ಗೌತಮೀ-ಲುಬ್ಧಕ-ವ್ಯಾಲ-ಮೃತ್ಯು-ಕಾಲ ಸಂವಾದ

ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ಕರ್ಮವೇ ಮನುಷ್ಯನ ಮೃತ್ಯುವಿಗೆ ಕಾರಣವೆಂದು ಸೂಚಿಸುವ ಈ ಸಂವಾದವು ಅನುಶಾಸನ ಪರ್ವದ ದಾನಧರ್ಮದ ಪರ್ವದ ಅಧ್ಯಾಯ 1ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಸೂಕ್ಷ್ಮವಾದ ಶಾಂತಿಯ ಕುರಿತು ಬಹುವಿಧಾಕಾರವಾಗಿ ಹೇಳಿದ್ದೀಯೆ. ಆದರೆ ಇದನ್ನು ಮಾಡಿಯೂ ನನ್ನ ಹೃದಯಕ್ಕೆ ಶಾಂತಿಯು ಇಲ್ಲವಾಗಿದೆ. ಅನಘ! ಇದರ ಸಲುವಾಗಿ ನೀನು ಬಹುವಿಧವಾಗಿ ಶಾಂತಿಯ ಕುರಿತು ಹೇಳಿರುವೆ. ಬಹುವಿಧಗಳಿಂದ ಶಾಂತಿಯನ್ನು ಪಡೆಯಬಹುದಾದರೂ ತಾನೇ ಮಾಡಿದ ಕರ್ಮಗಳಿಂದ ಯಾವ ಶಾಂತಿಯು ದೊರೆಯಬಲ್ಲದು? ವೀರ! ಶರಗಳಿಂದ ಚುಚ್ಚಲ್ಪಟ್ಟು ತೀವ್ರ ಗಾಯಗೊಂಡಿರುವ ನಿನ್ನನ್ನು ನೋಡಿ ನನ್ನ ದುಷ್ಕೃತಗಳ ಕುರಿತೇ ಚಿಂತಿಸುತ್ತಿರುವ ನನಗೆ ಶಾಂತಿಯು ದೊರೆಯದಾಗಿದೆ.  ಪುರುಷವ್ಯಾಘ್ರ! ಗರಿಕಾದಿ ಧಾತುಗಳನ್ನು ಸುರಿಸುತ್ತಿರುವ ಪರ್ವತದಂತೆ ರಕ್ತದಿಂದ ತೋಯ್ದುಹೋಗಿರುವ ನಿನ್ನ ಅಂಗಾಂಗಗಳನ್ನು ನೋಡಿ ಮಳೆಯಲ್ಲಿ ಸಿಲುಕಿ ಮುದುಡಿಹೋಗುತ್ತಿರುವ ಕಮಲದಂತೆ ನಾನು ಮುದುಡಿದ್ದೇನೆ. ಪಿತಾಮಹ! ನನ್ನ ಸಲುವಾಗಿ ರಣಾಜಿರದಲ್ಲಿ ಶತ್ರುಗಳಿಂದ ನಿನಗೆ ಮತ್ತು ಪುತ್ರ-ಬಾಂಧವರೊಂದಿಗೆ ಅನ್ಯ ನೃಪತಿಗಳಿಗೆ ಈ ಅವಸ್ಥೆಯುಂಟಾಯಿತು ಎಂದರೆ ಇದಕ್ಕಿಂತಲೂ ಕಷ್ಟತರವಾದುದು ಬೇರೆ ಏನಿದೆ? ನೃಪ! ನಾವು ಮತ್ತು ಧಾರ್ತರಾಷ್ಟ್ರರು ಕಾಲ ಮತ್ತು ಕೋಪವಶಾನುಗರಾಗಿ ಈ ನಿಂದಿತ ಕರ್ಮವನ್ನು ಮಾಡಿದುದರಿಂದ ಯಾವ ಗತಿಯನ್ನು ಹೊಂದುತ್ತೇವೆಯೋ! ನಾನೇ ನಿನ್ನ ಸಂಹಾರಕನು ಮತ್ತು ಹಾಗೆಯೇ ಸುಹೃದರನ್ನು ವಧಿಸಿದವನು. ಭೂಮಿಯ ಮೇಲೆ ದುಃಖಿತನಾಗಿ ಮಲಗಿರುವ ನಿನ್ನನ್ನು ನೋಡಿ ನನಗೆ ಶಾಂತಿಯೇ ದೊರೆಯುತ್ತಿಲ್ಲ.”

ಭೀಷ್ಮನು ಹೇಳಿದನು:

“ಮಹಾಭಾಗ! ಪರತಂತ್ರನಾಗಿರುವ ನೀನು ಹೇಗೆ ತಾನೇ ನಿನ್ನನ್ನು ಇದಕ್ಕೆ ಕಾರಣನೆಂದು ಕಾಣುತ್ತಿದ್ದೀಯೆ? ಕರ್ಮವೇ ಇದಕ್ಕೆ ಸೂಕ್ಷ್ಮವೂ ಅತೀಂದ್ರಿಯವೂ ಆದ ಕಾರಣವು. ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಈ ಮೃತ್ಯು-ಗೌತಮಿ-ಕಾಲ-ವ್ಯಾಧ ಮತ್ತು ಪನ್ನಗಗಳ ಸಂವಾದವನ್ನು ಉದಾಹರಿಸುತ್ತಾರೆ.

***

ಗೌತಮೀ ಎಂಬ ಹೆಸರಿನ ಶಾಂತಸ್ವಭಾವದ ವೃದ್ಧೆಯು ತನ್ನ ಪುತ್ರನು ಸರ್ಪದಿಂದ ಕಚ್ಚಲ್ಪಟ್ಟು ಮರಣಹೊಂದಿದುದನ್ನು ನೋಡಿದಳು. ಆಗ ಕುಪಿತನಾದ ಅರ್ಜುನಕ ಎಂಬ ಹೆಸರಿನ ವ್ಯಾಧನು ಆ ಸರ್ಪವನ್ನು ನೆಣೆಯಿಂದ ಕಟ್ಟಿ ಅದನ್ನು ಗೌತಮಿಯ ಸಮೀಪಕ್ಕೆ ತಂದನು. ಅವನು ಅವಳಿಗೆ ಹೀಗೆ ಹೇಳಿದನು:

“ಮಹಾಭಾಗೇ! ಈ ನೀಚ ಸರ್ಪವೇ ನಿನ್ನ ಮಗನನ್ನು ಕೊಂದಿದೆ. ಇದನ್ನು ಹೇಗೆ ಕೊಲ್ಲಬೇಕೆಂದು ಬೇಗನೆ ಹೇಳು! ಇದನ್ನು ಬೆಂಕಿಯಲ್ಲಿ ಹಾಕಲೇ? ಅಥವಾ ತುಂಡುತುಂಡಾಗಿ ಕತ್ತರಿಸಲೇ? ಬಾಲಕನನ್ನು ಕೊಂದ ಈ ಪಾಪಿಯು ಹೆಚ್ಚುಕಾಲ ಬದುಕಿರಬಾರದು!”

ಗೌತಮಿಯು ಹೇಳಿದಳು:

“ಅರ್ಜುನಕ! ಈ ಮೂಢಬುದ್ಧಿಯನ್ನು ತೊರೆ! ಇದನ್ನು ನೀನು ವಧಿಸಬೇಡ! ಯಾವುದು ಹೇಗೆ ನಡೆಯಬೇಕೋ ಅದು ಹಾಗೆಯೇ ನಡೆಯುತ್ತದೆ. ಇದನ್ನು ತಿಳಿಯದೇ ಯಾರು ತಾನೇ ತನ್ನನ್ನು ಪಾಪದಿಂದ ಭಾರವುಳ್ಳವನನ್ನಾಗಿ ಮಾಡಿಕೊಳ್ಳುತ್ತಾನೆ? ಲೋಕದಲ್ಲಿ ಧರ್ಮದಿಂದ ಹಗುರವಾದವರು ಸಮುದ್ರದಲ್ಲಿನ ನೌಕೆಯಂತೆ ಈ ಭವಸಾಗರವನ್ನು ದಾಟುತ್ತಾರೆ. ಪಾಪದಿಂದ ಭಾರವಾಗಿರುವವರು ನೀರಿನಲ್ಲಿ ಶಸ್ತ್ರವು ಮುಳುಗಿಹೋಗುವಂತೆ ಬೇಗನೇ ಮುಳುಗಿಹೋಗುತ್ತಾರೆ. ಇದನ್ನು ಕೊಲ್ಲುವುದರಿಂದ ನನ್ನ ಮಗನು ಜೀವಿತನಾಗುವುದಿಲ್ಲ. ಇದು ಬದುಕಿದ್ದರೆ ನಿನಗಾಗುವ ಹಾನಿಯಾದರೂ ಏನು? ಪ್ರಾಣದಿಂದ ಈ ಸರ್ಪವನ್ನು ಬಿಟ್ಟುಬಿಟ್ಟರೆ ನಮ್ಮಲ್ಲಿ ಯಾರು ತಾನೇ ಅನಂತವಾದ ಮೃತ್ಯುಲೋಕಕ್ಕೆ ಹೋಗುತ್ತಾರೆ?”

ವ್ಯಾಧನು ಹೇಳಿದನು:

“ಗುಣಾಗುಣಗಳನ್ನು ತಿಳಿದಿರುವ ದೇವಿ! ಕಷ್ಟದಲ್ಲಿ ಎಲ್ಲರೂ ದುಃಖದಿಂದ ಭಾರವಾದ ಮನಸ್ಸುಳ್ಳವರಾಗುತ್ತಾರೆ ಎಂದು ತಿಳಿದಿದ್ದೇನೆ. ಇಂತಹ ಉಪದೇಶಗಳು ಸ್ವಸ್ಥಚಿತ್ತರಾದವರಿಗೆ ಮಾತ್ರ ಹಿಡಿಸುತ್ತವೆ. ನಿನ್ನ ದುಃಖದ ನಿವಾರಣೆಗಾಗಿಯೇ ಈ ಕ್ಷುದ್ರ ಸರ್ಪವನ್ನು ಕೊಲ್ಲುತ್ತೇನೆ. ಶೋಕಿಸುವವರು ಕಾಲಯೋಗವನ್ನು ತ್ಯಜಿಸುತ್ತಾರೆ. ಅರ್ಥವಿದರು ಶುಚಿಯಾಗಿರುವುದನ್ನು ಸದ್ಯವೇ ತ್ಯಜಿಸುತ್ತಾರೆ. ನಿತ್ಯವೂ ಶೋಕಿಸುವವರಿಗೆ ಶ್ರೇಯಸ್ಸು ಕ್ಷೀಣವಾಗುತ್ತದೆ. ಆದುದರಿಂದ ಇದನ್ನು ಕೊಂದು ನಿನ್ನ ಶೋಕವನ್ನು ತೊರೆ.”

ಗೌತಮಿಯು ಹೇಳಿದಳು:

“ನಮ್ಮಂಥವರಿಗೆ ಯಾವುದೇ ಹಾನಿಗಳಿಂದ ಪೀಡೆಯೆನಿಸುವುದಿಲ್ಲ. ಸಜ್ಜನರು ಸತತವಾಗಿ ಧರ್ಮದಲ್ಲಿಯೇ ನಿರತರಾಗಿರುತ್ತಾರೆ. ಈ ಬಾಲಕನು ನಿತ್ಯವೂ ಇರುವವನಾಗಿರಲಿಲ್ಲ. ಧರ್ಮವೇ ಇವನನ್ನು ಹುಟ್ಟಿಸಿತು. ನಾನಲ್ಲ. ಬ್ರಾಹ್ಮಣರಿಗೆ ಕೋಪವೆಂಬುವುದಿರುವುದಿಲ್ಲ. ಹಾಗಿದ್ದಾಗ ಅವರು ಬೇರೆಯವರಿಗೆ ಕೋಪದ ಯಾತನೆಯನ್ನು ಹೇಗೆ ನೀಡಬಲ್ಲರು? ಸಾಧು! ಅದುದರಿಂದ ಮೃದುತ್ವದಿಂದ ಈ ಹಾವನ್ನು ಕ್ಷಮಿಸಿ ಬಿಟ್ಟುಬಿಡು!”

ವ್ಯಾಧನು ಹೇಳಿದನು:

“ಇದನ್ನು ಕೊಲ್ಲುವುದರಿಂದ ಅವ್ಯಯ ಶ್ರೇಯಸ್ಸಿನ ಲಾಭವಾಗುತ್ತದೆ. ಬಲವಂತರಿಂದ ಪಡೆದ ಲಾಭವೇ ಪ್ರಶಸ್ತವಾದುದು. ಕಾಲದಿಂದ ದೊರೆಯುವ ಲಾಭವೇ ನಿಜವಾದ ಲಾಭವು. ಈ ಕುತ್ಸಿತ ಸರ್ಪವನ್ನು ಕೊಂದರೆ ನಿನಗೆ ಅಂಥಹ ಶ್ರೇಯಸ್ಸು ದೊರೆಯುತ್ತದೆ.”

ಗೌತಮಿಯು ಹೇಳಿದಳು:

“ಶತ್ರುವನ್ನು ಬಂಧಿಸಿ ಕೊಲ್ಲುವುದರಿಂದ ಯಾವ ಲಾಭವು ದೊರೆಯುತ್ತದೆ? ಕೈಗೆ ಸಿಕ್ಕಿದ ಶತ್ರುವನ್ನು ಬಿಟ್ಟುಬಿಡದೇ ಇದ್ದರೆ ಯಾವ ಶಾಂತಿಯು ದೊರೆಯುತ್ತದೆ? ಸೌಮ್ಯ! ಯಾವ ಕಾರಣದಿಂದ ನಾನು ಈ ಹಾವನ್ನು ಕ್ಷಮಿಸಬಾರದು? ಅಥವಾ ಯಾವ ಕಾರಣಕ್ಕಾಗಿ ನಾನು ಇದರ ಬಿಡುಗಡೆಗೆ ಪ್ರಯತ್ನಿಸಬಾರದು?”

ವ್ಯಾಧನು ಹೇಳಿದನು:

“ಗೌತಮಿ! ಇದೊಂದನ್ನು ಕೊಂದು ಅನೇಕ ಜೀವಗಳನ್ನು ರಕ್ಷಿಸಬಹುದು. ಅನೇಕ ಜೀವಿಗಳನ್ನು ಕೊಂದು ಒಂದೇ ಜೀವಿಯನ್ನು ರಕ್ಷಿಸಬಾರದು. ಅಪರಾಧಿಗಳನ್ನು ಧರ್ಮವಿದರು ತ್ಯಜಿಸುತ್ತಾರೆ. ನೀನೂ ಕೂಡ ಈ ಪಾಪಿ ಸರೀಸೃಪವನ್ನು ಸಂಹರಿಸು!”

ಗೌತಮಿಯು ಹೇಳಿದಳು:

“ಲುಬ್ಧಕ! ಈ ಹಾವನ್ನು ಕೊಲ್ಲುವುದರಿಂದ ನನ್ನ ಪುತ್ರನು ಜೀವಿತನಾಗುತ್ತಾನೆ ಎನ್ನುವುದು ಸುಳ್ಳು! ಇದನ್ನು ವಧಿಸುವುದರಿಂದ ದೊರೆಯುವ ಅನ್ಯ ಲಾಭಗಳನ್ನೂ ನಾನು ಕಾಣುತ್ತಿಲ್ಲ. ಲುಬ್ಧಕ! ಆದುದರಿಂದ ಈ ಸರ್ಪವನ್ನು ಜೀವಂತ ಬಿಟ್ಟುಬಿಡು!”

ವ್ಯಾಧನು ಹೇಳಿದನು:

“ವೃತ್ರನನ್ನು ಸಂಹರಿಸಿ ದೇವರಾಜನು ಶ್ರೇಷ್ಠತೆಗೆ ಭಾಗಿಯಾದನು. ದೇವ ಶೂಲಿಯು ಯಜ್ಞವನ್ನು ಸಂಹರಿಸಿ ಅದರ ಭಾಗವನ್ನು ಪಡೆದುಕೊಂಡನು. ನೀನೂ ಕೂಡ ದೇವತೆಗಳ ಈ ನಡತೆಯಂತೆ ಮಾಡು. ಶಂಕೆಗೊಳಗಾಗದೇ ಈ ಸರ್ಪವನ್ನು ಬೇಗನೇ ಕೊಲ್ಲು.”

ಭುಜಗದ ಕುರಿತು ಲುಬ್ಧಕನು ಎಷ್ಟೇ ಹೇಳಿದರೂ ಮಹಾಭಾಗೆ ಗೌತಮಿಯು ಪಾಪವನ್ನೆಸಗಲು ಮನಸ್ಸುಮಾಡಲಿಲ್ಲ. ಆಗ ಬಂಧನದಿಂದ ಪೀಡಿತಗೊಂಡು ನಿಧಾನವಾಗಿ ಉಸಿರಾಡುತ್ತಿದ್ದ ಆ ಸರ್ಪವು ಅತ್ಯಂತ ಕಷ್ಟದಿಂದ ಮಂದಸ್ವರದಲ್ಲಿ ಮನುಷ್ಯವಾಣಿಯಲ್ಲಿ ಹೇಳಿತು:

“ಬಾಲಿಶ ಅರ್ಜುನಕ! ಇದರಲ್ಲಿ ನನ್ನ ದೋಷವೇನಿದೆ? ನಾನಾದರೋ ಅಸ್ವತಂತ್ರನು. ಮೃತ್ಯುವೇ ನನ್ನನ್ನು ವಿವಶಗೊಳಿಸಿ ಈ ಕಾರ್ಯಕ್ಕೆ ಪ್ರೇರೇಪಿಸಿತು! ಮೃತ್ಯುವಿನ ಮಾತಿನಂತೆಯೇ ನಾನು ಇವನನ್ನು ಕಚ್ಚಿದೆನು. ಕೋಪದಿಂದಲ್ಲ ಅಥವಾ ಕಾಮದಿಂದಲೂ ಅಲ್ಲ. ಲುಬ್ಧ! ಇದರಲ್ಲಿ ಪಾಪವೇನಾದರೂ ಇದ್ದರೆ ಅದು ಮೃತ್ಯುವಿನದ್ದು. ನನ್ನದಲ್ಲ ಎಂದು ತಿಳಿ!”

ವ್ಯಾಧನು ಹೇಳಿದನು:

“ಒಂದುವೇಳೆ ನೀನು ಅನ್ಯನ ಅಧೀನನಾಗಿ ಈ ಪಾಪವನ್ನು ಮಾಡಿದ್ದರೆ ನೀನೂ ಕೂಡ ಇದರ ಕಾರಣನಾಗುತ್ತೀಯೆ. ಆದುದರಿಂದ ನೀನೂ ಕೂಡ ಅಪರಾಧಿಯಾಗುತ್ತೀಯೆ! ಪನ್ನಗ! ಮಣ್ಣಿನ ಮಡಿಕೆಯನ್ನು ಮಾಡುವಾಗ ದಂಡ ಮತ್ತು ಚಕ್ರಾದಿಗಳ ಪಾತ್ರವು ಹೇಗೋ ಹಾಗೆ ಈ ಬಾಲಕನ ಮೃತ್ಯುವಿಗೆ ನೀನೂ ಕಾರಣನಾಗುತ್ತೀಯೆ. ಪನ್ನಗ! ಪಾಪಿ ಯಾರೇ ಇರಲಿ ನನ್ನ ಪಾಲಿಗೆ ಅವನು ವಧ್ಯ. ಭುಜಂಗಮ! ನೀನೂ ಅಪರಾಧಿಯಾಗಿರುವೆ. ಏಕೆಂದರೆ ಇವನ ವಧೆಗೆ ನಿನ್ನನ್ನು ನೀನೇ ಕಾರಣನೆಂದು ಹೇಳಿಕೊಂಡಿದ್ದೀಯೆ!”

ಸರ್ಪವು ಹೇಳಿತು:

“ಮಣ್ಣಿನ ಮಡಿಕೆಯನ್ನು ತಯಾರಿಸುವಾಗ ದಂಡ-ಚಕ್ರಾದಿಗಳು ಹೇಗೆ ಕುಂಬಾರನ ಪರಾಧೀನರ[1] ಹಾಗೆ ನಾನು ಕೂಡ ಇಲ್ಲಿ ಮೃತ್ಯುವಿನ ಪರಾಧೀನನಾಗಿದ್ದೇನೆ. ಆದುದರಿಂದ ನನ್ನನ್ನು ದೂಷಿಸುವುದು ಸರಿಯಲ್ಲ. ಅಥವಾ ದಂಡ-ಚಕ್ರಗಳು ಅನ್ಯೋನ್ಯರ ಪ್ರಯೋಜಕರು ಎಂದು ನಿನ್ನ ಮತವಾದರೆ ಅನ್ಯೋನ್ಯರ ಪ್ರಚೋದನೆಯಿಂದ ಕಾರ್ಯ-ಕಾರಣಗಳಲ್ಲಿ ಸಂದೇಹವುಂಟಾಗುತ್ತದೆ[2]. ಈ ಸಂದರ್ಭದಲ್ಲಿ ನನ್ನ ದೋಷವೇನೂ ಇಲ್ಲ. ನಾನು ವಧ್ಯನಲ್ಲ. ನಾನು ಪಾಪಿಯೂ ಅಲ್ಲ. ನನ್ನನ್ನು ಪಾಪಿಯೆಂದು ಅಭಿಪ್ರಾಯಪಡುವೆಯಾದರೆ ಇವನ ಮೃತ್ಯುವಿಗೆ ಕಾರಣವಾದ ಎಲ್ಲ ಕಾರಣಸಮೂಹಗಳೂ ಪಾಪಿಗಳು ಎಂದಾಗುತ್ತವೆ.”

ವ್ಯಾಧನು ಹೇಳಿದನು:

“ಒಂದು ವೇಳೆ ನೀನು ಈ ಅಪರಾಧದ ಕಾರಣನೂ ಅಲ್ಲ ಅಥವಾ ಕರ್ತನೂ ಅಲ್ಲ ಎಂದು ತಿಳಿದುಕೊಂಡರೂ ಈ ಬಾಲಕನ ವಿನಾಶವು ನಿನ್ನಿಂದಲೇ ಅಗಿದೆಯಲ್ಲವೇ? ಆದುದರಿಂದ ನೀನು ವಧ್ಯ ಎಂದು ನನ್ನ ಮತ. ಪನ್ನಗ! ಕಾರ್ಯವನ್ನು ಮಾಡಿಯೂ ಕರ್ತನು ದೋಷಿಯಲ್ಲ ಎಂದಾದರೆ ಹೇಗೆ ತಾನೇ ದೋಷಿಯನ್ನು ವಧಿಸುತ್ತಾರೆ? ನೀನು ಅಧಿಕವಾಗಿ ಮಾತನಾಡುತ್ತಿದ್ದೀಯೆ!”

ಸರ್ಪವು ಹೇಳಿತು:

“ಕಾರಣವು ಇರಲಿ ಅಥವಾ ಇಲ್ಲದಿರಲಿ, ಕಾರ್ಯವು ಆಗಿಯೇ ಆಗುತ್ತದೆ[3]. ಅದುದರಿಂದ ಬಾಲಕನ ಸಾವಿಗೆ ನಾನು ವಿಶೇಷತಃ ಕಾರಣನೆಂದು ಹೇಳುವ ಕಾರಣವಿಲ್ಲ. ಲುಬ್ಧಕ! ಒಂದುವೇಳೆ ತತ್ತ್ವತಃ ನಾನೇ ಕಾರಣನೆಂದು ನಿನ್ನ ಮತವಾಗಿದ್ದರೆ ಈ ಬಾಲಕನ ಮೃತ್ಯುವಿನಲ್ಲಿ ಅನ್ಯನು ನನ್ನನ್ನು ಪ್ರಯೋಗಿಸಿದ್ದಾನೆ ಎನ್ನುವುದನ್ನು ತಿಳಿದುಕೋ.”

ವ್ಯಾಧನು ಹೇಳಿದನು:

“ದುರ್ಬುದ್ಧೇ! ಪನ್ನಗಾಧಮ! ಬಾಲಕನನ್ನು ಕೊಂದವನೇ! ಕ್ರೂರಕರ್ಮವನ್ನು ಮಾಡಿದವನೇ! ನನಗೆ ನೀನು ವಧ್ಯನಾಗಿರುವೆ. ಸಾಯಬಾರದೆಂದು ನೀನು ಬಹಳ ಮಾತನಾಡುತ್ತಿದ್ದೀಯೆಯಲ್ಲವೇ?”

ಸರ್ಪವು ಹೇಳಿತು:

“ಲುಬ್ಧಕ! ಯಜ್ಞದಲ್ಲಿ ಹವಿಸ್ಸುಗಳಿಂದ ಹೋಮಮಾಡುವ ಋತ್ವಿಜನಿಗೆ ಹೇಗೆ ಅದರ ಫಲವು ಇಲ್ಲಿ ಅಥವಾ ಪರಲೋಕದಲ್ಲಿ ದೊರಕುವುದಿಲ್ಲವೋ ಹಾಗೆ ನನಗೂ ಕೂಡ ಈ ಬಾಲಕ ಮೃತ್ಯುವಿನ ಫಲವಾಗಲೀ ಶಿಕ್ಷೆಯಾಗಲೀ ದೊರಕಬಾರದು.”

ತಾನು ಮೃತ್ಯುವಿನಿಂದ ಚೋದಿತನಾಗಿ ಬಾಲಕನನ್ನು ಕಚ್ಚಿದೆ ಎಂದು ಸರ್ಪವು ನುಡಿಯುತ್ತಿರಲು ಅಲ್ಲಿಗೆ ಮೃತ್ಯುವೇ ಬಂದು ಸರ್ಪಕ್ಕೆ ಹೇಳಿದನು:

“ಪನ್ನಗ! ಕಾಲನಿಂದ ಪ್ರೇರಿತನಾದ ನಾನು ನಿನ್ನನ್ನು ಪ್ರಚೋದಿಸಿದೆನು. ಈ ಶಿಶುವಿನ ಪ್ರಾಣವು ನಾಶವಾಗಲು ನೀನಾಗಲೀ ನಾನಾಗಲೀ ಕಾರಣರಲ್ಲ. ಸರ್ಪವೇ! ಮೋಡಗಳನ್ನು ಅಲ್ಲಿಂದಿಲ್ಲಿಗೆ ಸೆಳೆದಾಡುವ ವಾಯುವಿನ ವಶದಲ್ಲಿ ಮೋಡಗಳು ಹೇಗೋ ಹಾಗೆ ನಾನು ಕಾಲನ ವಶಾನುಗನು. ರಾಜಸಿಕ, ಸಾತ್ವಿಕ ಮತ್ತು ತಾಮಸ ಗುಣಗಳಿರುವ ಎಲ್ಲ ಜಂತುಗಳೂ ಕಾಲದಿಂದಲೇ ಹುಟ್ಟುತ್ತವೆ ಮತ್ತು ಕಾಲಾಧೀನವಾಗಿಯೇ ವರ್ತಿಸುತ್ತವೆ. ಸರ್ಪವೇ! ದಿವಿಯಲ್ಲಿರುವ ಅಥವಾ ಭುವಿಯಲ್ಲಿರುವ ಜಂಗಮ-ಸ್ಥಾವರಗಳೆಲ್ಲವೂ ಕಾಲಾತ್ಮಕವು. ಈ ಜಗತ್ತೇ ಕಾಲಾತ್ಮಕವು. ಈ ಲೋಕದಲ್ಲಿರುವ ಪ್ರವೃತ್ತಿಗಳು, ನಿವೃತ್ತಿಗಳು ಮತ್ತು ಅವುಗಳ ವಿಕೃತಗಳು ಎಲ್ಲವೂ ಕಾಲಾತ್ಮಕವೆಂದು ಹೇಳಲ್ಪಟ್ಟಿದೆ. ಪನ್ನಗ! ಆದಿತ್ಯ, ಚಂದ್ರಮ, ವಿಷ್ಣು, ಆಪ, ವಾಯು, ಶತಕ್ರತು, ಅಗ್ನಿ, ಆಕಾಶ, ಪೃಥ್ವಿ, ಮಿತ್ರ, ಔಷಧಗಳು, ವಸುಗಳು, ಸರಿತ, ಸಾಗರ, ಸೃಷ್ಟಿ ಮತ್ತು ಪ್ರಳಯ ಇವೆಲ್ಲವೂ ಕಾಲನಿಂದಲೇ ಸೃಷ್ಟಿಸಲ್ಪಡುತ್ತವೆ ಮತ್ತು ಅವನಿಂದಲೇ ಹಿಂದೆ ಸೆಳೆಯಲ್ಪಡುತ್ತವೆ. ಸರ್ಪವೇ! ಇದನ್ನು ತಿಳಿದು ನೀನು ನನ್ನನ್ನು ಹೇಗೆ ದೋಷಯುಕ್ತನೆಂದು ಹೇಳುತ್ತೀಯೆ? ಒಂದು ವೇಳೆ ದೋಷವು ನನ್ನಲ್ಲಿದೆ ಎಂದಾದರೆ ನೀನೂ ಕೂಡ ದೋಷಯುಕ್ತನಾಗುತ್ತೀಯೆ.”

ಸರ್ಪವು ಹೇಳಿತು:

“ಮೃತ್ಯುವೇ! ನಿನ್ನನ್ನು ನಿರ್ದೋಷೀ ಅಥವಾ ದೂಷಿತನೆಂದು ನಾನು ಹೇಳುತ್ತಿಲ್ಲ. ನಿನ್ನಿಂದ ನಾನು ಪ್ರಚೋದಿತಗೊಂಡೆ ಎಂದು ಮಾತ್ರ ಹೇಳುತ್ತಿದ್ದೇನೆ. ಇದರಲ್ಲಿ ಕಾಲನ ದೋಷವಿರಬಹುದು ಅಥವಾ ಇಲ್ಲದೆಯೂ ಇರಬಹುದು. ಆದರೂ ಇಲ್ಲಿ ದೋಷಿಯು ಯಾರೆಂದು ನಾನು ಪರೀಕ್ಷಿಸುತ್ತಿಲ್ಲ. ಹಾಗೆ ಮಾಡಲು ನನಗೆ ಅಧಿಕಾರವೂ ಇಲ್ಲ. ನನ್ನನ್ನು ಈ ದೋಷದಿಂದ ಹೇಗೆ ಬಿಡುಗಡೆಗೊಳಿಸಿಕೊಳ್ಳಬೇಕು ಎನ್ನುವುದೇ ನನ್ನ ಕಾರ್ಯವಾಗಿದೆ. ಮೃತ್ಯುವಿನ ದೋಷವೂ ಇಲ್ಲವೆಂದರೆ ಅದು ನನಗೆ ಪ್ರಯೋಜನವೇ ಆಯಿತು.”

ಆಗ ಸರ್ಪವು ಅರ್ಜುನಕನಿಗೆ ಹೇಳಿತು:

“ಮೃತ್ಯುವು ಆಡಿತ ಮಾತನ್ನು ನೀನು ಕೇಳಿರುವೆ. ಈಗಲಾದರೂ ನಿರಪರಾಧಿಯಾದ ನನ್ನನ್ನು ಕಟ್ಟಿ ಸಂತಾಪಗೊಳಿಸುವುದು ಸರಿಯಲ್ಲ.”

ವ್ಯಾಧನು ಹೇಳಿದನು:

“ಭುಜಂಗಮ! ನಿನ್ನ ಮತ್ತು ಮೃತ್ಯುವಿನ ಮಾತುಗಳನ್ನು ಕೇಳಿದೆ. ಪನ್ನಗ! ಆದರೆ ಇಷ್ಟರಿಂದಲೇ ನೀನು ದೋಷಿಯಲ್ಲವೆಂದು ಸಿದ್ಧವಾಗುವುದಿಲ್ಲ. ಈ ಬಾಲಕನ ವಿನಾಶದಲ್ಲಿ ನೀನು ಮತ್ತು ಮೃತ್ಯು ಇಬ್ಬರೂ ಕಾರಣಗಳಾಗಿರುವಿರಿ. ನಿಮ್ಮಿಬ್ಬರನ್ನೂ ಕಾರಣರೆಂದು ತಿಳಿಯುತ್ತೇನೆ. ಕಾರಣವಲ್ಲದುದನ್ನು ಕಾರಣವೆಂದು ತಿಳಿಯುವುದಿಲ್ಲ. ಸಂತರಿಗೆ ದುಃಖವನ್ನುಂಟುಮಾಡುವ ಕ್ರೂರ ದುರಾತ್ಮ ಮೃತ್ಯುವಿಗೆ ಧಿಕ್ಕಾರ! ಈ ಪಾಪಕ್ಕೆ ಕಾರಣನಾದ ಪಾಪಿ ನಿನ್ನನ್ನೂ ನಾನು ವಧಿಸುತ್ತೇನೆ.”

ಮೃತ್ಯುವು ಹೇಳಿದನು:

“ನಾವಿಬ್ಬರೂ ಅಸ್ವತಂತ್ರರು. ಕಾಲನ ವಶದಲ್ಲಿರುವವರು. ಅವನ ಇಷ್ಟದಂತೆ ಮಾಡುವವರು. ಇದನ್ನು ನೀನು ಚೆನ್ನಾಗಿ ಪರಿಶೀಲಿಸಿದ್ದೇ ಆದರೆ ನಮ್ಮಿಬ್ಬರಲ್ಲಿ ಯಾರನ್ನೂ ಅಪರಾಧಿಯೆಂದು ನೀನು ಭಾವಿಸುವುದಿಲ್ಲ.”

ವ್ಯಾಧನು ಹೇಳಿದನು:

“ಮೃತ್ಯು-ಪನ್ನಗಗಳೇ! ಒಂದುವೇಳೆ ನೀವಿಬ್ಬರೂ ಕಾಲವಶರಾಗಿದ್ದರೆ ಈ ವಿಷಯದಲ್ಲಿ ಹರ್ಷ-ಕ್ರೋಧಗಳು ಹೇಗೆ ಉಂಟಾಗುತ್ತಿವೆ[4] ಎನ್ನುವುದನ್ನು ತಿಳಿಯಬಯಸುತ್ತೇನೆ.”

ಮೃತ್ಯುವು ಹೇಳಿದನು:

“ಲುಬ್ಧಕ! ಇಲ್ಲಿ ಏನೆಲ್ಲ ನಡೆಯುತ್ತದೆಯೋ ಅ ಸರ್ವವೂ ಕಾಲದಿಂದ ಪ್ರಚೋದಿತಗೊಳ್ಳುತ್ತವೆ. ಕಾಲದ ಕುರಿತು ಈ ಮೊದಲೇ ನಾನು ನಿನಗೆ ಹೇಳಿದ್ದೇನೆ. ಲುಬ್ಧಕ! ಆದುದರಿಂದ ನಾವಿಬ್ಬರೂ ಕಾಲನ ವಶವಾಗಿರುವೆವು. ಅವನ ಇಷ್ಟದಂತೆ ಮಾಡುವವರು. ಯಾವುದೇ ಕಾರಣಕ್ಕೂ ನಮ್ಮನ್ನು ದೋಷಿಗಳೆಂದು ತೀರ್ಮಾನಿಸಬಾರದು.”

ಆ ಧರ್ಮಾರ್ಥಸಂಶಯವು ಉಂಟಾಗಿದ್ದಾಗ ಅಲ್ಲಿಗೆ ಕಾಲನೇ ಆಗಮಿಸಿ ಪನ್ನಗ, ಮೃತ್ಯು ಮತ್ತು ಅರ್ಜುನಕರಿಗೆ ಹೇಳಿದನು. ಕಾಲನು ಹೇಳಿದನು:

“ಲುಬ್ಧಕ! ನಾನಾಗಲೀ, ಮೃತ್ಯುವಾಗಲೀ ಅಥವಾ ಪನ್ನಗವಾಗಲೀ ಈ ಬಾಲಕನ ಮರಣದ ವಿಷಯದಲ್ಲಿ ದೋಷಿಗಳಲ್ಲ. ನಾವು ಒಬ್ಬರಿಗೊಬ್ಬರು ಪ್ರಚೋದನೆಯನ್ನೂ ನೀಡಲಿಲ್ಲ. ಅರ್ಜುನಕ! ಈ ಬಾಲಕನು ಮಾಡಿದ ಕರ್ಮವೇ ನಮ್ಮೆಲ್ಲರಿಗೂ ಪ್ರಚೋದಕವಾಗಿದೆ. ಈ ಬಾಲಕನ ವಿನಾಶಕ್ಕೆ ಬೇರೆ ಯಾರೂ ಕಾರಣರಲ್ಲ. ಸ್ವಕರ್ಮದಿಂದಲೇ ಅವನು ವಧಿಸಲ್ಪಟ್ಟಿದ್ದಾನೆ. ಇವನು ಯಾವ ಕರ್ಮಗಳನ್ನು ಮಾಡಿದ್ದನೋ ಅದಕ್ಕೆ ಅನುಸಾರವಾಗಿ ನಿಧನ ಹೊಂದಿದ್ದಾನೆ. ಅವನ ವಿನಾಶಕ್ಕೆ ಅವನ ಕರ್ಮಗಳೇ ಕಾರಣ. ನಾವೆಲ್ಲರೂ ನಮ್ಮ ಕರ್ಮಗಳ ವಶರಾಗಿದ್ದೇವೆ. ಪುತ್ರ-ಪೌತ್ರಾದಿಗಳಂತೆ ಕರ್ಮವು ಕರ್ತೃವನ್ನು ಸದಾ ಅನುಸರಿಸಿಕೊಂಡೇ ಬರುತ್ತದೆ. ಕರ್ಮವೇ ಸುಖ-ದುಃಖಾದಿಗಳ ಸಂಬಂಧಸೂಚಕವಾಗಿದೆ. ಲೋಕದಲ್ಲಿ ನಾವು ಅನ್ಯೋನ್ಯರನ್ನು ಹೇಗೆ ಪ್ರಚೋದಿಸುತ್ತಿರುತ್ತೀವೋ ಹಾಗೆ ಕರ್ಮಗಳೂ ನಮ್ಮನ್ನು ಪ್ರಚೋದಿಸುತ್ತಿರುತ್ತವೆ. ಕುಂಬಾರನು ಹೇಗೆ ಮಣ್ಣಿನ ಮುದ್ದೆಯಿಂದ ತನಗಿಷ್ಟವಾದುದನ್ನು ಮಾಡಿಕೊಳ್ಳುವನೋ ಹಾಗೆ ಮಾನವನು ತಾನು ಮಾಡಿದ ಕರ್ಮಗಳಿಗನುಸಾರವಾಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ. ಬಿಸಿಲು-ನೆರಳುಗಳು ಹೇಗೆ ಒಂದಕ್ಕೊಂದು ಸೇರಿಕೊಂಡಿರುತ್ತವೆಯೋ ಹಾಗೆ ಕರ್ಮ ಮತ್ತು ಕರ್ತೃವು ಸೇರಿಕೊಂಡೇ ಇರುತ್ತಾರೆ. ಮನುಷ್ಯನು ತನ್ನ ಕರ್ಮಗಳಿಗೆ ಬದ್ಧನಾಗಿರುತ್ತಾನೆ. ಹೀಗೆ ನಾನಾಗಲೀ, ಮೃತ್ಯುವಾಗಲೀ, ಸರ್ಪವಾಗಲೀ, ನೀನಾಗಲೀ ಅಥವಾ ಈ ವೃದ್ಧ ಬ್ರಾಹ್ಮಣಿಯಾಗಲೀ ಈ ಶಿಶುವಿನ ಮೃತ್ಯುವಿಗೆ ಕಾರಣರಲ್ಲ.”

ಅವನು ಹೀಗೆ ಹೇಳಲು ಬ್ರಾಹ್ಮಣೀ ಗೌತಮಿಯು ಸ್ವಕರ್ಮದಿಂದಲೇ ಲೋಕವು ನಡೆಯುತ್ತದೆಯೆಂದು ತಿಳಿದು ಅರ್ಜುನಕನಿಗೆ ಹೇಳಿದಳು:

“ಕಾಲನಾಗಲೀ, ಸರ್ಪವಾಗಲೀ ಅಥವಾ ಮೃತ್ಯುವಾಗಲೀ ಇದಕ್ಕೆ ಕಾರಣರಲ್ಲ. ಸ್ವಕರ್ಮದಿಂದಲೇ ಈ ಬಾಲಕನು ಕಾಲನಿಂದ ಮೃತನಾಗಿದ್ದಾನೆ. ನಾನೂ ಕೂಡ ಅಂಥಹ ಕರ್ಮವನ್ನು ಮಾಡಿದ್ದುದರಿಂದ ಈ ನನ್ನ ಮಗನು ಮೃತನಾದನು. ಕಾಲ ಮತ್ತು ಮೃತ್ಯುಗಳು ಹೊರಟುಹೋಗಲಿ. ಅರ್ಜುನಕ! ಈ ಹಾವನ್ನು ಬಿಟ್ಟುಬಿಡು!”

ಅನಂತರ ಮೃತ್ಯು, ಕಾಲ ಮತ್ತು ಪನ್ನಗಗಳು ಹೇಗೆ ಬಂದಿದ್ದರೋ ಹಾಗೆ ಹೊರಟುಹೋದರು. ಅರ್ಜುನಕನು ವಿರೋಷಗೊಂಡನು. ಹಾಗೆಯೇ ಗೌತಮಿಯೂ ಶೋಕವನ್ನು ತೊರೆದಳು.

‌‍***

ಭೀಷ್ಮನು ಹೇಳಿದನು:

“ನೃಪ! ಮನುಜರ್ಷಭ! ಇದನ್ನು ಕೇಳಿ ಶಾಂತಿಯನ್ನು ಹೊಂದು. ಇನ್ನೂ ಚಿಂತಾಪರನಾಗಬೇಡ. ಸ್ವಕರ್ಮದಿಂದ ಎಲ್ಲರೂ ಲೋಕಗಳನ್ನು ಪಡೆಯುತ್ತಾರೆ ಎನ್ನುವುದನ್ನು ತಿಳಿದುಕೋ. ಪಾರ್ಥ! ಇದನ್ನು ನೀನಾಗಲೀ ದುರ್ಯೋಧನನಾಗಲೀ ಮಾಡಲಿಲ್ಲ. ಈ ಪಾರ್ಥಿವರು ಅವರ ಕರ್ಮಗಳಿಗನುಸಾರವಾಗಿ ಕಾಲದಿಂದಲೇ ಹತರಾದರೆಂದು ತಿಳಿ.”

ಈ ಮಾತನ್ನು ಕೇಳಿ ಮಹಾತೇಜಸ್ವಿ ಯುಧಿಷ್ಠಿರನು ವಿಗತಜ್ವರನಾದನು. ಆ ಧರ್ಮವಿದುವು ಪುನಃ ಪ್ರಶ್ನಿಸಿದನು.

***

[1] ದಂಡ ಮತ್ತು ಚಕ್ರಗಳು ಅಸ್ವತಂತ್ರ ವಸ್ತುಗಳು. ತಾವಾಗಿಯೇ ಯಾವ ಕಾರ್ಯಗಳನ್ನೂ ಮಾಡಲು ಹೋಗುವುದಿಲ್ಲ. ಕುಂಬಾರನು ತಿರುಗಿಸಿದಂತೆ ಅವು ತಿರುಗುತ್ತವೆ.

[2] ಪರಸ್ಪರ ಪ್ರಚೋದನೆಯಿರುವುದರಿಂದ ಇದರಲ್ಲಿ ಕಾರ್ಯವು ಯಾವುದು? ಕಾರಣವು ಯಾವುದು? ಕಾರ್ಯಕ್ಕೆ ಮುಖ್ಯ ಕಾರಣವ್ಯಾವುದು? ಎಂಬುದರಲ್ಲಿ ಸಂದೇಹವುಂಟಾಗುತ್ತದೆ.

[3] ಕೊಡಲಿಯನ್ನು ತೆಗೆದುಕೊಳ್ಳುವುದು, ಮೇಲಕ್ಕೆತ್ತುವುದು, ಮತ್ತು ಪ್ರಹರಿಸುವುದು ಇವೆಲ್ಲವೂ ಛೇದನಕ್ರಿಯೆಗೆ ಕಾರಣಗಳಾಗುತ್ತವೆ. ಎರಡು ರೆಂಬೆಗಳು ಪರಸ್ಪರ ಸಂಘರ್ಷಿಸಿ ಬೆಂಕಿಯು ಹುಟ್ಟಿ ವನವು ಸುಟ್ಟುಹೋದರೆ ರೆಂಬೆಗಳು ಸಂಘರ್ಷಿಸಲು ಅಗೋಚರವಾದ ಗಾಳಿಯೇ ಕರ್ತೃವೆನ್ನಬಹುದು. ಆದರೆ ಗಾಳಿಗೆ ರೆಂಬೆಗಳನ್ನು ಸಂಘರ್ಷಿಸುವ ಕಾರ್ಯವಿರಲಿಲ್ಲ ಅಥವಾ ವನವನ್ನು ಸುಡುವ ಉದ್ದೇಶವಿರಲಿಲ್ಲ.  ಹಾಗೆಯೇ ನನಗೂ ಬಾಲಕನನ್ನು ಕಚ್ಚುವ ಕಾರ್ಯವೂ ಇರಲಿಲ್ಲ. ಉದ್ದೇಶವೂ ಇರಲಿಲ್ಲ.

[4] ತಟಸ್ಥನಾಗಿದ್ದು ಉಪಕಾರಿಯಾಗ ಬಯಸಿದ ನನ್ನ ಮೇಲೆ ಪ್ರೀತಿಯೂ ಅಪಕಾರಿಗಳಾದ ನಿಮ್ಮ ಮೇಲೆ ಕ್ರೋಧವೂ ಜನರಿಗೆ ಹೇಗೆ ಉಂಟಾಗುತ್ತಿದ್ದಿತು? ಎಲ್ಲವೂ ಕಾಲಾಧೀನವೆಂದೇ ಭಾವಿಸಿದರೆ ಲೋಕದಲ್ಲಿ ರಾಗ-ದ್ವೇಷಗಳಿಗೆ ಅವಕಾಶವೇ ಇರುತ್ತಿರಲಿಲ್ಲ.

Leave a Reply

Your email address will not be published. Required fields are marked *