ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೨೮೦
ಕರ್ಮಫಲದ ಅನಿವಾರ್ಯತೆ ಮತ್ತು ಪುಣ್ಯಕರ್ಮದಿಂದ ಲಾಭ (1-23).
12280001 ಪರಾಶರ ಉವಾಚ|
12280001a ಮನೋರಥರಥಂ ಪ್ರಾಪ್ಯ ಇಂದ್ರಿಯಾರ್ಥಹಯಂ ನರಃ|
12280001c ರಶ್ಮಿಭಿರ್ಜ್ಞಾನಸಂಭೂತೈರ್ಯೋ ಗಚ್ಚತಿ ಸ ಬುದ್ಧಿಮಾನ್||
ಪರಾಶರನು ಹೇಳಿದನು: “ಮನೋರಥವೆಂದ ರಥವನ್ನು ಪಡೆದು ಇಂದ್ರಿಯಾರ್ಥಗಳೆಂಬ ಕುದುರೆಗಳನ್ನು ಕಟ್ಟಿ ಜ್ಞಾನಸಂಭೂತ ಲಗಾಮುಗಳಿಂದ ಕುದುರೆಗಳನ್ನು ನಿಯಂತ್ರಿಸುತ್ತಾ ಸಾಗುವ ನರನು ಬುದ್ಧಿವಂತನು.
12280002a ಸೇವಾಶ್ರಿತೇನ ಮನಸಾ ವೃತ್ತಿಹೀನಸ್ಯ ಶಸ್ಯತೇ|
12280002c ದ್ವಿಜಾತಿಹಸ್ತಾನ್ನಿರ್ವೃತ್ತಾ ನ ತು ತುಲ್ಯಾತ್ಪರಸ್ಪರಮ್||
ವೃತ್ತಿಯಿಲ್ಲದವನು ಸೇವೆಮಾಡಿ ಜೀವನಮಾಡುವ ಮನಸ್ಸಿದ್ದರೆ ಅವನು ಸಮರ್ಥ ದ್ವಿಜರ ಸೇವೆಯನ್ನೇ ಮಾಡಬೇಕು. ತನ್ನಂತೆಯೇ ವೃತ್ತಿಹೀನರ ಸೇವೆಯನ್ನು ಮಾಡಬಾರದು.
12280003a ಆಯುರ್ನಸುಲಭಂ ಲಬ್ಧ್ವಾ ನಾವಕರ್ಷೇದ್ವಿಶಾಂ ಪತೇ|
12280003c ಉತ್ಕರ್ಷಾರ್ಥಂ ಪ್ರಯತತೇ ನರಃ ಪುಣ್ಯೇನ ಕರ್ಮಣಾ||
ವಿಶಾಂಪತೇ! ಸುಲಭವಲ್ಲದ ಆಯುಸ್ಸನ್ನು ಪಡೆದು ಮನುಷ್ಯನು ಅಧಃಪತನವನ್ನು ತಂದುಕೊಳ್ಳಬಾರದು. ಪುಣ್ಯಕರ್ಮಗಳ ಮೂಲಕ ಉತ್ಕರ್ಷೆಗೆ ಪ್ರಯತ್ನಿಸಬೇಕು.
12280004a ವರ್ಣೇಭ್ಯೋಽಪಿ ಪರಿಭ್ರಷ್ಟಃ ಸ ವೈ ಸಂಮಾನಮರ್ಹತಿ|
12280004c ನ ತು ಯಃ ಸತ್ಕ್ರಿಯಾಂ ಪ್ರಾಪ್ಯ ರಾಜಸಂ ಕರ್ಮ ಸೇವತೇ||
ವರ್ಣಗಳಿಂದ ಪರಿಭ್ರಷ್ಟನಾದವನು ಸನ್ಮಾನಕ್ಕೆ ಅರ್ಹನಲ್ಲ. ಹಾಗೆಯೇ ಸತ್ಕ್ರಿಯೆಗಳನ್ನು ಮಾಡಿ ನಂತರ ರಾಜಸ ಕರ್ಮಗಳನ್ನು ಮಾಡುವವನೂ ಸನ್ಮಾನಕ್ಕೆ ಅರ್ಹನಲ್ಲ.
12280005a ವರ್ಣೋತ್ಕರ್ಷಮವಾಪ್ನೋತಿ ನರಃ ಪುಣ್ಯೇನ ಕರ್ಮಣಾ|
12280005c ದುರ್ಲಭಂ ತಮಲಬ್ಧಾ ಹಿ ಹನ್ಯಾತ್ಪಾಪೇನ ಕರ್ಮಣಾ||
ಪುಣ್ಯಕರ್ಮಗಳನ್ನು ಮಾಡುವುದರಿಂದ ಮನುಷ್ಯನು ವರ್ಣೋತ್ಕರ್ಷ[1]ವನ್ನು ಹೊಂದುತ್ತಾನೆ. ಪಾಪಕರ್ಮಗಳಿಂದ ವರ್ಣೋತ್ಕರ್ಷವು ದೊರೆಯದೇ ತನ್ನನ್ನು ತಾನೇ ಹಾಳುಮಾಡಿಕೊಳ್ಳುತ್ತಾನೆ.
12280006a ಅಜ್ಞಾನಾದ್ಧಿ ಕೃತಂ ಪಾಪಂ ತಪಸೈವಾಭಿನಿರ್ಣುದೇತ್|
12280006c ಪಾಪಂ ಹಿ ಕರ್ಮ ಫಲತಿ ಪಾಪಮೇವ ಸ್ವಯಂ ಕೃತಮ್||
12280006e ತಸ್ಮಾತ್ಪಾಪಂ ನ ಸೇವೇತ ಕರ್ಮ ದುಃಖಫಲೋದಯಮ್||
ತಿಳಿಯದೇ ಮಾಡಿದ ಪಾಪಗಳನ್ನು ತಪಸ್ಸಿನಿಂದ ಪರಿಹರಿಸಿಕೊಳ್ಳಬೇಕು. ತಾನು ಮಾಡಿದ ಪಾಪ ಕರ್ಮಗಳು ಪಾಪಫಲಗಳನ್ನೇ ಕೊಡುತ್ತವೆ. ಆದುದರಿಂದ ದುಃಖಫಲಗಳನ್ನು ನೀಡುವ ಪಾಪಕರ್ಮಗಳನ್ನು ಮಾಡಬಾರದು.
12280007a ಪಾಪಾನುಬಂಧಂ ಯತ್ಕರ್ಮ ಯದ್ಯಪಿ ಸ್ಯಾನ್ಮಹಾಫಲಮ್|
12280007c ನ ತತ್ಸೇವೇತ ಮೇಧಾವೀ ಶುಚಿಃ ಕುಸಲಿಲಂ ಯಥಾ||
ಮಹಾಫಲವನ್ನು ಕೊಡುವಂಥದ್ದಾಗಿದ್ದರೂ ಅದು ಪಾಪಕ್ಕೆ ಸಂಬಂಧಿಸಿದುದಾದರೆ ಮೇಧಾವಿಯು ಅಂಥಹ ಕರ್ಮಗಳಿಂದ ಶುಚಿಯಾದವನು ನಾಪಿತನಿಂದ ದೂರವಿರುವಂತೆ ದೂರವಿರಬೇಕು.
12280008a ಕಿಂಕಷ್ಟಮನುಪಶ್ಯಾಮಿ ಫಲಂ ಪಾಪಸ್ಯ ಕರ್ಮಣಃ|
12280008c ಪ್ರತ್ಯಾಪನ್ನಸ್ಯ ಹಿ ಸತೋ ನಾತ್ಮಾ ತಾವದ್ವಿರೋಚತೇ||
“ಪಾಪಕರ್ಮದ ಫಲವಾಗಿ ನಾನು ಯಾವ ಕಷ್ಟವನ್ನು ಕಾಣುತ್ತಿದ್ದೇನೆ?” ಎಂದು ಪಾಪಕರ್ಮಗಳಲ್ಲಿಯೇ ಪ್ರವೃತ್ತನಾದವನಿಗೆ ಆತ್ಮಚಿಂತನೆಯು ರುಚಿಸುವುದಿಲ್ಲ.
12280009a ಪ್ರತ್ಯಾಪತ್ತಿಶ್ಚ ಯಸ್ಯೇಹ ಬಾಲಿಶಸ್ಯ ನ ಜಾಯತೇ|
12280009c ತಸ್ಯಾಪಿ ಸುಮಹಾಂಸ್ತಾಪಃ ಪ್ರಸ್ಥಿತಸ್ಯೋಪಜಾಯತೇ||
ಈ ಲೋಕದಲ್ಲಿ ಯಾರ ಅಂತಃಕರಣದಲ್ಲಿ ವೈರಾಗ್ಯದ ಸಂಚಾರವೇ ಆಗುವುದಿಲ್ಲವೋ ಅಂಥಹ ಮೂಢನು ಮರಣಾನಂತರವೂ ಅತ್ಯಂತ ನರಕಯಾತನೆಯಿಂದ ದುಃಖಿತನಾಗುತ್ತಾನೆ.
12280010a ವಿರಕ್ತಂ ಶೋಧ್ಯತೇ ವಸ್ತ್ರಂ ನ ತು ಕೃಷ್ಣೋಪಸಂಹಿತಮ್|
12280010c ಪ್ರಯತ್ನೇನ ಮನುಷ್ಯೇಂದ್ರ ಪಾಪಮೇವಂ ನಿಬೋಧ ಮೇ||
ಮನುಷ್ಯೇಂದ್ರ! ಬಣ್ಣವಿಲ್ಲದಿರುವ ಬಟ್ಟೆಯನ್ನು ತೊಳೆದು ಸ್ವಚ್ಛಮಾಡಬಹುದು. ಆದರೆ ಕಪ್ಪು ಬಟ್ಟೆಯನ್ನು ಎಷ್ಟೇ ತೊಳೆದರೂ ಬಿಳಿಯಾಗುವುದಿಲ್ಲ. ಈ ಪಾಪದ ಕುರಿತು ಪ್ರಯತ್ನಪಟ್ಟು ನನ್ನನ್ನು ಕೇಳು.
12280011a ಸ್ವಯಂ ಕೃತ್ವಾ ತು ಯಃ ಪಾಪಂ ಶುಭಮೇವಾನುತಿಷ್ಠತಿ|
12280011c ಪ್ರಾಯಶ್ಚಿತ್ತಂ ನರಃ ಕರ್ತುಮುಭಯಂ ಸೋಽಶ್ನುತೇ ಪೃಥಕ್||
ಸ್ವಯಂ ಪಾಪವನ್ನು ಮಾಡಿ ಅನಂತರ ಪ್ರಾಯಶ್ಚಿತ್ತಕ್ಕಾಗಿ ಶುಭಕರ್ಮಗಳನ್ನು ಮಾಡತೊಡಗಿದರೆ ಆ ನರನು ಎರಡರ ಫಲಗಳನ್ನೂ ಪ್ರತ್ಯೇಕ-ಪ್ರತ್ಯೇಕವಾಗಿ ಅನುಭವಿಸುತ್ತಾನೆ.
12280012a ಅಜ್ಞಾನಾತ್ತು ಕೃತಾಂ ಹಿಂಸಾಮಹಿಂಸಾ ವ್ಯಪಕರ್ಷತಿ|
12280012c ಬ್ರಾಹ್ಮಣಾಃ ಶಾಸ್ತ್ರನಿರ್ದೇಶಾದಿತ್ಯಾಹುರ್ಬ್ರಹ್ಮವಾದಿನಃ||
12280013a ತಥಾ ಕಾಮಕೃತಂ ಚಾಸ್ಯ ವಿಹಿಂಸೈವಾಪಕರ್ಷತಿ|
12280013c ಇತ್ಯಾಹುರ್ಧರ್ಮಶಾಸ್ತ್ರಜ್ಞಾ ಬ್ರಾಹ್ಮಣಾ ವೇದಪಾರಗಾಃ||
ಅಜ್ಞಾನದಿಂದ ಮಾಡಿದ ಹಿಂಸೆಯನ್ನು ಅಹಿಂಸೆಯು ತೊಡೆದುಹಾಕುತ್ತದೆ ಎಂದು ಶಾಸ್ತ್ರನಿರ್ದೇಶಾನುಸಾರವಾಗಿ ಬ್ರಹ್ಮವಾದೀ ಬ್ರಾಹ್ಮಣರು ಹೇಳುತ್ತಾರೆ. ಆದರೆ ಇಚ್ಛಾಪೂರ್ವಕವಾಗಿ ಮಾಡಿದ ಹಿಂಸೆಯ ಪಾಪವನ್ನು ಅಹಿಂಸಾವ್ರತವೂ ತೊಡೆದುಹಾಕಲಾರದು ಎಂದು ಬ್ರಹ್ಮಶಾಸ್ತ್ರಜ್ಞ ಬ್ರಹ್ಮವಾದೀ ಬ್ರಾಹ್ಮಣರು ಹೇಳುತ್ತಾರೆ.
12280014a ಅಹಂ ತು ತಾವತ್ಪಶ್ಯಾಮಿ ಕರ್ಮ ಯದ್ವರ್ತತೇ ಕೃತಮ್|
12280014c ಗುಣಯುಕ್ತಂ ಪ್ರಕಾಶಂ ಚ ಪಾಪೇನಾನುಪಸಂಹಿತಮ್||
ಮಾಡಿದ ಕರ್ಮವು ಪಾಪಯುಕ್ತವಾಗಿರಲಿ ಅಥವಾ ಪುಣ್ಯಯುಕ್ತವಾಗಿರಲಿ, ಬಹಿರಂಗದಲ್ಲಿ ಮಾಡಿದ್ದಿರಲಿ ಅಥವಾ ಅಂತರಂಗದಲ್ಲಿಯೇ ಮಾಡಿದ್ದಿರಲಿ, ತಿಳಿದು ಮಾಡಿದ್ದಿರಲಿ ಅಥವಾ ತಿಳಿಯದೇ ಮಾಡಿದ್ದಿರಲಿ – ಅದಕ್ಕೆ ತಕ್ಕುದಾದ ಫಲವು ಹಾಗೇ ಆಗುತ್ತದೆ ಎಂದು ನಾನು ಕಂಡಿದ್ದೇನೆ.
12280015a ಯಥಾ ಸೂಕ್ಷ್ಮಾಣಿ ಕರ್ಮಾಣಿ ಫಲಂತೀಹ ಯಥಾತಥಮ್|
12280015c ಬುದ್ಧಿಯುಕ್ತಾನಿ ತಾನೀಹ ಕೃತಾನಿ ಮನಸಾ ಸಹ||
ಬುದ್ಧಿಯುಕ್ತನಾಗಿ ಮನಸ್ಸಿನೊಂದಿಗೆ ಮಾಡಿದ ಸೂಕ್ಷ್ಮಕರ್ಮಗಳೂ ಕೂಡ ಅವು ಹೇಗಿರುತ್ತವೆಯೋ ಹಾಗೆ ಫಲವನ್ನು ಅನುಭವಿಸಬೇಕಾಗುತ್ತದೆ.
12280016a ಭವತ್ಯಲ್ಪಫಲಂ ಕರ್ಮ ಸೇವಿತಂ ನಿತ್ಯಮುಲ್ಬಣಮ್|
12280016c ಅಬುದ್ಧಿಪೂರ್ವಂ ಧರ್ಮಜ್ಞ ಕೃತಮುಗ್ರೇಣ ಕರ್ಮಣಾ||
ನಿತ್ಯವೂ ಅಬುದ್ಧಿಪೂರ್ವಕವಾಗಿ ಉಗ್ರಕರ್ಮಗಳನ್ನು ಮಾಡುತ್ತಿದ್ದರೆ ಅದರ ಫಲವನ್ನೂ ಅನುಭವಿಸಬೇಕಾಗುತ್ತದೆ. ಆದರೆ ತಿಳಿದು ಮಾಡಿದ ಕರ್ಮಗಳಿಗಿಂತ ತಿಳಿಯದೇ ಮಾಡಿದ ಕರ್ಮಗಳ ಫಲವು ಅಲ್ಪವಾಗಿರುತ್ತದೆ.
12280017a ಕೃತಾನಿ ಯಾನಿ ಕರ್ಮಾಣಿ ದೈವತೈರ್ಮುನಿಭಿಸ್ತಥಾ|
12280017c ನಾಚರೇತ್ತಾನಿ ಧರ್ಮಾತ್ಮಾ ಶ್ರುತ್ವಾ ಚಾಪಿ ನ ಕುತ್ಸಯೇತ್||
ದೇವತೆಗಳು ಮತ್ತು ಮುನಿಗಳು ಅನುಚಿತ ಕರ್ಮಗಳನ್ನೆಸಗಿದರೆ ಧರ್ಮಾತ್ಮನು ಅದನ್ನು ಅನುಸರಿಸಬಾರದು ಮತ್ತು ಅದರ ಕುರಿತು ಕೇಳಿಯೂ ಅದನ್ನು ನಿಂದಿಸಬಾರದು.
12280018a ಸಂಚಿಂತ್ಯ ಮನಸಾ ರಾಜನ್ವಿದಿತ್ವಾ ಶಕ್ತಿಮಾತ್ಮನಃ|
12280018c ಕರೋತಿ ಯಃ ಶುಭಂ ಕರ್ಮ ಸ ವೈ ಭದ್ರಾಣಿ ಪಶ್ಯತಿ||
ರಾಜನ್! ಮನಸ್ಸಿನಲ್ಲಿ ಯೋಚಿಸಿ ತನ್ನ ಶಕ್ತಿಯನ್ನು ತಿಳಿದು ಯಾವ ಶುಭಕರ್ಮಗಳನ್ನು ಮನುಷ್ಯನು ಮಾಡುತ್ತಾನೇ ಅದೇ ಅವನಿಗೆ ಕಲ್ಯಾಣಕರವಾಗುತ್ತದೆ.
12280019a ನವೇ ಕಪಾಲೇ ಸಲಿಲಂ ಸಂನ್ಯಸ್ತಂ ಹೀಯತೇ ಯಥಾ|
12280019c ನವೇತರೇ ತಥಾಭಾವಂ ಪ್ರಾಪ್ನೋತಿ ಸುಖಭಾವಿತಮ್||
ಹಸಿಯಾದ ಹೊಸ ಗಡಿಗೆಯಲ್ಲಿ ನೀರನ್ನು ಇಟ್ಟರೆ ಹೇಗೆ ಅದು ನಷ್ಟವಾಗಿ ಹೋಗುತ್ತದೆಯೋ ಮತ್ತು ಹಳೆಯ ಮಡಿಕೆಯಲ್ಲಿಟ್ಟ ನೀರು ಹೇಗೆ ನಾಶವಾಗುವುದಿಲ್ಲವೋ ಹಾಗೆ ಪರಿಪಕ್ವ ಬುದ್ಧಿಯಿಂದ ಮಾಡಿದ ಶುಭಕರ್ಮಗಳು ನಷ್ಟವಾಗುವುದಿಲ್ಲ.
12280020a ಸತೋಯೇಽನ್ಯತ್ತು ಯತ್ತೋಯಂ ತಸ್ಮಿನ್ನೇವ ಪ್ರಸಿಚ್ಯತೇ|
12280020c ವೃದ್ಧೇ ವೃದ್ಧಿಮವಾಪ್ನೋತಿ ಸಲಿಲೇ ಸಲಿಲಂ ಯಥಾ||
12280021a ಏವಂ ಕರ್ಮಾಣಿ ಯಾನೀಹ ಬುದ್ಧಿಯುಕ್ತಾನಿ ಭೂಪತೇ|
12280021c ನಸಮಾನೀಹ ಹೀನಾನಿ ತಾನಿ ಪುಣ್ಯತಮಾನ್ಯಪಿ||
ಭೂಪತೇ! ನೀರಿರುವ ಹಳೆಯ ಮಡಿಕೆಯಲ್ಲಿ ಇನ್ನೂ ಹೆಚ್ಚು ನೀರನ್ನು ಹಾಕಿದರೆ ಅದು ವೃದ್ಧಿಸುತ್ತದೆ. ಮಡಿಕೆಯು ಹೆಚ್ಚು ತುಂಬಿಕೊಳ್ಳುತ್ತದೆ. ಅದೇ ರೀತಿ ಬುದ್ಧಿಯುಕ್ತನಾಗಿ ಮಾಡಿದ ಕರ್ಮಗಳು ಹಿಂದೆ ಮಾಡಿದ ಕರ್ಮಗಳನ್ನು ಸೇರಿ ಪುಣ್ಯವನ್ನು ಹೆಚ್ಚಿಸುತ್ತವೆ.
12280022a ರಾಜ್ಞಾ ಜೇತವ್ಯಾಃ ಸಾಯುಧಾಶ್ಚೋನ್ನತಾಶ್ಚ[2]
ಸಮ್ಯಕ್ಕರ್ತವ್ಯಂ ಪಾಲನಂ ಚ ಪ್ರಜಾನಾಮ್|
12280022c ಅಗ್ನಿಶ್ಚೇಯೋ ಬಹುಭಿಶ್ಚಾಪಿ ಯಜ್ಞೈರ್
ಅಂತೇ ಮಧ್ಯೇ ವಾ ವನಮಾಶ್ರಿತ್ಯ ಸ್ಥೇಯಮ್||
ರಾಜನಾದವನು ಪ್ರಬುದ್ಧ ಸಶಸ್ತ್ರ ಶತ್ರುಗಳನ್ನೂ ಜಯಿಸಬೇಕು. ಪ್ರಜೆಗಳನ್ನು ಚೆನ್ನಾಗಿ ಪಾಲನೆಮಾಡಬೇಕು. ಬಹುವಿಧದ ಯಜ್ಞಗಳಿಂದ ಅಗ್ನಿಯನ್ನು ತೃಪ್ತಿಪಡಿಸಬೇಕು. ಅಂತ್ಯದಲ್ಲಿ ಅಥವಾ ಮಧ್ಯದಲ್ಲಿ ವನವನ್ನು ಸೇರಿ ಅಲ್ಲಿ ವಾಸಿಸಬೇಕು.
12280023a ದಮಾನ್ವಿತಃ ಪುರುಷೋ ಧರ್ಮಶೀಲೋ
ಭೂತಾನಿ ಚಾತ್ಮಾನಮಿವಾನುಪಶ್ಯೇತ್|
12280023c ಗರೀಯಸಃ ಪೂಜಯೇದಾತ್ಮಶಕ್ತ್ಯಾ
ಸತ್ಯೇನ ಶೀಲೇನ ಸುಖಂ ನರೇಂದ್ರ||
ನರೇಂದ್ರ! ಧರ್ಮಶೀಲ ಪುರುಷನು ದಮಾನ್ವಿತನಾಗಿದ್ದು ಪ್ರಾಣಿಗಳನ್ನು ತನ್ನಂತೆಯೇ ಕಾಣಬೇಕು. ಆತ್ಮಶಕ್ತಿಯಿಂದ ಹಿರಿಯರನ್ನು ಪೂಜಿಸಬೇಕು. ಸತ್ಯ ಮತ್ತು ಶೀಲದಿಂದ ಸುಖವುಂಟಾಗುತ್ತದೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ಅಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತನೇ ಅಧ್ಯಾಯವು.
[1] ಉತ್ತಮ ವರ್ಣದಲ್ಲಿ ಜನ್ಮ.
[2] ಶತ್ರವಶ್ಚೋನ್ನತಾಶ್ಚ (ಭಾರತ ದರ್ಶನ).