ಯುಧಿಷ್ಠಿರನ ವೈಭವವನ್ನು ಕಂಡ ದುರ್ಯೋಧನನ ಅಸೂಯೆ-ಸಂತಾಪ; ದ್ಯೂತದ ಸಂಚು
ದುರ್ಯೋಧನನ ಸಂತಾಪ
ಇಂದ್ರಪ್ರಸ್ಥದಲ್ಲಿ ಪಾಂಡವರ ಮಯ ಸಭೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ದುರ್ಯೋಧನನು ಶಕುನಿಯೊಡನೆ ನಿಧಾನವಾಗಿ ಸಭೆಯ ಸರ್ವಸ್ವವನ್ನೂ ನೋಡಿದನು. ಕುರುನಂದನನು ಇದಕ್ಕೂ ಮೊದಲು ತನ್ನ ನಾಗಸಾಹ್ವಯದಲ್ಲಿ ನೋಡಿಯೇ ಇರದ ದಿವ್ಯ ಅಭಿಪ್ರಾಯಗಳನ್ನು ಅಲ್ಲಿ ನೋಡಿದನು. ಒಮ್ಮೆ ಮಹೀಪತಿ ರಾಜ ಧಾರ್ತರಾಷ್ಟ್ರನು ಸ್ಪಟಿಕದಿಂದ ನಿರ್ಮಿಸಿದ್ದ ಸಭಾಮಧ್ಯದ ಒಂದು ನೆಲದ ಬಳಿ ಬಂದು ನೀರಿದೆಯೆಂದು ಶಂಕಿಸಿ ಬುದ್ಧಿಮೋಹಿತನಾಗಿ ತನ್ನ ವಸ್ತ್ರಗಳನ್ನು ಎತ್ತಿಹಿಡಿದನು. ನಂತರ ನಾಚಿಕೆಯಿಂದ ನೊಂದ ಅವನು ಸಭೆಯ ಇನ್ನೊಂದೆಡೆ ಹೋದನು. ಇನ್ನೊಮ್ಮೆ ಸ್ಪಟಿಕ ಕಮಲಗಳಿಂದ ಶೋಭಿತ ಸ್ಪಟಿಕದಂತಿದ್ದ ನೀರನ್ನು ನೋಡಿ ನೆಲವೆಂದು ತಿಳಿದು ವಸ್ತ್ರಗಳ ಸಮೇತ ನೀರಿನಲ್ಲಿ ಬಿದ್ದನು. ನೀರಿನಲ್ಲಿ ಬಿದ್ದುದನ್ನು ನೋಡಿ ಜೋರಾಗಿ ನಕ್ಕ ಅಲ್ಲಿದ್ದ ಸೇವಕರೆಲ್ಲರೂ ರಾಜಶಾಸನದಂತೆ ಅವನಿಗೆ ಶುಭವಸ್ತ್ರಗಳನ್ನು ಕೊಟ್ಟರು. ಅವನನ್ನು ಆ ಅವಸ್ಥೆಯಲ್ಲಿ ನೋಡಿದ ಮಹಾಬಲಿ ಭೀಮಸೇನ, ಅರ್ಜುನ ಮತ್ತು ಅವಳಿಗಳೆಲ್ಲರೂ ಜೋರಾಗಿ ನಕ್ಕರು. ಅವರ ಅಪಹಾಸ್ಯದಿಂದ ತನಗಾದ ನೋವನ್ನು ಅವರ ಕಡೆ ನೋಡದೆಯೇ ತನ್ನ ಮುಖದಲ್ಲಿಯೇ ಆ ಅಮರ್ಷಣನು ಬಚ್ಚಿಟ್ಟುಕೊಂಡನು. ಇನ್ನೊಮ್ಮೆ ಅವನು ಗಟ್ಟಿಯಾದ ನೆಲವನ್ನು ನೀರಿನ ಕೊಳವೆಂದು ತಿಳಿದು ತನ್ನ ವಸ್ತ್ರವನ್ನು ಮೇಲಕ್ಕೆತ್ತಿ ದಾಟಿದುದನ್ನು ನೋಡಿ ಎಲ್ಲರೂ ಪುನಃ ನಕ್ಕರು. ಒಮ್ಮೆ ಅವನು ತೆರದಹಾಗೆ ತೋರುತ್ತಿದ್ದ ದ್ವಾರದ ಒಳಗೆ ಹೋಗಲು ಪ್ರಯತ್ನಿಸಿ ತನ್ನ ಹಣೆಯನ್ನು ಚಚ್ಚಿಕೊಂಡನು. ಇನ್ನೊಮ್ಮೆ ದ್ವಾರವು ಮುಚ್ಚಿದೆಯೆಂದು ತಿಳಿದು ಬಾಗಿಲಿನಲ್ಲಿಯೇ ಬಿದ್ದನು. ಆ ಅದ್ಭುತ ಸಮೃದ್ಧ ಮಹಾಕ್ರತು ರಾಜಸೂಯವನ್ನು ನೋಡಿ ಮತ್ತು ಅಲ್ಲಿ ಈ ರೀತಿಯ ವಿವಿಧ ಪರಿಪಾಟಗಳನ್ನು ಅನುಭವಿಸಿದ ನೃಪ ದುರ್ಯೋಧನನು ಮನಸ್ಸಿನಲ್ಲಿಯೇ ಅಸಂತುಷ್ಟನಾಗಿ ಪಾಂಡವರಿಂದ ಅಪ್ಪಣೆಯನ್ನು ಪಡೆದು ಗಜಸಾಹ್ವಯಕ್ಕೆ ಹೊರಟನು.
ಪಾಂಡವರ ಏಳ್ಗೆಯನ್ನು ಸಹಿಸಲಾಗದೇ ಧ್ಯಾನಮಗ್ನನಾದ ನೃಪತಿ ದುರ್ಯೋಧನನಲ್ಲಿ ಕೆಟ್ಟ ಯೋಚನೆಗಳು ಹುಟ್ಟಿದವು. ಪಾರ್ಥರ ಸಂತೋಷವನ್ನು, ಅವರಿಗೆ ವಶರಾದ ಪಾರ್ಥಿವರನ್ನು, ಅವರ ಸಣ್ಣ ಮಕ್ಕಳನ್ನೂ ಸೇರಿಸಿ ಎಲ್ಲರ ಹಿತವನ್ನೇ ಸರ್ವಲೋಕವೂ ಬಯಸುತ್ತಿರುವುದನ್ನು, ಮಹಾತ್ಮ ಪಾಂಡವರ ಇತರ ಅತ್ಯುನ್ನತ ಮಹಿಮೆಗಳನ್ನು ನೋಡಿ ಧಾರ್ತರಾಷ್ಟ್ರ ದುರ್ಯೋಧನನು ವಿವರ್ಣನಾದನು. ಧೀಮಂತ ಧರ್ಮರಾಜನ ಆ ಅನುಪಮ ಸುಂದರ ಸಭೆಯ ಕುರಿತೇ ಯೋಚಿಸುತ್ತಾ ಏಕಾಗ್ರನಾಗಿ ಪ್ರಮತ್ತನಾಗಿ ಹೊರಟ ಧೃತರಾಷ್ಟ್ರ ಪುತ್ರ ದುರ್ಯೋಧನನು ಪುನಃ ಪುನಃ ಮಾತನಾಡುತ್ತಿದ್ದ ಸುಬಲಜನಲ್ಲಿ ಏನನ್ನೂ ಮಾತನಾಡಲಿಲ್ಲ. ಆ ಅನೇಕಾಗ್ರನನ್ನು ನೋಡಿದ ಶಕುನಿಯು ಕೇಳಿದನು:
“ದುರ್ಯೋಧನ! ಯಾವ ಕಾರಣಕ್ಕಾಗಿ ಈ ರೀತಿ ನಿಟ್ಟಿಸುರುಬಿಡುತ್ತಾ ಪ್ರಯಾಣಿಸುತ್ತಿರುವೆ?”
ದುರ್ಯೋಧನನು ಹೇಳಿದನು:
“ಮಹಾತ್ಮ ಶ್ವೇತಾಶ್ವನ ಅಸ್ತ್ರಪ್ರತಾಪದಿಂದ ಗೆಲ್ಲಲ್ಪಟ್ಟ ಇಡೀ ಪೃಥ್ವಿಯೇ ಯುಧಿಷ್ಠಿರನ ವಶವಾದುದನ್ನು ನಾನು ಕಂಡೆ. ಮಾವ! ದೇವತೆಗಳಲ್ಲಿ ಶಕ್ರನ ಯಜ್ಞವು ಹೇಗಿರುತ್ತದೆಯೋ ಹಾಗೆ ನಡೆದ ಪಾರ್ಥನ ಯಜ್ಞವನ್ನು ನೋಡಿದೆ. ಹಗಲು ರಾತ್ರಿ ಸುಡುತ್ತಿರುವ ಅಸೂಯೆಯು ನನ್ನನ್ನು ತುಂಬಿಕೊಂಡಿದೆ ಮತ್ತು ಬೇಸಗೆಯಲ್ಲಿ ಬತ್ತಿಹೋಗುವ ಕೊಳದಂತೆ ನಾನು ಸೊರಗುತ್ತಿದ್ಡೇನೆ. ನೋಡು! ಸಾತ್ವತಮುಖ್ಯನು ಶಿಶುಪಾಲನನ್ನು ಉರುಳಿಸಿದನು. ಆದರೂ ಅವನನ್ನು ಬೆಂಬಲಿಸುವ ಯಾವ ಪುರುಷನೂ ಅಲ್ಲಿರಲಿಲ್ಲ. ಪಾಂಡವೋದ್ಭವ ವಹ್ನಿಯಿಂದ ಸುಡುತ್ತಿರುವ ಆ ರಾಜರು ಅವರ ಅಪರಾಧವನ್ನು ಕ್ಷಮಿಸಿದರು. ಆದರೂ ಅದನ್ನು ಯಾರುತಾನೆ ಕ್ಷಮಿಸಬಲ್ಲರು? ವಾಸುದೇವನ ಯಥಾಯುಕ್ತ ಮಹಾಕಾರ್ಯದಿಂದಾಗಿ ಮಹಾತ್ಮ ಪ್ರತಾಪಿ ಪಾಂಡವರು ಯಶಸ್ವಿಯಾದರು. ಹಾಗೆಯೇ ರಾಜನಿಗೆಂದು ವಿವಿಧ ರತ್ನಗಳನ್ನು ತಂದು ತೆರಿಗೆ ಕೊಡುವ ವೈಶ್ಯರಂತೆ ನೃಪರು ಕೌಂತೇಯನ ಉಪಸ್ಥಿತಿಯಲ್ಲಿದ್ದರು. ಪಾಂಡವರ ಆ ಸಂಪತ್ತನ್ನು ನೋಡಿ ನಾನು ಅಸೂಯೆಯ ವಶದಲ್ಲಿ ಬಂದು ಔಚಿತ್ಯವಲ್ಲದಿದ್ದರೂ ಸುಡುತ್ತಿದ್ದೇನೆ. ಬೆಂಕಿಯಲ್ಲಿಯಾದರೂ ಬೀಳುತ್ತೇನೆ, ವಿಷವನ್ನಾದರೂ ಸೇವಿಸುತ್ತೇನೆ, ಅಥವಾ ನೀರಿನಲ್ಲಿ ಮುಳುಗುತ್ತೇನೆ, ಆದರೆ ಇನ್ನು ಜೀವಿಸುವುದನ್ನು ಸಹಿಸಲಾರೆ. ಯಾಕೆಂದರೆ ಯಾವ ಸತ್ವಯುತ ಮನುಷ್ಯ ತಾನೇ ತನ್ನ ಪ್ರತಿಸ್ಪರ್ಧಿಗಳು ವೃದ್ಧಿಯಾಗುವುದನ್ನು ಮತ್ತು ಸ್ವತಃ ಹಾನಿಯನ್ನು ಹೊಂದುವುದನ್ನು ನೋಡಿಯೂ ಸಹಿಸಿಕೊಳ್ಳುತ್ತಾನೆ? ಅವರಿಗೆ ದೊರಕಿರುವ ಶ್ರೇಯಸ್ಸನ್ನು ನಾನು ಸಹಿಸಿಕೊಂಡೆನೆಂದರೆ ನಾನು ಸ್ತ್ರೀಯೂ ಆಗಿರಲಿಕ್ಕಿಲ್ಲ ಸ್ತ್ರೀಯಲ್ಲದೆಯೂ ಇರಲಿಕ್ಕಿಲ್ಲ ಅಥವಾ ಪುರುಷನೂ ಆಗಿರಲಿಕ್ಕಿಲ್ಲ ಪುರುಷನಲ್ಲದೆಯೂ ಇರಲಿಕ್ಕಿಲ್ಲ. ಪೃಥ್ವಿಯಲ್ಲಿ ಅವರ ಈಶ್ವರತ್ವವನ್ನು ಮತ್ತು ಅಂಥಹ ಸಂಪತ್ತು, ಅಂಥಹ ಯಜ್ಞವನ್ನು ನೋಡಿದ ನನ್ನಂಥಹ ಯಾರು ತಾನೇ ಜ್ವರದಿಂದ ಸುಡುವುದಿಲ್ಲ? ನಾನೊಬ್ಬನೇ ಅಂಥಹ ನೃಪಶ್ರೀಯನ್ನು ಪಡೆಯಲು ಶಕ್ಯನಿಲ್ಲ. ನನಗೆ ಸಹಾಯಮಾಡುವ ಯಾರನ್ನು ಕೂಡ ನಾನು ಕಾಣುತ್ತಿಲ್ಲ. ಆದುದರಿಂದ ನಾನು ಮೃತ್ಯುವನ್ನೇ ಯೋಚಿಸುತ್ತಿದ್ದೇನೆ. ಕುಂತೀಸುತನು ಒಟ್ಟುಗೂಡಿಸಿರುವ ಆ ಶುಭ್ರ ಶ್ರೀಯನ್ನು ನೋಡಿ ನನಗನ್ನಿಸುತ್ತದೆ: ದೈವವೇ ಪರ, ಪೌರುಷವೆಲ್ಲವೂ ನಿರರ್ಥಕ. ಹಿಂದೆ ನಾನು ಅವನ ವಿನಾಶಕ್ಕೆ ಪಯತ್ನಿಸಿದೆ. ಆದರೆ ಅವೆಲ್ಲವನ್ನು ಅತಿಕ್ರಮಿಸಿ ಅವನು ನೀರಿನಲ್ಲಿನ ಪಂಕಜದಂತೆ ವೃದ್ಧಿಯಾಗಿದ್ದಾನೆ. ಆದರಿಂದ ನನಗನ್ನಿಸುತ್ತದೆ: ದೈವವೇ ಪರ, ಪೌರುಷವು ನಿರರ್ಥಕ. ಧಾರ್ತರಾಷ್ಟ್ರರು ನಿತ್ಯವೂ ಕುಸಿಯುತ್ತಿದ್ದಾರೆ ಮತ್ತು ಪಾರ್ಥರು ವರ್ಧಿಸುತ್ತಿದ್ದಾರೆ. ಅವರ ಸಂಪತ್ತು, ಸಭೆ, ಮತ್ತು ಅಲ್ಲಿಯ ಕಾವಲುಗಾರರು ಮಾಡಿದ ಅಪಹಾಸ ಇವೆಲ್ಲವೂ ನನ್ನನ್ನು ಅಗ್ನಿಯಂತೆ ಸುಡುತ್ತಿವೆ. ಇಂದು ಈ ಕಹಿ ದುಃಖವನ್ನು ಅನುಭವಿಸಲು ಬಿಡು ಮತ್ತು ನನ್ನನ್ನು ಸಮಾವೇಶಗೊಂಡಿರುವ ಅಸೂಯೆಯ ಕುರಿತು ಧೃತರಾಷ್ಟ್ರನಲ್ಲಿ ನಿವೇದಿಸು.”
ಶಕುನಿಯಿಂದ ದ್ಯೂತದ ಸಲಹೆ
ಶಕುನಿಯು ಹೇಳಿದನು:
“ದುರ್ಯೋಧನ! ಯುಧಿಷ್ಠಿರನ ಕುರಿತು ಯಾವುದೇ ರೀತಿಯ ಅಸೂಯೆ ಮಾಡಬೇಡ. ಯಾಕೆಂದರೆ ಪಾಂಡವರು ಸದಾ ಭಾಗ್ಯವಂತರಾಗಿದ್ದಾರೆ. ಹಿಂದೆ ನೀನು ಅವರ ಮೇಲೆ ಅನೇಕ ಉಪಾಯ ಪ್ರಯತ್ನಗಳನ್ನು ಮಾಡಿದ್ದೀಯೆ. ಆದರೆ ಆ ನರವ್ಯಾಘ್ರರು ಭಾಗ್ಯದಿಂದಲೇ ವಿಮುಕ್ತರಾದರು. ಪೃಥ್ವಿಯನ್ನು ಗೆಲ್ಲುವುದಕ್ಕೆ ಅವರು ದ್ರೌಪದಿಯನ್ನು ಪತ್ನಿಯನಾಗಿ, ಸುತರ ಸಹಿತ ದ್ರುಪದನನ್ನು ಹಾಗೂ ವೀರ್ಯವಾನ್ ವಾಸುದೇವನನ್ನು ಸಹಾಯಕರನ್ನಾಗಿ ಗೆದ್ದರು. ಅವರು ಪೃಥ್ವೀಪತಿ ತಂದೆಯ ಭಾಗವಾದ ಸಂಪತ್ತನ್ನು ಪಡೆದರು ಮತ್ತು ಅವರದ್ದೇ ತೇಜಸ್ಸಿನಿಂದ ಅದನ್ನು ವೃದ್ಧಿಸಿದರು. ಅದರಲ್ಲಿ ದುಃಖಪಡುವಂಥಹುದು ಏನಿದೆ? ಮಹೇಷುಧೀ ಧನಂಜಯನು ಹುತಾಶನನನ್ನು ತೃಪ್ತಿಗೊಳಿಸಿ ಗಾಂಡೀವವನ್ನೂ, ಅಕ್ಷಯ ಭತ್ತಳಿಕೆಗಳನ್ನೂ, ದಿವ್ಯಾಸ್ತ್ರಗಳನ್ನೂ ಪಡೆದನು. ಆ ಉತ್ತಮ ಧನುಸ್ಸಿನಿಂದ ಮತ್ತು ತನ್ನದೇ ಬಾಹುವೀರ್ಯದಿಂದ ಅವನು ಮಹೀಪಾಲರನ್ನು ವಶಗೊಳಿಸಿದನು. ಅದರಲ್ಲಿ ಬೇಸರಪಡುವಂಥಹುದು ಏನಿದೆ? ಆ ಪರಂತಪ ಸವ್ಯಸಾಚಿಯು ದಹಿಸುತ್ತಿರುವ ಅಗ್ನಿಯಿಂದ ದಾನವ ಮಯನನ್ನು ಉಳಿಸಿ ಅವನಿಂದ ಸಭೆಯನ್ನು ಕಟ್ಟಿಸಿದನು. ಅದೇ ಮಯನ ಹೇಳಿಕೆಯಂತೆ ಕಿಂಕರರೆಂಬ ಹೆಸರಿನ ಭಯಂಕರ ರಾಕ್ಷಸರು ಆ ಸಭೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ದುಃಖಿಸುವುದಾದರೂ ಏನಿದೆ? ನಿನ್ನ ಸಹಾಯಕರು ಯಾರೂ ಇಲ್ಲ ಎಂದು ಹೇಳುತ್ತಿದ್ದೀಯಲ್ಲ. ಅದು ಸುಳ್ಳು! ನಿನ್ನ ಮಹಾರಥಿ ಸಹೋದರರೇ ನಿನ್ನ ಸಹಾಯಕರು. ಹಾಗೆಯೇ ತನ್ನ ಧೀಮಂತ ಪುತ್ರ ಸಹಿತ ಮಹೇಷ್ವಾಸ ದ್ರೋಣ, ಸೂತಪುತ್ರ ರಾಧೇಯ, ಮತ್ತು ಮಹಾರಥಿ ಗೌತಮಿ ಇವರೂ ನಿನ್ನವರೇ. ಸೋದರರೊಂದಿಗೆ ನಾನೂ ಕೂಡ, ಮತ್ತು ವೀರ್ಯವಂತ ಸೌಮದತ್ತಿ, ಇವರೆಲ್ಲರ ಜೊತೆಗೂಡಿ ನೀನು ಇಡೀ ವಸುಂಧರೆಯನ್ನೇ ಜಯಿಸಬಹುದು.”
ದುರ್ಯೋಧನನು ಹೇಳಿದನು:
“ರಾಜನ್! ನೀನು ಒಪ್ಪುವುದಾದರೆ, ನಿನ್ನ ಮತ್ತು ಇತರ ಮಹಾರಥಿಗಳೊಡಗೂಡಿ ಅವರನ್ನು ಸೋಲಿಸುತ್ತೇನೆ. ಅವರನ್ನು ಸೋಲಿಸಿದಾಗ ಈ ಮಹಿ, ಸರ್ವ ಪೃಥಿವೀಪಾಲರು, ಆ ಸಭೆ, ಆ ಮಹಾ ಐಶ್ವರ್ಯ ಎಲ್ಲವೂ ನನ್ನದಾಗುತ್ತದೆ.”
ಶಕುನಿಯು ಹೇಳಿದನು:
“ಆ ಮಹಾರಥಿ, ಮಹೇಷ್ವಾಸ, ಕೃತಾಸ್ತ್ರ ಮತ್ತು ಯುದ್ಧದುರ್ಮದ ಧನಂಜಯ, ವಾಸುದೇವ, ಭೀಮಸೇನ, ಯುಧಿಷ್ಠಿರ, ನಕುಲ, ಸಹದೇವ ಮತ್ತು ಪುತ್ರರ ಸಹಿತ ದ್ರುಪದ ಇವರನ್ನು ಬಲದಿಂದ ಯುದ್ಧದಲ್ಲಿ ಜಯಿಸಲು ಸುರಗಣರಿಗೂ ಶಕ್ಯವಿಲ್ಲ. ರಾಜನ್! ಆದರೆ ಯುಧಿಷ್ಠಿರನನ್ನು ಹೇಗೆ ಸೋಲಿಸಬಹುದು ಎನ್ನುವುದನ್ನು ನಾನು ತಿಳಿದಿದ್ದೇನೆ. ಅದನ್ನು ಕೇಳು ಮತ್ತು ಅದರಂತೆ ಮಾಡು.”
ದುರ್ಯೋಧನನು ಹೇಳಿದನು:
“ಮಾವ! ಸುಹೃದಯರಿಗೆ ಮತ್ತು ಇತರ ಮಹಾತ್ಮರಿಗೆ ಅಪ್ರಮಾದವಾಗದ ರೀತಿಯಲ್ಲಿ ಅವರನ್ನು ಜಯಿಸಲು ಶಕ್ಯವಿದ್ದರೆ ಅದನ್ನು ಹೇಳು!”
ಶಕುನಿಯು ಹೇಳಿದನು:
“ಕೌಂತೇಯನು ದ್ಯೂತಪ್ರಿಯ. ಆದರೆ ಜೂಜಾಡುವುದು ಅವನಿಗೆ ಗೊತ್ತಿಲ್ಲ. ಆಹ್ವಾನಿಸಿದರೆ ಆ ರಾಜೇಂದ್ರನಿಗೆ ನಿರಾಕರಿಸಲು ಕಷ್ಟವಾಗುತ್ತದೆ. ನಾನು ಜೂಜಿನಲ್ಲಿ ಕುಶಲ ಮತ್ತು ಇದರಲ್ಲಿ ನನ್ನ ಸರಿಸಮನು ಮೂರೂ ಲೋಕಗಳಲ್ಲಿಯೂ, ಭೂಮಿಯಲ್ಲಿಯೂ ಯಾರೂ ಇಲ್ಲ. ಕೌಂತೇಯನನ್ನು ದ್ಯೂತಕ್ಕೆ ಆಹ್ವಾನಿಸು. ಜೂಜಾಟದಲ್ಲಿ ನನ್ನ ಈ ಕುಶಲತೆಯಿಂದ ನಿಶ್ಚಯವಾಗಿಯೂ ಅವನ ರಾಜ್ಯ ಮತ್ತು ಸಂಪತ್ತನ್ನು ನಿನ್ನದಾಗಿಸುತ್ತೇನೆ. ಇವೆಲ್ಲವನ್ನು ನೀನು ರಾಜನಿಗೆ ನಿವೇದಿಸು. ನಿನ್ನ ತಂದೆಯು ಅಪ್ಪಣೆಯಿತ್ತರೆ ನಾನು ಅವನನ್ನು ಜಯಿಸುತ್ತೇನೆ. ಸಂಶಯವೇ ಇಲ್ಲ.”
ದುರ್ಯೋಧನನು ಹೇಳಿದನು:
“ಸೌಬಲ! ನೀನೇ ಇದನ್ನು ಕುರುಮುಖ್ಯ ಧೃತರಾಷ್ಟ್ರನಲ್ಲಿ ಸರಿಯಾದ ರೀತಿಯಲ್ಲಿ ಹೇಳಬೇಕು. ಈ ವಿಷಯವನ್ನು ಪ್ರಸ್ತಾಪಿಸಲು ನನಗೆ ಸಾಧ್ಯವಿಲ್ಲ.”
ದುರ್ಯೋಧನನಿಂದ ಯುಧಿಷ್ಠಿರನ ಐಶ್ವರ್ಯದ ವರ್ಣನೆ
ರಾಜ ಯುಧಿಷ್ಠಿರನ ಮಹಾಕ್ರತು ರಾಜಸೂಯವನ್ನು ನೃಪತಿ ಗಾಂಧಾರೀಸುತನೊಡಗೂಡಿ ಅನುಭವಿಸಿ, ದುರ್ಯೋಧನನ ಮತವನ್ನು ಮೊದಲೇ ತಿಳಿದುಕೊಂಡು, ದುರ್ಯೋಧನನು ಹೇಳಿದ್ದುದನ್ನು ಕೇಳಿ, ಅವನಿಗೆ ಪ್ರಿಯವಾದುದನ್ನು ಮಾಡಲೆಂದು ಬಯಸಿದ ಮಹಾಪ್ರಾಜ್ಞ ಶಕುನಿ ಸೌಬಲನು ಪ್ರಜ್ಞಾಚಕ್ಷು ಜನಾಧಿಪ ಧೃತರಾಷ್ಟ್ರನಲ್ಲಿಗೆ ಬಂದು, ಈ ಮಾತುಗಳನ್ನಾಡಿದನು:
“ಮಹಾರಾಜ! ದುರ್ಯೋಧನನು ವಿವರ್ಣ, ಹರಿಣ, ಕೃಷ, ದೀನ, ಮತ್ತು ಚಿಂತಾಪರನಾಗಿದ್ದಾನೆ. ನಿನ್ನ ಜ್ಯೇಷ್ಠಪುತ್ರನನ್ನು ಕಾಡುತ್ತಿರುವ ಈ ಶತ್ರುಸಂಭವ ಶೋಕವು ಏನೆಂದು ನೀನು ಪರೀಕ್ಷಿಸಿ ಕಂಡುಕೊಳ್ಳುವುದಿಲ್ಲ ಏಕೆ?”
ಧೃತರಾಷ್ಟ್ರನು ಹೇಳಿದನು:
“ದುರ್ಯೋಧನ! ಪುತ್ರ! ಯಾವ ಕಾರಣಕ್ಕಾಗಿ ನೀನು ಅಷ್ಟೊಂದು ಶೋಕದಿಂದ ಸೊರಗುತ್ತಿದ್ದೀಯೆ? ಅದರ ಕುರಿತು ನಾನು ಕೇಳಬಹುದೇ? ಹೇಳು. ಶಕುನಿಯು ಹೇಳುತ್ತಿದ್ದಾನೆ - ನೀನು ವಿವರ್ಣನೂ, ಹರಿಣನೂ, ಕೃಷನೂ ಚಿಂತಾಪರನೂ ಆಗಿದ್ದೀಯಂತೆ. ಆದರೆ ನಿನ್ನ ಶೋಕದ ಕಾರಣವೇನೆಂದು ನಾನು ಕಾಣುತ್ತಿಲ್ಲ. ಈ ಮಹಾ ಐಶ್ವರ್ಯವೆಲ್ಲವೂ ನಿನ್ನ ಸಮರ್ಪಣೆಯಲ್ಲಿದೆ. ಸಹೋದರರು, ಸುಹೃದಯರು ಯಾರೂ ನಿನಗೆ ಅಪ್ರಿಯವಾಗಿ ನಡೆದುಕೊಳ್ಳುತ್ತಿಲ್ಲ. ಅತ್ಯಮೂಲ್ಯ ವಸ್ತ್ರಗಳನ್ನು ತೊಡುತ್ತಿದ್ದೀಯೆ, ರುಚಿಯಾದ ಶ್ರೇಷ್ಠ ಆಹಾರವನ್ನು ಉಣ್ಣುತ್ತಿದ್ದೀಯೆ, ಉತ್ತಮ ಥಳಿಯ ಕುದುರೆಗಳು ನಿನ್ನನ್ನು ಸವಾರಿಗೆ ಒಯ್ಯುತ್ತವೆ. ಇನ್ನು ಯಾವ ಕಾರಣಕ್ಕೆ ನೀನು ಹರಿಣನೂ, ಕೃಶನೂ ಆಗಿದ್ದೀಯೆ? ಬೆಲೆಬಾಳುವ ಹಾಸಿಗೆಗಳು, ತೃಪ್ತಿಪಡಿಸಲು ಮನೋರಮೆಯರು, ಒಳ್ಳೆಯ ಅರಮನೆ, ಯಥಾಸುಖ ವಿಹಾರಗಳು, ಇವೆಲ್ಲವೂ ದೇವತೆಗಳಂತೆ ನಿನ್ನ ಮಾತಿಗೆ ಬದ್ಧವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. ದುರ್ದರ್ಷನಾದರೂ ಏಕೆ ದೀನನಾಗಿರುವೆ? ಪುತ್ರಕ! ಯಾವುದಕ್ಕಾಗಿ ಶೋಕಿಸುತ್ತಿದ್ದೀಯೆ?”
ದುರ್ಯೋಧನನು ಹೇಳಿದನು:
“ಕಾಪುರುಷನಂತೆ ಉಣ್ಣುತ್ತೇನೆ ಮತ್ತು ಉಡುತ್ತೇನೆ. ದಿನೇ ದಿನೇ ಕಾಲ ಉರುಳುತ್ತಿದ್ದಂತೆ ನನ್ನಲ್ಲಿ ಅತಿಹೆಚ್ಚಿನ ಅಸೂಯೆಯೊಂದು ಉಂಟಾಗಿದೆ. ತನ್ನ ಶತ್ರುವನ್ನು ಅನುಸರಿಸುವ ಪ್ರಜೆಗಳನ್ನು ಸಹಿಸದೇ ತನ್ನ ಶತ್ರುಗಳಿಂದ ಒದಗಿದ ಕ್ಲೇಶಗಳಿಂದ ಮುಕ್ತಿಯನ್ನು ಬಯಸುವವನಿಗೆ ಪುರುಷ ಎನ್ನುತ್ತಾರೆ. ಅನುಕ್ರೋಶ-ಭಯಗಳೊಡನೆ ಸಂತೃಪ್ತಿ-ಅಭಿಮಾನಗಳೆರಡೂ ಸಂಪತ್ತನ್ನು ನಾಶಪಡಿಸುತ್ತವೆ. ಇವುಗಳಿರುವವನು ಎಂದೂ ಮಹಾತ್ಮನೆನೆಸಿಕೊಳ್ಳುವುದಿಲ್ಲ. ಕೌಂತೇಯ ಯುಧಿಷ್ಠಿರನ ಆ ಸಂಪತ್ತನ್ನು ನೋಡಿದ ನನಗೆ ಈ ಭೋಗಗಳು ಸುಖವನ್ನು ಕೊಡದೇ ನನ್ನನ್ನು ವಿವರ್ಣನನ್ನಾಗಿ ಮಾಡುತ್ತಿವೆ. ಪ್ರತಿಸ್ಪರ್ಧಿಗಳ ಅಭಿವೃದ್ಧಿಯೇ ನನ್ನ ಅಧೋಗತಿಯೆಂದು ತಿಳಿದಿರುವ ನಾನು ಕೌಂತೇಯನ ಉಚ್ಛ ಸ್ಥಾನವನ್ನು ನೋಡಿ ಹೊರಗಡೆ ತೋರಿಸಿಕೊಳ್ಳದಿದ್ದರೂ ಚಿಂತಿಸುತ್ತಿದ್ದೇನೆ. ಆದುದರಿಂದ ವಿವರ್ಣನೂ, ದೀನನೂ, ಹರಿಣನೂ, ಕೃಶನೂ ಆಗಿದ್ದೇನೆ. ತಲಾ ಮೂವತ್ತು ದಾಸಿಯರನ್ನು ಪಡೆದ ಎಂಭತ್ತೆಂಟು ಸಾವಿರ ಸ್ನಾತಕ ಕುಟುಂಬಗಳನ್ನು ಯುಧಿಷ್ಠಿರನು ಪೊರೆಯುತ್ತಿದ್ದಾನೆ. ಇನ್ನೂ ಹತ್ತುಸಾವಿರ ಜನರು ಯುಧಿಷ್ಠಿರನ ಮನೆಯಲ್ಲಿ ನಿತ್ಯವೂ ಉತ್ತಮ ಆಹಾರವನ್ನು ಬಂಗಾರದ ಬಟ್ಟಲುಗಳಲ್ಲಿ ಸೇವಿಸುತ್ತಾರೆ. ಕಾಂಬೋಜನು ಅವನಿಗೆ ಕದಲೀ ಮೃಗ ಚರ್ಮದ ಕಪ್ಪು, ನೀಲಿ ಮತ್ತು ಕೆಂಪು ಬಣ್ಣದ ಅತ್ಯಮೂಲ್ಯ ಕಂಬಳಿಗಳು, ನೂರಾರು ಸಹಸ್ರಾರು ರಥಗಳು, ಸ್ತ್ರೀಯರು, ಮತ್ತು ಕುದುರೆಗಳನ್ನು ಕಳುಹಿಸಿದ್ದಾನೆ. ಅಲ್ಲಿ ಮೂವತ್ತು ಸಾವಿರ ಒಂಟೆಗಳು ವಿಹರಿಸುತ್ತಿವೆ. ಎಲ್ಲ ತರಹದ ರತ್ನಗಳನ್ನೂ ಪಾರ್ಥಿವರು ಆ ಸುಂದರ ಮುಖ್ಯ ಕ್ರತುವಿನಲ್ಲಿ ಕುಂತೀಪುತ್ರನಿಗೆ ತಂದಿದ್ದರು. ಧೀಮತ ಪಾಂಡುಪುತ್ರನ ಯಜ್ಞದಲ್ಲಿ ಬಂದಷ್ಟು ಧನವನ್ನು ನಾನು ಬೇರೆ ಎಲ್ಲಿಯೂ ನೋಡಲಿಲ್ಲ, ಅಥವಾ ಕೇಳಲಿಲ್ಲ. ಆ ಶತ್ರುವಿನ ಕಡೆ ಹರಿಯುತ್ತಿದ್ದ ಆ ಅಮೋಘ ಸಂಪತ್ತಿನ ಹೊಳೆಯನ್ನು ಕಂಡ ನನಗೆ ಎಲ್ಲಿಯೂ ನೆಲೆಯನ್ನು ಕಾಣದೇ ಒಂದೇಸಮನೆ ಚಿಂತೆಗೊಳಗಾಗಿದ್ದೇನೆ. ಮೂರು ಖರ್ವ ಕಪ್ಪಗಳನ್ನು ತೆಗೆದುಕೊಂಡು ಬಂದ ಗೋಮಂತ ವಾಟಧಾನ ಬ್ರಾಹ್ಮಣರ ನೂರಾರು ಗುಂಪುಗಳನ್ನು ಹಿಂದೆ ಕಳುಹಿಸಲಾಯಿತು. ಆದರೆ ಅವರು ಸುಂದರವಾದ ಬಂಗಾರದ ಕಮಂಡಲುಗಳನ್ನು ಕಪ್ಪವಾಗಿ ತೆಗೆದುಕೊಂಡು ಬಂದ ನಂತರ ಅವರಿಗೆ ಪ್ರವೇಶವು ದೊರೆಯಿತು. ಶಕ್ರನಿಗೆ ಮಧುವಿನ ಘಟಗಳನ್ನು ಅಮರಸ್ತ್ರೀಯರು ಹಿಡಿಯುವಂತೆ ಬಹುರತ್ನವಿಭೂಷಿತ ಸಹಸ್ರಾರು ನಾರಿಯರು ವರುಣನು ತುಂಬಿದ ಬಂಗಾರದ ಕಲಶಗಳನ್ನು ಹಿಡಿದಿದ್ದರು. ಪೂರ್ವ ಮತ್ತು ದಕ್ಷಿಣದ ಸಮುದ್ರಗಳಿಗೆ ಹೋಗಿ ಪಡೆದಿದ್ದ ಮತ್ತು ಹಾಗೆಯೇ ಪಶ್ಚಿಮ ದಿಕ್ಕಿನಿಂದ ಪಡೆದಿದ್ದ ಅವೆಲ್ಲವನ್ನೂ ನೋಡಿ ನನಗೆ ಜ್ವರಬಂದಂಥಾಯಿತು. ಪಕ್ಷಿಗಳ ಹೊರತಾಗಿ ಉತ್ತರದಿಕ್ಕಿಗೆ ಯಾರೂ ಹೋಗುವುದಿಲ್ಲ. ಅಲ್ಲಿ ನಡೆದ ಅದ್ಭುತವವನ್ನು ಹೇಳುತ್ತೇನೆ. ಕೇಳು. ಪೂರ್ಣ ಒಂದು ಸಹಸ್ರ ವಿಪ್ರರ ಭೋಜನವಾದನಂತರ ನಿತ್ಯವೂ ಅದರ ಸೂಚನೆಯನ್ನು ಶಂಖವನ್ನು ಊದುವುದರ ಮೂಲಕ ಕೊಡಲಾಗುತ್ತಿತ್ತು. ಕ್ಷಣಕ್ಕೊಮ್ಮೆ ಕೇಳಿಬರುತ್ತಿದ್ದ ಆ ಉತ್ತಮ ಶಂಖನಾದದಿಂದ ನನ್ನ ರೋಮಗಳು ನಿಮಿರೇಳುತ್ತಿದ್ದವು! ಸರ್ವರತ್ನಗಳನ್ನು ತೆಗೆದುಕೊಂಡು ನೋಡಲು ಬಂದಿದ್ದ ಪಾರ್ಥಿವರಿಂದ ಆ ಸಭೆಯು ತುಂಬಿಹೋಗಿತ್ತು. ಆ ಪಾಂಡುಪುತ್ರ ದೀಮಂತನ ಯಜ್ಞದಲ್ಲಿ ದ್ವಿಜರ ಮುಂದೆ ಮಹೀಪಾಲರು ಸಾಮನ್ಯಜನರಂತೆ ತೋರುತ್ತಿದ್ದರು. ಯುಧಿಷ್ಠಿರನಲ್ಲಿರುವಷ್ಟು ಸಿರಿಯನ್ನು ದೇವರಾಜ, ಯಮ, ವರುಣ ಅಥವಾ ಗುಹ್ಯಕಾಧಿಪತಿಯಲ್ಲಿಯೂ ಇಲ್ಲ. ಪಾಂಡುಪುತ್ರನ ಆ ಅಪರಿಮಿತ ಸಂಪತ್ತನ್ನು ನೋಡಿದಾಗಿನಿಂದ ಸುಡುತ್ತಿರುವ ನನ್ನ ಚೇತನದಲ್ಲಿ ಶಾಂತಿಯೆನ್ನುವುದೇ ದೊರೆಯದಾಗಿದೆ.”
ಶಕುನಿಯು ಹೇಳಿದನು:
“ಸತ್ಯಪರಾಕ್ರಮ! ಪಾಂಡವನಲ್ಲಿ ನೀನು ನೋಡಿದ ಉತ್ತಮ ಸಂಪತ್ತನ್ನು ಹೇಗೆ ನಿನ್ನದಾಗಿಸಿಕೊಳ್ಳಬಹುದು ಎನ್ನುವುದನ್ನು ಹೇಳುತ್ತೇನೆ. ಕೇಳು. ನಾನು ಪೃಥಿವಿಯಲ್ಲಿಯೇ ಅತಿ ಶ್ರೇಷ್ಠ ಅಕ್ಷಶ್ವವನ್ನು ತಿಳಿದವನು. ನಾನು ದಾಳಗಳ ಹೃದಯವನ್ನು, ಪಣವನ್ನು ಮತ್ತು ವಿಶೇಷತೆಯನ್ನು ಬಲ್ಲೆ. ಕೌಂತೇಯನು ದ್ಯೂತಪ್ರಿಯ. ಆದರೆ ಅವನಿಗೆ ಜೂಜಾಡುವುದು ಗೊತ್ತಿಲ್ಲ. ಕರೆದರೆ ಅವನು ಖಂಡಿತವಾಗಿಯೂ ಬರುತ್ತಾನೆ. ಆಗ ನಾನು ಅವನನ್ನು ನನ್ನೊಡನೆ ಜೂಜಾಡಲು ಕರೆಯಬಹುದು.”
ಶಕುನಿಯ ಈ ಮಾತುಗಳನ್ನು ಕೇಳಿದ ರಾಜ ದುರ್ಯೋಧನನು ಅವನದೇ ಹೆಜ್ಜೆಗಳಲ್ಲಿ ಮುಂದುವರಿದು ದೃತರಾಷ್ಟ್ರನಿಗೆ ಹೇಳಿದನು:
“ರಾಜನ್! ಇವನಿಗೆ ಜೂಜಾಡುವುದು ಗೊತ್ತಿದೆ ಮತ್ತು ದ್ಯೂತದಲ್ಲಿ ಪಾಂಡುಪುತ್ರನ ಶ್ರೀಯನ್ನು ತೆಗೆದುಕೊಳ್ಳಲು ಸಮರ್ಥನಾಗಿದ್ದಾನೆ. ಅದಕ್ಕೆ ಅನುಜ್ಞೆಯನ್ನು ನೀಡಬೇಕು.”
ಧೃತರಾಷ್ಟ್ರನು ಹೇಳಿದನು:
“ನಾನು ಮಹಾಪ್ರಜ್ಞ ಮಂತ್ರಿ ಕ್ಷತ್ತನ ಅಭಿಪ್ರಾಯಕ್ಕೆ ಬದ್ಧನಾಗಿದ್ದೇನೆ. ನಾನು ಅವನೊಡನೆ ಸಮಾಲೋಚನೆ ಮಾಡಿ ಏನು ಮಾಡಬೇಕೆಂದು ನಿಶ್ಚಯಿಸುತ್ತೇನೆ. ಆ ದೀರ್ಘದರ್ಶಿಯು ಧರ್ಮವನ್ನು ಪುರಸ್ಕರಿಸುತ್ತಾನೆ, ನಮ್ಮ ಅಂತಿಮ ಹಿತವನ್ನೇ ಬಯಸುತ್ತಾನೆ ಮತ್ತು ಎರಡೂ ಪಕ್ಷಗಳಿಗೆ ಯುಕ್ತವಾಗುವಂತೆ ಅರ್ಥನಿಶ್ಚಯ ಮಾಡುತ್ತಾನೆ.”
ದುರ್ಯೋಧನನು ಹೇಳಿದನು:
“ಇದರಲ್ಲಿ ಕ್ಷತ್ತನನ್ನು ಸೇರಿಸಿಕೊಂಡರೆ ಅವನು ನೀನು ಹಿಂದೆ ಸರಿಯುವಂತೆ ಮಾಡುತ್ತಾನೆ. ರಾಜೇಂದ್ರ! ಇದರಿಂದ ನೀನು ಹಿಂದೆಸರಿದೆಯಾದರೆ ನಾನು ಆತ್ಮಹತ್ಯೆಮಾಡಿಕೊಳ್ಳುತ್ತೇನೆ. ಇದರಲ್ಲಿ ಸ್ವಲ್ಪವೂ ಸಂಶಯಪಡಬೇಡ! ನನ್ನ ಮರಣದ ನಂತರ ವಿದುರನೊಂದಿಗೆ ಸುಖದಿಂದಿರು. ಇಡೀ ಪೃಥ್ವಿಯನ್ನು ಭೋಗಿಸಬಲ್ಲೆ. ನನಗಾಗಿ ನೀನು ಏನು ಮಾಡಬಲ್ಲೆ!”
ಅವನ ಪ್ರಣಯೋಕ್ತ ಆರ್ತವಾಕ್ಯವನ್ನು ಕೇಳಿದ ಧೃತರಾಷ್ಟ್ರನು ದುರ್ಯೋಧನನ ಅಭಿಪ್ರಾಯವನ್ನೇ ಹೊಂದಿದವನಾಗಿ ಪರಿಚಾರಕರಿಗೆ ಹೇಳಿದನು:
“ನನಗಾಗಿ ಒಂದು ಸಾವಿರ ಕಂಬಗಳಿಂದ ಮತ್ತು ನೂರು ದ್ವಾರಗಳಿಂದ ಕೂಡಿದ ವಿಶಾಲ ಮನೋರಮ, ದರ್ಶನೀಯ ಸಭೆಯನ್ನು ಶಿಲ್ಪಿಗಳಿಂದ ನಿರ್ಮಿಸಿ. ಎಲ್ಲೆಡೆಯೂ ರತ್ನ ಮತ್ತು ದಾಳಗಳನ್ನು ಭಿತ್ತರಿಸಿ, ಸಂಪೂರ್ಣ ನಿರ್ಮಾಣವಾದ ನಂತರ ಸುಪ್ರವೇಶಕ್ಕೆ ಗುಪ್ತವಾಗಿ ನನಗೆ ಬಂದು ತಿಳಿಸಿರಿ.”
ದುರ್ಯೋಧನನ ಶಾಂತಿಗಾಗಿ ಇದನ್ನು ನಿಶ್ವಯಿಸಿದ ಭೂಮಿಪ ಮಹಾರಾಜ ಧೃತರಾಷ್ಟ್ರನು ವಿದುರನಿಗೆ ಕರೆಕಳುಹಿಸಿದನು. ಏಕೆಂದರೆ ವಿದುರನನ್ನು ಕೇಳದೇ ಯಾವುದೇ ನಿಶ್ಚಯವನ್ನೂ ಅವನು ಮಾಡುತ್ತಿರಲಿಲ್ಲ. ದ್ಯೂತದ ದೋಷಗಳನ್ನು ಅರಿತಿದ್ದರೂ ಅವನು ಪುತ್ರಸ್ನೇಹದಿಂದ ಅದರೆಡೆಗೆ ಸೆಳೆಯಲ್ಪಟ್ಟಿದ್ದನು. ಕಲಿಯು ದ್ವಾರದಲ್ಲಿಯೇ ಕುಳಿತಿದ್ದಾನೆ ಮತ್ತು ವಿನಾಶದ ಬಾಯಿಯು ತೆರೆಯಲ್ಪಟ್ಟಿದೆ ಎಂದು ಕೇಳಿದ ಧೀಮಂತ ವಿದುರನು ಧೃತರಾಷ್ಟ್ರನಲ್ಲಿಗೆ ಧಾವಿಸಿ ಬಂದನು. ತಮ್ಮನು ಹಿರಿಯ ಅಣ್ಣನಿದ್ದಲ್ಲಿಗೆ ಬಂದು ತಲೆಬಾಗಿಸಿ ಚರಣಗಳಿಗೆ ವಂದಿಸಿ ಈ ಮಾತುಗಳನ್ನು ಆಡಿದನು:
“ರಾಜನ್! ನೀನು ತೆಗೆದುಕೊಂಡ ಈ ನಿಶ್ಚಯವನ್ನು ನಾನು ಸ್ವಾಗತಿಸುವುದಿಲ್ಲ. ದ್ಯೂತದಿಂದ ನಿನ್ನ ಪುತ್ರರಲ್ಲಿ ಭೇದವುಂಟಾಗುವ ಹಾಗೆ ಮಾಡಬೇಡ.”
ಧೃತರಾಷ್ಟ್ರನು ಹೇಳಿದನು:
“ಕ್ಷತ್ತ! ನನ್ನ ಪುತ್ರರು ಮತ್ತು ಇತರ ಪುತ್ರರಲ್ಲಿ ಕಲಹವಾಗುವುದಿಲ್ಲ. ದಿವಿಯ ದೇವರುಗಳು ಪ್ರಸಾದ ನೀಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅಶುಭವಾಗಿರಲಿ ಶುಭವಾಗಿರಲಿ, ಹಿತವಾಗಿರಲಿ ಅಹಿತವಾಗಿರಲಿ, ಈ ಸ್ನೇಹಪೂರ್ವಕ ದ್ಯೂತವು ನಡೆದೇ ನಡೆಯುತ್ತದೆ. ಹಾಗೆಯೇ ಅದು ವಿಧಿ ವಿಹಿತವಾಗಿದೆ. ಭರತರ್ಷಭ ಭೀಷ್ಮ ಮತ್ತು ನನ್ನ ಸನ್ನಿಧಿಯಲ್ಲಿ ದೈವವಿಹಿತ ಯಾವುದೇ ರೀತಿಯ ಅನ್ಯಾಯವೂ ನಡೆಯುವುದಿಲ್ಲ. ವಾಯುವೇಗದ ಕುದುರೆಗಳನ್ನು ಕಟ್ಟಿದ ರಥದಲ್ಲಿ ಖಾಂಡವಪ್ರಸ್ತಕ್ಕೆ ಹೋಗಿ ಯುಧಿಷ್ಠಿರನನ್ನು ಕರೆದುಕೊಂಡು ಬಾ. ವಿದುರ! ನಾನು ನಿನಗೆ ಹೇಳುತ್ತಿದ್ದೇನೆ. ನನ್ನ ಈ ಇಚ್ಛೆಯನ್ನು ತಡೆಗಟ್ಟಬೇಡ. ಈ ರೀತಿ ನಡೆಯುವುದಕ್ಕೆ ಪರಮ ದೈವವೇ ಕಾರಣವೆಂದು ಭಾವಿಸುತ್ತೇನೆ.” ಇದನ್ನು ಕೇಳಿದ ಧೀಮಂತ ವಿದುರನು ಅದು ಹಾಗಲ್ಲ ಎಂದು ಯೋಚಿಸಿ ಸುದುಃಖಿತನಾಗಿ ಮಹಾಪ್ರಾಜ್ಞ ಆಪಗೇಯ ಭೀಷ್ಮನಲ್ಲಿಗೆ ಹೋದನು.
ವಿದುರನ ಅಭಿಪ್ರಾಯವನ್ನು ತಿಳಿದ ಅಂಬಿಕಾಸುತ ಧೃತರಾಷ್ಟ್ರನು ಪುನಃ ಏಕಾಂತದಲ್ಲಿ ದುರ್ಯೋಧನನಿಗೆ ಹೇಳಿದನು:
“ಗಾಂಧಾರೇ! ದ್ಯೂತವು ಬೇಡ. ವಿದುರನು ಇದಕ್ಕೆ ಇಷ್ಟಪಡುತ್ತಿಲ್ಲ. ಆ ಮಹಾಬುದ್ಧಿಯು ಇದು ನಮ್ಮೆಲ್ಲರ ಹಿತದಲ್ಲಿದೆ ಎಂದೂ ಅಭಿಪ್ರಾಯಪಟ್ಟಿಲ್ಲ. ಪರಮ ಹಿತಕ್ಕಾಗಿಯೇ ವಿದುರನು ಹೀಗೆ ಮಾತನಾಡುತ್ತಿದ್ದಾನೆ. ಪುತ್ರ! ಅವನು ಹೇಳಿದ ಹಾಗೆ ಮಾಡೋಣ. ಅದರಲ್ಲಿಯೇ ನಿನ್ನ ಹಿತವಿದೆ ಎಂದು ನನಗನ್ನಿಸುತ್ತದೆ. ದೇವರಾಜ ವಾಸವನ ಗುರು ದೇವರ್ಷಿ ಧೀಮಂತ ಉದಾರಧೀ ಭಗವಾನ್ ಬೃಹಸ್ಪತಿಯಿಂದ ಶಾಸ್ತ್ರಗಳನ್ನು ತಿಳಿಸಲ್ಪಟ್ಟ ಮತ್ತು ಸರ್ವರಹಸ್ಯಗಳ ಸಹಿತ ಅವುಗಳನ್ನು ತಿಳಿದುಕೊಂಡ ಮಹಾಕವಿ ವಿದುರನ ಮಾತುಗಳಂತೆಯೇ ನಾನು ಸದಾ ನಡೆದುಕೊಳ್ಳುತ್ತೇನೆ. ವೃಷ್ಣಿಗಳಲ್ಲಿ ಉದ್ಧವನನ್ನು ಹೇಗೆ ಮಹಾಬುದ್ಧಿವಂತನೆಂದು ಪೂಜಿಸುತ್ತಾರೋ ಹಾಗೆ ಕುರುಗಳಲ್ಲಿ ವಿದುರನನ್ನು ಮೇಧಾವೀ ಪ್ರವರನೆಂದು ಅಭಿಪ್ರಾಯಪಡುತ್ತಾರೆ. ಆದುದರಿಂದ ಈ ದ್ಯೂತವು ಬೇಡ. ದ್ಯೂತದಿಂದ ಭೇದವುಂಟಾಗುತ್ತದೆ ಮತ್ತು ಭೇದದಿಂದ ರಾಜ್ಯವು ವಿನಾಶಗೊಳ್ಳುತ್ತದೆ. ಅದನ್ನು ಬಿಟ್ಟುಬಿಡು. ಮಾತಾ ಪಿತರಿಂದ ಒಬ್ಬ ಪುತ್ರನಿಗೆ ದೊರಕಬೇಕೆಂದು ಸ್ಮೃತವಾದ ಪರಮ ಪಿತೃ ಪಿತಾಮಹರ ಪದವು ನಿನಗೆ ದೊರಕಿದೆ. ಶಾಸ್ತ್ರಗಳಲ್ಲಿ ಪರಿಣಿತನನ್ನಾಗಿ ಮಾಡಿದ್ದೇವೆ. ಮನೆಯಲ್ಲಿ ಸತತವಾಗಿ ಆಡುತ್ತಿರುವೆ. ರಾಜ್ಯದಲ್ಲಿ ಜ್ಯೇಷ್ಠ ಭ್ರಾತೃವಾಗಿ ಇದ್ದೀಯೆ. ಇವುಗಳಲ್ಲಿ ಯಾವುದನ್ನೂ ನೀನು ಒಳ್ಳೆಯದೆಂದು ತಿಳಿಯುವುದಿಲ್ಲವೇ? ಸಾಮನ್ಯ ಜನರಿಗೆ ದೊರೆಯುವುದಕ್ಕಿಂತಲೂ ಶ್ರೇಷ್ಠವಾದ ಬೋಜನ, ಉಡುಗೆತೊಡುಗೆಗಳನ್ನು ಪಡೆದಿದ್ದೀಯೆ. ಇವೆಲ್ಲವನ್ನೂ ಹೊಂದಿದ ನೀನು ಯಾಕೆ ಶೋಕಿಸುತ್ತಿರುವೆ? ಪಿತೃಪಿತಾಮಹರಿಂದ ದೊರಕಿದ ಸಮೃದ್ಧವಾದ ಈ ಮಹಾ ರಾಷ್ಟ್ರವನ್ನು ನಿತ್ಯವೂ ಆಳುತ್ತಿರುವ ನೀನು ದಿವಿಯಲ್ಲಿ ದೇವೇಶ್ವರನಂತೆ ಬೆಳಗುತ್ತಿದ್ದೀಯೆ. ನೀನು ವಿದಿತಪ್ರಜ್ಞನೆಂದು ನನಗೆ ಗೊತ್ತು. ಆದರೂ ಸಮುತ್ಧಿತವಾದ ದುಃಖತರವಾದ ನಿನ್ನ ಈ ಶೋಕದ ಮೂಲವು ಏನು? ನನಗೆ ಹೇಳು.”
ದುರ್ಯೋಧನನು ಹೇಳಿದನು:
“ಊಟ ಮತ್ತು ಉಡುಗೆತೊಡುಗೆಗಳನ್ನಷ್ಟೇ ಕಾಣುವವನು ಪಾಪಪುರುಷ. ಅಸೂಯೆಪಡದಿರುವ ಪುರುಷನು ಅಧಮನೆಂದು ಹೇಳುತ್ತಾರೆ. ಸಾಧಾರಣವಾದ ಸಂಪತ್ತು ನನಗೆ ಸಂತೋಷವನ್ನು ನೀಡುವುದಿಲ್ಲ. ಕೌಂತೇಯನಲ್ಲಿರುವ ಪ್ರಜ್ವಲಿಸುವ ಶ್ರೀಯನು ನೋಡಿ ನನ್ನ ಮನಸ್ಸು ವಿಹ್ವಲವಾಗಿದೆ. ಸರ್ವ ಪೃಥ್ವಿಯೂ ಯುಧಿಷ್ಠಿರನ ವಶವಾದುದನ್ನು ನೋಡಿಯೂ ನಾನು ಇನ್ನೂ ಜೀವಂತನಾಗಿ ಇಲ್ಲಿ ನಿಂತಿದ್ದೇನಲ್ಲ! ಇದನ್ನು ದುಃಖದಿಂದ ನಿನಗೆ ಹೇಳುತ್ತಿದ್ದೇನೆ. ಯುಧಿಷ್ಠಿರನ ನಿವೇಶನದಲ್ಲಿ ಸದೆಬಡಿಯಲ್ಪಟ್ಟ ಸೋತ ಚೈತ್ರಿಕರು, ಕೌಕುರರು, ಕಾರಸ್ಕರರು, ಲೋಗಜಂಘರಂತೆ ಆಗಿದ್ದೇನೆ. ಯುಧಿಷ್ಠಿರನ ನಿವೇಶನದಲ್ಲಿ ಹಿಮಾಲಯದ, ಸಾಗರದ ಮತ್ತು ತಪ್ಪಲುಪ್ರದೇಶಗಳ ಸರ್ವ ರತ್ನಾಕರರೂ ಮತ್ತು ಇತರರೂ ದಾಸರಂತೆ ಇದ್ದಾರೆ. ನಾನು ಜ್ಯೇಷ್ಠ ಮತ್ತು ಶ್ರೇಷ್ಠನೆಂದು ತಿಳಿದು ಸತ್ಕರಿಸಿ ಯುಧಿಷ್ಠಿರನು ನನ್ನನ್ನು ರತ್ನಪರಿಗ್ರಹಕ್ಕೆ ನಿಯುಕ್ತಗೊಳಿಸಿದನು. ಅಲ್ಲಿದ್ದ ಶ್ರೇಷ್ಠ ಬೆಲೆಬಾಳುವ ರತ್ನಗಳ ತುದಿ ಮೊದಲುಗಳನ್ನು ನೋಡಲಿಕ್ಕಾಗುತ್ತಿರಲಿಲ್ಲ. ಆ ಸಂಪತ್ತುಗಳನ್ನು ಸ್ವೀಕರಿಸುವಾಗ ನಾನು ನನ್ನ ಕೈಒಡ್ಡಬೇಕಾಗಿರಲಿಲ್ಲ. ದೂರದಿಂದ ತಂದು ಅಲ್ಲಿರಿಸಿದ್ದ ಸಂಪತ್ತನ್ನು ತೆಗೆದುಕೊಳ್ಳುವುದರಲ್ಲಿಯೇ ನಾನು ಆಯಾಸಗೊಂಡಿದ್ದೆನು. ಬಿಂದುಸರೋವರದ ರತ್ನಗಳಿಂದ ಸ್ಫಟಿಕಕಾಂಚನಗಳಿಂದ ಮಯನು ನಿರ್ಮಿಸಿದ ತಾವರೆಯ ಕೊಳವನ್ನು ನಾನು ನೋಡಿದ್ದೇನೆ. ರತ್ನವರ್ಜಿತನಾದ ನಾನು ಶತ್ರುಗಳ ವಿಶೇಷ ವೃದ್ಧಿಯನ್ನು ನೋಡಿ ವಿಮೂಢನಾಗಿ ವಸ್ತ್ರವನ್ನು ಮೇಲಿತ್ತಿಕೊಂಡಾಗ ವೃಕೋದರನು ನಕ್ಕನು. ನನಗೆ ಸಾಧ್ಯವಾಗಿದ್ದರೆ ನಾನು ಆಗಲೇ ಆ ವೃಕೋದರನನ್ನು ಕೊಂದುಬಿಡುತ್ತಿದ್ದೆ! ಪ್ರತಿಸ್ಪರ್ಧಿಯಿಂದ ಅಪಮಾನಗೊಂಡ ನಾನು ಸುಡುತ್ತಿದ್ದೇನೆ. ಇನ್ನೊಮ್ಮೆ ಅದೇತರಹದ ತಾವರೆಗಳಿಂದ ತುಂಬಿದ್ದ ಇನ್ನೊಂದು ಕೊಳವನ್ನು ನೋಡಿ ಅದೂಕೂಡ ಶಿಲಾಸಮವೆಂದು ತಿಳಿದು ಹೋಗಿ ನೀರಿನಲ್ಲಿ ಬಿದ್ದೆ. ಆಗ ಅಲ್ಲಿ ಪಾರ್ಥನೊಂದಿಗೆ ಕೃಷ್ಣನು ಜೋರಾಗಿ ನಕ್ಕನು. ಹಾಗೆಯೇ ಸ್ತ್ರೀಯರೊಂದಿಗೆ ದ್ರೌಪದಿಯೂ ನನ್ನ ಮನಸ್ಸನ್ನು ನೋಯಿಸಲು ನಕ್ಕಳು. ನೀರಿನಿಂದ ನನ್ನ ವಸ್ತ್ರವು ಒದ್ದೆಯಾಗಿರಲು ರಾಜನ ಆಜ್ಞೆಯಂತೆ ಕಿಂಕರರು ನನಗಾಗಿ ಬೇರೆ ವಸ್ತ್ರಗಳನ್ನಿತ್ತರು. ನನಗೆ ಇನ್ನೂ ಹೆಚ್ಚು ದುಃಖವನ್ನು ನೀಡಿದ್ದುದೆಂದರೆ, ಅವರು ಅನ್ಯರಿಗೆ ಕೇಳುವಂತೆ ತುಂಬಾ ಹೊತ್ತು ನಕ್ಕಿದ್ದುದು, ದ್ವಾರವಿದೆಯೇನೋ ಎಂದು ತೋರುತ್ತಿದ್ದ ಗೋಡೆಯಲ್ಲಿ ಹೋಗಿ ಶಿಲೆಯು ನನ್ನ ಹಣೆಗೆ ಹೊಡೆದು ಗಾಯಗೊಂಡೆ. ದೂರದಿಂದಲೇ ಇದನ್ನು ನೋಡಿದ ಅವಳಿಗಳು ವಿನೋದಿಸಿದರು. ದುಃಖಪಟ್ಟ ಅವರಿಬ್ಬರೂ ಬಾಹುಗಳಿಂದ ನನ್ನನ್ನು ಹಿಡಿದರು. ಆಗ ಸಹದೇವನು ವಿಸ್ಮಯದಿಂದಲೋ ಎನ್ನುವಂತೆ “ರಾಜ! ಇದು ದ್ವಾರವು. ಇಲ್ಲಿ ಹೋಗು” ಎಂದು ಪುನಃ ಪುನಃ ಹೇಳಿದನು. ಅಲ್ಲಿ ನಾನು ಹೆಸರೇ ತಿಳಿಯದಿದ್ದ ಮತ್ತು ಕೇಳದೇ ಇದ್ದ ರತ್ನಗಳ ರಾಶಿಯನ್ನು ಕಂಡೆ. ಇವುಗಳಿಂದ ನನ್ನ ಮನಸ್ಸು ಸುಡುತ್ತಿದೆ. ಭಾರತ! ಪಾಂಡವರಲ್ಲಿ ನಾನು ಕಂಡ ಭೂಮಿಪಾಲರು ತಂದ ಮುಖ್ಯ ಐಶ್ವರ್ಯಗಳನ್ನು ಹೇಳುತ್ತೇನೆ. ಕೇಳು. ನನ್ನ ಶತ್ರುಗಳ ಬೆಳೆದ ಅಥವಾ ಅಗೆದ ಆ ಧನವನ್ನು ನೋಡಿದ ನನ್ನ ಮನಸ್ಸನ್ನು ಧೃಢವಾಗಿರಿಸಲು ತಿಳಿದಿಲ್ಲ. ಭಾರತ! ಕೇಳು.”
ಆಗ ದುರ್ಯೋಧನನು ಧೃತರಾಷ್ಟ್ರನಿಗೆ ಯುಧಿಷ್ಠಿರನಿಗೆ ಕಾಣಿಕೆಯಾಗಿ ಬಂದಿದ್ದ ಅಪಾರ ಧನ-ಕನಕಾದಿ ಸಂಪತ್ತುಗಳ ಕುರಿತು, ಒಂದನ್ನೂ ಬಿಡದೇ ವರ್ಣಿಸಿದನು.
ದುರ್ಯೊಧನನು ಹೇಳಿದನು:
“ಈಗ ಹೇಳಿದ್ದ ಮತ್ತು ಹೇಳದೇ ಇದ್ದ ಬಹಳಷ್ಟು ಉಡುಗೊರೆಗಳನ್ನು ರಾಜರುಗಳು ನನ್ನ ಶತ್ರುವಿಗೆ ನೀಡಿದುದನ್ನು ನೋಡಿ ದುಃಖದಿಂದ ಇಂದೇ ಮರಣಬರಲಿ ಎಂದೆನಿಸುತ್ತಿದೆ. ಪಾಂಡವ ಯುಧಿಷ್ಠಿರನ ಪಕ್ವ ಮತ್ತು ತರಕಾರಿಗಳನ್ನೇ ಅವಲಂಬಿಸಿ ಎಷ್ಟು ಜನರಿದ್ದರು ಎನ್ನುವುದನ್ನು ಹೇಳುತ್ತೇನೆ: ಲೆಕ್ಕಕ್ಕೇ ಸಿಗದ ಮೂರು ಪದ್ಮಗಳಷ್ಟು ಗಜಾರೋಹರು ಮತ್ತು ಮಾವುತರು, ತಿಳಿಯುವುದಕ್ಕೇ ಸಾದ್ಯವಾಗದಷ್ಟು ಸಂಖ್ಯೆಯಲ್ಲಿನ ಬಹಳಾರು ಕಾಲ್ದಾಳುಗಳು. ಆಹಾರಸಾಮಾಗ್ರಿಗಳನ್ನು ಒಂದುಕಡೆ ಅಳೆಯುತ್ತಿದ್ದರೆ ಇನ್ನೊಂದೆಡೆ ಅಡುಗೆಯಾಗುತ್ತಿತ್ತು. ಮತ್ತೊಂದೆಡೆ ನೀಡಲಾಗುತ್ತಿದ್ದರೆ ಮೊಗದೊಂದೆಡೆ ಪುಣ್ಯಾಹವಾಚನವು ಕೇಳಿಬರುತ್ತಿತ್ತು. ಯುಧಿಷ್ಠಿರನ ಮನೆಯಲ್ಲಿ ಊಟ ನೀಡಿಸಲ್ಪಟ್ಟಿರದ, ಅಸಂತುಷ್ಟ, ಅಸುಭಿಕ್ಷ ಯಾರನ್ನೂ ಯಾವ ವರ್ಣದವರಲ್ಲಿಯೂ ಕಾಣಲಿಲ್ಲ. ಅಲ್ಲಿ ಯುಧಿಷ್ಠಿರನು ಪೊರೆಯುತ್ತಿರುವ ಎಂಭತ್ತೆಂಟು ಸಾವಿರ ಸ್ನಾತಕ ಕುಟುಂಬಗಳಿವೆ. ಈ ಕುಟುಂಬಗಳಿಗೆ ಒಂದೊಂದರಲ್ಲಿ ಮೂವತ್ತು ಆಳುಗಳಿದ್ದರು. ಸುಪ್ರೀತ ಪರಿತುಷ್ಟರಾದ ಇವರು ಅವನ ಶತ್ರುಗಳ ಅಂತ್ಯಕ್ಕಾಗಿ ಆಶಿಸುತ್ತಿರುತ್ತಾರೆ. ಇನ್ನೂ ದಶಸಹಸ್ರ ಯತಿಗಳು, ಊರ್ಧ್ವರೇತಸರು ಯುಧಿಷ್ಠಿರನ ಮನೆಯಲ್ಲಿ ಚಿನ್ನದ ತಟ್ಟೆಗಳಲ್ಲಿ ಭೋಜಿಸುತ್ತಿದ್ದರು. ಕುಬ್ಜ ವಾಮನರವರೆಗೆ ಸರ್ವರೂ ಊಟಮಾಡಿ ತೃಪ್ತಿಹೊಂದಿದ್ದಾರೆಂದು ನೋಡಿಕೊಳ್ಳುವುದರೊಳಗೆ ಯಾಜ್ಞಸೇನಿಯು ಊಟ ಮಾಡಲಿಲ್ಲ! ವಿವಾಹ ಸಂಬಂಧಿಕರಾದ ಪಾಂಚಾಲರು ಮತ್ತು ಸಖ್ಯರಾದ ಅಂಧಕ-ವೃಷ್ಣಿಯವರು ಇವರಿಬ್ಬರು ಮಾತ್ರ ಕುಂತೀಪುತ್ರನಿಗೆ ಕಾಣಿಕೆಯನ್ನು ತಂದಿರಲಿಲ್ಲ. ಮೂರ್ಧಾಭಿಷಿಕ್ತ ರಾಜನನನ್ನು ಅವಭೃತಸ್ನಾನದಿಂದ ಶುಚಿರ್ಭೂತರಾದ ಆರ್ಯ ಸತ್ಯಸಂಧ ಮಹಾವ್ರತ ವೇದಾಂತ ವಿದ್ಯಪರ್ಯಾಪ್ತ ವಕ್ತಾರ ಧೃತಿಮಂತ ವಿನಯವಂತ ಧರ್ಮಾತ್ಮ ಯಶಸ್ವಿ ರಾಜರು ಉಪಾಸಿಸಿದರು. ಸೇರಿದ್ದ ರಾಜರು ಆರಣ್ಯರಿಗೆ ದಕ್ಷಿಣಾರ್ಥವಾಗಿ ತಂದಿದ್ದ ಹಾಲುಕರೆಯುವ ಪಾತ್ರೆಗಳೊಂದಿಗೆ ಗೋವುಗಳ ಸಾವಿರಾರು ಗುಂಪುಗಳು ಅಲ್ಲಲ್ಲಿ ಕಂಡುಬರುತ್ತಿದ್ದವು. ಅಭಿಷೇಕಾರ್ಥವಾಗಿ ಎಲ್ಲಾತರಹದ ಸಾಮಗ್ರಿಗಳನ್ನು ನೃಪರು ಸ್ವಇಚ್ಛೆಯಿಂದ ಸತ್ಕರಿಸಿ ತಂದಿದ್ದರು. ಬಾಹ್ಲೀಕನು ಬಂಗಾರದಿಂದ ಪರಿಷ್ಕೃತ ರಥವನ್ನು ತಂದನು ಮತ್ತು ಕಟ್ಟಲು ಸುದಕ್ಷಿಣನು ಕಾಂಬೋಜದಲ್ಲಿ ಹುಟ್ಟಿದ್ದ ಶ್ವೇತಾಶ್ವಗಳನ್ನು ತಂದನು. ಚೇದಿಪತಿ ಸುನೀಥನು ಅವನಿಗೆ ಮಹಾಯಶಸ್ಸನ್ನು ನೀಡುವ ಅಪ್ರತಿಮ ಧ್ವಜವನ್ನು ತಾನೇ ಕ್ಷಿಪ್ರವಾಗಿ ತಯಾರಿಸಿ ತಂದನು. ದಕ್ಷಿಣಾತ್ಯನು ಕವಚವನ್ನು, ಮಾಗಧನು ಹಾರ ಮತ್ತು ಶಿರವಸ್ತ್ರಗಳನ್ನು, ಮತ್ತು ಮಹೇಷ್ವಾಸ ವಸುದಾನನು ಅರವತ್ತು ವರ್ಷದ ಅರಸಾನೆಯನ್ನು ತಂದರು. ಮತ್ಯ್ಸನು ಗಾಳವನ್ನು ಕಟ್ಟಿದನು. ಏಕಲವ್ಯನು ಕಾಲ್ಮಣೆಗಳನ್ನು ತಂದನು. ಆವಂತಿ ಮತ್ತು ಬಹುವಿಧಾನರು ಅಭಿಷೇಕಕ್ಕಾಗಿ ನೀರನ್ನೂ ತಂದರು. ಚೇಕಿತಾನನು ಭತ್ತಳಿಕೆಯನ್ನು ಬಿಗಿದನು ಮತ್ತು ಕಾಶ್ಯನು ಬಿಲ್ಲನ್ನು ನೀಡಿದನು. ಚಿನ್ನದ ಹಿಡಿಯಿದ್ದ ಖಡ್ಗ ಮತ್ತು ಕಾಂಚನಭೂಷಿತ ಗುರಾಣಿಯನ್ನು ಶಲ್ಯನು ನೀಡಿದನು. ನಾರದ, ದೇವಲ, ಮತ್ತು ಮುನಿ ಅಸಿತರನ್ನು ಮುಂದಿರಿಸಿಕೊಂಡು ಸುಮಹಾತಪ ಧೌಮ್ಯ ಮತ್ತು ವ್ಯಾಸರು ಅಭಿಷೇಕ ಮಾಡಿದರು. ಮಹರ್ಷಿಗಳು ಸಂತೋಷದಿಂದ ಅಭಿಷೇಕದಲ್ಲಿದ್ದರು. ವೇದಪಾರಗ ಅನ್ಯರು ಜಾಮದಗ್ನಿಯ ಸಹಿತ ಬಂದು ದಿವಿಯಲ್ಲಿ ದೇವೇಂದ್ರನಿಗೆ ಸಪ್ತರ್ಷಿಗಳು ಹೇಗೋ ಹಾಗೆ ಭೂರಿದಕ್ಷಿಣ ಮಹೇಂದ್ರನಿಗೆ ಮಂತ್ರೋಚ್ಛಾರಣೆ ಮಾಡಿದರು. ಸತ್ಯವಿಕ್ರಮಿ ಸಾತ್ಯಕಿಯು ಛತ್ರವನ್ನು, ಪಾಂಡವ ಧನಂಜಯ ಮತ್ತು ಭೀಮಸೇನರು ಚಾಮರಗಳನ್ನು ಹಿಡಿದಿದ್ದರು. ಹಿಂದಿನ ಕಲ್ಪದಲ್ಲಿ ಪ್ರಜಾಪತಿಯು ಇಂದ್ರನಿಗೆ ನೀಡಿದ್ದ ಶಂಖವನ್ನು ಕಲಶೋದಧಿ ವರುಣನು ಅವನಿಗಾಗಿ ತಂದಿದ್ದನು. ವಿಶ್ವಕರ್ಮನಿಂದ ಸಾವಿರಾರು ಚಿನ್ನಗಳನ್ನು ಕೂಡಿಸಿ ಚೆನ್ನಾಗಿ ಮಾಡಲ್ಪಟ್ಟಿದ್ದ ತೂಗುಮಣೆಯ ಮೇಲೆ ಕೃಷ್ಣನಿಂದ ಅವನು ಅಭಿಷಿಕ್ತನಾದನು. ಪೂರ್ವಕ್ಕೆ ಹೋಗುತ್ತಾರೆ. ಹಾಗೆಯೇ ಪಶ್ಚಿಮ ಮತ್ತು ದಕ್ಷಿಣದ ಸಾಗರದವರೆಗೆ ಹೋಗುತ್ತಾರೆ. ಆದರೆ ಪಕ್ಷಿಗಳ ಹೊರತು ಯಾರೂ ಉತ್ತರದ ಕಡೆ ಹೋಗುವುದಿಲ್ಲ. ಮಂಗಲವನ್ನುಂಟುಮಾಡಲು ಅವರು ನೂರಾರು ಶಂಖಗಳನ್ನು ಊದಿದರು. ಅವರು ಊದಿ ಮೊಳಗಲು ನನ್ನ ರೋಮಗಳು ಎದ್ದು ನಿಂತವು. ತಮ್ಮ ತೇಜಸ್ಸನ್ನು ಕಳೆದುಕೊಂಡ ಭೂಮಿಪರು ಸಾಷ್ಟಾಂಗ ಬಿದ್ದರು. ಅನ್ಯೋನ್ಯ ಮಿತ್ರರಾದ ಸತ್ವಸ್ತ ಶೌರ್ಯಸಂಪನ್ನ ದೃಷ್ಟಧ್ಯುಮ್ನ, ಪಾಂಡವರು, ಸಾತ್ಯಕಿ ಮತ್ತು ಎಂಟನೆಯವನಾಗಿ ಕೇಶವ ಇವರು ಮೂರ್ಛೆತಪ್ಪಿ ಬಿದ್ದಿದ್ದ ಭೂಮಿಪರನ್ನು ಮತ್ತು ನನ್ನನ್ನು ನೋಡಿ ಜೋರಾಗಿ ನಕ್ಕರು. ನಂತರ ಪ್ರಹೃಷ್ಟ ಬೀಭತ್ಸುವು ದ್ವಿಜಪ್ರಮುಖರಿಗೆ ಕೊಂಬುಗಳಿಗೆ ಚಿನ್ನದ ತಗಡುಗಳಿಂದ ಅಲಂಕೃತಗೊಂಡ ಐದುನೂರು ಎತ್ತುಗಳನ್ನು ನೀಡಿದನು. ಪ್ರಭು ಹರಿಶ್ಚಂದ್ರನಂತೆ ರಾಜಸೂಯವನ್ನು ಪೂರೈಸಿದ ಕೌಂತೇಯನಲ್ಲಿದ್ದಷ್ಟು ಪರಮ ಸಂಪತ್ತನ್ನು ಶಂಬರಹಂತಕ (ದಶರಥ) ನಾಗಲೀ, ಮನು ಯೌವನಾಶ್ವನಾಗಲೀ, ರಾಜ ಪೃಥು ವೈನ್ಯನಾಗಲೀ, ಭಗೀರಥನಾಗಲೀ ಹೊಂದಿರಲಿಲ್ಲ. ಹರಿಶ್ಚಂದ್ರನಲ್ಲಿದ್ದಂಥಹ ಶ್ರಿಯು ಪಾರ್ಥನಲ್ಲಿರುವುದನ್ನು ನೋಡಿದ ನಾನು ಜೀವಂತವಿರುವುದು ಶ್ರೇಯ ಎಂದು ನಿನಗೆ ಹೇಗೆ ಅನ್ನಿಸುತ್ತಿದೆ? ಅಂಧನಿಗೆ ಕಟ್ಟಿದ ರಥದಂತೆ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಕಿರಿಯ ವಂಶವು ವರ್ಧಿಸುತ್ತಿರಲು ಜ್ಯೇಷ್ಠ ವಂಶವು ನಶಿಸುತ್ತಿದೆ. ಇದನ್ನು ನೋಡಿದ ನನಗೆ ಎಲ್ಲೆಡೆಯೂ ಕುರುಪ್ರವೀರರೇ ಕಾಣುತ್ತಿದ್ದಾರೆ. ತಾಣವೇ ಇಲ್ಲದಂಥಾಗಿದೆ. ಇದರಿಂದಾಗಿಯೇ ನಾನು ಕೃಶನಾಗಿದ್ದೇನೆ, ವಿವರ್ಣನಾಗಿದ್ದೇನೆ ಮತ್ತು ಶೋಕಿತನಾಗಿದ್ದೇನೆ.”
ಧೃತರಾಷ್ಟ್ರನು ಹೇಳಿದನು:
“ನನ್ನ ಜೈಷ್ಠಿನಿಯ ಜ್ಯೇಷ್ಠ ಪುತ್ರ ನೀನು. ಪಾಂಡವರನ್ನು ದ್ವೇಷಿಸಬೇಡ. ದ್ವೇಷಿಸುವವನು ಸಾವಿನಲ್ಲಿ ಎಷ್ಟು ನೋವಿದೆಯೋ ಅಷ್ಟೇ ನೋವನ್ನು ಅನುಭವಿಸುತ್ತಾನೆ. ನಿನ್ನಂಥವರು ಯಾಕೆತಾನೆ ನಿನ್ನ ಗುರಿಗಳನ್ನೇ ತಾನೂ ಇಟ್ಟುಕೊಂಡಿರುವ, ನಿನ್ನ ಮಿತ್ರರನ್ನೇ ಮಿತ್ರರನ್ನಾಗಿ ಪಡೆದಿರುವ ಮತ್ತು ನಿನ್ನನ್ನು ದ್ವೇಷಿಸದೇ ಇರುವ ಸರಳ ಯುಧಿಷ್ಠಿರನನ್ನು ದ್ವೇಷಿಸುತ್ತಾರೆ? ಜನನ ಮತ್ತು ವೀರ್ಯದಲ್ಲಿ ನಿನ್ನ ಸಮನಾಗಿರುವ ನಿನ್ನ ಭ್ರಾತುವಿನ ಸಂಪತ್ತನ್ನು ಮೋಹದಿಂದ ಏಕೆ ಬಯಸುತ್ತಿರುವೆ? ಹಾಗಾಗಬೇಡ! ನಿನ್ನನ್ನು ನೀನು ಶಾಂತಗೊಳಿಸಿಕೋ! ಆ ಯಜ್ಞದ ವೈಭವವನ್ನು ಬಯಸುವುದಾದರೆ ನಿನ್ನ ಋತ್ವಿಜರಿಂದ ಏಳು ಎಳೆಗಳಿರುವ ಮಹಾಧ್ವರವನ್ನು ಆಯೋಜಿಸು. ಆಗ ನಿನಗಾಗಿ ರಾಜರುಗಳು ಪ್ರೀತಿಯಿಂದ ಮತ್ತು ಗೌರವದಿಂದ ರತ್ನಾಭರಣಗಳನ್ನೂ ವಿಪುಲ ಧನವನ್ನೂ ತರುತ್ತಾರೆ. ಪರರು ಸಂಪಾದಿಸಿದ ಧನವನ್ನು ಬಯಸುವುದು ಸ್ವಲ್ಪವೂ ಸರಿಯಲ್ಲ. ನಿನಗಿದ್ದುದರಲ್ಲಿ ತೃಪ್ತನಾಗು. ಸ್ವಧರ್ಮದಲ್ಲಿ ನಿರತನಾಗಿರು. ಅದರಲ್ಲಿ ಸುಖವಿದೆ. ಬೇರೆಯವರ ಸಂಪತ್ತನ್ನು ಗಮನಿಸದೇ ಇರುವುದು, ನಿತ್ಯವೂ ಸ್ವಕರ್ಮದಲ್ಲಿ ನಿರತನಾಗಿರುವುದು ಮತ್ತು ತನ್ನ ಉದ್ಯಮವನ್ನು ರಕ್ಷಿಸಿಕೊಂಡು ಬರುವುದು ಇವೇ ವೈಭವದ ಲಕ್ಷಣಗಳು. ವಿಪತ್ತು ಬಂದಾಗ ವ್ಯಥಿಸಲು ನಿರಾಕರಿಸುವ ದಕ್ಷ ನರನು ನಿತ್ಯವೂ ಏಳಿಗೆಯನ್ನು ಹೊಂದುತ್ತಾನೆ. ಅಪ್ರಮತ್ತ ವಿನೀತನು ನಿತ್ಯವೂ ಒಳ್ಳೆಯದನ್ನು ಕಾಣುತ್ತಾನೆ. ವೇದಿಕೆಗಳಲ್ಲಿ ವಿತ್ತವನ್ನು ದಾನಮಾಡುತ್ತಾ, ಪ್ರೀತಿಯ ಬಯಕೆಗಳನ್ನೆಲ್ಲಾ ಅನುಭವಿಸುತ್ತಾ, ಆರೋಗ್ಯ ಸ್ತ್ರೀಯರೊಂದಿಗೆ ಕ್ರೀಡಿಸುತ್ತಾ, ನೆಮ್ಮಂದಿಯಿಂದಿರು.”
ದುರ್ಯೋಧನನು ಹೇಳಿದನು:
“ನಾವೆಗೆ ಕಟ್ಟಲ್ಪಟ್ಟ ನಾವೆಯಂತೆ ನೀನು ತಿಳಿದವನಾಗಿದ್ದರೂ ನನ್ನಲ್ಲಿ ಗೊಂದಲವನ್ನುಂಟುಮಾಡುತ್ತಿದ್ದೀಯೆ! ಸ್ವಾರ್ಥದ ಕುರಿತು ನಿನಗೆ ಸ್ವಲ್ಪವೂ ಚಿಂತೆಯಿಲ್ಲವೇ? ನೀನು ನನ್ನನ್ನು ದ್ವೇಷಿಸುತ್ತೀಯಾ? ನಿನ್ನ ಅನುಶಾಸನದಲ್ಲಿರುವ ಧಾರ್ತರಾಷ್ಟ್ರರು ನನ್ನ ಸಂಗಡವಿದ್ದಾರೆಯೇ? ಭವಿಷ್ಯದ ವಿಚಾರಗಳ ಕುರಿತು ಮಾಡಬೇಕಾದುದು ಬಹಳವಿದೆ ಎಂದು ಸದಾ ನೀನು ಯೋಚಿಸುತ್ತಿರುವೆ. ಪ್ರೇರಿತ ಮಾರ್ಗದರ್ಶಿಗೆ ವೈರಿಗಳಿಂದ ಪ್ರಭಾವಿತನಾಗಿ ಯಾವ ಮಾರ್ಗವನ್ನು ತೆಗೆದುಕೊಳ್ಳಬೇಕು ಎನ್ನುವುದೇ ಗೊಂದಲಮಯವಾಗಿದೆಯಾದರೆ ಅವನನ್ನು ಅನುಸರಿಸುವರು ಹೇಗೆ ತಾನೆ ಅವನ ಮಾರ್ಗದಲ್ಲಿ ನಡೆಯಬಲ್ಲರು? ವೃದ್ಧರನ್ನೇ ಸೇವೆಗೈಯುತ್ತಿರುವ ನಿನ್ನ ಬುದ್ಧಿಯು ಹಳತಾಗಿ ಹೋಗಿದೆ. ಜಿತೇಂದ್ರಿಯನಾಗಿದ್ದರೂ ನೀನು ನಮ್ಮ ಕಾರ್ಯಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲಗಳನ್ನುಂಟುಮಾಡುತ್ತಿದ್ದೀಯೆ. ಬೃಹಸ್ಪತಿಯು ಹೇಳಿದಂತೆ ರಾಜನ ನಡತೆಯು ಇತರ ಜನರ ನಡತೆಗಿಂಥ ಭಿನ್ನವಾಗಿರಬೇಕು. ಆದುದರಿಂದ ರಾಜನು ಸದಾ ತನ್ನ ಸ್ವಾರ್ಥ್ಯವನ್ನು ಚಿಂತಿಸುತ್ತಿರಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಿರಬೇಕು. ಕ್ಷತ್ರಿಯನ ನಡವಳಿಕೆಯು ಜಯವನ್ನು ಪಡೆಯುವುದಕ್ಕಾಗಿಯೇ ಇರಬೇಕು. ಅದು ಧರ್ಮವಾಗಿರಲಿ ಅಥವಾ ಅಧರ್ಮವಾಗಿರಲಿ, ಅದೇ ಅವನ ನಡತೆಯಾಗಿರಬೇಕು. ವೈರಿಗಳ ಸಂಪತ್ತನ್ನು ಪಡೆಯುವ ಆಸೆಯಿಂದ ಸಾರಥಿಯು ತನ್ನ ಚಾಟಿಯನ್ನು ಎಲ್ಲೆಡೆಯಲ್ಲಿಯೂ ಬೀಸಬೇಕಾಗುತ್ತದೆ. ಶಸ್ತ್ರವನ್ನು ತಿಳಿದವನು ಕತ್ತರಿಸುವ ಖಡ್ಗದ ಕುರಿತಲ್ಲದೇ ಅದು ಬಹಿರಂಗವಾಗಲೀ ಅಥವಾ ಮುಚ್ಚುಮರೆಯಲ್ಲಿಯಾಗಲೀ ಶತ್ರುವನ್ನು ಕೆಳಗುರುಳಿಸುವುದಕ್ಕೆ ಮಾತ್ರ ಇದೆ ಎಂದು ತಿಳಿದಿರುತ್ತಾನೆ. ಅಸಂತೋಷವೇ ಸಂಪತ್ತಿನ ಮೂಲ. ಆದುದರಿಂದಲೇ ನಾನು ಅಸಂತುಷ್ಟನಾಗಿರಲು ಬಯಸುತ್ತೇನೆ. ಅತ್ಯುತ್ತಮ ಏಳಿಗೆಯನ್ನು ಹೊಂದಿದವನೇ ಪರಮ ರಾಜಕಾರಣಿ. ಐಶ್ವರ್ಯ ಅಥವಾ ಧನವಿರುವಾಗ ಮಮತ್ವವನ್ನು ಸಾಧಿಸುವುದು ಸರಿಯಲ್ಲವೇ? ಹಿಂದೆ ಗಳಿಸಿದ್ದುದನ್ನು ಕಸಿದುಕೊಳ್ಳುವುದೇ ರಾಜಧರ್ಮವೆಂದು ತಿಳಿಯುತ್ತಾರೆ. ದ್ರೋಹಬೇಡವೆಂದು ಒಪ್ಪಂದಮಾಡಿಕೊಂಡ ಶಕ್ರನು ನಮೂಚಿಯ ಶಿರವನ್ನು ಕತ್ತರಿಸಿದನು. ಅವನು ಮಾಡಿದ್ದುದು ಶತ್ರುವಿನೊಂದಿಗೆ ನಡೆದುಕೊಳ್ಳುವ ಒಂದು ಸನಾತನ ನಡತೆ. ಸರ್ಪವು ಇಲಿಯನ್ನು ಹೇಗೆ ನುಂಗುತ್ತದೆಯೋ ಹಾಗೆ ಭೂಮಿಯು ವಿರೋಧಿಸದಿರುವ ರಾಜನನ್ನು ಮತ್ತು ಪ್ರವಾಸವನ್ನೇ ಮಾಡದಿರುವ ಬ್ರಾಹ್ಮಣನನ್ನು ನುಂಗುತ್ತದೆ. ಹುಟ್ಟಿನಿಂದಲೇ ಯಾರೂ ಇನ್ನೊಬ್ಬ ಪುರುಷನ ಶತ್ರುವಾಗಿರುವುದಿಲ್ಲ. ತನ್ನ ಹಾಗೆ ನಡೆದುಕೊಳ್ಳುವ ಯಾರೂ ಅವನಿಗೆ ಶತ್ರುವಾಗುವುದಿಲ್ಲ. ಶತ್ರುಪಕ್ಷವು ವೃದ್ಧಿಸುತ್ತಿರುವುದನ್ನು ಮೋಹದಿಂದ ನೋಡಿದವನು ಹರಡುತ್ತಿರುವ ವ್ಯಾಧಿಯನ್ನು ಹೇಗೋ ಹಾಗೆ ಅದರ ಬುಡವನ್ನೇ ಕತ್ತರಿಸುತ್ತಾನೆ. ಎಷ್ಟೇ ಸಣ್ಣದಿರಲಿ, ಪರಾಕ್ರಮದಲ್ಲಿ ವೃದ್ಧಿಸುತ್ತಿರುವ ಶತ್ರುವು ಖಂಡಿತವಾಗಿಯೂ ವೃಕ್ಷದ ಬುಡದಲ್ಲಿ ಬೆಳೆಯುತ್ತಿರುವ ಹುತ್ತವು ವೃಕ್ಷವನ್ನು ಹೇಗೋ ಹಾಗೆ ನುಂಗಿಬಿಡುತ್ತದೆ. ಶತ್ರುವಿನ ಅಭಿವೃದ್ಧಿಯು ನಿನ್ನನ್ನು ಸಂತೋಷಗೊಳಿಸದಿರಲಿ! ಸತ್ಯವಂತರ ಶಿರದ ಮೇಲಿರುವ ಈ ನ್ಯಾಯವು ಒಂದು ಭಾರವೇ ಸರಿ. ಹುಟ್ಟಿದಾಗಿನಿಂದ ಹೇಗೆ ಬೆಳೆಯುತ್ತಾ ಬಂದಿದ್ದೀವೋ ಹಾಗೆ ನಮ್ಮ ಸಂಪತ್ತೂ ಕುಡ ಬೆಳೆಯುತ್ತದೆ ಎಂದು ಬಯಸುವವನು ತನ್ನ ಬಂಧುಬಾಂಧವರೊಡನೆ ಹೇಗೆ ತಾನೇ ಅಭಿವೃದ್ಧಿಯನ್ನು ಹೊಂದಬಲ್ಲ? ವಿಕ್ರಮವೇ ಶೀಘ್ರ ಅಭಿವೃದ್ಧಿ. ಪಾಂಡವರ ಐಶ್ವರ್ಯವನ್ನು ಪಡೆಯುವವರೆಗೆ ನಾನು ಅಪಾಯದಲ್ಲಿದ್ದೇನೆ. ನಾನು ಆ ಶ್ರೀಯನ್ನು ಪಡೆಯುತ್ತೇನೆ ಅಥವಾ ಯುದ್ಧದಲ್ಲಿ ಮರಣಹೊಂದುತ್ತೇನೆ. ಅವನಿಗೆ ಸದೃಶನಾಗಿರದಿದ್ದರೆ ನಾನು ಏಕೆ ತಾನೆ ಜೀವಿಸಬೇಕು? ಪಾಂಡವರು ದಿನ ನಿತ್ಯವೂ ವರ್ಧಿಸುತ್ತಿದ್ದಾರೆ. ನಾವು ಮಾತ್ರ ನಿಂತಲ್ಲಿಯೇ ನಿಂತಿದ್ದೇವೆ.”
ದ್ಯೂತಕ್ಕೆ ಯುಧಿಷ್ಠಿರನನ್ನು ಕರೆಯಿಸಿದುದು
ಶಕುನಿಯು ಹೇಳಿದನು:
“ಪಾಂಡುಪುತ್ರ ಯುಧಿಷ್ಠಿರನಲ್ಲಿ ನೀನು ಯಾವ ಸಂಪತ್ತನ್ನು ನೋಡಿ ತಪಿಸುತ್ತಿರುವೆಯೋ ಅದನ್ನು ನಾನು ಅಪಹರಿಸುತ್ತೇನೆ. ಶತ್ರುವಿಗೆ ದ್ಯೂತದ ಆಹ್ವಾನವನ್ನು ಕಳುಹಿಸು. ನಾನು ಸಂಶಯ ಬರುವಂಥಹುದೇನನ್ನೂ ಮಾಡುವುದಿಲ್ಲ. ಸೇನೆಗಳನ್ನು ಎದುರಿಟ್ಟು ಯುದ್ಧ ಮಾಡುವುದೂ ಇಲ್ಲ. ದಾಳಗಳನ್ನು ಮಾತ್ರ ಎಸೆದು ಆ ವಿದ್ವಾನ್ ವಿದುಷಿಯನ್ನು ಜಯಿಸುತ್ತೇನೆ. ದಾಳಗಳೇ ನನ್ನ ಬಿಲ್ಲು ಬಾಣಗಳೆಂದು ತಿಳಿ. ದಾಳಗಳ ಹೃದಯವು ಧನುಸ್ಸಿನ ದಾರ ಮತ್ತು ದಾಳಗಳನ್ನು ಎಸೆಯುವ ಚಾಪೆಯು ರಥವೆಂದು ತಿಳಿ.”
ದುರ್ಯೋಧನನು ಹೇಳಿದನು:
“ರಾಜನ್! ಈ ಅಕ್ಷವಿದನು ದ್ಯೂತದಲ್ಲಿ ಪಾಂಡುಪುತ್ರನಿಂದ ಅವನ ಸಂಪತ್ತನ್ನು ಕಸಿದುಕೊಳ್ಳಲು ಉತ್ಸುಕನಾಗಿದ್ದಾನೆ. ತಂದೇ! ಇದು ನಿನಗೆ ಸಂತಸವನ್ನುಂಟುಮಾಡಬೇಕು.”
ಧೃತರಾಷ್ಟ್ರನು ಹೇಳಿದನು:
“ನನ್ನ ತಮ್ಮ ಮಹಾತ್ಮ ವಿದುರನ ಶಾಸನದಂತೆ ನಡೆಯುತ್ತಿದ್ದೇನೆ. ಅವನೊಂದಿಗೆ ವಿಚಾರಮಾಡಿ ಮುಂದಿನ ಕಾರ್ಯದ ಕುರಿತು ನಿಶ್ಚಯಿಸುತ್ತೇನೆ.”
ದುರ್ಯೋಧನನು ಹೇಳಿದನು:
“ಕೌರವ! ವಿದುರನು ನಿನ್ನ ಬುದ್ಧಿಯನ್ನು ನಾಶಪಡಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವನು ಪಾಂಡವರ ಹಿತದಲ್ಲಿ ಎಷ್ಟು ನಿರತನಾಗಿದ್ದಾನೋ ಅಷ್ಟು ನನ್ನ ಕುರಿತು ಇಲ್ಲ. ಪುರುಷನು ತನ್ನ ಕೆಲಸವನ್ನು ಇನ್ನೊಬ್ಬರ ಅಧಿಕಾರಕ್ಕೊಳಪಟ್ಟು ಮಾಡಬಾರದು. ಯಾವುದೇ ಕಾರ್ಯದಲ್ಲಿ ಇಬ್ಬರ ಅಭಿಪ್ರಾಯಗಳೂ ಒಂದೇ ಆಗಿರುವುದಿಲ್ಲ. ಭಯದಿಂದ ತನ್ನ ರಕ್ಷಣೆಯನ್ನು ಮಾಡಿಕೊಳ್ಳದಿದ್ದ ಮೂಢನು ಮಳೆಯಲ್ಲಿ ನಿಂತ ಒಂಟಿ ಕಡ್ಡಿಯಂತೆ ನಾಶಹೊಂದುತ್ತಾನೆ. ವ್ಯಾಧಿಯಾಗಲೀ ಯಮನಾಗಲೀ ಒಳ್ಳೆಯ ಗಳಿಗೆಯನ್ನು ನೋಡಿ ಬರುವುದಿಲ್ಲ. ಸಮಯ ದೊರಕಿದಾಗಲೇ ನಮ್ಮ ಶ್ರೇಯಸ್ಸಿಗಾಗಿ ನಡೆದುಕೊಳ್ಳಬೇಕು.”
ಧೃತರಾಷ್ಟ್ರನು ಹೇಳಿದನು:
“ಆದರೂ ಪುತ್ರ! ನಮಗಿಂಥಲೂ ಬಲಶಾಲಿಯಾಗಿರುವರನ್ನು ವಿರೋಧಿಸಲು ಮನಸ್ಸು ಬರುತ್ತಿಲ್ಲ. ಶಸ್ತ್ರದಂತೆ ವೈರವು ವಿಕಾರಗಳನ್ನು ಸೃಷ್ಟಿಸುತ್ತದೆ. ಯಾವ ಅನರ್ಥವನ್ನು ಅರ್ಥವೆಂದು ತಿಳಿದಿದ್ದೀಯೋ ಅದು ಅತಿ ಘೋರ ಕಲಹವನ್ನು ತಂದೊಡ್ಡುತ್ತದೆ. ಯಾವುದೇ ರೀತಿಯಲ್ಲಿ ಅದು ಒಮ್ಮೆ ಪ್ರಾರಂಭವಾಯಿತೆಂದರೆ ಅದು ಖಡ್ಗ ಬಾಣಗಳನ್ನು ಬಿಟ್ಟೇ ಬಿಡುತ್ತದೆ.”
ದುರ್ಯೋಧನನು ಹೇಳಿದನು:
“ಪುರಾಣಗಳಲ್ಲಿ ದ್ಯೂತವು ಒಂದು ವ್ಯವಹಾರವೆಂದು ಪ್ರಣೀತವಾಗಿದೆ. ಅದರಲ್ಲಿ ಕೆಟ್ಟದ್ದೇನೂ ಇಲ್ಲ. ಸಂಪ್ರಹಾರಗಳೇನೂ ಇಲ್ಲ. ಇಂದು ಶಕುನಿಯ ಮಾತುಗಳನ್ನು ಒಪ್ಪು. ಕ್ಷಿಪ್ರವಾಗಿ ಒಂದು ಸಭೆಯನ್ನು ಕಟ್ಟಲು ಆಜ್ಞಾಪಿಸು. ಜೂಜಾಡಿದರೆ ಸ್ವರ್ಗದ ಬಾಗಿಲು ನಮಗೆ ಹತ್ತಿರವಾಗುತ್ತದೆ. ಹಾಗೆ ಮಾಡುವುದೇ ನಮಗೆ ಸೂಕ್ತ. ನಾವಿಬ್ಬರೂ ಒಂದೇ ಸ್ತರದಲ್ಲಿ ನಿಲ್ಲುವ ಹಾಗಾಗುತ್ತದೆ. ಪಾಂಡವರೊಂದಿಗೆ ಆಡಲು ಒಪ್ಪಿಗೆ ನೀಡು.”
ಧೃತರಾಷ್ಟ್ರನು ಹೇಳಿದನು:
“ನೀನು ಆಡುವ ಮಾತುಗಳು ನನಗೆ ಹಿಡಿಸುತ್ತಿಲ್ಲ. ಆದರೆ, ನಿನಗೆ ಇಷ್ಟವಾದುದನ್ನು ಮಾಡು. ನನ್ನ ಮಾತುಗಳನ್ನು ಉಲ್ಲಂಘಿಸಿದ ನೀನು ನಂತರ ಪಶ್ಚಾತ್ತಾಪ ಪಡುತ್ತೀಯೆ. ಏಕೆಂದರೆ ಇಂಥಹ ಮಾತುಗಳು ಧರ್ಮವನ್ನು ಅನುಸರಿಸಿಲ್ಲ. ತನ್ನ ಬುದ್ಧಿ-ವಿಧ್ಯೆಗಳ ಸಹಾಯದಿಂದ ವಿದುರನು ಹಿಂದೆಯೇ ಈ ಎಲ್ಲವನ್ನೂ ಕಂಡಿದ್ದನು. ಕ್ಷತ್ರಿಯರ ಬೀಜವನ್ನೇ ನಾಶಪಡಿಸುವ ಆ ಮಹಾ ಭಯವೇ ಇಂದು ಅಸಹಾಯಕ ನರನ ಎದಿರಾಗಿ ನಿಂತಿದೆ.”
ದೈವವು ಪರಮ ದುಸ್ತರವಾದುದೆಂದು ತಿಳಿದು ದೈವಸಮ್ಮೂಢಚೇತಸ ಮನೀಷಿ ರಾಜ ಧೃತರಾಷ್ಟ್ರನು ಹೀಗೆ ಹೇಳಿ ಪುರುಷರಿಗೆ ತನ್ನ ಪುತ್ರನ ವಾಕ್ಯಗಳನ್ನು ಪರಿಪಾಲಿಸುವಂತೆ ಆಜ್ಞೆಯನ್ನಿತ್ತನು:
“ಹೇಮವೈಡೂರ್ಯಗಳಿಂದ ಅಲಂಕರಿಸಿದ ಸಾವಿರ ಸ್ತಂಭಗಳ ಮತ್ತು ಸ್ಫಟಿಕದ ತೋರಣ ಕಮಾನುಗಳನ್ನುಳ್ಳ ನೂರು ದ್ವಾರಗಳ, ಒಂದು ಕ್ರೋಶ ಚೌಕದ ವಿಸ್ತಾರ ಸುಂದರ ಸಭಾಗೃಹವನ್ನು ನಿರ್ಮಾಣಮಾಡಿ.”
ಅವನನ್ನು ಕೇಳಿದ ನಿರ್ವಿಶಂಕ ಪ್ರಾಜ್ಞ ಮತ್ತು ದಕ್ಷರು ಸರ್ವವಸ್ತು ಸಾಮಾಗ್ರಿಗಳನ್ನೂ ಸಹಸ್ರಾರು ಯುಕ್ತಶಿಲ್ಪಿಗಳನ್ನೂ ತರಿಸಿ ಸಭೆಯನ್ನು ಕಟ್ಟಿಸಿದರು. ಸ್ವಲ್ಪವೇ ಸಮಯದಲ್ಲಿ ನಿಷ್ಠರಾಗಿದ್ದ ಅವರು ಬಹುರತ್ನಗಳಿಂದ ಅಲಂಕೃತ, ಚಿನ್ನದ ಸುಂದರ ಆಸನಗಳಿಂದ ಕೂಡಿದ ರಮ್ಯ ಸಭೆಯು ಸಿದ್ಧವಾಗಿದೆಯೆಂದು ರಾಜನಿಗೆ ವರದಿಮಾಡಿದರು. ನಂತರ ನರೇಂದ್ರ ಧೃತರಾಷ್ಟ್ರನು ಮಂತ್ರಿ ಮುಖ್ಯ ವಿದ್ವಾನ್ ವಿದುರನನ್ನು ಕರೆಯಿಸಿ ಹೇಳಿದನು:
“ರಾಜಪುತ್ರ ಯುಧಿಷ್ಠಿರನಲ್ಲಿಗೆ ಹೋಗಿ ನನ್ನ ಕರೆಯಂತೆ ಅವನನ್ನು ತಕ್ಷಣವೇ ಇಲ್ಲಿಗೆ ಕರೆದುಕೊಂಡು ಬಾ. “ಬಹುರತ್ನಗಳಿಂದ ಅಲಂಕೃತಗೊಂಡ, ಬೆಲೆಬಾಳುವ ಮಂಚ ಆಸನಗಳಿಂದ ಸಜ್ಜಿತವಾದ ಈ ನನ್ನ ಸಭೆಯನ್ನು ನಿನ್ನ ಸಹೋದರರೊಂದಿಗೆ ಬಂದು ನೋಡು. ಅಲ್ಲಿ ಸ್ನೇಹಪರ ದ್ಯೂತವನ್ನು ಆಡೋಣ!” ಎಂದು ಹೇಳು.”
ಪುತ್ರನ ಮನಸ್ಸನ್ನು ಅರಿತಿದ್ದ ನರಾಧಿಪ ರಾಜ ಧೃತರಾಷ್ಟ್ರನು ಇದೊಂದು ದುಸ್ತರ ದೈವವೆಂದು ತಿಳಿದು ಹಾಗೆ ಮಾಡಿದನು. ವಿದ್ವಾಂಸರಲ್ಲಿಯೇ ಶ್ರೇಷ್ಠ ವಿದುರನು ತನ್ನ ಅಣ್ಣನ ಈ ಅನ್ಯಾಯದ ಮಾತುಗಳನ್ನು ಒಪ್ಪಿಕೊಳ್ಳದೇ ಹೀಗೆ ಹೇಳಿದನು:
“ನೃಪತೇ! ಈ ಕೆಲಸವನ್ನು ನಾನು ಸ್ವಾಗತಿಸುವುದಿಲ್ಲ. ಇದನ್ನು ಮಾಡಬೇಡ! ನಮ್ಮ ಕುಲದ ನಾಶದ ಕುರಿತು ಭಯಪಡುತ್ತೇನೆ. ಪುತ್ರರಲ್ಲಿ ಭಿನ್ನತೆಯನ್ನು ತರುವುದರಿಂದ ಕಲಹವಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದ್ಯೂತವನ್ನಾಡುವುದರ ಕುರಿತು ಇದೇ ನನ್ನ ಭಯ.”
ಧೃತರಾಷ್ಟ್ರನು ಹೇಳಿದನು:
“ಕ್ಷತ್ತ! ಇದರಲ್ಲಿ ಯಾವುದೇ ಕಲಹದ ಚಿಂತೆ ನನಗಿಲ್ಲ. ದೈವದ ವಿರುದ್ಧವೂ ಇದು ಆಗುವುದಿಲ್ಲ. ಇವೆಲ್ಲವೂ ಧಾತಾರನ ಕಲ್ಪನೆಯ ವಶ. ಸರ್ವ ಜಗತ್ತೂ ಸ್ವತಂತ್ರವಾಗಿ ನಡೆಯುತ್ತಿಲ್ಲ. ಆದುದರಿಂದ ಇಂದು ನನ್ನ ಶಾಸನದಂತೆ ರಾಜನಲ್ಲಿಗೆ ತಲುಪಿ ಕ್ಷಿಪ್ರವಾಗಿ ಆ ದುರ್ಧರ್ಷ ಕುಂತೀಪುತ್ರ ಯುಧಿಷ್ಠಿರನನ್ನು ಕರೆದುಕೊಂಡು ಬಾ!”
ದ್ಯೂತಕ್ಕೆ ಯುಧಿಷ್ಠಿರನ ಆಗಮನ
ರಾಜ ಧೃತರಾಷ್ಟ್ರನಿಂದ ಬಲವಂತವಾಗಿ ನಿಯುಕ್ತನಾದ ವಿದುರನು ಮನೀಷಿ ಪಾಂಡವರ ವಾಸಸ್ಥಳಕ್ಕೆ ಮಹಾವೇಗವನ್ನುಳ್ಳ ಚೆನ್ನಾಗಿ ಪಳಗಿದ ಬಲಶಾಲಿ ಉದಾರ ಅಶ್ವಗಳೊಂದಿಗೆ ಹೊರಟನು. ದಾರಿಯನ್ನು ಜಿಗಿದು ದಾಟಿ ನೃಪತಿಯ ಪುರವನ್ನು ತಲುಪಿ ಆ ಮಹಾಬುದ್ಧಿಯು ದ್ವಿಜರನ್ನು ಗೌರವಿಸುತ್ತಾ ಪ್ರವೇಶಿಸಿದನು. ಕುಬೇರನ ಭವನದಂತಿದ್ದ ರಾಜಗೃಹವನ್ನು ಸೇರಿ ಆ ಧರ್ಮಾತ್ಮನು ಧರ್ಮಪುತ್ರ ಯುಧಿಷ್ಠಿರನ ಬಳಿಸಾರಿದನು. ಸತ್ಯಧೃತಿ ಮಹಾತ್ಮ ರಾಜ ಅಜಾತಶತ್ರುವು ವಿದುರನನ್ನು ಯಥಾವತ್ತಾಗಿ ಪೂಜಾಪೂರ್ವಕವಾಗಿ ಸ್ವಾಗತಿಸಿದನು. ನಂತರ ಆಜಮೀಢನು ಪುತ್ರಸಮೇತ ಧೃತರಾಷ್ಟ್ರನ ಕುರಿತು ಪ್ರಶ್ನಿಸಿದನು. ಯುಧಿಷ್ಠಿರನು ಹೇಳಿದನು:
“ಕ್ಷತ್ತ! ನಿನ್ನ ಮನಸ್ಸಿನಲ್ಲಿ ಸಂತೋಷವನ್ನು ಕಾಣುತ್ತಿಲ್ಲ. ನೀನು ಕುಶಲವಾಗಿ ಬಂದಿದ್ದೀಯಾ? ಮಕ್ಕಳು ತಮ್ಮ ಹಿರಿಯರನ್ನು ಅನುಸರಿಸುತ್ತಿದ್ದಾರೆಯೇ? ಪ್ರಜೆಗಳು ಅವನ ಆಡಳಿತವನ್ನು ಅನುಸರಿಸುತ್ತಿದ್ದಾರೆಯೇ?”
ವಿದುರನು ಹೇಳಿದನು:
“ಮಹಾತ್ಮ ರಾಜನು ತನ್ನ ಪುತ್ರರೊಂದಿಗೆ ಕುಶಲನಾಗಿದ್ದಾನೆ. ತನ್ನ ಇಂದ್ರಸಮಾನ ಕುಟುಂಬದವರಿಂದ ಸುತ್ತುವರೆಯಲ್ಪಟ್ಟಿದ್ದಾನೆ. ರಾಜನ್! ತನ್ನ ವಿನೀತ ಪುತ್ರಗಣಗಳಿಂದ ಪ್ರೀತನಾಗಿ ವಿಶೋಕನಾಗಿ ದೃಢಾತ್ಮನಾಗಿ ಸಂತೋಷದಿಂದಿದ್ದಾನೆ. ಆದರೆ ಕುರುರಾಜನು ನಿನ್ನ ಕುಶಲ ಮತ್ತು ಅಭಿವೃದ್ಧಿಯನ್ನು ಕೇಳಿದ ನಂತರ ನಿನಗೆ ಈ ರೀತಿ ಹೇಳಿದ್ದಾನೆ: “ಪುತ್ರ! ನಿನ್ನಲ್ಲಿರುವುದರ ಹಾಗೇ ತೋರುತ್ತಿರುವ ಈ ಸಭೆಯನ್ನು ನಿನ್ನ ಸಹೋದರರ ಸಹಿತ ಬಂದು ನೋಡು. ನಿನ್ನ ಭ್ರಾತೃಗಳ ಸಹಿತ ಇಲ್ಲಿಗೆ ಬಂದು ಸೇರು. ಸ್ನೇಹಪರ ಜೂಜಾಡೋಣ! ರಮಿಸೋಣ. ಸರ್ವ ಕುರುಗಳೂ ಇಲ್ಲಿಗೆ ಬಂದು ಸೇರಿದ್ದಾರೆ. ನೀನೂ ಕೂಡ ಬಂದು ಸೇರಿದರೆ ನನಗೆ ಸಂತೋಷವಾಗುತ್ತದೆ.” ಮಹಾತ್ಮ ರಾಜ ಧೃತರಾಷ್ಟ್ರನು ಆಟಗಾರರನ್ನು ನೇಮಿಸಿದ್ದಾನೆ. ಆಟಗಾರರೆಲ್ಲ ಸೇರಿರುವುದನ್ನು ನೀನು ಅಲ್ಲಿ ನೋಡಬಹುದು. ನೃಪತೇ! ಈ ಸಂದೇಶವನ್ನು ತಂದು ಬಂದಿದ್ದೇನೆ. ಅದನ್ನು ಸ್ವೀಕರಿಸು.”
ಯುಧಿಷ್ಠಿರನು ಹೇಳಿದನು:
“ಕ್ಷತ್ತ! ದ್ಯೂತದಲ್ಲಿ ಕಲಹವಾಗುತ್ತದೆ ಎನ್ನುವುದು ತಿಳಿದಿಲ್ಲವೇ? ಇದನ್ನು ತಿಳಿದ ಯಾರುತಾನೆ ದ್ಯೂತವನ್ನು ಇಷ್ಟಪಡುತ್ತಾನೆ? ನೀನಾದರೂ ಸರಿಯಾದುದೇನೆಂದು ಅಭಿಪ್ರಾಯಪಡುತ್ತೀಯೆ? ನಾವೆಲ್ಲರೂ ನಿನ್ನ ಮಾತುಗಳಂತೆಯೇ ನಡೆದುಕೊಳ್ಳುತ್ತೇವೆ.”
ವಿದುರನು ಹೇಳಿದನು:
“ದ್ಯೂತವು ಅನರ್ಥದ ಮೂಲ ಎನ್ನುವುದನ್ನು ನಾನು ತಿಳಿದಿದ್ದೇನೆ. ಇದನ್ನು ತಡೆಯಲು ನಾನು ಪ್ರಯತ್ನವನ್ನೂ ಮಾಡಿರುತ್ತೇನೆ. ಆದರೆ ರಾಜನು ನನ್ನನ್ನು ನಿನ್ನ ಸಮಕ್ಷಮದಲ್ಲಿ ಕಳುಹಿಸಿದ್ದಾನೆ. ಇದನ್ನು ಕೇಳಿ ತಿಳಿದ ನೀನು ಶ್ರೇಯಸ್ಸು ಯಾವುದರಲ್ಲಿಯೋ ಅದನ್ನು ಮಾಡು.”
ಯುಧಿಷ್ಠಿರನು ಹೇಳಿದನು:
“ರಾಜ ಧೃತರಾಷ್ಟ್ರನ ಪುತ್ರರ ಹೊರತಾಗಿ ಇನ್ನು ಯಾರು ಯಾರು ಅಲ್ಲಿ ಜೂಜಾಡುತ್ತಾರೆ? ವಿದುರ! ನಿನ್ನಲ್ಲಿ ಕೇಳುತ್ತಿದ್ದೇನೆ ಹೇಳು. ಅಲ್ಲಿ ಸೇರಿರುವ ನೂರರಲ್ಲಿ ನಾವು ಯಾರೊಂದಿಗೆ ಜೂಜಾಡುತ್ತೇವೆ?”
ವಿದುರನು ಹೇಳಿದನು:
“ವಿಶಾಂಪತೇ! ಅಕ್ಷವನ್ನು ತಿಳಿದ ಕೈಕುಶಲತೆಯಿರುವ ಅತಿಯಾಗಿ ಜೂಜಾಡುವ ಗಾಂಧಾರರಾಜ ಶಕುನಿ, ವಿವಿಂಶತಿ, ಚಿತ್ರಸೇನ, ಸತ್ಯವ್ರತ, ಪುರುಮಿತ್ರ ಮತ್ತು ಜಯ.”
ಯುಧಿಷ್ಠಿರನು ಹೇಳಿದನು:
“ಮಹಾ ಭಯಂಕರ ಆಟಗಾರರು ಮತ್ತು ಮಾಯೆಯನ್ನು ಬಳಸಿ ದ್ಯೂತವಾಡುವವರೆಲ್ಲ ಅಲ್ಲಿ ಸೇರಿದ್ದಾರೆ. ಆದರೆ ಇವೆಲ್ಲವೂ ದಾತಾರನ ಕಲ್ಪನೆಯ ವಶದಲ್ಲಿವೆ. ಆದುದರಿಂದ ನಾನು ಈ ಜೂಜುಕೋರರೊಂದಿಗೆ ಆಡುವುದನ್ನು ನಿರಾಕರಿಸುವುದಿಲ್ಲ. ನನಗಿಷ್ಟವಿದೆ ಎಂದು ನಾನು ಹೋಗಲು ಬಯಸುತ್ತಿಲ್ಲ. ಆದರೆ ಇದು ರಾಜ ಧೃತರಾಷ್ಟ್ರನ ಶಾಸನವೆಂದು ಜೂಜಾಡಲು ಹೋಗುತ್ತೇನೆ. ಪುತ್ರನು ಸದಾ ತಂದೆಯ ಇಷ್ಟದಂತೆ ನಡೆದುಕೊಳ್ಳುತ್ತಾನೆ. ಆದುದರಿಂದ ವಿದುರ! ನೀನು ನನಗೆ ಹೇಳಿದ ಹಾಗೆ ಮಾಡುತ್ತೇನೆ. ಶಕುನಿಯೊಡನೆ ಜೂಜಾಡಲೂ ನಾನು ತಿರಸ್ಕರಿಸುವುದಿಲ್ಲ. ಇಲ್ಲದಿದ್ದರೆ ಅವನು ನನ್ನನ್ನು ಸಭೆಯಲ್ಲಿ ಕ್ರೂರವಾಗಿ ದ್ಯೂತಕ್ಕೆ ಆಹ್ವಾನಿಸುತ್ತಾನೆ. ಒಮ್ಮೆ ಆಹ್ವಾನಿತನಾದರೆ ನಾನು ಎಂದೂ ಹಿಂಜರಿಯಲಾರೆ. ಯಾಕೆಂದರೆ ಇದು ನನ್ನ ಶಾಶ್ವತ ವ್ರತವಾಗಿದೆ.”
ಈ ರೀತಿ ವಿದುರನಿಗೆ ಹೇಳಿದ ಧರ್ಮರಾಜನು ಸರ್ವರಿಗೂ ಬೇಗನೆ ಹೊರಡುವಂತೆ ಆಜ್ಞಾಪಿಸಿ, ಕುದುರೆಗಳನ್ನೇರಿ ಸೇನೆ ಮತ್ತು ಅನುಯಾಯಿಗಳೊಂದಿಗೆ, ದ್ರೌಪದಿಯ ಮುಂದಾಳತ್ವದಲ್ಲಿ ಸ್ತ್ರೀಯರೊಂದಿಗೆ ಹೊರಟನು.
“ತೀಕ್ಷ್ಣ ಪ್ರಕಾಶವು ಕಣ್ಣಿನ ದೃಷ್ಟಿಯನ್ನು ಹೇಗೋ ಹಾಗೆ ದೈವವು ಪ್ರಜ್ಞೆಯನ್ನು ಕಸಿದುಕೊಳ್ಳುತ್ತದೆ. ಧಾತುಪಾಶಗಳ ವಶದಲ್ಲಿ ಸಿಲುಕಿದ ನರನು ಅದರಂತೆಯೇ ನಡೆದುಕೊಳ್ಳುತ್ತಾನೆ.”
ಹೀಗೆ ಹೇಳುತ್ತಾ ಅಹ್ವಾನವನ್ನು ಸಹಿಸಲಾರದೇ ಕ್ಷತ್ತನ ಸಹಿತ ಅರಿಂದಮ ಪಾರ್ಥ ರಾಜ ಯುಧಿಷ್ಠಿರನು ಹೊರಟನು. ಬಾಹ್ಲೀಕನು ನೀಡಿದ್ದ ರಥವನ್ನು ಏರಿ ಪರಿಚಾರಕರಿಂದ ಸುತ್ತುವರೆಯಲ್ಪಟ್ಟು ಭ್ರಾತೃಗಳ ಸಹಿತ ಪಾಂಡವ ಪಾರ್ಥನು ಪ್ರಯಾಣಿಸಿದನು. ಬ್ರಾಹ್ಮಣರನ್ನು ಮುಂದಿರಿಸಿಕೊಂಡು, ರಾಜಶ್ರೀಯಿಂದ ಬೆಳಗುತ್ತಾ ಧೃತರಾಷ್ಟ್ರನ ಆಮಂತ್ರಣ ಮತ್ತು ಕಾಲ ಪ್ರಚೋದನೆಗೆ ಸಿಲುಕಿ ಪ್ರಯಾಣಿಸಿದನು.
ಅವನು ಹಸ್ತಿನಾಪುರಕ್ಕೆ ಹೋಗಿ ಧೃತರಾಷ್ಟ್ರನ ಮನೆಯನ್ನು ತಲುಪಿದನು ಮತ್ತು ಧರ್ಮಾತ್ಮ ಪಾಂಡವನು ಧೃತರಾಷ್ಟ್ರನನ್ನು ಭೇಟಿ ಮಾಡಿದನು. ಹಾಗೆಯೇ ಆ ವಿಭುವು ದ್ರೋಣ, ಭೀಷ್ಮ, ಕರ್ಣ, ಕೃಪ, ಮತ್ತು ದ್ರೌಣಿಯೊಂದಿಗೆ ಯಥಾವತ್ತಾಗಿ ಭೇಟಿಯಾದನು. ವೀರ್ಯವಂತ ಆ ಮಹಾಬಾಹುವು ಸೋಮದತ್ತನನ್ನೂ, ದುರ್ಯೋಧನನನ್ನೂ, ಶಲ್ಯನನ್ನೂ, ಸೌಬಲನನ್ನೂ ಮತ್ತು ಮೊದಲೇ ಅಲ್ಲಿಗೆ ಬಂದು ಸೇರಿದ್ದ ಇತರ ರಾಜರನ್ನೂ, ಜಯದ್ರಥನನ್ನೂ, ಮತ್ತು ಸರ್ವ ಕುರುಗಳನ್ನೂ ಬೇಟಿಯಾದನು. ಸರ್ವ ಮಹಾಬಾಹು ಭ್ರಾತೃಗಳಿಂದ ಪರಿವೃತನಾಗಿ ಅವನು ಧೀಮಂತ ರಾಜ ಧೃತರಾಷ್ಟ್ರನ ಮನೆಯನ್ನು ಪ್ರವೇಶಿಸಿದನು. ಅಲ್ಲಿ ಅವನು ತಾರೆಗಳಿಂದ ಶಾಶ್ವತವಾಗಿ ಸುತ್ತುವರೆಯಲ್ಪಟ್ಟ ರೋಹಿಣಿಯಂತೆ ತನ್ನ ಅತ್ತಿಗೆಯವರಿಂದ ಸುತ್ತುವರೆಯಲ್ಪಟ್ಟ ಪತಿಯ ಅನುವ್ರತೆ ದೇವಿ ಗಾಂಧಾರಿಯನ್ನು ಕಂಡನು. ಗಾಂಧಾರಿಯನ್ನು ಅಭಿವಂದಿಸಿ, ಅವಳಿಂದ ಪ್ರತಿನಂದಿತರಾಗಿ ಅವರು ಪ್ರಜ್ಞಾಚಕ್ಷು ಈಶ್ವರ ವೃದ್ಧ ತಂದೆಯನ್ನು ಕಂಡರು. ರಾಜನು ಬೀಮಸೇನನನ್ನು ಮೊದಲು ಮಾಡಿ ಆ ನಾಲ್ಕು ಕೌರವನಂದನರ ನೆತ್ತಿಯನ್ನು ಆಘ್ರಾಣಿಸಿದನು. ಪ್ರಿಯದರ್ಶನ ಪುರುಷವ್ಯಾಘ್ರ ಪಾಂಡವರನ್ನು ನೋಡಿದ ಕೌರವರನ್ನು ಹರ್ಷವೇ ಆವರಿಸಿತು. ಅವನಿಂದ ಅನುಜ್ಞೆಯನ್ನು ಪಡೆದು ರತ್ನಗಳಿಂದ ಅಲಂಕೃತವಾದ ತಮ್ಮ ಮನೆಯನ್ನು ಪ್ರವೇಶಿಸಿದಾಗ ಪ್ರಮುಖ ಸ್ತ್ರೀಯರು ದ್ರೌಪದಿಯನ್ನು ಕಾಣಲು ಬಂದರು. ಪ್ರಜ್ವಲಿಸುತ್ತಿರುವ ಯಾಜ್ಞಸೇನೆಯ ಸಂಪತ್ತನ್ನು ನೋಡಿ ಧೃತರಾಷ್ಟ್ರನ ಸೊಸೆಯರು ಅಷ್ಟೊಂದು ಸಂತೋಷ ಪಡಲಿಲ್ಲ. ಅನಂತರ ಆ ಪುರುಷವ್ಯಾಘ್ರ ಕುರುನಂದನರು ಸ್ತ್ರೀಯರೊಂದಿಗೆ ಮಾತನಾಡಿ ವ್ಯಾಯಾಮದಿಂದ ಹಿಡಿದು ಪ್ರತಿಯೊಂದು ದಿನಕಾರ್ಯಗಳನ್ನೂ ಮಾಡಿ ಸ್ನಾನಮಾಡಿ, ದಿವ್ಯಚಂದನವನ್ನು ಎಲ್ಲೆಡೆ ಲೇಪಿಸಿಕೊಂಡು, ಕಲ್ಯಾಣಮನಸ್ಕರಾದ ಬ್ರಾಹ್ಮಣರಿಂದ ಸ್ವಸ್ತಿವಾಚನಗಳನ್ನು ಕೇಳಿ, ಮನಸ್ಸು ತೃಪ್ತಿಯಾಗುವ ಭೋಜನವನ್ನು ಮಾಡಿ, ತಾವು ಉಳಿಯುವ ಸ್ಥಳಕ್ಕೆ ಹಿಂದಿರುಗಿ, ನಾರಿಯರಿಂದ ಗೀತೆಗಳನ್ನು ಕೇಳಿ, ಮಲಗಿದರು. ರತಿಕ್ರೀಡೆಗೈದು ರಾತ್ರಿಯ ನಿದ್ದೆಯನ್ನು ಮಾಡಿ ವಿಶ್ರಾಂತಿಗೊಂಡ ಅವರನ್ನು ಸ್ತುತಿಗಳಿಂದ ಎಬ್ಬಿಸಲಾಯಿತು. ಸುಖವಾಗಿ ರಾತ್ರಿಯನ್ನು ಕಳೆದ ಅವರೆಲ್ಲರೂ ಆಹ್ನೀಕವನ್ನು ಮುಗಿಸಿ ಜೂಜಾಡುವವರಿಂದ ತುಂಬಿದ್ದ ರಮ್ಯ ಸಭೆಯನ್ನು ಪ್ರವೇಶಿಸಿದರು.