ಕರ್ಮಫಲಿಕೋಪಾಖ್ಯಾನ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶುಭಕರ್ಮಗಳ ಫಲಗಳ ಕುರಿತು ಹೇಳಿದ ಈ ಸಂವಾದವು ಅನುಶಾಸನ ಪರ್ವದ ದಾನಧರ್ಮ ಪರ್ವದ ಅಧ್ಯಾಯ 7ರಲ್ಲಿ ಬರುತ್ತದೆ.

***

ಯುಧಿಷ್ಠಿರನು ಹೇಳಿದನು:

“ಭರತರ್ಷಭ! ಮಹಾತ್ಮರಲ್ಲಿ ಶ್ರೇಷ್ಠ! ಕೇಳುತ್ತಿರುವ ನನಗೆ ಶುಭ ಕರ್ಮಗಳ ಸಮಸ್ತ ಫಲಗಳ ಕುರಿತೂ ಹೇಳು.”

ಭೀಷ್ಮನು ಹೇಳಿದನು:

“ಯುಧಿಷ್ಠಿರ! ಮರಣಾನಂತರ ಬಹಳ ಕಾಲದಿಂದಲೂ ಅಪೇಕ್ಷಿಸುವ ಯಾವ ಗತಿಯು ದೊರೆಯುತ್ತದೆ ಎನ್ನುವುದು ಋಷಿಗಳಿಗೂ ರಹಸ್ಯವಾದುದು. ಅದನ್ನು ಕೇಳು. ಯಾವ ಯಾವ ಶರೀರದಿಂದ ಯಾವ ಯಾವ ಕರ್ಮವನ್ನು ಮಾಡುತ್ತಾನೋ ಆಯಾ ಶರೀರಗಳಿಂದಲೇ ಅವುಗಳ ಫಲವನ್ನು ಅನುಭವಿಸಬೇಕಾಗುತ್ತದೆ. ಯಾವ ಯಾವ ಅವಸ್ಥೆಯಲ್ಲಿ[1] ಯಾವ ಯಾವ ಶುಭಾಶುಭ ಕರ್ಮಗಳನ್ನು ಮಾಡುತ್ತೇವೆಯೋ ಆಯಾ ಅವಸ್ಥೆಯಲ್ಲಿಯೇ ಜನ್ಮ ಜನ್ಮಾಂತರಗಳಲ್ಲಿ ಅವುಗಳ ಫಲವನ್ನು ಅನುಭವಿಸುತ್ತೇವೆ. ಪಂಚೇಂದ್ರಿಯಗಳಿಂದ ಮಾಡಿದ ಕರ್ಮವು ಎಂದೂ ನಾಶವಾಗುವುದಿಲ್ಲ. ಐದು ಇಂದ್ರಿಯಗಳು ಮತ್ತು ಆರನೆಯದಾಗಿ ಆತ್ಮ – ಇವು ಕರ್ಮಗಳ ನಿತ್ಯ ಸಾಕ್ಷಿಗಳಾಗಿರುತ್ತವೆ. ಮನೆಗೆ ಬಂದ ಅತಿಥಿಯನ್ನು ಪ್ರಸನ್ನ ದೃಷ್ಟಿಯಿಂದ ನೋಡುವುದು, ಮನಃಪೂರ್ವಕವಾಗಿ ಸೇವೆ ಸಲ್ಲಿಸುವುದು, ಸುಮಧುರ ಮಾತನ್ನಾಡುವುದು, ಮನೆಯಲ್ಲಿ ಇರುವವರೆಗೆ ಸೇವಾನಿರತನಾಗಿರುವುದು, ಮತ್ತು ಹಿಂದಿರುಗುವಾಗ ಅವನನ್ನೇ ಅನುಸರಿಸಿ ಸ್ವಲ್ಪದೂರದವರೆಗೆ ಹೋಗುವುದು – ಈ ಐದು ಕರ್ಮಗಳೂ ಗೃಹಸ್ಥನಾದವನಿಗೆ ಪಂಚದಕ್ಷಿಣ ಯುಕ್ತವಾದ ಯಜ್ಞದಂತೆ. ಹಿಂದೆಂದೂ ನೋಡಿರದ ಅಪರಿಚಿತ ಬಳಲಿದವನಿಗೆ ಮನಸ್ಸಿಗೆ ನೋವಾಗದ ರೀತಿಯಲ್ಲಿ ಸುಲಭವಾಗಿ ತಿನ್ನಬಹುದಾದ ಆಹಾರವನ್ನು ನೀಡುವವನಿಗೆ ಮಹಾ ಪುಣ್ಯಫಲವು ದೊರೆಯುತ್ತದೆ. ನೆಲದ ಮೇಲೆ ಮಲಗುವವನಿಗೆ ಮನೆ-ಶಯನಗಳೂ, ಚೀರವಲ್ಕಲವನ್ನು ಧರಿಸುವವನಿಗೆ ವಸ್ತ್ರ-ಆಭರಣಗಳೂ ದೊರೆಯುತ್ತವೆ. ಯೋಗಾತ್ಮನಾದ ತಪೋಧನನಿಗೆ ವಾಹನ-ಆಸನ-ಯಾನಗಳೂ, ಅಗ್ನಿಯನ್ನು ಉಪಾಸನೆ ಮಾಡುವ ರಾಜನಿಗೆ ಪೌರುಷವೂ ದೊರೆಯುತ್ತದೆಯೆಂದು ಹೇಳುತ್ತಾರೆ. ಮದ್ಯ ಮೊದಲಾದ ರಸಗಳನ್ನು ತೊರೆಯುವುದರಿಂದ ಸೌಭಾಗ್ಯವು ದೊರೆಯುತ್ತದೆ. ಮಾಂಸವನ್ನು ತೊರೆಯುವುದರಿಂದ ಪಶು-ಪುತ್ರರು ದೊರೆಯುತ್ತಾರೆ. ತಲೆಕೆಳಮಾಡಿ ತಪಸ್ಸನ್ನಾಚರಿಸುವ, ನೀರಿನಲ್ಲಿ ನಿಂತು ತಪಸ್ಸನ್ನಾಚರಿಸುವ ಮತ್ತು ಸತತವೂ ಏಕಾಂಗಿಯಾಗಿ ಮಲಗಿ ತಪಸ್ಸನ್ನಾಚರಿಸುವವನಿಗೆ ಬಯಸಿದ ಗತಿಯು ದೊರೆಯುತ್ತದೆ. ಪಾದ್ಯ, ಆಸನ, ದೀಪ, ಅನ್ನ ಮತ್ತು ಉಳಿಯಲು ಸ್ಥಳ - ಇವುಗಳನ್ನು ಅತಿಥಿಪೂಜೆಯಲ್ಲಿ ನೀಡುವುದು ಪಂಚದಕ್ಷಿಣೆಗಳ ಯಜ್ಞಕ್ಕೆ ಸಮಾನ. ವೀರಾಸನ, ವೀರಶಯನ ಮತ್ತು ವೀರಸ್ಥಾನಗಳಿಗೆ ಹೋಗುವವರಿಗೆ ಸರ್ವಕಾಮಗಳನ್ನೂ ಪಡೆಯುವ ಅಕ್ಷಯ ಲೋಕಗಳು ದೊರೆಯುತ್ತವೆ.

ವಿಶಾಂಪತೇ! ದಾನಮಾಡುವುದರಿಂದ ಧನವನ್ನೂ, ಮೌನಿಯಾಗಿರುವುದರಿಂದ ಇತರರಿಗೆ ಆಜ್ಞೆಯನ್ನು ನೀಡುವ ಅವಕಾಶವನ್ನೂ, ತಪಸ್ಸಿನಿಂದ ಉಪಭೋಗಗಳನ್ನೂ ಮತ್ತು ಬ್ರಹ್ಮಚರ್ಯದಿಂದ ಜೀವಿತವನ್ನೂ ಪಡೆದುಕೊಳ್ಳಬಹುದು. ಅಹಿಂಸಾಧರ್ಮದಿಂದ ರೂಪ, ಐಶ್ವರ್ಯ, ಮತ್ತು ಆರೋಗ್ಯಗಳು ಫಲವಾಗಿ ದೊರೆಯುತ್ತವೆ. ಫಲ-ಮೂಲಗಳನ್ನು ತಿನ್ನುವವರಿಗೆ ರಾಜ್ಯವೂ ಎಲೆಗಳನ್ನು ಮಾತ್ರ ತಿನ್ನುವವರಿಗೆ ಸ್ವರ್ಗವೂ ದೊರೆಯುತ್ತವೆ. ರಾಜನ್! ಪ್ರಾಯೋಪವೇಶವನ್ನು ಮಾಡುವುದರಿಂದ ಸರ್ವತ್ರ ಸುಖವು ದೊರೆಯುತ್ತದೆ. ಸತ್ಯದಿಂದ ಸ್ವರ್ಗವೂ ಮತ್ತು ವ್ರತಧಾರಣೆಯಿಂದ ಉತ್ತಮ ಕುಲವೂ ದೊರೆಯುತ್ತವೆ. ಶಾಕಾಹಾರಿಯಾದನು ಗೋಸಮೃದ್ಧಿಯನ್ನು ಹೊಂದುತ್ತಾನೆ. ಹುಲ್ಲನ್ನೇ ತಿನ್ನುವವನು ಸ್ವರ್ಗಕ್ಕೆ ಹೋಗುತ್ತಾನೆ. ದಿನದ ಮೂರು ಕಾಲಗಳಲ್ಲಿ ಸ್ನಾನಮಾಡುವವನು ಸ್ತ್ರೀಸೌಖ್ಯವನ್ನು ಪಡೆಯುತ್ತಾನೆ. ವಾಯುಭಕ್ಷಕನಾಗಿರುವವನಿಗೆ ಯಜ್ಞದ ಫಲವು ದೊರೆಯುತ್ತದೆ.ನೀರನ್ನೇ ಸೇವಿಸುವವನು ಸದಾ ಅಗ್ನಿಯನ್ನು ಪೂಜಿಸುವ ಉತ್ತಮ ದ್ವಿಜನಾಗುತ್ತಾನೆ. ಮಂತ್ರಸಾಧಕನು ರಾಜ್ಯವನ್ನು ಪಡೆದುಕೊಳ್ಳುತ್ತಾನೆ. ನಿರಾಹಾರಿಯಾದವನು ಸ್ವರ್ಗವನ್ನು ಹೊಂದುತ್ತಾನೆ. ಪಾರ್ಥಿವ! ಹನ್ನೆರಡು ವರ್ಷಗಳ ಉಪವಾಸ ದೀಕ್ಷೆಯನ್ನು ಕೈಗೊಂಡು ತೀರ್ಥಗಳಲ್ಲಿ ಮೀಯುವವನಿಗೆ ವೀರರ ಸ್ಥಾನವು ದೊರೆಯುತ್ತದೆ. ಸರ್ವವೇದಗಳನ್ನು ಅಧ್ಯಯನಮಾಡಿದವನು ಸದ್ಯದ ದುಃಖಗಳಿಂದ ಮುಕ್ತನಾಗುತ್ತಾನೆ. ಮಾನಸಧರ್ಮವನ್ನು ಪಾಲಿಸುವವನು ಸ್ವರ್ಗಲೋಕವನ್ನು ಪಡೆದುಕೊಳ್ಳುತ್ತಾನೆ.

ದುಷ್ಟಬುದ್ಧಿಗಳಿಂದ ತ್ಯಜಿಸಲು ಸಾಧ್ಯವಾಗಿರದ, ಮುದುಕನಾದರೂ ಜೀರ್ಣವಾಗದೇ ಇರುವ, ಪ್ರಾಣಾಂತಿಕ ರೋಗರೂಪವಾಗಿರುವ ತೃಷ್ಣೆಯನ್ನು ತ್ಯಜಿಸಿದವನು ಸುಖಿಯಾಗುತ್ತಾನೆ. ಸಾವಿರ ಹಸುಗಳ ಮಧ್ಯದಲ್ಲಿಯೂ ಕರುವು ಹೇಗೆ ತನ್ನ ತಾಯಿಯನ್ನೇ ಹೋಗಿ ಸೇರುವುದೋ ಹಾಗೆ ಹಿಂದೆ ಮಾಡಿದ ಕರ್ಮಫಲವು ತನ್ನ ಕರ್ತೃವನ್ನೇ ಅನುಸರಿಸಿ ಬರುತ್ತದೆ. ಪುಷ್ಪ-ಫಲಗಳಂತೆ ಹಿಂದೆ ಮಾಡಿದ ಕರ್ಮಗಳು ಯಾರ ಪ್ರೇರಣೆಯೂ ಇಲ್ಲದೇ, ತಮ್ಮ ಕಾಲವನ್ನು ಅತಿಕ್ರಮಿಸದೇ, ಸರಿಯಾದ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಮನುಷ್ಯನು ವೃದ್ಧನಾದಂತೆ ಕೂದಲು ನೆರೆಯುತ್ತದೆ. ಹಲ್ಲುಗಳು ಜೀರ್ಣವಾಗುತ್ತವೆ. ಕಣ್ಣು-ಕಿವಿಗಳು ಜೀರ್ಣವಾಗುತ್ತವೆ. ಆದರೆ ತೃಷ್ಣೆಯು ಮಾತ್ರ ಜೀರ್ಣವಾಗುವುದಿಲ್ಲ. ತಂದೆಯನ್ನು ಪ್ರೀತಿಸುವವನು ಪ್ರಜಾಪತಿಗೆ ಪ್ರೀತನಾಗುತ್ತಾನೆ. ತಾಯಿಯನ್ನು ಪ್ರೀತಿಸುವವನು ಭೂಮಿಗೆ ಪ್ರೀತನಾಗುತ್ತಾನೆ. ಉಪಾಧ್ಯಾಯನನ್ನು ಪ್ರೀತಿಸುವವನು ಬ್ರಹ್ಮನಿಂದ ಪೂಜಿತನಾಗುತ್ತಾನೆ. ಈ ಮೂವರನ್ನೂ ಸದಾ ಆದರಿಸುವ ಮತ್ತು ಶುಶ್ರೂಷಾದಿಗಳಿಂದ ಪ್ರಸನ್ನ ಗೊಳಿಸುವವನು ಎಲ್ಲ ಧರ್ಮಗಳನ್ನೂ ಅನುಸರಿಸಿದಂತೆ. ಈ ಮೂವರನ್ನೂ ಅನಾದರಿಸುವವನ ಸಮಸ್ತ ಕ್ರಿಯೆಗಳೂ ಅಸಫಲವಾಗುತ್ತವೆ.”

ವೃಥಾ ಮಂತ್ರಗಳನ್ನು ಪಠಿಸುವುದರಿಂದ ದೊರೆಯುವ ಪಾಪ, ವೃಥಾ ಸೋಮವನ್ನು ಹಿಂಡುವುದರಿಂದ ದೊರೆಯುವ ಪಾಪ ಮತ್ತು ಅಗ್ನಿಯಲ್ಲಿ ವೃಥಾ ಹೋಮಮಾಡುವುದರಿಂದ ಬರುವ ಪಾಪ ಇವೆಲ್ಲ ಪಾಪಗಳೂ ವೃಥಾ ಆಲಾಪಮಾಡುವವನಿಗೆ ದೊರೆಯುತ್ತವೆ. ವಿಭೋ! ಋಷಿಗಳು ಹೇಳಿರುವ ಶುಭಾಶುಭಫಲಗಳ ಪ್ರಾಪ್ತಿಯನ್ನು ಹೇಳಿದ್ದಾಯಿತು. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

***

[1] ಬಾಲ್ಯ, ಯೌವನ, ವಾರ್ಧಕ್ಯಾದಿ ಅವಸ್ಥೆಗಳು.

 

Leave a Reply

Your email address will not be published. Required fields are marked *