ರಾಜಸೂಯ; ಶಿಶುಪಾಲ ವಧೆ
ರಾಜಸೂಯ ದೀಕ್ಷೆ
ಧರ್ಮರಾಜನ ರಕ್ಷಣೆ, ಸತ್ಯಪರಿಪಾಲನೆ, ಮತ್ತು ಶತ್ರುಗಳ ಮರ್ದನದಿಂದ ಪ್ರಜೆಗಳು ಸ್ವಕರ್ಮನಿರತರಾಗಿದ್ದರು. ಆ ಬಲಶಾಲಿಗಳ ಒಳ್ಳೆಯ ದಾನ ಧರ್ಮಗಳಿಂದೊಡಗೂಡಿದ ಅನುಶಾಸನದಿಂದ ಸಕಾಲದಲ್ಲಿ ಸಾಕಷ್ಟು ಮಳೆಸುರಿದು, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿದವು. ಗೋರಕ್ಷಣೆ, ಕೃಷಿ, ವಾಣಿಜ್ಯ ಎಲ್ಲ ಉದ್ದಿಮೆಗಳೂ ಅಭಿವೃದ್ಧಿ ಹೊಂದಿದವು. ವಿಶೇಷವಾಗಿ ಇವೆಲ್ಲವೂ ರಾಜಕರ್ಮ ಎಂದು ಜನರು ತಿಳಿದುಕೊಂಡರು. ದಸ್ಯುಗಳಿಂದಾಗಲೀ, ವಂಚಕರಿಂದಾಗಲೀ, ರಾಜವಲ್ಲಭರಿಂದಾಗಲೀ ರಾಜನ ಕುರಿತು ಕೆಟ್ಟ ಮಾತು ಬರುತ್ತಿರಲಿಲ್ಲ. ಬರಗಾಲವಾಗಲೀ, ಅತಿವೃಷ್ಠಿಯಾಗಲೀ, ವ್ಯಾಧಿಗಳಾಗಲೀ, ಬೆಂಕಿಯಾಗಲೀ ದಂಗೆಯಾಗಲೀ ಧರ್ಮನಿಷ್ಠ ಯುಧಿಷ್ಠಿರನಲ್ಲಿ ಸರ್ವಥಾ ಇರಲಿಲ್ಲ. ಏನಾದರೂ ಒಳ್ಳೆಯದನ್ನು ಮಾಡಲಿಕ್ಕೆಂದು, ತಮ್ಮ ಹಾಜರಿಯನ್ನು ಹಾಕಲು ಅಥವಾ ತಾವಾಗಿಯೇ ಕಪ್ಪ ಕೊಡಬೇಕೆಂದು ನೃಪರು ಪುನಃ ಪುನಃ ಬರುತ್ತಿದ್ದರೇ ಹೊರತು ಬೇರೆ ಯಾವ ಕಾರಣಕ್ಕೂ ಬರುತ್ತಿರಲಿಲ್ಲ. ಧರ್ಮದಿಂದ ಸಂಗ್ರಹಿಸಿದ ವಿತ್ತವು ನೂರು ವರ್ಷಗಳಲ್ಲಿಯೂ ಖರ್ಚು ಮಾಡಲಿಕ್ಕಾಗದಷ್ಟು ವೃದ್ಧಿಯಾಯಿತು. ತನ್ನ ಕೋಶ ಮತ್ತು ಕೋಷ್ಟಗಳ ಪ್ರಮಾಣವನ್ನು ತಿಳಿದ ರಾಜ ಕೌಂತೇಯನು ಯಜ್ಞದ ಕುರಿತು ಮನಸ್ಸುಮಾಡಿದನು. ಅವನ ಎಲ್ಲ ಸುಹೃದಯರೂ ಒಟ್ಟಿಗೆ ಮತ್ತು ಪ್ರತ್ಯೇಕವಾಗಿ
“ವಿಭೋ! ಯಜ್ಞದ ಸಮಯ ಬಂದಿದೆ. ಅದಕ್ಕೆ ತಕ್ಕುದನ್ನು ಮಾಡು!”
ಎಂದು ಹೇಳಿದರು. ಹೀಗೆ ಅವರು ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿಗೆ ಋಷಿ, ಪುರಾಣ, ವೇದಾತ್ಮ, ತಿಳಿದವರಿಗೆ ಮಾತ್ರ ಕಾಣಿಸಿಕೊಳ್ಳುವ, ಶ್ರೇಷ್ಠರಲ್ಲಿ ಶ್ರೇಷ್ಠನಾದ, ಜಗತ್ತಿನ ಹುಟ್ಟು ಮತ್ತು ಅಂತ್ಯನಾದ, ಹಿಂದೆ ಆಗಿದ್ದುದರ, ಮುಂದೆ ಆಗುವ ಮತ್ತು ಈಗ ಆಗುತ್ತಿರುವುದಕ್ಕೆ ಒಡೆಯನಾದ, ಕೇಶಿಸೂದನ, ಕೇಶವ, ಸರ್ವ ವೃಷ್ಣಿಗಳಿಗೆ ಕೋಟೆಯಂತಿರುವ, ಕಷ್ಟದಲ್ಲಿರುವವರಿಗೆ ರಕ್ಷಣೆಯನ್ನು ನೀಡುವ ಶತ್ರುಹರ ಹರಿಯು ಆಗಮಿಸಿದನು. ಅನಕದುಂದುಭಿಯನ್ನು ತನ್ನ ಬಲದ ನಿಯಂತ್ರಣಕ್ಕೆ ಇರಿಸಿ ಧರ್ಮರಾಜನಿಗೆ ಬಹಳಷ್ಟು ಸಂಪತ್ತನ್ನು ತೆಗೆದುಕೊಂಡು ಪುರುಷವ್ಯಾಘ್ರ ಮಾಧವನು ಮಹಾ ಸೇನೆಯೊಂದಿಗೆ, ಆ ಅಪರಿಮಿತ ಅಕ್ಷಯ ರತ್ನಗಳ ಸಾಗರವೇ ಉಕ್ಕಿಬಂದಹಾಗೆ ರಥಘೋಷದ ಶಬ್ಧದೊಡನೆ ಆ ಉತ್ತಮ ಪುರವನ್ನು ಪ್ರವೇಶಿಸಿದನು. ಬೆಳಕಿಲ್ಲದಿದ್ದಲ್ಲಿ ಸೂರ್ಯನಿಂದ ಹೇಗೋ ಹಾಗೆ ಮತ್ತು ಗಾಳಿಯಿಲ್ಲದಿದ್ದಲ್ಲಿ ವಾಯುವಿನಿಂದ ಹೇಗೋ ಹಾಗೆ ಭಾರತ ಪುರವು ಕೃಷ್ಣನ ಆಗಮನವನ್ನು ಉತ್ಸಾಹಿಸಿತು.
ಯುಧಿಷ್ಠಿರನು ಸಂತೋಷದಿಂದ ಅವನನ್ನು ಬರಮಾಡಿಕೊಂಡು ಯಥಾವಿಧಿಯಾಗಿ ಸತ್ಕರಿಸಿದನು. ಕುಶಲವನ್ನು ವಿಚಾರಿಸಿ ಸುಖಾಸೀನನಾದನಂತರ ಆ ಪುರುಷರ್ಷಭನು ಧೌಮ್ಯ-ದ್ವೈಪಾಯನರ ಸಮ್ಮುಖದಲ್ಲಿ ಋತ್ವಿಜರು ಮತ್ತು ಭೀಮಾರ್ಜುನರ ಸಹಿತ ಕೃಷ್ಣನಿಗೆ ಹೇಳಿದನು:
“ಕೃಷ್ಣ! ನಿನ್ನ ಕೃಪೆಯಿಂದ ಸರ್ವ ಪೃಥ್ವಿಯೂ ನನ್ನ ವಶದಲ್ಲಿದೆ. ನಿನ್ನ ಅನುಗ್ರಹದಿಂದ ಬಹಳಷ್ಟು ಧನವನ್ನೂ ಒಟ್ಟುಗೂಡಿಸಿದ್ದೇವೆ. ದೇವಕೀಸುತ! ಮಾಧವ! ಈಗ ನಾನು ಈ ಎಲ್ಲವನ್ನೂ ವಿಧಿವತ್ತಾಗಿ ದ್ವಿಜಾಗ್ರರ ಮೂಲಕ ಹವ್ಯವಾಹಕ್ಕೆ ಉಪಯೋಗಿಸಲು ಬಯಸುತ್ತೇನೆ. ನಿನ್ನೊಂದಿಗೆ ಮತ್ತು ಅನುಜರೊಂದಿಗೆ ನಾನು ಯಾಗಿಸಲು ಬಯಸುತ್ತೇನೆ. ಅದಕ್ಕೆ ಅಪ್ಪಣೆಯನ್ನು ನೀಡಬೇಕು! ನೀನು ನನಗೆ ಇದಕ್ಕೆ ದೀಕ್ಷೆಯನ್ನು ನೀಡು. ನಿನ್ನ ಇಷ್ಟದಂತೆ ಇದು ನಡೆದರೆ ನಾನು ದೋಷವನ್ನು ಹೊಂದುವುದಿಲ್ಲ. ಕೃಷ್ಣ! ನೀನು ಅನುಜ್ಞೆಯನ್ನಿತ್ತರೆ ತಮ್ಮಂದಿರೊಡನೆ ಉತ್ತಮ ಕ್ರತುವನ್ನು ಸಾಧಿಸಬಲ್ಲೆ.”
ಅವನ ಬಹು ಗುಣಗಳನ್ನು ವಿಸ್ತರಿಸುತ್ತಾ ಕೃಷ್ಣನು ಉತ್ತರಿಸಿದನು:
“ರಾಜಶಾರ್ದೂಲ! ನೀನು ಸಾಮ್ರಾಟನಾಗಲು ಅರ್ಹನಾಗಿದ್ದೀಯೆ. ಮಹಾಕ್ರತುವನ್ನೂ ಕೈಗೊಳ್ಳುತ್ತೀಯೆ. ನೀನು ಅದನ್ನು ಗಳಿಸಿದೆಯಾದರೆ ನಾವು ಕೃತಕೃತ್ಯರಾಗುತ್ತೇವೆ. ನಿನ್ನ ಶ್ರೇಯಸ್ಸಿಗೆ ನಾನು ಬದ್ಧನಾಗಿರುವಾಗ ನಿನಗಿಷ್ಟವಾದ ಯಜ್ಞವನ್ನು ಯಾಜಿಸು. ನನ್ನನ್ನೂ ಈ ಕೆಲಸದಲ್ಲಿ ತೊಡಗಿಸಿಕೋ. ನೀನು ಹೇಳಿದುದೆಲ್ಲವನ್ನೂ ನಾನು ಮಾಡುತ್ತೇನೆ.”
ಯುಧಿಷ್ಠಿರನು ಹೇಳಿದನು:
“ಕೃಷ್ಣ! ನೀನು ನಿನಗಿಷ್ಟಬಂದಹಾಗೆ ನನ್ನೊಡನಿದ್ದೀಯೆಯಾದರೆ ನನ್ನ ಸಂಕಲ್ಪವು ಸಫಲವಾಯಿತು ಮತ್ತು ನನ್ನ ಸಿದ್ಧಿಯೂ ನಿಶ್ಚಯವಾಯಿತು.”
ಹೀಗೆ ಕೃಷ್ಣನಿಂದ ಅನುಮತಿಯನ್ನು ಪಡೆದ ಪಾಂಡವನು ಭ್ರಾತೃಗಳ ಸಹಿತ ರಾಜಸೂಯಕ್ಕೆ ಸಾಧನಗಳ ಏರ್ಪಾಡುಮಾಡಲು ಪ್ರಾರಂಭಿಸಿದನು. ಅರಿನಿಬರ್ಹಣ ಪಾಂಡವನು ಯೋದ್ಧರಲ್ಲಿ ಶ್ರೇಷ್ಠ ಸಹದೇವ ಮತ್ತು ಎಲ್ಲ ಮಂತ್ರಿಗಳಿಗೆ ಆಜ್ಞಾಪಿಸಿದನು:
“ಈ ಕ್ರತುವಿನ ಯಜ್ಞಾಂಗವಾಗಿ ದ್ವಿಜರು ಏನೆಲ್ಲ ಮಂಗಲ ಉಪಕರಣಗಳು ಬೇಕೆಂದು ಹೇಳುತ್ತಾರೋ ಆ ಎಲ್ಲನ್ನೂ ಮತ್ತು ಧೌಮ್ಯನು ಹೇಳುವ ಅಧಿಯಜ್ಞದ ಪದಾರ್ಥಗಳನ್ನೆಲ್ಲವನ್ನೂ ಬೇಗನೇ ಯೋಗ್ಯ ಪುರುಷರು ಯಥಾಕ್ರಮವಾಗಿ ಒಟ್ಟುಗೂಡಿಸಲಿ. ಇಂದ್ರಸೇನ, ವಿಶೋಕ, ಅರ್ಜುನಸಾರಥಿ ಪುರು ಇವರು ನನ್ನ ಪ್ರೀತಿ ಇಷ್ಟದಂತೆ ಆಹಾರ-ಊಟದ ವ್ಯವಸ್ಥೆಯನ್ನು ವಹಿಸಿಕೊಳ್ಳಬೇಕು. ದ್ವಿಜರಿಗೆ ಪ್ರೀತಿಕರವೂ ಮನೋಹರವೂ ಆದ ಎಲ್ಲ ಬಯಕೆಗಳನ್ನೂ ಪೂರೈಸುವ ರಸಗಂಧಸಮನ್ವಿತ ಆಹಾರವನ್ನು ತರಿಸಿ!”
ಮಹಾತ್ಮ ಧರ್ಮರಾಜನ ಈ ಮಾತುಗಳನ್ನು ಕೇಳಿದ ತಕ್ಷಣವೇ ಯೋದ್ಧರಲ್ಲಿ ಶ್ರೇಷ್ಠ ಸಹದೇವನು ಅವೆಲ್ಲವನ್ನೂ ಏರ್ಪಡಿಸಿದನು. ನಂತರ ದ್ವೈಪಾಯನನು ಸಾಕ್ಷಾತ್ ವೇದಗಳೇ ಮೂರ್ತಿಮತ್ತರಾಗಿದ್ದರೋ ಎನ್ನುವ ಮಹಾಭಾಗ ದ್ವಿಜ ಋತ್ವಿಜರನ್ನು ಕರೆಯಿಸಿಕೊಂಡನು. ಸ್ವಯಂ ಸತ್ಯವತೀಸುತನು ಅದರ ಬ್ರಹ್ಮತ್ವವನ್ನು ವಹಿಸಿಕೊಂಡನು. ಧನಂಜಯರ ಋಷಭ ಸುಸಾಮನು ಸಾಮಗನಾದನು. ಬ್ರಹ್ಮಿಷ್ಠ ಸತ್ತಮ ಯಾಜ್ಞವಲ್ಕ್ಯನು ಅಧ್ವರ್ಯುವಾದನು. ಧೌಮ್ಯನ ಸಹಿತ ವಸುಪುತ್ರ ಪೈಲನು ಹೋತಾರನಾದನು. ವೇದ ವೇದಾಂಗಪಾರಗರಾದ ಇವರ ಶಿಷ್ಯವರ್ಗ ಮತ್ತು ಪುತ್ರರು ಎಲ್ಲರೂ ಹೋತ್ರಗರಾದರು. ವಾಚನ ಪುಣ್ಯಾಹಾದಿಗಳನ್ನು ವಿಧಿವತ್ತಾಗಿ ಪೂರೈಸಿ ಆ ಮಹಾ ದೇವಯಜ್ಞವನ್ನು ಶಾಸ್ತ್ರೋಕ್ತವಾಗಿ ನಿಯೋಜಿಸಿದರು. ಅಪ್ಪಣೆಯ ಮೇರೆಗೆ ಶಿಲ್ಪಿಗಳು ಉಳಿಯಲಿಕ್ಕೆಂದು ದೇವತೆಗಳ ಮನೆಗಳಂತಿರುವ ರತ್ನಗಳಿಂದ ಅಲಂಕೃತ ವಿಶಾಲ ಮನೆಗಳನ್ನು ನಿರ್ಮಿಸಿದರು. ಆಗ ಕುರುಸತ್ತಮ ರಾಜಸತ್ತಮ ರಾಜನು ತನ್ನ ಸದ್ಯದ ಮಂತ್ರಿ ಸಹದೇವನಿಗೆ ಆಜ್ಞೆಯನ್ನಿತ್ತನು:
“ಆಮಂತ್ರಣಕ್ಕೆಂದು ನೀನು ವೇಗವಾಗಿ ಹೋಗಬಲ್ಲ ದೂತರನ್ನು ಕಳುಹಿಸು!”
ರಾಜನ ಈ ಮಾತುಗಳನ್ನು ಕೇಳಿದ ಕೂಡಲೇ ದೂತರನ್ನು ಕಳುಹಿಸಿದನು:
“ರಾಷ್ಟ್ರಗಳನ್ನು, ಬ್ರಾಹ್ಮಣರನ್ನು ಭೂಮಿಪರನ್ನು ಆಮಂತ್ರಿಸಿ! ಗೌರವಕ್ಕೆ ಅರ್ಹ ಎಲ್ಲ ವೈಶ್ಯರನ್ನೂ ಶೂದ್ರರನ್ನೂ ಕರೆದಕೊಂಡು ಬನ್ನಿ!”
ಪಾಂಡವೇಯನ ಶಾಸನದಂತೆ ಅವರು ಸರ್ವ ಮಹೀಪಾಲರನ್ನೂ ಆಮಂತ್ರಿಸಿದರು. ಇನ್ನೂ ಇತರರಿಗೆ ಆಮಂತ್ರಣಗಳನ್ನು ಕಳುಹಿಸಲಾಯಿತು. ಆ ಸಮಯದಲ್ಲಿ ಯಥಾಕಾಲದಲ್ಲಿ ವಿಪ್ರರು ರಾಜಸೂಯಕ್ಕೆಂದು ಕುಂತೀಪುತ್ರ ಯುಧಿಷ್ಠಿರನಿಗೆ ದೀಕ್ಷೆಯನ್ನು ನೀಡಿದರು. ದೀಕ್ಷಿತನಾದ ನೃಪಶ್ರೇಷ್ಠ ಧರ್ಮಾತ್ಮ ಧರ್ಮರಾಜ ಯುಧಿಷ್ಠಿರನು ಸಹಸ್ರಾರು ವಿಪ್ರರಿಂದ, ಭ್ರಾತೃಗಳಿಂದ, ಬಾಂಧವರಿಂದ, ಮಿತ್ರರಿಂದ, ಸಚಿವರಿಂದ, ನಾನಾ ದೇಶಗಳಿಂದ ಬಂದು ಸೇರಿದ್ದ ಕ್ಷತ್ರಿಯ ಮನುಷ್ಯೇಂದ್ರರಿಂದ, ಅಮಾತ್ಯರಿಂದ, ಸುತ್ತುವರೆಯಲ್ಪಟ್ಟು ಧರ್ಮನೇ ಮೂರ್ತಿಮತ್ತಾಗಿರುವಂತೆ ಯಜ್ಞವೇದಿಕೆಯನ್ನು ಪ್ರವೇಶಿಸಿದನು. ಬೇರೆ ಬೇರೆ ದೇಶಗಳಿಂದ ಸರ್ವವಿಧ್ಯೆಗಳಲ್ಲಿ ನಿಷ್ಣಾತ ವೇದವೇದಾಂಗಪಾರಂಗತ ಬ್ರಾಹ್ಮಣರು ಅಲ್ಲಿಗೆ ಬಂದರು. ಅವರೆಲ್ಲರಿಗೆ ಉಳಿದುಕೊಳ್ಳಲು ಧರ್ಮರಾಜನ ಶಾಸನದಂತೆ ಅವರೊಂದಿಗೆ ಬಂದವರಿಗೂ ಸಾಕಾಗುವಷ್ಟು ಆಹಾರ-ಶಯನಗಳಿಂದ ಸುಸಜ್ಜಿತ, ಸರ್ವ ಋತುಗಳಿಗೆ ಯುಕ್ತ ಸೌಲಭ್ಯಗಳಿಂದ ಕೂಡಿದ ಸಹಸ್ರಾರು ಪ್ರತ್ಯೇಕ ಪ್ರತ್ಯೇಕ ವಸತಿಗೃಹಗಳನ್ನು ಶಿಲ್ಪಿಗಳು ನಿರ್ಮಿಸಿದರು. ಚೆನ್ನಾಗಿ ಸತ್ಕೃತರಾಗಿ ಬ್ರಾಹ್ಮಣರು ಅಲ್ಲಿಯೇ ಕಥೆಗಳನ್ನು ಹೇಳುತ್ತಾ, ನಟನರ್ತಕರನ್ನು ನೋಡುತ್ತಾ ವಾಸಿಸಿದರು. ಸಂತೋಷದಿಂದಿದ್ದ ಆ ಮಹಾತ್ಮ ವಿಪ್ರರ ಊಟಮಾಡುತ್ತಿದ್ದ ಮಾತನಾಡುತ್ತಿದ್ದ ಮಹಾ ಧ್ವನಿಯು ಹಗಲೂ ರಾತ್ರಿ ಕೇಳಿಬರುತ್ತಿತ್ತು.
“ಇದನ್ನು ಕೊಡಿ! ಕೊಡಿ! ಮತ್ತು ಭೋಜನಮಾಡಿ! ಭೋಜನ ಮಾಡಿ!”
ಈ ಪ್ರಕಾರದ ಮಾತುಗಳು ಅಲ್ಲಿ ನಿತ್ಯವೂ ಕೇಳಿಬರುತ್ತಿತ್ತು. ಧರ್ಮರಾಜನು ಅವರಿಗೆ ಪ್ರತ್ಯೇಕವಾಗಿ ಒಂದು ಲಕ್ಷ ಗೋವುಗಳನ್ನು, ಶಯನಗಳನ್ನು, ಚಿನ್ನ ಮತ್ತು ದಾಸಿಯರನ್ನು ನೀಡಿದನು. ಈ ರೀತಿ ಸ್ವರ್ಗದಲ್ಲಿ ಶಕ್ರನು ಹೇಗೋ ಹಾಗೆ ಪೃಥ್ವಿಯಲ್ಲಿ ಏಕೈಕ ವೀರ ಮಹಾತ್ಮ ಪಾಂಡವನ ಯಜ್ಞವು ಪ್ರಾರಂಭಗೊಂಡಿತು.
ನಿಮಂತ್ರಿತ ರಾಜರ ಆಗಮನ
ಆಗ ರಾಜ ಯುಧಿಷ್ಠಿರನು ಪಾಂಡವ ನಕುಲನನ್ನು ಹಸ್ತಿನಾಪುರಕ್ಕೆ ಭರತರ್ಷಭ ಭೀಷ್ಮ, ದ್ರೋಣ, ಧೃತರಾಷ್ಟ್ರ, ಕೃಪ, ತಮ್ಮಂದಿರು, ಮತ್ತು ಯುಧಿಷ್ಠಿರನಲ್ಲಿ ಅನುರಕ್ತರಾಗಿದ್ದ ಎಲ್ಲರನ್ನೂ ಆಹ್ವಾನಿಸಲು ಕಳುಹಿಸಿದನು. ಸಮಿತಿಂಜಯ ಪಾಂಡವ ನಕುಲನು ಹಸ್ತಿನಾಪುರಕ್ಕೆ ಹೋಗಿ ಭೀಷ್ಮ ಮತ್ತು ಧೃತರಾಷ್ಟ್ರರನ್ನು ಆಮಂತ್ರಿಸಿದನು. ಧರ್ಮರಾಜನ ಯಜ್ಞದ ಕುರಿತು ಕೇಳಿ ಆ ಯಜ್ಞವಿದರು ಬ್ರಾಹ್ಮಣರನ್ನು ಮುಂದಿರಿಸಿಕೊಂಡು ಪ್ರೀತಿಮನಸ್ಕರಾಗಿ ಯಜ್ಞಕ್ಕೆಂದು ಹೊರಟರು. ಇನ್ನೂ ಇತರ ನೂರಾರು ಸಂತುಷ್ಟ ಮನಸ್ಕ ರಾಜರು ಧರ್ಮರಾಜನ ಸಭೆಯನ್ನು ಮತ್ತು ಆ ಪಾಂಡವನನ್ನು ನೋಡುವ ಆಸೆಯಿಂದ ಬಂದರು. ಹೆಚ್ಚಿನ ಮತ್ತು ವಿವಿಧ ರತ್ನಗಳನ್ನು ತೆಗೆದುಕೊಂಡು ಎಲ್ಲ ದಿಕ್ಕುಗಳಿಂದಲೂ ಪಾರ್ಥಿವರು ಅಲ್ಲಿ ಸೇರಿದ್ದರು. ಧೃತರಾಷ್ಟ್ರ, ಭೀಷ್ಮ, ಮಹಾಮತಿ ವಿದುರ, ದುರ್ಯೊಧನನ ನಾಯಕತ್ವದಲ್ಲಿ ಎಲ್ಲ ಸಹೋದರರು, ಆಚಾರ್ಯನೇ ಮೊದಲಾದ ನೃಪರು - ಗಾಂಧಾರರಾಜ ಸುಬಲ, ಮಹಾಬಲಿ ಶಕುನಿ, ಅಚಲ ವೃಷಕ, ರಥಿಗಳಲ್ಲಿ ಶ್ರೇಷ್ಠ ಕರ್ಣ, ಋತ, ಮದ್ರರಾಜ ಶಲ್ಯ, ಮಹಾರಥಿ ಬಾಹ್ಲೀಕ, ಕೌರವ್ಯ ಸೋಮದತ್ತ, ಭೂರಿ ಭೂರಿಶ್ರವ, ಶಲ, ಅಶ್ವತ್ಥಾಮ, ಕೃಪ, ದ್ರೋಣ, ಸೈಂಧವ ಜಯದ್ರಥ - ಎಲ್ಲರನ್ನೂ ಸತ್ಕರಿಸಿ ಬರಮಾಡಿಕೊಳ್ಳಲಾಯಿತು. ಪುತ್ರನೊಂದಿಗೆ ಯಜ್ಞಸೇನ, ವಸುಧಾಧಿಪ ಶಾಲ್ವ, ಪ್ರಾಗ್ಜ್ಯೋತಿಷದ ನೃಪತಿ ಮಹಾಯಶ ಭಗದತ್ತ, ಇವರೆಲ್ಲರ ಜೊತೆ ಸಾಗರದಾಚೆ ವಾಸಿಸುತ್ತಿದ್ದ ಮ್ಲೇಚ್ಛರು, ಪರ್ವತ ದೇಶಗಳ ರಾಜರು, ರಾಜ ಬೃಹದ್ಬಲ, ವಾಸುದೇವ ಪೌಂಡ್ರಕ, ವಂಗ, ಕಲಿಂಗ, ಆಕರ್ಷ, ಕುಂತಲ, ವಾನವಾಸ್ಯರು, ಆಂಧ್ರಕರು, ದ್ರವಿಡರು, ಸಿಂಹಲರು, ಕಾಶ್ಮೀರ ರಾಜ, ಮಹಾತೇಜ ಕುಂತಿಭೋಜ, ಸುಮಹಾಬಲ ಸುಹ್ಮ, ಇತರ ಎಲ್ಲ ಶೂರ ಬಾಹ್ಲೀಕ ರಾಜರು, ಪುತ್ರರೊಂದಿಗೆ ವಿರಾಟ, ಮಹಾರಥಿ ಮಾಚೇಲ್ಲ, ಪುತ್ರನೊಂದಿಗೆ ಮಹಾವೀರ್ಯ ಸಂಗ್ರಾಮದುರ್ಮದ ಶಿಶುಪಾಲ ಹೀಗೆ ರಾಜರು, ರಾಜಪುತ್ರರು ಮತ್ತು ನಾನಾ ಜನಪದೇಶ್ವರರು ಪಾಂಡವನ ಯಜ್ಞಕ್ಕೆ ಬಂದರು. ರಾಮ, ಅನಿರುದ್ಧ, ಬಭ್ರು, ಸಾರಣ, ಗದ, ಪ್ರದ್ಯುಮ್ನ, ಸಾಂಬ, ವೀರ್ಯವಾನ್ ಚಾರುದೇಷ್ಣ, ಉಲ್ಮುಕ, ನಿಷಠ, ವೀರ ಪ್ರಾದ್ಯುಮ್ನ, ಮತ್ತು ಇತರ ಸರ್ವ ಮಹಾರಥಿ ವೃಷ್ಣಿಗಳು ಬಂದು ಸೇರಿದರು. ಇವರು ಮತ್ತು ಇನ್ನೂ ಇತರ ಬಹಳಷ್ಟು ಮಧ್ಯದೇಶದ ರಾಜರು ಪಾಂಡುಪುತ್ರನ ರಾಜಸೂಯ ಮಹಾಕ್ರತುವಿಗೆ ಬಂದರು.
ಧರ್ಮರಾಜನ ಶಾಸನದಂತೆ ಅವರಿಗೆ ಬಹಳ ಕೋಣೆಗಳಿರುವ, ಕೊಳ ಮತ್ತು ವೃಕ್ಷಗಳಿಂದೊಡಗೂಡಿದ ಸುಂದರ ವಸತಿಗೃಹಗಳನ್ನು ನೀಡಲಾಯಿತು. ಧರ್ಮರಾಜನು ಅವರಿಗೆ ಅನುತ್ತಮ ಪೂಜೆಯನ್ನಿತ್ತು ಸತ್ಕರಿಸಿದ ನಂತರ ಆ ನೃಪರು ಕೈಲಾಸಶಿಖರದಷ್ಟು ಎತ್ತರವಾದ, ಮನೋಜ್ಞ, ದ್ರವ್ಯಭೂಷಿತ, ಎಲ್ಲಕಡೆಯಿಂದಲೂ ಎತ್ತರ ಪ್ರಾಕಾರಗಳಿಂದ ಸುತ್ತುವರೆಯಲ್ಪಟ್ಟ ಬಲಿಷ್ಟ ಮತ್ತು ಸುಂದರ ಆವಾಸಗಳಿಗೆ ತೆರಳಿದರು. ಜಾಲಿಗಳನ್ನು ಚಿನ್ನದಲ್ಲಿ ಮಾಡಲಾಗಿತ್ತು, ನೆಲವನ್ನು ಮಣಿಗಳಿಂದ ಸಿಂಗರಿಸಲಾಗಿತ್ತು, ಮೆಟ್ಟಿಲುಗಳು ಸುಖಕರವಾಗಿದ್ದವು ಮತ್ತು ಆಸನಗಳು ಎತ್ತರದಲ್ಲಿದ್ದವು. ನಿವಾಸಗಳನ್ನು ಹೂಗುಚ್ಛ ಮತ್ತು ಮಾಲೆಗಳಿಂದ ಸುಹಾಸಿತ ಗಂಧಗಳಿಂದ ಸಿಂಗರಿಸಲಾಗಿತ್ತು, ಹಂಸದ ಗರಿಗಳಿಂದ ಮಾಡಿದ ಮೆತ್ತನೆಯ ಹಾಸಿಗೆಗಳಿಂದ ಕೂಡಿದ್ದವು, ಮತ್ತು ನೋಡಲು ವಿಶಾಲವಾಗಿಯೂ ಸುಂದರವಾಗಿಯೂ ಇದ್ದವು. ಅವುಗಳು ಇಕ್ಕಟ್ಟಾಗಿರಲಿಲ್ಲ ಮತ್ತು ದ್ವಾರಗಳು ಸಾಕಷ್ಟು ವಿಶಾಲವಾಗಿದ್ದು ಸಿಂಗರಿಸಲ್ಪಟ್ಟಿದ್ದವು. ಅವುಗಳ ಕೋಳುಗಳನ್ನು ಬಹುಧಾತುಗಳಿಂದ ಮಾಡಿದ್ದರು ಮತ್ತು ಹಿಮಾಲಯದ ಶಿಖರಗಳಂತೆ ತೋರುತ್ತಿದ್ದವು. ವಿಶ್ರಾಂತಿಯನ್ನು ಪಡೆದ ಭೂಮಿಪರು ಭೂರಿದಕ್ಷಿಣೆಗಳನ್ನು ಪಡೆದ ಸದಸ್ಯರಿಂದ ಆವೃತ ಧರ್ಮರಾಜ ಯುಧಿಷ್ಠಿರನನ್ನು ನೋಡಿದರು. ಪಾರ್ಥಿವರು ಮತ್ತು ಮಹಾತ್ಮ ಬ್ರಾಹ್ಮಣರಿಂದ ಕೂಡಿದ್ದ ಆ ಸಭೆಯು ಅಮರರಿಂದ ಕೂಡಿದ ದೇವಸಭೆಯಂತೆ ಹೊಳೆಯುತ್ತಿತ್ತು.
ಯಜ್ಞಕರಣ
ಯುಧಿಷ್ಠಿರನು ಮೇಲೆದ್ದು ಪಿತಾಮಹ ಮತ್ತು ಗುರುವನ್ನು ಅಭಿವಂದಿಸಿ ಭೀಷ್ಮ, ದ್ರೋಣ, ಕೃಪ, ದ್ರೌಣಿ, ದುರ್ಯೋಧನ ಮತ್ತು ವಿವಿಂಶತಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದನು:
“ಈ ಯಜ್ಞದಲ್ಲಿ ನೀವೆಲ್ಲರೂ ನನ್ನನ್ನು ಅನುಗ್ರಹಿಸಬೇಕು. ಇಲ್ಲಿರುವ ನನ್ನ ಈ ಧನ ನಿಮ್ಮದು ಮತ್ತು ಸ್ವಯಂ ನಾನು ನಿಮ್ಮವನು. ಯಾವುದೇ ನಿಯಂತ್ರಣಗಳಿಲ್ಲದೇ ಯಥೇಷ್ಟವಾಗಿ ನೀವು ಸಂತೋಷಹೊಂದಿರಿ.”
ಎಲ್ಲರಿಗೂ ಹೀಗೆ ಹೇಳಿದ ದೀಕ್ಷಿತ ಪಾಂಡವಾಗ್ರಜನು ಪ್ರತಿಯೊಬ್ಬರಿಗೂ ಅವರಿಗೆ ತಕ್ಕುದಾದ ಕಾರ್ಯಗಳನ್ನು ವಹಿಸಿಕೊಟ್ಟನು. ಭಕ್ಷ್ಯಭೋಜ್ಯಗಳ ಅಧಿಕಾರವನ್ನು ದುಃಶಾಸನನಿಗೆ ನೀಡಲಾಯಿತು. ಬ್ರಾಹ್ಮಣರನ್ನು ಬರಮಾಡಿಕೊಳ್ಳುವ ಕೆಲಸಕ್ಕೆ ಅಶ್ವತ್ಥಾಮನು ನಿಯುಕ್ತಗೊಂಡನು. ರಾಜರ ಆತಿಥ್ಯಕ್ಕೆ ಸಂಜಯನನ್ನು ನಿಯೋಜಿಸಿದನು. ಏನನ್ನು ಮಾಡಬೇಕು ಏನನ್ನು ಮಾಡಬಾರದು ಎನ್ನುವುದನ್ನು ತಿಳಿಸುವ ಕಾರ್ಯವನ್ನು ಮಹಾಮತಿ ಭೀಷ್ಮ-ದ್ರೋಣರಿಗೆ ನೀಡಲಾಯಿತು. ಹಿರಣ್ಯ, ಸುವರ್ಣ, ರತ್ನಗಳು, ದಕ್ಷಿಣೆ ಮತ್ತು ದಾನಗಳ ಮೇಲ್ವಿಚಾರಣೆಗೆಂದು ರಾಜನು ಕೃಪನನ್ನು ನಿಯೋಜಿಸಿದನು. ಹೀಗೆ ಇತರ ಪುರುಷವ್ಯಾಘ್ರರನ್ನೂ ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಿದನು. ಬಾಹ್ಲೀಕ, ಧೃತರಾಷ್ಟ್ರ, ಸೋಮದತ್ತ, ಜಯದ್ರಥರು ನಕುಲನ ಆತಿಥ್ಯದಿಂದ ಸ್ವಾಮಿಗಳಂತೆ ರಮಿಸಿದರು. ಸರ್ವಧರ್ಮವಿದು ಕ್ಷತ್ತ ವಿದುರನು ವ್ಯಯಕರನಾದನು ಮತ್ತು ದುರ್ಯೋಧನನು ಎಲ್ಲ ಕಾಣಿಕೆ-ಉಡುಗೊರೆಗಳನ್ನು ಸ್ವೀಕರಿಸಿದನು.
ಅಂತ್ಯದ ಉತ್ತಮ ಫಲವನ್ನು ಬಯಸಿ, ಧರ್ಮರಾಜ ಪಾಂಡವನನ್ನೂ ಅವನ ಸಭೆಯನ್ನೂ ನೋಡುವ ಉದ್ದೇಶದಿಂದ ಲೋಕದ ಸರ್ವರೂ ಬಂದು ಸೇರಿದರು. ಒಂದು ಸಾವಿರಕ್ಕಿಂತ ಕಡಿಮೆ ಬೆಲೆಯ ಉಡುಗೊರೆಯನ್ನು ಯಾರೂ ತರಲಿಲ್ಲ. ಅಲ್ಲಿ ಬಂದ ಬಹಳ ರತ್ನಗಳಿಂದ ಧರ್ಮರಾಜನ ಸಂಪತ್ತು ವೃದ್ಧಿಯಾಯಿತು. ನನ್ನ ರತ್ನದಾನದಿಂದ ಕೌರವ್ಯನು ಯಜ್ಞಮಾಡುವನು ಎಂಬ ಭರವಸೆಯನ್ನು ಹೊತ್ತು ಪರಸ್ಪರರಲ್ಲಿ ಸ್ಪರ್ಧೆಮಾಡುತ್ತಿರುವಂತೆ ರಾಜರು ಅವನಿಗೆ ಧನವನ್ನಿತ್ತರು. ಬಹಳ ಮಹಡಿ ಮತ್ತು ಗೋಪುರಗಳನ್ನು ಹೊಂದಿದ್ದ, ಸೇನೆಗಳ ಕಾವಲಿನಲಿದ್ದ, ಲೋಕದ ರಾಜರ ವಿಮಾನಗಳು ಮತ್ತು ಬ್ರಾಹ್ಮಣರ ವಸತಿ ಗೃಹಗಳು, ದಿವ್ಯವಿಮಾನಗಳಂತೆ ರಚಿಸಿದ್ದ ಬಣ್ಣ ಬಣ್ಣದ ರತ್ನಗಳಿದ ಸಿಂಗರಿಸಿದ, ಅಪರಿಮಿತ ಸಂಪತ್ತಿನ ವಸತಿ ಗೃಹಗಳು, ಸೇರಿದ್ದ ರಾಜರು ಅತಿ ಶ್ರೀ ಸಮೃದ್ಧಿಯಿಂದ ಮಹಾತ್ಮ ಕೌಂತೇಯನ ಸದಸ್ಸು ಸುಶೋಭಿಸಿತು. ಸಂಪತ್ತಿನಲ್ಲಿ ವರುಣದೇವನೊಂದಿಗೆ ಸ್ಪರ್ಧಿಸುತ್ತಿರುವನೋ ಎಂದಿದ್ದ ಯುಧಿಷ್ಠಿರನು ಆರು ಅಗ್ನಿಗಳಿಂದ ಉತ್ತಮ ದಕ್ಷಿಣೆಗಳನ್ನೊಡಗೂಡಿದ ಯಜ್ಞವನ್ನು ಕೈಗೊಂಡು ಸರ್ವಜನರ ಸರ್ವ ಕಾಮಗಳನ್ನೂ ಸಮೃದ್ಧವಾಗಿ ತೃಪ್ತಿಗೊಳಿಸಿದನು. ಬಹಳ ಆಹಾರ ಭಕ್ಷ್ಯಗಳಿಂದ ತೃಪ್ತಿಗೊಂಡ ಜನಸನ್ನಿಧಿಯಲ್ಲಿ ರತ್ನಗಳ ಉಡುಗೊರೆಗಳ್ನು ನೀಡುವ ಕಾರ್ಯಕ್ರಮವು ಕೂಡಿಬಂದಿತು. ಯಜ್ಞದಲ್ಲಿ ಮಂತ್ರಶಿಕ್ಷಾಸಮನ್ವಿತ ಈಡಾಜ್ಯಹೋಮ ಆಹುತಿಗಳಿಂದ ದೇವತೆಗಳೂ ಮಹರ್ಷಿಗಳು ತೃಪ್ತಿಹೊಂದಿದರು. ದೇವತೆಗಳಂತೆ ವಿಪ್ರರೂ ದಕ್ಷಿಣೆ, ಅನ್ನ ಮತ್ತು ಮಹಾಧನಗಳಿಂದ ತೃಪ್ತಿಹೊಂದಿದರು ಮತ್ತು ಆ ಯಜ್ಞದಿಂದ ಸರ್ವ ವರ್ಣದವರೂ ಮುದಿತರಾದರು.
ಶ್ರೀಕೃಷ್ಣನಿಗೆ ಪ್ರಥಮಾರ್ಘ್ಯ
ನಂತರ ಅಭಿಷೇಕದ ದಿನದಂದು ಬ್ರಾಹ್ಮಣ-ರಾಜರುಗಳು ಸೇರಿ ಮಹರ್ಷಿಗಳ ಸತ್ಕಾರ ಕಾರ್ಯಕ್ಕೆ ಒಳವೇದಿಯನ್ನು ಪ್ರವೇಶಿಸಿದರು. ನಾರದರೇ ಮೊದಲಾದ ಮಹಾತ್ಮರು ವೇದಿಕೆಯ ಹತ್ತಿರದಲ್ಲಿ, ರಾಜರ್ಷಿಗಳೊಡನೆ ಬ್ರಹ್ಮ ಭವನದಲ್ಲಿ ದೇವ ದೇವರ್ಷಿಗಳು ಹೇಗೆ ಒಟ್ಟಿಗೇ ಕುಳಿತಿರುತ್ತಾರೋ ಹಾಗೆ, ಕುಳಿತುಕೊಂಡರು. ಆ ಅಮಿತೌಜಸರು ಕರ್ಮಗಳನ್ನು ಒಂದೊಂದಾಗಿ ನೆರವೇರಿಸಿ ಮಧ್ಯದಲ್ಲಿ ಅವುಗಳ ಕುರಿತು ಚರ್ಚಿಸುತ್ತಿದ್ದರು.
“ಇದು ಸರಿ! ಇದು ಹೀಗಲ್ಲ! ಇದನ್ನು ಹೀಗೆಯೇ ಮಾಡಬೇಕು! ಬೇರೆ ಯಾವರೀತಿಯೂ ಸರಿಯಲ್ಲ!”
ಎಂದು ಗುಂಪಿನಲ್ಲಿ ಪರಸ್ಪರರೊಂದಿಗೆ ವಾದಮಾಡುತ್ತಿದ್ದರು. ಇದೇ ಶಾಸ್ತ್ರನಿಶ್ಚಿತವೆಂದು ಕೆಲವರು ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಮಾಡಿದರು. ಇನ್ನು ಕೆಲವರು ದೊಡ್ಡ ದೊಡ್ಡ ವಿಷಯಗಳನ್ನು ಚಿಕ್ಕ ವಿಷಯಗಳನ್ನಾಗಿ ಮಾಡಿದರು. ಕೆಲವು ಮೇಧಾವಿಗಳು ಇನ್ನೊಬ್ಬರ ನಿಶ್ವಯಗಳನ್ನು ಆಕಾಶದಲ್ಲಿ ಎಸೆದ ಮಾಂಸದ ತುಂಡನ್ನು ಗಿಡುಗವು ಹೇಗೋ ಹಾಗೆ ಚಿಂದಿಮಾಡಿದರು. ಇನ್ನು ಕೆಲವು ಸರ್ವ ವೇದವಿದರಲ್ಲಿ ಶ್ರೇಷ್ಠ ಮಹಾವ್ರತರು ಧರ್ಮಾರ್ಥಸಂಯುಕ್ತ ಕಥೆಗಳನ್ನು ಹೇಳಿ ಸಂತೋಷಪಟ್ಟರು. ವೇದಸಂಪನ್ನರಿಂದ, ದೇವ ದ್ವಿಜರಿಂದ, ಮಹರ್ಷಿಗಳಿಂದ ಕೂಡಿದ್ದ ಆ ವೇದಿಕೆಯು ನಕ್ಷತ್ರಗಳಿಂದ ಹೊಳೆಯುತ್ತಿರುವ ನಿರ್ಮಲ ಆಕಾಶದಂತೆ ಕಂಡುಬಂದಿತು. ಯುಧಿಷ್ಠಿರನ ಮನೆಯ ಒಳಗಿನ ಆ ವೇದಿಕೆಯ ಬಳಿ ಯಾವ ಶೂದ್ರನೂ ಅಥವಾ ಅವ್ರತನೂ ಇರಲಿಲ್ಲ.
ಯಜ್ಞವಿಧಿಯಿಂದ ಉಂಟಾದ ಧೀಮಂತ ಶ್ರೀಮಂತ ಧರ್ಮರಾಜನ ಸಂಪತ್ತನ್ನು ಕಂಡ ನಾರದನು ಸಂತೋಷಗೊಂಡನು. ಆಗ ಮುನಿ ನಾರದನು ಸರ್ವ ಕ್ಷತ್ರಿಯರ ಆ ಸಮಾಗಮವನ್ನು ನೋಡಿ ಹಿಂದೆ ಬ್ರಹ್ಮನ ಭವನದಲ್ಲಿ ಕಟ್ಟಲಾದ ಅಂಶಾವತರಣದ ಕಥೆಯನ್ನು ನೆನಪಿಸಿಕೊಂಡನು. ಇದು ದೇವತೆಗಳದ್ದೇ ಸಮಾಗಮವೆಂದು ತಿಳಿದ ನಾರದನು ಮನಸ್ಸಿನಲ್ಲಿಯೇ ಪುಂಡರೀಕಾಕ್ಷ ಹರಿಯನ್ನು ಸ್ಮರಿಸಿದನು:
““ಅನ್ಯೋನ್ಯರನ್ನು ಸಂಹರಿಸಿ ನೀವು ಪುನಃ ನಿಮ್ಮ ಲೋಕವನ್ನು ಸೇರುತ್ತೀರಿ”
ಎಂದು ಹಿಂದೆ ದೇವತೆಗಳಿಗೆ ಆಜ್ಞೆಯನ್ನಿತ್ತಿದ್ದ ದೇವಶತ್ರುಗಳ ಸಂಹಾರಕ, ಧೀಮಂತ, ಪರಪುರಂಜಯ ವಿಭು ನಾರಾಯಣನು ಆಜ್ಞೆಯನ್ನು ಪಾಲಿಸಲು ಸ್ವಯಂ ಸಾಕ್ಷಾತ್ ಕ್ಷತ್ರಿಯರಲ್ಲಿ ಹುಟ್ಟಿದ್ದಾನೆ! ಹೀಗೆ ದೇವತೆಗಳಿಗೆ ಆದೇಶವನ್ನಿತ್ತಿದ್ದ ಶಂಭು, ಭಗವನ್, ವಂಶೋದ್ಧಾರಕರಲ್ಲಿ ಶ್ರೇಷ್ಠ ಪ್ರಭು ನಾರಾಯಣನು ಅಂಧಕ ವೃಷ್ಣಿಗಳ ವಂಶದಲ್ಲಿ ಯದುಕುಲದಲ್ಲಿ ಜನ್ಮತಾಳಿ ಈಗ ನಕ್ಷತ್ರಗಳ ಮಧ್ಯದಲ್ಲಿರುವ ಚಂದ್ರನಂತೆ ಅತ್ಯಂತ ಶೋಭೆಯಿಂದ ವಿಜೃಂಭಿಸುತ್ತಿದ್ದಾನೆ! ಯಾರ ಬಾಹುಬಲವನ್ನು ಇಂದ್ರನೂ ಸೇರಿ ಸರ್ವ ಸುರರೂ ಪೂಜಿಸುತ್ತಾರೋ ಆ ಅರಿಮರ್ದನ ಹರಿಯು ಇಂದು ಸಂಪೂರ್ಣ ಮಾನವನಾಗಿದ್ದಾನೆ! ಅಹೋ! ಈ ಮಹದ್ಭೂತ, ಸ್ವಯಂಭುವು ಮಹತ್ತರವಾಗಿ ಬೆಳೆದಿರುವ ಈ ಕ್ಷತ್ರಿಯಕುಲವನ್ನು ಸ್ವಯಂ ತನ್ನೊಂದಿಗೆ ಕರೆದೊಯ್ಯುತ್ತಾನೆ!” ಎಂಬ ಯೋಚನೆಯನ್ನು ಯೋಚಿಸಿದ ಧರ್ಮವಿದ ನಾರದನು,
“ಇವನೇ ಯಜ್ಞಗಳಿಗೆಲ್ಲ ಒಡೆಯನಾದ ಹರಿ ನಾರಾಯಣ”
ಎಂದು ತಿಳಿದನು. ಧರ್ಮವಿದರಲ್ಲಿ ಶ್ರೇಷ್ಠ ಆ ಮಹಾಬುದ್ಧಿಯು ಧೀಮಂತ ಧರ್ಮರಾಜನಿಗೆ ಉಡುಗೊರೆಯ ರೂಪದಲ್ಲಿ ಆ ಮಹಾಧ್ವರದಲ್ಲಿ ಉಳಿದುಕೊಂಡನು.
ಆಗ ಭೀಷ್ಮನು ಧರ್ಮರಾಜ ಯುಧಿಷ್ಠಿರನು ಹೇಳಿದನು:
“ಭಾರತ! ಯಥಾರ್ಹವಾಗಿ ರಾಜರಿಗೆ ಉಡುಗೊರೆಗಳನ್ನಿತ್ತು ಗೌರವಿಸುವ ಕಾರ್ಯಕ್ರಮವು ನಡೆಯಲಿ. ಆಚಾರ್ಯ, ಋತ್ವಿಜ, ಸಂಬಂಧಿ, ಸ್ನಾತಕ, ಸ್ನೇಹಿತ, ಮತ್ತು ರಾಜ ಈ ಆರು ಮಂದಿಯು ಅತಿಥಿ ಗೌರವಕ್ಕೆ ಪಾತ್ರರು ಎಂದು ಹೇಳುತ್ತಾರೆ. ಒಂದು ವರ್ಷ ಪರ್ಯಂತ ಬಂದು ಉಳಿದುಕೊಂಡಿದ್ದವರೂ ಇದಕ್ಕೆ ಅರ್ಹರೆಂದು ಕೂಡ ಹೇಳುತ್ತಾರೆ. ಈ ರಾಜರು ಕೆಲವು ಸಮಯದ ಹಿಂದೆಯೇ ನಮ್ಮಲ್ಲಿಗೆ ಬಂದಿದ್ದಾರೆ. ಅವರಲ್ಲಿ ಪ್ರತಿಯೊಬ್ಬರಿಗೂ ಅತಿಥಿ ಉಡುಗೊರೆಗಳನ್ನು ಕೊಡುವ ಸಮಯವು ಬಂದಿದೆ. ಮೊಟ್ಟ ಮೊದಲು ಇವರಲ್ಲಿ ಯಾರು ವರಿಷ್ಟನೋ ಅವನಿಗೆ ಉಡುಗೊರೆಯನ್ನು ತರಿಸು.”
ಯುಧಿಷ್ಠಿರನು ಹೇಳಿದನು:
“ಪಿತಾಮಹ! ಯಾವ ಓರ್ವನಿಗೆ ಈ ಅರ್ಘ್ಯವನ್ನು ನೀಡಬೇಕೆಂದು ನಿನ್ನ ಅಭಿಪ್ರಾಯ? ಯಾವುದು ಯುಕ್ತವೆಂದು ನನಗೆ ಹೇಳು.”
ಆಗ ಭೀಷ್ಮ ಶಾಂತನವನು ಮನದಲ್ಲಿಯೇ ನಿಶ್ಚಯಿಸಿ,
“ಭಾರತ! ವಾರ್ಷ್ಣೇಯ ಕೃಷ್ಣನೇ ಈ ಗೌರವಕ್ಕೆ ಈ ಭುವಿಯಲ್ಲಿಯೇ ಅತ್ಯಂತ ಅರ್ಹನು ಎಂದು ನನ್ನ ಅನಿಸಿಕೆ. ಅವನೇ ಇಲ್ಲಿ ಸೇರಿರುವರಲ್ಲೆಲ್ಲಾ ತೇಜಸ್ಸು, ಬಲ, ಮತ್ತು ಪರಾಕ್ರಮಗಳಿಂದ ನಕ್ಷತ್ರಗಳಲ್ಲೆಲ್ಲಾ ಸೂರ್ಯನು ಹೇಗೋ ಹಾಗೆ ಪ್ರಜ್ವಲಿಸುತ್ತಿದ್ದಾನೆ. ಕತ್ತಲಲ್ಲಿ ಸೂರ್ಯನಿಂದ ಮತ್ತು ಗಾಳಿಯಿಲ್ಲದಿರುವಾಗ ಗಾಳಿಯಿಂದ ಹೇಗೆ ಸಂತೋಷವು ದೊರೆಯುತ್ತದೆಯೋ ಹಾಗೆ ಕೃಷ್ಣನಿಂದ ಈ ಸಭಾಸದರೆಲ್ಲರೂ ಕಾಂತಿಯುಕ್ತರಾಗಿದ್ದಾರೆ ಮತ್ತು ಮುದಿತರಾಗಿದ್ದಾರೆ.”
ಭೀಷ್ಮನ ಅನುಜ್ಞೆಯಂತೆ ಪ್ರತಾಪಿ ಸಹದೇವನು ವಿಧಿವತ್ತಾಗಿ ಆ ಉತ್ತಮ ಅರ್ಘ್ಯವನ್ನು ವಾರ್ಷ್ಣೇಯನಿಗೆ ಸಮರ್ಪಿಸಿದನು. ಕೃಷ್ಣನು ಅದನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಿದನು. ಆದರೆ ಶಿಶುಪಾಲನು ಮಾತ್ರ ವಾಸುದೇವನಿಗಿತ್ತ ಆ ಪೂಜೆಯನ್ನು ಸಹಿಸಲಿಲ್ಲ. ಮಹಾಬಲಿ ಚೇದಿರಾಜನು ಆ ಸಂಸದಿಯಲ್ಲಿ ಭೀಷ್ಮ, ಧರ್ಮರಾಜ ಮತ್ತು ವಾಸುದೇವನನ್ನು ಹೀಯಾಳಿಸಿದನು.
ಶ್ರೀಕೃಷ್ಣನಿಗೆ ಅರ್ಘ್ಯವನ್ನಿತ್ತುದ್ದಕ್ಕೆ ಶಿಶುಪಾಲನ ಆಕ್ಷೇಪ
ಶಿಶುಪಾಲನು ಹೇಳಿದನು:
“ಕೌರವ್ಯ! ಮಹಾತ್ಮ ಮಹೀಪತಿಗಳು ಇಲ್ಲಿರವಾಗ ಪಾರ್ಥಿವನಿಗೆ ಸಲ್ಲಬೇಕಾದ ರಾಜ ಗೌರವಕ್ಕೆ ರಾಜನಲ್ಲದ ವಾರ್ಷ್ಣೇಯನು ಅರ್ಹನಲ್ಲ. ನಿಮಗಿಷ್ಟ ಬಂದಹಾಗೆ ಈ ಪುಂಡರೀಕಾಕ್ಷನನ್ನು ಅರ್ಚಿಸುವುದು ಮಹಾತ್ಮ ಪಾಂಡವರಿಗೆ ತಕ್ಕುದಲ್ಲ! ಸೂಕ್ಷ್ಮವಾದ ಧರ್ಮವು ನಿಮ್ಮಂಥ ಬಾಲಕರಿಗೆ ಅರ್ಥವಾಗುವುದಿಲ್ಲ! ಆದರೆ ಈ ದೂರದೃಷ್ಟಿಯಿಲ್ಲದ ನದಿಯ ಪುತ್ರ ಭೀಷ್ಮನು ಧರ್ಮಯುಕ್ತನಾಗಿದ್ದರೂ ಧರ್ಮವನ್ನು ಉಲ್ಲಂಘಿಸಿ ತನಗಿಷ್ಟಬಂದಹಾಗೆ ಮಾಡುತ್ತಾನೆಂದಾದರೆ ಅವನೇ ಈ ಲೋಕದ ಸಂತರಿಂದ ಹೆಚ್ಚು ಹೀಳಾಯಿಸಿಕೊಳ್ಳುತ್ತಾನೆ. ರಾಜನಲ್ಲದ ದಾಶಾರ್ಹನು ಸರ್ವ ಮಹೀಕ್ಷಿತರ ಮಧ್ಯೆ ಹೇಗೆ ನೀವು ಅರ್ಚಿಸಿದಂತೆ ಅಗ್ರಪೂಜೆಗೆ ಅರ್ಹನಾಗುತ್ತಾನೆ? ಅಥವಾ ಕೃಷ್ಣನು ಹಿರಿಯವನೆಂದು ನೀವು ಪರಿಗಣಿಸಿದರೆ, ವಸುದೇವನೇ ಇಲ್ಲಿರುವಾಗ ಅವನ ಮಗನು ಹೇಗೆ ಹಿರಿಯವನಾಗುತ್ತಾನೆ? ಅಥವಾ ವಾಸುದೇವನು ನಿಮ್ಮ ಪ್ರಿಯಕರ, ಬೇಕಾದುದನ್ನು ಮಾಡಿಕೊಡುತ್ತಾನೆ ಎಂದಿದ್ದರೆ ದ್ರುಪದನೇ ಇಲ್ಲಿ ಇರುವಾಗ ಮಾಧವನು ಈ ಪೂಜೆಗೆ ಅರ್ಹನಾಗುತ್ತಾನೆ? ಅಥವಾ ಕೃಷ್ಣನನ್ನು ಆಚಾರ್ಯನೆಂದು ಮನ್ನಿಸಿದೆಯಾದರೆ, ದ್ರೋಣನೇ ಇಲ್ಲಿರುವಾಗ ವಾರ್ಷ್ಣೇಯನು ಹೇಗೆ ಪೂಜೆಗೆ ಅರ್ಹನಾಗುತ್ತಾನೆ? ಅಥವಾ ಕೃಷ್ಣನನ್ನು ಋತ್ವಿಜನೆಂದು ಮನ್ನಿಸಿದೆಯಾದರೆ ವಿಪ್ರ ದ್ವೈಪಾಯನನೇ ಇಲ್ಲಿರುವಾಗ ಕೃಷ್ಣನು ಹೇಗೆ ಪೂಜೆಗೆ ಅರ್ಹನಾಗುತ್ತಾನೆ? ಈ ಮಧುಸೂದನನು ಋತ್ವಿಜನೂ ಅಲ್ಲ, ಆಚಾರ್ಯನೂ ಅಲ್ಲ, ರಾಜನೂ ಅಲ್ಲ. ಅಂಥವನನ್ನು ನೀನು ಪೂಜೆಸಿದ್ದೀಯೆಂದರೆ ಇದು ಕೇವಲ ನಿನಗಿಷ್ಟಬಂದಹಾಗೆ ಮಾಡಿದಹಾಗಾಗಲಿಲ್ಲವೇ? ನಿನಗೆ ಮಧುಸೂದನನನ್ನೇ ಪೂಜಿಸಬೇಕೆಂದಿದ್ದಿದ್ದರೆ ಈ ರಾಜರನ್ನೆಲ್ಲಾ ಇಲ್ಲಿಗೆ ಕರೆದಿದ್ದೇಕೆ? ಅವಮಾನ ಮಾಡಲಿಕ್ಕೆಂದೇ? ನಾವೆಲ್ಲ ಮಹಾತ್ಮ ಕೌಂತೇಯನಿಗೆ ಕರವನ್ನು ಕೊಟ್ಟಿದ್ದುದು ಭಯದಿಂದಲ್ಲ, ಲೋಭದಿಂದಲೂ ಅಲ್ಲ ಅಥವಾ ನಿನ್ನನ್ನು ಮೆಚ್ಚಿಸಬೇಕೆಂದೂ ಅಲ್ಲ. ಈ ಧರ್ಮಪ್ರವೃತ್ತನು ಪಾರ್ಥಿವತ್ವವನ್ನು ಬಯಸಿದನು. ಆದುದರಿಂದ ಅವನಿಗೆ ಕರವನಿತ್ತೆವು. ಆದರೆ ಈಗ ಅವನು ನಮ್ಮನ್ನು ಪರಿಗಣಿಸುವುದೇ ಇಲ್ಲ! ಈ ರಾಜ ಸಂಸದಿಯಲ್ಲಿ ಅದರ ಚಿಹ್ನೆಯೇ ಇಲ್ಲದ ಕೃಷ್ಣನಿಗೆ ಅರ್ಘ್ಯವನ್ನಿತ್ತು ಪೂಜಿಸಿದ್ದೀಯೆಂದರೆ ಇದು ನಮ್ಮನ್ನು ಅವಮಾನಿಸುವ ಬುದ್ಧಿಯಿಂದಲ್ಲದೇ ಮತ್ತ್ಯಾವ ಕಾರಣದಿಂದ? ಅಕಸ್ಮಾತ್ ಧರ್ಮಪುತ್ರನ ಧರ್ಮಾತ್ಮನೆನ್ನುವ ಯಶಸ್ಸು ಹೊರಟುಹೋಯಿತು! ವೃಷ್ಣಿಕುಲದಲ್ಲಿ ಹುಟ್ಟಿ ಹಿಂದೆ ರಾಜನನ್ನು ಕೊಂದ ಧರ್ಮಚ್ಯುತನಿಗೆ ಯಾರುತಾನೇ ಈ ರೀತಿಯ ಗೌರವವನ್ನಿತ್ತು ಪೂಜಿಸುತ್ತಾರೆ? ಕೃಷ್ಣನಿಗೆ ಅರ್ಘ್ಯವನ್ನು ನೀಡುವುದರಿಂದ ಇಂದು ಯುಧಿಷ್ಠಿರನ ಧರ್ಮಾತ್ಮತೆಯು ಹರಿದು ಚಿಂದಿಯಾಗಿ ಹೋಗಿ ಅವನ ಕೃಪಣತ್ವವು ತೋರಿಸಿಕೊಂಡಿತು!
ಒಂದು ವೇಳೆ ಕೌಂತೇಯರು ಭೀತರೂ, ಕೃಪಣರೂ, ಬೆಂದವರೂ ಆಗಿದ್ದಾರೆಂದರೆ ಮಾಧವ! ಅವರಿಗೆ ನೀನಾದರೂ ಎಂಥಹ ಪೂಜೆಗೆ ಅರ್ಹ ಎಂದು ತಿಳಿಸಿಕೊಡಬಹುದಿದ್ದಲ್ಲವೇ? ಅಥವಾ ತಮ್ಮ ಸಣ್ಣಬುದ್ಧಿಯಿಂದ ಅನರ್ಹನಾದ ನಿನಗೆ ಪೂಜೆಯನ್ನಿತ್ತರೂ ಜನಾರ್ದನ! ನೀನು ಹೇಗೆ ಅದನ್ನು ಒಪ್ಪಿಕೊಂಡು ಸ್ವೀಕರಿಸಿದೆ? ಇಲ್ಲ! ಚೆಲ್ಲಿದ ಹವಿಸ್ಸನ್ನು ಎತ್ತಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ತಿಂದು ಸಂತೋಷಪಡುವ ನಾಯಿಯ ಹಾಗೆ ನೀನು ನಿನಗರ್ಹವಾಗಿರದ ಪೂಜೆಯನ್ನು ಉತ್ತಮ ಉಡುಗೊರೆಯೆಂದು ಸಂತೋಷಪಡುತ್ತಿದ್ದೀಯೆ! ಕೌರವರು ಈ ಪಾರ್ಥಿವೇಂದ್ರರಿಗೆ ಅಪಮಾನ ಮಾಡಿದ್ದುದಲ್ಲದೇ ನಿನ್ನನ್ನು ಪೂಜಿಸಿ ನೀನೂ ಕೂಡ ಎಂಥವನೆಂದು ಪ್ರದರ್ಶಿಸಿದ್ದಾರೆ! ಶಿಖಂಡಿಗೆ ಮದುವೆಯು ಹೇಗೋ ಹಾಗೆ, ಅಂಧನಿಗೆ ರೂಪದರ್ಶನವು ಹೇಗೋ ಹಾಗೆ, ರಾಜನಲ್ಲದ ನಿನಗೆ ಸಲ್ಲಿಸಿದ ರಾಜಪೂಜೆ! ರಾಜ ಯುದ್ಠಿಷ್ಠಿರನು ಎಂಥವನು ಎಂದು ನೋಡಿದೆವು, ಭೀಷ್ಮನೂ ಎಂಥವನೆಂದು ನೋಡಿದೆವು, ಮತ್ತು ವಾಸುದೇವನನ್ನೂ ಇಂದು ನಾವೆಲ್ಲರೂ ನೋಡಿಯಾಯಿತು.”
ಹೀಗೆ ಹೇಳಿ ಶಿಶುಪಾಲನು ಉನ್ನತ ಆಸನದಿಂದ ಮೇಲೆದ್ದು ಕೆಲವು ರಾಜರೊಂದಿಗೆ ಸಭೆಯನ್ನು ಬಿಟ್ಟು ಹೊರಟನು.
ಭೀಷ್ಮನಿಂದ ಶ್ರೀಕೃಷ್ಣನ ಅರ್ಹತೆಯ ಪ್ರತಿಪಾದನೆ
ಆಗ ರಾಜಾ ಯುಧಿಷ್ಠಿರನು ಶಿಶುಪಾಲನಲ್ಲಿಗೆ ಧಾವಿಸಿ ಈ ಮಧುರ ಸಾಂತ್ವನ ಪೂರ್ವಕ ಮಾತುಗಳನ್ನು ಹೇಳಿದನು:
“ಮಹೀಪಾಲ! ನೀನು ಹೀಗೆ ಮಾತನಾಡುವುದು ಸರಿಯಲ್ಲ. ಹೀಗೆ ಮಾತನಾಡುವುದು ಅತಿ ದೊಡ್ಡ ಅಧರ್ಮ, ನಿರರ್ಥಕ ಕೊಚ್ಚಿಕೊಳ್ಳುವ ಮಾತುಗಳು. ಭೀಷ್ಮ ಶಾಂತನವನು ಎಂದೂ ಪರಮ ಧರ್ಮವನ್ನು ತಪ್ಪು ತಿಳಿಯಲಾರ. ಆದುದರಿಂದ ಸುಮ್ಮನೇ ಅವನನ್ನು ತೆಗಳಬೇಡ. ನಿನಗಿಂತಲೂ ಹಿರಿಯರಾದ ಬಹಳಷ್ಟು ಮಹೀಪಾಲರಿದ್ದಾರೆ ನೋಡು. ಅವರೆಲ್ಲರೂ ಕೃಷ್ಣನ ಪೂಜೆಗೆ ಅನುಮತಿಯನ್ನಿತ್ತಿದ್ದಾರೆ. ನೀನೂ ಕೂಡ ಅವರಂತೆ ಇದನ್ನು ಸಹಿಸಬೇಕು. ಭೀಷ್ಮನು ನಿಜವಾಗಿಯೂ ಮತ್ತು ಸಂಪೂರ್ಣವಾಗಿ ಕೃಷ್ಣನನ್ನು ತಿಳಿದಿದ್ದಾನೆ. ಅವನ ಕುರಿತು ಈ ಕೌರವನಿಗೆ ತಿಳಿದಷ್ಟು ನಿನಗೆ ತಿಳಿದಿಲ್ಲ.”
ಭೀಷ್ಮನು ಹೇಳಿದನು:
“ಲೋಕದಲ್ಲಿ ಎಲ್ಲರಿಗಿಂಥಲೂ ಹಿರಿಯನಾದ ಕೃಷ್ಣನಿಗೆ ಗೌರವಿಸುವುದನ್ನು ತಿರಸ್ಕರಿಸುವನಿಗೆ ಯಾವುದೇ ರೀತಿಯ ಸಭ್ಯತೆಯನ್ನು ತೋರಿಸಬಾರದು ಮತ್ತು ಅಂಥವನು ಸಾಂತ್ವನಕ್ಕೆ ಅರ್ಹನಲ್ಲ. ಕ್ಷತ್ರಿಯನನ್ನು ಗೆದ್ದು ಅವನನ್ನು ಸೆರೆಹಿಡಿದು ನಂತರ ಬಿಡುಗಡೆ ಮಾಡುವ ರಣಶ್ರೇಷ್ಠ ಕ್ಷತ್ರಿಯನು ಅವನಿಗೆ ಗುರುವೆನಿಸಿಕೊಳ್ಳುತ್ತಾನೆ. ಈ ಸಾತ್ವತೀ ಪುತ್ರನ ತೇಜಸ್ಸಿನಿಂದ ಯುದ್ಧದಲ್ಲಿ ಸೋಲದೇ ಇದ್ದ ಯಾವ ಮಹೀಪಾಲನನ್ನೂ ನಾನು ಇಲ್ಲಿ ನೆರೆದಿರುವ ರಾಜರಲ್ಲಿ ನೋಡಿಲ್ಲ. ಅಚ್ಯುತನು ಕೇವಲ ನಮ್ಮಿಂದ ಮಾತ್ರ ಪೂಜಾರ್ಹನಲ್ಲ. ಜನಾರ್ದನನು ಮೂರು ಲೋಕಗಳಿಂದಲೂ ಅರ್ಚನೀಯ. ಬಹಳಷ್ಟು ಕ್ಷತ್ರಿಯರ್ಷಭರು ಯುದ್ಧದಲ್ಲಿ ಕೃಷ್ಣನಿಂದ ಪರಾಜಯಗೊಂಡಿದ್ದಾರೆ. ಸರ್ವ ಜಗತ್ತೂ ಒಂದಾಗಿ ವಾರ್ಷ್ಣೇಯನನ್ನೇ ಆಧರಿಸಿದೆ. ಆದುದರಿಂದ ವೃದ್ಧರ ಸಮಕ್ಷಮದಲ್ಲಿಯೂ ಕೃಷ್ಣನನ್ನೇ ಅರ್ಚಿಸುತ್ತೇವೆ. ಬೇರೆ ಯಾರನ್ನೂ ಅಲ್ಲ. ಈ ರೀತಿ ಮಾತನಾಡಲು ನೀನು ಅರ್ಹನಲ್ಲ. ಈ ರೀತಿಯ ಯೋಚನೆಯನ್ನು ತೆಗೆದುಹಾಕು! ನಾನು ಬಹಳಷ್ಟು ಜ್ಞಾನ ವೃದ್ಧರ ಸೇವೆ ಮಾಡಿದ್ದೇನೆ. ಅವರೇ ಹೇಳಿದಂತೆ ಈ ಶೌರಿಯು ಸಂತರ ಬಹುಮತದಲ್ಲಿ ಯಾವು ಗುಣಗಳು ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತವೆಯೋ ಆ ಎಲ್ಲ ಗುಣಗಳು ಸಮಾಗತವಾಗಿರುವ ಗುಣವಂತನು. ಎಷ್ಟೋ ಬಾರಿ ಮತ್ತು ಬಹಳಷ್ಟು ರೀತಿಗಳಲ್ಲಿ ಜನರು ಈ ಧೀಮಂತನು ಜನ್ಮಪ್ರಭೃತಿ ಮಾಡಿದ ಕಾರ್ಯಗಳ ಬಗ್ಗೆ ಹೇಳಿದ್ದುದನ್ನು ಕೇಳಿದ್ದೇನೆ. ಚೇದಿರಾಜ! ಕೇವಲ ಅವನಿಗಿಷ್ಟವಾದುದನ್ನು ಮಾಡಲೆಂದಾಗಲೀ ಅಥವಾ ಅವನೊಡನೆ ನಮಗಿರುವ ಸಂಬಂಧದಿಂದಾಗಲೀ, ಅಥವಾ ಅವನಿಂದ ನಮಗೆ ಏನೋ ಲಾಭ ದೊರೆಯಬೇಕೆಂದಾಗಲೀ ನಾವು ಜನಾರ್ದನನನ್ನು ಪುರಸ್ಕರಿಸಲಿಲ್ಲ. ಭೂಮಿಯ ಸದ್ಭಾವರಿಂದ ಪೂಜಿತನಾದ ಭೂಮಿಯ ಸುಖವೆಲ್ಲವನ್ನೂ ನೀಡಬಲ್ಲ ಇವನನ್ನು ನಾವು ಅವನ ಯಶಸ್ಸು, ಶೌರ್ಯ, ಮತ್ತು ವಿಜಯಗಳನ್ನು ತಿಳಿದೇ ಪೂಜಿಸಿದ್ದೇವೆ. ಎಷ್ಟೇ ಸಣ್ಣವರಿರಲಿ ಯಾರನ್ನೂ ಬಿಡದೇ ಎಲ್ಲರನ್ನೂ ಪರಿಶೀಲಿಸಿದ್ದೇವೆ ಮತ್ತು ಗುಣಗಳಲ್ಲಿ ವೃದ್ಧರಾದವರಲ್ಲಿ ಹರಿಯೇ ಅರ್ಚನೆಗೆ ಅರ್ಹನೆಂದು ನಮ್ಮ ಮತ. ದ್ವಿಜರಲ್ಲಿ ಇವನೇ ಜ್ಞಾನವೃದ್ಧ, ಕ್ಷತ್ರಿಯರಲ್ಲಿ ಅಧಿಕ ಬಲವುಳ್ಳವನು ಇವನು. ಇವೆರಡೂ ಪೂಜಾರ್ಹ ಗುಣಗಳು ಗೋವಿಂದನಲ್ಲಿವೆ. ವೇದವೇದಾಂಗ ವಿಜ್ಞಾನವನ್ನೂ ಮತ್ತು ಅಪ್ಯಮಿತ ಬಲವನ್ನು ಈ ಲೋಕದ ಯಾವ ಮನುಷ್ಯನು ತಾನೇ ಕೇಶವನಷ್ಟು ವಿಶಿಷ್ಟವಾಗಿ ಹೊಂದಿದ್ದಾನೆ? ದಾನ, ದಾಕ್ಷ್ಯ, ಶಿಕ್ಷಣ, ಶೌರ್ಯ, ವಿನಯತೆ, ಕೀರ್ತಿ, ಉತ್ತಮ ಬುದ್ಧಿ, ಸನ್ನತಿ, ಶ್ರೀ, ಧೃತಿ, ತುಷ್ಟಿ, ಮತ್ತು ಪುಷ್ಟಿಗಳು ನಿರಂತರವಾಗಿ ಅಚ್ಯುತನಲ್ಲಿವೆ. ಆದುದರಿಂದ ಈ ಸರ್ವಸಂಪನ್ನ, ಆಚಾರ್ಯ, ತಂದೆ, ಗುರು, ಅರ್ಚನಾರ್ಹ ಮತ್ತು ಅರ್ಚಿತನನ್ನು ಅರ್ಚಿಸಬೇಕು ಎನ್ನುವುದಕ್ಕೆ ನೀವೆಲ್ಲರೂ ಸಮ್ಮತಿಯನ್ನು ನೀಡಬೇಕು. ಋತ್ವಿಗ, ಗುರು, ವಿವಾಹಕ್ಕೆ ಯೋಗ್ಯ, ಸ್ನಾತಕ, ನೃಪತಿ, ಪ್ರಿಯಕರ ಇವರೆಲ್ಲರೂ ಹೃಷೀಕೇಶನಲ್ಲಿಯೇ ಇವೆ. ಆದುದರಿಂದ ಅಚ್ಯುತನನ್ನು ಅರ್ಚಿಸಬೇಕು. ಲೋಕಗಳ ಉತ್ಪತ್ತಿ ಮತ್ತು ಲಯಗಳಿಗೆ ಕೃಷ್ಣನೇ ಕಾರಣ. ಈ ವಿಶ್ವ ಮತ್ತು ಅದರಲ್ಲಿರುವವು ಕೃಷ್ಣನಿಗೆ ಸಮರ್ಪಿತವೆಂದೇ ಸೃಷ್ಟಿಸಲ್ಪಟ್ಟಿವೆ. ಇವನೇ ಈ ಪ್ರಕೃತಿಯ ಅವ್ಯಕ್ತ ಮತ್ತು ಸನಾತನ ಕರ್ತ, ಆದುದರಿಂದ ಅಚ್ಯುತನು ಸರ್ವ ಭೂತಗಳಿಗೂ ಹಿರಿಯವನು ಮತ್ತು ವೃದ್ಧನು. ಬುದ್ಧಿ, ಮನಸ್ಸು, ಮಹಾನ್ ವಾಯು, ತೇಜಸ್ಸು, ನೀರು, ಆಕಾಶ, ಮಹಿ ಮತ್ತು ಚತುರ್ವಿಧ ಭೂತಗಳೆಲ್ಲವೂ ಕೃಷ್ಣನಲ್ಲಿಯೇ ಇವೆ. ಆದಿತ್ಯ, ಚಂದ್ರಮ, ನಕ್ಷತ್ರಗಳು, ಗ್ರಹಗಳು, ದಿಕ್ಕುಗಳು, ಉಪದಿಕ್ಕುಗಳು ಎಲ್ಲವೂ ಕೃಷ್ಣನಲ್ಲಿಯೇ ಇವೆ.
ಈ ಶಿಶುಪಾಲನು ಕೃಷ್ಣನು ಎಲ್ಲೆಲ್ಲಿಯೂ ಎಲ್ಲ ಕಾಲದಲ್ಲಿಯು ಇರುವವನೆಂದು ತಿಳಿಯದ ದಡ್ಡ ಪುರುಷ. ಆದುದರಿಂದಲೇ ಅವನು ಹೀಗೆ ಮಾತನಾಡುತ್ತಿದ್ದಾನೆ. ಯಾಕೆಂದರೆ ಧರ್ಮನಿಷ್ಠ ಮತಿವಂತ ಮನುಷ್ಯರು ಮಾತ್ರ ಧರ್ಮವೇನೆಂದು ತಿಳಿಯಬಲ್ಲರು. ಈ ಚೇದಿರಾಜನು ಅಂಥವನಲ್ಲ. ಇಲ್ಲಿರುವ ಯಾವ ಮಹಾತ್ಮ ವೃದ್ಧ ಅಥವಾ ಬಾಲಕ ಪಾರ್ಥಿವನು ಕೃಷ್ಣನು ಪೂಜೆಗರ್ಹನೆಂದು ಒಪ್ಪಿಕೊಳ್ಳುವುದಿಲ್ಲ? ಅಥವಾ ಯಾರು ತಾನೆ ಅವನನ್ನು ಪೂಜಿಸುವುದಿಲ್ಲ? ಈ ಪೂಜೆಯು ದುಷ್ಕೃತವೆಂದು ಶಿಶುಪಾಲನು ತಿಳಿದರೆ, ದುಷ್ಕೃತಗಳಿಗೆ ಹೇಗೆ ಪ್ರತಿಕ್ರಯಿಸಬೇಕೋ ಹಾಗೆಯೇ ಮಾಡಲಿ!”
ಸಹದೇವನು ಅಗ್ರಪೂಜೆಯನ್ನು ಪೂರೈಸಿದುದು
ಹೀಗೆ ಹೇಳಿದ ಮಹಾಯಶಸ್ವಿ ಭೀಷ್ಮನು ಸುಮ್ಮನಾದನು. ಅದಕ್ಕೆ ಉತ್ತರವಾಗಿ ಸಹದೇವನು ಅರ್ಥವತ್ತಾದ ಮಾತುಗಳನ್ನಾಡಿದನು:
“ಅಪ್ರಮೇಯ ಪರಾಕ್ರಮಿ ಕೇಶಿಹಂತಾರ ಕೇಶವ ಕೃಷ್ಣನನ್ನು ನಾನು ಪೂಜಿಸಿದ್ದುದನ್ನು ಯಾರಿಗೆ ಸಹಿಸಲಿಕ್ಕಾಗಲಿಲ್ಲವೋ ಅವರೆಲ್ಲ ಬಲಿಗಳ ಶಿರಗಳನ್ನು ನನ್ನ ಈ ಪಾದದಿಂದ ತುಳಿಯುತ್ತೇನೆ. ನನ್ನ ಈ ಮಾತಿಗೆ ಅವನು ಸರಿಯಾದ ಉತ್ತರವನ್ನು ನೀಡಲಿ! ಆದರೆ ಮತಿವಂತ ನೃಪರು ಅವನು ಆಚಾರ್ಯ, ಪಿತ, ಗುರು, ಅರ್ಚಿತನು, ಅರ್ಚನೆಗರ್ಹ, ಮತ್ತು ಅರ್ಚಿಸಬೇಕಾದವನು ಎಂದು ತಿಳಿದಿದ್ದಾರೆ.”
ಹೀಗೆ ಅವನು ತನ್ನ ಪಾದವನ್ನು ತೋರಿಸಿದಾಗ ಅಲ್ಲಿದ್ದ ಬುದ್ಧಿವಂತ, ಸಂತ, ಗೌರವಾನ್ವಿತ, ಬಲಶಾಲಿ ರಾಜರು ಯಾರೂ ಮಾತನಾಡಲಿಲ್ಲ. ಆಗ ಸಹದೇವನ ತಲೆಯಮೇಲೆ ಪುಷ್ಪವೃಷ್ಠಿಯು ಬಿದ್ದಿತು ಮತ್ತು “ಸಾಧು! ಸಾಧು!” ಎಂಬ ಅದೃಶ್ಯ ರೂಪೀ ಮಾತುಗಳು ಕೇಳಿಬಂದವು. ಆಗ ಭೂತಭವಿಷ್ಯಗಳನ್ನು ತಿಳಿದಿರುವ, ಸರ್ವಸಂಶಯ ನಿರ್ಮೋಕ್ತ, ಸರ್ವಲೋಕವಿದು ನಾರದನು ತನ್ನ ಕೃಷ್ಣಾಜಿನವನ್ನು ಮುಟ್ಟಿದನು. ಸುನೀಥನ ನಾಯಕತ್ವದಲ್ಲಿ ಆಗಮಿಸಿದ್ದ ಅತಿಥಿ ಗಣಗಳಲ್ಲಿದ್ದ ಎಲ್ಲರೂ ಸಂಕೃದ್ಧರಾಗಿ ವಿವರ್ಣವದನರಾಗಿ ಕಂಡು ಬಂದರು. ಯುಧಿಷ್ಠಿರನ ಅಭಿಷೇಕ ಮತ್ತು ವಾಸುದೇವನಿಗಿತ್ತ ಪೂಜೆಯ ಕುರಿತು ಇವಕ್ಕೆಲ್ಲ ತಾವೇ ಅರ್ಹರಾಗಿದ್ದರೆಂದು ತಿಳಿದ ರಾಜರು ಮಾತನಾಡಿಕೊಂಡರು. ಮಿತ್ರರು ಅವರನ್ನು ತಡೆಯಲು ಹಸಿಮಾಂಸದ ತುಂಡಿನಿಂದ ದೂರಕ್ಕೆ ಎಳೆಯಲ್ಪಡುತ್ತಿರುವ ಸಿಂಹಗಳು ಗರ್ಜಿಸುವಂತೆ ಕಂಡುಬರುತ್ತಿದ್ದರು. ಆಗ ಆ ಅಕ್ಷಯ ರಾಜಸಾಗರವು ತಮ್ಮ ಸೇನೆಗಳನ್ನು ಒಟ್ಟುಮಾಡಿಕೊಂಡು ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎನ್ನುವುದನ್ನು ಕೃಷ್ಣನು ಅರ್ಥಮಾಡಿಕೊಂಡನು. ಮನುಷ್ಯರಲ್ಲಿ ದೇವನಂತಿದ್ದ ಸಹದೇವನು ಪೂಜಾರ್ಹ ಬ್ರಾಹ್ಮಣ-ಕ್ಷತ್ರಿಯರನ್ನು ವಿಶೇಷವಾಗಿ ಪೂಜಿಸಿ ಆ ಕರ್ಮವನ್ನು ಪೂರೈಸಿದನು.
ಯುಧಿಷ್ಠಿರನ ಆಶ್ವಾಸನೆ
ಕೃಷ್ಣನನ್ನು ಅರ್ಚಿಸಿದ ನಂತರ ಶತ್ರುಕರ್ಷಣ ಸುನೀಥನು ಕೋಪದಿಂದ ತನ್ನ ಕಣ್ಣುಗಳನ್ನು ಅತೀವ ಕೆಂಪಾಗಿಸಿಕೊಂಡು ಮನುಜಾಧಿಪರನ್ನುದ್ದೇಶಿಸಿ ಹೇಳಿದನು:
“ನಾನು ನಿಮ್ಮ ಸೇನಾಪತಿಯಾಗಿ ನಿಂತಿದ್ದೇನೆ. ನಿಮಗೆಲ್ಲರಿಗೂ ಸ್ವೀಕಾರವಿದೆ ತಾನೆ? ಇಲ್ಲಿ ಒಂದಾಗಿರುವ ವೃಷ್ಣಿ-ಪಾಂಡವರೊಂದಿಗೆ ಯುದ್ಧಕ್ಕೆ ಸನ್ನದ್ಧನಾಗಿ ನಿಂತಿದ್ದೇನೆ.”
ಹೀಗೆ ರಾಜರೆಲ್ಲರೂ ಉತ್ಸಾಹದಿಂದ ಮೇಲೇಳಲು, ಚೇದಿಪುಂಗವನು ರಾಜರೊಂದಿಗೆ ಈ ಯಜ್ಞವನ್ನು ಭಂಗಪಡಿಸುವ ಕುರಿತು ಯೋಚಿಸಿದನು.
ಈ ರೀತಿ ಸಾಗರಸಂಕಾಶ ಸರ್ವ ನೃಪತಿಸಾಗರವು ರೋಷದಿಂದ ಪ್ರಚಲಿತವಾದುದನ್ನು ಕಂಡ ಯುಧಿಷ್ಠಿರನು ಮತಿಮತರಲ್ಲಿ ಶ್ರೇಷ್ಠ ವೃದ್ಧ ಕುರುಪಿತಾಮಹ ಬೃಹಸ್ಪತಿಯಂತೆ ಬೃಹತ್ತೇಜಸ್ವಿ ಪುರುಹೂತ ಭೀಷ್ಮನಲ್ಲಿ ಈ ರೀತಿ ಕೇಳಿಕೊಂಡನು:
“ಈ ಮಹಾನೃಪತಿಸಾಗರವು ರೋಷದಿಂದ ಪ್ರಚಲಿತವಾಗುತ್ತಿದೆ. ಪಿತಾಮಹ! ಹೀಗಿರುವಾಗ ನಾನು ಏನನ್ನು ಮಾಡಬೇಕೆಂದು ಹೇಳು. ಈ ಯಜ್ಞವು ವಿಘ್ನವಾಗದಂತೆ ಮತ್ತು ಪ್ರಜೆಗಳಿಗೆ ಶುಭವಾಗುವಂಥೆ ನಾನು ಏನು ಮಾಡಬಹುದೆಂದು ಸರ್ವವನ್ನೂ ಇಂದು ನನಗೆ ಹೇಳು.”
ಧರ್ಮಜ್ಞ ಧರ್ಮರಾಜ ಯುಧಿಷ್ಠಿರನು ಈ ರೀತಿ ಹೇಳಲು ಕುರುಪಿತಾಮಹ ಭೀಷ್ಮನು ಈ ಮಾತುಗಳನ್ನಾಡಿದನು.
“ಕುರುಶಾರ್ದೂಲ! ಭಯಪಡದಿರು! ನಾಯಿಯು ಸಿಂಹವನ್ನು ಕೊಲ್ಲಬಲ್ಲದೇ? ಇದರ ಹಿಂದೆಯೇ ನಾನು ಒಂದು ಮಂಗಳಕರ ಸುನೀತಿಯುಕ್ತ ದಾರಿಯನ್ನು ಆರಿಸಿಕೊಂಡಿದ್ದೇನೆ. ಈ ಎಲ್ಲ ವಸುಧಾಧಿಪರೂ ಸಿಂಹವು ಮಲಗಿರುವ ಸಮಯದಲ್ಲಿ ಬೊಗಳುವ ನಾಯಿಗಳ ಪಡೆಯಂತೆ ಸೇರಿಕೊಂಡಿದ್ದಾರೆ. ಇವರೆಲ್ಲರೂ ಮಲಗಿರುವ ವೃಷ್ಣಿಸಿಂಹನ ಎದುರು ನಿಂತು ಸಿಂಹನ ಸನ್ನಿಧಿಯಲ್ಲಿ ಬೊಗಳುವ ನಾಯಿಗಳಂತೆ ಬೊಗಳುತ್ತಿದ್ದಾರೆ. ಎಲ್ಲಿಯವರೆಗೆ ಮಲಗಿರುವ ಸಿಂಹದಂತಿರುವ ಅಚ್ಯುತನು ಏಳುವುದಿಲ್ಲವೋ ಅಲ್ಲಿಯವರೆಗೆ ಅವರೆಲ್ಲರೂ ಆ ನರಸಿಂಹ ಚೇದಿಪುಂಗವನನ್ನು ಸಿಂಹನನ್ನಾಗಿ ಮಾಡುತ್ತಿದ್ದಾರೆ. ಮಗೂ! ಅಲ್ಪಚೇತನ ಶಿಶುಪಾಲನು ಪಾರ್ಥಿವ ಸರ್ವರನ್ನೂ, ಯಾರನ್ನೂ ಬಿಡದೇ, ತನ್ನೊಂದಿಗೆ ಯಮಲೋಕಕ್ಕೆ ಕರೆದೊಯ್ಯಲು ಬಯಸುತ್ತಿದ್ದಾನೆ. ಅಧೋಕ್ಷಜನು ಶಿಶುಪಾಲನಲ್ಲಿರುವ ತೇಜಸ್ಸನ್ನು ಹಿಂದೆ ತೆಗೆದುಕೊಳ್ಳಲು ಬಯಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ನಿನಗೆ ಮಂಗಳವಾಗಲಿ. ಚೇದಿರಾಜನ ಮತ್ತು ಸರ್ವ ಮಹೀಕ್ಷಿತರ ಬುದ್ಧಿಯು ಕೆಟ್ಟುಹೋಗಿದೆ. ಯಾಕೆಂದರೆ ಈ ನರವ್ಯಾಘ್ರನು ಯಾರನ್ನು ತೆಗೆದುಕೊಳ್ಳಲು ಇಚ್ಛಿಸುತ್ತಾನೋ ಅವರ ಬುದ್ಧಿಯು ಚೇದಿಪತಿಯ ಬುದ್ಧಿಯು ಹೇಗೆ ಕೆಟ್ಟುಹೋಗಿದೆಯೋ ಹಾಗೆ ಕೆಟ್ಟುಹೋಗುತ್ತದೆ. ಮೂರೂ ಲೋಕಗಳ ಎಲ್ಲ ಚತುರ್ವಿಧ ಭೂತಗಳಿಗೆ ಮಾಧವನೇ ಪ್ರಭವ ಮತ್ತು ನಿಧನ.”
ಶಿಶುಪಾಲನ ಮಾತು
ಅವನ ಈ ಮಾತುಗಳನ್ನು ಕೇಳಿದ ಚೇದಿಪತಿ ನೃಪನು ಬೀಷ್ಮನಿಗೆ ಸಿಟ್ಟಿನಿಂದ ಈ ಮಾತುಗಳನ್ನು ಹೇಳಿದನು:
“ಕುಲಘಾತಕ! ಈ ರೀತಿ ನಿನ್ನ ಹಲವಾರು ಹೆದರಿಕೆಗಳಿಂದ ಸರ್ವ ಪಾರ್ಥಿವರನ್ನೂ ಭಯಪಡಿಸುತ್ತಿರುವ ನಿನಗೆ ನಾಚಿಕೆಯಾದರೂ ಏಕೆ ಆಗುವುದಿಲ್ಲ? ನಪುಂಸಕನಂತೆ ಜೀವಿಸುತ್ತಿರುವ ನಿನಗೆ ಈ ರೀತಿ ಧರ್ಮ ವಿರುದ್ಧ ಮಾತುಗಳನ್ನಾಡುವುದು ನಿಜವಾಗಿಯೂ ಸರಿಯೆನಿಸುತ್ತದೆ. ಇನ್ನೊಂದು ದಾರಿತಪ್ಪಿದ ದೋಣಿಗೆ ಕಟ್ಟಿದ ದೋಣಿಯಂತೆ, ಕುರುಡನನ್ನು ಹಿಂಬಾಲಿಸುವ ಕುರುಡನಂತೆ ಕೌರವರೆಲ್ಲರೂ ನಿನ್ನನ್ನು ತಮ್ಮ ಮುಖಂಡನನ್ನಾಗಿ ಹೊಂದಿದ್ದಾರೆ. ಹಿಂದೆ ಇವನು ಪೂತನಿಯನ್ನು ಕೊಂದ ಕೆಲಸವನ್ನು ವಿಶೇಷವಾಗಿ ಹೊಗಳುತ್ತಾ ನೀನು ನಮ್ಮ ಮನಸ್ಸೆಲ್ಲವೂ ಕುಸಿದುಬೀಳುವಂತೆ ಮಾಡಿರುವೆ. ಕೇಶವನನ್ನು ಸ್ತುತಿಸಲು ಬಯಸುವ ನಿನ್ನ ನಾಲಗೆಯು ಹೇಗೆ ನೂರು ಚೂರುಗಳಾಗಿ ಒಡೆದು ಹೋಗಿಲ್ಲ? ಜ್ಞಾನವೃದ್ಧ ನೀನು ಮೂಢರೂ ಹೀಗಳೆಯುವ ಗೋಪನನ್ನು ಸಂಸ್ತುತಿಸಲು ಇಚ್ಛಿಸುವೆಯಾ! ಬಾಲ್ಯದಲ್ಲಿ ಅವನು ಶಕುನಿಯೊಂದನ್ನು ಕೊಂದನೆಂದರೆ ಅದರಲ್ಲಿ ಆಶ್ಚರ್ಯವೇನು? ಆ ಅಶ್ವ ವೃಷಭರು ಯುದ್ಧವಿಶಾರದರಾಗಿರಲಿಲ್ಲ. ಚೇತನಾರಹಿತ ಕಟ್ಟಿಗೆಯ ಬಂಡಿಯನ್ನು ಪಾದದಿಂದ ಒದ್ದು ಬೀಳಿಸಿದನೆಂದರೆ ಅದರಲ್ಲಿ ಯಾವ ರೀತಿಯ ಅದ್ಭುತವನ್ನು ಮಾಡಿದಹಾಗಾಯಿತು? ಕೇವಲ ಹುತ್ತದ ಗಾತ್ರದ ಗೋವರ್ಧನ ಪರ್ವತವನ್ನು ಏಳು ದಿನಗಳ ಪರ್ಯಂತ ಅವನು ಎತ್ತಿ ಹಿಡಿದನೆಂದರೆ ಅದೊಂದು ಪವಾಡವಲ್ಲ ಎನ್ನುವುದು ನನ್ನ ಅಭಿಪ್ರಾಯ. ಅವನು ಪರ್ವತದ ಮೇಲೆ ಆಡುತ್ತಿರುವಾಗ ಬಹಳಷ್ಟು ಆಹಾರವನ್ನು ತಿನ್ನನೆಂದು ನಮಗೆ ಹೇಳುವ ನೀನು ನಮ್ಮನ್ನೆಲ್ಲ ಬಹಳ ವಿಸ್ಮಿತರನ್ನಾಗಿ ಮಾಡಿದ್ದೀಯೆ. ಯಾರ ಅನ್ನವನ್ನು ತಿಂದಿದ್ದನೋ ಅದೇ ಬಲಶಾಲಿ ಕಂಸನನ್ನು ಇವನು ಕೊಂದನೆನ್ನುವುದು ಧರ್ಮಜ್ಞ ನಿನಗೆ ಮಹಾದ್ಭುತವೆಂದು ತೋರುವುದಿಲ್ಲವೇ? ಸತ್ಯವಂತರು ಹೇಳುವ ಈ ವಿಷಯಗಳನ್ನು ಅಧರ್ಮಜ್ಞ ನೀನು ಕೇಳಿಲ್ಲ ಎನ್ನುವುದು ನಿಶ್ಚಿತ! ಸ್ತ್ರೀಯರ, ಗೋವುಗಳ, ಬ್ರಾಹ್ಮಣರ, ಯಾರ ಅನ್ನವನ್ನು ತಿಂದಿದ್ದೀವೋ ಅವರ ಮೇಲೆ ಮತ್ತು ಶರಣಾಗತರಾದವರ ಮೇಲೆ ಶಸ್ತ್ರಗಳನ್ನು ಪ್ರಯೋಗಿಸಬಾರದು ಎಂದು ಸಂತರು, ಧಾರ್ಮಿಕರು ಮತ್ತು ಸಜ್ಜನರು ಸದಾ ಹೇಳಿದ್ದಾರೆ. ಭೀಷ್ಮ! ನೀನು ಲೋಕದಲ್ಲಿನ ಇವೆಲ್ಲವನೂ ತಿರಸ್ಕರಿಸಿರುವಂತೆ ತೋರುತ್ತಿದೆ. ನನಗೇನೂ ತಿಳಿದಿಲ್ಲ ಎನ್ನುವ ರೀತಿಯಲ್ಲಿ ನೀನು ಕೇಶವನು ಜ್ಞಾನವೃದ್ಧ, ವೃದ್ಧ ಎಂದು ಸ್ತುತಿಸುತ್ತಿದ್ದೀಯಲ್ಲ! ಓರ್ವ ಗೋಹಂತಕ ಮತ್ತು ಸ್ತ್ರೀ ಹಂತಕನು ಹೇಗೆ ಸ್ತುತಿಗೆ ಅರ್ಹನಾಗುತ್ತಾನೆ? ಇವನು ಮತಿವಂತರಲ್ಲೆಲ್ಲಾ ಶ್ರೇಷ್ಠನು, ಇವನೇ ಜಗತ್ಪ್ರಭು ಎಂಬ ನಿನ್ನ ಈ ಮಾತುಗಳನ್ನು ಜನಾರ್ದನನೂ ಇವೆಲ್ಲವೂ ಸತ್ಯವೆಂದು ತಿಳಿದಿದ್ದಾನೆ. ಆದರೆ ಇವೆಲ್ಲವೂ ಸುಳ್ಳು ಎನ್ನುವುದಂತೂ ನಿಶ್ಚಿತ. ಎಷ್ಟು ಬಾರಿ ಹಾಡಿದರೂ ಹಾಡು ಹಾಡುಗಾರನನ್ನು ಪ್ರಶಂಸಿಸುವುದಿಲ್ಲ. ಭೂಲಿಂಗ ಪಕ್ಷಿಯಂತೆ ಇರುವವೆಲ್ಲವೂ ಪ್ರಕೃತಿಯನ್ನು ಅನುಸರಿಸುತ್ತವೆ. ನಿನ್ನ ಸ್ವಭಾವವು ಅತ್ಯಂತ ಕೀಳಾದದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಸತ್ಯದ ದಾರಿತಪ್ಪಿದ, ಅಧರ್ಮಜ್ಞನಾಗಿದ್ದೂ ಧರ್ಮದ ಮಾತನಾಡುವ ನಿನ್ನ ಹೇಳಿಕೆಯಂತೆ ಕೃಷ್ಣನಿಗೆ ಅತ್ಯುನ್ನತ ಗೌರವವನ್ನು ನೀಡಬೇಕು ಎಂದು ತಿಳಿಯುವ ಈ ಪಾಂಡವರೂ ಕೂಡ ಪಾಪಿಗಳಿರಬೇಕು. ತಾನು ಧರ್ಮಿಯೆಂದು ತಿಳಿದ ಯಾರುತಾನೆ ಧರ್ಮವನ್ನೇ ಕಡೆಗಣಿಸಿ ನಿನ್ನಂತೆ ನಡೆದುಕೊಳ್ಳುತ್ತಾರೆ? ನೀನೊಬ್ಬ ಪ್ರಾಜ್ಞಮಾನಿ, ಧರ್ಮಜ್ಞ ಎಂದು ತಿಳಿದುಕೊಂಡರೆ ಅನ್ಯನನ್ನು ಕಾಮಿಸುತ್ತಿದ್ದ ಅಂಬಾ ಎಂಬ ಹೆಸರಿನವಳನ್ನು ನೀನು ಏಕೆ ಅಪಹರಿಸಿದೆ? ನಿನ್ನಿಂದ ಅಪಹೃತಳಾದ ಕನ್ಯೆಯನ್ನು ನಿನ್ನ ಭ್ರಾತ ವಿಚಿತ್ರವೀರ್ಯನು ಸ್ವೀಕರಿಸದೇ ಸತ್ಯವಂತರಹಾಗೆ ನಡೆದುಕೊಂಡನು. ಅವನ ಪತ್ನಿಯರಲ್ಲಿ ಇನೊಬ್ಬ ಪ್ರಾಜ್ಞಮಾನಿಯು ನಿನಗಾಗಿ ಸಂತಾನವನ್ನು ಹುಟ್ಟಿಸಿ ಸಜ್ಜನರು ಆಚರಿಸುವ ದಾರಿಯಲ್ಲಿ ನಡೆದುಕೊಳ್ಳುವಹಾಗೆ ಮಾಡಬೇಕಾಯಿತು. ಮೋಹದಿಂದ ಅಥವಾ ಕ್ಲೀಬತ್ವದಿಂದ ನೀನು ವೃಥಾ ಆಚರಿಸುತ್ತಿರುವ ಈ ಬ್ರಹ್ಮಚರ್ಯವು ನಿನ್ನ ಧರ್ಮವಲ್ಲ ಭೀಷ್ಮ! ನೀನು ಏಳ್ಗೆಯನ್ನು ಕಾಣುತ್ತೀಯೆ ಎಂದು ನನಗೆ ಅನ್ನಿಸುವುದಿಲ್ಲ. ನೀನು ಎಂದೂ ವೃದ್ಧರ ಸೇವೆಯನ್ನೂ ಮಾಡಲಿಲ್ಲ. ಧರ್ಮದಲ್ಲಿ ಹೇಳಿದ ಪ್ರಕಾರ ದಾನವನ್ನು ನೀಡುವುದು, ಬಹುದಕ್ಷಿಣೆಯುಕ್ತ ಯಜ್ಞ ಇವೆಲ್ಲವೂ ಸಂತಾನದ ಮುಂದೆ ಹದಿನಾರರ ಒಂದಂಶವೂ ಅಲ್ಲ. ಬಹಳಷ್ಟು ವ್ರತ ಉಪವಾಸಗಳನ್ನು ಮಾಡಿದ್ದರೂ ಎಲ್ಲವೂ ಸಂತಾನವಿಲ್ಲವೆಂದರೆ ವ್ಯರ್ಥವಾಗುತ್ತವೆ ಎಂದು ನಿಶ್ಚಯವಾಗಿದೆ. ಸುಳ್ಳುಧರ್ಮವನ್ನು ಅನುಸರಿಸುವ ನೀನು ಮಕ್ಕಳಿಲ್ಲದೇ ವೃದ್ಧನಾಗುತ್ತೀಯೆ. ಹಂಸದಂತೆ ಈಗ ನಿನ್ನ ಬಂಧುಗಳ ಕೈಯಲ್ಲಿಯೇ ಸಾವನ್ನು ಹೊಂದು. ಜ್ಞಾತಿವಿದ ಜನರು ಹಿಂದೆ ಹೇಳುತ್ತಿದ್ದ ಕಥೆಯನ್ನು ಇದ್ದಹಾಗೆಯೇ ನಿನಗೆ ಹೇಳುತ್ತೇನೆ. ಅದನ್ನು ಕೇಳು.
ಹಿಂದೆ ಸಮುದ್ರ ತೀರದಲ್ಲಿ ಧರ್ಮವನ್ನು ಮಾತನಾಡುವ ಆದರೆ ಆಚರಿಸದಿರುವ ವೃದ್ಧ ಹಂಸವೊಂದು ಇರುತ್ತಿತ್ತು. ಅದು ಇತರ ಪಕ್ಷಿಗಳಿಗೆ ಧರ್ಮದಲ್ಲಿ ನಡೆದುಕೋ, ಅಧರ್ಮದಲ್ಲಿ ಬೇಡ ಎಂದು ಧರ್ಮದ ಉಪದೇಶವನ್ನು ನೀಡುತ್ತಿತ್ತು. ಆ ಧರ್ಮವಾದಿಯಿಂದ ಸತತವೂ ಇದನ್ನೇ ಪಕ್ಷಿಗಳು ಕೇಳುತ್ತಿದ್ದವು. ಇತರ ಪಕ್ಷಿಗಳು ಅವನಿಗೆ ಆಹಾರ, ಸಮುದ್ರದ ನೀರಿನಲ್ಲಿ ವಾಸಿಸುತ್ತಿದ್ದ ಮೀನುಗಳು ಮೊದಲಾದವುಗಳನ್ನು ಧರ್ಮಾರ್ಥ ತಂದುಕೊಡುತ್ತಿದ್ದವು. ಮತ್ತು ಆ ಪಕ್ಷಿಗಳು ಎಲ್ಲವೂ ತಮ್ಮ ಮೊಟ್ಟೆಗಳನ್ನು ಇವನಲ್ಲಿ ಇಟ್ಟು ಸಮುದ್ರದ ನೀರಿನಲ್ಲಿ ವಿನೋದಿಸುತ್ತಿದ್ದವು. ಇತರರು ಸಂಪ್ರಮತ್ತರಾಗಿದ್ದಾಗ ತನ್ನ ಕೆಲಸವನ್ನು ನೋಡಿಕೊಳ್ಳುವ ಆ ಪಾಪಕರ್ಮಿ ಹಂಸವು ಅವರ ಎಲ್ಲ ಮೊಟ್ಟೆಗಳನ್ನೂ ತಿಂದು ಹಾಕಿತು. ಮೊಟ್ಟೆಗಳ ಸಂಖ್ಯೆಯು ಬಹಳಷ್ಟು ಕಡಿಮೆಯಾಗುತ್ತಿರುವುದನ್ನು ನೋಡಿದ ಕೆಲವು ಬುದ್ಧಿವಂತ ಪಕ್ಷಿಗಳು ಅವನನ್ನು ಶಂಕಿಸಿ ಅವನ ಮೇಲೆ ಕಣ್ಣಿಟ್ಟವು. ಆ ಹಂಸದ ಕೆಟ್ಟಕಾರ್ಯವನ್ನು ನೋಡಿದ ಅವುಗಳು ಪರಮದುಃಖಾರ್ತರಾಗಿ ಇತರ ಸರ್ವ ಪಕ್ಷಿಗಳಿಗೂ ತಿಳಿಸಿದವು. ಆ ಎಲ್ಲ ಪಕ್ಷಿಗಳೂ ಒಂದಾಗಿ ಪ್ರತ್ಯಕ್ಷತಃ ಅವನನ್ನು ನೋಡಿ, ಸುಳ್ಳುನಡೆದುಕೊಳ್ಳುತ್ತಿದ್ದ ಆ ಹಂಸವನ್ನು ಕೊಂದುಹಾಕಿದವು. ಪಕ್ಷಿಗಳು ಆ ಹಂಸವನ್ನು ಕೊಂದಹಾಗೆ ಈ ವಸುಧಾಧಿಪರೂ ಕೂಡ ಸಂಕೃದ್ಧರಾಗಿ ಹಂಸಧರ್ಮದಂತೆ ನಿನ್ನನ್ನು ಕೊಲ್ಲುತ್ತಾರೆ. ಪುರಾಣವನ್ನು ತಿಳಿದ ಜನರು ಇದರ ಮೇಲೆ ಒಂದು ಹಾಡನ್ನು ಹಾಡುತ್ತಾರೆ. ಅದನ್ನು ನಿನಗೆ ಇದ್ದಹಾಗೆ ಹೇಳುತ್ತೇನೆ. ನೀನು ಸುಳ್ಳನ್ನು ಹೇಳುತ್ತಿರುವಾಗ ನಿನ್ನ ಅಂತರಾತ್ಮವು ಇನ್ನೊಂದೆಡೆಗೆ ತಿರುಗಿರುತ್ತದೆ. ಮೊಟ್ಟೆಯನ್ನು ತಿನ್ನುವ ಈ ನಿನ್ನ ಅಪಕೃತ್ಯವು ನೀನು ಮಾತನಾಡುವುದರಕ್ಕಿಂತ ಬೇರೆಯಾಗಿದೆ.
"ನೀನು ದಾಸನಿಗಿಂತ ಹೆಚ್ಚಿನವನಲ್ಲ!” ಎಂದು ಹೇಳಿ ಇವನೊಂದಿಗೆ ಯುದ್ಧಮಾಡಲು ನಿರಾಕರಿಸಿದ ಮಹಾಬಲಿ ಜರಾಸಂಧನನ್ನು ನಾನು ತುಂಬಾ ಗೌರವಿಸುತ್ತಿದ್ದೆ. ಕೇಶವನಿಂದ, ಮತ್ತು ಭೀಮಸೇನ ಅರ್ಜುನರಿಂದ ಆದ ಜರಾಸಂಧವಧೆಯನ್ನು ಯಾರುತಾನೆ ಒಳ್ಳೆಯದಾಯಿತೆಂದು ಸ್ವೀಕರಿಸುತ್ತಾರೆ? ಧೀಮಂತ ಜರಾಸಂಧನು ಬ್ರಹ್ಮವಾದಿಯ ವೇಷದಲ್ಲಿದ್ದ ಕೃಷ್ಣನನ್ನು ಯಾವ ದ್ವಾರದಿಂದ ಪ್ರವೇಶಿಸಿದುದನ್ನೂ ನೋಡಲಿಲ್ಲ. ಆ ಧರ್ಮಾತ್ಮನು ಇವರು ಬ್ರಾಹ್ಮಣರೆಂದು ತಿಳಿದು ಈ ದುರಾತ್ಮ ಕೃಷ್ಣ, ಭೀಮ, ಧನಂಜಯರಿಗೆ ಮೊದಲು ಪಾದ್ಯವನ್ನು ನೀಡಿ, ನಂತರ ಭೋಜನ ಮಾಡಿ ಎಂದು ಹೇಳಿದನು. ಕೃಷ್ಣನು ಜರಾಸಂಧನಿಗೆ ಮೋಸಮಾಡಿದನು. ಮೂರ್ಖನಾದ ನೀನು ತಿಳಿದಂತೆ ಒಂದುವೇಳೆ ಇವನೇನಾದರೂ ಜಗತ್ತಿನ ಕರ್ತುವಾಗಿದ್ದರೆ, ಅವನು ಅಲ್ಲಿಗೆ ತನ್ನನ್ನು ಬ್ರಾಹ್ಮಣನನ್ನಾಗಿಸಿಕೊಂಡು ಏಕೆ ಹೋದನು? ನಿನ್ನಿಂದ ಸತ್ಯವಂತರ ಮಾರ್ಗವನ್ನು ಕಳೆದುಕೊಂಡ ಪಾಂಡವರು ಈಗಲೂ ನಿನ್ನನ್ನು ಸಾಧುವೆಂದು ತಿಳಿಯುತ್ತಿದ್ದಾರಲ್ಲ. ಅದೇ ನನಗೆ ಬಹಳ ಆಶ್ಚರ್ಯವೆನಿಸುತ್ತದೆ. ಅಥವಾ ಅವರಿಗೆ ಸ್ತ್ರೀಯಂತೆ ನಡೆದುಕೊಳ್ಳುತ್ತಿರುವ ವೃದ್ಧ ಭಾರತ ನೀನು ಸರ್ವವಿಷಯಗಳ ಮಾರ್ಗದರ್ಶಕ ಎನ್ನುವುದು ಬಹುಷಃ ಅಷ್ಟೊಂದು ಆಶ್ಚರ್ಯಕರವಾದದ್ದು ಇಲ್ಲದಿರಬಹುದು.”
ಭೀಮನ ಕ್ರೋಧ
ಕಟುಶಬ್ಧಗಳಿಂದ ಕೂಡಿದ ಅವನ ಈ ಸುದೀರ್ಘ ಕಟು ಮಾತುಗಳನ್ನು ಕೇಳಿದ ಬಲಶಾಲಿಗಳಲ್ಲಿ ಶ್ರೇಷ್ಠ ಪ್ರತಾಪಿ ಭೀಮಸೇನನು ಸಿಟ್ಟಿಗೆದ್ದನು. ಪದ್ಮದಂತೆ ಸ್ವಭಾವತಃ ಶಾಂತವಾಗಿದ್ದ ಕಣ್ಣುಗಳು ಕ್ರೋಧದಿಂದ ಕೆಂಪಾದವು ಮತ್ತು ಕಣ್ಣಂಚು ತಾಮ್ರದ ಬಣ್ಣವನ್ನು ತಾಳಿತು. ಅವನ ಹಣೆಯ ಹುಬ್ಬುಗಳು ತ್ರಿಕೂಟದಿಂದ ಮೂರು ಭಾಗಗಳಾಗಿ ಹರಿಯುವ ಗಂಗೆಯಂತೆ ಮೂರು ಪದರಗಳಲ್ಲಿ ಬಿಗಿಯಾದುದನ್ನು ಸರ್ವ ಪಾರ್ಥಿವರೂ ನೋಡಿದರು. ಅವನು ಯುಗಾಂತದಲ್ಲಿ ಸರ್ವಭೂತಗಳನ್ನೂ ಸುಟ್ಟುಬಿಡುವ ಕಾಲನಂತೆ ಕೋಪದಿಂದ ಹಲ್ಲು ಕಡೆಯುತ್ತಿದ್ದುದನು ನೋಡಿದರು. ಆದರೆ ವೇಗದಿಂದ ಮೇಲೆದ್ದು ಮುಂದೆಬರುತ್ತಿದ್ದ ಮಹಾಬಾಹು ಭೀಮಸೇನನನ್ನು ಈಶ್ವರ ಭೀಷ್ಮನು ತಡೆಹಿಡಿದನು. ಭೀಷ್ಮನು ಭೀಮನನ್ನು ತಡೆಯಲು, ಗುರುವಿನ ವಿವಿಧ ವಾಕ್ಯಗಳಿಂದ ಅವನ ಕ್ರೋಧವು ಪ್ರಶಮನವಾಯಿತು. ಮಳೆಗಾಲದಲ್ಲಿ ಮಹೋದಧಿಯು ಎಷ್ಟೇ ಭರತ ಹೊಂದಿದರೂ ಪ್ರವಾಹರೇಖೆಯನ್ನು ಹೇಗೆ ದಾಟುವುದಿಲ್ಲವೋ ಹಾಗೆ ಆ ಅರಿಂದಮನು ಭೀಷ್ಮನ ವಾಕ್ಯವನ್ನು ಅತಿಕ್ರಮಿಸಲಿಲ್ಲ. ಸಂಕೃದ್ಧ ಭೀಮಸೇನನಿಗೆ ಶಿಶುಪಾಲನು ಹೆದರಲಿಲ್ಲ ಮತ್ತು ಆ ವೀರನು ತನ್ನ ಪೌರುಷದಲ್ಲಿಯೇ ವ್ಯವಸ್ಥಿತನಾಗಿದ್ದನು. ಆ ಅರಿಂದಮನು ಪುನಃ ಪುನಃ ವೇಗದಿಂದ ಎದ್ದೇಳುತ್ತಿದ್ದರೂ ಒಂದು ಸಿಂಹವು ಕ್ಷುದ್ರಮೃಗವನ್ನು ಹೇಗೋ ಹಾಗೆ ಅವನ ಕುರಿತು ಸ್ವಲ್ಪವೂ ಚಿಂತಿಸಲಿಲ್ಲ. ಭೀಮಪರಾಕ್ರಮಿ ಅತಿಕೃದ್ಧ ಭೀಮಸೇನನನ್ನು ನೋಡಿ ಪ್ರತಾಪಿ ಚೇದಿರಾಜನು ಜೋರಾಗಿ ನಗುತ್ತಾ ಹೇಳಿದನು:
“ಭೀಷ್ಮ! ಅವನನ್ನು ಬರಲು ಬಿಡು. ಅಗ್ನಿಯಲ್ಲಿ ಪತಂಗದಂತೆ ನನ್ನ ಪ್ರತಾಪಾಗ್ನಿಯಲ್ಲಿ ಇವನು ಸುಟ್ಟುಹೋಗುವುದನ್ನು ನರಾಧಿಪರೆಲ್ಲ ನೋಡಲಿ!”
ಶಿಶುಪಾಲವೃತ್ತಾಂತ ಕಥನ
ಆಗ ಚೇದಿಪತಿಯ ಈ ಮಾತುಗಳನ್ನು ಕೇಳಿದ ಮತಿವಂತರಲ್ಲಿ ಶ್ರೇಷ್ಠ ಕುರುಸತ್ತಮ ಭೀಷ್ಮನು ಬೀಮಸೇನನಿಗೆ ಈ ಮಾತುಗಳನ್ನಾಡಿದನು:
“ಚೇದಿರಾಜಕುಲದಲ್ಲಿ ಇವನು ಮೂರು ಕಣ್ಣುಗಳು ಮತ್ತು ನಾಲ್ಕು ಭುಜಗಳುಳ್ಳವನಾಗಿ ಜನಿಸಿದನು. ಮತ್ತು ಅವನು ಕತ್ತೆಯಹಾಗೆ ಕಿರುಚಿಕೊಳ್ಳುತ್ತಿದ್ದನು. ಬಾಂಧವರೊಂದಿಗೆ ಅವನ ತಂದೆ ತಾಯಿಯರು ಅವನನ್ನು ನೋಡಿ ನಡುಗಿದರು ಮತ್ತು ಅವನ ವೈಕೃತವನ್ನು ಕಂಡು ಅವನನ್ನು ತ್ಯಾಗಿಸುವ ಮನಸ್ಸು ಮಾಡಿದರು. ಪತ್ನಿ, ಅಮಾತ್ಯರು ಮತ್ತು ಪುರೋಹಿತರೊಂದಿಗೆ ಚಿಂತೆಯಿಂದ ಸಮ್ಮೂಢ ಹೃದಯನಾದ ಆ ನೃಪತಿಗೆ ಒಂದು ಅಶರೀರವಾಣಿಯು ನುಡಿಯಿತು:
‘ನೃಪತೇ! ನಿನಗೆ ಹುಟ್ಟಿದ ಪುತ್ರನು ಶ್ರೀಮಂತನೂ, ಮಹಾಬಲಿಯೂ ಆಗಿದ್ದಾನೆ. ಆದುದರಿಂದ ಈ ಶಿಶುವನ್ನು ಜಾಗರೂಕತೆಯಿಂದ ಪರಿಪಾಲಿಸು. ನೀನು ಇವನ ಮೃತ್ಯುವಿಗೆ ಕಾರಣನಲ್ಲ ಮತ್ತು ಇವನ ಮೃತ್ಯುವಿನ ಕಾಲವೂ ಬಂದಿಲ್ಲ. ಇವನನ್ನು ಶಸ್ತ್ರದಿಂದ ಕೊಲ್ಲುವವನು ಈಗಾಗಲೇ ಹುಟ್ಟಿದ್ದಾನೆ.’
ಈ ರೀತಿಯ ಅಂತರ್ಹಿತ ಮಾತುಗಳನ್ನು ಕೇಳಿದ ಅವನ ಜನನಿಯು ಪುತ್ರಸ್ನೇಹದಿಂದ ಸಂತಪ್ತಳಾಗಿ ಹೇಳಿದಳು:
‘ನನ್ನ ಮಗನ ಕುರಿತಾಗಿ ಈ ವಾಕ್ಯವನ್ನು ಹೇಳಿದವನಿಗೆ ಕೈಜೋಡಿಸಿ ನಮಸ್ಕರಿಸಿ ಪುನಃ ಹೇಳಲು ಕೇಳಿಕೊಳ್ಳುತ್ತೇನೆ. ನನ್ನ ಈ ಪುತ್ರನ ಮೃತ್ಯುವು ಯಾರಿಂದ ಆಗುತ್ತದೆ ಎನ್ನುವುದನ್ನು ತಿಳಿಯಲು ಬಯಸುತ್ತೇನೆ.’
ಆಗ ಅಂತರ್ಹಿತ ಭೂತವು ಪುನಃ ಹೀಗೆ ಹೇಳಿತು:
‘ಯಾರು ತನ್ನ ತೊಡೆಯಮೇಲೆ ಇವನನ್ನು ಹಿಡಿದಾಗ ಅವನ ಅಧಿಕ ಎರಡು ಕೈಗಳು ಐದುಹೆಡೆಯ ಸರ್ಪದಂತೆ ಭೂಮಿಯಮೇಲೆ ಬೀಳುತ್ತವೆಯೋ ಮತ್ತು ಈ ಬಾಲಕನ ಹಣೆಯ ಮೇಲಿರುವ ಮೂರನೆಯ ಕಣ್ಣು ಕರಗಿ ಹೋಗುತ್ತದೆಯೋ ಅವನೇ ಇವನ ಮೃತ್ಯುವಾಗುತ್ತಾನೆ.’
ಅವನಿಗೆ ಮೂರು ಕಣ್ಣುಗಳು ಮತ್ತು ನಾಲ್ಕು ಭುಜಗಳಿವೆ ಎಂದು ಕೇಳಿದ ಧರಣಿಯ ಸರ್ವ ಪಾರ್ಥಿವ ಸಮುದಾಯವೂ ಅವನನ್ನು ನೋಡಲು ಬಂದರು. ಆಗಮಿಸಿದವರನ್ನು ಮಹೀಪತಿಯು ಯಥಾರ್ಹ ಸ್ವಾಗತಿಸಿ ಒಬ್ಬೊಬ್ಬರ ತೊಡೆಯ ಮೇಲೂ ಪುತ್ರನನ್ನು ಕೂರಿಸಿದನು. ಈ ರೀತಿ ಆಗಮಿಸಿದ ಸಹಸ್ರಾರು ರಾಜರುಗಳ ತೊಡೆಯಮೇಲೆ ಕೂರಿಸಿದರೂ ಭವಿಷ್ಯವಾಣಿಯು ನಿಜವಾಗಲಿಲ್ಲ. ಆಗ ಸಂಕರ್ಷಣ-ಜನಾರ್ದನರಿಬ್ಬರು ಯಾದವರೂ ತಮ್ಮ ತಂದೆಯ ತಂಗಿ ಯಾದವಿಯನ್ನು ನೋಡಲು ಚೇದಿಪುರಕ್ಕೆ ಬಂದರು. ಜ್ಯೇಷ್ಠರನ್ನೂ ನೃಪತಿಯನ್ನೂ ಯಥಾನ್ಯಾಯ ಅಭಿವಂದಿಸಿ ರಾಮ-ಕೇಶವರು ಕುಶಲಪ್ರಶ್ನೆಗಳನ್ನು ಕೇಳಿ ಕುಳಿತುಕೊಂಡರು. ಇಬ್ಬರು ವೀರರನ್ನೂ ಸ್ವಾಗತಿಸಲಾಯಿತು ಮತ್ತು ಅಧಿಕ ಪ್ರೀತಿಯಿಂದ ದೇವಿಯು ತನ್ನ ಮಗನನ್ನು ಸ್ವಯಂ ದಾಮೋದರನ ತೊಡೆಯ ಮೇಲೆ ಕೂರಿಸಿದಳು. ಅವನ ತೊಡೆಯಮೇಲೆ ಇಟ್ಟಕೂಡಲೇ ಅಧಿಕವಾಗಿದ್ದ ಅವನ ಎರಡು ಕೈಗಳು ಕೆಳಗೆ ಬಿದ್ದವು ಮತ್ತು ಲಲಾಟದಲ್ಲಿದ್ದ ನಯನವೂ ಕರಗಿಹೋಯಿತು. ಇದನ್ನು ನೋಡಿ ವ್ಯಥಿತಳಾಗಿ ನಡುಗಿದ ಅವಳು ಕೃಷ್ಣನಲ್ಲಿ ಬೇಡಿಕೊಂಡಳು:
‘ಮಹಾಭುಜ ಕೃಷ್ಣ! ಭಯಾರ್ತ ನನಗೆ ವರವನ್ನು ಕೊಡು. ನೀನು ಆರ್ತರ ಸಮಾಶ್ವಾಸ ಮತ್ತು ಭಯಭೀತರ ಅಭಯಂಕರ.’
ಆಗ ತನ್ನ ತಂದೆಯ ತಂಗಿಗೆ ಜನಾರ್ದನನು ಉತ್ತರಿಸಿದನು:
‘ಹೆದರಬೇಡ! ಅತ್ತೆ! ನಾನು ನಿನಗೆ ಯಾವ ವರವನ್ನು ಕೊಡಲಿ? ಏನು ಮಾಡಲಿ? ಅದು ಸಾಧ್ಯವಿರಲಿ ಅಥವಾ ಸಾಧ್ಯವಿಲ್ಲದಿರಲಿ. ನಿನ್ನ ಮಾತಿನಂತೆ ಮಾಡುತ್ತೇನೆ.’
ಇದಕ್ಕೆ ಅವಳು ಯದುನಂದನ ಕೃಷ್ಣನಿಗೆ ಹೇಳಿದಳು:
‘ಮಹಾಬಲ! ನೀನು ಶಿಶುಪಾಲನ ಅಪರಾಧಗಳನ್ನು ಕ್ಷಮಿಸು.’
ಕೃಷ್ಣನು ಹೇಳಿದನು:
‘ಅತ್ತೆ! ವಧಾರ್ಹವಾಗಿದ್ದರೂ ಇವನ ನೂರು ಅಪರಾಧಗಳನ್ನು ಕ್ಷಮಿಸುತ್ತೇನೆ. ಶೋಕಿಸಬೇಡ.’
ವೀರ! ಆದುದರಿಂದಲೇ ಗೋವಿಂದವರದರ್ಪಿತ ಈ ಪಾಪಿ ನೃಪ ಮೂಢ ಶಿಶುಪಾಲನು ನಿನ್ನನ್ನು ಕೆರಳಿಸುತ್ತಿದ್ದಾನೆ.
ಅಚ್ಯುತನನ್ನು ಕೆರಳಿಸುವ ಇದು ಚೇದಿಪತಿಯ ಅವನ ಬುದ್ಧಿಯಿಂದಲ್ಲ. ನಿಶ್ಚಿತವಾಗಿಯೂ ಇದು ಜಗದ್ಭರ್ತು ಕೃಷ್ಣನ ನಿರ್ಧಾರವೇ ಆಗಿರಬೇಕು. ಭೀಮಸೇನ! ಈ ಕುಲಪಾಂಸನನನ್ನು ಬಿಟ್ಟು ದೈವಪರಿತಾತ್ಮನಲ್ಲದ ಭೂಮಿಯ ಮೇಲಿರುವ ಬೇರೆ ಯಾವ ಪಾರ್ಥಿವನು ಈ ರೀತಿ ನನ್ನನ್ನು ಹೀಯಾಳಿಸಲು ಸಾಧ್ಯ? ಇವನು ಮಹಾಬಾಹು ಹರಿಯ ತೇಜಸ್ಸಿನ ಒಂದು ಅಂಶ ಮತ್ತು ಪೃಥುಯಶ ಹರಿಯು ಅದನ್ನು ಪುನಃ ಹಿಂದೆಗೆದುಕೊಳ್ಳಲು ಬಯಸುತ್ತಾನಿರಬಹುದು. ಆದುದರಿಂದಲೇ ಈ ದುರ್ಬುದ್ಧಿ ಚೇದಿರಾಜನು ನಮ್ಮೆಲ್ಲರ ಕುರಿತು ಯೋಚಿಸದೇ ಶಾರ್ದೂಲದಂತೆ ಗರ್ಜಿಸುತ್ತಿದ್ದಾನೆ.”
ಆಗ ಚೈದ್ಯನು ಭೀಷ್ಮನ ಮಾತುಗಳಿಂದ ತತ್ತರಿಸದೇ ಸಂಕೃದ್ಧನಾಗಿ ಬೀಷ್ಮನಿಗೆ ಪುನಃ ಉತ್ತರಿಸಿದನು:
“ಭೀಷ್ಮ! ನೀನು ಸ್ತುತಿಸಿದ ಕೇಶವನ ಪ್ರಭಾವವು ನಮ್ಮ ದ್ವೇಷಿಗಳದ್ದಿರಲಿ. ನೀನು ಸತತ ಅವನ ಹೊಗಳುಭಟ್ಟನಾಗಿದ್ದೀಯೆ. ಒಂದುವೇಳೆ ನಿನಗೆ ಸದಾ ಇನ್ನೊಬ್ಬರನ್ನು ಹೊಗಳುವುದರಲ್ಲಿಯೇ ಸಂತೋಷ ದೊರೆಯುತ್ತದೆಯಾದರೆ ಜನಾರ್ದನನನ್ನು ಬಿಟ್ಟು ಬೇರೆ ಯಾರಾದರೂ ನಿಜ ರಾಜರನ್ನು ಹೊಗಳು. ಹುಟ್ಟುತ್ತಲೇ ಮಹಿಯನ್ನು ತನ್ನದಾಗಿಸಿಕೊಂಡ ಈ ಪಾರ್ಥಿವಸತ್ತಮ ದರದ ಬಾಹ್ಲೀಕನನ್ನು ಸ್ತುತಿಸು. ವಂಗಾಂಗದೇಶಗಳ ಅಧ್ಯಕ್ಷ, ಬಲದಲ್ಲಿ ಸಹಸ್ರಾಕ್ಷನ ಸಮ, ಮಹಾಚಾಪವಿಕರ್ಷಣ ಈ ಕರ್ಣನನ್ನು ಸ್ತುತಿಸು. ಮಹಾರಥಿ, ಸತತವೂ ದ್ವಿಜಸತ್ತಮ ಸ್ತುತಿಗಳಿಗರ್ಹ ಪಿತ-ಪುತ್ರ ದ್ರೋಣ ದ್ರೌಣಿಯರನ್ನು ಸ್ತುತಿಸು. ಅವರಲ್ಲಿ ಯಾರೊಬ್ಬರೂ ಸಂಕೃದ್ಧರಾದರೆ ಈ ವಸುಮತಿಯನ್ನು ಸಚರಾಚರಗಳ ಅಶೇಷಮತಿಯನ್ನಾಗಿ ಮಾಡುತ್ತಾರೆ ಎಂದು ನನ್ನ ಅಭಿಪ್ರಾಯ. ಯುದ್ಧದಲ್ಲಿ ದ್ರೋಣನ ಅಥವಾ ಅಶ್ವತ್ಥಾಮನ ಸರಿಸಮ ನರಾಧಿಪನನ್ನು ಕಾಣಲಾರೆ. ಆದರೂ ನೀನು ಇವರಿಬ್ಬರನ್ನು ಹೊಗಳಲು ಬಯಸುತ್ತಿಲ್ಲವಲ್ಲ! ನಿನ್ನ ಬುದ್ಧಿಯು ಎಲ್ಲರ ಹೊಗಳಿಕೆಯಲ್ಲಿ ನಿರತವಾಗಿದ್ದರೆ ನೀನು ಶಲ್ಯ ಮೊದಲಾದ ವಸುಧಾಧಿಪರನ್ನು ಏಕೆ ಹೊಗಳುತ್ತಿಲ್ಲ? ನೀನು ಹಿಂದೆ ಧರ್ಮವಾದಿಗಳು ಹೇಳಿಕೊಟ್ಟವುಗಳನ್ನು ಕೇಳದಿದ್ದರೆ ನಾನು ತಾನೆ ಏನು ಮಾಡಬಲ್ಲೆ? ಆರ್ಯನೆನಿಸಿಕೊಂಡವನು ಆತ್ಮನಿಂದೆ, ಆತ್ಮಪೂಜೆ, ಪರನಿಂದನೆ, ಪರಸ್ತುತಿ ಈ ನಾಲ್ಕನ್ನೂ ಮಾಡುವುದಿಲ್ಲ. ನಿನ್ನ ಮೋಹದಿಂದಲೋ ಭಕ್ತಿಯಿಂದಲೋ ಈ ಕೇಶವನನ್ನು ಸ್ತುತಿಸುತ್ತೀಯಾದರೆ ಸ್ತುತಿಸು. ಆದರೆ ಬೇರೆ ಯಾರೂ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ. ನಿನ್ನ ವೈಯಕ್ತಿಕ ಬಯಕೆಯಿಂದಾಗಿ ಭೋಜನ ಬಾಗಿಲು ಕಾವಲುಗಾರನಾದ ಈ ದುರಾತ್ಮನಿಗಾಗಿ ನೀನು ಹೇಗೆ ತಾನೆ ಸರ್ವ ಜಗತ್ತನ್ನೂ ಕೇವಲಗೊಳಿಸಬಲ್ಲೆ? ಅಥವಾ ಈ ಭಕ್ತಿಯು ನಿನ್ನ ಪ್ರಕೃತಿಯಾಗಿರದಿದ್ದರೆ - ನೀನು ಭೂಲಿಂಗ ಪಕ್ಷಿಯನ್ನು ಹೋಲುತ್ತೀಯೆ ಎಂದು ಮೊದಲೇ ನಿನಗೆ ನಾನು ಹೇಳಿರಲಿಲ್ಲವೇ? ಭೂಲಿಂಗ ಎಂಬ ಹೆಸರಿನ ಪಕ್ಷಿಯು ಹಿಮಾಲಯದ ಹತ್ತಿರದಲ್ಲಿರುತ್ತದೆ. ಅದರ ಮಾತುಗಳು ಸದಾ ಅರ್ಥಹೀನವಾಗಿರುತ್ತವೆ ಎಂದು ಕೇಳಿದ್ದೇವೆ. ಅದು ದುಡುಕಬೇಡ ಎಂದು ಸದಾ ಉಪದೇಶನೀಡುತ್ತಿರುತ್ತದೆ. ಆದರೆ ದಡ್ಡತನದಿಂದ ತಾನೇ ದುಡುಕುತ್ತಾ ಜೀವಿಸುತ್ತದೆ. ಯಾಕೆಂದರೆ ಈ ಅಲ್ಪಚೇತನ ಪಕ್ಷಿಯು ತಿನ್ನುತ್ತಿರುವ ಸಿಂಹದ ಮುಖದಮೇಲೆ ತಗಲಿರುವ ಮತ್ತು ಹಲ್ಲುಗಳ ನಡುವೆ ಸಿಲುಕಿಕೊಂಡಿರುವ ಮಾಂಸದ ತುಂಡುಗಳನ್ನು ತಿನ್ನುತ್ತದೆ. ಅದು ಸಿಂಹದ ಇಚ್ಛೆಯಂತೆ ಜೀವಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅದರಂತೆ ನೀನೂ ಕೂಡ ಸದಾ ಅಧರ್ಮಜ್ಞನ ಮಾತುಗಳನ್ನಾಡುತ್ತಿದ್ದೀಯೆ. ಈ ಪಾರ್ಥಿವೇಂದ್ರರ ಇಚ್ಛೆಯಂತೆ ನೀನು ಜೀವಿಸುತ್ತಿದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಜನರಿಗೆ ಇಷ್ಟವಾಗದೇ ಇರುವ ನಿನ್ನಂಥ ಬೇರೆ ಯಾರೂ ಇಲ್ಲ.”
ಚೇದಿಪತಿಯ ಈ ಕಟುಕ ಮಾತುಗಳನ್ನು ಕೇಳಿದ ಭೀಷ್ಮನು ಚೇದಿರಾಜನಿಗೆ ಕೇಳುವಹಾಗೆ ಈ ಮಾತುಗಳನ್ನಾಡಿದನು:
“ಹೌದು! ಈ ನರಾಧಿಪ ಗಣವನ್ನು ತೃಣಸಮಾನವಾಗಿ ಕಾಣುತ್ತಿರುವ ನಾನು ಈ ಮಹೀಕ್ಷಿತರ ಹೆಸರಿನಲ್ಲಿ ಜೀವಿಸುತ್ತಿದ್ದೇನೆ!”
ಭೀಷ್ಮನ ಈ ಮಾತಿಗೆ ನೃಪರಲ್ಲಿ ಕೆಲವರು ಸಂಕೃದ್ಧರಾದರು. ಕೆಲವರು ತತ್ತರಿಸಿದರು ಮತ್ತು ಇನ್ನು ಕೆಲವರು ಭೀಷ್ಮನನ್ನು ನಿಂದಿಸಿದರು. ಭೀಷ್ಮನ ಈ ಮಾತುಗಳನ್ನು ಕೇಳಿದ ಇತರ ಮಹೇಷ್ವಾಸರು
“ಪಾಪಿ, ಅವಲಿಪ್ತ, ವೃದ್ಧ ಭೀಷ್ಮನು ನಮ್ಮ ಕ್ಷಮೆಗೆ ಅರ್ಹನಲ್ಲ!”
ಎಂದು ಕೂಗಿದರು. ನೃಪರೆಲ್ಲರೂ ಸೇರಿ
“ಈ ದುರ್ಮತಿ ಬೀಷ್ಮನನ್ನು ಬಲಿಪಶುವಂತೆ ಕೊಂದುಹಾಕೋಣ ಅಥವಾ ಕಟಾಗ್ನಿಯಲ್ಲಿ ಸುಟ್ಟುಹಾಕೋಣ!”
ಎಂದು ಹೇಳಿದರು. ಅವರ ಈ ಕೂಗನ್ನು ಕೇಳಿದ ಕುರುಪಿತಾಮಹ ಮತಿವಂತ ಭೀಷ್ಮನು ಅಲ್ಲಿ ನೆರದಿದ್ದ ವಸುಧಾಧಿಪರಲ್ಲಿ ಹೇಳಿದನು:
“ಇಲ್ಲಿ ಈ ರೀತಿ ಮಾತನಾಡುವುದರಿಂದ ಯಾವ ಅಂತ್ಯವನ್ನೂ ನಾನು ಕಾಣಲಾರೆ. ವಸುಧಾಧಿಪರೇ! ನಾನು ಏನು ಹೇಳಲಿದ್ದೇನೋ ಅದನ್ನು ಕೇಳಿ! ಪಶುವಂತೆ ನನ್ನನ್ನು ಕೊಲ್ಲಿ ಅಥವಾ ಕಟಾಗ್ನಿಯಲ್ಲಿ ಸುಡಿ! ಆದರೆ ನಾನು ನಿಮ್ಮೆಲ್ಲರನ್ನೂ ತುಳಿಯುತ್ತೇನೆ. ಇಲ್ಲಿ ನಿಂತಿದ್ದಾನೆ ನಾವು ಪೂಜಿಸಿದ ಅಚ್ಯುತ ಗೋವಿಂದ! ಯಾರ ಬುದ್ಧಿಯು ಮರಣಕ್ಕೆ ಕಾತರಿಸುತ್ತಿದೆಯೋ ಅವನು ಯುದ್ಧದಲ್ಲಿ ಈ ಶಾಂಙ್ರಗದಾಧರ ದೇವ ಯಾದವ ಮಾಧವ ಕೃಷ್ಣನಿಂದ ಪತನವಾಗಿ ಅವನ ದೇಹವನ್ನು ಪ್ರವೇಶಿಸಲಿ!”
ಶಿಶುಪಾಲವಧೆ
ಭೀಷ್ಮನನ್ನು ಕೇಳಿದ ಅತಿವಿಕ್ರಮಿ ಚೇದಿರಾಜನು ವಾಸುದೇವನೊಂದಿಗೆ ಯುದ್ಧಮಾಡಲು ಉತ್ಸುಕನಾಗಿ ವಾಸುದೇವನಿಗೆ ಹೇಳಿದನು:
“ನಾನು ನಿನ್ನನ್ನು ಅಹ್ವಾನಿಸುತ್ತಿದ್ದೇನೆ. ಜನಾರ್ದನ! ನನ್ನೊಡನೆ ರಣಕ್ಕೆ ಬಾ. ಪಾಂಡವರೆಲ್ಲರ ಸಹಿತ ನಿನ್ನನ್ನು ನಿರ್ನಾಮಗೊಳಿಸುತ್ತೇನೆ! ಕೃಷ್ಣ! ನೃಪತಿಗಳನ್ನೆಲ್ಲ ಅತಿಕ್ರಮಿಸಿ ರಾಜನಲ್ಲದ ನಿನ್ನನ್ನು ಅರ್ಚಿಸಿದ ಆ ಪಾಂಡವರನ್ನೂ ನಾನು ವಧಿಸುತ್ತೇನೆ. ಬಾಲ್ಯದಲ್ಲಿ ದುರ್ಮತಿ, ದಾಸ ಮತ್ತು ಅರಾಜನಾದ ನಿನ್ನನ್ನು ಅನರ್ಹನಾಗಿದ್ದರೂ ಅರ್ಹನೆಂದು ತಿಳಿದು ಅರ್ಚಿಸಿದ ಅವರನ್ನೂ ವಧಿಸಬೇಕೆಂದು ಯೋಚಿಸುತ್ತಿದ್ದೇನೆ.”
ಈ ರೀತಿ ಹೇಳಿದ ರಾಜಶಾರ್ದೂಲನು ಗರ್ಜಿಸುತ್ತಾ ಕೋಪವನ್ನು ಕಾರುತ್ತಾ ಎದ್ದು ನಿಂತನು. ಇದನ್ನು ಕೇಳಿದ ಕೃಷ್ಣನು ಮೃದುಪೂರ್ವಕ ಮಾತುಗಳಲ್ಲಿ ಅಲ್ಲಿದ್ದ ಸರ್ವ ಪಾರ್ಥಿವ-ಪಾಂಡವರ ಸಮಕ್ಷಮದಲ್ಲಿ ಹೇಳಿದನು:
“ಈ ಸಾತ್ವತೀಸುತನು ಪಾರ್ಥಿವರ ಅತ್ಯಂತ ಶತ್ರು. ಈ ನೃಶಂಸಾತ್ಮನು ಸಾತ್ವತರ ಹಿತವಂತನಲ್ಲ. ಅನಪಕಾರಿ. ನರಾಧಿಪರೇ! ನಾನು ಪ್ರಾಗ್ಜೋತಿಷಪುರಕ್ಕೆ ಹೋದದ್ದನ್ನು ತಿಳಿದ ಈ ಕಪಟಿಯು ಸ್ವಸ್ತ್ರೀಯರ ದ್ವಾರಕೆಯನ್ನು ಸುಟ್ಟುಹಾಕಲು ಪ್ರಯತ್ನಿಸಿದನು. ಹಿಂದೆ ಭೋಜರಾಜರು ರೈವತಕ ಗಿರಿಯಲ್ಲಿ ಆಡುತ್ತಿರುವಾಗ ಇವನು ಅವರೆಲ್ಲರನ್ನೂ ಹೊಡೆದು, ಬಂಧಿಸಿ ತನ್ನ ನಗರಕ್ಕೆ ಕರೆದೊಯ್ದನು. ರಕ್ಷಣೆಯ ಜೊತೆ ಅಶ್ವಮೇಧದ ಕುದುರೆಯನ್ನು ಇವನ ತಂದೆಯು ಬಿಟ್ಟಾಗ ಈ ಪಾಪನಿಶ್ಚಯಿಯು ಅವನ ಯಜ್ಞಕ್ಕೆ ವಿಘ್ನವನ್ನುಂಟುಮಾಡಲೋಸುಗ ಕುದುರೆಯನ್ನು ಕದ್ದನು. ಸೌವೀರಕ್ಕೆ ಹೋಗುತ್ತಿರುವಾಗ ಇವನು ಯಶಸ್ವಿನಿ ಬಭ್ರುವಿನ ಭಾರ್ಯೆಯನ್ನು ಮೋಹಿಸಿ ಅವಳಿಗೆ ಇಷ್ಟವಿಲ್ಲದಿದ್ದರೂ ಅಪಹರಿಸಿದನು. ತನ್ನ ಮಾವ ಕರೂಷನಿಗೆಂದಿರುವ ತಪಸ್ವಿನೀ ಭದ್ರೆ ವೈಶಾಲಿಯನ್ನು ಇವನು ಮಾಯೆಯ ಮಸುಕನ್ನು ಎಸೆದು ಮೋಸಗೊಳಿಸಿ ಎತ್ತಿಕೊಂಡು ಹೋದನು. ನನ್ನ ಅತ್ತೆಯ ದುಃಖವನ್ನು ನೋಡಿ ಈ ಮಹತ್ತರ ಹಿಂಸೆಯನ್ನು ತಡೆದುಕೊಳ್ಳುತ್ತಿದ್ದೇನೆ. ಅದರೆ ದುರದೃಷ್ಟವಶಾತ್ ಇದು ಈ ಎಲ್ಲ ರಾಜರ ಸಭೆಯಲ್ಲಿ ನಡೆಯುತ್ತಿದೆ. ಇಂದು ಇವನು ನನ್ನ ಕುರಿತು ಮಾಡಿದ ಅತೀವ ವಿರೋಧಗಳನ್ನು ನೋಡಿದ್ದೀರಿ. ಅವನು ಪರೋಕ್ಷವಾಗಿ ನನ್ನ ವಿರುದ್ಧ ಎನೇನು ಮಾಡಿದ್ದಾನೆ ಎನ್ನುವುದನ್ನು ಕೇಳಿ. ಇಂದು ನಡೆಸಿದ ಇವನ ಅತಿಕ್ರಮವನ್ನು ನಾನು ಕ್ಷಮಿಸಲು ಶಕ್ಯನಿಲ್ಲ. ಮತ್ತು ಸಮಗ್ರ ರಾಜಮಂಡಲದಲ್ಲಿ ಮಾಡಿದ ಈ ಅಪಮಾನಕ್ಕೆ ಅವನು ಮರಣಾರ್ಹ. ಸಾವನ್ನು ಬಯಸುತ್ತಿರುವ ಈ ಮೂಢನು ಒಮ್ಮೆ ರುಕ್ಮಿಣಿಯನ್ನು ಕೇಳಿದನು. ಆದರೆ ಮೂಢ ಶೂದ್ರನು ವೇದವನ್ನು ಹೇಗೆ ಕೇಳಲಿಕ್ಕಾಗುವುದಿಲ್ಲವೋ ಹಾಗೆ ಅವಳನ್ನು ಪಡೆಯಲಿಲ್ಲ.”
ಅಲ್ಲಿ ನೆರೆದಿದ್ದ ಸರ್ವ ನರಾಧಿಪರೂ ವಾಸುದೇವನ ಈ ಮಾತುಗಳನ್ನು ಕೇಳಿ ಚೇದಿರಾಜನನ್ನು ನಿಂದಿಸಿದರು. ಆದರೆ ಇದನ್ನು ಪ್ರತಾಪಿ ಶಿಶುಪಾಲನು ಕೇಳಿ ಜೋರಾಗಿ ನಕ್ಕನು ಮತ್ತು ನಗುತ್ತಾ ಹೇಳಿದನು:
“ಕೃಷ್ಣ! ನಿನ್ನವಳಾಗುವುದರ ಮೊದಲು ರುಕ್ಮಿಣಿಯು ಇನ್ನೊಬ್ಬನದ್ದಾಗಿದ್ದಳು ಎಂದು ವಿಶೇಷವಾಗಿ ಈ ಪಾರ್ಥಿವರ ಮುಂದೆ ಹೇಳಿಕೊಳ್ಳಲು ನಿನಗೆ ನಾಚಿಕೆಯಾಗುವುದಿಲ್ಲವೇ? ನಿನ್ನನ್ನು ಹೊರತು ಇನ್ನು ಯಾವ ಗೌರವಾನ್ವಿತ ಪುರುಷನು ತನ್ನ ಸ್ತ್ರೀಯು ತನ್ನ ಮೊದಲು ಇನ್ನೊಬ್ಬನದ್ದಾಗಿದ್ದಳು ಎಂದು ಸತ್ಯಪುರುಷರಲ್ಲಿ ಹೇಳಿಕೊಳ್ಳುತ್ತಾನೆ? ಕ್ಷಮಿಸು ಅಥವಾ ನನ್ನ ಮೇಲೆ ನಂಬಿಕೆಯಿಲ್ಲದಿದ್ದರೆ ಕ್ಷಮಿಸಬೇಡ. ನಿನಗೆ ಸಿಟ್ಟಾದರೂ ಸಂತೋಷವಾದರೂ ನಿನ್ನಿಂದ ನನಗೇನಾಗುವುದಿದೆ?”
ಅವನು ಹೀಗೆ ಮತನಾಡುತ್ತಿದ್ದಾಗಲೇ ಅಮಿತ್ರಕರ್ಶಣ ಭಗವಾನ್ ಮಧುಸೂದನನು ಕೋಪಗೊಂಡು ಚಕ್ರದಿಂದ ಅವನ ಶಿರವನ್ನು ಕತ್ತರಿಸಿದನು. ಆ ಮಹಾಬಾಹುವು ವಜ್ರಹತ ಪರ್ವತದಂತೆ ಕೆಳಗೆ ಬಿದ್ದನು. ಆಗ ಚೇದಿಪತಿಯ ದೇಹದಿಂದ ಆಕಾಶದಲ್ಲಿ ಮೇಲೇರುತ್ತಿರುವ ಭಾಸ್ಕರನಂತೆ ಗುಹ್ಯ ತೇಜಸ್ಸೊಂದು ಹೊರಬಂದು ಆ ತೇಜಸ್ಸು ಕಮಲಪತ್ರಾಕ್ಷ, ಲೋಕನಮಸ್ಕೃತ, ಕೃಷ್ಣನನ್ನು ವಂದಿಸಿ ಅವನನ್ನು ಪ್ರವೇಶಿಸಿದುದನ್ನು ನೃಪರು ನೋಡಿದರು. ಆ ತೇಜಸ್ಸು ಮಹಾಬಾಹು ಪುರುಷೋತ್ತಮನನ್ನು ಪ್ರವೇಶಿಸಿದ ಅದ್ಭುತವನ್ನು ಸರ್ವ ಮಹೀಕ್ಷಿತರೂ ಸಂಪೂರ್ಣವಾಗಿ ನೋಡಿದರು. ಕೃಷ್ಣನು ಚೈದ್ಯನನ್ನು ವಧಿಸುತ್ತಿದ್ದಂತೆ ಮೋಡಗಳಿಲ್ಲದ ಆಕಾಶದಿಂದ ಮಳೆಸುರಿಯಿತು, ಜ್ವಲಿಸುವ ಮಿಂಚುಗಳು ಬಿದ್ದವು ಮತ್ತು ವಸುಂಧರೆಯು ಕಂಪಿಸಿದಳು. ಅಲ್ಲಿ ಕೆಲವು ಮಹೀಪಾಲರು ಏನನ್ನೂ ಮಾತನಾಡದೇ ಇದ್ದರು. ಮತ್ತು ಈ ಅತೀತವಾಕ್ಪಥ (ಮೂಕರನ್ನಾಗಿಸುವ) ಕಾಲದಲ್ಲಿ ಜನಾರ್ದನನ್ನು ನೋಡುತ್ತಲೇ ಇದ್ದರು. ಕೆಲವರು ಅಮರ್ಷಿತರಾಗಿ ಕೈಯಲ್ಲಿ ಕೈಯನ್ನು ತಿಕ್ಕಿದರು. ಇನ್ನು ಕೆಲವರು ಕ್ರೋಧಮೂರ್ಛಿತರಾಗಿ ತುಟಿಗಳನ್ನು ಕಚ್ಚಿದರು. ಕೆಲವು ನರಾಧಿಪರು ಗುಟ್ಟಿನಲ್ಲಿಯೇ ವಾರ್ಷ್ಣೇಯನನ್ನು ಪ್ರಶಂಸಿದರು. ಕೆಲವರು ಸಿಟ್ಟಿಗೆದ್ದರೆ ಇನ್ನು ಕೆಲವರು ಮಧ್ಯಸ್ಥರಾಗಿ ಉಳಿದರು. ಪ್ರಹೃಷ್ಟ ಮಹರ್ಷಿಗಳು, ಮಹಾತ್ಮ ಬ್ರಾಹ್ಮಣರು ಮತ್ತು ಮಹಾಬಲಿ ಪಾರ್ಥಿವರು ಕೇಶವನಿದ್ದಲ್ಲಿಗೆ ಹೋಗಿ ಅವನನ್ನು ಸ್ತುತಿಸಿದರು.
ಪಾಂಡವನು ದಮಘೋಷಾತ್ಮಜ ಆ ವೀರ ಮಹೀಪತಿಯ ಮರಣಕ್ರಿಯೆಗಳನ್ನು ನೆರವೇರಿಸಲು ಹೇಳಿದನು. ಅವನ ಶಾಸನದಂತೆ ಭ್ರಾತೃಗಳು ನಡೆದುಕೊಂಡರು. ಪಾರ್ಥನು ಇತರ ವಸುಧಾಧಿಪರೊಡನೆ ಆ ಮಹೀಪತಿಯ ಪುತ್ರನನ್ನು ಚೇದಿಯ ಅಧಿಪತಿಯನ್ನಾಗಿ ಅಭಿಷೇಕಿಸಿದನು. ನಂತರ ಕುರುರಾಜನ ಸರ್ವಸಮೃದ್ಧ ಕ್ರತುವು ವಿಪುಲ ತೇಜಸ್ಸಿನಿಂದ ನಡೆಯಿತು ಮತ್ತು ಯುವಕರಲ್ಲಿ ಸಂತೋಷವನ್ನು ತಂದಿತು. ಅದರ ವಿಘ್ನವು ಶಾಂತವಾಗಿ, ಸುಖದಿಂದ ಆರಂಭಗೊಂಡು, ಧನಧಾನ್ಯಗಳಿಂದ ಕೂಡಿ, ಅನ್ನ ಮತ್ತು ಬಹುಭಕ್ಷಗಳಿಂದ ಕೂಡಿ, ಕೇಶವನಿಂದ ಸುರಕ್ಷಿತಗೊಂಡಿತು. ಮಹಾಬಾಹು ಜನಾರ್ದನನು ಆ ಮಹಾಕ್ರತು ರಾಜಸೂಯ ಯಜ್ಞವನ್ನು ಸಮಾಪ್ತಗೊಳಿಸಿ, ಶಾಂಗ್ರಚಕ್ರಗದಾಧರ ಶೌರಿಯು ಅವರನ್ನು ರಕ್ಷಿಸಿದನು. ಅವಭೃತನಾತ ಧರ್ಮರಾಜ ಯುಧಿಷ್ಠಿರನನ್ನು ಸಮಸ್ತ ಪಾರ್ಥಿವ ಕ್ಷತ್ರಿಯರು ಸಮೀಪಿಸಿ ಹೇಳಿದರು:
“ಧರ್ಮಜ್ಞ! ಅದೃಷ್ಟವಶಾತ್ ನೀನು ಸಾಮ್ರಾಜ್ಯವನ್ನು ಪಡೆದಿದ್ದೀಯೆ. ನಿನ್ನಿಂದ ಆಜಮೀಢರ ಯಸಸ್ಸು ವೃದ್ಧಿಗೊಂಡಿದೆ. ಈ ಕರ್ಮದಿಂದ ನೀನು ಅತ್ಯುನ್ನತ ಧರ್ಮವನ್ನು ಪ್ರತಿಪಾದಿಸಿದ್ದೀಯೆ! ನಾವು ಹಿಂದಿರುಗುತ್ತೇವೆ! ನಮಗಿಷ್ಟವಾದ ರೀತಿಯಲ್ಲಿ ನಾವು ಸರ್ವರೂ ಸುಪೂಜಿತರಾಗಿದ್ದೇವೆ. ನಾವು ನಮ್ಮ ರಾಷ್ಟ್ರಗಳಿಗೆ ಹೋಗುತ್ತಿದ್ದೇವೆ. ಅನುಜ್ಞೆಯನ್ನು ನೀಡಬೇಕು.”
ರಾಜರ ಈ ಮಾತುಗಳನ್ನು ಕೇಳಿದ ಧರ್ಮರಾಜ ಯುಧಿಷ್ಠಿರನು ನೃಪತಿಗಳನ್ನು ಯಥಾರ್ಹವಾಗಿ ಸತ್ಕರಿಸಿ ತನ್ನ ಸಹೋದರರೆಲ್ಲರಿಗೂ ಹೇಳಿದನು:
“ಈ ಎಲ್ಲ ರಾಜರೂ ನಮ್ಮಮೇಲಿನ ಪ್ರೀತಿಯಿಂದ ಇಲ್ಲಿಗೆ ಬಂದಿದ್ದಾರೆ. ಈ ಪರಂತಪರು ನನ್ನನ್ನು ಬೀಳ್ಕೊಂಡು ತಮ್ಮ ತಮ್ಮ ರಾಷ್ಟ್ರಗಳಿಗೆ ಹೊರಟಿದ್ದಾರೆ. ನಿಮಗೆ ಮಂಗಳವಾಗಲಿ! ಈ ನೃಪೋತ್ತಮರನ್ನು ನಮ್ಮ ದೇಶದ ಗಡಿಯವರೆಗೆ ಬಿಟ್ಟು ಬನ್ನಿ!”
ಧರ್ಮಚಾರಿ ಪಾಂಡವರು ಅಣ್ಣನ ವಚನವನ್ನು ನಡೆಸಿಕೊಟ್ಟರು ಮತ್ತು ನೃಪತಿಮುಖ್ಯರನ್ನು ಒಬ್ಬೊಬ್ಬರನ್ನಾಗಿ ಯಥಾರ್ಹವಾಗಿ ಕಳುಹಿಸಿಕೊಟ್ಟರು. ಪ್ರತಾಪಿ ದೃಷ್ಟದ್ಯುಮ್ನನು ವಿರಾಟನನ್ನು ಕಳುಹಿಸಿಕೊಟ್ಟನು, ಮಹಾರಥಿ ಧನಂಜಯನು ಮಹಾತ್ಮ ಯಜ್ಞಸೇನನನ್ನು, ಮಹಾಬಲಿ ಭೀಮಸೇನನು ಭೀಷ್ಮ ಮತ್ತು ದೃತರಾಷ್ಟ್ರರನ್ನು, ಮಹಾರಥಿ ವೀರ ಸಹದೇವನು ದ್ರೋಣ ಮತ್ತು ಅವನ ಪುತ್ರನನ್ನು, ನಕುಲನು ರಾಜ ಸುಬಲ ಮತ್ತು ಅವನ ಪುತ್ರನೊಂದಿಗೆ ಹೋದನು ಮತ್ತು ದ್ರೌಪದೇಯರು ಸೌಭದ್ರನೊಂದಿಗೆ ಪರ್ವತದ ಮಹೀಪತಿಗಳನ್ನು ಕಳುಹಿಸಿಕೊಟ್ಟರು. ಹೀಗೆ ಕ್ಷತ್ರಿಯರ್ಷಭರು ಅನ್ಯ ಕ್ಷತ್ರಿಯರನ್ನೂ ಅನುಸರಿಸಿ ಹೋದರು. ಸರ್ವ ವಿಪ್ರರೂ ಕೂಡ ಹೀಗೆ ಸಂಪೂಜಿತರಾಗಿ ಹಿಂದಿರುಗಿದರು. ಸರ್ವ ಪಾರ್ಥಿವೇಂದ್ರರು ಹೊರಟು ಹೋದ ನಂತರ ಪ್ರತಾಪಿ ವಾಸುದೇವನು ಯುಧಿಷ್ಠಿರನಿಗೆ ಹೇಳಿದನು:
“ಕುರುನಂದನ! ನಿನ್ನನ್ನು ಬೀಳ್ಕೊಂಡು ನಾನು ದ್ವಾರಕೆಗೆ ಹಿಂದಿರುಗುತ್ತೇನೆ. ಅದೃಷ್ಠವಶಾತ್ ನೀನು ಕ್ರತುಶ್ರೇಷ್ಠ ರಾಜಸೂಯವನ್ನು ಪೂರೈಸಿದ್ದೀಯೆ.”
ಈ ಮಾತುಗಳಿಗೆ ಧರ್ಮರಾಜನು ಮಧುಸೂಧನನಿಗೆ ಹೇಳಿದನು:
“ಗೋವಿಂದ! ನಿನ್ನ ಪ್ರಸಾದದಿಂದಲೇ ನಾನು ಈ ಕ್ರತುವನ್ನು ಪೂರೈಸಲು ಶಕ್ಯನಾಗಿದ್ದೇನೆ. ನಿನ್ನ ಅನುಗ್ರಹದಿಂದ ಸಮಸ್ತ ಕ್ಷತ್ರಿಯ ಪಾರ್ಥಿವರೂ ನನ್ನ ವಶದಲ್ಲಿ ಬಂದು, ಕಪ್ಪ ಕಾಣಿಕೆಗಳನ್ನು ತಂದು ನನ್ನನು ಮುಖ್ಯನನ್ನಾಗಿ ಕಂಡಿದ್ದಾರೆ. ನೀನಿಲ್ಲದೇ ಎಂದೂ ನಾವು ಸಂತೋಷವನ್ನು ಹೊಂದುವುದಿಲ್ಲ. ಆದರೂ ನೀನು ನಿನ್ನ ದ್ವಾರವತೀ ಪುರಿಗೆ ಅವಶ್ಯವಾಗಿಯೂ ಹೋಗಬೇಕು.”
ಇದನ್ನು ಕೇಳಿ ಧರ್ಮಾತ್ಮ ಪೃಥುಯಶ ಹರಿಯು ಯುಧಿಷ್ಠಿರನನ್ನೊಡಗೊಂಡು ಪೃಥೆಯಲ್ಲಿಗೆ ಹೋಗಿ ಪ್ರೀತಿಯಿಂದ ಹೇಳಿದನು:
“ಅತ್ತೆ! ನಿನ್ನ ಮಕ್ಕಳು ಇಂದು ಸಾಮ್ರಾಜ್ಯವನ್ನು ಒಳ್ಳೆಯದಾಗಿ ಪಡೆದು ಸಿದ್ಧಾರ್ಥರೂ ವಸುಮಂತರೂ ಆಗಿದ್ದಾರೆ. ನಿನಗೆ ಸಂತೋಷವಾಗಿರಬಹುದು. ನಿನ್ನಿಂದ ಅನುಜ್ಞೆಯನ್ನು ಪಡೆದು ದ್ವಾರಕೆಗೆ ಹೋಗಲು ಉತ್ಸುಕನಾಗಿದ್ದೇನೆ.”
ಸುಭದ್ರೆ ದ್ರೌಪದಿಯರನ್ನೂ ಕೇಶವನು ಭೇಟಿ ಮಾಡಿ, ಯುಧಿಷ್ಠಿರನ ಸಹಿತ ಅಂತಃಪುರವನ್ನು ಬಿಟ್ಟನು. ಸ್ನಾನಮುಗಿಸಿ, ಜಪವನ್ನು ಮಾಡಿ, ಬ್ರಾಹ್ಮಣರಿಂದ ಸ್ವಸ್ತಿವಾಚಗಳನ್ನು ಕೇಳಿದ ನಂತರ ಸುಂದರ ಮೋಡದಂತೆ ಕಾಣುತ್ತಿದ್ದ ಸುಕಲ್ಪಿತ ರಥವನ್ನು ದಾರುಕನು ಕಟ್ಟಿ ಕೃಷ್ಣನಿದ್ದಲ್ಲಿಗೆ ಬಂದನು. ತಾರ್ಕ್ಷಪ್ರವರಕೇತನವಾದ ರಥವು ಉಪಸ್ಥಿತವಿದ್ದುದನ್ನು ನೋಡಿ ಮಹಾತ್ಮನು ಪ್ರತಕ್ಷಿಣೆಮಾಡಿ ಮೇಲೇರಿ, ಪುಂಡರೀಕಾಕ್ಷನು ದ್ವಾರವತೀ ಪುರಕ್ಕೆ ಪಯಣಿಸಿದನು. ಧರ್ಮರಾಜ ಯುಧಿಷ್ಠಿರನು ಭ್ರಾತೃಗಳ ಸಹಿತ ಕಾಲ್ನಡುಗೆಯಲ್ಲಿ ಶ್ರೀಮಾನ್ ವಾಸುದೇವ ಮಹಾಬಲಿಯನ್ನು ಹಿಂಬಾಲಿಸಿದನು. ಪುಂಡರೀಕಾಕ್ಷ ಸ್ಯಂದನಪ್ರವರ ಹರಿಯು ಸ್ವಲ್ಪ ಸಮಯ ರಥವನ್ನು ನಿಲ್ಲಿಸಿ ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು:
“ವಿಶಾಂಪತೇ! ಪರ್ಜನ್ಯನು ಭೂತಗಳನ್ನು ಮತ್ತು ಮಹಾದ್ರುಮವು ಪಕ್ಷಿಗಳನ್ನು ಹೇಗೋ ಹಾಗೆ ನಿತ್ಯವೂ ಅಪ್ರಮತ್ತನಾಗಿದ್ದು ಪ್ರಜೆಗಳನ್ನು ಪಾಲಿಸು. ಅಮರರು ಸಹಸ್ರಾಕ್ಷನಲ್ಲಿರುವಂತೆ ನಿನ್ನ ಬಾಂಧವರು ನಿನ್ನೊಂದಿಗೆ ಉಪಜೀವಿಸಲಿ.”
ಪರಸ್ಪರರಲ್ಲಿ ಸಂವಿದವನ್ನು ಮಾಡಿಕೊಂಡು ಕೃಷ್ಣ-ಪಾಂಡವರಿಬ್ಬರೂ ಅನ್ಯೋನ್ಯರಿಂದ ಬೀಳ್ಕೊಂಡು ತಮ್ಮ ತಮ್ಮ ಮನೆಗಳ ಕಡೆ ಹೊರಟರು. ಸಾತ್ವತಪ್ರವರ ಕೃಷ್ಣನು ದ್ವಾರವತಿಗೆ ಹೋಗಲು ಅವನ ದಿವ್ಯ ಸಭೆಯಲ್ಲಿ ರಾಜಾ ದುರ್ಯೋಧನ ಮತ್ತು ಸೌಬಲ ಶಕುನಿ - ಈ ನರರ್ಷಭರಿಬ್ಬರು ಉಳಿದುಕೊಂಡರು.