ಬಕವಧ
ಮಹಾರಥಿ ಕುಂತೀಪುತ್ರರು ಏಕಚಕ್ರಕ್ಕೆ ಹೋಗಿ ಬ್ರಾಹ್ಮಣನ ಮನೆಯಲ್ಲಿ ಸ್ವಲ್ಪ ಸಮಯ ಉಳಿದರು. ಅವರೆಲ್ಲರೂ ಭಿಕ್ಷೆಬೇಡಲು ಹೋಗುತ್ತಿದ್ದಾಗ ರಮಣೀಯ ವಿವಿಧ ವನ, ರಾಜರ ದೇಶ ಮತ್ತು ನದೀ ಸರೋವರಗಳನ್ನು ಕಂಡರು. ತಮ್ಮ ಸುಗುಣಗಳಿಂದಾಗಿ ನಗರವಾಸಿಗಳಿಗೆ ಪ್ರಿಯದರ್ಶನರಾದರು. ಪ್ರತಿ ರಾತ್ರಿಯೂ ಅವರು ಭಿಕ್ಷವನ್ನು ಕುಂತಿಗೆ ತಂದು ಒಪ್ಪಿಸುತ್ತಿದ್ದರು. ಅದನ್ನು ಅವಳು ವಿಂಗಡಿಸಿದ ನಂತರ ಅವರವರ ಪಾಲುಗಳನ್ನು ಸೇವಿಸುತ್ತಿದ್ದರು: ಅರ್ಧವನ್ನು ತಾಯಿಯೂ ಸೇರಿ ಪರಂತಪ ವೀರರು ತಿನ್ನುತ್ತಿದ್ದರು. ಇನ್ನೊಂದು ಅರ್ಧ ಭಾಗವನ್ನೆಲ್ಲಾ ಮಹಾಬಲಿ ಭೀಮನು ತಿನ್ನುತ್ತಿದ್ದನು. ಈ ರೀತಿ ಆ ಮಹಾತ್ಮರು ಅಲ್ಲಿ ವಾಸಿಸುತ್ತಾ ಬಹಳಷ್ಟು ಸಮಯ ಕಳೆಯಿತು. ಒಮ್ಮೆ ಭರತರ್ಷಭರು ಭಿಕ್ಷಕ್ಕೆಂದು ಹೋಗಿದ್ದಾಗ, ಪೃಥಳಿಗೆ ಸಂಗಾತಿಯಾಗಿ ಭೀಮನು ಮನೆಯಲ್ಲಿಯೇ ಉಳಿದುಕೊಂಡನು. ಆಗ ಇದ್ದಕ್ಕಿದ್ದಹಾಗೆ ಕುಂತಿಯು ಬ್ರಾಹ್ಮಣನ ಮನೆಯಿಂದ ದುಃಖಭರಿತ, ಘೋರ ಮಹಾಶಬ್ದವನ್ನು ಕೇಳಿದಳು. ಪರಿವೇದನೆಯಲ್ಲಿ ಅಳುತ್ತಿರುವ ಎಲ್ಲರನ್ನೂ ಕೇಳಿ, ಸಾಧುಸ್ವಭಾವದ ಆ ದೇವಿಗೆ ಸಹಿಸಲು ಸಾಧ್ಯವಾಗಲಿಲ್ಲ. ದುಃಖದಿಂದ ಅವಳ ಹೃದಯವು ತುಮುಲದಲ್ಲಿರಲು ಕಲ್ಯಾಣಿ ಪೃಥೆಯು ಭೀಮನಿಗೆ ಈ ಕೃಪಾನ್ವಿತ ಮಾತುಗಳನ್ನು ಹೇಳಿದಳು:
“ಪುತ್ರ! ಧಾರ್ತರಾಷ್ಟ್ರರಿಗೆ ತಿಳಿಯದಂತೆ ಈ ಬ್ರಾಹ್ಮಣನ ಮನೆಯಲ್ಲಿ ನಾವು ಸುಖದಿಂದ ವಾಸಿಸುತ್ತಿದ್ದೇವೆ. ಮತ್ತು ನಾವು ಇಲ್ಲಿ ಸತ್ಕೃತರಾಗಿದ್ದೇವೆ. ಬೇರೆಯವರ ಮನೆಯಲ್ಲಿ ಸುಖವಾಗಿ ವಾಸಿಸುತ್ತಿರುವವರು ಬಯಸುವಂತೆ ನಾನೂ ಕೂಡ ಈ ಬ್ರಾಹ್ಮಣನಿಗೆ ಏನನ್ನಾದರೂ ಒಳ್ಳೆಯದನ್ನು ಮಾಡಬೇಕೆಂದು ಸದಾ ಯೋಚಿಸುತ್ತಿದ್ದೆ. ಪುರುಷನು ಮಾಡಿದ ಇಂಥಹದು ಎಂದೂ ನಷ್ಟವಾಗುವುದಿಲ್ಲ. ಬೇರೆಯವರಿಗೆ ಯಾರು ಸಹಾಯಮಾಡುತ್ತಾನೋ ಅವನಿಗೆ ಅದಕ್ಕಿಂತಲೂ ಹೆಚ್ಚಿನ ಸಹಾಯವನ್ನು ಮಾಡಬೇಕು. ಈ ಬ್ರಾಹ್ಮಣನಿಗೆ ಯಾವುದೋ ಒಂದು ದುಃಖವು ಬಂದೊದಗಿದೆಯೆಂದು ತೋರುತ್ತಿದೆ. ಈಗ ಅವನಿಗೆ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ.”
ಭೀಮನು ಹೇಳಿದನು:
“ಅವನಿಗೆ ಬಂದ ದುಃಖ ಏನು ಮತ್ತು ಎಲ್ಲಿಂದ ಎಂದು ತಿಳಿದುಕೊಳ್ಳೋಣ. ಅದನ್ನು ತಿಳಿದ ನಂತರ ಎಷ್ಟೇ ದುಷ್ಕರವಾಗಿರಲಿ ಏನು ಮಾಡಬೇಕೆಂದು ನಿರ್ಧರಿಸೋಣ.”
ಹೀಗೆ ಅವರೀರ್ವರೂ ಮಾತನಾಡಿಕೊಳ್ಳುತ್ತಿರುವಾಗ ಆ ಬ್ರಾಹ್ಮಣ ಮತ್ತು ಅವನ ಪತ್ನಿಯ ಆರ್ತಸ್ವರವು ಮತ್ತೊಮ್ಮೆ ಕೇಳಿಬಂದಿತು. ಕುಂತಿಯು ತಕ್ಷಣ ತ್ವರೆಮಾಡಿ ಕಟ್ಟಿದ ಕರುವನ್ನು ನೋಡಲು ಬರುವ ಗೋವಿನಂತೆ ಆ ಮಹಾತ್ಮ ಬ್ರಾಹ್ಮಣನ ಅಂತಃಪುರವನ್ನು ಪ್ರವೇಶಿಸಿದಳು. ಅಲ್ಲಿ ಅವಳು ದುಃಖದಿಂದ ವಿಕೃತಾನನ ಬ್ರಾಹ್ಮಣನನ್ನು ಅವನ ಭಾರ್ಯೆ, ಮಗ ಮತ್ತು ಮಗಳೊಡನೆ ಕಂಡಳು. ಬ್ರಾಹ್ಮಣನು ಹೇಳಿದನು:
“ಬೆಂಕಿಯಂತೆ ಕೇವಲ ದುಃಖವನ್ನೇ ಕೊಡುವ ಈ ಅನರ್ಥಕ, ದುಃಖಮೂಲ, ಪರಾಧೀನ ಲೋಕ ಜೀವನಕ್ಕೇ ಧಿಕ್ಕಾರ! ಜೀವನವೇ ಪರಮ ದುಃಖ; ಜೀವನವೇ ಪರಮ ಜ್ವರ; ಮತ್ತು ಬದುಕು ಕೇವಲ ದುಃಖಗಳ ಆಯ್ಕೆಯನ್ನು ನೀಡುತ್ತದೆ. ಧರ್ಮ, ಅರ್ಥ, ಕಾಮ ಎಲ್ಲವೂ ಒಬ್ಬನಿಗೇ ದೊರೆಯುವುದಿಲ್ಲ. ಇದೇ ಜನರ ಪರಮ ದುಃಖ. ಕೆಲವರು ಮೋಕ್ಷವೇ ಪರವೆಂದು ಹೇಳುತ್ತಾರೆ. ಆದರೆ ಅದೇ ಎಲ್ಲಿಯೂ ಇಲ್ಲ. ಹಣಸಂಪಾದನೆಯು ಕೇವಲ ನರಕವನ್ನೇ ಕೊಡುತ್ತದೆ. ಹಣದ ಹಿಂದೆ ಹೋಗುವುದು ಬಹಳ ದುಃಖವನ್ನು ತಂದೊಡ್ಡುತ್ತದೆ. ಹೆಚ್ಚು ಹಣವನ್ನು ಹೊಂದಿದವನಿಗೆ ದುಃಖವೂ ಹೆಚ್ಚಾಗಿರುತ್ತದೆ. ನನ್ನ ಮಕ್ಕಳು ಮತ್ತು ಪತ್ನಿಯ ಸಹಿತ ಸುರಕ್ಷಿತವಾದಲ್ಲಿಗೆ ಹೋಗುವುದರ ಹೊರತಾಗಿ ಈ ಆಪತ್ತಿನಿಂದ ತಪ್ಪಿಸಿಕೊಳ್ಳಲು ನನಗೆ ಬೇರೆ ಯಾವ ಮಾರ್ಗವೂ ತೋರುತ್ತಿಲ್ಲ. ಹಿಂದೆಯೇ ನಾನು ಕ್ಷೇಮಕರ ಬೇರೆ ಎಲ್ಲಿಯಾದರೂ ಹೋಗೋಣ ಎಂದು ಹೇಳಿದ್ದೆ. ಆದರೆ ನೀನು ನನ್ನ ಮಾತುಗಳನ್ನು ಕೇಳಲಿಲ್ಲ. “ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನನ್ನ ತಂದೆಯೂ ಇಲ್ಲಿಯೇ ಇರುತ್ತಾನೆ” ಎನ್ನುವ ದಡ್ಡ ಮಾತುಗಳಿಂದ ನನ್ನ ಎಲ್ಲ ಒತ್ತಾಯಗಳನ್ನೂ ದೂರಮಾಡಿದೆ. ಈಗ ನಿನ್ನ ತಂದೆ ತಾಯಿಯರು ಸ್ವರ್ಗವಾಸಿಗಳಾಗಿದ್ದಾರೆ, ಬಂಧುಗಳು ಕೂಡ ತೀರಿಕೊಂಡಿದ್ದಾರೆ. ಇಲ್ಲಿಯೇ ವಾಸಿಸುವುದರಿಂದ ಸಂತೋಷವಾದರೂ ಏನು ದೊರೆಯುತ್ತಿದೆ? ಅಂದು ನೀನು ಬಂಧುಗಳ ಸಲುವಾಗಿ ನನ್ನ ಮಾತುಗಳನ್ನು ಕೇಳದೇ ಇದ್ದುದರಿಂದ ಈಗ ನಮ್ಮ ಕುಟುಂಬವನ್ನು ಕಳೆದುಕೊಳ್ಳುವ ಕಾಲ ಬಂದೊದಗಿತಲ್ಲ ಎಂದು ನನಗೆ ಅತ್ಯಂತ ದುಃಖವಾಗುತ್ತಿದೆ. ಅಥವಾ ಇದು ನನ್ನ ವಿನಾಶವನ್ನೇ ತರುತ್ತದೆ. ಏಕೆಂದರೆ, ಕರುಣೆಯಿಲ್ಲದವನಂತೆ ಬಂಧು ಯಾರನ್ನೂ ಬಲಿಕೊಟ್ಟು ಸ್ವಯಂ ನಾನು ಜೀವಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ! ನಿತ್ಯವೂ ನನ್ನ ತಾಯಿಯ ಸಮನಾಗಿರುವ ಸಹಧರ್ಮಚಾರಿಣಿ ನಿನ್ನನ್ನು ದೇವರಿಂದಲೇ ನನ್ನ ಸಖಿಯಾಗಿ ಪಡೆದಿದ್ದೇನೆ. ನೀನೇ ನನ್ನ ಪರಮ ಗತಿ. ಸದಾ ನನ್ನ ಗಾರ್ಹಸ್ಥ್ಯಭಾಗಿಯಾಗಿರೆಂದು ನಿನ್ನ ತಂದೆ ತಾಯಿಗಳು ನಿನ್ನನು ನನಗೆ ಮದುವೆ ಮಾಡಿಕೊಟ್ಟರು. ನಾನೂ ಕೂಡ ನ್ಯಾಯದಂತೆ ಮಂತ್ರಪೂರ್ವಕವಾಗಿ ನಿನ್ನನ್ನು ಮೆಚ್ಚಿ ಮದುವೆಯಾದೆ. ಈಗ ನನ್ನ ಜೀವನವನ್ನು ಉಳಿಸಿಕೊಳ್ಳಲೋಸುಗ ಕುಲೀನೆ, ಶೀಲಸಂಪನ್ನೆ, ಸಾಧ್ವಿ, ಅನಪಕಾರಿಣೀ, ನಿತ್ಯವೂ ಅನುವ್ರತಳಾದ, ನನ್ನ ಮಕ್ಕಳ ತಾಯಿಯಾದ ನಿನ್ನನ್ನು ಪರಿತ್ಯಜಿಸಲು ಶಕ್ತನಿಲ್ಲ. ಯೌವನದ ಚಿಹ್ನೆಗಳಿನ್ನೂ ಕಂಡುಬಂದಿರದ ಈ ಬಾಲಕಿ ಅಪ್ರಾಪ್ತವಯಸ್ಕ ನನ್ನ ಈ ಮಗಳನ್ನು ನಾನಾಗಿಯೇ ಹೇಗೆ ಪರಿತ್ಯಾಗಮಾಡಬಲ್ಲೆ? ಮಹಾತ್ಮ ಧಾತ್ರುವು ಭರ್ತುವೋರ್ವನಿಗಾಗಿ ಅವಳನ್ನು ನನ್ನಲ್ಲಿ ಒತ್ತೆ ಇಟ್ಟಿದ್ದಾನೆ. ಮಗಳ ಮಗನಿಂದ ತೆರೆಯಲ್ಪಡುವ ಲೋಕಗಳಿಗೆ ನನ್ನ ಪಿತೃಗಳ ಸಹಿತ ನಾನೂ ಭಾಗಧಾರಿಯಾಗಿದ್ದೇನೆ. ಆದುದರಿಂದ ನಾನೇ ಜನ್ಮವಿತ್ತಿರುವ ಈ ಬಾಲಕಿಯನ್ನು ಹೇಗೆ ತಾನೆ ಪರಿತ್ಯಾಗ ಮಾಡಬಲ್ಲೆ? ತಂದೆಯಾದವನಿಗೆ ಮಗನಲ್ಲಿ ಹೆಚ್ಚು ಪ್ರೀತಿಯಿರುತ್ತದೆ ಮತ್ತು ಪುತ್ರಿಯರಲ್ಲಿ ಪ್ರೀತಿ ಅಷ್ಟು ಇರುವುದಿಲ್ಲ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನನಗೆ ಇಬ್ಬರೂ ಒಂದೇ. ಉತ್ತಮ ಲೋಕಗಳ, ಸಂತಾನದ ಮತ್ತು ಶಾಶ್ವತ ಸುಖದ ನೆಲೆಯಾಗಿರುವ ಪಾಪರಹಿತ ಈ ಬಾಲೆಯನ್ನು ನಾನು ಹೇಗೆ ತಾನೆ ಪರಿತ್ಯಾಗ ಮಾಡಲು ಪ್ರಯತ್ನಿಸುವೆ? ನನ್ನನ್ನು ನಾನೇ ಬಲಿಕೊಟ್ಟು ಪ್ರೇತವಶನಾದರೂ ಪರಿತಪಿಸುತ್ತೇನೆ. ಏಕೆಂದರೆ ನನ್ನಿಂದ ವಿಮುಕ್ತರಾದ ಇವರು ಈ ಲೋಕದಲ್ಲಿ ಜೀವಿಸಲಾರರು ಎನ್ನುವುದು ಸ್ಪಷ್ವ. ಇವರಲ್ಲಿ ಯಾರನ್ನು ಪರಿತ್ಯಾಗಮಾಡಿದರೂ ತಿಳಿದವರು ಗರ್ಹಿತನೆಂದು ನಿಂದಿಸುತ್ತಾರೆ. ಆದರೆ ಅತ್ಮಪರಿತ್ಯಾಗ ಮಾಡಿದರೂ ಇವರೆಲ್ಲರೂ ನನ್ನ ವಿನಹ ನಾಶಗೊಳ್ಳುತ್ತಾರೆ. ಈ ಕಷ್ಟಕರ ಮಹಾ ಆಪತ್ತಿನಲ್ಲಿ ಸಿಲುಕಿರುವ ನನಗೆ ಪಾರಾಗಲು ಶಕ್ಯವಾಗುತ್ತಿಲ್ಲ. ಸಬಾಂಧವನಾದ ನನಗೆ ಹೋಗಲಿಕ್ಕೆ ದಾರಿಯಾದರು ಏನಿದೆ? ಎಲ್ಲರೂ ಕೂಡಿ ಸಾಯುವುದೇ ಶ್ರೇಯಸ್ಸು. ನಾನು ಬದುಕಿರುವುದಂತೂ ಸಾಧ್ಯವಿಲ್ಲ.”
ಬ್ರಾಹ್ಮಣಿಯು ಹೇಳಿದಳು:
“ಒಬ್ಬ ಸಾಮಾನ್ಯನಂತೆ ಸಂತಾಪಿಸುವುದು ನಿನಗೆ ಸರಿಯಲ್ಲ. ನಿನಂಥಹ ವಿದ್ವಾಂಸನಿಗೆ ಸಂತಾಪ ಮಾಡುವ ಕಾಲವು ಇದಲ್ಲ. ಮಾನವರೆಲ್ಲರೂ ಅವಶ್ಯವಾಗಿ ನಿಧನ ಹೊಂದಲೇ ಬೇಕು. ಅವಶ್ಯವಾಗಿರುವುದಕ್ಕೆ ಸಂತಾಪಪಡುವುದು ಸರಿಯಲ್ಲ. ಭಾರ್ಯೆ, ಪುತ್ರ ಮತ್ತು ಪುತ್ರಿ ಎಲ್ಲರನ್ನೂ ಮನುಷ್ಯನು ತನಗಾಗಿಯೇ ಬಯಸುತ್ತಾನೆ. ಸುಬುದ್ಧಿಯಿಂದ ವ್ಯಥೆಪಡುವುದನ್ನು ಬಿಡು. ಅಲ್ಲಿಗೆ ಸ್ವಯಂ ನಾನೇ ಹೋಗುತ್ತೇನೆ. ತನ್ನ ಪ್ರಾಣವನ್ನಾದರೂ ಪರಿತ್ಯಜಿಸಿ ಭರ್ತೃವಿಗೆ ಹಿತವನ್ನು ಮಾಡುವುದು ಈ ಲೋಕದ ನಾರಿಯರ ಸನಾತನ ಪರಮ ಕರ್ತವ್ಯ. ನಾನು ಹೀಗೆ ಮಾಡುವುದು ನಿನಗೆ ಇಲ್ಲಿ ಸುಖವನ್ನು ತರುತ್ತದೆ ಮತ್ತು ನನಗೆ ಇಲ್ಲಿ ಮತ್ತು ಅಲ್ಲಿ ಎರಡೂ ಕಡೆ ಅಕ್ಷಯ ಯಶಸ್ಸನ್ನು ತರುತ್ತದೆ. ನಾನು ನಿನಗೆ ಹೇಳಿದ್ದುದೇ ಶ್ರೇಷ್ಠ ಧರ್ಮ. ಇದರಿಂದ ನಿನ್ನ ಅರ್ಥ ಮತ್ತು ಧರ್ಮ ಇವೆರಡೂ ವೃದ್ಧಿಯಾಗುತ್ತವೆ. ಯಾವುದು ಬೇಕೆಂದು ಭಾರ್ಯೆಯನ್ನು ಬಯಸುತ್ತಾರೋ ಅದು ನಿನಗೆ ಈಗಾಗಲೇ ನನ್ನಿಂದ ದೊರಕಿದೆ. ಕನ್ಯೆ ಮತ್ತು ಕುಮಾರರನ್ನಿತ್ತು ನೀನು ನನ್ನನ್ನು ಋಣಮುಕ್ತಳನ್ನಾಗಿ ಮಾಡಿದ್ದೀಯೆ. ನೀನು ಈ ಇಬ್ಬರು ಮಕ್ಕಳನ್ನೂ ಪೋಷಿಸಿ ರಕ್ಷಿಸಲು ಸಮರ್ಥನಾಗಿರುವೆ. ಆದರೆ ನಿನ್ನಹಾಗೆ ನಾನು ಇವರ ಪೋಷಣೆ-ರಕ್ಷಣೆಗೆ ಸಮರ್ಥಳಿಲ್ಲ. ನಿನ್ನನ್ನು ಕಳೆದುಕೊಂಡ ನನಗೆ ಎಲ್ಲ ಅವಶ್ಯಕತೆಗಳೂ ಆಪತ್ತುಗಳಾಗುವವು. ನೀನಿಲ್ಲದೇ ಇನ್ನೂ ಬಾಲ್ಯದಲ್ಲಿರುವ ಈ ಮಕ್ಕಳಿಬ್ಬರು ಮತ್ತು ನಾನು ಹೇಗೆ ಇರಬಲ್ಲೆವು? ನೀನಿಲ್ಲದೇ ಅನಾಥಳಾಗಿ ವಿಧವೆಯಾದ ನಾನು ಈ ಇಬ್ಬರು ಸಣ್ಣ ಮಕ್ಕಳನ್ನು ಸನ್ಮಾರ್ಗದಲ್ಲಿದ್ದುಕೊಂಡು ಹೇಗೆ ತಾನೇ ಸಾಕಬಲ್ಲೆ? ನಿನ್ನೊಡನೆ ಸಂಬಂಧವನ್ನು ಬೆಳೆಸಲು ಅಯೋಗ್ಯರಾಗಿ, ಅಹಂಕಾರದಿಂದ ಸೊಕ್ಕಿರುವವರಿಂದ ಈ ಮಗಳನ್ನು ಹೇಗೆ ತಾನೆ ರಕ್ಷಿಸಬಲ್ಲೆ? ನೆಲದ ಮೇಲೆ ಎಸೆದ ಮಾಂಸದ ತುಂಡನ್ನು ಪಕ್ಷಿಗಳೆಲ್ಲವೂ ಹೇಗೆ ಅಪೇಕ್ಷಿಸುತ್ತವೆಯೋ ಹಾಗೆ ವೀರ ಪತಿಯಿಲ್ಲದ ಸ್ತ್ರೀಯನ್ನು ಎಲ್ಲರೂ ಬಯಸುತ್ತಾರೆ. ನನ್ನನ್ನು ವಿಚಲಿತಳನ್ನಾಗಿ ಮಾಡಿ ಕೋರುತ್ತಿರುವಾಗ ಸಜ್ಜನರ ಮಾರ್ಗದಲ್ಲಿಯೇ ಇರಲು ಶಕ್ತಳಾಗುವುದಿಲ್ಲ. ನಿನ್ನ ಕುಲದ ಈ ಏಕೈಕ ಅವಿವಾಹಿತ ಬಾಲೆಯನ್ನು ಪಿತೃಪಿತಾಮಹರ ಮಾರ್ಗದಲ್ಲಿ ನಡೆಯುವಂತೆ ಹೇಗೆ ನಿರ್ವಹಿಸಬಲ್ಲೆ? ಧರ್ಮದರ್ಶಿ ನೀನಿಲ್ಲದೇ ಸರ್ವದಿಂದಲೂ ವಂಚಿತನಾಗುವ ಈ ಅನಾಥ ಬಾಲಕನಲ್ಲಿ ಅಪೇಕ್ಷಿತ ಗುಣಗಳನ್ನು ಬೆಳೆಸಲು ನನಗೆ ಹೇಗೆ ತಾನೆ ಸಾಧ್ಯ? ಶೂದ್ರರು ವೇದಶೃತಿಗಾಗಿ ಹೇಗೋ ಹಾಗೆ ಅನರ್ಹರು ನಿನ್ನ ಈ ಅನಾಥ ಬಾಲೆಯನ್ನು ಕೇಳುತ್ತಾ ನನ್ನನ್ನು ಪೀಡಿಸುತ್ತಾರೆ. ನಿನ್ನ ಸದ್ಗುಣಗಳಿಂದ ಸಂವರ್ಧಿತಳಾದ ಅವಳನ್ನು ನಾನು ಕೊಡಲು ಇಷ್ಟಪಡದಿದ್ದರೆ ಅವರು ಕಾಗೆಗಳು ಯಜ್ಞದಿಂದ ಹವಿಸ್ಸನ್ನು ಅಪಹರಿಸುವಂತೆ ಇವಳನ್ನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋಗಬಹುದು. ನಿನಗೆ ಅನುರೂಪನಾಗಿ ಬೆಳೆಯದಿದ್ದ ನಿನ್ನ ಈ ಮಗನನ್ನು ಮತ್ತು ಅನರ್ಹರ ವಶಳಾಗುವ ನಿನ್ನ ಈ ಮಗಳನ್ನು ನೋಡಿದ ಜನರು ನನ್ನನ್ನು ದೂರುತ್ತಾರೆ. ಅವಲಿಪ್ತ ಜನರ ಮಧ್ಯೆ ಈ ಲೋಕದಲ್ಲಿ ನನ್ನನ್ನು ನಾನೇ ಗುರುತಿಸಲಾರದಂತಾಗಿ ನಿಸ್ಸಂಶಯವಾಗಿಯೂ ಸಾಯುತ್ತೇನೆ. ನಿನ್ನ ಮತ್ತು ನನ್ನಿಂದ ವಿಹೀನರಾದ, ನಿನ್ನಿಂದ ನನ್ನಲ್ಲಿ ಹುಟ್ಟಿದ ಈ ಇಬ್ಬರು ಮಕ್ಕಳೂ ನೀರು ಬತ್ತಿಹೋದಾಗ ಸಾಯುವ ಮೀನುಗಳಂತೆ ವಿನಾಶರಾಗುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಈ ರೀತಿ ನಿನ್ನಿಂದ ವಿಹೀನರಾದ ನಾವು ಮೂವರೂ ಸರ್ವಥಾ ವಿನಾಶಹೊಂದುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ನೀನು ನನ್ನನ್ನು ಪರಿತ್ಯಜಿಸುವುದು ಒಳ್ಳೆಯದು. ಬ್ರಾಹ್ಮಣ! ಭರ್ತುವಿನ ಮೊದಲೇ ಪರಾಗತಿಯನ್ನು ಹೊಂದುವುದು ಸ್ತ್ರೀಯರಿಗೆ ಅತ್ಯಂತ ಶ್ರೇಷ್ಠ. ಪುತ್ರರ ಆಶ್ರಯದಲ್ಲಿ ಜೀವಿಸುವುದು ಸರಿಯಲ್ಲ. ನಿನಗಾಗಿ ನಾನು ನನ್ನ ಮಗ, ಮಗಳು, ಬಾಂಧವರು ಮತ್ತು ನನ್ನ ಈ ಜೀವವನ್ನೂ ಪರಿತ್ಯಜಿಸಲು ಸಿದ್ಧಳಿದ್ದೇನೆ. ಯಜ್ಞ, ತಪಸ್ಸು, ನಿಯಮ, ಮತ್ತು ದಾನ ಈ ಎಲ್ಲವುದಕ್ಕಿಂತಲೂ ನಿತ್ಯವೂ ಭರ್ತೃವಿನ ಪ್ರಿಯಹಿತ ನಿರತಳಾಗಿರುವುದು ಸ್ತ್ರೀಯ ವಿಶೇಷತೆ. ಆದುದರಿಂದ ನಾನು ನಿನಗೆ ಹೇಳುತ್ತಿರುವುದು ನಿನ್ನ ಇಷ್ಟ, ಹಿತ ಮತ್ತು ಕುಲಕ್ಕೆ ಪರಮ ಸಮ್ಮತ ಧರ್ಮ. ಆಪದ್ಧರ್ಮದಿಂದ ಮೋಕ್ಷವನ್ನು ಪಡೆಯಲು ಮಕ್ಕಳು, ಹಣ, ಸುಹೃದಯ ಪ್ರಿಯರು ಮತ್ತು ಭಾರ್ಯೆ ಬೇಕೆಂದು ತಿಳಿದಿರುವವರು ಅಭಿಪ್ರಾಯ ಪಡುತ್ತಾರೆ. ಒಂದು ಕಡೆ ಸಂಪೂರ್ಣ ಕುಲವನ್ನು ಮತ್ತು ಇನ್ನೊಂದು ಕಡೆ ತನ್ನನ್ನು ಇರಿಸಿ ತುಲನೆ ಮಾಡಿದರೆ ಅವೆಲ್ಲವೂ ಸೇರಿ ಅವನನ್ನು ಹೋಲುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ. ಈ ಕೆಲಸವು ನನ್ನಿಂದಲೇ ನಡೆಯಲಿ. ನೀನು ನಿನ್ನನ್ನು ಉಳಿಸಿಕೋ. ನನಗೆ ಹೋಗಲಿಕ್ಕೆ ಅನುಮತಿಯನ್ನು ನೀಡು. ನನ್ನ ಈ ಮಕ್ಕಳನ್ನು ಪರಿರಕ್ಷಿಸು. ಸ್ತ್ರೀಯನ್ನು ವಧಿಸಬಾರದೆಂದು ಧರ್ಮಜ್ಞರು ಧರ್ಮನಿಶ್ಚಯಗಳಲ್ಲಿ ಹೇಳುತ್ತಾರೆ. ರಾಕ್ಷಸರೂ ಧರ್ಮಜ್ಞರಿರುತ್ತಾರೆ. ಹಾಗಾಗಿ ಅವನು ನನ್ನನ್ನು ಕೊಲ್ಲದೆಯೂ ಇರಬಹುದು. ಪುರುಷನನ್ನು ಕೊಲ್ಲುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಸ್ತ್ರೀಯನ್ನು ಕೊಲ್ಲುತ್ತಾನೆ ಎನ್ನುವುದರಲ್ಲಿ ಅನುಮಾನವಿದೆ. ಆದುದರಿಂದ ಧರ್ಮಜ್ಞನಾದ ನೀನು ನನಗೆ ಹೊರಡಲು ಅನುಮತಿಯನ್ನು ನೀಡು. ನಾನು ಸಾಕಷ್ಟು ಭೋಗಿಸಿದ್ದೇನೆ. ಸಂತೋಷಪಟ್ಟಿದ್ದೇನೆ. ಧರ್ಮದಲ್ಲಿ ನಡೆದುಕೊಂಡಿದ್ದೇನೆ. ಮತ್ತು ನಿನ್ನಿಂದ ಈ ಮುದ್ದು ಮಕ್ಕಳನ್ನು ಪಡೆದಿದ್ದೇನೆ. ಸಾಯಲು ನನಗೆ ದುಃಖವೇನೂ ಆಗುತ್ತಿಲ್ಲ. ಮಕ್ಕಳ ತಾಯಿಯಾಗಿದ್ದೇನೆ. ಮುದಿಯಾಗುತ್ತಿದ್ದೇನೆ. ನಿನಗೆ ಪ್ರಿಯವಾದುದನ್ನು ಮಾಡಬೇಕೆಂದು ಸದಾ ಯೋಚಿಸುತ್ತಿದ್ದೆ. ಹೀಗಾಗಿ ಇವೆಲ್ಲವನ್ನು ನೋಡಿಯೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನನ್ನು ಕಳೆದುಕೊಂಡರೂ ಕೂಡ ನಿನಗೆ ಅನ್ಯ ಸ್ತ್ರೀಯರು ದೊರಕುತ್ತಾರೆ. ನಿನ್ನ ಧರ್ಮವು ಪುನಃ ಚ್ಯುತಿಯಾಗುವುದಿಲ್ಲ. ಬಹುಪತ್ನಿಯರನ್ನು ವಿವಾಹವಾಗುವುದು ಪುರುಷರಿಗೆ ಅಧರ್ಮವೆಂದೆನಿಸಿಕೊಳ್ಳುವುದಿಲ್ಲ. ಆದರೆ ಮೊದಲ ಗಂಡನನ್ನು ಬಿಟ್ಟು ಮದುವೆಯಾಗುವುದು ಸ್ತ್ರಿಯರಿಗೆ ಮಹಾ ಅಧರ್ಮವೆನಿಸುತ್ತದೆ. ಇವೆಲ್ಲವನ್ನೂ ನೋಡಿ ಮತ್ತು ನಿನಗೆ ಆತ್ಮತ್ಯಾಗವು ಸರಿಯಲ್ಲ ಎಂದು ತಿಳಿದು ನೀನು ನಿನ್ನನ್ನು, ಕುಲವನ್ನು ಮತ್ತು ಮಕ್ಕಳನ್ನು ನನ್ನ ಮೂಲಕವೇ ಉಳಿಸಿಕೊಳ್ಳಬೇಕು.”
ಹೀಗೆ ಹೇಳಿದ ಅವಳನ್ನು ಪತಿಯು ಆಲಿಂಗಿಸಿದನು. ಪತ್ನಿಯೂ ಸೇರಿ ಇಬ್ಬರೂ ದುಃಖ ಪೀಡಿತರಾಗಿ ಒಂದೇ ಸಮನೆ ಕಣ್ಣೀರಿಟ್ಟರು. ದುಃಖಿತರಾಗಿದ್ದ ಅವರ ಆ ಮಾತುಗಳನ್ನು ಕೇಳಿದ ಮಗಳು ದುಃಖಪರಿತಾಂಗಿಯಾಗಿ ಈ ಮಾತುಗಳನ್ನು ಹೇಳಿದಳು:
“ಅತ್ಯಂತ ದುಃಖಾರ್ತರಾಗಿ ಅನಾಥರಂತೆ ಈ ರೀತಿ ಏಕೆ ಅಳುತ್ತಿರುವಿರಿ? ನನ್ನ ಮಾತುಗಳನ್ನೂ ಸ್ವಲ್ಪ ಕೇಳಿ. ನಂತರ ಸರಿಯೆನಿಸಿದುದನ್ನು ಮಾಡುವಿರಂತೆ. ಧರ್ಮದ ಪ್ರಕಾರ ಯೌವನಕ್ಕೆ ಬಂದನಂತರ ನನ್ನನ್ನು ನೀವು ಪರಿತ್ಯಜಿಸಲೇ ಬೇಕು. ಇದರಲ್ಲಿ ಸಂಶಯವಿಲ್ಲ. ಪರಿತ್ಯಜಿಸಲೇ ಬೇಕಾದ ನನ್ನನ್ನು ಈಗಲೇ ಪರಿತ್ಯಜಿಸಿ ನನ್ನೊಬ್ಬಳಿಂದ ನೀವು ಮೂವರೂ ಉಳಿದುಕೊಳ್ಳಿ. ಮಕ್ಕಳು ನಮ್ಮನ್ನು ಪಾರುಮಾಡುತ್ತಾರೆ ಎನ್ನುವ ಉದ್ದೇಶದಿಂದಲೇ ಮಕ್ಕಳನ್ನು ಬಯಸುತ್ತಾರೆ. ಅಂತಹ ಕಾಲವು ಬಂದಿರುವಾಗ ನನ್ನನ್ನು ದೋಣಿಯನ್ನಾಗಿಸಿ ಪಾರುಮಾಡಿ. ಪುತ್ರನು ಎಲ್ಲ ರೀತಿಯಲ್ಲೂ ಪಾರುಮಾಡುತ್ತಾನೆ - ಇಲ್ಲಿ ಈ ಜೀವನದಲ್ಲಿ ಆಪತ್ತಿನಿಂದ ಪಾರು ಮಾಡುತ್ತಾನೆ ಅಥವಾ ಮರಣದ ನಂತರ ಆತ್ಮವನ್ನು ಪಾರುಮಾಡುತ್ತಾನೆ. ಆದುದರಿಂದಲೇ ತಿಳಿದವರು ಅವನಿಗೆ ಪುತ್ರ ಎಂದು ಕರೆಯುತ್ತಾರೆ. ಪಿತಾಮಹರು ನಿತ್ಯ ಮಗಳ ಮಕ್ಕಳನ್ನೂ ಸಹ ಬಯಸುತ್ತಾರೆ. ನನ್ನ ತಂದೆಯ ಜೀವವನ್ನು ಉಳಿಸಿ ನಾನು ಅವರನ್ನೂ ಸಹ ಪಾರುಮಾಡುತ್ತೇನೆ. ನೀನು ಈ ಲೋಕದಿಂದ ಹೊರಟು ಹೋದರೆ ಈ ನನ್ನ ಬಾಲಕ ತಮ್ಮನು ಸ್ವಲ್ಪ ಸಮಯದಲ್ಲಿಯೇ ನಾಶಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ತಂದೆಯೂ ಸ್ವರ್ಗವಾಸಿಯಾಗಿ, ನನ್ನ ತಮ್ಮನೂ ನಾಶವಾಗಿ ಪಿತೃಗಳ ಪಿಂಡವು ನಿಂತುಹೋದರೆ ಅವರಿಗೆ ಒಳ್ಳೆಯದಾಗುವುದಿಲ್ಲ. ತಂದೆ, ತಾಯಿ, ಹಾಗೂ ತಮ್ಮನಿಂದ ತ್ಯಕ್ತಳಾದ ನಾನಾದರೂ ದುಃಖದಿಂದ ಅತಿದುಃಖವನ್ನು ಹೊಂದಿ ನಾಶವಾಗುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಹೀಗಾಗುವುದು ಸರಿಯೆಂದು ನನಗೆ ಕಾಣುವುದಿಲ್ಲ. ನೀನೊಬ್ಬನು ಆರೋಗ್ಯದಿಂದ ಬಿಡುಗಡೆಯಾದೆಯೆಂದರೆ ನನ್ನ ತಾಯಿ, ಇನ್ನೂ ಬಾಲಕನಾಗಿರುವ ನನ್ನ ತಮ್ಮ, ವಂಶ, ಪಿಂಡ ಎಲ್ಲವೂ ನಿಸ್ಸಂಶಯವಾಗಿ ನೆಲೆಗೊಳ್ಳುವವು. ಪುತ್ರನು ಆತ್ಮ, ಭಾರ್ಯೆಯು ಸಖಿ ಮತ್ತು ಮಗಳು ಆಪತ್ತು ಎನ್ನುವುದಿಲ್ಲವೇ? ನಿನ್ನ ಈ ಆಪತ್ತಿನಿಂದ ಪಾರಾಗು ಮತ್ತು ನನ್ನನ್ನು ಧರ್ಮದೊಡನೆ ಜೋಡಿಸು. ತಂದೇ! ಬಾಲೆಯಾದ ನಾನು ನೀನಿಲ್ಲದೇ ಅನಾಥಳೂ, ಕರುಣಾಸ್ಪದಳೂ ಆಗಿ ಎಲ್ಲೆಲ್ಲಿಯೋ ತಿರುಗಾಡಬೇಕಾಗಿ ದೀನಳಾಗುವೆ. ನಾನು ಕುಲವನ್ನು ಈ ಕಷ್ಟದಿಂದ ಪಾರುಮಾಡಿ ಬಹಳ ದುಷ್ಕರ ಕಾರ್ಯವನ್ನು ಮಾಡಿದ ಫಲವನ್ನು ಅನುಭವಿಸುತ್ತೇನೆ. ಅಥವಾ ನನ್ನನ್ನು ಬಿಟ್ಟು ನೀನು ಅವನಲ್ಲಿಗೆ ಹೋದರೆ ನಾನು ವಿಪತ್ತಿಗೊಳಗಾಗುವೆನು. ನನ್ನ ಕುರಿತೂ ಯೋಚಿಸು. ಆದುದರಿಂದ ನಮಗಾಗಿ, ಧರ್ಮಕ್ಕಾಗಿ, ಮತ್ತು ಸಂತಾನಕ್ಕಾಗಿ ನಿನ್ನನ್ನು ನೀನು ಪರಿರಕ್ಷಿಸು. ತ್ಯಕ್ತವ್ಯಳಾದ ನನ್ನನ್ನು ಪರಿತ್ಯಜಿಸು. ಅವಶ್ಯಕ ಕಾರ್ಯವನ್ನು ಕೈಗೊಳ್ಳುವುದರಲ್ಲಿ ವಿಳಂಬ ಮಾಡಬೇಡ. ನೀನು ನನಗೆ ಕೊಡುವ ತರ್ಪಣವೇ ನನಗೆ ಹಿತವನ್ನು ತರುತ್ತದೆ. ನೀನು ಸ್ವರ್ಗಸ್ಥನಾಗಿ ನಾವು ಬೇರೆಯವರಿಂದ ಅನ್ನವನ್ನು ಬೇಡುತ್ತಾ ನಾಯಿಗಳಂತೆ ಅಲೆಯುವುದಕ್ಕಿಂತ ಹೆಚ್ಚಿನ ದುಃಖವಾದರೂ ಏನಿದೆ? ಈ ಕಷ್ಟದಿಂದ ಬಂಧುಗಳ ಸಮೇತ ನೀನು ಆರೋಗ್ಯವಾಗಿ ನಿರ್ಮುಕ್ತನಾದೆಯೆಂದರೆ ಅಮೃತಲೋಕದಲ್ಲಿ ವಾಸಿಸುವ ನಾನೂ ಸುಖದಿಂದಿರುವೆ.”
ಈ ರೀತಿಯ ಬಹುವಿಧ ಪರಿವೇದನೆಯನ್ನು ನೋಡಿದ ತಂದೆ, ತಾಯಿ ಮತ್ತು ಆ ಕನ್ಯೆ ಮೂವರೂ ಬಹಳ ರೋದಿಸಿದರು. ಅವರೆಲ್ಲರೂ ರೋದಿಸುತ್ತಿರುವುದನ್ನು ನೋಡಿದ ಅವರ ಬಾಲಕ ಮಗನು ಕಣ್ಣುಗಳನ್ನು ಅಗಲವಾಗಿ ತೆರೆದು ತೊದಲು ನುಡಿಗಳಿಂದ ಈ ಮುದ್ದು ಮಾತುಗಳನ್ನಾಡಿದನು: ಮುಗುಳ್ನಗೆಯಿಂದ
“ಅಳಬೇಡ ಅಪ್ಪಾ! ಅಳಬೇಡ ಅಮ್ಮಾ! ಅಳಬೇಡ ಅಕ್ಕಾ!”
ಎನ್ನುತ್ತಾ ಪ್ರತಿಯೊಬ್ಬರ ಬಳಿಯೂ ಅಂಬೆಗಾಲಿಡುತ್ತಾ ಹೋದನು. ಆಗ ಅವನು ಒಂದು ಹುಲ್ಲುಕಡ್ಡಿಯನ್ನು ಹಿಡಿದು ಸಂತೋಷದಿಂದ ಹೇಳಿದನು:
“ಇದರಿಂದ ಆ ನರಭಕ್ಷಕ ರಾಕ್ಷಸನನ್ನು ಸಂಹರಿಸುತ್ತೇನೆ!”
ದುಃಖದಿಂದ ಆವೃತರಾಗಿದ್ದರೂ ಸಹ ಆ ಬಾಲಕನ ತೊದಲು ಮಾತುಗಳನ್ನು ಕೇಳಿದ ಅವರಿಗೆ ಮಹಾ ಹರ್ಷವಾಯಿತು. ಇದೇ ಸರಿಯಾದ ಸಮಯವೆಂದು ತಿಳಿದು ಕುಂತಿಯು ಅವರನ್ನು ಸಮೀಪಿಸಿ ಸತ್ತವರನ್ನು ಬದುಕಿಸಬಲ್ಲ ಅಮೃತದಂತಿರುವ ಈ ಮಾತುಗಳನ್ನಾಡಿದಳು:
“ಈ ದುಃಖದ ಮೂಲ ಯಾವುದು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯ ಬಯಸುತ್ತೇನೆ. ಅದನ್ನು ತಿಳಿದ ನಂತರ ಹೋಗಲಾಡಿಸಬಹುದಾದರೆ ಹೋಗಲಾಡಿಸುತ್ತೇನೆ.”
ಬ್ರಾಹ್ಮಣನು ಹೇಳಿದನು:
“ತಪೋಧನೇ! ನೀನು ಒಳ್ಳೆಯ ಮಾತುಗಳನ್ನೇ ಆಡಿದ್ದೀಯೆ. ಆದರೆ ಈ ದುಃಖವನ್ನು ಹೋಗಲಾಡಿಸಲು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ಈ ನಗರದ ಸಮೀಪದಲ್ಲಿ ಬಕ ಎನ್ನುವ ರಾಕ್ಷಸನು ವಾಸಿಸುತ್ತಾನೆ. ಆ ಮಹಾಬಲಿಯು ಈ ಜನಪದ ಮತ್ತು ನಗರಗಳನ್ನು ಆಳುತ್ತಿದ್ದಾನೆ. ಈ ಪುರುಷಾದಕ ದುರ್ಬುದ್ಧಿಯು ಮಾನುಷ ಮಾಂಸವನ್ನು ತಿಂದು ಕೊಬ್ಬಿದ್ದಾನೆ. ಅಸುರರಾಜ, ರಾಕ್ಷಸಬಲಸಮನ್ವಿತ ಆ ಬಲಶಾಲಿಯು ಜನಪದ, ನಗರ ಮತ್ತು ದೇಶವನ್ನು ರಕ್ಷಿಸುತ್ತಿದ್ದಾನೆ. ಅವನಿಂದಾಗಿ ನಮಗೆ ಶತ್ರುಗಳಿಂದ ಅಥವಾ ಯಾರಿಂದಲೂ ಭಯವೇ ಇಲ್ಲದಂತಾಗಿದೆ. ಅವನ ವಿಹಿತ ವೇತನವು ಒಂದು ಬಂಡಿ ಭೋಜನ, ಎರಡು ಎಮ್ಮೆಗಳು, ಮತ್ತು ಅವುಗಳನ್ನು ಅವನಲ್ಲಿಗೆ ತೆಗೆದುಕೊಂಡು ಹೋಗುವ ಓರ್ವ ಪುರುಷ. ಒಬ್ಬೊಬ್ಬರಾಗಿ ಎಲ್ಲರೂ ಅವನಿಗೆ ಭೋಜನವನ್ನು ಕಳುಹಿಸುತ್ತಾರೆ. ಆದರೆ ಬಹಳ ವರ್ಷಗಳಿಗೊಮ್ಮೆ ಬರುವ ಬಾರಿಯು ಬಂದಾಗ ಮನುಷ್ಯನಿಗೆ ಅದರಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ. ಒಂದುವೇಳೆ ಯಾರಾದರೂ ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅವನನ್ನು ಆ ರಾಕ್ಷಸನು ಪುತ್ರ ಮತ್ತು ಪತ್ನಿ ಸಹಿತ ಕೊಂದು ಭಕ್ಷಿಸುತ್ತಾನೆ. ವೈತ್ರಕೀಯ ಗೃಹದಲ್ಲಿರುವ ನಮ್ಮ ರಾಜನು ತನ್ನ ಜನರನ್ನು ಈ ಪೀಡೆಯಿಂದ ಶಾಶ್ವತವಾಗಿ ಮುಕ್ತಿಗೊಳಿಸಲು ಯಾವುದೇ ರೀತಿಯ ಯೋಜನೆಯನ್ನೂ ಹೊಂದಿಲ್ಲ. ಕುರಾಜನ ಆಶ್ರಯದಲ್ಲಿ ಯಾವಾಗಲೂ ಉದ್ವಿಗ್ನರಾಗಿರುವ, ದುರ್ಬಲ ರಾಜನ ರಾಜ್ಯದಲ್ಲಿರುವ ನಾವು ಇದಕ್ಕೆ ಅರ್ಹರಾಗಿದ್ದೇವೆ. ಬ್ರಾಹ್ಮಣರು ಯಾರ ಮಾತಿಗೂ ಒಳಪಡದೇ ಯಾರ ಇಚ್ಛೆಗೂ ಅಧೀನರಾಗಿ ನಡೆದುಕೊಳ್ಳದೇ ಇಚ್ಛೆಬಂದಂತೆ ಸಂಚರಿಸುವ ಪಕ್ಷಿಗಳೆಂದೂ ತಮ್ಮ ಗುಣಗಳಿಗೆ ಮಾತ್ರ ಅಧೀನರಾಗಿರುತ್ತಾರೆಂದು ಹೇಳುತ್ತಾರೆ. ಮೊದಲು ರಾಜನನ್ನು ಹುಡುಕಿಕೊಳ್ಳಬೇಕು ನಂತರ ಭಾರ್ಯೆಯನ್ನು ಮತ್ತು ಧನವನ್ನು. ಈ ಮೂರನ್ನೂ ಪಡೆದವನು ತನ್ನ ಪುತ್ರರನ್ನು ಮತ್ತು ಬಾಂಧವರನ್ನು ಪಾಲಿಸಬಹುದು. ಆದರೆ ನಾನು ಈ ಮೂರನ್ನೂ ವಿಪರೀತವಾಗಿ ಪಡೆದೆ (ಮೊದಲು ಧನ, ನಂತರ ಪತ್ನಿ ಮತ್ತು ಅಂತ್ಯದಲ್ಲಿ ರಾಜ). ಈಗ ನಾವು ಈ ಆಪತ್ತಿನಲ್ಲಿ ಸಿಲುಕಿದ್ದೇವೆ ಮತ್ತು ನಾವೇ ಇದನ್ನು ಅನುಭವಿಸಬೇಕು. ಆ ಕುಲವಿನಾಶಕ ಬಾರಿಯು ಈಗ ನಮಗೆ ಬಂದಿದೆ. ಅವನಿಗೆ ನಾನು ಓರ್ವ ಪುರುಷನನ್ನು ಭೋಜನವಾಗಿ ಕಳುಹಿಸಬೇಕಾಗಿದೆ. ಎಲ್ಲಿಂದಲಾದರೂ ವ್ಯಕ್ತಿಯೋರ್ವನನ್ನು ಖರೀದಿಸೋಣ ಎಂದರೂ ನನ್ನಲ್ಲಿ ಹಣವಿಲ್ಲ. ನನ್ನ ಕುಟುಂಬದ ಯಾರನ್ನು ಕೊಡಲೂ ಶಕ್ಯನಾಗಿಲ್ಲ. ಆ ರಾಕ್ಷಸನಿಂದ ಬಿಡುಗಡೆಹೊಂದುವ ಯಾವ ದಾರಿಯೂ ನನಗೆ ಕಾಣುತ್ತಿಲ್ಲ. ಹೀಗೆ ನಾನು ದುಃಖಸಾಗರದಲ್ಲಿ ಮುಳುಗಿ ಯಾವುದೇ ರೀತಿಯ ಬಿಡುಗಡೆ ದೊರೆಯದಂತಾಗಿದ್ದೇನೆ. ಈಗ ನಾನು ನನ್ನ ಇಡೀ ಕುಟುಂಬ ಸಮೇತ ಆ ರಾಕ್ಷಸನಲ್ಲಿಗೆ ಹೋಗುತ್ತೇನೆ. ಆ ಕ್ಷುದ್ರ ರಾಕ್ಷಸನು ನಮ್ಮೆಲ್ಲರನ್ನೂ ತಿನ್ನಲಿ.”
ಕುಂತಿಯು ಹೇಳಿದಳು:
“ನಿನ್ನ ಈ ಪರಿಸ್ಥಿತಿಯ ಕುರಿತು ಸ್ವಲ್ಪವೂ ವಿಷಾದಿಸಬೇಡ. ಆ ರಾಕ್ಷಸನಿಂದ ಬಿಡುಗಡೆ ಹೊಂದಲು ನನಗೆ ಒಂದು ಉಪಾಯವು ತೋಚುತ್ತಿದೆ. ನಿನಗೆ ಒಬ್ಬನೇ ಒಬ್ಬ ಮಗನಿದ್ದಾನೆ ಮತ್ತು ಅವನೂ ಬಾಲಕನಿದ್ದಾನೆ. ಹಾಗೂ ಓರ್ವ ತಪಸ್ವಿನೀ ಕನ್ಯೆಯಿದ್ದಾಳೆ. ನೀನಾಗಲೀ ಅಥವಾ ನಿನ್ನ ಪತ್ನಿಯಾಗಲೀ ಅಲ್ಲಿಗೆ ಹೋಗುವುದು ನನಗೆ ಸರಿಯೆನಿಸುವುದಿಲ್ಲ. ಬ್ರಾಹ್ಮಣ! ನನಗೆ ಐವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬನು ಹೋಗುತ್ತಾನೆ ಮತ್ತು ನಿನ್ನ ಪರವಾಗಿ ಆ ಪಾಪಿ ರಾಕ್ಷಸನಿಗೆ ಬಲಿಯನ್ನು ತೆಗೆದುಕೊಂಡು ಹೋಗುತ್ತಾನೆ.”
ಬ್ರಾಹ್ಮಣನು ಹೇಳಿದನು:
“ನನ್ನ ಜೀವನವನ್ನು ಹಿಡಿದುಕೊಂಡು ಬ್ರಾಹ್ಮಣ ಅತಿಥಿಯೊಬ್ಬನು ನನಗಾಗಿ ತನ್ನ ಪ್ರಾಣವನ್ನು ಬಿಡುವಂಥಹ ಕಾರ್ಯವನ್ನು ಎಂದೂ ಮಾಡುವುದಿಲ್ಲ. ಒಬ್ಬ ಬ್ರಾಹ್ಮಣನಿಗಾಗಿ ತನ್ನನ್ನಾಗಲೀ ಅಥವಾ ತನ್ನ ಮಗನನ್ನಾಗಲೀ ತ್ಯಜಿಸುವುದು ಅಧರ್ಮಿಷ್ಠರಲ್ಲಿ ಅಥವಾ ಅಕುಲೀನರಲ್ಲಿಯೂ ನಡೆಯುವುದಿಲ್ಲ. ನನಗೆ ಯಾವುದು ಶ್ರೇಯಸ್ಸನ್ನು ತಂದು ಕೊಡುತ್ತದೆ ಎನ್ನುವುದನ್ನು ನಾನೇ ಅರ್ಥಮಾಡಿಕೊಳ್ಳಬೇಕು ಎಂದು ನನಗನ್ನಿಸುತ್ತದೆ. ಬ್ರಾಹ್ಮಣನನ್ನು ಕೊಲ್ಲುವುದು ಮತ್ತು ತಾನೇ ಸಾಯುವುದು ಇವೆರಡರಲ್ಲಿ ಆತ್ಮವಧೆಯೇ ಶ್ರೇಯಸ್ಸು ಎಂದು ನನಗನ್ನಿಸುತ್ತಿದೆ. ಬ್ರಹ್ಮವಧೆಯು ಪರಮ ಪಾಪ ಮತ್ತು ಅದಕ್ಕೆ ಯಾವುದೇ ರೀತಿಯ ನಿಷ್ಕೃತಿಯೂ ಇಲ್ಲ. ಅಬುದ್ಧಿಪೂರ್ವಕವಾಗಿ ಮಾಡಿದರೂ ಆತ್ಮವಧೆಯೇ ನನಗೆ ಶ್ರೇಯಸ್ಸು. ಶುಭೇ! ಆದರೂ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ. ಆದರೆ ಇನ್ನೊಬ್ಬರು ನನ್ನನ್ನು ವಧಿಸುವುದರಿಂದ ನನಗೆ ಆ ಪಾಪ ಸ್ವಲ್ಪವೂ ಬರುವುದಿಲ್ಲ ಎಂದು ತಿಳಿದಿದ್ದೇನೆ. ಆದರೆ ತಿಳಿದೂ ತಿಳಿದೂ ಬ್ರಾಹ್ಮಣನ ವಧೆಯಲ್ಲಿ ನಾನು ಭಾಗವಹಿಸಿದರೆ ಆ ಹೀನ ಕ್ರೂರ ಕೃತ್ಯಕ್ಕೆ ಯಾವುದೇರೀತಿಯ ನಿಷ್ಕೃತಿಯೂ ನನಗೆ ತೋಚುವುದಿಲ್ಲ. ಮನೆಗೆ ಬಂದವನನ್ನು ತ್ಯಾಗಮಾಡುವುದು, ಅಥವಾ ಶರಣಾರ್ಥಿಯನ್ನು ಹಾಗೂ ಬೇಡುವವನನ್ನು ವಧಿಸುವುದು ಅತ್ಯಂತ ಹೀನ ಕೃತ್ಯ ಎಂದು ನನಗನ್ನಿಸುತ್ತದೆ. ಎಂದೂ ನಿಂದಿತ ಹೀನ ಕೃತ್ಯವನ್ನು ಮಾಡಬಾರದು ಎಂದು ಹಿಂದಿನ ಮಹಾತ್ಮರು ಮತ್ತು ಆಪದ್ಧರ್ಮವನ್ನು ಅರಿತವರು ತಿಳಿಸಿದ್ದಾರೆ. ಪತ್ನಿಯ ಸಹಿತ ನಾನೇ ಸಾಯುವುದು ನನಗೆ ಶ್ರೇಯಸ್ಸು. ಎಂದೂ ನಾನು ಬ್ರಾಹ್ಮಣನ ವಧೆಯನ್ನು ಒಪ್ಪುವುದಿಲ್ಲ.”
ಕುಂತಿಯು ಹೇಳಿದಳು:
“ಬ್ರಾಹ್ಮಣ! ವಿಪ್ರರ ರಕ್ಷಣೆ ಮಾಡಬೇಕೆನ್ನುವುದು ನನ್ನ ದೃಢ ಅಭಿಪ್ರಾಯ. ನನಗೆ ಒಂದು ನೂರು ಪುತ್ರರಿದ್ದರೂ ನಾನು ಯಾರೊಬ್ಬನನ್ನೂ ಕಡಿಮೆ ಪ್ರೀತಿಸುತ್ತಿರಲಿಲ್ಲ. ಆದರೆ ರಾಕ್ಷಸನು ನನ್ನ ಈ ಪುತ್ರನನ್ನು ಕೊಲ್ಲಲು ಶಕ್ತನಿಲ್ಲ. ನನ್ನ ಈ ವೀರ ತೇಜಸ್ವಿ ಮಗನು ಮಂತ್ರಸಿದ್ಧಿಯನ್ನು ಹೊಂದಿದ್ದಾನೆ. ನನ್ನ ಮಗನು ರಾಕ್ಷಸನಿಗೆ ಆ ಭೋಜನವೆಲ್ಲವನ್ನೂ ತೆಗೆದುಕೊಂಡು ಹೋಗಿ ಒಪ್ಪಿಸಿ ಅವನಿಂದ ನಿಶ್ಚಿತವಾಗಿಯೂ ತನ್ನನ್ನು ತಾನು ಬಿಡುಗಡೆ ಮಾಡಿಸಿಕೊಳ್ಳುತ್ತಾನೆ ಎಂದು ನನಗೆ ವಿಶ್ವಾಸವಿದೆ. ಇದಕ್ಕೂ ಮೊದಲೇ ಹಲವು ಬಲಶಾಲಿ ಮಹಾಕಾಯ ರಾಕ್ಷಸರು ಈ ವೀರನನ್ನು ಎದುರಿಸಿ ಅವನಿಂದ ವಧಿಸಲ್ಪಟ್ಟಿದ್ದಾರೆ. ಆದರೆ ನೀನು ಇದರ ಕುರಿತು ಯಾರಿಗೂ ಯಾವ ಕಾರಣಕ್ಕೂ ಸ್ವಲ್ಪವೂ ತಿಳಿಸಬಾರದು. ಯಾಕೆಂದರೆ ಜನರು ಕುತೂಹಲದಿಂದ ಗುಟ್ಟನ್ನು ತಿಳಿಯಲು ಕಷ್ಟಕೊಡಬಹುದು. ನನ್ನ ಮಗನು ಇದನ್ನು ಗುರುವಿನ ಅನುಜ್ಞೆಯಿಲ್ಲದೇ ಇನ್ನೊಬ್ಬರಿಗೆ ತಿಳಿಸಿದರೆ ಅದು ಕಾರ್ಯವನ್ನು ಎಸಗದೇ ಇರಬಹುದು ಎಂದು ತಿಳಿದವರು ಅಭಿಪ್ರಾಯ ಪಡುತ್ತಾರೆ.”
ಪೃಥಾಳು ಹೀಗೆ ಹೇಳಲು ಪತ್ನಿಸಮೇತ ಆ ವಿಪ್ರನು ಸಂತೋಷಗೊಂಡು ಆ ಅಮೃತೋಪಮ ಮಾತುಗಳನ್ನು ಆದರಿಸಿದನು. ಆಗ ಕುಂತಿ ಮತ್ತು ವಿಪ್ರ ಇಬ್ಬರೂ ಸೇರಿ ಅನಿಲಾತ್ಮಜನಿಗೆ ಏನೇನು ಮಾಡಬೇಕೆಂದು ಹೇಳಿದರು. ಅವನು ಅವರಿಬ್ಬರಿಗೂ “ಹಾಗೆಯೇ ಆಗಲಿ!” ಎಂದನು. ಮಾಡುತ್ತೇನೆ ಎಂದು ಭೀಮನು ಪ್ರತಿಜ್ಞೆಯನ್ನಿತ್ತ ನಂತರ ಭಿಕ್ಷೆಯನ್ನು ತೆಗೆದುಕೊಂಡು ಎಲ್ಲ ಪಾಂಡವರೂ ಮರಳಿದರು. ಪಾಂಡುಪುತ್ರ ಯುಧಿಷ್ಠಿರನು ಅವನ ತೋರಿಕೆಯಿಂದಲೇ ಏನೋ ರಹಸ್ಯವಿದೆಯೆಂದು ತಿಳಿದುಕೊಂಡು ತನ್ನ ತಾಯಿ ಒಬ್ಬಳನ್ನೇ ಕೂರಿಸಿಕೊಂಡು ಪ್ರಶ್ನಿಸಿದನು:
“ಭೀಮಪರಾಕ್ರಮಿ ಭೀಮನು ಏನನ್ನು ಮಾಡಲು ಉತ್ಸುಕನಾಗಿದ್ದಾನೆ? ಅವನು ಏನನ್ನೋ ಮಾಡಲು ಬಯಸುತ್ತಿದ್ದಾನೆ ಮತ್ತು ಅದಕ್ಕೆ ನಿನ್ನ ಅನುಮತಿಯಿದ್ದಂತಿದೆ.”
ಕುಂತಿಯು ಹೇಳಿದಳು:
“ನನ್ನ ಹೇಳಿಕೆಯಂತೆ ಆ ಪರಂತಪನು ಬ್ರಾಹ್ಮಣನಿಗಾಗಿ ಒಂದು ಮಹಾಕಾರ್ಯವನ್ನು ಮಾಡಿ ಈ ನಗರವನ್ನು ಬಿಡುಗಡೆಮಾಡಲಿದ್ದಾನೆ.”
ಯುಧಿಷ್ಠಿರನು ಹೇಳಿದನು:
“ಇದೆಂತಹ ತೀಕ್ಷ್ಣ ದುಷ್ಕರ ಸಾಹಸ ಕಾರ್ಯವನ್ನೆಸಗಿದೆ! ಸಾಧುಗಳು ಪುತ್ರ ಪರಿತ್ಯಾಗವನ್ನು ಪ್ರಶಂಸಿಸುವುದಿಲ್ಲ. ಪರಸುತನ ಸಲುವಾಗಿ ಸ್ವಸುತನನ್ನು ತ್ಯಜಿಸಲು ಹೇಗೆ ಇಚ್ಛಿಸುವೆ? ನಿನ್ನ ಪುತ್ರನ ತ್ಯಾಗಗೈದು ನೀನು ಲೋಕಾವೃತ್ತಿಯ ವಿರುದ್ಧ ನಡೆಯುತ್ತಿದ್ದೀಯೆ. ಅವನ ಬಾಹುಗಳ ಆಶ್ರಯವನ್ನೇ ಹೊಂದಿ ನಾವೆಲ್ಲರೂ ಸುಖ ನಿದ್ದೆಯನ್ನು ಮಾಡಬಲ್ಲೆವು ಮತ್ತು ಕೆಟ್ಟಜನರಿಂದ ಅಪಹೃತ ರಾಜ್ಯವನ್ನು ಪುನಃ ಹಿಂದೆ ತೆಗೆದುಕೊಳ್ಳುವುದಕ್ಕೂ ಇವನೇ ಸಹಾಯಮಾಡುವವನು. ಆ ಅಮಿತೌಜಸನ ವೀರ್ಯದಿಂದಾಗಿ ದುರ್ಯೋಧನನೂ ಚಿಂತೆಗೊಳಗಾಗುತ್ತಾನೆ ಮತ್ತು ಅವನಿಂದಾಗಿ ಶಕುನಿಯೂ ಸೇರಿ ಎಲ್ಲರೂ ದುಃಖದಿಂದ ನಿದ್ದೆ ಮಾಡುವುದಿಲ್ಲ. ಆ ವೀರನ ಧೈರ್ಯದಿಂದಲೇ ನಾವು ಜತುಗೃಹ ಮತ್ತು ಇತರ ಆಪತ್ತುಗಳಿಂದ ತಪ್ಪಿಸಿಕೊಂಡೆವು ಮತ್ತು ಪುರೋಚನನು ಸತ್ತುಹೋದ. ಅವನ ಧೈರ್ಯದ ಆಸರೆಯಲ್ಲಿಯೇ ನಾವು ಧೃತರಾಷ್ಟ್ರಜರನ್ನು ಕೊಂದು ಈ ವಸುಪೂರ್ಣೆ ವಸುಂಧರೆಯನ್ನು ಪಡೆಯುತ್ತೇವೆ ಎಂದು ಅಂದುಕೊಂಡಿದ್ದೇವೆ. ಇಂಥ ಅವನನ್ನು ಪರಿತ್ಯಾಗಮಾಡಬೇಕೆಂಬುದು ನಿನ್ನ ಬುದ್ಧಿಗೆ ಹೇಗಾದರೂ ಬಂದಿತು? ದುಃಖದಿಂದ ನಿನ್ನ ಬುದ್ಧಿಯು ತೊಳೆದು ಹೋಗಿ ಬುದ್ಧಿಯಿಲ್ಲದವಳಂತೆ ಆಗಿಲ್ಲ ತಾನೆ?”
ಕುಂತಿಯು ಹೇಳಿದಳು:
“ಯುಧಿಷ್ಠಿರ! ವೃಕೋದರನ ವಿಷಯದಲ್ಲಿ ಸಂತಾಪಪಡಬೇಡ. ನಾನು ಬುದ್ಧಿ ದೌರ್ಬಲ್ಯದಿಂದ ಈ ನಿಶ್ಚಯವನ್ನು ತೆಗೆದುಕೊಂಡಿಲ್ಲ. ಈ ವಿಪ್ರನ ಮನೆಯಲ್ಲಿ ನಾವು ಸುಖವಾಗಿ ವಾಸಿಸುತ್ತಿದ್ದೇವೆ. ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ಇದನ್ನು ಪರಿಗಣಿಸುತ್ತಿದ್ದೇನೆ. ಇಂಥಹ ಪುರುಷನಿಗೆ ಎಷ್ಟು ಮಾಡಿದರೂ ಸಾಕಾಗುವುದಿಲ್ಲ. ಜತುಗೃಹದಲ್ಲಿ ಭೀಮನ ಮಹಾ ವಿಕ್ರಾಂತ ಮತ್ತು ಹಿಡಿಂಬನ ವಧೆಯನ್ನು ನೋಡಿ ನನಗೆ ವೃಕೋದರನಲ್ಲಿ ವಿಶ್ವಾಸವಾಗಿದೆ. ಭೀಮನ ಬಾಹುಗಳ ಬಲವು ಆನೆಗಳ ಒಂದು ದೊಡ್ಡ ಗುಂಪಿಗೆ ಸಮನಾಗಿದೆ. ಅದೇ ಬಾಹುಗಳಿಂದ ಆನೆಗಳಂತಿರುವ ಪ್ರತಿಯೊಬ್ಬ ನಿಮ್ಮೆಲ್ಲರನ್ನೂ ವಾರಣಾವತದಿಂದ ಹೊತ್ತು ತಂದನು. ವೃಕೋದರನಷ್ಟು ಬಲಶಾಲಿಯಾದವನು ಬೇರೆ ಯಾರೂ ಇದಕ್ಕೆ ಮೊದಲೂ ಇರಲಿಲ್ಲ ಇನ್ನುಮುಂದೆಯೂ ಇರುವುದಿಲ್ಲ. ಅವನು ಯುದ್ಧದಲ್ಲಿ ಶ್ರೇಷ್ಠ ಯಾರನ್ನೂ, ಸ್ವಯಂ ವಜ್ರಧರನನ್ನೂ ಎದುರಿಸಬಲ್ಲ. ಅವನ ದೇಹವು ಎಷ್ಟು ಗಟ್ಟಿಯಿದೆಯೆಂದರೆ - ಹಿಂದೆ ಹುಟ್ಟಿದ ಕೆಲವೇ ಸಮಯದಲ್ಲಿ ಅವನು ನನ್ನ ತೊಡೆಯಿಂದ ಪರ್ವತದ ಕೆಳಗೆ ಬಿದ್ದಾಗ ಅವನು ತನ್ನ ದೇಹದಿಂದ ಶಿಲೆಯನ್ನು ಒಡೆದು ಪುಡಿಮಾಡಿದನು. ಭೀಮನ ಬಲವನ್ನು ನೆನಪಿಸಿಕೊಂಡ ನಾನು ಸಂಪೂರ್ಣ ಪ್ರಜ್ಞೆಯಲ್ಲಿದ್ದೆ. ಆದುದರಿಂದಲೇ ನಾನು ಈ ಬ್ರಾಹ್ಮಣನಿಗೆ ಪ್ರತೀಕಾರವನ್ನು ಮಾಡಲು ಮನಸ್ಸುಮಾಡಿದೆ. ಇದನ್ನು ನಾನು ಲೋಭ ಅಥವಾ ಅಜ್ಞಾನ ಅಥವಾ ಮೋಹದಿಂದ ನಿರ್ಧರಿಸಲಿಲ್ಲ. ಬುದ್ದಿಪೂರ್ವಕವಾಗಿ ಧರ್ಮ ಪೂರಕವಾಗಿಯೇ ನಾನು ಇದನ್ನು ನಿಶ್ಚಯಿಸಿದೆ. ಈ ರೀತಿಯಲ್ಲಿ ಎರಡು ಉದ್ದೇಶಗಳನ್ನು ಪೂರೈಸಬಹುದು: ನಮ್ಮ ವಸತಿಗೆ ಪ್ರತೀಕಾರ ಮತ್ತು ಅತಿ ದೊಡ್ಡ ಧರ್ಮವನ್ನು ಪಾಲಿಸುವುದು. ಬ್ರಾಹ್ಮಣನಿಗೆ ಯಾವುದೇ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡುವ ಕ್ಷತ್ರಿಯನಿಗೆ ಶುಭ ಲೋಕಗಳು ಪ್ರಾಪ್ತವಾಗುತ್ತವೆ ಎಂದು ಕೇಳಿದ್ದೇನೆ. ಇನ್ನೊಬ್ಬ ಕ್ಷತ್ರಿಯನನ್ನು ಸಾವಿನಿಂದ ಬಿಡುಗಡೆಮಾಡಿದ ಕ್ಷತ್ರಿಯನಿಗೆ ವಿಪುಲ ಕೀರ್ತಿ ಮತ್ತು ಲೋಕಗಳು ಇಲ್ಲಿ ಮತ್ತು ಪರದಲ್ಲಿ ದೊರೆಯುತ್ತವೆ. ಯುದ್ಧದಲ್ಲಿ ವೈಶ್ಯನಿಗೆ ಸಹಾಯಮಾಡುವ ಕ್ಷತ್ರಿಯನು ಕೂಡ ಸರ್ವ ಲೋಕಗಳಲ್ಲಿ ಪ್ರಜೆಗಳ ಪ್ರೀತಿಯನ್ನು ಅನುಭವಿಸುತ್ತಾನೆ ಎನ್ನುವುದು ಸತ್ಯ. ಶರಣಾರ್ಥಿಯಾಗಿ ಬಂದ ಶೂದ್ರನನ್ನು ಬಿಡುಗಡೆ ಮಾಡಿದ ರಾಜನು ರಾಜಸತ್ಕೃತನಾಗಿ ಶ್ರೀಮಂತ ಕುಲದಲ್ಲಿ ಜನ್ಮವನ್ನು ತಾಳುತ್ತಾನೆ. ಈ ರೀತಿ ಆ ಭಗವಾನ್ ವ್ಯಾಸನು ಹಿಂದೆ ಹೇಳುತ್ತಿದ್ದನು. ಇದು ನಿಜವಾಗಿಯೂ ವಿವೇಕದ ಮಾತುಗಳು. ಆದುದರಿಂದ ನಾನು ಇದನ್ನು ಮಾಡಲು ಬಯಸುತ್ತೇನೆ.”
ಯುಧಿಷ್ಠಿರನು ಹೇಳಿದನು:
“ಮಾತೆ! ಬುದ್ಧಿಪೂರ್ವಕವಾಗಿ ನೀನು ಮಾಡಲು ತೊಡಗಿರುವುದು ಸರಿಯಾಗಿಯೇ ಇದೆ. ಆರ್ತ ಬ್ರಾಹ್ಮಣನಿಗೆ ದಯೆಯಿಂದ ಮಾಡುತ್ತಿದ್ದೀಯೆ. ಆದರೆ ಬ್ರಾಹ್ಮಣನು ಈ ವಿಷಯವನ್ನು ಬೇರೆ ಯಾರಲ್ಲಿಯೂ ಹೇಳದಂತೆ ಎಚ್ಚರ ವಹಿಸಬೇಕು. ನಗರವಾಸಿಗಳಿಗೆ ಇದರ ಕುರಿತು ಏನೂ ತಿಳಿಯಬಾರದು.”
ರಾತ್ರಿ ಕಳೆದ ನಂತರ ಪಾಂಡವ ಭೀಮಸೇನನು ಆಹಾರವನ್ನು ತೆಗೆದುಕೊಂಡು ಆ ಪುರುಷಾದಕನು ವಾಸಿಸುತ್ತಿರುವಲ್ಲಿಗೆ ಹೋದನು. ರಾಕ್ಷಸನ ಆ ವನವನ್ನು ತಲುಪಿದ ಬಲಶಾಲಿ ಪಾಂಡವನು ಅವನನ್ನು ಅವನ ಹೆಸರಿನಿಂದ ಕೂಗಿ ಕರೆದು ಆಹಾರವನ್ನು ತಿನ್ನ ತೊಡಗಿದನು. ಭೀಮಸೇನನ ಆ ಕೂಗನ್ನು ಕೇಳಿದ ಆ ರಾಕ್ಷಸನು ಸಂಕೃದ್ಧನಾಗಿ ಬೀಮನು ನಿಂತಿರುವಲ್ಲಿಗೆ ಬಂದನು. ಮೂರು ಹುಬ್ಬುಗಳನ್ನು ಶಿಖಗಳನ್ನಾಗಿ ಕಟ್ಟಿ ಹಲ್ಲುಗಳ ಮೊಸಡೆಗಳನ್ನು ಕಡಿಯುತ್ತಾ ಆ ಮಹಾಕಾಯನು ಮೇದಿನಿಯನ್ನು ಪುಡಿಮಾಡುತ್ತಾನೋ ಎನ್ನುವಂತೆ ಮಹಾವೇಗದಲ್ಲಿ ಬಂದನು. ಅನ್ನವನ್ನು ತಿನ್ನುತ್ತಿರುವ ಭೀಮಸೇನನನ್ನು ನೋಡಿದ ಆ ರಾಕ್ಷಸನು ಸಿಟ್ಟಿನಿಂದ ಕಣ್ಣುಗಳನ್ನು ಅಗಲಿಸಿ ಈ ಮಾತುಗಳನ್ನಾಡಿದನು:
“ನನಗಾಗಿ ಕಳುಹಿಸಿದ ಈ ಅಹಾರವನ್ನು, ನಾನು ನೋಡುತ್ತಿರುವ ಹಾಗೆಯೇ ತಿನ್ನುತ್ತಿರುವ ದುರ್ಬುದ್ಧಿ ನೀನು ಯಾರು? ಯಮಸಾದನಕ್ಕೆ ಹೋಗಲು ಬಯಸುತ್ತಿದ್ದೀಯಾ?”
ಅವನನ್ನು ಕೇಳಿದ ಭೀಮಸೇನನು ನಗುತ್ತಾ ಆ ರಾಕ್ಷಸನನ್ನು ತಿರಸ್ಕರಿಸಿ ಬೇರೆ ಕಡೆ ಮುಖ ತಿರುಗಿಸಿ ತಿನ್ನುವುದನ್ನು ಮುಂದುವರೆಸಿದನು. ಆಗ ಆ ಪುರುಷಾಧಕನು ಒಂದು ಭೈರವ ಕೂಗನ್ನು ಕೂಗಿ, ಎರಡೂ ತೋಳುಗಳನ್ನೂ ಮೇಲಕ್ಕೆತ್ತಿ ಭೀಮಸೇನನನ್ನು ಕೊಲ್ಲಲು ಅವನೆಡೆಗೆ ಮುನ್ನುಗ್ಗಿದ್ದನು. ಆದರೂ ಪರವೀರ ಪಾಂಡವ ವೃಕೋದರನು ಆ ರಾಕ್ಷಸನಿಗೆ ಗಮನಕೊಡದೇ ಆಹಾರವನ್ನು ತಿನ್ನುವುದನ್ನು ಮುಂದುವರೆಸಿದನು. ರೋಷಗೊಂಡ ರಾಕ್ಷಸನು ಕುಂತೀಪುತ್ರನ ಹಿಂದೆ ನಿಂತು ತನ್ನ ಎರಡೂ ಕೈಗಳಿಂದ ಅವನ ಬೆನ್ನಿನ ಮೇಲೆ ಗುದ್ದತೊಡಗಿದನು. ರಾಕ್ಷಸನ ಕೈಗಳಿಂದ ನೋವಿನ ಪೆಟ್ಟುಗಳು ಬೀಳುತ್ತಿದ್ದರೂ ಬಲವಂತ ಭೀಮನು ಅವನನ್ನು ಅವಲೋಕಿಸದೇ ತಿನ್ನುತ್ತಲೇ ಇದ್ದನು. ಇನ್ನೂ ಸಂಕೃದ್ಧನಾದ ರಾಕ್ಷಸನು ಒಂದು ಮರವನ್ನು ಕಿತ್ತೆತ್ತಿ ಬಲಿ ಭೀಮನನ್ನು ಹೊಡೆಯಲೋಸುಗ ಪುನಃ ಓಡಿ ಬಂದನು. ಅಷ್ಟರಲ್ಲಿಯೇ ಪುರುಷರ್ಷಭ ಭೀಮನು ತನ್ನ ಊಟವನ್ನು ಮುಗಿಸಿದ್ದನು. ಬಾಯಿ ಕೈಗಳನ್ನು ತೊಳೆದ ಆ ಮಹಾಬಲಿಯು ಸಂತೋಷದಿಂದ ಯುದ್ಧಕ್ಕೆ ಎದಿರಾದನು. ಸಿಟ್ಟಿಗೆದ್ದ ರಾಕ್ಷಸನು ಎಸೆದ ವೃಕ್ಷವನ್ನು ಎಡಗೈಯಿಂದ ಬೇಗನೆ ಹಿಡಿದು ಭೀಮನು ಜೋರಾಗಿ ನಗತೊಡಗಿದನು. ಪುನಃ ಆ ಬಲಿಯು ಬಹುವಿಧ ವೃಕ್ಷಗಳನ್ನು ಕಿತ್ತು ಪಾಂಡವ ಭೀಮಸೇನನ ಮೇಲೆ ಎಸೆಯತೊಡಗಿದನು. ಭೀಮನೂ ಕೂಡ ಅವನ ಮೇಲೆ ಎಸೆಯತೊಡಗಿದನು.
ಈ ರೀತಿ ಬಕ ಪಾಂಡವನ ಮಧ್ಯೆ ಕಾಡನ್ನೇ ನಾಶಪಡಿಸಿದ ಘೋರರೂಪಿ ವೃಕ್ಷಯುದ್ಧವು ನಡೆಯಿತು. ಹೆಸರನ್ನು ಕೂಗುತ್ತಾ ಬಕನು ಪಾಂಡವನ ಕಡೆ ಓಡಿಬಂದು ಮಹಾಬಲಗಳನ್ನುಳ್ಳ ತನ್ನ ಎರಡೂ ಭುಜಗಳಿಂದ ಭೀಮಸೇನನನ್ನು ಹಿಡಿದುಕೊಂಡನು. ಭೀಮಸೇನನೂ ಕೂಡ ತನ್ನ ಮಹಾಭುಜಗಳಿಂದ ಆ ರಾಕ್ಷಸನನ್ನು ಹಿಡಿದು ಭುಸುಗುಟ್ಟುತ್ತಿದ್ದ ಆ ಬಲಶಾಲಿಯನ್ನು ಬಲಾತ್ಕಾರವಾಗಿ ಮಹಾವೇಗದಲ್ಲಿ ಎಳೆದಾಡಿದನು. ಭೀಮನಿಂದ ಎಳೆಯಲ್ಪಟ್ಟ, ಪಾಂಡವನನ್ನೂ ಎಳೆಯುತ್ತಿದ್ದ ಆ ಪುರುಷಾದಕನು ಬೇಗನೇ ತೀವ್ರ ಆಯಾಸವನ್ನು ಹೊಂದಿದನು. ಅವರು ಮಹಾಕಾಯದ ಮರಗಳನ್ನು ಪುಡಿಪುಡಿ ಮಾಡುತ್ತಿದ್ದ ಮಹಾವೇಗದಿಂದ ಪೃಥ್ವಿಯೇ ನಡುಗಿತು. ಆ ರಾಕ್ಷಸನು ಕ್ಷೀಣಗೊಳ್ಳುತ್ತಿದ್ದಾನೆ ಎಂದು ನೋಡಿದ ವೃಕೋದರನು ಅವನನ್ನು ನೆಲದ ಮೇಲೆ ಬೀಳಿಸಿ ಮುಷ್ಠಿಗಳಿಂದ ಹೊಡೆಯತೊಡಗಿದನು. ನಂತರ ಅವನ ಬೆನ್ನನ್ನು ತನ್ನ ತೊಡೆಯಿಂದ ಬಿಗಿಯಾಗಿ ಕೆಳಕ್ಕೆ ಒತ್ತಿಹಿಡಿದು ಬಲಗೈಯಿಂದ ಅವನ ಶಿರವನ್ನು ಹಿಡಿದು ಎಡಗೈಯಿಂದ ಅವನ ಸೊಂಟದ ಪಟ್ಟಿಯನ್ನು ಹಿಡಿದು ಪಾಂಡವನು ಭೈರವವಾಗಿ ಕೂಗಿಕೊಳ್ಳುತ್ತಿದ್ದ ಆ ರಾಕ್ಷಸನನ್ನು ಎರಡು ತುಂಡುಮಾಡಿದನು. ಭೀಮನು ಆ ಘೋರ ರಾಕ್ಷಸನನ್ನು ತುಂಡರಿಸುತ್ತಿದ್ದಂತೆ ಅವನ ಬಾಯಿಯಿಂದ ರಕ್ತವು ಹೊರಚೆಲ್ಲಿತು.
ಆ ಶಬ್ಧದಿಂದ ಎಚ್ಚೆತ್ತ ರಾಕ್ಷಸ ಜನರೆಲ್ಲರೂ ಪರಿಚಾರಿಗಳ ಸಹಿತ ಮನೆಯಿಂದ ಹೊರಬಿದ್ದರು. ಮುಷ್ಠಿಯುದ್ಧದಲ್ಲಿ ಶ್ರೇಷ್ಠ ಬಲವಾನ್ ಭೀಮನು ಭೀತರಾಗಿ ಬುದ್ಧಿಕಳೆದುಕೊಂಡಿದ್ದ ಅವರನ್ನು ಸಮಾಧಾನಪಡಿಸಿ ಒಂದು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಮಾಡಿದನು.
“ಇಲ್ಲಿರುವ ಯಾವ ಮನುಷ್ಯರಿಗೂ ಎಂದೂ ನೀವ್ಯಾರೂ ಹಿಂಸಿಸಬಾರದು. ಹಿಂಸಿಸುವವರು ಇದೇರೀತಿ ಶೀಘ್ರವಾಗಿ ಸಾಯುತ್ತಾರೆ”
ಎಂದನು. ಅವನ ಆ ಮಾತುಗಳನ್ನು ಕೇಳಿದ ಆ ರಾಕ್ಷಸರು “ಹಾಗೆಯೇ ಆಗಲಿ!”ಎಂದು ಒಪ್ಪಂದಮಾಡಿಕೊಂಡು ಹೊರಟುಹೋದರು. ಅಂದಿನಿಂದ ಅಲ್ಲಿರುವ ರಾಕ್ಷಸರು ನಗರ ವಾಸಿಗಳನ್ನು ನಗರದ ಸುತ್ತಮುತ್ತ ನೋಡಿದರೂ ಸೌಮ್ಯರಾಗಿದ್ದರು. ಭೀಮನು ಸತ್ತುಹೋಗಿದ್ದ ಆ ಪುರುಷಾದಕನನ್ನು ಎಳೆದು ದ್ವಾರದ ಕೆಳಗೆ ಬೀಳಿಸಿ, ಯಾರಿಗೂ ಕಾಣದ ಹಾಗೆ ಅಲ್ಲಿಂದ ಹೊರಟುಹೋದನು. ಅವನನ್ನು ಕೊಂದು ಭೀಮನು ಬ್ರಾಹ್ಮಣನ ಮನೆಗೆ ಹೋಗಿ ರಾಜ ಯುಧಿಷ್ಠಿರನಿಗೆ ಏನನ್ನೂ ಬಿಡದೆ ಎಲ್ಲವನ್ನೂ ಯಥಾವತ್ತಾಗಿ ವರದಿಮಾಡಿದನು.
ಮರುದಿನ ಬೆಳಿಗ್ಗೆ ನಗರದಿಂದ ಹೊರಬಂದ ಜನರು ನೆಲದ ಮೇಲೆ ರಕ್ತದಿಂದ ಒದ್ದೆಯಾಗಿದ್ದ, ಪರ್ವತ ಶಿಖರದಂತೆ ಪುಡಿಯಾಗಿ ಭಯಾವಹವಾಗಿ ಸತ್ತು ಬಿದ್ದಿದ್ದ ರಾಕ್ಷಸನನ್ನು ನೋಡಿ ಏಕಚಕ್ರಕ್ಕೆ ಹೋಗಿ ಈ ವೃತ್ತಾಂತವನ್ನು ಬೇರೆಯವರಿಗೆಲ್ಲ ಹರಡಿದರು. ಆಗ ನಗರವಾಸಿಗಳು ತಮ್ಮ ಪತ್ನಿ ಮಕ್ಕಳ ಸಹಿತ ಸಹಸ್ರಾರು ಸಂಖ್ಯೆಗಳಲ್ಲಿ ಬಕನನ್ನು ನೋಡಲು ಅಲ್ಲಿಗೆ ಬಂದರು. ಆ ಅತಿಮಾನುಷ ಕರ್ಮವನ್ನು ನೋಡಿ ವಿಸ್ಮಿತರಾದ ಎಲ್ಲರೂ ಎಲ್ಲ ದೇವತೆಗಳಿಗೂ ಅರ್ಚನೆಯನ್ನು ನೀಡಿದರು. ಆಗ ಅವರು ರಾಕ್ಷಸನಿಗೆ ಭೋಜನವನ್ನು ನೀಡುವ ಬಾರಿ ಯಾರಿದ್ದಿರಬಹುದು ಎಂದು ಲೆಖ್ಕ ಮಾಡಿ, ಆ ವಿಪ್ರನ ಬಾರಿಯಾಗಿತ್ತು ಎಂದು ತಿಳಿದು ಎಲ್ಲರೂ ಅವನನ್ನು ಪ್ರಶ್ನಿಸತೊಡಗಿದರು. ಈ ರೀತಿ ಬಹಳಷ್ಟು ಪ್ರಶ್ನೆಗಳನ್ನು ಎದುರಿಸಿದ ವಿಪ್ರರ್ಷಭನು ಪಾಂಡವರನ್ನು ರಕ್ಷಿಸುತ್ತಾ ನಾಗರೀಕರಿಗೆ ಹೇಳಿದನು:
“ಆಹಾರವನ್ನೊದಗಿಸಲು ನನಗೆ ಆಜ್ಞಾಪನೆ ಬಂದಾಗ ಬಂಧುಗಳ ಸಹಿತ ರೋದಿಸುತ್ತಿರುವ ನಮ್ಮನ್ನು ಓರ್ವ ಮಂತ್ರಸಿದ್ಧ ಮಹಾಬಲಿ ಬ್ರಾಹ್ಮಣನು ನೋಡಿದನು. ಅವನು ನನ್ನಲ್ಲಿ ಹಿಂದಿನಿಂದ ಇರುವ ಪುರದ ಪರಿಕ್ಲೇಶದ ಕುರಿತು ಕೇಳಿದನು. ಮತ್ತು ಆ ವೀರ ಬ್ರಾಹ್ಮಣಶ್ರೇಷ್ಠನು ನಗುತ್ತಾ “ಆ ದುರಾತ್ಮನಿಗೆ ಆಹಾರವನ್ನು ನಾನು ಕೊಂಡೊಯ್ಯುತ್ತೇನೆ. ನನ್ನ ಕುರಿತು ಭಯಪಡಬೇಡ!” ಎಂದು ಆಶ್ವಾಸನೆಯನ್ನಿತ್ತನು. ಅವನು ಆಹಾರವನ್ನು ತೆಗೆದುಕೊಂಡು ಬಕವನದ ಕಡೆ ಹೋದನು. ಈ ಲೋಕಹಿತ ಕಾರ್ಯವು ಅವನ ಕೃತ್ಯವೇ ಆಗಿರಬೇಕು!”
ವಿಸ್ಮಿತರಾದ, ಮುದಿತ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಲ್ಲರೂ ಬ್ರಾಹ್ಮಣನಿಗೆ ಮಹಾ ಔತಣವನ್ನಿತ್ತರು. ಆಗ ಆ ಮಹಾ ಅದ್ಭುತವನ್ನು ನೋಡಲು ಜನಪದದಿಂದ ಎಲ್ಲರೂ ನಗರಕ್ಕೆ ಬಂದರು. ಪಾರ್ಥರು ತಮ್ಮ ವಾಸವನ್ನು ಅಲ್ಲಿಯೇ ಮುಂದುವರೆಸಿದರು.
Thank u for posting bhagvatgeetha