ಐಲ-ಕಶ್ಯಪ ಸಂವಾದ
ಬ್ರಾಹ್ಮಣ-ಕ್ಷತ್ರಿಯರ ಸಂಬಂಧದ ಕುರಿತಾದ ಈ ಐಲ-ಕಶ್ಯಪ ಸಂವಾದವನ್ನು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 74ರಲ್ಲಿ ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ.
***
ಭೀಷ್ಮನು ಹೇಳಿದನು:
“ಧರ್ಮ-ಅರ್ಥ ಇವೆರಡರ ಗತಿಯೂ ಅತ್ಯಂತ ಗಹನವಾದುದೆಂದು ತಿಳಿದು ರಾಜನಾದವನು ಬಹುಶ್ರುತ ವಿದ್ವಾಂಸನನ್ನು ರಾಜಪುರೋಹಿತನನ್ನಾಗಿ ಮಾಡಿಕೊಳ್ಳಬೇಕು. ರಾಜನ್! ರಾಜಪುರೋಹಿತನು ಧರ್ಮಾತ್ಮನೂ, ಧರ್ಮವಿದನೂ ಆಗಿರುವ ಮತ್ತು ರಾಜನೂ ಅದೇ ಗುಣಗಳನ್ನು ಹೊಂದಿರುವ ರಾಷ್ಟ್ರದಲ್ಲಿ ಎಲ್ಲರೂ ಕುಶಲವಾಗಿಯೇ ಇರುತ್ತಾರೆ. ರಾಜ ಮತ್ತು ಪುರೋಹಿತ ಇಬ್ಬರೂ ಧರ್ಮನಿಷ್ಠರಾಗಿದ್ದುಕೊಂಡು ಯೋಗ-ಕ್ಷೇಮಗಳಲ್ಲಿ ಶ್ರದ್ಧಾವಂತರಾಗಿದ್ದರೆ ಮತ್ತು ಸಮಾನ ಮನಸ್ಕರಾಗಿದ್ದರೆ ಇಬ್ಬರೂ ಸೇರಿ ರಾಷ್ಟ್ರವನ್ನೂ ಪ್ರಜೆಗಳನ್ನೂ ಅಭಿವೃದ್ಧಿಗೊಳಿಸುತ್ತಾರೆ. ದೇವತೆಗಳನ್ನೂ ಪಿತೃಗಳನ್ನೂ ತೃಪ್ತಿಗೊಳಿಸುತ್ತಾರೆ. ಅಂತಹ ಬ್ರಾಹ್ಮಣ ಮತ್ತ ಕ್ಷತ್ರಯರನ್ನು ಸಮ್ಮಾನಿಸಿದ ಪ್ರಜೆಗಳು ಸುಖವನ್ನು ಹೊಂದುತ್ತಾರೆ. ಅವರಿಬ್ಬರನ್ನೂ ಸಮ್ಮಾನಿಸದೇ ಇದ್ದರೆ ಪ್ರಜೆಗಳು ನಾಶವಾಗುತ್ತಾರೆ. ಬ್ರಾಹ್ಮಣ-ಕ್ಷತ್ರಿಯರೇ ಸರ್ವಧರ್ಮಗಳ ಮೂಲವೆಂದು ಹೇಳುತ್ತಾರೆ. ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಐಲ ಮತ್ತು ಕಶ್ಯಪರ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
***
ಐಲನು ಹೇಳಿದನು:
“ಒಂದುವೇಳೆ ಬ್ರಾಹ್ಮಣರು ಕ್ಷತ್ರಿಯರನ್ನು ಪರಿತ್ಯಜಿಸಿದರೆ ಅಥವಾ ಒಂದು ವೇಳೆ ಕ್ಷತ್ರಿಯರು ಬ್ರಾಹ್ಮಣರನ್ನು ಪರಿತ್ಯಜಿಸಿದರೆ ಉಳಿದ ವರ್ಣದವರು ಯಾರ ಆಶ್ರಯವನ್ನು ಪಡೆದುಕೊಳ್ಳಬೇಕು? ಬ್ರಾಹ್ಮಣ-ಕ್ಷತ್ರಿಯ ಈ ಇಬ್ಬರಲ್ಲಿ ಎಲ್ಲರಿಗೂ ಅಶ್ರಯವನ್ನು ಕೊಡುವವರು ಯಾರು?”
ಕಶ್ಯಪನು ಹೇಳಿದನು:
“ಬ್ರಾಹ್ಮಣ-ಕ್ಷತ್ರಿಯರ ಮಧ್ಯೆ ವಿರೋಧವುಂಟಾದ ರಾಷ್ಟ್ರವು ಒಡೆದುಹೋಗುತ್ತದೆ. ದಸ್ಯುಗಳ ಸೇನೆಗಳು ಬಂದು ಎಲ್ಲವನ್ನೂ ಎಲ್ಲ ವರ್ಣದವರನ್ನೂ ಸ್ವಾಧೀನಪಡೆದುಕೊಳ್ಳುತ್ತವೆ ಎಂದು ಸಂತರು ಹೇಳುತ್ತಾರೆ. ಕ್ಷತ್ರಿಯರು ಬ್ರಾಹ್ಮಣರನ್ನು ತ್ಯಜಿಸಿದರೆ ಅವರ ಪುತ್ರರು ವೇದಗಳನ್ನು ಕಲಿತುಕೊಳ್ಳಲಾರರು. ಮೊಸರಿನ ಪಾತ್ರೆಯಲ್ಲಿ ಕಡೆಗೋಲು ಕಡೆಯುವುದಿಲ್ಲ ಮತ್ತು ಯಜ್ಞಗಳು ನಡೆಯುವುದಿಲ್ಲ. ಬ್ರಾಹ್ಮಣರು ಕ್ಷತ್ರಿಯರನ್ನು ತ್ಯಜಿಸಿದರೆ ಅವರ ಮಕ್ಕಳು ವೇದಾಧ್ಯಯನ ಮಾಡುವುದಿಲ್ಲ. ಅವರು ದಸ್ಯುಗಳಂತೆಯೇ ಆಗಿಹೋಗುತ್ತಾರೆ. ಅವರ ಮನೆಯಲ್ಲಿ ಧನದ ವೃದ್ಧಿಯಾಗುವುದಿಲ್ಲ. ಹೀಗೆ ನಿತ್ಯವೂ ಬ್ರಾಹ್ಮಣ-ಕ್ಷತ್ರಿಯರು ಸಮ್ಮಿಳಿತರಾಗಿಯೇ ಇರಬೇಕು. ಹಾಗಿದ್ದಾಗಲೇ ಅವರು ಪರಸ್ಪರರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಕ್ಷತ್ರಿಯನ ಅಭಿವೃದ್ಧಿಗೆ ಬ್ರಾಹ್ಮಣನು ಕಾರಣನು ಮತ್ತು ಬ್ರಾಹ್ಮಣನ ಅಭಿವೃದ್ಧಿಗೆ ಕ್ಷತ್ರಿಯನು ಕಾರಣನು. ಈ ಎರಡು ವರ್ಣದವರೂ ಯಾವಾಗಲೂ ಒಬ್ಬರು ಮತ್ತೊಬ್ಬರು ಆಶ್ರಯಭೂತರಾಗಿದ್ದರೆ ಆಗ ಬ್ರಹ್ಮ-ಕ್ಷತ್ರರಿಬ್ಬರೂ ಸುಪ್ರತಿಷ್ಠರಾಗಿರುತ್ತಾರೆ. ಪ್ರಾಚೀನಕಾಲದಿಂದ ಬಂದಿರುವ ಬ್ರಹ್ಮ-ಕ್ಷತ್ರರ ಮೈತ್ರಿಯು ಒಡೆದುಹೋದರೆ ಇಬ್ಬರೂ ವಿನಾಶಹೊಂದುವುದು ಮಾತ್ರವಲ್ಲ ಪ್ರಪಂಚವೇ ಮೋಹವಶವಾಗುತ್ತದೆ. ಮಹಾಸಾಗರದ ಮಧ್ಯೆ ಹಡಗು ಮುರಿದುಹೋದಾಗ ಪಾರಾಗುವವನಿಗೆ ಬೇರೆ ದೋಣಿಯು ದೊರೆಯದಂತೆ ನಾಲ್ಕು ವರ್ಣದವರೂ ಸಮ್ಮೂಢರಾಗಿ ಪ್ರಜೆಗಳ ನಾಶವಾಗುತ್ತದೆ. ಬ್ರಹ್ಮವೃಕ್ಷವನ್ನು ರಕ್ಷಿಸಿದರೆ ಜೇನು ಮತ್ತು ಚಿನ್ನಗಳ ಮಳೆಯಾಗುತ್ತದೆ. ಅದನ್ನು ರಕ್ಷಿಸದೇ ಇದ್ದರೆ ಸತತವೂ ಕಣ್ಣೀರು ಮತ್ತು ಪಾಪಗಳ ಮಳೆಯಾಗುತ್ತದೆ. ಬ್ರಾಹ್ಮಣ ಬ್ರಹ್ಮಚಾರಿಯು ದಸ್ಯುಗಳಿಂದ ತಡೆಯಲ್ಪಟ್ಟು ಬ್ರಾಹ್ಮಣರು ಬ್ರಹ್ಮನನ್ನು ಮೊರೆಹೊಗಬೇಕಾದ ಸನ್ನಿವೇಶವು ಬಂದಾಗ ಅಲ್ಲಿ ದೇವನು ಮಳೆಸುರಿಸುತ್ತಾನಾದರೆ ಅದು ಆಶ್ಚರ್ಯವೇ ಸರಿ. ಅಲ್ಲಿ ಸಹಿಸಲಸಾಧ್ಯ ದುರ್ಭಿಕ್ಷವಾಗುತ್ತದೆ. ಸ್ತ್ರೀಯನ್ನು ಮತ್ತು ಬ್ರಾಹ್ಮಣನನ್ನು ಕೊಂದ ಪಾಪಿಯು ಸಭೆಗಳಲ್ಲಿ ಪ್ರಶಂಸಿಸಲ್ಪಡುವ ಮತ್ತು ರಾಜನ ಬಳಿಯಲ್ಲಿಯೇ ಇದ್ದರೂ ಅಂಥವನಿಗೆ ಭಯವಿಲ್ಲದರುವ ಕಾಲವು ಬಂದಾಗ ಕ್ಷತ್ರಿಯನಿಗೆ ಮಹಾ ಆಪತ್ತು ಕಾದಿರುವುದೆಂದು ಹೇಳಬಹುದು. ಪಾಪಿಗಳಿಂದ ಪಾಪಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿರುವಾಗ ಅವರಿಂದಲೇ ರುದ್ರದೇವನು ಹುಟ್ಟುತ್ತಾನೆ. ಪಾಪಿಗಳು ತಮ್ಮ ಪಾಪಗಳಿಂದಲೇ ರುದ್ರನನ್ನು ಹುಟ್ಟಿಸುತ್ತಾರೆ. ಆಗ ಸಾಧು-ಅಸಾಧು ಎಲ್ಲವೂ ನಾಶವಾಗುತ್ತವೆ.”
ಐಲನು ಹೇಳಿದನು:
“ಕಶ್ಯಪ! ರುದ್ರನು ಎಲ್ಲಿಂದ ಬರುತ್ತಾನೆ? ಅವನು ಎಂಥವನು? ಅಲ್ಲಿ ಸತ್ತ್ವಗಳನ್ನು ಸತ್ತ್ವಗಳೇ ವಧಿಸುವುದು ಕಂಡುಬರುತ್ತದೆ. ಈ ರುದ್ರದೇವನು ಎಲ್ಲಿಂದ ಹುಟ್ಟಿದನು? ಈ ನನ್ನ ಪ್ರಶ್ನೆಗಳಿಗೆ ಉತ್ತರಿಸು.”
ಕಶ್ಯಪನು ಹೇಳಿದನು:
“ಮಾನವರ ಹೃದಯದಲ್ಲಿರುವ ಆತ್ಮನೇ ರುದ್ರನು. ತನ್ನ ದೇಹವನ್ನು ತಾನೇ ಮತ್ತು ಪರದೇಹಗಳನ್ನೂ ತಾನೇ ಕೊಲ್ಲುತ್ತಾನೆ. ರುದ್ರನು ಚಂಡಮಾರುತ ಮತ್ತು ಉತ್ಪಾತಗಳಿಗೆ ಸಮನೆಂದು ಹೇಳುತ್ತಾರೆ. ಅವನಿಗೆ ಮೇಘಗಳ ರೂಪವಿದೆಯೆಂದೂ ಹೇಳುತ್ತಾರೆ.”
ಐಲನು ಹೇಳಿದನು:
“ಗಾಳಿಯು ಯಾರನ್ನೂ ಸುತ್ತಗಟ್ಟುವುದಿಲ್ಲ. ಮೇಘದೇವತೆಗಳು ಮಳೆಸುರಿಸುವುದಿಲ್ಲ. ಹಾಗೆಯೇ ಕಾಮ-ದ್ವೇಷಗಳು ಮಾನವನನ್ನು ಬಂಧಿಸುತ್ತವೆ ಮತ್ತು ಬಿಡುಗಡೆಮಾಡಿಸುತ್ತವೆ ಕೂಡ ಎಂದಾಯಿತು.”
ಕಶ್ಯಪನು ಹೇಳಿದನು:
“ಒಂದೇ ಮನೆಯಲ್ಲಿ ಹುಟ್ಟಿದ ಅಗ್ನಿಯು ಉರಿದು ಬೇಗನೇ ಇಡೀ ಗ್ರಾಮವನ್ನೇ ಹೇಗೆ ಸುಟ್ಟುಬಿಡಬಲ್ಲದೋ ಹಾಗೆ ಈ ದೇವನು ವಿಮೋಹಗೊಳಿಸಿ ಎಲ್ಲವನ್ನೂ ಪಾಪ-ಪುಣ್ಯಗಳಿಂದ ಸ್ಪರ್ಶಿಸುತ್ತಾನೆ.”
ಐಲನು ಹೇಳಿದನು:
“ಪಾಪಿಗಳೇ ವಿಶೇಷವಾಗಿ ಪಾಪಗಳನ್ನೇ ಮಾಡಿದ್ದರೂ ಪುಣ್ಯಮಾಡಿದವನನ್ನೂ ದಂಡವು ಸ್ಪರ್ಶಿಸುತ್ತದೆ ಎಂದಾಯಿತು. ಹಾಗಿದ್ದರೆ ಯಾವ ಕಾರಣಕ್ಕಾಗಿ ಸುಕೃತ ಎನ್ನುವುದನ್ನು ಮಾಡಬೇಕು ಅಥವಾ ಯಾವ ಕಾರಣಕ್ಕಾಗಿ ದುಷ್ಕೃತ ಎನ್ನುವುದನ್ನು ಮಾಡಬಾರದು?”
ಕಶ್ಯಪನು ಹೇಳಿದನು:
“ಕಟ್ಟಿಗೆಯು ಹಸಿಯಾಗಿದ್ದರೂ ಅದಕ್ಕೆ ಒಣಗಿದ ಕಟ್ಟಿಗೆಯ ಮಿಶ್ರಭಾವವಿರುವುದರಿಂದ ಸುಟ್ಟು ಹೋಗುತ್ತದೆ. ಹಾಗೆಯೇ ದಂಡವು ಪಾಪಿಗಳ ಸಂಸರ್ಗವನ್ನು ಬಿಡದೇ ಇರುವುದರಿಂದ ಪಾಪರಹಿತ ಧರ್ಮಾತ್ಮರನ್ನೂ ಅವರ ಮಿಶ್ರಭಾವದಿಂದಾಗಿ ಸ್ಪರ್ಶಿಸುತ್ತದೆ. ಆದುದರಿಂದ ಸಂತರು ಪಾಪಿಗಳೊಡನೆ ಸೇರಿಕೊಳ್ಳಬಾರದು.”
ಐಲನು ಹೇಳಿದನು:
“ಈ ಭೂಮಿಯು ಸಾಧು-ಅಸಾಧು ಇಬ್ಬರನ್ನೂ ಹೊತ್ತೊಕೊಂಡಿದೆ. ಸೂರ್ಯನು ಸಾಧು-ಅಸಾಧು ಇಬ್ಬರನ್ನೂ ಒಂದೇ ತೆರನಾಗಿ ಸುಡುತ್ತಾನೆ. ವಾಯುವು ಸಾಧು-ಅಸಾಧು ಇಬ್ಬರಿಗೂ ಒಂದೇ ತೆರನಾಗಿ ಬೀಸುತ್ತಾನೆ. ಹಾಗೆಯೇ ನೀರೂ ಕೂಡ ಸಾಧು-ಅಸಾಧು ಇಬ್ಬರನ್ನೂ ತೋಯಿಸುತ್ತದೆ.”
ಕಶ್ಯಪನು ಹೇಳಿದನು:
“ರಾಜಪುತ್ರ! ಹೀಗೆ ನಡೆಯುವುದು ಈ ಲೋಕದಲ್ಲಿ ಮಾತ್ರ. ಪರಲೋಕದಲ್ಲಿ ಹೀಗೆ ನಡೆಯುವುದಿಲ್ಲ. ಪುಣ್ಯ ಮತ್ತು ಪಾಪಗಳನ್ನು ಮಾಡಿದವರು ಈ ಲೋಕದಲ್ಲಿ ಸಮಾನ ಫಲಗಳನ್ನು ಅನುಭವಿಸಿದರೂ ಅವರಿಬ್ಬರೂ ಮೃತ್ಯುವಿನ ನಂತರ ಪರಲೋಕಕ್ಕ ಹೋದನಂತರ ಅಲ್ಲಿ ಅವರ ನಡುವೆ ಅಪಾರ ಅಂತರವಿರುತ್ತದೆ. ಪರಲೋಕದಲ್ಲಿ ಅವರ ಫಲಗಳು ಒಂದೇ ತೆರನಾಗಿ ಇರುವುದಿಲ್ಲ. ಪುಣ್ಯಮಾಡಿದವನ ಲೋಕವು ಮಧುರತಮ ಸುಖಗಳಿಂದ ತುಂಬಿರುತ್ತದೆ. ಅಲ್ಲಿ ಬ್ರಹ್ಮಾನಂದರೂಪದ ತುಪ್ಪದ ದೀಪವು ಬೆಳಗುತ್ತಿರುತ್ತದೆ. ಸುವರ್ಣಪ್ರಭೆಗೆ ಸಮಾನ ಬ್ರಹ್ಮಜ್ಞಾನದ ಪ್ರಭೆಯು ಆ ದೀಪದಿಂದ ಹೊರಸೂಸುತ್ತಿರುತ್ತದೆ. ಆ ಲೋಕವು ಅಮೃತಕ್ಕೆ ಕೇಂದ್ರವಾಗಿರುತ್ತದೆ. ಬ್ರಹ್ಮನಿಷ್ಠ ಬ್ರಹ್ಮಚಾರಿಯು ಆ ಲೋಕದಲ್ಲಿ ಆನಂದಿಸುತ್ತಾನೆ. ಅಲ್ಲಿ ಮೃತ್ಯುವಾಗಲೀ, ಮುಪ್ಪಾಗಲೀ, ದುಃಖವಾಗಲೀ ಇರುವುದಿಲ್ಲ. ಪಾಪಿಯ ಲೋಕವು ನರಕ. ಯಾವಾಗಲೂ ಅಂಧಕಾರವು ಕವಿದಿರುತ್ತದೆ. ನಿತ್ಯ ದುಃಖವಿರುತ್ತದೆ. ಶೋಕದಿಂದಲೇ ತುಂಬಿಹೋಗಿರುತ್ತದೆ. ಅಲ್ಲಿ ಪಾಪಕರ್ಮಿಯು ಅನೇಕ ವರ್ಷಗಳ ಪರ್ಯಂತ ಆ ನರಕದಲ್ಲಿ ಬಿದ್ದು ನಿಂತಲ್ಲಿ ನಿಲ್ಲದೇ ತನ್ನ ಆತ್ಮನನ್ನು ದುಃಖಕ್ಕೀಡುಮಾಡಿಕೊಳ್ಳುತ್ತಾನೆ. ಬ್ರಾಹ್ಮಣ-ಕ್ಷತ್ರಿಯರಲ್ಲಿ ಪರಸ್ಪರ ಭೇದವುಂಟಾಗುವುದರಿಂದ ಪ್ರಜೆಗಳು ದುಃಸ್ಸಹ ದುಃಖಕ್ಕೆ ಈಡಾಗುತ್ತಾರೆ. ಇವೆಲ್ಲವನ್ನೂ ಅರ್ಥಮಾಡಿಕೊಂಡು ರಾಜನಾದವನು ಸರ್ವಕಾಲಕ್ಕೂ ಬಹುಶ್ರುತ ಬ್ರಾಹ್ಮಣನನ್ನು ಪುರೋಹಿತನನ್ನಾಗಿ ಮಾಡಿಕೊಳ್ಳಬೇಕು. ರಾಜನು ಮೊದಲು ಪುರೋಹಿತನನ್ನು ಮಾಡಿಕೊಳ್ಳಬೇಕು. ಬಳಿಕ ಅವನಿಂದ ತಾನು ಪಟ್ಟಾಭಿಷಿಕ್ತನಾಗಬೇಕು. ಧರ್ಮದ ವಿಧಿಯೇ ಹೀಗಿದೆ. ಧರ್ಮಾನುಸಾರವಾಗಿ ಬ್ರಾಹ್ಮಣನೇ ಎಲ್ಲರಿಗಿಂತ ಹಿರಿಯವನು. ಬ್ರಾಹ್ಮಣರ ಸೃಷ್ಟಿಯು ಮೊದಲಾಯಿತೆಂದು ಧರ್ಮವಿದುಗಳು ತಿಳಿದುಕೊಂಡಿದ್ದಾರೆ. ಜ್ಯೇಷ್ಠನಾದುದರಿಂದ ಮತ್ತು ಬ್ರಹ್ಮನ ಮುಖದಿಂದ ಹುಟ್ಟಿದುದರಿಂದ ಬ್ರಾಹ್ಮಣನಿಗೆ ಎಲ್ಲವುಗಳ ಮೇಲೂ ಮೊದಲ ಅಧಿಕಾರವಿದೆ. ಆದುದರಿಂದ ಬ್ರಾಹ್ಮಣರು ಎಲ್ಲರಿಗಿಂತ ಮೊದಲು ಊಟಮಾಡಬಹುದೆಂದೂ ಪೂಜ್ಯರೆಂದೂ ಸನ್ಮಾನ್ಯರೆಂದೂ ತಿಳಿಯುತ್ತಾರೆ. ಧರ್ಮತಃ ಎಲ್ಲ ಶ್ರೇಷ್ಠ ವರಿಷ್ಠ ವಸ್ತುಗಳನ್ನು ಬ್ರಾಹ್ಮಣನಿಗೇ ಒಪ್ಪಿಸಬೇಕು. ರಾಜನು ಬಲಶಾಲಿಯಾಗಿದ್ದರೂ ಇದನ್ನು ಮಾತ್ರ ಅವಶ್ಯ ಮಾಡಲೇ ಬೇಕು. ಬ್ರಹ್ಮವು ಕ್ಷತ್ರವನ್ನು ವರ್ಧಿಸುತ್ತದೆ. ಕ್ಷಾತ್ರತ್ವದಿಂದ ಬ್ರಹ್ಮವು ವೃದ್ಧಿಯಾಗುತ್ತದೆ.””
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ