ರಥ ಮತ್ತು ಆನೆಗಳ ಮೇಲೆ ಕಟ್ಟಿದ್ದ ನಾನಾ ಬಣ್ಣದ ಪತಾಕೆಗಳು ಎಲ್ಲಕಡೆಗಳಿಂದಲೂ ಬೀಸುತ್ತಿದ್ದ ಗಾಳಿಯಿಂದ ಹಾರಾಡುತ್ತಾ ಆಕಾಶದಲ್ಲಿ ಮೇಘಗಳಿಗೆ ತಾಗಿದ ಮಿಂಚುಗಳಂತೆ ಪ್ರಕಾಶಿಸುತ್ತಿದ್ದವು. ಟೇಂಕರಿಸುತ್ತಿದ್ದ ನೃಪರ ಧನುಸ್ಸುಗಳಿಂದ ಅತಿಘೋರ ತುಮುಲ ಶಬ್ಧವುಂಟಾಗುತ್ತಿತ್ತು. ಅದು ಆದಿಯುಗದಲ್ಲಿ ದೇವತೆಗಳೂ ಮಹಾಸುರರೂ ಸಾಗರವನ್ನು ಮಥಿಸುವಾಗ ಉಂಟಾದ ಶಬ್ಧದಂತಿತ್ತು. ಆ ಉಗ್ರನಾದದೊಂದಿಗೆ, ಬಹುಬಣ್ಣದ ರೂಪವುಳ್ಳ ಕೌರವ ಸೇನೆಯು ರಿಪುಸೈನ್ಯಗಳನ್ನು ನಾಶಪಡಿಸುವ ಯುಗಾಂತದ ಘನ ಕಪ್ಪು ಮೋಡದಂತೆ ತೋರಿತು.

ಆಗ ವಿಮಲ ಪ್ರಭಾತದಲ್ಲಿ ವ್ಯೂಹವಿಶಾರದ ವೀರ್ಯವಾನ್ ಭೀಷ್ಮನು ತನ್ನ ಸೇನೆಗಳನ್ನು ತಾನೇ ಮಂಡಲ ವ್ಯೂಹದಲ್ಲಿ ರಚಿಸಿದನು. ಆ ವ್ಯೂಹವು ನಾನಾಶಸ್ತ್ರಸಮಾಕುಲವಾಗಿತ್ತು. ಯೋಧಮುಖ್ಯರಿಂದ ಆನೆ-ಪದಾತಿಗಳಿಂದ, ಅನೇಕ ಸಹಸ್ರ ರಥಗಳಿಂದ, ಅನೇಕ ಅಶ್ವವೃಂದಗಳಿಂದ, ಋಷ್ಟಿ-ತೋಮರ ಧಾರಿಗಳಿಂದ ಎಲ್ಲಕಡೆಗಳಿಂದಲೂ ಪರಿವೃತವಾಗಿ ಸಂಪೂರ್ಣವಾಗಿತ್ತು. ಆನೆ ಆನೆಗೂ ಏಳು ರಥಗಳಿದ್ದವು. ರಥ ರಥಗಳಿಗೂ ಏಳು ಅಶ್ವಗಳಿದ್ದವು. ಪ್ರತಿ ಅಶ್ವಕ್ಕೂ ಹತ್ತು ಬಿಲ್ಗಾರರಿದ್ದರು. ಪ್ರತಿ ಬಿಲ್ಗಾರರಿಗೂ ಏಳು ಕವಚಧಾರಿಗಳಿದ್ದರು. ಹೀಗೆ ಮಹಾರಥರ ಕೌರವ ಮಹಾ ಸೈನ್ಯವನ್ನು ವ್ಯೂಹವನ್ನಾಗಿ ರಚಿಸಿ ರಣದಲ್ಲಿ ಯುದ್ಧದಲ್ಲಿ ಅದನ್ನು ಪಾಲಿಸಲು ಭೀಷ್ಮನು ನಿಂತನು. ಹತ್ತುಸಾವಿರ ಕುದುರೆಗಳು, ಅಷ್ಟೇ ಸಂಖ್ಯೆಯ ಆನೆಗಳು, ಹತ್ತು ಸಾವಿರ ರಥಗಳು, ಮುತ್ತು ಚಿತ್ರಸೇನನೇ ಮೊದಲಾದ ಕವಚ ಧರಿಸಿದ ಧಾರ್ತರಾಷ್ಟ್ರರು ಪಿತಾಮಹನ ರಕ್ಷಣೆಗಿದ್ದರು. ಆ ಶೂರರಿಂದ ರಕ್ಷಿಸಲ್ಪಟ್ಟು ಮತ್ತು ಅವರನ್ನು ರಕ್ಷಿಸುತ್ತಾ ಆ ಮಹಾಬಲ ರಾಜರು ಯುದ್ಧ ಸನ್ನದ್ಧರಾದುದು ಕಾಣುತ್ತಿತ್ತು. ದುರ್ಯೋಧನನಾದರೋ ಸಮರದಲ್ಲಿ ಕವಚಧಾರಿಯಾಗಿ ರಥದಲ್ಲಿ ಕುಳಿತು ತ್ರಿವಿಷ್ಟಪರೊಂದಿಗೆ ಶಕ್ರನಂತೆ ಶ್ರೀಯಿಂದ ತುಂಬಿ ಬೆಳಗುತ್ತಿದ್ದನು. ಆಗ ಧಾರ್ತರಾಷ್ಟ್ರರ ಮಹಾ ಶಬ್ಧವು ಕೇಳಿಬಂದಿತು. ರಥಘೋಷ ಮತ್ತು ವಾದ್ಯಗಳು ಮೊಳಗುವ ತುಮುಲವಾಯಿತು.

ಭೀಷ್ಮನಿಂದ ಮಂಡಲಾಕಾರದಲ್ಲಿ ರಚಿಸಲ್ಪಟ್ಟಿದ್ದ ಅಮಿತ್ರಘಾತೀ ಧಾರ್ತರಾಷ್ಟ್ರರ ಆ ದುರ್ಭೇದ್ಯ ಮಹಾಸೇನೆಯು ಯುದ್ದಕ್ಕೆ ಪಶ್ಚಿಮಾಭಿಮುಖವಾಗಿ ಹೊರಟಿತು. ರಣದಲ್ಲಿ ಅರಿಗಳಿಗೆ ದುರಾಸದವಾದ ಆ ಸೇನೆಯು ಎಲ್ಲಕಡೆಯೂ ಸುಂದರವಾಗಿ ಕಾಣುತ್ತಿತ್ತು. ಪರಮದಾರುಣವಾದ ಆ ಮಂಡಲವ್ಯೂಹವನ್ನು ನೋಡಿ ರಾಜಾ ಯುಧಿಷ್ಠಿರನು ಸ್ವಯಂ ತಾನೇ ವಜ್ರವ್ಯೂಹವನ್ನು ರಚಿಸಿದನು. ಹಾಗೆ ಸೈನ್ಯದ ವ್ಯೂಹದಲ್ಲಿ ಯಥಾಸ್ಥಾನಗಳಲ್ಲಿ ವ್ಯವಸ್ಥಿತರಾಗಿದ್ದ ರಥಿಗಳು ಮತ್ತು ಸಾದಿನರು ಸಿಂಹನಾದಗೈದರು. ಪ್ರಹಾರಿ ಶೂರರು ವ್ಯೂಹವನ್ನು ಭೇದಿಸಿ ಯುದ್ಧಮಾಡಲು ಬಯಸಿ ಇತರೇತರರ ಸೈನ್ಯದೊಂದಿಗೆ ಹೊರಟರು. ಭಾರದ್ವಾಜನು ಮತ್ಸ್ಯನನ್ನೂ, ದ್ರೌಣಿಯು ಶಿಖಂಡಿಯನ್ನೂ, ಸ್ವಯಂ ರಾಜಾ ದುರ್ಯೋಧನನು ಪಾರ್ಷತನನ್ನೂ ಆಕ್ರಮಣಿಸಿದರು. ನಕುಲ ಸಹದೇವರು ಮದ್ರೇಶನನ್ನು ಎದುರಿಸಿದರು. ಅವಂತಿಯ ವಿಂದಾನುವಿಂದರು ಇರಾವಂತನನ್ನು ಎದುರಿಸಿದರು. ಎಲ್ಲ ನೃಪರೂ ಧನಂಜಯನೊಡನೆ ಯುದ್ಧಮಾಡಿದರು. ಭೀಮಸೇನನು ಹಾರ್ದಿಕ್ಯನನ್ನು ಆಕ್ರಮಣಿಸಿದನು. ಧೃತರಾಷ್ಟ್ರ ಪುತ್ರರಾದ ಚಿತ್ರಸೇನ, ವಿಕರ್ಣ ಮತ್ತು ಹಾಗೆಯೇ ದುರ್ಮರ್ಷಣನನ್ನು ಆರ್ಜುನಿಯು ಎದುರಿಸಿ ಯುದ್ಧಮಾಡಿದನು. ಮದಿಸಿದ ಆನೆಯು ಮದಿಸಿದುದನ್ನು ಹೇಗೋ ಹಾಗೆ ರಾಕ್ಷಸೋತ್ತಮ ಹೈಡಿಂಬಿಯು ಪ್ರಾಗ್ಜ್ಯೋತಿಷದ ಮಹೇಷ್ವಾಸನನ್ನು ವೇಗದಿಂದ ಆಕ್ರಮಣಿಸಿದನು. ರಾಕ್ಷಸ ಅಲಂಬುಸನು ತನ್ನ ಸೈನ್ಯದೊಂದಿಗೆ ಕ್ರುದ್ಧನಾಗಿ ಯುದ್ಧದುರ್ಮದ ಸಾತ್ಯಕಿಯನ್ನು ಎದುರಿಸಿದನು. ಭೂರಿಶ್ರವನು ಧೃಷ್ಟಕೇತುವೊಂದಿಗೆ ಮತ್ತು ಶ್ರುತಾಯುಷನು ರಾಜ ಧರ್ಮಪುತ್ರ ಯುಧಿಷ್ಠಿರನೊಂದಿಗೆ ಹೋರಾಡಿದರು. ಚೇಕಿತಾನನು ಕೃಪನನ್ನು ಎದುರಿಸಿದನು. ಉಳಿದವರು ಮಹಾರಥ ಭೀಮನನ್ನೇ ಎದುರಿಸಿ ಹೋರಾಡಿದರು.

ಭೀಷ್ಮ-ಅರ್ಜುನರ ಯುದ್ಧ

ಶಕ್ತಿ-ತೋಮರ-ನಾರಾಚ-ಗದ-ಪರಿಘಗಳನ್ನು ಹಿಡಿದು ಸಹಸ್ರಾರು ರಾಜರು ಧನಂಜಯನನ್ನು ಸುತ್ತುವರೆದರು. ಆಗ ಅರ್ಜುನನು ತುಂಬಾ ಕ್ರುದ್ಧನಾಗಿ ವಾರ್ಷ್ಣೇಯನಿಗೆ ಇದನ್ನು ಹೇಳಿದನು: ಮಾಧವ! ವ್ಯೂಹವಿದುಷ ಮಹಾತ್ಮ ಗಾಂಗೇಯನಿಂದ ವ್ಯೂಹಗೊಂಡಿರುವ ಧಾರ್ತರಾಷ್ಟ್ರನ ಸೈನ್ಯಗಳನ್ನು ನೋಡು! ಯುದ್ಧ ಮಾಡಲು ಬಯಸಿರುವ ಕವಚಧಾರಿಗಳಾದ ಶೂರರನ್ನು ನೋಡು! ಸಹೋದರರೊಂದಿಗೆ ತ್ರಿಗರ್ತರಾಜನನ್ನು ನೋಡು! ಇಂದು ನೀನು ನೋಡುತ್ತಿರುವಂತೆ ಈ ಯುದ್ಧಕಾಮಿಗಳನ್ನು ಸಂಹರಿಸುತ್ತೇನೆ. ಹೀಗೆ ಹೇಳಿ ಕೌಂತೇಯನು ಧನುಸ್ಸನ್ನು ಟೇಂಕರಿಸಿ ನರಾಧಿಪತಿಗಣಗಳ ಮೇಲೆ ಶರವರ್ಷಗಳನ್ನು ಸುರಿಸಿದನು. ಆ ಪರಮೇಷ್ವಾಸರೂ ಕೂಡ ಮೋಡಗಳು ಮಳೆಯಿಂದ ಸರೋವರವನ್ನು ತುಂಬುವಂತೆ ಶರವರ್ಷಗಳಿಂದ ಅವನನ್ನು ತುಂಬಿದರು. ಆಗ ಆ ಇಬ್ಬರೂ ಕೃಷ್ಣರೂ ಮಹಾರಣದಲ್ಲಿ ಶರಗಳಿಂದ ಮುಚ್ಚಿಹೋಗಿದುದನ್ನು ನೋಡಿ ಕೌರವ ಸೈನ್ಯದಲ್ಲಿ ದೊಡ್ಡ ಹಾಹಾಕಾರವುಂಟಾಯಿತು. ಹಾಗಾದ ಕೃಷ್ಣರಿಬ್ಬರನ್ನು ನೋಡಿ ದೇವತೆಗಳೂ, ದೇವರ್ಷಿಗಳೂ, ಗಂಧರ್ವರೂ, ಮಹೋರಗರೂ ಪರಮ ವಿಸ್ಮಿತರಾದರು. ಆಗ ಕ್ರುದ್ಧ ಅರ್ಜುನನು ಐಂದ್ರಾಸ್ತ್ರವನ್ನು ಪ್ರಯೋಗಿಸಿದನು. ಅಲ್ಲಿ ವಿಜಯನ ಅದ್ಭುತ ಪರಾಕ್ರಮವು ಕಂಡಿತು. ಅದು ಶತ್ರುಗಳು ಬಿಟ್ಟ ಶರವೃಷ್ಟಿಯನ್ನೂ ಶರಗುಂಪುಗಳನ್ನೂ ನಿರಸನಗೊಳಿಸಿತಲ್ಲದೇ ಅದರಿಂದ ಗಾಯಗೊಳ್ಳದೇ ಇದ್ದ ಯಾರೂ ಅಲ್ಲಿರಲಿಲ್ಲ. ಪಾರ್ಥನು ಅವರ ಸಹಸ್ರಾರು ರಾಜರು, ಕುದುರೆಗಳು ಮತ್ತು ಆನೆಗಳನ್ನು ಮತ್ತು ಅನ್ಯರನ್ನು ಎರಡೆರರು ಅಥವಾ ಮೂರು ಮೂರು ಶರಗಳಿಂದ ಹೊಡೆದನು. ಪಾರ್ಥನಿಂದ ಪೀಡಿಸಲ್ಪಟ್ಟ ಅವರು ಭೀಷ್ಮ ಶಾಂತನವನಲ್ಲಿಗೆ ಹೋದರು. ಅಗಾಧವಾದ ಆಳದಲ್ಲಿ ಮುಳುಗುತ್ತಿದ್ದ ಅವರಿಗೆ ಆಗ ಭೀಷ್ಮನೇ ತ್ರಾತನಾಗಿದ್ದನು. ಭಿರುಗಾಳಿಯಿಂದ ಮಹಾಸಾಗರವು ಅಲ್ಲೋಲಕಲ್ಲೋಲವಾಗುವಂತೆ ಕೌರವ ಸೇನೆಯು ಅಲ್ಲಿ ಅವರಿಂದ ಪೀಡಿತವಾಗಿ ಭಗ್ನವಾಯಿತು.

ಹಾಗೆ ನಡೆಯುತ್ತಿರುವ ಸಂಗ್ರಾಮದಿಂದ ಸುಶರ್ಮನು ನಿವೃತ್ತನಾಗಲು, ಮಹಾತ್ಮ ಪಾಂಡವನಿಂದ ವೀರರು ಪ್ರಭಗ್ನರಾಗಲು, ಸಾಗರದಂತಿದ್ದ ಕೌರವ ಸೇನೆಯು ಬೇಗನೇ ಕ್ಷೋಭೆಗೊಳ್ಳಲು, ಗಾಂಗೇಯನು ತ್ವರೆಮಾಡಿ ವಿಜಯನ ಬಳಿ ಧಾವಿಸಿ ಬರಲು, ರಣದಲ್ಲಿ ಪಾರ್ಥನ ವಿಕ್ರಮವನ್ನು ನೋಡಿ ತ್ವರೆಮಾಡಿ ದುರ್ಯೋಧನನು ಅಲ್ಲಿ ಸೈನ್ಯದ ಮಧ್ಯದಲ್ಲಿ ಸೇರಿದ್ದ ನೃಪರೆಲ್ಲರಿಗೆ, ಎಲ್ಲರಿಗೂ ಹರ್ಷವಾಗುವಂತೆ ಹೇಳಿದನು: ಈ ಕುರುಶ್ರೇಷ್ಠ ಭೀಷ್ಮ ಶಾಂತನವನು ಸಂಪೂರ್ಣ ಮನಸ್ಸಿನಿಂದ ತನ್ನ ಜೀವವನ್ನೇ ತೊರೆದು ಧನಂಜಯನೊಡನೆ ಯುದ್ಧಮಾಡಲು ಬಯಸಿದ್ದಾನೆ. ಸಮರದಲ್ಲಿ ಶತ್ರುಸೇನೆಯನ್ನು ನುಗ್ಗುತ್ತಿರುವ ಭಾರತ ಪಿತಾಮಹನನ್ನು ಎಲ್ಲ ಸೈನ್ಯಗಳಿಂದ ಸುತ್ತುವರೆದು ಎಲ್ಲರೂ ಪಾಲಿಸಿರಿ. ಆಗಲೆಂದು ಹೇಳಿ ಆ ಸೇನೆಯಲ್ಲಿದ್ದ ಸರ್ವ ನರೇಂದ್ರರೂ ಪಿತಾಮಹನನ್ನು ಹಿಂಬಾಲಿಸಿ ಹೋದರು. ಆಗ ವೇಗದಲ್ಲಿ ಹೊರಟು ಭೀಷ್ಮ ಶಾಂತನವನು ಮಹಾಶ್ವೇತಾಶ್ವಗಳನ್ನು ಕಟ್ಟಿದ್ದ, ಭೀಮವಾನರಧ್ವಜವನ್ನು ಹೊಂದಿದ್ದ, ಮೇಘನಾದದಂತೆ ಗುಡುಗುತ್ತಿದ್ದ ಮಹಾ ರಥದಲ್ಲಿ ವಿರಾಜಿಸಿ ತನ್ನ ಕಡೆಗೇ ಬರತ್ತಿದ್ದ ಮಹಾಬಲ ಭಾರತ ಅರ್ಜುನನನ್ನು ಎದುರಿಸಿದನು.

ಸಮರದಲ್ಲಿ ಬರುತ್ತಿದ್ದ ಕಿರೀಟೀ ಧನಂಜಯನನ್ನು ನೋಡಿ ಭಯದಿಂದ ಸರ್ವಸೈನ್ಯಗಳಲ್ಲಿ ತುಮುಲ ಹಾಹಾಕಾರವುಂಟಾಯಿತು. ಕಡಿವಾಣಗಳನ್ನು ಕೈಯಲ್ಲಿ ಹಿಡಿದು ಮಧ್ನಾಹ್ನದ ಇನ್ನೊಬ್ಬ ಸೂರ್ಯನಂತಿರುವ ಕೃಷ್ಣನನ್ನು ನೋಡಲು ಅವರು ಅಶಕ್ಯರಾದರು. ಹಾಗೆಯೇ ಬಿಳಿಯ ಕುದುರೆಗಳ ಮತ್ತು ಬಿಳಿಯ ಬಿಲ್ಲಿನ ಉದಯಿಸುತ್ತಿರುವ ಶ್ವೀತಗ್ರಹದಂತಿರುವ ಭೀಷ್ಮ ಶಾಂತನವನನ್ನು ಪಾಂಡವರು ನೋಡಲು ಅಶಕ್ಯರಾದರು. ಅವನು ಎಲ್ಲಕಡೆಗಳಿಂದ ಮಹಾತ್ಮ ತ್ರಿಗರ್ತರಿಂದ ಮತ್ತು ಹಾಗೆಯೇ ಮಹಾರಥರಾದ ಧೃತರಾಷ್ಟ್ರನ ಮಕ್ಕಳಿಂದ ಸುತ್ತುವರೆಯಲ್ಪಟ್ಟಿದ್ದನು.

ದ್ರೋಣ-ವಿರಾಟರ ಯುದ್ಧ; ಶಂಕನ ವಧೆ

ಭಾರದ್ವಾಜನಾದರೋ ಪತ್ರಿಗಳಿಂದ ಮತ್ಸ್ಯನನ್ನು ಹೊಡೆದನು ಮತ್ತು ಶರಗಳಿಂದ ಅವನ ಧ್ವಜವನ್ನೂ, ಒಂದರಿಂದ ಧನುಸ್ಸನ್ನೂ ಕತ್ತರಿಸಿದನು. ಆಗ ವಾಹಿನೀಪತಿ ವಿರಾಟನು ತುಂಡಾದ ಬಿಲ್ಲನ್ನು ಬದಿಗಿಟ್ಟು ವೇಗದಿಂದ ಇನ್ನೊಂದು ದೃಢವಾದ ಭಾರವನ್ನು ಹೊರಬಲ್ಲ ಧನುಸ್ಸನ್ನು ಮತ್ತು ಸರ್ಪಗಳಂತೆ ಪ್ರಜ್ವಲಿಸುತ್ತಿರುವ, ವಿಷವನ್ನು ಕಾರುತ್ತಿರುವ ಬಾಣಗಳನ್ನು ತೆಗೆದುಕೊಂಡನು. ಅವನು ದ್ರೋಣನನ್ನು ಮೂರರಿಂದ ತಿರುಗಿ ಹೊಡೆದನು, ನಾಲ್ಕರಿಂದ ಅವನ ಕುದುರೆಗಳನ್ನು, ಒಂದರಿಂದ ಧ್ವಜವನ್ನು ಮತ್ತು ಐದರಿಂದ ಸಾರಥಿಯನ್ನು ಹೊಡೆದನು. ಒಂದರಿಂದ ಧನುಸ್ಸನ್ನು ಚೆನ್ನಾಗಿ ಹೊಡೆದಿದ್ದುದರಿಂದ ದ್ವಿಜರ್ಷಭನು ತುಂಬಾ ಕುಪಿತನಾದನು. ದ್ರೋಣನು ಅವನ ಕುದುರೆಗಳನ್ನು ಎಂಟು ಸನ್ನತಪರ್ವ ಶರಗಳಿಂದ ಮುತ್ತು ಸಾರಥಿಯನ್ನು ಒಂದು ಪತ್ರಿಯಿಂದ ವಧಿಸಿದನು. ಕುದುರೆಗಳು ಸಾರಥಿಯು ಹತರಾಗಲು ಆ ರಥಿಗಳಲ್ಲಿ ಶ್ರೇಷ್ಠನು ತಕ್ಷಣವೇ ತನ್ನ ರಥದಿಂದ ಹಾರಿ ಶಂಖನ ರಥವನ್ನೇರಿದನು. ಆಗ ಆ ತಂದೆ-ಮಗ ಇಬ್ಬರೂ ರಥದಲ್ಲಿ ನಿಂತು ಭಾರದ್ವಾಜನನ್ನು ಮಹಾ ಶರವರ್ಷದಿಂದ ಬಲವಂತವಾಗಿ ನಿಲ್ಲಿಸಿದರು. ತಕ್ಷಣವೇ ಭಾರದ್ವಾಜನು ಕ್ರುದ್ಧನಾಗಿ ಸರ್ಪದ ವಿಷದಂತಿರುವ ಶರವನ್ನು ಶಂಖನ ಮೇಲೆ ಪ್ರಯೋಗಿಸಿದನು. ಆ ಬಾಣವು ಅವನ ಹೃದಯವನ್ನು ಸೀಳಿ ರಕ್ತವನ್ನು ಕುಡಿದು ರಕ್ತ ಮತ್ತು ಮಾಂಸಗಳಿಂದ ಲೇಪನಗೊಂಡು ಭೂಮಿಯ ಮೇಲೆ ಬಿದ್ದಿತು. ಭರದ್ವಾಜನ ಶರನಿಂದ ಹತನಾದ ಅವನು ತಕ್ಷಣವೇ ಧನುಸ್ಸು-ಶರಗಳನ್ನು ಬಿಟ್ಟು ತನ್ನ ತಂದೆಯ ಸಮೀಪದಲ್ಲಿರುವಾಗಲೇ ರಥದಿಂದ ಬಿದ್ದನು. ತನ್ನ ಮಗನು ಹತನಾದುದನ್ನು ನೋಡಿ ವಿರಾಟನು ಬಾಯಿಕಳೆದ ಅಂತಕನಂತಿರುವ ದ್ರೋಣನನ್ನು ಬಿಟ್ಟು ಸಮರದಿಂದ ಪಲಾಯನ ಮಾಡಿದನು. ಆಗ ಭಾರದ್ವಾಜನು ಪಾಂಡವರ ಮಹಾಸೇನೆಯನ್ನು ತಕ್ಷಣವೇ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸದೆಬಡಿಯತೊಡಗಿದನು.

ಶಿಖಂಡಿ-ಅಶ್ವತ್ಥಾಮರ ಯುದ್ಧ

ಶಿಖಂಡಿಯು ದ್ರೌಣಿಯನ್ನು ಎದುರಿಸಿ ಅವನ ಹುಬ್ಬುಗಳ ಮಧ್ಯೆ ಮೂರು ಆಶುಗ ನಾರಾಚಗಳಿಂದ ಹೊಡೆದನು. ಹಣೆಯಲ್ಲಿ ಚುಚ್ಚಿಕೊಂಡಿದ್ದ ಆ ಮೂರು ಬಾಣಗಳಿಂದ ಆ ನರಶಾರ್ದೂಲನು ಕಾಂಚನಮಯ ಮೂರು ಶಿಖರಗಳಿಂದ ಕೂಡಿದ ಮೇರು ಪರ್ವತದಂತೆ ಪ್ರಕಾಶಿಸಿದನು. ಆಗ ಕ್ರುದ್ಧನಾಗಿ ಅಶ್ವತ್ಥಾಮನು ನಿಮಿಷಾರ್ಧದಲ್ಲಿ ಅನೇಕ ಶರಗಳನ್ನು ಪ್ರಯೋಗಿಸಿ ಶಿಖಂಡಿಯ ಸೂತನನ್ನೂ, ಧ್ವಜವನ್ನೂ, ಕುದುರೆಗಳನ್ನೂ ಆಯುಧಗಳನ್ನೂ ಬೀಳಿಸಿದನು. ಕುದುರೆಗಳು ಹತವಾಗಲು ಆ ರಥಿಗಳಲ್ಲಿ ಶ್ರೇಷ್ಠ ಶತ್ರುತಾಪನ ಶಿಖಂಡಿಯು ರಥದಿಂದ ಹಾರಿ ನಿಶಿತ ವಿಮಲ ಖಡ್ಗ-ಗುರಾಣಿಗಳನ್ನು ಎತ್ತಿಕೊಂಡು ಕ್ರುದ್ಧನಾಗಿ ಗಿಡುಗನಂತೆ ಸಂಚರಿಸಿದನು. ಖಡ್ಗವನ್ನು ತಿರುಗಿಸುತ್ತಾ ಸಂಚರಿಸಿಸುತ್ತಿದ್ದ ಅವನನ್ನು ಕೊಲ್ಲಲು ದ್ರೌಣಿಗೆ ಅವಕಾಶವೇ ಕಾಣಲಿಲ್ಲ. ಆಗ ಅದ್ಭುತವಾಯಿತು. ಪರಮಕುಪಿತ ದ್ರೌಣಿಯು ಅನೇಕ ಸಹಸ್ರ ಬಾಣಗಳನ್ನು ಪ್ರಯೋಗಿಸಿದನು. ಬಲಿಷ್ಟರಲ್ಲಿ ಶ್ರೇಷ್ಠನಾದ ಶಿಖಂಡಿಯು ಸುದಾರುಣವಾಗಿ ಬೀಳುತ್ತಿದ್ದ ಆ ಶರವೃಷ್ಟಿಯನ್ನು ತೀಕ್ಷ್ಣವಾದ ಖಡ್ಗದಿಂದ ತುಂಡರಿಸಿದನು. ಆಗ ದ್ರೌಣಿಯು ನೂರುಚಂದ್ರಗಳಿದ್ದ ಅವನ ಮರೋರಮ ಖಡ್ಗ-ಗುರಾಣಿಗಳನ್ನು ಕತ್ತರಿಸಿ ಅನೇಕ ನಿಶಿತ ಪತ್ರಿಗಳಿಂದ ಅವನನ್ನು ಹೊಡೆದನು. ಆಗ ಕೂಡಲೇ ಸಾಯಕಗಳಿಂದ ತುಂಡಾದ ಖಡ್ಗವನ್ನೇ ಪ್ರಜ್ವಲಿಸುತ್ತಿರುವ ಸರ್ಪದಂತೆ ಶಿಖಂಡಿಯು ಅವನ ಮೇಲೆ ಎಸೆದನು. ಕೂಡಲೇ ತನ್ನ ಮೇಲೆ ಬೀಳುತ್ತಿದ್ದ ಕಾಲಾನಲಸಮಪ್ರಭೆಯ ಅದನ್ನು ಕತ್ತರಿಸಿ ದ್ರೌಣಿಯು ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು. ಮತ್ತು ಶಿಖಂಡಿಯನ್ನು ಅನೇಕ ಆಯಸ ಶರಗಳಿಂದ ಗಾಯಗೊಳಿಸಿದನು. ನಿಶಿತ ಶರಗಳಿಂದ ಜೋರಾಗಿ ಹೊಡೆಯಲ್ಪಟ್ಟ ಶಿಖಂಡಿಯಾದರೋ ತಕ್ಷಣವೇ ಮಹಾತ್ಮ ಸಾತ್ಯಕಿಯ ರಥವನ್ನೇರಿದನು.

ಸಾತ್ಯಕಿ-ಅಲಂಬುಸರ ಯುದ್ಧ

ಬಲಿಗಳಲ್ಲಿ ಶ್ರೇಷ್ಠ ಸಾತ್ಯಕಿಯಾದರೋ ಕ್ರುದ್ಧನಾಗಿ ಕ್ರೂರ ರಾಕ್ಷಸ ಅಲಂಬುಸನನ್ನು ಘೋರ ಶರಗಳಿಂದ ಹೊಡೆದನು. ರಾಕ್ಷಸೇಂದ್ರನು ಅರ್ಧಚಂದ್ರದಿಂದ ಅವನ ಧನುಸ್ಸನ್ನು ಕತ್ತರಿಸಿದನು ಮತ್ತು ಅವನನ್ನು ಸಾಯಕಗಳಿಂದ ಹೊಡೆದನು. ರಾಕ್ಷಸೀ ಮಾಯೆಯನ್ನು ಮಾಡಿ ಅವನನ್ನು ಶರವರ್ಷಗಳಿಂದ ಮುಚ್ಚಿದನು. ಆಗ ಸ್ವಲ್ಪವೂ ಗಾಭರಿಗೊಳ್ಳದೇ ಸಮರದಲ್ಲಿ ನಿಶಿತ ಬಾಣಗಳಿಂದ ಹೋರಾಡುವ ಶೈನೇಯನ ಪರಾಕ್ರಮವು ಅದ್ಭುತವಾಗಿತ್ತು. ವಾರ್ಷ್ಣೇಯನು ಐಂದ್ರಾಸ್ತ್ರವನ್ನು ಹೂಡಿದನು. ಆ ಮಾಧವ ಯಶಸ್ವಿಯು ಅದನ್ನು ವಿಜಯನಿಂದ ಪಡೆದುಕೊಂಡಿದ್ದನು. ಆ ಅಸ್ತ್ರವು ರಾಕ್ಷಸೀ ಮಾಯೆಯನ್ನು ಭಸ್ಮವಾಗಿಸಿ, ಮಹಾಮೇಘವು ಮಳೆಸುರಿಸಿ ಪರ್ವತವನ್ನು ಮುಚ್ಚಿಬಿಡುವಂತೆ ಅಲಂಬುಸನನ್ನು ಎಲ್ಲ ಕಡೆಗಳಿಂದ ಘೋರ ಶರಗಳಿಂದ ಮುಚ್ಚಿಬಿಟ್ಟನು. ಆಗ ಮಹಾತ್ಮ ಮಾಧವನಿಂದ ಪೀಡಿತನಾಗಿ ಭಯದಿಂದ ಆ ರಾಕ್ಷಸನು ಸಾತ್ಯಕಿಯನ್ನು ಬಿಟ್ಟು ಪಲಾಯನ ಮಾಡಿದನು. ಕೌರವ ಯೋಧರು ನೋಡುತ್ತಿದ್ದಂತೆಯೇ ಯುದ್ಧದಲ್ಲಿ ಮಘವತನಿಗೂ ಅಜೇಯನಾಗಿದ್ದ ಆ ರಾಕ್ಷಸೇಂದ್ರನನ್ನು ಶೈನೇಯನು ಪ್ರಾಣದಿಂದ ಗೆದ್ದನು. ಸತ್ಯವಿಕ್ರಮಿ ಸಾತ್ಯಕಿಯು ಜೋರಾಗಿ ಸಿಂಹನಾದಗೈದನು ಮತ್ತು ಅನೇಕ ನಿಶಿತ ಬಾಣಗಳಿಂದ ಭಯಾರ್ದಿತರಾದವರನ್ನು ಓಡಿಸಿದನು.

ಇದೇ ಸಮಯದಲ್ಲಿ ದ್ರುಪದಾತ್ಮಜ ಬಲಿ ಧೃಷ್ಟದ್ಯುಮ್ನನು ದುರ್ಯೋಧನನನ್ನು ಸನ್ನತಪರ್ವ ಶರಗಳಿಂದ ಹೊಡೆಯತೊಡಗಿದನು. ಧೃಷ್ಟದ್ಯುಮ್ನನ ವಿಶಿಖಗಳಿಂದ ಗಾಯಗೊಂಡ ದುರ್ಯೋಧನನು ಸ್ವಲ್ಪವೂ ವ್ಯಥಿತನಾಗಲಿಲ್ಲ. ಅವನು ಸಮರದಲ್ಲಿ ತಕ್ಷಣವೇ ಧೃಷ್ಟದ್ಯುಮ್ನನನ್ನು ತೊಂಭತ್ತು ಸಾಯಕಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು. ಆ ಮಹಾರಥ ಸೇನಾಪತಿಯು ಕ್ರುದ್ಧನಾಗಿ ಅವನ ಬಿಲ್ಲನ್ನು ಕತ್ತರಿಸಿದನು, ಶೀಘ್ರವಾಗಿ ನಾಲ್ಕೂ ಕುದುರೆಗಳನ್ನು ಸಂಹರಿಸಿದನು ಮತ್ತು ಕ್ಷಿಪ್ರವಾಗಿ ಏಳು ನಿಶಿತ ಬಾಣಗಳಿಂದ ಅವನನ್ನು ಹೊಡೆದನು. ಅಶ್ವಗಳು ಹತರಾಗಲು ಮಹಾಬಾಹು ಬಲಿಯು ರಥದಿಂದ ಕೆಳಗೆ ಧುಮುಕಿ ಖಡ್ಗವನ್ನು ಎತ್ತಿ ಹಿಡಿದು ಕಾಲ್ನಡುಗೆಯಲ್ಲಿಯೇ ಪಾರ್ಷತನ ಕಡೆ ಓಡಿ ಬಂದನು. ಆಗ ರಾಜನನ್ನು ಬಹುವಾಗಿ ಪ್ರೀತಿಸುತ್ತಿದ್ದ ಮಹಾಬಲ ಶಕುನಿಯು ಬಂದು ಆ ಸರ್ವಲೋಕದ ರಾಜನನ್ನು ತನ್ನ ರಥದ ಮೇಲೇರಿಸಿಕೊಂಡನು. ಆಗ ನೃಪನನ್ನು ಪರಾಜಯಗೊಳಿಸಿ ಪರವೀರಹ ಪಾರ್ಷತನು ವಜ್ರಪಾಣಿಯು ಅಸುರರನ್ನು ಹೇಗೋ ಹಾಗೆ ಕೌರವರ ಸೇನೆಯನ್ನು ಸಂಹರಿಸಿದನು.

ರಣದಲ್ಲಿ ಕೃತವರ್ಮನು ಮಹಾರಥ ಭೀಮನನ್ನು ಮಹಾಮೇಘವು ರವಿಯನ್ನು ಹೇಗೋ ಹಾಗೆ ಶರಗಳನ್ನು ಸುರಿಸಿ ಮುಚ್ಚಿಬಿಟ್ಟನು. ಆಗ ಸಮರದಲ್ಲಿ ಪರಂತಪ ಭೀಮಸೇನನು ನಕ್ಕು ಸಂಕ್ರುದ್ಧನಾಗಿ ಕೃತವರ್ಮನ ಮೇಲೆ ಸಾಯಕಗಳನ್ನು ಪ್ರಯೋಗಿಸಿದನು. ಅತಿರಥ, ಶಸ್ತ್ರಕೋವಿದ ಸಾತ್ವತನು ಅವುಗಳಿಗೆ ನಡುಗದೇ ಭೀಮನನ್ನು ನಿಶಿತ ಶರಗಳಿಂದ ಗಾಯಗೊಳಿಸಿದನು. ಭೀಮಸೇನ ಮಹಾಬಲನು ಅವನ ನಾಲ್ಕೂ ಕುದುರೆಗಳನ್ನು ಕೊಂದು ಸುಪರಿಷ್ಕೃತವಾಗಿದ್ದ ಧ್ವಜವನ್ನೂ ಸಾರಥಿಯನ್ನೂ ಕೆಳಗುರುಳಿಸಿದನು. ಆಗ ಪರವೀರಹನು ಅನೇಕ ವಿಧದ ಶರಗಳಿಂದ ಅವನನ್ನು ಹೊಡೆದನು. ಅವನ ಎಲ್ಲ ಅಂಗಾಂಗಗಳೂ ಕ್ಷತ-ವಿಕ್ಷತವಾಗಿದ್ದುದು ಕಂಡುಬಂದಿತು. ಕುದುರೆಗಳನ್ನು ಕಳೆದುಕೊಂಡ ಅವನು ಕೂಡಲೇ ದುರ್ಯೋಧನನು ನೋಡುತ್ತಿದ್ದಂತೆ ಧೃತರಾಷ್ಟ್ರನ ಬಾವ ವೃಷಕನ ರಥವನ್ನು ಹತ್ತಿದನು. ಭೀಮಸೇನನೂ ಕೂಡ ಮಹಾಕೋಪದಿಂದ ಕೌರವ ಸೈನ್ಯವನ್ನು ದಂಡಪಾಣಿ ಅಂತಕನಂತೆ ಸಂಕ್ರುದ್ಧನಾಗಿ ಸಂಹರಿಸಿದನು.

ದ್ವಂದ್ವಯುದ್ಧ

ಕೌರವರು ಯಥಾಶಕ್ತಿಯಾಗಿ ಯಥೋತ್ಸಾಹದಿಂದ ಪರಮ ಶಕ್ತಿ ಪೌರುಷಗಳನ್ನು ತೋರಿಸುತ್ತಾ ಯುದ್ಧಮಾಡುತ್ತಿದ್ದರು. ಸುರನದಿ ಗಂಗೆಯ ನೀರು ಸಿಹಿಯಾಗಿದ್ದರೂ ಸಮುದ್ರವನ್ನು ಸೇರಿದಾಗ ಅದರ ಗುಣವು ಲವಣತ್ವವನ್ನು ಹೊಂದುತ್ತದೆ. ಹಾಗೆಯೇ ಮಹಾತ್ಮರಾದ ಕೌರವರು ಪೌರುಷದಿಂದಿದ್ದರೂ ಸಂಯುಗದಲ್ಲಿ ವೀರ ಪಾಂಡುಸುತರನ್ನು ಎದುರಿಸಿದ ಕೂಡಲೇ ಅದು ವ್ಯರ್ಥವಾಗಿ ಬಿಡುತ್ತಿತ್ತು. ಅವರು ಸಂಘಟಿತರಾಗಿ ಯಥಾಶಕ್ತಿಯಾಗಿಯೇ ದುಷ್ಕರ ಕರ್ಮವನ್ನು ಮಾಡುತ್ತಿದ್ದರು. ಆದುದರಿಂದ ದೋಷವು ಆ ಕೌರವರಿಗೆ ಹೋಗಬಾರದಂತಿತ್ತು. ಧೃತರಾಷ್ಟ್ರನ ಮತ್ತು ಅವನ ಮಗನ ಮಹಾ ಅಪರಾಧದಿಂದ ಯಮರಾಷ್ಟ್ರವನ್ನು ವರ್ಧಿಸುವ ಆ ಘೋರ ಪ್ರಕ್ಷಯವು ಭೂಮಿಯಮೇಲೆ ನಡೆಯಿತು. ಪೂರ್ವಾಹ್ಣದಲ್ಲಿ ಬಹಳ ಜನಕ್ಷಯವಾಯಿತು.

ಅವಂತಿಯ ಮಹೇಷ್ವಾಸ ಮಹಾತ್ಮ ಮಹಾಬಲರಿಬ್ಬರೂ ಇರಾವಾನನನ್ನು ನೋಡಿ ರಣೋತ್ಕಟರಾಗಿ ಒಟ್ಟಿಗೇ ಎದುರಿಸಿದರು. ಅವರ ಮಧ್ಯೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು. ಸಂಕ್ರುದ್ಧನಾದ ಇರಾವಾನನು ದೇವರೂಪಿ ಸಹೋದರರನ್ನು ತಕ್ಷಣವೇ ನಿಶಿತ ಸನ್ನತಪರ್ವ ಶರಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಸಮರದಲ್ಲಿ ಚಿತ್ರಯೋಧಿಗಳು ಅವನನ್ನು ಹೊಡೆದರು. ಶತ್ರುನಾಶಕ್ಕೆ ಪ್ರಯತ್ನಿಸುತ್ತಾ, ಪ್ರಹಾರ ಪ್ರತಿಪ್ರಹಾರಗಳನ್ನು ಮಾಡುತ್ತಾ ಹಾಗೆ ಯುದ್ಧಮಾಡುತ್ತಿದ್ದ ಅವರಲ್ಲಿ ವಿಶೇಷವಾದ ಅಂತರವೇನೂ ಕಾಣಲಿಲ್ಲ. ಆಗ ಇರಾವಾನನು ನಾಲ್ಕು ಬಾಣಗಳಿಂದ ಅನುವಿಂದನ ರಥದ ನಾಲ್ಕೂ ಕುದುರೆಗಳನ್ನು ಯಮಾಲಯಕ್ಕೆ ಕಳುಹಿಸಿಕೊಟ್ಟನು. ಸುತೀಕ್ಷ್ಣವಾದ ಎರಡು ಭಲ್ಲಗಳಿಂದ ಅವನ ಧನುಸ್ಸನ್ನೂ ಧ್ವಜವನ್ನೂ ಸಮರದಲ್ಲಿ ಕತ್ತರಿಸಿದನು. ಅದು ಅದ್ಭುತವಾಗಿತ್ತು. ಆಗ ಅನುವಿಂದನು ಹೊಸತಾದ ಭಾರಸಾಧನವಾದ ಉತ್ತಮ ಧನುಸ್ಸನ್ನು ಹಿಡಿದು ವಿಂದನ ರಥವನ್ನೇರಿದನು. ಅವರಿಬ್ಬರು ಅವಂತಿಯ ವೀರರೂ ರಥಿಗಳಲ್ಲಿ ಶ್ರೇಷ್ಠರೂ ಒಂದೇ ರಥದಲ್ಲಿದ್ದುಕೊಂಡು ಮಹಾತ್ಮ ಇರಾವಂತನ ಮೇಲೆ ಬೇಗ ಶರಗಳನ್ನು ಪ್ರಯೋಗಿಸಿದರು. ಅವರು ಬಿಟ್ಟ ಮಹಾವೇಗದ ಕಾಂಚನಭೂಷಣ ಶರಗಳು ದಿವಾಕರನ ಪಥವನ್ನು ಅನುಸರಿಸಿ ಆಕಾಶವನ್ನೆಲ್ಲಾ ತುಂಬಿದವು. ಆಗ ಇರಾವಂತನು ಕ್ರುದ್ಧನಾಗಿ ಆ ಮಹಾರಥ ಸಹೋದರರಿಬ್ಬರ ಮೇಲೆ ಶರವರ್ಷವನ್ನು ಸುರಿಸಿ ಸಾರಥಿಯನ್ನು ಬೀಳಿಸಿದನು. ಪ್ರಾಣಕಳೆದುಕೊಂಡು ಸಾರಥಿಗಳಿಬ್ಬರೂ ಭೂಮಿಯ ಮೇಲೆ ಬೀಳಲು ಭ್ರಾಂತಗೊಂಡ ಕುದುರೆಗಳು ರಥವನ್ನು ದಿಕ್ಕು ದಿಕ್ಕುಗಳಿಗೆ ಕೊಂಡೊಯ್ದವು. ನಾಗರಾಜನ ಮಗಳ ಮಗನಾದ ಅವನು ಅವರಿಬ್ಬರನ್ನು ಪರಾಜಯಗೊಳಿಸಿ ತನ್ನ ಪೌರುಷವನ್ನು ಪ್ರಕಟಪಡಿಸುತ್ತಾ ಕೌರವ ಸೇನೆಯನ್ನು ನಾಶಪಡಿಸತೊಡಗಿದನು. ಅವನಿಂದ ವಧಿಸಲ್ಪಡುತ್ತಿದ್ದ ಧಾರ್ತರಾಷ್ಟ್ರನ ಮಹಾಸೇನೆಯು ವಿಷಪಾನಮಾಡಿದ ಮನುಷ್ಯನಂತೆ ಬಹುವಿಧವಾಗಿ ನಡೆದುಕೊಂಡಿತು.

ಆದಿತ್ಯವರ್ಣದ ರಥದಲ್ಲಿ, ಧ್ವಜದೊಂದಿಗೆ ಮಹಾಬಲ ರಾಕ್ಷಸೇಂದ್ರ ಹೈಡಿಂಬನು ಭಗದತ್ತನನ್ನು ಎದುರಿಸಿದನು. ಆಗ ಹಿಂದೆ ತಾರಕಮಯಸಂಗ್ರಾಮದಲ್ಲಿ ವಜ್ರಧರನಂತೆ ಪ್ರಾಗ್ಜ್ಯೋತಿಷದ ರಾಜನು ಗಜರಾಜನನ್ನೇರಿದನು. ಅಲ್ಲಿ ಗಂಧರ್ವ-ಋಷಿಗಳೊಂದಿಗೆ ಸೇರಿದ್ದ ದೇವತೆಗಳು ಹೈಡಿಂಬ ಭಗದತ್ತರ ನಡುವೆ ಏನೂ ವ್ಯತ್ಯಾಸವನ್ನು ಕಾಣಲಿಲ್ಲ. ಸುರಪತಿ ಶಕ್ರನು ಹೇಗೆ ದಾನವರನ್ನು ಕಾಡಿದನೋ ಹಾಗೆ ಸಮರದಲ್ಲಿ ರಾಜನು ಪಾಂಡವರನ್ನು ಪೀಡಿಸಿದನು. ಅವನಿಂದ ಗಾಯಗೊಂಡ ಪಾಂಡವರು ತ್ರಾತಾರನಿಲ್ಲದೇ ತಮ್ಮ ಸೇನೆಯಲ್ಲಿ ಸರ್ವದಿಶಗಳಲ್ಲಿ ಓಡತೊಡಗಿದರು. ಅಲ್ಲಿ ರಥದಲ್ಲಿದ್ದ ಭೈಮಸೇನಿಯು ವಿಮನಸ್ಕರಾಗಿ ಓಡುತ್ತಿದ್ದ ಉಳಿದ ಮಹಾರಥರನ್ನು ನೋಡಿದನು. ಪುನಃ ಪಾಂಡವರ ಸೈನ್ಯವು ಮರಳಿ ಬರಲು ಅಲ್ಲಿ ಅವರು ಮತ್ತು ಕೌರವರ ಸೇನೆಗಳ ಮಧ್ಯೆ ಘೋರ ಯುದ್ಧವು ನಡೆಯಿತು. ಆಗ ಘಟೋತ್ಕಚನು ಮಹಾರಣದಲ್ಲಿ ಭಗದತ್ತನನ್ನು ಮೋಡವು ಮೇರುಗಿರಿಯನ್ನು ಹೇಗೋ ಹಾಗೆ ಶರಗಳಿಂದ ಮುಚ್ಚತೊಡಗಿದನು. ತಕ್ಷಣವೇ ರಾಜನು ರಾಕ್ಷಸನ ಧನುಸ್ಸಿನಿಂದ ಬಂದ ಆ ಶರಗಳನ್ನು ನಾಶಪಡಿಸಿ ರಣದಲ್ಲಿ ಭೈಮಸೇನಿಯ ಎಲ್ಲ ಮರ್ಮಸ್ಥಾನಗಳಿಗೂ ಹೊಡೆದನು. ಅನೇಕ ಸನ್ನತಪರ್ವ ಶರಗಳಿಂದ ಹೊಡೆಯುಲ್ಪಟ್ಟರೂ ಭೇದಿಸಲ್ಪಡುವ ಪರ್ವತದಂತೆ ರಾಕ್ಷಸೇಂದ್ರನು ನಿಂತಲ್ಲಿಂದ ಚಲಿಸಲಿಲ್ಲ. ಆಗ ಕ್ರುದ್ಧನಾದ ಪ್ರಾಗ್ಜ್ಯೋತಿಷನು ಹದಿನಾಲ್ಕು ತೋಮರಗಳನ್ನು ಅವನ ಮೇಲೆ ಪ್ರಯೋಗಿಸಲು ಅವುಗಳನ್ನೂ ಸಮರದಲ್ಲಿ ರಾಕ್ಷಸನು ತುಂಡರಿಸಿದನು. ಮಹಾಬಾಹುವು ನಿಶಿತ ಶರಗಳಿಂದ ಆ ತೋಮರಗಳನ್ನು ಕತ್ತರಿಸಿ ಏಳು ಕಂಕಪತ್ರಿಗಳಿಂದ ಭಗದತ್ತನನ್ನೂ ಹೊಡೆದನು. ಆಗ ಪ್ರಾಗ್ಜ್ಯೋತಿಷದ ರಾಜನು ನಕ್ಕು ಸಾಯಕಗಳಿಂದ ಯುದ್ಧದಲ್ಲಿ ಅವನ ನಾಲ್ಕೂ ಕುದುರೆಗಳನ್ನೂ ಸಂಹರಿಸಿದನು. ಕುದುರೆಗಳು ಹತವಾದರೂ ರಥದಲ್ಲಿಯೇ ನಿಂತು ಪ್ರತಾಪವಾನ್ ರಾಕ್ಷಸೇಂದ್ರನು ವೇಗದಿಂದ ಪ್ರಾಗ್ಜ್ಯೋತಿಷನ ಆನೆಯ ಮೇಲೆ ಶಕ್ತಿಯನ್ನು ಎಸೆದನು. ಮೇಲೆ ಬೀಳುತ್ತಿದ್ದ ಹೇಮದಂಡದ ಸುವೇಗದ ಶಕ್ತಿಯನ್ನು ನೃಪತಿಯು ಮೂರು ತುಂಡುಗಳನ್ನಾಗಿ ಮಾಡಿ ನೆಲದ ಮೇಲೆ ಹರಡಿದನು. ಶಕ್ತಿಯು ನಾಶವಾದುದನ್ನು ನೋಡಿ ಹೈಡಿಂಬನು, ಹೇಗೆ ಹಿಂದೆ ದೈತ್ಯಸತ್ತಮ ನಮುಚಿಯು ಇಂದ್ರನಿಂದ ಓಡಿಹೋಗಿದ್ದನೋ ಹಾಗೆ ಭಯದಿಂದ ಪಲಾಯನಗೈದನು. ಆ ಶೂರ, ವಿಕ್ರಾಂತ, ಖ್ಯಾತಪೌರುಷ, ಸಮರದಲ್ಲಿ ಯಮ-ವರುಣರಿಂದಲೂ ಅಜೇಯನನ್ನು ಸೋಲಿಸಿ ಭಗದತ್ತನು ವನಗಜವು ಪದ್ಮಗಳಿರುವ ಸರೋವರವನ್ನು ಧ್ವಂಸಮಾಡುವಂತೆ ತನ್ನ ಆನೆಯೊಂದಿಗೆ ಪಾಂಡವೀ ಸೇನೆಯನ್ನು ಮರ್ದಿಸಿದನು.

ಮದ್ರೇಶ್ವರನಾದರೋ ತಂಗಿಯ ಮಕ್ಕಳಾದ ಪಾಂಡುನಂದನ ಯಮಳರೊಂದಿಗೆ ಯುದ್ಧವನ್ನು ನಡೆಸಿದನು. ಸಹದೇವನಾದರೋ ಮಾವನನ್ನು ನೋಡಿ ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರಗಣಗಳಿಂದ ಅವನನ್ನು ಮುಚ್ಚಿದನು. ಶರೌಘಗಳಿಂದ ಮುಚ್ಚಲ್ಪಟ್ಟಿದ್ದರೂ ಅವನು ಹೃಷ್ಟರೂಪನಾಗಿಯೇ ಇದ್ದನು. ತಾಯಿಯ ಕಾರಣದಿಂದ ಅವರಿಗೂ ತಮ್ಮ ಮಾವನ ಮೇಲೆ ಪ್ರೀತಿಯಿತ್ತು. ಆಗ ಆ ಮಹಾರಥನು ನಕುಲನ ನಾಲ್ಕೂ ಕುದುರೆಗಳನ್ನು ನಾಲ್ಕು ಉತ್ತಮ ಸಾಯಕಗಳಿಂದ ಹೊಡೆದು ಯಮಸದನದ ಕಡೆ ಕಳುಹಿಸಿದನು. ಕುದುರೆಯು ಹತವಾಗಲು ತಕ್ಷಣವೇ ರಥದಿಂದ ಹಾರಿ ಮಹಾರಥ ಯಶಸ್ವಿಯು ಸಹೋದರನ ರಥವನ್ನೇ ಏರಿದನು. ಒಂದೇ ಕಡೆ ನಿಂತು ಅವರಿಬ್ಬರು ಶೂರರೂ ದೃಧವಾದ ಧನುಸ್ಸನ್ನು ಎಳೆದು ಕ್ರುದ್ಧರಾಗಿ ಮದ್ರರಾಜನ ರಥವನ್ನು ಕ್ಷಣದಲ್ಲಿ ಮುಚ್ಚಿಬಿಟ್ಟರು. ತಂಗಿಯ ಮಕ್ಕಳಿಂದ ಅನೇಕ ಸನ್ನತಪರ್ವಗಳಿಂದ ಮುಚ್ಚಲ್ಪಟ್ಟಿರೂ ಪರ್ವತದಂತೆ ಆ ನರವ್ಯಾಘ್ರನು ಅಲುಗಾಡಲಿಲ್ಲ. ನಗುತ್ತಾ ಅವನೂ ಕೂಡ ಅವರ ಮೇಲೆ ಶರವೃಷ್ಟಿಯನ್ನು ಸುರಿಸಿದನು. ಆಗ ವೀರ್ಯವಾನ್ ಸಹದೇವನು ಕ್ರುದ್ಧನಾಗಿ ಶರವನ್ನು ಹೂಡಿ ಮದ್ರರಾಜನ ಮೇಲೆ ಪ್ರಯೋಗಿಸಿದನು. ಅವನಿಂದ ಬಿಡಲ್ಪಟ್ಟ ಆ ಶರವು ಗರುಡನಂತೆ ವೇಗವಾಗಿ ಹೋಗಿ ಮದ್ರರಾಜನನ್ನು ಭೇದಿಸಿ ಭೂಮಿಯ ಮೇಲೆ ಬಿದ್ದಿತು. ಗಾಢವಾಗಿ ಗಾಯಗೊಂಡ ಆ ಮಹಾರಥನು ರಥದಲ್ಲಿಯೇ ಕುಳಿತುಕೊಂಡು, ಮೂರ್ಛಿತನಾದನು. ಅವನು ಮೂರ್ಛಿತನಾಗಿ ಬಿದ್ದುದನ್ನು ಗಮನಿಸಿದ ಸೂತನು ಯಮಳರಿಂದ ಪೀಡಿತನಾದ ಅವನ ರಥವನ್ನು ಆಚೆ ಕೊಂಡೊಯ್ದನು. ಹಿಂದೆ ಹೋಗುತ್ತಿದ್ದ ಮದ್ರೇಶ್ವರನ ರಥವನ್ನು ನೋಡಿ ಧಾರ್ತರಾಷ್ಟ್ರರೆಲ್ಲರೂ ವಿಮನಸ್ಕರಾಗಿ ಇವನು ಉಳಿಯುವುದಿಲ್ಲವೆಂದು ಚಿಂತಿಸಿದರು. ಯುದ್ಧದಲ್ಲಿ ಸೋದರ ಮಾವನನ್ನು ಸೋಲಿಸಿ ಮಹಾರಥ ಮಾದ್ರೀಪುತ್ರರು ಮುದಿತರಾಗಿ ಶಂಖಗಳನ್ನು ಊದಿದರು ಮತ್ತು ಸಿಂಹನಾದಗೈದರು. ಅಮರರಾದ ಇಂದ್ರ-ಉಪೇಂದ್ರರು ದೈತ್ಯಸೇನೆಯನ್ನು ಹೇಗೋ ಹಾಗೆ ಅವರಿಬ್ಬರೂ ಹರ್ಷಿತರಾಗಿ ಕೌರವ ಸೈನ್ಯವನ್ನು ಬೆನ್ನಟ್ಟಿದರು.

ದಿವಾಕರನು ನಡುನೆತ್ತಿಯ ಮೇಲೆ ಬರಲು ರಾಜಾ ಯುಧಿಷ್ಠಿರನು ಶ್ರುತಾಯುಷನನ್ನು ನೋಡಿ ಕುದುರೆಗಳನ್ನು ಓಡಿಸಿದನು. ರಾಜನು ಅರಿಂದಮ ಶ್ರುತಾಯುಷನನ್ನು ಎದುರಿಸಿ ಅವನನ್ನು ತೀಕ್ಷ್ಣವಾದ ಸಾಯಕಗಳಿಂದ ಮತ್ತು ಒಂಭತ್ತು ನತಪರ್ವಗಳಿಂದ ಹೊಡೆದನು. ಆ ರಾಜ ಮಹೇಷ್ವಾಸನು ಧರ್ಮಸೂನುವು ಕಳುಹಿಸಿದ ಬಾಣಗಳನ್ನು ರಣದಲ್ಲಿ ತಡೆದು, ಏಳುಶರಗಳನ್ನು ಕೌಂತೇಯನ ಮೇಲೆ ಪ್ರಯೋಗಿಸಿದನು. ಅವು ಆ ಮಹಾತ್ಮನ ಕವಚವನ್ನು ಸೀಳಿ ದೇಹದಲ್ಲಿ ಪ್ರಾಣಗಳನ್ನು ಹುಡುಕುತ್ತಿವೆಯೋ ಎನ್ನುವಂತೆ ಅವನ ರಕ್ತವನ್ನು ಹೀರಿದವು. ಶ್ರುತಾಯುಷನಿಂದ ಹೀಗೆ ತುಂಬಾ ಗಾಯಗೊಂಡ ಪಾಂಡವನಾದರೋ ರಣದಲ್ಲಿ ವರಾಹಕರ್ಣದಿಂದ ರಾಜನ ಹೃದಯವನ್ನು ಹೊಡೆದನು. ರಥಶ್ರೇಷ್ಠ ಪಾರ್ಥನು ಇನ್ನೊಂದು ಭಲ್ಲದಿಂದ ಆ ಮಹಾತ್ಮನ ಧ್ವಜವನ್ನು ತಕ್ಷಣವೇ ರಥದಿಂದ ಭೂಮಿಯ ಮೇಲೆ ಉರುಳಿಸಿದನು. ಧ್ವಜವನ್ನು ಬೀಳಿಸಿದುದನ್ನು ನೋಡಿ ಪಾರ್ಥವ ಶ್ರುತಾಯುವು ಪಾಂಡವನನ್ನು ತೀಕ್ಷ್ಣವಾದ ಏಳು ವಿಶಿಖಗಳಿಂದ ಹೊಡೆದನು. ಆಗ ಧರ್ಮಪುತ್ರ ಯುಧಿಷ್ಠಿರನು ಯುಗಾಂತದಲ್ಲಿ ಇರುವವುಗಳನ್ನು ಸುಟ್ಟುಬಿಡುವ ಹುತಾಶನನಂತೆ ಕ್ರೋಧದಿಂದ ಪ್ರಜ್ವಲಿಸಿದನು. ಕ್ರುದ್ಧನಾದ ಪಾಂಡವನನ್ನು ನೋಡಿ ದೇವ-ಗಂಧರ್ವ-ರಾಕ್ಷಸರು ಬಹುವಾಗಿ ವ್ಯಥೆಪಟ್ಟರು. ಜಗತ್ತೇ ವ್ಯಾಕುಲಗೊಂಡಿತು.ಮೂರು ಲೋಕಗಳನ್ನೂ ಇಂದು ಸಂಕ್ರುದ್ಧನಾದ ಈ ನೃಪನು ಸುಟ್ಟುಬಿಡುತ್ತಾನೆ! ಎನ್ನುವುದೇ ಸರ್ವಭೂತಗಳ ಮನೋಗತವಾಗಿತ್ತು. ಪಾಂಡವನು ಕ್ರೋಧಿತನಾಗಲು ಋಷಿಗಳೂ ದೇವತೆಗಳೂ ಲೋಕಗಳ ಶಾಂತಿಗಾಗಿ ಸ್ವಸ್ತಿವಾಚನ ಮಾಡಿದರು. ಅವನೂ ಕೂಡ ಕ್ರೋಧಸಮಾವಿಷ್ಟನಾಗಿ ಕಟವಾಯಿಯನ್ನು ನೆಕ್ಕುತ್ತಾ ಪ್ರಲಯ ಕಾಲದ ಆದಿತ್ಯನಂತೆ ಘೋರರೂಪವನ್ನು ತಾಳಿದನು. ಆಗ ಕೌರವ ಸೇನೆಗಳೆಲ್ಲವೂ ತಮ್ಮ ಜೀವಿತದ ಮೇಲಿದ್ದ ಆಸೆಯನ್ನು ಸಂಪೂರ್ಣವಾಗಿ ತೊರೆದುಬಿಟ್ಟವು. ಮಹಾಯಶನಾದ ಅವನೇ ಧೈರ್ಯದಿಂದ ಕೋಪವನ್ನು ತಡೆದುಕೊಂಡು ಶ್ರುತಾಯುಷನ ಮಹಾಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿದನು. ಧನುಸ್ಸು ತುಂಡಾದ ಅವನನ್ನು ರಾಜನು ರಣದಲ್ಲಿ ಎದೆಯ ಮೇಲೆ ಸರ್ವ ಸೈನ್ಯವೂ ನೋಡುತ್ತಿರುವಂತೆ ನಾರಾಚದಿಂದ ಹೊಡೆದನು. ಇನ್ನೊಂದು ಕ್ಷಣದಲ್ಲಿ ಕ್ಷಿಪ್ರವಾಗಿ ಆ ಮಹಾಬಲ ಮಹಾತ್ಮನು ಅವನ ಕುದುರೆಗಳನ್ನೂ ಸೂತನಿಂದ ಶರಗಳಿಂದ ಸಂಹರಿಸಿದನು. ಹತವಾದ ಕುದುರೆಗಳನ್ನೂ ರಥವನ್ನೂ ನೋಡಿ ಪೌರುಷವನ್ನು ತ್ಯಜಿಸಿ ರಾಜ ಶ್ರುತಾಯುವು ವೇಗದಿಂದ ಸಮರವನ್ನು ತ್ಯಜಿಸಿ ಪಲಾಯನಗೈದನು. ಆ ಮಹೇಷ್ವಾಸನು ಧರ್ಮಪುತ್ರನಿಂದ ಗೆಲ್ಲಲ್ಪಡಲು ದುರ್ಯೋಧನನ ಸೇನೆಯು ಎಲ್ಲವೂ ಪರಾಙ್ಮುಖವಾದವು. ಹೀಗೆ ಮಾಡಿ ಧರ್ಮಪುತ್ರ ಯುಧಿಷ್ಠಿರನು ಬಾಯಿಕಳೆದ ಕಾಲನಂತೆ ಸೈನ್ಯವನ್ನು ಸಂಹರಿಸಿದನು.

ವಾರ್ಷ್ಣೇಯ ಚೇಕಿತಾನನು ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು, ಸರ್ವ ಸೇನೆಗಳೂ ನೋಡುತ್ತಿರುವಂತೆ, ಸಾಯಕಗಳಿಂದ ಮುಚ್ಚಿಬಿಟ್ಟನು. ಆ ಶರಗಳನ್ನು ತಡೆದು ಶಾರದ್ವತ ಕೃಪನು ಯುದ್ಧದಲ್ಲಿ ಚೇಕಿತಾನನನ್ನು ಪತ್ರಿಗಳಿಂದ ಹೊಡೆದನು. ಅನಂತರ ಆ ಕ್ಷಿಪ್ರಹಸ್ತನು ಇನ್ನೊಂದು ಭಲ್ಲದಿಂದ ಅವನ ಧನುಸ್ಸನ್ನು ತುಂಡರಿಸಿ, ಸಾರಥಿಯನ್ನೂ, ನಾಲ್ಕು ಕುದುರೆಗಳನ್ನೂ, ರಥದ ಬದಿಗಳನ್ನು ರಕ್ಷಿಸುತ್ತಿದ್ದ ಇಬ್ಬರು ಸಾರಥಿಗಳನ್ನೂ ಬೀಳಿಸಿದನು. ಆಗ ಸಾತ್ವತನು ಒಡನೆಯೇ ರಥದಿಂದ ಧುಮುಕಿ ಗದೆಯನ್ನು ಹಿಡಿದನು. ಗದಾಧಾರಿಗಳಲ್ಲಿ ಶ್ರೇಷ್ಠನಾದ ಅವನು ವೀರರನ್ನು ಘಾತಿಗೊಳಿಸುವ ಗದೆಯಿಂದ ಗೌತಮನ ಕುದುರೆಗಳನ್ನು ಕೊಂದು ಸಾರಥಿಯನ್ನೂ ಬೀಳಿಸಿದನು. ಭೂಮಿಗಿಳಿದ ಗೌತಮನು ಅವನ ಮೇಲೆ ಹದಿನಾರು ಬಾಣಗಳನ್ನು ಪ್ರಯೋಗಿಸಿದನು. ಆ ಶರಗಳು ಸಾತ್ವತನನ್ನು ಭೇದಿಸಿ ಧರಾತಲವನ್ನು ಪ್ರವೇಶಿಸಿದವು. ಆಗ ಚೇಕಿತಾನನು ಕ್ರುದ್ಧನಾಗಿ ಗೌತಮನನ್ನು ವಧಿಸಲು ಬಯಸಿ ವೃತ್ರನು ಪುರಂದರನ ಮೇಲೆ ಹೇಗೋ ಹಾಗೆ ಅವನ ಮೇಲೆ ಪುನಃ ಗದೆಯನ್ನು ಪ್ರಯೋಗಿಸಿದನು. ತನ್ನ ಮೇಲೆ ಬಂದು ಬೀಳುತ್ತಿದ್ದ ಆ ಪಚ್ಚೆಕಲ್ಲಿನಿಂದ ನಿರ್ಮಿತವಾಗಿದ್ದ ಮಹಾಗದೆಯನ್ನು ಅನೇಕ ಸಾವಿರ ಬಾಣಗಳಿಂದ ಗೌತಮನು ತಡೆದನು. ಆಗ ಚೇಕಿತಾನನು ಒರೆಯಿಂದ ಖಡ್ಗವನ್ನು ಸೆಳೆದು ಮೇಲೆತ್ತಿ ಅತಿ ವೇಗದಿಂದ ಗೌತಮನ ಸಮೀಪಕ್ಕೆ ಧಾವಿಸಿದನು. ಗೌತಮನೂ ಕೂಡ ಧನುಸ್ಸನ್ನು ಬಿಸುಟು ಖಡ್ಗವನ್ನು ಹಿಡಿದು ಮಹಾವೇಗದಿಂದ ಚೇಕಿತಾನನನ್ನು ಎದುರಿಸಿದನು. ಅವರಿಬ್ಬರು ಬಲಸಂಪನ್ನರೂ ಶ್ರೇಷ್ಠ ಖಡ್ಗಗಳನ್ನು ಹಿಡಿದು ಸುತೀಕ್ಷ್ಣವಾದ ಖಡ್ಗಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಲು ಪ್ರಯತ್ನಿಸಿದರು. ವೇಗವಾಗಿ ಖಡ್ಗಗಳಿಂದ ಹೊಡೆಯಲ್ಪಟ್ಟು ಆ ಇಬ್ಬರು ಪುರುಷರ್ಷಭರೂ ಹೋರಾಟದಲ್ಲಿ ಗಾಯಗೊಂಡು ಮೋಹಿತರಾಗಿ ಸರ್ವಭೂತಗಳೂ ಪೂಜಿಸುವ ಭೂಮಿಯ ಮೇಲೆ ಬಿದ್ದು ಮೂರ್ಛಿತರಾದರು. ಆಗ ವೇಗವಾಗಿ ಅಲ್ಲಿಗೆ ಬಂದ ಕರಕರ್ಷನು ಅವನ ಮೇಲಿನ ಸ್ನೇಹದಿಂದ ಹಾಗಿದ್ದ ಸಮರದುರ್ಮದ ಚೇಕಿತಾನನನ್ನು ನೋಡಿ, ಎಲ್ಲ ಸೇನೆಗಳೂ ನೋಡುತ್ತಿರಲು, ಅವನನ್ನು ತನ್ನ ರಥದ ಮೇಲೇರಿಸಿಕೊಂಡನು. ಹಾಗೆಯೇ ಶೂರ ಶಕುನಿಯು ತಕ್ಷಣವೇ ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು ತನ್ನ ರಥದ ಮೇಲೇರಿಸಿಕೊಂಡನು.

ಹಾಗೆಯೇ ಮಹಾಬಲ ಧೃಷ್ಟಕೇತುವು ಸೌಮದತ್ತಿಯನ್ನು ನೋಡಿ ಕ್ರುದ್ಧನಾಗಿ ಅವನ ಎದೆಗೆ ತೊಂಬತ್ತು ಸಾಯಕಗಳನ್ನು ಕ್ಷಿಪ್ರವಾಗಿ ಹೊಡೆದನು. ಮಧ್ಯಾಹ್ನದ ಸೂರ್ಯನು ಕಿರಣಗಳಿಂದ ಹೇಗೋ ಹಾಗೆ ಸೌಮದತ್ತಿಯು ಹೃದಯಕ್ಕೆ ಚುಚ್ಚಿದ್ದ ಆ ತೊಂಬತ್ತು ಬಾಣಗಳಿಂದ ಪರಿಶೋಭಿಸಿದನು. ಭೂರಿಶ್ರವನಾದರೋ ಸಮರದಲ್ಲಿ ಉತ್ತಮ ಸಾಯಕಗಳಿಂದ ಮಹಾರಥ ಧೃಷ್ಟಕೇತುವಿನ ಸಾರಥಿಯನ್ನೂ ಕುದುರೆಗಳನ್ನೂ ಸಂಹರಿಸಿ ಅವನನ್ನು ವಿರಥನನ್ನಾಗಿ ಮಾಡಿದನು. ಅವನು ಅಶ್ವ-ಸಾರಥಿಗಳನ್ನು ಕಳೆದುಕೊಂಡು ವಿರಥನಾದುದನ್ನು ನೋಡಿ ಅವನನ್ನು ಮಹಾ ಶರವರ್ಷಗಳಿಂದ ರಣದಲ್ಲಿ ಮುಚ್ಚಿದನು. ಮಹಾಮನ ಧೃಷ್ಟಕೇತುವಾದರೋ ತನ್ನ ರಥವನ್ನು ತೊರೆದು ಶತಾನೀಕನ ರಥವನ್ನೇರಿದನು.

ಚಿತ್ರಸೇನ, ವಿಕರ್ಣ ಮತ್ತು ದುರ್ಮರ್ಷಣರು ಬಂಗಾರದ ರಥಗಳಲ್ಲಿ ಸೌಭದ್ರನನ್ನು ಎದುರಿಸಿದರು. ಶರೀರವು ವಾತ-ಪಿತ್ತ-ಕಫ ಈ ಮೂರರೊಡನೆ ಹೋರಾಡುವಂತೆ ಅಭಿಮನ್ಯುವು ಅವರೊಡನೆ ಘೋರವಾದ ಯುದ್ಧ ಮಾಡಿದನು. ಆ ನರವ್ಯಾಘ್ರನು ಆ ಧೃತರಾಷ್ಟ್ರ ಪುತ್ರರನ್ನು ವಿರಥರನ್ನಾಗಿ ಮಾಡಿ ಭೀಮನ ವಚನವನ್ನು ಸ್ಮರಿಸಿಕೊಂಡು ಅವರನ್ನು ಕೊಲ್ಲಲಿಲ್ಲ.

ಆಗ ಅನೇಕ ರಾಜರಿಂದ, ನೂರಾರು ಗಜಾಶ್ವರಥಸೇನೆಗಳಿಂದ ಸಂವೃತನಾಗಿ ಸಮರದಲ್ಲಿ ದೇವತೆಗಳಿಗೂ ದುರಾಸದನಾದ ಭೀಷ್ಮನು ಧಾರ್ತರಾಷ್ಟ್ರರನ್ನು ರಕ್ಷಿಸಲು ಶೀಘ್ರವಾಗಿ ಮಹಾರಥ, ಬಾಲಕ, ಅಭಿಮನ್ಯುವೊಬ್ಬನನ್ನೇ ಗುರಿಯಾಗಿಟ್ಟುಕೊಂಡು ಹೋಗುತ್ತಿರಲು ಶ್ವೇತವಾಹನ ಕೌಂತೇಯನು ವಾಸುದೇವನಿಗೆ ಇದನ್ನು ಹೇಳಿದನು:ಹೃಷೀಕೇಶ! ಆ ಅನೇಕ ರಥಗಳು, ಅನೇಕ ಶೂರ, ಕೃತಾಸ್ತ್ರ, ಯುದ್ಧ ದುರ್ಮದರು ಎಲ್ಲಿದ್ದಾರೋ ಅಲ್ಲಿಗೆ, ಅವರು ಸೇನೆಗಳನ್ನು ಸಂಹರಿಸುವ ಮೊದಲೇ ಕುದುರೆಗಳನ್ನು ಓಡಿಸು! ಹೀಗೆ ಅಮಿತೌಜಸ ಕೌಂತೇಯನು ಹೇಳಲು ವಾರ್ಷ್ಣೇಯನು ಶ್ವೇತಹಯಗಳನ್ನು ಕಟ್ಟಿದ್ದ ರಥವನ್ನು ಕೌರವ ಮಹಾಸೇನೆಯಿರುವಲ್ಲಿಗೆ ಕೊಂಡೊಯ್ದನು. ಕ್ರುದ್ಧನಾಗಿರುವ ಅರ್ಜುನನು ಕೌರವರನ್ನು ಸಮೀಪಿಸಿದನು. ಭೀಷ್ಮನನ್ನು ರಕ್ಷಿಸುತ್ತಿದ್ದ ಆ ರಾಜರ ಬಳಿ ಹೋಗಿ ಕೌಂತೇಯನು ಸುಶರ್ಮಣನಿಗೆ ಹೇಳಿದನು: ನೀನು ಯುದ್ಧದಲ್ಲಿ ಅತ್ಯಂತ ಶ್ರೇಷ್ಠನೆಂದೂ ಬಹುಕಾಲದಿಂದ ನೀನು ನನಗೆ ವೈರಿಯೆಂದು ತಿಳಿದಿರುತ್ತೇನೆ. ನಮಗೆ ಮಾಡಿದ ಮೋಸಗಳ ಸುದಾರುಣ ಫಲವನ್ನು ಇಂದು ನೋಡು! ಇಂದು ನಿನಗೆ ನಿನ್ನ ಪೂರ್ವ ಪಿತಾಮಹರ ದರ್ಶನ ಮಾಡಿಸುತ್ತೇನೆ. ಹೀಗೆ ಶತ್ರುಘಾತಿ ಬೀಭತ್ಸುವು ಹೇಳುತ್ತಿದ್ದುದನ್ನು ಕೇಳಿಯೂ ರಥಯೂಥಪ ಸುಶರ್ಮನು ಪೌರುಷದ ಮಾತುಗಳನ್ನು ಏನನ್ನೂ ಶುಭವಾಗಲೀ ಅಶುಭವಾಗಲೀ ಆಡಲಿಲ್ಲ. ಅನೇಕ ರಾಜರಿಂದ ಆವೃತನಾಗಿ ವೀರ ಅರ್ಜುನನನ್ನು ಮುಂದಿನಿಂದ, ಹಿಂದಿನಿಂದ, ಬದಿಗಳಿಂದ ಮತ್ತು ಎಲ್ಲ ಕಡೆಗಳಿಂದ ಸುತ್ತುವರೆದು ಯುದ್ಧದಲ್ಲಿ ಧೃತರಾಷ್ಟ್ರ ಪುತ್ರರೊಡನೆ ಅರ್ಜುನನನ್ನು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರಗಳಿಂದ ಮುಚ್ಚಿಬಿಟ್ಟನು. ಆಗ ಕೌರವರ ಮತ್ತು ಪಾಂಡವರ ನಡುವೆ ರಕ್ತದ ನೀರು ಹರಿದ ಮಹಾ ಸಂಗ್ರಾಮವು ನಡೆಯಿತು.

ಶರಗಳಿಂದ ಹೊಡೆಯಲ್ಪಟ್ಟ ಬಲಶಾಲಿ ಧನಂಜಯನು ಕಾಲಿನಿಂದ ತುಳಿಯಲ್ಪಟ್ಟ ನಾಗದಂತೆ ನಿಟ್ಟುಸಿರು ಬಿಡುತ್ತಾ ನಕ್ಕು ರಣದಲ್ಲಿ ಒಂದೊಂದೇ ಬಾಣಗಳಿಂದ ಮಹಾರಥರ ಚಾಪಗಳನ್ನು ಕತ್ತರಿಸಿದನು. ರಣದಲ್ಲಿ ಆ ವೀರ್ಯವಂತ ರಾಜರ ಧನುಸ್ಸುಗಳನ್ನು ಕ್ಷಣಮಾತ್ರದಲ್ಲಿ ಕತ್ತರಿಸಿ ಅವರನ್ನು ಉಳಿಸಬಾರದೆಂದು ನಿಶ್ಚಯಿಸಿ ಬಾಣಗಳಿಂದ ಹೊಡೆದನು. ಶಕ್ರಸುತನಿಂದ ಹೊಡೆಯಲ್ಪಟ್ಟ ಅವರು ರಕ್ತದಿಂದ ತೋಯ್ದು, ಗಾಯಗೊಂಡ ಶರೀರವುಳ್ಳವರಾಗಿ, ಶಿರಗಳು ತುಂಡಾಗಿ, ಅಸುವನ್ನು ನೀಗಿ, ಕವಚಗಳು ಕಳಚಿ ಕೆಳಗೆ ಬಿದ್ದರು. ಪಾರ್ಥನ ಬಲದಿದ ಪರಾಜಿತರಾಗಿ ಅವರು ವಿಚಿತ್ರರೂಪಗಳಲ್ಲಿ ನೆಲದ ಮೇಲೆ ಬಿದ್ದು ಒಂದೇ ಬಾರಿಗೆ ವಿನಾಶಹೊಂದಿದರು. ರಾಜಪುತ್ರರು ಯುದ್ಧದಲ್ಲಿ ಹತರಾದುದನ್ನು ನೋಡಿ ತ್ರಿಗರ್ತರಾಜನು ಕ್ಷಣದಲ್ಲಿ ಆಗಮಿಸಿದನು. ಅವರ ರಥಗಳ ಹಿಂಬಾಗದಲ್ಲಿದ್ದ ಮೂವತ್ತೆರಡು ರಕ್ಷಕರೂ ಸೇರಿ ಪಾರ್ಥನ ಮೇಲೆ ಎರಗಿದರು. ಅವರು ಪಾರ್ಥನನ್ನು ಸುತ್ತುವರೆದು ಘೋರವಾಗಿ ಶಬ್ಧಮಾಡುವ ಚಾಪಗಳನ್ನು ಸೆಳೆದು ಮೋಡಗಳು ಮಳೆಯಿಂದ ಪರ್ವತವನ್ನು ಮುಚ್ಚುವಂತೆ ಬಾಣಗಳ ಮಳೆಯನ್ನು ಸುರಿಸಿ ಪಾರ್ಥನನ್ನು ಮುಚ್ಚಿದರು. ಆ ಶರಗಳ ಗುಂಪುಗಳ ಮಳೆಯಿಂದ ಪೀಡಿತನಾದ ಧನಂಜಯನು ರೋಷಗೊಂಡವನಾಗಿ ಎಣ್ಣೆಯಲ್ಲಿ ಅದ್ದಿದ್ದ ಅರವತ್ತು ಶರಗಳಿಂದ ಆ ರಥದ ಹಿಂಬಾಗದ ರಕ್ಷಕರನ್ನು ಹೊಡೆದು ಉರುಳಿಸಿದನು. ಅರವತ್ತು ರಥರನ್ನು ಸೋಲಿಸಿ ಯಶಸ್ವೀ ಧನಂಜಯನು ಸಂತೋಷಗೊಂಡನು. ಜಿಷ್ಣುವು ರಾಜರ ಸೇನೆಯನ್ನು ಸಂಹರಿಸಿ ಭೀಷ್ಮನ ವಧೆಗೆ ತ್ವರೆಮಾಡಿದನು.

ತ್ರಿಗರ್ತರಾಜನು ತನ್ನ ಬಂಧುವರ್ಗದ ಮಹಾರಥರು ನಿಹತರಾದುದನ್ನು ನೋಡಿ ಉಳಿದ ನರಾಧಿಪರನ್ನು ಕರೆದುಕೊಂಡು ಪಾರ್ಥನ ವಧೆಗಾಗಿ ತ್ವರೆಮಾಡಿ ಧಾವಿಸಿದನು. ಅಸ್ತ್ರಭೃಥರಲ್ಲಿ ವರಿಷ್ಠರು ಧನಂಜಯನನ್ನು ಆಕ್ರಮಣಿಸಿದುದನ್ನು ನೋಡಿ ಶಿಖಂಡಿಯೇ ಮೊದರಾದವರು ಹರಿತ ಶಸ್ತ್ರಗಳನ್ನು ಹಿಡಿದು ಅವನನ್ನು ರಕ್ಷಿಸಲು ಅರ್ಜುನನ ರಥದ ಬಳಿ ಬಂದರು. ಪಾರ್ಥನಾದರೋ ಮೇಲೆ ಬೀಳುತ್ತಿರುವ ತ್ರಿಗರ್ತರಾಜನೊಡನಿದ್ದ ನರವೀರರನ್ನು ನೋಡಿ, ಗಾಂಡೀವದಿಂದ ಪ್ರಯೋಗಿಸಿದ ನಿಶಿತ ಶರಗಳಿಂದ ಆ ಧನುಷ್ಮಂತರನ್ನು ವಿಧ್ವಂಸಗೊಳಿಸಿ, ಭೀಷ್ಮನಿದ್ದಲ್ಲಿಗೆ ಹೋಗುವಾಗ ರಾಜ ದುರ್ಯೋಧನ ಮತ್ತು ಸೈಂಧವನೇ ಮೊದರಾದವರನ್ನು ನೋಡಿದನು. ತನ್ನನ್ನು ತಡೆಯುತ್ತಿದ್ದ ಅವರೊಡನೆ ಮುಹೂರ್ತಕಾಲ ಬಲದಿಂದ ಹೋರಾಡಿ ಆ ವೀರ ಅನಂತವೀರ್ಯ ಭೀಮಬಲ ಮನಸ್ವಿಯು  ಜಯದ್ರಥಾದಿ ಮಹಾ ತೇಜಸ್ವಿ ನೃಪರನ್ನು ಅಲ್ಲಿಯೇ ಬಿಟ್ಟು, ಶರಚಾಪಗಳನ್ನು ಹಿಡಿದು ಗಾಂಗೇಯನಿದ್ದಲ್ಲಿಗೆ ಬಂದನು.

ಉಗ್ರಬಲ ಅನಂತಕೀರ್ತಿ ಮಹಾತ್ಮ ಯುಧಿಷ್ಠಿರನು ಯುದ್ಧದಲ್ಲಿ ತನ್ನ ಪಾಲಿಗೆ ಬಂದಿದ್ದ ಮದ್ರಾಧಿಪನನ್ನು ಅಲ್ಲಿಯೇ ಬಿಟ್ಟು ಕೋಪಗೊಂಡು ತ್ವರೆಮಾಡಿ ಮಾದ್ರೀಸುತರು ಮತ್ತು ಭೀಮಸೇನರನ್ನೊಡಗೂಡಿ ಭೀಷ್ಮ ಶಾಂತನವನೊಂದಿಗೆ ಯುದ್ಧಮಾಡಲು ಧಾವಿಸಿದನು. ಅವರೆಲ್ಲ ಮಹಾರಥ ಉಗ್ರ ಪಾಂಡುಸುತರು ಒಟ್ಟಾಗಿ ಏಕಕಾಲದಲ್ಲಿ ಸಮರಕ್ಕೆ ಬಂದರೂ ಕೂಡ ಚಿತ್ರಯೋಧಿ, ಮಹಾತ್ಮ ಗಂಗಾಸುತ ಶಾಂತನವನು ವಿವ್ಯಥನಾಗಲಿಲ್ಲ. ಆಗ ಸತ್ಯಸಂಧ, ಉಗ್ರಬಲ, ಮನಸ್ವೀ ರಾಜಾ ಜಯದ್ರಥನು ಉತ್ತಮ ಧನುಸ್ಸಿನಿಂದ ಆ ಮಹಾರಥರ ಚಾಪಗಳನ್ನು ಕತ್ತರಿಸಿ ಜೋರಾಗಿ ನಕ್ಕನು. ಕ್ರೋಧವೆಂಬ ವಿಷವನ್ನೇ ಕಾರುತ್ತಿದ್ದ ಮಹಾತ್ಮಾ ದುರ್ಯೋಧನನು ಯುಧಿಷ್ಠಿರ, ಭೀಮಸೇನ, ಯಮಳರು ಮತ್ತು ಪಾರ್ಥನನ್ನು ಯುದ್ಧದಲ್ಲಿ ಅಗ್ನಿಯಂತೆ ಪ್ರಕಾಶಮಾನ ಬಾಣಗಳಿಂದ ಪ್ರಹರಿಸಿದನು. ದೈತ್ಯಗಣಗಳಿಂದ ಒಟ್ಟಿಗೇ ಪ್ರಹೃತರಾದ ದೇವಗಣಗಳಂತೆ ಅವರು ಕೋಪಿಷ್ಟರಾಗಿದ್ದ ಕೃಪ, ಶಲ್ಯ, ಶಲ, ಮತ್ತು ಚಿತ್ರಸೇನರ ಶರಗಳಿಂದ ಪ್ರಹರಿತರಾದರು.

ಶಾಂತನವನಿಂದ ಶಿಖಂಡಿಯ ಆಯುಧವು ತುಂಡಾಗಿರುವುದನ್ನು ನೋಡಿ ಕೋಪಗೊಂಡ ಮಹಾತ್ಮ ಅಜಾತಶತ್ರುವು ಸಮರದಲ್ಲಿ ಶಿಖಂಡಿಗೆ ಈ ಕ್ರುದ್ಧ ಮಾತುಗಳನ್ನಾಡಿದನು: ಆಗ ನೀನು ನಿನ್ನ ತಂದೆಯ ಎದಿರು “ಮಹಾವ್ರತ ಭೀಷ್ಮನನ್ನು ವಿಮಲಾರ್ಕವರ್ಣದ ಶರಸರಣಿಗಳಿಂದ ಕೊಲ್ಲುತ್ತೇನೆ. ಸತ್ಯವನ್ನೇ ಹೇಳುತ್ತೇನೆ” ಎಂದು ಪ್ರತಿಜ್ಞೆಯನ್ನು ಮಾಡಿದ್ದೆ. ಆದರೆ ಇದನ್ನು ನೀನು ಇನ್ನೂ ಸಫಲಗೊಳಿಸಲಿಲ್ಲ. ದೇವವ್ರತನನ್ನು ಯುದ್ಧದಲ್ಲಿ ನೀನು ಕೊಲ್ಲುತ್ತಿಲ್ಲ. ಮಿಥ್ಯಾಪ್ರತಿಜ್ಞನಾಗಬೇಡ. ಧರ್ಮವನ್ನೂ ಕುಲದ ಕೀರ್ತಿಯನ್ನೂ ರಕ್ಷಿಸು. ಭೀಮವೇಗದಿಂದ ಯುದ್ಧಮಾಡುತ್ತಿರುವ, ನನ್ನ ಸೈನ್ಯ ಸಂಘಗಳೆಲ್ಲವನ್ನೂ ಸುಡುತ್ತಿರುವ, ಕಾಲನಂತೆ ತಿಗ್ಮತೇಜಸ್ವೀ ಬಾಣಜಾಲಗಳಿಂದ ಕ್ಷಣದಲ್ಲಿ ಮೃತ್ಯುವನ್ನೀಡುತ್ತಿರುವ ಈ ಭೀಷ್ಮನನ್ನು ನೋಡು! ಶಾಂತನವನಿಂದ ಚಾಪವನ್ನು ತುಂಡರಿಸಿಕೊಂಡು, ಸಮರದಲ್ಲಿ ಅನಪೇಕ್ಷನಾಗಿ, ಪರಾಜಿತನಾಗಿ, ಬಂಧುಗಳು ಮತ್ತು ಸೋದರರನ್ನು ಬಿಟ್ಟು ನೀನು ಎಲ್ಲಿಗೆ ತಾನೆ ಹೋಗುವೆ? ಇದು ನಿನಗೆ ಅನುರೂಪವಾದುದೆಂದು ಅಂದುಕೊಳ್ಳುವುದಿಲ್ಲ. ದ್ರುಪದನ ಮಗನೇ! ಅನಂತವೀರ್ಯನಾದ ಭೀಷ್ಮನು ಸೈನ್ಯವನ್ನು ಭಗ್ನಗೊಳಿಸಿ ಪಲಾಯನಗೊಳಿಸುತ್ತಿರುವುದನ್ನು ನೋಡಿ ನೀನೂ ಕೂಡ ಭಯಪಟ್ಟಿದ್ದೀಯೆ. ಆದುದರಿಂದ ನಿನ್ನ ಮುಖವು ಬಣ್ಣವನ್ನು ಕಳೆದುಕೊಂಡು ಅಪ್ರಹೃಷ್ಟನಾಗಿರುವೆ. ಮಹಾಹವದಲ್ಲಿ ತೊಡಗಿರುವ ಧನಂಜಯನು ಎಲ್ಲಿದ್ದಾನೆಂದು ತಿಳಿಯದೇ ಇರುವಾಗ ಬೀಷ್ಮನ ಸಂಹಾರಕನೆಂದು ಭುವಿಯಲ್ಲಿಯೇ ಪ್ರಸಿದ್ಧನಾಗಿರುವ ನೀನು ಇಂದು ಹೇಗೆ ತಾನೇ ಭಯಪಡುತ್ತಿರುವೆ?

ಧರ್ಮರಾಜನ ಕಠೋರಶಬ್ಧಗಳನ್ನು ಕೂಡಿದ್ದ, ವಿರೋಧಿಸುವ ಭಾವದಿಂದ ಕೂಡಿದ್ದ ಆ ಮಾತನ್ನು ಕೇಳಿ ಅದನ್ನೇ ಆದೇಶವೆಂದು ತಿಳಿದು ಆ ಮಹಾತ್ಮನು ಭೀಷ್ಮನ ವಧೆಗೆ ತ್ವರೆಮಾಡಿದನು. ಮಹಾವೇಗದಿಂದ ಭೀಷ್ಮನನ್ನು ಆಕ್ರಮಣಿಸಲು ಬರುತ್ತಿದ್ದ ಶಿಖಂಡಿಯನ್ನು ಶಲ್ಯನು ಸುದುರ್ಜಯ ಘೋರ ಶಸ್ತ್ರಗಳಿಂದ ತಡೆದನು. ಯುಗಾಂತದ ಅಗ್ನಿಯ ಸಮನಾದ ಪ್ರಭೆಯನ್ನುಳ್ಳ ಉರಿಯುತ್ತಿರುವ ಅಸ್ತ್ರವನ್ನು ನೋಡಿಯೂ ಕೂಡ ಮಹೇಂದ್ರನಂತಹ ಪ್ರಭಾವವುಳ್ಳ ದ್ರುಪದನ ಮಗನು ಭ್ರಾಂತಗೊಳ್ಳಲಿಲ್ಲ. ಮಹಾಧನುಷ್ಮಂತನು ಆ ಅಸ್ತ್ರಗಳನ್ನು ಪ್ರತಿಬಂಧಿಸುತ್ತಾ ಅಲ್ಲಿಯೇ ನಿಂತಿದ್ದನು. ಶಿಖಂಡಿಯು ಆ ಅಸ್ತ್ರವನ್ನು ಪ್ರತಿಘಾತಿಗೊಳಿಸಲು ಅನ್ಯ ವಾರುಣಾಸ್ತ್ರವನ್ನು ತೆಗೆದುಕೊಂಡು ಆ ಅಸ್ತ್ರದಿಂದ ಅದನ್ನು ನಿವಾರಿಸಿದುದನ್ನು ಆಕಾಶದಲ್ಲಿ ನಿಂತಿದ್ದ ಸುರರೂ ಪರ್ಥಿವರೂ ನೋಡಿದರು. ಭೀಷ್ಮನಾದರೋ ವೀರ ಪಾಂಡುಸುತ ಅಜಮೀಢ ರಾಜ ಯುಧಿಷ್ಠಿರನ ಸುಚಿತ್ರ ಧನುಸ್ಸನ್ನೂ ಧ್ವಜವನ್ನೂ ತುಂಡರಿಸಿ ಗರ್ಜಿಸಿದನು. ಆಗ ಬಾಣಗಳೊಂದಿಗೆ ಧನುಸ್ಸನ್ನು ಅಲ್ಲಿಯೇ ಬಿಸುಟು ಭಯಭೀತನಾದ ಯುಧಿಷ್ಠಿರನನ್ನು ನೋಡಿ ಭೀಮಸೇನನು ಗದೆಯನ್ನು ಹಿಡಿದು ರಣಕ್ಕೆ ಧುಮುಕಿ ಕಾಲ್ನಡುಗೆಯಲ್ಲಿಯೇ ಜಯದ್ರಥನನ್ನು ಆಕ್ರಮಣಿಸಿದನು. ಮಹಾವೇಗದಿಂದ ಗದೆಯೊಂದಿಗೆ ಬೀಳುತ್ತಿದ್ದ ಭೀಮಸೇನನನ್ನು ಜಯದ್ರಥನು ಯಮದಂಡಗಳಂತೆ ಘೋರವಾಗಿರುವ ಐದುನೂರು ನಿಶಿತ ಶರಗಳಿಂದ ಎಲ್ಲ ಕಡೆಗಳಲ್ಲಿ ಪ್ರಹರಿಸಿದನು.

ಆ ಬಾಣಗಳ ಕುರಿತು ಚಿಂತಿಸದೇ ಕ್ರೊಧದಿಂದ ಚೇತನವನ್ನೇ ಕಳೆದುಕೊಂಡಿದ್ದ ತರಸ್ವೀ ವೃಕೋದರನು ಸಮರದಲ್ಲಿ ಸಿಂಧುರಾಜನ ರಥಕ್ಕೆ ಕಟ್ಟಿದ್ದ ಆರಟ್ಟದಲ್ಲಿ ಹುಟ್ಟಿದ್ದ ಸಮಸ್ತ ಕುದುರೆಗಳನ್ನೂ ಕೊಂದನು. ಅದನ್ನು ನೋಡಿ ಸುರರಾಜನಂತೆ ಅಪ್ರತಿಮ ಪ್ರಭಾವಶಾಲಿಯಾದ ಚಿತ್ರಸೇನನು ಭೀಮಸೇನನನ್ನು ವಧಿಸುವ ಸಲುವಾಗಿ ತ್ವರೆಮಾಡಿ ರಥದಲ್ಲಿ ಕುಳಿತು ಅಸ್ತ್ರವನ್ನು ಹಿಡಿದು ಧಾವಿಸಿದನು. ಆಗ ಭೀಮಸೇನನು ಜೋರಾಗಿ ಕೂಗಿ ಯಮದಂಡದಂತಿರುವ ಆ ಗದೆಯನ್ನು ಮೇಲಕ್ಕೆತ್ತಿ ಪ್ರತಿಯುದ್ಧದ ಬೆದರಿಕೆಯನ್ನು ಹಾಕುತ್ತಾ ಎದುರಾದನು. ಅದನ್ನು ನೋಡಿ ಸುತ್ತಲೂ ಇದ್ದ ಕುರುಗಳು ಉಗ್ರನಾದ ಚಿತ್ರಸೇನನನ್ನು ಬಿಟ್ಟು ಮೇಲೆಬೀಳುವ ಗದೆಯಿಂದ ತಪ್ಪಿಸಿಕೊಳ್ಳಲು ಪಲಾಯನಗೈದರು.  ಅತ್ಯಂತ ಮೋಹಕರವಾದ ದಾರುಣವಾದ ಮತ್ತು ಘೋರ ಯುದ್ಧದಲ್ಲಿ ಮಹಾಗದೆಯು ತನ್ನ ಮೇಲೆ ಬೀಳುತ್ತಿರುವುದನ್ನು ನಿರೀಕ್ಷಿಸಿಯೂ ಕೂಡ ಚಿತ್ರಸೇನನು ವಿಮೂಢನಾಗಲಿಲ್ಲ. ಅವನು ವಿಮಲ ಖಡ್ಗವನ್ನೂ ಗುರಾಣಿಯನ್ನೂ ಹಿಡಿದು ಪರ್ವತದ ಮೇಲಿಂದ ಸಿಂಹವು ಧುಮುಕುವಂತೆ ರಥವನ್ನು ಬಿಟ್ಟು ಧುಮುಕಿ ರಣಾಂಗಣದ ಮತ್ತೊಂದು ಕಡೆ ಹೊರಟುಹೋದನು. ಆಶ್ಚರ್ಯವನ್ನುಂಟುಮಾಡುವ ಅವನ ಆ ಮಹತ್ಕಾರ್ಯವನ್ನು ನೋಡಿಯೇ ಕೌರವರು ಸಂಪ್ರಹೃಷ್ಟರಾಗಿ ಎಲ್ಲರೂ ಒಟ್ಟಾಗಿ ಎಲ್ಲ ಕಡೆಗಳಿಂದಲೂ ಕೂಗಿ ಸೇನೆಗಳೊಂದಿಗೆ ಚಿತ್ರಸೇನನನ್ನು ಗೌರವಿಸಿದರು. ವಿರಥನಾಗಿದ್ದ ಮನಸ್ವಿ ಚಿತ್ರಸೇನನ ಬಳಿಬಂದು ಧೃತರಾಷ್ಟ್ರನ ಮಗ ವಿಕರ್ಣನು ಅವನನ್ನು ತನ್ನ ರಥದ ಮೇಲೆ ಏರಿಸಿಕೊಂಡನು.

ಏಳನೆಯ ದಿವಸದ ಯುದ್ಧ ಸಮಾಪ್ತಿ

ಹೀಗೆ ತುಂಬಾ ತುಮುಲವಾಗಿದ್ದ ಸಂಕುಲ ಯುದ್ಧವು ನಡೆಯತ್ತಿರಲು ಶಾಂತನವ ಭೀಷ್ಮನು ಕೂಡಲೇ ಯುಧಿಷ್ಠಿರನ ಮೇಲೆ ಧಾಳಿ ಮಾಡಿದನು. ಆಗ ರಥ-ಆನೆ-ಕುದುರೆಗಳೊಂದಿಗೆ ಸೃಂಜಯರು ನಡುಗಿದರು. ಮತ್ತು ಯುಧಿಷ್ಠಿರನು ಮೃತ್ಯುವಿನ ದವಡೆಗೆ ಬಂದೇಬಿಟ್ಟನೆಂದು ಭಾವಿಸಿದರು. ಯುಧಿಷ್ಠಿರನಾದರೋ ಯಮಳರಿಬ್ಬರನ್ನೊಡಗೂಡಿ ಭೀಷ್ಮನನ್ನು ಎದುರಿಸಿದನು. ಪಾಂಡವನು ಸಹಸ್ರಾರು ಬಾಣಗಳನ್ನು ಪ್ರಯೋಗಿಸಿ ಮೇಘಗಳು ದಿವಾಕರನನ್ನು ಹೇಗೋ ಹಾಗೆ ಭೀಷ್ಮನನ್ನು ಮರೆಮಾಡಿದನು. ಅವನಿಂದ ಬೀಳುತ್ತಿರುವ ನೂರಾರು ಸಹಸ್ರಾರು ಶರಜಾಲಗಳೆಲ್ಲವನ್ನೂ ಗಾಂಗೇಯನು ಸ್ವೀಕರಿಸಿದನು. ಹಾಗೆಯೇ ಭೀಷ್ಮನು ಬಿಟ್ಟ ಶರಶಾಲಗಳು ಆಕಾಶದಲ್ಲಿ ಹಾರಾಡುವ ಬೆಳ್ಳಕ್ಕಿಯ ಸಾಲುಗಳಂತೆ ಕಂಡವು. ನಿಮಿಷಾರ್ಧದಲ್ಲಿ ಭೀಷ್ಮನ ಶರಜಾಲಗಳಿಂದ ಕೌಂತೇಯನು ಕಾಣದಂತಾದನು. ಆಗ ಯುಧಿಷ್ಠಿರನು ಕೌರವ್ಯನ ಮೇಲೆ ಕ್ರುದ್ಧ ಸರ್ಪಗಳ ವಿಷಗಳಂತಿರುವ ನಾರಾಚಗಳನ್ನು ಪ್ರಯೋಗಿಸಿದನು. ಅವನ ಧನುಸ್ಸನ್ನು ಬಿಟ್ಟು ತಲುಪುವುದರೊಳಗೇ ಭೀಷ್ಮನು ಅದನ್ನು ಕ್ಷುರಪ್ರದಿಂದ ತುಂಡರಿಸಿದನು. ಅದನ್ನು ತುಂಡರಿಸಿ ಭೀಷ್ಮನು ಕಾಲಸಮ್ಮಿತವಾದ ನಾರಾಚದಿಂದ ಕೌರವೇಂದ್ರನ ಕಾಂಚನಭೂಷಿತ ಕುದುರೆಗಳನ್ನು ಸಂಹರಿಸಿದನು. ಒಡನೆಯೇ ಕುದುರೆಗಳು ಹತವಾದ ರಥವನ್ನು ತ್ಯಜಿಸಿ ಧರ್ಮಪುತ್ರ ಯುಧಿಷ್ಠಿರನು ಮಹಾತ್ಮ ನಕುಲನ ರಥವನ್ನೇರಿದನು.

ಆಗ ಪರಪುರಂಜಯ ಭೀಷ್ಮನು ಎದುರಾದ ಯಮಳರನ್ನೂ ಕೂಡ ಸಂಕ್ರುದ್ಧನಾಗಿ ಶರಗಳಿಂದ ಮುಚ್ಚಿದನು. ಅವರಿಬ್ಬರೂ ಭೀಷ್ಮನ ಬಾಣಗಳಿಂದ ಪೀಡಿತರಾದುದನ್ನು ನೋಡಿ ಭೀಷ್ಮನ ವಧೆಯನ್ನು ಬಯಸಿ ಯುಧಿಷ್ಠಿರನು ಪರಮ ಚಿಂತೆಗೊಳಗಾದನು. ಆಗ ಯುಧಿಷ್ಠಿರನು ತನ್ನ ವಶದಲ್ಲಿದ್ದ ರಾಜರನ್ನು ಸ್ನೇಹಿತ ಗಣಗಳನ್ನು “ಎಲ್ಲರೂ ಭೀಷ್ಮ ಶಾಂತನವನನ್ನು ಸಂಹರಿಸಿರಿ!” ಎಂದು ಕೂಗಿ ಹುರಿದುಂಬಿಸಿದನು. ಪಾರ್ಥನಾಡಿದುದನ್ನು ಕೇಳಿ ಸರ್ವ ಪಾರ್ಥಿವರೂ ಮಹಾ ರಥಸಮೂಹಗಳಿಂದ ಪಿತಾಮಹನನ್ನು ಸುತ್ತುವರೆದರು. ಅವರಿಂದ ಎಲ್ಲಕಡೆಗಳಿಂದಲೂ ಸುತ್ತುವರೆಯಲ್ಪಟ್ಟಿದ್ದ ದೇವವ್ರತನು ಧನುಸ್ಸಿನೊಂದಿಗೆ ಆಟವಾಡುತ್ತಾ ಮಹಾರಥರನ್ನು ಉರುಳಿಸತೊಡಗಿದನು. ವನದಲ್ಲಿ ಮೃಗಗಳ ಮಧ್ಯೆ ಪ್ರವೇಸಿಸಿದ ಸಿಂಹದ ಮರಿಯಂತೆ ರಣದಲ್ಲಿ ಸಂಚರಿಸಿ ಯುದ್ಧಮಾಡುತ್ತಿದ್ದ ಕೌರವನನ್ನು ಪಾರ್ಥರು ನೋಡಿದರು. ಸಿಂಹವನ್ನು ನೋಡಿದ ಮೃಗಗಣವು ಭಯಪಡುವಂತೆ ಆ ಶೂರರು ಅವನ ಸಾಯಕಗಳಿಂದ ಭಯಪಟ್ಟರು. ವಾಯುವಿನ ಸಹಾಯದಿಂದ ಅಗ್ನಿಯು ಹೇಗೆ ಒಣಹುಲ್ಲನ್ನು ದಹಿಸುತ್ತದೆಯೋ ಹಾಗೆ ಭರತಸಿಂಹನು ಮಾಡುತ್ತಿರುವುದನ್ನು ಕ್ಷತ್ರಿಯರು ನೋಡಿದರು. ಕುಶಲ ನರ ಭೀಷ್ಮನು ಗಳಿತ ಹಣ್ಣುಗಳನ್ನು ತಾಳೆ ಮರದಿಂದ ಉದುರಿಸುವಂತೆ ರಥಿಗಳ ಶಿರಗಳನ್ನು ರಣದಲ್ಲಿ ಬೀಳಿಸಿದನು. ಭೂಮಿಯ ಮೇಲೆ ಶಿರಗಳು ಬೀಳುತ್ತಿರಲು ಕಲ್ಲುಗಳು ಉರುಳಿ ಬೀಳುವಂತೆ ತುಮುಲ ಶಬ್ಧವುಂಟಾಯಿತು.

ಹೀಗೆ ಸುದಾರುಣ ತುಮುಲ ಯುದ್ಧವು ನಡೆಯುತ್ತಿರಲು ಎಲ್ಲ ಸೈನ್ಯಗಳಲ್ಲಿಯೂ ಮಹಾ ಸಂಘರ್ಷಣೆಯು ಪ್ರಾರಂಭವಾಯಿತು. ಎರಡೂ ಪಕ್ಷಗಳ ವ್ಯೂಹಗಳು ಭಗ್ನವಾದ ನಂತರ ಕ್ಷತ್ರಿಯರು ಒಬ್ಬರನ್ನೊಬ್ಬರನ್ನು ಕರೆದು ಪರಸ್ಪರ ಯುದ್ಧಮಾಡತೊಡಗಿದರು. ಶಿಖಂಡಿಯಾದರೋ ಭಾರತರ ಪಿತಾಮಹನ ಬಳಿಸಾರಿ ವೇಗದಿಂದ ಆಕ್ರಮಣಿಸಿ “ನಿಲ್ಲು! ನಿಲ್ಲು!” ಎಂದು ಹೇಳಿದನು. ಆಗ ಭೀಷ್ಮನು ಶಿಖಂಡಿಯ ಸ್ತ್ರೀತ್ವವನ್ನು ಆಲೋಚಿಸಿ ಶಿಖಂಡಿಯನ್ನು ಅನಾದರಿಸಿ ಕ್ರುದ್ಧನಾಗಿ ಸೃಂಜಯರ ಮೇಲೆ ಯುದ್ಧಕ್ಕೆ ಹೋದನು. ಮಹಾರಥ ಭೀಷ್ಮನನ್ನು ನೋಡಿ ಹೃಷ್ಟರಾದ ಸೃಂಜಯರು ಅನೇಕ ಶಂಖನಾದ ಮಿಶ್ರಿತ ವಿವಿಧ ಸಿಂಹನಾದಗೈದರು,

ಸೂರ್ಯನು ಅಪರ ದಿಕ್ಕನ್ನನುಸರಿಸಿ ಹೋಗುತ್ತಿರಲು ರಥಸಮೂಹಗಳ ಸಮ್ಮಿಶ್ರಣ ಯುದ್ಧವು ಪ್ರಾರಂಭವಾಯಿತು. ಆಗ ಪಾಂಚಾಲ್ಯ ಧೃಷ್ಟದ್ಯುಮ್ನ ಮತ್ತು ಮಹಾರಥ ಸಾತ್ಯಕಿಯರು ಶಕ್ತಿ-ತೋಮರ-ಋಷ್ಟಿಗಳಿಂದ ಸೈನ್ಯವನ್ನು ಬಹಳವಾಗಿ ಪೀಡಿಸುತ್ತಾ ಶಸ್ತ್ರಗಳಿಂದ ಅನೇಕ ಕೌರವರನ್ನು ಸಂಹರಿಸಿದರು. ಅವರು ಸಂಹರಿಸುತ್ತಿದ್ದರೂ ಆರ್ಯರಾದ ಕೌರವರು ಯುದ್ಧದಲ್ಲಿ ಮತಿಯನ್ನಿರಿಸಿ ರಣರಂಗವನ್ನು ಬಿಟ್ಟು ಹೋಗಲಿಲ್ಲ. ಆ ಮಹಾರಥರು ಉತ್ಸಾಹದಿಂದಲೇ ಯೋಧರನ್ನು ಸಂಹರಿಸಿದರು. ಮಹಾತ್ಮ ಪಾರ್ಷತನಿಂದ ವಧಿಸಲ್ಪಡುತ್ತಿದ್ದ ಕೌರವ ಮಹಾತ್ಮರಿಂದ ಮಹಾ ಆಕ್ರಂದನವು ಕೇಳಿಬರುತ್ತಿತ್ತು. ಕೌರವರ ಆ ಘೋರ ನಿನಾದವನ್ನು ಕೇಳಿ ಮಹಾರಥರಾದ ಅವಂತಿಯ ವಿಂದಾನುವಿಂದರು ಪಾರ್ಷತನನ್ನು ಎದುರಿಸಿದರು.

ಆ ಮಹಾರಥರು ಅವನ ಕುದುರೆಗಳನ್ನು ಸಂಹರಿಸಿ ಒಡನೆಯೇ ಶರವರ್ಷದಿಂದ ಪಾರ್ಷತನನ್ನು ಮುಚ್ಚಿದರು. ಕೂಡಲೇ ಮಹಾಬಲ ಪಾಂಚಾಲ್ಯನು ರಥದಿಂದ ಹಾರಿ ವೇಗವಾಗಿ ಮಹಾತ್ಮ ಸಾತ್ಯಕಿಯ ರಥವನ್ನೇರಿದನು. ಆಗ ರಾಜಾ ಯುಧಿಷ್ಠಿರನು ಮಹಾ ಸೇನೆಯಿಂದ ಆವೃತನಾಗಿ ಕ್ರುದ್ಧನಾಗಿ ಪರಂತಪರಾದ ಅವಂತಿಯವರ ಮೇಲೆ ಧಾಳಿನಡೆಸಿದನು. ಹಾಗೆಯೇ ಧೃತರಾಷ್ಟ್ರ ಪುತ್ರರೂ ಕೂಡ ಎಲ್ಲರೂ ಒಟ್ಟಾಗಿ ಅವಂತಿಯ ವಿಂದಾನುವಿಂದರನ್ನು ಸುತ್ತುವರೆದು ನಿಂತರು. ಅರ್ಜುನನೂ ಕೂಡ ಸಂಕ್ರುದ್ಧನಾಗಿ ವಜ್ರಪಾಣಿಯು ಅಸುರರೊಂದಿಗೆ ಹೇಗೋ ಹಾಗೆ ಕ್ಷತ್ರಿಯರೊಂದಿಗೆ ಯುದ್ಧಮಾಡಿದನು. ದುರ್ಯೋಧನನಿಗೆ ಪ್ರಿಯವಾದುದನ್ನು ಮಾಡುತ್ತಾ ಕ್ರುದ್ಧನಾದ ದ್ರೋಣನೂ ಕೂಡ ಅಗ್ನಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಸರ್ವ ಪಾಂಚಾಲರನ್ನು ವಧಿಸುತ್ತಿದ್ದನು. ದುರ್ಯೋಧನನನ್ನು ಮುಂದಿಟ್ಟುಕೊಂಡು ಧಾರ್ತರಾಷ್ಟ್ರರು ಭೀಷ್ಮನನ್ನು ಸುತ್ತುವರೆದು ಪಾಂಡವರೊಂದಿಗೆ ಯುದ್ಧಮಾಡಿದರು. ಸೂರ್ಯನು ಕೆಂಪುಬಣ್ಣಕ್ಕೆ ತಿರುಗುತ್ತಿರಲಾಗಿ ರಾಜಾ ದುರ್ಯೋಧನನು ಕೌರವರೆಲ್ಲರಿಗೆ “ಬೇಗ ಮುಗಿಸಿ!” ಎಂದು ಹೇಳಿದನು. ಆಗ ಅವರು ದುಷ್ಕರ ಕರ್ಮಮಾಡುತ್ತಾ ಯುದ್ಧಮಾಡುತ್ತಿರಲು ಭಾಸ್ಕರನು ಗಿರಿಯನ್ನೇರಿ ಅಸ್ತನಾಗಲು ಬೆಳಕೇ ಇಲ್ಲದಾಯಿತು.

ಸಾಯಂಕಾಲದ ಹೊತ್ತಿಗೆ ಕ್ಷಣದಲ್ಲಿ ರಕ್ತವೇ ಪ್ರವಾಹವಾಗಿದ್ದ ನರಿಗಳ ಸಮೂದಿಂದ ಕೂಡಿದ್ದ ಘೋರ ನದಿಯೇ ಹರಿಯತೊಡಗಿತು. ಮಂಗಳಕರವಾಗಿ ಭೈರವ ಸ್ವರದಲ್ಲಿ ಕೂಗುತ್ತಿದ್ದ ನರಿಗಳಿಂದ ಮತ್ತು ಭೂತಸಮೂಗಳಿಂದ ತುಂಬಿಹೋಗಿದ್ದ ರಣರಂಗವು ಘೋರವಾಗಿತ್ತು. ರಾಕ್ಷಸರು ಪಿಶಾಚಿಗಳು ಮತ್ತು ಇನ್ನೂ ಇತರ ಮಾಂಸಾಹಾರಿಗಳು ನೂರಾರು ಸಾವಿರಾರು ಸಂಖ್ಯೆಗಳಲ್ಲಿ ಎಲ್ಲಾಕಡೆ ಕಾಣಿಸಿಕೊಂಡವು. ಆಗ ಅರ್ಜುನನು ಸಮರಮಧ್ಯದಲ್ಲಿ ಅನುಯಾಯಿ ರಾಜರೊಂದಿಗೆ ಸುಶರ್ಮನನ್ನು ಸೋಲಿಸಿ ತನ್ನ ಶಿಬಿರದ ಕಡೆ ನಡೆದನು. ಕೌರವ್ಯ ರಾಜಾ ಯುಧಿಷ್ಠಿರನೂ ಕೂಡ ರಾತ್ರಿಯಾಗಲು ತನ್ನ ಸಹೋದರರೊಂದಿಗೆ ಸೇನೆಗಳಿಂದ ಆವೃತನಾಗಿ ತನ್ನ ಶಿಬಿರಕ್ಕೆ ತೆರಳಿದನು. ಭೀಮಸೇನನೂ ಕೂಡ ದುರ್ಯೋಧನ ಪ್ರಮುಖ ರಥರನ್ನು ಯುದ್ಧದಲ್ಲಿ ಸೋಲಿಸಿ ತನ್ನ ಶಿಬಿರದ ಕಡೆ ನಡೆದನು. ನೃಪತಿ ದುರ್ಯೋಧನನೂ ಕೂಡ ಶಾಂತನವ ಭೀಷ್ಮನನ್ನು ಸುತ್ತುವರೆದು ವೇಗವಾಗಿ ಶಿಬಿರದ ಕಡೆ ಹೊರಟನು. ದ್ರೋಣ, ದ್ರೌಣಿ, ಕೃಪ, ಶಲ್ಯ ಮತ್ತು ಸಾತ್ವತ ಕೃತವರ್ಮ ಎಲ್ಲರೂ ಸೇನೆಗಳಿಂದ ಪರಿವೃತರಾಗಿ ಶಿಬಿರದ ಕಡೆ ತೆರಳಿದರು. ಅದೇ ರೀತಿ ಸಾತ್ಯಕಿ ಮತ್ತು ಪಾರ್ಷತ ಧೃಷ್ಟದ್ಯುಮ್ನರು ರಣದಲ್ಲಿ ಯೋಧರಿಂದೊಡಗೂಡಿ ಶಿಬಿರದ ಕಡೆ ನಡೆದರು.

ಹೀಗೆ ಪರಂತಪರಾದ ಕೌರವರು ಮತ್ತು ಪಾಂಡವರು ಒಟ್ಟಿಗೇ ನಿಶಾಕಾಲದಲ್ಲಿ ಹಿಂದಿರುಗಿದರು. ತಮ್ಮ ಶಿಬಿರಗಳಿಗೆ ತೆರಳಿ ಪಾಂಡವರು ಮತ್ತು ಕುರುಗಳು ಪರಸ್ಪರರನ್ನು ಹೊಗಳಿಕೊಳ್ಳುತ್ತಾ ವಿಶ್ರಾಂತಿಪಡೆದರು. ಆ ಶೂರರು ಯಥಾವಿಧಿಯಾಗಿ ತಮ್ಮ ತಮ್ಮ ಗುಲ್ಮಗಳನ್ನಿರಿಸಿ, ತಮಗೆ ಚುಚ್ಚಿಕೊಂಡಿದ್ದ ಬಾಣಗಳ ತುಂಡುಗಳನ್ನು ಕಿತ್ತು ತೆಗೆದುಹಾಕಿ ವಿವಿಧ ಜಲಗಳಿಂದ ಸ್ನಾನಮಾಡಿದರು. ಆಗ ಎಲ್ಲರೂ ಸ್ವಸ್ತಿಗಳನ್ನು ಮಾಡಿಸಿಕೊಂಡು, ವಂದಿಗಳು ಸ್ತುತಿಸಲು ಯಶಸ್ವಿಗಳು ಗೀತವಾದ್ಯಗಳ ಶಬ್ಧಗಳೊಂದಿಗೆ ರಮಿಸಿದರು. ಮುಹೂರ್ತಕಾಲ ಅಲ್ಲಿ ಎಲ್ಲವೂ ಸ್ವರ್ಗಸನ್ನಿಭವಾಗಿತ್ತು. ಅಲ್ಲಿ ಮಹಾರಥರು ಯುದ್ಧದ ಕುರಿತು ಏನನ್ನೂ ಮಾತನಾಡಿಕೊಳ್ಳಲಿಲ್ಲ. ಅನೇಕ ಆನೆ-ಕುದುರೆಗಳಿಂದ ಕೂಡಿದ್ದ ಆ ಸೇನೆಗಳಲ್ಲಿ ಆಯಾಸಗೊಂಡ ಜನರು ಅಲ್ಲಿ ಮಲಗಿರಲು ಅದು ಪ್ರೇಕ್ಷಣೀಯವಾಗಿ ಕಂಡಿತು.

Leave a Reply

Your email address will not be published. Required fields are marked *