ಕೀರ್ತಿವರ್ಧಕ ತಂದೆ ಮತ್ತು ಮಗನ ಈ ಸಮುತ್ಥಾನ ಸಮಾಗಮವನ್ನು ಯಾವ ಪುರುಷನು ಜಿತೇಂದ್ರಿಯನಾಗಿದ್ದುಕೊಂಡು, ತನ್ನನ್ನು ತನ್ನ ವಶದಲ್ಲಿಟ್ಟುಕೊಂಡು ಓದುತ್ತಾನೋ ಅವನು ಪುತ್ರ-ಪೌತ್ರರೊಂದಿಗೆ ನೂರು ವರ್ಷಗಳು ಜೀವಿಸುತ್ತಾನೆ. ಈ ಸದಾಖ್ಯಾನವನ್ನು ಕೇಳಿದ ನರರು ಅಧರ್ಮದಲ್ಲಿ ರುಚಿಯನ್ನಿಡುವುದಿಲ್ಲ. ಸುಹೃದಯರಿಂದ ಅಗಲುವುದಿಲ್ಲ. ಪರರದ್ದನ್ನು ಕದಿಯುವುದರಲ್ಲಿ ಮತ್ತು ಪರರ ಸ್ತ್ರೀಯರಲ್ಲಿ ಆಸೆಯನ್ನಿಡುವುದಿಲ್ಲ.

ಯಕ್ಷ ಪ್ರಶ್ನೆ: ಧರ್ಮದೇವನು ಯುಧಿಷ್ಠಿರನನ್ನು ಪರೀಕ್ಷಿಸಿದುದು

ದ್ರೌಪದಿ ಕೃಷ್ಣೆಯನ್ನು ಕಳೆದುಕೊಂಡು ಅನುತ್ತಮ ಕ್ಲೇಶವನ್ನು ಹೊಂದಿದ ರಾಜಾ ಯುಧಿಷ್ಠಿರನು ತಮ್ಮಂದಿರೊಂದಿಗೆ ಕಾಮ್ಯಕದಲ್ಲಿ ಕಾಲಕಳೆಯುತ್ತಿದ್ದನು. ಅಲ್ಲಿಂದ ಪುನಃ ಅವನು ಫಲ-ಮೂಲಗಳು ಸ್ವಾದವಾಗಿದ್ದ ದ್ವೈತವನದ  ಮಾರ್ಕಂಡೇಯನ ಆಶ್ರಮದ ಬಳಿ ಬಂದನು. ಕೃಷ್ಣೆಯೊಂದಿಗೆ ಪಾಂಡವರು ಅಲ್ಲಿ ಕೇವಲ ಫಲಾಹಾರಿಗಳಾಗಿ, ಅಲ್ಪ ಆಹಾರಿಗಳಾಗಿ ನೆಲೆಸಿದರು. ಆ ಸಮಯದಲ್ಲಿ ಒಮ್ಮೆ ಧರ್ಮಾತ್ಮ ಯುಧಿಷ್ಠಿರನು ಬ್ರಾಹ್ಮಣನೋರ್ವನಿಗೆ ಸಹಾಯಮಾಡಲು ಹೋಗಿ ವಿಪುಲ ಕ್ಲೇಶವನ್ನು ಪಡೆದು ಅಂತ್ಯದಲ್ಲಿ ಸುಖವನ್ನೇ ಹೊಂದಿದನು.

ಪಾಂಡವರು ಬ್ರಾಹ್ಮಣನ ಅರಣಿಗಳನ್ನು ಹೊತ್ತುಕೊಂಡು ಹೋದ ಜಿಂಕೆಯನ್ನರಸಿ ಹೋದುದು

ಯುಧಿಷ್ಠಿರನು ತಮ್ಮಂದಿರೊಡನೆ ಕುಳಿತುಕೊಂಡಿರಲು ಅಲ್ಲಿಗೆ ಸಂತಪ್ತನಾದ ಓರ್ವ ಬ್ರಾಹ್ಮಣನು ಓಡಿ ಬಂದು ಹೇಳಿದನು: “ಮರದ ರೆಂಬೆಗೆ ನೇಲಿಸಿದ್ದ ನನ್ನ ಅರಣಿಗಳಿದ್ದ ಚೀಲವು ಆ ಮರಕ್ಕೆ ಮೈತಿಕ್ಕುತ್ತಿದ್ದ ಜಿಂಕೆಯ ಕೋಡುಗಳಿಗೆ ಸಿಕ್ಕಿಕೊಂಡಿತು. ಕೂಡಲೆ ಆ ಮಹಾಮೃಗವು ಅದನ್ನು ಎತ್ತಿಕೊಂಡು ಕುಪ್ಪಳಿಸುತ್ತಾ ಶೀಘ್ರವಾಗಿ ಓಡಿ ಹೋಯಿತು. ಪಾಂಡವರೇ! ನನ್ನ ಅಗ್ನಿಹೋತ್ರವು ಲುಪ್ತವಾಗಬಾರದೆಂದು ಆ ಜಿಂಕೆಯನ್ನು ಹಿಂಬಾಲಿಸಿ ನನ್ನ ಅರಣಿಗಳನ್ನು ಹಿಂದೆತನ್ನಿ!”

ಬ್ರಾಹ್ಮಣನ ಮಾತುಗಳನ್ನು ಕೇಳಿ ಯುಧಿಷ್ಠಿರನು ಸಂತಪ್ತನಾದನು. ತನ್ನ ಧನುಸ್ಸನ್ನು ಎತ್ತಿಕೊಂಡು ಅವನು ತಮ್ಮಂದಿರೊಡನೆ ಜಿಂಕೆಯನ್ನು ವೇಗವಾಗಿ ಹಿಂಬಾಲಿಸಿದನು. ಆ ಎಲ್ಲ ನರಪುಂಗವರೂ ಬ್ರಾಹ್ಮಣನ ಅರಣಿಗಳಿಗಾಗಿ ಜಿಂಕೆಯನ್ನು ಬೆನ್ನಟ್ಟಿ ಓಡಿದರು. ಆ ಮಹಾರಥರು ಕರ್ಣಿ, ಆಲೀಕ ಮತ್ತು ನಾರಾಚ ಶರಗಳನ್ನು ಪ್ರಯೋಗಿಸಿದರೂ ಆ ಜಿಂಕೆಗೆ ಅವು ತಾಗಲಿಲ್ಲ. ಅವರು ಹೀಗೆ ಪ್ರಯತ್ನಪಡುತ್ತಿರುವಾಗ ಆ ಜಿಂಕೆಯು ಕಣ್ಮರೆಯಾಯಿತು. ಜಿಂಕೆಯನ್ನು ಕಾಣದೇ ಅವರು ಆಯಾಸಹೊಂದಿ ದುಃಖಿತರಾದರು. ಬಾಯಾರಿಕೆ ಮತ್ತು ಅಂಗಾಂಗಗಳ ನೋವಿನಿಂದ ಬಳಲಿದ್ದ ಪಾಂಡವರು ಆ ಗಹನ ವನದಲ್ಲಿ ಒಂದು ಆಲದ ಮರದ ನೆರಳನ್ನು ಸೇರಿ ವಿಶ್ರಾಂತಿಪಡೆದರು. ಅವರು ಹಾಗೆ ಕುಳಿತಿರಲು, ದುಃಖಿತನಾದ ನಕುಲನು ಹಿರಿಯಣ್ಣನಿಗೆ ಹೇಳಿದನು:

“ರಾಜನ್! ನಮ್ಮ ಈ ಕುಲದಲ್ಲಿ ಎಂದೂ ಧರ್ಮಲೋಪವಾಗಲಿಲ್ಲ. ಹಾಗೆಯೇ ಅರ್ಥಲೋಪವೂ ಆಗಲಿಲ್ಲ. ಆದರೂ ಸರ್ವಭೂತಗಳಲ್ಲಿಯೂ ಅನುರಕ್ತರಾಗಿರುವ ನಮಗೆ ಏಕೆ ದುಃಖಗಳು ಪುನಃ ಪುನಃ ಬರುತ್ತಲೇ ಇರುತ್ತವೆ?”

ಅದಕ್ಕೆ ಯುಧಿಷ್ಠಿರನು ಉತ್ತರಿಸಿದನು: “ಆಪತ್ತಿಗೆ ಮಿತಿಯಿಲ್ಲ, ನಿಮಿತ್ತ-ಕಾರಣಗಳೂ ಇಲ್ಲ. ಪುಣ್ಯ-ಪಾಪಗಳ ಪ್ರಕಾರ ಧರ್ಮನು ಸುಖ-ಕಷ್ಟಗಳನ್ನು ಪಾಲುಮಾಡಿ ನೀಡುತ್ತಿರುತ್ತಾನೆ!”

ಆಗ ಭೀಮನು ಹೇಳಿದನು: “ಕೃಷ್ಣೆಯನ್ನು ಸೇವಕಿಯಂತೆ ಸಭೆಗೆ ತಂದ ಆ ಪ್ರತಿಕಾಮಿಯನ್ನು ನಾನು ಅಲ್ಲಿಯೇ ಕೊಲ್ಲಲಿಲ್ಲವಲ್ಲ! ಆ ಕಾರಣದಿಂದಲೇ ನಮಗೆ ಈ ಸಮಸ್ಯೆಯುಂಟಾಗಿದೆ. ಬೇರೆ ಏನೂ ಅಲ್ಲ!”

ಅರ್ಜುನನು ಹೇಳಿದನು: “ಎಲುಬುಗಳನ್ನೂ ಭೇದಿಸುವಂತಹ ತೀಕ್ಷ್ಣ ಮಾತುಗಳನ್ನಾಡಿದ ಆ ಸೂತಪುತ್ರನನ್ನು ಅಂದು ನಾನು ಸಹಿಸಿಕೊಂಡೆನಲ್ಲ! ಆದುದರಿಂದಲೇ ನಾವು ಈ ಕಷ್ಟವನ್ನು ಪಡೆದುಕೊಂಡಿದ್ದೇವೆ. ಬೇರೆ ಯಾವ ಕಾರಣದಿಂದಲೂ ಅಲ್ಲ!”

ಸಹದೇವನು ಹೇಳಿದನು: “ಅಣ್ಣ! ನಿನ್ನನ್ನು ಅಕ್ಷದ್ಯೂತದಲ್ಲಿ ಸೋಲಿಸಿದ ಶಕುನಿಯನ್ನು ನಾನು ಅಂದೇ ಕೊಲ್ಲಲಿಲ್ಲವಲ್ಲ! ಆ ಕಾರಣದಿಂದಲೇ ನಮಗೆ ಈ ಸಮಸ್ಯೆಯುಂಟಾಗಿದೆ!”

ನಾಲ್ವರು ಪಾಂಡವರು ಸರೋವರದಲ್ಲಿ ಹತರಾಗಿ ಬಿದ್ದುದು

ಆಗ ಯುಧಿಷ್ಠಿರನು ನಕುಲನಿಗೆ ಹೇಳಿದನು: “ನಕುಲ! ಮರವನ್ನು ಹತ್ತಿ ಹತ್ತು ದಿಕ್ಕುಗಳಲ್ಲಿಯೂ ಕಣ್ಣುಹಾಯಿಸಿ ಹತ್ತಿರದಲ್ಲಿ ಎಲ್ಲಾದರೂ ನೀರಿದೆಯೋ ಅಥವಾ ನೀರಿನ ಬಳಿ ಬೆಳೆಯುವ ಮರಗಳಿವೆಯೋ ನೋಡು! ಇಲ್ಲಿ ನಿನ್ನ ಸಹೋದರರು ಬಾಯಾರಿಕೆಯಿಂದ ಬಳಲಿದ್ದಾರೆ!”

ಅದನ್ನು ಕೇಳಿ ನಕುಲನು ಬೇಗನೆ ಮರವನ್ನು ಹತ್ತಿ ಸುತ್ತಲೂ ನೋಡಿ ಯುಧಿಷ್ಠಿರನಿಗೆ ಹೇಳಿದನು: “ರಾಜನ್! ನೀರಿನ ಬಳಿ ಬೆಳೆಯುವ ಮರಗಳು ಕಾಣುತ್ತಿವೆ! ಸಾರಸಗಳ ಕೂಗನ್ನೂ ಕೇಳುತ್ತಿದ್ದೇನೆ! ಅಲ್ಲಿ ನೀರಿದೆ ಎನ್ನುವುದರಲ್ಲಿ ಸಂಶಯವಿಲ್ಲ!”

ಆಗ ಯುಧಿಷ್ಠಿರನು ಅವನಿಗೆ ಹೇಳಿದನು: “ನಕುಲ! ಶೀಘ್ರವಾಗಿ ಅಲ್ಲಿಗೆ ಹೋಗಿ ಕುಡಿಯಲು ನೀರನ್ನು ಈ ತೂಣೀರದಲ್ಲಿ ತುಂಬಿಸಿ ತೆಗೆದುಕೊಂಡು ಬಾ!”

ಅಣ್ಣನು ಹೇಳಿದಂತೆ ನಕುಲನು ಸಾರಸಗಳು ಸುತ್ತುವರೆದಿದ್ದ ಶುದ್ಧ ನೀರಿನ ಬಳಿ ಬಂದನು. ಅವನು ನೀರನ್ನು ಕುಡಿಯಲು ಹೋದಾಗ ಅಂತರಿಕ್ಷದಿಂದ ಈ ಮಾತುಗಳು ಕೇಳಿಬಂದವು: “ಮಗೂ! ಸಾಹಸಿಯಾಗಬೇಡ! ಈ ಕೊಳವು ಮೊದಲಿನಿಂದಲೂ ನನ್ನ ಅಧೀನದಲ್ಲಿದೆ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ಕುಡಿ!” ತುಂಬಾ ಬಾಯಾರಿದ್ದ ನಕುಲನು ಆ ಮಾತನ್ನು ಅನಾದರಿಸಿ ನೀರನ್ನು ಕುಡಿದನು. ಕೂಡಲೇ ಕೆಳಕ್ಕುರುಳಿ ಬಿದ್ದನು.

ನಕುಲನು ಇನ್ನೂ ಬಾರದೇ ಇದ್ದಾಗ ಯುಧಿಷ್ಠಿರನು ತಮ್ಮ ಸಹದೇವನಿಗೆ “ಮಗೂ! ಸಹದೇವ! ನಿನ್ನ ಅಣ್ಣನು ತಡಮಾಡುತ್ತಿದ್ದಾನೆ. ಹೋಗು. ಅವನನ್ನೂ ನೀರನ್ನೂ ಜೊತೆಯಲ್ಲಿ ತಾ!” ಎಂದು ಹೇಳಿದನು.

ಹಾಗೆಯೇ ಆಗಲೆಂದು ಹೇಳಿ ಸಹದೇವನು ನಕುಲನು ಹೋದ ದಿಕ್ಕಿನಲ್ಲಿಯೇ ಹೋದನು. ಅಲ್ಲಿ ನೆಲದಮೇಲೆ ಹತನಾಗಿ ಬಿದ್ದಿದ್ದ ಅಣ್ಣ ನಕುಲನನ್ನು ನೋಡಿ, ಭ್ರಾತೃಶೋಕ-ಬಾಯಾರಿಕೆಗಳಿಂದ ಸಂತಪ್ತನಾಗಿ ಬಳಲಿದ್ದ ಅವನು ನೀರಿನ ಕಡೆ ಓಡಿದನು. ಆಗ ಧ್ವನಿಯು ಕೇಳಿಸಿತು: “ಮಗೂ! ಸಾಹಸಿಯಾಗಬೇಡ! ಈ ಕೊಳವು ಮೊದಲಿನಿಂದಲೂ ನನ್ನ ಅಧೀನದಲ್ಲಿದೆ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ಕುಡಿ!”  ತುಂಬಾ ಬಯಾರಿದ್ದ ಸಹದೇವನು ಆ ಮಾತನ್ನು ಅನಾದರಿಸಿ ನೀರನ್ನು ಕುಡಿದನು. ಕೂಡಲೇ ಕೆಳಕ್ಕುರುಳಿ ಬಿದ್ದನು.

ಆಗ ಯುಧಿಷ್ಠಿರನು ಅರ್ಜುನನಿಗೆ ಹೇಳಿದನು: “ಅರ್ಜುನ! ನಿನ್ನ ತಮ್ಮಂದಿರಿಬ್ಬರೂ ಹೋಗಿ ಬಹಳ ಸಮಯವಾಯಿತು! ಅವರಿಬ್ಬರನ್ನೂ ಕರೆದುಕೊಂಡು ಬಾ! ನೀರನ್ನೂ ತೆಗೆದುಕೊಂಡು ಬಾ!”

ಹೀಗೆ ಹೇಳಲು ಅರ್ಜುನನು ಧನುರ್ಬಾಣಗಳನ್ನು ಹಿಡಿದು ಖಡ್ಗವನ್ನು ಸೆಳೆದು ಆ ಸರೋವರದ ಕಡೆ ಅವಸರದಿಂದ ಹೋದನು. ತಮ್ಮಂದಿರಿಬ್ಬರೂ ಅಲ್ಲಿ ಹತರಾಗಿ ಬಿದ್ದಿರುವುದನ್ನು ನೋಡಿದನು. ಮಲಗಿದ್ದಾರೋ ಎನ್ನುವಂತಿದ್ದ ಅವರನ್ನು ನೋಡಿ ದುಃಖಿತನಾದ ಅರ್ಜುನನು ಧನುಸ್ಸನ್ನು ಮೇಲೆತ್ತಿ ಆ ವನವನ್ನು ಅವಲೋಕಿಸಿದನು. ಆ ಮಹಾವನದಲ್ಲಿ ಯಾವ ಜೀವವನ್ನೂ ಕಾಣದೇ ಆಯಾಸಗೊಂಡಿದ್ದ ಅರ್ಜುನನು ನೀರನ್ನು ಕುಡಿಯಲು ಮುಂದಾದನು. ಅವನು ಮುಂದಾಗುತ್ತಿದ್ದಂತೆಯೇ ಆಕಾಶದಿಂದ ಮಾತೊಂದು ಕೇಳಿಬಂದಿತು: “ಇಲ್ಲಿಗೆ ಏಕೆ ಬಂದೆ? ಬಲವನ್ನುಪಯೋಗಿಸಿ ನೀನು ನೀರನ್ನು ಕುಡಿಯಲಾರೆ! ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟ ನಂತರವೇ ನೀನು ನೀರನ್ನು ಕುಡಿಯಬಲ್ಲೆ!”

ಹೀಗೆ ತಡೆಯಲ್ಪಟ್ಟ ಅರ್ಜುನನು ಹೇಳಿದನು: “ಕಣ್ಣಿಗೆ ಕಾಣಿಸಿಕೊಂಡು ನನ್ನನ್ನು ತಡೆ! ಆಗ ನನ್ನ ಬಾಣಗಳಿಂದ ನಿರ್ಭಿನ್ನನಾಗಿ ಪುನಃ ಎಂದೂ ಮಾತನಾಡುವುದಿಲ್ಲ!” ಹೀಗೆ ಹೇಳಿ ಪಾರ್ಥನು ಅಸ್ತ್ರಗಳಿಂದ ಅನುಮಂತ್ರಿಸಿದ ಬಾಣಗಳನ್ನು ಎಲ್ಲ ದಿಕ್ಕುಗಳಲ್ಲಿಯೂ ಸುರಿಸಿ, ತನ್ನ ಶಬ್ಧವೇದಿ ವಿದ್ಯೆಯನ್ನು ಪ್ರದರ್ಶಿಸಿದನು. ಆಗ ಯಕ್ಷನು ಹೇಳಿದನು: “ಈ ವಿಘಾತವೇಕೆ ಪಾರ್ಥ? ಪ್ರಶ್ನೆಗಳಿಗೆ ಉತ್ತರಿಸಿ ಕುಡಿ. ಉತ್ತರಿಸದೇ ಕುಡಿದರೆ ತಕ್ಷಣವೇ ಇಲ್ಲವಾಗುತ್ತೀಯೆ!” ತನ್ನ ಬಾಣಗಳು ವ್ಯರ್ಥವಾದುದರಿಂದ ಮತ್ತು ಬಾಯಾರಿಕೆಯಿಂದ ವ್ಯಥಿತನಾಗಿದ್ದ ಅರ್ಜುನನು ಆ ಪ್ರಶ್ನೆಗಳಿಗೆ ಮನಗೊಡದೇ ನೀರನ್ನು ಕುಡಿದು ತಕ್ಷಣವೇ ಕೆಳಕ್ಕುರುಳಿ ಬಿದ್ದನು.

ಆಗ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು: “ನಕುಲ, ಸಹದೇವ ಮತ್ತು ಅರ್ಜುನನೂ ಹೋಗಿ ಬಹಳ ಸಮಯವಾಯಿತು. ಮರಳಿ ಬಂದಿಲ್ಲ. ಹೋಗಿ ಅವರನ್ನು ಕರೆದುಕೊಂಡು ಬಾ ಮತ್ತು ನೀರನ್ನೂ ತೆಗೆದುಕೊಂಡು ಬಾ!”

ಹಾಗೆಯೇ ಆಗಲೆಂದು ಹೇಳಿ ಭೀಮಸೇನನು ಅವರು ಹೋದ ಕಡೆಯಲ್ಲಿಯೇ ಹೋದನು. ಅಲ್ಲಿ ತನ್ನ ತಮ್ಮಂದಿರು ಬಿದ್ದಿರುವುದನ್ನು ನೋಡಿ ದುಃಖಿತನಾಗಿ, ಬಾಯಾರಿಕೆಯಿಂದ ಪೀಡಿತನಾಗಿದ್ದ ಭೀಮನು “ಇದು ಯಾರೋ ಯಕ್ಷ ಅಥವಾ ರಾಕ್ಷಸರ ಕೆಲಸವಾಗಿರಬಹುದು! ಅವರೊಡನೆ ಯುದ್ಧವು ನನಗೆ ತಪ್ಪಿದ್ದಲ್ಲ!” ಎಂದು ಯೋಚಿಸಿದನು. “ಅದಕ್ಕೆ ಮೊದಲು ನೀರನ್ನು ಕುಡಿಯುತ್ತೇನೆ!” ಎಂದು ಅವನು ನೀರಿನ ಬಳಿ ಹೋದನು. ಆಗ ಯಕ್ಷನು ಹೇಳಿದನು: “ಮಗೂ! ಸಾಹಸಿಯಾಗಬೇಡ! ಈ ಕೊಳವು ಮೊದಲಿನಿಂದಲೂ ನನ್ನ ಅಧೀನದಲ್ಲಿದೆ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ಕುಡಿ!” ಯಕ್ಷನು ಹೀಗೆ ಹೇಳಲು ಭೀಮನು ಆ ಪ್ರಶ್ನೆಗಳನ್ನು ಕಡೆಗಣಿಸಿ ನೀರನ್ನು ಕುಡಿಯಲು ತಕ್ಷಣವೇ ಕೆಳಕ್ಕುರುಳಿ ಬಿದ್ದನು.

ಆಗ ಯುಧಿಷ್ಠಿರನು ಚಿಂತಿಸಿ, ಬಾಯಾರಿಕೆಯಿಂದ ಚೇತನವೆಲ್ಲವೂ ಸುಡುತ್ತಿರಲು, ಮೇಲೆದ್ದನು. ಜನರ ಸುಳಿಯೂ, ಸದ್ದೂ ಹೊರಟುಹೋಗಿದ್ದ, ರುರು-ವರಾಹ-ಪಕ್ಷಿಗಳು ವಾಸಿಸುತ್ತಿದ್ದ, ಕಪ್ಪಾಗಿ ಹೊಳೆಯುವ ಮರಗಳಿಂದ ಶೋಭಿಸುತ್ತಿದ್ದ, ಭ್ರಮರ-ಪಕ್ಷಿಗಳ ಉಪಗೀತೆಗಳಿಂದ ಕೂಡಿದ್ದ ಆ ಮಹಾವನವನ್ನು ಪ್ರವೇಶಿಸಿದನು. ಕಾನನದಲ್ಲಿ ಮುಂದೆ ನಡೆದು ಹೇಮಜಾಲಗಳಿಂದ ಪರಿಷ್ಕೃತವಾದ ವಿಶ್ವಕರ್ಮನೇ ನಿರ್ಮಿಸಿದಂತಿದ್ದ ಆ ಸರೋವರವನ್ನು ನೋಡಿದನು. ಶ್ರಮಪಟ್ಟು ಅದರ ಹತ್ತಿರ ಹೋಗಿ ನಲಿನೀ ಜಾಲಗಳಿಂದ ಮತ್ತು ಸಿಂಧುವಾರಗಳಿಂದ ಕೂಡಿದ್ದ, ಕೇತಕೀ-ಕರವೀರ-ಪಿಪ್ಪಲ ಮರಗಳಿಂದ ಸುತ್ತುವರೆದಿದ್ದ ಆ ಸರೋರವರವನ್ನು ನೋಡಿ ವಿಸ್ಮಿತನಾದನು.

ಯಕ್ಷಪ್ರಶ್ನೆ

ಅಲ್ಲಿ ಅವನು ಯುಗಾಂತದಲ್ಲಿ ಕೆಳಗುರುಳಿ ಬಿದ್ದ ಲೋಕಪಾಲಕರಂತೆ ಹತರಾಗಿದ್ದ ತನ್ನ ತಮ್ಮಂದಿರನ್ನು ನೋಡಿದನು. ಅರ್ಜುನ, ಭೀಮಸೇನ ಮತ್ತು ಯಮಳರಿಬ್ಬರೂ ಅಯುಸ್ಸನ್ನು ಕಳೆದುಕೊಂಡು ನಿಶ್ಚೇಷ್ಟರಾಗಿ ಬಿದ್ದಿರುವುದನ್ನು ನೋಡಿ ಅವನು ದೀರ್ಘ ಬಿಸಿಉಸಿರು ಬಿಡುತ್ತಾ ಕಣ್ಣೀರಿನಿಂದ ತುಂಬಿದವನಾಗಿ ಶೋಕಿಸಿದನು. “ಈ ವೀರರು ಯಾರಿಂದ ಕೆಳಗುರುಳಿಸಲ್ಪಟ್ಟರು?” ಎಂದು ಯೋಚಿಸತೊಡಗಿದನು. “ಇಲ್ಲಿ ಏನೂ ಶಸ್ತ್ರಪ್ರಹಾರವಾಗಿಲ್ಲ. ಯಾರ ಹೆಜ್ಜೆಯ ಗುರುತೂ ಇಲ್ಲಿ ಕಾಣಿಸುತ್ತಿಲ್ಲ. ನನ್ನ ಈ ತಮ್ಮಂದಿರನ್ನು ಕೊಂದಿರುವುದು ಒಂದು ಮಹಾಭೂತವೆಂದೇ ನಾನು ಭಾವಿಸುತ್ತೇನೆ. ಈ ನೀರನ್ನು ಕುಡಿದು ನಂತರ ಏಕಾಗ್ರಚಿತ್ತನಾಗಿ ಆಲೋಚಿಸುತ್ತೇನೆ! ಅಥವಾ ಇದು ಸತತವೂ ಕೆಟ್ಟಬುದ್ಧಿಯುಳ್ಳ ಶಕುನಿಯು ದುರ್ಯೋಧನನ ಆದೇಶದಂತೆ ನಡೆಸಿದ ಕಾರ್ಯವಾಗಿರಬಹುದೇ? ಕಾರ್ಯ-ಅಕಾರ್ಯಗಳನ್ನು ಸಮನಾಗಿ ಕಾಣುವ ಯಾರ ಮೇಲೆ ತಾನೇ ವಿಶ್ವಾಸವಿಡಬಹುದು?” ಹೀಗೆ ಆ ಮಹಾಬಾಹುವು ಬಹುವಿಧದಲ್ಲಿ ಚಿಂತಿಸಿದನು. “ನನ್ನ ತಮ್ಮಂದಿರ ಮುಖವರ್ಣವು ಪ್ರಸನ್ನವಾಗಿಯೇ ಇದ್ದುದರಿಂದ ಈ ನೀರು ವಿಷದಿಂದ ದೂಷಿತವಾಗಿರಲಿಕ್ಕಿಲ್ಲ” ಎಂದೂ ಅವನು ಯೋಚಿಸಿದನು. “ಯಮನಲ್ಲದೇ ಬೇರೆ ಯಾರು ಈ ಬಲಶಾಲೀ ಪುರುಷೋತ್ತಮರನ್ನು ಒಬ್ಬೊಬ್ಬರನ್ನೇ ಅಲೆಗಳಂತೆ ಹೊಡೆದು ಉರುಳಿಸಿದ್ದಾರು?” ಹೀಗೆ ನಿರ್ಧರಿಸಿದ ಅವನು ನೀರಿನ ಬಳಿ ಹೋಗಿ ನೀರನ್ನು ತೆಗೆದುಕೊಳ್ಳುತ್ತಿರುವಾಗ ಅಂತರಿಕ್ಷದಿಂದ ಈ ಮಾತನ್ನು ಕೇಳಿದನು:

“ಶೈವಲ ಮತ್ತು ಮೀನನ್ನು ತಿನ್ನುವ ಬಕ ನಾನು! ನಿನ್ನ ತಮ್ಮಂದಿರು ನನ್ನಿಂದಾಗಿಯೇ ಪ್ರೇತವಶವನ್ನು ಪಡೆದಿದ್ದಾರೆ. ರಾಜಪುತ್ರ! ನಾನು ಕೇಳುವ ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡದೇ ಇದ್ದರೆ ನೀನು ಐದನೆಯವನಾಗುತ್ತೀಯೆ! ಮಗೂ! ಸಾಹಸಿಯಾಗಬೇಡ! ಈ ಕೊಳವು ಮೊದಲಿನಿಂದಲೂ ನನ್ನ ಅಧೀನದಲ್ಲಿದೆ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ಕುಡಿ!”

ಯುಧಿಷ್ಠಿರನು ಹೇಳಿದನು: “ನೀನು ಯಾರು? ರುದ್ರ, ವಸು ಅಥವಾ ಮರುತ್ತರ ನಾಯಕನೋ? ಅಥವಾ ದೇವನೋ? ಇದು ಪಕ್ಷಿಯ ಕೃತ್ಯವಲ್ಲ! ನಿನ್ನದೇ ತೇಜಸ್ಸಿನಿಂದ – ಹಿಮಾಲಯ, ಪಾರಿಯಾತ್ರ, ವಿಂಧ್ಯ ಮತ್ತು ಮಲಯ – ಈ ನಾಲ್ಕು ಪರ್ವತಗಳಂತಿದ್ದವರನ್ನು ಕೆಳಗುರುಳಿಸಿದ ನೀನು ಯಾರು? ನೀನು ಅತೀವ ಮಹತ್ಕಾರ್ಯವನ್ನು ಮಾಡಿದ್ದೀಯೆ. ದೇವತೆಗಳೂ, ಗಂಧರ್ವರೂ, ಅಸುರರೂ ಮತ್ತು ರಾಕ್ಷಸರೂ ಮಾಡಲಾಗದ ಮಹಾ ಅದ್ಭುತವನ್ನು ನೀನು ಎಸಗಿದ್ದೀಯೆ. ನನಗೆ ನಿನ್ನ ಕಾರ್ಯವು ತಿಳಿಯುತ್ತಿಲ್ಲ. ನಿನ್ನ ಇಂಗಿತವೂ ತಿಳಿಯುತ್ತಿಲ್ಲ. ಮಹಾ ಕುತೂಹಲವು ನನ್ನಲ್ಲಿ ಹುಟ್ಟಿದೆ. ಮಹಾ ಉದ್ವೇಗವೂ ನನ್ನದಾಗಿದೆ. ಯಾರು ನನ್ನಲ್ಲಿ ಈ ರೀತಿಯ ಉದ್ವಿಗ್ನತೆಯನ್ನೂ ಜ್ವರವನ್ನೂ ಉಂಟುಮಾಡಿದ್ದಾನೋ ಆ ಭಗವಂತನಲ್ಲಿ ಕೇಳುತ್ತಿದ್ದೇನೆ – ಇಲ್ಲಿ ನಿಂತಿರುವವನು ಯಾರು?”

ಯಕ್ಷನು ಹೇಳಿದನು: “ನಿನಗೆ ಮಂಗಳವಾಗಲಿ! ನಾನು ಯಕ್ಷ! ಜಲಚರ ಪಕ್ಷಿಯಲ್ಲ! ನನ್ನಿಂದಲೇ ಈ ಮಹೌಜಸ ತಮ್ಮಂದಿರೆಲ್ಲರೂ ಹತರಾಗಿದ್ದಾರೆ!”

ಯಕ್ಷನು ಹೇಳಿದ ಆ ಅಮಂಗಲ ಕಠೋರ ಮಾತನ್ನು ಕೇಳಿದ ಯುಧಿಷ್ಠಿರನು ಮುಂದೆ ಸಾಗಿ ಅವನ ಹತ್ತಿರ ಹೋದನು. ಆಗ ಅವನು ಸೇತುವಿನ ಮೇಲೆ ನಿಂತಿದ್ದ ವಿರೂಪಾಕ್ಷ, ತಾಳೆಯಮರದಂತೆ ಮಹಾಕಾಯನಾಗಿದ್ದ, ಸುಡುತ್ತಿರುವ ಸೂರ್ಯನಂತಿರುವ, ಪರ್ವತೋಪಮನಾಗಿ ನಿಂತು ಅದೃಶ್ಯ ಗುಡುಗಿನಂತೆ ಗಂಭೀರಧ್ವನಿಯಲ್ಲಿ ಮಾತನಾಡಿ ಭಯವನ್ನುಂಟುಮಾಡುತ್ತಿದ್ದ ಆ ಮಹಾಬಲನನ್ನು ನೋಡಿದನು. ಯಕ್ಷನು ಹೇಳಿದನು: “ರಾಜನ್! ನಾನು ಎಷ್ಟು ತಡೆದರೂ ನಿನ್ನ ಈ ತಮ್ಮಂದಿರು ಬಲವಂತವಾಗಿ ನೀರನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದುದರಿಂದ ನಾನು ಅವರನ್ನು ಮುಗಿಸಿದೆ. ಪ್ರಾಣದಿಂದ ಉಳಿಯಲು ಬಯಸುವ ಯಾರೂ ಈ ನೀರನ್ನು ಕುಡಿಯಬಾರದು! ಮೊದಲಿನಿಂದಲೂ ನನ್ನ ಆಸ್ತಿಯಾಗಿರುವ ಇದರ ಕುರಿತು ಸಾಹಸವನ್ನೆಸಗಬೇಡ! ನನ್ನ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಈ ನೀರನ್ನು ತೆಗೆದು ಕುಡಿಯಬಹುದು!”

ಯುಧಿಷ್ಠಿರನು ಹೇಳಿದನು: “ಯಕ್ಷ! ನಾನು ನಿನ್ನ ಈ ಹಳೆಯ ಆಸ್ತಿಯನ್ನು ಉಲ್ಲಂಘಿಸಲು ಬಯಸುವುದಿಲ್ಲ. ಏಕೆಂದರೆ ಸತ್ಪುರುಷರು ಇತರರ ಆಸ್ತಿಯನ್ನು ಉಲ್ಲಂಘಿಸುವುದನ್ನು ಒಪ್ಪುವುದಿಲ್ಲ. ಪುರುಷನು ತನ್ನ ಆತ್ಮನಿಂದ ಆತ್ಮನಿಗೆ ಹೇಗೆ ಹೇಳಿಕೊಳ್ಳುತ್ತಾನೋ ಹಾಗೆ ನಿನ್ನ ಪ್ರಶ್ನೆಗಳಿಗೆ, ನನಗೆ ತಿಳಿದ ಹಾಗೆ, ಉತ್ತರಿಸುತ್ತೇನೆ. ನನ್ನನ್ನು ಕೇಳು!”

ಯಕ್ಷನು ಪ್ರಶ್ನಿಸಿದನು: “ಆದಿತ್ಯನನ್ನು ಉದಯಗೊಳಿಸುವುದು ಏನು? ಅವನೊಂದಿಗೆ ಸಂಚರಿಸುವವರು ಯಾರು? ಅವನನ್ನು ಮುಳುಗಿಸುವುದು ಯಾವುದು? ಮತ್ತು ಅವನು ಯಾವುದರ ಆಧಾರದ ಮೇಲಿದ್ದಾನೆ?”

ಯುಧಿಷ್ಠಿರನು ಉತ್ತರಿಸಿದನು: “ಬ್ರಹ್ಮನು ಆದಿತ್ಯನನ್ನು ಉದಯಿಸುತ್ತಾನೆ. ದೇವತೆಗಳು ಅವನ ಅಭಿಚರರು. ಧರ್ಮವು ಅವನನ್ನು ಅಸ್ತಗೊಳಿಸುತ್ತದೆ. ಮತ್ತು ಸತ್ಯದಲ್ಲಿ ಅವನು ಪ್ರತಿಷ್ಠಿತನಾಗಿದ್ದಾನೆ.”

ಯಕ್ಷನು ಪ್ರಶ್ನಿಸಿದನು: “ಯಾವುದರಿಂದ ಶ್ರೋತ್ರಿಯಾಗಬಹುದು? ಯಾವುದರಿಂದ ಮಹಾಗತಿಯನ್ನು ಪಡೆಯಬಹುದು? ಯಾವುದರಿಂದ ಎರಡನೆಯದನ್ನು ಪಡೆದುಕೊಳ್ಳಬಹುದು ಮತ್ತು ಯಾವುದರಿಂದ ಬುದ್ಧಿವಂತನಾಗಬಹುದು?”

ಯುಧಿಷ್ಠಿರನು ಉತ್ತರಿಸಿದನು: “ಶೃತಿಯಿಂದ ಶ್ರೋತ್ರನಾಗಬಹುದು. ತಪಸ್ಸಿನಿಂದ ಮಹಾಗತಿಯನ್ನು ಪಡೆಯಬಹುದು. ಧೃತಿಯಿಂದ ಎರಡನೆಯನ್ನು ಪಡೆದುಕೊಳ್ಳಬಹುದು ಮತ್ತು ವೃದ್ಧರ ಸೇವೆಯಿಂದ ಬುದ್ಧಿವಂತನಾಗಬಹುದು.”

ಯಕ್ಷನು ಪ್ರಶ್ನಿಸಿದನು: “ಬ್ರಾಹ್ಮಣರ ದೇವತ್ವವು ಯಾವುದು? ಅವರ ಧರ್ಮದ ಸತ್ವವೇನು? ಅವರ ಮನುಷ್ಯತ್ವವೇನು? ಅವರ ಅಸತ್ತ್ವವೇನು?”

ಯುಧಿಷ್ಠಿರನು ಉತ್ತರಿಸಿದನು: “ಸ್ವಾಧ್ಯಾಯವು ಬ್ರಾಹ್ಮಣರ ದೇವತ್ವವು. ತಪಸ್ಸು ಅವರ ಸತ್ತ್ವ. ಮರಣವು ಅವರ ಮನುಷ್ಯಭಾವ ಮತ್ತು ಪರಿವಾದವು ಅವರ ಅಸತ್ತ್ವ.”

ಯಕ್ಷನು ಪ್ರಶ್ನಿಸಿದನು: “ಕ್ಷತ್ರಿಯರ ದೇವತ್ವವು ಯಾವುದು? ಅವರ ಧರ್ಮದ ಸತ್ತ್ವವೇನು? ಅವರ ಮನುಷ್ಯತ್ವವೇನು? ಅವರ ಅಸತ್ತ್ವವೇನು?”

ಯುಧಿಷ್ಠಿರನು ಉತ್ತರಿಸಿದನು: “ಆಯುಧಗಳು ಕ್ಷತ್ರಿಯರ ದೇವತ್ವ. ಯಜ್ಞವು ಅವರ ಸತ್ತ್ವ. ಭಯವೇ ಅವರ ಮನುಷ್ಯಭಾವ ಮತ್ತು ಪರಿತ್ಯಾಗವು ಅವರ ಅಸತ್ತ್ವ.”

ಯಕ್ಷನು ಪ್ರಶ್ನಿಸಿದನು: “ಯಜ್ಞದಲ್ಲಿ ಒಂದೇ ಸಾಮವು ಯಾವುದು? ಯಜ್ಞದಲ್ಲಿ ಒಂದೇ ಯಜುವು ಯಾವುದು? ಯಜ್ಞವನ್ನು ಕ್ಷೀಣಿಸುವ ಆ ಒಂದು ಯಾವುದು? ಯಜ್ಞವನ್ನು ಮೀರುವ ಆ ಒಂದು ಯಾವುದು?”

ಯುಧಿಷ್ಠಿರನು ಉತ್ತರಿಸಿದನು: “ಪ್ರಾಣವೇ ಯಜ್ಞದ ಸಾಮ. ಮನಸ್ಸೇ ಯಜ್ಞದ ಯಜು. ಮಾತೇ ಯಜ್ಞವನ್ನು ಕ್ಷೀಣಿಸುತ್ತದೆ ಮತ್ತು ಯಜ್ಞವೇ ಯಜ್ಞವನ್ನು ಮೀರಬಲ್ಲದು.”

ಯಕ್ಷನು ಪ್ರಶ್ನಿಸಿದನು: “ಕೆಳಗೆ ಬೀಳುವವುಗಳಲ್ಲಿ ಶ್ರೇಷ್ಠವಾದುದು ಏನು? ಕೆಳಗೆ ಹೋಗುವವುಗಳಲ್ಲಿ ಶ್ರೇಷ್ಠವಾದುದು ಏನು? ನಿಂತಿರುವವುಗಳಲ್ಲಿ ಶ್ರೇಷ್ಠವಾದುದು ಏನು? ಮಾತನಾಡುವವುಗಳಲ್ಲಿ ಶ್ರೇಷ್ಠವಾದುದು ಏನು?”

ಯುಧಿಷ್ಠಿರನು ಉತ್ತರಿಸಿದನು: “ಕೆಳಗೆ ಬೀಳುವವುಗಳಲ್ಲಿ ಮಳೆಯೇ ಶ್ರೇಷ್ಠ. ಕೆಳಗೆ ಹೋಗುವವುಗಳಲ್ಲಿ ಬೀಜವೇ ಶ್ರೇಷ್ಠ. ನಿಂತಿರುವವುಗಳಲ್ಲಿ ಗೋವೇ ಶ್ರೇಷ್ಠ. ಮತ್ತು ಮಾತನಾಡುವವುಗಳಲ್ಲಿ ಪುತ್ರನೇ ಶ್ರೇಷ್ಠ.”

ಯಕ್ಷನು ಪ್ರಶ್ನಿಸಿದನು: “ಇಂದ್ರಿಯಗಳ ಮೂಲಕ ವಿಷಯಗಳನ್ನು ಅನುಭವಿಸುವ, ಬುದ್ಧಿವಂತನಾಗಿರುವ, ಲೋಕಪೂಜಿತನಾಗಿರುವ, ಸರ್ವಭೂತಗಳಿಂದ ಗೌರವಿಸಲ್ಪಡುವ, ಉಸಿರಾಡುತ್ತಿದ್ದರೂ ಜೀವಂತನಾಗಿರದವನು ಯಾರು?”

ಯುಧಿಷ್ಠಿರನು ಉತ್ತರಿಸಿದನು: “ದೇವತೆಗಳು, ಅತಿಥಿಗಳು, ಭೃತ್ಯರು, ಪಿತೃಗಳು ಮತ್ತು ಆತ್ಮ – ಈ ಐವರಿಗೆ ಯಾರು ಕೊಡುವುದಿಲ್ಲವೋ ಅವನು ಉಸಿರಾಡುತ್ತಿದ್ದರೂ ಜೀವಂತನಾಗಿರುವುದಿಲ್ಲ!”

ಯಕ್ಷನು ಪ್ರಶ್ನಿಸಿದನು: “ಭೂಮಿಗಿಂತಲೂ ಭಾರವಾದುದು ಏನು? ಆಕಾಶಕ್ಕಿಂತಲೂ ಎತ್ತರವಾದುದು ಏನು? ಗಾಳಿಗಿಂತಲೂ ವೇಗವಾದದ್ದು ಏನು? ಮನುಷ್ಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವುದು ಏನು?”

ಯುಧಿಷ್ಠಿರನು ಉತ್ತರಿಸಿದನು: “ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ. ಮನಸ್ಸು ಗಾಳಿಗಿಂತಲೂ ಶೀಘ್ರ. ಚಿಂತೆಗಳು ಮನುಷ್ಯರ ಸಂಖ್ಯೆಗಿಂತಲೂ ಹೆಚ್ಚು!”

ಯಕ್ಷನು ಪ್ರಶ್ನಿಸಿದನು: “ಯಾವುದು ಮಲಗಿರುವಾಗಲೂ ಕಣ್ಣುಮುಚ್ಚಿರುವುದಿಲ್ಲ? ಯಾವುದು ಹುಟ್ಟಿದರೂ ಚಲಿಸುವುದಿಲ್ಲ? ಯಾವುದಕ್ಕೆ ಹೃದಯವಿಲ್ಲ? ವೇಗದಲ್ಲಿರುವಾಗ ಯಾವುದು ಬೆಳೆಯುತ್ತದೆ?”

ಯುಧಿಷ್ಠಿರನು ಉತ್ತರಿಸಿದನು: “ಮೀನು ಮಲಗಿದ್ದರೂ ಕಣ್ಣು ಮುಚ್ಚಿರುವುದಿಲ್ಲ. ಮೊಟ್ಟೆಯು ಹುಟ್ಟಿದರೂ ಚಲಿಸುವುದಿಲ್ಲ. ಕಲ್ಲಿಗೆ ಹೃದಯವಿಲ್ಲ. ನದಿಯು ವೇಗದಲ್ಲಿರುವಾಗ ಬೆಳೆಯುತ್ತದೆ.”

ಯಕ್ಷನು ಪ್ರಶ್ನಿಸಿದನು: “ಪ್ರಯಾಣದಲ್ಲಿ ಮಿತ್ರನು ಯಾರು? ಮನೆಯಲ್ಲಿ ಮಿತ್ರನು ಯಾರು? ರೋಗಿಯ ಮಿತ್ರನು ಯಾರು? ಮೃತನಾದವನ ಮಿತ್ರನು ಯಾರು?”

ಯುಧಿಷ್ಠಿರನು ಉತ್ತರಿಸಿದನು: “ಜೊತೆಗೆ ಪ್ರಯಾಣಿಸುವವರು ಪ್ರಯಾಣದಲ್ಲಿ ಮಿತ್ರರು. ಮನೆಯಲ್ಲಿ ಪತ್ನಿಯು ಮಿತ್ರೆಯು. ರೋಗಿಗೆ ವೈದ್ಯನು ಮಿತ್ರ. ಮರಣಹೊಂದಿದವನಿಗೆ ದಾನವು ಮಿತ್ರ.”

ಯಕ್ಷನು ಪ್ರಶ್ನಿಸಿದನು: “ಒಂಟಿಯಾಗಿ ಸಂಚರಿಸುವುದು ಯಾವುದು? ಯಾವುದು ಹುಟ್ಟಿ ಪುನಃ ಹುಟ್ಟುತ್ತದೆ? ಹಿಮಕ್ಕೆ ಚಿಕಿತ್ಸೆಯು ಯಾವುದು? ಅತಿ ದೊಡ್ಡ ಜಾಗವು ಯಾವುದು?”

ಯುಧಿಷ್ಠಿರನು ಉತ್ತರಿಸಿದನು: “ಸೂರ್ಯನು ಒಂಟಿಯಾಗಿ ಸಂಚರಿಸುತ್ತಾನೆ. ಚಂದ್ರನು ಪುನಃ ಹುಟ್ಟುತ್ತಾನೆ. ಅಗ್ನಿಯು ಹಿಮದ ಚಿಕಿತ್ಸೆ. ಭೂಮಿಯೇ ಅತಿ ದೊಡ್ಡ ಜಾಗ.”

ಯಕ್ಷನು ಪ್ರಶ್ನಿಸಿದನು: “ಧರ್ಮದ ಒಂದು ಪದವು ಯಾವುದು? ಯಶಸ್ಸಿನ ಒಂದು ಪದವು ಯಾವುದು? ಸ್ವರ್ಗದ ಒಂದು ಪದವು ಯಾವುದು? ಸುಖದ ಒಂದು ಪದವು ಯಾವುದು?”

ಯುಧಿಷ್ಠಿರನು ಉತ್ತರಿಸಿದನು: “ದಕ್ಷತೆಯು ಧರ್ಮದ ಒಂದು ಪದ. ದಾನವು ಯಶಸ್ಸಿನ ಒಂದು ಪದ. ಸತ್ಯವು ಸ್ವರ್ಗದ ಒಂದು ಪದ. ಶೀಲವು ಸುಖದ ಒಂದು ಪದ.”

ಯಕ್ಷನು ಪ್ರಶ್ನಿಸಿದನು: “ಮನುಷ್ಯನ ಆತ್ಮವು ಯಾವುದು? ಅವನ ದೈವಕೃತ ಸಖನ್ಯಾರು? ಅವನ ಉಪಜೀವನವು ಯಾವುದು? ಅವನ ಪರಾಯಣವು ಯಾವುದು?”

ಯುಧಿಷ್ಠಿರನು ಉತ್ತರಿಸಿದನು: “ಪುತ್ರನೇ ಮನುಷ್ಯನ ಆತ್ಮ. ಭಾರ್ಯೆಯೇ ಅವನ ದೈವಕೃತ ಸಖಿ. ಪರ್ಜನ್ಯವು ಅವನ ಉಪಜೀವನ ಮತ್ತು ದಾನವೇ ಅವನ ಪರಾಯಣ.”

ಯಕ್ಷನು ಪ್ರಶ್ನಿಸಿದನು: “ಧನಿಗಳಿಗೆ ಉತ್ತಮವಾದುದು ಏನು? ಸಂಪತ್ತುಗಳಲ್ಲಿ ಯಾವುದು ಉತ್ತಮ? ಲಾಭಗಳಲ್ಲಿ ಉತ್ತಮವಾದುದು ಏನು? ಸುಖಗಳಲ್ಲಿ ಉತ್ತಮವಾದುದು ಏನು?”

ಯುಧಿಷ್ಠಿರನು ಉತ್ತರಿಸಿದನು: “ಧಕ್ಷತೆಯು ಧನಿಗಳಿಗೆ ಉತ್ತಮ. ಸಂಪತ್ತುಗಳಲ್ಲಿ ಧನವು ಉತ್ತಮ. ಲಾಭಗಳಲ್ಲಿ ಉತ್ತಮವಾದುದು ಆರೋಗ್ಯ. ಸುಖಗಳಲ್ಲಿ ತೃಪ್ತಿಯೇ ಉತ್ತಮವಾದುದು.”

ಯಕ್ಷನು ಪ್ರಶ್ನಿಸಿದನು: “ಲೋಕದಲ್ಲಿ ಪರಮ ಧರ್ಮವು ಯಾವುದು? ಸದಾ ಫಲವನ್ನು ನೀಡುವ ಧರ್ಮವು ಯಾವುದು? ನಿಯಂತ್ರಣದಲ್ಲಿದ್ದ ಯಾವುದು ಶೋಕಿಸುವುದಿಲ್ಲ? ಯಾರೊಡಗಿನ ಸಂಬಂಧವು ದುರ್ಬಲವಾಗುವುದಿಲ್ಲ?”

ಯುಧಿಷ್ಠಿರನು ಉತ್ತರಿಸಿದನು: “ಕ್ರೂರನಾಗಿಲ್ಲದಿರುವುದೇ ಲೋಕದಲ್ಲಿ ಪರಮ ಧರ್ಮ. ತ್ರಯೀ ಧರ್ಮವು ಸದಾ ಫಲವನ್ನು ನೀಡುತ್ತದೆ. ನಿಯಂತ್ರಣದಲ್ಲಿದ್ದ ಮನಸ್ಸು ಶೋಕಿಸುವುದಿಲ್ಲ. ಸಜ್ಜನರೊಡಗಿನ ಸಂಬಂಧವು ದುರ್ಬಲವಾಗುವುದಿಲ್ಲ.”

ಯಕ್ಷನು ಪ್ರಶ್ನಿಸಿದನು: “ಯಾವುದನ್ನು ತೊರೆದು ಪ್ರೀತಿಪಾತ್ರನಾಗಬಲ್ಲದು? ಯಾವುದನ್ನು ತೊರೆದರೆ ಶೋಕವುಂಟಾಗುವುದಿಲ್ಲ? ಯಾವುದನ್ನು ತೊರೆದು ಧನವಂತನಾಗಬಹುದು? ಯಾವುದನ್ನು ತೊರೆದು ಸುಖಿಯಾಗಬಹುದು?”

ಯುಧಿಷ್ಠಿರನು ಉತ್ತರಿಸಿದನು: “ಅಭಿಮಾನವನ್ನು ತೊರೆದರೆ ಪ್ರೀತಿಪಾತ್ರನಾಗಬಹುದು. ಸಿಟ್ಟನ್ನು ತೊರೆದರೆ ಶೋಕವುಂಟಾಗುವುದಿಲ್ಲ. ಆಸೆಗಳನ್ನು ತೊರೆದು ಧನವಂತನಾಗಬಹುದು. ಲೋಭವನ್ನು ತೊರೆದು ಸುಖಿಯಾಗಬಹುದು.”

ಯಕ್ಷನು ಪ್ರಶ್ನಿಸಿದನು: “ಪುರುಷನು ಹೇಗೆ ಸಾಯುತ್ತಾನೆ? ರಾಷ್ಟ್ರವು ಹೇಗೆ ನಾಶವಾತ್ತದೆ? ಶ್ರಾದ್ಧವು ಹೇಗೆ ನಿಷ್ಫಲವಾಗುತ್ತದೆ? ಯಜ್ಞವು ಹೇಗೆ ನಾಶವಾಗುತ್ತದೆ?”

ಯುಧಿಷ್ಠಿರನು ಉತ್ತರಿಸಿದನು: “ಬಡತನದಲ್ಲಿ ಪುರುಷನು ಸಾಯುತ್ತಾನೆ. ರಾಜನಿಲ್ಲದೇ ರಾಷ್ಟ್ರವು ನಾಶವಾಗುತ್ತದೆ. ಶ್ರೋತ್ರಿಯಿಲ್ಲದ ಶ್ರಾದ್ಧವು ನಿಷ್ಫಲವಾಗುತ್ತದೆ. ದಕ್ಷಿಣೆಯಿಲ್ಲದ ಯಜ್ಞವು ನಾಶವಾಗುತ್ತದೆ.”

ಯಕ್ಷನು ಪ್ರಶ್ನಿಸಿದನು: “ಸರಿಯಾದ ದಿಕ್ಕು ಯಾವುದು? ಯಾವುದಕ್ಕೆ ನೀರೆಂದು ಹೇಳುತ್ತಾರೆ? ಯಾವುದು ಅನ್ನ? ಯಾವುದು ವಿಷ? ಶ್ರಾದ್ಧದ ಕಾಲವು ಯಾವುದು? ಇವುಗಳಿಗೆ ಉತ್ತರಿಸಿದ ನಂತರ ನೀರನ್ನು ತೆಗೆದುಕೊಂಡು ಕುಡಿ!”

ಯುಧಿಷ್ಠಿರನು ಉತ್ತರಿಸಿದನು: “ಆಕಾಶವೇ ಸಂತರ ದಿಕ್ಕು. ಆಕಾಶವೇ ನೀರು. ಗೋವೇ ಅನ್ನ. ಬೇಡುವುದೇ ವಿಷ. ಬ್ರಾಹ್ಮಣನೇ ಶ್ರಾದ್ಧದ ಕಾಲ. ಅಥವಾ ಯಕ್ಷ! ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು?”

ಯಕ್ಷನು ಹೇಳಿದನು: “ಯುಧಿಷ್ಠಿರ! ನೀನು ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೀಯೆ! ಈಗ ಹೇಳು. ಪುರುಷನು ಯಾರು ಮತ್ತು ಯಾವ ನರನು ಸರ್ವ ಸಂಪತ್ತನ್ನೂ ಹೊಂದಿದ್ದಾನೆ?”

ಯುಧಿಷ್ಠಿರನು ಉತ್ತರಿಸಿದನು: “ಆಕಾಶ-ಭೂಮಿಗಳನ್ನು ಮುಟ್ಟುವ ಪ್ರಸಿದ್ದ ಪುಣ್ಯಕರ್ಮಿಯು ಎಲ್ಲಿಯವರೆಗೆ ಪ್ರಸಿದ್ಧನಾಗಿಯೇ ಇರುತ್ತಾನೋ ಅಲ್ಲಿಯವರೆಗೆ ಅವನನ್ನು ಪುರುಷ ಎಂದು ಕರೆಯುತ್ತಾರೆ! ಪ್ರಿಯ-ಅಪ್ರಿಯಗಳು, ಸುಖ-ದುಃಖಗಳು ಮತ್ತು ಭೂತ-ಭವಿಷ್ಯಗಳನ್ನು ಸಮನಾಗಿ ಕಾಣುವ ನರನೇ ಸರ್ವಧನಿಕ!”

ಯಕ್ಷನು ಹೇಳಿದನು: “ರಾಜನ್! ಪುರುಷ ಮತ್ತು ಸರ್ವಧನೀ ನರರನ್ನು ಸರಿಯಾಗಿ ವ್ಯಾಖ್ಯಾಯಿಸಿದ್ದೀಯೆ! ಆದುದರಿಂದ ನಿನ್ನ ತಮ್ಮಂದಿರಲ್ಲಿ ನೀನು ಬಯಸಿದ ಒಬ್ಬನು ಜೀವಿಸುತ್ತಾನೆ!”

ಯುಧಿಷ್ಠಿರನು ಹೇಳಿದನು: “ಯಕ್ಷ! ಕೆಂಪುಗಣ್ಣಿನ, ಕಪ್ಪುಬಣ್ಣದ, ಶಾಲವೃಕ್ಷದಂತೆ ಎತ್ತರವಾಗಿ ಬೆಳೆದಿರುವ, ವಿಶಾಲ ಎದೆಯ, ಮಹಾಬಾಹು ನಕುಲನು ಜೀವಿಸಲಿ!”

ಯಕ್ಷನು ಹೇಳಿದನು: “ರಾಜನ್! ನಿನಗೆ ಪ್ರಿಯನಾದವನು ಭೀಮಸೇನ. ಅರ್ಜುನನ ಮೇಲೆ ನೀನು ಅವಲಂಬಿಸಿರುವೆ. ಹೀಗಿರುವಾಗ ಏಕೆ ನಿನ್ನ ದಾಯಾದಿ ನಕುಲನು ಜೀವಿತನಾಗಲು ಬಯಸುತ್ತೀಯೆ? ಹತ್ತುಸಾವಿರ ಆನೆಗಳ ಬಲಗಳುಳ್ಳ ಭೀಮನನ್ನು ಬಿಟ್ಟು ನಕುಲನೇ ಜೀವಿತನಾಗಬೇಕೆಂದು ಏಕೆ ಬಯಸುತ್ತೀಯೆ? ಭೀಮಸೇನನೇ ನಿನಗೆ ಪ್ರಿಯನಾದವನೆಂದು ಜನರು ಹೇಳುತ್ತಾರೆ. ಹೀಗಿರುವಾಗ ಯಾವ ಭಾವನೆಯಿಂದ ನೀನು ನಿನ್ನ ಮಲತಾಯಿಯ ಮಗ ಈ ನಕುಲನು ಜೀವಿತನಾಗಬೇಕೆಂದು ಬಯಸುತ್ತೀಯೆ? ಯಾರ ಬಾಹುಬಲವನ್ನು ಸರ್ವ ಪಾಂಡವರೂ ಆಶ್ರಯಿಸಿರುವರೋ ಆ ಅರ್ಜುನನನ್ನು ಬಿಟ್ಟು ನಕುಲನೇ ಜೀವಿತನಾಗಬೇಕೆಂದು ಏಕೆ ಬಯಸುತ್ತೀಯೆ?”

ಯುಧಿಷ್ಠಿರನು ಹೇಳಿದನು: “ಕ್ರೂರಿಯಾಗದೇ ಇರುವುದು ಪರಮ ಧರ್ಮ. ಇದರ ಪರಮ ಅರ್ಥವು ನನಗೆ ತಿಳಿದಿದೆ. ನಾನು ಕ್ರೂರನಾಗಬಯಸುವುದಿಲ್ಲ. ಆದುದರಿಂದ ನಕುಲನು ಬದುಕಲಿ. ನನ್ನನ್ನು ಧರ್ಮಶೀಲ ರಾಜನೆಂದು ಜನರು ಸದಾ ತಿಳಿದುಕೊಂಡಿದ್ದಾರೆ. ಸ್ವಧರ್ಮದಿಂದ ನಾನು ವಿಚಲಿತನಾಗುವುದಿಲ್ಲ. ಆದುದರಿಂದ ನಕುಲನು ಬದುಕಲಿ. ಕುಂತಿಯಂತೆ ನನಗೆ ಮಾದ್ರಿಯೂ ಕೂಡ. ಅವರಿಬ್ಬರ ನಡುವೆ ನನಗೆ ಭೇದವಿಲ್ಲ. ಇಬ್ಬರು ತಾಯಂದಿರೂ ಸಮನಾಗಿರಬಯಸುತ್ತೇನೆ. ಆದುದರಿಂದ ನಕುಲನು ಜೀವಿಸಲಿ!”

ಯಕ್ಷನು ಹೇಳಿದನು: “ಭರತರ್ಷಭ! ಅರ್ಥ-ಕಾಮಗಳಿಗಿಂತ ಅಕ್ರೂರತೆಯು ಪರಮ ಧರ್ಮವೆಂದು ನೀನು ತಿಳಿದಿದ್ದೀಯೆ. ಆದುದರಿಂದ ನಿನ್ನ ಎಲ್ಲ ತಮ್ಮಂದಿರೂ ಬದುಕಲಿ!”

ಧರ್ಮನು ಯುಧಿಷ್ಠಿರನಿಗೆ ವರಗಳನ್ನಿತ್ತುದು

ಯಕ್ಷನು ಹೇಳಿದಂತೆ ಪಾಂಡವರು ಎದ್ದು ನಿಂತರು. ಕೂಡಲೇ ಅವರೆಲ್ಲರ ಹಸಿವು-ಬಾಯಾರಿಕೆಗಳು ಇಲ್ಲವಾದವು. ಆಗ ಯುಧಿಷ್ಠಿರನು ಯಕ್ಷನನ್ನು ಕೇಳಿದನು: “ಈ ಸರೋವರದಲ್ಲಿ ಒಂದೇ ಕಾಲಿನ ಮೇಲೆ ಅಪರಾಜಿತನಾಗಿ ನಿಂತಿರುವ ನೀನು ಯಾವ ದೇವತೆಯೆಂದು ತಿಳಿಯ ಬಯಸುತ್ತೇನೆ. ನೀನು ಯಕ್ಷನಾಗಿರಲಿಕ್ಕಿಲ್ಲ ಎಂದು ನನ್ನ ಅಭಿಪ್ರಾಯ! ನೀನು ವಸುಗಳಲ್ಲಿ ಒಬ್ಬನಾಗಿರಬಹುದು ಅಥವಾ ರುದ್ರರಲ್ಲಿ ಒಬ್ಬನಾಗಿರಬಹುದು! ಅಥವಾ ನೀನು ಮರುತ್ತರ ಶ್ರೇಷ್ಠನಾಗಿರಬಹುದೇ? ಅಥವಾ ತ್ರಿದಶೇಶ್ವರ ಇಂದ್ರನಾಗಿರಬಹುದೇ? ಏಕೆಂದರೆ ನನ್ನ ಈ ತಮ್ಮಂದಿರು ನೂರಾರು ಸಹಸ್ರಾರು ಯೋಧರೊಂದಿಗೆ ಹೋರಾಡಬಲ್ಲರು. ಅವರು ಹೇಗೆ ಕೆಳಗುರುಳಿಸಲ್ಪಟ್ಟರು ಎನ್ನುವುದೇ ನನಗೆ ತೋಚುತ್ತಿಲ್ಲ! ಅವರು ತಮ್ಮ ಇಂದ್ರಿಯ-ಬುದ್ಧಿಗಳನ್ನು ಸುಖವಾಗಿ ಪಡೆದಿರುವುದನ್ನು ನೋಡಿದರೆ ನೀನು ನಮ್ಮ ಸುಹೃದಯನಿರಬಹುದು. ಅಥವಾ ನೀನು ನನ್ನ ತಂದೆಯಾಗಿರಬಹುದೇ?”

ಯಕ್ಷನು ಹೇಳಿದನು: “ಮಗೂ! ಮೃದುಪರಾಕ್ರಮಿ! ನಾನು ನಿನ್ನ ತಂದೆ ಧರ್ಮ! ನಿನ್ನನ್ನು ನೋಡಲು ನಾನು ಬಂದಿದ್ದೇನೆ ಎಂದು ತಿಳಿ. ಯಶಸ್ಸು, ಸತ್ಯ, ದಮ, ಶೌಚ, ಆರ್ಜವ, ವಿನಯತೆ, ಅಚಪಲತೆ, ದಾನ, ತಪಸ್ಸು, ಮತ್ತು ಬ್ರಹ್ಮಚರ್ಯ ಇವೇ ನನ್ನ ದೇಹ. ಅಹಿಂಸೆ, ಸಮತೆ, ಶಾಂತಿ, ತಪಸ್ಸು, ಶೌಚ, ಅಮಾತ್ಸರ್ಯ ಇವು ನನ್ನ ದ್ವಾರಗಳು ಮತ್ತು ಸದಾ ಪ್ರಿಯವಾದವುಗಳು. ಅದೃಷ್ಟವೆಂದರೆ ನೀವು ಐವರು ಪರಸ್ಪರರಲ್ಲಿ ಅನುರಕ್ತರಾಗಿದ್ದೀರಿ. ಪರಲೋಕವನ್ನು ನೀಡುವ ಆರನ್ನು – ಮೊದಲಿನ ಎರಡು, ಮಧ್ಯದ ಎರಡು ಮತ್ತು ಅಂತ್ಯದ ಎರಡು – ಗೆದ್ದಿದ್ದೀರಿ. ನಿನ್ನೊಡನೆ ಜಿಜ್ಞಾಸಿಸಲು ಇಲ್ಲಿಗೆ ಬಂದೆ. ನಿನ್ನ ಸತ್ಯತೆಯಿಂದ ತುಷ್ಟನಾಗಿದ್ದೇನ. ನಿನಗೆ ಮಂಗಳವಾಗಲಿ! ನಿನಗೆ ವರವನ್ನು ಕೊಡುತ್ತೇನೆ. ಕೇಳು. ನನ್ನ ಭಕ್ತರಿಗೆ ದುರ್ಗತಿಯುಂಟಾಗುವುದಿಲ್ಲ!”

ಯುಧಿಷ್ಠಿರನು ಹೇಳಿದನು: “ಯಾರ ಅರಣಿಗಳನ್ನು ಜಿಂಕೆಯು ಎತ್ತಿಕೊಂಡು ಹೋಯಿತೋ ಆ ಬ್ರಾಹ್ಮಣನ ಅಗ್ನಿಯು ಆರದಿರಲಿ. ಇದೇ ನನ್ನ ಮೊದಲನೆಯ ವರ!”

ಧರ್ಮನು ಹೇಳಿದನು: “ಕೌಂತೇಯ! ನಿನ್ನನ್ನು ಪರೀಕ್ಷಿಸಲೆಂದೇ ಮೃಗವೇಷವನ್ನು ಧರಿಸಿ ನಾನೇ ಆ ಬ್ರಾಹ್ಮಣನ ಅರಣಿಗಳನ್ನು ಅಪಹರಿಸಿದ್ದೆ! ಈ ವರವನ್ನು ಕೊಡುತ್ತೇನೆ. ಬೇರೆ ವರವನ್ನು ಕೇಳು!”

ಯುಧಿಷ್ಠಿರನು ಹೇಳಿದನು: “ಅರಣ್ಯದಲ್ಲಿ ಹನ್ನೆರಡು ವರ್ಷಗಳು ಕಳೆದವು. ಹದಿಮೂರನೆಯ ವರ್ಷವು ಉಳಿದಿದೆ. ನಾವು ಎಲ್ಲಿ ವಾಸಿಸಿದರೂ ಅಲ್ಲಿ ಮನುಷ್ಯರು ನಮ್ಮನ್ನು ಗುರುತಿಸದೇ ಇರಲಿ!”

“ಅದನ್ನೂ ಕೊಟ್ಟಿದ್ದೇನೆ” ಎಂದು ಧರ್ಮನು ಉತ್ತರಿಸಿ, ಮತ್ತೊಮ್ಮೆ ಸತ್ಯವಿಕ್ರಮಿ ಯುಧಿಷ್ಠಿರನಿಗೆ ಆಶ್ವಾಸನೆಯನ್ನಿತ್ತನು: “ಭಾರತ! ಒಂದುವೇಳೆ ನಿಮ್ಮ ನಿಜ ರೂಪದಲ್ಲಿಯೇ ನೀವು ಈ ಭೂಮಿಯಲ್ಲಿ ಸಂಚರಿಸಿದರೂ ಈ ಮೂರು ಲೋಕಗಳಲ್ಲಿ ಯಾರೂ ನಿಮ್ಮನ್ನು ಗುರುತಿಸುವುದಿಲ್ಲ! ನನ್ನ ಪ್ರಸಾದದಿಂದ ನೀವು ಈ ಹದಿಮೂರನೆಯ ವರ್ಷವನ್ನು ವಿರಾಟನಗರದಲ್ಲಿ ಗೂಢರಾಗಿ ಅವಿಜ್ಞಾತರಾಗಿ ವಾಸಮಾಡಿಕೊಂಡಿರುತ್ತೀರಿ. ನಿಮಗಿಷ್ಟವಾದ ಯಾವ ರೂಪದಲ್ಲಿರಬೇಕೆಂದು ನೀವು ಸಂಕಲ್ಪಿಸುತ್ತೀರೋ ಅದೇ ರೂಪವನ್ನು ನೀವೆಲ್ಲರೂ ಪಡೆಯುತ್ತೀರಿ. ನಿನ್ನನ್ನು ಪರೀಕ್ಷಿಸಲು ಮೃಗರೂಪವನ್ನು ಧರಿಸಿ ನಾನು ಅಪಹರಿಸಿದ ಈ ಅರಣಿಗಳನ್ನು ಆ ಬ್ರಾಹ್ಮಣನಿಗೆ ತಲುಪಿಸಿ. ಮಗೂ! ಮೂರನೆಯ ವರನ್ನು ಕೇಳು. ನೀನು ನನ್ನಿಂದಲೇ ಹುಟ್ಟಿದ್ದೀಯೆ. ವಿದುರನೂ ಕೂಡ ನನ್ನ ಅಂಶಕನೇ!”

ಯುಧಿಷ್ಠಿರನು ಹೇಳಿದನು: “ದೇವದೇವ! ಸನಾತನನಾಗಿರುವ ನಿನ್ನನ್ನು ಸಾಕ್ಷಾತ್ ಕಂಡು ನಾನು ಸಂತೋಷಗೊಂಡೆನು. ತಂದೆಯೇ! ನೀನಾಗಿಯೇ ನನಗೆ ಯಾವ ವರವನ್ನು ಕೊಡುತ್ತೀಯೋ ಅದನ್ನು ತೃಪ್ತಿಯಿಂದ ಸ್ವೀಕರಿಸುತ್ತೇನೆ. ಸದಾ ನಾನು ಲೋಭ-ಮೋಹ-ಕ್ರೋಧಗಳನ್ನು ಜಯಿಸಿರಲಿ! ನನ್ನ ಮನಸ್ಸು ಸದಾ ದಾನ-ತಪಸ್ಸು-ಸತ್ಯಗಳಲ್ಲಿ ನೆಲೆಸಿರಲಿ!”

ಧರ್ಮನು ಹೇಳಿದನು: “ಪಾಂಡವ! ಈ ಎಲ್ಲ ಗುಣಗಳೂ ನಿನ್ನಲ್ಲಿ ಸ್ವಾಭಾವಿಕವಾಗಿಯೇ ನೆಲೆಸಿವೆ! ನೀನೇ ಧರ್ಮ. ಪುನಃ ನೀನು ಹೇಳಿದುದೆಲ್ಲವೂ ಆಗುತ್ತದೆ.”

ಹೀಗೆ ಹೇಳಿ ಭಗವಾನ್ ಧರ್ಮನು ಅಂತರ್ಧಾನನಾದನು. ಆಯಾಸವನ್ನು ಕಳೆದುಕೊಂಡ ನಂತರ ಆ ವೀರರೆಲ್ಲರೂ ಆಶ್ರಮಕ್ಕೆ ಬಂದು ಅರಣಿಗಳನ್ನು ತಪಸ್ವಿ ಬ್ರಾಹ್ಮಣನಿಗೆ ಕೊಟ್ಟರು.

3 Comments

  1. Jagadeeshwarayya Mathapati

    Wonderful and comprehensive narration of the story
    Thank you very much

  2. 👏👏👏👏👏👏👏👏🙏💐🙏

Leave a Reply

Your email address will not be published. Required fields are marked *