ಕಾಮ್ಯಕ ವನಕ್ಕೆ ಶ್ರೀಕೃಷ್ಣನ ಆಗಮನ

ಪಾಂಡವರು ಸೋತು ದುಃಖಸಂತಪ್ತರಾಗಿದ್ದಾರೆ ಎಂದು ಕೇಳಿ ಭೋಜರು ವೃಷ್ಣಿ ಮತ್ತು ಅಂಧಕರೊಡಗೂಡಿ ಆ ಮಹಾವನಕ್ಕೆ ಬಂದರು. ಪಾಂಚಾಲನ ದಾಯಾದಿಗಳೂ, ಚೇದಿರಾಜ ಧೃಷ್ಟಕೇತು, ಮತ್ತು ಲೋಕವಿಶೃತ ಮಹಾವೀರ ಕೇಕಯ ಸಹೋದರರು ಕ್ರೋಧ ಮತ್ತು ಸಂತಾಪಗೊಂಡವರಾಗಿ ವನದಲ್ಲಿ ಪಾರ್ಥರಲ್ಲಿಗೆ ಬಂದರು. ಧಾರ್ತರಾಷ್ಟ್ರರನ್ನು ಝರಿದು “ಈಗ ಏನು ಮಾಡೋಣ?” ಎಂದು ಆ ಎಲ್ಲ ಕ್ಷತ್ರಿಯರ್ಷಭರೂ ವಾಸುದೇವನ ನಾಯಕತ್ವದಲ್ಲಿ ಧರ್ಮರಾಜ ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು.

ವಾಸುದೇವನು ಹೇಳಿದನು:

“ಈ ಭೂಮಿಯು ದುರ್ಯೋಧನ, ಕರ್ಣ, ಶಕುನಿ ಮತ್ತು ದುರಾತ್ಮ ದುಃಶಾಸನ ಈ ನಾಲ್ವರ ರಕ್ತವನ್ನು ಕುಡಿಯುತ್ತದೆ! ಅನಂತರ ನಾವೆಲ್ಲರೂ ಧರ್ಮರಾಜ ಯುಧಿಷ್ಠಿರನನ್ನು ಅಭಿಷೇಕಿಸೋಣ! ಮೋಸಮಾಡುವವರನ್ನು ಕೊಲ್ಲಬೇಕು ಎನ್ನುವುದೇ ಸನಾತನ ಧರ್ಮ!”

ಪಾರ್ಥರ ಪಕ್ಷಪಾತಿ ಜನಾರ್ದನನು ಈ ರೀತಿ ಪ್ರಜೆಗಳನ್ನೆಲ್ಲಾ ಸುಟ್ಟುಹಾಕುವನೋ ಎಂಬಂತೆ ಕೃದ್ಧನಾಗಲು ಅರ್ಜುನನು ಅವನನ್ನು ಶಾಂತಗೊಳಿಸಿದನು. ಸಂಕೃದ್ಧ ಕೇಶವನನ್ನು ಕಂಡು ಧೀಮತ ಫಲ್ಗುನನು ಆ ಸತ್ಯಕೀರ್ತಿ, ಪುರುಷ, ಅಪ್ರಮೇಯ, ಸತ್ಯ, ಅಮಿತ ತೇಜಸ, ಪ್ರಜಾಪತಿಗಳ ಪತಿ, ಲೋಕನಾಥ, ವಿಷ್ಣು ಮಹಾತ್ಮನು ತನ್ನ ಪೂರ್ವ ದೇಹಗಳಲ್ಲಿ ಮಾಡಿದ ಕರ್ಮಗಳನ್ನು ಹೊಗಳತೊಡಗಿದನು:

“ಕೃಷ್ಣ! ಹಿಂದೆ ನೀನು ಮುನಿಯಾಗಿ ಹತ್ತು ಸಾವಿರ ವರ್ಷಗಳು ಎಲ್ಲೆಲ್ಲಿ ಸಾಯಂಕಾಲವಾಯಿತೋ ಅಲ್ಲಿಯೇ ಉಳಿದುಕೊಳ್ಳುತ್ತಾ ಗಂಧಮಾದನ ಪರ್ವತದಲ್ಲಿ ತಿರುಗಾಡುತ್ತಿದ್ದೆ. ಹಿಂದೆ ಹನ್ನೊಂದು ಸಾವಿರ ವರ್ಷಗಳು ನೀನು ಪುಷ್ಕರದಲ್ಲಿ ಕೇವಲ ನೀರನ್ನು ಸೇವಿಸುತ್ತಾ ವಾಸಿಸಿದೆ. ಮಧುಸೂದನ! ನೂರು ವರ್ಷಗಳು ನೀನು ವಿಶಾಲ ಬದರಿಯಲ್ಲಿ ಕೇವಲ ಗಾಳಿಯನ್ನು ಸೇವಿಸುತ್ತಾ ಬಾಹುಗಳನ್ನು ಮೇಲೆತ್ತಿ, ಒಂದೇ ಕಾಲಿನಮೇಲೆ ನಿಂತಿದ್ದೆ. ಸರಸ್ವತೀ ತೀರದಲ್ಲಿ ಹನ್ನೆರಡು ವರ್ಷಗಳ ಸತ್ರದಲ್ಲಿ ನೀನು ನಿನ್ನ ಉತ್ತರೀಯವನ್ನು ತೆಗೆದುಹಾಕಿ ಕೇವಲ ರಕ್ತನಾಳಗಳೇ ಕಾಣಿಸುವಷ್ಟು ಕೃಶನಾಗಿ ವಾಸಮಾಡುತ್ತಿದ್ದೆ. ಪುಣ್ಯಜನರಿಗೆ ಸರಿಯಾದ ಪ್ರಭಾಸ ತೀರ್ಥವನ್ನು ಸೇರಿ ಅಲ್ಲಿ ಮಹಾತೇಜಸ್ಸಿನಿಂದ ದಿವ್ಯ ಸಹಸ್ರ ವರ್ಷಗಳು ಒಂದೇ ಕಾಲಿನ ಮೇಲೆ ನಿಯಮದಿಂದ ನಿಂತು ತಪಸ್ಸನ್ನು ಮಾಡಿದ್ದೆ. ಕೇಶವ! ನೀನು ಕ್ಷೇತ್ರಜ್ಞ. ಸರ್ವಭೂತಗಳ ಆದಿ ಮತ್ತು ಅಂತ್ಯ. ತಪಸ್ಸಿನ ಖಜಾನೆ. ನೀನು ಯಜ್ಞ ಮತ್ತು ಸನಾತನ. ಭೂಮಿಯ ಮಗ ನರಕನನ್ನು ಕೊಂದು ಮಣಿಕುಂಡಲಗಳನ್ನು ತೆಗೆದುಕೊಂಡು ನಿನ್ನ ಸೃಷ್ಟಿಗೆ ಅದಿಭೂತ ಅಶ್ವಮೇಧಯೋಗ್ಯ ಕುದುರೆಯನ್ನು ಸೃಷ್ಟಿಸಿದೆ. ಲೋಕಗಳ ವೃಷಭ! ಸರ್ವಲೋಕಜಿತ್! ಇದನ್ನು ಮಾಡಿ ಅಲ್ಲಿ ನೆರೆದಿದ್ದ ಸರ್ವ ದೈತ್ಯದಾನವರನ್ನೂ ಸಂಹರಿಸಿದೆ. ಅನಂತರ ಶಚೀಪತಿಗೆ ಸರ್ವೇಶ್ವರತ್ವವನ್ನು ಒಪ್ಪಿಸಿ ನೀನು ಮನುಷ್ಯರೂಪವನ್ನು ತಾಳಿದೆ. ನೀನು ನಾರಾಯಣ, ಹರಿ, ಬ್ರಹ್ಮ, ಸೋಮ, ಸೂರ್ಯ, ಧರ್ಮ, ಧಾತ, ಯಮ, ಅನಲ, ವಾಯು, ವೈಶ್ರವಣ, ರುದ್ರ, ಕಾಲ, ಆಕಾಶ, ಪೃಥ್ವಿ, ದಿಕ್ಕುಗಳು, ಚರಾಚರರಿಗೆ ಹುಟ್ಟದೇ ಇರುವ ಗುರು, ಸೃಷ್ಟಕರ್ತ, ಮತ್ತು ಪುರುಷೋತ್ತಮ. ದೇವ! ಭೂರಿತೇಜಸ! ಚೈತ್ರರಥ ವನದಲ್ಲಿ ನೀನು ತುರಾಯಣವೇ ಮೊದಲಾದ ಕ್ರತುಗಳನ್ನು ಭೂರಿದಕ್ಷಿಣೆಗಳಿಂದ ಯಾಜಿಸಿದೆ. ಜನಾರ್ದನ! ನೂರರ ಒಂದೊಂದು ಯಜ್ಞದಲ್ಲಿಯೂ ಪ್ರತ್ಯೇಕವಾಗಿ ನೂರು ಸಾವಿರ ಸುವರ್ಣಗಳನ್ನು ಇತ್ತು ಪೂರ್ಣಗೊಳಿಸಿದೆ. ಯಾದವನಂದನ! ಅದಿತಿಯ ಪುತ್ರತ್ವವನ್ನು ಪಡೆದು ನೀನು ಇಂದ್ರನ ತಮ್ಮ ವಿಷ್ಣುವೆಂದು ವಿಶ್ವದಲ್ಲಿ ವಿಖ್ಯಾತನಾದೆ. ಶಿಶುವಾಗಿ ನಿನ್ನ ತೇಜಸ್ಸಿನಿಂದ ಸ್ವರ್ಗ, ಆಕಾಶ ಮತ್ತು ಭೂಮಿಯನ್ನು ಮೂರು ಹೆಜ್ಜೆಗಳಲ್ಲಿ ಅಳೆದೆ. ಭೂತಾತ್ಮನ್! ಸೂರ್ಯನ ರಥದಲ್ಲಿ ಕುಳಿತುಕೊಂಡು ದ್ಯುಲೋಕ ಮತ್ತು ಆಕಾಶಲೋಕಗಳನ್ನು ಆವರಿಸಿ, ನಿನ್ನ ತೇಜೋವಿಶೇಷದಿಂದ ಸೂರ್ಯನ ತೇಜಸ್ಸನ್ನೂ ಮೀರಿಸಿದೆ. ಮೌರವರನ್ನೂ ಪಾಶರನ್ನೂ ಸದೆಬಡಿದು, ನಿಸುಂದ ನರಕರೀರ್ವರನ್ನೂ ಸಂಹರಿಸಿ ನೀನು ಪುನಃ ಪ್ರಾಗ್ಜ್ಯೋತಿಷ ಪುರದ ದಾರಿಯನ್ನು ಕ್ಷೇಮಕರವನ್ನಾಗಿ ಮಾಡಿದೆ. ಜಾರುಥಿಯಲ್ಲಿ ಆಹುತಿಯನ್ನು, ಕ್ರಾಥ, ಜನರ ಸಹಿತ ಶಿಶುಪಾಲನನ್ನು, ಭೀಮಸೇನನನ್ನು, ಶೈಭ್ಯ ಮತ್ತು ಶತಧನ್ವನನ್ನು ಸೋಲಿಸಿದೆ. ಕಪ್ಪುಮೋಡಗಳಂತೆ ಘರ್ಜಿಸುತ್ತಿರುವ ಆದಿತ್ಯವರ್ಚಸ ರಥದಿಂದ ರಣದಲ್ಲಿ ರುಕ್ಮಿಯನ್ನು ಸೋಲಿಸಿ ಭೋಜರ ರಾಣಿಯನ್ನು ಅಪಹರಿಸಿದೆ. ಕೋಪದಲ್ಲಿ ಇಂದ್ರಧ್ಯುಮ್ನ ಮತ್ತು ಯವನ ಕಶೇರುಮರು ಹತರಾದರು. ಸೌಭಪತಿ ಶಾಲ್ವನನ್ನು ನೀನು ಸಂಹರಿಸಿದೆ ಮತ್ತು ಸೌಭವನ್ನು ಹೊಡೆದುರುಳಿಸಿದೆ. ಐರಾವತೀ ತೀರದಲ್ಲಿ ಯುದ್ಧದಲ್ಲಿ ನೀನು ಕಾರ್ತವೀರ್ಯಸಮನಾದ ಭೋಜನನ್ನು ಮತ್ತು ಗೋಪತಿ-ತಾಲಕೇತುರೀರ್ವರನ್ನು ಸಂಹರಿಸಿದೆ. ಜನಾರ್ದನ! ಋಷಿಗಳ ವಾಸಕ್ಕೂ ಯೋಗ್ಯವಾದ, ಸಕಲೈಶ್ವರ್ಯಭರಿತ, ದ್ವಾರಕೆಯನ್ನು ನಿನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಇದನ್ನು ಸಮುದ್ರದಲ್ಲಿ ಮುಳುಗಿಸುವೆ. ದಾಶಾರ್ಹ! ನಿನ್ನಲ್ಲಿ ಕ್ರೋಧವಿಲ್ಲ, ಮಾತ್ಸರ್ಯವಿಲ್ಲ, ಸುಳ್ಳಿಲ್ಲ, ಕ್ರೂರತೆಯಿಲ್ಲ, ಮತ್ತು ಅಪ್ರಮಾಣಿಕತೆ ಸ್ವಲ್ಪವೂ ಇಲ್ಲ. ಅಚ್ಯುತ! ನಿನ್ನದೇ ತೇಜಸ್ಸಿನಿಂದ ಬೆಳಗುತ್ತಾ ನೀನು ಅವರ ಚಿತ್ತಮಧ್ಯದಲ್ಲಿ ಕುಳಿತಿರುವಾಗ ಸರ್ವ ಋಷಿಗಳೂ ನಿನ್ನಲ್ಲಿಗೆ ಬಂದು ಅಭಯವನ್ನು ಯಾಚಿಸಿದರು. ಯುಗಾಂತದಲ್ಲಿ ನೀನು ಇರುವವೆಲ್ಲವನ್ನೂ ಕುಗ್ಗಿಸಿ ಜಗತ್ತನ್ನೇ ನಿನ್ನಲ್ಲಿ ನೀನಾಗಿ ಮಾಡಿಕೊಂಡಿರುತ್ತೀಯೆ. ದೇವ! ಮಹಾದ್ಯುತಿ! ನೀನು ಬಾಲಕನಾಗಿರುವಾಗಲೇ ಮಾಡಿದ ಕೃತ್ಯಗಳನ್ನು ಹಿಂದಿನ ಅಥವಾ ಮುಂದೆ ನಡೆಯುವ ಕೃತ್ಯಗಳ್ಯಾವುವೂ ಮೀರಿಸಲಾರವು. ಪುಂಡರೀಕಾಕ್ಷ! ಬಲದೇವನ ಸಹಾಯದಿಂದ ನೀನು ಈ ಕೆಲಸಗಳನ್ನು ಮಾಡಿ ವೈರಾಜಭವನದಲ್ಲಿ ಬ್ರಾಹ್ಮಣರ ಜೊತೆ ವಾಸಮಾಡಿದ್ದೆ.”

ಕೃಷ್ಣನ ಆತ್ಮವೇ ಆಗಿದ್ದ ಪಾಂಡವನು ತನ್ನಲ್ಲಿಯೇ ಈ ರೀತಿ ಹೇಳಿಕೊಳ್ಳಲು ಜನಾರ್ದನನು ಸಂತುಷ್ಟನಾಗಿ ಪಾರ್ಥನಿಗೆ ಹೇಳಿದನು:

“ನೀನು ನನ್ನವನು ಮತ್ತು ಹಾಗೆಯೇ ನಾನೂ ನಿನ್ನವನು. ನನ್ನವರೂ ನಿನ್ನವರೇ. ನಿನ್ನನ್ನು ದ್ವೇಶಿಸುವವರು ನನ್ನನ್ನೂ ದ್ವೇಶಿಸುತ್ತಾರೆ ಮತ್ತು ನಿನ್ನನ್ನು ಅನುಸರಿಸುವವರು ನನ್ನನ್ನೂ ಅನುಸರಿಸುತ್ತಾರೆ. ನೀನು ನರ ಮತ್ತು ನಾನೇ ಹರಿ ನಾರಾಯಣ. ನರ-ನಾರಯಣ ಋಷಿಗಳು ತಮ್ಮ ಲೋಕದಿಂದ ಈ ಲೋಕಕ್ಕೆ ಬಂದಿದ್ದಾರೆ. ಪಾರ್ಥ! ನೀನು ನನಗಿಂಥ ಬೇರೆಯವನಲ್ಲ ಮತ್ತು ನಾನು ನಿನಗಿಂತ ಬೇರೆಯವನಲ್ಲ. ನಮ್ಮಿಬ್ಬರಲ್ಲಿ ವ್ಯತ್ಯಾಸವಿರಲು ಸಾಧ್ಯವೇ ಇಲ್ಲ.”

ಆ ಸಂಬಂಧಿಕ ಮತ್ತು ರಾಜ ವೀರರ ಸಮಾವೇಶದಲ್ಲಿ, ಧೃಷ್ಟಧ್ಯುಮ್ನ ಮೊದಲಾದ ಭ್ರಾತೃಗಳಿಂದ ಸುತ್ತುವರೆಯಲ್ಪಟ್ಟ ಪಾಂಚಾಲಿ ಕೃಷ್ಣೆಯು ಯಾದವರೊಂದಿಗೆ ಕುಳಿತಿದ್ದ ಶರಣ್ಯರ ಶರಣು ಪುಂಡರೀಕಾಕ್ಷನ ಬಳಿಹೋಗಿ ಹೇಳಿದಳು:

“ಪ್ರಜೆಗಳ ಸೃಷ್ಟಿಯ ಮೊದಲು ನೀನೇ ಓರ್ವ ಪ್ರಜಾಪತಿಯಾಗಿದ್ದೆ, ಮತ್ತು ಸರ್ವಭೂತಗಳ ಸೃಷ್ಟಾರನು ನೀನಾಗಿದ್ದೆ ಎಂದು ಅಸಿತ-ದೇವಲರು ಹೇಳುತ್ತಾರೆ. ನೀನು ವಿಷ್ಣು. ಮಧುಸೂದನ! ಯಾಗಮಾಡುವವನೂ ನೀನೇ ಮತ್ತು ಯಜ್ಞವನ್ನು ಮಾಡುವುದೂ ನಿನಗೇ ಎಂದು  ಜಾಮದಗ್ನಿಯು ಹೇಳುತ್ತಾನೆ. ಪುರುಷೋತ್ತಮ! ನೀನು ಕ್ಷಮೆ ಮತ್ತು ಸತ್ಯವೆಂದು ಋಷಿಗಳು ಹೇಳುತ್ತಾರೆ. ಕಶ್ಯಪನು ಹೇಳಿದಂತೆ ಸತ್ಯದಿಂದ ಹುಟ್ಟಿದ ಯಜ್ಞ. ಲೋಕಭಾವನ ಲೋಕೇಶ! ನಾರದನು ಹೇಳುವಂತೆ ನೀನು ದೇವತೆ, ಸಾಧ್ಯರು ಮತ್ತು ವಸುಗಳ ಒಡೆಯನ ಒಡೆಯ. ವಿಭೋ! ನಿನ್ನ ಶಿರದಿಂದ ಸ್ವರ್ಗವನ್ನು ಮುಟ್ಟಿ ಪಾದದಿಂದ ಭೂಮಿಯನ್ನು ವ್ಯಾಪಿಸಿರುವೆ. ನಿನ್ನ ಜಠರದಲ್ಲಿ ಈ ಲೋಕಗಳಿವೆ. ನೀನು ಸನಾತನ ಪುರುಷ. ವಿಧ್ಯಾತಪಸ್ಸಿನಿಂದ ಪರಿತಪ್ತರಾಗಿ ತಪಸ್ಸಿನಿಂದ ತಮ್ಮ ಆತ್ಮವನ್ನು ಕಂಡುಕೊಂಡ ಆತ್ಮದರ್ಶನ ಸಿದ್ಧಿಯನ್ನು ಪಡೆದ ಋಷಿಗಳಿಗೂ ಋಷಿಸತ್ತಮನು ನೀನು. ರಣರಂಗದಿಂದ ಹಿಂದೆಸರಿಯದೇ ಇದ್ದ ಪುಣ್ಯಕಾರ್ಯಗಳನ್ನು ಮಾಡಿದ, ಸರ್ವಧರ್ಮಗಳಿಂದಲೂ ನಡೆದುಕೊಂಡು ಬಂದ ರಾಜರ್ಷಿಗಳಿಗೂ ನೀನೇ ಗುರಿ. ನೀನು ಪ್ರಭು. ನೀನು ವಿಭು. ನೀನು ಭೂಮಿ. ನೀನು ಆತ್ಮ. ನೀನು ಸನಾತನ. ಲೋಕಪಾಲಕರು, ಲೋಕಗಳು, ನಕ್ಷತ್ರಗಳು, ಹತ್ತು ದಿಕ್ಕುಗಳು, ಆಕಾಶ, ಚಂದ್ರ, ಸೂರ್ಯ ಎಲ್ಲವೂ ನಿನ್ನಲ್ಲಿಯೇ ಇವೆ. ಇರುವವುಗಳ ಮೃತ್ಯು ಮತ್ತು ದಿವೌಕಸರ ಅಮರತ್ವ ಮತ್ತು ಸರ್ವ ಲೋಕಕಾರ್ಯಗಳೂ ನಿನ್ನನ್ನೇ ಆಧರಿಸಿವೆ. ದಿವ್ಯ ಮತ್ತು ಮಾನುಷ ಸರ್ವ ಭೂತಗಳ ಈಶ್ವರನಾದ ನಿನ್ನಲ್ಲಿ ನಿನ್ನ ಮೇಲಿನ ಪ್ರೀತಿಯಿಂದ ನಾನು ನನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದೇನೆ. ಕೃಷ್ಣ! ಪಾರ್ಥರ ಭಾರ್ಯೆ, ನಿನ್ನ ಸಖೀ, ಮತ್ತು ಧೃಷ್ಟಧ್ಯುಮ್ನನ ತಂಗಿ ನನ್ನಂಥವಳು ಹೇಗೆ ತಾನೇ ಸಭೆಗೆ ಎಳೆದೊಯ್ಯಲ್ಪಟ್ಟಳು? ಸ್ತ್ರೀಧರ್ಮಕ್ಕೊಳಗಾಗಿ ರಕ್ತದ ಕಲೆಹೊಂದಿದ ಒಂದೇ ಒಂದು ವಸ್ತ್ರದಲ್ಲಿದ್ದು ದುಃಖಿತಳಾಗಿ ನಡುಗುತ್ತಿದ್ದ ನನ್ನನ್ನು ಕುರುಸಂಸದಿಯಲ್ಲಿ ಎಳೆದು ತರಲಾಯಿತು. ರಜಸ್ವಲೆಯಾಗಿದ್ದ ನನ್ನನ್ನು ನೋಡಿ ಸಭೆಯಲ್ಲಿ ರಾಜರ ಮಧ್ಯೆ ಪಾಪಚೇತಸ ಧಾರ್ತರಾಷ್ಟ್ರರು ಗಹಗಹಿಸಿ ನಕ್ಕರು. ಪಾಂಡುಪುತ್ರರು, ಪಾಂಚಾಲರು ಮತ್ತು ವೃಷ್ಣಿಗಳು ಜೀವಂತವಿರುವಾಗಲೇ ಅವರು ನನ್ನನ್ನು ದಾಸಿಯಂತೆ ಭೋಗಿಸಲು ಬಯಸಿದರು. ಧರ್ಮದಂತೆ ನಾನು ಭೀಷ್ಮ ಮತ್ತು ಧೃತರಾಷ್ಟ್ರ ಇವರಿಬ್ಬರದ್ದೂ ಸೊಸೆಯಲ್ಲವೇ? ಹಾಗಿದ್ದರೂ ಬಲಾತ್ಕಾರವಾಗಿ ನನ್ನನ್ನು ದಾಸಿಯನ್ನಾಗಿ ಮಾಡಿದರು. ತಮ್ಮ ಯಶಸ್ವಿನೀ ಧರ್ಮಪತ್ನಿಯು ಈ ರೀತಿ ಕಷ್ಟಕ್ಕೊಳಪಟ್ಟಿರುವುದನ್ನು ನೋಡಿಕೊಂಡಿದ್ದ, ಯುದ್ಧದಲ್ಲಿ ಶ್ರೇಷ್ಠ ಮಹಾಬಲಶಾಲಿ ಈ ಪಾಂಡವರನ್ನು ನಾನು ಧಿಕ್ಕರಿಸುತ್ತೇನೆ. ಭೀಮಸೇನನ ಬಲಕ್ಕೆ ಧಿಕ್ಕಾರ! ಪಾರ್ಥನ ಧನುರ್ವಿಧ್ಯೆಗೆ ಧಿಕ್ಕಾರ! ಆ ಪಾಪಿಯು ನನ್ನನ್ನು ಎಳೆದಾಡುತ್ತಿದ್ದಾಗ ಇವರಿಬ್ಬರೂ ಸುಮ್ಮನಿದ್ದರು. ಅಲ್ಪಬಲರಾಗಿದ್ದರೂ ಕೂಡ ಗಂಡಂದಿರು ಹೆಂಡತಿಯನ್ನು ರಕ್ಷಿಸಬೇಕು ಎನ್ನುವುದು ಸದಾ ಸತ್ಯವಂತರು ಆಚರಿಸುವ ಶಾಶ್ವತ ಧರ್ಮಮಾರ್ಗವಲ್ಲವೇ? ಹೆಂಡತಿಯನ್ನು ರಕ್ಷಿಸುವುದರಿಂದ ಮಕ್ಕಳು ರಕ್ಷಿತರಾಗುತ್ತಾರೆ. ಮಕ್ಕಳ ರಕ್ಷಣೆಯಿಂದ ಆತ್ಮವೇ ರಕ್ಷಿತಗೊಳ್ಳುತ್ತದೆ. ಅವಳಿಂದ ತಾನೇ ಹುಟ್ಟುವುದರಿಂದ ಅವಳನ್ನು ಜಾಯಾ ಎಂದು ಕರೆಯುತ್ತಾರೆ. ಹೆಂಡತಿಯಿಂದ ರಕ್ಷಿಸಲ್ಪಟ್ಟ ಗಂಡಂದಿರು ನನ್ನ ಹೊಟ್ಟೆಯಲ್ಲಿ ಹೇಗೆ ಹುಟ್ಟುತ್ತಾರೆ? ಶರಣು ಬಂದವರನ್ನು ಇವರು ಎಂದಾದರೂ ರಕ್ಷಿಸದೇ ಬಿಟ್ಟಿದ್ದಾರೆಯೇ? ನಾನು ಅವರ ಶರಣು ಹೋದಾಗ ಈ ಪಾಂಡವರು ನನ್ನನ್ನು ರಕ್ಷಿಸಿದರೇ? ಈ ಐವರಿಂದ ನನ್ನಲ್ಲಿ ಹುಟ್ಟಿದ ಐವರು ಅಮಿತೌಜಸ ಕುಮಾರರ ನೆಪದಲ್ಲಿಯಾದರೂ ಇವರು ನನಗೆ ನೆರವಾಗಬೇಕಿತ್ತು! ಯುಧಿಷ್ಠಿರನಿಂದ ಪ್ರತಿವಿಂಧ್ಯ, ವೃಕೋದರನಿಂದ ಸುತಸೋಮ, ಅರ್ಜುನನಿಂದ ಶ್ರುತಕೀರ್ತಿ, ನಕುಲನಿಂದ ಶತಾನೀಕ, ಮತ್ತು ಕಿರಿಯವನಿಂದ ಶೃತಕರ್ಮ – ಇವರೆಲ್ಲರೂ ಸತ್ಯಪರಾಕ್ರಮಿಗಳು. ಪ್ರದ್ಯುಮ್ನನಂತೆ ಮಹಾರಥಿಗಳು. ಇವರು ಧನ್ವಿಗಳಲ್ಲಿ ಶ್ರೇಷ್ಠರೂ ಯುದ್ಧದಲ್ಲಿ ಶತ್ರುಗಳಿಂದ ಅಜೇಯರೂ ಆಗಿಲ್ಲವೇ? ಹಾಗಿದ್ದರೂ ಇವರು ದುರ್ಬಲರಂತೆ ಏಕೆ ಧಾರ್ತರಾಷ್ಟ್ರರನ್ನು ಸಹಿಸಿಕೊಂಡರು? ಅವರು ಅಧರ್ಮದಿಂದ ರಾಜ್ಯವನ್ನು ಅಪಹರಿಸಿ ಸರ್ವರನ್ನೂ ದಾಸರನ್ನಾಗಿ ಮಾಡಿದರು ಮತ್ತು ರಜಸ್ವಲೆಯಾಗಿ ಒಂದೇ ಒಂದು ವಸ್ತ್ರದಲ್ಲಿದ್ದ ನನ್ನನ್ನು ಸಭೆಗೆ ಎಳೆದು ತಂದರು. ಅರ್ಜುನ, ಭೀಮ ಅಥವಾ ಮಧುಸೂದನ ನಿನ್ನನ್ನು ಬಿಟ್ಟು ಬೇರೆ ಯಾರೂ ಬಿಗಿದಿದ್ದ ಗಾಂಡೀವವನ್ನು ಉಪಯೋಗಿಸಲು ಶಕ್ಯರಿಲ್ಲ. ದುರ್ಯೋಧನನು ಇನ್ನೊಂದು ಕ್ಷಣವೂ ಜೀವಿಸಿರುತ್ತಾನೆಂದರೆ ಭೀಮಸೇನನ ಬಲಕ್ಕೆ ಧಿಕ್ಕಾರ! ಅರ್ಜುನನ ಗಾಂಡೀವಕ್ಕೆ ಧಿಕ್ಕಾರ! ಮಧುಸೂದನ! ಹಿಂದೆ ಇವನೇ, ಇವರು ವ್ರತನಿರತ ಬಾಲಕರಾಗಿದ್ದ ಏನು ತಪ್ಪನ್ನೂ ಮಾಡದೇ ಇದ್ದಿದ್ದರೂ ತಾಯಿಯೊಂದಿಗೆ ರಾಜ್ಯದಿಂದ ಹೊರಗೆ ಹಾಕಿದನು. ಆ ಪಾಪಿಯು ಭೀಮಸೇನನ ಭೋಜನದಲ್ಲಿ, ಆಗತಾನೇ ಸಂಗ್ರಹಿಸಿದ, ಮೈನವಿರೇಳಿಸುವ, ಮೂರ್ಛೆಗೊಳಿಸುವ, ತೀಕ್ಷ್ಣ ಕಾಲಕೂಟ ವಿಷವನ್ನು ಬೆರೆಸಿದ್ದನು. ಇನ್ನೂ ಸಮಯ ಬಂದಿರದೇ ಇದ್ದ ಭೀಮನು ಆ ವಿಷವನ್ನು ತನ್ನ ಆಹಾರದೊಂದಿಗೇ ಜೀರ್ಣಿಸಿಕೊಂಡನು. ಪ್ರಮಾಣಕೋಟಿಯಲ್ಲಿ ವಿಶ್ವಾಸದಿಂದ ನಿದ್ದೆಮಾಡುತ್ತಿದ್ದ ವೃಕೋದರನನ್ನು ಕಟ್ಟಿ ಗಂಗೆಯಲ್ಲಿ ಒಗೆದು ಹೊರಟು ಹೋದನು. ಎಚ್ಚೆತ್ತಾಗ ಮಹಾಬಾಹು ಮಹಾಬಲಿ ಕೌಂತೇಯ ಬೀಮಸೇನನು ಕಟ್ಟುಗಳನ್ನು ಹರಿದೆಸೆದು ಮೇಲಕ್ಕೆದ್ದನು. ಇವನು ಮಲಗಿದ್ದಾಗ ತೀಕ್ಷ್ಣ ವಿಷಭರಿತ ಕೃಷ್ಣಸರ್ಪಗಳಿಂದ ಇವನ ಎಲ್ಲ ಅಂಗಾಗ ಪ್ರದೇಶಗಳಲ್ಲಿ ಕಚ್ಚಿಸಲಾಗಿತ್ತು. ಆದರೂ ಈ ಶತ್ರುಹನು ಸಾಯಲಿಲ್ಲ! ಎಚ್ಚೆತ್ತಾಗ ಕೌಂತೇಯನು ಎಲ್ಲ ಸರ್ಪಗಳನ್ನೂ ಜಜ್ಜಿ ಕೊಂದು ತನ್ನ ಎಡಗೈಯಿಂದ ಸಾರಥಿಗೂ ಪೆಟ್ಟನ್ನು ಕೊಟ್ಟಿದ್ದನು. ಇನ್ನೊಮ್ಮೆ ವಾರಣಾವತದಲ್ಲಿ ಆರ್ಯೆಯ ಜೊತೆ ಈ ಬಾಲಕರು ಮಲಗಿದ್ದಾಗ ಇವರನ್ನು ಸುಟ್ಟುಹಾಕಲು ಪ್ರಯತ್ನಿಸಿದನು. ಇಂಥಹುದನ್ನು ಯಾರು ತಾನೇ ಮಾಡಿಯಾರು? ಬೆಂಕಿಯಿಂದ ಸುತ್ತುವರೆಯಲ್ಪಟ್ಟ ಅವಳು ತುಂಬಾ ಚಿಂತೆಗೊಳಗಾಗಿ ಆ ಆರ್ಯೆಯು ಭೀತಿಯಿಂದ ಅಳುತ್ತಾ ಪಾಂಡವರಿಗೆ ಕೂಗಿ ಹೇಳಿದಳು: “ಹಾ! ಹಾ! ಇಂದು ಈ ಬೆಂಕಿಯಿಂದ ಹೇಗೆ ಬಿಡುಗಡೆಯನ್ನು ಹೊಂದುತ್ತೇನೆ? ಅನಾಥಳಾದ ನಾನು ನನ್ನ ಬಾಲಕ ಪುತ್ರರೊಂದಿಗೆ ನಾಶಹೊಂದುತ್ತೇನೆ!” ಆಗ ವಾಯುವೇಗ ಪರಾಕ್ರಮಿ ಮಹಾಬಾಹು ವೃಕೋದರ ಭೀಮನು ಆರ್ಯೆ ಮತ್ತು ಸಹೋದರರಿಗೆ ಆಶ್ವಾಸನೆಯನ್ನಿತ್ತನು. “ರೆಕ್ಕೆವುಳ್ಳವುಗಳಲ್ಲೆಲ್ಲಾ ಶ್ರೇಷ್ಠ ವೈನತೇಯ ಪಕ್ಷಿ ಗರುಡನು ಹೇಗೋ ಹಾಗೆ ಹಾರುತ್ತೇನೆ ಮತ್ತು ಭಯದಿಂದ ಬಿಡುಗಡೆ ಹೊಂದುತ್ತೀರಿ.” ತಕ್ಷಣವೇ ಆ ವೀರ್ಯವಂತನು ಆರ್ಯೆಯನ್ನು ಎಡ ಸೊಂಟದ ಮೇಲೆ, ರಾಜನನ್ನು ಬಲಸೊಂಟದ ಮೇಲೆ, ಅವಳಿಗಳನ್ನು ಭುಜಗಳ ಮೇಲೆ ಮತ್ತು ಬೀಭತ್ಸುವನ್ನು ಬೆನ್ನಮೇಲೆ ಕೂರಿಸಿಕೊಂಡು, ಎಲ್ಲರನ್ನೂ ಎತ್ತಿಕೊಂಡು ಶಕ್ತಿಯಿಂದ ಮೇಲೆ ಹಾರಿ ಆರ್ಯೆ ಮತ್ತು ಸಹೋದರರನ್ನು ಬೆಂಕಿಯಿಂದ ತಪ್ಪಿಸಿದನು. ತಾಯಿಯೊಂದಿಗೆ ಆ ಯಶಸ್ವಿಗಳೆಲ್ಲರೂ ರಾತ್ರಿಯಲ್ಲಿ ಹೊರಟು ಹಿಡಿಂಬವನದ ಸಮೀಪದ ಮಹಾರಣ್ಯವನ್ನು ತಲುಪಿದರು. ಆಯಾಸಗೊಂಡ ಮತ್ತು ತುಂಬಾ ದುಃಖಿತರಾದ ಅವರು ತಾಯಿಯೊಂದಿಗೆ ಅಲ್ಲಿಯೇ ಮಲಗಿಕೊಂಡರು. ಅವರು ಮಲಗಿದ್ದಾಗ ಅಲ್ಲಿಗೆ ಹಿಡಿಂಬಾ ಎಂಬ ಹೆಸರಿನ ರಾಕ್ಷಸಿಯು ಬಂದಳು. ಆ ಕಲ್ಯಾಣಿಯು ಭೀಮನ ಪಾದಗಳನ್ನು ತನ್ನ ತೊಡೆಯಮೇಲೆ ಗಟ್ಟಿಯಾಗಿರಿಸಿ ಸಂತೋಷದಿಂದ ತನ್ನ ಮೃದು ಕೈಗಳಿಂದ ಒತ್ತುತ್ತಿದ್ದಳು. ಅಮೇಯಾತ್ಮ, ಬಲವಾನ್, ಸತ್ಯವಿಕ್ರಮ ಭೀಮನು ಎಚ್ಚೆತ್ತು ಅವಳನ್ನು ಕೇಳಿದನು: “ಅನಿಂದಿತೇ! ಇಲ್ಲಿ ಏನನ್ನು ಬಯಸಿ ಬಂದೆ?” ಅವರಿಬ್ಬರು ಮಾತನಾಡುತ್ತಿರುವುದನ್ನು ಕೇಳಿ ರಾಕ್ಷಸಾಧಮ, ಭೀಮರೂಪ, ಭೀಮದರ್ಶನನು ಜೋರಾಗಿ ಗರ್ಜಿಸುತ್ತಾ ಅಲ್ಲಿಗೆ ಬಂದನು. “ಹಿಡಿಂಬೆ! ಯಾರೊಂದಿಗೆ ಮಾತನಾಡುತ್ತಿರುವೆ? ಅವನನ್ನು ತಡಮಾಡದೇ ನನ್ನ ಹತ್ತಿರ ಕರೆದುಕೊಂಡು ಬಾ. ಇಬ್ಬರೂ ಅವನನ್ನು ಭಕ್ಷಿಸೋಣ!” ಆದರೆ ಆ ಮನಸ್ವಿನೀ ಅನಿಂದಿತೆಯ ಹೃದಯವು ಕೃಪೆಯಿಂದ ಪೀಡಿತವಾಗಿತ್ತು ಮತ್ತು ಅನುಕಂಪದಿಂದ ಅವನನ್ನು ದೂರಮಾಡಲು ಬಯಸಲಿಲ್ಲ. ಆಗ ಜೋರಾಗಿ ಕೂಗುತ್ತಾ ಆ ಘೋರರಾಕ್ಷಸ ಪುರುಷಾದಕನು ವೇಗದಿಂದ ಭೀಮಸೇನನ ಹತ್ತಿರವೇ ಓಡಿ ಬಂದನು. ಆ ಸಂಕೃದ್ಧ ಮಹಾಬಲಿ ರಾಕ್ಷಸನು ವೇಗದಿಂದ ಓಡಿಬಂದು ತನ್ನ ಕೈಗಳಿಂದ ಭೀಮಸೇನನ ಕೈಗಳನ್ನು ಇಂದ್ರನ ವಜ್ರದಂತೆ ಗಟ್ಟಿಯಾದ ಹಿಡಿತದಲ್ಲಿ ಹಿಡಿದನು. ರಾಕ್ಷಸನು ಅವನ ಕೈಯನ್ನು ಹಿಡಿದುಕೊಂಡಾಗ ಮಹಾಬಾಹು ಭೀಮಸೇನನು ತಡೆಯಲಾಗದೆ ಸಿಟ್ಟಿಗೆದ್ದನು ಮತ್ತು ಅಲ್ಲಿ ಸರ್ವ ಅಸ್ತ್ರವಿದುಷರಾದ ಭೀಮಸೇನ ಮತ್ತು ಹಿಂಡಿಂಬರ ಮಧ್ಯೆ ವೃತ್ರ ಮತ್ತು ವಾಸವರ ನಡುವೆ ಹೇಗೋ ಹಾಗೆ ತುಮುಲ ಯುದ್ಧವು ನಡೆಯಿತು. ಭೀಮನು ಹಿಡಿಂಬನನ್ನು ಕೊಂದು, ಘಟೋತ್ಕಚನನು ಹೆತ್ತ ಹಿಡಿಂಬೆಯನ್ನು ಮುಂದಿಟ್ಟುಕೊಂಡು ಸಹೋದರರೊಂದಿಗೆ ಮುಂದುವರೆದನು. ಅಲ್ಲಿಂದ ತಾಯಿಯೊಂದಿಗೆ ಆ ಯಶಸ್ವಿಗಳೆಲ್ಲರೂ ಬ್ರಾಹ್ಮಣರ ಗುಂಪುಗಳೊಂದಿಗೆ ಏಕಚಕ್ರದ ಕಡೆ ಹೊರಟರು. ಅವರು ಹೊರಡುವಾಗ ವ್ಯಾಸನು ಅವರ ಪ್ರಿಯಹಿತಕಾರಿ ಮಂತ್ರಿಯಾಗಿದ್ದನು. ಅದರಂತೆ ಸಂಶಿತವ್ರತ ಪಾಂಡವರು ಏಕಚಕ್ರವನ್ನು ಸೇರಿದರು. ಅಲ್ಲಿ ಕೂಡ ಅವರು ಬಕ ಎಂಬ ಹೆಸರಿನ ಮಹಾಬಲ, ಪುರುಷಾದ, ಹಿಡಿಂಬನಷ್ಟೇ ಭಯಂಕರನಾಗಿರುವನನ್ನು ಎದುರಿಸಿದರು. ಪ್ರಹಾರಿಗಳಲ್ಲಿ ಶ್ರೇಷ್ಠ ಭೀಮನು ಆ ಉಗ್ರನನ್ನೂ ಕೊಂದನು ಮತ್ತು ಸಹೋದರರೊಂದಿಗೆ ಎಲ್ಲರೂ ದ್ರುಪದನ ಪುರಕ್ಕೆ ಹೋದರು. ಅಲ್ಲಿಯೇ ವಾಸಿಸುತ್ತಿದ್ದ ಸವ್ಯಸಾಚಿ ಪಾರ್ಥನು ನೀನು ಹೇಗೆ ಬೀಷ್ಮಕಾತ್ಮಜೆ ರುಕ್ಮಿಣಿಯನ್ನು ಗೆದ್ದೆಯೋ ಹಾಗೆ ಸ್ವಯಂವರದಲ್ಲಿ ಇತರರು ಮಾಡಲಿಕ್ಕೆ ಸಾಧ್ಯವಾಗದಿದ್ದ ಮಹಾ ಕಾರ್ಯವನ್ನು ಮಾಡಿ ನನ್ನನ್ನೂ ಕೂಡ ಗೆದ್ದು ಪಡೆದನು. ಇಷ್ಟೊಂದು ಬಗೆಯ ಕಷ್ಟಗಳನ್ನು ಅನುಭವಿಸಿ ದುಃಖಿತರಾದ ನಾವು ಆರ್ಯೆಯಿಲ್ಲದೇ ಧೌಮ್ಯನ ನೇತೃತ್ವದಲ್ಲಿ ವಾಸಿಸುತ್ತಿದ್ದೇವೆ. ಸಿಂಹವಿಕ್ರಾಂತ ಇತರರಿಗಿಂತಲೂ ಅಧಿಕ ವೀರ್ಯವಂತರಾದ ಇವರು ಹೀನರಿಂದ ಪೀಡಿಸಲ್ಪಡುವಾಗ ನನ್ನನ್ನು ಏಕೆ ತಿರಸ್ಕರಿಸಿದರು? ದುರ್ಬಲರಿಂದ ಇವರು ಇಂತಹ ಬಹಳಷ್ಟು ದುಃಖಗಳನ್ನು ಸಹಿಸಿಕೊಂಡು ಬಂದಿದ್ದಾರೆ. ದೀರ್ಘಕಾಲದಿಂದ ಕ್ಷುದ್ರಕರ್ಮಿಗಳ ಪಾಪಗಳು ಉರಿಯುತ್ತಿವೆ. ನಾನು ದೊಡ್ಡ ಕುಲದಲ್ಲಿ, ದಿವ್ಯ ವಿಧಿಯಲ್ಲಿಯೇ ಹುಟ್ಟಿದ್ದೇನೆ. ಪಾಂಡವರ ಪ್ರಿಯ ಭಾರ್ಯೆ ಮತ್ತು ಮಹಾತ್ಮ ಪಾಂಡುವಿನ ಸೊಸೆಯಾಗಿದ್ಡೇನೆ. ಇಂದ್ರರ ಸಮನಾಗಿದ್ದ ಈ ಐವರೂ ನೋಡುತ್ತಿದ್ದಂತೆಯೇ ವರಸತಿಯಾದ ನನ್ನ ಮುಡಿಯನ್ನು ಹಿಡಿದು ಎಳೆದು ತರಲ್ಪಟ್ಟೆ!”

ಹೀಗೆ ಹೇಳಿ ಮೃದುಭಾಷಿಣಿ ಕೃಷ್ಣೆಯು ಕಮಲದ ಒಳಮೈಯಷ್ಟೆ ಮೃದುವಾದ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಜೋರಾಗಿ ಅತ್ತಳು. ಪಾಂಚಾಲಿಯ ದುಃಖದಿಂದ ಹರಿದ ಕಣ್ಣೀರ ಹನಿಗಳು ಜೋಲುಬೀಳದಿದ್ದ, ಚೆನ್ನಾಗಿ ತುಂಬಿ ಬೆಳೆದಿದ್ದ ಸುಂದರ ಮೊಲೆಗಳ ಮೇಲೆ ಸುರಿದು ತೋಯಿಸಿದವು. ಅವಳು ಪುನಃ ಪುನಃ ಕಣ್ಣನ್ನು ಒರೆಸಿಕೊಳ್ಳುತ್ತಾ ನಿಟ್ಟುಸಿರು ಬಿಡುತ್ತಾ ಕಣ್ಣೀರಿನಿಂದ ಕಟ್ಟಿದ ಕಂಠದಲ್ಲಿ ಕ್ರೋಧದಿಂದ ಈ ಮಾತುಗಳನ್ನಾಡಿದಳು.

“ಮಧುಸೂದನ! ನನಗೆ ಪತಿಗಳೂ ಇಲ್ಲ. ಮಕ್ಕಳೂ ಇಲ್ಲ. ಅಣ್ಣ ತಮ್ಮಂದಿರೂ ಇಲ್ಲ. ತಂದೆಯೂ ಇಲ್ಲ ಮತ್ತು ಬಾಂಧವರು ಯಾರೂ ಇಲ್ಲ! ಕ್ಷುದ್ರರು ನನ್ನನ್ನು ಕಾಡಿಸಿ ಅಳಿಸುತ್ತಿರುವಾಗ ಇವರು ನನ್ನನ್ನು ನಿರ್ಲಕ್ಷಿಸಿದರು. ಕರ್ಣನು ನೋಡಿ ನಗುತ್ತಿರುವಾಗ ನನ್ನ ದುಃಖವು ಕಡಿಮೆಯಾಗುವುದಿಲ್ಲ.”

ಆಗ ಕೃಷ್ಣನು ಅವಳಿಗೆ ಹೇಳಿದನು:

“ಭಾಮಿನಿ! ನಿನ್ನನ್ನು ಕೆರಳಿಸಿದವರ ಪತ್ನಿಯರು ಬೀಭತ್ಸುವು ಬಿಟ್ಟ ಶರಗಳಿಂದ ಮುಚ್ಚಲ್ಪಟ್ಟು ರಕ್ತದ ಮಳೆಯಲ್ಲಿ ತೋಯ್ದು ಹೊಡೆತಕ್ಕೆ ಸಿಲುಕಿ ಜೀವ ತೊರೆದು ವಸುಧಾತಲೆಯಲ್ಲಿ ಮಲಗಿರಲು ರೋದಿಸುತ್ತಾರೆ!  ಶೋಕಿಸಬೇಡ! ಪಾಂಡವರು ಏನನ್ನು ಮಾಡಲು ಸಮರ್ಥರಿದ್ದಾರೋ ಅದನ್ನು ಮಾಡುತ್ತೇನೆ. ನೀನು ರಾಜರ ರಾಣಿಯಾಗುತ್ತೀಯೆ ಎನ್ನುವ ಸತ್ಯವನ್ನು ತಿಳಿದಿದ್ದೇನೆ. ಆಕಾಶವೇ ಕೆಳಗುರುಳಿ ಬೀಳಲಿ, ಹಿಮಾಲಯವು ತುಂಡಾಗಲಿ, ಭೂಮಿಯು ಸೀಳಿಹೋಗಲಿ, ಸಾಗರವು ಬತ್ತಿಹೋಗಲಿ, ಕೃಷ್ಣೆ! ನನ್ನ ಮಾತು ಹುಸಿಯಾಗುವುದಿಲ್ಲ!”

ದೃಷ್ಟದ್ಯುಮ್ನನು ಹೇಳಿದನು:

“ನಾನು ದ್ರೋಣನನ್ನು ಕೊಲ್ಲುತ್ತೇನೆ. ಶಿಖಂಡಿಯು ಪಿತಾಮಹನನ್ನು, ಭೀಮಸೇನನು ದುರ್ಯೋಧನನನ್ನು, ಮತ್ತು ಕರ್ಣನನ್ನು ಧನಂಜಯನು ಕೊಲ್ಲುತ್ತಾರೆ! ಬಲರಾಮ-ಕೃಷ್ಣರನ್ನು ಅವಲಂಬಿಕೊಂಡಿದ್ದರೆ ನಾವು ವೃತ್ರಹರನೇ ಬಂದರೂ ಅಜೇಯರಾಗಿರುತ್ತೇವೆ. ಇನ್ನು ಧೃತರಾಷ್ಟ್ರನ ಮಕ್ಕಳು ಯಾವ ಲೆಖ್ಕಕ್ಕೆ?”

ಇದನ್ನು ಹೇಳಿ ವೀರರು ಎದುರು ಕುಳಿತಿದ್ದ ವಾಸುದೇವನನ್ನು ನೋಡಲು, ಅವರ ಮಧ್ಯದಲ್ಲಿದ್ದ ಮಹಾಬಾಹು ಕೇಶವನು ಈ ಮಾತುಗಳನ್ನು ಹೇಳಿದನು:

“ವಸುಧಾಧಿಪ! ಆಗ ನಾನು ದ್ವಾರಕೆಯಲ್ಲಿ ಇದ್ದಿದ್ದರೆ ನೀನು ಈ ಕಷ್ಟಕ್ಕೆ ಒಳಗಾಗುತ್ತಿರಲಿಲ್ಲ. ಕೌರವರು, ರಾಜ ಅಂಬಿಕೇಯ ಮತ್ತು ದುರ್ಯೋಧನನು ನನ್ನನು􋣱ಕರೆಯದೇ ಇದ್ದರೂ ದ್ಯೂತಕ್ಕೆ ಬರುತ್ತಿದ್ದೆ. ಭೀಷ್ಮ, ದ್ರೋಣ, ಕೃಪ, ಮತ್ತು ಬಾಹ್ಲೀಕರನ್ನೂ ಸೇರಿ ಎಲ್ಲರಿಗೂ ದ್ಯೂತದ ಹಲವಾರು ದೋಷಗಳನ್ನು ತೋರಿಸಿಕೊಟ್ಟು ಅದನ್ನು ನಿಲ್ಲಿಸುತ್ತಿದ್ದೆ. ನಿಮ್ಮ ಪರವಾಗಿ ರಾಜ ವೈಚಿತ್ರವೀರ್ಯನಿಗೆ ‘ರಾಜೇಂದ್ರ! ನಿನ್ನ ಮಕ್ಕಳು ಆಡುತ್ತಿರುವ ಈ ದ್ಯೂತವನ್ನು ನಿಲ್ಲಿಸು!’ ಎಂದು ಹೇಳಿ ಹಿಂದೆ ವೀರಸೇನನ ಮಗನನ್ನು ಹೇಗೆ ರಾಜ್ಯಭ್ರಷ್ಠನನ್ನಾಗಿ ಮಾಡಲಾಗಿತ್ತೋ ಅದೇ ಮೋಸದಿಂದ ನಿಮ್ಮನ್ನೂ ರಾಜ್ಯಭ್ರಷ್ಠರನ್ನಾಗಿ ಮಾಡುತ್ತಿದ್ದಾರೆ ಎನ್ನುವುದನ್ನು ನೆನಪಿಸಿಕೊಡುತ್ತಿದ್ದೆ. ದ್ಯೂತವಾಡುವುದರಿಂದ ಇನ್ನೂ ಭಕ್ಷಿಸದೇ ಇರುವುದನ್ನು ಹೇಗೆ ಕಳೆದುಕೊಳ್ಳುತ್ತಾನೆ ಮತ್ತು ದ್ಯೂತದ ವ್ಯಸನವು ಹೇಗೆ ಮುಂದುವರೆಯುತ್ತದೆ ಎನ್ನುವ ಸತ್ಯವನ್ನು ತೋರಿಸಿಕೊಡುತ್ತಿದ್ದೆ. ಹೆಂಗಸರು, ಜೂಜು, ಬೇಟೆ ಮತ್ತು ಮದ್ಯಪಾನ ಇವು ನಾಲ್ಕೂ ವ್ಯಸನಗಳು ಕಾಮದಿಂದ ಹುಟ್ಟುತ್ತವೆ ಮತ್ತು ಮನುಷ್ಯನ ಭಾಗ್ಯವನ್ನು ಕಳೆಯುತ್ತವೆ. ಶಾಸ್ತ್ರಗಳನ್ನು ತಿಳಿದವರು ನಾನು ಹೇಳಿದುದೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ. ಆದರೆ ವಿಶೇಷವಾಗಿ ದ್ಯೂತದ ಕುರಿತು ಇದನ್ನು ಹೇಳಬಹುದು ಎಂದು ತಿಳಿದಿದ್ದಾರೆ. ಒಬ್ಬನು ಒಂದೇ ದಿನದಲ್ಲಿ ಎಲ್ಲ ಸಂಪತ್ತನ್ನೂ ಕಳೆದುಕೊಳ್ಳುತ್ತಾನೆ ಮತ್ತು ಖಂಡಿತವಾಗಿಯೂ ದುಃಖವನ್ನು ಹೊಂದುತ್ತಾನೆ. ಇನ್ನೂ ಭೋಗಿಸದೇ ಇದ್ದ ಐಶ್ವರ್ಯವನ್ನು ಕಳೆದುಕೊಂಡು ಕೇವಲ ಪೌರುಷದ ಮಾತುಗಳು ಉಳಿದುಕೊಳ್ಳುತ್ತವೆ. ಇದು ಮತ್ತು ಇನ್ನೂ ಇತರ ವಿಷವನ್ನು ಹುಟ್ಟಿಸುವ ಪ್ರಸಂಗಗಳ ಕುರಿತು ಅಂಬಿಕಾಸುತನ ಎದುರಿಗೆ ಹೇಳುತ್ತಿದ್ದೆ. ನಾನು ಹೇಳಿದ ಈ ಮಾತುಗಳನ್ನು ಸ್ವೀಕರಿಸಿದ್ದರೆ ಕುರುಗಳ ಧರ್ಮವು ಕೆಡದೇ ಇರುತ್ತಿತ್ತು. ಒಂದು ವೇಳೆ ನನ್ನ ಈ ಸೌಮ್ಯ ಮತ್ತು ಸರಿಯಾದ ಮಾತುಗಳನ್ನು ಕೇಳದೇ ಇದ್ದಿದ್ದರೆ ಅವನನ್ನು ಬಲವನ್ನುಪಯೋಗಿಸಿ ಸರಿಯಾದ ದಾರಿಗೆ ತರುತ್ತಿದ್ದೆ. ಇದೇ ರೀತಿಯಲ್ಲಿ ಆ ಸಭೆಯಲ್ಲಿದ್ದ ಇತರ ಸ್ನೇಹಿತರೆಂದು ತೋರಿಸಿಕೊಳ್ಳುವ ಶತ್ರುಗಳಿಗೂ ತೋರಿಸಿಕೊಡುತ್ತಿದ್ದೆ ಮತ್ತು ಮೋಸದಿಂದ ಜೂಜಾಡುತ್ತಿದ್ದ ಎಲ್ಲರನ್ನೂ ಸಂಹರಿಸುತ್ತಿದ್ದೆ. ಅನಾರ್ತದಿಂದ ನಾನು ದೂರವಿದ್ದೆನಾದುದರಿಂದಲೇ ನೀವು ದ್ಯೂತದಿಂದ ಉಂಟಾದ ಈ ಎಲ್ಲ ಕಷ್ಟಗಳನ್ನು ಅನುಭವಿಸಬೇಕಾಗಿದೆ. ನಾನು ದ್ವಾರಕೆಗೆ ಮರಳಿ ಬಂದ ನಂತರವೇ ನನಗೆ ಯುಯುಧಾನನಿಂದ ನಿಮಗಾದ ಕಷ್ಟದ ಕುರಿತು ಯಥಾವತ್ತಾಗಿ ತಿಳಿಯಿತು. ಇದನ್ನು ಕೇಳಿದ ಕೂಡಲೇ ಮನಸ್ಸಿನಲ್ಲಿ ತುಂಬಾ ಬೇಸರಪಟ್ಟು ತ್ವರೆಮಾಡಿ ನಿನ್ನನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಸಹೋದರರ ಸಹಿತ ಕಷ್ವದಲ್ಲಿರುವ ನಿನ್ನನ್ನು ನೋಡಿ ನಾವೆಲ್ಲರೂ ತುಂಬಾ ದುಃಖದಲ್ಲಿದ್ದೇವೆ.”

ಯುಧಿಷ್ಠಿರನು ಹೇಳಿದನು:

“ಕೃಷ್ಣ! ನಿನಗೆ ಏಕೆ ಅಲ್ಲಿ ಇರಲಿಕ್ಕಾಗಲಿಲ್ಲ? ನೀನು ಎಲ್ಲಿ ಪ್ರಯಾಣ ಮಾಡುತ್ತಿದ್ದೆ ಮತ್ತು ಏಕೆ ಅಲ್ಲಿಗೆ ಹೋಗಿದ್ದೆ?”

ಕೃಷ್ಣನು ಹೇಳಿದನು:

“ಭರತರ್ಷಭ! ನಾನು ಶಾಲ್ವನ ನಗರ ಸೌಭವನ್ನು ನಾಶಗೊಳಿಸಲು ಹೋಗಿದ್ದೆ. ಅದರ ಕಾರಣವನ್ನು ನನ್ನಿಂದ ಕೇಳು. ನಿನ್ನ ರಾಜಸೂಯ ಯಾಗದಲ್ಲಿ ನಾನು ಆ ವೀರ ದಮಘೋಷನ ಮಗ ಮಹಾತೇಜಸ್ವಿ ಮಹಾಬಾಹು ಮಹಾಯಶ ರಾಜ ದುರಾತ್ಮ ಶಿಶುಪಾಲನು ರೋಷವಶನಾಗಿ ನನಗೆ ಗೌರವ ಪೂಜೆಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ ನಾನು ಅವನನ್ನು ಸಂಹರಿಸಿದೆ. ನನ್ನಿಂದ ಅವನು ಹತನಾದನೆಂದು ಕೇಳಿ ತೀವ್ರ ರೋಷಸಮನ್ವಿತನಾದ ಶಾಲ್ವನು, ನಾನು ನಿಮ್ಮೊಂದಿಗಿರುವಾಗ ನಾನಿಲ್ಲದ ದ್ವಾರಕೆಗೆ ಉಪಾಯದಿಂದ ಆಕ್ರಮಣ ಮಾಡಿದನು. ಅಲ್ಲಿ ಬಾಲಕ ವೃಷ್ಣಿವೀರರು ಹೋರಾಡಿದರು. ಆ ಕ್ರೂರಿ ದುರ್ಮತಿಯು ಬೇಕಾದರಲ್ಲಿ ಹೋಗಬಲ್ಲ ಸೌಭವನ್ನೇರಿ ಬಂದು ಬಹಳಷ್ಟು ಬಾಲಕ ವೃಷ್ಣಿಪ್ರವೀರರನ್ನು ಸಂಹರಿಸಿ ಎಲ್ಲ ಪುರೋದ್ಯಾನಗಳನ್ನೂ ನಾಶಪಡಿಸಿದನು. ಅವನು ‘ವೃಷ್ಣಿಕುಲಾಧಮ ಮೂಢ ವಸುದೇವಸುತ ವಾಸುದೇವನು ಎಲ್ಲಿದ್ದಾನೆ?’ ಎಂದು ಕೂಗಿದನು. ‘ಯುದ್ಧವನ್ನು ಬಯಸುವ ಅವನ ದರ್ಪವನ್ನು ನಾನು ಯುದ್ಧದಲ್ಲಿ ನಾಶಪಡಿಸುತ್ತೇನೆ. ಅವನೆಲ್ಲಿದ್ದಾನೆ ಹೇಳಿ! ಎಲ್ಲಿದ್ದರೂ ಅಲ್ಲಿಗೇ ಹೋಗುತ್ತೇನೆ. ಕಂಸ-ಕೇಶಿನಿಯರನ್ನು ಕೊಂದ ಅವನನ್ನು ಸಂಹರಿಸಿಯೇ ಹಿಂದಿರುಗುತ್ತೇನೆ. ಅವನನ್ನು ಕೊಲ್ಲದೇ ನಾನು ಹಿಂದಿರುಗುವುದಿಲ್ಲ. ಇದು ನನ್ನ ಈ ಖಡ್ಗದ ಮೇಲಿನ ಆಣೆ! ಎಲ್ಲಿದ್ದಾನೆ? ಎಲ್ಲಿದ್ದಾನೆ?’ ಎಂದು ಪುನಃ ಪುನಃ ಕೂಗಿ ಕೇಳುತ್ತಾ ನನ್ನೊಡನೆ ರಣದಲ್ಲಿ ಯುದ್ಧಮಾಡ ಬಯಸಿದ ಆ ಸೌಭರಾಜನು ಒಂದೆಡೆಯಿಂದ ಇನ್ನೊಂದೆಡೆಗೆ ಹಾರಿಹೋಗುತ್ತಿದ್ದನು.  ‘ಶಿಶುಪಾಲನನ್ನು ಸಂಹರಿಸಿದುದಕ್ಕಾಗಿ ಇಂದು ನಾನು ಆ ಪಾಪಕರ್ಮಿ, ಕ್ಷುದ್ರ, ವಿಶ್ವಾಸಘಾತಿಯನ್ನು ಸಿಟ್ಟಿನಿಂದ ಯಮಸದನಕ್ಕೆ ಕಳುಹಿಸುತ್ತೇನೆ! ನನ್ನ ಭ್ರಾತಾ ಮಹೀಪಾಲ ಶಿಶುಪಾಲನನ್ನು ಪಾಪಸ್ವಭಾವದಿಂದ ಕೆಳಗುರುಳಿಸಿದವನನ್ನು ವಧಿಸಿ ನೆಲಕ್ಕುರಿಳಿಸುತ್ತೇನೆ. ಆ ಭ್ರಾತ ಬಾಲಕ ರಾಜನು ಸಂಗ್ರಾಮದ ಮನಸ್ಸಿನಲ್ಲಿರದಿದ್ದಾಗ, ಬೇರೆಯ ವಿಷಯದ ಗುಂಗಿನಲ್ಲಿದ್ದಾಗ ಆ ವೀರನನ್ನು ಕೊಂದ ಜನಾರ್ದನನನ್ನು ಸಂಹರಿಸುತ್ತೇನೆ!’ ಹೀಗೆ ಕೂಗಾಡಿ ನನ್ನನ್ನು ಬೈದು ಅವನು ಕಾಮಗ ಸೌಭದಲ್ಲಿ ಆಕಾಶವನ್ನೇರಿದನು. ನಾನು ಹಿಂದಿರುಗಿ ಬಂದ ನಂತರ ಆ ಸುದುರ್ಮತಿ ದುಷ್ಟಾತ್ಮ ಮಾರ್ತ್ತಿಕಾವತಕ ನೃಪನು ನನ್ನ ವಿಷಯದಲ್ಲಿ ನಡೆದುಕೊಂಡ ಕುರಿತು ಕೇಳಿದೆನು. ಅವನು ಅನರ್ತವನ್ನು ಧ್ವಂಸ ಮಾಡಿದುದನ್ನು, ನನ್ನ ಕುರಿತು ನಡೆದುಕೊಂಡಿದ್ದುದನ್ನು, ಮತ್ತು ಅವನ ದುಷ್ಕರ್ಮಗಳು ಹೆಚ್ಚಾಗುತ್ತಿರುವುದನ್ನು ಕೇಳಿದಾಗ ನನ್ನ ಕಣ್ಣುಗಳು ಕೆಂಪಾಗಿ ರೋಷಗೊಂಡು ಮನಸ್ಸಿನಲ್ಲಿಯೇ ಅವನನ್ನು ವಧಿಸುವ ನಿಶ್ಚಯ ಮಾಡಿದೆ. ಆಗ ಸೌಭನನ್ನು ಸಂಹರಿಸಲು ಹೊರಟೆ ಮತ್ತು ಅವನನ್ನು ಹುಡುಕುತ್ತಿರಲು ನನಗೆ ಅವನು ಸಾಗರದ ತೀರದಲ್ಲಿ ಇದ್ದುದನ್ನು ನೋಡಿದೆನು. ಆಗ ನಾನು ಸಾಗರದಿಂದ ಹುಟ್ಟಿದ ಪಾಂಚಜನ್ಯವನ್ನು ಊದಿ ಶಾಲ್ವನನ್ನು ಸಮರಕ್ಕೆ ಆಹ್ವಾನಿಸಿದೆ. ಅಲ್ಲಿ ನಾನು ಮತ್ತು ದಾನವರೊಡನೆ ತುಂಬಾ ಸಮಯದ ವರೆಗೆ ನಡೆದ ಯುದ್ಧದಲ್ಲಿ ಅವರೆಲ್ಲರನ್ನೂ ಗೆದ್ದು ಭೂಮಿಗುರುಳಿಸಿದೆನು. ಇದೇ ಕೆಲಸವು ನನ್ನನ್ನು ಹಸ್ತಿನಾಪುರದಲ್ಲಿ ನಡೆದ ಅವಿನಯದ ದ್ಯೂತದ ಕುರಿತು ಕೇಳಿದ ಕೂಡಲೇ ನನಗೆ ಬರಲಿಕ್ಕಾಗದ ಹಾಗೆ ತಡೆಯಿತು.”

ಯುಧಿಷ್ಠಿರನು ಹೇಳಿದನು:

“ವಾಸುದೇವ! ನೀನು ಹೇಳಿದುದರಿಂದ ತೃಪ್ತನಾಗಿಲ್ಲ. ಸೌಭನ ವಧೆಯನ್ನು ವಿಸ್ತಾರವಾಗಿ ಹೇಳು!”

ಯುಧಿಷ್ಠಿರನಿಗೆ ಸೌಭವಧೋಪಾಽಖ್ಯಾನವನ್ನು ವಿಸ್ತಾರವಾಗಿ ವರ್ಣಿಸಿದ ನಂತರ ಮಹಾಬಾಹು ಪುರುಷೋತ್ತಮ ಮಧುಸೂದನನು ಧೀಮಂತ ಪಾಂಡವರಿಂದ ಬೀಳ್ಕೊಂಡು ಹೊರಟನು. ಆ ಮಹಾಬಾಹುವು ಧರ್ಮರಾಜ ಯುಧಿಷ್ಠಿರನನ್ನು ಅಭಿವಂದಿಸಿದನು. ರಾಜ ಮತ್ತು ಮಹಾಭುಜ ಭೀಮರು ಅವನ ನೆತ್ತಿಯನ್ನು ಆಘ್ರಾಣಿಸಿದರು. ಪಾಂಡವರಿಂದ ಅಭಿಪೂಜಿತ ಕೃಷ್ಣನು ಸುಭದ್ರೆ ಮತ್ತು ಅಭಿಮನ್ಯುವನ್ನು ಕಾಂಚನರಥದಲ್ಲಿ ಕುಳ್ಳಿರಿಸಿ ರಥವನ್ನೇರಿದನು. ಯುಧಿಷ್ಠಿರನನ್ನು ಸಮಾಧಾನ ಪಡಿಸಿ, ಆದಿತ್ಯವರ್ಚಸ ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ರಥದಲ್ಲಿ ಕೃಷ್ಣನು ದ್ವಾರಕೆಗೆ ತೆರಳಿದನು. ದಾಶಾರ್ಹನು ಹೋದ ನಂತರ ಪಾರ್ಷತ ಧೃಷ್ಟದ್ಯುಮ್ನನೂ ಕೂಡ ದ್ರೌಪದೇಯರನ್ನು ಕರೆದುಕೊಂಡು ತನ್ನ ನಗರಕ್ಕೆ ತೆರಳಿದನು. ಚೇದಿರಾಜ ಧೃಷ್ಟಕೇತುವು ತನ್ನ ತಂಗಿಯನ್ನು ಜೊತೆಯಲ್ಲಿ ಕರೆದುಕೊಂಡು ಪಾಂಡವರನ್ನು ಕಂಡು ರಮ್ಯ ಶಕ್ತಿಮತೀ ಪುರಕ್ಕೆ ತೆರಳಿದನು. ಅಮಿತೌಜಸ ಕೌಂತೇಯರಿಂದ ಬೀಳ್ಕೊಂಡು ಕೇಕಯನೂ ಕೂಡ ಪಾಂಡವರೆಲ್ಲರನ್ನೂ ಆಮಂತ್ರಿಸಿ ಹೊರಟನು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರು ಮತ್ತು ಸಾಮಾನ್ಯ ಜನರು, ಒಂದೇ ಸಮನೆ ಹೋಗಿ ಎಂದು ಹೇಳಿದರೂ ಪಾಂಡವರನ್ನು ಬಿಟ್ಟು ಹೋಗಲು ನಿರಾಕರಿಸಿದರು. ಆ ಗುಂಪು ಕಾಮ್ಯಕ ವನದಲ್ಲಿ ಆ ಮಹಾತ್ಮರ ಜೊತೆಗೇ ಇದ್ದುದು ಒಂದು ಮಹಾ ಅದ್ಭುತವಾಗಿ ಕಾಣುತ್ತಿತ್ತು. ಆ ಮಹಾಮನ ವಿಪ್ರರನ್ನು ಗೌರವಿಸಿ ಯುಧಿಷ್ಠಿರನು ಸಕಾಲದಲ್ಲಿ ರಥಗಳನ್ನು ಕಟ್ಟಲು ಸೇವಕರಿಗೆ ಅಪ್ಪಣೆಯನ್ನಿತ್ತನು.

Leave a Reply

Your email address will not be published. Required fields are marked *