ಐದನೆಯ ದಿನದ ಯುದ್ಧ
ರಾತ್ರಿಯು ಕಳೆದು ದಿವಾಕರನು ಉದಯಿಸಲು ಎರಡೂ ಸೇನೆಗಳೂ ಯುದ್ಧಕ್ಕೆ ಬಂದು ಸೇರಿದವು. ಅವರೆಲ್ಲರೂ ಒಟ್ಟಿಗೇ ಪರಸ್ಪರರನ್ನು ಸಂಕ್ರುದ್ಧರಾಗಿ ನೋಡುತ್ತಾ, ಪರಸ್ಪರರನ್ನು ಗೆಲ್ಲಲು ಬಯಸಿ ಹೊರಟರು. ಪಾಂಡವರು ಮತ್ತು ಧಾರ್ತರಾಷ್ಟ್ರರು ವ್ಯೂಹಗಳನ್ನು ರಚಿಸಿ ಸಂರಬ್ಧರಾಗಿ ಪ್ರಹರಿಸಲು ಉದ್ಯುಕ್ತರಾದರು. ಭೀಷ್ಮನು ಮಕರವ್ಯೂಹವನ್ನು ರಚಿಸಿ ಸುತ್ತಲೂ ಅದರ ರಕ್ಷಣೆಯನ್ನು ಮಾಡಿದನು. ಹಾಗೆಯೇ ಪಾಂಡವರು ತಮ್ಮ ವ್ಯೂಹದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದರು. ರಥಿಗಳಲ್ಲಿ ಶ್ರೇಷ್ಠ ದೇವವ್ರತನು ಮಹಾ ರಥಸಂಕುಲದಿಂದ ಆವೃತನಾಗಿ ರಥಸೇನ್ಯದೊಂದಿಗೆ ಹೊರಟನು. ಆಯಾ ವಿಭಾಗಗಳಲ್ಲಿ ವ್ಯವಸ್ಥಿತರಾದ ರಥಿಕರು, ಪದಾತಿಗಳು, ಆನೆ ಸವಾರರು ಮತ್ತು ಕುದುರೆ ಸವಾರರು ಒಂದರ ಹಿಂದೆ ಒಂದರಂತೆ ಅವನ ರಥಸೇನೆಯನ್ನು ಹಿಂಬಾಲಿಸಿ ನಡೆದವು. ಉದ್ಯುಕ್ತರಾಗಿರುವ ಅವರನ್ನು ನೋಡಿ ಯಶಸ್ವಿ ಪಾಂಡವರು ಕೂಡ ಜಯಿಸಲಸಾಧ್ಯವಾದ ವ್ಯೂಹರಾಜ ಶ್ಯೇನವ್ಯೂಹವನ್ನು ರಚಿಸಿದರು. ಅದರ ಮುಖದಲ್ಲಿ ಮಹಾಬಲ ಭೀಮಸೇನನೂ, ಕಣ್ಣುಗಳಲ್ಲಿ ದುರ್ಧರ್ಷ ಶಿಖಂಡಿ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಶೋಭಿಸಿದರು. ವೀರ ಸತ್ಯವಿಕ್ರಮ ಸಾತ್ಯಕಿಯು ಅದರ ತಲೆಯ ಭಾಗವಾದನು. ಗಾಂಡೀವವನ್ನು ಟೇಂಕರಿಸುತ್ತಾ ಪಾರ್ಥನು ಅದರ ಕುತ್ತಿಗೆಯಾದನು. ಸಮಗ್ರ ಅಕ್ಷೌಹಿಣಿಯ ಎಡಬಾಗದಲ್ಲಿ ಪುತ್ರರೊಂದಿಗೆ ಮಹಾತ್ಮ ಶ್ರೀಮಾನ್ ದ್ರುಪದನಿದ್ದನು. ಅದರ ಬಲಭಾಗದಲ್ಲಿ ಅಕ್ಷೌಹಿಣೀಪತಿ ಕೈಕೇಯನಿದ್ದನು. ಹಿಂಭಾಗದಲ್ಲಿ ದ್ರೌಪದೇಯರೂ, ವೀರ್ಯವಾನ್ ಸೌಭದ್ರನೂ ಇದ್ದರು. ಅವರ ಹಿಂದೆ ಸೋದರರಾದ ಯಮಳರೊಡನೆ ಧೀಮಾನ್, ಚಾರುವಿಕ್ರಮ, ಸ್ವಯಂ ರಾಜಾ ಯುಧಿಷ್ಠಿರನಿದ್ದನು.
ಭೀಮನು ಮಕರದ ಮುಖವನ್ನು ಪ್ರವೇಶಿಸಿ ಸಂಗ್ರಾಮದಲ್ಲಿ ಭೀಷ್ಮನನ್ನು ಎದುರಿಸಿ ಅವನನ್ನು ಸಾಯಕಗಳಿಂದ ಮುಚ್ಚಿಬಿಟ್ಟನು. ಆಗ ಭೀಷ್ಮನು ಪಾಂಡುಪುತ್ರರ ಸೈನ್ಯ ವ್ಯೂಹವನ್ನು ಮೋಹಗೊಳಿಸುತ್ತಾ ಮಹಾಸ್ತ್ರಗಳನ್ನು ಪ್ರಯೋಗಿಸತೊಡಗಿದನು. ರಣಮೂರ್ಧನಿಯಲ್ಲಿ ಸೈನ್ಯವು ಮೋಹಗೊಳ್ಳಲು ತ್ವರೆಮಾಡಿ ಧನಂಜಯನು ಭೀಷ್ಮನನ್ನು ಸಹಸ್ರ ಶರಗಳಿಂದ ಹೊಡೆದನು. ಭೀಷ್ಮನು ಪ್ರಯೋಗಿಸಿದ್ದ ಅಸ್ತ್ರಗಳನ್ನು ನಿರಸನಗೊಳಿಸಿ ತನ್ನ ಸೇನೆಯು ಸಂತೋಷಗೊಂಡು ಯುದ್ಧದಲ್ಲಿ ನಿಲ್ಲುವಂತೆ ಮಾಡಿದನು. ಆಗ ಹಿಂದೆ ತನ್ನ ಸೇನೆಯ ಘೋರ ವಧೆಯನ್ನು ನೋಡಿದ್ದ ಬಲಿಗಳಲ್ಲಿ ಶ್ರೇಷ್ಠ ಮಹಾರಥ ರಾಜಾ ದುರ್ಯೋಧನನು ಯುದ್ಧದಲ್ಲಿ ತನ್ನ ಭ್ರಾತೃಗಳ ವಧೆಯನ್ನು ಸ್ಮರಿಸಿಕೊಳ್ಳುತ್ತಾ ಭಾರದ್ವಾಜನಿಗೆ ಹೇಳಿದನು: “ಆಚಾರ್ಯ! ನೀನು ಸತತವೂ ನನ್ನ ಹಿತವನ್ನೇ ಬಯಸುತ್ತೀಯೆ. ನಾವು ನಿನ್ನನ್ನು ಮತ್ತು ಪಿತಾಮಹ ಭೀಷ್ಮನನ್ನು ಆಶ್ರಯಿಸಿ ರಣದಲ್ಲಿ ದೇವತೆಗಳನ್ನು ಕೂಡ ಗೆಲ್ಲಬಲ್ಲೆವು ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಯುದ್ಧದಲ್ಲಿ ಹೀನಪರಾಕ್ರಮರಾದ ಪಾಂಡುಸುತರನು ಏನು?” ಅವನು ಹೀಗೆ ಹೇಳಲು ದ್ರೋಣನು ಸಾತ್ಯಕಿಯನ್ನು ನೋಡಿ ಪಾಂಡವರ ಸೇನೆಯ ಮೇಲೆ ಆಕ್ರಮಣಿಸಿದನು. ಸಾತ್ಯಕಿಯಾದರೋ ದ್ರೋಣನನ್ನು ತಡೆದನು. ಆಗ ಲೋಮಹರ್ಷಣ ತುಮುಲ ಯುದ್ಧವು ಪ್ರಾರಂಭವಾಯಿತು. ರಣದಲ್ಲಿ ಕ್ರುದ್ಧನಾದ ಪ್ರತಾಪವಾನ್ ಭಾರದ್ವಾಜನು ನಗುತ್ತಾ ಶೈನೇಯನ ಕೊರಳಿಗೆ ನಿಶಿತ ಬಾಣಗಳಿಂದ ಹೊಡೆದನು. ಆಗ ಭೀಮಸೇನನು ದ್ರೋಣನಿಂದ ಸಾತ್ಯಕಿಯನ್ನು ರಕ್ಷಿಸುತ್ತಾ ಕ್ರುದ್ಧನಾಗಿ ಭಾರದ್ವಾಜನನ್ನು ಹೊಡೆದನು. ಆಗ ದ್ರೋಣ, ಭೀಷ್ಮ ಮತ್ತು ಶಲ್ಯರು ಕ್ರೋಧದಿಂದ ಭೀಮಸೇನನನ್ನು ಶರಗಳಿಂದ ಹೊಡೆಯತೊಡಗಿದರು. ಸಂಕ್ರುದ್ಧರಾದ ಅಭಿಮನ್ಯು ಮತ್ತು ದ್ರೌಪದೇಯರು ನಿಶಿತ ಬಾಣಗಳಿಂದ ಮತ್ತು ಆಯುಧಗಳಿಂದ ಅವರನ್ನು ಹೊಡೆದರು. ಸಂಕ್ರುದ್ಧರಾಗಿ ಮೇಲೆರಗಿ ಬರುತ್ತಿರುವ ಮಹಾಬಲ ಭೀಷ್ಮ-ದ್ರೋಣರನ್ನು ಶಿಖಂಡಿಯು ಎದುರಿಸಿ ಯುದ್ಧಮಾಡಿದನು. ಆ ವೀರನು ಮೋಡದ ಗರ್ಜನೆಯುಳ್ಳ ಬಲವಾದ ಧನುಸ್ಸನ್ನು ಹಿಡಿದು ಕ್ಷಣಮಾತ್ರದಲ್ಲಿ ದಿವಾಕರನನ್ನೇ ಮುಚ್ಚಿಬಿಡುವಂತೆ ಶರವರ್ಷವನ್ನು ಸುರಿಸಿದನು. ಶಿಖಂಡಿಯನ್ನು ಎದುರಿಸಿ ಭರತರ ಪಿತಾಮಹನು ಅವನ ಸ್ತ್ರೀತ್ವವನ್ನು ಸ್ಮರಿಸಿಕೊಂಡು ಹೋರಾಡುವುದನ್ನು ನಿಲ್ಲಿಸಿದನು. ಆಗ ದ್ರೋಣನು ದುರ್ಯೋಧನನಿಂದ ಚೋದಿತನಾಗಿ ಭೀಷ್ಮನನ್ನು ರಕ್ಷಿಸಲು ರಣದಲ್ಲಿ ಮುಂದೆಬಂದನು. ದ್ರೋಣನು ಶಿಖಂಡಿಯನ್ನು ಎದುರಿಸಿ ಸಂಗ್ರಾಮದಲ್ಲಿ ಯುಗಾಂತದ ಅಗ್ನಿಯಂತೆ ಉಲ್ಬಣಿಸಿ ಅವನನ್ನು ಹೊರಹಾಕಿದನು. ಆಗ ದುರ್ಯೋಧನನು ಮಹಾ ಸೇನೆಯೊಂದಿಗೆ ಭೀಷ್ಮನ ಸಮೀಪಕ್ಕೆ ಬಂದು ಅವನನ್ನು ರಕ್ಷಿಸಿದನು. ಹಾಗೆಯೇ ಪಾಂಡವರು ಧನಂಜಯನನ್ನು ಮುಂದಿಟ್ಟುಕೊಂಡು ಜಯದ ಕುರಿತು ದೃಢ ನಿಶ್ಚಯವನ್ನು ಮಾಡಿ ಭೀಷ್ಮನನ್ನೇ ಆಕ್ರಮಣಿಸಿದರು. ಆಗ ಅಲ್ಲಿ ದೇವ-ದಾನರವರ ನಡುವಿನಂತೆ ನಿತ್ಯ ಯಶ ಮತ್ತು ಜಯವನ್ನು ಬಯಸುವ ಅವರ ನಡುವೆ ಪರಮಾದ್ಭುತವಾದ ಘೋರ ಯುದ್ಧವು ನಡೆಯಿತು.
ತುಮುಲ ಯುದ್ಧ
ಧಾರ್ತರಾಷ್ಟ್ರರನ್ನು ಭೀಮಸೇನನ ಭಯದಿಂದ ಪಾರುಗೊಳಿಸಲು ಬಯಸಿ ಆಗ ಭೀಷ್ಮ ಶಾಂತನವನು ತುಮುಲ ಯುದ್ಧವನ್ನು ಮಾಡಿದನು. ಆ ಪೂರ್ವಾಹ್ಣದಲ್ಲಿ ಶೂರಮುಖ್ಯರ ವಿನಾಶಕಾರಕ ಮಹಾರೌದ್ರ ಯುದ್ಧವು ಕುರು ಮತ್ತು ಪಾಂಡವರ ರಾಜರ ನಡುವೆ ನಡೆಯಿತು. ಆ ಮಹಾಭಯಂಕರ ಮಿಶ್ರ ಸಂಗ್ರಾಮವು ನಡೆಯುತ್ತಿರಲು ಗಗನವನ್ನು ಮುಟ್ಟುವ ಮಹಾ ತುಮುಲ ಶಬ್ಧವು ಉಂಟಾಯಿತು. ಮಹಾ ಆನೆಗಳ ಘೀಳು, ಕುದುರೆಗಳ ಹೇಷಾವರ, ಭೇರಿ-ಶಂಖಗಳ ನಾದದ ತುಮುಲ ಶಬ್ಧವು ಉಂಟಾಯಿತು. ವಿಜಯಕ್ಕಾಗಿ ವಿಕ್ರಾಂತರಾಗಿ ಯುದ್ಧಮಾಡುತ್ತಿದ್ದ ಮಹಾಬಲ ಮಹರ್ಷಭರು ಕೊಟ್ಟಿಗೆಯಲ್ಲಿ ಗೂಳಿಗಳಂತೆ ಅನ್ಯೋನ್ಯರ ಮೇಲೆ ಗರ್ಜಿಸುತ್ತಿದ್ದರು. ಸಮರದಲ್ಲಿ ತಲೆಯ ಮೇಲೆ ಬೀಳುತ್ತಿದ್ದ ನಿಶಿತ ಬಾಣಗಳು ಆಕಾಶದಿಂದ ಬೀಳುವ ಕಲ್ಲಿನ ಮಳೆಗಳಂತಿದ್ದವು. ಬಂಗಾರದ ಹೊಳೆಯುವ ಕುಂಡಲ-ಕಿರೀಟಗಳನ್ನು ಧರಿಸಿದ್ದ ಶಿರಗಳು ಬೀಳುತ್ತಿರುವುದು ಕಾಣುತ್ತಿತ್ತು. ವಿಶಿಖಗಳಿಂದ ಕತ್ತರಿಸಲ್ಪಟ್ಟ ದೇಹಗಳು, ಬಾಹುಗಳು, ಕಾರ್ಮುಕಗಳು, ಆಭರಣಗಳೊಂದಿಗೆ ಕೈಗಳು ಇವುಗಳಿಂದ ಭೂಮಿಯು ಮುಚ್ಚಿ ಹೋಗಿತ್ತು. ಮುಹೂರ್ತದಲ್ಲಿ ವಸುಂಧರೆಯು ಕವಚಗಳು ಅಪ್ಪಿರುವ ದೇಹಗಳಿಂದ, ಸಮಲಂಕೃತ ಕೈಗಳಿಂದ, ಚಂದ್ರಸಂಕಾಶ ಮುಖಗಳಿಂದ, ಶುಭವಾದ ರಕ್ತಾಂತ ನಯನಗಳಿಂದ, ಗಜ-ವಾಜಿ-ಮನುಷ್ಯರೆಲ್ಲರ ದೇಹಗಳಿಂದ ಎಲ್ಲ ಕಡೆ ಹರಡಿ ತುಂಬಿ ಹೋಯಿತು.
ಧೂಳು ಮೋಡಗಳಂತೆಯೂ ತುಮುಲ ಶಸ್ತ್ರಗಳು ಮಿಂಚಿನಂತೆಯೂ ಪ್ರಕಾಶಿಸಿದವು. ಆಯುಧಗಳ ನಿರ್ಘೋಷವು ಗುಡುಗಿನಂತೆ ಕೇಳಿದವು. ಕುರುಗಳ ಮತ್ತು ಪಾಂಡವರ ಆ ಕಟುಕ ಸಂಪ್ರಹಾರ ತುಮುಲವು ರಕ್ತವೇ ನೀರಾಗಿರುವ ನದಿಯನ್ನೇ ಹರಿಸಿತು. ಆ ಮಹಾಭಯಂಕರ ಲೋಮಹರ್ಷಣ ಘೋರ ತುಮುಲದಲ್ಲಿ ಯುದ್ಧದುರ್ಮದ ಕ್ಷತ್ರಿಯರು ಶರಗಳ ಮಳೆಯನ್ನೇ ಸುರಿಸಿದರು. ಅಲ್ಲಿ ಶರವರ್ಷದಿಂದ ಪೀಡಿತರಾದ ಕೌರವ ಮತ್ತು ಪಾಂಡವರ ಕಡೆಯ ಆನೆಗಳು ಚೀರಿಕೊಳ್ಳುತ್ತಿದ್ದವು. ಶರಘಾತ ಪೀಡಿತವಾದ, ಆರೋಹಿಗಳನ್ನು ಕಳೆದುಕೊಂಡ ಕುದುರೆಗಳು ಹತ್ತೂ ದಿಕ್ಕುಗಳಲ್ಲಿ ಓಡಿ, ಹಾರಿ, ಇನ್ನು ಕೆಲವು ಬೀಳುತ್ತಿದ್ದವು. ಅಲ್ಲಲ್ಲಿ ಪಲಾಯನ ಮಾಡುತ್ತಿದ್ದ ಅಥವಾ ಹೊಡೆದು ಬಿದ್ದಿದ್ದ ಕೌರವ ಮತ್ತು ಪಾಂಡವರ ಕಡೆಯ ಯೋಧರು, ಕುದುರೆಗಳು, ಆನೆಗಳು, ರಥಗಳು ಕಂಡುಬಂದವು. ಕಾಲಚೋದಿತರಾದ ಕ್ಷತ್ರಿಯರು ಅಲ್ಲಿ ಗದೆ, ಖಡ್ಗ, ಪ್ರಾಸ, ನತಪರ್ವ ಬಾಣಗಳಿಂದ ಪರಸ್ಪರರನ್ನು ಕೊಂದರು. ಇನ್ನು ಕೆಲವು ಯುದ್ಧ ಕುಶಲ ವೀರರು ಯುದ್ಧದಲ್ಲಿ ಉಕ್ಕಿನ ಪರಿಘಗಳಂತಿರುವ ಬಾಹುಗಳಿಂದಲೇ ಹಲವರನ್ನು ಜಜ್ಜಿ ಹಾಕಿದರು. ಕೌರವ ಮತ್ತು ಪಾಂಡವರ ವೀರರು ಮುಷ್ಟಿಗಳಿಂದ, ಒದೆಗಳಿಂದ, ಹೊಡೆತದಿಂದ ಅನ್ಯೋನ್ಯರನ್ನು ಸಂಹರಿಸಿದರು. ಅಲ್ಲಿ ವಿರಥರೂ ಮತ್ತು ರಥಿಗಳೂ ಶ್ರೇಷ್ಠ ಖಡ್ಗಗಳನ್ನು ಹಿಡಿದು ಪರಸ್ಪರರನ್ನು ದ್ವೇಷಿಸಿ ಅನ್ಯೋನ್ಯರನ್ನು ಹೊಡೆಯತ್ತಿದ್ದರು. ಆಗ ರಾಜಾ ದುರ್ಯೋಧನನು ಅನೇಕ ಕಲಿಂಗರಿಂದ ಆವೃತನಾಗಿ ಭೀಷ್ಮನನ್ನು ಮುಂದಿರಿಸಿಕೊಂಡು ಪಾಂಡವರ ಮೇಲೆ ಎರಗಿದನು. ಹಾಗೆಯೇ ಪಾಂಡವರೆಲ್ಲರೂ ವೃಕೋದರನನ್ನು ಸುತ್ತುವರೆದು ರಭಸ ವಾಹನರಾಗಿ ಕ್ರುದ್ಧರಾಗಿ ಭೀಷ್ಮನನ್ನು ಎದುರಿಸಿದರು.
ಸಹೋದರರೂ ಮತ್ತು ಅನ್ಯ ಪಾರ್ಥಿವರೂ ಭೀಷ್ಮನೊಂದಿಗೆ ಯುದ್ಧಮಾಡುತ್ತಿರುವುದನ್ನು ನೋಡಿ ಧನಂಜಯನು ಅಸ್ತ್ರಗಳನ್ನು ಎತ್ತಿ ಹಿಡಿದು ಗಾಂಗೇಯನಿದ್ದಲ್ಲಿಗೆ ಧಾವಿಸಿದನು. ಪಾರ್ಥನ ಪಾಂಚಜನ್ಯದ ಮತ್ತು ಧನುಸ್ಸು ಗಾಂಡೀವದ ನಿರ್ಘೋಷ ಮತ್ತು ಧ್ವಜವನ್ನು ನೋಡಿ ಎಲ್ಲರನ್ನೂ ಭಯವು ಆವರಿಸಿತು. ವೃಕ್ಷಗಳೂ ಮರೆಮಾಡದಂತಹ, ಧೂಮಕೇತುವಿನಂತೆ ಎತ್ತರದಲ್ಲಿ ಹಾರುತ್ತಿದ್ದ, ಬಹುವರ್ಣದ, ಚಿತ್ರಗಳಿಂದ ಕೂಡಿದ, ದಿವ್ಯ, ವಾನರ ಲಕ್ಷಣ ಗಾಂಡೀವಧನ್ವಿಯ ಧ್ವಜವು ಕಂಡುಬಂದಿತು. ಅಂಬರದಲ್ಲಿ ಮೇಘಗಳ ಮಧ್ಯೆ ಮಿಂಚು ಹೊಳೆಯುವಂತೆ ಯೋಧರು ಮಹಾರಥದಲ್ಲಿ ಬಂಗಾರದ ದಂಡವನ್ನುಳ್ಳ ಗಾಂಡೀವವನ್ನು ನೋಡಿದರು. ಕೌರವ ಸೇನೆಯನ್ನು ಸಂಹರಿಸುವಾಗ ಕೇಳಿಬರುವ ಅವನ ಗರ್ಜನೆಯು ಶಕ್ರನ ಗರ್ಜನೆಯಂತಿತ್ತು ಮತ್ತು ಚಪ್ಪಾಳೆಯೂ ಸುಘೋರ ಶಬ್ಧವುಳ್ಳದ್ದಾಗಿತ್ತು. ಅವನು ಭಿರುಗಾಳಿ ಮಿಂಚುಗಳಿಂದ ಕೂಡಿದ ಮೋಡಗಳಂತೆ ಎಲ್ಲ ದಿಕ್ಕುಗಳನ್ನೂ ಎಲ್ಲ ಕಡೆಗಳಿಂದಲೂ ಶರವರ್ಷಗಳಿಂದ ತುಂಬಿಸಿಬಿಟ್ಟನು. ಭೈರವಾಸ್ತ್ರ ಧನಂಜಯನು ಅಸ್ತ್ರಗಳಿಂದ ಮೋಹಿತನಾಗಿ ಪೂರ್ವ-ಪಶ್ಚಿಮ ದಿಕ್ಕುಗಳನ್ನೇ ಗುರುತಿಸಲಾಗದ ಗಾಂಗೇಯನನ್ನು ಎದುರಿಸಿದನು. ಕೌರವ ಯೋಧರು ಅವರ ವಾಹನಗಳು ಬಳಲಿರಲು ಅಸ್ತ್ರಗಳನ್ನು ಕಳೆದುಕೊಂಡು, ಹತಚೇತನರಾಗಿ ಅನ್ಯೋನ್ಯರಿಗೆ ಅಂಟಿಕೊಂಡರು. ಧಾರ್ತರಾಷ್ಟ್ರ ಸರ್ವರೊಂದಿಗೆ ಅವರು ಭೀಷ್ಮನನ್ನೇ ಅವಲಂಬಿಸಿದರು. ಆಗ ರಣದಲ್ಲಿ ಅವರೆಲ್ಲರ ರಕ್ಷಣೆಯ ಭಾರವು ಭೀಷ್ಮ ಶಾಂತನವನದಾಯಿತು. ಭಯಗೊಂಡು ರಥಿಗಳು ರಥಗಳಿಂದ ಮತ್ತು ಸವಾರರು ಕುದುರೆಗಳ ಬೆನ್ನ ಮೇಲಿಂದ ಹಾರಿದರು. ಪದಾತಿಗಳೂ ಕೂಡ ಭೂಮಿಯ ಮೇಲೆ ಬಿದ್ದರು.
ಮೋಡಗಳ ಗರ್ಜನೆಯಂತಿದ್ದ ಗಾಂಡೀವದ ನಿರ್ಘೋಶವನ್ನು ಕೇಳಿ ಸರ್ವ ಸೇನೆಗಳೂ ಭಯದಿಂದ ಕರಗಿ ಹೋದವು. ಆಗ ಶೀಘ್ರಗಾಮಿಗಳಾದ ಅನೇಕ ಗೋಪರು ಮತ್ತು ಬಹುಸಹಸ್ರ ಗೋವಾಸನರ ಸೇನೆಯಿಂದ ಆವೃತರಾಗಿ ಕಾಂಬೋಜಮುಖ್ಯರು, ಮದ್ರ-ಸೌವೀರ-ಗಾಂಧಾರ-ತ್ರಿಗರ್ತರು, ಸರ್ವಕಾಲಿಂಗಮುಖ್ಯರಿಂದ ಆವೃತನಾದ ಕಲಿಂಗಾಧಿಪತಿ, ದುಃಶಾಸನನನ್ನು ಮುಂದಿರಿಸಿಕೊಂಡು ಆನೆ ಮತ್ತು ನರಗಣಗಳ ಸೇನೆ, ಸರ್ವರಾಜರೊಂದಿಗೆ ನೃಪತಿ ಜಯದ್ರಥ, ಮತ್ತು ದುರ್ಯೋಧನನಿಂದ ಪ್ರಚೋದಿತರಾದ ಹದಿಲಾಲ್ಕು ಸಾವಿರ ಶ್ರೇಷ್ಠ ಅಶ್ವಯೋಧರು ಸೌಬಲನನ್ನು ಸುತ್ತುವರೆದು ಎಲ್ಲರೂ ಒಟ್ಟಿಗೇ ಮತ್ತು ಪ್ರತ್ಯೇಕವಾಗಿ ರಥ ವಾಹನಗಳಿಂದ ಪಾಂಡವರೊಂದಿಗೆ ಯುದ್ಧಮಾಡ ತೊಡಗಿದರು. ರಥಿಗಳು, ಆನೆಗಳು ಮತ್ತು ಕುದುರೆಗಳ ಚಲನೆಯಿಂದ ಮೇಲೆದ್ದ ಮೇಘ ಸದೃಶ ಧೂಳು ಯುದ್ಧವನ್ನು ಇನ್ನಷ್ಟು ಭಯಂಕರವಾಗಿ ಮಾಡಿತು. ತೋಮರ, ಪ್ರಾಸ, ನಾರಾಚಗಳನ್ನು ಹೊಂದಿದ್ದ ಗಜಾಶ್ವರಥಯೋಧರ ಮಹಾಬಲದಿಂದ ಭೀಷ್ಮನು ಕಿರೀಟಿಯನ್ನು ಆಕ್ರಮಣಿಸಿದನು. ಅವಂತಿಯವನು ಕಾಶಿರಾಜನೊಂದಿಗೆ, ಸೈಂಧವನು ಭೀಮಸೇನನೊಂದಿಗೆ, ಅಜಾತ ಶತ್ರುವು ಮಕ್ಕಳು ಅಮಾತ್ಯರೊಂದಿಗೆ ಮದ್ರರ ಋಷಭ ಯಶಸ್ವಿ ಶಲ್ಯನೊಂದಿಗೆ ಯುದ್ಧಮಾಡಿದರು.
ವಿಕರ್ಣನು ಸಹದೇವನೊಡನೆ, ಶಿಖಂಡಿಯು ಚಿತ್ರಸೇನನೊಡನೆ, ಮತ್ಸ್ಯರು ದುರ್ಯೋಧನ-ಶಕುನಿಯರನ್ನು ಎದುರಿಸಿ ಹೋದರು. ದ್ರುಪದ, ಚೇಕಿತಾನ ಮತ್ತು ಮಹಾರಥ ಸಾತ್ಯಕಿಯರು ಪುತ್ರನೊಡನಿದ್ದ ಮಹಾತ್ಮ ದ್ರೋಣನೊಡನೆ ಯುದ್ಧ ಮಾಡಿದರು. ಹೀಗೆ ಸೇನೆಯ ಅಗ್ರಭಾಗದಲ್ಲಿದ್ದ ಅಶ್ವಸೈನ್ಯಗಳೂ, ತಿರುಗುತ್ತಿದ್ದ ಆನೆ-ರಥಗಳ ಸೈನ್ಯಗಳೂ ಸರ್ವತ್ರ ಪರಸ್ಪರ ಯುದ್ಧದಲ್ಲಿ ತೊಡಗಿದರು. ಮೋಡಗಳಿಲ್ಲದಿರುವ ಆಕಾಶದಲ್ಲಿ ಕಣ್ಣುಗಳನ್ನು ಕೋರೈಸುವ ಅತಿ ತೀವ್ರ ಮಿಂಚು ಕಾಣಿಸಿಕೊಂಡಿತು. ದಿಕ್ಕುಗಳು ಧೂಳಿನಿಂದ ತುಂಬಿಹೋದವು. ಸಿಡಿಲಿಗೆ ಸಮಾನ ಶಬ್ಧದೊಂದಿಗೆ ಉಲ್ಕೆಗಳು ಕಾಣಿಸಿದವು. ಚಂಡಮಾರುತವು ಹುಟ್ಟಿ ಧೂಳಿನ ಮಳೆಯನ್ನೇ ಸುರಿಸಿತು. ಸೈನ್ಯಗಳು ಏರಿಸಿದ ಧೂಳು ನಭವನ್ನು ಸೇರಿ ಸೂರ್ಯನನ್ನು ಮುಚ್ಚಿಹಾಕಿತು. ಧೂಳಿನಿಂದ ತುಂಬಿಕೊಂಡ ಮತ್ತು ಅಸ್ತ್ರಜಾಲಗಳಿಂದ ಪೀಡಿತರಾದ ಸರ್ವ ಸತ್ತ್ವಗಳಲ್ಲಿ ಅತೀವ ಭ್ರಾಂತಿಯುಂಟಾಯಿತು. ವೀರರ ಬಾಹುಗಳಿಂದ ಪ್ರಯೋಗಿಸಲ್ಪಟ್ಟ, ಸರ್ವ ಆವರಣಗಳನ್ನೂ ಭೇದಿಸಬಲ್ಲಂತಹ ಶರಜಾಲಗಳ ಸಂಘಾತದಿಂದ ತುಮುಲವುಂಟಾಯಿತು. ಭುಜೋತ್ತಮರಿಂದ ಪ್ರಯೋಗಿಸಲ್ಪಟ್ಟ ನಕ್ಷತ್ರಗಳಂತೆ ಹೊಳೆಯುತ್ತಿದ್ದ ಶಸ್ತ್ರಗಳು ಆಕಾಶದಲ್ಲಿ ಬೆಳಕನ್ನುಂಟುಮಾಡಿದವು. ಸುವರ್ಣಮಯ ಬಲೆಗಳಿಂದ ಪರಿವೃತವಾಗಿದ್ದ, ಎತ್ತಿನ ಚರ್ಮದಿಂದ ಮಾಡಲ್ಪಟ್ಟಿದ್ದ, ಚಿತ್ರವಿಚಿತ್ರ ಗುರಾಣಿಗಳು ರಣಾಂಗಣದ ಎಲ್ಲ ದಿಕ್ಕುಗಳಲ್ಲಿಯೂ ಬಿದ್ದಿದ್ದವು. ಸೂರ್ಯವರ್ಣದ ಖಡ್ಗಗಳಿಂದ ಬೀಳಿಸಲ್ಪಟ್ಟ ಶರೀರ-ಶಿರಗಳು ಎಲ್ಲಕಡೆ ಎಲ್ಲ ದಿಕ್ಕುಗಳಲ್ಲಿ ಕಂಡುಬಂದವು. ಅಲ್ಲಲ್ಲಿ ಗಾಲಿಗಳು-ನೊಗಗಳು ಮಹಾಧ್ವಜಗಳು ತುಂಡಾಗಿ ಬಿದ್ದಿದ್ದವು ಮತ್ತು ಸತ್ತಿರುವ ಕುದುರೆಗಳ ಮೇಲಿದ್ದ ಮಹಾರಥರು ನೆಲಕ್ಕೀಡಾಗಿದ್ದರು. ಶಸ್ತ್ರಗಳಿಂದ ಗಾಯಗೊಂಡ ಇನ್ನು ಕೆಲವು ಕುದುರೆಗಳು ರಥಯೋಧರು ಹತರಾಗಿದ್ದರೂ ರಥಗಳನ್ನು ಎಳೆದು ಕೊಂಡು ಹೋಗುತ್ತಿದ್ದವು.
ಕೆಲವು ಉತ್ತಮ ಕುದುರೆಗಳು ಶರಗಳಿಂದ ಹೊಡೆಯಲ್ಪಟ್ಟು ಭಿನ್ನ ದೇಹಿಗಳಾಗಿದ್ದರೂ ಕಟ್ಟಿದ ನೊಗಗಳನ್ನು ಆಲ್ಲಲ್ಲಿ ಎಳೆದುಕೊಂಡು ಹೋಗುತ್ತಿದ್ದವು. ಕೆಲವೊಂದೆಡೆ ಒಂದೇ ಬಲಶಾಲಿ ಆನೆಯಿಂದ ಸೂತ, ಕುದುರೆ, ಮತ್ತು ರಥದೊಡನೆ ಹತರಾದ ರಥಿಗಳು ಕಂಡುಬಂದರು. ಅನೇಕ ಸೈನ್ಯಗಳು ಸಂಹಾರವಾಗುತ್ತಿದ್ದ ಆ ರಣದಲ್ಲಿ ಮದೋದಕವನ್ನು ಸುರಿಸಿತ್ತಿರುವ ಆನೆಗಳ ಗಂಧವನ್ನೇ ಆಘ್ರಾಣಿಸಿ ಇತರ ಆನೆಗಳು ಆಸಕ್ತಿಯನ್ನು ಕಳೆದುಕೊಂಡವು. ನಾರಾಚಗಳಿಂದ ಸಂಹರಿಸಲ್ಪಟ್ಟು ತೋಮರಸಹಿತ ಕೆಳಗೆ ಬೀಳುತ್ತಿದ್ದ ಮಾವಟಿಗರಿಂದಲೂ ಅಸುನೀಗಿದ ಆನೆಗಳಿಂದಲೂ ಆ ರಣಭೂಮಿಯು ಮುಚ್ಚಿ ಹೋಯಿತು. ಸೇನೆಗಳ ಸಂಘರ್ಷದಲ್ಲಿ ಪ್ರಚೋದಿತವಾದ ಶ್ರೇಷ್ಠ ಆನೆಗಳು ಯೋಧರು ಧ್ವಜಗಳೊಂದಿಗೆ ಅನೇಕ ರಥಗಳನ್ನು ಮುರಿದು ಉರುಳಿಸಿದವು. ಆ ಸಂಯುಗದಲ್ಲಿ ಆನೆಗಳು ನಾಗರಾಜನಂತಿರುವ ಸೊಂಡಿಲುಗಳಿಂದ ರಥದ ನೊಗಗಳನ್ನು ಎತ್ತಿಹಾಕಿ ಮುರಿದುದ್ದೂ ಕಂಡುಬಂದಿತು. ಉದ್ದ ಸೊಂಡಿಲುಗಳಿಂದ ರಥದ ಮೇಲಿದ್ದ ರಥಿಗಳ ಕೂದಲಿನಿಂದ ಹಿಡಿದೆಳೆದು ಮರದ ಶಾಖೆಗಳಂತೆ ಮೇಲೆತ್ತಿ ರಣದಲ್ಲಿ ಜಜ್ಜಿ ಹಾಕುತ್ತಿದ್ದವು. ರಥಗಳು ರಥಗಳೊಂದಿಗೆ ಯುದ್ಧದಲ್ಲಿ ತೊಡಗಿರುವಾಗ ವರವಾರಣಗಳು ಅವುಗಳನ್ನು ಎಳೆದುಕೊಂಡು ಎಲ್ಲ ದಿಕ್ಕುಗಳಲ್ಲಿ ತಿರುಗಿಸಿ ಅವುಗಳನ್ನು ತಲೆಕೆಳಗೆ ಮಾಡಿ ಬೀಳಿಸುತ್ತಿದ್ದವು. ಹಾಗೆ ಎಳೆದುಕೊಂಡು ಹೋಗುತ್ತಿರುವ ಆನೆಗಳು ನೋಡಲು ಸರೋವರದಿಂದ ಕುಮುದಗಳ ಜಾಲಗಳನ್ನು ಎಳೆದುಕೊಂಡು ಹೋಗುತ್ತಿವೆಯೋ ಎನ್ನುವಂತೆ ತೋರುತ್ತಿದ್ದವು. ಈ ರೀತಿ ಅಲ್ಲಿ ಪ್ರಾಣಗಳನ್ನು ತೊರೆದ ಕುದುರೆ ಸವಾರರಿಂದಲೂ, ಪದಾತಿಗಳಿಂದಲೂ, ಧ್ವಜಗಳಿಂದ ಕೂಡಿದ ಮಹಾರಥಗಳಿಂದಲೂ ಆ ವಿಶಾಲ ರಣ ಭೂಮಿಯು ತುಂಬಿಹೋಯಿತು.
ಶಿಖಂಡಿಯು ಮತ್ಸ್ಯ ವಿರಾಟನನ್ನೊಡಗೂಡಿಕೊಂಡು ಮಹೇಷ್ವಾಸ, ಸುದುರ್ಜಯ ಭೀಷ್ಮನಿದ್ದೆಡೆಗೆ ಧಾವಿಸಿದನು. ರಣದಲ್ಲಿ ಧನಂಜಯನು ಅನ್ಯ ಶೂರ, ಮಹೇಷ್ವಾಸ, ಮಹಾಬಲ ರಾಜರನ್ನೂ, ದ್ರೋಣ, ಕೃಪ, ವಿಕರ್ಣರನ್ನೂ ಬಹುವಾಗಿ ಬಾಧಿಸಿದನು. ಭೀಮಸೇನನು ಅಮಾತ್ಯ-ಬಂಧುಗಳೊಡನೆ ಮಹೇಷ್ವಾಸ ಸೈಂಧವನನ್ನು, ಪೂರ್ವ ಮತ್ತು ದಕ್ಷಿಣ ಪ್ರದೇಶಗಳ ಭೂಮಿಪರನ್ನೂ, ಮಹೇಷ್ವಾಸ ಅಮರ್ಷಣ ದುರ್ಯೋಧನ ಮತ್ತು ದುಃಸ್ಸಹರನ್ನು ಎದುರಿಸಿದನು. ದುರ್ಜಯರೂ ಮಹೇಷ್ವಾಸರೂ ಆದ ತಂದೆ-ಮಗರಾದ ಮಹಾರಥ ಶಕುನಿ-ಉಲೂಕರನ್ನು ಸಹದೇವನು ಎದುರಿಸಿದನು. ಮಹಾರಥ ಯುಧಿಷ್ಠಿರನು ಗಜಸೇನೆಯೊಂದಿಗೆ ಹೋರಾಡುತ್ತಿದ್ದನು. ಮಾದ್ರೀಪುತ್ರ ಶೂರ ನಕುಲ ಪಾಂಡವನು ಯುದ್ಧದಲ್ಲಿ ಸಂಕ್ರಂದನಂತೆ ರಥೋದಾರರಾದ ತ್ರಿಗರ್ತರೊಡನೆ ಯುದ್ಧಮಾಡಿದನು. ದುರ್ಧರ್ಷರಾದ ಶಾಲ್ವ-ಕೇಕಯರೊಂದಿಗೆ ಮಹಾರಥ ಸಾತ್ಯಕಿ, ಚೇಕಿತಾನ ಮತ್ತು ಸೌಭದ್ರರು ಹೋರಾಡುತ್ತಿದ್ದರು. ಸಮರದಲ್ಲಿ ದುರ್ಜಯರಾದ ಧೃಷ್ಟಕೇತು ಮತ್ತು ರಾಕ್ಷಸ ಘಟೋತ್ಕಚರು ಧಾರ್ತರಾಷ್ಟ್ರರ ರಥಸೇನೆಯೊಂದಿಗೆ ಹೋರಾಡುತ್ತಿದ್ದರು. ಸೇನಾಪತಿ ಅಮೇಯಾತ್ಮ ಮಹಾಬಲ ಧೃಷ್ಟದ್ಯುಮ್ನನು ಉಗ್ರಕರ್ಮಿ ದ್ರೋಣನೊಂದಿಗೆ ಯುದ್ಧ ಮಾಡುತ್ತಿದ್ದನು.
ಹೀಗೆ ಮಹೇಷ್ವಾಸ ಶೂರರಾದ ಕೌರವರು ಪಾಂಡವರೊಂದಿಗೆ ಸಮರದಲ್ಲಿ ಸೇರಿ ಸಂಪ್ರಹರಿಸಲು ತೊಡಗಿದರು. ಸೂರ್ಯನು ನಡುನೆತ್ತಿಗೆ ಬಂದು ಆಕಾಶವು ತಾಪಗೊಳ್ಳುತ್ತಿದ್ದರೂ ಕೌರವ ಪಾಂಡವರು ಪರಸ್ಪರರ ಸಂಹಾರಕ್ರಿಯೆಯಲ್ಲಿ ತೊಡಗಿದ್ದರು. ಧ್ವಜ-ಪತಾಕೆಗಳಿಂದ ಕೂಡಿದ ಬಂಗಾರ ಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದ, ಹುಲಿಯ ಚರ್ಮಗಳನ್ನು ಹೊದೆಸಿದ್ದ ರಥಗಳು ರಜದಲ್ಲಿ ಸಂಚರಿಸುತ್ತಾ ಪ್ರಕಾಶಿಸಿದವು. ಪರಸ್ಪರರನ್ನು ಸಮರದಲ್ಲಿ ಗೆಲ್ಲಲು ಸೇರಿದ್ದವರ ಸಿಂಹಗರ್ಜನೆಗಳಿಂದ ತುಮುಲ ಶಬ್ಧವುಂಟಾಯಿತು. ಅಲ್ಲಿ ವೀರ ಸೃಂಜಯರು ಕುರುಗಳೊಂದಿಗೆ ಸುದಾರುಣ ಸಂಪ್ರಹಾರ ಮಾಡುತ್ತಿರುವ ಅದ್ಭುತವು ಕಾಣಿಸಿತು. ಎಲ್ಲಕಡೆಗಳಲ್ಲಿಯೂ ಪ್ರಯೋಗಿಸುತ್ತಿದ್ದ ಶರಗಳಿಂದ ದಿಕ್ಕುಗಳು ಮುಚ್ಚಿ, ಆಕಾಶವಾಗಲೀ, ದಿಕ್ಕುಗಳಾಗಲೀ, ಸೂರ್ಯನಾಗಲೀ ಕಾಣಲೇ ಇಲ್ಲ. ಥಳಥಳಿಸುವ ಮೊನೆಯ ಶಕ್ತಿಗಳು, ಹಾಗೆಯೇ ಪ್ರಯೋಗಿಸುತ್ತಿರುವ ತೋಮರಗಳ, ಹರಿತ ಖಡ್ಗಗಳ ಕನ್ನೈದಿಲೆ ಬಣ್ಣದ ಪ್ರಭೆಗಳಿಂದ, ವಿಚಿತ್ರ ಕವಚ-ಭೂಷಣಗಳ ಪ್ರಭೆಗಳಿಂದ ಆಕಾಶ, ದಿಕ್ಕುಗಳು ಮತ್ತು ಉಪದಿಕ್ಕುಗಳು ತಮ್ಮ ಉಜ್ವಲ ಪ್ರಕಾಶದಿಂದ ಬೆಳಗುತ್ತಿದ್ದವು. ಅಲ್ಲಲ್ಲಿ ರಣಾಂಗಣವು ವಿರಾಜಿಸುತ್ತಿತ್ತು. ಬಂದು ಸೇರಿದ್ದ ರಥಸಿಂಹಾಸನವ್ಯಾಘ್ರರು ನಭಸ್ತಲದಲ್ಲಿ ಬೆಳಗುವ ಗ್ರಹಗಳಂತೆ ವಿರಾಜಿಸಿದರು. ರಥಿಗಳಲ್ಲಿ ಶ್ರೇಷ್ಠ ಭೀಷ್ಮನಾದರೋ ಸಂಕ್ರುದ್ಧನಾಗಿ ಸರ್ವಸೇನೆಗಳೂ ನೋಡುತ್ತಿದ್ದಂತೆಯೇ ಮಹಾಬಲ ಭೀಮಸೇನನನ್ನು ತಡೆದನು. ಆಗ ಭೀಷ್ಮನು ಪ್ರಯೋಗಿಸಿದ ರುಕ್ಮಪುಂಖ, ಶಿಲಾಶಿತ, ತೈಲದಲ್ಲಿ ಅದ್ದಿದ್ದ, ಸುತೇಜಸ ಬಾಣಗಳು ಸಮರದಲ್ಲಿ ಭೀಮನಿಗೆ ತಾಗಿದವು.
ಮಹಾಬಲ ಭೀಮಸೇನನು ಅವನ ಮೇಲೆ ಕ್ರುದ್ಧ ಸರ್ಪದ ವಿಷಕ್ಕೆ ಸಮಾನವಾಗಿದ್ದ ಶಕ್ತ್ಯಾಯುಧವನ್ನು ಪ್ರಯೋಗಿಸಿದನು. ಮೇಲೆ ಬೀಳುತ್ತಿದ್ದ ದುರಾಸದವಾದ ರುಕ್ಮದಂಡದ ಆ ಶಕ್ತಿಯನ್ನು ಭೀಷ್ಮನು ತಕ್ಷಣವೇ ಸನ್ನತಪರ್ವ ಶರಗಳಿಂದ ತುಂಡರಿಸಿದನು. ಇನ್ನೊಂದು ಪೀತಲದ ನಿಶಿತ ಭಲ್ಲದಿಂದ ಭೀಮಸೇನನ ಕಾರ್ಮುಕವನ್ನು ಎರಡಾಗಿ ತುಂಡರಿಸಿದನು. ಆಗ ಸಾತ್ಯಕಿಯೂ ಕೂಡ ಬೇಗನೇ ಭೀಷ್ಮನ ಬಳಿಸಾರಿ ಅವನ ಮೇಲೆ ಅನೇಕ ಶರಗಳನ್ನು ಸುರಿಸಿದನು. ಭೀಷ್ಮನು ತೀಕ್ಷ್ಣವಾದ ಪರಮದಾರುಣ ಶರವನ್ನು ಹೂಡಿ ವಾರ್ಷ್ಣೇಯನ ಸಾರಥಿಯನ್ನು ರಥದಿಂದ ಕೆಡವಿದನು. ಅವನ ರಥದ ಸಾರಥಿಯು ಬೀಳಲು ಅದರ ಕುದುರೆಗಳು ಮನೋಮಾರುತಹಂಸಗಳಂತೆ ಬೇಕಾದಲ್ಲಿ ಓಡತೊಡಗಿದವು. ಆಗ ಸರ್ವ ಸೈನ್ಯಗಳಲ್ಲಿ ಕೂಗು ತುಮುಲಗಳಾದವು. ಮಹಾತ್ಮ ಪಾಂಡವರಲ್ಲಿ ಹಾಹಾಕಾರವೂ ಉಂಟಾಯಿತು. ಎಲ್ಲೆಲ್ಲೋ ಓಡಿಹೋಗುತ್ತಿದ್ದ ಯುಯುಧಾನನ ರಥವನ್ನು ಹಿಡಿಯುವುದರ ಕುರಿತು ಅಲ್ಲಿ ಮಹಾ ತುಮುಲ ಶಬ್ಧವುಂಟಾಯಿತು. ಇದೇ ಸಮಯದಲ್ಲಿ ಪುನಃ ಭೀಷ್ಮ ಶಾಂತನವನು ವೃತ್ರಹನು ಅಸುರೀ ಸೇನೆಯನ್ನು ಹೇಗೋ ಹಾಗೆ ಪಾಂಡವ ಸೇನೆಯನ್ನು ನಾಶಗೊಳಿಸಿದನು. ಭೀಷ್ಮನಿಂದ ವಧಿಸಲ್ಪಡುತ್ತಿದ್ದರೂ ಪಾಂಚಾಲ-ಸೋಮಕರು ಒಟ್ಟಿಗೇ ಭೀಷ್ಮನನ್ನು ಎದುರಿಸಿ ಯುದ್ಧ ಮಾಡುವ ದೃಢ ನಿಶ್ಚಯವನ್ನು ಮಾಡಿ ಹೋರಾಡಿದರು.
ಧೃಷ್ಟದ್ಯುಮ್ನನೇ ಮೊದಲಾದ ಪಾರ್ಥರು ದುರ್ಯೋಧನನ ಸೇನೆಯನ್ನು ಗೆಲ್ಲಲು ಬಯಸಿ ಶಾಂತನವನನ್ನು ಎದುರಿಸಿದರು. ಹಾಗೆಯೆ ಭೀಷ್ಮದ್ರೋಣಪ್ರಮುಖರು ವೇಗದಿಂದ ಶತ್ರುಗಳನ್ನು ಎದುರಿಸಿ ಯುದ್ಧವನ್ನು ನಡೆಸಿದರು. ಮಹಾರಥ ವಿರಾಟನು ಮಹಾರಥ ಭೀಷ್ಮನನ್ನು ಮೂರು ಬಾಣಗಳಿಂದ ಹೊಡೆದು ಅವನ ಕುದುರೆಗಳನ್ನೂ ಮೂರು ಬಾಣಗಳಿಂದ ಗಾಯಗೊಳಿಸಿದನು. ಆಗ ಮಹೇಷ್ವಾಸ, ಸಿದ್ಧಹಸ್ತ ಮಹಾಬಲ ಭೀಷ್ಮ ಶಾಂತನವನು ಅವನನ್ನು ರುಕ್ಮಪುಂಖ ಶರಗಳಿಂದ ತಿರುಗಿ ಹೊಡೆದನು. ಮಹಾರಥಿ ದೃಢಹಸ್ತ ದ್ರೌಣಿಯು ಭೀಮಧನ್ವಿ ಗಾಂಡೀವಧನ್ವಿಯ ಎದೆಗೆ ಆರು ಬಾಣಗಳಿಂದ ಹೊಡೆದನು. ಆಗ ಪರವೀರಹ ಶತ್ರುಕರ್ಶನ ಫಲ್ಗುನನು ತುಂಬಾ ತೀಕ್ಷ್ಣವಾದ ಪತ್ರಿಗಳಿಂದ ಅವನ ಕಾರ್ಮುಕವನ್ನು ತುಂಡರಿಸಿದನು. ಕ್ರೋಧಮೂರ್ಛಿತನಾದ ಅವನು ಪಾರ್ಥನು ಕಾರ್ಮುಕವನ್ನು ಛೇದಿಸಿದುದನ್ನು ಸಹಿಸಿಕೊಳ್ಳಲಾರದೇ ವೇಗದಲ್ಲಿ ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ಫಲ್ಗುನನನ್ನು ಒಂಭತ್ತು ನಿಶಿತ ಶರಗಳಿಂದಲೂ ವಾಸುದೇವನನ್ನು ಏಳು ಶರಗಳಿಂದಲೂ ಹೊಡೆದನು. ಆಗ ಕೃಷ್ಣನೊಂದಿಗೆ ಅಮಿತ್ರಕರ್ಶಣ ಗಾಂಡೀವಧನ್ವಿ ಫಲ್ಗುನನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ದೀರ್ಘವಾದ ಬಿಸಿ ನಿಟ್ಟುಸಿರು ಬಿಡುತ್ತಾ, ಪುನಃ ಪುನಃ ಚಿಂತಿಸುತ್ತಾ ಎಡಗೈಯಿಂದ ಧನುಸ್ಸನ್ನು ಮೀಟಿ, ಸಂಕ್ರುದ್ಧನಾಗಿ ಹರಿತವಾದ ಜೀವವನ್ನೇ ಕೊನೆಗೊಳಿಸಬಲ್ಲ ಘೋರ ಶಿಲೀಮುಖ ಸನ್ನತಪರ್ವಗಳನ್ನು ತಕ್ಷಣವೇ ತೆಗೆದುಕೊಂಡು ಬಲವಂತರಲ್ಲೇ ಶ್ರೇಷ್ಠನಾದ ದ್ರೌಣಿಗೆ ಹೊಡೆದನು. ಅದು ಅವನ ಕವಚವನ್ನು ಸೀಳಿ ರಕ್ತವನ್ನು ಕುಡಿಯಿತು. ಗಾಂಡೀವಧನ್ವಿಯಿಂದ ಅವನ ಶರೀರವು ನಿರ್ಭಿನ್ನವಾದರೂ ದ್ರೌಣಿಯು ವ್ಯಥೆಪಡಲ್ಲ. ವಿಹ್ವಲನಾಗದೇ ಹಾಗೆಯೇ ಶರವರ್ಷಗಳನ್ನು ಪ್ರಯೋಗಿಸಿದನು. ಅವನು ಮಹಾವ್ರತನನ್ನು ರಕ್ಷಿಸಲು ಬಯಸಿ ಸಮರದಲ್ಲಿ ನಿಂತುಕೊಂಡನು. ಇಬ್ಬರು ಕೃಷ್ಣರನ್ನು ಒಟ್ಟಿಗೇ ಎದುರಿಸುತ್ತಿದ್ದ ಅವನ ಆ ಮಹಾಕಾರ್ಯವನ್ನು ಸಂಯುಗದಲ್ಲಿ ಪುರುಷರ್ಷಭರು ಪ್ರಶಂಸಿಸಿದರು. ದ್ರೋಣನಿಂದ ದುರ್ಲಭವಾದ ಉಪಸಂಹಾರಗಳೊಂದಿಗೆ ಅಸ್ತ್ರಗ್ರಾಮಗಳನ್ನು ಪಡೆದಿದ್ದ ಅವನು ಅಭಯನಾಗಿ ನಿತ್ಯ ಸೇನೆಗಳೊಡನೆ ಯುದ್ಧಮಾಡಿದನು. ಆದರೆ “ಇವನು ನನ್ನ ಆಚಾರ್ಯನ ಮಗ, ದ್ರೋಣನ ಅತಿಪ್ರಿಯನಾದ ಮಗ. ವಿಶೇಷವಾಗಿ ಬ್ರಾಹ್ಮಣನಾಗಿರುವುದರಿಂದ ನನಗೆ ಮಾನನೀಯ” ಎಂದು ಅಭಿಪ್ರಾಯವನ್ನು ತಳೆದು ವೀರ ಶತ್ರುತಾಪನ ಬೀಭತ್ಸುವು ರಥಶ್ರೇಷ್ಠ ಭಾರದ್ವಾಜಸುತನ ಮೇಲೆ ಕೃಪೆತೋರಿದನು. ಆಗ ಯುದ್ಧದಲ್ಲಿ ಶತ್ರುತಾಪನ ಪರಾಕ್ರಮೀ ಕೌಂತೇಯನು ದ್ರೌಣಿಯುನ್ನು ಬಿಟ್ಟು ಕೌರವರ ಕಡೆಯವರೊಂದಿಗೆ ತ್ವರೆಮಾಡಿ ಯದ್ಧದಲ್ಲಿ ತೊಡಗಿದನು.
ದುರ್ಯೋಧನನಾದರೋ ಹತ್ತು ಗಾರ್ಧ್ರಪತ್ರ ಶಿಲಾಶಿತ ರುಕ್ಮಪುಂಖಗಳಿಂದ ಮಹೇಷ್ವಾಸ ಭೀಮಸೇನನನ್ನು ಹೊಡೆದನು. ಅವ್ಯಗ್ರ ಭೀಮಸೇನನಾದರೋ ಸಂಕ್ರುದ್ಧನಾಗಿ ಶತ್ರುಗಳ ಪ್ರಾಣವನ್ನು ಅಪಹರಿಸಬಲ್ಲ ದೃಢವಾದ, ಚಿತ್ರವಾದ ಕಾರ್ಮುಕವನ್ನೂ ಹತ್ತು ನಿಶಿತ ಶರಗಳನ್ನೂ ತೆಗೆದುಕೊಂಡು ತೀಕ್ಷ್ಣವಾಗಿಯೂ ಅತಿ ವೇಗದಲ್ಲಿಯೂ ಆಕರ್ಣಪರ್ಯಂತವಾಗಿ ಎಳೆದು ಬೇಗನೇ ಕುರುರಾಜನನ್ನು ವಿಶಾಲ ಎದೆಯ ಮೇಲೆ ಹೊಡೆದನು. ಶರಗಳಿಂದ ಚುಚ್ಚಲ್ಪಟ್ಟ ಅವನ ಚಿನ್ನದ ಸರದಲ್ಲಿದ್ದ ಮಣಿಯು ಗ್ರಹಗಳಿಂದ ಸಮಾವೃತವಾದ ಸೂರ್ಯನಂತೆ ರಾರಾಜಿಸಿತು. ದುರ್ಯೋಧನನಾದರೋ ಚಪ್ಪಾಳೆಯ ಶಬ್ಧವನ್ನು ಮದಿಸಿದ ಆನೆಯು ಹೇಗೋ ಹಾಗೆ ಭೀಮಸೇನನಿಂದ ತಾಗಿಸಿಕೊಂಡಿದುದನ್ನು ಸಹಿಸಿಕೊಳ್ಳಲಿಲ್ಲ. ಆಗ ಅವನು ಸಂಕ್ರುದ್ಧನಾಗಿ ಸೇನೆಯನ್ನು ಹೆದರಿಸಿ ಭೀಮನನ್ನು ಶಿಲಾಶಿತ ರುಕ್ಮಪುಂಖಗಳಿಂದ ಹೊಡೆದನು. ಅನ್ಯೋನ್ಯರನ್ನು ಲಕ್ಷಿಸದೇ ಯುದ್ಧಮಾಡುತ್ತಿದ್ದ ಅವರಿಬ್ಬರೂ ದೇವತೆಗಳಂತೆ ಮಿಂಚಿದರು. ಪರವೀರಹ ವೀರ ಸೌಭದ್ರನು ನರವ್ಯಾಘ್ರ ಚಿತ್ರಸೇನನನ್ನು ಹತ್ತು ಬಾಣಗಳಿಂದಲೂ, ಪುರುಮಿತ್ರನನ್ನು ಏಳರಿಂದಲೂ, ಸತ್ಯವ್ರತನನ್ನು ಏಳರಿಂದಲೂ ಹೊಡೆದು ಯುದ್ಧದಲ್ಲಿ ಶಕ್ರನಂತೆ ರಣದಲ್ಲಿ ನೃತ್ಯಮಾಡುತ್ತಿರುವನೋ ಎನ್ನುವಂತೆ ಎದುರಿಸಿದವರೆಲ್ಲರನ್ನೂ ಹೊಡೆಯುತ್ತಾ ಕೌರವರನ್ನು ಆರ್ತರನ್ನಾಗಿಸಿದನು. ಅವನನ್ನು ತಿರುಗಿ ಚಿತ್ರಸೇನನು ಹತ್ತು ಶಿಲೀಮುಖಗಳಿಂದಲೂ ಸತ್ಯವ್ರತನು ಒಂಭತ್ತರಿಂದಲೂ ಪುರುಮಿತ್ರನು ಏಳರಿಂದಲೂ ಹೊಡೆದರು. ಪೆಟ್ಟು ತಿಂದು ರಕ್ತವನ್ನು ಸುರಿಸುತ್ತಿದ್ದ ಆರ್ಜುನಿಯು ಚಿತ್ರಸೇನನ ಶತ್ರುಸಂವಾರಣ ಮಹಾ ಚಿತ್ರ ಕಾರ್ಮುಕವನ್ನು ತುಂಡರಿಸಿದನು. ಶರದಿಂದ ಅವನ ಕವಚವನ್ನು ಸೀಳಿ ಎದೆಗೆ ತಾಗಿಸಿ ಹೊಡೆದನು. ಆಗ ಆ ವೀರ ರಾಜಪುತ್ರ ಮಹಾರಥರು ಕೋಪದಿಂದ ಒಟ್ಟಾಗಿ ಯುದ್ಧದಲ್ಲಿ ಅವನನ್ನು ನಿಶಿತ ಶರಗಳಿಂದ ಹೊಡೆದರು. ಅವರೆಲ್ಲರನ್ನೂ ಆ ಪರಮಾಸ್ತ್ರವಿದುವು ತೀಕ್ಷ್ಣ ಶರಗಳಿಂದ ಹೊಡೆದನು. ಅರಣ್ಯದ ದಾವಾಗ್ನಿಯು ಒಣಹುಲ್ಲುಗಳನ್ನು ನಿರಾಯಾಸವಾಗಿ ದಹಿಸುವಂತಿದ್ದ ಅವನ ಆ ಕೃತ್ಯವನ್ನು ನೋಡಿ ಧಾರ್ತರಾಷ್ಟ್ರರು ಅವನನ್ನು ಸುತ್ತುವರೆದರು.
ಕೌರವ ಸೇನೆಗಳನ್ನು ವಿನಾಶಗೊಳಿಸುತ್ತಾ ಸೌಭದ್ರಿಯು ಛಳಿಗಾಲದ ಅಂತ್ಯದಲ್ಲಿ ಧಗಧಗಿಸಿ ಉರಿಯುವ ಪಾವಕನಂತೆ ವಿರಾಜಿಸಿದನು. ಅವನ ಆ ಚರಿತವನ್ನು ನೋಡಿ ಧೃತರಾಷ್ಟ್ರನ ಮೊಮ್ಮಗ ಲಕ್ಷ್ಮಣನು ಬೇಗನೇ ಸಾತ್ವತೀಪುತ್ರನನ್ನು ಎದುರಿಸಿದನು. ಸಂಕ್ರುದ್ಧನಾದ ಅಭಿಮನ್ಯುವಾದರೋ ಶುಭಲಕ್ಷಣ ಲಕ್ಷ್ಮಣನನ್ನು ಆರು ವಿಶಿಖಗಳಿಂದ ಹೊಡೆದು ಮೂರು ಶರಗಳಿಂದ ಸಾರಥಿಯನ್ನೂ ಹೊಡೆದನು. ಹಾಗೆಯೇ ಲಕ್ಷ್ಮಣನೂ ಕೂಡ ಸೌಭದ್ರನನ್ನು ನಿಶಿತ ಶರಗಳಿಂದ ಹೊಡೆಯಲು ಅಲ್ಲಿ ಅದ್ಭುತವೊಂದು ನಡೆಯಿತು. ಆಗ ಮಹಾಬಲ ಸೌಭದ್ರನು ಅವನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನು ಕೊಂದು ಲಕ್ಷ್ಮಣನನ್ನು ನಿಶಿತ ಶರಗಳಿಂದ ಪ್ರಹರಿಸಿದನು. ಪರವೀರಹ ಲಕ್ಷ್ಮಣನು ರಥದ ಕುದುರೆಗಳು ಸತ್ತರೂ ಧೃತಿಗೆಡದೇ ಸಂಕ್ರುದ್ಧನಾಗಿ ಸೌಭದ್ರನ ರಥದ ಮೇಲೆ ಶಕ್ತಿಯನ್ನು ಎಸೆದನು. ಒಮ್ಮೆಲೇ ಬೀಳುತ್ತಿದ್ದ ಆ ಘೋರರೂಪೀ, ದುರಾಸದ ಭುಜಗೋಪಮ ಶಕ್ತಿಯನ್ನು ಅಭಿಮನ್ಯುವು ತೀಕ್ಷ್ಣ ಶರಗಳಿಂದ ತುಂಡರಿಸಿದನು. ಆಗ ಗೌತಮನು ಲಕ್ಷ್ಮಣನನ್ನು ತನ್ನ ರಥದಲ್ಲೇರಿಸಿಕೊಂಡು ಎಲ್ಲ ಸೈನಿಕರೂ ನೋಡುತ್ತಿದ್ದಂತೆಯೇ ಇನ್ನೊಂದೆಡೆ ರಥವನ್ನು ವೇಗವಾಗಿ ಓಡಿಸಿ ಹೊರಟು ಹೋದನು. ಆಗ ಆ ಸಮಾಕುಲದಲ್ಲಿ ಮಹಾಭಯುಂಕರವಾದ ಯುದ್ಧವು ಮುಂದುವರೆಯಿತು. ಪರಸ್ಪರರನ್ನು ವಧಿಸಲು ಇಚ್ಛಿಸಿ ಆಕ್ರಮಣ ಮಾಡಿ ಕೊಲ್ಲುತ್ತಿದ್ದರು. ಕೌರವರ ಕಡೆಯ ಮಹೇಷ್ವಾಸರೂ ಪಾಂಡವರ ಮಹಾರಥರೂ ಸಮರದಲ್ಲಿ ಆಹುತಿಯಾಗಲು ಸಿದ್ಧರಾಗಿ ಪರಸ್ಪರರ ಪ್ರಾಣಗಳನ್ನು ತೆಗೆದರು. ತಲೆಕೂದಲು ಬಿಚ್ಚಿಹೋಗಿ, ಕವಚಗಳಿಲ್ಲದೇ, ವಿರಥರಾಗಿ, ಕಾರ್ಮುಕಗಳು ತುಂಡಾಗಿ ಬಾಹುಗಳಿಂದ ಸೃಂಜಯರು ಕುರುಗಳೊಡನೆ ಯುದ್ಧಮಾಡಿದರು.
ಆಗ ಮಹಾಬಾಹು ಮಹಾಬಲ ಭೀಷ್ಮನು ಸಂಕ್ರುದ್ಧನಾಗಿ ದಿವ್ಯಾಸ್ತ್ರಗಳಿಂದ ಮಹಾತ್ಮ ಪಾಂಡವರ ಸೇನೆಗಳನ್ನು ಸಂಹರಿಸಿದನು. ಸತ್ತು ಬಿದ್ದಿದ್ದ ಆನೆಗಳಿಂದ, ಮಾವುತರಿಂದ, ಕೆಳಗುರುಳಿದ್ದ ಪದಾತಿಗಳು, ಅಶ್ವಗಳು, ರಥಗಳು ಮತ್ತು ಕುದುರೆ ಸವಾರರಿಂದ ರಣಭೂಮಿಯು ಮುಚ್ಚಿಹೋಗಿತ್ತು.
ಭೂರಿಶ್ರವಸನು ಸಾತ್ಯಕಿಯ ಹತ್ತು ಮಕ್ಕಳನ್ನು ಸಂಹರಿಸಿದುದು
ಆಗ ಮಹಾಬಾಹು ಯುದ್ಧದುರ್ಮದ ಸಾತ್ಯಕಿಯು ಉತ್ತವಾದ ಭಾರಸಾಧನ ಚಾಪವನ್ನು ಎಳೆದು ಪುಂಖಗಳನ್ನು ಹೊಂದಿದ್ದ ಸರ್ಪದ ವಿಷಸಮಾನವಾದ ಶರಗಳನ್ನು ಪ್ರಯೋಗಿಸಿ ಅವನ ವಿಚಿತ್ರವಾದ ಲಘುವಾದ ಹಸ್ತಲಾಘವವನ್ನು ಪ್ರಕಟಿಸಿದನು. ಅವನು ಶತ್ರುಗಳ ಮೇಲೆ ಶರಗಳನ್ನು ಎಸೆದು ಹೊಡೆಯುವಾಗ ಎಷ್ಟು ಜೋರಾಗಿ ಚಾಪವನ್ನು ಎಳೆದು ಶರಗಳನ್ನು ಪ್ರಯೋಗಿಸಿ ಪುನಃ ಇತರ ಶರಗಳನ್ನು ಹೂಡಿ ಹೊಡೆಯುತ್ತಿದ್ದನೆಂದರೆ ಅವನು ಮಳೆಸುರಿಸುತ್ತಿರುವ ಮೇಘದಂತೆಯೇ ತೋರಿದನು. ಅವನು ಆ ರೀತಿ ಉರಿಯುತ್ತಿರುವುದನ್ನು ಅವಲೋಕಿಸಿದ ರಾಜಾ ದುರ್ಯೋಧನನು ಹತ್ತು ಸಾವಿರ ರಥಗಳನ್ನು ಅವನಿದ್ದಲ್ಲಿಗೆ ಕಳುಹಿಸಿದನು. ಆ ಎಲ್ಲ ಮಹೇಷ್ವಾಸರನ್ನೂ ಸತ್ಯವಿಕ್ರಮ ಪರಮೇಷ್ವಾಸ ವೀರ್ಯವಾನ್ ಸಾತ್ಯಕಿಯು ದಿವ್ಯಾಸ್ತ್ರಗಳಿಂದ ಸಂಹರಿಸಿದನು. ಆ ದಾರುಣಕರ್ಮವನ್ನು ಮಾಡಿ ಬಿಲ್ಲನ್ನು ಹಿಡಿದು ಆ ವೀರನು ಆಹವದಲ್ಲಿ ಭೂರಿಶ್ರವನನ್ನು ಎದುರಿಸಿದನು. ಆ ಕುರುಗಳ ಕೀರ್ತಿವರ್ಧನನಾದರೋ ಸೇನೆಯು ಯುಯುಧಾನನಿಂದ ಉರುಳಿಸಲ್ಪಟ್ಟಿದುದನ್ನು ನೋಡಿ ಸಂಕ್ರುದ್ಧನಾಗಿ ರಭಸದಿಂದ ಅವನ ಮೇಲೆ ನುಗ್ಗಿದನು. ಅವನು ಕಾಮನಬಿಲ್ಲಿನ ಬಣ್ಣದ ಮಹಾಧನುಸ್ಸನ್ನು ಟೇಂಕರಿಸಿ ವಜ್ರಸದೃಶವಾದ ಸರ್ಪವಿಷಸಮನಾದ ಸಹಸ್ರಾರು ಶರಗಳನ್ನು ಬಿಟ್ಟು ಹಸ್ತಲಾಘವವನ್ನು ತೋರಿಸಿದನು. ಸಾತ್ಯಕಿಯನ್ನು ಅನುಸರಿಸಿ ಬಂದವರು ಮೃತ್ಯುವಿನ ಸ್ಪರ್ಶದಂತಿದ್ದ ಆ ಶರಗಳನ್ನು ತಡೆಯಲಾಗದೇ, ಯುದ್ಧದುರ್ಮದ ಸಾತ್ಯಕಿಯನ್ನು ಬಿಟ್ಟು ಎಲ್ಲಕಡೆ ಪಲಾಯನಮಾಡಿದರು. ಅದನ್ನು ನೋಡಿ ಬಣ್ಣಬಣ್ಣದ ಕವಚಗಳು, ಆಯುಧಗಳು ಮತ್ತು ಧ್ವಜಗಳನ್ನು ಹೊಂದಿದ್ದ ಯುಯುಧಾನನ ಹತ್ತು ಮಹಾಬಲ ಮಹಾರಥ ಮಕ್ಕಳು ಒಟ್ಟಾಗಿ ಆಹವದಲ್ಲಿ ಮಹೇಷ್ವಾಸ ಭೂರಿಶ್ರವನನ್ನು ಎದುರಿಸಿ ಎಲ್ಲರೂ ಸಂರಬ್ಧರಾಗಿ ಮಹಾರಣದಲ್ಲಿ ಯೂಪಕೇತುವಿಗೆ ಹೇಳಿದರು: “ಭೋ! ಭೋ! ಕೌರವದಾಯಾದ! ಬಾ! ನಮ್ಮೊಡನೆ ಯುದ್ಧಮಾಡು! ಒಟ್ಟಿಗೇ ನಮ್ಮೊಡನೆ ಯುದ್ಧಮಾಡು ಅಥವಾ ಒಬ್ಬೊಬ್ಬರಡನೆ ಯುದ್ಧಮಾಡು. ನೀನು ನಮ್ಮನ್ನು ಪರಾಜಯಗೊಳಿಸಿ ನೀನು ಸಂಯುಗದಲ್ಲಿ ಯಶಸ್ಸನ್ನು ಗಳಿಸುತ್ತೀಯೆ. ಅಥವಾ ನಾವು ನಿನ್ನನ್ನು ಪರಾಜಯಗೊಳಿಸಿ ನಮ್ಮ ತಂದೆಯನ್ನು ಪ್ರೀತಿಯನ್ನು ಗಳಿಸುತ್ತೇವೆ.”
ಇದನ್ನು ಕೇಳಿ ಆ ಮಹಾಬಲ ವೀರ್ಯಶ್ಲಾಘೀ ನರಶ್ರೇಷ್ಠನು ಒಟ್ಟಾಗಿರುವ ಅವರನ್ನು ನೋಡಿ ಆ ಶೂರರಿಗೆ ಹೇಳಿದನು: “ವೀರರೇ! ಒಳ್ಳೆಯದಾಗಿಯೇ ಹೇಳಿದ್ದೀರಿ. ಅದೇ ನಿಮ್ಮ ಬಯಕೆಯಾದರೆ ಎಲ್ಲರೂ ಒಟ್ಟಾಗಿ ಪ್ರಯತ್ನಪಟ್ಟು ಯುದ್ಧಮಾಡಿ. ನಿಮ್ಮನ್ನು ರಣದಲ್ಲಿ ಸಂಹರಿಸುತ್ತೇನೆ.” ಆ ಮಹೇಷ್ವಾಸನು ಅವರಿಗೆ ಹೀಗೆ ಹೇಳಲು ಆ ವೀರ ಕ್ಷಿಪ್ರಕಾರಿಣರು ಆ ಅರಿಂದಮನ ಮೇಲೆ ಮಹಾ ಶರವರ್ಷಗಳನ್ನು ಸುರಿಸಿದರು. ಆ ಅಪರಾಹ್ಣದಲ್ಲಿ ಅವನೊಬ್ಬನ ಮತ್ತು ಒಟ್ಟಾಗಿರುವ ಅವರೆಲ್ಲರ ನಡುವೆ ರಣದಲ್ಲಿ ತುಮುಲ ಸಂಗ್ರಾಮವು ನಡೆಯಿತು. ಮಹಾಶೈಲವನ್ನು ಮೋಡಗಳು ಮುಸುಕಿ ಮಳೆಸುರಿಸುವಂತೆ ಅವರು ಆ ಒಬ್ಬನೇ ಶ್ರೇಷ್ಠ ರಥಿಯನ್ನು ಶರವರ್ಷಗಳಿಂದ ಮುಚ್ಚಿದರು. ಆದರೆ ಅವರು ಪ್ರಯೋಗಿಸಿದ ಆ ಯಮದಂಡದಂತೆ ಹೊಳೆಯುತ್ತಿದ್ದ ಶರಗಳ ಸಾಲುಗಳನ್ನು ಅವುಗಳು ಬಂದು ತಲುಪುವುದರೊಳಗೇ ಮಹಾರಥನು ಕತ್ತರಿಸಿದನು. ಭೀತನಾಗದೇ ಒಬ್ಬನೇ ಅನೇಕರೊಂದಿಗೆ ಯುದ್ಧಮಾಡುತ್ತಿರುವ ಸೌಮದತ್ತಿಯ ಅದ್ಭುತ ಪರಾಕ್ರಮವನ್ನು ನೋಡಿದೆವು. ಆ ಹತ್ತು ಮಹಾರಥರು ಶರವೃಷ್ಟಿಯನ್ನು ಪ್ರಯೋಗಿಸಿ ಆ ಮಹಾಬಾಹುವನ್ನು ಸುತ್ತುವರೆದು ಅವನನ್ನು ಸಂಹರಿಸಲು ಬಯಸಿದರು. ಆಗ ಮಹಾರಥಿ ಸೌಮದತ್ತಿಯು ಕ್ರುದ್ಧನಾಗಿ ನಿಮಿಷದಲ್ಲಿಯೇ ಅವರ ಚಾಪಗಳನ್ನು ಹತ್ತು ಬಾಣಗಳಿಂದ ತುಂಡರಿಸಿದನು. ಅವರ ಧನುಸ್ಸುಗಳನ್ನು ಕತ್ತರಿಸಿ ತಕ್ಷಣವೇ ಸನ್ನತಪರ್ವ ಭಲ್ಲಗಳಿಂದ ನಿಶಿತ ಶರಗಳಿಂದ ಅವರ ಶಿರಗಳನ್ನೂ ಕತ್ತರಿಸಿದನು. ಅವನಿಂದ ಹತರಾದ ಅವರು ಸಿಡಿಲಿನಿಂದ ಹೊಡೆಯಲ್ಪಟ್ಟ ಮರಗಳಂತೆ ಭೂಮಿಯ ಮೇಲೆ ಬಿದ್ದರು. ರಣದಲ್ಲಿ ಆ ಮಹಾಬಲ ವೀರ ಪುತ್ರರು ಹತರಾದುದನ್ನು ನೋಡಿ ಕೂಗುತ್ತಾ ವಾರ್ಷ್ಣೇಯನು ಭೂರಿಶ್ರವನನ್ನು ಎದುರಿಸಿದನು. ರಥದಿಂದ ರಥವನ್ನು ಪೀಡಿಸುತ್ತಾ ಆ ಮಹಾಬಲರಿಬ್ಬರೂ ಅನ್ಯೋನ್ಯರ ರಥ-ವಾಜಿಗಳನ್ನು ಸಂಹರಿಸಿದರು. ರಥವಿಹೀನರಾದ ಅವರಿಬ್ಬರು ಮಹಾರಥರೂ ಒಟ್ಟಿಗೇ ಕೆಳಗೆ ಧುಮುಕಿದರು. ಶ್ರೇಷ್ಠ ಕವಚಗಳನ್ನು ಧರಿಸಿದ್ದ ಅವರಿಬ್ಬರು ನರವ್ಯಾಘ್ರರೂ ಮಹಾಖಡ್ಗಗಳನ್ನು ಹಿಡಿದು ಶೋಭಿಸಿದರು. ಆಗ ಖಡ್ಗವನ್ನು ಹಿಡಿದಿದ್ದ ಸಾತ್ಯಕಿಯನ್ನು ಬೇಗನೇ ಭೀಮಸೇನನು ತನ್ನ ರಥದ ಮೇಲೆ ಏರಿಸಿಕೊಂಡರು. ದುರ್ಯೋಧನನೂ ಕೂಡ ಆಹವದಲ್ಲಿ ಸರ್ವ ಧನ್ವಿಗಳೂ ನೋಡುತ್ತಿದ್ದಂತೆ ಭೂರಿಶ್ರವಸನನ್ನು ತಕ್ಷಣವೇ ತನ್ನ ರಥದ ಮೇಲೇರಿಸಿಕೊಂಡನು.
ಹೀಗೆ ನಡೆಯುತ್ತಿರುವ ರಣದಲ್ಲಿ ಸಂರಬ್ಧರಾದ ಪಾಂಡವರು ಮಹಾರಥ ಭೀಷ್ಮನೊಂದಿಗೆ ಯುದ್ಧ ಮಾಡಿದರು. ಆದಿತ್ಯನು ಕೆಂಪಾಗುತ್ತಿರಲು ತ್ವರೆಮಾಡಿ ಧನಂಜಯನು ಇಪ್ಪತ್ತೈದು ಸಾವಿರ ಮಹಾರಥರನ್ನು ಸಂಹರಿಸಿದನು. ಪಾರ್ಥನನ್ನು ಕೊಲ್ಲಲು ದುರ್ಯೋಧನನಿಂದಲೇ ಕಳುಹಿಸಲ್ಪಟ್ಟ ಅವರು ಪತಂಗಗಳು ಬೆಂಕಿಯ ಬಳಿ ಬಂದಾಗ ಹೇಗೋ ಹಾಗೆ ಅವನನ್ನು ತಲುಪುವುದರೊಳಗೇ ನಾಶರಾಗಿಬಿಟ್ಟರು. ಆಗ ಧನುರ್ವೇದವಿಶಾರದರಾದ ಮತ್ಸ್ಯರು ಮತ್ತು ಕೇಕಯರು ಮಗನೊಂದಿಗೆ ಮಹಾರಥ ಪಾರ್ಥನನ್ನು ಸುತ್ತುವರೆದರು. ಇದೇ ಸಮಯದಲ್ಲಿ ಸೂರ್ಯನು ಅಸ್ತಂಗತನಾದನು ಮತ್ತು ಸರ್ವಸೇನೆಗಳನ್ನೂ ಪ್ರಮೋಹವು ಅಚ್ಛಾದಿಸಿತು. ಆಗ ದೇವವ್ರತನು ಸಂಧ್ಯಾಕಾಲದಲ್ಲಿ ಆಯಾಸಗೊಂಡ ಸೇನೆವಾಹನಗಳಿಗೆ ವಿರಾಮವನ್ನಿತ್ತನು. ಪರಸ್ಪರರ ಸಮಾಗಮದಿಂದ ತುಂಬಾ ಸಂವಿಗ್ನರಾಗಿದ್ದ ಪಾಂಡವರ ಮತ್ತು ಕುರುಗಳ ಸೇನೆಗಳು ತಮ್ಮ ತಮ್ಮ ನಿವೇಶನಗಳಿಗೆ ತೆರಳಿದವು. ತಮ್ಮ ತಮ್ಮ ಶಿಬಿರಗಳಿಗೆ ಹೋಗಿ ಅಲ್ಲಿ ಪಾಂಡವರು ಸೃಂಜಯರೊಂದಿಗೆ ಮತ್ತು ಕುರುಗಳೂ ಯಥಾವಿಧಿಯಾಗಿ ವಿಶ್ರಾಂತಿಪಡೆದರು.