ಸೂತ್ರಾಧ್ಯಾಯ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಬ್ರಹ್ಮನ ನೀತಿಶಾಸ್ತ್ರವನ್ನು ವರ್ಣಿಸುವ ಮತ್ತು ರಾಜಾ ಪೃಥುವಿನ ಚರಿತ್ರೆಯನ್ನೊಳಗೊಂಡ ಈ ಭೀಷ್ಮ-ಯುಧಿಷ್ಠಿರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 59ರಲ್ಲಿ ಬರುತ್ತದೆ.

***

ಅನಂತರ ಬೆಳಗಾಗುತ್ತಲೇ ಎದ್ದು ಪೂರ್ವಾಹ್ಣಿಕಕ್ರಿಯೆಗಳನ್ನು ಮಾಡಿ ಪಾಂಡವ-ಯಾದವರು ನಗರಾಕಾರದ ರಥಗಳಲ್ಲಿ ಕುಳಿತು ಹೊರಟರು. ಕುರುಕ್ಷೇತ್ರವನ್ನು ತಲುಪಿ ಅನಘ ಭೀಷ್ಮನ ಬಳಿಸಾರಿ ರಥಿಗಳಲ್ಲಿ ಶ್ರೇಷ್ಠ ಗಾಂಗೇಯನನ್ನು “ರಾತ್ರಿಯು ಸುಖವಾಗಿತ್ತೇ?” ಎಂದು ಪ್ರಶ್ನಿಸಿದರು. ವ್ಯಾಸಾದಿ ಋಷಿಗಳಿಗೆ ನಮಸ್ಕರಿಸಿ, ಅವರೆಲ್ಲರಿಂದಲೂ ಅಭಿನಂದಿತರಾಗಿ ಭೀಷ್ಮನ ಸುತ್ತಲೂ ಕುಳಿತುಕೊಂಡರು. ಆಗ ಮಹಾತೇಜಸ್ವೀ ರಾಜಾ ಧರ್ಮರಾಜ ಯುಧಿಷ್ಠಿರನು ಕೈಮುಗಿದು ಭೀಷ್ಮನನ್ನು ಪ್ರಶ್ನಿಸಿದನು:

“ಭಾರತ! ಪಿತಾಮಹ! ಈ ರಾಜಾ-ರಾಜಾ ಎನ್ನುವ ಶಬ್ಧವು ಬಳಕೆಯಲ್ಲಿದೆಯಲ್ಲಾ ಆ ಶಬ್ಧವು ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ನನಗೆ ಹೇಳು! ಒಬ್ಬನೇ ಹೇಗೆ ಬುದ್ಧಿಯಲ್ಲಿ ವಿಶಿಷ್ಠರಾಗಿರುವ, ಶೂರರಾಗಿರುವ, ತನ್ನಂತೆಯೇ ಕೈಗಳು, ತಲೆ, ಕುತ್ತಿಗೆಗಳಿರುವ, ತನ್ನದಂಥಹ ಬುದ್ಧಿ-ಇಂದ್ರಿಯಗಳೂ ಇರುವ, ತನ್ನಂತೆಯೇ ದುಃಖ-ಸುಖಗಳನ್ನು ಅನುಭವಿಸುವ, ತನ್ನಂತೆಯೇ ಬೆನ್ನು-ಭುಜ-ಉದರಗಳನ್ನು ಹೊಂದಿರುವ; ತನ್ನಂತೆಯೇ ವೀರ್ಯ-ಮೂಳೆ-ಮಜ್ಜೆಗಳನ್ನು ಹೊಂದಿರುವ, ತನ್ನಂತೆಯೇ ಮಾಂಸ-ರಕ್ತಗಳಿರುವ, ತನ್ನಂತೆಯೇ ಉಚ್ಛಾಸ-ನಿಃಶ್ವಾಸಗಳಿರುವ, ತನ್ನಂತೆಯೇ ಪ್ರಾಣ-ಶರೀರಗಳನ್ನು ಪಡೆದಿರುವ, ಜನ್ಮ-ಮರಣಗಳಲ್ಲಿಯೂ ತನಗೆ ಸಮಾನರಾಗಿರುವ, ಸರ್ವಗುಣಗಳಲ್ಲಿಯೂ ತನ್ನಂತೆಯೇ ಇರುವ ಎಲ್ಲ ಮನುಷ್ಯರನ್ನೂ ಆಳುತ್ತಾನೆ? ಒಬ್ಬನೇ ವೀರ-ಶೂರ-ಆರ್ಯ ಸಂಕುಲಗಳಿಂದ ಕೂಡಿರುವ ಈ ಇಡೀ ಮಹಿಯನ್ನು ರಕ್ಷಿಸುವವನಾದರೂ ಈ ಲೋಕದ ಜನರ ಮೆಚ್ಚುಗೆಯನ್ನು ಏಕೆ ಬಯಸುತ್ತಿರುತ್ತಾನೆ? ಅವನೊಬ್ಬನು ಪ್ರಸನ್ನನಾಗಿದ್ದರೆ ಲೋಕವೆಲ್ಲವೂ ಪ್ರಸನ್ನವಾಗಿರುತ್ತದೆ. ಅವನೇನಾದರೂ ವ್ಯಾಕುಲಗೊಂಡರೆ ಸರ್ವವೂ ವ್ಯಾಕುಲಗೊಳ್ಳುತ್ತದೆ. ಇದು ಹೀಗೆಯೇ ನಿಶ್ಚಿತವಾಗಿದೆ. ಭರತರ್ಷಭ! ಮಾತನಾಡುವವರಲ್ಲಿ ಶ್ರೇಷ್ಠ! ಈ ವಿಷಯವನ್ನು ಯಥಾವತ್ತಾಗಿ ನಿನ್ನಿಂದ ಕೇಳ ಬಯಸುತ್ತೇನೆ. ಇದನ್ನು ಸಂಪೂರ್ಣವಾಗಿ ಯಥಾತತ್ತ್ವವಾಗಿ ಹೇಳು. ವಿಶಾಂಪತೇ! ಒಬ್ಬನನ್ನೇ ಈ ಸರ್ವ ಜಗತ್ತೂ ದೇವರಿಗೆ ಸಮಾನನಾಗಿ ಕಂಡುಕೊಂಡು ತಲೆತಗ್ಗಿಸುತ್ತದೆಯೆಂದರೆ ಇದಕ್ಕೆ ಕಾರಣ ಅಲ್ಪವಾಗಿರಲಾರದು!”

ಭೀಷ್ಮನು ಹೇಳಿದನು:

“ನರಶ್ರೇಷ್ಠ! ಕೃತಯುಗದಲ್ಲಿ ಮೊಟ್ಟಮೊದಲನೆಯದಾಗಿ ರಾಜ ಮತ್ತು ರಾಜ್ಯವು ಹೇಗೆ ಹುಟ್ಟಿಕೊಂಡವೆನ್ನುವುದನ್ನು ಎಲ್ಲವನ್ನೂ ಸಂಪೂರ್ಣವಾಗಿ, ನಿಯತನಾಗಿ ಕೇಳು. ಆಗ ರಾಜ್ಯವೆಂಬುದೂ ಇರಲಿಲ್ಲ; ರಾಜನೆನ್ನುವವನೂ ಇರಲಿಲ್ಲ. ದಂಡವೂ ಇರಲಿಲ್ಲ; ದಂಡಿಸುವವನೂ ಇರಲಿಲ್ಲ. ಎಲ್ಲ ಪ್ರಜೆಗಳೂ ಧರ್ಮದಿಂದ ಪರಸ್ಪರರನ್ನು ರಕ್ಷಿಸಿಕೊಂಡಿದ್ದರು. ಭಾರತ! ಹೀಗೆ ನರಧರ್ಮದ ಪ್ರಕಾರ ಅನ್ಯೋನ್ಯರನ್ನು ಪಾಲಿಸುತ್ತಿರಲು, ಅವರಲ್ಲಿ ಪರಮ ಖೇದವುಂಟಾಯಿತು ಮತ್ತು ಮೋಹವು ಆವರಿಸಿತು. ಮನುಜರ್ಷಭ! ಮೋಹವಶಕ್ಕೆ ಸಿಲುಕಿದ ಆ ಮಾನವರಲ್ಲಿ ಕರ್ತವ್ಯಪ್ರಜ್ಞೆಯೇ ದೂರವಾಯಿತು ಮತ್ತು ಧರ್ಮಾಚರಣೆಯು ಅಳಿದುಹೋಯಿತು. ಭಾರತಸತ್ತಮ! ಮೋಹವಶರಾಗಿ ಕರ್ತ್ಯವ್ಯವಿವೇಕವನ್ನೇ ಕಳೆದುಕೊಂಡಿದ್ದ ಮನುಷ್ಯರು ಎಲ್ಲರೂ ಲೋಭದ ವಶರಾದರು. ಪ್ರಭೋ! ದೊರಕದೇ ಇರುವ ವಸ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಆ ಮನುಷ್ಯರನ್ನು ಆಗ ಕಾಮ ಎಂಬ ಹೆಸರಿನ ಇನ್ನೊಂದು ಶತ್ರುವು ಆಕ್ರಮಿಸಿತು. ಕಾಮವಶರಾದ ಅವರನ್ನು ರಾಗ ಎನ್ನುವ ಇನ್ನೊಂದು ಭೂತವೂ ಆವರಿಸಿಕೊಂಡಿತು. ಯುಧಿಷ್ಠಿರ! ರಾಗವಶರಾದ ಅವರು ಕಾರ್ಯ-ಅಕಾರ್ಯಗಳನ್ನು ತಿಳಿಯುತ್ತಿರಲಿಲ್ಲ. ರಾಜೇಂದ್ರ! ಯಾರೊಡನೆ ಸೇರಬಾರದೋ ಅವರೊಡನೆ ಸೇರುತ್ತಿದ್ದರು; ಏನನ್ನು ಮಾತನಾಡಬಾರದೋ ಅದನ್ನೇ ಮಾತನಾಡುತ್ತಿದ್ದರು, ಮತ್ತು ದೋಷ-ಅದೋಷಗಳು, ಭಕ್ಷ್ಯ-ಅಭಕ್ಷ್ಯಗಳು ಯಾವುದನ್ನೂ ತಿರಸ್ಕರಿಸುತ್ತಿರಲಿಲ್ಲ. ಹೀಗೆ ನರಲೋಕದಲ್ಲಿ ಕ್ಷೋಭೆಯುಂಟಾಗಲು, ಬ್ರಹ್ಮಜ್ಞಾನವು ನಾಶವಾಯಿತು. ರಾಜನ್! ಬ್ರಹ್ಮಜ್ಞಾನವು ನಾಶವಾಗಲು ಧರ್ಮನಾಶವೂ ಪ್ರಾರಂಭವಾಯಿತು.

ಬ್ರಹ್ಮ ವಿದ್ಯೆ ಮತ್ತು ಧರ್ಮವು ನಶಿಸಲು, ದೇವತೆಗಳಲ್ಲಿ ಭಯವುಂಟಾಯಿತು. ನರಶಾರ್ದೂಲ! ಭಯಭೀತರಾದ ಅವರು ಬ್ರಹ್ಮನ ಶರಣು ಹೋದರು. ದುಃಖ-ಶೋಕ-ಭಯಾರ್ದಿತರಾದ ಆ ಎಲ್ಲ ದೇವತೆಗಳೂ ಕೈಮುಗಿದು ಲೋಕಪಿತಾಮಹ ಭಗವಂತನನ್ನು ಪ್ರಾರ್ಥಿಸುತ್ತಾ ಕೇಳಿಕೊಂಡರು:

“ಭಗವನ್! ನರಲೋಕದಲ್ಲಿದ್ದ ಸನಾತನ ಬ್ರಹ್ಮವಿದ್ಯೆಯು ನಷ್ಟವಾಗಿ ಹೋಗಿದೆ. ಮನುಷ್ಯರು ಲೋಭ-ಮೋಹಾದಿ ಭಾವಗಳಿಗೆ ಸಿಲುಕಿದುದರಿಂದ ನಮ್ಮನ್ನು ಭಯವು ಆವರಿಸಿಬಿಟ್ಟಿದೆ. ಈಶ್ವರ! ತ್ರಿಭುವನೇಶ್ವರ! ಬ್ರಹ್ಮಜ್ಞಾನದ ನಾಶದಿಂದಾಗಿ ಧರ್ಮವೂ ಕೂಡ ನಶಿಸಿ ಹೋಗುತ್ತಿದೆ. ಇದರಿಂದಾಗಿ ನಾವೂ ಕೂಡ ಮನುಷ್ಯರಿಗೆ ಸಮನಾಗಿಬಿಟ್ಟಿದ್ದೇವೆ! ಮಳೆ-ಬೆಳೆಗಳನ್ನು ಕೆಳಗೆ ಸುರಿಸುತ್ತಿರುವ ನಮಗೆ ಮರ್ತ್ಯರು ಯಜ್ಞಾದಿಗಳ ಮೂಲಕ ಹವಿಸ್ಸನ್ನು ಮೇಲ್ಮುಖವಾಗಿ ಸುರಿಸುತ್ತಿದ್ದರು. ಈಗ ಅವರು ಯಜ್ಞಾದಿ ಕಾರ್ಯಗಳನ್ನೇ ನಿಲ್ಲಿಸಿದುದರಿಂದ ನಮಗೆ ಸಂಶಯವಾಗ ತೊಡಗಿದೆ! ಪಿತಾಮಹ! ಈಗ ನಮಗೆ ಶ್ರೇಯಸ್ಸು ಯಾವುದರಿಂದಾಗುವುದೋ ಅದರ ಕುರಿತು ನೀನೇ ಚಿಂತಿಸು! ನಿನ್ನ ಪ್ರಭಾವದಿಂದಲೇ ಪ್ರಾಪ್ತವಾಗಿರುವ ನಮ್ಮ ಈ ದೈವಪ್ರಭಾವವು ಯಾವುದೇ ಕಾರಣದಿಂದಲೂ ವಿನಾಶಹೊಂದಬಾರದು!”

ಆಗ ಭಗವಾನ್ ಸ್ವಯಂಭುವು ಆ ಸರ್ವ ಸುರರಿಗೆ ಉತ್ತರಿಸಿದನು:

“ಸುರರ್ಷಭರೇ! ನಿಮ್ಮ ಶ್ರೇಯಸ್ಸಿಗಾಗಿ ನಾನು ಯೋಚಿಸುತ್ತೇನೆ. ನಿಮ್ಮ ಭಯವನ್ನು ದೂರಮಾಡಿಕೊಳ್ಳಿ!”

ಆಗ ಬ್ರಹ್ಮನು ತನ್ನ ಬುದ್ಧಿಗೆ ತೋಚಿದಂತೆ, ಧರ್ಮ-ಅರ್ಥ-ಕಾಮಗಳನ್ನು ವರ್ಣಿಸುವ ಒಂದು ಲಕ್ಷ ಅಧ್ಯಾಯಗಳನ್ನು ರಚಿಸಿದನು.  ಸ್ವಯಂಭುವಿನ ಈ ಸಮೂಹಗ್ರಂಥವು ತ್ರಿವರ್ಗ ಎಂದು ವಿಖ್ಯಾತವಾಯಿತು. ಬೇರೆಯದೇ ಅರ್ಥವುಳ್ಳ ನಾಲ್ಕನೆಯ ಮೋಕ್ಷ ಎನ್ನುವ ಪ್ರಕರಣವು ಇನ್ನೊಂದು ಪ್ರತ್ಯೇಕ ಸಂಹಿತವು. ಮೋಕ್ಷದಲ್ಲಿಯೂ ಸತ್ತ್ವ-ರಜ-ತಮಗಳೆಂಬ ಮೂರು ವರ್ಗಗಳಿವೆಯೆಂದು ಹೇಳುತ್ತಾರೆ. ದಂಡದಿಂದ ಹುಟ್ಟಿದ ತ್ರಿವರ್ಗಗಳು ಸ್ಥಾನ, ವೃದ್ಧಿ ಮತ್ತು ಕ್ಷಯಗಳು[1]. ಇದರಲ್ಲಿರುವ ಆತ್ಮ, ದೇಶ, ಕಾಲ, ಉಪಾಯ, ಕರ್ತವ್ಯ ಮತ್ತು ಸಹಾಯ – ಈ ಷಡ್ವರ್ಗಗಳ ನೀತಿಯೇ ಸರ್ವೋನ್ನತಿಗೆ ಕಾರಣವಾಗುತ್ತದೆಯೆಂದು ಹೇಳುತ್ತಾರೆ. ಭರತರ್ಷಭ! ಇದರಲ್ಲಿ ತ್ರಯೀ[2], ಅನ್ವೀಕ್ಷಿಕೀ[3], ವಾರ್ತೆ[4] ಮತ್ತು ದಂಡನೀತಿ – ಈ ವಿಪುಲ ವಿದ್ಯೆಗಳ ನಿರೂಪಣೆಯಿದೆ. ಪಾಂಡವ! ಇದರಲ್ಲಿ ಮಂತ್ರಿಗಳ ರಕ್ಷಣೆ, ರಾಜದೂತರು ಮತ್ತು ರಾಜಪುತ್ರರ ರಕ್ಷಣೆ. ಚಾರರ ವಿವಿಧ ಉಪಾಯಗಳು, ಬೇರೆ ಬೇರೆ ವಿಧದ ಗುಪ್ತಚರರು, ಸಾಮ, ದಾನ, ಭೇದ, ದಂಡ ಮತ್ತು ಉಪೇಕ್ಷೆ ಈ ಐದು ಉಪಾಯಗಳು ಇವೆಲ್ಲವೂ ವಿಸ್ತಾರವಾಗಿ ವರ್ಣಿತವಾಗಿವೆ. ಇದರಲ್ಲಿ ಮಂತ್ರಾಲೋಚನೆ ಮತ್ತು ಭೇದಗಳ ಅರ್ಥವನ್ನು ಸಂಪೂರ್ಣವಾಗಿ – ಮಂತ್ರಾಲೋಚನೆಯು ಬಹಿರಂಗವಾದರೆ ಮತ್ತು ಭೇದವು ಸಿದ್ಧಿಯಾದರೆ ದೊರೆಯುವ ಫಲಗಳೂ – ವರ್ಣಿತವಾಗಿವೆ. ಇದರಲ್ಲಿ ಸಂಧಿಯ ವಿವಿಧ ಪ್ರಕಾರಗಳು – ಭಯದಿಂದ ಮಾಡಿಕೊಂಡ ಹೀನ ಸಂಧಿ, ಸತ್ಕಾರವನ್ನು ಪಡೆದು ಮಾಡಿಕೊಂಡ ಮಧ್ಯಮ ಸಂಧಿ, ಮತ್ತು ವಿತ್ತವನ್ನು ಪಡೆದು ಮಾಡಿಕೊಂಡ ಉತ್ತಮ ಸಂಧಿ – ಈ ಮೊದಲಾದ ಹೀನ, ಮಧ್ಯಮ ಮತ್ತು ಉತ್ತಮ ಸಂಧಿಗಳ ಕುರಿತು ಸಂಪೂರ್ಣ ವರ್ಣನೆಯಿದೆ. ಇದರಲ್ಲಿ ದಂಡ ಯಾತ್ರೆಯ ನಾಲ್ಕು ಕಾಲಗಳೂ[5], ವಿಜಯದ ನಾಲ್ಕು ವರ್ಗಗಳೂ – ಧರ್ಮ ವಿಜಯ, ಅರ್ಥ ವಿಜಯ ಮತ್ತು ಆಸುರ ವಿಜಯ – ವಿಸ್ತಾರವಾಗಿ ವರ್ಣಿತಗೊಂಡಿವೆ. ಮತ್ತು ಪಂಚವರ್ಗಗಳ[6] ಲಕ್ಷಣಗಳೂ, ಮೂರು ವಿಧಗಳೂ[7] ವರ್ಣಿತವಾಗಿವೆ. ಇದರಲ್ಲಿ ಪ್ರಕಾಶ ಮತ್ತು ಅಪ್ರಕಾಶ ಈ ಎರಡೂ ಸೇನಾದಂಡಗಳ ಕುರಿತು, ಎಂಟು ವಿಧದ ಪ್ರಕಾಶ ಸೇನಾದಂಡಗಳು ಮತ್ತು ಗುಪ್ತ ಸೇನಾದಂಡದ ಕುರಿತು ಬಹಳ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ.

ಪಾಂಡವ! ಕೌರವ್ಯ! ರಥಗಳು, ಆನೆಗಳು, ಕುದುರೆಗಳು, ಪದಾತಿಗಳು, ಭಾರವನ್ನು ಹೊರುವವರು, ನಾವಿಕರು, ಗೂಢಚಾರರು ಮತ್ತು ದೇಶಿಕಾಚಾರ್ಯರು – ಇವೇ ಪ್ರಕಾಶ ಸೇನಾದಂಡದ ಎಂಟು ಅಂಗಗಳು. ಚಲಿಸುವ ಸರ್ಪಾದಿಗಳಿಂದ ತಯಾರಾದ ಮತ್ತು ಚಲಿಸದ ಮರ-ಗಿಡ-ಬಳ್ಳಿಗಳಿಂದ ತಯಾರಾದ ವಿಷ ಇವೇ ಮೊದಲಾದವುಗಳು ಗುಪ್ತ ಸೇನೆಯ ಅಂಗಗಳು. ವಿಷಾದಿ ಗುಪ್ತ ಸೇನಾಂಗವಿಷಯಗಳನ್ನು ಆಯುಧ ಅಥವಾ ವಸ್ತ್ರದ ಮೂಲಕ ಶತ್ರುವಿಗೆ ಸ್ಪರ್ಶವಾಗುವಂತೆ ಮಾಡಬೇಕು ಅಥವಾ ಶತ್ರುವಿನ ಭೋಜನಾದಿಗಳಲ್ಲಿ ಬೆರೆಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ಈ ನೀತಿ ಶಾಸ್ತ್ರದಲ್ಲಿ ಅರಿ, ಮಿತ್ರ ಮತ್ತು ಉದಾಸೀನ ಇವರ ಬಗ್ಗೆಯ ವರ್ಣನೆಯೂ ಇದೆ. ಇದರಲ್ಲಿ ಗ್ರಹ-ನಕ್ಷತ್ರಗಳ ಸಮಸ್ತ ಮಾರ್ಗಗುಣಗಳು[8] ಮತ್ತು ಭೂಮಿಯ ಗುಣಗಳು[9], ಆತ್ಮರಕ್ಷಣೆಯ ವಿಧಾನಗಳು, ಆಶ್ವಾಸನೆ, ರಥಾದಿಗಳ ನಿರ್ಮಾಣ ಮತ್ತು ಇವುಗಳ ನಿರೀಕ್ಷೆ ಇವುಗಳ ಕುರಿತು ವರ್ಣನೆಯಿದೆ. ಭರತರ್ಷಭ! ಅದರಲ್ಲಿ ನರ-ನಾಗ-ರಥ-ವಾಜಿಗಳ ವಿವಿಧ ವ್ಯೂಹಗಳ ಕಲ್ಪನೆಗಳು ಮತ್ತು ವಿವಿಧ ವಿಚಿತ್ರ ಯುದ್ಧಕೌಶಲಗಳು ಹೇಳಲ್ಪಟ್ಟಿವೆ. ಹಾಗೆಯೇ ಮೇಲಕ್ಕೆ ಹಾರುವುದು, ಕೆಳಕ್ಕೆ ಬೀಳುವುದು, ಎದುರಿಸಿ ಯುದ್ಧಮಾಡುವುದು, ಉತ್ತಮವಾಗಿ ಪಲಾಯನ ಮಾಡುವುದು, ಶಸ್ತ್ರಗಳನ್ನು ಹರಿತಹೊಳಿಸುವ ವಿಧಾನ ಇವುಗಳ ವರ್ಣನೆಯೂ ಇದೆ. ಪಾಂಡವ! ಸೇನೆಗೆ ಬಂದೊದಗುವ ವ್ಯಸನಗಳು, ಸೇನೆಯನ್ನು ಹರ್ಷಗೊಳಿಸುವುದು, ಪೀಡೆಗೊಳಗಾದಾಗ ಬೇರೆ ವಾಸಿಸುವ ಸಮಯ, ಭಯದ ಕಾಲ ಇವುಗಳ ವರ್ಣನೆಯೂ ಇದೆ. ಕಂದಕಗಳನ್ನು ತೋಡುವ ಕ್ರಮ, ಸಜ್ಜಾದ ಸೇನೆಯ ಪ್ರಯಾಣಕ್ರಮ, ಕಾಡುಜನರು ಮತ್ತು ಕಳ್ಳಕಾಕರ ಮೂಲಕ ಶತ್ರುರಾಜ್ಯಕ್ಕೆ ಪೀಡೆಯನ್ನುಂಟುಮಾಡುವುದು, ಬೆಂಕಿ-ವಿಷ-ಕೃತ್ರಿಮ ದೂತರಿಂದ ಶತ್ರುಗಳಿಗೆ ಹಾನಿಯನ್ನುಂಟುಮಾಡುವುದು, ಮಂತ್ರಿಮುಖ್ಯರ ವೇಷಧಾರಿಗಳನ್ನು ಕಳುಹಿಸಿ ಶತ್ರುಗಳನ್ನು ಮೋಸಗೊಳಿಸುವುದು, ಶತ್ರುಸೇನೆಗಳ ಮುಖ್ಯರೊಳಗೆ ಭಿನ್ನಾಭಿಪ್ರಾಯಗಳನ್ನುಂಟುಮಾಡುವುದು, ಬೆಳೆದುನಿಂತಿರುವ ಫಸಲನ್ನು ಕತ್ತರಿಸುವುದು, ಶತ್ರುಪಕ್ಷದ ಆನೆಗಳನ್ನು ರೇಗಿಸುವುದು, ಶತ್ರುರಾಜ್ಯದ ಪ್ರಜೆಗಳಿಗೆ ಆತಂಕವನ್ನುಂಟುಮಾಡುವುದು, ಶತ್ರುಪಕ್ಷದ ಮುಖ್ಯನನ್ನು ವಿಶೇಷವಾಗಿ ಪುರಸ್ಕರಿಸಿ ತನ್ನ ಕಡೆಗೆ ಒಲಿಸಿಕೊಳ್ಳುವುದು – ಈ ವಿಷಯಗಳೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ.

ರಾಜ್ಯದ ಏಳು ಅಂಗಗಳ ಕ್ಷಯ, ವೃದ್ಧಿ ಮತ್ತು ಸಮತ್ವಗಳು; ದೂತನ ಸಾಮರ್ಥ್ಯ-ಸಹಯೋಗಗಳಿಂದ ರಾಷ್ಟ್ರದ ವೃದ್ಧಿ; ಶತ್ರು-ಮಧ್ಯಸ್ಥ-ಮಿತ್ರರ ವಿಸ್ತಾರ ವಿವೇಚನೆ; ಬಲಶಾಲಿ ಶತ್ರುಗಳ ಉಪಾಯಗಳನ್ನು ಭಂಗಗೊಳಿಸಿ ಸೋಲಿಸುವುದು ಇವೆಲ್ಲವುಗಳ ಕುರಿತು ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ. ಶಾಸನ ಸಂಬಂಧದ ಅತಿಸೂಕ್ಷ್ಮ ವ್ಯವಹಾರ; ರಾಷ್ಟ್ರಕಂಟಕರನ್ನು ಶೋಧಿಸಿ ಶಾಂತಗೊಳಿಸುವುದು; ವ್ಯಾಯಮಯೋಗ, ದ್ರವ್ಯಗಳ ಸಂಗ್ರಹ ಯೋಗ; ನಿರ್ಗತಿಕರ ಭರಣ-ಪೋಷಣೆಗಳು; ಭರಣ-ಪೋಷಣಾಕಾರ್ಯಗಳ ಮೇಲ್ವಿಚಾರಣೆ; ಕಾಲಕಾಲಕ್ಕೆ ಸಂಪತ್ತಿನ ದಾನ; ಮತ್ತು ವ್ಯಸನಗಳ ಕುರಿತು ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ. ಹಾಗೆಯೇ ರಾಜನ ಗುಣಗಳು, ಸೇನಾಪತಿಯ ಗುಣಗಳು, ಕರ್ತವ್ಯಗಳ ಕಾರಣ-ಗುಣ-ದೋಷಗಳನ್ನೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವಿವರಿಸಲಾಗಿದೆ. ವಿವಿಧ ದುಷ್ಟ ಆಸೆಗಳು; ತನ್ನನ್ನೇ ಅವಲಂಬಿಸಿರುವವರಿಗೆ ವಹಿಸಿಕೊಡಬಹುದಾದ ಕಾರ್ಯಭಾರಗಳು; ಎಲ್ಲವನ್ನೂ ಶಂಕಿಸುವುದು; ಪ್ರಮಾದದ ವರ್ಜನೆ; ಲಭಿಸದೇ ಇರುವುದನ್ನು ಪಡೆದುಕೊಳ್ಳುವುದು ಮತ್ತು ಅದನ್ನು ವೃದ್ಧಿಗೊಳಿಸುವುದು; ವೃದ್ಧಿಯಾದುದನ್ನು ಪಾತ್ರರಿಗೆ ವಿಧಿವತ್ತಾಗಿ ದಾನಮಾಡುವುದು; ಧರ್ಮ-ಅರ್ಥ-ಕಾಮಗಳಿಗೆ ಮತ್ತು ನಾಲ್ಕನೆಯದಾಗಿ ವ್ಯಸನವೊದಗಿದಾಗ ಅದನ್ನು ಪರಿಹರಿಸಲು ಸಂಪತ್ತನ್ನು ವಿನಿಯೋಗಿಸುವುದು ಇವೆಲ್ಲವೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣಿತವಾಗಿವೆ. ಕುರುಶ್ರೇಷ್ಠ! ಕಾಮ-ಕ್ರೋಧಗಳಿಂದ ಹುಟ್ಟುವ ಹತ್ತು ಉಗ್ರ ವ್ಯಸನಗಳ ಕುರಿತು ಇದರಲ್ಲಿ ವರ್ಣಿಸಲಾಗಿದೆ. ಸ್ವಯಂಭುವು ಇದರಲ್ಲಿ ಆಚಾರ್ಯರು ಹೇಳುವ ಬೇಟೆ, ಜೂಜು, ಮದ್ಯಪಾನ, ಸ್ತ್ರೀಸಂಗ ಈ ನಾಲ್ಕು ಕಾಮಜನ್ಯ ವ್ಯಸನಗಳನ್ನು ವರ್ಣಿಸಿದ್ದಾನೆ. ಹಾಗೆಯೇ ಕ್ರೂರವಾದ ಮಾತು, ಉಗ್ರತೆ, ಕಠಿಣವಾಗಿ ದಂಡಿಸುವುದು, ತನ್ನನ್ನೇ ದಂಡಿಸಿಕೊಳ್ಳುವುದು, ಬಂಧು-ಬಳಗದವರನ್ನು ತ್ಯಜಿಸುವುದು, ಸಂಪತ್ತನ್ನು ದೂಷಿಸುವುದು – ಈ ಆರು ಕ್ರೋಧಜನ್ಯ ವ್ಯಸನಗಳ ವರ್ಣನೆಯೂ ಬ್ರಹ್ಮನ ನೀತಿಶಾಸ್ತ್ರದಲ್ಲಿದೆ. ವಿವಿಧ ಯಂತ್ರಗಳೂ ಮತ್ತು ಅವುಗಳ ಕ್ರಿಯೆಗಳೂ ಇಲ್ಲಿ ವರ್ಣಿತವಾಗಿವೆ. ಶತ್ರುರಾಷ್ಟ್ರವನ್ನು ಧ್ವಂಸಗೊಳಿಸುವುದು; ಶತ್ರುವಿಗೆ ಆಘಾತವನ್ನುಂಟುಮಾಡುವುದು; ಕಟ್ಟಡಗಳ ನಾಶ; ಚೈತ್ಯ-ವೃಕ್ಷಗಳನ್ನು ಧ್ವಂಸಗೊಳಿಸುವುದು; ರಾಜಭವನವನ್ನು ನಾಲ್ಕೂ ಕಡೆಗಳಿಂದ ಮುತ್ತಿಗೆ ಹಾಕುವುದು ಇವುಗಳ ಉಪಾಯ-ವಿಧಾನಗಳ ಕುರಿತಾದ ವರ್ಣನೆಗಳಿವೆ. ಯೋದ್ಧರಲ್ಲಿ ಶ್ರೇಷ್ಠ! ಇದರಲ್ಲಿ ಮದ್ದಳೆ, ನಗಾರಿ, ಶಂಖ, ಭೇರಿ ಇವುಗಳನ್ನು ಬಾರಿಸುವ ಕ್ರಮ; ಆರು ದ್ರವ್ಯಗಳನ್ನು[10] ಸಂಪಾದಿಸುವ ಮತ್ತು ಶತ್ರುವಿನ ಈ ಆರು ದ್ರವ್ಯಗಳನ್ನು ನಾಶಪಡಿಸುವ ವಿಧಾನಗಳ ವರ್ಣನೆಯೂ ಇದೆ.

ಪಡೆದುಕೊಂಡ ರಾಷ್ಟ್ರದಲ್ಲಿ ಶಾಂತಿಯ ಸ್ಥಾಪನೆ; ಸತ್ಪುರುಷರ ಪೂಜನ; ವಿದ್ವಾಂಸರೊಡನೆ ಏಕೀಭಾವದಿಂದಿರುವುದು; ಪ್ರಾತಃಕಾಲದಲ್ಲಿ ಮಾಡುವ ಹೋಮ, ಮಂಗಲ ವಸ್ತುಗಳನ್ನು ಮುಟ್ಟುವುದು; ಶರೀರದ ಸಿಂಗಾರ; ಆಹಾರಯೋಜನೆ ಮತ್ತು ನಿತ್ಯವೂ ಆಸ್ತಿಕ್ಯಭಾವದಿಂದಿರುವುದು ಇವುಗಳ ಕುರಿತ ಜ್ಞಾನವೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ದೊರೆಯುತ್ತದೆ. ಏಕಾಂಗಿಯಾಗಿದ್ದರೂ ಉನ್ನತನಾಗುವುದು; ಉತ್ಸವ ಮತ್ತು ಸಮಾಜದಲ್ಲಿ ಆಡಬೇಕಾದ ಸತ್ಯ-ಮಧುರ ಮಾತು-ಕ್ರಿಯೆ ಇವುಗಳ ಉಲ್ಲೇಖವೂ ಬ್ರಹ್ಮನ ನೀತಿಶಾಸ್ತ್ರದಲ್ಲಿದೆ. ಭರತಶಾರ್ದೂಲ! ಎಲ್ಲ ಅಧಿಕಾರಿಗಳ ವೃತ್ತಿಗಳ ಕುರಿತು ಪ್ರತ್ಯಕ್ಷವಾಗಲೀ ಅಥವಾ ಪರೋಕ್ಷವಾಗಲೀ ನಿತ್ಯವೂ ತಿಳಿದುಕೊಂಡು ಮೇಲ್ವಿಚಾರಣೆ ಮಾಡುವುದರ ಕುರಿತೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣನೆಯಿದೆ. ವಿಪ್ರರನ್ನು ದಂಡಿಸದೇ ಇರುವುದು; ಯುಕ್ತಿಪೂರ್ವಕವಾಗಿ ದಂಡನೆಯನ್ನು ನೀಡುವುದು; ಅನುಯಾಯಿಗಳು, ಸ್ವಜಾತಿಯವರು ಮತ್ತು ಗುಣವಂತರ ರಕ್ಷಣೆ ಇವುಗಳ ಕುರಿತೂ ಬ್ರಹ್ಮನ ನೀತಿಶಾಸ್ತ್ರದಲ್ಲಿ ವರ್ಣನೆಯಿದೆ. ರಾಜನ್! ಪೌರರ ರಕ್ಷಣೆ; ಸ್ವರಾಷ್ಟ್ರದ ಅಭಿವೃದ್ಧಿ; ಮಂಡಲಸ್ಥರಾಗಿರುವ ದ್ವಾದಶರಾಜಿಕರ[11] ಕುರಿತಾದ ಚಿಂತೆ; ಶರೀರಕ್ಕಿರುವ ಎಪ್ಪತ್ತೆರಡು ಚಿಕಿತ್ಸೆಗಳು; ಮತ್ತು ದೇಶ-ಜಾತಿ-ಕುಲಗಳ ಧರ್ಮಗಳು ಇವೆಲ್ಲವುಗಳನ್ನೂ ಸ್ವಯಂಭುವು ವರ್ಣಿಸಿದ್ದಾನೆ. ಭೂರಿದಕ್ಷಿಣ! ಈ ಗ್ರಂಥದಲ್ಲಿ ಧರ್ಮ-ಅರ್ಥ-ಕಾಮ-ಮೋಕ್ಷಗಳನ್ನು ಪಡೆಯುವ ವಿವಿಧ ಉಪಾಯಗಳೂ ವರ್ಣಿತವಾಗಿವೆ.  ಇದರಲ್ಲಿ ಮೂಲಕರ್ಮಕ್ರಿಯೆಗಳು, ಮಾಯೆಯನ್ನು ಬಳಸುವುದು, ಹರಿಯುವ ಮತ್ತು ನಿಂತನೀರಿನ ದೂಷಣೆ ಇವುಗಳ ಕುರಿತಾದ ವರ್ಣನೆಯೂ ಇದೆ. ರಾಜಶಾರ್ದೂಲ! ಯಾವ ಯಾವ ಉಪಾಯಗಳಿಂದ ಈ ಲೋಕವು ಸನ್ಮಾರ್ಗದಿಂದ ವಿಚಲಿತವಾಗುವುದಿಲ್ಲವೋ ಆ ಎಲ್ಲವನ್ನೂ ಈ ನೀತಿಶಾಸ್ತ್ರದಲ್ಲಿ ವರ್ಣಿಸಲಾಗಿದೆ. ಈ ಶುಭ ಶಾಸ್ತ್ರವನ್ನು ರಚಿಸಿ ಭಗವಾನ್ ಪ್ರಭುವು ಸಂಹೃಷ್ಟನಾಗಿ ಶಕ್ರನನ್ನೇ ಮುಂದಿಟ್ಟುಕೊಂಡಿದ್ದ ಸರ್ವ ದೇವತೆಗಳಿಗೂ ಹೇಳಿದನು:

“ಲೋಕದ ಉಪಕಾರಕ್ಕಾಗಿ ಮತ್ತು ತ್ರಿವರ್ಗಗಳ ಸ್ಥಾಪನೆಗಾಗಿ ಸರಸ್ವತಿಯಿಂದ ನನ್ನ ಬುದ್ಧಿಯಲ್ಲಿ ಈ ನವನೀತವು ಪ್ರಕಾಶಗೊಂಡಿದೆ. ದಂಡಶಾಸ್ತ್ರವನ್ನು ಹೊಂದಿರುವ ಇದು ಲೋಕರಕ್ಷಣೆಗೆ ಕಾರಣವಾಗುತ್ತದೆ. ನಿಗ್ರಹ-ಅನುಗ್ರಹಗಳನ್ನು ವರ್ಣಿಸುವ ಇದು ಲೋಕಗಳಲ್ಲಿ ಪ್ರಚಲಿತವಾಗುತ್ತದೆ. ದಂಡದ ಮೂಲಕ ಲೋಕವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬಹುದು. ಮತ್ತು ದಂಡವೇ ಲೋಕವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ದಂಡನೀತಿಯೆಂದು ಕರೆಯಲ್ಪಡುವ ಈ ನೀತಿಶಾಸ್ತ್ರವು ಮೂರು ಲೋಕಗಳನ್ನೂ ವ್ಯಾಪಿಸಿದೆ.  ಆರುಗುಣಗಳ ಸಾರವು ಇದರಲ್ಲಿದೆ. ಮಹಾತ್ಮರ ಪ್ರಕಾರ ಇದರ ಸ್ಥಾನವು ಅತ್ಯುನ್ನತವಾಗಿದೆ. ದಂಡನೀತಿಯ ಸ್ಪಷ್ಟಲಕ್ಷಣಗಳೇ ಇದರ ಮಹತ್ತ್ವ.”

ಯುಧಿಷ್ಠಿರ! ಸಂಪೂರ್ಣ ಶಿಷ್ಟಾಚಾರಗಳೆಲ್ಲವೂ; ಆಗಮ-ಪುರಾಣ ಮತ್ತು ಮಹರ್ಷಿಗಳ ಹುಟ್ಟು; ತೀರ್ಥಕ್ಷೇತ್ರಗಳ ವಂಶ, ನಕ್ಷತ್ರಗಳ ವಂಶ, ಚತುರಾಶ್ರಮಗಳ ಸಕಲವೂ; ನಾಲ್ಕು ಹೋತ್ರಗಳೂ, ಇತಿಹಾಸ-ಉಪವೇದಗಳು ಮತ್ತು ನ್ಯಾಯ ಇವೆಲ್ಲವೂ ಇದರಲ್ಲಿ ಸಂಪೂರ್ಣವಾಗಿ ವರ್ಣಿತಗೊಂಡಿವೆ. ತಪಸ್ಸು, ಜ್ಞಾನ, ಅಹಿಂಸೆ, ಸತ್ಯ, ಅಸತ್ಯ ಮತ್ತು ನ್ಯಾಯ, ವೃದ್ಧರ ಸೇವೆ, ದಾನ, ಶೌಚ, ಉತ್ಥಾನ, ಸರ್ವಭೂತಾನುಕಂಪ, ಇವೆಲ್ಲವೂ ಇದರಲ್ಲಿ ವರ್ಣಿತವಾಗಿವೆ. ಭುವಿಯಲ್ಲಿ ಮಾತನಾಡಲು ಏನೆಲ್ಲ ಇವೆಯೋ ಅವೆಲ್ಲವೂ ಇದರಲ್ಲಿವೆ. ಪಾಂಡವ! ಪಿತಾಮಹನ ಈ ಶಾಸ್ತ್ರದಲ್ಲಿ ನಿಸ್ಸಂಶಯವಾಗಿಯು ಧರ್ಮ-ಅರ್ಥ-ಕಾಮ-ಮೋಕ್ಷಗಳ ಕುರಿತಾದ ಎಲ್ಲವೂ ವರ್ಣಿತವಾಗಿವೆ. ಮೊದಲು ಆ ನೀತಿಶಾಸ್ತ್ರವನ್ನು ಭಗವಾನ್ ಶಂಕರ ಬಹುರೂಪ ವಿಶಾಲಾಕ್ಷ ಶಿವ ಸ್ಥಾಣು ಉಮಾಪತಿಯು ಪ್ರತಿಗ್ರಹಿಸಿದನು. ಯುಗಗಳ ಆಯಸ್ಸು ಕಡಿಮೆಯಾಗುತ್ತದೆಯೆಂದು ತಿಳಿದ ಭಗವಾನ್ ಶಿವನು ಮಹಾರ್ಥವುಳ್ಳ ಬ್ರಹ್ಮಕೃತ ಆ ಶಾಸ್ತ್ರವನ್ನು ಸಂಕ್ಷಿಪ್ತಗೊಳಿಸಿದನು. ವೈಶಾಲಾಕ್ಷವೆಂದು ಕರೆಯಲ್ಪಟ್ಟ ಹತ್ತು ಸಾವಿರ ಅಧ್ಯಾಯಗಳುಳ್ಳ ಅದನ್ನು ಮಹಾತಪಸ್ವಿ ಸುಬ್ರಹ್ಮಣ್ಯ ಇಂದ್ರನು ಪಡೆದುಕೊಂಡನು. ಭಗವಾನ್ ಪುರಂದರನು ಅದನ್ನು ಇನ್ನೂ ಸಂಕ್ಷೇಪಗೊಳಿಸಿದನು. ಅಯ್ಯಾ! ಐದು ಸಾವಿರ ಅಧ್ಯಾಯಗಳಿದ್ದ ಅದು ಬಾಹುದಂತಕ ಎಂದಾಯಿತು. ಈಶ್ವರ ಬೃಹಸ್ಪತಿಯು ತನ್ನ ಬುದ್ಧಿಯಿಂದ ಅದನ್ನು ಮೂರು ಸಾವಿರ ಅಧ್ಯಾಯಗಳಿದ್ದುದನ್ನು ಮಾಡಿ ಇನ್ನೂ ಸಂಕ್ಷೇಪಿಸಿದನು. ಅದನ್ನು ಬಾರ್ಹಸ್ಪತ್ಯ ಎಂದು ಕರೆಯುತ್ತಾರೆ. ಆ ಶಾಸ್ತ್ರವನ್ನು ಯೋಗಾಚಾರ್ಯ ಮಹಾತಪಸ್ವಿ ಅಮಿತಪ್ರಜ್ಞ ಕಾವ್ಯನು ಒಂದು ಸಾವಿರ ಅಧ್ಯಾಯಗಳಾಗಿ ಸಂಕ್ಷೇಪಿಸಿದನು. ಪಾಂಡವ! ಹೀಗೆ ಲೋಕದಲ್ಲಿ ಮನುಷ್ಯರ ಆಯುಃ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ಮನಗಂಡ ಮಹರ್ಷಿಗಳು ಬ್ರಹ್ಮರಚಿತ ನೀತಿಶಾಸ್ತ್ರವನ್ನು ಲೋಕಹಿತಕ್ಕಾಗಿ ಸಂಕ್ಷಿಪ್ತಗೊಳಿಸುತ್ತಾ ಬಂದಿದ್ದಾರೆ."

ರಾಜಾ ಪೃಥುವಿನ ಚರಿತ್ರೆ

ಭೀಷ್ಮನು ಹೇಳಿದನು:

"ಒಮ್ಮೆ ದೇವತೆಗಳು ಪ್ರಜಾಪತಿ ವಿಷ್ಣುವಿನ ಬಳಿಸಾರಿ “ಮನುಷ್ಯರಲ್ಲಿ ಶ್ರೇಷ್ಠನೆನಿಸಿಕೊಳ್ಳಲು ಅರ್ಹನಾದವನು ಯಾರು ಎನ್ನುವುದನ್ನು ತಿಳಿಸಿಕೊಡು!” ಎಂದು ಕೇಳಿಕೊಂಡರು. ಆಗ ಭಗವಾನ್ ದೇವ ನಾರಾಯಣ ಪ್ರಭುವು ಸ್ವಲ್ಪ ಹೊತ್ತು ಯೋಚಿಸಿ ತನ್ನ ತೇಜಸ್ಸಿನಿಂದ ವಿರಜಸನೆಂಬ ಮಾನಸ ಪುತ್ರನನ್ನು ಸೃಷ್ಟಿಸಿದನು. ಮಹಾಭಾಗ! ಪಾಂಡವ! ಆದರೆ ವಿರಜಸನು ಭುವಿಯ ವಿಭುತ್ವವನ್ನು ಬಯಸಲಿಲ್ಲ. ಅವನ ಬುದ್ಧಿಯು ಸಂನ್ಯಾಸದಲ್ಲಿಯೇ ತೊಡಗಿಕೊಂಡಿತ್ತು. ಅವನಿಗೆ ಕೀರ್ತಿಮಾನನೆಂಬ ಮಗನು ಹುಟ್ಟಿದನು. ಆದರೆ ಅವನೂ ಪಂಚತತ್ತ್ವಗಳಿಗೂ ಅತೀತವಾದ ಅಧ್ಯಾತ್ಮವನ್ನೇ ಅನುಸರಿಸಿದನು. ಅವನ ಮಗ ಕರ್ದಮನೂ ಕೂಡ ಮಹಾತಪಸ್ಸಿನಲ್ಲಿಯೇ ನಿರತನಾದನು. ಪ್ರಜಾಪತಿ ಕರ್ದಮನ ಮಗನ ಹೆಸರು ಅನಂಗ. ಅವನು ಪ್ರಜೆಗಳ ರಕ್ಷಕನೂ, ಸಾಧುವೂ, ದಂಡನೀತಿ ವಿಶಾರದನೂ ಆಗಿದ್ದನು. ಅನಂಗನ ಮಗನು ಅತಿಬಲನು. ಅವನು ನೀತಿಶಾಸ್ತ್ರದಲ್ಲಿ ಪಾರಂಗತನಾಗಿದ್ದನು. ಅವನು ಮಹೀರಾಜ್ಯವನ್ನು ಆಳಿದನು. ಆದರೆ ಅವನು ಇಂದ್ರಿಯಗಳಿಗೆ ವಶನಾಗಿಬಿಟ್ಟಿದ್ದನು. ರಾಜನ್! ಮೃತ್ಯುವಿಗೆ ಸುನೀಥಾ ಎಂಬ ಹೆಸರಿನ ಮಾನಸ ಪುತ್ರಿಯಿದ್ದಳು. ಮೂರು ಲೋಕಗಳಲ್ಲಿಯೂ ವಿಖ್ಯಾತಳಾಗಿದ್ದ ಅವಳು ಅತಿಬಲನ ಮಗ ವೇನನಿಗೆ ಜನ್ಮವಿತ್ತಳು. ರಾಗ-ದ್ವೇಷಗಳ ವಶಕ್ಕೆ ಸಿಲುಕಿ, ಪ್ರಜೆಗಳಲ್ಲಿ ಅಧರ್ಮವನ್ನೆಸಗುತ್ತಿದ್ದ ಅವನನ್ನು ಬ್ರಹ್ಮವಾದಿ ಋಷಿಗಳು ಮಂತ್ರಪೂತ ದರ್ಭೆಗಳಿಂದ ಸಂಹರಿಸಿದರು.

ಅನಂತರ ಋಷಿಗಳು ಮಂತ್ರಪೂರ್ವಕವಾಗಿ ಅವನ ಎಡತೊಡೆಯನ್ನು ಮಥಿಸಿದರು. ಅದರಿಂದ ಆಗ ಭುವಿಯಲ್ಲಿ ವಿಕೃತನಾಗಿದ್ದ ಕುಬ್ಜ ಪುರುಷನೊಬ್ಬನು ಜನಿಸಿದನು. ಸುಟ್ಟ ಕಲ್ಲಿನಂತೆ ತೋರುತ್ತಿದ್ದ, ಕೆಂಪುಕಣ್ಣಿನ ಮತ್ತು ಕಪ್ಪು ತಲೆಗೂದಲಿನ ಅವನಿಗೆ ಬ್ರಹ್ಮವಾದಿ ಋಷಿಗಳು “ಕುಳಿತುಕೋ!” ಎಂದು ಹೇಳಿದರು. ಅವನಿಂದಲೇ ಪರ್ವತ-ವನಗಳನ್ನು ಆಶ್ರಯಿಸಿದ ಕ್ರೂರ ನಿಷಾದರು ಮತ್ತು ವಿಂಧ್ಯಾಚಲ ನಿವಾಸಿಗಳಾದ ಅನ್ಯ ನೂರಾರು ಸಹಸ್ರಾರು ಮ್ಲೇಚ್ಛರೂ ಹುಟ್ಟಿದರು.

ಮಹರ್ಷಿಗಳು ಪುನಃ ವೇನನ ಬಲಗೈಯನ್ನು ಕಡೆದರು. ಆಗ ಅದರಿಂದ ಇಂದ್ರನ ರೂಪವುಳ್ಳ ಇನ್ನೊಬ್ಬ ಪುರುಷನು ಉತ್ಪನ್ನನಾದನು. ಕವಚವನ್ನು ಧರಿಸಿ, ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು, ಧನುಸ್ಸು-ಬಾಣಗಳನ್ನು ಹಿಡಿದಿದ್ದ ಅವನು ವೇದವೇದಾಂಗವಿದುವೂ ಧನುರ್ವೇದ ಪಾರಂಗತನೂ ಆಗಿದ್ದನು. ರಾಜನ್! ಆ ನರೋತ್ತಮನನ್ನು ಸಕಲ ದಂಡನೀತಿಗಳೂ ಆಶ್ರಯಿಸಿದವು. ಅನಂತರ ಆ ವೈನ್ಯನು ಮಹರ್ಷಿಗಳಿಗೆ ಕೈಮುಗಿದು ಹೇಳಿದನು:

 “ಧರ್ಮಾರ್ಥಗಳನ್ನು ಕಾಣುವ ಸೂಕ್ಷ್ಮ ಬುದ್ಧಿಯು ನನ್ನಲ್ಲಿ ಪ್ರಾದುರ್ಭವಿಸಿದೆ. ಇದರಿಂದ ನಾನು ಏನು ಕಾರ್ಯವನ್ನು ಮಾಡಬೇಕು ಎನ್ನುವುದನ್ನು ಯಥಾವತ್ತಾಗಿ ಹೇಳಿರಿ! ನೀವು ನನಗೆ ಅರ್ಥಸಮನ್ವಿತವಾದ ಯಾವ ಕಾರ್ಯದ ಕುರಿತು ಹೇಳುತ್ತೀರೋ ಅದನ್ನೇ ನಾನು ಮಾಡುತ್ತೇನೆ. ಅದರ ಕುರಿತು ವಿಚಾರಿಸಬೇಕಾಗಿಲ್ಲ!”

ಆಗ ದೇವತೆಗಳೂ ಪರಮಋಷಿಗಳೂ ಅವನಿಗೆ ಹೇಳಿದರು:

“ಯಾವುದರಲ್ಲಿ ಧರ್ಮವು ನಿಯತವಾಗಿದೆಯೋ ಶಂಕೆಯಿಲ್ಲದೇ ಅದರಂತೆ ನಡೆದುಕೋ! ಪ್ರಿಯ-ಅಪ್ರಿಯವೆಂಬ ವಿಚಾರವನ್ನು ಪರಿತ್ಯಜಿಸಿ, ಕಾಮ-ಕ್ರೋಧ ಮತ್ತು ಲೋಭ-ಮಾನಗಳನ್ನು ದೂರ ಬಿಸುಟು ಸರ್ವ ಜಂತುಗಳ ಕುರಿತೂ ಸಮಭಾವದಿಂದಿರು! ಯಾವಾಗಲೂ ಧರ್ಮವನ್ನೇ ಕಾಣುವ ನೀನು ಲೋಕದಲ್ಲಿ ಯಾವುದೇ ಮಾನವನು ಈ ಧರ್ಮವನ್ನು ಉಲ್ಲಂಘಿಸಿ ನಡೆದುಕೊಂಡರೆ ಅವನನ್ನು ನಿನ್ನ ಬಾಹುಗಳಿಂದ ನಿಗ್ರಹಿಸು. ಅಲ್ಲದೇ ಈ ಪ್ರತಿಜ್ಞೆಯನ್ನೂ ಕೈಗೊಳ್ಳು: “ಮನಸ್ಸು, ಮಾತು ಮತ್ತು ಕರ್ಮಗಳಿಂದ ನಾನು ಈ ಭೂಮಿಯಲ್ಲಿ ಬ್ರಹ್ಮವಿದ್ಯೆಯನ್ನು ಪಾಲಿಸುತ್ತೇನೆ! ದಂಡನೀತಿಯಲ್ಲಿ ಧರ್ಮವೆಂದು ಏನು ಹೇಳಲ್ಪಟ್ಟಿದೆಯೋ ಅದನ್ನು ಶಂಕಿಸದೇ ಪಾಲಿಸುತ್ತೇನೆ. ನಾನು ಎಂದೂ ಸ್ವ-ವಶನಾಗುವುದಿಲ್ಲ!” ವಿಭೋ! ಪರಂತಪ! “ದ್ವಿಜರನ್ನು ದಂಡಿಸುವುದಿಲ್ಲ ಮತ್ತು ಲೋಕವನ್ನು ಸಂಕರದಿಂದ ಕಾಪಾಡುತ್ತೇನೆ!” ಎಂದೂ ಪ್ರತಿಜ್ಞೆಮಾಡು!”

ಆಗ ವೈನ್ಯನು ಋಷಿಗಳನ್ನು ಮುಂದಿರಿಸಿಕೊಂಡು ಇದ್ದ ದೇವತೆಗಳಿಗೆ “ಬ್ರಾಹ್ಮಣರು ಮತ್ತು ಸುರರ್ಷಭ ದೇವತೆಗಳು ನನ್ನ ಸಹಾಯಕರಾಗಿರಬೇಕು!” ಎಂದು ಕೇಳಿಕೊಂಡನು. ಆ ಬ್ರಹ್ಮವಾದಿಗಳು ವೈನ್ಯನಿಗೆ ಹಾಗೆಯೇ ಆಗಲೆಂದು ಹೇಳಲು, ಬ್ರಹ್ಮಮಯ ನಿಧಿ ಶುಕ್ರನು ಅವನ ಪುರೋಹಿತನಾದನು. ವಾಲಖಿಲ್ಯರೂ ಸಾರಸ್ವತ ಗಣಗಳೂ ಮಂತ್ರಿಗಳಾದರು. ಮಹರ್ಷಿ ಭಗವಾನ್ ಗರ್ಗನು ಅವನು ಜ್ಯೋತಿಷಿಯಾದನು. ಇವನು ಆತ್ಮರಲ್ಲಿ ಅಷ್ಟಮನೆಂದು ನರರಲ್ಲಿ ಪ್ರಖ್ಯಾತನಾದನು. ಅವನ ಮೊದಲೇ ಸೂತ-ಮಾಗಧರೆಂಬ ಸ್ತುತಿಪಾಠಕರು ಹುಟ್ಟಿದ್ದರು. ವೈನ್ಯನು ಹಳ್ಳ-ತಿಟ್ಟುಗಳಿಂದ ಕೂಡಿದ್ದ ಭೂಮಿಯನ್ನು ಸಮತಟ್ಟಾಗಿ ಮಾಡಿದನೆಂದು ಕೇಳಿದ್ದೇವೆ. ವಿಷ್ಣು, ಋಷಿಗಳು, ಪ್ರಜಾಪತಿಗಳು, ಬ್ರಾಹ್ಮಣರು ಮತ್ತು ವಿಬುಧರೊಂದಿಗೆ ದೇವ ಶಕ್ರನು ಅವನನ್ನು ಅಭಿಷೇಕಿಸಿದನು. ಪಾಂಡವ! ಸಾಕ್ಷಾತ್ ಪೃಥ್ವಿ, ಸರಿತಾಪತಿ ಸಾಗರ ಮತ್ತು ಅಚಲೋತ್ತಮ ಹಿಮವಾನರು ಅವನಿಗೆ ರತ್ನಗಳನ್ನಿತ್ತು ಸೇವೆಸಲ್ಲಿಸಿದರು. ಯುಧಿಷ್ಠಿರ! ಶಕ್ರನು ಅಕ್ಷಯ ಧನವನ್ನೂ, ಕನಕ ಪರ್ವತ ಸ್ವಯಂ ಮಹಾಮೇರುವು ಚಿನ್ನವನ್ನೂ ಅವನಿಗೆ ನೀಡಿದರು.  ಯಕ್ಷ-ರಾಕ್ಷಸರ ಒಡೆಯ, ನರವಾಹನ ಕುಬೇರನೂ ಕೂಡ ಅವನ ಧರ್ಮ-ಅರ್ಥ-ಕಾಮಗಳನ್ನು ಪೂರೈಸುವಷ್ಟು ಧನವನ್ನಿತ್ತನು. ಪಾಂಡವ! ವೈನ್ಯನು ಯೋಚಿಸಿದಂತಷ್ಟು ಕುದುರೆಗಳು, ರಥಗಳು, ಆನೆಗಳು, ಮತ್ತು ಕೋಟಿಗಟ್ಟಲೆ ಸೈನಿಕರು ಆವಿರ್ಭವಿಸಿದರು. ಅವನ ರಾಜ್ಯಭಾರದ ರಕ್ಷಣೆಯಲ್ಲಿ ಯಾರಿಗೂ ಮುಪ್ಪಿರಲಿಲ್ಲ. ದುರ್ಭಿಕ್ಷವಿರಲಿಲ್ಲ. ಮಾನಸಿಕ ಮತ್ತು ಶಾರೀರಿಕ ವ್ಯಾಧಿಗಳಿರಲಿಲ್ಲ. ಸರ್ಪಗಳಿಂದಾಗಲೀ ಕಳ್ಳಕಾಕರಿಂದಾಗಲೀ, ಮತ್ತು ಅನ್ಯೋನ್ಯರಿಂದಾಗಲೀ ಯಾರಿಗೂ ಭಯವೆನ್ನುವುದೇ ಇರಲಿಲ್ಲ.

ಅವನು ಪೃಥ್ವಿಯಿಂದ ಹದಿನೇಳು ಸಸ್ಯಗಳನ್ನು ಕರೆದನು. ಯಕ್ಷ-ರಾಕ್ಷಸ-ನಾಗರಿಗೆ, ಅವರವರು ಬಯಸಿದಂಥಹ ವಸ್ತುಗಳನ್ನು ಕೂಡ ಭೂಮಿಯಿಂದ ಕರೆದನು. ಆ ಮಹಾತ್ಮನು ಲೋಕದಲ್ಲಿ ಧರ್ಮದ ಪ್ರಾಧಾನ್ಯತೆಯನ್ನು ಪ್ರತಿಷ್ಠಾಪಿಸಿದನು. ಯಾರು ಸರ್ವ ಪ್ರಜೆಗಳನ್ನೂ ರಂಜಿಸುತ್ತಾನೆಯೋ ಅವನನ್ನೇ ರಾಜನೆಂದು ಕರೆಯುತ್ತಾರೆ.  ಬ್ರಾಹ್ಮಣರು ನಾಶಗೊಳ್ಳದಂತೆ ರಕ್ಷಿಸುವವನಿಗೆ ಕ್ಷತ್ರಿಯ ಎಂದು ಹೇಳುತ್ತಾರೆ. ಇವನಿಂದ ಧನವುಳ್ಳಂತಾದುದರಿಂದ ಸಾಧುಗಳು ಇದನ್ನು ಪೃಥ್ವಿ ಎಂದು ಕರೆಯತೊಡಗಿದರು. “ಪಾರ್ಥಿವ! ನಿನ್ನನ್ನು ಅತಿಕ್ರಮಿಸಿ ಯಾರೂ ನಡೆದುಕೊಳ್ಳುವುದಿಲ್ಲ!” ಎಂದು ಸ್ವಯಂ ಸನಾತನ ವಿಷ್ಣುವೇ ಅವನನ್ನು ಸ್ಥಾಪಿಸಿದನು. ತಪಸ್ಸಿನಿಂದ ವಿಷ್ಣುವು ಆ ಭೂಮಿಪನನ್ನು ಪ್ರವೇಶಿಸಿದನು. ನೃಪ! ಆಗ ಇಡೀ ಜಗತ್ತು ದೇವತೆಯೋ ಎನ್ನುವಂತೆ ಆ ನರದೇವನನ್ನು ಸಮಸ್ಕರಿಸಿತು.

ನರೇಶ್ವರ! ನಿತ್ಯವೂ ಚಾರರನ್ನು ಕಾಣುತ್ತಾ ದಂಡನೀತಿಯಿಂದ ಸತತವೂ ರಕ್ಷಿತವಾದ ಅವನ ಆ ರಾಜ್ಯವನ್ನು ಯಾರೂ ಉಲ್ಲಂಘಿಸಲಾಗುತ್ತಿರಲಿಲ್ಲ. ಮಹೀಕ್ಷಿತನು ಆತ್ಮ ಮತ್ತು ಕರ್ಮಗಳ ಮೂಲಕ ಸರ್ವಸಮಭಾವದಿಂದ ಇರಬೇಕು. ಲೋಕವು ಒಬ್ಬನ ಅಧೀನದಲ್ಲಿರಬೇಕಾದರೆ ಅವನಲ್ಲಿರುವ ದೈವಗುಣಗಳಲ್ಲದೇ ಬೇರೆ ಯಾವ ಕಾರಣವಿರಲು ಸಾಧ್ಯ? ಆಗ ವಿಷ್ಣುವಿನ ಲಲಾಟದಿಂದ ಸುವರ್ಣಮಯ ಕಮಲವು ಉದ್ಭವಿಸಿತು. ಅದರಿಂದ ಧೀಮತ ಧರ್ಮನ ಪತ್ನಿ ಶ್ರೀಯು ಹುಟ್ಟಿದಳು. ಪಾಂಡವ! ಧರ್ಮದಿಂದ ಶ್ರೀಯಲ್ಲಿ ಅರ್ಥವು ಹುಟ್ಟಿಕೊಂಡಿತು. ಹಾಗೆ ರಾಜ್ಯದಲ್ಲಿ ಧರ್ಮ, ಅರ್ಥ ಮತ್ತು ಶ್ರೀಗಳು ಪ್ರತಿಷ್ಠಿತಗೊಂಡವು. ಮಗೂ! ಸ್ವರ್ಲೋಕದಲ್ಲಿದ್ದವನ ಸುಕೃತಗಳು ಕ್ಷಯಿಸಿದ ನಂತರ ಅವನು ಮೇದಿನಿಯ ಮೇಲೆ ದಂಡನೀತಿಯ ವಶಾನುಗನಾದ ಪಾರ್ಥಿವನಾಗಿ ಹುಟ್ಟುತ್ತಾನೆ. ಆ ನರನು ಭುವಿಯಲ್ಲಿ ವೈಷ್ಣವ ಮಹತ್ತ್ವದಿಂದ ಸಂಯುಕ್ತನಾಗಿ ಬುದ್ಧಿಸಂಪನ್ನನಾಗಿ ವಿಶೇಷ ಹಿರಿಮೆಯನ್ನೂ ಹೊಂದುತ್ತಾನೆ. ದೇವತೆಗಳಿಂದ ಸ್ಥಾಪಿತನಾದ ರಾಜನನ್ನು ಯಾರೂ ಅತಿಕ್ರಮಿಸುವುದಿಲ್ಲ. ಒಬ್ಬನೇ ವಶದಲ್ಲಿ ಎಲ್ಲರೂ ಇರುತ್ತಾರೆ. ಯಾರೂ ಅವನಿಗೆ ಆಜ್ಞೆಮಾಡುವುದಿಲ್ಲ. ರಾಜೇಂದ್ರ! ಶುಭಕರ್ಮಗಳು ಶುಭಪಲಗಳಿಂದಲೇ ಕೂಡಿರುತ್ತವೆ. ಎಲ್ಲರಂತೆ ಇವನ ಅವಯವಗಳಿದ್ದರೂ ಲೋಕವು ಅವನ ಮಾತಿನಂತೆ ನಡೆಯುತ್ತದೆ. ಅವನ ಸೌಮ್ಯ ಮುಖವನ್ನು ನೋಡಿ, ಅವನು ಸೌಭಾಗ್ಯಶಾಲಿಯೂ, ಧನವಂತನಾಗಿಯೂ, ರೂಪವಂತನಾಗಿಯೂ ಇರುವುದರಿಂದ ಜನರು ಅವನ ವಶವರ್ತಿಯಾಗಿರುತ್ತಾರೆ. ರಾಜೇಂದ್ರ! ವಿಶಾಂಪತೇ! ಅನಂತರ ಜಗತ್ತಿನಲ್ಲಿ ತಿಳಿದವರು ದೇವತೆಗಳೂ ಮತ್ತು ರಾಜರೂ ಸಮಾನರು ಎಂದು ಹೇಳತೊಡಗಿದರು. ಭರತಶ್ರೇಷ್ಠ! ರಾಜರ ಮಹತ್ವದ ಕುರಿತು ನಿನಗೆ ಎಲ್ಲವನ್ನೂ ಅಮೂಲಾಗ್ರವಾಗಿ ಹೇಳಿದ್ದೇನೆ. ಇದರ ಕುರಿತು ಇನ್ನು ಏನನ್ನು ಹೇಳಬೇಕು?””

***

[1] ದಂಡಾತ್ ಸ್ಥಾನಂ-ಸಾಮ್ಯಂ ವಣಿಜಾಂ ಅರ್ಥಾತ್ ವರ್ತಕರು ಒಂದೇ ಸ್ಥಿತಿಯಲ್ಲಿರುವಂತೆ ಮಾಡುವುದು, ಹೆಚ್ಚಿನ ಲಾಭವನ್ನು ಪಡೆಯದಂತೆ ತೆರಿಗೆ ಮೊದಲಾದುವುಗಳನ್ನು ಹಾಕಿ ಸ್ತಿಮಿತದಲ್ಲಿಡುವುದು; ವೃದ್ಧಿ ತಪಸ್ವಿನಾಂ ಅರ್ಥಾತ್ ತಪಸ್ವಿಗಳ ವೃದ್ಧಿ ಮತ್ತು ಕ್ಷಯಶ್ಚೋರಾಣಾಂ ಅರ್ಥಾತ್ ಕಳ್ಳಕಾಕರ ವಿನಾಶ – ಇವು ದಂಡಜನ್ಯವಾದ ತ್ರಿವರ್ಗಗಳು.

[2] ಕರ್ಮಕಾಂಡ

[3] ಜ್ಞಾನಕಾಂಡ

[4] ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ

[5] ಶತ್ರುವಿನ ಮೇಲೆ ಯುದ್ಧಕ್ಕೆ ಹೊರಡಲು ಇರುವ ನಾಲ್ಕು ಕಾಲವಿಶೇಷಗಳು: (೧) ತನ್ನ ಮಿತ್ರನ ವೃದ್ಧಿ (೨) ತನ್ನ ರಾಜ್ಯದ ಧನಕೋಶವನ್ನು ತುಂಬಿಸುವುದು (೩) ಶತ್ರುವಿನ ಮಿತ್ರನ ನಾಶ (೪) ಶತ್ರುವಿನ ಧನಕೋಶದ ನಾಶ.

[6] ಮಂತ್ರಿ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಕೋಶ  - ಇವು ಪಂಚವರ್ಗಗಳು.

[7] ಪಂಚವರ್ಗಗಳ ಪ್ರತಿಯೊಂದರಲ್ಲಿಯೂ ಇರುವ ಉತ್ತಮ, ಮಧ್ಯಮ ಮತ್ತು ಅಧಮಗಳೆಂಬ ವಿಧಗಳು.

[8] ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದರಿಂದ ಉಂಟಾಗುವ ಮಾರ್ಪಾಡುಗಳು

[9] ಭೂಮಿಯ ೮೪ ಗುಣಗಳು ಅಥವಾ ಬಲಗಳು

[10] ಮಣಿ, ಪಶು, ಭೂಮಿ, ವಸ್ತ್ರ, ದಾಸ-ದಾಸಿಯರು ಮತ್ತು ಸುವರ್ಣ ಇವುಗಳೇ ಷಟ್ ದ್ರವ್ಯಗಳು.

[11] ಹನ್ನೆರಡು ರಾಜರ ಸಮೂಹ. ನಾಲ್ಕು ದಿಕ್ಕುಗಳಲ್ಲಿಯೂ ಇರುವ ನಾಲ್ವರು ಶತ್ರುರಾಜರು, ನಾಲ್ವರು ಮಿತ್ರರಾಜರು ಮತ್ತು ನಾಲ್ವರು ಉದಾಸೀನರಾಜರು – ಒಟ್ಟು ಹನ್ನೆರಡು ರಾಜರು.

Leave a Reply

Your email address will not be published. Required fields are marked *