Image result for flowers against white backgroundಪಾಂಡವ ದಿಗ್ವಿಜಯ

ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಬತ್ತಳಿಕೆಗಳು, ರಥ, ಮತ್ತು ಧ್ವಜಗಳನ್ನು ಪಡೆದ ಮಹೇಷುಧಿ ಪಾರ್ಥನು ಸಭೆಯಲ್ಲಿ ಯುಧಿಷ್ಠಿರನಿಗೆ ಹೇಳಿದನು: 

“ರಾಜನ್! ಬಯಸಿದರೂ ಪಡೆಯಲು ದುಷ್ಕರವಾದ ಧನಸ್ಸು, ಅಸ್ತ್ರ, ಬಾಣ, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಗಳಿಸಿದ್ದೇನೆ. ಈಗ ನಮ್ಮ ಕೋಶವನ್ನು ವೃದ್ಧಿಗೊಳಿಸುವ ಕೃತ್ಯವನ್ನು ಮಾಡಬೇಕೆಂದು ನನ್ನ ಅಭಿಪ್ರಾಯ. ಎಲ್ಲ ರಾಜರುಗಳಿಂದ ಕರ-ಕಪ್ಪಗಳನ್ನು ತರುತ್ತೇನೆ. ಶುಭ ತಿಥಿ, ಮುಹೂರ್ತ ಮತ್ತು ನಕ್ಷತ್ರದಲ್ಲಿ ವಿಜಯಕ್ಕಾಗಿ ಧನರಾಜನಿಂದ ರಕ್ಷಿತ ದಿಕ್ಕಿಗೆ ಹೊರಡುತ್ತೇನೆ.” 

ಧನಂಜಯನ ಮಾತುಗಳನ್ನು ಕೇಳಿದ ಧರ್ಮರಾಜ ಯುಧಿಷ್ಠಿರನು ಪ್ರೀತಿ ಮತ್ತು ಗಂಭೀರಧ್ವನಿಯಲ್ಲಿ ಈ ಮಾತುಗಳನ್ನಾಡಿದನು: 

“ಭರತರ್ಷಭ! ಶತ್ರುಗಳಿಗೆ ದುಃಖವನ್ನು ತರಲು ಮತ್ತು ಸುಹೃದಯರಿಗೆ ಸಂತೋಷವನ್ನು ತರಲು ಅರ್ಹ ವಿಪ್ರರ ಸ್ವಸ್ತಿವಾಚನಗಳೊಂದಿಗೆ ಹೊರಡು. ನಿನಗೆ ವಿಜಯವು ನಿಶ್ಚಯವಾದದ್ದು. ನಿನ್ನ ಪ್ರಿಯಕಾಮಗಳೆಲ್ಲವನ್ನೂ ಪಡೆಯುತ್ತೀಯೆ!”

ಇದನ್ನು ಕೇಳಿ ಪಾರ್ಥನು ಮಹಾ ಸೇನೆಯೊಂದಿಗೆ ಅಗ್ನಿದತ್ತ ಅದ್ಭುತಕರ್ಮಿ ದಿವ್ಯ ರಥದಲ್ಲಿ ಹೊರಟನು. ಹಾಗೆಯೇ ಭೀಮಸೇನ ಮತ್ತು ಯಮಳ ಪುರುಷರ್ಷಭರೀರ್ವರೆಲ್ಲರೂ ಸೈನ್ಯಗಳೊಂದಿಗೆ ಧರ್ಮರಾಜನ ಆಶೀರ್ವಾದದೊಂದಿಗೆ ಹೊರಟರು. ಧನಪತಿಯ ಇಷ್ಟದಿಶವನ್ನು ಪಾಕಶಾಸನಿಯು ಜಯಿಸಿದನು, ಹಾಗೆಯೇ ಭೀಮಸೇನನು ಪೂರ್ವ, ಸಹದೇವನು ದಕ್ಷಿಣ ಮತ್ತು ಅಸ್ತ್ರವಿದುಶಿ ನಕುಲನು ಪಶ್ಚಿಮ ದಿಕ್ಕುಗಳನ್ನು ಜಯಿಸಿದರು. ಧರ್ಮರಾಜ ಯುಧಿಷ್ಠಿರನು ಮಧ್ಯದಲ್ಲಿದ್ದ ಖಾಂಡವಪ್ರಸ್ಥದಲ್ಲಿಯೇ ಉಳಿದುಕೊಂಡನು. ಪಾರ್ಥರು ಒಂದೇ ವೇಳೆಯಲ್ಲಿ ವಸುಂಧರೆಯನ್ನು ಜಯಿಸಿದರು.

ಅರ್ಜುನನ ಉತ್ತರ ದಿಗ್ವಿಜಯ

ಮೊಟ್ಟಮೊದಲನೆಯದಾಗಿ ಮಹಾಬಾಹು ಧನಂಜಯನು ಕುಣಿಂದ ದೇಶದ ಮಹೀಪತಿಗಳನ್ನು ವಶೀಕರಿಸಿದನು. ಅನಾರ್ತ, ಕಾಲಕೂಟ ಮತ್ತು ಕುಣಿಂದರನ್ನು ಜಯಿಸಿ, ಆ ಪಾಪಜಿತನು ಸುಮಂಡಲನನ್ನು ತನ್ನ ಅನುಸೈನಿಕನನ್ನಾಗಿ ಮಾಡಿದನು. ಅವನೊಂದಿಗೆ ಸವ್ಯಸಾಚೀ ಪರಂತಪನು ಸಕಲ ದ್ವೀಪವನ್ನು ಮತ್ತು ಸಕಲದ್ವೀಪವಾಸಿ ಪಾರ್ಥಿವ ಪ್ರತಿವಿಂಧ್ಯನನ್ನು ಜಯಿಸಿದನು. ಏಳು ದ್ವೀಪಗಳ ನೃಪರ ಮತ್ತು ಅರ್ಜುನನ ಸೇನೆಗಳ ಮಧ್ಯೆ ತುಮುಲ ಯುದ್ಧವೇ ನಡೆಯಿತು. ಅವರನ್ನು ಜಯಿಸಿದ ಆ ಮಹೇಷ್ವಾಸನು ಅವರೆಲ್ಲರ ಸಹಿತ ಪ್ರಾಗ್ಜ್ಯೋತಿಷ ಪುರದ ಮೇಲೆ ಆಕ್ರಮಣ ಮಾಡಿದನು. ಅಲ್ಲಿಯ ಮಹಾರಾಜ ಭಗದತ್ತನೊಂದಿಗೆ ಮಹಾತ್ಮ ಪಾಂಡವನ ಮಹಾಯುದ್ಧವಾಯಿತು. ಪ್ರಾಗ್ಜ್ಯೋತಿಷವು ಕಿರಾತ ಮತ್ತು ಚೀನರಿಂದ ಹಾಗೂ ಸಾಗರ ಮಡುವಿನಲ್ಲಿ ವಾಸಿಸುತ್ತಿದ್ದ ಇನ್ನೂ ಇತರ ಬಹಳಷ್ಟು ಯೋದ್ಧರಿಂದ ಸುತ್ತುವರೆಯಲ್ಪಟ್ಟಿತ್ತು. ಧನಂಜಯನೊಡನೆ ಎಂಟು ದಿನಗಳು ಯುದ್ಧಮಾಡಿದ ಆ ರಾಜನು ರಣರಂಗದಲ್ಲಿ ಅಯಾಸಹೊಂದದೇ ಮುಗುಳ್ನಗುತ್ತಾ ಹೇಳಿದನು:

“ಮಹಾಬಾಹು ಪಾಂಡವನಂದನ! ಪಾಕಶಾಸನ ದಾಯಾದಿ! ಯುದ್ಧದಲ್ಲಿ ಶೋಭಿಸುವ ನಿನ್ನ ಈ ವೀರ್ಯವು ಯಾವುದಕ್ಕೂ ಕಡಿಮೆಯಿಲ್ಲ. ಸುರೇಂದ್ರನ ಸಖನಾದ ನಾನು ರಣದಲ್ಲಿ ಶಕ್ರನನಿಗೆ ಸರಿಸಮ. ಆದರೂ ಯುದ್ಧದಲ್ಲಿ ನಿನ್ನನ್ನು ಎದುರಿಸಲು ಸಾಧ್ಯವಿಲ್ಲ! ನಿನಗಾಗಿ ನಾನು ಏನುಮಾಡಬೇಕೆಂದು ಬಯಸುತ್ತೀಯೆ ಹೇಳು! ನನಗೆ ಕೇಳಿದ್ದುದನ್ನು ಮಾಡಿಕೊಡುತ್ತೇನೆ.”

ಅರ್ಜುನನು ಹೇಳಿದನು:

“ಕುರುವೃಷಭ ಧರ್ಮಪುತ್ರ ರಾಜಾ ಯುಧಿಷ್ಠಿರನನ್ನು ಪಾರ್ಥಿವನೆಂದು ಪರಿಗಣಿಸಿ ಅವನಿಗೆ ಕರವನ್ನು ಕೊಡಬೇಕೆಂಬುದೇ ನನ್ನ ಇಚ್ಛೆ. ನೀನು ನನ್ನ ತಂದೆಯ ಮಿತ್ರ ಮತ್ತು ನನ್ನ ಮೇಲೆಯೂ ಪ್ರೀತಿಯನ್ನು ತೋರಿಸುತ್ತಿದ್ದೀಯೆ. ಆದುದರಿಂದ ನಾನು ನಿನಗೆ ಆಜ್ಞೆಯನ್ನು ಮಾಡುತ್ತಿಲ್ಲ. ಪ್ರೀತಿಪೂರ್ವಕವಾಗಿ ಕೊಡು.”

ಭಗದತ್ತನು ಹೇಳಿದನು:

“ಕುಂತಿಯ ಮಗನಾದ ನೀನು ನನಗೆ ಹೇಗೋ ಹಾಗೆ ರಾಜ ಯುಧಿಷ್ಠಿರನು ಕೂಡ ಹೌದು. ಎಲ್ಲವನ್ನೂ ಮಾಡುತ್ತೇನೆ. ನಿನಗಾಗಿ ಬೇರೆ ಏನನ್ನು ಮಾಡಬೇಕು?”

ಅವನನ್ನು ಜಯಿಸಿದ ಮಹಾಬಾಹು ಕುಂತೀಪುತ್ರ ಧನಂಜಯನು ಧನದನು ಪಾಲಿಸುವ ಉತ್ತರ ದಿಶೆಯಲ್ಲಿ ಹೊರಟನು. ಪುರುಷರ್ಷಭ ಕೌಂತೇಯನು ಒಳಗಿನ ಪರ್ವತಗಳನ್ನು, ಹೊರಗಿನ ಪರ್ವತಪ್ರದೇಶಗಳನ್ನು ಮತ್ತು ಮೇಲಿನ ಪರ್ವತಗಳನ್ನು ಜಯಿಸಿದನು. ಆ ಎಲ್ಲ ಪರ್ವತಗಳನ್ನೂ ಗೆದ್ದು ಅಲ್ಲಿಯ ನರಾಧಿಪರೆಲ್ಲರನ್ನೂ ತನ್ನ ವಶದಲ್ಲಿ ಪಡೆದುಕೊಂಡು ಅವರ ಸಂಪತ್ತುಗಳನ್ನೆಲ್ಲವನ್ನೂ ತನ್ನದಾಗಿಸಿಕೊಂಡನು. ಆ ಎಲ್ಲ ನೃಪರನ್ನೊಡಗೂಡಿ ಕುಲೂತವಾಸಿ ರಾಜ ಬೃಹಂತನ ಮೇಲೆ ಭೂಮಿಯನ್ನು ನಡುಗಿಸುವ ಮೃದಂಗ ವಾದ್ಯಗಳಿಂದ, ರಥಗಳ ಧ್ವನಿಯಿಂದ, ಅನೆಗಳ ನಿನಾದದಿಂದ ಕೂಡಿ ಆಕ್ರಮಣ ಮಾಡಿದನು. ಆಗ ತರುಣ ಬೃಹಂತನು ಚತುರಂಗ ಬಲದೊಂದಿಗೆ ನಗರದ ಹೊರಬಂದು ಪಾಂಡವನೊಂದಿಗೆ ಯುದ್ಧ ಮಾಡಿದನು. ಧನಂಜಯ ಬೃಹಂತರ ಮಧ್ಯೆ ಮಹಾ ಕಾಳಗವೇ ನಡೆಯಿತು. ಆದರೆ ಬೃಹಂತನು ಪಾಂಡವನ ವಿಕ್ರಮವನ್ನು ಎದುರಿಸಲು ಅಶಕ್ತನಾದನು. ಕೌಂತೇಯನನ್ನು ಸೋಲಿಸಲಿಕ್ಕಾಗುವುದಿಲ್ಲ ಎಂದು ತಿಳಿದ ಆ ಪರ್ವತೇಶ್ವರನು ತನ್ನ ಸರ್ವ ಸಂಪತ್ತನ್ನೂ ತಂದೊಪ್ಪಿಸಿದನು. ಆ ರಾಜ್ಯವನ್ನು ಪಡೆಹು ಕುಲೂತನೊಂದಿಗೆ ಹೊರಟು, ಸೇನಾಬಿಂದುವನ್ನು ಅವನ ರಾಜ್ಯಭ್ರಷ್ಟನನ್ನಾಗಿ ಮಾಡಿದನು. ಅವನು ಮೋದಾಪುರ, ವಾಮದೇವ, ಸುದಾಮರೊಡನೆ ಉತ್ತರ ಕುಲೂತದ ಸರ್ವ ರಾಜಕುಲಗಳನ್ನು ತನ್ನದಾಗಿಸಿಕೊಂಡನು. ಧರ್ಮರಾಜನ ಶಾಸನದಂತೆ ಅಲ್ಲಿಯೇ ತಂಗಿ ಧನಂಜಯನು ತನ್ನ ಸೇನೆಯಿಂದ ಐದು ದೇಶಗಳನ್ನು ಗೆದ್ದನು. ಸೇನಬಿಂದುವಿನ ಮಹಾ ಪುರ ದಿವಃಪ್ರಸ್ಥವನ್ನು ತಲುಪಿ ಆ ಪ್ರಭುವು ಅದನ್ನೇ ತನ್ನ ಚತುರಂಗಬಲದ ತಂಗುದಾಣವನ್ನಾಗಿ ಮಾಡಿದನು. ಅವರೆಲ್ಲರಿಂದ ಪರಿವೃತನಾಗಿ ಆ ಮಹಾತೇಜಸ್ವಿ ಪುರುಷರ್ಷಭನು ನರಾಧಿಪ ಪೌರವ ವಿಶ್ವಗಶ್ವನಲ್ಲಿಗೆ ಹೋಗಿ ಶೂರ ಮಹಾರಥಿ ಪರ್ವತ ಜನರನ್ನು ತನ್ನ ಧ್ವಜಯುಕ್ತ ಸೇನೆಯಿಂದ ಗೆದ್ದು ಪೌರವರಕ್ಷಿತ ಪುರವನ್ನು ಗೆದ್ದನು. ಪೌರವನನ್ನು ಸೋಲಿಸಿದ ನಂತರ ಪಾಂಡವನು ಪರ್ವತವಾಸಿ ಏಳು ದಸ್ಯುಗಣ ಉತ್ಸವಸಂಕೇತಕರನ್ನು ಗೆದ್ದನು. ಅನಂತರ ಕ್ಷತ್ರಿಯರ್ಷಭನು ಅವರ ಹತ್ತು ಮಂಡಲಗಳೊಂದಿಗೆ ವೀರ ಕಾಶ್ಮೀರಕ ಮತ್ತು ಲೋಹಿತ ಕ್ಷತ್ರಿಯರನ್ನು ಜಯಿಸಿದನು. ಹಾಗೆಯೇ ತ್ರಿಗರ್ತರನ್ನು, ದಾರ್ವರನ್ನು, ಕೋಕನದರನ್ನು ಮತ್ತು ಇನ್ನೂ ಅವನೊಂದಿಗೆ ಹೋರಾಡಿದ ಬಹಳ ಕ್ಷತ್ರಿಯರೆಲ್ಲರನ್ನೂ ಕೌಂತೇಯನು ಗೆದ್ದನು. ಕುರುನಂದನನು ರಮ್ಯ ನಗರಿ ಅಭಿಸಾರಿಯನ್ನು ಮುತ್ತಿ, ಉರಶವಾಸಿ ರೋಚಮಾನನನ್ನು ರಣದಲ್ಲಿ ಗೆದ್ದನು. ಅನಂತರ ಪಾಕಶಾಸನಿಯು ಚಿತ್ರಾಯುಧನಿಂದ ಸುರಕ್ಷಿತ ರಮ್ಯ ಸಿಂಹಪುರವನ್ನು ತನ್ನ ಅತಿ ದೊಡ್ಡ ಬಲದಿಂದ ಗೆದ್ದನು. ನಂತರ ಕಿರೀಟೀ ಪಾಂಡವರ್ಷಭ ಕುರುನಂದನನು ತನ್ನ ಸರ್ವ ಸೈನ್ಯದಿಂದ ಸುಹ್ಮರು ಮತ್ತು ಚೋಲರನ್ನು ಗೆದ್ದನು. ಅನಂತರ ಪರಮವಿಕ್ರಾಂತ ಕುರುನಂದನನು ದುರಾಸದ ಬಾಹ್ಲೀಕರನ್ನು ತನ್ನ ಮಹಾ ಶಕ್ತಿಯೊಂದಿಗೆ ವಶಮಾಡಿಕೊಂಡನು. ಪಾಕಶಾಸನಿ ಪಾಂಡವನು ಅವರ ಬಲವನ್ನು ಕಿತ್ತುಕೊಂಡು ಕಡಿಮೆಯಿದ್ದಿದ್ದ ಸಂಪನ್ಮೂಲಗಳನ್ನು ಅಲ್ಲಿಯೇ ಬಿಟ್ಟು ದರದರೊಂದಿಗೆ ಕಾಂಬೋಜರನ್ನು ಜಯಿಸಿದನು. ಇಂದ್ರನ ಮಗ ಪ್ರಭುವು ಪೂರ್ವೋತ್ತರ ದಿಕ್ಕಿನಲ್ಲಿ ವಾಸಿಸುವ ದಸ್ಯುಗಳನ್ನು ಮತ್ತು ವನಗಳಲ್ಲಿ ವಾಸಿಸುತ್ತಿರುವವರನ್ನು ಸೋಲಿಸಿದನು. ಅನಂತರ ಪಾಕಶಾಸನಿಯು ಲೋಹರನ್ನು, ಮೇಲಿನ ಕಾಂಬೋಜರನ್ನು, ಮತ್ತು ಉತ್ತರದ ಋಷಿಕರನ್ನು ಒಟ್ಟಿಗೇ ಗೆದ್ದನು. ಋಷಿಕದಲ್ಲಿ ಮೇಲಿನ ಋಷಿಕರು ಮತ್ತು ಪಾರ್ಥನ ನಡುವೆ ನಡೆದ ಯುದ್ಧವು ತಾರಕನೊಂದಿಗೆ ನಡೆದ ಯುದ್ಧದಂತೆ ಅತಿ ಭಯಂಕರವಾಗಿತ್ತು. ರಣದಲ್ಲಿ ಋಷಿಕರನ್ನು ಜಯಿಸಿದ ನಂತರ ಅವನು ಗಿಳಿಯ ಹೊಟ್ಟೆಯ ಬಣ್ಣದ ಎಂಟು ಮತ್ತು ನವಿಲಿನ ಬಣ್ಣದ ಇನ್ನೂ ಇತರ ಕುದುರೆಗಳನ್ನು ವಶಪಡಿಸಿಕೊಂಡನು. ನಿಷ್ಕುಟದೊಂದಿಗೆ ಹಿಮವತ್ಪರ್ವತವನ್ನು ಸಂಗ್ರಾಮದಲ್ಲಿ ಗೆದ್ದು ಪುರುಷರ್ಷಭನು ಶ್ವೇತಪರ್ವವನ್ನು ಸೇರಿ ಅಲ್ಲಿ ಬೀಡು ಬಿಟ್ಟನು.

ಶ್ವೇತಪರ್ವತವನ್ನು ದಾಟಿ ಆ ವೀರನು ದ್ರುಮಪುತ್ರನಿಂದ ರಕ್ಷಿತ ಕಿಂಪುರುಷರು ವಾಸಿಸುತ್ತಿದ್ದ ದೇಶಕ್ಕೆ ಬಂದನು. ಹಲವಾರು ಕ್ಷತ್ರಿಯರು ತಮ್ಮ ಅಂತ್ಯವನ್ನು ಕಂಡ ಆ ಮಹಾ ಯುದ್ಧದಲ್ಲಿ ಪಾಂಡವಶ್ರೇಷ್ಠನು ಅದನ್ನು ಗೆದ್ದು ಕರವನ್ನು ಪಡೆದುಕೊಂಡನು. ಗುಹ್ಯಕರಿಂದ ರಕ್ಷಿತ ಹಾಟಕ ಎಂಬ ಹೆಸರಿನ ದೇಶವನ್ನು ಗೆದ್ದು ನಿರವ್ಯಗ್ರ ಪಾಕಶಾಸನಿಯು ಸೈನ್ಯದೊಂದಿಗೆ ಅಲ್ಲಿ ನೆಲಸಿದನು. ಸಾಂತ್ವನದಿಂದ ಅವರನ್ನು ಗೆದ್ದು ಕುರುನಂದನನು ಋಷಿಕುಂಜರಗಳಿಂದ ಕೂಡಿದ್ದ ಉತ್ತಮ ಮಾನಸ ಸರೋವರವನ್ನು ಕಂಡನು. ಮಾನಸ ಸರೋವರವನ್ನು ತಲುಪಿ ಪ್ರಭು ಪಾಂಡವನು ಹಾಟಕದ ಬಳಿಯಿರುವ ಗಂಧರ್ವರಿಂದ ರಕ್ಷಿತ ದೇಶವನ್ನು ಗೆದ್ದನು. ಅಲ್ಲಿ ಗಂಧರ್ವ ನಗರದಲ್ಲಿ ಅವನು ತಿತ್ತಿರಿ ಬಣ್ಣದ ಕಪ್ಪೆಯಂತೆ ಕಣ್ಣುಗಳನ್ನು ಹೊಂದಿದ್ದ ಉತ್ತಮ ಕುದುರೆಗಳನ್ನು ಇನ್ನೂ ಇತರ ಕಾಣಿಕೆಗಳನ್ನು ಪಡೆದನು. ಅನಂತರ ಪಾಕಶಾಸನ ನಂದನ ಪಾಂಡವನು ಉತ್ತರ ಹರಿವರ್ಷವನ್ನು ತಲುಪಿ ಆ ದೇಶವನ್ನು ಗೆಲ್ಲಲು ಬಯಸಿದನು. ಅಲ್ಲಿ ಮಹಾಕಾಯ, ಮಹಾವೀರ, ಮಹಾಬಲ ದ್ವಾರಪಾಲಕರು ಅವನ ಹತ್ತಿರ ಬಂದು ಸಂತೋಷದಿಂದ ಈ ಮಾತುಗಳನ್ನಾಡಿದರು:

“ಪಾರ್ಥ! ಯಾವ ರೀತಿಯಿಂದಲೂ ಈ ಪುರವನ್ನು ಜಯಿಸಲು ನೀನು ಶಕ್ಯನಿಲ್ಲ. ಹಿಂದಿರುಗು! ಇದೇ ನಿನಗೆ ಒಳ್ಳೆಯದಾಗುತ್ತದೆ! ಈ ಪುರವನ್ನು ಪ್ರವೇಶಿಸುವ ಯಾವ ನರನೂ ಸಾಯಲೇ ಬೇಕು. ನಾವು ನಿನ್ನ ಮೇಲೆ ಪ್ರೀತಿಯನ್ನು ತೋರಿಸುತ್ತಿದ್ದೇವೆ. ನಿನ್ನ ವಿಜಯವನ್ನು ಇನ್ನು ಸಾಕುಮಾಡು. ನೀನು ಜಯಿಸಬೇಕಾದ್ದುದು ಇನ್ನು ಯಾವುದೂ ಉಳಿದಿಲ್ಲ. ಇದು ಉತ್ತರ ಕುರುಗಳ ರಾಷ್ರ ಮತ್ತು ಇಲ್ಲಿ ಯುದ್ಧ ಯಾವುದೂ ನಡೆಯುವುದಿಲ್ಲ. ಒಂದು ವೇಳೆ ನೀನು ಇದನ್ನು ಪ್ರವೇಶಿಸಿದರೂ ನಿನಗೆ ಏನೂ ಕಾಣುವುದಿಲ್ಲ. ಯಾಕೆಂದರೆ ಇಲ್ಲಿರುವ ಏನನ್ನು ನೋಡಲು ಮನುಷ್ಯನಿಗೆ ಶಕ್ಯವಿಲ್ಲ. ಆದರೆ ಇಲ್ಲಿ ಇನ್ನೇನನ್ನಾದರನ್ನೂ ಮಾಡಲು ಬಯಸುವೆಯಾದರೆ ಹೇಳು. ನಿನ್ನ ಮಾತನ್ನು ನಡೆಸಿಕೊಡುತ್ತೇವೆ.”

ಈ ಮಾತುಗಳಿಗೆ ಪಾಕಶಾಸನಿ ಅರ್ಜುನನು ಹೇಳಿದನು:

“ಧೀಮಂತ ಧರ್ಮರಾಜನು ಪಾರ್ಥಿವತ್ವವನ್ನು ಬಯಸಿದ್ದಾನೆ. ಮನುಷ್ಯರಿಗೆ ಬಾಧ್ಯತ ನಿಮ್ಮ ದೇಶವನ್ನು ನಾನು ಪ್ರವೇಶಿಸುವುದಿಲ್ಲ. ಆದರೆ ಯುಧಿಷ್ಠಿರನಿಗೆ ಕರದ ರೂಪದಲ್ಲಿ ಏನನ್ನಾದರೂ ಕೊಡಬೇಕು.”

ಆಗ ಅವರು ದಿವ್ಯ ವಸ್ತ್ರಗಳನ್ನು, ದಿವ್ಯ ಆಭರಣಗಳನ್ನೂ, ದಿವ್ಯ ಚರ್ಮಗಳನ್ನೂ ಕರವಾಗಿ ಅವನಿಗೆ ನೀಡಿದರು. ಈ ರೀತಿ ಪುರುಷವ್ಯಾಘ್ರನು ಉತ್ತರ ದಿಶವನ್ನು ಗೆದ್ದು, ಕ್ಷತ್ರಿಯರು ಮತ್ತು ದಸ್ಯುಗಳೊಂದಿಗೆ ಬಹಳಷ್ಟು ಸಂಗ್ರಾಮಗಳನ್ನು ನಡೆಸಿ ಆ ರಾಜರನ್ನು ಗೆದ್ದು ಅವರು ಕರವನ್ನು ಕೊಡುವಂತೆ ಮಾಡಿ, ಅವರೆಲ್ಲರಿಂದ ವಿವಿಧ ಧನ, ರತ್ನಗಳು, ಚಿಟ್ಟೆಗಳ ಬಣ್ಣಗಳ ನವಿಲು ಮತ್ತು ಗಿಳಿಗಳ ರೆಕ್ಕೆಗಳ ಬಣ್ಣಗಳ, ಎಲ್ಲವೂ ವಾಯುವೇಗದ ಕುದುರೆಗಳನ್ನು ಪಡೆದನು. ಮಹತ್ತರ ಚತುರಂಗ ಬಲದಿಂದೊಡಗೂಡಿ ಆ ವೀರನು ಉತ್ತಮ ಶಕ್ರಪ್ರಸ್ಥ ಪುರವನ್ನು ಪುನಃ ಪ್ರವೇಶಿಸಿದನು.

ಭೀಮಸೇನನ ಪೂರ್ವ ದಿಗ್ವಿಜಯ

ಇದೇ ಸಮಯದಲ್ಲಿ ವೀರ್ಯವಾನ್ ಭೀಮಸೇನನು ಧರ್ಮರಾಜನ ಅನುಮತಿಯನ್ನು ಪಡೆದು ಪೂರ್ವದಿಕ್ಕಿನ ಕಡೆ ಹೊರಟನು. ಪರರಾಷ್ಟ್ರಗಳನ್ನು ಸದೆಬಡಿಯುವ ಮಹಾ ಬಲಚಕ್ರದಿಂದೊಡಗೂಡಿ ಶತ್ರುಗಳ ಶೋಕವನ್ನು ವೃದ್ಧಿಸುತ್ತಾ ಆ ಭರತಶಾರ್ದೂಲನು ಮುಂದುವರೆದನು. ಆ ರಾಜಶಾರ್ದೂಲ ಪಾಂಡವನು ಮೊದಲಿಗೆ ಪಾಂಚಾಲರ ಪುರಕ್ಕೆ ಹೋಗಿ ವಿವಿಧ ಉಪಾಯಗಳಿಂದ ಪಾಂಚಾಲರನ್ನು ಒಲಿಸಿದನು. ನರರ್ಷಭ ಶೂರ ಪ್ರಭುವು ಕಂಡಕೀ ಮತ್ತು ವಿದೇಹರನ್ನು ಜಯಿಸಿ ಸ್ವಲ್ಪವೇ ಸಮಯದಲ್ಲಿ ದಶಾರ್ಣರ ಮೇಲೆ ಎರಗಿದನು. ಅಲ್ಲಿ ದಾಶಾರ್ಣಕ ರಾಜಾ ಸುಧರ್ಮನು ಭೀಮನೊಂದಿಗೆ ನಿರಾಯುಧ, ನವಿರೇಳಿಸುವ ಮಹಾಯುದ್ಧವನ್ನು ನಡೆಯಿಸಿದನು. ಅವನ ಈ ಕಾರ್ಯವನ್ನು ನೋಡಿದ ಪರಂತಪ ಭೀಮಸೇನನು ಮಹಾಬಲ ಸುಧರ್ಮನನ್ನು ತನ್ನ ಸೇನಾಪತಿಯನ್ನಾಗಿ ನಿಯುಕ್ತಿಸಿದನು. ಅನಂತರ ಭೀಮಪರಾಕ್ರಮಿ ಭೀಮನು ತನ್ನ ಮಹಾಸೈನ್ಯದಿಂದ ಮೇದಿನಿಯನ್ನು ನಡುಗಿಸುತ್ತಾ ಪೂರ್ವದಿಕ್ಕಿನಲ್ಲಿ ಹೊರಟನು. ಆ ಬಲಿಗಳಲ್ಲಿ ಶ್ರೇಷ್ಠ ವೀರನು ಅಶ್ವಮೇಧೇಶ್ವರ ರೋಚಮಾನನನ್ನು ಅವನ ಅನುಜನೊಂದಿಗೆ ಸಮರದಲ್ಲಿ ಬಲದೊಂದಿಗೆ ಗೆದ್ದನು. ಅಷ್ಟೊಂದು ತೀವ್ರವಾಗಿಲ್ಲದ ಯುದ್ಧದಲ್ಲಿಯೇ ಅವನನ್ನು ಸೋಲಿಸಿ ಮಹಾವೀರ ಕುರುನಂದನ ಕೌಂತೇಯನು ಪೂರ್ವದೇಶವನ್ನು ಗೆದ್ದನು. ಅನಂತರ ದಕ್ಷಿಣದಲ್ಲಿ ಮಹಾ ಪುನಿಂದ ನಗರಕ್ಕೆ ಸೇರಿ ಸುಕುಮಾರ ಮತ್ತು ನರಾಧಿಪ ಸುಮಿತ್ರನನ್ನು ಗೆದ್ದನು. ನಂತರ ಧರ್ಮರಾಜನ ಶಾಸನದಂತೆ ಭರತರ್ಷಭನು ಮಹಾವೀರ ಶಿಶುಪಾಲನಲ್ಲಿಗೆ ಹೋದನು. ಪಾಂಡವನ ಇಚ್ಛೆಯನ್ನು ಕೇಳಿದ ಚೇದಿರಾಜನು ನಗರದಿಂದ ಹೊರಬಂದು ಆ ಪರಂತಪನನ್ನು ಬರಮಾಡಿಕೊಂಡನು. ಕುರು ಮತ್ತು ಚೇದಿ ವೃಷಭರೀರ್ವರು ಭೇಟಿಯಾದಾಗ ತಮ್ಮ ಎರಡೂ ಕುಲಗಳ ಕುಶಲವನ್ನು ಪರಸ್ಪರರರಲ್ಲಿ ಕೇಳಿದರು. ಚೇದಿರಾಜನು ತನ್ನ ರಾಜ್ಯವನ್ನು ಅವನಿಗೆ ಸಮರ್ಪಿಸಿ ನಗುತ್ತಾ ಭೀಮನಿಗೆ ಕೇಳಿದನು:

“ಅನಘ! ಇದೇನು ನೀನು ಮಾಡುತ್ತಿರುವೆ?”

ಆಗ ಭೀಮನು ಅವನಿಗೆ ಧರ್ಮರಾಜನ ಬಯಕೆಯ ಕುರಿತು ಹೇಳಿದನು. ಅದನ್ನು ಒಪ್ಪಿಕೊಂಡ ನರಾಧಿಪನು ಅದಕ್ಕೆ ತಕ್ಕುದಾಗಿ ನಡೆದುಕೊಂಡನು. ಭೀಮನು ಅಲ್ಲಿ ಶಿಶುಪಾಲನಿಂದ ಸತ್ಕೃತನಾಗಿ ಸೇನೆ ವಾಹನಗಳೊಂದಿಗೆ ಮೂವತ್ತು ರಾತ್ರಿಗಳನ್ನು ಕಳೆದನು.

ಅನಂತರ ಆ ಅರಿಂದಮನು ಕುಮಾರ ದೇಶದ ಶ್ರೇಣಿಮಂತ ಮತ್ತು ಕೋಸಲಾಧಿಪತಿ ಬೃಹದ್ಬಲನನ್ನು ಗೆದ್ದನು. ಪಾಂಡವಶ್ರೇಷ್ಠನು ಅಷ್ಟೇನೂ ಕಷ್ಟವಿಲ್ಲದೇ ಅಯೋಧ್ಯೆಯ ಧರ್ಮಜ್ಞ ಮಹಾಬಲಿ ದೀರ್ಘಪ್ರಜ್ಞನನ್ನು ಗೆದ್ದನು. ಅನಂತರ ಪ್ರಭುವು ಗೋಪಾಲಕಚ್ಛ, ಉತ್ತರ ಸೋತ್ತಮರನ್ನು ಮತ್ತು ಮಲ್ಲರ ಅಧಿಪತಿ ಪಾರ್ಥಿವನನ್ನು ಜಯಿಸಿದನು. ಹಿಮಾಲಯದ ತಪ್ಪಲಿನಲ್ಲಿ ಜರದ್ಗವನನ್ನು ಎದುರಿಸಿ ಸ್ವಲ್ಪವೇ ಸಮಯದಲ್ಲಿ ಇಡೀ ದೇಶವನ್ನು ಬಲವಂತವಾಗಿ ತನ್ನ ವಶಪಡಿಸಿಕೊಂಡನು. ಈ ರೀತಿ ಹಲವಾರು ದೇಶಗಳನ್ನು ಗೆದ್ದು ಆ ಪುರುಷರ್ಷಭ, ಬಲಶಾಲಿಗಳಲ್ಲಿ ಶ್ರೇಷ್ಠ ಪಾಂಡವನು ಉನ್ನಾಟವನ್ನು ಗೆದ್ದು ಪರ್ವತ ಕುಕ್ಷಿಮಂತವನ್ನು ಬಲವಂತವಾಗಿ ತನ್ನ ವಶದಲ್ಲಿ ತೆಗೆದುಕೊಂಡನು. ಆ ಮಹಾಬಾಹು ಭೀಮಪರಾಕ್ರಮಿ ಭೀಮನು ಸಮರದಲ್ಲಿ ಕಾಶಿರಾಜನನ್ನು ಮತ್ತು ಹಿಂದೇಟನ್ನು ಹಾಕದೇ ಇದ್ದ ಸುಬಂಧುವನ್ನು ವಶಪಡಿಸಿಕೊಂಡನು. ಅನಂತರ ಪಾಂಡವರ್ಷಭನು ಬಲದಿಂದ ಯುದ್ಧ ಮಾಡಿ ಕ್ರಥದಲ್ಲಿದ್ದ ರಾಜಪತಿ ಸುಪಾರ್ಶ್ವನನ್ನು ಸೋಲಿಸಿದನು. ಅನಂತರ ಮಹಾತೇಜಸ್ವಿ ಮತ್ಸ್ಯರನ್ನು, ಮಹಾಬಲಶಾಲಿ ಮಲಯರನ್ನು, ವಧಿಸಲಸಾದ್ಯ ಗಯರನ್ನು ಮತ್ತು ಪಶುಭೂಮಿ ಸರ್ವವನ್ನೂ ಸೋಲಿಸಿದನು. ಮಹಾಬಾಹುವು ಹಿಂದಿರುಗಿ ಉತ್ತರಾಭಿಮುಖವಾಗಿ ಹೊರಟು ಮದರ್ವೀಕ ಪರ್ವತ ಮತ್ತು ಸುತ್ತಮುತ್ತಲ ಪ್ರದೇಶನ್ನು ಗೆದ್ದನು. ಬಲಶಾಲಿ ಕೌಂತೇಯನು ಬಲವನ್ನು ಪ್ರಯೋಗಿಸಿ ವತ್ಸಭೂಮಿಯನ್ನು ಸೋಲಿಸಿ, ಭರ್ಗರ ಅಧಿಪ, ನಿಷಾದಧಿಪತಿ ಮತ್ತು ಮಣಿಮತನೇ ಮೊದಲಾದ ಹಲವಾರು ಭೂಮಿಪಾಲರನ್ನು ಗೆದ್ದನು. ಅನಂತರ ಪಾಂಡವ ಭೀಮನು ದಕ್ಷಿಣ ಮಲ್ಲರನ್ನೂ ಭೋಗವಂತನನ್ನೂ ಏನೂ ಕಷ್ಟವಿಲ್ಲದೇ ಗೆದ್ದನು. ಪುರುಷವ್ಯಾಘ್ರ ಪ್ರಭುವು ಶರ್ಮಕರನ್ನು ಮತ್ತು ವರ್ಮಕರನ್ನು ಸಾಂತ್ವನದಿಂದ ಗೆದ್ದು ವೈದೇಹಕ ರಾಜ ಜಗತೀಪತಿ ಜನಕನನ್ನು ಸುಲಭವಾಗಿ ಗೆದ್ದನು. ವಿದೇಹದಲ್ಲಿಯೇ ಇದ್ದುಕೊಂಡು ಕೌಂತೇಯ ಪಾಂಡವನು ಇಂದ್ರಪರ್ವತದ ಕೊನೆಯಲ್ಲಿದ್ದ ಕಿರಾತರ ಏಳು ಅಧಿಪತಿಗಳನ್ನು ಗೆದ್ದನು. ಅನಂತರ ವೀರ್ಯವಾನ್ ಬಲಿ ಕೌಂತೇಯನು ಅವರು ನೋಡುತ್ತಿದ್ದಂತೆಯೇ ಸುಂಹರನ್ನು, ಪೂರ್ವ ಸುಂಹರನ್ನು ಯದ್ಧದಲ್ಲಿ ಸೋಲಿಸಿ, ಮಾಗಧ ದೇಶವನ್ನು ಆಕ್ರಮಣ ಮಾಡಿದನು. ಪೃಥಿವೀಪತಿ ದಂಡ ಮತ್ತು ದಂಡಧಾರರನ್ನು ಗೆದ್ದು ಅವರೆಲ್ಲರೊಡನೆ ಗಿರಿವ್ರಜವನ್ನು ಧಾಳಿಯಿಟ್ಟನು. ಜರಾಸಂಧಿಯನ್ನು ಸಂತವಿಸಿ ಅವನನ್ನು ಕರಕೊಡುವವನ್ನಾಗಿ ಮಾಡಿ, ಅವರೆಲ್ಲರನ್ನೂ ಸೇರಿ ವೇಗದಿಂದ ಬಲಿ ಕರ್ಣನ ಮೇಲೆ ಆಕ್ರಮಣ ಮಾಡಿದನು. ಚತುರಂಗ ಬಲದಿಂದ ಮಹಿಯನ್ನು ಕಂಪಿಸುತ್ತಾ ಪಾಂಡವಶ್ರೇಷ್ಠನು ಅಮಿತ್ರಘಾತಿ ಕರ್ಣನೊಡನೆ ಯುದ್ಧ ಮಾಡಿದನು. ಯುದ್ಧದಲ್ಲಿ ಕರ್ಣನನ್ನು ಸೋಲಿಸಿ ವಶಪಡಿಸಿಕೊಡು ಅವನು ಪರ್ವತವಾಸಿಗಳಾದ ಬಲವಾನ್ ರಾಜರನ್ನು ಗೆದ್ದನು.

ಅನಂತರ ಪಾಂಡವನು ಮಹಾ ಮುಷ್ಠಿಯುದ್ಧದಲ್ಲಿ ಬಲವತ್ತರ ಮೋದಗಿರಿಯನ್ನು ಬಾಹುವೀರ್ಯದಿಂದ ಸೋಲಿಸಿದನು. ಬಲವೃತರೂ ವೀರರೂ ತೀವ್ರಪರಾಕ್ರಮಿಗಳು ಆದ ಪೌಂಡ್ರಾಧಿಪ ವೀರ ಮಹಾಬಲಿ ವಾಸುದೇವ ಮತ್ತು ಕೌಶಿಕೀ ತೀರದಲ್ಲಿ ವಾಸಿಸುತ್ತಿದ್ದ ಮಹೌಜಸ ರಾಜರನ್ನು ಸೋಲಿಸಿ ವಂಗರಾಜದ ಮೇಲೆ ಧಾಳಿಯಿಟ್ಟನು. ಪಾರ್ಥಿವ ಸಮುದ್ರಸೇನ ಮತ್ತು ಚಂದ್ರಸೇನರನ್ನು ಸೋಲಿಸಿ ತಾಮ್ರಲಿಪ್ತದ ರಾಜ, ಕಾಚ ಮತ್ತು ವಂಗಾಧಿಪರು, ಸುಹ್ಮಾನರ ಅಧಿಪ ಮತ್ತು ಸಾಗರವಾಸಿ ಸರ್ವ ಮ್ಲೇಚ್ಛಗಣಗಳನ್ನು ಆ ಭರತರ್ಷಭನು ಗೆದ್ದನು. ಈ ರೀತಿ ಬಹುವಿಧದ ದೇಶಗಳನ್ನು ಗೆದ್ದು ಅವರಿಂದ ಸಂಪತ್ತನ್ನು ಪಡೆದು ಬಲಿ ಪವನಾತ್ಮಜನು ಲೌಹಿತ್ಯಕ್ಕೆ ಬಂದನು. ಸಾಗರದ್ವೀಪವಾಸಿಗಳಾದ ಸರ್ವ ಮ್ಲೇಚ್ಛ ನೃಪತಿಗಳಿಂದ ವಿವಿಧ ರತ್ನಗಳನ್ನೂ, ಚಂದನ, ಅಗುರು, ವಸ್ತ್ರ, ಮಣಿ, ಅನುತ್ತಮ ಮುಕ್ತ, ಕಾಂಚನ, ರಜತ, ಜ್ರ, ವಿದ್ರುಮ ಮತ್ತು ಮಹಾಧನವನ್ನು ಕಪ್ಪ ಕಾಣಿಕೆಗಳನ್ನಾಗಿ ಪಡೆದನು. ಕೋಟಿ ಶತ ಸಂಖ್ಯೆಗಳಲ್ಲಿ ಮಹಾ ಘನ ಧನವನ್ನು ಅಮೇಯಾತ್ಮ ಪಾಂಡವನ ಮೇಲೆ ಮಳೆಯಂತೆ ಸುರಿಸಿದನು. ಇಂದ್ರಪ್ರಸ್ಥಕ್ಕೆ ಹಿಂದಿರಗಿದ ಭೀಮಪರಾಕ್ರಮಿ ಭೀಮನು ಆ ಧನವನ್ನು ಧರ್ಮರಾಜನಿಗೆ ನಿವೇದಿಸಿದನು.

ಸಹದೇವನ ದಕ್ಷಿಣ ದಿಗ್ವಿಜಯ

ಹಾಗೆಯೇ ಸಹದೇವನೂ ಕೂಡ ಧರ್ಮರಾಜನಿಂದ ಗೌರವಿಸಲ್ಪಟ್ಟು ಮಹಾಸೇನೆಯೊಂದಿಗೆ ದಕ್ಷಿಣ ದಿಕ್ಕಿಗೆ ಪ್ರಯಾಣಿಸಿದನು. ಮೊದಲು ಪ್ರಭುವು ಶೂರಸೇನನ ಸಂಪೂರ್ಣ ರಾಜ್ಯವನ್ನು ಜಯಿಸಿದನು. ಮತ್ತು ಆ ಕೌರವ್ಯನು ಬಲಿ ಮತ್ಸ್ಯ ರಾಜನನ್ನು ಬಲವಂತವಾಗಿ ವಶಪಡಿಸಿಕೊಂಡನು. ಮಹಾಯುದ್ಧದಲ್ಲಿ ಅಧಿರಾಜಾಧಿಪ ದಂತವಕ್ತ್ರನನ್ನು ಗೆದ್ದು ಕರದನನ್ನಾಗಿ ಮಾಡಿ ತನ್ನ ರಾಜ್ಯದೊಡನೆ ಸೇರಿಸಿಕೊಂಡನು. ಅವನು ನರಾಧಿಪ ಸುಕುಮಾರ, ಸುಮಿತ್ರರನ್ನು ವಶಪಡೆಸಿಕೊಂಡು ಪಶ್ಚಿಮ ಮತ್ಸ್ಯರನ್ನೂ ಪಟಚ್ಚರನ್ನೂ ಜಯಿಸಿದನು. ವೇಗದಲ್ಲಿ ನಿಷಧಭೂಮಿಯನ್ನೂ, ಪರ್ವತಪ್ರವರ ಗೋಶೃಂಗವನ್ನೂ, ಧೀಮಂತ ಪಾರ್ಥಿವ ಶ್ರೇಣಿಮಂತನನ್ನೂ  ಜಯಿಸಿದನು. ನವರಾಷ್ಟ್ರವನ್ನು ಗೆದ್ದು ಕುಂತಿಭೋಜನ ಬಳಿ ಬರಲು ಅವನು ಪ್ರೀತಿಪೂರ್ವಕವಾಗಿ ಶಾಸನವನ್ನು ಸ್ವೀಕರಿಸಿದನು. ಅನಂತರ ಚರ್ಮಣ್ವತೀ ತೀರದಲ್ಲಿ ಹಿಂದೆ ವಾಸುದೇವನಿಂದ ಉಳಿಸಲಟ್ಟ ನೃಪ ಜಂಭಕನ ಮಗನನ್ನು ಕಂಡನು. ಅಲ್ಲಿಯೇ ಭೋಜನೊಂದಿಗೆ ಸಂಗ್ರಾಮವನ್ನು ಮಾಡಿ ಅವನ್ನು ಸೋಲಿಸಿ ದಕ್ಷಿಣಾಭಿಮುಖವಾಗಿ ಪ್ರಯಾಣಿಸಿದನು. ಅವರಿಂದ ವಿವಿಧ ರತ್ನಗಳನ್ನು ಕರವನ್ನಾಗಿ ಪಡೆದು ಅವರೆಲ್ಲರ ಸಹಿತ ನರ್ಮದಾನದಿಯ ಕಡೆ ಹೊರಟನು. ವೀರವಾನ್, ಪ್ರತಾಪವಾನ್ ಅಶ್ವಿನೇಯನು ಮಹಾಸೇನೆಗನ್ನು ಹೊಂದ್ದ ಅವಂತಿಯ ವಿಂದಾನುವಿಂದರನ್ನು ಸಮರದಲ್ಲಿ ಜಯಿಸಿ ಅವರಿಂದ ರತ್ನಗಳನ್ನು ಪಡೆದು ಮಾಹಿಷ್ಮತೀ ಪುರವನ್ನು ಸೇರಿದನು. ಅಲ್ಲಿ ನರರ್ಷಭ ಪಾಂಡವ ಪರವೀರಘ್ನ ತಾಪವಾನ್ ಸಹದೇವನು ಭಗವಾನ್ ಹವ್ಯವಾಹನನು ಸಹಾಯ ನೀಡಿದ ರಾಜ ನೀಲನೊಂದಿಗೆ ಸೈನ್ಯಕ್ಷಯಕರ, ತನ್ನ ಪ್ರಾಣಕ್ಕೇ ಸಂಶಯತರುವಂಥಹ ಯುದ್ಧವನ್ನು ನಡೆಸಿದನು. ಸಹದೇವನ ಸೇನೆಯಲ್ಲಿ ಕುದುರೆಗಳು, ರಥಗಳು, ಆನೆಗಳು, ಸೈನಿಕರು, ಕವಚಗಳು ಇದ್ದಕ್ಕಿದ್ದ ಹಾಗೆ ಬೆಂಕಿ ಹಿಡಿಯುತ್ತಿರುವುದು ಕಂಡುಬಂದಿತು. ಆಗ ಕುರುನಂದನನು ತುಂಬಾ ಸಂಭ್ರಾಂತ ಮನಸ್ಕನಾದನು ಮತ್ತು ಅದಕ್ಕೆ ಪ್ರತ್ಯುತ್ತರವನ್ನು ಕೊಡಲು ಅಸಮರ್ಥನಾದನು.

ಅಲ್ಲಿ ಮಾಹಿಷ್ಮತೀವಾಸಿ ಭಗವಾನ್ ಹವ್ಯವಾಹನನು ಹಿಂದೆ ಪಾರದಾರಿಕೆಗೋಸ್ಕರ ಬಂಧಿಯಾಗಿದ್ದನು. ಆಗ ಬ್ರಾಹ್ಮಣರೂಪದಲ್ಲಿ ಕದ್ದು ನಡೆಯುತ್ತಿದ್ದ ಅವನನ್ನು ಹಿಂದಿನ ರಾಜ ನೀಲನ ಮುಂದೆ ಕರೆದೊಯ್ಯಲಾಯಿತು. ಧಾರ್ಮಿಕ ರಾಜನು ಯಥಾಶಾಸ್ತ್ರವಾಗಿ ದಂಡಿಸಲು ಕೋಪದಿಂದ ಭಗವಾನ್ ಹವ್ಯವಾಹನನು ಉರಿದೆದ್ದನು. ಇದನ್ನು ನೋಡಿ ವಿಸ್ಮಿತನಾದ ರಾಜನು ಆ ಕವಿಗೆ ಶಿರಸಾ ನಮಸ್ಕರಿಸಲು ಆ ವಿಭಾವಸುವು ರಾಜನಿಗೆ ಕರುಣೆತೋರಿದನು. ಸ್ವಿಷ್ಟಕೃತ್ತಮನು ನೃಪನಿಗೆ ವರದಿಂದ ತೃಪ್ತಿಗೊಳಿಸಲು ಮಹೀಪತಿಯು ತನ್ನ ಸೈನ್ಯಕ್ಕೆ ಅಭಯವನ್ನು ಬೇಡಿದನು. ಅಂದಿನಿಂದ ಅಜ್ಞಾನದಿಂದ ನೃಪರು ಆ ಪುರಿಯನ್ನು ಬಲವಂತವಾಗಿ ಜಯಿಸಲು ಪ್ರಯತ್ನಿಸಿದರೆ ಅಲ್ಲಿಯೇ ವಹ್ನಿಯಿಂದ ಸುಟ್ಟುಹೋಗುತ್ತಿದ್ದರು. ಅದಕ್ಕೂ ಮೊದಲು ಮಾಹಿಷ್ಮತಿಯ ಸ್ತ್ರೀಯರನ್ನು ಹಿಡಿದಿಟ್ಟಿರುತ್ತಿದ್ದರು. ಆಗ ಅಗ್ನಿಯು ಅವರನ್ನು ಬೇರೆಯಾಗಿ ಇಡಬಾರದು ಯಾಕೆಂದರೆ ನಾರಿಯರು ಸ್ವತಂತ್ರರು ಮತ್ತು ತಮಗಿಷ್ಟಬಂದಹಾಗೆ ನಡೆದುಕೊಳ್ಳಬಹುದು ಎಂದು ಸ್ತ್ರೀಯರಿಗೆ ವರವನ್ನಿತ್ತನು. ಅಂದಿನಿಂದ ರಾಜರು ಆ ರಾಷ್ಟ್ರವನ್ನು ಅಗ್ನಿಯ ಭಯದಿಂದ ಸರ್ವದಾ ವರ್ಜಿಸಿದ್ದರು.

ಭಯಾರ್ದಿತ ಸೇನೆಯನ್ನು ನೋಡಿ ಧರ್ಮಾತ್ಮ ಸಹದೇವನು ಅಗ್ನಿಯಿಂದ ಸುತ್ತುವರೆಯಲ್ಪಟ್ಟ ಗಿರಿಯಂತೆ ನಡುಗಿದನು. ನೀರನ್ನು ಮುಟ್ಟಿ ಶುಚಿರ್ಭೂತನಾಗಿ ಅವನು ಪಾವಕನನ್ನುದ್ದೇಶಿಸಿ ಹೇಳಿದನು:

“ನಿನಗಾಗಿಯೇ ಈ ಸಮಾರಂಭವನ್ನು ಕೈಗೊಡಿದ್ದೇವೆ. ಕೃಷ್ಣವರ್ತ್ಮ! ನಿನಗೆ ನಮಸ್ಕಾರ. ನೀನು ದೇವತೆಗಳ ಬಾಯಿ. ಪಾವಕ! ನೀನು ಯಜ್ಞ. ಪಾವನ ಮಾಡುವ ನೀನು ಪಾವಕ! ಹವಿಸ್ಸನ್ನು ಕೊಂಡೊಯ್ಯುವ ವಾಹನ ನೀನು ಹವ್ಯವಾಹನ! ನಿನಗೋಸ್ಕರವೇ ವೇದಗಳು ಹುಟ್ಟಿರುವುದರಿಂದ ನೀನು ಜಾತವೇದಸ. ಈ ಯಜ್ಞಕ್ಕೆ ವಿಘ್ನವನ್ನು ತಂದೊಡ್ಡುವುದು ನಿನಗೆ ಸರಿಯಲ್ಲ.”

ಭೂಮಿಯ ಮೇಲೆ ಕುಶವನ್ನೇರಿ ಕುಳಿತು ಪುರುಷವ್ಯಾಘ್ರ ಮಾದ್ರೇಯನು ಈ ರೀತಿ ವಿಧಿವತ್ತಾಗಿ ಸ್ತುತಿಸಲು ಪಾವಕನು ಭೀತ ಉದ್ವಿಗ್ನವಾಗಿದ್ದ ಸರ್ವ ಸೇನೆಯ ಎದುರು ಕಾಣಿಸಿಕೊಂಡನು. ಮಹೋದಧಿಯು ಪ್ರವಾಹದ ರೇಖೆಯನ್ನು ಹೇಗೆ ದಾಟುವುದಿಲ್ಲವೋ ಹಾಗೆ ಅವನನ್ನು ದಾಟಿ ಮುಂದುವರೆಯಲಿಲ್ಲ. ಅವನ ಹತ್ತಿರ ಬಂದು ವಹ್ನಿಯು ಕುರುನಂದನ ಮನುಷ್ಯರ ದೇವ ಸಹದೇವನಿಗೆ ಮೆಲ್ಲನೆ ಸಾಂತ್ವಪೂರ್ವಕ ಈ ಮಾತುಗಳನ್ನು ಹೇಳಿದನು.

“ಕೌರವ್ಯ! ಮೇಲೇಳು! ನಿನ್ನನ್ನು ಪರೀಕ್ಷಿಸಲು ನಾನು ಹೀಗೆ ಮಾಡಿದೆ. ನಿನ್ನ ಮತ್ತು ಧರ್ಮಸುತನ ಸರ್ವ ಅಭಿಪ್ರಾಯವನ್ನು ಅರಿತಿದ್ದೇನೆ. ಆದರೂ ರಾಜ ನೀಲನ ಕುಲವಂಶಧರರು ಇರುವವರೆಗೆ ಈ ಪುರವನ್ನು ನಾನು ರಕ್ಷಿಸಬೇಕಾಗಿದೆ. ನಿನ್ನ ಮನಸ್ಸಿನಲ್ಲಿರುವ ಆಸೆಯಂತೆ ನಡೆಸಿಕೊಡುತ್ತೇನೆ.”

ಆಗ ಪುರುಷರ್ಷಭ ಮಾದ್ರೇಯನು ಸಂತೋಷಗೊಂಡು ಎದ್ದುನಿಂತು ಅಂಜಲೀ ಬದ್ಧನಾಗಿ ತಲೆಬಾಗಿ ಪಾವಕನನ್ನು ಪೂಜಿಸಿದನು. ಪಾವಕನು ಹಿಂದೆಸರಿಯಲು ರಾಜ ನೀಲನು ಆಗಮಿಸಿ, ಯೋದ್ಧರ ನಾಯಕ ನರವ್ಯಾಘ್ರ ಸಹದೇವನನ್ನು ಸತ್ಕರಿಸಿ ಸ್ವಾಗತಿಸಿದನು. ಅವನ ಸತ್ಕಾರವನ್ನು ಸ್ವೀಕರಿಸಿ ಅವನನ್ನು ಕರನೀಡುವವನನ್ನಾಗಿ ಮಾಡಿದನು. ನಂತರ ವಿಜಯೀ ಮಾದ್ರೀಸುತನು ದಕ್ಷಿಣ ದಿಕ್ಕಿನಲ್ಲಿ ಮುಂದುವರೆದನು. ಆ ಮಹಾಬಾಹುವು ಅಮಿತೌಜಸ ತ್ರಿಪುರ ರಾಜನನ್ನು ವಶಪಡಿಸಿಕೊಂಡು ಬೇಗನೆ ಪೋತನೇರನನ್ನು ಜಯಿಸಿದನು. ಅನಂತರ ಆ ಮಹಾಬಾಹುವು ಕೌಶಿಕನು ಆಚಾರ್ಯನಾಗಿದ್ದ ಸುರಾಷ್ಟ್ರಾಧಿಪತಿ ಆಹೃತಿಯನ್ನು ಮಹಾ ಪ್ರಯತ್ನದಿಂದ ವಶಪಡೆಸಿಕೊಂಡನು. ಸುರಾಷ್ಟ್ರದೇಶದಲ್ಲಿದ್ದಾಗ ಭೋಜಕಟದಲ್ಲಿದ್ದ ಧೀಮಂತ ಧರ್ಮಾತ್ಮ ಸಾಕ್ಷಾತ್ ಇಂದ್ರನ ಸಖ ಭೀಷ್ಮಕ ರಾಜ ರುಕ್ಮಿಣನಿಗೆ ರಾಯಭಾರಿಯನ್ನು ಕಳುಹಿಸಿದನು. ಮಗನೊಂದಿಗೆ ಅವನು ಮಹಾಬಾಹು ವಾಸುದೇವನನ್ನು ಗಮನಿಸಿ ಪ್ರೀತಿಪೂರ್ವಕವಾಗಿ ಅವನ ಶಾಸನವನ್ನು ಸ್ವೀಕರಿಸಿದನು. ರತ್ನಗಳನ್ನು ಪಡೆದು ಅಲ್ಲಿಂದ ಮಹಾಬಲ ಯುಧಾಂಪತಿಯು ಪುನಃ ಹೊರಟು ಶೂರ್ಪರಕ ಗಣ ಮತ್ತು ಉಪಕೃತ ದೇಶಗಳನ್ನು ಹಾಗೂ ದಂಡಕರನ್ನು ವಶಪಡೆಸಿಕೊಂಡನು. ಆ ಮಹಾಮತಿಯು ಸಾಗರದ್ವೀಪವಾಸಿ ಮ್ಲೇಚ್ಛಯೋನಿಜ ನೃಪತಿಗಳನ್ನು, ನಿಷಾದರನ್ನೂ ಕರ್ಣಪ್ರಾವರಣರನ್ನೂ, ರಾಕ್ಷಸ ಯೋನಿಯ ಕಾಲಮುಖರೆಂಬ ಹೆಸರಿನ ನರರನ್ನೂ, ಕೋಲ್ಲಗಿರಿ ಮತ್ತು ಮುರಚೀಪತ್ತನ, ಹಾಗೂ ತಾಮ್ರಾಹ್ವಯ ದ್ವೀಪವನ್ನೂ, ರಾಮಕ ಎನ್ನುವ ಪರ್ವತವನ್ನೂ, ತಿಮಿಂಗಿಲದ ನೃಪತಿಯನ್ನೂ ವಶಪಡೆಸಿಕೊಂಡನು. ಕೇವಲ ವನವಾಸಿಗಳಾದ ಒಂದೇ ಕಾಲಿನ ಪುರುಷರನ್ನು, ಸಂಜಯಂತೀ ನಗರವನ್ನು, ಪಿಚ್ಛಂಡರನ್ನು, ಮತ್ತು ಕರಹಾಟಕರನ್ನು ಕೇವಲ ದೂತರ ಮೂಲಕ ವಶಪಡೆಸಿಕೊಂಡು ಕಪ್ಪ ಕೊಡುವವರನ್ನಾಗಿ ಮಾಡಿದನು. ಅದೇರೀತಿ ದೂತರ ಮೂಲಕ ಪಾಂಡ್ಯರನ್ನು, ದ್ರವಿಡರನ್ನು, ಚೋಡ್ರ ಕೇರಳೀಯರ ಸಹಿತ ಆಂಧ್ರರನ್ನು, ತಲವರನ್ನು, ಕಲಿಂಗರನ್ನು, ಊಷ್ಟ್ರಕರ್ಣಿಕರನ್ನು, ಅಂತಾಖೀಯರನ್ನು ರೋಮನರನ್ನೂ ಮತ್ತು ಯವನರ ಪುರವನ್ನು ವಶ ಪಡೆಸಿಕೊಂಡು ಕಪ್ಪವನ್ನು ಕೊಡುವವರನ್ನಾಗಿ ಮಾಡಿದನು. ಅನಂತರ ಅರಿಂದಮ ಧೀಮಾನ್ ಮಾದ್ರವತೀಸುತನು ಭರೂಕಚ್ಛಕ್ಕೆ ಹೋಗಿ ಪೌಲಸ್ತ್ಯ, ಮಹಾತ್ಮ, ಧರ್ಮಾತ್ಮ ವಿಭೀಷಣನಿಗೆ ಪೃತಿಪೂರ್ವಕ ದೂತರನ್ನು ಕಳುಹಿಸಿದನು. ಅವನು ಶಾಸನವನ್ನು  ಪ್ರೀತಿಪೂರ್ವಕವಾಗಿ ಸ್ವೀಕರಿಸಿ, ಆ ಧೀಮಂತನು ಕಾಲಕೃತ ಪ್ರಭುವಿಗೆ ಒಪ್ಪಿಗೆಯನ್ನಿತ್ತನು. ಅವನು ವಿವಿಧ ರತ್ನಗಳನ್ನೂ, ಚಂದನ, ಅಗರು, ಪ್ರಮುಖ ದಿವ್ಯಾಭರಣಗಳನ್ನೂ ಕಳುಹಿಸಿಕೊಟ್ಟನು. ಈ ರೀತಿ ಸಾಂತ್ವನದಿಂದ ಮತ್ತು ವಿಜಯದಿಂದ ಬೇಗನೆ ಪಾರ್ಥಿವರನ್ನು ಕರದರನ್ನಾಗಿಮಾಡಿ ಆ ಅರಿಂದಮ ಧೀಮಾನ್, ಪ್ರತಾಪವಾನ್ ಸಹದೇವನು ಬೆಲೆಬಾಳುವ ವಸ್ತ್ರಗಳನ್ನೂ, ಮಣಿ ಮಹಾಧನಗಳನ್ನು ಪಡೆದು ಹಿಂದಿರುಗಿದನು. ಅವೆಲ್ಲವನ್ನೂ ಧರ್ಮರಾಜನಿಗೆ ನಿವೇದಿಸಿ ಅವನು ಕೃತಕರ್ಮನಾಗಿ ಸುಖದಿಂದ ವಾಸಿಸಿದನು.

ನಕುಲನ ಪಶ್ಚಿಮ ದಿಗ್ವಿಜಯ

ಖಾಂಡವಪ್ರಸದಿಂದ ಹೊರಟು ಪಶ್ಚಿಮ ದಿಶಾಭಿಮುಖವಾಗಿ ಮಹಾ ಸೇನೆಯೊಂದಿಗೆ ಯೋಧರ ಮಹಾ ಸಿಂಹನಾದ ಗರ್ಜನೆಗಳು ಮತ್ತು ರಥವೇಗದ ನಿನಾದದಿಂದ ವಸುಧೆಯನ್ನೇ ಕಂಪಿಸುತ್ತಾ ಆ ಮತಿವಂತ ನಕುಲನು ಹೊರಟನು. ಮೊದಲು ಬಹುಧನಯುಕ್ತ ಗೋ, ಅಶ್ವ ಧನ ಧಾನ್ಯಯುಕ್ತ, ಕಾರ್ತಿಕೇಯನ ಅಚ್ಚುಮೆಚ್ಚಿನ ರೋಹೀತಕವನ್ನು ತಲುಪಿದನು. ಅಲ್ಲಿ ಶೂರ ಮತ್ತಮಯೂರಕರೊಂದಿಗೆ ನಡೆದ ಮಹಾ ಯುದ್ಧದಲ್ಲಿ ಮಹಾದ್ಯುತಿಯು ಮರುಭೂಮಿ ರಾಜ್ಯ ಮತ್ತು ಧನ್ಯಸಮೃದ್ಧ ಶೈರೀಷಕ - ಮಹೇಚ್ಛಗಳನ್ನು, ಶಿಬಿಗನ್ನು, ತ್ರಿಗರ್ತರನ್ನು, ಅಂಬಷ್ಠರನ್ನು, ಮಾಲವಾನರನ್ನು, ಪಂಚಕರ್ಪಟರನ್ನು, ಮಧ್ಯಮಿಕರನ್ನು ಮತ್ತು ವಾಟಧಾನ ಬ್ರಾಹ್ಮಣರನ್ನು ವಶಪಡೆಸಿಕೊಂಡನು. ಅಲ್ಲಿಯೇ ಸುತ್ತುವರೆದು ಪುಷ್ಕರಾರಣ್ಯದಲ್ಲಿ ವಾಸಿಸುತ್ತಿದ್ದ ಉತ್ಸವಸಂಕೇತಕ ಗಣಗಳನ್ನು, ಸಿಂಧುನದೀತೀರದಲ್ಲಿ ವಾಸಿಸುತ್ತಿದ್ದ ವುಹಾಬಲಶಾಲಿ ಗ್ರಾಮಣೇಯರನ್ನು, ಸರಸ್ವತೀ ತೀರದಲ್ಲಿ ವಾಸಿಸುತ್ತಿದ್ದ, ಮೀನಿಂದಲೇ ಜೀವಿಸುತಿದ್ದ್ದ ಮತ್ತು ಪರ್ವತವಾಸಿ ಶೂದ್ರ ಮತ್ತು ಅಭೀರ ಗಣಗಳನ್ನೂ, ಐದು ನದಿ ಪ್ರದೇಶವೆಲ್ಲವನ್ನೂ, ಪಶ್ಚಿಮ ಪರ್ಯಟವನ್ನು, ಉತ್ತರ ಜ್ಯೋತಿಕವನ್ನು, ವೃಂದಾಟಕ ಪುರವನ್ನು, ಮತ್ತು ದ್ವಾರಪಾಲ, ಪಶ್ಚಿಮದ ರಾಜರಾದ ರಮಟರು, ಹಾರಣರು ಮತ್ತು ಎಲ್ಲರನ್ನೂ ಮಹಾದ್ಯುತಿ ಪುರುಷರ್ಷಭ ಪಾಂಡವನು ಸೋಲಿಸಿ, ವಶಪಡೆಸಿಕೊಂಡು ಶಾಸನವನ್ನು ಸ್ಥಾಸಿದನು. ಅಲ್ಲಿ ಇರುವಾಗ ವಿಜಯಿಯು ವಾಸುದೇವನಿಗೆ ಸಂದೇಶವನ್ನು ಕಳುಹಿಸಲು ಅವನು ಅಲ್ಲಿಯ ಹತ್ತು ರಾಜ್ಯಗಳೊಡನೆ ಶಾಸನವನ್ನು ಸ್ವೀಕರಿಸಿದನು. ಅನಂತರ ಮದ್ರದೇಶದ ರಾಜಧಾನಿ ಶಾಕಲವನ್ನು ಸೇರಿ ಅಲ್ಲಿ ಆ ಬಲಿಯು ಸೋದರಮಾವ ಶಲ್ಯನನ್ನು ಪ್ರೀತಿಪೂರ್ವಕವಾಗಿ ವಶಪಡಿಸಿಕೊಂಡನು. ಆ ಸತ್ಕಾರಾರ್ಹ ಯುಧಾಂಪತಿಯು ರಾಜನಿಂದ ಸತ್ಕೃತನಾಗಿ ಬಹಳಷ್ಟು ರತ್ನಗಳನ್ನು ಪಡೆದು ಹೊರಟನು. ಅನಂತರ ಅವನು ಸಾಗರದ ದಂಡೆಯಲ್ಲಿದ್ದ ಪರಮದಾರುಣ ಮ್ಲೇಚ್ಛರನ್ನು, ಪಹ್ಲವರನ್ನು ಮತ್ತು ಬರ್ಬರರನ್ನು ಎಲ್ಲರನ್ನೂ ವಶಪಡಿಸಿಕೊಂಡನು. ಪಾರ್ಥಿವರನ್ನು ವಶಪಡಿಸಿಕೊಂಡು ರತ್ನಗಳನ್ನು ಗಳಿಸಿದ ನಂತರ ಚಿತ್ರಮಾರ್ಗವಿದು ನರಶ್ರೇಷ್ಠ ನಕುಲನು ಹಿಂದಿರುಗಿದನು. ಆ ಮಹಾತ್ಮನು ಸಂಗ್ರಹಿಸಿದ್ದ ಮಹಾಧನವನ್ನು ಹತ್ತುಸಾವಿರ ಒಂಟೆಗಳು ಬಹಳ ಕಷ್ಟಪಟ್ಟು ಹೊತ್ತು ತಂದವು. ಅನಂತರ ಶ್ರೀಮಾನ್ ಮಾದ್ರೀಸುತನು ಇಂದ್ರಪ್ರಸ್ಥಕ್ಕೆ ಹೋಗಿ ವೀರ ಯುಧಿಷ್ಠಿರನನ್ನು ಭೇಟಿಯಾಗಿ ಅವನಿಗೆ ಧನವನ್ನು ಅರ್ಪಿಸಿದನು. ಹೀಗೆ ಭರತರ್ಷಭ ನಕುಲನು ವಾಸುದೇವನಿಂದ ಗೆಲ್ಲಲ್ಪಟ್ಟಿದ್ದ ವರುಣನಿಂದ ಪಾಲಿತ ಪಶ್ಚಿಮ ದಿಕ್ಕನ್ನು ಗೆದ್ದನು.

Leave a Reply

Your email address will not be published. Required fields are marked *