ಕಿರ್ಮೀರವಧ
ಮೈತ್ರೇಯನು ಹೊರಟುಹೋದ ನಂತರ ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಕಿರ್ಮೀರನ ವಧೆಯ ಕುರಿತು ಕೇಳಲು ಬಯಸುತ್ತೇನೆ. ರಾಕ್ಷಸ ಮತ್ತು ಭೀಮಸೇನರ ನಡುವೆ ಸಮಾಗಮವು ಹೇಗೆ ಆಯಿತು ಎನ್ನುವುದನ್ನು ಹೇಳು.”
ವಿದುರನು ಹೇಳಿದನು: “ಅವರು ಪುನಃ ಪುನಃ ಹೇಳುತ್ತಿದ್ದುದನ್ನು ಇದಕ್ಕೆ ಮೊದಲೇ ಕೇಳಿದ ಅಮಾನುಷಕರ್ಮಿ ಭೀಮನ ಕೃತ್ಯವನ್ನು ಕೇಳು. ರಾಜೇಂದ್ರ! ದ್ಯೂತದಲ್ಲಿ ಸೋತ ಪಾಂಡವರು ಇಲ್ಲಿಂದ ಹೊರಟು ಮೂರು ಹಗಲು ರಾತ್ರಿ ನಡೆದು ಕಾಮ್ಯಕವೆಂಬ ಹೆಸರಿನ ಆ ವನವನ್ನು ಸೇರಿದರು. ಢಕಾಯಿತರಿಗೆ ಸರಿಯಾದ ಸಮಯವೆನಿಸಿದ ಮಧ್ಯರಾತ್ರಿ ಕಳೆದ ರಾತ್ರಿಯಲ್ಲಿ, ಭೀಮಕರ್ಮಿಣಿ ನರಭಕ್ಷಕ ರಾಕ್ಷಕರು ತಿರುಗುತ್ತಿರುವ ಸಮಯದಲ್ಲಿ ತಾಪಸರೂ ಮತ್ತು ಉಳಿದ ವನಚಾರಿಣಿಗಳೂ ನಿತ್ಯವೂ ತಿರುಗಾಡುತ್ತಿರುವ ನರಭಕ್ಷಕರ ಭಯದಿಂದ ಆ ವನದಿಂದ ದೂರವಿರುತ್ತಾರೆ. ಅಂಥಹ ಸಮಯದಲ್ಲಿ ಅವರು ಅದನ್ನು ಪ್ರವೇಶಿಸುತ್ತಿರುವಾಗ ಉರಿಯುತ್ತಿರುವ ಕಣ್ಣುಗಳ ಭೀಷಣ ರಾಕ್ಷಸನು ದೊಂದಿಯನ್ನು ಹಿಡಿದು ಅವರನ್ನು ತಡೆಗಟ್ಟುತ್ತಿರುವುದನ್ನು ಕಂಡರು. ತನ್ನ ಮಹಾಬಾಹುಗಳನ್ನು ವಿಸ್ತರಿಸಿ, ಮುಖವನ್ನು ಭಯಾನಕವಾಗಿ ಮಾಡಿಕೊಂಡು ಆ ಕುರೂದ್ವಹರು ಹೋಗುತ್ತಿದ್ದ ಮಾರ್ಗದಲ್ಲಿ ಅಡ್ಡವಾಗಿ ನಿಂತನು. ಅವನ ಎಂಟು ಕೋರೆದಾಡೆಗಳೂ ಬಾಯಿಯಿಂದ ಹೊರಕ್ಕೆ ಚಾಚಿದ್ದವು. ಕಣ್ಣುಗಳು ಕೆಂಪಾಗಿದ್ದವು. ಅವನ ತಲೆಗೂದಲುಗಳು ಪ್ರಕಾಶಮಾನವಾಗಿ ನೆಟ್ಟಗೆ ನಿಂತಿದ್ದವು. ಆ ಸಮಯದಲ್ಲಿ ಅವನು ಸೂರ್ಯನ ರಶ್ಮಿಗಳಿಂದ, ಮಿಂಚು ಮತ್ತು ಬೆಳ್ಳಕ್ಕಿಗಳಿಂದ ಕೂಡಿದ ಮೋಡದಂತೆ ಕಂಡನು. ಮಳೆಸುರಿಸುವ ಮೋಡಗಳು ಜೋರಾಗಿ ಗುಡುಗು ಸಿಡಿಲುಗಳಿಂದ ಆರ್ಭಟಿಸುತ್ತಾ ಪ್ರಾಣಿಗಳಿಗೆ ಭಯತರುವಂತೆ ಅವನು ರಾಕ್ಷಸೀ ಮಾಯೆಗಳನ್ನು ಬಳಸಿ ಮಹಾ ನಿನಾದವನ್ನು ಹುಟ್ಟಿಸಿದನು. ಅವನ ಕೂಗಿನಿಂದ ಸಂತ್ರಸ್ತರಾದ ಪಕ್ಷಿಗಳು ಎಲ್ಲ ದಿಕ್ಕುಗಳಲ್ಲಿ ಚೀರುತ್ತಾ ಅಲ್ಲಿದ್ದ ಪ್ರಾಣಿಗಳು ಮತ್ತು ಜಲಪ್ರಾಣಿಗಳೊಂದಿಗೆ ಚಿಲ್ಲಾಪಿಲ್ಲೆಗಳಾಗಿ ಹಾರಿಹೋದವು. ಭೂಮಿಯ ಮೇಲಿದ್ದ ಜಿಂಕೆ, ಹುಲಿ, ಕಾಡು ಕೋಣ, ಕರಡಿ ಮುಂತಾದ ಪ್ರಾಣಿಗಳು ಅವನ ಆರ್ಭಟವನ್ನು ಕೇಳಿ ಭಯದಿಂದ ಓಡಲಾರಂಭಿಸಿದವು. ಅವನ ತೊಡೆಗಳ ವೇಗದ ಹೊಡೆತಕ್ಕೆ ಸಿಕ್ಕ ಎತ್ತರವಾಗಿ ಬೆಳೆದ ಬಳ್ಳಿಗಳು ತಮ್ಮ ಕೆಂಪು ಪುಷ್ಪಗಳನ್ನು ಹೊತ್ತು ಮರಗಳನ್ನು ಅಪ್ಪಿಕೊಂಡವು. ಅದೇ ಕ್ಷಣದಲ್ಲಿ ಭಯಂಕರ ಭಿರುಗಾಳಿಯು ಬೀಸಿ ಆಕಾಶವನ್ನೆಲ್ಲ ಧೂಳಿನಿಂದ ಮುಚ್ಚಿ ನಕ್ಷತ್ರಗಳೇ ಕಾಣದ ಹಾಗೆ ಮಾಡಿತು. ಪಂಚೇಂದ್ರಿಯಗಳಿಗೆ ತಿಳಿಯದಂತೆ ಆಕ್ರಮಿಸಿದ ಅತೀವ ಶೋಕದಂತೆ ಆ ಮಹಾ ಶತ್ರುವು ಪಂಚಪಾಂಡವರ ಮೇಲೆ ಎರಗಿದನು.
ದೂರದಿಂದಲೇ ಕೃಷ್ಣಾಜಿನಗಳನ್ನು ಧರಿಸಿದ್ದ ಪಾಂಡವರನ್ನು ಕಂಡ ಅವನು ಮೈನಾಕ ಪರ್ವತದಂತೆ ವನದ್ವಾರದಲ್ಲಿ ತಡೆಗಟ್ಟಿ ನಿಂತನು. ಅವನು ಹತ್ತಿರಬರುತ್ತಿದ್ದಂತೆಯೇ ಕಮಲಲೋಚನೆ ಕೃಷ್ಣೆಯು ಭಯಭೀತಳಾಗಿ ನಡುಗುತ್ತಾ ತನ್ನ ಕಣ್ಣುಗಳನ್ನು ಮುಚ್ಚಿದಳು. ದುಃಶಾಸನನ ಕೈಗಳಿಂದ ಎಳೆಯಲ್ಪಟ್ಟು ಕೆದರಿದ ಕೂದಲಿನ ಅವಳು ಐದು ಪರ್ವತಗಳ ಮಧ್ಯೆ ಪ್ರವಾಹವಾಗಿ ಹರಿಯುತ್ತಿದ್ದ ನದಿಯಂತೆ ಕಂಡಳು. ಅವಳು ಮೂರ್ಛಿತಳಾಗಿ ಅಲ್ಲಿಯೇ ಬೀಳಲು ಪಂಚ ಪಾಂಡವರು ಇಂದ್ರಿಯಗಳು, ವಿಷಯಗಳಿಗೆ ಅಂಟಿಕೊಂಡು ಸುಖವನ್ನು ಹೇಗೋ ಹಾಗೆ ಅವಳನ್ನು ಹಿಡಿದುಕೊಂಡರು. ಆಗ ವೀರ್ಯವಾನ್ ಧೌಮ್ಯನು ಪಾಂಡುಪುತ್ರರು ನೋಡುತ್ತಿದ್ದಂತೆಯೇ ರಾಕ್ಷಸನು ಮಾಯೆಯಿಂದ ಕಾಣಿಸಿದ ಘೋರರೂಪೀ ರಾಕ್ಷಸರನ್ನು ವಿವಿಧಮಂತ್ರಗಳನ್ನು ಸರಿಯಾಗಿ ಬಳಸಿ ನಾಶಪಡಿಸಿದನು. ತನ್ನ ಮಾಯೆಯು ನಾಶವಾಗಲು ಇಷ್ಟವಾದ ರೂಪವನ್ನು ಧರಿಸಬಲ್ಲ ಆ ಅತಿಬಲನು ಕ್ರೋಧದಿಂದ ಕಣ್ಣುಗಳನ್ನು ತೆರೆದು ಕ್ಷುದ್ರನಾಗಿ ಕಲ್ಪಾಂತ್ಯದಲ್ಲಿದ್ದ ಕಾಲನಂತೆ ಅವರಿಗೆ ಕಾಣಿಸಿಕೊಂಡನು. ಆಗ ದೀರ್ಘಪ್ರಜ್ಞ ರಾಜಾ ಯುಧಿಷ್ಠಿರನು ಅವನಿಗೆ ಹೇಳಿದನು: “ನೀನು ಯಾರು ಮತ್ತು ಯಾರವನು? ನಿನಗೆ ಏನು ಮಾಡಬೇಕು ಹೇಳು!”
ಆ ರಾಕ್ಷಸನು ಧರ್ಮರಾಜ ಯುಧಿಷ್ಠಿರನಿಗೆ ಉತ್ತರಿಸಿದನು: “ನಾನು ಕಿರ್ಮೀರ ಎಂದು ವಿಶ್ರುತನಾದ ಬಕನ ಸಹೋದರ. ನಾನು ಈ ಶೂನ್ಯ ಕಾಮ್ಯಕ ವನದಲ್ಲಿ ನಿತ್ಯವೂ ಯುದ್ಧದಲ್ಲಿ ಮನುಷ್ಯರನ್ನು ಸೋಲಿಸಿ ತಿನ್ನುತ್ತಾ ನಿಶ್ಚಿಂತೆಯಾಗಿ ವಾಸಿಸುತ್ತಿದ್ದೇನೆ. ನನ್ನ ಆಹಾರವಾಗಿ ನನ್ನಲ್ಲಿಗೆ ಬಂದಿರುವ ನೀವು ಯಾರು? ನಿಮ್ಮೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿ ನಿಶ್ಚಿಂತೆಯಾಗಿ ತಿನ್ನುತ್ತೇನೆ.”
ಆ ದುರಾತ್ಮನ ಮಾತುಗಳನ್ನು ಕೇಳಿ ಯುಧಿಷ್ಠಿರನು ಅವನಿಗೆ ಎಲ್ಲರ ಹೆಸರು ಗೋತ್ರಗಳನ್ನು ಹೇಳಿದನು: “ನೀನು ಈಗಾಗಲೇ ಕೇಳಿರಬಹುದು, ನಾನು ಪಾಂಡವ ಧರ್ಮರಾಜ. ಭೀಮಸೇನ, ಅರ್ಜುನ ಮೊದಲಾದ ನನ್ನ ಸಹೋದರರೊಂದಿಗೆ ರಾಜ್ಯವನ್ನು ಕಳೆದುಕೊಂಡು ವನವಾಸದ ಮನಸ್ಸುಮಾಡಿ ನಿನ್ನ ಹತೋಟಿಯಲ್ಲಿರುವ ಈ ಘೋರ ವನಕ್ಕೆ ಬಂದಿದ್ದೇವೆ.”
ಕಿರ್ಮೀರನು ಹೇಳಿದನು: “ಒಳ್ಳೆಯದಾಯಿತು! ತುಂಬಾಸಮಯದಿಂದ ನನಗಿದ್ದ ಆಸೆಯನ್ನು ದೈವವು ಇಂದು ನಡೆಸಿಕೊಟ್ಟಿದೆ! ಭೀಮಸೇನನನ್ನು ಕೊಲ್ಲಬೇಕೆಂದು ನಾನು ನಿತ್ಯವೂ ಆಯುಧಗಳನ್ನು ಧರಿಸಿ ಇಡೀ ಪೃಥ್ವಿಯನ್ನೇ ತಿರುಗುತ್ತಿದ್ದೆ. ಆದರೂ ಅವನು ನನಗೆ ನೋಡಲೂ ಸಿಕ್ಕಿರಲಿಲ್ಲ. ತುಂಬಾ ಸಮಯದಿಂದ ಇದ್ದ ಆಸೆಯಂತೆ ಈಗ ಅವನೇ ಇಲ್ಲಿಗೆ ಬಂದಿದ್ದುದು ಒಳ್ಳೆಯದೇ ಆಯಿತು. ಇವನೇ ವೇತ್ರಕೀಯಗೃಹದಲ್ಲಿ, ಅಷ್ಟೊಂದು ಬಲಶಾಲಿಯಾಗಿಲ್ಲದಿದ್ದರೂ ಬ್ರಾಹ್ಮಣನಂತೆ ಸುಳ್ಳು ವೇಷಧರಿಸಿ, ವಿದ್ಯಾಬಲದಿಂದ ನನ್ನ ಪ್ರಿಯ ಭ್ರಾತಾ ಬಕನನ್ನು ಕೊಂದವನು. ಹಿಂದೆ ನನ್ನ ಪ್ರಿಯ ಸಖ ವನಗೋಚರ ಹಿಂಡಿಂಬನನ್ನೂ ಕೂಡ ಈ ದುರಾತ್ಮನೇ ಕೊಂದು ಅವನ ತಂಗಿಯನ್ನು ಅಪಹರಿಸಿದನು. ಈಗ ಆ ಮೂರ್ಖನು ತಾನಾಗಿಯೇ ನನ್ನ ಈ ದಟ್ಟ ಅರಣ್ಯಕ್ಕೆ ನಾವು ಸಂಚರಿಸುವ ಸಮಯ ಆರ್ಧರಾತ್ರಿಯಾಗಿರುವಾಗ ಬಂದಿದ್ದಾನೆ. ಇಂದು ನಾನು ತುಂಬಾ ಸಮಯದಿಂದ ಇಟ್ಟುಕೊಂಡಿರುವ ದ್ವೇಷದಿಂದ ಅವನನ್ನು ಹೊಡೆದು ಅವನ ಬೊಗಸೆ ರಕ್ತದಿಂದ ಬಕನಿಗೆ ತರ್ಪಣವನ್ನು ನೀಡುತ್ತೇನೆ. ಇಂದು ನನ್ನ ಅಣ್ಣ ಮತ್ತು ಸಖರ ಋಣವನ್ನು ತೀರಿಸುತ್ತೇನೆ. ಈ ರಾಕ್ಷಸಕಂಟಕನನ್ನು ಕೊಂದು ಪರಮ ಶಾಂತಿಯನ್ನು ಹೊಂದುತ್ತೇನೆ. ಹಿಂದೆ ಬಕನು ಅವನನ್ನು ಬಿಟ್ಟುಬಿಟ್ಟಿದ್ದರೂ ಇಂದು ನಾನು ನೀನು ನೋಡುತ್ತಿದ್ದಂತೆಯೇ ಭೀಮಸೇನನನ್ನು ಕಬಳಿಸುತ್ತೇನೆ. ತುಂಬಾ ಪ್ರಾಣವನ್ನು ಹೊಂದಿರುವ ಈ ವೃಕೋದರನನ್ನು ಅಗಸ್ತ್ಯನು ಮಹಾಸುರನನ್ನು ಹೇಗೋ ಹಾಗೆ ಕೊಂದು, ತಿಂದು, ಜೀರ್ಣಿಸಿಕೊಳ್ಳುತ್ತೇನೆ.”
ಅವನ ಈ ಮಾತುಗಳಿಗೆ ಧರ್ಮಾತ್ಮ ಸತ್ಯಸಂಧ ಯುಧಿಷ್ಠಿರನು ಸಿಟ್ಟಿನಿಂದ “ಹೀಗೆಂದಿಗೂ ಆಗುವುದಿಲ್ಲ!” ಎಂದು ರಾಕ್ಷಸನಿಗೆ ಹೇಳಿದನು. ಆಗ ಮಹಾಬಾಹು ಭೀಮನು ತಕ್ಷಣವೇ ಹತ್ತುವ್ಯಾಮ ಎತ್ತರವಿರುವ ಮರವೊಂದನ್ನು ಕಿತ್ತು ಅದರ ಎಲೆಗಳನ್ನೆಲ್ಲಾ ಹರಿದನು. ಕಣ್ಣು ಮುಚ್ಚಿ ತೆರೆಯುವುದರೊಳಗೆ ವಿಜಯ ಅರ್ಜುನನೂ ಕೂಡ ವಜ್ರದಷ್ಟೇ ಘಾತಿಯನ್ನುಂಟುಮಾಡಬಲ್ಲ ತನ್ನ ಗಾಂಡೀವವನ್ನು ಅಣಿಮಾಡಿ ಟೇಂಕರಿಸಿದನು. ಅರ್ಜುನನನ್ನು ತಡೆದು ಭೀಮನು ಆ ಘೋರದರ್ಶನ ರಾಕ್ಷಸನೆಡೆಗೆ ನುಗ್ಗಿ “ನಿಲ್ಲು! ನಿಲ್ಲು!” ಎಂದು ಘರ್ಜಿಸಿದನು. ಹೀಗೆ ಹೇಳಿ ಸಿಟ್ಟಿಗೆದ್ದ ಬಲಶಾಲಿ ಪಾಂಡವನು ಸೊಂಟವನ್ನು ಬಿಗಿದು, ಕೈಗಳನ್ನು ಮುಷ್ಟಿಮಾಡಿ ತಿರುಗಿಸುತ್ತಾ ಹಲ್ಲು ಬಿಗಿದು ತುಟಿಕಚ್ಚಿದನು. ಮರವನ್ನೇ ಆಯುಧವಾಗಿ ಎತ್ತಿಕೊಂಡು ಭೀಮನು ವೇಗದಿಂದ ಅವನ ಕಡೆ ಮುನ್ನುಗ್ಗಿ ಯಮದಂಡದಂತೆ ಅವನ ನೆತ್ತಿಯಮೇಲೆ ಜೋರಾಗಿ ಹೊಡೆದನು. ಆದರೂ ಆ ರಾಕ್ಷಸನು ಹೊಡೆತದಿಂದ ಒಂದು ಸ್ವಲ್ಪವೂ ಜರುಗಾಡಲಿಲ್ಲ. ಆಗ ಅವನು ಮಿಂಚಿನಂತೆ ಉರಿಯುತ್ತಿರುವ ತನ್ನ ದೊಂದಿಯನ್ನು ಎಸೆಯಲು, ಪ್ರಹಾರಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಎಡಗಾಲಿನಿಂದ ಒದೆದು ಅದನ್ನು ಪುನಃ ರಾಕ್ಷಸನ ಕಡೆಗೆ ಎಸೆದನು. ಆಗ ಕಿರ್ಮೀರನು ಬೇಗನೆ ಒಂದು ಮರವನ್ನು ಕಿತ್ತು ಸಮರದಲ್ಲಿ ಕೃದ್ಧ ದಂಡಪಾಣಿಯಂತೆ ಪಾಂಡವನೆಡೆಗೆ ಎಸೆದನು. ಹೀಗೆ ಹಿಂದೆ ರಾಜ್ಯವನ್ನು ಬಯಸಿದ ಸಹೋದರರಾದ ವಾಲಿ-ಸುಗ್ರೀವರ ನಡುವೆ ನಡೆದ ಹಾಗೆ ಎಲ್ಲ ಮರಗಳನ್ನೂ ನಾಶಪಡೆಸಿದ ಮರಗಳ ಮಹಾಯುದ್ಧವೇ ಪ್ರಾರಂಭವಾಯಿತು. ಆನೆಗಳ ತಲೆಯ ಮೇಲೆ ಎಸೆದ ಕಮಲದ ಹೂವಿನ ಎಸಳುಗಳಂತೆ ಅವರಿಬ್ಬರ ತಲೆಗಳ ಮೇಲೆ ಬಿದ್ದ ಮರಗಳು ಒಡೆದು ಚೂರು ಚೂರಾದವು. ಆ ಮಹಾವನದಲ್ಲಿದ್ದ ಬಹಳಷ್ಟು ಮರಗಳು ಮುರಿದು ತುಂಡಾಗಿ ಚಿಂದಿಮಾಡಿ ಬಿಸಾಡಿದ ಬಟ್ಟೆಗಳಂತೆ ಕಂಡುಬಂದವು. ರಾಕ್ಷಸ ಮುಖ್ಯ ಮತ್ತು ನರೋತ್ತಮನ ನಡುವೆ ಆ ಮರಗಳ ಯುದ್ಧವು ಬಹಳಷ್ಟು ಸಮಯದ ವರೆಗೆ ನಡೆಯಿತು. ಆಗ ಕೃದ್ಧ ರಾಕ್ಷಸನು ಒಂದು ಬಂಡೆಗಲ್ಲನ್ನು ಎತ್ತಿ ಹೋರಾಟದಲ್ಲಿ ನಿಂತಿದ್ದ ಭೀಮನೆಡೆಗೆ ಎಸೆಯಲು ಭೀಮನು ತತ್ತರಿಸಿದನು. ಅವನು ಶಿಲೆಯ ಹೊಡೆತದಿಂದ ಜಡನಾಗಲು ಆ ರಾಕ್ಷಸನು ಸ್ವರ್ಭಾನುವು ತನ್ನ ಹೊರಬೀಳುವ ಕಿರಣಗಳಿಂದ ಭಾಸ್ಕರನನ್ನು ಮುತ್ತುವ ಹಾಗೆ ತನ್ನ ಬಾಹುಗಳನ್ನು ಬೀಸಿ ಓಡಿಬಂದು ಆಕ್ರಮಿಸಿದನು. ಅವರು ಒಬ್ಬರನ್ನೊಬ್ಬರು ಹಿಡಿದು, ಪರಸ್ಪರರನ್ನು ಎಳೆಯುತ್ತಾ ಇಬ್ಬರೂ ಪ್ರಾಯಕ್ಕೆ ಬಂದ ಘೂಳಿಗಳು ಹೊಡೆದಾಡುವಂತೆ ಕಂಡರು.
ಉಗುರು ದಾಡೆಗಳಿಂದ ಹೊಡೆದಾಡುವ ಎರಡು ಹುಲಿಗಳಂತೆ ಅವರಿಬ್ಬರ ನಡುವೆ ಬಹಳ ಹೊಡೆತದ ಆ ಸುದಾರುಣ ಯುದ್ಧವು ನಡೆಯಿತು. ದುರ್ಯೋಧನನ ಮೇಲಿನ ರೋಷದಿಂದ ರೊಚ್ಚಿಗೆದ್ದಿದ್ದ ವೃಕೋದರನ ಬಾಹುಬಲವು ದ್ರೌಪದಿಯ ಕಣ್ಣೆದುರಿಗೆ ಇನ್ನೂ ಹೆಚ್ಚಾಯಿತು. ಮುಖದ ಕರಟೆಯೊಡೆದು ಸೋರುತ್ತಿದ್ದ ಸೊಕ್ಕೆದ್ದ ಆನೆಯು ಇನ್ನೊಂದು ಆನೆಯ ಮೇಲೆ ಎರಗಿ ಬೀಳುವಂತೆ ಅವನ ಮೇಲೆ ಬಿದ್ದು ರೋಷದಿಂದ ತನ್ನ ಬಾಹುಗಳಿಂದ ಅವನನ್ನು ಬಿಗಿಯಾಗಿ ಹಿಡಿದನು. ಅಷ್ಟರಲ್ಲೇ ಆ ವೀರ್ಯವಾನ್ ರಾಕ್ಷಸನು ಬಲಶಾಲಿಗಳಲ್ಲಿ ಶ್ರೇಷ್ಠ ಭೀಮಸೇನನನ್ನು ಬಲವನ್ನುಪಯೋಗಿಸಿ ಹಿಡಿದು ಕೆಳಗುರುಳಿಸಿದನು. ಆ ಇಬ್ಬರು ಬಲಶಾಲಿಗಳು ಭುಜಗಳಿಂದ ಹೊಡೆದಾಡುತ್ತಿರುವಾಗ ಬಿದಿರು ಮೆಳೆಗಳ ಘರ್ಷಣೆಯಿಂದ ಬರುವಂತೆ ಘೋರ ಶಬ್ಧವು ಕೇಳಿಬಂದಿತು. ಆಗ ವೃಕೋದರನು ಅವನ ಸೊಂಟವನ್ನು ಹಿಡಿದು ಚಂಡಮಾರುತವು ಮರವನ್ನು ಅಲುಗಾಡಿಸುವ ಹಾಗೆ ಜೋರಾಗಿ ಅಲುಗಾಡಿಸಿದನು. ಭೀಮನ ಬಿಗಿಯಾದ ಹಿಡಿತದಲ್ಲಿ ಸಿಕ್ಕಿದ್ದ ಅವನು ರಣದಲ್ಲಿ ಭುಸುಗುಟ್ಟುತ್ತಾ ದುರ್ಬಲನಾದರೂ ಶಕ್ತಿಯಿದ್ದಷ್ಟೂ ಪಾಂಡವನನ್ನು ಎಳೆದಾಡಿದನು. ಅವನು ಈ ರೀತಿ ಆಯಾಸಗೊಂಡಿದ್ದುದನ್ನು ನೋಡಿ ವೃಕೋದರನು ಅವನನ್ನು ಮೂಗುದಾಣವನ್ನು ಹಾಕಿ ಎತ್ತನ್ನು ನಿಯಂತ್ರಿಸುವಂತೆ ತನ್ನ ಬಾಹುಗಳಿಂದ ಬಿಗಿಮಾಡಿದನು. ಭೇರಿಯು (ನಗಾರಿಯು) ಒಡೆದು ಹೋದಂತೆ ಜೋರಾಗಿ ಕೂಗಿ ಅವನನ್ನು ತುಂಬಾ ಹೊತ್ತು ಹೊರಳಾಡಿ ಮೂರ್ಛೆಯಾಗುವವರೆಗೆ ತಿರುಗಿಸಿದನು. ಅವನು ಕುಸಿಯುತ್ತಿದ್ದಾನೆ ಎಂದು ತಿಳಿದ ಪಾಂಡುನಂದನನು ಆ ರಾಕ್ಷಸನನ್ನು ಹಿಡಿದು ತಕ್ಷಣವೇ ಪಶುವನ್ನು ಕೊಲ್ಲುವ ಹಾಗೆ ಅವನ ಕುತ್ತಿಗೆಯನ್ನು ಹಿಸುಕಿ ಕೊಂದನು. ಆ ಅಧಮ ರಾಕ್ಷಸನ ಸೊಂಟವನ್ನು ತನ್ನ ತೊಡೆಯಿಂದ ಹಿಡಿದಿಟ್ಟು ವೃಕೋದರನು ತನ್ನ ಬಾಹುಗಳಿಂದ ಅವನ ಕುತ್ತಿಗೆಯನ್ನು ಹಿಸುಕಿದನು. ಅವನ ಎಲ್ಲ ಅಂಗಗಳೂ ಜಡವಾಗಲು ಮತ್ತು ತೆರೆದ ಕಣ್ಣುಗಳು ತೇಲಿಬರಲು, ಅವನನ್ನು ನೆಲದ ಮೇಲೆ ಬಿಸಾಡಿ ಈ ಮಾತುಗಳನ್ನಾಡಿದನು: “ಪಾಪಿ! ಹಿಡಿಂಬ ಮತ್ತು ಬಕರ ಮೇಲೆ ನೀನು ಇನ್ನು ಕಣ್ಣೀರಿಡುವುದಿಲ್ಲ. ನೀನು ಈಗ ಯಮನ ಸದನಕ್ಕೆ ಹೋಗಿಯಾಯಿತು!”
ಕ್ರೋಧದಿಂದ ಕಣ್ಣುಗಳನ್ನರಳಿಸಿ ವಸ್ತ್ರ ಆಭರಣಗಳನ್ನು ಕಳೆದುಕೊಂಡ, ನರಳಾಡುತ್ತಿದ್ದ ಬುದ್ಧಿಯನ್ನೇ ಕಳೆದುಕೊಂಡ ಆ ರಾಕ್ಷಸನಿಗೆ ಹೀಗೆ ಹೇಳಿ ಆ ಪುರುಷಪ್ರವೀರನು ಜೀವವಿಲ್ಲದ ಹೆಣವನ್ನು ಬಿಟ್ಟನು. ಕಪ್ಪು ಮೋಡದಂತಿದ್ದ ಅವನು ಹತನಾಗಲು ಆ ರಾಜಪುತ್ರರು ಕೃಷ್ಣೆಯನ್ನು ಮುಂದಿಟ್ಟುಕೊಂಡು, ಭೀಮನ ಅನೇಕ ಗುಣಗಳನ್ನು ಪ್ರಶಂಸಿಸುತ್ತಾ ಸಂತೋಷದಿಂದ ದ್ವೈತವನದೆಡೆಗೆ ನಡೆದರು. ಹೀಗೆ ಕೌರವ ಧರ್ಮರಾಜನ ವಚನದಂತೆ ಆ ಕಿರ್ಮೀರನು ಹತನಾದನು. ಆ ವನವನ್ನು ನಿಷ್ಕಂಟಕವನ್ನಾಗಿ ಮಾಡಿ ಅಪರಾಜಿತ ಧರ್ಮಜ್ಞನು ದ್ರೌಪದಿಯೊಡನೆ ಅಲ್ಲಿ ವಸತಿಯನ್ನು ಮಾಡಿದನು. ಆ ಎಲ್ಲ ಭರತರ್ಷಭರೂ ದ್ರೌಪದಿಯನ್ನು ಸಮಾಧಾನಪಡೆಸಿ ಸಂತೋಷ-ಪ್ರೀತಿಗಳಿಂದ ವೃಕೋದರನನ್ನು ಪ್ರಶಂಸಿಸಿದರು. ಭೀಮನ ಬಾಹುಬಲದಿಂದ ರಾಕ್ಷಸನು ಕೆಳಗುರುಳಿಸಲ್ಪಟ್ಟು ನಾಶಗೊಂಡ ನಂತರ ಆ ವೀರರು ಕಂಟಕವಿಲ್ಲದೇ ಕ್ಷೇಮದಿಂದ ವನವನ್ನು ಪ್ರವೇಶಿಸಿದರು.
ಅದೇ ಮಾರ್ಗದಲ್ಲಿ ಹೋಗುತ್ತಿರುವಾಗ ನಾನು ಭೀಮನ ಬಲದಿಂದ ಹತನಾದ ಆ ಮಹಾ ಭಯಾನಕ ದುಷ್ಟಾತ್ಮನನ್ನು ಹರಡಿ ಬಿದ್ದಿರುವುದನ್ನು ನೋಡಿದೆ. ಅಲ್ಲಿ ಸೇರಿದ್ದ ಬ್ರಾಹ್ಮಣರು ಹೇಳಿದಾಗಲೇ ನಾನು ಭೀಮನ ಈ ಕೃತ್ಯದ ಕುರಿತು ಕೇಳಿದೆ.”
ರಾಕ್ಷಸೋತ್ತಮ ಕಿರ್ಮೀರನು ಈ ರೀತಿ ಹತನಾದುದನ್ನು ಕೇಳಿದ ರಾಜನು ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು.