ಜನಕೋಽಪಖ್ಯಾನ
ಅರ್ಜುನನು ರಾಜಾ ಜನಕ ಮತ್ತು ಅವನ ರಾಣಿಯ ದೃಷ್ಟಾಂತವನ್ನಿತ್ತು ಯುಧಿಷ್ಠಿರನು ಸಂನ್ಯಾಸಗ್ರಹಣ ಮಾಡುವುದನ್ನು ತಡೆಯುವ ಈ ಜನಕೋಪಖ್ಯಾನವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 18ರಲ್ಲಿ ಬರುತ್ತದೆ.
***
ಹಿಂದೆ ವಿದೇಹರಾಜನು ಐಶ್ವರ್ಯ, ಮಕ್ಕಳು, ಮಿತ್ರರು, ವಿವಿಧ ರತ್ನಗಳು, ಮತ್ತು ಪಾವನ ಗೃಹಸ್ಥಾಶ್ರಮವನ್ನು ತ್ಯಜಿಸಿ ಜನಕನು ತಲೆಬೋಳಿಸಿಕೊಂಡು ಭಿಕ್ಷುವಾಗಲು ನಿಶ್ಚಯಿಸಿದನು. ಭಿಕ್ಷಾವೃತ್ತಿಯನ್ನು ಅವಲಂಬಿಸಿ ಒಂದು ಮುಷ್ಟಿ ಧಾನ್ಯದ ಹಿಟ್ಟನ್ನೇ ತಿನ್ನುತ್ತಿದ್ದ, ನಿರೀಹನಾಗಿದ್ದ, ಮತ್ಸರವನ್ನು ತೊರೆದಿದ್ದ ಅವನನ್ನು ಅವನ ಪ್ರಿಯ ಭಾರ್ಯೆಯು ನೋಡಿದಳು. ಆ ಮನಸ್ವಿನೀ ಪತ್ನಿಯು ಕ್ರುದ್ಧಳಾಗಿ ಭಯವನ್ನೇ ತೊರೆದಿದ್ದ ಪತಿಯ ಬಳಿಸಾರಿ ಯುಕ್ತಿಯುಕ್ತವಾದ ಈ ಮಾತುಗಳನ್ನಾಡಿದಳು:
“ಧನ-ಧಾನ್ಯ ಸಮೃದ್ಧವಾಗಿರುವ ನಿನ್ನ ಈ ರಾಜ್ಯವನ್ನು ನೀನೇ ತೊರೆದು ಕಾಪಾಲ ವೃತ್ತಿಯನ್ನೇಕೆ ಹಿಡಿದಿರುವೆ? ಮುಷ್ಟಿ ಧಾನ್ಯವನ್ನು ತಿನ್ನುವುದು ವನಚರರಿಗೆ ಸರಿಯಾದುದು! ರಾಜನ್! ನಿನ್ನ ಪ್ರತಿಜ್ಞೆಯೇ ಒಂದಾಗಿದ್ದರೆ ನೀನು ಮಾಡುತ್ತಿರುವುದು ಇನ್ನೊಂದಾಗಿದೆ! ಪಾರ್ಥಿವ! ಮಹಾರಾಜ್ಯವನ್ನು ತ್ಯಜಿಸಿ ಸ್ವಲ್ಪದಲ್ಲಿಯೇ ತೃಪ್ತಿಪಡೆಯುವವನಾಗಿಬಿಟ್ಟೆಯಲ್ಲ! ರಾಜನ್! ಇಂದು ನೀನು ಅತಿಥಿಗಳನ್ನು, ದೇವರ್ಷಿ-ಪಿತೃಗಳನ್ನು ಸತ್ಕರಿಸಲು ಶಕ್ಯನಾಗಿಲ್ಲ. ನಿನ್ನ ಪರಿಶ್ರಮಗಳೆಲ್ಲವೂ ವ್ಯರ್ಥವಾದಂತೆಯೇ! ಪಾರ್ಥಿವ! ದೇವತೆಗಳು, ಅತಿಥಿಗಳು ಮತ್ತು ಪಿತೃಗಳು ಎಲ್ಲರನ್ನೂ ಪರಿತ್ಯಜಿಸಿ ನೀನು ನಿಷ್ಕರ್ಮಿಯಾಗಿದ್ದುಕೊಂಡು ತಿರುಗುವೆ! ಮೂರುವೇದಗಳನ್ನು ತಿಳಿದಿರುವ ಸಹಸ್ರಾರು ವೃದ್ಧ ಬ್ರಾಹ್ಮಣರ ಪೋಷಕನಾಗಿದ್ದುಕೊಂಡು ಈಗ ಲೋಕದ ಅನ್ಯರಿಂದ ಪೋಷಣೆಗೊಳ್ಳಲು ಬಯಸುತ್ತಿರುವೆ! ಬೆಳಗುತ್ತಿರುವ ಸಂಪತ್ತನ್ನು ತ್ಯಜಿಸಿ ನೀನು ನಾಯಿಯಂತೆಯೇ ತೋರುತ್ತಿರುವೆ! ಇಂದು ನಿನ್ನ ತಾಯಿಯು ಬಂಜೆಯಾದಳು ಮತ್ತು ನಿನ್ನ ಪತ್ನಿಯಾದ ಕೌಸಲ್ಯೆ ನಾನು ಪತಿಹೀನಳಾದೆನು! ಧರ್ಮ-ಕಾಮನೆಗಳನ್ನು ಸಾಧಿಸಿಕೊಳ್ಳಲು ಈ ಕ್ಷತ್ರಿಯರು ನಿನ್ನನ್ನೇ ಉಪಾಸನೆಮಾಡುತ್ತಿದ್ದಾರೆ. ಆಕಾಂಕ್ಷೆಗಳನ್ನು ಹೊಂದಿರುವ ಈ ದೀನರು ಫಲಕ್ಕಾಗಿ ನಿನ್ನ ಸೇವೆಯಲ್ಲಿ ತತ್ಪರರಾಗಿದ್ದಾರೆ. ಇವರನ್ನು ವಿಫಲರನ್ನಾಗಿಸಿ ನೀನು ಯಾವ ಲೋಕಗಳಿಗೆ ಹೋಗುತ್ತೀಯೆ? ರಾಜನ್! ಪರತಂತ್ರರಾದ ಮನುಷ್ಯರಿಗೆ ಮೋಕ್ಷವು ನಿಶ್ಚಯವಾದುದಲ್ಲ. ಧರ್ಮಪತ್ನಿಯನ್ನು ಪರಿತ್ಯಜಿಸಿ ಜೀವಿಸಲು ಬಯಸುವ ನಿನಗೆ ಈ ಪಾಪಕರ್ಮದಿಂದ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವು ದೊರಕಲಾರದು. ಹಾರ-ಗಂಧ-ಅಲಂಕಾರ ಮತ್ತು ವಿವಿಧ ವಸ್ತ್ರಗಳನ್ನು ತ್ಯಜಿಸಿ ಕರ್ತವ್ಯ ಹೀನನಾಗಿ ನೀನು ಏಕೆ ಪರಿವ್ರಾಜಕನಾಗಲು ಬಯಸುವೆ? ಸರ್ವಭೂತಗಳಿಗೂ ಸರೋವರದಂತಿದ್ದು ನೀನು ಮಹಾ ಪಾವನನಾಗಿದ್ದೆ. ವಿಶಾಲ ವೃಕ್ಷದಂತೆ ನೀನು ಎಲ್ಲರಿಗೂ ನೆರಳನ್ನಿತ್ತು ಸೇವೆಸಲ್ಲಿಸುತ್ತಿದ್ದೆ. ಎಲ್ಲವನ್ನೂ ತೊರೆದು ಬಿದ್ದಿರುವ ಆನೆಯನ್ನು ಮಾಂಸಾಶಿ ಪ್ರಾಣಿಗಳೂ ಕ್ರಿಮಿಗಳೂ ಜೀವಸಹಿತ ತಿಂದುಹಾಕಿಬಿಡುತ್ತವೆ. ಇನ್ನು ನಿಷ್ಕರ್ಮಿಯಾಗುವ ನಿನ್ನ ಕುರಿತೇನು ಹೇಳುವುದಿದೆ? ನಿನ್ನ ಈ ಕಮಂಡಲುವನ್ನು ಯಾರಾದರೂ ಅಪಹರಿಸಿಕೊಳ್ಳಬಹುದು. ನಿನ್ನ ಈ ತ್ರಿದಂಡವನ್ನೇ ಅಪಹರಿಸಿಕೊಂಡು ಹೋಗಬಹುದು. ನೀನು ಉಟ್ಟಿರುವ ವಸ್ತ್ರವನ್ನೂ ಕಿತ್ತುಕೊಳ್ಳಬಹುದು. ಆಗ ನಿನ್ನ ಮನೋಸ್ಥಿತಿಯು ಹೇಗಿರುತ್ತದೆ? ಎಲ್ಲವನ್ನೂ ತ್ಯಾಗಮಾಡಿ ಒಂದು ಮುಷ್ಟಿ ಹುರಿಧಾನ್ಯವನ್ನು ಅವಲಂಬಿಸಲು ಹೊರಟ ನಿನಗೆ ಎಲ್ಲವೂ ಸಮವೆಂದು ಹೇಗೆ ತೋರುತ್ತಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ! ಮುಷ್ಟಿ ಹುರಿಧಾನ್ಯವನ್ನು ಕೇಳುವುದರಿಂದ ನಿನ್ನ ಈ ಎಲ್ಲವನ್ನೂ ಸಮವೆಂದು ಕಾಣುವೆ ಎನ್ನುವ ಪ್ರತಿಜ್ಞೆಯು ಭಂಗವಾಗುವುದಿಲ್ಲವೇ?[1] ಆಗ ನಾನು ನಿನಗೆ ಎನಾಗುತ್ತೇನೆ? ಇಂದು ನನ್ನ ಮೇಲೆ ನಿನಗಿರುವ ಅನುಗ್ರಹಕ್ಕೆ ಏನಾಗುತ್ತದೆ? ರಾಜನ್! ನಿನ್ನ ಅನುಗ್ರಹವಿದ್ದರೆ ಭೂಮಿಯನ್ನು ಆಳು! ಅರಮನೆ, ಉತ್ತಮ ಹಾಸಿಗೆ, ವಾಹನ, ವಸ್ತ್ರಾ-ಭರಣಗಳನ್ನು ಭೋಗಿಸು! ಶ್ರೀಯಿಂದ ನಿರಾಶೆಗೊಂಡ, ನಿರ್ಧನ, ಬಂಧು-ಮಿತ್ರರಿಲ್ಲದ ಮತ್ತು ಅಕಿಂಚನರಾದ ಸಂನ್ಯಾಸಿಗಳು ಸುಖಕ್ಕಾಗಿಯೇ ತಮಗೆ ಬೇಕಾದ ಸಲಕರಣೆಗಳನ್ನು (ಕಮಂಡಲು-ಕೃಷ್ಣಾಜಿನ ಇತ್ಯಾದಿ) ಸಂಗಹಿಸಿಟ್ಟುಕೊಂಡಿರುತ್ತಾರೆ.[2] ಯಾವಾಗಲೂ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ನಿರತರಾದವರ ಮತ್ತು ಯಾವಾಗಲೂ ದಾನಮಾಡುವವರ ನಡುವಿನ ಅಂತರವನ್ನು ತಿಳಿದುಕೋ! ಇವರಿಬ್ಬರಲ್ಲಿ ಯಾರು ಶ್ರೇಷ್ಠರೆನಿಸಿಕೊಳ್ಳುತ್ತಾರೆ? ಸಾಧುಗಳಲ್ಲಿ ಮತ್ತು ದಂಭವನ್ನು ತೊರೆದವರಲ್ಲಿ ಯಾವಾಗಲೂ ಬೇಡುವವರಿಗೆ ದಾನಮಾಡಿದ ದಕ್ಷಿಣೆಯು ದಾವಾಗ್ನಿಯಲ್ಲಿ ಹೋಮಮಾಡಿದಂತೆ ವ್ಯರ್ಥವಾಗುತ್ತದೆ. ರಾಜನ್! ತನ್ನಲ್ಲಿ ಹಾಕಿದ ಕಟ್ಟಿಗೆಯನ್ನು ಸಂಪೂರ್ಣವಾಗಿ ಸುಡದೇ ಅಗ್ನಿಯು ಹೇಗೆ ಪ್ರಶಮನಗೊಳ್ಳುವುದಿಲ್ಲವೋ ಹಾಗೆ ಸದಾ ಬೇಡುವ ದ್ವಿಜನು ಬೇಡುತ್ತಿರುವುದು ದೊರೆಯದೇ ಶಾಂತನಾಗುವುದಿಲ್ಲ. ಸತ್ಪುರುಷರು, ವೇದಗಳು ಮತ್ತು ಅನ್ನಗಳನ್ನು ಅವಲಂಬಿಸಿಯೇ ಈ ಲೋಕದಲ್ಲಿ ಪ್ರಕೃತಿಯು ಸ್ಥಿರವಾಗಿ ನೆಲೆಸಿದೆ. ದಾನಮಾಡುವ ದಾನಿಗಳು ಇರದಿದ್ದರೆ ಮೋಕ್ಷಗಳನ್ನು ಬಯಸುವ ಮುನಿಗಳು ಎಲ್ಲಿರುತ್ತಿದ್ದರು? ಈ ಲೋಕದಲ್ಲಿ ಅನ್ನವನ್ನು ದಾನಮಾಡುವುದರಿಂದ ಗೃಹಸ್ಥನೆನಿಸಿಕೊಳ್ಳುತ್ತಾನೆ. ಅದೇ ಅನ್ನವನ್ನು ಬೇಡುವವರು ಸಂನ್ಯಾಸಿಗಳೆನಿಸಿಕೊಳ್ಳುತ್ತಾರೆ. ಅನ್ನದಿಂದಲೇ ಪ್ರಾಣವು ಬೆಳೆಯುತ್ತದೆ. ಆದುದರಿಂದ ಅನ್ನವನ್ನು ದಾನಮಾಡುವವನು ಪ್ರಾಣವನ್ನು ದಾನಮಾಡುವವನಾಗುತ್ತಾನೆ. ಸಂನ್ಯಾಸಿಗಳು ಗೃಹಸ್ಥಾಶ್ರಮದಿಂದ ನಿರ್ವೃತ್ತರಾದರೂ ಗೃಹಸ್ಥರನ್ನೇ ಆಶ್ರಯಿಸಿರುತ್ತಾರೆ. ಆದುದರಿಂದ ಗೃಹಸ್ಥಾಶ್ರಮವೇ ಸಂನ್ಯಾಸದ ಉಗಮ, ನೆಲೆ ಮತ್ತು ಆಶ್ರಯವಾಗಿದೆ. ತ್ಯಾಗದಿಂದ, ವಿದ್ಯೆಯಿಂದ, ಮುಂಡನಮಾಡಿಕೊಂಡಿರುವುದರಿಂದ ಮತ್ತು ಬೇಡುವುದರಿಂದ ಭಿಕ್ಷುವೆನಿಸಿಕೊಳ್ಳುವುದಿಲ್ಲ. ಸರಳನಾಗಿದ್ದು ಯಾರು ಅರ್ಥವನ್ನು ತ್ಯಜಿಸುತ್ತಾನೋ ಅವನೇ ಸುಖೀ ಭಿಕ್ಷುಕನೆಂದು ತಿಳಿ. ಮಹೀಪತೇ! ಆಸಕ್ತಿಯಿಲ್ಲದಿದ್ದರೂ ಆಸಕ್ತನಂತೆ ಲೋಕವ್ಯವಹಾರಗಳನ್ನು ನಡೆಸಿಕೊಂಡು ಹೋಗುತ್ತಾ ನಿಸ್ಸಂಗನಾಗಿ ಬಂಧನಗಳಿಂದ ಮುಕ್ತನಾಗಿ, ಮಿತ್ರ-ಶತ್ರುಗಳಲ್ಲಿ ಸಮಭಾವದಿಂದ ಇರುವವನು ರಾಜನಾಗಿದ್ದರೂ ಮುಕ್ತನಾದಂತೆ. ಮುಂಡನಮಾಡಿಕೊಂಡು ಕಾಷಾಯವಸ್ತ್ರಗಳನ್ನು ಧರಿಸಿ ದಾನಗಳಿಗೆ ಅಲೆದಾಡುವವರು ಅನೇಕವಿಧದ ಪಾಶಗಳಿಂದ ಬದ್ಧರಾಗಿ ವೃಥಾ ಕೂಡಿಸಿಕೊಳ್ಳುವ ಆಸೆಯಿಂದಿರುತ್ತಾರೆ. ಯಾರು ಮೂರು ವೇದಗಳನ್ನೂ, ಅವುಗಳು ಹೇಳಿರುವ ಕರ್ಮಗಳನ್ನೂ, ಪುತ್ರರನ್ನೂ ಪರಿತ್ಯಜಿಸಿ ತ್ರಿದಂಡವನ್ನು ಹಿಡಿದು ಕಾಷಾಯವಸ್ತ್ರವನ್ನು ಪರಿಗ್ರಹಿಸುತ್ತಾರೋ ಅವರು ಬುದ್ಧಿಹೀನರೇ ಸರಿ! ಹೃದಯದಲ್ಲಿ ಆಸೆಗಳನ್ನಿಟ್ಟುಕೊಂಡು ಕಾಷಾಯವನ್ನು ಧರಿಸುವುದು ಒಂದು ಸೋಗು ಎಂದೇ ನೀನು ತಿಳಿ. ಧರ್ಮದ ಸೋಗನ್ನು ಹಾಕಿಕೊಂಡು ತಿರುಗಾಡುವ ಮುಂಡರಿಗೆ ಸಂನ್ಯಾಸಿಗಳೆನ್ನುವುದು ವ್ಯರ್ಥವೇ ಸರಿ ಎಂದು ನನಗನ್ನಿಸುತ್ತದೆ. ಮಹಾರಾಜ! ನೀನು ಜಿತೇಂದ್ರಿಯನಾಗಿದ್ದುಕೊಂಡು ಕಾಷಾಯವಸ್ತ್ರಧಾರಿಗಳನ್ನು, ಕೃಷ್ಣಾಜಿನ-ವಲ್ಕಲಗಳನ್ನು ಉಟ್ಟವರನ್ನೂ, ದಿಗಂಬರರಾದ ಅವಧೂತರನ್ನೂ, ಮುಂಡನ ಮಾಡಿಸಿಕೊಂಡವರನ್ನೂ, ಜಟಾಧಾರಿಗಳನ್ನೂ, ಸಾಧುಗಳನ್ನೂ ಪಾಲಿಸುತ್ತಾ ಲೋಕಗಳನ್ನು ಗೆಲ್ಲು! ಗುರುಗಳ ಅಗ್ನಿಕಾರ್ಯ-ದಾನಗಳಿಗೆ, ಮತ್ತು ಪಶು-ದಕ್ಷಿಣೆಗಳಿಂದ ಕೂಡಿದ ಕ್ರತುಗಳಿಗೆ ದ್ರವ್ಯಸಂಗ್ರಹಗಳನ್ನು ಮಾಡುವವರಿಗಿಂತಲೂ ಹೆಚ್ಚು ಧರ್ಮಪರಾಯಣರಾದವರು ಬೇರೆ ಯಾರಿದ್ದಾರೆ?”
***
[1] ನೀನು ಸಂನ್ಯಾಸಿಯಾದರೂ ನಿನಗೊಂದು ವಸ್ತುವಿನ ಅಗತ್ಯವಿದೆ ಎಂದಾಯಿತು. ಹುರಿದ ಹಿಟ್ಟಿಗೂ ರಾಜ್ಯಕ್ಕೂ ಯಾವ ವ್ಯತ್ಯಾಸವನ್ನೂ ನೀನು ಕಾಣದ ನಂತರ ರಾಜ್ಯವನ್ನಾದರೂ ನೀನು ಏಕೆ ತ್ಯಜಿಸುವೆ? ಕಲ್ಲಿಗೂ ಚಿನ್ನಕ್ಕೂ ವ್ಯತ್ಯಾಸವಿಲ್ಲವೆಂದು ತಿಳಿದ ಮಾತ್ರಕ್ಕೆ ಇರುವ ಚಿನ್ನವೆಲ್ಲವನ್ನೂ ಹೊರಗೆ ಎಸೆಯುವುದಕ್ಕೆ ಅರ್ಥವಿಲ್ಲ. ಜೀವನಕ್ಕಾಗಿ ಹುರಿದ ಹಿಟ್ಟಾದರೂ ಬೇಕೇ ಬೇಕು. ಒಂದು ಬೇಕಾದರೆ ಇನ್ನೊಂದು ಏಕೆ ಬೇಡ? ಯಾವುದೂ ಬೇಡ ಎಂದು ಹೇಳಿಕೊಂಡು ಮನುಷ್ಯನು ಜೀವಿಸಿರಲಾರನು. ಹುರಿದ ಹಿಟ್ಟನ್ನು ಬಿಡಲಾರದಂತೆ ರಾಜ್ಯವನ್ನೂ ಬಿಡುವ ಅಗತ್ಯವಿಲ್ಲ. (ಭಾರತ ದರ್ಶನ)
[2] ನೀಲಕಂಠರು ಈ ಶ್ಲೋಕಕ್ಕೆ ಹೀಗೆ ಅರ್ಥೈಸಿದ್ದಾರೆ: ಸೌಖಿಕೈಃ ಪರಮ ಸುಖಾರ್ಥಿಭಿಃ ಸಂನ್ಯಾಸಿಭಿಃ ಸಂಭೃತಾನರ್ಥಾನ್ ಕುಂಡಿಕಾದೀನ್ ವೀಕ್ಷ್ಯ ಯಃ ಸ್ವಯಮಪಿ ತಥಾ ಕರೋತಿ ಕಿಂ ನು ತತ್ ರಾಜ್ಯಾದಿಕಂ ತ್ಯಜತ್ಯಪಿ ನೈವ ತ್ಯಜತಿ ಕಿಂ ತು ಉಚಿತಂ ಪರಿಗ್ರಹಂ ತ್ಯಕ್ತ್ವಾ ದೈವೋಪಹತತ್ತ್ವಾದನುಚಿತಂ ಪರಿಗ್ರಹಾಂತರಮೇವ ಕರೋತಿ. ಇತ್ಯಸಂಗತ್ಯಂ ಅಸ್ಯ ದುರ್ಲಭಮಿತ್ಯರ್ಥಃ – ಅರ್ಥಾತ್ – ಪರಮಸುಖಾಭಿಲಾಷಿಗಳಾದ ಸಂನ್ಯಾಸಿಗಳಿಂದ ಸಂಪಾದಿಸಲ್ಪಟ್ಟ ಕಮಂಡಲುವೇ ಮೊದಲಾದವುಗಳನ್ನು ನೋಡಿ ಯಾವನು ತಾನೂ ಹಾಗೆಯೇ ಮಾಡಲು ಹೋಗುತ್ತಾನೋ ಅವನು ರಾಜ್ಯಾದಿಗಳನ್ನು ಪರಿತ್ಯಾಗಮಾಡಿದರೂ ರಾಜೋಚಿತವಾದ ಪರಿಗ್ರಹಕಾರ್ಯವನ್ನು ತ್ಯಜಿಸಿ ದೈವೋಪಹತನಾದುದರಿಂದ ಅನುಚಿತವಾದ ಬೇರೆ ರೀತಿಯ ಪರಿಗ್ರಹವನ್ನೇ ಮಾಡುತ್ತಾನೆ. ರಾಜನಿಗೆ ಯುಕ್ತವಾದ ಕರಾದಿ ಪರಿಗ್ರಹವನ್ನು ಬಿಟ್ಟಂತಾಯಿತು. ಅಹಿತವಾದ ಧಾನಾಮುಷ್ಟಿಯನ್ನು ಪರಿಗ್ರಹಿಸಿದಂತಾಯಿತು. ಆದುದರಿಂದ ಸಂನ್ಯಾಸಿಯಾದರೂ ಸಂಗವು ತಪ್ಪಲೇ ಇಲ್ಲ.
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ