ಇಂದ್ರ ಮತ್ತು ತಾಪಸಿಗಳ ಸಂವಾದ: ಗೃಹಸ್ಥಾಶ್ರಮದ ಪ್ರತಿಪಾದನೆ
ಯುದ್ಧಾನಂತರ ಯುಧಿಷ್ಠಿರನು ಅಡವಿಗೆ ತೆರಳಲು ಸಿದ್ಧನಾದಾಗ ಅರ್ಜುನನು ಪಕ್ಷಿರೂಪಧಾರೀ ಇಂದ್ರ ಮತ್ತು ಋಷಿಬಾಲಕರ ಸಂವಾದವನ್ನು ಉಲ್ಲೇಖಿಸುತ್ತಾ ಗೃಹಸ್ಥ ಧರ್ಮ ಪಾಲನೆಯ ಕುರಿತು ಹೇಳಿದ ಈ ಕಥೆಯು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 11ರಲ್ಲಿ ಋಷಿ-ಶಕುನಿ ಸಂವಾದ ಕಥನ ಎಂದು ಬರುತ್ತದೆ.
ಹಿಂದೊಮ್ಮೆ ಉತ್ತಮ ಕುಲಗಳಲ್ಲಿ ಹುಟ್ಟಿದ್ದ, ಇನ್ನೂ ಗಡ್ಡ-ಮೀಸೆಗಳು ಹುಟ್ಟಿರದ ಮಂದಬುದ್ಧಿಯ ದ್ವಿಜರು ಮನೆಗಳನ್ನು ತೊರೆದು ವನದ ಕಡೆ ನಡೆದರು. ಮನೆ, ಮತ್ತು ತಂದೆ-ತಾಯಂದಿರನ್ನು ತೊರೆದು ಇದೇ ಧರ್ಮವೆಂದು ತಿಳಿದು ಅವರು ಬ್ರಹ್ಮಚರ್ಯದಲ್ಲಿ ನಿರತರಾಗಿದ್ದರು. ಇಂದ್ರನು ಅವರ ಮೇಲೆ ಕೃಪೆದೋರಿದನು. ಅವನು ಬಂಗಾರದ ಪಕ್ಷಿಯಾಗಿ ಅವರಿಗೆ ಹೇಳಿದನು:
“ವಿಘಸ[1]ವನ್ನು ತಿನ್ನುವ ಮನುಷ್ಯರ ಜೀವನವನ್ನು ನಡೆಸುವುದು ತುಂಬಾ ಕಷ್ಟವಾದುದು. ಆದರೆ ಆವರ ಕರ್ಮಗಳು ಪುಣ್ಯಕರವೂ ಪ್ರಶಸ್ತ ಜೀವನವೂ ಅಲ್ಲವೇ? ಧರ್ಮಪರಾಯಣರಾದ ಅವರು ಸಿದ್ಧಿಗಳನ್ನು ಪಡೆದು ಶ್ರೇಷ್ಠ ಗತಿಯನ್ನು ಹೊಂದುತ್ತಾರೆ.”
ಋಷಿಗಳು ಹೇಳಿದರು:
“ಅಯ್ಯೋ! ಈ ಪಕ್ಷಿಯು ವಿಘಸವನ್ನು ಸೇವಿಸುವವರನ್ನು ಪ್ರಶಂಸಿಸುತ್ತಿದೆ! ನಾವೂ ವಿಘಸವನ್ನು ಸೇವಿಸುವರಾಗಬೇಕೆಂದು ಉಪದೇಶಿಸುತ್ತಿದೆ!”
ಪಕ್ಷಿಯು ಹೇಳಿತು:
“ಕೆಸರಿನಿಂದಲೂ ಧೂಳಿನಿಂದಲೂ ಮುಚ್ಚಿರುವ ಪಕ್ಷಿಗಳ ಎಂಜಲನ್ನು ತಿನ್ನುವ ನಿಮ್ಮನ್ನು ನಾನು ಪ್ರಶಂಸಿಸುತ್ತಿಲ್ಲ! ಮೂಢರೇ! ವಿಘಸಾಶಿಗಳು ಬೇರೆಯೇ ಇದ್ದಾರೆ. ಅವರನ್ನು ನಾನು ಪ್ರಶಂಸಿಸುತ್ತಿದ್ದೇನೆ!”
ಋಷಿಗಳು ಹೇಳಿದರು:
“ಇದೇ ಪರಮ ಶ್ರೇಯಸ್ಕರವೆಂದು ನಾವು ಈ ಜೀವನವನ್ನು ನಡೆಸುತ್ತಿರುವೆವು. ಪಕ್ಷಿಯೇ! ಇದಕ್ಕಿಂತಲೂ ಶ್ರೇಯಸ್ಕರವಾದುದಿದ್ದರೆ ಹೇಳು. ನಿನ್ನ ಮಾತಿನ ಮೇಲೆ ನಮಗೆ ಶ್ರದ್ಧೆಯಿದೆ!”
ಪಕ್ಷಿಯು ಹೇಳಿತು:
“ನನ್ನ ಮಾತನ್ನು ನೀವು ಶಂಕಿಸದಿದ್ದರೆ ನನ್ನಲ್ಲಿ ನಾನೇ ಯೋಚಿಸಿ ವಿಭಜಿಸಿ ನಿಮಗೆ ಒಳ್ಳೆಯದಾಗುವಂತಹ ಹಿತವಚನವನ್ನು ಹೇಳುತ್ತೇನೆ. ಕೇಳಿ!”
ಋಷಿಗಳು ಹೇಳಿದರು:
“ಅಯ್ಯಾ! ನಾವು ನಿನ್ನ ಮಾತನ್ನು ಕೇಳುತ್ತೇವೆ! ನಿನಗೆ ಸಿದ್ಧಿಸಾಧಕ ಮಾರ್ಗಗಳು ತಿಳಿದಿವೆ. ಧರ್ಮಾತ್ಮನ್! ನಮಗೆ ಉಪದೇಶಿಸು. ಅದರಂತೆಯೇ ನಾವು ನಡೆದುಕೊಳ್ಳಲು ಬಯಸುತ್ತೇವೆ.”
ಪಕ್ಷಿಯು ಹೇಳಿತು:
“ನಾಲ್ಕು ಕಾಲುಗಳಿರುವ ಪ್ರಾಣಿಗಳಲ್ಲಿ ಗೋವು ಶ್ರೇಷ್ಠವಾದುದು. ಲೋಹಗಳಲ್ಲಿ ಚಿನ್ನವು ಶ್ರೇಷ್ಠವಾದುದು. ಶಬ್ಧಗಳಲ್ಲಿ ಮಂತ್ರವು ಶ್ರೇಷ್ಠವಾದುದು. ಮತ್ತು ಎರಡು ಕಾಲಿರುವ ಮನುಷ್ಯರಲ್ಲಿ ಬ್ರಾಹ್ಮಣರು ಶ್ರೇಷ್ಠ. ಬ್ರಾಹ್ಮಣನಿಗೆ ಮಂತ್ರಪೂರ್ವಕವಾದ ಜಾತಕರ್ಮಾದಿ ಸಂಸ್ಕಾರಗಳಿವೆ. ಅವನು ಜೀವಿಸಿರುವಾಗ ಯಥಾಕಾಲದಲ್ಲಿ ಮತ್ತು ನಿಧನದ ನಂತರ ಶ್ಮಶಾನದಲ್ಲಿಯೂ ವಿವಿಧ ಸಂಸ್ಕಾರಗಳಿವೆ. ಬ್ರಾಹ್ಮಣರಿಗೆ ವೈದಿಕ ಕರ್ಮಗಳೇ ಸ್ವರ್ಗಕ್ಕೆ ಉತ್ತಮ ಮಾರ್ಗವು. ಅವನ ಸರ್ವ ಕರ್ಮಗಳೂ ಮಂತ್ರಸಿದ್ಧ ಎಂದು ಹೇಳುತ್ತಾರೆ. ವೇದಗಳು ಇವನ್ನು ದೃಢಪಡಿಸಿವೆ. ಇವುಗಳಿಂದಲೇ ಸಿದ್ಧಿಯೂ ದೊರೆಯುತ್ತದೆ. ಮಾಸ, ಪಕ್ಷ, ಋತು, ಸೂರ್ಯ, ಚಂದ್ರ, ನಕ್ಷತ್ರಗಳು ಸೂಚಿಸುವ ಯಜ್ಞಗಳನ್ನು ಮಾಡಲು ಎಲ್ಲ ಪ್ರಾಣಿಗಳೂ ಇಚ್ಛಿಸುತ್ತವೆ. ಆದುದರಿಂದ ಕರ್ಮಸಂಗಿಗಳ ಗೃಹಸ್ಥಾಶ್ರಮವೇ ಸಿದ್ಧಿಕ್ಷೇತ್ರವೆಂದೂ ಮಹಾ ಪುಣ್ಯಮಯವೆಂದೂ ಹೇಳುತ್ತಾರೆ. ಕರ್ಮವನ್ನು ನಿಂದಿಸಿ ಕೆಟ್ಟದಾರಿಯಲ್ಲಿ ಹೋಗುವ ಮೂಢ ಮನುಷ್ಯರು ಅರ್ಥಹೀನರಾಗುತ್ತಾರೆ ಎಂದು ತಿಳಿಯಬೇಕು. ಮೂಢರು ಶಾಶ್ವತರಾದ ದೇವವಂಶಗಳನ್ನು, ಪಿತೃವಂಶಗಳನ್ನು ಮತ್ತು ಬ್ರಹ್ಮವಂಶಗಳನ್ನು ತೃಪ್ತಿಪಡೆಸುವುದನ್ನು ಬಿಟ್ಟು ತಮ್ಮ ವರ್ತನೆಗಳಿಂದ ಶೃತಿಗಳಿಗೆ ವಿರುದ್ಧ ಮಾರ್ಗದಲ್ಲಿ ಹೋಗುತ್ತಾರೆ. ಋಷಿಗಳು ಹಾಕಿಕೊಟ್ಟಿರುವ ಇದೇ ತಪೋಯುಕ್ತವೆನಿಸುತ್ತದೆ. ಅದರಲ್ಲಿಯೇ ನಿರತನಾಗಿರುವವನಿಗೆ ತಪಸ್ವಿ ಮತ್ತು ತಪಸ್ಸು ಎಂದು ಹೇಳುತ್ತಾರೆ. ಶಾಶ್ವತ ದೇವವಂಶಗಳನ್ನೂ, ಪಿತೃವಂಶಗಳನ್ನೂ ಮತ್ತು ದೇವವಂಶಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ತೃಪ್ತಿಪಡಿಸುವುದು ದುಷ್ಕರವೆಂದು ಗುರುಗಳು ಹೇಳುತ್ತಾರೆ[2]. ಇಂತಹ ದುಷ್ಕರ ಕರ್ಮಗಳನ್ನು ಮಾಡಿಯೇ ದೇವತೆಗಳು ಶ್ರೇಷ್ಠ ವೈಭವವನ್ನು ಪಡೆದಿರುತ್ತಾರೆ. ಆದುದರಿಂದ ದುಷ್ಕರವಾದರೂ ಗಾರ್ಹಸ್ಥ್ಯಧರ್ಮವು ಹೆಚ್ಚಿನದೆಂದು ನಾನು ಹೇಳುತ್ತಿದ್ದೇನೆ. ಇಂತಹ ಗೃಹಸ್ಥಾಶ್ರಮದ ತಪಸ್ಸೇ ಶ್ರೇಷ್ಠವಾದುದು ಮತ್ತು ಪ್ರಜೆಗಳ ಹಿತಸಾಧನೆಗೆ ಮೂಲಕಾರಣ ಎನ್ನುವುದರಲ್ಲಿ ಸಂಶಯವಿಲ್ಲ. ಎಲ್ಲ ಕುಟುಂಬವಿಧಿಗಳೂ ಈ ಗೃಹಸ್ಥಾಶ್ರಮದಲ್ಲಿಯೇ ಪ್ರತಿಷ್ಠಿತವಾಗಿವೆ. ಶೀತೋಷ್ಣ-ಸುಖದುಃಖಗಳೆಂಬ ದ್ವಂದ್ವಗಳಿಗೆ ಅತೀತರಾದ ಮತ್ತು ಮತ್ಸರ ರಹಿತರಾದ ವಿಪ್ರರು ಗೃಹಸ್ಥಾಶ್ರಮವನ್ನೇ ತಪಸ್ಸೆಂದು ಪರಿಗಣಿಸುತ್ತಾರೆ. ಆದುದರಿಂದ ಈ ಮಧ್ಯಮವ್ರತವನ್ನೇ ತಪಸ್ಸೆಂದು ಲೋಕಗಳು ಹೇಳುತ್ತವೆ. ವಿಘಸಾಶಿಗಳು ಸಾಮಾನ್ಯರು ಜಯಿಸಲು ಅಸಾಧ್ಯವಾದ ಪುಣ್ಯಲೋಕಗಳಿಗೆ ಹೋಗುತ್ತಾರೆ. ಸಾಯಂಕಾಲ ಮತ್ತು ಪ್ರಾತಃಕಾಲಗಳಲ್ಲಿ ತಮ್ಮ ಸಂಸಾರದಲ್ಲಿ ಯಥಾವಿಧಿಯಾಗಿ ಆಹಾರವನ್ನು ವಿಭಾಗಿಸಿ, ದೇವಪಿತೃಗಳಿಗೆ ನಿವೇದನೆ ಮಾಡಿ, ಅತಿಥಿಗಳಿಗೂ ಮತ್ತು ಬಂಧುವರ್ಗದವರಿಗೂ ಭೋಜನಮಾಡಿಸಿ ಉಳಿದುದನ್ನು ಯಾರು ತಿನ್ನುತ್ತಾರೆಯೋ ಅವರನ್ನೇ ವಿಘಸಾಶಿಗಳೆಂದು ಕರೆಯುತ್ತಾರೆ. ಆದುದರಿಂದ ಸುವ್ರತ ಸತ್ಯವಾದೀ ವಿಘಸಾಶಿಗಳು ಸ್ವಧರ್ಮದಲ್ಲಿಯೇ ನಿರತರಾಗಿದ್ದುಕೊಂಡು ಯಾವುದೇ ಸಂಶಗಳಿಲ್ಲದೇ, ಲೋಕದ ಗುರುಗಳಾಗಿ ವಿರಾಜಿಸುತ್ತಾರೆ. ಮಾತ್ಸರ್ಯವಿಲ್ಲದೇ ಇಂತಹ ದುಷ್ಕರ ಗ್ರಹಸ್ಥಾಶ್ರಮಧರ್ಮವನ್ನು ಅನುಸರಿಸಿ ಈ ವಿಘಸಾಶಿಗಳು ತ್ರಿದಿವವನ್ನು ಸೇರಿ ಶಕ್ರನ ಸ್ವರ್ಗಲೋಕದಲ್ಲಿ ಶಾಶ್ವತಕಾಲಗಳ ಪರ್ಯಂತ ವಾಸಮಾಡುತ್ತಾರೆ.”
ಆ ಪಕ್ಷಿಯ ಧರ್ಮಾರ್ಥಗಳಿಂದ ಕೂಡಿದ ಮಾತುಗಳನ್ನು ಕೇಳಿ ಆ ಬ್ರಾಹ್ಮಣರು ನಾಸ್ತಿಕಗತಿಯನ್ನು ಬಿಟ್ಟು ಗೃಹಸ್ಥಧರ್ಮವನ್ನು ಆಶ್ರಯಿಸಿದರು.
[1] ವಿಘಸ ಎಂದರೆ ಯಜ್ಞಶೇಷ ಅಥವಾ ಭೋಜನ ಶೇಷ. ಯಜ್ಞಮಾಡಿ ಹೋಮಶೇಷವನ್ನು ಪ್ರಸಾದರೂಪವಾಗಿ ಉಣ್ಣುವವರು ಮತ್ತು ಅತಿಥಿ-ಅಭ್ಯಾಗತರನ್ನು ಸತ್ಕರಿಸಿ ಭೋಜನ ನೀಡಿ ನಂತರ ಉಳಿದ ಅನ್ನವನ್ನು ಭಕ್ಷಿಸುವವರು ವಿಘಸಾಶಿಗಳು. ವಿಘಸವು ಅಮೃತಸಮಾನ – ಅಮೃತಂ ವಿಘಸೋ ಯಜ್ಞ ಶೇಷಭೋಜನ ಶೇಷಯೋಃ|| (ಅಮರ ಕೋಶ)
[2] ದಿನದ ಕಾಲವನ್ನು ವಿಭಜಿಸಿ ಯಜ್ಞಗಳ ಮೂಲಕ ದೇವತೆಗಳನ್ನು, ಸ್ವಾಧ್ಯಾಯ-ಬ್ರಹ್ಮಯಜ್ಞಾದಿಗಳ ಮೂಲಕ ಬ್ರಹ್ಮವಂಶೀಯ ಋಷಿಗಳನ್ನೂ, ಮತ್ತು ಶ್ರಾದ್ಧ-ತರ್ಪಣಾದಿಗಳ ಮೂಲಕ ಪಿತೃಗಳನ್ನೂ ತೃಪ್ತಿಪಡಿಸುವುದು ಮತ್ತು ಗುರುಶುಶ್ರೂಷೆಮಾಡುವುದು ದುಷ್ಕರವೆಂದು ವಿಧ್ವಾಂಸರು ಹೇಳುತ್ತಾರೆ.
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ