ಯುಧಿಷ್ಠಿರನ ತೀರ್ಥಯಾತ್ರೆ

ತೀರ್ಥಯಾತ್ರೆಯ ಕುರಿತು ಯುಧಿಷ್ಠಿರ-ನಾರದರ ಸಂವಾದ

ಧನಂಜಯನನ್ನು ಅಗಲಿದ ಆ ಮಹಾರಥಿ ಪಾಂಡವರು ಮಹಾಭಾಗೆ ದ್ರೌಪದಿಯೊಂದಿಗೆ ಆ ವನದಲ್ಲಿ ವಾಸಿಸುತ್ತಿದ್ದರು. ಅನಂತರ ಅವರು ಉರಿಯುತ್ತಿರುವ ಅಗ್ನಿಯ ತೇಜಸ್ಸಿಗೆ ಸಮಾನ, ಬ್ರಹ್ಮಜ್ಞಾನದ ಶೋಭೆಯಿಂದ ಬೆಳಗುತ್ತಿರುವ ಮಹಾತ್ಮ ದೇವರ್ಷಿ ನಾರದನನ್ನು ಕಂಡರು. ಭ್ರಾತೃಗಳಿಂದ ಪರಿವೃತನಾದ ಶ್ರೀಮಾನ್ ಕುರುಸತ್ತಮನು ದೇವತೆಗಳಿಂದ ಆವೃತನಾದ ಶತಕ್ರತುವಿನಂತೆ ವಿಶೇಷ ಕಾಂತಿಯಿಂದ ಬೆಳಗುತ್ತಿದ್ದನು. ಸಾವಿತ್ರಿಯು ವೇದಗಳನ್ನು ಮತ್ತು ಅರ್ಕ ಪ್ರಭೆಯು ಮೇರು ಪರ್ವತದ ಶಿಖರವನ್ನು ಹೇಗೆ ತೊರೆಯುವುದಿಲ್ಲವೋ ಹಾಗೆ ಸತಿ ಯಾಜ್ಞಸೇನಿಯೂ ಕೂಡ ಧರ್ಮದಂತೆ ಪಾರ್ಥರನ್ನು ಬಿಟ್ಟಿರಲಿಲ್ಲ. ಭಗವಾನ್ ನಾರದ ಮಹರ್ಷಿಯು ತನಗಿತ್ತ ಪೂಜೆಗಳನ್ನು ಪ್ರತಿಗ್ರಹಿಸಿ ಧರ್ಮಸುತನಿಗೆ ಯುಕ್ತರೂಪದಲ್ಲಿ ಆಶ್ವಾಸನೆಗಳನ್ನಿತ್ತನು. ಮತ್ತು ಮಹಾತ್ಮ ಧರ್ಮರಾಜ ಯುಧಿಷ್ಠಿರನನ್ನುದ್ದೇಶಿಸಿ ಹೇಳಿದನು: “ಧರ್ಮಪರಾಯಣರಲ್ಲಿ ಶ್ರೇಷ್ಠನೇ! ನಿನಗೆ ಏನು ಬೇಕಾಗಿದೆ? ನಾನು ನಿನಗೆ ಏನನ್ನು ಕೊಡಲಿ? ಹೇಳು.”

ಆಗ ರಾಜ ಧರ್ಮಸುತನು ಭ್ರಾತೃಗಳಿಂದೊಡಗೂಡಿ ದೇವಸಮ ನಾರದನಿಗೆ ಪ್ರಣಾಮ ಮಾಡಿ ಅಂಜಲೀಬದ್ಧನಾಗಿ ಈ ಮಾತುಗಳನ್ನು ಆಡಿದನು: “ಸರ್ವಲೋಕಾಭಿಪೂಜಿತ! ನೀನು ಸಂತೃಪ್ತನಾದೆಯೆಂದರೆ, ನಿನ್ನ ಪ್ರಸಾದದಿಂದ ನಾನು ಕೃತಾರ್ಥನಾದೆ ಎಂದು ಭಾವಿಸುತ್ತೇನೆ. ಆದರೂ ಭ್ರಾತೃಗಳ ಸಹಿತ ನನ್ನಮೇಲೆ ನಿನಗೆ ಅನುಗ್ರಹವಿದೆಯೆಂದಾದರೆ, ನನ್ನ ಹೃದಯದಲ್ಲಿರುವ ಸಂದೇಹವೊಂದನ್ನು ಛೇದಿಸಬೇಕಾಗಿದೆ. ತೀರ್ಥತತ್ಪರನಾಗಿ ಈ ಪೃಥ್ವಿಯನ್ನು ಪ್ರದಕ್ಷಿಣೆ ಮಾಡಿದವನಿಗೆ ಯಾವರೀತಿಯ ಫಲವು ಲಭ್ಯವಾಗುತ್ತದೆ ಎನ್ನುವುದನ್ನು ಹೇಳಬೇಕು.”

ಆಗ ಮಹರ್ಷಿ ನಾರದನು ಯುಧಿಷ್ಠಿರನಿಗೆ ಹಿಂದೆ ಭೀಷ್ಮನು ಪುಲಸ್ತ್ಯನಿಂದ ಕೇಳಿಕೊಂಡ ತೀರ್ಥಮಹಾತ್ಮೆಗಳನ್ನು ವರ್ಣಿಸಿ, ಹೇಳಿದನು: “ಈ ವಿಧಿಯಲ್ಲಿ ಯಾರು ಪೃಥ್ವಿಯಲ್ಲಿ ಸಂಚರಿಸುತ್ತಾರೋ ಅವರು ನೂರು ಅಶ್ವಮೇಧ ಯಾಗಗಳ ಫಲವನ್ನು ಪಡೆದು ಭೋಗಿಸುತ್ತಾರೆ. ನೀನು ಅದಕ್ಕಿಂತಲೂ ಎಂಟುಪಟ್ಟು ಉತ್ತಮ ಧರ್ಮಫಲವನ್ನು ಪಡೆಯುತ್ತೀಯೆ. ಈ ಋಷಿಗಳನ್ನು ನೀನು ನಾಯಕನಾಗಿ ಕರೆದುಕೊಂಡು ಹೋಗುವುದರಿಂದ ಆ ಎಂಟುಪಟ್ಟು ಫಲವು ನಿನಗೆ ದೊರೆಯುತ್ತದೆ. ಈ ತೀರ್ಥಗಳಲ್ಲಿ ರಾಕ್ಷಸಗಣಗಳು ಸಂಚರಿಸುತ್ತಿರುತ್ತವೆ. ನಿನ್ನನ್ನು ಹೊರತು ಬೇರೆ ಯಾರಿಗೂ ಅಲ್ಲಿ ಹೋಗಲು ಸಾಧ್ಯವಿಲ್ಲ. ಋಷಿಮುಖ್ಯರಾದ ಎಲ್ಲರೂ - ವಾಲ್ಮೀಕಿ, ಕಶ್ಯಪ, ಅತ್ರೇಯ, ಕೌಂಡಿಣ್ಯ, ವಿಶ್ವಾಮಿತ್ರ, ಗೌತಮ, ಅಸಿತ ದೇವಲ, ಮಾರ್ಕಂಡೇಯ, ಗಾಲವ, ಭರದ್ವಾಜ, ವಸಿಷ್ಠ, ಮುನಿ ಉದ್ದಾಲಕ, ಪುತ್ರನೊಂದಿಗೆ ಶೌನಕ, ಜಪಿಗಳಲ್ಲಿ ಶ್ರೇಷ್ಠ ವ್ಯಾಸ, ಮುನಿಶ್ರೇಷ್ಠ ದುರ್ವಾಸ, ಮಹಾತಪಸ್ವಿ ಗಾಲವ ಈ ಎಲ್ಲ ಋಷಿವರ ತಪೋಧನರೂ ನಿನ್ನ ಪ್ರತೀಕ್ಷೆಯಲ್ಲಿದ್ದಾರೆ. ಇವರೊಂದಿಗೆ ತೀರ್ಥಯಾತ್ರೆಯನ್ನು ಮಾಡು. ಸದ್ಯದಲ್ಲಿಯೇ ಲೋಮಶ ಎಂಬ ಹೆಸರಿನ ಅಮಿತದ್ಯುತಿ ದೇವರ್ಷಿಯು ನಿನ್ನನ್ನು ಭೇಟಿಯಾಗುತ್ತಾನೆ. ಅವನೊಂದಿಗೆ ನೀನು ಪ್ರಯಾಣಮಾಡಬೇಕು. ನನ್ನೊಂದಿಗೂ ತೀರ್ಥಯಾತ್ರೆಯನ್ನು ಮಾಡು. ರಾಜ ಮಹಾಭಿಷನಂತೆ ಮಹಾ ಕೀರ್ತಿಯನ್ನು ಪಡೆಯುತ್ತೀಯೆ. ಧರ್ಮಾತ್ಮ ಯಯಾತಿಯಂತೆ, ರಾಜ ಪುರೂರವನಂತೆ ನೀನೂ ಕೂಡ ನಿನ್ನ ಧರ್ಮದಿಂದ ಶೋಭಿಸುತ್ತೀಯೆ. ರಾಜ ಭಗೀರಥನಂತೆ, ವಿಶ್ರುತ ರಾಮನಂತೆ ನೀನೂ ಕೂಡ ಸರ್ವರಾಜರಲ್ಲಿ ರವಿಯಂತೆ ಬೆಳಗುತ್ತೀಯೆ. ಮನುವಿನಂತೆ, ಇಕ್ಷ್ವಾಕುವಂತೆ, ಮಹಾಯಶಸ್ವಿ ಪೂರುವಂತೆ, ಮಹಾತೇಜಸ್ವಿ ವೈನ್ಯನಂತೆ ನೀನೂ ಕೂಡ ವಿಶ್ರುತನಾಗುತ್ತೀಯೆ. ಹಿಂದೆ ವೃತ್ರಹನು ತನ್ನ ಎಲ್ಲ ಪ್ರತಿಸ್ಪರ್ಧಿಗಳನ್ನೂ ಸುಟ್ಟುಹಾಕಿದ ಹಾಗೆ ನೀನೂ ಕೂಡ ಶತ್ರುಗಳನ್ನು ನಾಶಪಡಿಸಿ ನಿನ್ನ ಪ್ರಜೆಗಳನ್ನು ಪರಿಪಾಲಿಸುತ್ತೀಯೆ. ಸ್ವಧರ್ಮದಿಂದ ಭೂಮಿಯನ್ನು ಗೆದ್ದು ಧರ್ಮದಿಂದ ಕಾರ್ತವೀರ್ಯಾರ್ಜುನನು ಹೇಗೋ ಹಾಗೆ ಖ್ಯಾತಿಯನ್ನು ಹೊಂದುತ್ತೀಯೆ.” ರಾಜನನ್ನು ಈ ರೀತಿ ಹುರಿದುಂಬಿಸಿ ಭಗವಾನೃಷಿ ನಾರದನು ಆ ಮಹಾತ್ಮನಿಂದ ಬೀಳ್ಕೊಂಡು ಅಲ್ಲಿಯೇ ಅಂತರ್ಧಾನನಾದನು. ಧರ್ಮಾತ್ಮ ಯುಧಿಷ್ಠಿರನಾದರೋ ಇದರ ಅರ್ಥವನ್ನೇ ಚಿಂತಿಸಿ, ತೀರ್ಥಯಾತ್ರೆಯ ಕುರಿತು ಪುಣ್ಯ ಋಷಿಗಳಿಗೆ ನಿವೇದಿಸಿದನು.

ತೀರ್ಥಯಾತ್ರೆಯ ಕುರಿತು ಯುಧಿಷ್ಠಿರ-ಧೌಮ್ಯರ ಸಂವಾದ

ಧೀಮಂತ ನಾರದನ ಮತ್ತು ಸಹೋದರರ ಮನಸ್ಸನ್ನು ತಿಳಿದ ರಾಜಾ ಯುಧಿಷ್ಠಿರನು ಪಿತಾಮಹಸಮನಾದ ಧೌಮ್ಯನಿಗೆ ಹೇಳಿದನು: “ಅಸ್ತ್ರಗಳಿಗೋಸ್ಕರ ನಾನು ಅಮಿತಾತ್ಮ, ಪುರುಷವ್ಯಾಘ್ರ, ಸತ್ಯಪರಾಕ್ರಮಿ ಜಿಷ್ಣುವನ್ನು ಕಳುಹಿಸಿದ್ದೇನೆ. ತಪೋಧನ! ಆ ವೀರನು ಅನುರಕ್ತನೂ ಸಮರ್ಥನೂ ಹೌದು ಮತ್ತು ಅಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದವನು. ಪ್ರಭು ವಾಸುದೇವನ ಸಮ. ಪ್ರತಾಪಿ ವ್ಯಾಸನು ವಿಕ್ರಾಂತರಾದ ಅರಿನಿಘಾತಿಗಳಾದ ಈ ಪುಂಡರೀಕಾಕ್ಷ ಕೃಷ್ಣರೀರ್ವರು ಮೂರು ಯುಗಗಳಲ್ಲಿದ್ದ ವಾಸುದೇವ-ಧನಂಜಯರು ಎನ್ನುವುದನ್ನು ಅರಿತುಕೊಂಡಿದ್ದಂತೆ ನಾನೂ ಕೂಡ ತಿಳಿದುಕೊಂಡಿದ್ದೇನೆ. ನಾರದನಿಗೂ ಕೂಡ ಇದೇ ವಿಷಯವು ತಿಳಿದಿದೆ ಮತ್ತು ಅವನು ಸದಾ ನನ್ನಲ್ಲಿ ಇದನ್ನು ಹೇಳುತ್ತಿರುತ್ತಾನೆ. ಇವರೀರ್ವರು ಋಷಿಗಳಾದ ನರ ಮತ್ತು ನಾರಾಯಣರು ಎಂದು ನಾನೂ ಕೂಡ ತಿಳಿದಿದ್ದೇನೆ. ಅವನು ಈ ವಿಷಯದಲ್ಲಿ ಶಕ್ತ ಎಂದು ತಿಳಿದೇ ನಾನು ಇಂದ್ರನ ಸರಿಸಮಾನ ನರನಾದ, ಸುರರ ಮಗ ಅರ್ಜುನನನ್ನು, ಸುರಾಧಿಪ ಇಂದ್ರನನ್ನು ಕಂಡು ಅವನಿಂದ ಅಸ್ತ್ರಗಳನ್ನು ತರಲು ಕಳುಹಿಸಿದ್ದೇನೆ. ಭೀಷ್ಮ-ದ್ರೋಣರು ಅತಿರಥರು. ಮಹಾಬಲಶಾಲಿಗಳಾದ ಕೃಪ, ದ್ರೌಣಿ, ದುರ್ಜಯರು ಯುದ್ಧದಲ್ಲಿ ಧೃತರಾಷ್ಟ್ರನ ಮಗನೊಂದಿಗೆ ಭಾಗವಹಿಸುವರು. ಅವರೆಲ್ಲರೂ ವೇದವಿದರೂ ಶೂರರೂ ಆಗಿದ್ದು ಎಲ್ಲರೂ ಅಸ್ತ್ರಗಳಲ್ಲಿ ಕುಶಲರಾಗಿದ್ದಾರೆ. ಸತತವೂ ಪಾರ್ಥನೊಂದಿಗೆ ಯುದ್ಧಮಾಡಲು ಇಚ್ಛಿಸುವ ಮಹಾಬಲಿ ಮಹಾರಥಿ ಸೂತಪುತ್ರ ಕರ್ಣನು ದಿವ್ಯಾಸ್ತ್ರಗಳಲ್ಲಿ ಪರಿಣಿತಿ ಹೊಂದಿದ್ದಾನೆ. ಅವನಲ್ಲಿ ಅಶ್ವಗಳಿಗಿಂತ ವೇಗವಿದೆ. ಭಿರುಗಾಳಿಯ ಬಲವಿದೆ. ಅವನು ಭುಗಿಲೆದ್ದ ಬೆಂಕಿಯಂತೆ ಭೋರ್ಗರೆಯುತ್ತಾನೆ ಮತ್ತು ಬೆಂಕಿಯ ಕಿಡಿಗಳಂತೆ ಬಾಣಗಳನ್ನು ಹಾರಿಸುತ್ತಾನೆ. ಆ ಅಸ್ತ್ರಸಂತಾಪನು ಧಾರ್ತರಾಷ್ಟ್ರರು ಎಬ್ಬಿಸಿದ ಭಿರುಗಾಳಿಯ ಧೂಳಿನ ಮೋಡದಂತೆ. ಯುಗಾಂತದ ಬೆಂಕಿಯಂತೆ ಕಾಲನೇ ಅವನನ್ನು ನನ್ನ ಸೈನ್ಯ ಕಕ್ಷಗಳನ್ನು ಭಸ್ಮಗೊಳಿಸಲಿಕ್ಕೆಂದು ಹುಟ್ಟಿಸಿ ಬಿಟ್ಟಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಕೃಷ್ಣನೆಂಬ ಗಾಳಿಯಿಂದ ಮೇಲೆಬ್ಬಿಸಿದ, ದಿವ್ಯಾಸ್ತ್ರಗಳೆಂಬ ಮಹಾ ಮೋಡಗಳನ್ನು ಇಂದ್ರಾಯುಧದಂತಿರುವ ಅರ್ಜುನನ ಗಾಂಡೀವದ ಮಿಂಚಿನಿಂದ ಹೊಡೆಯಲ್ಪಟ್ಟ ಸತತವಾಗಿ ಶರಗಳ ಮಳೆಯಿಂದ ಕರ್ಣನೆಂಬುವ ಈ ಬೆಂಕಿಯನ್ನು ಯುದ್ದದಲ್ಲಿ ಆರಿಸಬಲ್ಲದು. ಆ ಬೀಭತ್ಸುವು ಪರಪುರಂಜಯ ಶಕ್ರನಿಂದ ಎಲ್ಲ ದಿವ್ಯಸ್ತ್ರಗಳನ್ನೂ ತಾನಾಗಿಯೇ ಪಡೆದುಕೊಂಡು ಬರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವರೆಲ್ಲರಿಗೆ ಸರಿಸಾಟಿಯಾದವನು ಅವನೇ ಎಂದು ನಾನು ಯಾವಾಗಲೂ ಯೋಚಿಸುತ್ತೇನೆ. ಅವನನ್ನು ಮೀರಿಸುವವರು ಯಾರೂ ಇಲ್ಲ ಮತ್ತು ರಣರಂಗದಲ್ಲಿ ಅವನ ಹಾಗೆ ಹೋರಾಡುವವರು ಯಾರೂ ಇರುವುದಿಲ್ಲ. ಧನಂಜಯ ಪಾಂಡವನು ತಂದಿರುವ ಎಲ್ಲ ಅಸ್ತ್ರಗಳನ್ನೂ ನಾವು ನೋಡುತ್ತೇವೆ. ಬೀಭತ್ಸುವು ತಾನು ಎತ್ತಿಕೊಂಡ ಭಾರದ ಕೆಳಗೆ ಎಂದೂ ಕುಸಿದು ಬಿದ್ದಿಲ್ಲ. ಆದರೂ ಆ ವೀರನಿಲ್ಲದೇ ಇದೇ ಕಾಮ್ಯಕ ವನದಲ್ಲಿ ವಾಸಿಸಲು ಕೃಷ್ಣೆಯೂ ಸೇರಿ ನಮಗ್ಯಾರಿಗೂ ಮನಸ್ಸಾಗುತ್ತಿಲ್ಲ. ಆದುದರಿಂದ ಬೇರೆ ಯಾವುದಾದರೂ ಒಳ್ಳೆಯ, ಸಾಕಷ್ಟು ಆಹಾರ ಮತ್ತು ಫಲವು ದೊರಕಬಲ್ಲ, ಶುಚಿಯಾದ, ರಮಣೀಯವಾದ, ಪುಣ್ಯಕರ್ಮಿಗಳು ಸೇವಿಸುವ ವನದ ಕುರಿತು ತಿಳಿಸು. ಅಲ್ಲಿ ನಾವು ಸತ್ಯವಿಕ್ರಮ ವೀರ ಅರ್ಜುನನ ಬರವನ್ನು ಮಳೆಬೇಕಾದವರು ಮೋಡಗಳ ನಿರೀಕ್ಷೆಯನ್ನು ಹೇಗೆ ಮಾಡುತ್ತಾರೋ ಹಾಗೆ ಅವನ ಬರವನ್ನು ಕಾಯುತ್ತಾ ಸ್ವಲ್ಪ ಕಾಲ ಅಲ್ಲಿ ವಾಸಿಸಬಹುದು. ದ್ವಿಜರು ಹೇಳಿರುವ ವಿವಿಧ ಆಶ್ರಮಗಳ, ಸರೋವರಗಳ, ನದಿಗಳ, ರಮಣೀಯ ಪರ್ವತಗಳ ಕುರಿತು ಹೇಳು. ಬ್ರಹ್ಮನ್! ಅರ್ಜುನನಿಲ್ಲದೇ ಇಲ್ಲಿ ಕಾಮ್ಯಕವನದಲ್ಲಿ ವಾಸಿಸಲು ಮನಸ್ಸಾಗುತ್ತಿಲ್ಲ. ಬೇರೆ ಕಡೆ ಹೋಗೋಣ!” ಆಗ ಧೌಮ್ಯನು ಯುಧಿಷ್ಠಿರನಿಗೆ ನಾಲ್ಕೂ ದಿಕ್ಕುಗಳಲ್ಲಿರುವ ತೀರ್ಥಯಾತ್ರಾ ಕ್ಷೇತ್ರಗಳನ್ನು ವರ್ಣಿಸಿದನು.

ಋಷಿ ಲೋಮಶನ ಆಗಮನ

ಈ ರೀತಿ ಧೌಮ್ಯನು ಮಾತನಾಡುತ್ತಿರಲು ಅಲ್ಲಿಗೆ ಸುಮಹಾತೇಜಸ್ವಿ ಋಷಿ ಲೋಮಶನು ಆಗಮಿಸಿದನು. ಆಗ ಪಾಂಡವಾಗ್ರಜ ರಾಜನು ಬ್ರಾಹ್ಮಣರು ಮತ್ತು ಗುಂಪಿನೊಡನೆ ದಿವದಲ್ಲಿ ಶಕ್ರನು ಬಂದಾಗ ಅಮರರು ಹೇಗೋ ಹಾಗೆ ಆ ಮಹಾಭಾಗನು ಬಂದೊಡನೇ ಎದ್ದು ನಿಂತನು. ಧರ್ಮರಾಜ ಯುಧಿಷ್ಠಿರನು ಅವನನ್ನು ಯಥಾನ್ಯಾಯವಾಗಿ ಅರ್ಚಿಸಿ ಅವನ ಆಗಮನದ ಕಾರಣ ಮತ್ತು ಸಂಚಾರದ ಉದ್ದೇಶದ ಕುರಿತು ಕೇಳಿದನು. ಪಾಂಡುಪುತ್ರನ ಪ್ರಶ್ನೆಯಿಂದ ಸಂತೋಷಗೊಂಡ ಮಹಾಮನಸ್ವಿಯು ಮೃದುವಾಗಿ ಹರ್ಷದಿಂದ ಪಾಂಡವನಿಗೆ ಹೇಳಿದನು: “ಕೌಂತೇಯ! ಇಷ್ಟಬಂದಂತೆ ಸರ್ವ ಲೋಕಗಳನ್ನೂ ಸಂಚರಿಸುತ್ತಿರುವಾಗ ಶಕ್ರನ ಅರಮನೆಗೆ ಹೋಗಿ ಅಲ್ಲಿ ಸುರೇಶ್ವರನನ್ನು ಕಂಡೆನು. ಅಲ್ಲಿ ನಿನ್ನ ತಮ್ಮ ವೀರ ಸವ್ಯಸಾಚಿಯು ಶಕ್ರನ ಆಸನದ ಅರ್ಧಭಾಗದಲ್ಲಿ ಕುಳಿತಿರುವುದನ್ನು ನೋಡಿದೆ. ಪಾರ್ಥನು ಅಲ್ಲಿಗೆ ಹೋಗಿ ಹಾಗೆ ಕುಳಿತಿರುವುದನ್ನು ಕಂಡು ನನಗೆ ಮಹದಾಶ್ಚರ್ಯವಾಯಿತು. ಅಲ್ಲಿ ನನಗೆ ದೇವೇಶನು ಪಾಂಡುಸುತರ ಬಳಿ ಹೋಗು ಎಂದು ಹೇಳಿದನು. ಈಗ ನಾನು ಕ್ಷಿಪ್ರವಾಗಿ ಅನುಜರೊಂದಿಗಿರುವ ನಿನ್ನನ್ನು ನೋಡಲು ಬಂದಿದ್ದೇನೆ. ಪುರುಹೂತನ ಮತ್ತು ಮಹಾತ್ಮ ಪಾರ್ಥನ ಮಾತುಗಳಂತೆ ನಿನಗೆ ನಾನು ಅತ್ಯಂತ ಪ್ರಿಯಕರ ವಿಷಯಗಳನ್ನು ಹೇಳುತ್ತೇನೆ. ನಿನ್ನ ಸಹೋದರರು ಮತ್ತು ಕೃಷ್ಣೆಯೊಂದಿಗೆ ಅದನ್ನು ಕೇಳು. ಆ ಮಹಾಬಾಹುವಿಗೆ ಅಸ್ತ್ರಗಳನ್ನು ತರಲು ನೀನು ಹೇಳಿದ್ದೆ. ರುದ್ರನಿಂದ ಪಾರ್ಥನು ಬ್ರಹ್ಮಶಿರ ಎಂಬ ಹೆಸರಿನ ಆ ಮಹಾಸ್ತ್ರವನ್ನು ಪಡೆದನು. ರುದ್ರನು ಅದನ್ನು ತಪಸ್ಸುಮಾಡಿ ಪಡೆದುಕೊಂಡಿದ್ದನು. ಅಮೃತದಿಂದ ಉತ್ಪತ್ತಿಯಾದ ಆ ರೌದ್ರ ಅಸ್ತ್ರವನ್ನು ಸವ್ಯಸಾಚಿಯು ಅದರ ಮಂತ್ರ, ಸಂಹಾರ, ಸಪ್ರಾಯ ಮತ್ತು ಮಂಗಲದೊಂದಿಗೆ ಪಡೆದಿದ್ದಾನೆ. ಅಮಿತವಿಕ್ರಮಿ ಪಾರ್ಥನು ವಜ್ರ ಮತ್ತು ದಂಡವೇ ಮೊದಲಾದ ಇತರ ದಿವ್ಯಾಸ್ತ್ರಗಳನ್ನು ಯಮ, ಕುಬೇರ, ವರುಣ ಮತ್ತು ಇಂದ್ರರಿಂದ ಪಡೆದುಕೊಂಡಿದ್ದಾನೆ. ವಿಶ್ವಾವಸುವಿನ ಮಗನಿಂದ ಅವನು ಯಥಾನ್ಯಾಯವಾಗಿ ಯಥಾವಿಧಿಯಾಗಿ ಗೀತ, ನೃತ್ಯ, ಸಾಮ ಮತ್ತು ವಾದ್ಯಗಳನ್ನು ಕಲಿತುಕೊಂಡಿದ್ದಾನೆ. ಹೀಗೆ ಅಸ್ತ್ರಗಳನ್ನು ಪಡೆದು, ಗಾಂಧರ್ವವಿದ್ಯೆಯನ್ನು ಪಡೆದು ನಿನ್ನ ತಮ್ಮನ ತಮ್ಮ ಕೌಂತೇಯ ಬೀಭತ್ಸುವು ಅಲ್ಲಿ ಸುಖದಿಂದ ವಾಸಿಸುತ್ತಿದ್ದಾನೆ. ಸುರಶ್ರೇಷ್ಠನು ನನಗೆ ಹೇಳಿಕಳುಹಿಸಿದ ಸಂದೇಶದ ಅರ್ಥವನ್ನು ಹೇಳುತ್ತೇನೆ. ಕೇಳು. “ದ್ವಿಜೋತ್ತಮ! ನೀನು ನಿಸ್ಸಂಶಯವಾಗಿಯೂ ಮನುಷ್ಯಲೋಕಕ್ಕೆ ಹೋಗಿ ಅಲ್ಲಿ ಯುಧಿಷ್ಠಿರನಿಗೆ ನನ್ನ ಈ ಮಾತುಗಳನ್ನು ಹೇಳು. ನಿನ್ನ ತಮ್ಮ ಅರ್ಜುನನು ಅಸ್ತ್ರಗಳನ್ನು ಪಡೆದು, ದೇವತೆಗಳಿಗೂ ಅಸಾಧ್ಯವಾದ ಮಹಾ ಸುರಕಾರ್ಯವೊಂದನ್ನು ಪೂರೈಸಿ ಕ್ಷಿಪ್ರವಾಗಿ ಬರುತ್ತಾನೆ. ನಿನ್ನ ಸಹೋದರರೊಂದಿಗೆ ನೀನು ತಪಸ್ಸಿನಲ್ಲಿಯೇ ನಿನ್ನನ್ನು ತೊಡಗಿಸಿಕೋ. ತಪಸ್ಸಿಗಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ. ತಪಸ್ಸೇ ಅತಿದೊಡ್ಡದೆಂದು ತಿಳಿ. ನಾನೂ ಕೂಡ ಕರ್ಣನನ್ನು ತಿಳಿದುಕೊಂಡಿದ್ದೇನೆ. ಸಂಗ್ರಾಮದಲ್ಲಿ ಅವನು ಪಾರ್ಥನ ಹದಿನಾರರ ಅಂಶವೂ ಇಲ್ಲ. ನಿನ್ನ ಮನಸ್ಸಿನಲ್ಲಿಟ್ಟುಕೊಂಡಿರುವ ಅವನ ಭಯವನ್ನು ಸವ್ಯಸಾಚಿಯು ಹಿಂದಿರುಗಿದ ಕೂಡಲೇ ನಾನು ತೆಗೆದುಹಾಕುತ್ತೇನೆ. ತೀರ್ಥಯಾತ್ರೆಯ ಕುರಿತು ನೀನು ಮನಸ್ಸು ಮಾಡಿರುವುದರ ಕುರಿತು ನಿಸ್ಸಂಶಯವಾಗಿ ಲೋಮಶನು ಎಲ್ಲವನ್ನೂ ನಿನಗೆ ತಿಳಿಸಿಕೊಡುತ್ತಾನೆ. ತೀರ್ಥಗಳಲ್ಲಿ ತಪೋಯುಕ್ತನಾಗಿರುವುದರ ಫಲದ ಕುರಿತು ಮಹರ್ಷಿಯು ಏನೆಲ್ಲಾ ಹೇಳುತ್ತಾನೋ ಅದರಲ್ಲಿ ಶ್ರದ್ಧೆಯಿಡು.”

“ಯುಧಿಷ್ಠಿರ! ಧನಂಜಯನು ಹೇಳಿ ಕಳುಹಿಸಿದುದನ್ನು ಕೇಳು. “ನನ್ನ ಅಣ್ಣ ಯುಧಿಷ್ಠಿರನಿಗೆ ಜಯ, ಧರ್ಮ ಮತ್ತು ಶ್ರೀಯನ್ನು ಕರುಣಿಸು. ತಪೋಧನ! ಶ್ರೇಷ್ಠ ಧರ್ಮವನ್ನೂ ತಪಸ್ಸನ್ನೂ ನೀನು ತಿಳಿದಿದ್ದೀಯೆ. ಸನಾತನ ಶ್ರೀಮಂತ ರಾಜರ ಧರ್ಮವನ್ನೂ ನೀನು ತಿಳಿದಿದ್ದೀಯೆ. ಪುರುಷರನ್ನು ಪಾವನಗೊಳಿಸುವ ಬೇರೆ ಏನು ಗೊತ್ತಿದ್ದರೂ ಅದನ್ನೂ ಆ ತೀರ್ಥಪುಣ್ಯದೊಂದಿಗೆ ಪಾಂಡವನಿಗೆ ದಯಪಾಲಿಸಬೇಕು. ಪಾರ್ಥಿವರು ತೀರ್ಥಗಳಿಗೆ ಹೋಗಿ ಗೋವುಗಳ ದಾನವನ್ನಿಡುವಂತೆ ಸಂಪೂರ್ಣಮನಸ್ಸಿನಿಂದ ಈ ಕಾರ್ಯನಡೆಯಲಿ!” ಎಂದು ವಿಜಯನು ನನಗೆ ಹೇಳಿದ್ದಾನೆ. “ನಿನ್ನ ರಕ್ಷಣೆಯಲ್ಲಿ ಅವನು ಎಲ್ಲ ತೀರ್ಥಗಳನ್ನೂ ಸಂಚರಿಸಲಿ ಮತ್ತು ದುರ್ಗ-ವಿಷಮ ಪ್ರದೇಶಗಳಲ್ಲಿಯ ರಾಕ್ಷಸರಿಂದ ರಕ್ಷಿತನಾಗಿರಲಿ. ದಧೀಚಿಯು ದೇವೇಂದ್ರನನ್ನು ಮತ್ತು ಅಂಗಿರಸನು ರವಿಯನ್ನು ರಕ್ಷಿಸಿದಂತೆ ನೀನು ಕೌಂತೇಯನನ್ನು ರಾಕ್ಷಸರಿಂದ ರಕ್ಷಿಸು. ಪರ್ವತಗಳ ಮೇಲೆ ಆಕ್ರಮಣಮಾಡುವ ಬಹಳಷ್ಟು ರಾಕ್ಷಸರಿದ್ದಾರೆ. ನೀನು ರಕ್ಷಣೆಯನ್ನಿತ್ತರೆ ಕೌಂತೇಯನನ್ನು ಆಕ್ರಮಣಿಸಿ ಕೊನೆಗೊಳಿಸುವುದಿಲ್ಲ.”

“ಹೀಗೆ ಇಂದ್ರನ ಆದೇಶ ಮತ್ತು ಅರ್ಜುನನ ನಿಯೋಗದಂತೆ ನಿಮ್ಮನ್ನು ಭಯದಿಂದ ರಕ್ಷಿಸುತ್ತಾ ನಿಮ್ಮ ಜೊತೆ ನಾನೂ ಸಂಚರಿಸುತ್ತೇನೆ. ಇದಕ್ಕೂ ಹಿಂದೆ ಎರಡು ಬಾರಿ ಈ ತೀರ್ಥಗಳನ್ನು ನೋಡಿದ್ದೇನೆ. ಈಗ ನಿನ್ನೊಂದಿಗೆ ಬಂದು ಅವುಗಳನ್ನು ಮೂರನೆಯ ಬಾರಿ ನೋಡುತ್ತೇನೆ. ಪುಣ್ಯಕರ್ಮಿಗಳಾದ ಮನುವೇ ಮೊದಲಾದ ರಾಜರ್ಷಿಗಳು ಭಯವನ್ನು ಕಳೆಯುವ ತೀರ್ಥಯಾತ್ರೆಯನ್ನು ಕೈಗೊಂಡಿದ್ದರು. ಅಪ್ರಾಮಾಣಿಕನಾದವನು, ಆತ್ಮಸಾಧನೆ ಮಾಡಿಕೊಂಡಿರದವನು, ವಿದ್ಯೆಯಿಲ್ಲದವನು, ಪಾಪಕರ್ಮಗಳನ್ನು ಮಾಡಿದವನು ಮತ್ತು ವಕ್ರಮತಿಯಿರುವ ಯಾವ ನರನೂ ಈ ತೀರ್ಥಗಳಲ್ಲಿ ಸ್ನಾನಮಾಡುವುದಿಲ್ಲ. ನೀನಾದರೋ ನಿತ್ಯವೂ ಧರ್ಮಮತಿಯಾಗಿದ್ದು, ಧರ್ಮವನ್ನು ತಿಳಿದುಕೊಂಡವನಾಗಿ, ಸತ್ಯಸಂಗರನಾಗಿದ್ದೀಯೆ. ನಿನ್ನ ಎಲ್ಲ ಪಾಪಗಳಿಂದ ವಿಮುಕ್ತನಾಗುತ್ತೀಯೆ. ರಾಜ ಭಗೀರಥನಂತೆ ಮತ್ತು ಗಯ, ಯಯಾತಿ ಮೊದಲಾದ ರಾಜರಂತೆ ನೀನೂ ಕೂಡ ಆಗುತ್ತೀಯೆ.”

ಯುಧಿಷ್ಠಿರನು ಹೇಳಿದನು: “ಸಂತೋಷದಿಂದ ನನಗೆ ಈ ಮಾತಿಗೆ ಉತ್ತರವೇ ಕಾಣುತ್ತಿಲ್ಲ. ದೇವರಾಜನು ನೆನಪಿಸಿಕೊಂಡಿದ್ದಾನೆ ಎಂದರೆ ಇದಕ್ಕಿಂದ ಹೆಚ್ಚಿನದು ಏನಿದೆ? ಧನಂಜಯನ ಭ್ರಾತನನ್ನು ಇಂದ್ರನೇ ನೆನಪಿಸಿಕೊಂಡ ಮತ್ತು ನೀನು ಭೇಟಿಯಾದ ನನ್ನಂಥವನಿಗೆ ಇದಕ್ಕಿಂದಲೂ ಅಧಿಕವಾದುದು ಏನಿದೆ? ತೀರ್ಥದರ್ಶನದ ಕುರಿತು ನೀನು ನನಗೆ ಹೇಳಿದುದಕ್ಕೆ ಮೊದಲೇ ನಾನು ಧೌಮ್ಯನ ಮಾತಿನಂತೆ ಮನಸ್ಸುಮಾಡಿದ್ದೆ. ತೀರ್ಥದರ್ಶನಕ್ಕೆ ಹೋಗಲು ನೀನು ಎಂದು ಮನಸ್ಸು ಮಾಡುತ್ತೀಯೋ ಅಂದೇ ನಾನೂ ಕೂಡ ನಿಶ್ವಯವಾಗಿಯೂ ಹೊರಡುತ್ತೇನೆ.” ಹೊರಡಲು ಮನಸ್ಸುಮಾಡಿದ್ದ ಆ ಪಾಂಡವನಿಗೆ ಲೋಮಶನು ಹೇಳಿದನು: “ಹಗುರಾಗು ಮಹಾರಾಜ! ಹಗುರಾದರೆ ಸುಲಭವಾಗಿ ಹೋಗಬಹುದು.”

ಯುಧಿಷ್ಠಿರನು ಹೇಳಿದನು: “ಭಿಕ್ಷಾರ್ಥಿಗಳಾದ ಬ್ರಾಹ್ಮಣರು, ಯತಿಗಳು, ಮತ್ತು ರಾಜಭಕ್ತಿಯಿಂದ ನನ್ನನ್ನು ಗೌರವಿಸಿ ಅನುಸರಿಸಿ ಬಂದ ಪೌರಜನರೂ ಹಿಂದಿರುಗಲಿ. ಅವರು ಮಹಾರಾಜ ಧೃತರಾಷ್ಟ್ರನಲ್ಲಿಗೆ ಹೋಗಲಿ. ಅವರಿಗೆ ಯಥಾಕಾಲದಲ್ಲಿ ಉಚಿತವಾಗಿ ದೊರೆಯಬೇಕಾದುದನ್ನು ಅವನು ನೀಡುತ್ತಾನೆ. ಒಂದುವೇಳೆ ಆ ಮನುಜೇಶ್ವರನು ಅವರಿಗೆ ಯಥೋಚಿತವಾದ ವೃತ್ತಿಯನ್ನು ಕೊಡದಿದ್ದರೆ ನನ್ನ ಪ್ರೀತಿಹಿತಾರ್ಥವಾಗಿ ಪಾಂಚಾಲನು ಅವರಿಗೆ ನೀಡುತ್ತಾನೆ.”

ಅನಂತರ ತಮ್ಮ ಭಾರವನ್ನು ಹೊತ್ತುಕೊಂಡು ಪೌರಜನರು, ವಿಪ್ರರು ಮತ್ತು ಯತಿಗಳು ತಮ್ಮ ಅನುಯಾಯಿಗಳೊಂದಿಗೆ ಒಂದಾಗಿ ನಾಗಪುರದ ಕಡೆ ಹೊರಟರು. ಧರ್ಮರಾಜನ ಮೇಲಿನ ಪ್ರೀತಿಯಿಂದ ಅವರೆಲ್ಲರನ್ನೂ ರಾಜ ಅಂಬಿಕಾಸುತನು ಸ್ವಾಗತಿಸಿ ವಿವಿಧ ಧನಗಳಿಂದ ತೃಪ್ತಿಪಡಿಸಿದನು. ಅನಂತರ ಕುಂತೀಸುತ ರಾಜನು ಸ್ವಲ್ಪವೇ ಬ್ರಾಹ್ಮಣರು ಮತ್ತು ಲೋಮಶನೊಂದಿಗೆ ಸಂತೋಷದಿಂದ ಕಾಮ್ಯಕದಲ್ಲಿ ಮೂರು ರಾತ್ರಿಗಳನ್ನು ಕಳೆದನು. ವನವಾಸಿ ಬ್ರಾಹ್ಮಣರು ಪ್ರಯಾಣಕ್ಕೆ ಹೊರಡುತ್ತಿದ್ದ ಕೌಂತೇಯನ ಬಳಿ ಬಂದು ಈ ಮಾತುಗಳನ್ನಾಡಿದರು: “ರಾಜನ್! ನೀನು ನಿನ್ನ ಸಹೋದರರೊಂದಿಗೆ ಮತ್ತು ದೇವರ್ಷಿ ಮಹಾತ್ಮ ಲೋಮಶನ ಸಹಿತ ಪುಣ್ಯತೀರ್ಥಗಳಿಗೆ ಹೋಗುತ್ತಿದ್ದೀಯೆ. ನಮ್ಮನ್ನು ಕೂಡ ಕರೆದುಕೊಂಡು ಹೋಗು. ನಿನ್ನ ಸಹಾಯವಿಲ್ಲದೇ ನಾವಾಗಿಯೇ ಆ ಪುಣ್ಯತೀರ್ಥಗಳಿಗೆ ಹೋಗಲು ಶಕ್ಯರಿಲ್ಲ. ಆ ದುರ್ಗ ವಿಷಮ ಪ್ರದೇಶಗಳು ಘೋರಮೃಗಗಳಿಂದ ಕೂಡಿವೆ ಮತ್ತು ಆ ತೀರ್ಥಗಳನ್ನು ಪ್ರಯಾಣಿಕರ ಸಣ್ಣ ಗುಂಪು ತಲುಪಲು ಸಾಧ್ಯವಿಲ್ಲ. ನಿನ್ನ ಸಹೋದರರು ಶೂರರೂ ಧನುರ್ಧರರಲ್ಲಿ ಶ್ರೇಷ್ಠರೂ ಆಗಿದ್ದಾರೆ. ಶೂರರಾದ ನಿಮ್ಮಿಂದ ಸದಾ ರಕ್ಷಿತರಾಗಿ ನಾವೂ ಕೂಡ ಆ ಪ್ರದೇಶಗಳಿಗೆ ಹೋಗಬಹುದು. ನಿನ್ನ ಕರುಣೆಯಿಂದ ನಾವು ತೀರ್ಥಯಾತ್ರಾ ವ್ರತದ ಶುಭ ಫಲವನ್ನು ಪಡೆಯಬಹುದು. ನಿನ್ನ ವೀರ್ಯದಿಂದ ಪರಿರಕ್ಷಿತರಾದ ನಾವು ಆ ತೀರ್ಥಗಳನ್ನು ಭೇಟಿಮಾಡಿ ಮತ್ತು ಅಲ್ಲಿ ಸ್ನಾನಮಾಡಿ ಶುದ್ಧಾತ್ಮರಾಗುತ್ತೇವೆ. ನೀನೂ ಕೂಡ ಈ ತೀರ್ಥಗಳಲ್ಲಿ ಸ್ನಾನಮಾಡಿ ನರೇಂದ್ರ ಕಾರ್ತವೀರ್ಯನಂತೆ, ಅಷ್ಟಕನಂತೆ, ರಾಜರ್ಷಿ ಲೋಮಪಾದನಂತೆ, ವೀರ ಸಾರ್ವಭೌಮ ಪಾರ್ಥಿವ ಭರತನಂತೆ ದುರ್ಲಭ ಲೋಕಗಳನ್ನು ಹೊಂದುತ್ತೀಯೆ. ನಿನ್ನೊಂದಿಗೆ ನಾವೂ ಕೂಡ ಪ್ರಭಾಸವೇ ಮೊದಲಾದ ತೀರ್ಥಗಳನ್ನೂ, ಮಹೇಂದ್ರಾದಿ ಪರ್ವತಗಳನ್ನೂ, ಗಂಗೆಯೇ ಮೊದಲಾದ ನದಿಗಳನ್ನೂ, ಪ್ಲಕ್ಷವೇ ಮೊದಲಾದ ವನಗಳನ್ನೂ ನೋಡಲು ಬಯಸುತ್ತೇವೆ. ನಿನಗೆ ಬ್ರಾಹ್ಮಣರ ಮೇಲೆ ಸ್ಪಲ್ಪವಾದರೂ ಪ್ರೀತಿಯಿದೆಯೆಂದಾದರೆ ನಮ್ಮ ಮಾತಿನಂತೆ ಮಾಡು. ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ. ಈ ತೀರ್ಥಗಳು ಯಾವಾಗಲೂ ತಪಸ್ಸನ್ನು ಭಂಗಗೊಳಿಸುವ ರಾಕ್ಷಸರಿಂದ ತುಂಬಿವೆ. ಅವರಿಂದ ನಮ್ಮನ್ನು ನೀನು ರಕ್ಷಿಸಬೇಕು. ಧೌಮ್ಯ, ಧೀಮಂತ ನಾರದರು ಹೇಳಿದ ಮತ್ತು ಸುಮಹಾತಪ ದೇವರ್ಷಿ ಲೋಮಶನು ಹೇಳಿದ ಎಲ್ಲ ವಿವಿಧ ತೀರ್ಥಗಳಿಗೆ, ನಮ್ಮನ್ನೂ ಕರೆದುಕೊಂಡು, ಲೋಮಶನಿಂದ ಪಾಲಿತನಾಗಿ ಸಂಚಾರಮಾಡಿ ಪಾಪಗಳನ್ನು ತ್ಯಜಿಸು.”

ಹೀಗೆ ಅವರು ಹರ್ಷದ ಕಣ್ಣೀರಿಟ್ಟು ಪ್ರಾರ್ಥಿಸಿದ ನಂತರ ಭೀಮಸೇನನೇ ಮೊದಲಾದ ವೀರ ಸಹೋದರರಿಂದ ಸುತ್ತುವರೆಯಲ್ಪಟ್ಟ ಪಾಂಡವರ್ಷಭನು ಆ ಎಲ್ಲ ಋಷಿಗಳಿಗೂ “ಹಾಗೆಯೇ ಆಗಲಿ! ” ಎಂದು ಹೇಳಿದನು. ಲೋಮಶ ಮತ್ತು ಪುರೋಹಿತ ಧೌಮ್ಯನಿಂದ ಅಪ್ಪಣೆಯನ್ನು ಪಡೆದುಕೊಂಡ ನಂತರ ಆ ಪಾಂಡವಶ್ರೇಷ್ಠನು ತನ್ನ ಭ್ರಾತೃಗಳ ಮತ್ತು ದ್ರೌಪದಿಯ ಸಹಿತ ಹೊರಡುವ ಸಿದ್ಧತೆಗಳನ್ನು ಮಾಡಿದನು. ಅದೇ ಸಮಯದಲ್ಲಿ ಮಹಾಭಾಗ ವ್ಯಾಸ, ಮತ್ತು ನಾರದ-ಪರ್ವತರು ಪಾಂಡವನನ್ನು ಕಾಣಲು ಕಾಮ್ಯಕವನಕ್ಕೆ ಆಗಮಿಸಿದರು. ರಾಜಾ ಯುಧಿಷ್ಠಿರನು ಅವರಿಗೆ ಯಥಾವಿಧಿಯಾಗಿ ಪೂಜೆಗೈದನು. ಸತ್ಕೃತರಾದ ಆ ಮಹಾಭಾಗರು ಯುಧಿಷ್ಠಿರನಿಗೆ ಈ ರೀತಿ ಹೇಳಿದರು: “ಯುಧಿಷ್ಠಿರ! ಯಮಳರೇ! ಭೀಮ! ನಿಮ್ಮ ಮನಸ್ಸಿನಲ್ಲಿ ಧರ್ಮವನ್ನು ಪಾಲಿಸಿ! ಮನಸ್ಸನ್ನು ಶುದ್ಧಿಮಾಡಿಕೊಂಡೇ ಶುದ್ಧಾತ್ಮರಾಗಿಯೇ ಈ ತೀರ್ಥಗಳಿಗೆ ಹೋಗಬೇಕು. ಶರೀರನಿಯಮವೇ ಮನುಷ್ಯನ ವ್ರತವೆಂದು ಬ್ರಾಹ್ಮಣರು ಹೇಳುತ್ತಾರೆ. ಬುದ್ಧಿಯಿಂದ ಮನಸ್ಸನ್ನು ಶುದ್ಧಿಗೊಳಿಸುವುದೇ ದೇವತಗಳ ವ್ರತವೆಂದು ದ್ವಿಜರು ಹೇಳುತ್ತಾರೆ. ಕಲ್ಮಷವಿಲ್ಲದ ಮನಸ್ಸೇ ಶೂರರಿಗೆ ಪರ್ಯಾಪ್ತ. ಮೈತ್ರೀಭಾವವನ್ನಿಟ್ಟುಕೊಂಡು ಶುದ್ಧನಾಗಿ ತೀರ್ಥಗಳಿಗೆ ಹೋಗು. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಮತ್ತು ಶರೀರನಿಯಮ ವ್ರತನಾಗಿದ್ದು ದೈವವ್ರತವನ್ನು ಪಾಲಿಸಿದರೆ ಹೇಳಿದ ಫಲವನ್ನು ಹೊಂದುತ್ತೀಯೆ.”

ಕೃಷ್ಣೆಯೊಂದಿಗೆ ಪಾಂಡವರು “ಹಾಗೆಯೇ ಮಾಡುತ್ತೇವೆ!” ಎಂದು ಪ್ರತಿಜ್ಞೆ ಮಾಡಿದರು. ಲೋಮಶ, ದ್ವೈಪಾಯನ, ನಾರದ ಮತ್ತು ದೇವರ್ಷಿ ಪರ್ವತನ ಪಾದಗಳನ್ನು ಹಿಡಿದು ನಮಸ್ಕರಿಸಲು ಅವರ ಪ್ರಯಾಣವನ್ನು ಸರ್ವ ಮುನಿಗಳೂ ದಿವ್ಯಮಾನುಷರೂ ಹರಸಿದರು. ಅನಂತರ ಧೌಮ್ಯ ಮತ್ತು ಇತರ ವನವಾಸಿಗಳನ್ನೊಡಗೂಡಿ ಆ ವೀರರು ಅಲ್ಲಿಂದ ಮಾರ್ಗಶೀರ್ಷವು ಕಳೆದ ಪುಷ್ಯದಲ್ಲಿ ಹೊರಟರು. ಕಠಿನ ಚೀರಾಜಿನಗಳನ್ನು ಧರಿಸಿ, ಜಟಾಧಾರಿಗಳಾಗಿ, ಅಭೇಧ್ಯ ಕವಚಗಳನ್ನು ಧರಿಸಿ ತೀರ್ಥಯಾತ್ರೆಗೆ ಹೊರಟರು. ಇಂದ್ರಸೇನನೇ ಮೊದಲಾದ ಸೇವಕರೊಂದಿಗೆ, ಹದಿನಾಲ್ಕು ರಥಗಳಲ್ಲಿ, ಅಡುಗೆಮಾಡುವ ಮತ್ತು ಇತರ ಪರಿಚಾರಕರೊಂದಿಗೆ, ಬಾಣ-ಭತ್ತಳಿಕೆ, ಖಡ್ಗ ಮೊದಲಾದ ಆಯುಧಗಳನ್ನು ತೆಗೆದುಕೊಂಡು, ವೀರ ಪಾಂಡವರು ಪೂರ್ವಾಭಿಮುಖವಾಗಿ ಹೊರಟರು.

ಯುಧಿಷ್ಠಿರನು ಹೇಳಿದನು: “ದೇವರ್ಷಿಸತ್ತಮ! ನನ್ನಲ್ಲಿ ಗುಣಗಳಿಲ್ಲ ಎಂದು ನನಗನಿಸುವುದಿಲ್ಲ. ಆದರೂ ಅನ್ಯ ಮಹೀಪತಿ ಯಾರೂ ಪಡದಂಥಹ ದುಃಖವನ್ನು ಅನುಭವಿಸುತ್ತಿದ್ದೇನೆ. ನನ್ನ ಶತ್ರುಗಳು ನಿರ್ಗುಣರು ಮತ್ತು ದರ್ಮದಲ್ಲಿ ನಡೆಯುತ್ತಿಲ್ಲ ಎಂದು ನನ್ನ ಅಭಿಪ್ರಾಯ. ಆದರೂ ಅವರು ಲೋಕದಲ್ಲಿ ಅಭಿವೃದ್ಧಿಯನ್ನು ಹೊಂದಿದ್ದಾರೆ. ಇದಕ್ಕೆ ಕಾರಣವೇನಿರಬಹುದು?”

ಲೋಮಶನು ಹೇಳಿದನು: “ರಾಜನ್! ಅಧರ್ಮದಲ್ಲಿರುವವರು ಅಧರ್ಮದಲ್ಲಿದ್ದುಕೊಂಡೇ ವೃದ್ಧಿಯನ್ನು ಹೊಂದುತ್ತಾರೆ ಎಂದು ನೀನು ಯಾವಾಗಲೂ ದುಃಖಪಡಬೇಕಾಗಿಲ್ಲ. ಧರ್ಮದಿಂದ ವೃದ್ಧಿಹೊಂದುವ ಮನುಷ್ಯನು ಸುರಕ್ಷತೆಯನ್ನು ಕಾಣುತ್ತಾನೆ ಮತ್ತು ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸುತ್ತಾನೆ, ಅವರನ್ನು ಸಮೂಲವಾಗಿ ವಿನಾಶಗೊಳಿಸುತ್ತಾನೆ. ಅಧರ್ಮದಿಂದ ವೃದ್ಧಿಹೊಂದಿಯೇ ಪುನಃ ಕ್ಷಯವನ್ನು ಹೊಂದಿದ ದೈತ್ಯ ದಾನವರನ್ನು ನಾನೇ ನೋಡಿದ್ದೇನೆ. ಹಿಂದೆ ದೇವಯುಗದಲ್ಲಿ ಸುರರು ಹೇಗೆ ಧರ್ಮವನ್ನು ತಮ್ಮದಾಗಿಸಿಕೊಂಡರು ಮತ್ತು ಅಸುರರು ಹೇಗೆ ಧರ್ಮವನ್ನು ವರ್ಜಿಸಿದರು ಎನ್ನುವುದನ್ನು ನಾನು ನೋಡಿದ್ದೇನೆ. ದೇವತೆಗಳು ತೀರ್ಥಕ್ಷೇತ್ರಗಳಿಗೆ ಭೇಟಿನೀಡಿದರು. ಅಸುರರು ಹಾಗೆ ಮಾಡಲಿಲ್ಲ. ಅವರು ಮಾಡಿದ ಅಧರ್ಮದಿಂದ ಮೊದಲು ದರ್ಪವು ಅವರನ್ನು ಆವೇಶಿಸಿತು. ದರ್ಪದಿಂದ ಮಾನವು ಹುಟ್ಟಿಕೊಂಡಿತು. ಮಾನದಿಂದ ಕ್ರೋಧವು ಹುಟ್ಟಿತು. ಕ್ರೋಧದಿಂದ ನಾಚಿಕೆ ಮತ್ತು ನಾಚಿಕೆಯು ಅವರ ನಡತೆಯನ್ನೇ ನಾಶಗೊಳಿಸಿತು. ಅವರು ನಾಚಿಕೆಗೊಂಡಾಗ, ಮಾನಕಳೆದುಕೊಂಡಾಗ, ಹೀನನಡತೆಯುಳ್ಳವರಾದಾಗ, ಮತ್ತು ವ್ರತಗಳನ್ನು ತೊರೆದಾಗ ಕ್ಷಮಾ, ಲಕ್ಷ್ಮಿ ಮತ್ತು ಧರ್ಮಗಳು ಸ್ವಲ್ಪಹೊತ್ತೂ ನಿಲ್ಲದೇ ಅವರನ್ನು ತೊರೆದವು. ಲಕ್ಷ್ಮಿಯು ದೇವತೆಗಳ ಕಡೆ ಹೋದಳು. ಅಲಕ್ಷ್ಮಿಯು ಅಸುರರ ಕಡೆ ಹೋದಳು. ಅಲಕ್ಷ್ಮಿಯು ಸಮಾವೇಶಗೊಳ್ಳಲು ದರ್ಪದಿಂದ ಮನಸ್ಸನ್ನು ಕಳೆದುಕೊಂಡ ದೈತ್ಯ ದಾನವರಲ್ಲಿ ಕಲಹವು ಉಂಟಾಯಿತು. ಅಲಕ್ಷ್ಮಿಯು ಸಮಾವಿಷ್ಟಗೊಳ್ಳಲು ದಾನವರು ದರ್ಪದಿಂದೊಡಗೂಡಿ ಕ್ರಿಯಾಹೀನರಾಗಿ, ಅಚೇತಸರಾಗಿ, ಮಾನಾಭಿಮಾನಿಗಳಾಗಿ ಅಲ್ಪ ಸಮಯದಲ್ಲಿಯೇ ವಿನಾಶವನ್ನು ಹೊಂದಿದರು. ನಿರ್ಯಶಸ್ಕರಾಗಿ ದೈತ್ಯರೆಲ್ಲರೂ ಲಯಗೊಂಡರು. ದೇವತೆಗಳಾದರೋ ಸಾಗರ, ನದಿ ಮತ್ತು ಸರೋವರಗಳಿಗೆ, ಇತರ ಪುಣ್ಯಕ್ಷೇತ್ರಗಳಿಗೆ ಧರ್ಮಶೀಲರಾಗಿ ಹೋದರು. ತಪಸ್ಸು, ಕ್ರತು, ದಾನ, ಮತ್ತು ಆಶೀರ್ವಾದಗಳಿಂದ ಅವರು ಸರ್ವಪಾಪಗಳನ್ನು ಕಳೆದುಕೊಂಡು ಶ್ರೇಯಸ್ಸನ್ನು ಹೊಂದಿದರು. ಹೀಗೆ ದಾನವಾಂತಕರು ಸರ್ವರೂ ಕ್ರಿಯಾವಂತರಾಗಿ ತೀರ್ಥಗಳಿಗೆ ಹೋಗಿ ಉತ್ತಮ ಸ್ಥಾನಗಳನ್ನು ಹೊಂದಿದರು. ಹಾಗೆಯೇ ನೀನೂ ಕೂಡ ನಿನ್ನ ಅನುಜರೊಂದಿಗೆ ತೀರ್ಥಗಳಲ್ಲಿ ಸ್ನಾನಮಾಡಿ ಪುನಃ ನಿನ್ನ ಸಂಪತ್ತನ್ನು ಪಡೆಯುತ್ತೀಯೆ. ಇದೇ ಸನಾತನ ಧರ್ಮ. ಇದೇ ರೀತಿ ರಾಜ ನೃಗ, ಶಿಬಿರ, ಉಶೀನರ, ಭಗೀರಥ, ವಸುಮನ, ಗಯ, ಪುರು, ಪುರೂರವ ಇವರು ನಿತ್ಯವೂ ತಪಸ್ಸನ್ನು ಮಾಡಿ, ಪುಣ್ಯ ತೀರ್ಥಗಳಲ್ಲಿ ನೀರನ್ನು ಮುಟ್ಟಿ ಮಹಾತ್ಮರ ದರ್ಶನ ಮಾಡಿ ಯಶಸ್ಸು, ಪುಣ್ಯ ಮತ್ತು ಸಂಪತ್ತನ್ನು ಪಡೆದರು. ಹಾಗೆ ನೀನೂ ಕೂಡ ವಿಪುಲ ಸಂಪತ್ತನ್ನು ಹೊಂದುತ್ತೀಯೆ. ಇಕ್ಷ್ವಾಕುವು ತನ್ನ ಪುತ್ರ-ಜನ-ಬಾಂಧವರೊಂದಿಗೆ, ಹಾಗೆಯೇ ಮುಚುಕುಂದ, ಮಹೀಪತಿ ಮಾಂಧಾತ, ಮರುತ್ತರೂ, ದೇವತೆ-ದೇವರ್ಷಿಗಳಂತೆ ತಪೋಬಲವನ್ನು ಹೊಂದಿದರು. ನೀನೂ ಕೂಡ ಅದನ್ನು ಹೊಂದುತ್ತೀಯೆ. ದರ್ಪ ಮತ್ತು ಮೋಹಗಳಿಂದ ವಶೀಕೃತರಾದ ಧಾರ್ತರಾಷ್ಟ್ರರು ದೈತ್ಯರಂತೆ ಬೇಗನೆ ನಾಶಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.”

ತೀರ್ಥಯಾತ್ರೆ

ಹೀಗೆ ಅವರೊಂದಿಗೆ ಆ ವೀರರು ಅಲ್ಲಿ ಇಲ್ಲಿ ಉಳಿದುಕೊಳ್ಳುತ್ತಾ ಕ್ರಮೇಣ ನೈಮಿಷಾರಣ್ಯಕ್ಕೆ ಆಗಮಿಸಿದರು. ಅಲ್ಲಿ ಗೋಮತಿ ತೀರ್ಥದಲ್ಲಿ ಪಾಂಡವರು ಸ್ನಾನಮಾಡಿ ಗೋವುಗಳನ್ನೂ ಧನವನ್ನೂ ದಾನವಾಗಿತ್ತರು. ಅಲ್ಲಿ ಕನ್ಯಾತೀರ್ಥ, ಅಶ್ವತೀರ್ಥ ಮತ್ತು ಗೋತೀರ್ಥಗಳಲ್ಲಿ ಕೌರವರು ದೇವತೆಗಳಿಗೂ, ಪಿತೃಗಳಿಗೂ ಮತ್ತು ವಿಪ್ರರಿಗೂ ಪುನಃ ಪುನಃ ತರ್ಪಣಗಳನ್ನಿತ್ತರು. ವೃಷಪ್ರಸ್ಥಗಿರಿಯ ವಾಲಕೋಟಿಯಲ್ಲಿ ಒಂದು ರಾತ್ರಿಯನ್ನು ಕಳೆದು ಪಾಂಡವರು ಎಲ್ಲರೂ ಬಾಹುದದಲ್ಲಿ ಸ್ನಾನಮಾಡಿದರು. ದೇವತೆಗಳ ಯಾಗಕ್ಷೇತ್ರ ಪ್ರಯಾಗದಲ್ಲಿ ಕೈಕಾಲುಗಳನ್ನು ತೊಳೆದು ಉತ್ತಮ ತಪಶ್ಚರ್ಯಕ್ಕೆ ಕುಳಿತುಕೊಂಡರು. ಸತ್ಯಸಂಗರರಾಗಿ ಶುದ್ಧಮನಸ್ಕರಾಗಿ ಗಂಗಾ ಮತ್ತು ಯಮುನೆಯರ ಸಂಗಮದಲ್ಲಿ ಆ ಮಹಾತ್ಮರು ವಿಪ್ರರಿಗೆ ಸಂಪತ್ತನ್ನು ದಾನವನ್ನಾಗಿತ್ತರು. ಅನಂತರ ಪಾಂಡುಸುತರು ಬ್ರಾಹ್ಮಣರೊಂದಿಗೆ ತಪಸ್ವಿಗಳು ಭೇಟಿಕೊಡುವ ಪ್ರಜಾಪತಿಯ ವೇದಿಕೆಗೆ ಹೋದರು. ಅಲ್ಲಿ ವೀರರು, ಉತ್ತಮ ತಪಸ್ಸನ್ನಾಚರಿಸುತ್ತಾ ಸತತವೂ ದ್ವಿಜರನ್ನು ವನೋತ್ಮತ್ತಿಗಳಿಂದ ತೃಪ್ತಿಗೊಳಿಸುತ್ತಾ ಉಳಿದುಕೊಂಡರು. ಅಲ್ಲಿಂದ ಅವರು ಧರ್ಮಜ್ಞ, ಪುಣ್ಯಕೃತ ರಾಜರ್ಷಿಗಳಿಂದ ಸತ್ಕೃತ, ಸರಿಸಾಟಿಯಿಲ್ಲದೇ ಬೆಳಗುತ್ತಿದ್ದ ಗಯವನ್ನು ಸೇರಿದರು. ಅಲ್ಲಿ ಗಯಶಿರ ಸರೋವರವಿದೆ ಮತ್ತು ಇಲ್ಲಿಂದ ಪುಣ್ಯ ಮಹಾನದಿಯು ಹರಿಯುತ್ತದೆ. ಇಲ್ಲಿಯೇ ಋಷಿಗಳಿಗೆ ಪ್ರಿಯವಾದ ಸುಪುಣ್ಯ ಉತ್ತಮ ಬ್ರಹ್ಮಸರೋವರ ತೀರ್ಥವೂ ಇದೆ. ಇಲ್ಲಿಯೇ ಸನಾತನ ಧರ್ಮನು ಸ್ವಯಂ ವಾಸಿಸುತ್ತಿದ್ದ ಮತ್ತು ಭಗವಾನ್ ಅಗಸ್ತ್ಯನು ವೈವಸ್ವತನ ಬಳಿ ಹೋಗಿದ್ದ. ಅಲ್ಲಿ ಮಹಾದೇವ ಪಿನಾಕಧೃತನು ನಿತ್ಯವೂ ಸನ್ನಿಹಿತನಾಗಿರುತ್ತಾನೆ ಮತ್ತು ಅಲ್ಲಿಂದಲೇ ಸರ್ವ ನದಿಗಳು ಉದ್ಭವವಾಗುತ್ತವೆ. ಅಲ್ಲಿ ವೀರ ಪಾಂಡವರು, ಮಹಾ ಅಕ್ಷಯವಟದ ಬಳಿ ಋಷಿಗಳ ಮಹಾ ಚಾತುರ್ಮಾಸ ಯಜ್ಞವನ್ನು ನಡೆಸಿದರು. ನೂರಾರು ಬ್ರಾಹ್ಮಣರು ಅಲ್ಲಿ ನೆರೆದರು ಮತ್ತು ತಪೋಧನರು ಅಲ್ಲಿಗೆ ಬಂದು ಸೇರಿದರು. ಅಲ್ಲಿ ಆರ್ಯ ವಿಧಿಯಂತೆ ಚಾತುರ್ಮಾಸ ಯಾಗವನ್ನು ನೆರೆವೇರಿಸಲಾಯಿತು. ಅಲ್ಲಿ ವಿದ್ಯೆ ಮತ್ತು ತಪಸ್ಸಿನಲ್ಲಿ ನಿರತ ವೇದಪಾರಂಗತ ಮಹಾತ್ಮ ಬ್ರಾಹ್ಮಣರ ಆ ಸಭೆಯಲ್ಲಿ ಪುಣ್ಯ ಕಥೆಗಳನ್ನು ಹೇಳುತ್ತಿದ್ದರು. ಅಲ್ಲಿಯೇ ಇದ್ದ ವಿದ್ಯಾವ್ರತ ಸ್ನಾತಕ ಕುಮಾರ ವ್ರತಸ್ಥಿತ ಶಮಠ ಎನ್ನುವವನು ಗಯ ಅಮೂರ್ತರಯಸನ ಕಥೆಯನ್ನು ಹೇಳಿದನು.

ರಾಜರ್ಷಿಸತ್ತಮ ಅಮೂರ್ತರಯಸನ ಮಗ ಗಯನು ಬಹು ಭೋಜನ ಮತ್ತು ಬಹು ದಕ್ಷಿಣೆಗಳ ಯಾಗವೊಂದನ್ನು ನಡೆಸಿದ್ದನು. ಆ ಯಾಗದಲ್ಲಿ ನೂರಾರು ಸಹಸ್ರಾರು ಪರ್ವತಗಳಂಥಹ ಅನ್ನದ ರಾಶಿಗಳಿದ್ದವು. ನದಿಗಳಂತೆ ತುಪ್ಪದ ಹೊಳೆಯೇ ಹರಿದಿತ್ತು. ಮಹಾ ಬೆಲೆಬಾಳುವ ಪದಾರ್ಥಗಳ ಸಹಸ್ರಾರು ಪ್ರವಾಹಗಳೇ ಹರಿದಿದ್ದವು. ಪ್ರತಿದಿನವೂ ಕೇಳಿದವರಿಗೆಲ್ಲ ಆಹಾರವು ದೊರೆಯುತ್ತಿತ್ತು ಮತ್ತು ಬ್ರಾಹ್ಮಣರು ಬೇರೆ ಬೇರೆ ಸುಸಂಕೃತ ಆಹಾರವನ್ನು ಭುಂಜಿಸಿದರು. ದಕ್ಷಿಣೆಯನ್ನು ನೀಡುವ ಕಾಲದಲ್ಲಿ ಬ್ರಾಹ್ಮಣರ ಘೋಷವು ಸ್ವರ್ಗವನ್ನೂ ಸೇರಿತ್ತು ಮತ್ತು ಬ್ರಾಹ್ಮಣರ ಶಬ್ಧದ ಹೊರತಾಗಿ ಬೇರೆ ಏನೂ ಕೇಳಿಬರುತ್ತಿರಲಿಲ್ಲ. ಭೂಮಿ, ಆಕಾಶ, ನಭ ಮತ್ತು ಸ್ವರ್ಗಗಳು ಆ ಪುಣ್ಯರ ನಡುಗೆಯ ಧ್ವನಿಯಿಂದ ತುಂಬಿಹೋಗಿತ್ತು. ಅಂದೊಂದು ಮಹಾ ಅದ್ಭುತದಂತೆ ತೋರುತ್ತಿತ್ತು. ಅಲ್ಲಿಗೆ ದೇಶದೇಶಗಳಿಂದ ಬಂದಿದ್ದ ಸುವರ್ಚಸ ಮನುಷ್ಯರು ಶುಭ ಅನ್ನಪಾನಗಳಿಂದ ತೃಪ್ತರಾಗಿ ಹಾಡನ್ನು ಹಾಡಿದರು: “ಗಯನ ಯಜ್ಞದಲ್ಲಿ ಇನ್ನೂ ಊಟಮಾಡುವ ಪ್ರಾಣಿಗಳು ಯಾರಿದ್ದಾರೆ? ಅಲ್ಲಿ ಇಪ್ಪತ್ತೈದು ಪರ್ವತಗಳಷ್ಟು ಭೋಜನವು ಉಳಿದಿದೆ! ಇದಕ್ಕೂ ಮೊದಲು ಯಾರೂ ರಾಜರ್ಷಿ ಅಮಿತದ್ಯುತಿ ಗಯನು ಮಾಡಿದ ಯಜ್ಞದಂಥಹ ಯಾಗವನ್ನು ಮಾಡಿಲ್ಲ ಮುಂದೆ ಮಾಡುವವರೂ ಇಲ್ಲ. ಗಯನ ಹವಿಸ್ಸಿನಿಂದ ಪರಿತರ್ಪಿತರಾದ ದೇವತೆಗಳಾದರೂ ಪುನಃ ಬೇರೆ ಯಾರಿಂದಲೂ ಕೊಡಲ್ಪಟ್ಟ ಹವಿಸ್ಸನ್ನು ಹೇಗೆ ಸ್ವೀಕರಿಸುತ್ತಾರೆ?” ಸರೋವರದ ಪಕ್ಕದಲ್ಲಿಯೇ ನಡೆದಿದ್ದ ಆ ಮಹಾತ್ಮನ ಯಜ್ಞದಲ್ಲಿ ಈ ರೀತಿ ಬಹಳಷ್ಟು ತರಹದ ಗೀತೆಗಳನ್ನು ಹಾಡುತ್ತಿದ್ದರು.

ನಂತರ ಭೂರಿದಕ್ಷಿಣ ರಾಜ ಕೌಂತೇಯನು ಅಲ್ಲಿಂದ ಹೊರಟು ಅಗಸ್ತ್ಯಾಶ್ರಮವನ್ನು ತಲುಪಿ ದುರ್ಜಯದಲ್ಲಿ ತಂಗಿದನು. ಅಲ್ಲಿ ಯುಧಿಷ್ಠಿರನು ಕೇಳಲು ಲೋಮಶನು ಅಗಸ್ತ್ಯೋಪಾಽಖ್ಯಾನ ಮತ್ತು ಭಗೀರಥನು ಗಂಗೆಯನ್ನು ಧರೆಗೆ ತಂದುದನ್ನು ಅವನಿಗೆ ವರ್ಣಿಸಿದನು. ಅನಂತರ ಕ್ರಮೇಣ ಕೌಂತೇಯನು ಪಾಪಭಯವನ್ನು ನಿವಾರಿಸುವ ನಂದ ಮತ್ತು ಅಪರನಂದಾ ನದಿಗಳಿಗೆ ಬಂದನು. ಆ ನೃಪನು ಅನಾಮಯ ಹೇಮಕೂಟವನ್ನು ತಲುಪಿ ಅಲ್ಲಿ ಯೋಚನೆಗೂ ಸಿಲುಕದ ಹಲವಾರು ಅದ್ಭುತ-ಭಾವಗಳನ್ನು ಕಂಡನು. ಅಲ್ಲಿ ಮಾತನಾಡಿದರೆ ಮೋಡಗಳು ಕವಿಯುವವು ಮತ್ತು ಸಹಸ್ರಾರು ಬಂಡೆಗಳು ಉರುಳುವವು. ಆದುದರಿಂದ ವಿಷಣ್ಣ ಮನಸ್ಕ ಜನರು ಅದನ್ನು ಏರಲು ಅಶಕ್ತರು. ಅಲ್ಲಿ ವಾಯುವು ಸದಾ ಬೀಸುತ್ತಾನೆ, ದೇವತೆಗಳು ನಿತ್ಯವೂ ಮಳೆಸುರಿಸುತ್ತಾರೆ. ಬೆಳಿಗ್ಗೆ ಮತ್ತು ಸಾಯಂಕಾಲಗಳಲ್ಲಿ ಭಗವಾನ್ ಹವ್ಯವಾಹನನು ಕಾಣಿಸಿಕೊಳ್ಳುತ್ತಾನೆ. ಈ񎊊ರೀತಿಯ ಬಹುವಿಧದ ಭಾವ-ಅದ್ಭುತಗಳನ್ನು ನೋಡಿದ ಪಾಂಡವನು ಪುನಃ ಲೋಮಶನನ್ನು ಆ ಅದ್ಭುತಗಳ ಕುರಿತು ಕೇಳಿದನು.

ಲೋಮಶನು ಹೇಳಿದನು: “ರಾಜನ್! ಹಿಂದೆ ನನಗೆ ಏನನ್ನು ಹೇಳಲಾಗಿತ್ತೋ ಅದನ್ನು ಏಕಾಗ್ರಮನಸ್ಕನಾಗಿ ಕೇಳು. ಈ ಋಷಭ ಶಿಖರದಲ್ಲಿ ಋಷಭ ಎಂಬ ಹೆಸರಿನ ತಾಪಸನಿದ್ದನು. ಅನೇಕ ನೂರು ವರ್ಷಗಳು ತಪಸ್ಸಿನಲ್ಲಿ ನಿರತನಾಗಿದ್ದ ಅವನು ಬಹಳ ಕುಪಿತನಾಗಿದ್ದನು. ಅಲ್ಲಿ ಬೇರೆಯವರು ಮಾತನಾಡುತ್ತಿದ್ದುದನ್ನು ನೋಡಿ ಕೋಪದಿಂದ ಪರ್ವತಕ್ಕೆ ಹೇಳಿದನು. ಇಲ್ಲಿ ಯಾರಾದರೂ ಏನಾದರೂ ಒಮ್ಮೆಯಾದರೂ ಮಾತನಾಡಿದರೆ ಕಲ್ಲು ಬಂಡೆಗಳನ್ನು ಉದುರಿಸಬೇಕು. ಆ ತಾಪಸನು ವಾಯುವನ್ನು ಕರೆದು “ಇಲ್ಲಿ ಶಬ್ಧ ಬೇಡ!” ಎಂದು ಹೇಳಿದನು. ಆದುದರಿಂದ ಮಾತನಾಡಿದ ನರನನ್ನು ಮೇಘಗಳ򠈱ತಡೆಯುತ್ತವೆ. ಹೀಗೆ ಆ ಮಹರ್ಷಿಯು ಕೋಪದಿಂದ ಕೆಲವು ಕೆಲಸಗಳನ್ನು ಮಾಡಿಸಿದನು ಮತ್ತು ಕೆಲವನ್ನು ಇನ್ನೊಬ್ಬರಿಗೆ ನಿಷೇದಿಸಿದನು. ಹಿಂದೆ ದೇವತೆಗಳು ನಂದಾ ನದಿಗೆ ಬರುತ್ತಿದ್ದರೆಂದು ಕೇಳುತ್ತೇವೆ. ಅವರು ಬಂದ ಕೂಡಲೇ ದೇವತೆಗಳನ್ನು ನೋಡಲು ಜನರು ಬರುತ್ತಿದ್ದರು. ಶಕ್ರನೇ ಮೊದಲಾದ ದೇವತೆಗಳು ಈ ರೀತಿ ನೋಟಕ್ಕೊಳಗಾಗುವುದನ್ನು ಮೆಚ್ಚಲಿಲ್ಲ. ಆದುದರಿಂದ ಗಿರಿಗಳಿಂದ ಕೋಟೆಯಂತೆ ಮಾಡಿ ಈ ಪ್ರದೇಶಕ್ಕೆ ಯಾರೂ ಬಾರದಹಾಗೆ ಮಾಡಿದರು. ಅಂದಿನಿಂದ ಈ ಪರ್ವತಕ್ಕೆ ನರರು ಏರುವುದೇನು ಬರುವುದಕ್ಕೇ ಅಶಕ್ತರಾದರು. ತಪಸ್ಸನ್ನು ತಪಿಸದ ಯಾರೂ ಈ ಮಹಾಗಿರಿಯನ್ನು ನೋಡಲಿಕ್ಕಾಗುವುದಿಲ್ಲ ಮತ್ತು ಹತ್ತಲಿಕ್ಕೂ ಆಗುವುದಿಲ್ಲ. ಆದುದರಿಂದ ನಿನ್ನ ಮಾತನ್ನು ನಿಯಂತ್ರಿಸಿಕೋ. ಇಲ್ಲಿ ಎಲ್ಲ ದೇವತೆಗಳೂ ಸದಾ ಉತ್ತಮ ಯಜ್ಞಗಳನ್ನು ಯಜಿಸುತ್ತಿದ್ದರು. ಈಗಲೂ ಅವುಗಳ ಈ ಗುರುತುಗಳು ಕಾಣಿಸುತ್ತವೆ. ಈ ದೂರ್ವೆಗಳು ದರ್ಬೆಗಳ ಆಕಾರಗಳಲ್ಲಿದ್ದು ನೆಲವನ್ನು ಮುಚ್ಚಿವೆ. ಈ ಹಲವಾರು ವೃಕ್ಷಗಳು ಯೂಪಗಳಂತಿವೆ. ದೇವತೆಗಳು ಮತ್ತು ಋಷಿಗಳು ಇಂದೂ ಇಲ್ಲಿ ವಾಸಿಸುತ್ತಿದ್ದಾರೆ. ಸಾಯಂಕಾಲ ಮತ್ತು ಬೆಳಗಿನ ವೇಳೆಗಳಲ್ಲಿ ಅವರ ಅಗ್ನಿಯನ್ನು ನೋಡುತ್ತೇವೆ. ಇಲ್ಲಿ ಸ್ನಾನಮಾಡಿದವರ ಪಾಪಗಳು ತಕ್ಷಣವೇ ನಾಶಗೊಳ್ಳುತ್ತವೆ. ಆದುದರಿಂದ ನಿನ್ನ ತಮ್ಮಂದಿರೊಂದಿಗೆ ಇಲ್ಲಿ ಸ್ನಾನ ಮಾಡು. ನಂದಾ ನದಿಯಲ್ಲಿ ಕೈಕಾಲುಗಳನ್ನು ತೊಳೆದು ಕೌಶಿಕೀ ನದಿಗೆ ಹೋಗೋಣ. ಅಲ್ಲಿ ವಿಶ್ವಾಮಿತ್ರನು ಉತ್ತಮ ಘೋರ ತಪಸ್ಸನ್ನು ತಪಿಸಿದ್ದನು.”

ಆಗ ಅಲ್ಲಿ ನೃಪನು ತನ್ನ ತಂಡದವರೊಂದಿಗೆ ಸ್ನಾನಮಾಡಿದನು. ಅನಂತರ, ಪುಣ್ಯೆ, ರಮ್ಯ, ಮಂಗಳಕರ ನೀರಿನ ಕೌಶಿಕೀ ನದಿಗೆ ಹೋದನು. ಅಲ್ಲಿ ಲೋಮಶನು ಹೇಳಿದನು: “ಇದು ದೇವನದಿ ಪುಣ್ಯ ಕೌಶಿಕೀ. ಇಲ್ಲಿ ವಿಶ್ವಾಮಿತ್ರನ ರಮ್ಯ ಆಶ್ರಮವು ಕಂಗೊಳಿಸುತ್ತಿದೆ. ಇಲ್ಲಿ ಪುಣ್ಯ ಎಂದು ಕರೆಯಲ್ಪಡುವ ಮಹಾತ್ಮ ಕಾಶ್ಯಪ, ಸಂಯತೇಂದ್ರಿಯ, ತಪಸ್ವಿ, ಋಷ್ಯಶೃಂಗನ ತಂದೆಯ ಆಶ್ರಮವೂ ಇದೆ. ಋಷ್ಯಶೃಂಗನ ತಪಸ್ಸಿನ ಪ್ರಭಾವದಿಂದ ವಾಸವನು ಮಳೆಯನ್ನು ಸುರಿಸಿದನು. ಅವನ ಭಯದಿಂದ ಬಲವೃತ್ರಹನು ಅನಾವೃಷ್ಠಿಯಾಗಿರುವಾಗ ಮಳೆಯನ್ನು ಸುರಿಸಿದನು. ಜಿಂಕೆಯಿಂದ ಜನಿಸಿದ ಆ ತೇಜಸ್ವಿ ಪ್ರಭು ಕಾಶ್ಯಪನ ಮಗನು ಲೋಮಪಾದನ ರಾಜ್ಯದಲ್ಲಿ ಮಹಾ ಅದ್ಭುತವನ್ನು ಮಾಡಿತೋರಿಸಿದನು. ಪುನಃ ಬೆಳೆಗಳು ಬೆಳೆಯುವಂತೆ ಮಾಡಿದ ಅವನಿಗೆ ನೃಪ ಲೋಮಪಾದನು ತನ್ನ ಮಗಳು ಶಾಂತಳನ್ನು ಸೂರ್ಯನು ಸಾವಿತ್ರಿಯನ್ನು ಹೇಗೋ ಹಾಗೆ ಕೊಟ್ಟನು”

ಯುಧಿಷ್ಠಿರನು ಹೇಳಿದನು: “ಕಾಶ್ಯಪನ ಮಗನಾಗಿ ಋಷ್ಯಶೃಂಗನು ಜಿಂಕೆಯಲ್ಲಿ ಹೇಗೆ ಜನಿಸಿದನು? ವಿರುದ್ಧ ಯೋನಿಗಳಲ್ಲಿ ಜನಿಸಿದ ಅವನು ಹೇಗೆ ತಪಸ್ವಿಯಾದನು? ಯಾವ ಕಾರಣಕ್ಕೆ ಆ ಧೀಮಂತ ಬಾಲಕನ ಭಯದಿಂದ ಬಲವೃತ್ರಹನು ಅನಾವೃಷ್ಠಿಯಾಗಿದ್ದರೂ ಮಳೆಯನ್ನು ಸುರಿಸಿದನು? ಜಿಂಕೆಯ ರೂಪದಲ್ಲಿ ವಾಸಿಸುತ್ತಿದ್ದ ಅವನ ಚೇತನಕ್ಕೆ ಆಸೆತೋರಿಸಿದ ರಾಜಪುತ್ರಿ ಯತವ್ರತೆ ಶಾಂತಿಯ ರೂಪವಾದರೂ ಹೇಗಿತ್ತು? ಲೋಮಪಾದನಾದರೋ ರಾಜರ್ಷಿಯೂ ಧಾರ್ಮಿಕನೂ ಆಗಿದ್ದನೆಂದು ಕೇಳಿದ್ದೇವೆ. ಅವನ ರಾಜ್ಯದಲ್ಲಿ ಪಾಕಶಾಸನನು ಏಕೆ ಮಳೆಯನ್ನು ಸುರಿಸಲಿಲ್ಲ? ಇವೆಲ್ಲವನ್ನೂ ಹೇಗೆ ನಡೆಯಿತೋ ಹಾಗೆ ವಿಸ್ತಾರವಾಗಿ ಹೇಳಬೇಕು. ಋಷ್ಯಶೃಂಗನ ಕ್ರಿಯೆಗಳನ್ನು ಕೇಳಿಸು.” ಆಗ ಲೋಮಶನು ಯುಧಿಷ್ಠಿರನಿಗೆ ಋಷ್ಯಶೃಂಗನ ಕಥೆಯನ್ನು ವರ್ಣಿಸಿದನು.

ಅನಂತರ ಪಾಂಡವನು ಕೌಶಿಕೀ ನದಿಗೆ ಪ್ರಯಾಣ ಮಾಡಿ ಒಂದಾದ ನಂತರ ಇನ್ನೊಂದರಂತೆ ಎಲ್ಲ ಪುಣ್ಯಕ್ಷೇತ್ರಗಳಿಗೆ ಹೋದನು. ಅವನು ಸಾಗರವನ್ನು ತಲುಪಿ ಗಂಗಾ ಸಂಗಮದಲ್ಲಿ ಐನೂರು ನದಿಗಳ ಮಧ್ಯೆ ಸ್ನಾನಮಾಡಿದನು. ಅನಂತರ ವೀರ ವಸುಧಾಧಿಪನು ಸಹೋದರರೊಂದಿಗೆ ಸಮುದ್ರತೀರದಲ್ಲಿ ಕಲಿಂಗ ದೇಶದ ಕಡೆ ಪ್ರಯಾಣ ಮಾಡಿದನು. ಲೋಮಶನು ಹೇಳಿದನು: “ಕೌಂತೇಯ! ಇದು ವೈತರಣೀ ನದಿಯಿರುವ ಕಲಿಂಗ. ಇಲ್ಲಿ ಧರ್ಮನೂ ಕೂಡ ಯಜ್ಞಮಾಡಿ ದೇವತೆಗಳ ಶರಣು ಹೋದನು. ಸತತವೂ ದ್ವಿಜರು ಸೇವಿಸುವ ಈ ಉತ್ತರ ತೀರದಲ್ಲಿ ಗಿರಿಗಳಿಂದ ಶೋಭಿಸುವ ಯಜ್ಞಭೂಮಿಗೆ ಋಷಿಗಳು ಬರುತ್ತಿರುತ್ತಾರೆ. ಅಲ್ಲಿ ಹಿಂದೆ ಋಷಿಗಳೂ ಮತ್ತು ಇತರರೂ ಕ್ರತುಗಳನ್ನು ಯಾಜಿಸಿ ದೇವಯಾನಗಳ ಸಮನಾದ ದಾರಿಯಲ್ಲಿ ಸ್ವರ್ಗಕ್ಕೆ ಹೋಗಿದ್ದಾರೆ. ಅಲ್ಲಿಯೇ ರುದ್ರನು ಯಾಗದಲ್ಲಿ ಈ ಪಶುವು ನನ್ನ ಭಾಗ ಎಂದು ಹೇಳಿ ಪಶುವನ್ನು ತೆಗೆದಕೊಂಡು ಹೋದನು. ಪಶುವು ಕಳವಾದಾಗ ದೇವತೆಗಳು ಅವನಿಗೆ ಹೇಳಿದರು: “ಬೇರೆಯವರಿಗೆ ಸಲ್ಲಬೇಕಾದುದನ್ನು ತೆಗೆದುಕೊಳ್ಳಬೇಡ! ಸಕಲ ಧರ್ಮವನ್ನೂ ನಾಶಗೊಳಿಸಬೇಡ!” ಅನಂತರ ಅವರು ರುದ್ರನನ್ನು ಕಲ್ಯಾಣರೂಪಿ ಮಾತುಗಳಿಂದ ಸ್ತುತಿಸಿದರು. ಇಷ್ಟಿಯ ಮೂಲಕ ಅವನನ್ನು ತೃಪ್ತಿಪಡಿಸಿ ಗೌರವಿಸಿದರು. ಆಗ ಅವನು ಪಶುವನ್ನು ಬಿಟ್ಟು ದೇವಯಾನದಲ್ಲಿ ಹೊರಟು ಹೋದನು. ಅಲ್ಲಿ ರುದ್ರನ ಕುರಿತು ಒಂದು ಅನುವಂಶವಿದೆ. ಕೇಳು! “ಸರ್ವ ಭೋಗಗಳಲ್ಲಿನ ಉತ್ತಮ ಭಾಗವು ರುದ್ರನಿಗೆ ಸೇರಬೇಕು ಎಂದು ರುದ್ರನ ಮೇಲಿನ ಭಯದಿಂದ ದೇವತೆಗಳು ಶಾಶ್ವತ ಸಂಕಲ್ಪ ಮಾಡಿಕೊಂಡರು.” ನೀರನ್ನು ಮುಟ್ಟಿ ಈ ಶ್ಲೋಕವನ್ನು ಯಾವ ನರನು ಹಾಡುತ್ತಾನೋ ಅವನು ದೇವಯಾನದಲ್ಲಿ ಪ್ರಯಾಣಿಸುತ್ತಾನೆ ಮತ್ತು ಅವನ ಕಣ್ಣುಗಳು ಪ್ರಕಾಶಿಸುತ್ತವೆ.”

ಅನಂತರ ಮಹಾಭಾಗ ಸರ್ವ ಪಾಂಡವರೂ ಮತ್ತು ದ್ರೌಪದಿಯೂ ವೈತರಣಿಯಲ್ಲಿ ಇಳಿದು ಪಿತೃಗಳಿಗೆ ತರ್ಪಣವನ್ನಿತ್ತರು. ಯುಧಿಷ್ಠಿರನು ಹೇಳಿದನು: “ತಪೋಧನ ಲೋಮಶ! ನೋಡು! ಈ ನದಿಯ ನೀರನ್ನು ಮುಟ್ಟಿದಕೂಡಲೇ ಮಾನುಷಲೋಕವನ್ನು ದಾಟುತ್ತೇನೆ! ನಿನ್ನ ಪ್ರಸಾದದಿಂದ ಸರ್ವಲೋಕಗಳನ್ನೂ ಕಾಣುತ್ತಿದ್ದೇನೆ. ಇದು ಮಹಾತ್ಮ ವೈಖಾನಸರ ಜಪದ ಶಬ್ಧ!”

ಲೋಮಶನು ಹೇಳಿದನು: “ಯುಧಿಷ್ಠಿರ! ನೀನು ಕೇಳುತ್ತಿರುವ ಈ ಧ್ವನಿಯು ಮೂರುನೂರು ಸಾವಿರ (ಮೂರು ಲಕ್ಷ) ಯೋಜನೆಯ ದೂರದಿಂದ ಬರುವುದು. ನಿಃಶಬ್ಧನಾಗಿರು. ರಮ್ಯವಾಗಿ ಪ್ರಕಾಶಿಸುತ್ತಿರುವ ಈ ವನವು ಪ್ರತಾಪವಾನ್ ವಿಶ್ವಕರ್ಮನು ಯಜ್ಞಮಾಡಿದ ಪ್ರದೇಶ. ಈ ಯಜ್ಞದಲ್ಲಿಯೇ ಸ್ವಯಂಭುವು ಪರ್ವತ, ವನ ಪ್ರದೇಶಗಳೊಂದಿಗೆ ಭೂಮಿಯನ್ನು ಮಹಾತ್ಮ ಕಶ್ಯಪನಿಗೆ ದಾನವನ್ನಾಗಿತ್ತನು. ದಾನವನ್ನಾಗಿತ್ತ ಕೂಡಲೇ ಭೂಮಿಯು ದುಃಖಿತಳಾಗಿ ಕೋಪದಿಂದ ಲೋಕೇಶ್ವರ ಪ್ರಭುವಿಗೆ ಹೇಳಿದಳು: “ಭಗವನ್! ನೀನು ನನ್ನನ್ನು ಯಾವ ಮರ್ತ್ಯನಿಗೂ ಕೊಡಬಾರದು. ನಿನ್ನ ದಾನವು ನಿರರ್ಥಕ. ನಾನು ರಸಾತಳಕ್ಕೆ ಹೋಗುತ್ತೇನೆ.” ಅವಳು ವಿಷಾದಗೊಂಡಿದ್ದುದನ್ನು ನೋಡಿದ ಭಗವಾನ್ ಋಷಿ ಕಶ್ಯಪನು ಭೂಮಿಯನ್ನು ಮೆಚ್ಚಿಸಿದನು. ಅವನ ತಪಸ್ಸಿಗೆ ಪ್ರಸನ್ನಳಾದ ಭೂಮಿಯು ನೀರಿನಿಂದ ಮೇಲೆದ್ದು ವೇದಿರೂಪದಲ್ಲಿ ಬಂದಳು. ಅವಳೇ ಈ ಸಂಸ್ಥಾನಲಕ್ಷಣಗಳಿಂದ ವೇದಿಯಂತೆ ಪ್ರಕಾಶಿಸುತ್ತಾಳೆ. ಈ ವೇದಿಯನ್ನೇರು. ನೀನು ವೀರ್ಯವಂತನಾಗುವೆ. ನೀನು ವೇದಿಯನ್ನು ಏರಿದ ತಕ್ಷಣವೇ ನಾನೇ ನಿನಗೆ ಆಶೀರ್ವಚನಗಳನ್ನು ನೀಡುವೆ. ಮರ್ತ್ಯನು ಈ ವೇದಿಯನ್ನು ಮುಟ್ಟಿದ ಕೂಡಲೇ ಅದು ಸಮುದ್ರವನ್ನು ಪ್ರವೇಶಿಸುತ್ತದೆ. “ನೀನು ಅಗ್ನಿ, ಮಿತ್ರ, ಯೋನಿ, ದಿವ್ಯ ಆಪ ಮತ್ತು ವಿಷ್ಣುವಿನ ರೇತ ಹಾಗು ಅಮೃತದ ನಾಭಿ!” ಎಂಬ ಈ ಸತ್ಯವಾಕ್ಯವನ್ನು ಹೇಳುತ್ತಾ ಈಗ ಸಾವಕಾಶವಾಗಿ ಈ ವೇದಿಯನ್ನು ಏರು.”

ನಂತರ ಮಹಾತ್ಮ ಯುಧಿಷ್ಠಿರನು ಸಾಗರವನ್ನು ಪ್ರವೇಶಿಸಿದನು. ಅವನು ಹೇಳಿದಂತೆ ಎಲ್ಲವನ್ನೂ ಮಾಡಿದ ನಂತರ, ಮಹೇಂದ್ರಪರ್ವತಕ್ಕೆ ಹೋಗಿ ರಾತ್ರಿಯನ್ನು ಕಳೆದನು. ಪೃಥಿವೀಪತಿಯು ಒಂದು ರಾತ್ರಿಯನ್ನು ಅಲ್ಲಿ ಕಳೆದ ನಂತರ, ಸಹೋದರರೊಂದಿಗೆ ತಾಪಸರಿಗೆ ಪರಮ ಸತ್ಕಾರವನ್ನು ಮಾಡಿದನು. ಲೋಮಶನು ಅಲ್ಲಿರುವ ಎಲ್ಲ ತಾಪಸರನ್ನೂ – ಭೃಗುಗಳನ್ನು, ಅಂಗಿರಸರನ್ನು, ವಾಸಿಷ್ಠರನ್ನು ಮತ್ತು ಕಾಶ್ಯಪರನ್ನು – ಕರೆಯಿಸಿದನು. ಅವರನ್ನು ಭೇಟಿಮಾಡಿದ ರಾಜರ್ಷಿಯು ಅಂಜಲೀಬದ್ಧನಾಗಿ ಅವರಿಗೆ ಅಭಿನಂದಿಸಿದನು, ಮತ್ತು ಪರಶುರಾಮನ ಅನುಚರ ವೀರ ಅಕೃತವ್ರಣನಿಗೆ ಕೇಳಿದನು: “ಭಗವಾನ್ ರಾಮನು򠈱ಎಂದು ತಾಪಸರಿಗೆ ಕಾಣಿಸಿಕೊಳ್ಳುತ್ತಾನೆ? ಅದೇ ಸಮಯದಲ್ಲಿ ನಾನೂ ಕೂಡ ಭಾರ್ಗವನನ್ನು ನೋಡಲು ಬಯಸುತ್ತೇನೆ.”

ಅಕೃತವ್ರಣನು ಹೇಳಿದನು: “ಅತ್ಮನನ್ನು ತಿಳಿದಿರುವ ರಾಮನಿಗೆ ನೀನು ಬರುತ್ತೀಯೆ ಎಂದು ತಿಳಿದಿದೆ. ರಾಮನಿಗೆ ನಿನ್ನ ಮೇಲೆ ಪ್ರೀತಿಯಿದೆ ಮತ್ತು ಬೇಗನೇ ನಿನಗೆ ಕಾಣಿಸಿಕೊಳ್ಳುತ್ತಾನೆ. ಚತುರ್ದಶೀ ಮತ್ತು ಅಷ್ಟಮಿಗಳಲ್ಲಿ ರಾಮನು ತಾಪಸರಿಗೆ ಕಾಣಿಸಿಕೊಳ್ಳುತ್ತಾನೆ. ಈ ರಾತ್ರಿ ಕಳೆದರೆ ಚತುರ್ದಶಿಯಾಗುತ್ತದೆ.”

ಯುಧಿಷ್ಠಿರನು ಹೇಳಿದನು: “ನೀನು ವೀರ ಮಹಾಬಲಿ ಜಾಮದಗ್ನಿಯನ್ನು ಅನುಸರಿಸುತ್ತಿದ್ದೀಯೆ ಮತ್ತು ನೀನು ಅವನು ಹಿಂದೆ ನಡೆಸಿದ ಎಲ್ಲ ಕಾರ್ಯಗಳನ್ನೂ ಪ್ರತ್ಯಕ್ಷವಾಗಿ ಕಂಡಿದ್ದೀಯೆ. ಆದುದರಿಂದ ಹೇಗೆ ಮತ್ತು ಯಾವ ಕಾರಣಕ್ಕಾಗಿ ರಾಮನು ಕ್ಷತ್ರಿಯರೆಲ್ಲರನ್ನೂ ರಣರಂಗದಲ್ಲಿ ಸೋಲಿಸಿದನು ಎನ್ನುವುದನ್ನು ಹೇಳು.” ಆಗ ಅಕೃತವ್ರಣನು ಯುಧಿಷ್ಠಿರನಿಗೆ ಪರಶುರಾಮನ ಕಥೆಯನ್ನು ಹೇಳಿದನು. ಅನಂತರ ಒಪ್ಪಂದದಂತೆ ಚತುರ್ದಶಿಯಂದು ಮಹಾಮನಸ್ವಿ ರಾಮನು ಆ ವಿಪ್ರರಿಗೂ, ಅನುಜರ ಸಮೇತ ಧರ್ಮರಾಜನಿಗೂ ದರ್ಶನವನ್ನಿತ್ತನು. ತಮ್ಮಂದಿರೊಡನೆ ಆ ಪ್ರಭು ರಾಜೇಂದ್ರನು ಅವನನ್ನು ಅರ್ಚಿಸಿದನು ಮತ್ತು ಆ ನೃಪತಿಸತ್ತಮನು ಬ್ರಾಹ್ಮಣರಿಗೂ ಪರಮ ಪೂಜೆಯನ್ನು ಗೈದನು. ಜಾಮದಗ್ನಿಯನ್ನು ಅರ್ಚಿಸಿ ಮತ್ತು ಅವನಿಂದ ಗೌರವಿಸಲ್ಪಟ್ಟ ಪ್ರಭುವು ಮಹೇಂದ್ರ ಪರ್ವತದಲ್ಲಿ ಆ ರಾತ್ರಿಯನ್ನು ಕಳೆದು ದಕ್ಷಿಣಾಭಿಮುಖವಾಗಿ ಪ್ರಯಾಣಿಸಿದನು.

ಆ ಮಹಾನುಭಾವ ರಾಜನು ಮುಂದುವರೆದು ಎಲ್ಲ ವಿಪ್ರರಿಂದೊಡಗೂಡಿ ಒಂದೊಂದಾಗಿ ಸಾಗರತೀರದಲ್ಲಿ ಪುಣ್ಯ ಮತ್ತು ರಮ್ಯ ತೀರ್ಥಗಳನ್ನು ನೋಡಿದನು. ಪಾರ್ಥಿವರ ಮಗ-ಮೊಮ್ಮಗನಾದ ಆ ಪಾಂಡುಪುತ್ರನು ಅನುಜರೊಂದಿಗೆ ಅವುಗಳಲ್ಲಿ ವಿನೀತನಾಗಿ ಸ್ನಾನಮಾಡಿ ಪುಣ್ಯತಮ ಪ್ರಶಸ್ತ ಸಮುದ್ರಗೆಗೆ ಹೋದನು. ಅಲ್ಲಿಯೂ ಕೂಡ ಮಹಾನುಭಾವನು ಸ್ನಾನಮಾಡಿ ಪಿತೃಗಳಿಗೆ ದೇವತೆಗಳಿಗೆ ತರ್ಪಣವನ್ನಿತ್ತು, ಬ್ರಾಹ್ಮಣ ಪ್ರಮುಖರಿಗೆ ಧನವನ್ನು ಹಂಚಿ, ಸಾಗರವನ್ನು ಸೇರುವ ಗೋದಾವರಿಗೆ ಹೋದನು. ಆಗ ದ್ರವಿಡದಲ್ಲಿ ಪಾಪವಿರಹಿತನಾಗಿ ಸಮುದ್ರವನ್ನು ಸೇರಿ ಲೋಕಪುಣ್ಯಕ ಪವಿತ್ರಪುಣ್ಯ ಅಗಸ್ತ್ಯತೀರ್ಥ, ನಾರೀತೀರ್ಥ ಮತ್ತು ಇತರ ತೀರ್ಥಗಳನ್ನು ವೀರನು ನೋಡಿದನು. ಅಲ್ಲಿ ಅಗ್ರಧನುರ್ಧರ ಅರ್ಜುನನನ ಪೌರಸಾಹಸ ಕರ್ಮಗಳ ಕುರಿತು ಕೇಳಿದನು. ಪರಮ ಋಷಿಗಳ ಗುಂಪುಗಳು ಅವನನ್ನು ಗೌರವಿಸಲು ಪಾಂಡುಸುತನು ಪರಮ ಸಂತೋಷವನ್ನು ಹೊಂದಿದನು. ಆ ತೀರ್ಥಗಳಲ್ಲಿ ಕೃಷ್ಣೆಯ ಸಹಿತ ಮತ್ತು ತಮ್ಮಂದಿರೊಡನೆ ಅಂಗಾಂಗಗಳನ್ನು ತೊಳೆದು, ಅರ್ಜುನನ ವಿಕ್ರಮಕ್ಕೆ ಗೌರವಿಸಿ, ಮಹೀಪಾಲ ಪತಿಯು ಪೃಥ್ವಿಯಲ್ಲಿ ರಮಿಸಿದನು. ಅರ್ಜುನನನ್ನು ತಮ್ಮಂದಿರೊಡನೆ ಪ್ರಶಂಸಿಸುತ್ತಾ ಆ ಉತ್ತಮ ನದೀ ತೀರ್ಥಗಳಲ್ಲಿ ಸಹಸ್ರಾರು ಗೋವುಗಳನ್ನು ದಾನವನ್ನಾಗಿತ್ತನು. ಸಾಗರತೀರದಲ್ಲಿ ಆ ಪುಣ್ಯ ತೀರ್ಥಗಳನ್ನೂ ಇನ್ನೂ ಇತರ ಬಹಳ ತೀರ್ಥಗಳಿಗೂ ಹೋಗಿ ಕ್ರಮೇಣವಾಗಿ ಆ ಪರಿಪೂರ್ಣಕಾಮನು ಪುಣ್ಯತಮ ಶೂರ್ಪಾರಕವನ್ನು ನೋಡಿದನು. ಸಾಗರತೀರದಲ್ಲಿ ಕೆಲವು ಪ್ರದೇಶಗಳನ್ನು ದಾಟಿ ಭೂಮಿಯಲ್ಲಿಯೇ ಖ್ಯಾತ, ಹಿಂದೆ ದೇವತೆಗಳು ತಪಸ್ಸನ್ನು ತಪಿಸಿದ, ನರೇಂದ್ರರರಿಗೆ ಇಷ್ಟವಾದ ಪುಣ್ಯತಮ ವನದ ಬಳಿಬಂದನು. ಅನಂತರ ಆ ವಸುಧಾಧಿಪ ರಾಜನು ವಸುಗಳ, ಮರುದ್ಗಣಗಳ, ಹಾಗೆಯೇ ಅಶ್ವಿನಿಯರ, ವೈವಸ್ವತ, ಆದಿತ್ಯ, ಕುಬೇರನ, ಇಂದ್ರ, ವಿಷ್ಣು, ವಿಭು ಸವಿತುವಿನ, ಭಗ, ಚಂದ್ರ ಮತ್ತು ದಿವಾಕರನ, ಅಪಾಂಪತಿ, ಮತ್ತು ಸಾಧ್ಯಗಣದ, ಧಾತೃ, ಪಿತೃಗಳ, ಮತ್ತು ಗಣಗಳೊಂದಿಗೆ ಮಹಾತ್ಮ ರುದ್ರನ, ಸರಸ್ವತಿಯ, ಸಿದ್ಧಗಣಗಳ, ಪೂಷ್ಣನ, ಮತ್ತು ಇತರ ಅಮರರ ಪುಣ್ಯ, ಅವರಿಗೆ ಪ್ರಿಯವಾದ ಸುಮನೋಹರ ತೀರ್ಥಗಳನ್ನು ನೋಡಿದನು. ಅಲ್ಲಿ ಉಪವಾಸದಿಂದಿದ್ದು ವಿವಿಧ ರತ್ನಗಳನ್ನು ಮಹಾಧನಗಳನ್ನು ದಾನವನ್ನಾಗಿತ್ತು ಎಲ್ಲ ತೀರ್ಥಗಳಲ್ಲಿ ಸ್ನಾನಮಾಡಿ ಪುನಃ ಶೂರ್ಪಾರಕಕ್ಕೆ ಬಂದನು, ಸಾಗರ ತೀರದಲ್ಲಿರುವ ಆ ಎಲ್ಲ ತೀರ್ಥಗಳಿಗೂ ಹೋಗಿ, ತನ್ನ ತಮ್ಮಂದಿರೊಡನೆ ಪುನಃ ಪ್ರಯಾಣಮಾಡಿ ಬ್ರಾಹ್ಮಣರು ಸಾಗರದಿಂದ ಪಡೆದ ಭೂಮಿ ಪ್ರಭಾಸ ತೀರ್ಥಕ್ಕೆ ಬಂದನು. ಅಗಲವಾದ ಕೆಂಪುಕಣ್ಣುಗಳುಳ್ಳ ಅವನು ಅಲ್ಲಿ ಅನುಜರು ಮತ್ತು ಕೃಷ್ಣೆಯೊಂದಿಗೆ, ಲೋಮಶ ಮತ್ತು ವಿಪ್ರರೊಂದಿಗೆ ಪಿತೃ-ದೇವಗಣಗಳಿಗೆ ತರ್ಪಣವನ್ನಿತ್ತನು. ಧರ್ಮಭೃತರಲ್ಲಿ ಶ್ರೇಷ್ಠನಾದ ಅವನು ಹನ್ನೆರಡು ದಿನಗಳು ಕೇವಲ ನೀರು-ಗಾಳಿಯನ್ನು ಸೇವಿಸಿಕೊಂಡಿದ್ದು ಪ್ರಾತಃ ಮತ್ತು ಸಂಧ್ಯಾಕಾಲಗಳಲ್ಲಿ ಸ್ನಾನಮಾಡಿ, ಸುತ್ತಲೂ ಅಗ್ನಿಯನ್ನು ಉರಿಯಿಸಿಕೊಂಡು ತಪಸ್ಸನ್ನು ತಪಿಸಿದನು.

ಪ್ರಭಾಸದಲ್ಲಿ ವೃಷ್ಣಿಪ್ರಮುಖರು ಯುಧಿಷ್ಠಿರನನ್ನು ಸಂಧಿಸಿದುದು

ಯುಧಿಷ್ಠಿರನು ಉಗ್ರತಪಸ್ಸಿನಲ್ಲಿ ನಿರತನಾಗಿದ್ದಾನೆಂದು ರಾಮ-ಜನಾರ್ದರನು ಕೇಳಿದರು. ಅವರಿಬ್ಬರೂ ಎಲ್ಲ ವೃಷ್ಣಿಪ್ರಮುಖರು ಮತ್ತು ಸೈನ್ಯದೊಂದಿಗೆ ಅಜಮೀಢ ಯುಧಿಷ್ಠಿರನಲ್ಲಿಗೆ ಬಂದರು. ಆ ವೃಷ್ಣಿಗಳು ನೆಲದ ಮೇಲೆ ಮಲಗುತ್ತಿದ್ದ, ಅಂಗಾಗಗಳಲ್ಲಿ ಧೂಳು ತುಂಬಿಸಿಕೊಂಡಿದ್ದ ಪಾಂಡುಸುತರನ್ನು ನೋಡಿ ಮತ್ತು ಇವುಗಳಿಗೆ ಅರ್ಹಳಲ್ಲದ ದ್ರೌಪದಿಯನ್ನೂ ನೋಡಿ ಬಹಳ ದುಃಖಿತರಾಗಿ ಆರ್ತನಾದಮಾಡಿದರು. ಆಗ ಆ ಅದೀನಸತ್ವರು ರಾಮ, ಜನಾರ್ದನ, ಕೃಷ್ಣನ ಮಗ ಸಾಂಬ, ಶಿನಿಯ ಮೊಮ್ಮಗ ಮತ್ತು ಇತರ ವೃಷ್ಣಿಗಳ ಬಳಿ ಬಂದು ಯಥಾಧರ್ಮವಾಗಿ ಪೂಜಿಸಿದರು. ಅವರೆಲ್ಲರೂ ಕೂಡ ಪಾರ್ಥರನ್ನು ಪ್ರತಿಪೂಜಿಸಿದರು. ಹಾಗೆಯೇ ಪಾಂಡುಸುತರಿಂದ ಸತ್ಕೃತರಾದರು. ಇಂದ್ರನನ್ನು ದೇವಗಣಗಳು ಹೇಗೋ ಹಾಗೆ ಅವರು ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು. ಆ ಪರಮಪ್ರತೀತನು ಅವರಿಗೆ ಮತ್ತು ಕೃಷ್ಣನಿಗೆ ತನ್ನ ಶತ್ರುಗಳ ಎಲ್ಲ ನಡತೆಗಳ ಕುರಿತು, ಮತ್ತು ವನದಲ್ಲಿ ವಾಸಿಸುತ್ತಿರುವುದರ ಕುರಿತು, ಇಂದ್ರನ ಮಗ ಪಾರ್ಥನು ಅಸ್ತ್ರಗಳಿಗಾಗಿ ಇಂದ್ರನಲ್ಲಿಗೆ ಹೋಗಿದ್ದುದರ ಕುರಿತು ವರದಿಮಾಡಿದನು. ಅವನ ಮಾತುಗಳನ್ನು ಪ್ರತೀತರಾಗಿ ಕೇಳಿ, ಅವರು ಕೃಷರಾಗಿದ್ದುದನ್ನು ನೋಡಿ ಆ ಮಹಾನುಭಾವ ದಾಶಾರ್ಹರ ಕಣ್ಣುಗಳಿಂದ ಜನಿಸಿದ ದುಃಖದ ಕಣ್ಣೀರು ಹರಿಯಿತು.

ಆಗ ಹಸುವಿನ ಹಾಲಿನಂತೆ, ಮಲ್ಲಿಗೆಯಂತೆ, ಚಂದ್ರನಂತೆ, ಕಮಲದ ಎಳೆಯಂತೆ ಬಿಳಿಯಾಗಿ ಹೊಳೆಯುತ್ತಿದ್ದ ವನಮಾಲಿ, ಹಲಾಯುಧ ರಾಮನು ಪುಷ್ಕರೇಕ್ಷಣ ಕೃಷ್ಣನಿಗೆ ಹೇಳಿದನು: “ಕೃಷ್ಣ! ಮಹಾತ್ಮ ಯುಧಿಷ್ಠಿರನು ಜಟಾಧಾರಿಯಾಗಿ ಚೀರವಸ್ತ್ರಗಳನ್ನು ಧರಿಸಿ ವನವನ್ನಾಶ್ರಯಿಸಿ ಕಷ್ಟಪಡುತ್ತಿದ್ದಾನೆ ಎಂದರೆ ಧರ್ಮದಲ್ಲಿ ನಡೆಯುವವರಿಗೆ ಜಯವಾಗಲೀ ಅಧರ್ಮದಲ್ಲಿ ನಡೆಯುವವರಿಗೆ ಪರಾಭವವಾಗಲೀ ಇಲ್ಲದಂತಲ್ಲವೇ! ದುರ್ಯೋಧನನು ಭೂಮಿಯನ್ನು ಆಳುತ್ತಿದ್ದಾನೆ. ಆದರೆ ಭೂಮಿಯು ಅವನನ್ನು ಕಬಳಿಸುವುದಿಲ್ಲ. ಇದರಿಂದ ಅಲ್ಪಬುದ್ಧಿ ನರನು ಧರ್ಮದಲ್ಲಿ ನಡೆಯುವುದಕ್ಕಿಂತ ಅಧರ್ಮದಲ್ಲಿ ನಡೆಯುವುದೇ ಲೇಸು ಎಂದು ಅಂದುಕೊಳ್ಳಬಹುದು. ದುರ್ಯೋಧನನು ಅಭಿವೃದ್ಧಿ ಹೊಂದುತ್ತಿದ್ದಾನೆ ಮತ್ತು ಯುಧಿಷ್ಠಿರನು ರಾಜ್ಯವನ್ನು ಕಳೆದುಕೊಂಡು ಅಸುಖಿಯಾಗಿದ್ದಾನೆ ಎಂದರೆ ಸಾಧಾರಣ ಜನರು ಏಳಿಗೆ ಹೊಂದಲು ಏನು ಮಾಡಬೇಕು ಎಂದು ಮನುಷ್ಯರಲ್ಲಿ ಒಂದು ಶಂಖೆಯು ಮೂಡುವುದಿಲ್ಲವೇ? ಧರ್ಮವೇ ಬಲವಾಗಿದ್ದ, ಧರ್ಮರತನಾದ, ಸತ್ಯಧೃತಿಯಾದ, ದಾನಿಯಾದ ಈ ರಾಜನು ರಾಜ್ಯವನ್ನು ಕಳೆದುಕೊಂಡನೆಂದರೆ, ಪಾರ್ಥರು ಏಳಿಗೆ ಹೊಂದಬೇಕೆಂದರೆ ಅವರು ಧರ್ಮದ ದಾರಿಯನ್ನು ಬಿಡಬೇಕೇ? ಪಾರ್ಥರನ್ನು ಹೊರಗಟ್ಟಿ ಹೇಗೆ ತಾನೇ ಭೀಷ್ಮ, ವಿಪ್ರರಾದ ಕೃಪ ದ್ರೋಣರು, ಕುಲದ ವೃದ್ಧ ರಾಜನು ಸುಖವನ್ನು ಹೊಂದಿದ್ದಾರೆ? ಭರತ ಪ್ರಧಾನರ ಪಾಪಬುದ್ಧಿಗೆ ಧಿಕ್ಕಾರ! ಪಾಪವೆಸಗದೇ ಇದ್ದ ಮಕ್ಕಳನ್ನು ರಾಜ್ಯದಿಂದ ಹೊರಹಾಕಿ ರಾಜನು ತನ್ನ ಪಿತೃಗಳನ್ನು ಸೇರಿದಾಗ ಏನು ಹೇಳುತ್ತಾನೆ? ತಾನು ಇನ್ನೊಬ್ಬರ ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಪಾಪವೆಸಗಿದ್ದೇನೆಂದೇ? ಪಾರ್ಥಿವರಲ್ಲಿ ಕುರುಡನಾಗಿ ಹುಟ್ಟಿದ ತಾನು ನನ್ನ ಬುದ್ಧಿಯ ಕಣ್ಣುಗಳಿಂದ ನೋಡದೇ ಕೌಂತೇಯರನ್ನು ರಾಜ್ಯದಿಂದ ಹೊರ ಹಾಕಿದೆನೆಂದು ಹೇಳುತ್ತಾನೆಯೇ? ತನ್ನ ಪುತ್ರರೊಂದಿಗೆ ವಿಚಿತ್ರವೀರ್ಯನ ಮಗನು ಪಿತೃಲೋಕದ ನೆಲದಲ್ಲಿ ಸಮೃದ್ಧವಾಗಿ ಚಿಗುರುವ ಬಂಗಾರದ ಬಣ್ಣದ ಮರಗಳನ್ನು ಖಂಡಿತವಾಗಿಯೂ ನೋಡುತ್ತಾನೆ. ಆ ಎತ್ತರ ಮತ್ತು ಅಗಲ ಭುಜಗಳನ್ನು ಹೊಂದಿದ, ಅಗಲವಾದ ಕೆಂಪು ಕಣ್ಣುಗಳುಳ್ಳವರನ್ನು ಕೇಳುವ ಅವಶ್ಯಕತೆಯಿಲ್ಲ. ಯಾಕೆಂದರೆ ಅವರು ಶಸ್ತ್ರಗಳನ್ನು ಪಡೆದ ಯುಧಿಷ್ಠಿರನನ್ನು ಅವನ ತಮ್ಮಂದಿರನ್ನು ಶಂಕೆಯಿಲ್ಲದೇ ಅರಣ್ಯಕ್ಕೆ ಅಟ್ಟಿದರೆಂದು ಉತ್ತರಿಸುತ್ತಾರೆ. ಈ ದೀರ್ಘಭುಜಗಳ ವೃಕೋದರನು ಆ ಶತ್ರುಗಳ ಸಮೃದ್ಧ ಸೇನೆಯನ್ನು ನಿರಾಯುಧನಾಗಿಯೇ ಸದೆಬಡಿಯುತ್ತಾನೆ! ಅವನ ಯುದ್ಧಗರ್ಜನೆಯನ್ನು ಕೇಳಿದ ಸೇನೆಗಳು ಮಲ ಮೂತ್ರಗಳ ವಿಸರ್ಜನೆ ಮಾಡುತ್ತವೆ! ಹಸಿವೆ, ಬಾಯಾರಿಕೆ ಮತ್ತು ಪ್ರಯಾಣದಿಂದ ಕೃಶನಾಗಿರುವ ಈ ತರಸ್ವಿಯು ಆಯುಧ ಬಾಣಗಳನ್ನು ಹಿಡಿದು ಅವರನ್ನು ಎದುರಿಸಿದಾಗ ಘೋರತರವಾದ ಈ ಅರಣ್ಯವಾಸವನ್ನು ನೆನಪಿಸಿಕೊಂಡು ಅವರನ್ನು ನಿಃಶೇಷಗೊಳಿಸುತ್ತಾನೆ ಎನ್ನುವುದು ನನಗೆ ಖಂಡಿತವೆನಿಸುತ್ತದೆ. ಇವನ ವೀರ್ಯ ಮತ್ತು ಬಲಕ್ಕೆ ಸರಿಸಾಟಿಯಾದವನು ಎಂದೂ ಈ ಪೃಥ್ವಿಯ ರಾಜರಲ್ಲಿ ಇರಲಿಲ್ಲ ಮತ್ತು ಇರಲಾರರು! ಛಳಿ, ಸೆಖೆ, ಗಾಳಿ ಮತ್ತು ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಇವನು ರಣರಂಗದಲ್ಲಿ ತನ್ನ ಶತ್ರುಗಳು ಉಳಿಯದಂತೆ ಮಾಡುತ್ತಾನೆ! ರಥದಲ್ಲಿ ಏಕಾಂಗಿಯಾಗಿದ್ದು ಪೂರ್ವದಿಕ್ಕಿನ ರಾಜರನ್ನು ರಣದಲ್ಲಿ ಅನುಚರರೊಂದಿಗೆ ಗೆದ್ದನಂತರ ಸ್ವಾಗತಿಸಲ್ಪಟ್ಟ ಆ ಅತಿರಥ, ತರಸ್ವೀ ವೃಕೋದರನು ಇಂದು ವನದಲ್ಲಿ ಚೀರವನ್ನು ಧರಿಸಿಕೊಂಡು ಕಷ್ಟಪಡುತ್ತಿದ್ದಾನೆ! ದಂತಕೂರದಲ್ಲಿ ಸೇರಿದ್ದ ದಕ್ಷಿಣಾತ್ಯದ ಮಹೀಪಾಲ ರಾಜರುಗಳನ್ನು ಸೋಲಿಸಿದ ಈ ಸಹದೇವನನ್ನು ಇಂದು ತಪಸ್ವಿಗಳಂತೆ ತಾಪಸವೇಷ ಧರಿಸಿದುದನ್ನು ನೋಡು! ಒಂಟಿಯಾಗಿ ರಥದಲ್ಲಿ ಕುಳಿತು ಪಶ್ಚಿಮದಿಕ್ಕಿನಲ್ಲಿದ್ದ ಯುದ್ಧದ ಮತ್ತೇರಿದ್ದ ರಾಜರುಗಳನ್ನು ಸೋಲಿಸಿದ ವೀರನು ಈ ವನದಲ್ಲಿ ಇಂದು ಜಟಾಧಾರಿಯಾಗಿ, ಮಲಿನಾಂಗನಾಗಿ ಸಂಚರಿಸುತ್ತಾ, ಫಲಮೂಲಗಳಿಂದ ಜೀವನವನ್ನು ನಡೆಸುತ್ತಿದ್ದಾನಲ್ಲಾ!  ಸಮೃದ್ಧವಾದ ಸತ್ರದ ವೇದಿಯಿಂದ ಉತ್ಪನ್ನಳಾದ ಅತಿರಥ ರಾಜನ ಮಗಳು, ಸುಖಾರ್ಹಳಾದ ಈ ಸತಿಯು ಹೇಗೆ ತಾನೇ ಈ ವನವಾಸದ ದುಃಖವನ್ನು ಇಂದು ಸಹಿಸಿಕೊಂಡಿದ್ದಾಳೆ? ತ್ರಿವರ್ಗಮುಖ್ಯನ, ಸಮೀರಣನ, ದೇವೇಶ್ವರನ ಮತ್ತು ಅಶ್ವಿನಿಯರ - ಈ ಸುರರ ಮಕ್ಕಳು, ಸುಖಕ್ಕೆ ಅರ್ಹರಾಗಿದ್ದರೂ, ಹೇಗೆ ತಾನೇ ಕಷ್ಟಕರ ಅರಣ್ಯದಲ್ಲಿ ಅಲೆಯುತ್ತಿದ್ದಾರೆ? ಹೆಂಡತಿಯೊಂದಿಗೆ ಧರ್ಮಜನನನ್ನು ಗೆದ್ದು, ತಮ್ಮಂದಿರು ಮತ್ತು ಅನುಯಾಯಿಗಳೊಂದಿಗೆ ಅವನನ್ನು ಹೊರಗಟ್ಟಿಯೂ ದುರ್ಯೋಧನನು ಅಭಿವೃದ್ಧಿಹೊಂದುತ್ತಿದ್ದಾನಾದರೂ ಗಿರಿಶಿಖರಗಳೊಡನೆ ಈ ಭೂಮಿಯು ಏಕೆ ನಾಶವಾಗುತ್ತಿಲ್ಲ?”

ಸಾತ್ಯಕಿಯು ಹೇಳಿದನು: “ರಾಮ! ಪರಿವೇದನೆ ಪಡುವ ಕಾಲವಿದಲ್ಲ! ಅದನ್ನು ಅವರೆಲ್ಲರೂ ಅನಂತರ ಮಾಡುತ್ತಾರೆ. ಒಂದು ವೇಳೆ ಯುಧಿಷ್ಠಿರನು ಏನನ್ನೂ ಹೇಳದಿದ್ದರೂ, ಈಗಿನ ಮತ್ತು ಹಿಂದಿನ ವಿಷಯಗಳ ಕುರಿತು ನಾವು ಯೋಚಿಸಬೇಕು. ಲೋಕದಲ್ಲಿ ಅನಾಥರಾಗಿಲ್ಲದಿರುವವರು ತಾವಾಗಿಯೇ ಕಾರ್ಯಗಳನ್ನು ಪ್ರಾರಂಭಿಸುವುದಿಲ್ಲ. ಆದರೆ ಇವರ ಕೆಲಸದಲ್ಲಿ ಯಯಾತಿಗೆ ಶೈಬ್ಯನಿದ್ದಹಾಗೆ ನಾಥರಿದ್ದಾರೆ. ಲೋಕದಲ್ಲಿ ಅಂಥವರ ಕಾರ್ಯವನ್ನು ನಾಥರೇ ತಮ್ಮ ಅಭಿಪ್ರಾಯದಂತೆ ಪ್ರಾರಂಭಿಸುತ್ತಾರೆ. ಈ ಪುರುಷಪ್ರವೀರರು ನಾಥವಂತರು. ಅನಾಥರಂತೆ ದುಃಖಪಡಬೇಕಾದುದಿಲ್ಲ. ಮೂರು ಲೋಕಗಳಿಗೂ ನಾಥರಾದ ಈ ರಾಮ, ಜನಾರ್ದನರಿಬ್ಬರು, ಪ್ರದ್ಯುಮ್ನ ಮತ್ತು ಸಾಂಬರು ಹಾಗೂ ಜೊತೆಗೆ ನನ್ನನ್ನೂ ನಾಥರನ್ನಾಗಿ ಪಡೆದಿರುವ ಇವನು ಏಕೆ ಸೋದರರೊಂದಿಗೆ ವನವಾಸ ಮಾಡಬೇಕು? ಇಂದೇ ನಾನಾ ಆಯುಧಗಳನ್ನು, ಬಣ್ಣದ ಕವಚಗಳನ್ನೂ ಧರಿಸಿ ದಶಾರ್ಹರ ಸೇನೆಯು ಹೊರಡಲಿ. ವೃಷ್ಣಿಬಲಕ್ಕೆ ಸೋತು ಧಾರ್ತರಾಷ್ಟ್ರರು ತಮ್ಮ ಬಾಂಧವರೊಂದಿಗೆ ಯಮಲೋಕಕ್ಕೆ ಹೋಗಲಿ. ನೀನೊಬ್ಬನೇ ಕುಪಿತನಾದರೆ ಈ ಪೃಥ್ವಿಯನ್ನೇ ಮುತ್ತಿಗೆ ಹಾಕಬಹುದು, ಇನ್ನು ಶಾಂರ್ಙ್ಗಧನ್ವಿಯ ನಿಲುವು ಏನಿರಬಹುದು? ದೇವಪತಿ ಮಹೇಂದ್ರನು ವೃತ್ರನನ್ನು ಹಾಗೆ ಬಂಧುಗಳೊಡನೆ ಧಾರ್ತರಾಷ್ಟ್ರರನ್ನು ಸಂಹರಿಸು. ಪಾರ್ಥನು ನನಗೆ ಅಣ್ಣನಿದ್ದಂತೆ, ಸಖನಂತೆ ಮತ್ತು ಗುರುವೂ ಹೌದು ಮತ್ತು ಜನಾರ್ದನನ ಆತ್ಮ ಸಮ. ಆದುದರಿಂದ ನಮ್ಮ ಮುಂದೆ ಈಗಲೇ ಮಾಡಬೇಕಾದ ಉತ್ತಮ ಕಾರ್ಯವಿದೆ. ಆ ಅಪಾರ ಕಾರ್ಯವನ್ನು ಮಾಡು. ಅವನ ಅಸ್ತ್ರಗಳ ಮಳೆಯನ್ನು ನನ್ನ ಉತ್ತಮ ಅಸ್ತ್ರಗಳಿಂದ ಎದುರಿಸಿ ರಣದಲ್ಲಿ ಅವರೆಲ್ಲರನ್ನೂ ಸಂಹರಿಸುತ್ತೇನೆ. ಅಗ್ನಿಯಂಥಹ ಸರ್ಪವಿಷಗಳಂತಿರುವ ನನ್ನ ಉತ್ತಮ ಶರಗಳಿಂದ ಅವನ ದೇಹದಿಂದ ಶಿರವನ್ನು ತುಂಡರಿಸುತ್ತೇನೆ. ಯುದ್ಧದಲ್ಲಿ ನನ್ನ ಹರಿತಾದ ಖಡ್ಗದಿಂದ ಬಲಪ್ರಯೋಗಿಸಿ ಅವನ ಶರೀರದಿಂದ ಶಿರವನ್ನು ತುಂಡರಿಸುತ್ತೇನೆ. ಅನಂತರ ದುರ್ಯೋಧನ ಮತ್ತು ಅವನ ಎಲ್ಲ ಅನುಯಾಯಿಗಳನ್ನೂ, ಕುರುಗಳೆಲ್ಲರನ್ನೂ ಕೊಲ್ಲುತ್ತೇನೆ. ಆಯುಧಗಳನ್ನು ಹಿಡಿದು ಯುದ್ಧಕ್ಕೆ ಸದ್ಧನಾದ ನನ್ನನ್ನು ಭೂಮಿಯ ಮೇಲಿರುವವರು ಸಂತೋಷದಿಂದ ನೋಡಲಿ. ಯುಗಾಂತದಲ್ಲಿ ಕಾಲಾಗ್ನಿಯು ಒಣಗಿದ ಮರವನ್ನು ಹೇಗೋ ಹಾಗೆ ಒಬ್ಬನೇ ಕುರುಯೋಧಮುಖ್ಯರನ್ನು ಸಂಹರಿಸುತ್ತೇನೆ. ಪ್ರದ್ಯುಮ್ನನ ಹರಿತಾದ ಶರಗಳನ್ನು ಕೃಪ, ದ್ರೋಣ, ವಿಕರ್ಣ ಮತ್ತು ಕರ್ಣರು ಎದುರಿಸಲು ಶಕ್ತರಿಲ್ಲ. ಈ ನಿನ್ನ ಮಗ, ಕೃಷ್ಣನ ವೀರ ಮಗನು ರಣರಂಗದಲ್ಲಿ ನಿಲ್ಲುತ್ತಾನೆ ಎಂದು ನಾನು ತಿಳಿದಿದ್ದೇನೆ. ಸಾಂಬನು ತನ್ನ ತೋಳುಗಳ ಬಲದಿಂದ ಸೂತ ಮತ್ತು ರಥಗಳೊಂದಿಗೆ ದುಃಶಾಸನನನ್ನು ಕೊಂದು ಶಿಕ್ಷಿಸಲಿ. ರಣೋತ್ಕಟ ಜಾಂಬವತೀಸುತನಿಗೆ ರಣರಂಗದಲ್ಲಿ ಸಹಿಸಲಸಾಧ್ಯವಾದುದು ಏನೂ ತಿಳಿದಿಲ್ಲ. ಬಾಲಕನಾಗಿರುವಾಗಲೇ ಇವನು ದೈತ್ಯ ಶಂಬರನ ಸೇನೆಯನ್ನು ಕ್ಷಣದಲ್ಲಿಯೇ ನಾಶಗೊಳಿಸಿದನು. ಗುಂಡಾದ ತೊಡೆಗಳ ಮತ್ತು ನೀಳಬಾಹುಗಳ ಅಶ್ವಚಕ್ರನನ್ನೂ ರಣದಲ್ಲಿ ಇವನು ಸಂಹರಿಸಿದನು. ರಣರಂಗದಲ್ಲಿ ಸಾಂಬನ ಭುಜಗಳ ಮಧ್ಯೆ ಸಿಲುಕಿ, ದೀರ್ಘಕಾಲ ಉಳಿದುಕೊಂಡ ಮನುಷ್ಯರಾದರೂ ಯಾರಿದ್ದಾರೆ? ಕಾಲ ಬಂದು ಯಮನ ಮಧ್ಯೆ ಪ್ರವೇಶಿಸಿದ ಯಾವ ಮನುಷ್ಯನೂ ಹೇಗೆ ಹೊರಬರಲಾರನೋ ಹಾಗೆ ಯುದ್ಧದಲ್ಲಿ ಅವನ ಹತ್ತಿರ ಬಂದು, ತನ್ನ ಜೀವದೊಂದಿಗೆ ಉಳಿದುಕೊಂಡವರು ಯಾರಿದ್ದಾರೆ? ನಮ್ಮ ವಾಸುದೇವನು ತನ್ನ ಬೆಂಕಿಯಂತಹ ಬಾಣಗಳಿಂದ ಮಹಾರಥಿ ದ್ರೋಣ-ಭೀಷ್ಮರನ್ನು, ತನ್ನ ಮಕ್ಕಳೊಂದಿಗೆ ಸೋಮದತ್ತನನ್ನೂ ಮತ್ತು ಅವರ ಸೈನ್ಯಗಳೆಲ್ಲವನ್ನೂ ಸುಟ್ಟು ಉರುಳಿಸುತ್ತಾನೆ. ತನ್ನ ಧನುಸ್ಸು, ಬಾಣಗಳು ಮತ್ತು ಚಕ್ರಾಯುಧವನ್ನು ಹಿಡಿದು ಗುರಿಯಿಟ್ಟ ಯುದ್ಧದಲ್ಲಿ ಸರಿಸಾಟಿಯಿಲ್ಲದ ಕೃಷ್ಣನಿಗೆ ದೇವತೆಗಳೊಡನೆ ಸರ್ವ ಲೋಕಗಳೂ ಸೇರಿ ಏನುತಾನೆ ಅಸಾಧ್ಯ? ಅನಂತರ ಅನಿರುದ್ಧನು ಖಡ್ಗ ತೋಮರಗಳನ್ನು ಹಿಡಿದು ಈ ಭೂಮಿಯನ್ನು ಮೂರ್ಛೆತಪ್ಪಿಸಿ, ಅಂಗಾಗಳನ್ನು ತುಂಡರಿಸಿ ಕೊಂದು ಧಾರ್ತರಾಷ್ಟ್ರರಿಂದ, ಯಜ್ಞವೇದಿಯನ್ನು ದರ್ಬೆಗಳಿಂದ ತುಂಬಿಸುವಂತೆ ತುಂಬಿಸುತ್ತಾನೆ. ಗದ, ಉಲ್ಮುಕ, ಬಾಹುಕ, ಭಾನು, ನೀಥ, ರಣಶೂರ ಬಾಲಕ ನಿಷಠ, ರಣೋತ್ಕಟ ಸಾರಣ ಮತ್ತು ಚಾರುದೇಷ್ಣರು ತಮ್ಮ ಕುಲಕ್ಕೆ ಸರಿಯಾದ ಕಾರ್ಯಗಳನ್ನೆಸಗುತ್ತಾರೆ. ವೃಷ್ಣಿ-ಅಂಧಕ-ಭೋಜ ಯೋಧಮುಖ್ಯರೂ ಸೇರಿ ಇಲ್ಲಿ ಸೇರಿರುವ ಕ್ಷತ್ರಿಯ ಸೇನಾಶೂರರು ರಣರಂಗದಲ್ಲಿ ಆ ಧೃತರಾಷ್ಟ್ರನ ಮಕ್ಕಳನ್ನು ಕೊಂದು ಲೋಕದಲ್ಲಿ ಉತ್ತಮ ಯಶಸ್ಸನ್ನು ಗಳಿಸಬೇಕು. ಧರ್ಮಭೃತ ವರಿಷ್ಟ ಮಹಾತ್ಮ ಕುರುಸತ್ತಮ ಯುಧಿಷ್ಠಿರನು ದ್ಯೂತದಲ್ಲಿ ಮಾತುಕೊಟ್ಟಂತೆ ನಡೆದುಕೊಳ್ಳುತ್ತಿದ್ದರೆ ಅಭಿಮನ್ಯುವು ಈ ಭೂಮಿಯನ್ನು ಆಳಲಿ. ನಾವು ಬಿಟ್ಟ ಬಾಣಗಳಿಂದ ಅವನ ಶತ್ರುಗಳು ಹತರಾದ ನಂತರ ಧರ್ಮರಾಜನು ಭೂಮಿಯನ್ನು ಭೋಗಿಸುತ್ತಾನೆ. ಧಾರ್ತರಾಷ್ಟ್ರರು ಇಲ್ಲದಹಾಗೆ ಮಾಡುವುದು ಮತ್ತು ಸೂತಪುತ್ರನನ್ನು ಸಂಹರಿಸುವುದು ನಾವು ಮಾಡಬೇಕಾದ ಯಶಸ್ವೀ ಮತ್ತು ಅತ್ಯಂತ ಒಳ್ಳೆಯ ಕಾರ್ಯವೆಂದು ತಿಳಿಯಿರಿ.”

ವಾಸುದೇವನು ಹೇಳಿದನು: “ಮಾಧವ! ಇದು ಸತ್ಯವೆನ್ನುವುದರಲ್ಲಿ ಸಂಶಯವೇ ಇಲ್ಲ! ನಿನ್ನ ಮಾತುಗಳನ್ನು ಸ್ವೀಕರಿಸುತ್ತೇವೆ. ತಮ್ಮದೇ ಭುಜಬಲದಿಂದ ಗೆಲ್ಲದ ಭೂಮಿಯನ್ನು ಕುರುವೃಷಭನು ಹೇಗೂ ಒಪ್ಪುವುದಿಲ್ಲ. ಕಾಮದಿಂದಾಗಲೀ, ಭಯದಿಂದಾಗಲೀ ಅಥವಾ ಲೋಭದಿಂದಾಗಲೀ ಯುಧಿಷ್ಠಿರನು ತನ್ನ ಧರ್ಮವನ್ನು ಬಿಡುವುದಿಲ್ಲ. ಹಾಗೆಯೇ ಭೀಮಾರ್ಜುನರೂ, ಅತಿರಥ ಯಮಳರೂ, ದ್ರುಪದನ ಮಗಳು ಕೃಷ್ಣೆಯೂ ಕೂಡ. ಈ ಭೂಮಿಯಲ್ಲಿಯೇ ವೃಕೋದರ ಧನಂಜಯರಿಬ್ಬರೂ ಯುದ್ಧದಲ್ಲಿ ಅಪ್ರತಿಮರು. ಈ ಇಬ್ಬರೂ ಮಾದ್ರೀಸುತರಿಂದ ಪುರಸ್ಕೃತನಾದವನೇ ಈ ಇಡೀ ಪೃಥ್ವಿಯನು􋣱ಏಕೆ ಆಳಬಾರದು? ಮಹಾತ್ಮ ಪಾಂಚಾಲರಾಜ, ಕೇಕಯ ಮತ್ತು ಚೇದಿರಾಜರು ಮತ್ತು ನಾವೂ ಕೂಡ ಒಂದಾಗಿ ವಿಕ್ರಮದಿಂದ ಶತ್ರುಗಳ ಮೇಲೆ ಧಾಳಿಮಾಡಿದರೆ ಸುಯೋಧನನು ಜೀವಲೋಕವನ್ನು ತೊರೆಯುತ್ತಾನೆ.”

ಯುಧಿಷ್ಠಿರನು ಹೇಳಿದನು: “ಮಾಧವ! ನೀನು ಹೇಳುತ್ತಿರುವುದು ಸರಿಯಾದದ್ದೇ. ನನಗೆ ರಾಜ್ಯಕ್ಕಿಂತಲೂ ಸತ್ಯವನ್ನು ರಕ್ಷಿಸುವುದು ಮುಖ್ಯ. ನನ್ನ ಇರುವು ವಿಚಾರಗಳು ಕೃಷ್ಣನಿಗೇ ಗೊತ್ತು. ಮತ್ತು ಕೃಷ್ಣನನ್ನೂ ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಕೇಶವ! ಯಾವಾಗ ಪುರುಷಪ್ರವೀರರು ಇದು ವಿಕ್ರಮವನ್ನು ತೋರಿಸಲು ಸರಿಯಾದ ಸಮಯವೆಂದು ತಿಳಿದುಕೊಳ್ಳುತ್ತಾರೋ ಆಗ ರಣದಲ್ಲಿ ನೀನೂ ಶಿನಿಪ್ರವೀರನೂ ಸುಯೋಧನನನ್ನು ಗೆಲ್ಲುವಿರಿ. ಈಗ ದಶಾರ್ಹ ವೀರರು ಹಿಂದಿರುಗಲಿ. ನಾನು ನರಲೋಕನಾಥರಿಂದ ರಕ್ಷಿಸಲ್ಪಟ್ಟಿದ್ದೇನೆ ಎನ್ನುವುದು ಧೃಡ! ಅಪ್ರಮೇಯರೇ! ಧರ್ಮವನ್ನು ಪಾಲಿಸಿ! ಇನ್ನೊಮ್ಮೆ ಸಂತೋಷದ ಸಮಯದಲ್ಲಿ ಒಂದಾಗೋಣ!”

ಅವರು ಅನ್ಯೋನ್ಯರನ್ನು ಕರೆದು ಅಭಿವಂದಿಸಿ ವೃದ್ಧರನ್ನೂ ಮಕ್ಕಳನ್ನೂ ಎಲ್ಲರನ್ನೂ ಆಲಂಗಿಸಿ ಯದುಪ್ರವೀರರು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಗಂಧಮಾದನ ಪರ್ವತಕ್ಕೆ ಪ್ರಯಾಣ

ಕೃಷ್ಣನು ಹೊರಟುಹೋದ ನಂತರ ಧರ್ಮರಾಜನು ವಿದರ್ಭರಾಜನಿಂದ ವಿರಚಿತ ಉತ್ತಮ ತೀರ್ಥಗಳಿಗೆ ಹೊರಟನು. ಅಲ್ಲಿಯೇ ಸೋಮವನ್ನು ಕಡೆಯುವಾಗ ಬಿದ್ದ ಸೋಮದಿಂದ ಮಿಶ್ರಿತ ಪಯೋಷ್ಣಿ ನದಿಯು ಹರಿಯುತ್ತದೆ. ಲೋಮಶನು ಹೇಳಿದನು: “ರಾಜನ್! ಇಲ್ಲಿ ನೃಗನು ಯಜಮಾನನಾಗಿ ಸೋಮದಿಂದ ಪುರಂದರ ಇಂದ್ರನನ್ನು ತೃಪ್ತಿಪಡೆಸಿದನೆಂದೂ ಮತ್ತು ಮತ್ತೇರುವಷ್ಟನ್ನು ಕುಡಿದು ತೃಪ್ತನಾದನೆಂದೂ ಕೇಳಿದ್ದೇವೆ. ಇಲ್ಲಿಯೇ ಇಂದ್ರನೂ ಸೇರಿ ದೇವತೆಗಳು ಮತ್ತು ಪ್ರಜಾಪತಿಯೂ ಕೂಡ ಬಹಳ ಭೂರಿದಕ್ಷಿಣೆಗಳನ್ನಿತ್ತು ಬಹುವಿಧದ ಯಜ್ಞಗಳನ್ನು ಮಾಡಿದರು. ಇಲ್ಲಿಯೇ ರಾಜಾ ಆಮೂರ್ತರಯಸನು ಪ್ರಭೂ ವಜ್ರಧರ ಇಂದ್ರನನ್ನು ಏಳು ಅಶ್ವಮೇಧಯಾಗಗಳಲ್ಲಿ ಸೋಮವನ್ನಿತ್ತು ತೃಪ್ತಿಪಡೆಸಿದನು. ಯಾವಾಗಲೂ ಯಜ್ಞಗಳಲ್ಲಿ ಮರದಿಂದ ಅಥವಾ ಮಣ್ಣಿನಿಂದ ಮಾಡಿರುತ್ತಿದ್ದ ಎಲ್ಲ ದ್ರವ್ಯಗಳೂ ಅವನ ಏಳೂ ಯಜ್ಞಗಳಲ್ಲಿ ಬಂಗಾರದಿಂದ ಮಾಡಲ್ಪಟ್ಟಿದ್ದವು. ಅವನ ಯಜ್ಞಗಳಲ್ಲಿಯ ಪ್ರಯೋಗಗಳು ಏಳು ಪ್ರಯೋಗಗಳೆಂದು ವಿಶ್ರುತವಾಗಿವೆ. ಏಳರಲ್ಲಿ ಒಂದೊಂದು ಯೂಪಗಳ ಮೇಲೂ ಉಂಗುರಗಳನ್ನು ಏರಿಸಲಾಗಿತ್ತು. ಅವನ ಯಜ್ಞದಲ್ಲಿ ಇಂದ್ರನೊಂದಿಗೆ ದೇವತೆಗಳು ತಾವೇ ಹೊಳೆಯುತ್ತಿರುವ ಬಂಗಾರದಿಂದ ಮಾಡಿದ್ದ ಯೂಪಗಳನ್ನು ನಿಲ್ಲಿಸಿದ್ದರಂತೆ. ಗಯರಾಜನ ಆ ಉತ್ತಮ ಯಜ್ಞಗಳಲ್ಲಿ ಇಂದ್ರನು ಸೋಮದಿಂದ ಬುದ್ಧಿಕಳೆದುಕೊಂಡನು ಮತ್ತು ದ್ವಿಜಾತಿಯವರು ದಕ್ಷಿಣೆಗಳಿಂದ ಹುಚ್ಚರಾದರು. ಭೂಮಿಯಲ್ಲಿರುವ ಮರಳನ್ನು, ಆಕಾಶದಲ್ಲಿ ನಕ್ಷತ್ರಗಳನ್ನು, ಮಳೆಯ ನೀರಿನ ಹನಿಗಳನ್ನು ಹೇಗೆ ಸಂಖ್ಯೆಮಾಡಲಿಕ್ಕಾಗುವುದಿಲ್ಲವೋ ಹಾಗೆ ಆ ಏಳು ಯಜ್ಞಗಳಲ್ಲಿ ಗಯನು ಸದಸ್ಯರಿಗೆ ದಾನವಾಗಿ ನೀಡಿದ ಸಂಪತ್ತು ಅಸಂಖ್ಯವಾಗಿತ್ತು. ಒಂದು ವೇಳೆ ಮರಳು, ನಕ್ಷತ್ರಗಳು, ಮತ್ತು ಹನಿಗಳನ್ನು ಲೆಕ್ಕಮಾಡಲು ಸಾಧ್ಯವಾಗುತ್ತಿದ್ದರೂ, ಎಣಿಕೆಯಿಂದ ಬಂದ ಸಂಖ್ಯೆಗಿಂತ ಹೆಚ್ಚು ಆ ದಾನಕೊಡುವವನ ದಕ್ಷಿಣೆಯಾಗಿತ್ತು. ವಿಶ್ವಕರ್ಮನಿಂದ ಮಾಡಿಸಿದ್ದ ಬಂಗಾರದ ಗೋವುಗಳಿಂದ ನಾನಾ ದಿಕ್ಕುಗಳಿಂದ ಬಂದು ಸೇರಿದ್ದ ಬ್ರಾಹ್ಮಣರನ್ನು ತೃಪ್ತಿಪಡಿಸಿದನು. ಮಹಾತ್ಮ ಗಯನ ಯಜಮಾನತ್ವದಲ್ಲಿ ಎಲ್ಲೆಲ್ಲಿಯೂ ಚೈತ್ಯಗಳಿದ್ದು ಭೂಮಿಯೇ ಚಿಕ್ಕದಾಯಿತೆಂದು ತೋರುತ್ತಿತ್ತು. ತನ್ನ ಕರ್ಮಗಳಿಂದ ಅವನು ಇಂದ್ರನ ಲೋಕಗಳನ್ನು ಹೊಂದಿದನು. ಪಯೋಷ್ಣಿಯಲ್ಲಿ ಸ್ನಾನಮಾಡುವವರು ಅವನ ಲೋಕಗಳಿಗೆ ಹೋಗುತ್ತಾರೆ. ಆದುದರಿಂದ ನೀನು ಸಹೋದರರೊಂದಿಗೆ ಇಲ್ಲಿ ಸ್ನಾನಮಾಡಿದರೆ ಪಾಪಗಳನ್ನು ತೊಳೆದಂತಾಗುತ್ತದೆ.”

ಆ ನರಶ್ರೇಷ್ಠನು ಸಹೋದರರೊಂದಿಗೆ ಪಯೋಷ್ಣಿಯಲ್ಲಿ ಸ್ನಾನಮಾಡಿದನು. ಅನಂತರ, ಆ ಅನಘ ತೇಜಸ್ವಿಯು ವೈಡೂರ್ಯ ಪರ್ವತ ಮತ್ತು ಮಹಾನದಿಗೆ ತನ್ನ ಸಹೋದರರೊಂದಿಗೆ ಹೋದನು. ಅಲ್ಲಿ ಅವನಿಗೆ ಭಗವಾನ್ ಋಷಿ ಲೋಮಶನು ಅಲ್ಲಲ್ಲಿದ್ದ ರಮಣೀಯ ತೀರ್ಥಗಳ ಕುರಿತು ಎಲ್ಲವನ್ನೂ ಹೇಳಿದನು. ಸಮಯ ಸಿಕ್ಕಹಾಗೆ, ಬೇಕಾದಷ್ಟು ಸಂಪತ್ತನ್ನು ಸಹಸ್ರಾರು ಬ್ರಾಹ್ಮಣರಿಗೆ ಸತ್ಕರಿಸಿ ದಾನವನ್ನಾಗಿತ್ತು ಅವನು ಸಹೋದರರೊಂದಿಗೆ ಪ್ರಯಾಣಿಸಿದನು.

ಲೋಮಶನು ಹೇಳಿದನು: “ಕೌಂತೇಯ! ವೈಡೂರ್ಯ ಪರ್ವತವನ್ನು ನೋಡಿ ನರ್ಮದಾ ನದಿಗೆ ಇಳಿದವನು ದೇವತೆಗಳ ಮತ್ತು ರಾಜರ ಲೋಕವನ್ನು ಸೇರುತ್ತಾನೆ. ಇದು ತ್ರೇತ ಮತ್ತು ದ್ವಾಪರಗಳ ಸಂಧಿ. ಇಲ್ಲಿಗೆ ಬಂದವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ. ಇಲ್ಲಿ ಕಾಂತಿಯುಕ್ತ ಪ್ರದೇಶದಲ್ಲಿ ಶರ್ಯಾತಿಯ ಯಜ್ಞದಲ್ಲಿ ಸಾಕ್ಷಾತ್ ಅಶ್ವಿನೀ ದೇವತೆಗಳೊಂದಿಗೆ ಕೌಶಿಕ ವಿಶ್ವಾಮಿತ್ರನು ಸೋಮವನ್ನು ಸೇವಿಸಿದ್ದನು. ಮಹಾತಪಸ್ವಿ ಭಾರ್ಗವ ಪ್ರಭು ಚ್ಯವನನು ಮಹೇಂದ್ರ ವಾಸವ ಇಂದ್ರನಲ್ಲಿ ಸಿಟ್ಟಿಗೆದ್ದು ಅವನನ್ನು ಗರಬಡಿಸಿದನು. ಅವನು ರಾಜಪುತ್ರೀ ಸುಕನ್ಯೆಯನ್ನು ಪತ್ನಿಯನ್ನಾಗಿ ಪಡೆದನು.”

ಯುಧಿಷ್ಠಿರನು ಹೇಳಿದನು: “ಅವನಿಂದ ಹೇಗೆ ಭಗವಾನ್ ಪಾಕಶಾಸನ ಇಂದ್ರನು ಗರಹೊಡೆದಂತಾದನು ಮತ್ತು ಆ ಮಹಾತಪಸ್ವಿ ಭಾರ್ಗವನಾದರೂ ಅವನಲ್ಲಿ ಏಕೆ ಕೋಪಗೊಂಡನು? ಬ್ರಹ್ಮನ್! ನಾಸತ್ಯ ಅಶ್ವಿನೀ ದೇವತೆಗಳು ಹೇಗೆ ಸೋಮಪಾನ ಮಾಡುವಂತಾದರು? ಇವೆಲ್ಲವನ್ನು ನಡೆದಹಾಗೆ ನನಗೆ ಹೇಳಬೇಕು.” ಆಗ ಲೋಮಶನು ಯುಧಿಷ್ಠಿರನಿಗೆ ಚ್ಯವನ ಮಹರ್ಷಿಯ ಕಥೆಯನ್ನು ಹೇಳಿದನು.

ಲೋಮಶನು ಹೇಳಿದನು: “ಇಲ್ಲಿ ಪ್ರಕಾಶಿಸುವ ಹಕ್ಕಿಗಳ ಧ್ವನಿಗಳಿಂದ ತುಂಬಿದ ಸರೋವರವು ಚ್ಯವನ ಋಷಿಯದ್ದೇ! ಅಲ್ಲಿಯೇ ನೀನು ಸಹೋದರರೊಂದಿಗೆ ಪಿತೃಗಳಿಗೂ ದೇವತೆಗಳಿಗೂ ತರ್ಪಣವನ್ನು ನೀಡು. ಇದನ್ನು ಮತ್ತು ಸಿಕತಾಕ್ಷವನ್ನು ನೋಡಿ ಸೈಂಧವಾರಣ್ಯಕ್ಕೆ ಹೋಗಿ ಪುಷ್ಕರಕ್ಕೆ ಸೇರುವ ಎಲ್ಲ ಕಾಲುವೆಗಳನ್ನು ನೋಡು ಮತ್ತು ಸ್ನಾನಮಾಡು. ಋಷಿಮುನಿಗಳ ನಿವಾಸಸ್ಥಾನವಾದ, ಸದಾ ಹಣ್ಣುಗಳಿಂದ ಕೂಡಿರುವ, ಸದಾ ಹರಿಯುತ್ತಿರುವ ನದಿಗಳಿಂದ, ತಂಗಾಳಿಯಿಂದ ಕೂಡಿರುವ ಆರ್ಚೀಕ ಪರ್ವತವೇ ಅದು. ಯುಧಿಷ್ಠಿರ! ಇಲ್ಲಿಯೇ ಹಲವಾರು ಸಾವಿರ ದೇವತೆಗಳ ಚೈತ್ಯಗಳಿವೆ. ಇದು ಋಷಿಗಳು, ಅದರಲ್ಲೂ ವೈಖಾನ ಋಷಿಗಳು ಮತ್ತು ವಾಲಖಿಲ್ಯರು ಉಪಾಸನೆ ಮಾಡುವ ಚಂದ್ರಮ ತೀರ್ಥವು. ಇಲ್ಲಿ ಮೂರು ಪುಣ್ಯಕರ ಬೆಟ್ಟಗಳೂ ಮೂರು ಜಲಪಾತಗಳೂ ಇವೆ. ಇವೆಲ್ಲವನ್ನೂ ಪ್ರದಕ್ಷಿಣೆಮಾಡಿ ಯಥೇಚ್ಛವಾಗಿ ಇಲ್ಲಿ ಸ್ನಾನಮಾಡು. ಇಲ್ಲಿಯೇ ಶಂತನು, ಶುನಕ ಮತ್ತು ನರ-ನಾರಾಯಣರಿಬ್ಬರೂ ಕೂಡ ಸನಾತನ ಸ್ಥಾನವನ್ನು ಪಡೆದರು. ಇಲ್ಲಿ ಆರ್ಚೀಕ ಪರ್ವತದಲ್ಲಿ ದೇವತೆಗಳು, ಪಿತೃಗಳು ಮತ್ತು ಮಹರ್ಷಿಗಳು ವಾಸಿಸಿ ತಪಸ್ಸನ್ನು ಮಾಡಿದ್ದರು. ಅವರನ್ನು ಪೂಜಿಸು. ಇಲ್ಲಿ ಆ ಋಷಿಗಳು ಚರುವನ್ನು ತಿನ್ನುತ್ತಾರೆ. ಇದು ಅಕ್ಷಯವಾಗಿ ಹರಿಯುತ್ತಿರುವ ಯಮುನಾ. ಇಲ್ಲಿ ಕೃಷ್ಣನು ತಪಸ್ಸನ್ನಾಚರಿಸಿದನು. ಯಮಳರು, ಭೀಮಸೇನ ಮತ್ತು ಕೃಷ್ಣಾ ಎಲ್ಲರೂ ಕೃಶರಾದ ಸುತಪಸ್ವಿಗಳಂತೆ ಅಲ್ಲಿಗೆ ಹೋಗೋಣ. ಇದು ಇಂದ್ರನ ಪುಣ್ಯಕರ ಪ್ರಸ್ರವಣ. ಇಲ್ಲಿ ಧಾತಾ, ವಿಧಾತಾ ಮತ್ತು ವರುಣರು ಮೇಲಿನ ಲೋಕಗಳನ್ನು ಪಡೆದರು. ಅವರು ಕ್ಷಮಾಗುಣವಂತರಾಗಿ, ಪರಮ ಧಾರ್ಮಿಕರಾಗಿ ಇಲ್ಲಿ ವಾಸಿಸುತ್ತಾರೆ. ರಾಜರ್ಷಿಗಣರು ಸೇವಿಸುವ ಯಮುನೆಯೇ ಇವಳು. ನಾನಾ ಯಜ್ಞಚಿತೆಗಳಿಂದ ಕೂಡಿದ ಇವಳು ಪುಣ್ಯೆ ಮತ್ತು ಭಯವನ್ನು ದೂರಮಾಡುವವಳು. ಅಲ್ಲಿ ರಾಜಾ ಮಹೇಷ್ವಾಸ ಸ್ವಯಂ ಮಾಂಧಾತ ಮತ್ತು ದಾನಿಗಳಲ್ಲಿ ಶ್ರೇಷ್ಠ ಸೋಮಕ ಸಹದೇವರು ಯಜ್ಞಮಾಡಿದರು.”

ಯುಧಿಷ್ಠಿರನು ಹೇಳಿದನು: “ರಾಜಶಾರ್ದೂಲ ಮಾಂಧಾತನು ಮೂರು ಲೋಕಗಳಲ್ಲಿಯೂ ವಿಶ್ರುತನಾಗಿದ್ದನು. ಮಹಾಬ್ರಾಹ್ಮಣ! ಆ ನೃಪೋತ್ತಮ ಯೌವನಾಶ್ವನು ಹೇಗೆ ಹುಟ್ಟಿದ? ಮತ್ತು ಆ ಅಮಿತದ್ಯುತಿಯು ತನ್ನ ಪರಾಕಾಷ್ಟೆಯನ್ನು ಹೇಗೆ ತಲುಪಿದನು? ಮೂರು ಲೋಕಗಳೂ ವಿಷ್ಣುವಿನಲ್ಲಿರುವಂತೆ ಆ ಮಹಾತ್ಮನ ವಶದಲ್ಲಿದ್ದವು. ಆ ಧೀಮಂತನ ಚರಿತ್ರೆಯನ್ನು ಕೇಳಲು ಬಯಸುತ್ತೇನೆ. ಆ ಶಕ್ರಸಮದ್ಯುತಿ, ಅಪ್ರತಿಮವೀರನು ಹುಟ್ಟಿದಾಗ ಮಾಂಧಾತ ಎನ್ನುವ ಹೆಸರನ್ನು ಹೇಗೆ ಪಡೆದನು? ನೀನು ಹೇಳುವುದರಲ್ಲಿ ಕುಶಲನಾಗಿದ್ದೀಯೆ!”

ಲೋಮಶನು ಹೇಳಿದನು: “ಆ ರಾಜ ಮಹಾತ್ಮನನ್ನು ಲೋಕವು ಮಾಂಧಾತ ಎನ್ನುವ ಹೆಸರಿನಿಂದ ಏಕೆ ಕರೆಯುತ್ತದೆ ಎನ್ನುವುದನ್ನು ಗಮನವಿಟ್ಟು ಕೇಳು ರಾಜನ್! ಇದೇ ಸ್ಥಳದಲ್ಲಿ ಆ ಆದಿತ್ಯವರ್ಚಸನು ದೇವಯಜ್ಞಗಳನ್ನು ಮಾಡಿದನು. ಕುರುಕ್ಷೇತ್ರದ ಮಧ್ಯದಲ್ಲಿರುವ ಈ ಪುಣ್ಯತಮ ಪ್ರದೇಶವನ್ನು ನೋಡು!” ಆಗ ಲೋಮಶನು ಯುಧಿಷ್ಠಿರನಿಗೆ ಮಾಂಧಾತನ ಚರಿತ್ರೆಯನ್ನು ಹೇಳಿದನು.

ಯುಧಿಷ್ಠಿರನು ಹೇಳಿದನು: “ಮಾತುಗಾರರಲ್ಲಿ ಶ್ರೇಷ್ಠನೇ! ರಾಜಾ ಸೋಮಕನು ಎಂಥಹ ವೀರ್ಯವಂತನಾಗಿದ್ದನು? ಅವನ ಕರ್ಮಗಳ ಮತ್ತು ಪ್ರಭಾವದ ಕುರಿತು ನಿನ್ನಿಂದ ಕೇಳ ಬಯಸುತ್ತೇನೆ.” ಅದಕ್ಕೆ ಉತ್ತರವಾಗಿ ಲೋಮಶನು ಯುಧಿಷ್ಠಿರನಿಗೆ ಸೋಮಕನ ಕಥೆಯನ್ನು ಹೇಳಿ, “ನಮಗೆ ತೋರುತ್ತಿರುವ ಇದೇ ಅವನ ಪುಣ್ಯಾಶ್ರಮ. ಇಲ್ಲಿ ಆರು ರಾತ್ರಿಗಳನ್ನು ಕಳೆದವನು ಒಳ್ಳೆಯ ಗತಿಯನ್ನು ಹೊಂದುತ್ತಾನೆ. ಇಲ್ಲಿ ನಾವೂ ಕೂಡ ಚಿಂತೆಯಿಲ್ಲದೇ ನಿಯತಾತ್ಮರಾಗಿ ಆರು ರಾತ್ರಿಗಳನ್ನು ಕಳೆಯೋಣ! ಅಣಿಯಾಗು!” ಎಂದನು.

ಲೋಮಶನು ಮುಂದುವರೆದು ಹೇಳಿದನು: “ರಾಜನ್! ಇಲ್ಲಿಯೇ ಸ್ವಯಂ ಪ್ರಜಾಪತಿಯು - ಸಹಸ್ರವರ್ಷಗಳ ಪುರಾತನ ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು - ಯಾಜಿಸಿದನು. ಅಂಬರೀಷ ನಾಭಾಗನು ಯಮುನಾತೀರದಲ್ಲಿ ಇಷ್ಟಿಯನ್ನು ನೆರವೇರಿಸಿದನು. ಯಜ್ಞ ಮತ್ತು ತಪಸ್ಸಿನ ಮೂಲಕ ಅವನು ಪರಮ ಸಿದ್ಧಿಯನ್ನು ಹೊಂದಿದನು. ಇದೇ ಪುಣ್ಯತಮ ಪ್ರದೇಶದಲ್ಲಿ ನಾಹುಷ ಯಯಾತಿಯು ಹತ್ತು ಪದ್ಮಗಳಷ್ಟನ್ನು ಸದಸ್ಯರಿಗೆ ಕೊಟ್ಟು ಯಜ್ಞಮಾಡಿದನು. ಇದನ್ನು ನೋಡು! ಅಮಿತೌಜಸ ಯಯಾತಿಯು ಇಲ್ಲಿ ಯಜ್ಞಮಾಡಿ ಶಕ್ರನೊಡನೆ ಸ್ಪರ್ಧಿಸಿ ಸಾರ್ವಭೌಮತ್ವವನ್ನು ಪಡೆದನು. ನೋಡು! ಯಯಾತಿಯ ಯಜ್ಞಕರ್ಮಗಳಿಂದ ನಾನಾವಿಧದ ಅಗ್ನಿವೇದಿಗಳ ರಾಶಿಗಳ ಭಾರದಿಂದ ಭೂಮಿಯು ಸೋತು ತಗ್ಗಾದಂತೆ ಕಾಣುತ್ತದೆ. ಇದು ಒಂದೇ ಎಲೆಯ ಶಮೀ ವೃಕ್ಷ, ಇದು ಉತ್ತಮ ಚೈತ್ಯ. ಇಲ್ಲಿಯೇ ರಾಮಸರೋವರನ್ನು ನೋಡು ಮತ್ತು ನಾರಾಯಣಾಶ್ರಮವನ್ನೂ ನೋಡು. ಇಲ್ಲಿ ಅಮಿತೌಜಸ ಆರ್ಚೀಕನ ಮಗನು ರೌಪ್ಯನದಿಯಲ್ಲಿ ತನ್ನ ಯೋಗದಿಂದ ಭೂಮಿಯನ್ನು ಸಂಚರಿಸಿದನು. ಉಲೂಖಲ ಆಭರಣಗಳನ್ನು ಧರಿಸಿದ ಪಿಶಾಚಿಗಳು ಹೇಳಿದ ನಾನು ಈ ಅನುವಂಶವನ್ನು ಓದುತ್ತೇನೆ. ಕೇಳು. ಯುಗಂಧರದಲ್ಲಿ ಮೊಸರನ್ನು ತಿಂದು ಅಚ್ಯುತಸ್ಥಲದಲ್ಲಿ ಒಂದು ರಾತ್ರಿಯನ್ನು ಉಳಿದು ನಂತರ ಭೂಮಿಲಯದಲ್ಲಿ ಸ್ನಾನಮಾಡಿ ಪುತ್ರನೊಂದಿಗೆ ಇಲ್ಲಿ ವಾಸಿಸಲು ಬಯಸುತ್ತೀಯೆ. ಒಂದು ರಾತ್ರಿ ಇಲ್ಲಿ ಉಳಿದು ಎರಡನೇ ದಿನವೂ ಇಲ್ಲಿಯೇ ಉಳಿದರೆ ಹಗಲು ಮಾಡಿದುದೂ ರಾತ್ರಿ ಮಾಡಿದುದೂ ಬದಲಾಗುವವು. ಇಂದು ಇಲ್ಲಿಯೇ ಉಳಿಯೋಣ. ಇದು ಕುರುಕ್ಷೇತ್ರದ ದ್ವಾರವೆಂದು ತಿಳಿ. ಇಲ್ಲಿಯೇ ರಾಜಾ ನಾಹುಷ ಯಯಾತಿಯು ಬಹುರತ್ನಗಳಿಂದ ದೇವೇಂದ್ರನು ಸಂತೋಷಗೊಂಡ ಕ್ರತುವನ್ನು ನೆರವೇರಿಸಿದನು. ಈ ಯಮುನಾ ತೀರ್ಥವನ್ನು ಪ್ಲಕ್ಷಾವತರಣ ಎಂದು ಕರೆಯುತ್ತಾರೆ. ಇದೇ ನಾಕಪೃಷ್ಟದ ದ್ವಾರವೆಂದು ತಿಳಿದವರು ಹೇಳುತ್ತಾರೆ. ಅಲ್ಲಿ ಸಾರಸ್ವತ ಯಜ್ಞವನ್ನು ಮುಗಿಸಿ ಪರಮ ಋಷಿಗಳು ಯೂಪ ಉಲೂಖಗಳನ್ನು ಹಿಡಿದು ಅವಭೃತಸ್ನಾನಕ್ಕೆ ಹೋದರು. ಇಲ್ಲಿಯೇ ರಾಜಾ ಭರತನು ಕೃಷ್ಣಸಾರಂಗವನ್ನು ಹೊದಿಸಿ ಅಶ್ವಮೇಧದ ಕುದುರೆಯನ್ನು ಬಿಟ್ಟು ಧರ್ಮದಿಂದ ಭೂಮಿಯನ್ನು ಪಡೆದನು. ಇಲ್ಲಿಯೇ ಮರುತ್ತನು ಉತ್ತಮ ಸತ್ರವನ್ನು ದೇವರ್ಷಿಗಳ ಮುಖದಿಂದ ಸಂವರ್ತನನ ರಕ್ಷಣೆಯಲ್ಲಿ ನೆರವೇರಿಸಿದನು. ಇಲ್ಲಿ ಸ್ನಾನಮಾಡು! ಸರ್ವಲೋಕಗಳನ್ನೂ ನೋಡುತ್ತೀಯೆ ಮತ್ತು ಎಲ್ಲ ದುಷ್ಕೃತಗಳಿಂದಲೂ ಶುದ್ಧನಾಗುತ್ತೀಯೆ.”

ಅಲ್ಲಿ ತಮ್ಮಂದಿರೊಡನೆ ಸ್ನಾನಮಾಡಿ, ಮಹರ್ಷಿಗಳು ಹೊಗಳುತ್ತಿರಲು ಪಾಂಡವಶ್ರೇಷ್ಠನು ಲೋಮಶನಿಗೆ ಈ ಮಾತುಗಳನ್ನಾಡಿದನು: “ಸತ್ಯವಿಕ್ರಮ! ತಪಸ್ಸಿನಿಂದ ಸರ್ವ ಲೋಕಗಳನ್ನು ಕಂಡೆ. ಇಲ್ಲಿ ನಿಂತಿರುವಾಗ ಶ್ವೇತವಾಹನ ಪಾಂಡವಶ್ರೇಷ್ಠನನ್ನು ಕಾಣುತ್ತಿದ್ದೇನೆ.”

ಲೋಮಶನು ಹೇಳಿದನು: “ಮಹಾಬಾಹೋ! ಪರಮಋಷಿಗಳೂ ಅದನ್ನೇ ನೋಡುತ್ತಾರೆ. ಸುತ್ತುವರೆದಿರುವವರ ಏಕೈಕ ಶರಣೆಯಾದ ಈ ಪುಣ್ಯ ಸರಸ್ವತಿಯನ್ನು ನೋಡು. ಇಲ್ಲಿ ಸ್ನಾನಮಾಡಿದರೆ ಪಾಪಗಳೆಲ್ಲವೂ ತೊಳೆಯಲ್ಪಡುತ್ತದೆ. ಇಲ್ಲಿ ಇಷ್ಟವಂತ ಸುರರ್ಷಿಗಳು, ಋಷಿಗಳೂ, ಮತ್ತು ರಾಜರ್ಷಿಗಳೂ ಕೂಡ ಸಾರಸ್ವತ ಯಜ್ಞವನ್ನು ನಡೆಸಿದರು. ಇದು ಐದು ಯೋಜನೆ ಪರಿಧಿಯಿರುವ ಪ್ರಜಾಪತಿಯ ವೇದಿ. ಇದು ಯಜ್ಞಶೀಲ ಮಹಾತ್ಮ ಕುರುವಿನ ಕ್ಷೇತ್ರ. ಇಲ್ಲಿ ತಪಸ್ಸನ್ನು ತಪಿಸಿ ಮನುಷ್ಯರು ಸ್ವರ್ಗಕ್ಕೆ ಹೋಗುತ್ತಾರೆ. ಸಾವನ್ನು ಬಯಸಿದ ನರರು ಸಹಸ್ರಾರು ಸಂಖ್ಯೆಗಳಲ್ಲಿ ಇಲ್ಲಿಗೆ ಬರುತ್ತಾರೆ. ಹಿಂದೆ ದಕ್ಷನು ಇಲ್ಲಿ ಯಜ್ಞಮಾಡಿದಾಗ ಈ ಆಶೀರ್ವಾದವನ್ನು ನುಡಿದನು: “ಇಲ್ಲಿ ಯಾವ ನರರು ಸಾಯುತ್ತಾರೋ ಅವರು ಸ್ವರ್ಗವನ್ನು ಗೆಲ್ಲುತ್ತಾರೆ!” ಇದು ಪುಣ್ಯೆ, ದಿವ್ಯೆ, ಅಘವತೀ ಸರಸ್ವತೀ ನದಿಯು. ಇದು ಸರಸ್ವತಿಯು ಅದೃಶ್ಯಳಾಗುವ ಸ್ಥಳ. ಇದು ನಿಷಾದರಾಷ್ಟ್ರದ ದ್ವಾರ. ಅವರ ಮೇಲಿನ ದ್ವೇಷದಿಂದ, ನಿಷಾದರು ಅವಳನ್ನು ತಿಳಿಯಬಾರದು ಎಂದು ಸರಸ್ವತಿಯು ಭೂಮಿಯನ್ನು ಹೊಕ್ಕಳು. ಇದು ಚಮಸ ಚಿಲುಮೆ. ಇಲ್ಲಿ ಸರಸ್ವತಿಯನ್ನು ಕಾಣಬಹುದು. ಇಲ್ಲಿಯೇ ಸಮುದ್ರವನ್ನು ಸೇರುವ ದಿವ್ಯ ಪುಣ್ಯ ನದಿಗಳು ಅವಳನ್ನು ಸೇರುತ್ತವೆ. ಇದು ಸಿಂಧು ಮಹಾತೀರ್ಥ. ಇಲ್ಲಿಯೇ ಅಗಸ್ತ್ಯನು ಲೋಪಾಮುದ್ರೆಯನ್ನು ಭೇಟಿಯಾದನು ಮತ್ತು ಅವಳು ಅವನನ್ನು ಪತಿಯನ್ನಾಗಿ ವರಿಸಿದಳು. ಇದು ಇಂದ್ರನಿಗೆ ಪ್ರಿಯವಾದ, ಪುಣ್ಯವೂ ಪವಿತ್ರವೂ, ಪಾಪನಾಶನವೂ ಆದ ಪ್ರಕಾಶಿಸುತ್ತಿರುವ ಪ್ರಭಾಸ ತೀರ್ಥ. ಇಲ್ಲಿ ವಿಷ್ಣುಪಾದ ಎಂಬ ಹೆಸರಿನ ಉತ್ತಮ ತೀರ್ಥವು ಕಾಣುತ್ತದೆ. ಇದು ಪರಮಪಾವನೀ ರಮ್ಯ ವಿಪಾಷಾ ನದೀ. ಇಲ್ಲಿಯೇ ಭಗವಾನ್ ಋಷಿ ವಸಿಷ್ಠನು ಪುತ್ರಶೋಕದಿಂದ ತನ್ನನ್ನು ತಾನೇ ಕಟ್ಟಿಕೊಂಡು ಬಿದ್ದಾಗ, ಏನೂ ಗಾಯನೋವುಗಳಾಗದೇ ಪುನಃ ಮೇಲೆದ್ದಿದ್ದನು. ಇದು ಸರ್ವಪುಣ್ಯಕಾರಕವಾದ ಕಾಶ್ಮೀರಮಂಡಲ. ಋಷಿಗಳು ವಾಸವಾಗಿರುವ ಈ ಪ್ರದೇಶವನ್ನು ತಮ್ಮಂದಿರೊಡನೆ ನೋಡು. ಇಲ್ಲಿಯೇ ಉತ್ತರದ ಋಷಿಗಳೆಲ್ಲರೂ, ನಾಹುಷ ಯಯಾತಿ, ಅಗ್ನಿ ಮತ್ತು ಕಾಶ್ಯಪರು ಸಂವಾದವನ್ನು ನಡೆಸಿದ್ದರು. ಇಲ್ಲಿ ಕಾಣಿಸುವುದು ಮಾನಸ ಸರೋವರದ ದ್ವಾರ. ಮಳೆನೀರಿನಿಂದ ತುಂಬಿದ ಇದನ್ನು ಗಿರಿಗಳ ಮಧ್ಯದಲ್ಲಿ ಶ್ರೀಮತ ರಾಮನು ರಚಿಸಿದನು. ಇದು ವಿದೇಹದ ಉತ್ತರದಲ್ಲಿರುವ ಸತ್ಯವಿಕ್ರಮಕ್ಕೆ ಪ್ರಖ್ಯಾತವಾದ ವಾತಿಕಷಂಡ. ಇದರ ದ್ವಾರವನ್ನೂ ಯಾರೂ ಉಲ್ಲಂಘಿಸಿಲ್ಲ. ಇದು ಉಜ್ಜಾನಕ ಎಂಬ ಹೆಸರಿನ ಮಾರುಕಟ್ಟೆ. ಇಲ್ಲಿಯೇ ಭಗವಾನೃಷಿ ವಸಿಷ್ಠನು ಅರುಂಧತಿಯೊಡನೆ ಸುಖವಾಗಿದ್ದನು. ಇದು ಪದ್ಮದಷ್ಟು ಕುಶಗಳ ಹಾಸಿಗೆಯಿರುವ ಕುಶವನ ಸರೋವರ. ಇಲ್ಲಿಯೇ ಕೋಪದಿಂದ ಶಾಂತಗೊಂಡ ರುಕ್ಮಿಯ ಆಶ್ರಮವೂ ಇದೆ. ಸಮಾಧಿಗಳ ಸಂಕುಲದ ಕುರಿತು ನೀನು ಕೇಳಿದ್ದೀಯೆ. ನೀನು ಭೃಗುತುಂಗ ಮಹಾಗಿರಿಯನ್ನು, ಯಮುನಾ ನದಿಯ ಜೊತೆ ಹರಿಯುವ ಜಲ ಮತ್ತು ಉಪಜಲ ನದಿಗಳನ್ನು ನೋಡುತ್ತೀಯೆ. ಅಲ್ಲಿ ಉಶೀನರನು ಯಾಗಮಾಡಿ ಇಂದ್ರನಿಂದ ಪುರಸ್ಕೃತಗೊಂಡಿದ್ದನು.” ಹೀಗೆ ಹೇಳಿ ಲೋಮಶನು ಇಂದ್ರ-ಅಗ್ನಿಯರು ಗಿಡುಗ-ಪಾರಿವಾಳಗಳಾಗಿ ಬಂದು ಉಶೀನರನನ್ನು ಪರೀಕ್ಷಿಸಿದ ಕಥೆಯನ್ನು ಹೇಳಿದನು.

ಅನಂತರ ಲೋಮಶನು ಹೇಳಿದನು: “ನರೇಂದ್ರ! ಮಂತ್ರವಿದು ಬುದ್ಧಿವಂತ ಔದ್ಧಾಲಕಿ ಶ್ವೇತಕೇತು ಎಂದು ಹೇಳುತ್ತಾರಲ್ಲ ಅವನ ಪುಣ್ಯ ಆಶ್ರಮವನ್ನು ನೋಡು. ಭೂಮಿಯಲ್ಲಿ ಬೆಳೆದ ವೃಕ್ಷಗಳು ಸದಾ ಹಣ್ಣುಗಳಿಂದ ತುಂಬಿವೆ. ಇಲ್ಲಿ ಶ್ವೇತಕೇತುವು ಮನುಷ್ಯದೇಹರೂಪಿಣಿ ಸಾಕ್ಷಾತ್ ಸರಸ್ವತಿಯನ್ನು ನೋಡಿದನು. ಅಲ್ಲಿದ್ದ ಸರಸ್ವತಿಯಲ್ಲಿ ಶ್ವೇತಕೇತುವು ವಾಣಿಯು ನನಗೆ ತಿಳಿಯುವಂತಾಗಲಿ ಎಂದು ಕೇಳಿಕೊಂಡನು. ಆ ಕಾಲದಲ್ಲಿ ಇವರಿಬ್ಬರು ಬ್ರಹ್ಮವಿದರಲ್ಲಿ ವರಿಷ್ಠರಾಗಿದ್ದರು - ಮಾವ ಅಳಿಯರಾದ ಕಹೋಡನ ಮಗ ಅಷ್ಟಾವಕ್ರ ಮತ್ತು ಉದ್ದಾಲಕನ ಮಗ ಶ್ವೇತಕೇತು. ಅವರಿಬ್ಬರು ಮಾವ-ಅಳಿಯರಾದ ವಿಪ್ರರು ಮಹೀಪತಿ ವಿದೇಹರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ಅಪ್ರಮೇಯನಾದ ಬಂದಿಯನ್ನು ವಿವಾದದಲ್ಲಿ ಸೋಲಿಸಿದರು.”

ಯುಧಿಷ್ಠಿರನು ಹೇಳಿದನು: “ಲೋಮಶ! ಬಂದಿಯನ್ನು ಸೋಲಿಸಿದ ಆ ವಿಪ್ರನ ಪ್ರಭಾವವೇನಿತ್ತು? ಗುಣಗಳೇನಿದ್ದವು? ಅವನಿಗೆ ಅಷ್ಟಾವಕ್ರನೆಂಬ ಹೆಸರು ಏಕೆ ಬಂದಿತು? ಅವೆಲ್ಲವನ್ನು ನನಗೆ ಹೇಳು.” ಆಗ ಲೋಮಶನು ಯುಧಿಷ್ಠಿರನಿಗೆ ಅಷ್ಟಾವಕ್ರನ ಚರಿತ್ರೆಯನ್ನು ಹೇಳಿ, “ಇಲ್ಲಿ ನಿನ್ನ ತಮ್ಮಂದಿರೊಡನೆ ಮತ್ತು ವಿಪ್ರರೊಡನೆ ಸುಖವಾಗಿ ನೀನು ವಾಸಿಸು. ಅಜಮೀಢ! ಅನಂತರ ನನ್ನೊಡನೆ ಶುಚಿಕರ್ಮಗಳು ಮತ್ತು ಭಕ್ತಿಯೊಂದಿಗೆ ಪುಣ್ಯಕ್ಷೇತ್ರಗಳಿಗೆ ಪ್ರಯಾಣಮಾಡುವೆ.” ಎಂದನು.

ಲೋಮಶನು ಹೇಳಿದನು: “ರಾಜನ್! ಇಲ್ಲಿ ಕಾಣುತ್ತಿರುವುದು ಮಧುವಿಲ ಸಂಗಮ. ಇದು ಕರ್ದಮಿಲ ಎಂಬ ಹೆಸರಿನ ಸ್ನಾನಘಟ್ಟ. ವೃತ್ರನನ್ನು ಸಂಹರಿಸಿದ ಶಚೀಪತಿಯು ಅಲಕ್ಷ್ಮಿಯನ್ನು ಪಡೆದಾಗ ಈ ಸಂಗಮದಲ್ಲಿ ಸ್ನಾನಮಾಡಿ ಸರ್ವ ಪಾಪಗಳಿಂದ ಬಿಡುಗಡೆ ಹೊಂದಿದನು. ಇಲ್ಲಿಯೇ ಮೈನಾಕ ಪರ್ವತವು ಭೂಮಿಯ ಕುಕ್ಷದಲ್ಲಿ ಮರೆಯಾಯಿತು ಮತ್ತು ಅದಿತಿಯು ಮಕ್ಕಳನ್ನು ಪಡೆಯಲು ಹಿಂದೆ ಇಲ್ಲಿ ಅಡುಗೆ ಮಾಡಿದಳು. ಈ ಪರ್ವತರಾಜನನ್ನು ಏರಿ ಕೂಡಲೇ ಅಯಶಸ್ಕರ, ಅವಾಚನೀಯ ಅಲಕ್ಷ್ಮಿಯನ್ನು ದೂರವಿಡಬಹುದು. ಇವುಗಳು ಋಷಿಗಳಿಗೆ ಪ್ರಿಯವಾದ ಕನಖಲ ಪರ್ವತಗಳು. ಇಲ್ಲಿ ಮಹಾನದಿ ಗಂಗೆಯು ಕಾಣುತ್ತಾಳೆ. ಇಲ್ಲಿ ಭಗವಾನ್ ಸನತ್ಕುಮಾರನು ಪರಮ ಸಿದ್ಧಿಯನ್ನು ಹೊಂದಿದನು. ಇಲ್ಲಿ ಸ್ನಾನಮಾಡುವುದರಿಂದ ನೀನು ಸರ್ವಪಾಪಗಳಿಂದ ಮುಕ್ತನಾಗುತ್ತೀಯೆ. ಪುಣ್ಯಾ ಎನ್ನುವ ಈ ನೀರಿನ ಸರೋವರ, ಭೃಗುತುಂಗ ಪರ್ವತ ಮತ್ತು ಗಂಗೆಯ ನೀರನ್ನು ಅಮಾತ್ಯರೊಂದಿಗೆ ಮುಟ್ಟು. ಅಲ್ಲಿ ಕಾಣಿಸುವುದು ಸ್ಥೂಲಶಿರಸುವಿನ ರಮಣೀಯ ಆಶ್ರಮ. ಇಲ್ಲಿ ಅಹಂಕಾರ ಮತ್ತು ಸಿಟ್ಟನ್ನು ಬಿಟ್ಟುಬಿಡು. ಇಲ್ಲಿ ಕಾಣಿಸುವುದು ಶ್ರೀಮಾನ್ ರೈಭ್ಯನ ಆಶ್ರಮ. ಇಲ್ಲಿ ಭಾರದ್ವಾಜ ಕವಿ ಯವಕ್ರೀತನು ನಾಶಹೊಂದಿದನು.”

ಯುಧಿಷ್ಠಿರನು ಹೇಳಿದನು: “ಪ್ರತಾಪವಾನ್ ಋಷಿ ಭರದ್ವಾಜನು ಯಾವ ಗುಣಗಳನ್ನು ಹೊಂದಿದ್ದನು ಮತ್ತು ಋಷಿಪುತ್ರ ಯವಕ್ರೀತನು ಯಾವ ಕಾರಣಕ್ಕಾಗಿ ನಾಶಹೊಂದಿದನು? ಲೋಮಶ! ಇವೆಲ್ಲವನ್ನೂ ನಡೆದಂತೆ ಕೇಳ ಬಯಸುತ್ತೇನೆ. ದೇವತೆಗಳಂತಿರುವವರ ಕರ್ಮಗಳ ಕೀರ್ತನೆಯನ್ನು ಕೇಳಲು ನನಗೆ ಸಂತೋಷವಾಗುತ್ತದೆ.” ಆಗ ಲೋಮಶನು ಯುಧಿಷ್ಠಿರನಿಗೆ ರೈಭ್ಯ-ಯವಕ್ರೀತರ ಕಥೆಯನ್ನು ಹೇಳಿದನು.

ಲೋಮಶನು ಹೇಳಿದನು: “ಭಾರತ! ಈಗ ನೀನು ಉಶೀರಬೀಜ, ಮೈನಾಕ ಮತ್ತು ಶ್ವೇತ ಗಿರಿಗಳನ್ನು ಹಾಗೂ ಕಾಲಶೈಲವನ್ನೂ ದಾಟಿದ್ದೀಯೆ. ಇಲ್ಲಿ ಗಂಗೆಯು ಏಳು ಪ್ರವಾಹಗಳಾಗಿ ರಾಜಿಸುತ್ತಾಳೆ. ಇದು ರಮ್ಯ ಮತ್ತು ಶುದ್ಧವಾದ ಸ್ಥಳ. ಇಲ್ಲಿ ಅಗ್ನಿಯು ಸದಾ ಉರಿಯುತ್ತಿರುತ್ತದೆ. ಈಗ ಇದನ್ನು ಮನುಷ್ಯರು ನೋಡಲು ಶಕ್ಯರಿಲ್ಲ. ಆದರೆ ಸಮಾಧಿಸ್ಥಿತಿಯಲ್ಲಿದ್ದು ಯಾವುದೇ ವಿಚಲತೆಯಿಲ್ಲದೇ ಇದ್ದರೆ ಈ ತೀರ್ಥಪ್ರದೇಶಗಳನ್ನು ನೋಡಬಹುದು. ಈಗ ನಾವು ಶ್ವೇತಗಿರಿಯನ್ನೂ ಮತ್ತು ಮಂದರ ಪರ್ವತವನ್ನೂ ಪ್ರವೇಶಿಸೋಣ. ಅಲ್ಲಿ ಯಕ್ಷ ಮಣಿಚರನೂ ಯಕ್ಷರಾಜ ಕುಬೇರನೂ ವಾಸಿಸುತ್ತಾರೆ. ಅನೇಕ ರೂಪಗಳನ್ನು ಧರಿಸಿದ, ನಾನಾ ಆಯುಧಗಳನ್ನು ಹಿಡಿದ ಎಂಭತ್ತೆಂಟು ಸಾವಿರ ಶೀಘ್ರಚಾರಿ ಗಂಧರ್ವರು, ಅವರಿಗೂ ನಾಲ್ಕು ಪಟ್ಟು ಕಿಂಪುರುಷರು ಮತ್ತು ಯಕ್ಷರು ಯಕ್ಷೇಂದ್ರ ಮಣಿಭದ್ರನನ್ನು ಉಪಾಸಿಸುತ್ತಾರೆ. ಅವರ ಸಂಪತ್ತು ಅಪಾರ ಮತ್ತು ಗತಿಯು ವಾಯು ಸಮ. ಅವರು ದೇವರಾಜನನ್ನೂ ಕೂಡ ಅವನ ಸ್ಥಾನದಿಂದ ನೂಕಬಲ್ಲರು ಎನ್ನುವುದು ಸತ್ಯ. ಈ ಬಲಶಾಲಿಗಳ ಕಣ್ಣುಗಾವಲಿರುವ ಮತ್ತು ಯಾತುಧಾನರಿಂದ ರಕ್ಷಿತವಾದ ಈ ಪರ್ವತಗಳು ದುರ್ಗಮ. ಆದುದರಿಂದ ಪರಮ ಸಮಾಧಿಯಲ್ಲಿರಬೇಕು. ಕುಬೇರನ ಇನ್ನೂ ಇತರ ರೌದ್ರ ಸಚಿವರು ಮತ್ತು ರಾಕ್ಷಸ ಮಿತ್ರರಿದ್ದಾರೆ. ಅವರನ್ನೂ ಕೂಡ ನಾವು ಎದುರಿಸಬಹುದು. ಆದುದರಿಂದ ವಿಕ್ರಮದಿಂದ ಪ್ರಯಾಣಿಸಬೇಕಾಗುತ್ತದೆ. ಕೈಲಾಸ ಪರ್ವತವು ಆರುನೂರು ಯೋಜನೆಗಳ ಆಯತವನ್ನು ಹೊಂದಿದೆ. ಆ ವಿಶಾಲಪ್ರದೇಶದಲ್ಲಿ ದೇವತೆಗಳು ಸಭೆಸೇರುತ್ತಾರೆ. ಅಲ್ಲಿ ಅಸಂಖ್ಯೆಯಲ್ಲಿ ಯಕ್ಷ, ರಾಕ್ಷಸ, ಕಿನ್ನರ, ನಾಗ, ಪಕ್ಷಿ, ಗಂಧರ್ವರು ಕುಬೇರನ ಸನ್ನಿಧಿಯಲ್ಲಿದ್ದಾರೆ. ಇಂದು ತಪಸ್ಸು, ದಮ, ಭೀಮಸೇನನ ಬಲ ಮತ್ತು ನನ್ನ ರಕ್ಷಣೆಯಿಂದ ಅವರ ಮಲೆ ಎರಗು. ರಾಜಾ ವರುಣ, ಸಮಿತಿಂಜಯ ಯಮ, ಗಂಗೆ, ಯಮುನೆ ಮತ್ತು ಪರ್ವತವು ನಿನಗೆ ಮಂಗಳವನ್ನು ನೀಡಲಿ. ದೇವಿ ಗಂಗೇ! ಇಂದ್ರನ ಬಂಗಾರದ ಪರ್ವತದ ತುದಿಯಲ್ಲಿ ನಿನ್ನ ಪ್ರವಾಹಘೋಷದ ಧ್ವನಿಯನ್ನು ಕೇಳುತ್ತೇನೆ. ಎಲ್ಲ ಅಜಮೀಡರೂ ಗೌರವಿಸುವ ಈ ನರೇಂದ್ರನನ್ನು ಈ ಗಿರಿಗಳಿಂದ ರಕ್ಷಿಸು. ಈ ಪರ್ವತಗಳನ್ನು ಪ್ರವೇಶಿಸಲು ಸಿದ್ಧನಾಗಿರುವ ಇವನ ರಕ್ಷಕೆಯಾಗಿರು ಓ ಶೈಲಸುತೆಯೇ!”

ಯುಧಿಷ್ಠಿರನು ಹೇಳಿದನು: “ಲೋಮಶನ ಈ ಉದ್ವೇಗವು ಹೊಸತು! ನೀವೆಲ್ಲರೂ ಕೃಷ್ಣೆಯನ್ನು ರಕ್ಷಿಸಿರಿ ಮತ್ತು ಪ್ರಮಾದಕ್ಕೊಳಗಾಗದಿರಿ! ಈ ಪ್ರದೇಶವು ಬಹಳ ಕಷ್ಟಕರವಾದುದು ಎಂದು ಅವನ ಮತ. ಆದುದರಿಂದ ಪರಮ ಶುಚಿಯನ್ನು ಆಚರಿಸಿ!”

ಅನಂತರ ಅವನು ಉದಾರವೀರ್ಯ ಭೀಮನಿಗೆ ಹೇಳಿದನು: “ಭೀಮಸೇನ! ಕೃಷ್ಣೆಯನ್ನು ಚೆನ್ನಾಗಿ ನೋಡಿಕೋ! ಅರ್ಜುನನು ಹತ್ತಿರದಲ್ಲಿ ಇಲ್ಲದೇ ಇರುವಾಗ ನೀನೇ ಕೃಷ್ಣೆಯನ್ನು ಕಷ್ಟದಲ್ಲಿರುವಾಗ ನೋಡಿಕೊಳ್ಳುತ್ತೀಯೆ.” ಅನಂತರ ಮಹಾತ್ಮ ನಕುಲ ಸಹದೇವರ ಬಳಿಬಂದು ಅವರ ನೆತ್ತಿಗಳನ್ನು ಮೂಸಿ, ತೋಳುಗಳನ್ನು ಮುಟ್ಟಿ, ಕಣ್ಣೀರು ತುಂಬಿದ ಧ್ವನಿಯಲ್ಲಿ ಆ ರಾಜನು ಹೇಳಿದನು: “ಹೆದರಿಕೆಯಿಲ್ಲದೇ ಅಪ್ರಮತ್ತರಾಗಿ ಮುಂದುವರೆಯಿರಿ. ವೃಕೋದರ! ಅಂತರ್ಹಿತ ಭೂತಗಳು ಮತ್ತು ಬಲಾನ್ವಿತ ರಾಕ್ಷಸರಿದ್ದಾರೆ. ಅಗ್ನಿ ಮತ್ತು ತಪಸ್ಸಿನಿಂದ ಹೋಗಲು ಶಕ್ಯರಾಗುತ್ತೇವೆ. ಬಲವನ್ನುಪಯೋಗಿಸಿ ಹಸಿವೆ ಬಾಯಾರಿಕೆಗಳನ್ನು ನಿವಾರಿಸು. ಆದುದರಿಂದ ನಿನ್ನ ಬಲ ಮತ್ತು ದಕ್ಷತೆಯನ್ನು ಅವಲಂಬಿಸು. ಕೈಲಾಸ ಪರ್ವತದ ಕುರಿತು ಕೇಳಿದ ಋಷಿಯ ಮಾತುಗಳನ್ನು ಮನಸ್ಸಿನಲ್ಲಿಯೇ ಚರ್ಚೆಮಾಡಿ, ಕೃಷ್ಣೆಯು ಹೇಗೆ ಹೋಗುತ್ತಾಳೆ ಎನ್ನುವುದನ್ನು ಯೋಚಿಸು. ಅವಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ನೀನು ಯೋಚಿಸಿದರೆ ಸಹದೇವ ಮತ್ತು ಧೌಮ್ಯರೊಡನೆ ಅಡುಗೆಯವರನ್ನು, ಎಲ್ಲ ಸೇವಕರೂ, ಪರಿಚಾರಕರು, ರಥಗಳು, ಕುದುರೆಗಳು ಮತ್ತು ಮುಂದಿನ ಪ್ರಯಾಣದ ಕಷ್ಟಗಳನ್ನು ಸಹಿಸಲು ಅಶಕ್ತರಾದ ಇತರ ವಿಪ್ರರು ಇವರೆಲ್ಲರೊಂದಿಗೆ ಹಿಂದಿರುಗು. ನಾವು ಮೂವರು - ನಾನು, ನಕುಲ ಮತ್ತು ಪಹಾತಪಸ್ವಿ ಲೋಮಶರು - ಅಲ್ಪಾಹಾರಿಗಳಾಗಿ, ಯತವ್ರತರಾಗಿ ಮುಂದುವರೆಯುತ್ತೇವೆ. ಗಂಗಾದ್ವಾರದಲ್ಲಿ ದ್ರೌಪದಿಯನ್ನು ರಕ್ಷಿಸಿಕೊಂಡು ನಾನು ಬರುವವರೆಗೆ ವಾಸಿಸಿಕೊಂಡಿರು. ನನ್ನ ಬರವನ್ನೇ ನಿರೀಕ್ಷಿಸಿಕೊಂಡಿರು.”

ಭೀಮನು ಹೇಳಿದನು: “ಭಾರತ! ರಾಜಪುತ್ರಿಯು ಆಯಾಸಗೊಂಡವಳೂ ದುಃಖಾರ್ತಳೂ ಆಗಿದ್ದಾಳೆ. ಆದರೂ ಈ ಕಲ್ಯಾಣಿಯು ಶ್ವೇತವಾಹನ ಅರ್ಜುನನನ್ನು ನೋಡಲೋಸುಗ ಖಂಡಿತವಾಗಿಯೂ ಪ್ರಯಾಣಮಾಡುತ್ತಾಳೆ. ಅರ್ಜುನನನ್ನು ನೋಡದೇ ನಿನಗಾಗಿರುವ ದುಃಖವು ನನಗೂ, ಸಹದೇವನಿಗೂ ಮತ್ತು ಕೃಷ್ಣೆಗೂ ಇನ್ನೂ ಹೆಚ್ಚಾಗಿರುವುದು. ನಿನ್ನ ಅಭಿಪ್ರಾಯದಂತೆ ಬೇಕಾದರೆ ರಥಗಳು, ಎಲ್ಲ ಪರಿಚಾರಕರೂ, ಅಡುಗೆಯವರೂ ಮತ್ತು ಅವರ ಮೇಲ್ವಿಚಾರಕರೂ ಹಿಂದುರಿಗಲಿ. ನಾನೂ ಕೂಡ ನಿನ್ನನ್ನು ಈ ರಾಕ್ಷಸರಿಂದ ತುಂಬಿದ, ವಿಷಮ ದುರ್ಗಗಳಿಂದ ಕೂಡಿದ ಪರ್ವತದ ಮೇಲೆ ಬಿಟ್ಟುಬಿಡಲು ಇಚ್ಛಿಸುವುದಿಲ್ಲ. ಈ ಮಹಾಭಾಗೆ, ಯತವ್ರತೆ ರಾಜಪುತ್ರಿಯೂ ಕೂಡ ನೀನಿಲ್ಲದೇ ಹಿಂದಿರುಗಲು ಇಷ್ಟಪಡುವುದಿಲ್ಲ. ಹಾಗೆಯೇ ನಿನ್ನ ಸತತ ಅನುವ್ರತನಾದ ಈ ಸಹದೇವನೂ ಕೂಡ ಹಿಂದಿರುಗಲು ಬಯಸುವುದಲ್ಲ. ಅವನ ಮನಸ್ಸು ಇದೇ ಎಂದು ನನಗೆ ಗೊತ್ತು. ಅದೂ ಅಲ್ಲದೇ ನಾವೆಲ್ಲರೂ ಕೂಡ ಸವ್ಯಸಾಚಿ ಅರ್ಜುನನನ್ನು ನೋಡಲು ಲಾಲಸರಾಗಿದ್ದೇವೆ. ಆದುದರಿಂದ ನಾವೆಲ್ಲರೂ ಒಟ್ಟಿಗೇ ಪ್ರಯಾಣಮಾಡೋಣ. ಬಹಳಷ್ಟು ಕಂದರಗಳಿಂದ ಕೂಡಿದ ಈ ಪರ್ವತವನ್ನು ರಥಗಳ ಮೇಲೆ ಹೋಗಲು ಸಾಧ್ಯವಿಲ್ಲ. ಕಾಲ್ನಡುಗೆಯಲ್ಲಿಯೇ ಹೋಗೋಣ. ಚಿಂತಿಸಬೇಡ. ಪಾಂಚಾಲಿಯು ಎಲ್ಲೆಲ್ಲಿ ಹೋಗಲು ಅಶಕ್ತಳೋ ಅಲ್ಲಿ ನಾನು ಅವಳನ್ನು ಎತ್ತಿಕೊಂಡು ಹೋಗುತ್ತೇನೆ. ನನಗೆ ಹೀಗೆ ಅನ್ನಿಸುತ್ತದೆ. ಚಿಂತಿಸಬೇಡ!  ಸುಕುಮಾರ ವೀರ ಮಾದ್ರೀಪುತ್ರರಿಬ್ಬರನ್ನೂ ಕೂಡ, ಅವರಿಗೆ ಅಶಕ್ತವಾದ ಕಷ್ಟ ಪ್ರದೇಶಗಳಿಗೆ  ನಾನು ಎತ್ತಿಕೊಂಡು ಹೋಗುತ್ತೇನೆ.”

ಯುಧಿಷ್ಠಿರನು ಹೇಳಿದನು: “ಭೀಮ! ನಿನ್ನ ಈ ಮಾತುಗಳು ನಿನ್ನ ಬಲವನ್ನು ವರ್ಧಿಸುತ್ತವೆ. ದ್ರೌಪದಿಯನ್ನು ಮತ್ತು ನಕುಲ ಸಹದೇವರನ್ನು ಈ ದೂರದ ದಾರಿಯಲ್ಲಿ ಎತ್ತಿಕೊಂಡು ಹೋಗಲು ಉತ್ಸುಕನಾಗಿದ್ದೀಯೆ. ನಿನಗೆ ಮಂಗಳವಾಗಲಿ. ಬೇರೆ ಯಾರಿಗೂ ಈ ರೀತಿ ಮಾಡಲು ಸಾಧ್ಯವಿಲ್ಲ. ಕೃಷ್ಣೆಯೊಂದಿಗೆ ಈ ಸಹೋದರರೀರ್ವರನ್ನೂ ಎತ್ತಿಕೊಂಡು ಒಯ್ದರೆ ನಿನ್ನ ಬಲವೂ, ಯಶಸ್ಸೂ, ಧರ್ಮವೂ, ಕೀರ್ತಿಯೂ ಹೆಚ್ಚಾಗುತ್ತವೆ. ನಿನಗೆ ಆಯಾಸವಾಗದಿರಲಿ ಮತ್ತು ನಿನಗೆ ಸೋಲಾಗದಿರಲಿ.”

ಆಗ ಮನೋರಮೆ ಕೃಷ್ಣೆಯು ನಗುತ್ತಾ ಹೇಳಿದಳು: “ಭಾರತ! ನಾನು ನಡೆಯುತ್ತೇನೆ. ನನ್ನ ಕುರಿತು ಚಿಂತಿಸಬೇಡ.”

ಲೋಮಶನು ಹೇಳಿದನು: “ಕೌಂತೇಯ! ತಪಸ್ಸಿನಿಂದ ಗಂಧಮಾದನ ಪರ್ವತಕ್ಕೆ ಹೋಗಲು ಸಾಧ್ಯವಾಗುತ್ತದೆ. ನೀನು, ನಾನು, ನಕುಲ, ಸಹದೇವ ಮತ್ತು ಭೀಮಸೇನ ನಾವೆಲ್ಲರೂ ತಪಸ್ಸಿನಲ್ಲಿ ತೊಡಗೋಣ ಮತ್ತು ನಾವು ಶ್ವೇತವಾಹನ ಅರ್ಜುನನನ್ನು ನೋಡಬಹುದು.”

ಹೀಗೆ ಅವರು ಮಾತನಾಡಿಕೊಳ್ಳುತ್ತಿರುವಾಗ ಅವರು ಸಂತೋಷದಿಂದ ಆನೆ ಕುದುರೆಗಳಿಂದ ಕೂಡಿದ, ಕಿರಾತರು ಮತ್ತು ತಂಗಣರು ವಾಸಿಸುವ, ನೂರಾರು ಕುಣಿಂದರು ವಾಸಿಸುವ, ಅಮರರು ಇಷ್ಟಪಡುವ, ಬಹಳ ಅಶ್ಚರ್ಯಕರವಾದ ಹಿಮಾಲಯದಲ್ಲಿರುವ ಸುಬಾಹುವಿನ ಮಹಾ ದೇಶವನ್ನು ಕಂಡರು. ಕುಣಿಂದರ ರಾಜ ಸುಬಾಹುವೂ ಕೂಡ ತನ್ನ ರಾಜ್ಯದ ಗಡಿಯಲ್ಲಿ ಅವರನ್ನು ಕಂಡು ಪ್ರೀತಿಪೂರ್ವಕವಾಗಿ ಪೂಜಿಸಿ ಸ್ವಾಗತಿಸಿದನು. ಅವರು ಎಲ್ಲರೂ ಪೂಜಿಸಲ್ಪಟ್ಟು ಅಲ್ಲಿಯೇ ಸುಖದಿಂದ ಉಳಿದುಕೊಂಡರು. ಸೂರ್ಯನು ಬೆಳಕುನೀಡಿದಾಗ ಅವರು ಹಿಮಾಲಯ ಪರ್ವತದ ಕಡೆ ಹೊರಟರು. ಆ ಮಹಾರಥಿಗಳು ಇಂದ್ರಸೇನನ ನಾಯಕತ್ವದಲ್ಲಿ ಎಲ್ಲ ಸೇವಕರೂ, ಮೇಲ್ವಿಚಾರಕರೂ, ಅಡುಗೆಯವರೂ ಮತ್ತು ದ್ರೌಪದಿಯ ಪರಿಚಾರಕರೆಲ್ಲರನ್ನೂ ರಾಜ ಕುಣಿಂದಾಧಿಪತಿಗೆ ಒಪ್ಪಿಸಿದರು. ಮಹಾವೀರ ಕೌರವನಂದನರು, ದ್ರೌಪದಿಯೊಡನೆ ಪಾಂಡವರೆಲ್ಲರೂ ಆ ದೇಶದಿಂದ ಕಾಲ್ನಡುಗೆಯಲ್ಲಿ ನಿಧಾನವಾಗಿ, ಧನಂಜಯನನ್ನು ಕಾಣುವ ಸಂತೋಷದಿಂದ ಹೊರಟರು.

ಯುಧಿಷ್ಠಿರನು ಹೇಳಿದನು: “ಭೀಮಸೇನ! ನಕುಲ ಸಹದೇವರೇ! ಮತ್ತು ಪಾಂಚಾಲಿ ದ್ರೌಪದಿ! ಕೇಳಿರಿ. ವನದಲ್ಲಿ ನಡೆಯುತ್ತಿರುವ ನಮ್ಮನ್ನು ನೋಡಿಕೊಳ್ಳಿ. ಹಿಂದಿನದು ನಾಶವಾಗುವುದಿಲ್ಲ. ನಾವು ದುರ್ಬಲರೆಂದು, ನೋವಿಗೊಳಗಾದವರೆಂದೂ ಪರಸ್ಪರರಲ್ಲಿ ಹೇಳಿಕೊಳ್ಳಬಹುದು. ಆದರೂ ಧನಂಜಯನನ್ನು ನೋಡಲು ನಾವು ಅಶಕ್ಯರಾದರೂ ಈ ಪ್ರಯಾಣವನ್ನು ಮಾಡುತ್ತಿದ್ದೇವೆ. ವೀರ ಧನಂಜಯನು ನಮ್ಮ ಹತ್ತಿರ ಕಾಣುತ್ತಿಲ್ಲವೆನ್ನುವುದು ನನ್ನ ದೇಹವನ್ನು ಅಗ್ನಿಯು ಹತ್ತಿಯರಾಶಿಯನ್ನು ಸುಡುವಂತೆ ಸುಡುತ್ತಿದೆ. ಅವನನ್ನು ನೋಡುವ ತವಕ, ಅನುಜರೊಂದಿಗೆ ವನದಲ್ಲಿರುವುದು, ಯಾಜ್ಞಸೇನಿ ದ್ರೌಪದಿಯ ಮಾನಭಂಗ ಇವು ನನ್ನನ್ನು ಸುಡುತ್ತಿವೆ. ನಕುಲನ ಮೊದಲು ಹುಟ್ಟಿದ ಆ ಅಮಿತ ತೇಜಸ್ವಿ, ಅಜೇಯ, ಉಗ್ರಧನ್ವಿ ಪಾರ್ಥನನ್ನು ನೋಡದೇ ಪರಿತಪಿಸುತ್ತಿದ್ದೇನೆ. ನಿಮ್ಮ ಒಟ್ಟಿಗೇ, ಅವನನ್ನು ಕಾಣುವ ಆಸೆಯಿಂದ, ತೀರ್ಥಗಳಿಗೂ, ರಮ್ಯ ವನಗಳಿಗೂ, ಸರೋವರಗಳಿಗೂ ಹೋಗಿದ್ದೇನೆ. ವೀರ ಸತ್ಯಸಂಧ ಧನಂಜಯನನ್ನು ನೋಡದೇ ಐದು ವರ್ಷಗಳಾಯಿತು. ಬೀಭತ್ಸುವನ್ನು ನೋಡದೇ ಪರಿತಪಿಸುತ್ತಿದ್ದೇನೆ. ಆ ಶ್ಯಾಮವರ್ಣದ ಗುಡಾಕೇಶನನ್ನು, ಸಿಂಹದ ವಿಕ್ರಾಂತ ನಡುಗೆಯುಳ್ಳ ಅ ಮಹಾಬಾಹುವನ್ನು ನೋಡದೇ ನಾನು ಪರಿತಪಿಸುತ್ತಿದ್ದೇನೆ. ಆ ನರಶ್ರೇಷ್ಠ, ಅಸ್ತ್ರಗಳನ್ನು ಸಿದ್ಧಿಮಾಡಿಕೊಂಡಿರುವ ಯುದ್ಧದಲ್ಲಿ ಅಪ್ರತಿಮನಾದ, ಧನುಷ್ಮಂತನನ್ನು ನೋಡದೇ ಪರಿತಪಿಸುತ್ತೇನೆ. ಈ ಸಿಂಹಸ್ಕಂಧ ಧನಂಜಯನು ತನ್ನ ಶತ್ರುಗಳ ನಡುವೆ ಕೋಪಗೊಂಡ ಅಂತಕ ಕಾಲನಂತೆ ಮತ್ತು ಮದವೇರಿದ ಆನೆಯಂತೆ ನಡೆಯುತ್ತಾನೆ. ನಾನೇ ಹಿಂದೆ ಮಾಡಿದ ತಪ್ಪುಗಳಿಂದಾಗಿ ನಾನು ವೀರ್ಯ ಮತ್ತು ಶಕ್ತಿಯಲ್ಲಿ ಶಕ್ರನಿಗೂ ಕಡಿಮೆಯಿಲ್ಲದ, ಅವಳಿಗಳಾದ ನಕುಲ ಸಹದೇವರ ಅಣ್ಣ ಶ್ವೇತಾಶ್ವ, ಅಮಿತವಿಕ್ರಮಿ, ಅಜೇಯ, ಉಗ್ರಧನ್ವಿ, ಪಾರ್ಥ ಫಲ್ಗುನನನ್ನು ನೋಡಲಿಕ್ಕಾಗುವುದಿಲ್ಲ ಎಂದು ಮಹಾ ದುಃಖವು ನನ್ನನ್ನು ಆವರಿಸಿದೆ. ಅವನಿಗಿಂತಲೂ ಕೀಳಾಗಿರುವವನು ಅವನನ್ನು ಅಪಮಾನಿಸಿದರೂ ಅವನು ಯಾವಾಗಲೂ ಕ್ಷಮಾಶೀಲನು. ಸರಿಯಾದ ಮಾರ್ಗದಲ್ಲಿ ನಡೆಯುವವರಿಗೆ ಅವನು ಆಶ್ರಯ ಮತ್ತು ರಕ್ಷಣೆಯನ್ನು ನೀಡುವವನು. ಆದರೆ ಕೆಟ್ಟದಾಗಿ ಮಾತನಾಡುವವರಿಗೆ ಮತ್ತು ಮೋಸದಿಂದ ಕೊಲ್ಲಲು ಪ್ರಯತ್ನಿಸುವವರಿಗೆ ಅವನು ವಜ್ರಧರ ಇಂದ್ರನಿಗಿಂತಲೂ ಹೆಚ್ಚಿನ ಕಾಲವಿಷದಂತೆ. ಶತ್ರುವೂ ಶರಣುಬಂದರೆ ಆ ಪ್ರತಾಪಿ, ಅಮಿತಾತ್ಮ, ಮಹಾಬಲಿ ಬೀಭತ್ಸುವು ಅವರಿಗೆ ಕರುಣೆತೋರಿಸಿ ಅಭಯವನ್ನು ನೀಡುತ್ತಾನೆ. ಅವನು ನಮ್ಮೆಲ್ಲರ ಆಶ್ರಯ. ರಣದಲ್ಲಿ ಅರಿಗಳನ್ನು ಸದೆಬಡಿಯುವವನು ಎಲ್ಲ ರತ್ನಗಳನ್ನೂ ತಂದು ನಮ್ಮೆಲ್ಲರಿಗೆ ಸುಖವನ್ನು ನೀಡಿದವನು. ಅವನ ವೀರ್ಯದಿಂದ ಹಿಂದೆ ನಾನು ಬಹಳಷ್ಟು ಬಹುಜಾತಿಯ ದಿವ್ಯ ರತ್ನಗಳನ್ನು ಪಡೆದಿದ್ದೆ. ಅವೆಲ್ಲವೂ ಸುಯೋಧನನಿಗೆ ಪ್ರಾಪ್ತವಾಗಿವೆ. ಅವನ ಬಾಹುಬಲದಿಂದ ಹಿಂದೆ ನನ್ನಲ್ಲಿ ಎಲ್ಲೆಲ್ಲೂ ರತ್ನಗಳಿಂದ ತುಂಬಿದ ಮೂರು ಲೋಕಗಳಲ್ಲಿಯೂ ವಿಖ್ಯಾತವಾಗಿದ್ದ ಸಭೆಯಿತ್ತು. ವೀರ್ಯದಲ್ಲಿ ವಾಸುದೇವ ಕೃಷ್ಣನ ಸಮನಾದ, ಯುದ್ಧದಲ್ಲಿ ಕಾರ್ತವೀರ್ಯನ ಸಮನಾದ, ಯುದ್ಧದ ಅಜೇಯನೂ ಗೆಲ್ಲಲಸಾಧ್ಯನೂ ಆದ ಆ ಫಲ್ಗುನನನ್ನು ಕಾಣುತ್ತಿಲ್ಲವಲ್ಲ! ಆ ಶತ್ರುಹನು ಮಹಾವೀರ ಸಂಕರ್ಷಣ ಬಲರಾಮನ, ಅಪರಾಜಿತನಾದ ಭೀಮ ನಿನ್ನ, ಮತ್ತು ವಾಸುದೇವನ ನಂತರ ಹುಟ್ಟಿದನು. ಪುರಂದರ ಇಂದ್ರನೂ ಕೂಡ ಅವನ ಬಾಹುಬಲಕ್ಕೆ ಮತ್ತು ಪ್ರಭಾವಕ್ಕೆ, ವಾಯುವೇ ಅವನ ವೇಗಕ್ಕೆ, ಚಂದ್ರನೇ ಅವನ ಸೌಂದರ್ಯಕ್ಕೆ ಮತ್ತು ಸನಾತನನಾದ ಮೃತ್ಯುವೇ ಅವನ ಕ್ರೋಧಕ್ಕೆ ಸರಿಸಮರಲ್ಲ! ಆ ನರವ್ಯಾಘ್ರನನ್ನು ಕಾಣಲೋಸುಗ ನಾವೆಲ್ಲರೂ, ವಿಶಾಲ ಬದರೀ ವೃಕ್ಷವೂ ನರನಾರಾಯಣರ ಆಶ್ರಮವೂ ಇರುವ ಗಂಧಮಾದನ ಪರ್ವತವನ್ನು ಪ್ರವೇಶಿಸೋಣ. ಸದಾ ಯಕ್ಷರಿಂದೊಡಗೂಡಿದ, ರಾಕ್ಷಸರ ರಕ್ಷಣೆಯಲ್ಲಿರುವ ಕುಬೇರನ ಸುಂದರ ತಾವರೆಯ ಕೊಳವನ್ನುಳ್ಳ ನಾವು ನೋಡುತ್ತಿರುವ ಆ ಉತ್ತಮ ಗಿರಿಗೆ ಮಹಾತಪಸ್ಸಿನಲ್ಲಿ ನಿರತರಾಗಿ ಕಾಲ್ನಡುಗೆಯಲ್ಲಿಯೇ ಹೋಗೋಣ. ತಪಸ್ಸನ್ನು ತಪಿಸದೇ ಇದ್ದವನಿಂದ, ಕ್ರೂರಿಯಾದವನಿಂದ, ಆಸೆಬುರುಕನಾದವನಿಂದ, ಮತ್ತು ಶಾಂತನಾಗಿಲ್ಲದಿರುವವನಿಂದ ಆ ಪ್ರದೇಶಕ್ಕೆ ಹೋಗಲು ಶಕ್ಯವಿಲ್ಲ. ಅಲ್ಲಿಗೆ ನಾವೆಲ್ಲರೂ ಅರ್ಜುನನ ಹೆಜ್ಜೆಗುರುತುಗಳನ್ನೇ ಹಿಡಿದು ಆಯುಧಗಳೊಂದಿಗೆ ಖಡ್ಗಗಳನ್ನು ಕಟ್ಟಿಕೊಂಡು ಮಹಾವ್ರತರಾದ ಬ್ರಾಹ್ಮಣರೊಂದಿಗೆ ಹೋಗೋಣ. ನಿಯತ್ತಾಗಿ ಇಲ್ಲದಿರುವವರಿಗೆ ನೊಣ, ನುಸಿ, ಹುಲಿ, ಸಿಂಹ ಮತ್ತು ಹಾವುಗಳು ಕಾಣುತ್ತವೆ. ಆದೇ ನಿಯತರಾಗಿದ್ದವರಿಗೆ ಏನೂ ಕಾಣುವುದಿಲ್ಲ! ಆದುದರಿಂದ ನಾವು ನಿಯತಾತ್ಮರಾಗಿದ್ದುಕೊಂಡು, ಮಿತಾಹಾರಿಗಳಾಗಿದ್ದುಕೊಂಡು ಧನಂಜಯನನ್ನು ನೋಡಲು ಗಂಧಮಾದನ ಪರ್ವತವನ್ನು ಪ್ರವೇಶಿಸೋಣ.”

ಅನಂತರ ಆ ಅಮಿತೌಜಸ ಎಲ್ಲ ಧನುಷ್ಮತರಲ್ಲಿಯೂ ಶ್ರೇಷ್ಠರಾದ ಶೂರ ಧನ್ವಿಗಳು ಬಾಣ-ಭತ್ತಳಿಕೆಗಳನ್ನು ಏರಿಸಿಕೊಂಡು, ಬೆರಳು ಮತ್ತು ಕಗಳಿಗೆ ಪಟ್ಟಿಗಳನ್ನು ಕಟ್ಟಿಕೊಂಡು, ಖಡ್ಗಗಳನ್ನು ಧರಿಸಿ ಬ್ರಾಹ್ಮಣಶ್ರೇಷ್ಠರನ್ನು ಕರೆದುಕೊಂಡು ಪಾಂಚಾಲಿಯ ಸಹಿತ ಗಂಧಮಾದನ ಪರ್ವತದ ಕಡೆ ಹೊರಟರು. ಅವರು ಸರೋವರಗಳನ್ನು, ನದಿಗಳನ್ನು, ಪರ್ವತಗಳನ್ನು, ಪರ್ವತಗಳ ಮೇಲೆ ಬಹಳಷ್ಟು ನೆರಳನ್ನು ನೀಡುವ ಮತ್ತು ನಿತ್ಯವೂ ಪುಷ್ಪಫಲಗಳನ್ನು ನೀಡುವ ಮರಗಳುಳ್ಳ ವನಗಳನ್ನು, ದೇವರ್ಷಿಗಣಗಳು ಸೇವಿಸುತ್ತಿರುವ ಪ್ರದೇಶಗಳನ್ನು ಕಂಡರು. ತಮ್ಮ ಆತ್ಮಗಳಲ್ಲಿ ಆತ್ಮವನ್ನಿಟ್ಟುಕೊಂಡು ಆ ವೀರರು ಫಲಮೂಲಗಳನ್ನು ತಿಂದುಕೊಂಡು, ಎತ್ತರ ತಗ್ಗುಗಳಿರುವ ವಿಷಮ ಪ್ರದೇಶಗಳನ್ನು ಕಷ್ಟಗಳಿಂದ ಪಾರುಮಾಡಿಕೊಂಡು ಬಹಳ ವಿಧದ ಜಾತಿಗಳ ಮೃಗಗಳನ್ನು ನೋಡುತ್ತಾ ಮುಂದುವರೆದರು. ಆ ಮಹಾತ್ಮರು ಹೀಗೆ ಮುಂದುವರೆದು ಋಷಿ, ಸಿದ್ಧ, ಅಮರರಿಂದ ಕೂಡಿದ, ಗಂಧರ್ವ ಅಪ್ಸರೆಯರಿಗೆ ಪ್ರಿಯವಾದ ಕಿನ್ನರರು ಸಂಚರಿಸುತ್ತಿರುವ ಗಿರಿಯನ್ನು ಪ್ರವೇಶಿಸಿದರು.

ಆ ವೀರರು ಗಂಧಮಾದನ ಪರ್ವತವನ್ನು ಪ್ರವೇಶಿಸುತ್ತಿರುವಾಗ ಅಲ್ಲಿ ಮಳೆಯನ್ನು ಸುರಿಸುವ ಮಹಾ ಚಂಡಮಾರುತವು ಬೀಸಿತು. ಬಹಳಷ್ಟು ಧೂಳು ತರಗೆಲೆಗಳನ್ನು ಕೂಡಿದ ಮಹಾ ಚಂಡಮಾರುತವು ಭೂಮಿ ಅಂತರಿಕ್ಷಗಳನ್ನು ಮುಚ್ಚುತ್ತದೆಯೋ ಎನ್ನುವಂತೆ ಎದ್ದಿತು. ಆಕಾಶವು ಧೂಳಿನಿಂದ ಮುಚ್ಚಿಕೊಂಡಿರಲು ಏನೂ ಕಾಣುತ್ತಿರಲಿಲ್ಲ. ಅವರು ಪರಸ್ಪರರಲ್ಲಿ ಮಾತನಾಡಲೂ ಸಾಧ್ಯವಾಗಲಿಲ್ಲ. ಅವರ ಕಣ್ಣುಗಳು ಕತ್ತಲೆಯಿಂದ ಕುರುಡಾಗಿ ಒಬ್ಬರನ್ನೊಬ್ಬರು ನೋಡಲಿಕ್ಕೂ ಆಗಲಿಲ್ಲ ಮತ್ತು ಕಲ್ಲು ಧೂಳುಗಳಿಂದ ತುಂಬಿದ್ದ ಭಿರುಗಾಳಿಯ ಸೆಳೆತಕ್ಕೆ ಸಿಲುಕಿ ಎಲ್ಲರೂ ಚೆಲ್ಲಾಪಿಲ್ಲಿಯಾದರು. ಭಿರುಗಾಳಿಗೆ ಸಿಕ್ಕಿ ತುಂಡಾಗಿ ಮರಗಿಡಗಳು ಭೂಮಿಗೆ ರಭಸದಿಂದ ಬೀಳುತ್ತಿರಲು ಕಿವುಡು ಮಾಡುವ ಮಹಾ ಶಬ್ಧವು ಉಂಟಾಯಿತು. ಆ ಭಿರುಗಾಳಿಯಿಂದ ಮೋಹಿತರಾದ ಅವರೆಲ್ಲರೂ ಆಕಾಶವೇ ಭೂಮಿಯ ಮೇಲೆ ಬೀಳುತ್ತಿದೆಯೋ ಅಥವಾ ಪರ್ವತವೇ ಒಡೆದು ಸೀಳಾಗುತ್ತದೆಯೋ ಎಂದು ತಿಳಿದುಕೊಂಡರು. ಆ ಚಂಡಮಾರುತಕ್ಕೆ ಹೆದರಿ ಅವರು ಅಲ್ಲಲ್ಲಿ ಕೈಚಾಚಿ ಹುಡುಕಾಡಿ ಹತ್ತಿರ ಸಿಕ್ಕಿದ ಮರವನ್ನೋ, ಹುತ್ತವನ್ನೋ, ಅಥವಾ ಬಿಲಗಳನ್ನೋ ಹಿಡಿದು ಕೆಳಗೆ ಬಿದ್ದರು. ಆಗ ಮಹಾಬಲಿ ಭೀಮಸೇನನು ತನ್ನ ಧನುಸ್ಸನ್ನು ಎತ್ತಿ ಹಿಡಿದು ಹೇಗೋ ಮಾಡಿ ದ್ರೌಪದಿಯನ್ನು ಹಿಡಿದುಕೊಂಡು ಒಂದು ಮರದ ಕೆಳಗೆ ಆಶ್ರಯಪಡೆದನು. ಧರ್ಮರಾಜ ಮತ್ತು ಧೌಮ್ಯರು ಮಹಾವನದಲ್ಲಿ ಮಲಗಿಕೊಂಡರು ಮತ್ತು ಅಗ್ನಿಹೋತ್ರವನ್ನು ಹಿಡಿದುಕೊಂಡಿದ್ದ ಸಹದೇವನು ಪರ್ವತದ ಮೇಲೆ ನಿಂತುಕೊಂಡನು. ನಕುಲ, ಮಹಾತಪಸ್ವಿ ಲೋಮಶ ಮತ್ತು ಇತರ ಬ್ರಾಹ್ಮಣರು ಅಲ್ಲಾಡುತ್ತಿರುವ ಮರಗಳನ್ನು ಹಿಡಿದು ಅಲ್ಲಲ್ಲಿ ಮಲಗಿಕೊಂಡಿದ್ದರು. ಆಗ ಗಾಳಿಯು ಕಡಿಮೆಯಾಗಿ, ಧೂಳು ಕೆಳಗೆ ಕುಳಿತುಕೊಳ್ಳಲು, ದೊಡ್ಡ ಮೋಡವೇ ಒಡೆದಂತೆ ಜೋರಾಗಿ ಧಾರಾಕಾರವಾಗಿ ಮಳೆಸುರಿಯಿತು. ಆನೆಕಲ್ಲುಗಳ ಸಹಿತ ಭಿರುಗಾಳಿಯ ಹೊಡೆತಕ್ಕೆ ಸಿಕ್ಕು ಸುರಿಯುತ್ತಿರುವ ಮಳೆಯಿಂದ ತಕ್ಷಣವೇ ಭೂಮಿಯ ಮೇಲೆ ಎಲ್ಲಕಡೆಯಲ್ಲಿಯೂ ನೀರಿನ ಪ್ರವಾಹ ತುಂಬಿಕೊಂಡಿತು. ನದಿಗಳು ನೀರಿನಿಂದ ತುಂಬಿಕೊಂಡು ಕೆಸರು ಮತ್ತು ನೊರೆಗಳಿಂದ ಕೂಡಿದ ನೀರಿನ ಪ್ರವಾಹಗಳು ಎಲ್ಲ ಕಡೆಯಿಂದಲೂ ಹರಿಯತೊಡಗಿದವು. ಜೋರಾಗಿ ರಭಸದಿಂದ ಹರಿಯುತ್ತಿರುವ ಆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಮರಗಳು ಮತ್ತು ಮಣ್ಣು ತುಂಬಿಕೊಂಡಿದ್ದವು. ಮಳೆಯು ನಿಂತು, ಗಾಳಿಯು ಕಡಿಮೆಯಾಗಿ, ನೀರು ಕೆಳಗೆ ಹರಿದು ಹೋದ ನಂತರ ಸೂರ್ಯನು ಪುನಃ ಕಾಣಿಸಿಕೊಂಡನು ಮತ್ತು ಆ ವೀರರೆಲ್ಲರೂ ಮತ್ತೆ ಒಂದುಗೂಡಿಕೊಂಡು ಗಂಧಮಾದನ ಪರ್ವತವನ್ನು ಏರತೊಡಗಿದರು.

ಮಹಾತ್ಮ ಪಾಂಡವರು ಅನಂತರ ಪ್ರಯಾಣಮಾಡುತ್ತಿದ್ದರಷ್ಟೇ ಕಾಲ್ನಡುಗೆಗೆ ಅನುಚಿತಳಾದ ದ್ರೌಪದಿಯು ಕುಸಿದು ಬಿದ್ದಳು. ಭಿರುಗಾಳಿ ಮತ್ತು ಮಳೆಗೆ ಸಿಲುಕಿ ಆಯಾಸಗೊಂಡವಳೂ ದುಃಖಿತಳೂ ಆದ ಆ ಸುಕುಮಾರಿ ಯಶಸ್ವಿನೀ ಪಾಂಚಾಲಿಯು ಮೂರ್ಛೆತಪ್ಪಿ ಬಿದ್ದಳು. ಮೂರ್ಛೆತಪ್ಪಿ ಬಿದ್ದ ಆ ಕಪ್ಪು ಕಣ್ಣಿನವಳು ತನ್ನ ಎರಡೂ ತೋಳುಗಳಿಂದ ತೊಡೆಗಳನ್ನು ಬಳಸಿ ಹಿಡಿದು ಬಿದ್ದಳು. ಆನೆಯ ಸೊಂಡಿಲಿನಂತಿದ್ದ ಆ ತೊಡೆಗಳನ್ನು ಹಿಡಿದು ನಡುಗುತ್ತಾ ಬಾಳೆಯ ಮರದಂತೆ ದೊಪ್ಪನೆ ನೆಲದ ಮೇಲೆ ಬಿದ್ದಳು. ಬಳ್ಳಿಯಂತೆ ಬಗ್ಗಿ ಬೀಳುತ್ತಿರುವ ಆ ವರಾರೋಹೆಯನ್ನು ನೋಡಿದ ವೀರ್ಯವಾನ್ ನಕುಲನು ಬೇಗನೇ ಹೋಗಿ ಅವಳನ್ನು ಹಿಡಿದುಕೊಂಡನು.

ನಕುಲನು ಹೇಳಿದನು: “ರಾಜನ್! ಪಾಂಚಾಲರಾಜನ ಮಗಳು ಕಪ್ಪು ಕಣ್ಣಿನವಳು ಆಯಾಸಗೊಂಡು ನೆಲದ ಮೇಲೆ ಬಿದ್ದಿದ್ದಾಳೆ. ಅವಳನ್ನು ಸ್ವಲ್ಪ ನೋಡಿಕೋ! ದುಃಖಕ್ಕೆ ಅರ್ಹಳಾಗಿರದ ಈ ಮೃದುವಾಗಿ ನಡೆಯುವವಳು ಪರಮ ದುಃಖವನ್ನು ಹೊಂದಿದ್ದಾಳೆ. ಆಯಾಸಗೊಂಡು ಪೀಡಿತಳಾದ ಇವಳಿಗೆ ಆಶ್ವಾಸನೆ ನೀಡು.” ಅವನ ಮಾತುಗಳಿಂದ ರಾಜನು ತುಂಬಾ ದುಃಖಭರಿತನಾದನು. ಭೀಮನೂ ಸಹದೇವನೂ ತಕ್ಷಣವೇ ಅವಳ ಬಳಿ ಓಡಿ ಬಂದರು. ಬಡಕಲಾಗಿದ್ದ ಆಯಾಸಗೊಂಡು ಮುಖದ ಬಣ್ಣವನ್ನೇ ಕಳೆದುಕೊಂಡಿದ್ದ ಅವಳನ್ನು ನೋಡಿದ ಕೌಂತೇಯನು ಅವಳನ್ನು ತನ್ನ ತೊಡೆಯ ಮೇಲೆ ಎತ್ತಿಟ್ಟುಕೊಂಡು ದುಃಖದಿಂದ ವಿಲಪಿಸಿದನು: “ಚೆನ್ನಾಗಿ ಹಾಸಿದ ಹಾಸಿಗೆಯ ಮೇಲೆ ಪಹರಿಗಳಿರುವ ಮನೆಯಲ್ಲಿ ಮಲಗುವ ಸುಖಕ್ಕೆ ಅರ್ಹಳಾದ ಈ ವರವರ್ಣಿನಿಯು ಈಗ ಹೇಗೆ ಭುಮಿಯ ಮೇಲೆ ಬಿದ್ದು ಮಲಗಿದ್ದಾಳೆ? ವರಗಳಿಗೆ ಅರ್ಹಳಾದ ಇವಳ ಕೋಮಲವಾದ ಕಾಲುಗಳು ಮತ್ತು ಕಮಲದಂತಿದ್ದ ಮುಖ ನಾನು ಮಾಡಿದ ಕರ್ಮಗಳಿಂದಾಗಿ ಇಂದು ಹೇಗೆ ಕಪ್ಪಾಗಿವೆ? ನನ್ನ ದ್ಯೂತವನ್ನಾಡುವ ಚಟದಿಂದ ಬುದ್ಧಿಯನ್ನು ಉಪಯೋಗಿಸದೇ ಮಾಡಿದ ಕರ್ಮದ ಮೂಲಕ ಕೃಷ್ಣೆಗೆ ಈ ಮೃಗಗಣಗಳಿಂದ ಕೂಡಿದ ವನದಲ್ಲಿ ತಿರುಗುವ ಪರಿಸ್ಥಿತಿಯನ್ನು ನಾನೇಕೆ ತಂದುಕೊಟ್ಟೆ? ಪಾಂಡವರನ್ನು ಗಂಡಂದಿರನ್ನಾಗಿ ಪಡೆದ ದ್ರೌಪದಿಯು ಇನ್ನು ಸುಖವನ್ನೇ ಹೊಂದುತ್ತಾಳೆ ಎಂದು ಹೇಳಿ ದ್ರುಪದರಾಜನು ಈ ಕಪ್ಪುಕಣ್ಣಿನವಳನ್ನು ಕೊಟ್ಟಿದ್ದನು. ಹಾಗೆ ಏನನ್ನೂ ಇವಳು ಪಡೆಯಲಿಲ್ಲ. ನನ್ನ ಪಾಪ ಕರ್ಮಗಳಿಂದಾಗಿ ಆಯಾಸ ಮತ್ತು ಶೋಕದಿಂದ ಸೊರಗಿ ಇವಳು ಬಿದ್ದು ನೆಲದಮೇಲೆ ಮಲಗಿಕೊಂಡಿದ್ದಾಳೆ!”

ಈ ರೀತಿಯಾಗಿ ಧರ್ಮರಾಜ ಯುಧಿಷ್ಠಿರನು ವಿಲಪಿಸುತ್ತಿರಲು ಧೌಮ್ಯನೇ ಮೊದಲಾದ ಎಲ್ಲ ಬ್ರಾಹ್ಮಣೋತ್ತಮರೂ ಅಲ್ಲಿಗೆ ಬಂದರು. ಅವನಿಗೆ ಆಶ್ವಾಸನೆಯಿತ್ತು ಆಶೀರ್ವಚನಗಳಿಂದ ಗೌರವಿಸಿ ರಾಕ್ಷೋಘ್ನ ಮತ್ತು ಹಾಗೆಯೇ ಇತರ ಮಂತ್ರಗಳನ್ನು ಜಪಿಸಿದರು ಮತ್ತು ಕ್ರಿಯೆಗಳನ್ನು ನಡೆಸಿದರು. ಶಾಂತಿಗೋಸ್ಕರವಾಗಿ ಆ ಪರಮಋಷಿಗಳು ಈ ರೀತಿ ಮಂತ್ರಗಳನ್ನು ಪಠಿಸುತ್ತಿರಲು ಪಾಂಡವರು ತಮ್ಮ ಶೀತಲ ಕೈಗಳಿಂದ ಅವಳನ್ನು ಮತ್ತೆ ಮತ್ತೆ ಸವರುತ್ತಿರಲು, ಜಲಮಿಶ್ರಣವಾದ ತಣ್ಣಗಿನ ಗಾಳಿಯು ಬೀಸುತ್ತಿರಲು ಸುಖವನ್ನು ಹೊಂದಿದ ಪಾಂಚಾಲಿಯು ಮೆಲ್ಲನೇ ಚೇತರಿಸಿಕೊಂಡಳು. ಕೃಷ್ಣಾಜಿನವನ್ನು ಹಾಸಿ ಅದರ ಮೇಲೆ ಕೃಷ್ಣೆ ದ್ರೌಪದಿಯನ್ನು ಮಲಗಿಸಿದರು ಮತ್ತು ಆ ತಪಸ್ವಿನಿಯು ಸಂಪೂರ್ಣವಾಗಿ ಎಚ್ಚರವಾಗುವವರೆಗೆ ವಿಶ್ರಾಂತಿಯನ್ನು ನೀಡಿದರು. ಅವಳಿ ನಕುಲ ಸಹದೇವರು ಕೆಳ ಕೆಂಪಾಗಿದ್ದ, ಮಂಗಳ ಲಕ್ಷಣಗಳಿಂದ ಕೂಡಿದ್ದ ಅವಳ ಪಾದಗಳನ್ನು ತಮ್ಮ ಎರಡೂ ಕೈಗಳಿಂದ ಮೆಲ್ಲನೆ ಒತ್ತುತ್ತಿದ್ದರು. ಧರ್ಮರಾಜ ಯುಧಿಷ್ಠಿರನು ಅವಳಿಗೆ ಸಾಂತ್ವನವನ್ನು ನೀಡಿದನು. ಆಗ ಆ ಕುರುಶ್ರೇಷ್ಠನು ಭೀಮನಿಗೆ ಈ ಮಾತುಗಳನ್ನಾಡಿದನು: “ಮಹಾಬಾಹು ಬೀಮ! ಬಹಳಷ್ಟು ವಿಷಮವಾದ ಹಿಮದಿಂದ ಕೂಡಿ ದುರ್ಗಮವಾದ ಪರ್ವತಗಳಿವೆ. ಕೃಷ್ಣೆಯು ಹೇಗೆತಾನೇ ಅವುಗಳನ್ನು ಏರಿ ಪ್ರಯಾಣಿಸಬಲ್ಲಳು?”

ಭೀಮಸೇನನು ಹೇಳಿದನು: “ರಾಜನ್! ನಿನ್ನನ್ನು, ರಾಜಪುತ್ರಿಯನ್ನು ಮತ್ತು ಪುರುಷರ್ಷಭರಾದ ಈ ನಕುಲ ಸಹದೇವರನ್ನು ಸ್ವಯಂ ನಾನೇ ಎತ್ತಿಕೊಂಡು ಹೋಗುತ್ತೇನೆ. ನಿನ್ನ ಮನಸ್ಸು ದುಃಖಿಸದಿರಲಿ! ಅಥವಾ ನೀನು ಹೇಳುವುದಾದರೆ ನನ್ನ ಹಾಗೆಯೇ ಬಲಶಾಲಿಯಾದ, ಹಾರಿಹೋಗಬಲ್ಲ ನನ್ನ ಮಗ ಘಟೋತ್ಕನು ನಮ್ಮೆಲ್ಲರನ್ನೂ ಎತ್ತಿಕೊಂಡು ಹೋಗುತ್ತಾನೆ.”

ಧರ್ಮರಾಜನ ಅನುಮತಿಯನ್ನು ಪಡೆದು ಅವನು ತನ್ನ ರಾಕ್ಷಸ ಮಗನನ್ನು ಸ್ಮರಿಸಿದನು. ತನ್ನ ತಂದೆಯು ಸ್ಮರಿಸಿದ ಕೂಡಲೇ ಧರ್ಮಾತ್ಮ ಘಟೋತ್ಕಚನು ಕೈಜೋಡಿಸಿ ಪಾಂಡವರಿಗೆ ನಮಸ್ಕರಿಸಿ ನಿಂತುಕೊಂಡನು. ಆ ಮಹಾಬಾಹುವು ಬ್ರಾಹ್ಮಣರಿಗೂ ವಂದಿಸಿದನು ಮತ್ತು ಅವರಿಂದ ಸ್ವಾಗತಿಸಲ್ಪಟ್ಟನು. ಆ ಸತ್ಯವಿಕ್ರಮನು ತನ್ನ ತಂದೆ ಭೀಮಸೇನನಿಗೆ ಹೇಳಿದನು: “ನೀನು ನನ್ನನ್ನು ಸ್ಮರಿಸಿದ ಕೂಡಲೇ ನಿನ್ನ ಸೇವೆಗೆಂದು ಇಲ್ಲಿಗೆ ಬಂದಿದ್ದೇನೆ. ಮಹಾಬಾಹೋ! ಆಜ್ಞಾಪಿಸು. ಎಲ್ಲವನ್ನೂ ನಿಸ್ಸಂಶಯವಾಗಿ ಮಾಡುತ್ತೇನೆ.” ಅದನ್ನು ಕೇಳಿದ ಭೀಮಸೇನನು ಆ ರಾಕ್ಷಸನನ್ನು ಬಿಗಿದಪ್ಪಿದನು.

ಯುಧಿಷ್ಠಿರನು ಹೇಳಿದನು: “ಭೀಮ! ನಿನ್ನ ಔರಸ ಪುತ್ರನೂ ನಮ್ಮ ಮೇಲೆ ಭಕ್ತಿಯುಳ್ಳವನೂ ಆದ ಈ ಧರ್ಮಜ್ಞ ಬಲವಂತ ಶೂರ ರಾಕ್ಷಸಪುಂಗವನು ಸದ್ಯ ತನ್ನ ತಾಯಿಯನ್ನು ಎತ್ತಿ ಕೊಳ್ಳಲಿ. ನಿನ್ನ ಬಲದಿಂದಲೂ ಅತಿಭಯಂಕರವಾದ ಪರಾಕ್ರಮದಿಂದಲೂ ನಾವು ಪಾಂಚಾಲಿಯೊಡನೆ ಏನೂ ಕಷ್ಟಪಡದೇ ಗಂಧಮಾದನಕ್ಕೆ ಹೋಗುತ್ತೇವೆ.”

ಅಣ್ಣನ ಮಾತನ್ನು ಸ್ವೀಕರಿಸಿದ ನರವ್ಯಾಘ್ರ ಭೀಮಸೇನನು ಸತ್ರುಕರ್ಶನನಾದ ತನ್ನ ಮಗ ಘಟೋತ್ಕಚನಿಗೆ ಆದೇಶವನ್ನಿತ್ತನು. “ಹಿಡಿಂಬೆಯ ಮಗನೇ! ಸೋಲನ್ನೇ ಅರಿಯದ ನಿನ್ನ ತಾಯಿಯು ಆಯಾಸಗೊಂಡಿದ್ದಾಳೆ. ನೀನಾದರೋ ಬಲಶಾಲಿಯಾಗಿದ್ದೀಯೆ ಮತ್ತು ಬೇಕಾದಲ್ಲಿಗೆ ಹೋಗಬಲ್ಲೆ. ಇವಳನ್ನು ಎತ್ತಿಕೊಂಡು ಆಕಾಶದಲ್ಲಿ ಹೋಗು. ನಿನಗೆ ಮಂಗಳವಾಗಲಿ! ಅವಳನ್ನು ನಿನ್ನ ಹೆಗಲಮೇಲೆ ಎತ್ತಿ ಕುಳ್ಳಿರಿಸಿಕೊಂಡು ನಮ್ಮೆಲ್ಲರ ಮಧ್ಯೆ, ಅವಳಿಗೆ ತೊಂದರೆಯಾಗದಂತೆ ಹೆಚ್ಚು ಮೇಲೆ ಹೋಗದೇ ಕೆಳಗಿನಿಂದಲೇ ಹಾರುತ್ತಾ ಹೋಗು.”

ಘತೋತ್ಕಚನು ಹೇಳಿದನು: “ನಾನೊಬ್ಬನೇ ಧರ್ಮರಾಜನನ್ನೂ, ಧೌಮ್ಯನನ್ನೂ, ರಾಜಪುತ್ರಿಯನ್ನೂ ಮತ್ತು ನಕುಲ ಸಹದೇವರನ್ನೂ ಎತ್ತಿಕೊಂಡು ಹೋಗಬಲ್ಲೆ. ಇಂದು ಸಹಾಯವಿರುವುದರಿಂದ ನನಗೇನು?”

ಹೀಗೆ ಹೇಳಿ ಆ ಘಟೋತ್ಕಚನು ಇತರರು ಪಾಂಡವರನ್ನು ಹೊತ್ತುಕೊಳ್ಳಲು ತಾನು ಕೃಷ್ಣೆಯನ್ನು ಎತ್ತಿಕೊಂಡು ಪಾಂಡವರ ಮಧ್ಯದಲ್ಲಿ ಹೊರಟನು. ಅಮಿತದ್ಯುತಿ ಲೋಮಶನು ತನ್ನದೇ ಆತ್ಮ ಪ್ರಭಾವದಿಂದ ಎರಡನೆಯ ಭಾಸ್ಕರನೋ ಎನ್ನುವಂತೆ ಸಿದ್ಧರ ಮಾರ್ಗದಿಂದ ಹೋದನು. ಭೀಮಪರಾಕ್ರಮಿಗಳಾದ ರಾಕ್ಷಸರು ತಮ್ಮ ರಾಕ್ಷಸೇಂದ್ರನ ಆಜ್ಞೆಯಂತೆ ಆ ಇಲ್ಲ ಬ್ರಾಹ್ಮಣರನ್ನೂ ಎತ್ತಿಕೊಂಡು ಹೋದರು. ಹೀಗೆ ರಮಣೀಯವಾಗಿರುವ ವನ-ಉಪವನಗಳನ್ನು ನೋಡುತ್ತಾ ಅವರು ವಿಶಾಲ ಬದರಿಯ ಕಡೆ ಹೊರಟರು. ಆ ಮಹಾಬಲಶಾಲೀ ಮತ್ತು ಮಹಾವೇಗದಲ್ಲಿ ಹೋಗುತ್ತಿರುವ ವೀರ ರಾಕ್ಷಸರನ್ನೇರಿ ಅವರು ತುಂಬಾ ದೂರವನ್ನು ಸ್ವಲ್ಪವೇ ಸಮಯದಲ್ಲಿ ಪ್ರಯಾಣಿಸಿದರು. ಅವರು ಮ್ಲೇಚ್ಛಗುಂಪುಗಳ ದೇಶಗಳನ್ನೂ, ಅನೇಕ ರತ್ನಗಳ ಗಣಿಗಳನ್ನೂ, ನಾನಾ ಧಾತುಗಳನ್ನು ಹೊಂದಿದ್ದ ಗಿರಿಪಾದಗಳನ್ನೂ ನೋಡಿದರು. ಅವರು ವಿಧ್ಯಾಧರ ಗುಂಪುಗಳಿಂದ ಕೂಡಿದ್ದ, ವಾನರ ಕಿನ್ನರರಿಂದ ಕೂಡಿದ್ದ, ಹಾಗೆಯೇ ಕಿಂಪುರುಷರೂ ಗಂಧರ್ವರೂ ಸೇರಿದ್ದ, ನದಿಗಳ ಜಾಲಗಳಿಂದ ಕೂಡಿದ್ದ, ನಾನಾಪಕ್ಷಿಕುಲಗಳಿಂದ ಕೂಡಿದ್ದ, ನಾನಾ ವಿಧದ ಮೃಗಗಳು ಬರುತ್ತಿದ್ದ, ಮಂಗಗಳಿಂದ ಶೋಭಿತಗೊಂಡಿದ್ದ ಬಹಳಷ್ಟು ಪ್ರದೇಶಗಳನ್ನು, ಮತ್ತು ಉತ್ತರ ಕುರುವನ್ನೂ ದಾಟಿ ವಿವಿಧಾಶ್ಚರ್ಯಗಳನ್ನುಳ್ಳ ಉತ್ತಮ ಕಲಾಸ ಪರ್ವತವನ್ನು ಕಂಡರು. ಅದೇ ಪ್ರದೇಶದಲ್ಲಿ ಸದಾ ಫಲಪುಷ್ಪಗಳನ್ನು ನೀಡುವ ಮರಗಳು ಬೆಳೆದು ನಿಂತಿದ್ದ ನರನಾರಾಯಣರ ಆಶ್ರಮವನ್ನೂ ಕಂಡರು.

ದುಂಡನೆಯ ಬುಡವುಳ್ಳ, ಮನೋರಮವಾದ, ತೆಳುರೆಂಬೆಗಳಿಂದ ದಟ್ಟವಾದ ನೆರಳನ್ನು ನೀಡುತ್ತಿದ್ದ, ಎಲ್ಲೆಡೆಯೂ ಕಾಂತಿಯನ್ನು ಹೊಂದಿದ್ದ, ಡಟ್ಟವಾದ ಮೃದುವಾದ ಚಿಗುರೆಲೆಗಳನ್ನು ಹೊಂದಿದ್ದ, ವಿಸ್ತಾರವಾದ ಭಾರಿರೆಂಬೆಗಳನ್ನು ಹೊಂದಿದ್ದ, ಸುಂದರವಾದ, ತುಂಬಾ ಕಾಂತಿಯುಕ್ತವಾದ, ಗಳಿತ ಹಣ್ಣುಗಳ ಗೊಂಚಲುಗಳಿಂದ ಸಿಹಿಯು ಸುರಿಯುತ್ತಿರುವ, ಸದಾ ದಿವ್ಯ ಮಹರ್ಶಿಗಣಗಳಿಂದ ಪೂಜಿತವಾದ ಬದರೀ ವೃಕ್ಷವನ್ನು ಕಂಡರು. ಅದರಲ್ಲಿ ಸದಾ ಮದಭರಿತ ಚಿಲಿಪಿಲಿಗುಟ್ಟುತ್ತಿದ್ದ ನಾನಾರೀತಿಯ ಪಕ್ಷಿಸಂಕುಲಗಳಿದ್ದವು. ಆ ಪ್ರದೇಶದಲ್ಲಿ ಸೊಳ್ಳೆಗಳಾಗಲೀ ನೊಣಗಳಾಗಲೀ ಇರಲಿಲ್ಲ. ಅಲ್ಲಿ ಬಹಳಷ್ಟು ಗೆಡ್ಡೆಗಳು, ಹಣ್ಣುಗಳು ಮತ್ತು ನೀರು ದೊರೆಯುತ್ತಿತ್ತು. ಏರಿಳಿತಗಳಿಲ್ಲದ ಸ್ವಾಭಾವಿಕವಾಗಿಯೇ ಹಿತವಾಗಿರುವ ಸುಂದರವಾಗಿರುವ ನೀಲಿಬಣ್ಣದ ಹುಲ್ಲುಗಾವಲ ಪ್ರದೇಶಕ್ಕೆ ದೇವಗಂಧರ್ವರು ಬರುತ್ತಿದ್ದರು. ಅಲ್ಲಿ ಮುಳ್ಳುಗಳಿರಲಿಲ್ಲ ಮತ್ತು ಆ ಪ್ರದೇಶದಲ್ಲಿ ಸ್ವಲ್ಪವೇ ಮಂಜು ಬೀಳುತ್ತಿತ್ತು. ಅದರ ಹತ್ತಿರ ಬಂದು ಆ ಮಹಾತ್ಮರೂ ಮತ್ತು ಬ್ರಾಹ್ಮಣರ್ಷಭರೂ ಎಲ್ಲರೂ ನಿಧಾನವಾಗಿ ರಾಕ್ಷಸರ ಭುಜಗಳಿಂದ ಕೆಳಗಿಳಿದರು. ಅನಂತರ ಪಾಂಡವರು ದ್ವಿಜಪುಂಗವರ ಸಹಿತ ಆ ಪುಣ್ಯ ನರನಾರಾಯಣರ ಆಶ್ರಮವನ್ನು ನೋಡಿದರು. ಆ ಪುಣ್ಯ ಕ್ಷೇತ್ರದಲ್ಲಿ ಸೂರ್ಯನ ಕಿರಣವು ತಲುಪದೇ ಇದ್ದರೂ ಕತ್ತಲೆಯೆನ್ನುವುದೇ ಇರಲಿಲ್ಲ. ಅ ಪ್ರದೇಶವು ಹಸಿವು, ಬಾಯಾರಿಕೆ, ಶೀತ, ಸೆಖೆಗಳಿಂದ ವರ್ಜಿತವಾಗಿತ್ತು ಮತ್ತು ಶೋಕವನ್ನು ನಾಶಗೊಳಿಸುತ್ತಿತ್ತು. ಅಲ್ಲಿ ಮಹರ್ಷಿಗಳ ಗುಂಪುಕಟ್ಟಿತ್ತು ಮತ್ತು ಬ್ರಹ್ಮನ ಕಾಂತಿಯಿಂದ ತುಂಬಿತ್ತು. ಧರ್ಮ ಬಹಿಷ್ಕೃತ ಮನುಷ್ಯರಿಗೆ ಅಲ್ಲಿಗೆ ಪ್ರವೇಶವು ಬಹಳ ಕಷ್ಟಕರವಾಗುತ್ತದೆ. ಆ ಆಶ್ರಮದಲ್ಲಿ ನಲಿಹರಣ, ಹೋಮ, ಅರ್ಚನೆಗಳೂ-ಸಮ್ಮಾರ್ಜನ ಅನುಲೇಪನಾದಿಗಳೂ ಅನವರತವಾಗಿ ನಡೆಯುತ್ತಿದ್ದವು. ದಿವ್ಯ ಪುಷ್ಪಹಾರಗಳಿಂದ ಯಾವಾಗಲೂ ಅಲಂಕರಿಸಲ್ಪಡುತ್ತಿತ್ತು. ವಿಶಾಲ ಸ್ರುಕ್-ಸ್ರುವ-ಬಾಂಡಾದಿಗಳು ಸದಾ ಸಿದ್ದವಾಗಿರುವ ಸುಂದರ ಅಗ್ನ್ಯಾಗಾರಗಳಿದ್ದವು. ದೊಡ್ಡ ದೊಡ್ಡ ನೀರಿನ ಕಲಶಗಳು ಶೋಭಿಸುತ್ತಿದ್ದವು. ಸರ್ವಭೂತಗಳಿಗೂ ಆಶ್ರಯದಾಯಕವಾದ ಆ ಆಶ್ರಮವು ಬ್ರಹ್ಮಘೋಷದಿಂದ ಮೊಳಗುತ್ತಿತ್ತು. ಆ ದಿವ್ಯಾಶ್ರಮವು ಎಲ್ಲರಿಗೂ ಆಶ್ರಯಣೀಯವೂ, ಶ್ರಮವನ್ನು ಹೋಗಲಾಡಿಸುವಂತಹುದೂ ಆಗಿತ್ತು. ಕಾಂತಿಯಿದ್ದ ಕೂಡಿದ್ದ ಆಶ್ರಮವು ದೇವತೆಗಳು ಸದಾಕಾಲ ಹೋಗಿ ಬರುತ್ತಿದ್ದುದರಿಂದ ಇನ್ನೂ ಶೋಭಾಯಮಾನವಾಗಿ ಕಾಣುತ್ತಿತ್ತು. ಫಲಮೂಲಗಳನ್ನು ತಿಂದುಕೊಂಡು, ಜಿತೇಂದ್ರಿಯರಾಗಿರುವ, ನಾರುಡುಗೆ ಮತ್ತು ಕೃಷ್ಣಾಜಿನಗಳನ್ನು ಧರಿಸಿದ್ದ, ಸೂರ್ಯ ಮತ್ತು ಅಗ್ನಿಯರ ತೇಜೋಸಮಾನರಾದ, ತಪಸ್ಸಿನಿಂದ ಆತ್ಮಜ್ಞಾನವನ್ನು ಪಡೆದಿದ್ದ, ಮೋಕ್ಷಪರರಾದ  ಮಹರ್ಷಿಗಳಿಂದ ಮತ್ತು ನಿಯತೇಂದ್ರಿಯರಾದ ಯತಿಗಳಿಂದ, ಬ್ರಹ್ಮಭೂತರಾದ ಮಹಾಭಾಗರಿಂದ ಮತ್ತು ಬ್ರಹ್ಮವಾದಿಗಳಿಂದ ತುಂಬಿಕೊಂಡಿತ್ತು. ಧೀಮಂತ ಧರ್ಮಪುತ್ರ ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಆ ಮಹಾತೇಜಸ್ವಿ ಋಷಿಗಳ ಬಳಿ ನಿಯತನಾಗಿ, ಶುಚಿಯಾಗಿ ಹೋದನು. ದಿವ್ಯಜ್ಞಾನವನ್ನು ಹೊಂದಿದ್ದ ಆ ಎಲ್ಲ ಮಹರ್ಷಿಗಳೂ ಬರುತ್ತಿದ್ದ ಯುಧಿಷ್ಠಿರನನ್ನು ನೋಡಿ ಭೇಟಿಯಾಗಿ ಸುಪ್ರೀತರಾದರು. ಸ್ವಾಧ್ಯಾಯನಿರತರಾದ ಅವರು ಅವರಿಗೆ ಆತಿಥ್ಯವನ್ನೂ ಆಶೀರ್ವಾದಗಳನ್ನೂ ನೀಡಿದರು. ಅಗ್ನಿಸಮಾನರಾದ ಅವರು ಪ್ರೀತಿಯಿಂದ ಅವನನ್ನು ವಿಧಿಪೂರ್ವಕವಾಗಿ ಶುದ್ಧೀಕರಿಸಿದ ನೀರಿನಿಂದ ಮತ್ತು ಪುಷ್ಪ, ಮೂಲ, ಫಲಗಳಿಂದ ಸತ್ಕರಿಸಿದರು. ಧರ್ಮಪುತ್ರ ಯುಧಿಷ್ಠಿರನೂ ಆ ಮಹರ್ಷಿಗಳ ಸತ್ಕಾರವನ್ನು ವಿನಯದಿಂದ ಮತ್ತು ಪ್ರೀತಿಯಿಂದ ಸ್ವೀಕರಿಸಿದನು. ಕೃಷ್ಣೆಯೊಡನೆ ಆ ಅನಘ ಅಚ್ಯುತ ಪಾಂಡವನು ತನ್ನ ತಮ್ಮಂದಿರೊಡನೆ ಮತ್ತು ವೇದವೇದಾಂಗ ಪಾರಂಗತರಾದ ಬ್ರಾಹ್ಮಣರೊಡನೆ ಸಂತೋಷದಿಂದ ಸ್ವರ್ಗದಂತಿದ್ದ, ಇಂದ್ರನ ಅರಮನೆಯಂತಿದ್ದ, ದಿವ್ಯಗಂಧಗಳಿಂದ ಮನೋಹರವಾದ ಪುಣ್ಯಕರ ಸುಂದರ ಅಶ್ರಮವನ್ನು ಪ್ರವೇಶಿಸಿದನು.

ಅಲ್ಲಿ ಆ ಧರ್ಮಾತ್ಮನು ದೇವದೇವರ್ಷಿಪೂಜಿತ ಭಾಗೀರಥಿಯಿಂದ ಶೋಭಿತವಾದ ಮಧುವನ್ನು ಸುರಿಸುವ ಹಣ್ಣುಗಳುಳ್ಳ ದಿವ್ಯವಾದ ಮಹರ್ಷಿಗಣಸೇವಿತವಾದ ನರನಾರಾಯಣರ ಆಸ್ಥಾನವನ್ನು ನೋಡಿದನು. ಬ್ರಾಹ್ಮಣರ ಸಹಿತ ಆ ಮಹಾತ್ಮನು ಅದರ ಬಳಿ ಹೋಗಿ ಅಲ್ಲಿ ವಸತಿಮಾಡಿದನು. ನಾನಾ ದ್ವಿಜಗಣಗಳಿಂದ ಕೂಡಿದ ಮೈನಾಕದ ಬಂಗಾರದ ಶಿಖರವನ್ನು, ಸುಂದರ ಬಿಂದುಸರೋವರವನ್ನು, ಸುತೀರ್ಥ, ಮಂಗಳಕರ, ತಣ್ಣಗಿನ ಶುದ್ಧ ನೀರಿನ ಭಾಗೀರಥಿಯನ್ನು, ನೋಡುತ್ತಾ ಮಣಿಗಳಂತೆ ಚಿಗುರುಗಳನ್ನುಳ್ಳ ಮರಗಳಿಂದ ಶೋಭಿಸುತ್ತಿದ್ದ ಆ ಅಶ್ರಮದಲ್ಲಿ ನೆಲಸಿದರು. ಮನಸ್ಸಿಗೆ ಸಂತೋಷವನ್ನು ಹೆಚ್ಚಿಸುವ ದಿವ್ಯ ಪುಷ್ಪಗಳ ಹಾಸಿಗೆಯನ್ನು ನೋಡುತ್ತಾ ಆ ಮಹಾತ್ಮ ಪಾಂಡವರು ಅಲ್ಲಿ ವಿಹರಿಸಿದರು. ಅಲ್ಲಿ ಪುನಃ ಪುನಃ ದೇವತೆಗಳಿಗೂ ಪಿತೃಗಳಿಗೂ ತರ್ಪಣಗಳನ್ನು ನೀಡುತ್ತಾ ಬ್ರಾಹ್ಮಣರೊಡನೆ ಆ ವೀರ ಪುರುಷರ್ಷಭರು ವಾಸಿಸಿದರು. ಅಮರಪ್ರಭರಾದ ಆ ನರವ್ಯಾಘ್ರ ಪಾಂಡವರು ದ್ರೌಪದಿಯ ವಿಚಿತ್ರ ಆಟಗಳನ್ನು ನೋಡುತ್ತಾ ಅಲ್ಲಿ ರಮಿಸಿದರು.

Leave a Reply

Your email address will not be published. Required fields are marked *