ಇಂದ್ರಲೋಕದಲ್ಲಿ ಅರ್ಜುನ

ಅಮರಾವತಿಗೆ ಪ್ರಯಾಣ

ಲೋಕಪಾಲಕರು ಹೊರಟುಹೋದ ನಂತರ ಶತ್ರುನಿಬರ್ಹಣ ಪಾರ್ಥನು ದೇವರಾಜನ ರಥವು ಬರುವುದರ ಕುರಿತು ಚಿಂತಿಸಿದನು. ಹೀಗೆ ಧೀಮತ ಗುಡಾಕೇಶನು ಯೋಚಿಸುತ್ತಿರುವಾಗಲೇ ಮಾತಲಿಯೊಂದಿಗೆ ಮಹಾಪ್ರಭೆಯುಳ್ಳ ರಥವು ಆಗಮಿಸಿತು. ಆಕಾಶದಲ್ಲಿ ಕತ್ತಲೆಯನ್ನು ದೂರಮಾಡಿ, ಮೋಡಗಳನ್ನು ಕತ್ತರಿಸಿಬರುತ್ತಿದೆಯೋ ಎನ್ನುವಂತೆ ಅದು ಮಳೆಗಾಲದ ಮೋಡಗಳ ಗುಡುಗಿನಂತೆ ಘರ್ಜಿಸುತ್ತಾ ದಿಶವನ್ನೆಲ್ಲಾ ಆವರಿಸಿ ಬಂದಿತು. ಅದರಲ್ಲಿ ಖಡ್ಗಗಳು, ಭಯಂಕರ ಈಟಿಗಳು, ಉಗ್ರರೂಪಿ ಗದೆಗಳು, ದಿವ್ಯಪ್ರಭಾವದ ಪ್ರಾಸಗಳು, ಮಹಾಪ್ರಭೆಯುಳ್ಳ ಮಿಂಚುಗಳು ಮತ್ತು ಸಿಡಿಲುಗಳೂ, ವಾಯುವಿನಲ್ಲಿ ಸ್ಪೋಟವಾಗುವ ಗುಡುಗಿನ ಶಬ್ದವುಳ್ಳ ಚಕ್ರಯುಕ್ತ ಫಿರಂಗಿಗಳಿದ್ದವು. ಅದರಲ್ಲಿ ಉರಿಯುತ್ತಿರುವ ಮಹಾಕಾಯ ದಾರುಣ ನಾಗಗಳೂ, ಬಿಳಿಯ ಮೋಡದಂತೆ ಸ್ಚಚ್ಛವಾದ ಮತ್ತು ಹೆಚ್ಚು ಬಿಳುಪಾದ ಕಲ್ಲಿನ ರಾಶಿಗಳೂ ಇದ್ದವು. ಆ ರಥಕ್ಕೆ ಚಿನ್ನದ ಬಣ್ಣದ ಕಾಂತಿಯ ಹತ್ತು ಸಾವಿರ ಕುದುರೆಗಳನ್ನು ಕಟ್ಟಿದ್ದರು ಮತ್ತು ಅದು ಗಾಳಿಯ ವೇಗವನ್ನೂ ಮೀರಿ ಸಂಚರಿಸುವ ಸಾಮರ್ಥ್ಯವುಳ್ಳದ್ದಾಗಿತ್ತು. ಆ ಮಾಯಾಮಯ ಮಹಾರಥದ ವೇಗವನ್ನು ಕಣ್ಣಿನಿಂದ ನೋಡಿ ಅಳೆಯಲು ಸಾಧ್ಯವಿರಲಿಲ್ಲ. ಆ ರಥದ ಮೇಲಿದ್ದ ಬಿದುರಿನಂತೆ ನೀಳವಾದ, ಕಾಂತಿಯುಕ್ತ, ವೈಡೂರ್ಯ ಅಥವಾ ಕನ್ನೈದಿಲೆಯಂತೆ ನೀಲಿಬಣ್ಣದ, ಸ್ವರ್ಣಾಭರಣಗಳಿಂದ ಅಲಂಕೃತ ವೈಜಯಂತ ಧ್ವಜವನ್ನು ಆ ರಥದ ತುದಿಯಲ್ಲಿ ಅರ್ಜುನನು ಕಂಡನು. ಆ ರಥದಲ್ಲಿದ್ದ, ಕುದಿಸಿದ ಬಂಗಾರದಿಂದ ವಿಭೂಷಿತನಾದ ಸೂತನನ್ನು ನೋಡಿ ಮಹಾಬಾಹು ಪಾರ್ಥನು ಅವನೂ ದೇವನಿರಬಹುದು ಎಂದು ಯೋಚಿಸಿದನು. ಈ ರೀತಿ ಯೋಚಿಸುತ್ತಿರುವಾಗ, ಮಾತಲಿಯು ಫಲ್ಗುನನ ಬಳಿಬಂದು ವಿನಯಾವನತನಾಗಿ ತಲೆಬಾಗಿ ಅರ್ಜುನನಿಗೆ ಈ ಮಾತುಗಳನ್ನಾಡಿದನು: “ಭೋ ಭೋ ಶಕ್ರಾತ್ಮಜ! ಶ್ರೀಮಾನ್ ಶಕ್ರನು ನಿನ್ನನ್ನು ನೋಡಲು ಬಯಸಿದ್ದಾನೆ. ನೀನು ಶೀಘ್ರದಲ್ಲಿಯೇ ಇಂದ್ರನ ಈ ರಥವನ್ನು ಏರುವ ಕೃಪೆಮಾಡು. ಆ ಅಮರಶ್ರೇಷ್ಠ, ನಿನ್ನ ತಂದೆ ಶತಕ್ರತುವು ಕುಂತೀಪುತ್ರನನ್ನು ಇಲ್ಲಿಗೆ ಕರೆದುಕೊಂಡು ಬಾ! ತ್ರಿದಶಾಲಯರು ಅವನನ್ನು ನೋಡಲಿ! ಎಂದು ನನಗೆ ಹೇಳಿದ್ದಾನೆ. ದೇವತೆಗಳಿಂದಲೂ, ಋಷಿಗಣಗಳಿಂದಲೂ, ಗಂಧರ್ವ ಅಪ್ಸರೆಯರಿಂದಲೂ ಸುತ್ತುವರೆದಿರುವ ಶಕ್ರನು ನಿನ್ನನ್ನು ನೋಡಲು ಪ್ರತೀಕ್ಷಿಸುತ್ತಿದ್ದಾನೆ. ಪಾಕಶಾಸನಿಯ ಶಾಸನದಂತೆ ಈ ಲೋಕದಿಂದ ದೇವಲೋಕಕ್ಕೆ ಹೋಗಲು ನನ್ನೊಂದಿಗೆ ಈ ರಥವನ್ನೇರು. ಅಸ್ತ್ರಗಳನ್ನು ಪಡೆದು ಪುನಃ ಬರುತ್ತೀಯೆ.”

ಅರ್ಜುನನು ಹೇಳಿದನು: “ಮಾತಲಿ! ಶೀಘ್ರದಲ್ಲಿ ನೀನು ನೂರಾರು ರಾಜಸೂಯ ಅಶ್ವಮೇಧಗಳನ್ನು ಮಾಡಿದರೂ ದುರ್ಲಭವಾದ ಆ ಉತ್ತಮ ರಥವನ್ನು ಏರಿ ಹೋಗು. ಭೂರಿದಕ್ಷಿಣೆಗಳಿಂದ ಯಾಗಗಳನ್ನು ಮಾಡಿದ ಸುಮಹಾಭಾಗ ಪಾರ್ಥಿವರೂ, ದೇವತೆಗಳೂ, ದಾನವರೂ ಈ ಉತ್ತಮ ರಥವನ್ನು ಏರಲಾರರು. ತಪಸ್ಸನ್ನು ತಪಿಸದ ಯಾರೂ ಈ ದಿವ್ಯ ಮಹಾರಥವನ್ನು ನೋಡಲು ಅಥವಾ ಮುಟ್ಟಲು ಶಕ್ಯರಿಲ್ಲ. ಇನ್ನು ಅದನ್ನು ಹೇಗೆ ಏರಿಯಾರು? ನೀನು ಹತ್ತಿ ನಿಂತು ಕುದುರೆಗಳನ್ನು ಸ್ಥಿರಪಡಿಸಿ ನಿಲ್ಲಿಸಿದ ನಂತರ ನಾನು ಸುಕೃತನು ಸತ್ಪಥದಲ್ಲಿ ಹೇಗೋ ಹಾಗೆ ಈ ಮಹಾರಥವನ್ನು ಏರುತ್ತೇನೆ.”

ಅವನ ಈ ಮಾತುಗಳನ್ನು ಕೇಳಿದ ಶಕ್ರಸಾರಥಿ ಮಾತಲಿಯು ಶೀಘ್ರದಲ್ಲಿಯೇ ರಥವನ್ನು ಏರಿ ಕುದುರೆಗಳ ಗಾಳಗಳನ್ನು ಹಿಡಿದನು. ಆಗ ಕುರುನಂದನ ಕೌಂತೇಯ ಅರ್ಜುನನು ಹೃಷ್ಟಮನಸ್ಕನಾಗಿ ಗಂಗೆಯಲ್ಲಿ ಮಿಂದು ಶುಚನಾಗಿ ವಿಧಿವತ್ತಾಗಿ ಜಪವನ್ನು ಜಪಿಸಿದನು. ನಂತರ ಯಥಾನ್ಯಾಯವಾಗಿ ಪಿತೃಗಳಿಗೆ ತರ್ಪಣವನ್ನಿತ್ತು, ಯಧಾವಿಧಿಯಾಗಿ ಶೈಲರಾಜ ಮಂದರನನ್ನು ಬೀಳ್ಕೊಡಲು ಮುಂದಾದನು: “ಶೈಲ! ನೀನು ಸದಾ ಸಾಧುಗಳ, ಧರ್ಮಶೀಲರ, ಪುಣ್ಯಕರ್ಮಿ ಮುನಿಗಳಿಗೆ, ಮತ್ತು ಸ್ವರ್ಗಮಾರ್ಗದಲ್ಲಿ ಹೋಗಲು ಬಯಸುವವರಿಗೆ ಆಶ್ರಯನಾಗಿರುವೆ. ನಿನ್ನ ಪ್ರಸಾದದಿಂದ ಸದಾ ಬ್ರಾಹ್ಮಣರು, ಕ್ಷತ್ರಿಯರು, ಮತ್ತು ವೈಶ್ಯರು ಸ್ವರ್ಗವನ್ನು ಸೇರಿ ಅಲ್ಲಿ ದೇವತೆಗಳ ಸಂಗಡ ಗತವ್ಯಥರಾಗಿರುತ್ತಾರೆ. ಮುನಿಗಳಿಗೆ ಆಶ್ರಯದಾತ! ತೀರ್ಥಗಳನ್ನು ಹೊಂದಿರುವವನೇ! ನನಗೆ ಹೋಗಬೇಕು. ನಿನ್ನಿಂದ ಬೀಳ್ಕೊಳ್ಳುತ್ತಿದ್ದೇನೆ. ನಿನ್ನಮೇಲೆ ಸುಖವಾಗಿ ಸಮಯವನ್ನು ಕಳೆದೆ. ನಾನು ನೋಡಿದ ನಿನ್ನ ಅನೇಕ ಶಿಖರಗಳು, ಕಣಿವೆಗಳು, ನದಿಗಳು, ಮತ್ತು ಚಿಲುಮೆಗಳು ಪುಣ್ಯಕರ ತೀರ್ಥಗಳು.”

ಪರವೀರಹ ಅರ್ಜುನನು ಹೀಗೆ ಹೇಳಿ ಶೈಲವನ್ನು ಬೀಳ್ಕೊಂಡು ಭಾಸ್ಕರನಂತೆ ಬೆಳಗುತ್ತಿರುವ ಆ ದಿವ್ಯ ರಥವನ್ನು ಏರಿದನು. ಧೀಮಾನ್ ಕುರುನಂದನನು ಸಂತೋಷಗೊಂಡು ಆ ಆದಿತ್ಯರೂಪಿ ಅದ್ಭುತಕರ್ಮಿ, ದಿವ್ಯ ರಥದ ಮೇಲೇರಿದನು. ಭೂಮಿಯ ಮೇಲೆ ನಡೆದಾಡುವ ಮರ್ತ್ಯರಿಗೆ ಕಾಣದೇ ಇರುವ ದಾರಿಯನ್ನು ಸಾಗಿ ಅವನು ಅಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಅದ್ವುತವಾಗಿ ತೋರುತ್ತಿದ್ದ ವಿಮಾನಗಳನ್ನು ಕಂಡನು. ಅಲ್ಲಿ ಯಾವುದೂ ಸೂರ್ಯನ ಅಥವಾ ಚಂದ್ರನ ಅಥವಾ ಬೆಂಕಿಯ ಬೆಳಕಿನಿಂದ ಬೆಳಗುತ್ತಿರಲಿಲ್ಲ. ಆದರೆ ಪುಣ್ಯಗಳಿಂದ ಸಂಪಾದಿಸಿದ ತಮ್ಮದೇ ಪ್ರಭೆಯಿಂದ ಬೆಳಗುತ್ತಿದ್ದವು. ತುಂಬಾ ದೂರಗಳಲ್ಲಿರುವುದರಿಂದ ನಕ್ಷತ್ರಗಳು ಬೆಳಗುತ್ತಿರುವ ಚಿಕ್ಕ ದೀಪಗಳಂತೆ ತೋರುತ್ತವೆ. ಆದರೆ ಅವು ತುಂಬಾ ದೊಡ್ಡವು.  ಪಾಂಡವನು ತಮ್ಮದೇ ಅಗ್ನಿಯಿಂದ, ತಮ್ಮದೇ ಒಲೆಯಲ್ಲಿ ಬೆಳಗುತ್ತಿರುವ ಆ ಸುಂದರ ಪ್ರಕಾಶವುಳ್ಳ ನಕ್ಷತ್ರಗಳನ್ನು ನೋಡಿದನು. ಅಲ್ಲಿ ಯುದ್ಧದಲ್ಲಿ ನಿಹತರಾದ ವೀರ ಸಿದ್ಧ ರಾಜರ್ಷಿಗಳು, ಮತ್ತು ತಪಸ್ಸಿನಿಂದ ಸ್ವರ್ಗವನ್ನು ಜಯಿಸಿದವರು ನೂರಾರು ಗುಂಪುಗಳಲ್ಲಿ ಸೇರಿದ್ದರು. ಹಾಗೆಯೇ ಸೂರ್ಯನ ಜ್ವಲನದಂತೆ ತೇಜಸ್ಸುಳ್ಳ ಸಹಸ್ರಾರು ಗಂಧರ್ವರು, ಗುಹ್ಯಕರು, ಋಷಿಗಳು ಮತ್ತು ಅಪ್ಸರೆಯರ ಗುಂಪುಗಳಿದ್ದವು. ತಮ್ಮದೇ ಪ್ರಭೆಯಿಂದ ಬೆಳಗುತ್ತಿರುವ ಆ ಲೋಕಗಳನ್ನು ನೋಡಿ ವಿಸ್ಮಿತನಾದ ಫಲ್ಗುನನು ಮಾತಲಿಯನ್ನು ಪ್ರೀತಿಯಿಂದ ಪ್ರಶ್ನಿಸಲು ಅವನು ಉತ್ತರಿಸಿದನು: “ಪಾರ್ಥ! ನೀನು ನೋಡುತ್ತಿರುವ, ಭೂತಲದಲ್ಲಿ ನಕ್ಷತ್ರಗಳಂತೆ ಕಾಣುವ, ತಮ್ಮದೇ ಕುಂಡಗಳಲ್ಲಿ ಉರಿಯುತ್ತಿರುವ ಇವರು ಉತ್ತಮ ಕರ್ಮಗಳನ್ನು ಮಾಡಿದವರು.”

ಆಗ ಅವನು ದ್ವಾರದಲ್ಲಿ ಕೈಲಾಸಶಿಖರದಂತೆ ನಿಂತಿರುವ ನಾಲ್ಕು ದಂತಗಳ ಬಿಳಿಯ ವಿಜಯ ಗಜ ಐರಾವತವನ್ನು ಕಂಡನು. ಆ ಕುರುಪಾಂಡವಸತ್ತಮನು ಸಿದ್ಧರ ಮಾರ್ಗವನ್ನು ದಾಟಿ ಹಿಂದೆ ಪಾರ್ಥಿವೋತ್ತಮ ಮಾಂಧಾತನಂತೆ ಕಾಂತಿಯಿಂದ ಬೆಳಗಿದನು. ಆ ರಾಜೀವಲೋಚನನು ರಾಜರ ಲೋಕಗಳನ್ನು ದಾಟಿ ಶಕ್ರನ ಪುರ ಅಮರಾವತಿಯನ್ನು ಕಂಡನು.

ಇಂದ್ರಸಭೆಯಲ್ಲಿ ಅರ್ಜುನನಿಗೆ ಸ್ವಾಗತ

ಅವನು ಸಿದ್ಧಚಾರಣರಿಂದ ಸೇವಿತ, ಎಲ್ಲೆಲ್ಲೂ ಕುಸುಮ, ಪುಣ್ಯ ವೃಕ್ಷಗಳಿಂದ ಶೋಭಿತ, ರಮ್ಯ ಪುರಿಯನ್ನು ನೋಡಿದನು. ಅಲ್ಲಿ ಪುಣ್ಯಸುಗಂಧಿತ ಸೌಗಂಧಿಕಗಳ ವೃಕ್ಷಗಳಿದ್ದವು ಮತ್ತು ಆ ಪುಣ್ಯಗಂಧಿ ವೃಕ್ಷಗಳಿಂದ ಬೀಸಿದ ಗಾಳಿಯು ಅವನಿಗೆ ಚಾಮರಗಳಂತೆ ಬೀಸಿದವು. ಅಪ್ಸರಗಣಗಳಿಂದ ಸೇವಿತ, ದಿವ್ಯ ಕುಸುಮಗಳಿಂದ ಕರೆಯುತ್ತಿವೆಯೋ ಎನ್ನುವ ಮರಗಳಿಂದ ಕೂಡಿದ ದಿವ್ಯ ನಂದನವನವನ್ನು ಕಂಡನು. ತಪಸ್ಸನ್ನು ತಪಿಸದೇ ಇದ್ದ ಮತ್ತು ಅಗ್ನಿಯನ್ನು ಪೂಜಿಸದೇ ಇದ್ದವರಿಗೆ, ಯುದ್ಧದಲ್ಲಿ ಪರಾಂಙ್ಮುಖರಾದವರಿಗೆ, ಯಜ್ಞಗಳನ್ನು ಮಾಡಲು ಅಸಮರ್ಥರಾದವರಿಗೆ, ವೇದ ಮತ್ತು ಶೃತಿಗಳನ್ನು ತ್ಯಜಿಸಿದವರಿಗೆ, ಸುಳ್ಳು ಹೇಳುವವರಿಗೆ, ತೀರ್ಥಗಳಲ್ಲಿ ಮುಳುಗಿ ಸ್ನಾನಮಾಡದೇ ಇರುವವರಿಗೆ ಮತ್ತು ಯಜ್ಞ-ದಾನಗಳನ್ನು ದೂರವಿಟ್ಟವರಿಗೆ ಆ ಪುಣ್ಯಕರ್ತೃಗಳ ಲೋಕವನ್ನು ನೋಡಲು ಶಕ್ಯವಾಗುವುದಿಲ್ಲ. ಯಜ್ಞಗಳನ್ನು ಕೆಡಿಸುವವರಿಗೂ, ಕುಡಿದು ದುಷ್ಟಕೃತ್ಯಗಳನ್ನು ಮಾಡುವವರಿಗೂ, ತಮ್ಮ ಗುರುಗಳ ಹಾಸಿಗೆಯನ್ನು ಉಲ್ಲಂಘಿಸುವರಿಗೂ, ಮಾಂಸವನ್ನು ತಿನ್ನುವ ದುರಾತ್ಮರಿಗೂ ಎಂದೂ ನೋಡಲಿಕ್ಕಾಗುವುದಿಲ್ಲ. ದಿವ್ಯ ಗೀತನಿನಾದದಿಂದ ತುಂಬಿದ್ದ ಆ ದಿವ್ಯ ವನವನ್ನು ನೋಡುತ್ತಾ ಆ ಮಹಾಬಾಹುವು ಶಕ್ರನ ಪ್ರೀತಿಯ ಪುರವನ್ನು ಪ್ರವೇಶಿಸಿದನು. ಅಲ್ಲಿ ಬೇಕಾದಲ್ಲಿ ಹೋಗಬಲ್ಲ ಸಹಸ್ರಾರು ದೇವ ವಿಮಾನಗಳು ನಿಂತಿರುವುದನ್ನು ಮತ್ತು ಹಾರಾಡುತ್ತಿರುವುವನ್ನು ನೋಡಿದನು. ಗಂಧರ್ವರೂ ಅಪ್ಸರರೂ ಪಾಂಡವನನ್ನು ಸಂಸ್ತುತಿಸುತ್ತಿರಲು ವಾಯುವು ಹೂವಿನ ಸುವಾಸನೆಯನ್ನು ಹೊತ್ತು ಪುಣ್ಯಕರ ಗಾಳಿಯನ್ನು ಬೀಸಿದನು. ಆಗ ಗಂಧರ್ವರೂ, ಸಿದ್ಧರೂ, ಪರಮಋಷಿಗಳೂ ಸೇರಿ ದೇವತೆಗಳು ಸಂತೋಷದಿಂದ ಅಕ್ಲಿಷ್ಟಕರ್ಮಿಣಿ ಪಾರ್ಥನನ್ನು ಸ್ವಾಗತಿಸಿದರು. ಆಶೀರ್ವಾದಗಳಿಂದ ಸ್ತುತಿಸಲ್ಪಟ್ಟು, ದಿವ್ಯವಾದ್ಯಗಳ ನಾದದೊಂದಿಗೆ ಶಂಖದುಂದುಭಿಗಳ ನಾದಗಳೊಂದಿಗೆ, ಮಹಾಬಾಹು ಪಾರ್ಥನು ಸುರಬೀದಿಯೆಂದು ವಿಶ್ರುತವಾದ ಆ ನಕ್ಷತ್ರಮಾರ್ಗದಲ್ಲಿ ನಡೆದು ಇಂದ್ರನ ಆಜ್ಞೆಯಂತೆ ಎಲ್ಲರೂ ಸುತ್ತುವರೆದು ಸ್ತುತಿಸುತ್ತಿರಲು ಮುಂದುವರೆದನು. ಅಲ್ಲಿ ಸಾಧ್ಯರೂ, ವಿಶ್ಚೇದೇವರೂ, ಮರುತರೂ, ಅಶ್ವಿನಿಯರೂ, ಆದಿತ್ಯರೂ, ವಸುಗಳೂ, ರುದ್ರರೂ, ಅಮಲ ಬ್ರಹ್ಮರ್ಷಿಗಳೂ, ದಿಲೀಪನೇ ಮೊದಲಾದ ಬಹಳಷ್ಟು ಮಂದಿ ರಾಜರ್ಷಿ ನೃಪರೂ, ತುಂಬುರು ನಾರದರೂ, ಹಹಾಹುಹೂ ಮೊದಲಾದ ಗಂಧರ್ವರೂ ಸೇರಿದ್ದರು. ಕುರುನಂದನನು ಅವರೆಲ್ಲರನ್ನೂ ವಿಧಿವತ್ತಾಗಿ ಭೇಟಿಮಾಡಿ, ನಂತರ ಅರಿಂದಮ ದೇವರಾಜ ಶತಕ್ರತುವನ್ನು ಕಂಡನು.

ಆಗ ಮಹಾಬಾಹು ಪಾರ್ಥನು ಆ ಉತ್ತಮ ರಥದಿಂದಿಳಿದು ತನ್ನ ತಂದೆ ಪಾಕಶಾಸನಿ ಸಾಕ್ಷಾತ್ ದೇವೇಂದ್ರನನ್ನು ನೋಡಿದನು. ಬಂಗಾರದ ದಂಡದ ಸುಂದರ ಶ್ವೇತಛತ್ರವನ್ನು ಅವನ ಮೇಲೆ ಹಿಡಿಯಲಾಗಿತ್ತು ಮತ್ತು ದಿವ್ಯಗಂಧಗಳಿಂದ ಕೂಡಿದ ಚಾಮರವು ಬೀಸಿ ಅವನಿಗೆ ತಂಪನ್ನು ನೀಡಿತು. ವಿಶ್ವಾವಸು ಮೊದಲಾದ ಗಂಧರ್ವರು ಸ್ತುತಿವಂದನೆಗಳಿಂದ ಹೊಗಳಲು ದ್ವಿಜಾಗ್ರರು ಋಗ್ವೇದ ಯಜುರ್ವೇದ ಸಾಮಗಳನ್ನು ಹಾಡಿದರು. ಆಗ ಬಲಶಾಲಿ ಕೌಂತೇಯನು ಹತ್ತಿರ ಹೋಗಿ ಶಿರಬಾಗಿಸಿ ನಮಸ್ಕರಿಸಿದನು. ನಂತರ ಶಕ್ರನು ತನ್ನ ಕೈಗಳಿಂದ ಅವನ ಭುಜಗಳನ್ನು ಹಿಡಿದು ಆಲಂಗಿಸಿ, ಕೈಹಿಡಿದು, ತನ್ನೊಂದಿಗೆ, ದೇವರಾಜರ್ಷಿಗಳಿಂದ ಪೂಜಿತ ಶಕ್ರನ ಆಸನದಲ್ಲಿ ಕುಳ್ಳಿರಿಸಿಕೊಂಡನು. ಪರವೀರಹ ದೇವೇಂದ್ರನು ಅವನ ನೆತ್ತಿಗೆ ಮುತ್ತನ್ನಿತ್ತು, ಎಲ್ಲರೂ ವಿನಯದಿಂದ ತಲೆಬಾಗಿಸಿಕೊಂಡಿರಲು ಅವನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು. ಸಹಸ್ರಾಕ್ಷನ ನಿಯೋಗದಂತೆ ಅಮೇಯಾತ್ಮ ಪಾರ್ಥನು ಎರಡನೆಯೇ ಇಂದ್ರನೋ ಎನ್ನುವಂತೆ ಶಕ್ರನ ಆಸನದಲ್ಲಿ ಕುಳಿತುಕೊಂಡನು. ಆಗ ವೃತ್ರಶತ್ರುವು ಅರ್ಜುನನ ಸುಂದರ ಮುಖವನ್ನು ಪ್ರೀತಿಯಿಂದ ಮುಟ್ಟಿ, ತನ್ನ ಪುಣ್ಯಗಂಧದ ಕೈಗಳಿಂದ ಸವರಿದನು. ಬಿಲ್ಲಿನ ಹಗ್ಗದಿಂದ ಗಡುಸಾಗಿದ್ದ, ಬಂಗಾರದ ಸ್ತಂಭಗಳಂತಿದ್ದ ಅವನ ಸುಂದರ ಬಾಹುಗಳನ್ನು ಮೃದುವಾಗಿ ಸವರಿದನು. ಬಲಸೂದನ, ವಜ್ರಪಾಣಿಯು ಪುನಃ ಪುನಃ ಅವನ ತೋಳನ್ನು ಮೆಲ್ಲಮೆಲ್ಲನೆ ವಜ್ರವನ್ನು ಹಿಡಿದು ಕಲೆಯಾದ ತನ್ನ ಕೈಗಳಿಂದ ಒತ್ತುತ್ತಿದ್ದನು. ಸಹಸ್ರಾಕ್ಷ ವೃತ್ರಹನು ಹರ್ಷದಿಂದ ತೆರೆದ ಕಣ್ಣುಗಳಿಂದ ಮುಗುಳ್ನಗುತ್ತಾ ಗುಡಾಕೇಶನನ್ನು ಎಷ್ಟು ನೋಡಿದರೂ ತೃಪ್ತಿಯಾಗಲಿಲ್ಲವೋ ಎಂಬಂತೆ ನೋಡುತ್ತಿದ್ದನು. ಒಂದೇ ಸಿಂಹಾಸನದಲ್ಲಿ ಕುಳಿತುಕೊಂಡ ಅವರಿಬ್ಬರು ಚತುರ್ದಶಿಯಂದು ಒಂದೇ ಸಮಯದಲ್ಲಿ ಉದಯಿಸುವ ಸೂರ್ಯಚಂದ್ರರು ಆಕಾಶವನ್ನು ಹೇಗೋ ಹಾಗೆ ಸಭೆಯನ್ನು ಶೋಭಿಸಿದರು. ಗೀತ ಮತ್ತು ಸಾಮಗಳಲ್ಲಿ ಕುಶಲರಾದ ತುಂಬುರುವೇ ಮೊದಲಾದ ಶ್ರೇಷ್ಠ ಗಂಧರ್ವರು ಅಲ್ಲಿ ಸುಮಧುರ ವಾಣಿಯಲ್ಲಿ ಗಾಯನ-ಸಾಮವನ್ನು ಹಾಡುತ್ತಿದ್ದರು. ಘೃತಾಚೀ, ಮೇನಕಾ, ರಂಭಾ, ಪೂರ್ವಚಿತ್ತಿ, ಸ್ವಯಂಪ್ರಭಾ, ಉರ್ವಶೀ, ಮಿಶ್ರಕೇಶೀ, ಡುಂಡು, ಗೌರೀ, ವರೂಥಿನೀ, ಗೋಪಾಲೀ, ಸಹಜನ್ಯಾ, ಕುಂಭಯೋನಿ, ಪ್ರಜಾಗರಾ, ಚಿತ್ರಸೇನಾ, ಚಿತ್ರಲೇಖಾ, ಸಹಾ, ಮಧುರಸ್ವರಾ, ಮತ್ತು ಇತರ ವರಾಂಗನೆ-ಪದ್ಮಲೋಚನೆಯರು, ಮಹಾಕಟಿ-ತಟಶ್ರೋಣಿಯರು ಸಿದ್ಧರ ಮನಸ್ಸನ್ನು ಕಡೆಯುತ್ತಾ ತಮ್ಮ ಸ್ತನಗಳನ್ನು ಕಂಪಿಸುತ್ತಾ, ಕಡೆಗಣ್ಣಿನ ಮಧುರ ನೋಟದಲ್ಲಿ ಚೇತನ ಬುದ್ಧಿ, ಮನಸ್ಸನ್ನು ಅಪಹರಿಸುತ್ತಾ ಅಲ್ಲಲ್ಲಿ ನೃತ್ಯಮಾಡುತ್ತಿದ್ದರು.”

ಇಂದ್ರನ ಅರಮನೆಯಲ್ಲಿ ಅರ್ಜುನನ ವಾಸ

ಶಕ್ರನ ಇಂಗಿತವನ್ನು ತಿಳಿದ ಗಂಧರ್ವರೂ ಕೂಡಿ ದೇವತೆಗಳು ಉತ್ತಮ ಅರ್ಘ್ಯವನ್ನು ಸಿದ್ಧಪಡಿಸಿ ಪಾರ್ಥನನ್ನು ಯಥಾವತ್ತಾಗಿ ಅರ್ಚಿಸಿದರು. ನೃಪತಾತ್ಮಜನಿಗೆ ಪಾದ್ಯ ಆಚಮನೀಯಗಳನ್ನು ನೀಡಿ ಪುರಂದರನ ಅರಮನೆಯನ್ನು ಪ್ರವೇಶಿಸಲು ಸಹಾಯಮಾಡಿದರು. ಈ ರೀತಿ ಸಂಪೂಜಿತನಾಗಿ ತನ್ನ ತಂದೆಯ ಅರಮನೆಯಲ್ಲಿ ಎಲ್ಲ ಮಹಾಸ್ತ್ರಗಳನ್ನೂ ಅವುಗಳನ್ನು ಹಿಂತೆಗೆದುಕೊಳ್ಳುವ ವಿಧಾನಗಳ ಜೊತೆಗೆ ಕಲಿಯುತ್ತಾ ಜಿಷ್ಣುವು ವಾಸಿಸಿದನು. ಶಕ್ರನ ಕೈಯಿಂದ ಅವನಿಗೆ ಪ್ರಿಯವಾದ ದುರುತ್ಸಹ ವಜ್ರಾಸ್ತ್ರವನ್ನೂ, ಅಕಾಲದಲ್ಲಿಯೂ ಮಹಾನಾದವನ್ನುಂಟುಮಾಡುವ ಸಿಡಿಲುಗಳನ್ನೂ, ನವಿಲು ನೃತ್ಯವಾಡಲು ಪ್ರಚೋದಿಸುವ ಮೇಘಗಳ ನಿರ್ಮಾಣ ಮತ್ತು ನಿವಾರಣ ವಿದ್ಯೆಗಳನ್ನೂ ಕಲಿತುಕೊಂಡನು. ಆ ಅಸ್ತ್ರಗಳನ್ನು ಕಲಿತುಕೊಂಡ ನಂತರ ಕೌಂತೇಯ ಪಾಂಡವನು ತನ್ನ ಸಹೋದರರನ್ನು ನೆನಪಿಸಿಕೊಂದನು. ಆದರೂ ಪುರಂದರನ ನಿಯೋಗದಂತೆ ಅಲ್ಲಿ ಅವನು ಸುಖಿಯಾಗಿ ಐದು ವರ್ಷಗಳು ವಾಸಿಸಿದನು. ಪಾರ್ಥನು ಅಸ್ತ್ರಗಳನ್ನು ಕಲಿತುಕೊಂಡ ನಂತರ, ಸಮಯ ಬಂದಾಗ, ಶಕ್ರನು ಹೇಳಿದನು: “ಕೌಂತೇಯ! ಚಿತ್ರಸೇನನಿಂದ ನೃತ್ಯ ಗೀತಗಳನ್ನು ಮತ್ತು ಮರ್ತ್ಯಲೋಕದಲ್ಲಿ ತಿಳಿಯದೇ ಇದ್ದ ದೇವತೆಗಳ ವಾದ್ಯಸಂಗೀತಗಳನ್ನು ಕಲಿತುಕೋ. ಇದನ್ನು ಪಡೆದರೆ ನಿನಗೆ ಮುಂದೆ ಶ್ರೇಯಸ್ಸುಂಟಾಗುತ್ತದೆ.” ಪುರಂದರನು ಚಿತ್ರಸೇನನನ್ನು ಅವನಿಗೆ ಸಖನಾಗಿ ಕೊಟ್ಟನು ಮತ್ತು ಪಾರ್ಥನು ಅವನನ್ನು ಭೇಟಿಯಾಗಿ ನಿರಾಮಯನಾಗಿ ರಮಿಸಿದನು.

ಒಮ್ಮೆ ಮಹರ್ಷಿ ಲೋಮಶನು ತಿರುಗಾಡುತ್ತಾ ಪುರಂದರನನ್ನು ನೋಡಲೋಸುಗ ಶಕ್ರಭವನಕ್ಕೆ ಬಂದನು. ಆ ಮಹಾಮುನಿಯು ದೇವರಾಜನನ್ನು ಭೇಟಿಯಾಗಿ ನಮಸ್ಕರಿಸಲು ಅಲ್ಲಿ ವಾಸವನೊಂದಿಗೆ ಆಸನದ ಅರ್ಧಭಾಗದಲ್ಲಿ ಕುಳಿತಿದ್ದ ಪಾಂಡವನನ್ನು ಕಂಡನು. ಆಗ ಶಕ್ರನ ಅನುಜ್ಞೆಯಂತೆ ಪೂಜಿಸಲ್ಪಟ್ಟ ಆ ದ್ವಿಜಶ್ರೇಷ್ಠ ಮಹಾಋಷಿಯು ದರ್ಬಾಸನಯುಕ್ತ ಆಸನದ ಮೇಲೆ ಕುಳಿತುಕೊಂಡನು. ಇಂದ್ರಾಸನದಲ್ಲಿ ಕುಳಿತಿದ್ದ ಪಾರ್ಥನನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ವಿಚಾರವು ಬಂದಿತು: “ಕ್ಷತ್ರಿಯ ಪಾರ್ಥನು ಹೇಗೆ ಇಂದ್ರನ ಆಸನವನ್ನು ಪಡೆದನು? ಅವನ ಯಾವ ಸುಕೃತ ಕರ್ಮದಿಂದಾಗಿ ಈ ಲೋಕಗಳನ್ನು ಗೆದ್ದಿರುವನು ಮತ್ತು ಈ ದೇವನಮಸ್ಕೃತ ಸ್ಥಾನವನ್ನು ಪಡೆದಿದ್ದಾನೆ?”

ವೃತ್ರನಿಷೂದನ ಶಚೀಪತಿ ಶಕ್ರನು ಅವನ ವಿಚಾರವನ್ನು ತಿಳಿದು ಮುಗುಳ್ನಗುತ್ತಾ ಲೋಮಶನಿಗೆ ಈ ಮಾತನ್ನಾಡಿದನು: “ಬ್ರಹ್ಮರ್ಷೇ! ನಿನ್ನ ಮನಸ್ಸಿನಲ್ಲಿರುವುದಕ್ಕೆ ಉತ್ತರವನ್ನು ಕೇಳು. ಇವನು ಕ್ಷತ್ರಿಯನಿಗೆ ಹುಟ್ಟಿದ ಕೇವಲ ಮನುಷ್ಯನಲ್ಲ. ಈ ಮಹಾಭುಜನು ನನ್ನ ಪುತ್ರನಾಗಿ ಕುಂತಿಯಲ್ಲಿ ಜನಿಸಿದನು ಮತ್ತು ಕಾರಣಾಂತರದಿಂದ ಅಸ್ತ್ರಗಳನ್ನು ಪಡೆಯಲು ಇಲ್ಲಿಗೆ ಬಂದಿದ್ದಾನೆ. ಈ ಪುರಾಣ ಋಷಿಸತ್ತಮನನನ್ನು ನೀನು ತಿಳಿದಿಲ್ಲವೇ? ಹಾಗಾದರೆ ಇವನು ಯಾರು ಮತ್ತು ಇವನ ಉದ್ದೇಶವೇನು ಎನ್ನುವುದನ್ನು ನಾನು ಹೇಳುತ್ತೇನೆ. ಕೇಳು. ಪುರಾಣ ಋಷಿಸತ್ತಮರಾದ ನರ ಮತ್ತು ನಾರಾಯಣರೀರ್ವರು ಈಗ ಧನಂಜಯ ಮತ್ತು ಹೃಷೀಕೇಶರಾಗಿದ್ದಾರೆ ಎಂದು ತಿಳಿ. ಮಹಾತ್ಮರು ಮತ್ತು ಸುರರಿಗೂ ನೋಡಲು ದುರ್ಲಭವಾದ ಪುಣ್ಯ ಬದರೀ ಎಂಬ ಹೆಸರಿನಿಂದ ವಿಶ್ರುತ ಆ ಆಶ್ರಮಪದದಲ್ಲಿ ವಿಪ್ರ ವಿಷ್ಣು ಮತ್ತು ಜಿಷ್ಣು ಇಬ್ಬರೂ ವಾಸಿಸುತ್ತಿದ್ದರು. ಅಲ್ಲಿಂದಲೇ ಸಿದ್ಧಚಾರಣಸೇವಿತ ಗಂಗೆಯು ಹರಿಯುತ್ತದೆ. ನನ್ನ ನಿಯೋಗದಿಂದ ಈ ಮಹಾದ್ಯುತಿ ಮಹಾವೀರರಿಬ್ಬರೂ ಭೂಮಿಗೆ ಹೋಗಿ ಭೂಮಿಯ ಭಾರವನ್ನು ಕಡಿಮೆಮಾಡಲಿದ್ದಾರೆ. ನಿವಾತಕವಚರೆನ್ನುವ ಕೆಲವು ಅಸುರರು ವರದಾನದಿಂದ ಮೋಹಿತರಾಗಿ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಬಲದರ್ಪದಿಂದ ಕೂಡಿದ ಅವರು ಸುರರನ್ನು ಸಂಹರಿಸಲು ಯೋಚಿಸುತ್ತಿದ್ದಾರೆ. ಮತ್ತು ಕೊಟ್ಟ ವರದಿಂದಾಗಿ ಅವರು ದೇವತೆಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ದನುವಿನ ಪುತ್ರರಾದ ಆ ಮಹಾಬಲಶಾಲಿ ರೌದ್ರರು ಪಾತಾಲದಲ್ಲಿ ವಾಸಿಸುತ್ತಿದ್ದು ದೇವತೆಗಳ ಎಲ್ಲ ಸೇನೆಯೂ ಅವರೊಂದಿಗೆ ಹೋರಾಡಲು ಅಸಮರ್ಥವಾಗಿವೆ. ಭೂಮಿಗೆ ಹೋಗಿರುವ, ಮಧುನಿಷೂದನ, ಶ್ರೀಮಾನ್, ವಿಷ್ಣು, ಹಿಂದೆ ರಸಾತಲವನ್ನು ಅಗೆಯುತ್ತಿದ್ದ ಸಗರನ ಮಕ್ಕಳನ್ನು ನೋಟಮಾತ್ರದಿಂದ ಭಸ್ಮಮಾಡಿದ ಕಪಿಲನಾಮದಿಂದ ಇದ್ದ ಭಗವಾನ್ ದೇವ ಅಜಿತ ಹರಿಯು ಪಾರ್ಥನೊಂದಿಗೆ ಮಹಾಯುದ್ಧದಲ್ಲಿ ನಮ್ಮ ಈ ಮಹಾಕಾರ್ಯವನ್ನು ಮಾಡಿಕೊಡುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವರಿಗೆ ಸರಿಸಮಾನನಾದ ಇವನು ಅವರೆಲ್ಲರನ್ನೂ ಸಂಹರಿಸಬಲ್ಲ, ಮತ್ತು ರಣದಲ್ಲಿ ಅವರನ್ನು ಸಂಹರಿಸಿ ಈ ಶೂರನು ಪುನಃ ಮನುಷ್ಯರಲ್ಲಿಗೆ ಹೋಗುತ್ತಾನೆ. ನನ್ನ ನಿಯೋಗದಿಂದ ನೀನು ಮಹೀತಲಕ್ಕೆ ಹೋಗಿ ಕಾಮ್ಯಕವನದಲ್ಲಿ ವಾಸಿಸುತ್ತಿರುವ ವೀರ ಯುಧಿಷ್ಠಿರನನ್ನು ಕಾಣಬೇಕು. ಆ ಸತ್ಯಸಂಗರ ಧರ್ಮಾತ್ಮನಿಗೆ ನನ್ನ ಈ ಮಾತುಗಳನ್ನು ತಿಳಿಸಬೇಕು: “ಫಲ್ಗುನನಿಲ್ಲವೆಂದು ಬೇಸರಿಸಬೇಡ! ಅವನು ಅಸ್ತ್ರಗಳನ್ನು ಪಡೆದು ತನ್ನ ಕೆಲಸವನ್ನು ಪೂರೈಸಿ ಶೀಘ್ರದಲ್ಲಿಯೇ ಹಿಂದಿರುಗುತ್ತಾನೆ. ತನ್ನ ಬಾಹುವೀರ್ಯವನ್ನು ಶುದ್ಧಪಡಿಸಿಕೊಳ್ಳದೇ ಮತ್ತು ಅಸ್ತ್ರಗಳ ಪ್ರವೀಣತೆಯನ್ನು ಪಡೆಯದೇ ಅವನು ರಣದಲ್ಲಿ ಭೀಷ್ಮ ದ್ರೋಣಾದಿಗಳನ್ನು ಎದುರಿಸಿ ಯುದ್ಧಮಾಡಲು ಶಕ್ಯನಿಲ್ಲ. ಮಹಾಬಾಹು ಮಹಾತ್ಮ ಗುಡಾಕೇಶನು ಅಸ್ತ್ರಗಳನ್ನು ಕಲಿತುಕೊಂಡಿದ್ದಾನೆ ಮತ್ತು ದಿವ್ಯ ನೃತ್ಯ ವಾದ್ಯ ಗೀತಗಳಲ್ಲಿಯೂ ಪರಿಣತಿಯನ್ನು ಪಡೆದುಕೊಳ್ಳುತ್ತಿದ್ದಾನೆ. ಮನುಜೇಶ್ಚರ! ನೀನಾದರೂ ನಿನ್ನ ಭ್ರಾತೃಗಳೊಂದಿಗೆ ಎಲ್ಲ ವಿವಿಧ ತೀರ್ಥಗಳನ್ನೂ ಭೇಟಿಮಾಡಬೇಕು. ತೀರ್ಥಗಳಲ್ಲಿ ಸ್ನಾನಮಾಡಿ ನೀನು ಪುಣ್ಯಗಳನ್ನು ಪಡೆದು ನಿನ್ನ ಚಿಂತೆಯನ್ನೂ ಕಳೆದುಕೊಳ್ಳುವೆ. ನಿನ್ನ ಪಾಪಗಳನ್ನು ತೊಳೆದುಕೊಂಡು ರಾಜ್ಯವನ್ನು ಸುಖವಾಗಿ ಭೋಗಿಸುತ್ತೀಯೆ.” ವಿಪ್ರಾಗ್ರ್ಯ! ನೀನೂ ಕೂಡ ಮಹೀತಲದಲ್ಲಿ ತಿರುಗಾಡುತ್ತಿರುವಾಗ ಅವನನ್ನು ನಿನ್ನ ತಪೋಬಲದಿಂದ ಕಾಯಬೇಕಾಗುತ್ತದೆ. ಗಿರಿದುರ್ಗಗಳಲ್ಲಿ ಮತ್ತು ವಿಷಮ ಪ್ರದೇಶಗಳಲ್ಲಿ ಸದಾ ರೌದ್ರ ರಾಕ್ಷಸರು ವಾಸಿಸುತ್ತಿರುತ್ತಾರೆ, ನೀನು ಸದಾ ಅವರನ್ನು ಅವರಿಂದ ರಕ್ಷಿಸಬೇಕು.”

ಹಾಗೆಯೇ ಆಗಲೆಂದು ವಚನವನ್ನಿತ್ತು ಸುಮಹಾತಪ ಲೋಮಶನು ಮಹೀತಲವನ್ನು ಸೇರಿ ಕಾಮ್ಯಕ ವನಕ್ಕೆ ಬಂದು ಅಲ್ಲಿ ತಾಪಸರಿಂದಲೂ ಭ್ರಾತೃಗಳಿಂದಲೂ ಎಲ್ಲಕಡೆಯಿಂದಲೂ ಸುತ್ತುವರೆಯಲ್ಪಟ್ಟ ಅರಿಂದಮ ಕೌಂತೇಯ ಧರ್ಮರಾಜನನ್ನು ಕಂಡನು.

Leave a Reply

Your email address will not be published. Required fields are marked *