Related imageಖಾಂಡವದಹನ

ಬ್ರಾಹ್ಮಣ ರೂಪಿ ಅನಲನ ಆಗಮನ

ರಾಜ ಧೃತರಾಷ್ಟ್ರ ಮತ್ತು ಶಾಂತನುವಿನ ಶಾಸನದಂತೆ ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿದ್ದ ಪಾಂಡವರು ಅನ್ಯ ನರಾಧಿಪರನ್ನು ಸದೆಬಡಿದರು. ಧರ್ಮರಾಜನ ಆಶ್ರಯದಲ್ಲಿ ಸರ್ವ ಜನರೂ ಪುಣ್ಯಲಕ್ಷಣ ಕರ್ಮಗಳ ದೇಹಗಳೊಳಗಿರುವ ಆತ್ಮಗಳಂತೆ ಸುಖವಾಗಿ ವಾಸಿಸುತ್ತಿದ್ದರು. ಭರತರ್ಷಭರು ಧರ್ಮ, ಅರ್ಥ, ಕಾಮ ಈ ಮೂರು ಬಂಧುಗಳನ್ನೂ ಆತ್ಮಸಮಾನ ಬಂಧುಗಳೆಂದು ತಿಳಿದು ಸಮವಾಗಿ ಬೆಳೆಸಿದರು. ಆ ಪಾರ್ಥಿವನು ಭೂಮಿಯ ಮೇಲೆ ಸಮ ಭಾಗಗಳಲ್ಲಿ ದೇಹ ತಳೆದ ಧರ್ಮ, ಅರ್ಥ, ಕಾಮಗಳಿಗೆ ನಾಲ್ಕನೆಯವನಂತೆ ಇದ್ದನು. ಈ ಜನಾಧಿಪನಲ್ಲಿ ವೇದಗಳು ಒಬ್ಬ ಪರಮ ವಿದ್ಯಾರ್ಥಿಯನ್ನು, ಮಹಾದ್ವರಗಳು ಒಬ್ಬ ಪ್ರಯೋಕ್ತಾರನನ್ನು ಮತ್ತು ವರ್ಣಗಳು ಒಬ್ಬ ಪರಮ ಸಂರಕ್ಷಕನನ್ನು ಪಡೆದವು. ಈ ಪೃಥಿವೀಕ್ಷಿತನಲ್ಲಿ ಲಕ್ಷ್ಮಿಯು ಅಧಿಷ್ಠಾನವನ್ನೂ ಮತಿಯು ಪರಾಯಣವನ್ನೂ ಪಡೆದರು ಮತ್ತು ಅಖಿಲ ಬಂಧುಗಳೂ ಧರ್ಮನಿರತರಾಗಿದ್ದರು. ವೇದಗಳಿಂದ ನಡೆಯುತ್ತಿರುವ ಮಹಾಧ್ವರವು ಹೇಗೆ ಪ್ರಜ್ವಲಿತವಾಗಿರುತ್ತದೆಯೋ ಹಾಗೆ ನಾಲ್ವರು ಸಹೋದರನ್ನೊಡಗೂಡಿದ ರಾಜನು ಅಧಿಕ ಪ್ರಾಯುಜ್ಯಮಾನನಾಗಿದ್ದನು. ಬೃಹಸ್ಪತಿಸಮಾನ ಅಮರ ಪ್ರಮುಖರು ಪ್ರಜಾಪತಿಯನ್ನು ಹೇಗೋ ಹಾಗೆ ಧೌಮ್ಯಾದಿ ವಿಪ್ರರು ಅವನನ್ನು ಸುತ್ತುವರೆದು ಕುಳಿತಿರುತ್ತಿದ್ದರು. ಧರ್ಮರಾಜನಲ್ಲಿ ಅತಿ ಪ್ರೀತರಾದ ಪ್ರಜೆಗಳ ಕಣ್ಣು-ಹೃದಯಗಳಲ್ಲಿ ಪೂರ್ಣಚಂದ್ರ ಸಮಾನ ಸಂತೋಷವಿತ್ತು. ಅವನೇ ದೇವ ಎನ್ನುವ ಭಾವನೆ ಮಾತ್ರವಲ್ಲದೇ ಅವನಿಗೆ ಅವರ ಮೇಲಿದ್ದ ಪ್ರಜಾಭಾವದಿಂದ, ಮನಸ್ಸಿಗೆ ಆನಂದವನ್ನೀಯುವ ಕರ್ಮಗಳಿಂದ ಪ್ರಜೆಗಳು ಸುಖದಿಂದಿದ್ದರು. ಆ ಚಾರುಭಾಷಿ ಧೀಮಂತ ಪಾರ್ಥನಿಂದ ಯಾವುದೇ ರೀತಿಯ ಅಯುಕ್ತ, ಅಸತ್ಯ, ಸತ್ಯವಲ್ಲದ ಮತ್ತು ವಿಪ್ರಿಯ ಮಾತುಗಳು ಹೊರಬರುತ್ತಿರಲಿಲ್ಲ. ತನ್ನ ಮತ್ತು ಸರ್ವಲೋಕ ಹಿತಕಾರಕ ಕೃತ್ಯಗಳನ್ನು ಮಾಡುವಲ್ಲಿ ಆ ಸುಮಹಾತೇಜಸ್ವಿ ಭರತಸತ್ತಮನು ಆನಂದ ಪಡುತ್ತಿದ್ದನು. ಪಾಂಡವರು ಹೀಗೆ ಕಷ್ಟಗಳಿಂದ ಬಿಡುಗಡೆ ಹೊಂದಿ ಸಂತೋಷ ಮತ್ತು ಸ್ವ-ತೇಜಸ್ಸಿನಿಂದ ಇತರ ಪೃಥ್ವಿಪಾಲರನ್ನು ಸಂತಪ್ತಗೊಳಿಸುತ್ತಾ ವಾಸಿಸಿದರು.

ಕೆಲವು ದಿನಗಳ ನಂತರ ಬೀಭತ್ಸುವು ಕೃಷ್ಣನಿಗೆ ಹೇಳಿದನು:

“ಕೃಷ್ಣ! ಬೇಸಗೆಯ ದಿನಗಳು ನಡೆಯುತ್ತಿವೆ! ಯಮುನೆಯ ಕಡೆ ಹೋಗೋಣ! ನಮ್ಮ ಗೆಳೆಯರೊಂದಿಗೆ ಅಲ್ಲಿ ಹೋಗಿ ವಿಹರಿಸೋಣ! ನಿನಗೆ ಬೇಕೆಂದರೆ ಸಾಯಂಕಾಲವೇ ಹಿಂದಿರುಗೋಣ.”

ಅದಕ್ಕೆ ವಾಸುದೇವನು

“ಪಾರ್ಥ! ನಾನೂ ಕೂಡ ಗೆಳೆಯರೊಂದಿಗೆ ಜಲದಲ್ಲಿ ಯಥಾಸುಖವಾಗಿ ವಿಹರಿಸಲು ಬಯಸುತ್ತೇನೆ.”

ಎಂದು ಹೇಳಿದನು. ಧರ್ಮರಾಜನಲ್ಲಿ ವಿಚಾರಿಸಿ ಅವನ ಅನುಜ್ಞೆಯನ್ನು ಪಡೆದು ತಮ್ಮ ಸುಹೃದಯರಿಂದೊಡಗೂಡಿ ಪಾರ್ಥ-ಗೋವಿಂದರು ಹೊರಟರು. ಅವರೆಲ್ಲರೂ ನಾನಾ ಪ್ರಕಾರದ ಉತ್ತಮ ವೃಕ್ಷಗಳಿಂದ ಕೂಡಿದ್ದ, ಅಲ್ಲಲ್ಲಿ ಪುರಂದರ ಗೃಹಕ್ಕೆ ಸಮಾನ ಮನೆಗಳಿಂದ ಕೂಡಿದ್ದ, ವಾರ್ಷ್ಣೇಯ ಪಾರ್ಥರಿಗೆ ತಕ್ಕುದಾದ ಬೆಲೆಬಾಳುವ ಭಕ್ಷ್ಯ, ಭೋಜ್ಯ, ಪಾನೀಯ, ರಸಗಳು, ಮಾಲೆಗಳನ್ನು ಇರಿಸಿದ್ದ, ವಿಹಾರಪ್ರದೇಶವನ್ನು ಸೇರಿ ರತ್ನದ ಹೊಳಪಿನ ನೀರಿನಿಂದ ತುಂಬಿರುವ ಕೊಳಗಳನ್ನು ಪ್ರವೇಶಿಸಿ ಮನ ಬಂದಂತೆ ಜಲಕ್ರೀಡೆಯಾಡಿದರು. ಕೆಲವು ಅಂಗನೆಯರು ವನದಲ್ಲಿ, ಕೆಲವರು ನೀರಿನಲ್ಲಿ ಮತ್ತೆ ಕೆಲವರು ಮನೆಗಳಲ್ಲಿ ಹೀಗೆ ಕೃಷ್ಣ-ಪಾರ್ಥರಿಗೆ ಇಷ್ಟವಾದ ಕಡೆಗಳಲ್ಲಿ ಆಡಿದರು. ಮದೋತ್ಕಟ ದ್ರೌಪದೀ-ಸುಭದ್ರೆಯರು ಅತ್ಯಂತ ಬೆಲೆ ಬಾಳುವ ವಸ್ತ್ರ-ಆಭರಣಗಳನ್ನು ಸ್ತ್ರೀಯರಿಗೆ ನೀಡಿದರು. ಕೆಲವರು ಸಂತೋಷದಿಂದ ಕುಣಿದರು, ಕೆಲವರು ಜೋರಾಗಿ ಕೂಗಾಡಿದರು, ಕೆಲವರು ಜೋರಾಗಿ ನಕ್ಕರು ಮತ್ತು ಇನ್ನು ಕೆಲವರು ಇಷ್ಟಬಂದ ಮದಿರವನ್ನು ಕುಡಿದರು. ಕೆಲವರು ಅಳುತ್ತಿದ್ದರೆ ಇನ್ನು ಕೆಲವರು ಪರಸ್ಪರರಲ್ಲಿ ಜಗಳವಾಡುತ್ತಿದ್ದರು. ಮತ್ತೆ ಕೆಲವರು ಪರಸ್ಪರರಲ್ಲಿ ಗುಟ್ಟಿನ ಪಿಸುಮಾತುಗಳನ್ನಾಡುತ್ತಿದ್ದರು. ಆ ಸುಸಮೃದ್ಧ ವನವು ಮನಸೆಳೆಯುವ ವೇಣು, ವೀಣಾ ಮತ್ತು ಮೃದಂಗಗಳ ಶಬ್ಧದಿಂದ ತುಂಬಿಕೊಂಡಿತ್ತು.

ಹೀಗೆ ನಡೆಯುತ್ತಿರಲು ಕುರು-ದಾಶಾರ್ಹನಂದನರಿಬ್ಬರೂ ಸಮೀಪದ ಸುಮನೋಹರ ಪ್ರದೇಶವೊಂದನ್ನು ಸೇರಿದರು. ಅಲ್ಲಿ ಹೋಗಿ ಕೃಷ್ಣರು ಸೊಗಸಾದ ಆಸನವೊಂದರಲ್ಲಿ ಕುಳಿತುಕೊಂಡರು. ಅಲ್ಲಿ ಪಾರ್ಥ-ಮಾಧವರು ಹಿಂದಿನ ಬಹಳಷ್ಟು ವಿಕ್ರಾಂತ ಮತ್ತು ಪ್ರೀತಿಯ ಘಟನೆಗಳನ್ನು ಹೇಳಿಕೊಳ್ಳುತ್ತಾ ಸಂತೋಷ ಪಡುತ್ತಿದ್ದರು. ಈ ರೀತಿ ವಾಸುದೇವ-ಧನಂಜಯರು ಸ್ವರ್ಗದಲ್ಲಿರುವ ಅಶ್ವಿನಿಗಳಂತೆ ಸಂತೋಷದಿಂದ ಕುಳಿತುಕೊಂಡಿರಲು ಅಲ್ಲಿಗೆ ವಿಪ್ರನೋರ್ವನು ಆಗಮಿಸಿದನು. ಅವನು ಬೃಹತ್ತಾದ ಶಾಲವೃಕ್ಷದಂತೆ ಎತ್ತರವಾಗಿದ್ದನು. ಕರಗಿಸಿದ ಬಂಗಾರದ ಪ್ರಭೆಯನ್ನು ಹೊಂದಿದ್ದನು. ಕಿತ್ತಳೆ ಬಣ್ಣದವನಾಗಿದ್ದನು. ಅವನ ಗಡ್ಡ ಕೆಂಪಾಗಿತ್ತು. ಸಮ ಪ್ರಮಾಣನಾಗಿ ಆಯತನಾಗಿದ್ದನು. ಉದಯಿಸುತ್ತಿರುವ ಆದಿತ್ಯನಂತಿದ್ದನು. ಕಪ್ಪು ವಸ್ತ್ರಗಳನ್ನು ಧರಿಸಿದ್ದು, ಜಟಾಧರನಾಗಿದ್ದನು. ಕಣ್ಣುಗಳು ಪದ್ಮಪತ್ರಗಳಂತಿದ್ದವು. ಪ್ರಜ್ವಲಿಸುವಂಥಹ ಹಳದಿ ತೇಜಸ್ಸಿನಿಂದ ಕೂಡಿದ್ದನು. ಭ್ರಾಜಿಸುತ್ತಿರುವ ಆ ದ್ವಿಜೋತ್ತಮನನ್ನು ನೋಡಿದ ಕೂಡಲೇ ಕೃಷ್ಣವರ್ಣಿ ಅರ್ಜುನ-ವಾಸುದೇವರು ಎದ್ದು ನಿಂತರು.

ಖಾಂಡವದ ಸಮೀಪದಲ್ಲಿಯೇ ನಿಂತಿದ್ದ ಲೋಕಪ್ರವೀರ ಅರ್ಜುನ ಮತ್ತು ಸಾತ್ವತ ವಾಸುದೇವ ಇಬ್ಬರನ್ನೂ ಉದ್ದೇಶಿಸಿ ಆ ವಿಪ್ರನು ಹೇಳಿದನು:

“ಸದಾ ಅತಿಯಾಗಿ ತಿನ್ನುವ ಬಹುಭೋಕ್ತ ಬ್ರಾಹ್ಮಣನು ನಾನು. ವಾರ್ಷ್ಣೇಯ! ಪಾರ್ಥ! ನಾನು ನಿಮ್ಮಲ್ಲಿ ಒಂದು ಭಿಕ್ಷೆಯನ್ನು ಕೇಳುತ್ತಿದ್ದೇನೆ. ನನ್ನನ್ನು ತೃಪ್ತಗೊಳಿಸಿ.”

ಅವನು ಹೀಗೆ ಹೇಳಲು, ಕೃಷ್ಣ-ಪಾಂಡವರು ಕೇಳಿದರು:

“ಯಾವುದರಿಂದ ನೀನು ತೃಪ್ತಿಗೊಳ್ಳುವೆ? ಅದನ್ನೇ ನಾವು ನಿನಗೆ ತೆಗೆದುಕೊಂಡು ಬರುತ್ತೇವೆ.”  

“ಏನು ಅನ್ನವನ್ನು ತಯಾರಿಸಬೇಕು?” ಎಂದು ಕೇಳುತ್ತಿದ್ದ ಆ ವೀರರಿಗೆ ವಿಪ್ರನು ಹೇಳಿದನು:

“ನಾನು ಅನ್ನವನ್ನು ತಿನ್ನುವುದಿಲ್ಲ! ನನ್ನನ್ನು ಪಾವಕನೆಂದು ತಿಳಿಯಿರಿ. ನನಗೆ ಅನುರೂಪವಾದ ಆಹಾರವನ್ನು ತೆಗೆದುಕೊಂಡು ಬನ್ನಿ! ಇಂದ್ರನು ಸದಾ ಈ ಖಾಂಡವವನ್ನು ಸುಡುವುದರಿಂದ ರಕ್ಷಿಸಿಕೊಂಡು ಬಂದಿದ್ದಾನೆ. ಎಲ್ಲಿಯವರೆಗೆ ಆ ಮಹಾತ್ಮನು ಇದನ್ನು ರಕ್ಷಿಸುತ್ತಾನೋ ಅಲ್ಲಿಯವರೆಗೆ ಇದನ್ನು ಸುಡುವ ಶಕ್ತಿ ನನಗಿಲ್ಲ. ಅವನ ಸಖ ಪನ್ನಗ ತಕ್ಷಕನು ತನ್ನ ಗಣಸಮೇತ ಸದಾ ಇಲ್ಲಿ ವಾಸಿಸುತ್ತಾನೆ. ಅವನಿಗೋಸ್ಕರ ವಜ್ರಭೃತನು ಇದನ್ನು ಸುಡುವುದರಿಂದ ರಕ್ಷಿಸುತ್ತಿದ್ದಾನೆ. ಪ್ರಸಂಗತಃ ಅಲ್ಲಿ ಇನ್ನೂ ಅನೇಕ ಜೀವಿಗಳು ರಕ್ಷಿಸಲ್ಪಟ್ಟಿವೆ. ಶಕ್ರನ ತೇಜಸ್ಸಿನಿಂದಾಗಿ ಅವರ್ಯಾರನ್ನೂ ಸುಡಲು ಶಕ್ತನಾಗಿಲ್ಲ. ನಾನು ಅದನ್ನು ಸುಡುವುದನ್ನು ನೋಡಿದ ಕೂಡಲೇ ಅವನು ಮೋಡಗಳಿಂದ ಕೂಡಿದ ಧಾರಕಾರ ಮಳೆಯನ್ನು ಸುರಿಸುತ್ತಾನೆ. ಆಗ ನನಗೆ ಸುಡಬೇಕೆಂದು ಎಷ್ಟು ಆಸೆಯಿದ್ದರೂ ನಾನು ಅದನ್ನು ಸುಡಲು ಶಕ್ತನಾಗುವುದಿಲ್ಲ. ಅಸ್ತ್ರವಿದ ನಿಮ್ಮಿಬ್ಬರನ್ನೂ ಭೆಟ್ಟಿಯಾಗಿ ಸಹಾಯವನ್ನು ಕೇಳಿದ್ದೇನಾದ್ದರಿಂದ ನಾನು ಈಗ ಖಾಂಡವವನ್ನು ಸುಡುತ್ತೇನೆ. ಇದೇ ನಾನು ಕೇಳಿಕೊಳ್ಳುವ ಆಹಾರ. ಉತ್ತಮ ಅಸ್ತ್ರವಿದರಾದ ನೀವು ಎಲ್ಲ ಜೀವಿಗಳನ್ನೂ ಮೋಡಗಳನ್ನೂ ಎಲ್ಲ ಕಡೆಗಳಿಂದಲೂ ತಡೆಹಿಡಿಯಬಲ್ಲಿರಿ.”

ಅಗ್ನಿಯು ಕೃಷ್ಣಾರ್ಜುನರಿಗೆ ವರುಣನ ಗಾಂಡೀವ ಧನುಸ್ಸನ್ನು, ಅಕ್ಷಯ ಭತ್ತಳಿಕೆಗಳನ್ನೂ, ಚಕ್ರ-ಗದೆಗಳನ್ನೂ, ದಿವ್ಯ ರಥವನ್ನೂ ನೀಡಿದುದು

ಇದನ್ನು ಕೇಳಿದ ಬೀಭತ್ಸುವು ಶತಕ್ರತುವನ್ನು ಮೀರಿಯೂ ಖಾಂಡವವನ್ನು ಸುಡಲು ಬಯಸುತ್ತಿದ್ದ ಜಾತವೇದಸನನ್ನುದ್ದೇಶಿಸಿ ಹೇಳಿದನು:

“ನನ್ನಲ್ಲಿ ಅನೇಕ ವಜ್ರಧರರೊಂದಿಗೆ ಯುದ್ಧಮಾಡಲು ಸಾಧ್ಯವಾಗುವ ಬಹಳಷ್ಟು ಉತ್ತಮ ದಿವ್ಯಾಸ್ತ್ರಗಳಿವೆ. ಆದರೆ ಭಗವನ್! ನನ್ನ ಬಾಹುವೀರ್ಯಕ್ಕೆ ಸಮಾನವಾದ, ಮತ್ತು ಸಮರದಲ್ಲಿ ನನ್ನ ಯತ್ನ ಮತ್ತು ವೇಗಗಳನ್ನು ಸಹಿಸಬಲ್ಲಂಥ ಧನುಸ್ಸು ಇಲ್ಲವಾಗಿದೆ. ಮತ್ತು ನಾನು ವೇಗದಲ್ಲಿ ಬಾಣಗಳನ್ನು ಬಿಡುವಾಗ ನನಗೊಂದು ಅಕ್ಷಯ ಭತ್ತಳಿಕೆ ಬೇಕಾಗಿದೆ. ನನ್ನಲ್ಲಿರುವ ಎಲ್ಲ ಶರಗಳನ್ನೂ ಈ ರಥವು ಹೊರಲು ಸಾಧ್ಯವಿಲ್ಲ. ವಾಯುವೇಗದ ಬಿಳಿ ದಿವ್ಯಾಶ್ವಗಳು ಬೇಕು. ಮೇಘನಿರ್ಘೋಷ ಮತ್ತು ತೇಜಸ್ಸಿನಲ್ಲಿ ಸೂರ್ಯಪ್ರತಿಮೆ ರಥವೂ ಬೇಕು. ಅದೇ ರೀತಿ ಈ ನಾಗಗಳು ಮತ್ತು ಪಿಶಾಚಿಗಳನ್ನು ರಣದಲ್ಲಿ ಸಂಹರಿಸಲು ಕೃಷ್ಣ ಮಾಧವನಲ್ಲಿಯೂ ಕೂಡ ಅವನ ವೀರ್ಯಕ್ಕೆ ಸರಿಸಾಟಿ ಆಯುಧವಿಲ್ಲ. ಈ ಕೆಲಸದಲ್ಲಿ ಯಶಸ್ವಿಯಾಗುವ ಉಪಾಯವನ್ನು ಹೇಳಬೇಕು. ಇದರಿಂದ ಇಂದ್ರನು ಈ ಮಹಾವನದ ಮೇಲೆ ಮಳೆಯನ್ನು ಸುರಿಸದಂತೆ ತಡೆಗಟ್ಟಬಹುದು. ಪೌರುಷದಿಂದ ಮಾಡಬೇಕಾದ ಕಾರ್ಯವೆಲ್ಲವನ್ನೂ ನಾವು ಮಾಡುತ್ತೇವೆ. ಅದಕ್ಕೆ ಸಮರ್ಥ ಕರಣಗಳನ್ನು ನೀಡಬೇಕು.”

ಇದನ್ನು ಕೇಳಿದ ಧೂಮಕೇತು ಭಗವಾನ್ ಹುತಾಶನನು ಲೋಕಪಾಲ ವರುಣನನ್ನು ನೋಡಬೇಕೆಂದು ಆ ಉದಕವಾಸಿ ಜಲೇಶ್ವರ ಆದಿತ್ಯನನ್ನು ನೆನೆದನು. ಅವನ ಯೋಚನೆಯನ್ನು ತಿಳಿದ ಅವನು ಪಾವಕನಿಗೆ ಕಾಣಿಸಿಕೊಂಡನು. ಧೂಮಕೇತುವು ಲೋಕಪಾಲಕರಲ್ಲಿ ನಾಲ್ಕನೆಯವನಾದ ರಕ್ಷಕ ಮಹೇಶ್ವರ ಜಲೇಶ್ವರನನ್ನು ಪೂಜಿಸಿ ಹೇಳಿದನು:  

“ರಾಜ ಸೋಮನು ನಿನಗೆ ಒಮ್ಮೆ ನೀಡಿದ್ದ ಧನುಸ್ಸು, ಎರಡು ಭತ್ತಳಿಕೆಗಳು ಮತ್ತು ಕಪಿಲಕ್ಷಣದ ರಥವನ್ನು ಶೀಘ್ರದಲ್ಲಿಯೇ ಇವರೀರ್ವರಿಗೆ ಕೊಡು. ಆ ಗಾಂಡೀವದಿಂದ ಪಾರ್ಥನು ಒಂದು ಸುಮಹತ್ತರ ಕಾರ್ಯವನ್ನು ನೆರವೇರಿಸುತ್ತಾನೆ. ನನಗೋಸ್ಕರವಾಗಿ ವಾಸುದೇವನಿಗೆ ಚಕ್ರವನ್ನು ನೀಡು."

“ಇವುಗಳನ್ನು ಕೊಡುತ್ತೇನೆ”ಎಂದು ವರುಣನು ಪಾವಕನಿಗೆ ಉತ್ತರಿಸಿದನು. ಆಗ ಆ ಅದ್ಭುತ, ಮಹಾವೀರ್ಯ, ಯಶಸ್ಸು ಮತ್ತು ಕೀರ್ತಿಗಳನ್ನು ಹೆಚ್ಚಿಸುವ, ಎಲ್ಲ ಶಸ್ತ್ರಗಳಿಗೂ ಅನಾದೃಷ, ಸರ್ವಶಸ್ತ್ರ ಪ್ರಮಥಿ, ಸರ್ವಾಯುಧ ಮಹಾಮಾತ್ರವಾದ, ಪರಸೇನೆಯನ್ನು ತತ್ತರಿಸುವ, ಒಂದೇ ಒಂದು ಲಕ್ಷಕ್ಕೆ ಸಮನಾದ, ರಾಷ್ಟ್ರವಿವರ್ಧಕ, ರತ್ನಗಳಿಂದ ಅಲಂಕೃತ, ಸುಂದರ ಬಣ್ಣದ, ನುಣುಪಾದ, ಯಾವುದೇರೀತಿಯ ಗಾಯಗಳು ಇಲ್ಲದ, ಅನಾದಿಕಾಲದಿಂದಲೂ ದೇವದಾನವಗಂಧರ್ವರಿಂದ ಪೂಜಿತ, ಆ ಧನುರತ್ನವನ್ನೂ, ಹಾಗೆಯೇ ಅಕ್ಷಯ ಭತ್ತಳಿಕೆಯನ್ನೂ, ದಿವ್ಯಾಶ್ವಗಳಿಂದ ಕೂಡಿದ, ಗಂಧರ್ವರ ಬೆಳ್ಳಿಯ ಬಣ್ಣದ ಕುದುರೆಗಳಿಂದ ಎಳೆಯಲ್ಪಡುವ, ಕಪಿಪ್ರವರ ಕೇತನವನ್ನು ಹೊಂದಿದ್ದ, ಹೇಮ ಮಾಲೆಗಳಿಂದ ಅಲಂಕೃತ, ಆಕಾಶದಲ್ಲಿ ಮೋಡಗಳಂತೆ ಕಾಣುವ, ವಾಯು ಅಥವಾ ಮನೋವೇಗವನ್ನು ಹೊಂದಿದ ರಥವನ್ನು ನೀಡಿದನು. ಅದು ಸರ್ವೋಪಕರಣಗಳಿಂದ ಯುಕ್ತವಾಗಿತ್ತು, ದೇವದಾನವರಿಂದ ಅಜೇಯವಾಗಿತ್ತು, ಹೊಳೆಯುತ್ತಿತ್ತು ಮತ್ತು ಸರ್ವಭೂತಮನೋಹರ ಮಹಾಘೋಷವನ್ನು ನೀಡುತ್ತಿತ್ತು. ರವಿಯಂತೆ ರೂಪವನ್ನೂ ವರ್ಣಿಸಲಸಾಧ್ಯವಾದ ಆ ರಥವನ್ನು ಭುವನಪ್ರಭು ಪ್ರಜಾಪತಿ ವಿಶ್ವಕರ್ಮನು ತನ್ನ ತಪಸ್ಸಿನಿಂದ ಸೃಷ್ಠಿಸಿದ್ದನು. ಪ್ರಭು ಸೋಮನು ಅದನ್ನು ಏರಿ ದಾನವರನ್ನು ಜಯಿಸಿದ್ದನು. ಆನೆ ಅಥವಾ ಮೇಘವನ್ನು ಹೋಲುತ್ತಿದ್ದ ಅದು ತನ್ನ ಸೌಂದರ್ಯದಿಂದ ಜ್ವಲಿಸುತ್ತಿತ್ತು. ಆ ಶ್ರೇಷ್ಠ ರಥದಲ್ಲಿ ಶಕ್ರನ ಆಯುಧದಂತಿದ್ದ ಬಂಗಾರದಿಂದ ಮಾಡಲ್ಪಟ್ಟ, ಸುಂದರ ಉತ್ತಮ ಶುಭ ಧ್ವಜವೊಂದು ನಿಂತಿತ್ತು. ಅದರ ಮೇಲೆ ಸಿಂಹಶಾರ್ದೂಲ ಲಕ್ಷಣಗಳಿಂದ ಕೂಡಿದ, ಇನ್ನೇನು ಘರ್ಜಿಸುತ್ತಾನೋ ಎನ್ನುವಂತಿರುವ ದಿವ್ಯ ವಾನರನು ಶೋಭಿಸುತ್ತಿದ್ದನು. ಧ್ವಜದ ಮೇಲೆ ವಿವಿಧ ಮಹಾ ಭೂತಗಳು ವಾಸಿಸುತ್ತಿದ್ದು ತಮ್ಮ ನಾದದಿಂದ ರಿಪುಸೈನ್ಯಗಳನ್ನು ಮೂರ್ಛಿತಗೊಳಿಸುತ್ತಿದ್ದವು.

ಅನಂತರ ಪಾರ್ಥನು ನಾನಾಪತಾಕಗಳಿಂದ ಶೋಭಿತ ಆ ಉತ್ತಮ ರಥವನ್ನು ಪ್ರದಕ್ಷಿಣೆಮಾಡಿ ದೇವತೆಗಳಿಗೆ ವಂದಿಸಿ, ಕವಚ-ಖಡ್ಗಗಳನ್ನು ಧರಿಸಿ, ಬೆರಳು-ಕೈಗಳಿಗೆ ಕಟ್ಟಿ ಸನ್ನದ್ಧನಾಗಿ, ಪುಣ್ಯವಂತನು ವಿಮಾನವನ್ನು ಏರುವಂತೆ, ರಥವನ್ನು ಏರಿದನು. ಹಿಂದೆ ಬ್ರಹ್ಮನಿಂದ ನಿರ್ಮಿತ ದಿವ್ಯ ಶ್ರೇಷ್ಠ ಧನು ಗಾಂಡೀವವನ್ನು ಕೈಗೆತ್ತಿಹಿಡಿದ ಅರ್ಜುನನು ಮುದಿತನಾದನು. ಹುತಾಶನನನ್ನು ನಮಸ್ಕರಿಸಿ ವೀರ್ಯವಾನನು ಧನುಸ್ಸಿಗೆ ಶಿಂಜನಿಯನ್ನು ಬಲವಾಗಿ ಬಿಗಿದನು. ಬಲಶಾಲಿ ಪಾಂಡವನು ತನ್ನ ಧನುಸ್ಸಿಗೆ ನೀಡಿದ ಠೇಂಕಾರವನ್ನು ಕೇಳಿದವರ ಮನಸ್ಸು ತತ್ತರಿಸಿತು. ರಥವನ್ನೂ, ಧನುವನ್ನೂ ಮತ್ತು ಎರಡು ಅಕ್ಷಯ ಬತ್ತಳಿಕೆಗಳನ್ನೂ ಪಡೆದ ಕೌಂತೇಯನು ಸಂತೋಷಗೊಂಡು ಮುಂದಿರುವ ಕಾರ್ಯಕ್ಕೆ ಉತ್ಸುಕನಾದನು.

ಅನಂತರ ಪಾವಕನು ಕೃಷ್ಣನಿಗೆ ವಜ್ರನಾಭ ಚಕ್ರವನ್ನು ನೀಡಿದನು. ಅವನೂ ಕೂಡ ತನಗೆ ಅತ್ಯಂತ ಪ್ರಿಯವಾದ ಆ ಭೀಷಣ ಅಸ್ತ್ರವನ್ನು ಪಡೆದು ಶಕ್ತಿಸಮನ್ವಿತನಾಗಿ ತಯಾರಾದನು. ಪಾವಕನು ಹೇಳಿದನು:

“ಮಧುಸೂದನ! ಇದರಿಂದ ನೀನು ಅಮಾನುಷರನ್ನೂ ರಣದಲ್ಲಿ ಗೆಲ್ಲುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದ ನೀನು ಯಾರನ್ನೇ ಆಗಲಿ - ಮನುಷ್ಯ, ದೇವ, ರಾಕ್ಷಸ, ಪಿಶಾಚಿ, ದೈತ್ಯ, ನಾಗ ಮತ್ತು ಇತರರನ್ನೂ ಸದಾ ಸೋಲಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾಧವ! ರಣದಲ್ಲಿ ನೀನು ಎಷ್ಟು ಬಾರಿ ಇದನ್ನು ಬಿಟ್ಟರೂ ಅದು ವೈರಿಗಳನ್ನು ಸಂಹರಿಸಿ ಪುನಃ ನಿನ್ನ ಕೈ ಬಂದು ಸೇರುತ್ತದೆ.”

ವರುಣನು ಹರಿಗೆ ಗುಡುಗಿನಂತೆ ಗರ್ಜಿಸಬಲ್ಲ, ಘೋರ ದೈತ್ಯರ ಅಂತಕಾರಿಣಿಯಾಗಿದ್ದ, ಕೌಮೋದಕೀ ಎಂಬ ಹೆಸರಿನ ಗದೆಯನ್ನೂ ನೀಡಿದನು. ನಂತರ ಪ್ರಹೃಷ್ಟ ಕೃಷ್ಣಪಾಂಡವರು ಪಾವಕನಿಗೆ ಹೇಳಿದರು:

“ಭಗವನ್! ಅಸ್ತ್ರಗಳನ್ನು ಪಡೆದು ಶಸ್ತ್ರಸಂಪನ್ನರಾಗಿ ರಥ ಮತ್ತು ಧ್ವಜಗಳನ್ನೂ ಪಡೆದು ಸುರಾಸುರರೆಲ್ಲರೊಡನೆಯೂ ಯುದ್ಧಮಾಡಲು ಉತ್ಸುಕರಾಗಿದ್ದೇವೆ. ಪನ್ನಗನಿಗಾಗಿ ಏಕಾಂಗಿಯಾಗಿ ಯುದ್ಧಮಾಡಲು ಸಿದ್ಧನಿರುವ ಇಂದ್ರನೇನಂತೆ!” 

ಅರ್ಜುನನು ಹೇಳಿದನು:

“ವೀರ್ಯವಾನ್ ವಾರ್ಷ್ಣೇಯನು ಯುದ್ಧದಲ್ಲಿ ಚಕ್ರಾಸ್ತ್ರವನ್ನು ಪ್ರಯೋಗಿಸಿದನೆಂದರೆ ಜನಾರ್ದನನು ಗೆಲ್ಲಲಿಕ್ಕಾಗದೇ ಇರುವ ಏನೂ ಈ ಮೂರು ಲೋಕಗಳಲ್ಲಿ ಇಲ್ಲದಂತಾಗುತ್ತದೆ. ನನ್ನ ಈ ಗಾಂಡೀವ ಧನುಸ್ಸು ಮತ್ತು ಈ ಎರಡು ಅಕ್ಷಯ ಭತ್ತಳಿಕೆಗಳಿಂದ ನಾನೂ ಕೂಡ ಯುದ್ಧದಲ್ಲಿ ಲೋಕಗಳನ್ನು ಗೆಲ್ಲಬಲ್ಲೆ ಎಂಬ ಉತ್ಸಾಹವಿದೆ ಪಾವಕ! ಈಗ ಮಹಾ ಪ್ರಜ್ವಾಲೆಗಳಿಂದ ನಿನಗಿಷ್ಟ ಬಂದಹಾಗೆ ಈ ಅರಣ್ಯವನ್ನು ಸುತ್ತುವರೆ. ನಾವು ಈ ಕಾರ್ಯದಲ್ಲಿ ಸಹಭಾಗಿಗಳಾಗಲು ಸಿದ್ಧರಿದ್ದೇವೆ.”

ಖಾಂಡವ ದಹನ

ಅರ್ಜುನ ಮತ್ತು ದಾಶಾರ್ಹನ ಈ ಮಾತುಗಳನ್ನು ಕೇಳಿದ ಭಗವಾನನು ತನ್ನ ತೇಜಸ್ವಿ ರೂಪ ಧಾರಣಮಾಡಿ ಅರಣ್ಯವನ್ನು ಸುಡಲು ಪ್ರಾರಂಭಿಸಿದನು. ಎಲ್ಲ ಕಡೆಗಳಿಂದಲೂ ಸುತ್ತುವರೆದು ತನ್ನ ಏಳು ಜ್ವಾಲೆಗಳ ಮೂಲಕ ಆ ಕೃದ್ಧನು ಖಾಂಡವವನ್ನು ಸುಡುತ್ತಿರಲು ಯುಗವೇ ಅಂತ್ಯವಾಗುತ್ತಿದೆಯೋ ಎನ್ನುವಂತೆ ತೋರುತ್ತಿತ್ತು. ಆ ವನವನ್ನು ಸುತ್ತುವರೆದು ಮೇಲೆರಗಿ ಮಳೆಗಾಲದ ಮೋಡಗಳ ಗುಡುಗಿನಂತೆ ಗರ್ಜಿಸುತ್ತಾ ಸರ್ವಭೂತಗಳನ್ನೂ ಭುಗಿಲೆಂದು ಉರಿಯುತ್ತಿರುವ ಆ ವನವು ಕಾಂಚನ ಮಹಾದ್ಯುತಿ ನಗೇಂದ್ರ ಮೇರುವಿನಂತೆ ತೋರುತ್ತಿತ್ತು.

ಅರಣ್ಯದ ಎರಡು ಕಡೆಗಳಲ್ಲಿ ರಥವನ್ನೇರಿ ನಿಂತಿದ್ದ ಆ ಇಬ್ಬರು ನರವ್ಯಾಘ್ರರು ಸರ್ವ ಭೂತಗಳ ಮಹಾ ಸಂಹಾರ ಕಾರ್ಯದಲ್ಲಿ ತೊಡಗಿದರು. ಎಲ್ಲೆಲ್ಲಿ ಖಾಂಡವವನ್ನು ಬಿಟ್ಟು ಓಡಿಹೋಗುತ್ತಿರುವ ಪ್ರಾಣಿಗಳು ಕಂಡುಬರುತ್ತಿದ್ದವೋ ಅಲ್ಲಲ್ಲಿ ಅವುಗಳನ್ನು ಬೆನ್ನಟ್ಟಿ ಆ ವೀರರು ಕೆಳಗುರುಳಿಸುತ್ತಿದ್ದರು. ರಥದ ಮಹಾವೇಗದಿಂದಾಗಿ ತಪ್ಪಿಸಿಕೊಂಡು ಹೋಗಲು ಯಾವುದೇ ಮಾರ್ಗವೂ ತೋರಿಬರುತ್ತಿರಲಿಲ್ಲ. ರಥಗಳೆರಡೂ ಮತ್ತು ರಥಿಗಳೆರಡೂ ಅತಿ ಬಲವಾದ ಜೋಡಿಗಳಾಗಿ ತೋರುತ್ತಿದ್ದರು. ಖಾಂಡವವು ಹತ್ತಿ ಉರಿಯುತ್ತಿರಲು ಅದರಲ್ಲಿದ್ದ ಸಹಸ್ರಾರು ಜೀವಿಗಳು ಭೈರವ ಧ್ವನಿಗಳಲ್ಲಿ ಚೀರುತ್ತಾ ಹತ್ತು ದಿಕ್ಕುಗಳಲ್ಲಿ ಹಾರತೊಡಗಿದವು. ಬಹಳಷ್ಟು ಒಂದೇ ಸ್ಥಳದಲ್ಲಿ ಸುಟ್ಟುಹೋದವು, ಇನ್ನು ಕೆಲವು ಅಲ್ಲಲ್ಲಿ ಹರಡಿ ಚೆಲ್ಲಿ ಮೂರ್ಛೆ ತಪ್ಪಿ ಕಣ್ಣುಗಳು ಒಡೆದು ಬೆಂದು ಹೋದವು. ಕೆಲವರು ತಮ್ಮ ಮಕ್ಕಳನ್ನು, ಇನ್ನು ಕೆಲವರು ತಮ್ಮ ತಂದೆ ತಾಯಿಯರನ್ನು ತ್ಯಜಿಸಲಾರದೆ ಸ್ನೇಹದಿಂದ ಶೋಕದಿಂದ ಅಪ್ಪಿ ಹಿಡಿದು ಅಲ್ಲಿಯೇ ನಿಧನರಾದರು. ಇನ್ನು ಕೆಲವರು ನೋಡಲು ವಿಕೃತರಾಗಿ ಸಹಸ್ರಾರು ಸಂಖ್ಯೆಗಳಲ್ಲಿ ಮೇಲೆ ಹಾರಿ ಅಲ್ಲಲ್ಲಿ ಪುನಃ ಉರಿಯುತ್ತಿರುವ ಅಗ್ನಿಯಲ್ಲಿ ಬಿದ್ದರು. ಅಲ್ಲಲ್ಲಿ ಭೂಮಿಯ ಮೇಲೆ ವಿಚೇಷ್ಟರಾಗಿ ರೆಕ್ಕೆ, ಕಣ್ಣು ಮತ್ತು ಪಂಜಗಳು ಸಹಿತ ದೇಹವೆಲ್ಲ ಸುಟ್ಟು ವಿನಾಶರಾಗಿದ್ದುದು ಕಾಣುತ್ತಿತ್ತು. ಎಲ್ಲ ಜಲಸ್ಥಾನಗಳು ಕುದಿಯುತ್ತಿರಲು ಆಮೆ ಮೀನುಗಳು ಸಹಸ್ರಾರು ಸಂಖ್ಯೆಗಳಲ್ಲಿ ಸತ್ತು ಬಿದ್ದಿರುವುದು ಕಾಣುತ್ತಿತ್ತು. ಆ ವನದಲ್ಲಿದ್ದ ಪ್ರಾಣಿಗಳೆಲ್ಲವೂ ಉರಿಯುತ್ತಿರುವ ಶರೀರಗಳಿಂದ ಉರಿಯುತ್ತಿರುವ ಬೆಂಕಿಗಳಂತೆ ತೋರುತ್ತಿದ್ದು ತಮ್ಮ ಪ್ರಾಣಗಳನ್ನು ಕಳೆದುಕೊಂಡು ನಾಶವಾಗುತ್ತಿದ್ದರು. ಅವರು ಹೊರಗೆ ಹಾರಲು ಪಾರ್ಥನು ನಗುತ್ತಾ ಶರಗಳಿಂದ ಹೊಡೆದು ತುಂಡುಮಾಡಿ ಉರಿಯುತ್ತಿರುವ ಬೆಂಕಿಯಲ್ಲಿ ಪುನಃ ಬೀಳಿಸುತ್ತಿದ್ದನು. ಸರ್ವಾಂಗಗಳೂ ಶರಗಳಿಂದ ಚುಚ್ಚಿರಲು ಮಹಾ ರೋದನೆಯಿಂದ ವೇಗದಿಂದ ಮೇಲಕ್ಕೆ ಹಾರಿ ಪುನಃ ಅಗ್ನಿಯಲ್ಲಿ ಬೀಳುತ್ತಿದ್ದವು. ಶರಗಳಿಂದ ಹೊಡೆಯಲ್ಪಟ್ಟು ಸುಟ್ಟುಹೋಗುತ್ತಿದ್ದ ಆ ವನೌಕಸರ ರೋದನೆಯು ಮಥಿಸಲ್ಪಟ್ಟ ಸಮುದ್ರದಂತೆ ಕೇಳಿಬರುತ್ತಿತ್ತು. ಸಂತೋಷದಿಂದ ಭುಗಿಲೆಂದು ಉರಿಯುತ್ತಿರುವ ಬೆಂಕಿಯು ಆಕಾಶವನ್ನು ಮುಟ್ಟಿ ದಿವೌಕಸರಲ್ಲಿ ಮಹಾ ಉದ್ವೇಗವನ್ನು ಉಂಟುಮಾಡಿತು. ಆಗ ಮಹಾತ್ಮ ದಿವೌಕಸರೆಲ್ಲರೂ ದೇವರಾಜ ಸಹಸ್ರಾಕ್ಷ ಪುರಂದರನ ಶರಣು ಹೊಕ್ಕರು. ದೇವತೆಗಳು ಹೇಳಿದರು:

“ಇವರೆಲ್ಲರೂ ಏಕೆ ಬೆಂಕಿಯಲ್ಲಿ ಸುಟ್ಟುಹೋಗುತ್ತಿದ್ದಾರೆ? ಲೋಕಗಳ ಅಮರೇಶ್ವರ! ಪ್ರಳಯವೇನಾದರೂ ಪ್ರಾಪ್ತವಾಗಿದೆಯೇ?””

ಅವರ ಈ ಮಾತುಗಳನ್ನು ಕೇಳಿದ ವೃತ್ರಹ ಹರಿವಾಹನನು ಸ್ವತಃ ಕೆಳಗಿ ಇಣುಕಿ ನೋಡಿ ಖಾಂಡವದ ವಿಮೋಕ್ಷಕ್ಕಾಗಿ ಧಾವಿಸಿದನು. ವಜ್ರಭೃತ ಸುರೇಶ್ವರನು ನಾನಾರೂಪದ ಮಹಾಮೇಘಜಾಲದಿಂದ ಆಕಾಶವನ್ನು ತುಂಬಿಸಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಸಹಸ್ರಾಕ್ಷನು ಖಾಂಡವವನ್ನು ಸುಡುತ್ತಿದ್ದ ಪಾವಕನ ಮೇಲೆ ನೂರಾರು ಸಾವಿರಾರು ಮಳೆಗಳ ಧಾರೆಗಳನ್ನು ಸುರಿಸಿದನು. ಆದರೆ ಆ ಮಳೆಯ ಧಾರೆಗಳು ಕೆಳಗೆ ತಲುಪುವುದರೊಳಗೇ ಜಾತವೇದಸನ ತೇಜಸ್ಸಿನಿಂದ ಬತ್ತಿ ಆವಿಯಾಗಿ ಪಾವಕನನ್ನು ಮುಟ್ಟದೆಯೇ ಹೋದವು. ಆಗ ನಮೂಚಿಹನು ಅಗ್ನಿಯ ಮೇಲೆ ಅತ್ಯಂತ ಕೋಪಗೊಂಡು ಇನ್ನೂ ಹೆಚ್ಚಿನ ಮಳೆಯನ್ನು ಸುರಿಸಲು ಪುನಃ ಪ್ರಾರಂಭಿಸಿದನು. ಬೆಂಕಿ ಮತ್ತು ಮಳೆಯ ಯುದ್ಧವು ನಡೆಯುತ್ತಿರಲು ಹೊಗೆ ಮಿಂಚುಗಳ ಮಿಶ್ರಣದಿಂದ ಮತ್ತು ಮೇಘಘರ್ಜನೆಗಳಿಂದ ಆ ವನವು ಘೋರರೂಪವನ್ನು ತಾಳಿತು.

ಬೀಭತ್ಸು ಪಾಂಡವನು ಶರಗಳ ಮಳೆಯನ್ನು ಸುರಿಸಿ ಆ ಮಳೆಯನ್ನು ತಡೆದು ಅಸ್ತ್ರಗಳಲ್ಲಿ ತನಗಿದ್ದ ಉತ್ತಮ ಪ್ರವೀಣತೆಯನ್ನು ತೋರಿಸಿದನು. ಪಾಂಡವನು ಇಡೀ ಖಾಂಡವವನ್ನು ಶರಗಳಿಂದ ಮುಚ್ಚಿ ಇಂದ್ರನ ಮಳೆಯು ವನವನ್ನು ತಲುಪದಂತೆ ತಡೆಹಿಡಿದನು. ಸವ್ಯಸಾಚಿಯು ಆಕಾಶದಲ್ಲಿ ಹಾರುತ್ತಿರುವ ಶರಗಳಿಂದ ಮುಚ್ಚಿದಾಗ ಅಲ್ಲಿಂದ ಯಾವುದೇ ಒಂದು ಜೀವಿಯೂ ತಪ್ಪಿಸಿಕೊಳ್ಳುವಂತಿರಲಿಲ್ಲ. ಆದರೆ ಸರ್ಪರಾಜ ಮಹಾಬಲ ತಕ್ಷಕನು ಅಲ್ಲಿರಲಿಲ್ಲ. ವನವು ಸುಡುತ್ತಿರುವಾಗ ಅವನು ಕುರುಕ್ಷೇತ್ರದಲ್ಲಿದ್ದನು. ಆದರೆ ತಕ್ಷಕನ ಬಲಶಾಲಿ ಮಗ ಅಶ್ವಸೇನನು ಅಲ್ಲಿದ್ದನು. ಅವನು ಹವ್ಯವಾಹನನಿಂದ ತಪ್ಪಿಸಿಕೊಳ್ಲಲು ತೀವ್ರ ಪ್ರಯತ್ನವನ್ನು ಮಾಡಿದನು. ಕೌಂತೇಯನ ಶರಗಳಿಂದ ಸುತ್ತುವರೆಯಲ್ಪಟ್ಟ ಅವನಿಗೆ ಹೊರಬರಲು ಸಾಧ್ಯವಾಗಲಿಲ್ಲ. ಅವನ ತಾಯಿ ಭುಜಗಾತ್ಮಜೆಯು ಅವನನ್ನು ನುಂಗಿ ಉಳಿಸಲು ಪ್ರಯತ್ನಿಸಿದಳು. ಅವಳು ಮೊದಲು ಅವನ ಶಿರವನ್ನು ನುಂಗಿದಳು. ಅವನ ಬಾಲವನ್ನು ನುಂಗುತ್ತಿರುವಾಗ ಆ ಮನ್ನಗಿ ಪುತ್ರಗೃದ್ದಿನಿಯು ಮೇಲೆ ಹಾರಲು ಪ್ರಯತ್ನಿಸಿದಳು. ಆಗ ಪಾಂಡವನು ವಿಶಾಲಧಾರೆಯ ತೀಕ್ಷ್ಣ ಭಲ್ಲದಿಂದ ಅವಳ ಶಿರವನ್ನು ಕತ್ತರಿಸಿದನು ಮತ್ತು ಅದನ್ನು ಸುರೇಶ್ವರನು ನೋಡಿದನು. ಆಗ ವಜ್ರಿಯು ಅವನನ್ನು ಉಳಿಸಲು ಪ್ರಯತ್ನಿಸಿ ಪಾಂಡವನ ಮೇಲೆ ಮಾಯೆಯ ಭಿರುಗಾಳಿ ಮಳೆಗಳನ್ನು ಸುರಿಸಿದನು. ಅದೇ ಸಮಯದಲ್ಲಿ ಅಶ್ವಸೇನನು ತಪ್ಪಿಸಿಕೊಂಡನು. ಆ ಘೋರ ನಾಗಗಳ ಮಾಯೆ ಮತ್ತು ಮೋಸವನ್ನು ಕಂಡ ಅವನು ಆಕಾಶದ ಕಡೆ ಹಾರುತ್ತಿರುವ ನಾಗಗಳನ್ನು ಎರಡು ಮೂರು ಭಾಗಗಳನ್ನಾಗಿ ಕತ್ತರಿಸಿ ತುಂಡುಮಾಡಿದನು. ಸಂಕೃದ್ಧ ಬೀಭತ್ಸು, ಪಾವಕ ಮತ್ತು ವಾಸುದೇವನೂ ಕೂಡ ಆ ನಾಗಕ್ಕೆ ಅಪ್ರತಿಷ್ಠನಾಗು ಎಂದು ಶಪಿಸಿದರು. ಆಗ ಜಿಷ್ಣುವು ಸಹಸ್ರಾಕ್ಷನು ಮಾಡಿದ ವಂಚನೆಯಿಂದ ಸಂಕೃದ್ಧನಾಗಿ ಆಕಾಶವನ್ನು ಶರಗಳಿಂದ ತುಂಬಿ ಅವನೊಡನೆ ಯುದ್ಧ ಮಾಡಿದನು. ಕುಪಿತ ಫಲ್ಗುನನನ್ನು ನೋಡಿ ದೇವರಾಜನು ಇಡೀ ನಭವನ್ನೇ ಬೆಳಗಿಸುವಂತಿದ್ದ ಉರಿಯುತ್ತಿರುವ ತನ್ನ ಅಸ್ತ್ರವನ್ನು ಪ್ರಯೋಗಿಸಿದನು. ಆಗ ವಾಯುವು ಮಹಾಘೋಷದೊಂದಿಗೆ ಸರ್ವಸಾಗರಗಳನ್ನು ಕ್ಷೋಭಿಸುತ್ತಾ ಭಾರೀ ಮಳೆಯನ್ನು ತರುವ ಗಿರಿಗಳಂತಿರುವ ಮೋಡಗಳ ಸಂಕುಲವನ್ನೇ ಉಂಟುಮಾಡಿದನು. ತನ್ನ ರಕ್ಷಣೆಯನ್ನು ಅರಿತಿದ್ದ ಅರ್ಜುನನು ಅವನನ್ನು ತಡೆಯಲು ಉತ್ತಮ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು. ಅದರಿಂದ ಇಂದ್ರನ ಮಳೆಮೋಡಗಳ ವೀರ್ಯ ಓಜಸ್ಸನ್ನು ನಾಶಮಾಡಿದನು. ಮೋಡಗಳು ಬತ್ತಿಹೋದವು. ಮಿಂಚು ನಿಂತುಹೋಯಿತು. ಕ್ಷಣದಲ್ಲಿ ಆಕಾಶದಲ್ಲಿಯ ರಜ ಮತ್ತು ತಮಗಳು ಪ್ರಶಾಂತವಾಗಿ, ಸುಖಶೀತಲವು ಬೀಸಿ ಅರ್ಕಮಂಡಲವು ಸ್ವಭಾವಕ್ಕೆ ತೆರಳಿತು. ವಿರೋಧಗಳೇನೂ ಇಲ್ಲದೇ ಪ್ರಹೃಷ್ವ ಅಗ್ನಿಯು ವಿವಿಧಾಕೃತಿಯಲ್ಲಿ ಪ್ರಜ್ವಲಿಸಿ ತನ್ನ ನಾದದಿಂದ ಜಗತ್ತನ್ನು ತುಂಬಿ ಸುಡತೊಡಗಿದನು.

ಕೃಷ್ಣರಿಬ್ಬರೂ ಆ ಕಾಡ್ಗಿಚ್ಚನ್ನು ರಕ್ಷಿಸುತ್ತಿರುವುದನ್ನು ನೋಡಿದ ಗರುಡನೇ ಮೊದಲಾದ ಪಕ್ಷಿಗಳು ಆಕಾಶಕ್ಕೆ ಹಾರಿದವು. ಗರುಡನು ಅವರನ್ನು ಹೊಡೆಯಲೋಸುಗ ತನ್ನ ವಜ್ರಸದೃಶ ರೆಕ್ಕೆ, ಕೊಕ್ಕು ಮತ್ತು ಪಂಜಗಳಿಂದ ಕೃಷ್ಣಪಾಂಡವರ ಮೇಲೆ ಎರಗಿದನು. ಹಾಗೆಯೇ ಉರಗಸಂಘಾತಗಳು ತಮ್ಮ ಜ್ವಲಿಸುತ್ತಿರುವ ಬಾಯಿಗಳಿಂದ ಘೋರ ವಿಷವನ್ನು ಕಾರುತ್ತಾ ಪಾಂಡವನ ಸಮೀಪಕ್ಕೆ ಧಾವಿಸಿದವು. ಆಕಾಶಗಾಮಿಗಳು ರೋಷದಿಂದ ಧಾವಿಸುತ್ತಿರುವುದನ್ನು ಕಂಡ ಪಾರ್ಥನು ಶರಗಳಿಂದ ಅವುಗಳನ್ನು ಕತ್ತರಿಸಲು, ಶಕ್ತಿರಹಿತರಾಗಿ ಅವುಗಳು ಉರಿಯುತ್ತಿರುವ ಬೆಂಕಿಯಲ್ಲಿ ಬಿದ್ದವು. ಆಗ ಕ್ರೋಧಸಂಮೂರ್ಛಿತ ರಣಾರ್ಥಿ ಸುರರು ಗಂಧರ್ವ ಯಕ್ಷ ರಾಕ್ಷಸ ಪನ್ನಗರೊಡಗೂಡಿ ಮಹಾನಾದದೊಂದಿಗೆ ಮೇಲೆದ್ದು ಲೋಹದ ಗದೆ, ಚಕ್ರ, ಕಲ್ಲು ಬಂಡೆಗಳು ಮತ್ತು ಅಗ್ನಿಯನ್ನು ಉಗುಳುವ ಅಸ್ತ್ರಗಳೊಂದಿಗೆ ಕೃಷ್ಣಪಾರ್ಥರನ್ನು ಸಂಹರಿಸಲು ಮುಂದಾದರು. ಅವರು ಹೀಗೆ ಮುಂದಾಗಿ ಶಸ್ತ್ರಗಳ ಮಳೆಯನ್ನೇ ಸುರಿಸಲು ಬೀಭತ್ಸುವು ತನ್ನ ನಿಶಿತ ಶರಗಳಿಂದ ಅವರ ಅಂಗಗಳನ್ನು ಕತ್ತರಿಸಿದನು. ಸುಮಹಾತೇಜಸ್ವಿ ಅರಿಧ್ವಂಸಿ ಕೃಷ್ಣನು ಚಕ್ರದಿಂದ ಮಹಾ ಕದನದಲ್ಲಿ ದೈತ್ಯದಾನವರನ್ನು ಸಂಹರಿಸಿದನು. ಇನ್ನೂ ಇತರ ಮಹೌಜಸ ದೈತ್ಯರು ಶರಗಳಿಂದ ತುಂಡಾಗಿ ಚಕ್ರದ ವೇಗಕ್ಕೆ ಸಿಲುಕಿ ಅಲೆಗಳು ದಡವನ್ನು ಸೇರುವಾಗ ಹೇಗೋ ಹಾಗೆ ಸ್ಥಬ್ಧರಾದರು. ಆಗ ತ್ರಿದಶ ಮಹೇಶ್ವರ ಶಕ್ರನು ಸಂಕೃದ್ಧನಾಗಿ ಶ್ವೇತ ಗಜವನ್ನೇರಿ ಅವರಿಬ್ಬರ ಮೇಲೆ ಭಿರುಗಾಳಿಯಂತೆ ಎರಗಿದನು. ತಕ್ಷಣವೇ ವಜ್ರವನ್ನು ಹಿಡಿದು ಅವರ ಮೇಲೆ ಎಸೆಯಲು ಅಸುರಸೂದನನು ಸುರರಿಗೆ “ಅವರಿಬ್ಬರೂ ಹತರಾದರು!” ಎಂದನು.

ದೇವೇಂದ್ರನು ಮಹಾಶನಿಯನ್ನು ಹಿಡಿದಿದ್ದುದನ್ನು ನೋಡಿ ಸುರರೆಲ್ಲರೂ ತಮ್ಮ ತಮ್ಮ ಅಸ್ತ್ರಗಳನ್ನು ಹಿಡಿದರು: ಯಮರಾಜನು ಕಾಲದಂಡವನ್ನು, ಧನೇಶ್ವರನು ಶಿಬಿಕೆಯನ್ನು, ವರುಣನು ಪಾಶವನ್ನು ಮತ್ತು ಶಿವನು ತ್ರಿಶೂಲವನ್ನು ಹಿಡಿದರು. ದೀಪ್ಯಮಾನ ಔಷಧಿಗಳನ್ನು ಅಶ್ವಿನಿಯರು ಹಿಡಿದರು. ಧಾತನು ಧನುವನ್ನು ಹಿಡಿದನು ಮತ್ತು ಜಯನು ಮುಸಲವನ್ನು ಹಿಡಿದನು. ಕೃದ್ಧ ಮಹಾಬಲಿ ತ್ವಷ್ಟನು ಪರ್ವತವನ್ನೇ ಹಿಡಿದನು. ಅಂಶನು ಶಕ್ತಿಯನ್ನು ಹಿಡಿದನು ಮತ್ತು ಮೃತ್ಯುದೇವನು ಪರಶವನ್ನು ಹಿಡಿದನು. ಆರ್ಯಮನು ಘೋರ ಪರಿಘವನ್ನು ಹಿಡಿದು ಚಲಿಸಿದನು ಮತ್ತು ಮಿತ್ರನು ಕ್ಷುರಪರ್ಯಂತ ಚಕ್ರವನ್ನು ಹಿಡಿದು ನಿಂತನು. ಸಂಕೃದ್ಧ ಪೂಷಾ, ಭಗ ಮತ್ತು ಸವಿತರು ಧನುಸ್ಸು ಮತ್ತು ಖಡ್ಗಗಳನ್ನು ಹಿಡಿದು ಕೃಷ್ಣಪಾರ್ಥರ ಮೇಲೆ ಧಾಳಿಯಿಟ್ಟರು. ರುದ್ರರು, ವಸವರು, ಮಹಾಬಲಿ ಮರುತರು, ವಿಶ್ವೇದೇವರು, ಸಾಧ್ಯರು ಮತ್ತು ಇನ್ನೂ ಇತರ ಬಹಳ ದೇವತೆಗಳು ಪುರುಷೋತ್ತಮ ಕೃಷ್ಣಪಾರ್ಥರನ್ನು ಕೊಲ್ಲಲು ತಮ್ಮ ದೀಪ್ಯಮಾನ ತೇಜಸ್ಸಿನಿಂದ ವಿವಿಧ ಆಯುಧಗಳಿಂದ ಮುನ್ನುಗ್ಗಿದರು. ಆ ಅದ್ಭುತ ಯುದ್ಧದಲ್ಲಿ ಯುಗಾಂತಸಮರೂಪ ನಿಮಿತ್ತಗಳು ಕಾಣಿಸಿಕೊಂಡು ಭೂತಗಳ ಅಂತ್ಯವನ್ನು ಸೂಚಿಸಿದವು. ಅವರೀರ್ವರು ಅಚ್ಯುತರು ದೇವತೆಗಳೊಡಗೂಡಿ ಮುನ್ನುಗ್ಗುತ್ತಿದ್ದ ಶಕ್ರನನ್ನು ನೋಡಿ ನಿರ್ಭೀತರಾಗಿ ತಮ್ಮ ಧನುಸ್ಸುಗಳನ್ನು ಹಿಡಿದು ಸಿದ್ಧರಾಗಿ ಯುದ್ಧದಲ್ಲಿ ದುರ್ಧರ್ಷರಾಗಿ ನಿಂತರು. ಎಲ್ಲಕಡೆಯಿಂದಲೂ ಮುಂದುವರೆಯುತ್ತಿದ್ದ ದೇವತೆಗಳನ್ನು ನೋಡಿದ ಆ ಸಂಕೃದ್ಧರು ತಮ್ಮ ವಜ್ರಸದೃಷ ಬಾಣಗಳಿಂದ ಅವರನ್ನು ತಡೆದರು. ಪುನಃ ಪುನಃ ಅವರ ಸಂಕಲ್ಪವು ಭಗ್ನವಾಗಲು ಅಸಹಾಯಕ ಸುರರು ಭಯದಿಂದ ರಣವನ್ನು ಪರಿತ್ಯಜಿಸಿ ಶಕ್ರನಲ್ಲಿ ಶರಣು ಹೋದರು. ದಿವಿಯಲ್ಲಿ ನೆಲೆಸಿದ್ದ ಮುನಿಗಳು ಮಾಧವಾರ್ಜುನರು ದೇವತೆಗಳನ್ನು ತಡೆಹಿಡಿದಿದ್ದುದನ್ನು ನೋಡಿ ಅಶ್ಚರ್ಯಚಕಿತರಾದರು. ರಣದಲ್ಲಿ ಅವರಿಬ್ಬರ ವೀರತನವನ್ನು ನೋಡಿ ಪರಮಪ್ರೀತನಾಗಿ ಶಕ್ರನು ಇನ್ನೊಮ್ಮೆ ಅವರೊಡನೆ ಯುದ್ಧಮಾಡತೊಡಗಿದನು. ಸವ್ಯಸಾಚಿಯ ವೀರ್ಯವನ್ನು ಪರೀಕ್ಷಿಸಲು ಪಾಕಶಾಸನನು ಮಹಾ ಕಲ್ಲುಬಂಡೆಗಳ ಮಳೆಯನ್ನು ಸುರಿಸಿದನು. ಆದರೆ ಅರ್ಜುನನನು ತನ್ನ ಶರಗಳ ಮಳೆಯಿಂದ ಅವುಗಳನ್ನು ತುಂಡರಿಸಿದನು. ದೇವರಾಜ ಶತಕ್ರತುವು ತನ್ನ ಪ್ರಯತ್ನವು ವಿಫಲವಾದುದನ್ನು ನೋಡಿ ಪ್ರಹಾರವನ್ನು ಇನ್ನೂ ಹೆಚ್ಚಿಸಿದನು. ಆದರೆ ಪಾಕಶಾಸನಿಯು ತನ್ನ ತಂದೆಯನ್ನು ಅಣಕಿಸುತ್ತಾ ಮಹಾವೇಗದ ಶರಗಳಿಂದ ಆ ಕಲ್ಲುಬಂಡೆಗಳ ಮಳೆಯನ್ನು ವಿಲಯಗೊಳಿಸಿದನು. ಶಕ್ರನು ಅವನನ್ನು ಶಿಕ್ಷಿಸಲು ತನ್ನ ಕೈಗಳಿಂದ ಮರಗಳೊಡನೆ ಮಂದರದ ಒಂದು ಮಹಾ ಶಿಖರವನ್ನು ಕಿತ್ತು ಪಾಂಡುನಂದನನ ಮೇಲೆ ಎಸೆದನು.  ಆಗ ಅರ್ಜುನನು ತುದಿಯು ಜ್ವಲಿಸುತ್ತಿರುವ ವೇಗ ಬಾಣಗಳಿಂದ ಆ ಗಿರಿಶೃಂಗವನ್ನು ಸಹಸ್ರ ತುಂಡುಗಳನ್ನಾಗಿ ಕತ್ತರಿಸಿದನು. ಬೀಳುತ್ತಿರುವ ಆ ಗಿರಿಯ ತುಂಡುಗಳು ಅರ್ಕಚಂದ್ರಗ್ರಹಗಳೊಡನೆ ನಭವೇ ಬೀಳುತ್ತಿದೆಯೋ ಎನ್ನುವಂತೆ ತೋರುತ್ತಿತ್ತು. ಆ ಮಹಾ ಶೈಲವು ವನದ ಮೇಲೆ ಬೀಳಲು ಅದರ ಘಾತದಿಂದ ಖಾಂಡವದಲ್ಲಿ ವಾಸಿಸುತ್ತಿದ್ದ ಇನ್ನೂ ಹೆಚ್ಚಿನ ಪ್ರಾಣಿಗಳು ಹತವಾದವು.”

ಮಯದರ್ಶನ

ಆಗ ಬೀಳುತ್ತಿರುವ ಶೈಲಕ್ಕೆ ಭಯಪಟ್ಟು ಖಾಂಡವವಾಸಿಗಳಾದ ನೂರಾರು ದಾನವರು, ರಾಕ್ಷಸರು, ನಾಗಗಳು, ಚಿರತೆಗಳು, ಕರಡಿಗಳು, ಕೊಬ್ಬಿದ ಆನೆಗಳು, ಹುಲಿಗಳು, ಕೇಸರಿ ಸಿಂಹಗಳು, ಜಿಂಕೆಗಳು, ಎಮ್ಮೆಗಳು ಮತ್ತು ಇತರ ಭೂತಜಾತಿಗಳು ಹಾಗೂ ಪಕ್ಷಿಗಳು ಉದ್ವಿಗ್ನರಾಗಿ ಚೆಲ್ಲಾಪಿಲ್ಲಿ ಓಡಿದರು.  ಬೆಂಕಿಯು ಉರಿಯುತ್ತಿರುವುದನ್ನು ನೋಡುತ್ತಿದ್ದ ಆಯುಧಗಳಿಂದ ಸಿದ್ಧರಾಗಿದ್ದ ಕೃಷ್ಣರಿಬ್ಬರೂ ನಾದಶಬ್ಧ ಉತ್ಪಾತಗಳಿಂದ ಅವುಗಳನ್ನು ಕಾಡಿಸಿ ಕೆಳಗುರಿಳಿಸಿದರು. ಜನಾರ್ದನನು ತನ್ನ ತೇಜಸ್ಸಿನಿಂದ ಬೆಳಗುತ್ತಿದ್ದ ಚಕ್ರವನ್ನು ಪ್ರಯೋಗಿಸಿದನು. ಅದರಿಂದ ದಾನವ ನಿಶಾಚರರೊಡನೆ ಆ ಎಲ್ಲ ಕ್ಷುದ್ರ ಜಾತಿಯವರೂ ನೂರಾರು ಸಂಖ್ಯೆಗಳಲ್ಲಿ ತುಂಡಾಗಿ ಕ್ಷಣದಲ್ಲಿ ಬೆಂಕಿಗೆ ಬಿದ್ದರು. ಕೃಷ್ಣನ ಚಕ್ರದಿಂದ ಘಾತರಾದ ರಾಕ್ಷಸರು ತಮ್ಮ ಮಾಂಸ ಮತ್ತು ರಕ್ತಗಳಿಂದ ಆವೃತರಾಗಿ ಸಂಧ್ಯಾಕಾಲದ ಮೋಡಗಳಂತೆ ತೋರುತ್ತಿದ್ದರು. ವಾರ್ಷ್ಣೇಯನು ಕಾಲನಂತೆ ಸಹಸ್ರಾರು ಸಂಖ್ಯೆಗಳಲ್ಲಿ ಪಿಶಾಚ, ಪಕ್ಷಿ, ನಾಗ, ಮತ್ತು ಪಶುಗಳನ್ನು ಸಂಹರಿಸುತ್ತಾ ನಡೆದನು. ಅಮಿತ್ರಘಾತಿ ಕೃಷ್ಣನು ಯಾವ ಯಾವಾಗ ಆ ಚಕ್ರವನ್ನು ಪ್ರಯೋಗಿಸಿದರೂ ಅದು ಅನೇಕ ಜೀವಿಗಳನ್ನು ಸಂಹರಿಸಿ ಪುನಃ ಪುನಃ ಅವನ ಕೈಗೇ ಬಂದು ಸೇರುತ್ತಿತ್ತು. ಈ ರೀತಿ ಸರ್ವಸತ್ವಗಳನ್ನು ಸಂಹರಿಸುತ್ತಿರಲು ಆ ಸರ್ವಭೂತಾತ್ಮನು ಅತೀ ಉಗ್ರರೂಪನಾಗಿ ತೋರುತ್ತಿದ್ದನು. ಅಲ್ಲಿ ನೆರೆದಿದ್ದ ಸರ್ವ ದೇವತೆಗಳಲ್ಲಿ ಅಥವಾ ದಾನವರಲ್ಲಿ ಯುದ್ಧದಲ್ಲಿ ಕೃಷ್ಣಪಾಂಡವರನ್ನು ಜಯಿಸುವವರು ಯಾರೂ ಇರಲಿಲ್ಲ. ಸುರರು ಯಾವಾಗ ತಮ್ಮ ಬಲದಿಂದ ಆ ವನವನ್ನು ಸುಟ್ಟುಹೋಗುವುದರಿಂದ ರಕ್ಷಿಸಲು ಮತ್ತು ಬೆಂಕಿಯನ್ನು ಆರಿಸಲು ಸಾಧ್ಯವಾಗಲಿಲ್ಲವೋ ಆಗ ಅವರು ಪರಾಂಙ್ಮುಖರಾದರು. ದೇವಗಣಗಳು ಹಿಂದಿರುಗಿ ಹೋಗುತ್ತಿದ್ದುದನ್ನು ನೋಡಿದ ಶತಕ್ರತುವು ಪ್ರೀತನಾಗಿ ಕೃಷ್ಣಪಾಂಡವರನ್ನು ಪ್ರಶಂಸಿಸುತ್ತಾ ಅಲ್ಲಿಯೇ ನಿಂತನು. ದೇವತೆಗಳು ನಿವೃತ್ತರಾಗಲು ಶತಕ್ರತುವನ್ನು ಉದ್ದೇಶಿಸಿ ಮಹಾಗಂಭೀರನಿಃಸ್ವನದಲ್ಲಿ ಒಂದು ಅಶರೀರವಾಣಿಯಾಯಿತು.

“ನಿನ್ನ ಸಖ ಪನ್ನಗೋತ್ತಮ ತಕ್ಷಕನು ಖಾಂಡವ ದಹನದ ಕಾಲದಲ್ಲಿ ಕುರುಕ್ಷೇತ್ರಕ್ಕೆ ಹೋಗಿರುತ್ತಾನೆ. ಶಕ್ರ! ನನ್ನ ಮಾತುಗಳನ್ನು ಕೇಳು! ಯುದ್ಧದಲ್ಲಿ ನಿರತರಾದ ವಾಸುದೇವಾರ್ಜುನರನ್ನು ನೀನು ಗೆಲ್ಲಲು ಸಾಧ್ಯವಿಲ್ಲ. ಅವರು ದಿವಿಯಲ್ಲಿ ವಿಶ್ರುತರಾದ ನರನಾರಾಯಣ ದೇವರುಗಳು. ಈ ವೀರರ ಪರಾಕ್ರಮವೇನೆಂದು ನಿನಗೆ ಕೂಡ ತಿಳಿದಿದೆ. ಈ ದುರಾದರ್ಷ ಅಜಿತ ಪುರಾತನ ಋಷಿಸತ್ತಮರನ್ನು ಗೆಲ್ಲಲು ಸರ್ವ ಲೋಕದಲ್ಲಿ ಯಾರಿಗೂ ಶಕ್ಯವಿಲ್ಲ. ಅವರು ಯಕ್ಷ ರಾಕ್ಷಸ ಗಂಧರ್ವ ನರ ಕಿನ್ನರ ಪನ್ನಗಳ ಸಹಿತ ಸರ್ವ ಸುರಾಸುರರಿಗೆ ಪೂಜನೀಯರು. ವಾಸವ! ಆದುದರಿಂದ ಸುರರ ಸಹಿತ ನೀನು ಇಲ್ಲಿಂದ ಹೋಗಬೇಕು. ಮತ್ತು ವಿಧಿನಿರ್ಮಿತ ಈ ಖಾಂಡವ ವಿನಾಶನವನ್ನು ನೋಡು.”

ಈ ಮಾತನ್ನು ಕೇಳಿ ಅದು ಸತ್ಯವನ್ನೇ ನುಡಿಯುತ್ತಿದೆ ಎನ್ನುವುದನ್ನು ತಿಳಿದ ಅಮರೇಶ್ವರನು ಕೋಪ ಮತ್ತು ಸಿಡುಕನ್ನು ತೊರೆದು ದಿವಕ್ಕೆ ತೆರಳಿದನು. ಮಹಾತ್ಮ ಶತಕ್ರತುವು ಹಿಂದಿರುಗುತ್ತಿರುವುದನ್ನು ನೋಡಿದ ದಿವೌಕಸರೂ ತ್ವರೆಮಾಡಿ ಅವನೊಂದಿಗೆ ಹಿಂದಿರುಗಿದರು. ದೇವತೆಗಳೊಡನೆ ಹಿಂದಿರುಗುತ್ತಿರುವ ದೇವರಾಜನನ್ನು ನೋಡಿ ವೀರ ವಾಸುದೇವಾರ್ಜುನರು ಸಿಂಹನಾದಗೈದರು. ದೇವರಾಜನು ಹೊರಟುಹೋಗಲು ಪ್ರಹೃಷ್ಟ ಕೃಷ್ಣ-ಪಾಂಡವರು ನಿರ್ವಿಶಂಕರಾದರು. ಪುನಃ ಅಗ್ನಿಯು ಸುಡಲು ತೊಡಗಿದನು. ಮಾರುತವು ಮೋಡಗಳನ್ನು ಹೇಗೋ ಹಾಗೆ ಸುರರನ್ನು ನಾಶಪಡಿಸಿದ ಅರ್ಜುನನು ತನ್ನ ಬಲ ಬಾಣಗಳಿಂದ ಖಾಂಡವದಲ್ಲಿ ವಾಸಿಸುತ್ತಿದ್ದ ಪ್ರಾಣಿಗಳನ್ನು ಕೊಂದು ಹಾಕಿದನು. ಅಲ್ಲಿರುವ ಯಾವುದೂ ಅಲ್ಲಿಂದ ಹೊರಗೆ ಹೋಗಲು ಶಕ್ಯವಿರಲಿಲ್ಲ. ಸವ್ಯಸಾಚಿಯು ಪ್ರಯೋಗಿಸಿದ ಶರಗಳು ಎಲ್ಲವನ್ನೂ ಕತ್ತರಿಸಿ ಕೆಳಗೆ ಬೀಳಿಸಿದವು. ರಣದಲ್ಲಿ ಇರುವವೆಲ್ಲವನ್ನೂ ಅಮೋಘವಾಗಿ ನಾಶಪಡಿಸುತ್ತಿದ್ದ ಅರ್ಜುನನನ್ನು ಮಹಾತ್ಮರೂ ನೋಡಲಿಕ್ಕಾಗುತ್ತಿರಲಿಲ್ಲ. ಇನ್ನು ಅವನೊಡನೆ ಕಾದಾಡುವವರು ಯಾರಿದ್ದರು? ಅವನು ನೂರು ಶರಗಳಿಂದ ಒಂದನ್ನು ಅಥವಾ ನೂರನ್ನು ಒಂದೇ ಶರದಿಂದ ಹೊಡೆಯುತ್ತಿರಲು ಅವೆಲ್ಲವೂ ಜೀವವನ್ನು ಕಳೆದುಕೊಂಡು ಕಾಲನಿಂದ ಹೊಡೆತ ತಿಂದವರಂತೆ ಅಗ್ನಿಯಲ್ಲಿ ಬಿದ್ದವು. ಬೆಂಕಿಯ ಸಂತಾಪವು ಹೆಚ್ಚುತ್ತಿರಲು ಅವುಗಳಿಗೆ ದಡದ ಹಿಂದೆಯಾಗಲೀ ಅಥವಾ ವಿಷಮ ಪ್ರದೇಶಗಳಲ್ಲಿಯಾಗಲೀ ಅಥವಾ ಪಿತೃದೇವನಿವಾಸಗಳಲ್ಲಿಯಾಗಲೀ ಆಶ್ರಯ ದೊರೆಯಲಿಲ್ಲ. ಸಹಸ್ರಾರು ಭೂತಸಂಕುಲಗಳು ದೀನರಾಗಿ ಮಹಾಸ್ವರದಲ್ಲಿ ಕೂಗಿದವು, ಆನೆಗಳು ಮತ್ತು ಮೃಗಪಕ್ಷಿಗಳು ಚೀರಿದವು. ಅವುಗಳ ಶಬ್ಧದಿಂದ ಗಂಗೆ ಮತ್ತು ಸಾಗರಗಳಲ್ಲಿ ವಾಸಿಸುವವರು ಭಯಭೀತರಾದರು. ಮಹಾಬಾಹು ಅರ್ಜುನ ಮತ್ತು ಮಹಾಬಲಿ ಕೃಷ್ಣನನ್ನು, ಯುದ್ಧದಲ್ಲಿ ಎದುರಿಸುವುದಿರಲಿ, ನೋಡಲಿಕ್ಕೆ ಕೂಡ ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಅವರ ದಾರಿಯಲ್ಲಿ ಯಾರೇ ಬಂದರೂ ಅವರು ಅಲ್ಲಿಯೇ ಬೀಳುತ್ತಿದ್ದರು. ಹರಿಯು ಚಕ್ರದಿಂದ ರಾಕ್ಷಸರನನ್ನು, ದಾನವರನ್ನು ಮತ್ತು ನಾಗಗಳನ್ನು ಸಂಹರಿಸಿದನು. ಚಕ್ರದ ವೇಗದಿಂದ ವಿಭಿನ್ನಗೊಂಡ ಶಿರದೇಹಗಳುಳ್ಳ ಮಹಾಕಾಯರು ಉರಿಯುತ್ತಿರುವ ಬೆಂಕಿಯ ಬಾಯಲ್ಲಿ ಸತ್ತು ಬಿದ್ದರು. ಮಾಂಸ-ರಕ್ತದ ಹೊಳೆಯಿಂದ ಮತ್ತು ಕೊಬ್ಬಿನ ಹೊಳೆಯಿಂದ ಭುಗಿಲೆದ್ದ ವಹ್ನಿಯು ಹೊಗೆಯಿಲ್ಲದೆ ಆಕಾಶವನ್ನು ಮುಟ್ಟುತ್ತಿದೆಯೋ ಎನ್ನುವಂತೆ ತೋರುತ್ತಿತ್ತು. ಉರಿಯುತ್ತಿರುವ ಕಣ್ಣುಗಳ, ಉರಿಯುತ್ತಿರುವ ನಾಲಗೆಯ, ಉರಿಯುತ್ತಿರುವ ಮಹಾನನ ಊರ್ಧ್ವಕೇಶ, ಪಿಂಗಾಕ್ಷ ಹುತಾಶನನು ಪ್ರಾಣಿಗಳ ದೇಹಗಳನ್ನು ಕುಡಿದು ಕೃಷ್ಣಾರ್ಜುನರು ನೀಡಿದ ಆ ಸುಧೆಯನ್ನು ಪಡೆದು ತೃಪ್ತನಾಗಿ ಸಂತೋಷಗೊಂಡನು.

ಆಗ ತಕ್ಷಣವೇ ತಕ್ಷಕನ ನಿವೇಶನದಿಂದ ಹೊರಬರುತ್ತಿದ್ದ ಮಯ ಎಂಬ ಹೆಸರಿನ ಅಸುರನನ್ನು ಮಧುಸೂದನನು ಕಂಡನು. ವಾಯುವೇ ಸಾರಥಿಯಾಗಿದ್ದ ಅಗ್ನಿಯು ಜಟಾಧರ ಬ್ರಾಹ್ಮಣನ ದೇಹವನ್ನು ಧರಿಸಿ ಗುಡುಗಿನಂತೆ ಗರ್ಜಿಸುತ್ತಾ ಅವನನ್ನು ಸುಡಲು ಬೆನ್ನಟ್ಟಿದನು. ಆಗ ವಾಸುದೇವನು ಅವನನ್ನು ಕೊಲ್ಲಲು ಚಕ್ರವನ್ನು ಹಿಡಿದು ಎದುರು ಬಂದನು. ಅವನು ಚಕ್ರವನ್ನು ಮೇಲೆತ್ತಿದುದನ್ನು ಮತ್ತು ಸುಡಲು ಕಾತರನಾಗಿದ್ದ ಹುತಾಶನನನ್ನು ನೋಡಿದ ಮಯನು “ಅರ್ಜುನ! ಸಹಾಯ ಮಾಡು!” ಎಂದು ಕೂಗಿದನು. ಅವನ ಭಯಭರಿತ ಧ್ವನಿಯನ್ನು ಕೇಳಿದ ಪಾರ್ಥ ಧನಂಜಯನು ಮಯನಿಗೆ ಪುನರ್ಜೀವವನ್ನು ನೀಡುತ್ತಿದ್ದಾನೋ ಎನ್ನುವಂತೆ “ಹೆದರಬೇಡ!” ಎಂದು ಉತ್ತರಿಸಿದನು. ನಮೂಚಿಯ ಭ್ರಾತರ ಮಯನಿಗೆ ಪಾರ್ಥನು ಅಭಯವನ್ನು ನೀಡಲು ದಾಶಾರ್ಹನು ಅವನನ್ನು ಕೊಲ್ಲಲು ಬಯಸಲಿಲ್ಲ ಮತ್ತು ಪಾವಕನು ಅವನನ್ನು ಸುಡಲಿಲ್ಲ. ಆ ವನವು ಸುಡುತ್ತಿರುವಾಗ ಆರುಮಂದಿ ಸುಡಲಿಲ್ಲ - ಅಶ್ವಸೇನ, ಮಯ ಮತ್ತು ನಾಲ್ಕು ಸಾರಂಗಗಳು.

ತಿಗ್ಮಾಂಶು ಭಗವಾನನಾದರೂ ಜಗತ್ತಿಗೇ ಭಯವನ್ನುಂಟುಮಾಡುವಂತೆ ಇಡೀ ಖಾಂಡವವನವನ್ನು ಕೃಷ್ಣರಿಬ್ಬರ ಸಹಾಯದಿಂದ ಸುಟ್ಟನು. ಮಾಂಸ, ಮೇದ ಮತ್ತು ರಕ್ತವನ್ನು ಕುಡಿದ ಪಾವಕನು ಪರಪ ತೃಪ್ತನಾಗಿ ಬಂದು ಅರ್ಜುನನನಿಗೆ ಕಾಣಿಸಿಕೊಂಡನು. ಆಗ ಮರುದ್ಗಣಗಳಿಂದ ಆವೃತ ಭಗವಾನ್ ಸುರೇಶ್ವರನು ಅಂತರಿಕ್ಷದಿಂದ ಕೆಳಗಿಳಿದುಬಂದು ಪಾರ್ಥ ಮಾಧವರನ್ನುದ್ದೇಶಿಸಿ ಮಾತನಾಡಿದನು:

“ಅಮರರಿಗೂ ದುಷ್ಕರವಾಗಿರುವ ಕೃತ್ಯವನ್ನು ನೀವಿಬ್ಬರೂ ಮಾಡಿದ್ದೀರಿ. ನಾನು ಸಂತುಷ್ಟನಾಗಿದ್ದೇನೆ. ದುರ್ಲಭ ಅಮಾನುಷ ವರಗಳನ್ನು ಕೇಳಿ.”

ಪಾರ್ಥನಾದರೋ ಶಕ್ರನಿಂದ ಸರ್ವ ಶಸ್ತ್ರಗಳನ್ನು ಕೇಳಿದನು. ಆದರೆ ಶಕ್ರನು ಅವುಗಳನ್ನು ಪಡೆಯುವ ಕಾಲದ ಕುರಿತು ಹೇಳಿದನು.

“ಪಾಂಡವ! ಭಗವಾನ್ ಮಹಾದೇವನು ನಿನ್ನ ಮೇಲೆ ಯಾವಾಗ ಪ್ರಸನ್ನನಾಗುತ್ತಾನೋ ಆಗ ಸರ್ವ ಅಸ್ತ್ರಗಳನ್ನು ನಿನಗೆ ನೀಡುತ್ತೇನೆ. ಕುರುನಂದನ! ನನಗೇ ಆ ಕಾಲವು ತಿಳಿಯುತ್ತದೆ. ನಿನ್ನ ಮಹಾ ತಪಸ್ಸಿನ ಪರಿಣಾಮವಾಗಿ ನಾನು ನಿನಗೆ ಅವೆಲ್ಲವನ್ನೂ ಕೊಡುತ್ತೇನೆ. ಧನಂಜಯ! ಆಗ್ನೇಯ, ವಾಯವ್ಯ ಮೊದಲಾದ ಸರ್ವವನ್ನೂ ಮತ್ತು ನನ್ನ ಸರ್ವವವನ್ನೂ ಪಡೆಯುವೆ.”

ವಾಸುದೇವನು ಪಾರ್ಥನಲ್ಲಿದ್ದ ಪ್ರೀತಿಯು ಶಾಶ್ವತವಾಗಿರುವಂತೆ ಕೇಳಿಕೊಂಡನು. ದೇವೇಂದ್ರನು ಪ್ರೀತಿಯಿಂದ ಆ ವರವನ್ನಿತ್ತನು. ಅವರಿಬ್ಬರಿಗೆ ವರವನ್ನಿತ್ತು ಪ್ರೀತನಾದ ಮರುತ್ಪತಿಯು ದೇವತೆಗಳೊಂದಿಗೆ ಹುತಾಶನನನ್ನು ಬೀಳ್ಕೊಂಡು ತ್ರಿದಿವಕ್ಕೆ ಹಿಂದಿರುಗಿದನು. ಪಾವಕನಾದರೂ ಮೃಗಪಕ್ಷಿಗಳ ಸಹಿತ ಆ ವನವನ್ನು ಆರು ದಿನಗಳು ಸುಟ್ಟು ಸುತರ್ಪಿತನಾಗಿ ನಿಂತನು. ಮಾಂಸವನ್ನು ತಿಂದು ಮೇದ ರುಧಿರಗಳನ್ನು ಕುಡಿತು ಪರಮಪ್ರೀತನಾದ ಅವನು ಹೇಳಿದನು:

“ನೀವಿಬ್ಬರೂ ಪುರುಷವ್ಯಾಘ್ರರು ಯಥಾಸುಖವಾಗಿ ನನಗೆ ತೃಪ್ತಿನೀಡಿದ್ದೀರಿ. ವೀರರೇ! ನಿಮ್ಮನ್ನು ಬೀಳ್ಕೊಡುತ್ತೇನೆ. ಇಷ್ಟಬಂದಲ್ಲಿ ಹೋಗಿರಿ.”

ಅರ್ಜುನ, ವಾಸುದೇವ ಮತ್ತು ದಾನವ ಮಯ ಈ ಮೂವರೂ ಮಹಾತ್ಮ ಪಾವಕನನ್ನು ಬೀಳ್ಕೊಂಡು ಸುತ್ತಾಡಿ ರಮಣೀಯ ನದೀತೀರದಲ್ಲಿ ಒಟ್ಟಿಗೇ ಕುಳಿತುಕೊಂಡರು.

Leave a Reply

Your email address will not be published. Required fields are marked *