ಅನುಶಾಸನ ಪರ್ವ: ದಾನಧರ್ಮ ಪರ್ವ
೧೧೯
ಕೀಟವು ಹತ್ತು ಜನ್ಮಗಳ ನಂತರ ರಾಜಪುತ್ರನಾಗಿ ಹುಟ್ಟಿ, ವ್ಯಾಸನನ್ನು ಪುನಃ ಸಂದರ್ಶಿಸಿ ಪೂಜಿಸಿದುದು (1-23).
13119001 ವ್ಯಾಸ ಉವಾಚ|
13119001a ಶುಭೇನ ಕರ್ಮಣಾ ಯದ್ವೈ ತಿರ್ಯಗ್ಯೋನೌ ನ ಮುಹ್ಯಸೇ|
13119001c ಮಮೈವ ಕೀಟ ತತ್ಕರ್ಮ ಯೇನ ತ್ವಂ ನ ಪ್ರಮುಹ್ಯಸೇ||
ವ್ಯಾಸನು ಹೇಳಿದನು: “ಕೀಟವೇ! ನೀನು ಮಾಡಿದ ಆ ಎರಡು ಶುಭ ಕರ್ಮಗಳಿಂದ ಈ ತಿರ್ಯಗ್ಯೋನಿಯಲ್ಲಿ ಮೋಹಕ್ಕೊಳಗಾಗಲಿಲ್ಲ. ಆ ಶುಭ ಕರ್ಮಗಳಿಂದಲೇ ನಿನಗೆ ನನ್ನ ದರ್ಶನವಾಯಿತು.
13119002a ಅಹಂ ಹಿ ದರ್ಶನಾದೇವ ತಾರಯಾಮಿ ತಪೋಬಲಾತ್|
13119002c ತಪೋಬಲಾದ್ಧಿ ಬಲವದ್ಬಲಮನ್ಯನ್ನ ವಿದ್ಯತೇ||
ನನ್ನ ದರ್ಶನಮಾಡಿದ್ದುದರಿಂದ ನನ್ನ ತಪೋಬಲದಿಂದಲೇ ನಿನ್ನನ್ನು ಉದ್ಧರಿಸುತ್ತೇನೆ. ತಪೋಬಲಕ್ಕಿಂತಲೂ ಬಲವಾದ ಇನ್ನೊಂದು ಬಲವಿಲ್ಲ ಎಂದು ತಿಳಿ.
13119003a ಜಾನಾಮಿ ಪಾಪೈಃ ಸ್ವಕೃತೈರ್ಗತಂ ತ್ವಾಂ ಕೀಟ ಕೀಟತಾಮ್|
13119003c ಅವಾಪ್ಸ್ಯಸಿ ಪರಂ ಧರ್ಮಂ ಧರ್ಮಸ್ಥೋ ಯದಿ ಮನ್ಯಸೇ||
ಕೀಟವೇ! ಹಿಂದೆ ನೀನೇ ಮಾಡಿದ ಪಾಪಗಳಿಂದ ಈ ಕೀಟತ್ವವನ್ನು ಪಡೆದಿದ್ದೀಯೆ ಎಂದು ನನಗೆ ತಿಳಿದಿದೆ. ನೀನು ಧರ್ಮಸ್ಥನಾಗಿರಲು ಬಯಸಿದರೆ ಪರಮ ಧರ್ಮವನ್ನು ಪಡೆದುಕೊಳ್ಳುತ್ತೀಯೆ.
13119004a ಕರ್ಮ ಭೂಮಿಕೃತಂ ದೇವಾ ಭುಂಜತೇ ತಿರ್ಯಗಾಶ್ಚ ಯೇ|
13119004c ಧರ್ಮಾದಪಿ ಮನುಷ್ಯೇಷು ಕಾಮೋಽರ್ಥಶ್ಚ ಯಥಾ ಗುಣೈಃ||
ಕರ್ಮಭೂಮಿಯಲ್ಲಿ ಮಾಡಿದ ಕರ್ಮಗಳ ಫಲವನ್ನು ದೇವತೆಗಳೂ ಮತ್ತು ತಿರ್ಯಗ್ಯೋನಿಗಳವರೂ ಉಪಭೋಗಿಸುತ್ತಾರೆ. ಗುಣಗಳಿಂದ ಮನುಷ್ಯನಿಗೆ ಕಾಮಾರ್ಥಗಳು ಸಿದ್ಧಿಸುವಂತೆ ಧರ್ಮದಿಂದಲೂ ಕಾಮಾರ್ಥಗಳು ಸಿದ್ಧಿಸುತ್ತವೆ.
13119005a ವಾಗ್ಬುದ್ಧಿಪಾಣಿಪಾದೈಶ್ಚಾಪ್ಯುಪೇತಸ್ಯ ವಿಪಶ್ಚಿತಃ|
13119005c ಕಿಂ ಹೀಯತೇ[1] ಮನುಷ್ಯಸ್ಯ ಮಂದಸ್ಯಾಪಿ ಹಿ ಜೀವತಃ||
ಮನುಷ್ಯನು ಮೂರ್ಖನಾಗಿರಲಿ ಅಥವಾ ವಿಂದ್ವಾಂಸನಾಗಿರಲಿ, ಮಾತು, ಬುದ್ಧಿ, ಮತ್ತು ಕೈಕಾಲುಗಳಿಂದ ಯುಕ್ತನಾಗಿದ್ದರೆ ಜೀವಿಸಿರುವಾಗ ಅವನನ್ನು ಯಾವುದು ತಾನೇ ನಾಶಗೊಳಿಸುತ್ತದೆ?
13119006a ಜೀವನ್ ಹಿ ಕುರುತೇ ಪೂಜಾಂ ವಿಪ್ರಾಗ್ರ್ಯಃ ಶಶಿಸೂರ್ಯಯೋಃ|
13119006c ಬ್ರುವನ್ನಪಿ ಕಥಾಂ ಪುಣ್ಯಾಂ ತತ್ರ ಕೀಟ ತ್ವಮೇಷ್ಯಸಿ||
ಬ್ರಾಹ್ಮಣಶ್ರೇಷ್ಠನೋರ್ವನು ಸೂರ್ಯಚಂದ್ರರನ್ನು ಪೂಜಿಸುತ್ತಾ ಪುಣ್ಯಕಥೆಗಳನ್ನು ಹೇಳುತ್ತಾ ಜೀವಿಸುತ್ತಿದ್ದಾನೆ. ಕೀಟವೇ! ನೀನು ಅವನ ಪುತ್ರನಾಗಿ ಜನಿಸುತ್ತೀಯೆ.
13119007a ಗುಣಭೂತಾನಿ ಭೂತಾನಿ ತತ್ರ ತ್ವಮುಪಭೋಕ್ಷ್ಯಸೇ|
13119007c ತತ್ರ ತೇಽಹಂ ವಿನೇಷ್ಯಾಮಿ ಬ್ರಹ್ಮತ್ವಂ ಯತ್ರ ಚೇಚ್ಚಸಿ||
ಅಲ್ಲಿ ನೀನು ವಿಷಯಗಳನ್ನು ಪಂಚಭೂತಗಳ ವಿಕಾರಗಳೆಂದು ತಿಳಿದು ಅನಾಸಕ್ತಭಾವದಿಂದ ಉಪಭೋಗಿಸುತ್ತೀಯೆ. ಅಲ್ಲಿ ನಾನು ಪುನಃ ಬಂದು ಬ್ರಹ್ಮತತ್ತ್ವವನ್ನು ಉಪದೇಶಿಸಿ ಮುಂದೆ ನೀನು ಯಾವ ಪುಣ್ಯಲೋಕಕ್ಕೆ ಹೋಗಲು ಬಯಸುವೆಯೋ ಅಲ್ಲಿಗೆ ಕಳುಹಿಸುತ್ತೇನೆ.”
13119008a ಸ ತಥೇತಿ ಪ್ರತಿಶ್ರುತ್ಯ ಕೀಟೋ ವರ್ತ್ಮನ್ಯತಿಷ್ಠತ|
13119008c ತಮೃಷಿಂ ದ್ರಷ್ಟುಮಗಮತ್ ಸರ್ವಾಸ್ವನ್ಯಾಸು ಯೋನಿಷು||
13119009a ಶ್ವಾವಿದ್ಗೋಧಾವರಾಹಾಣಾಂ ತಥೈವ ಮೃಗಪಕ್ಷಿಣಾಮ್|
13119009c ಶ್ವಪಾಕವೈಶ್ಯಶೂದ್ರಾಣಾಂ ಕ್ಷತ್ರಿಯಾಣಾಂ ಚ ಯೋನಿಷು||
ಹಾಗೆಯೇ ಆಗಲೆಂದು ಹೇಳಿ ಕೀಟವು ಬಂಡಿಯ ಮಾರ್ಗದಲ್ಲಿಯೇ ನಿಂತುಕೊಂಡಿತು. ಮರಣಾನಂತರ ಅದು ಅನುಕ್ರಮವಾಗಿ ಮುಳ್ಳುಹಂದಿ, ನೀರುಡ, ಹಂದಿ, ಮೃಗಗಳು, ಪಕ್ಷಿಗಳು, ಚಂಡಾಲ, ಶೂದ್ರ, ವೈಶ್ಯ, ಮತ್ತು ಕ್ಷತ್ರಿಯ ಕುಲಗಳಲ್ಲಿ ಹುಟ್ಟಿತು. ಪ್ರೌಢನಾದ ನಂತರ ಹಿಂದಿನ ಜನ್ಮಗಳ ಸ್ಮರಣೆಯಿದ್ದ ಆ ಕ್ಷತ್ರಿಯ ಕುಮಾರನು ವ್ಯಾಸನನ್ನು ಸಂದರ್ಶಿಸುವ ಸಲುವಾಗಿ ಅವನ ಬಳಿ ಹೋದನು.
13119010a ಸ ಕೀಟೇತ್ಯೇವಮಾಭಾಷ್ಯ ಋಷಿಣಾ ಸತ್ಯವಾದಿನಾ|
13119010c ಪ್ರತಿಸ್ಮೃತ್ಯಾಥ ಜಗ್ರಾಹ ಪಾದೌ ಮೂರ್ಧ್ನಾ ಕೃತಾಂಜಲಿಃ||
ತಾನು ಕೀಟವಾಗಿದ್ದಾಗ ಸತ್ಯವಾದಿ ಋಷಿಯು ಹೇಳಿದ್ದ ಮಾತನ್ನು ಸ್ಮರಿಸಿ ಅವನ ಎರಡೂ ಪಾದಗಳಲ್ಲಿ ತನ್ನ ತಲೆಯನ್ನಿಟ್ಟು ಕೃತಾಂಜಲಿಯಾಗಿ ನಮಸ್ಕರಿಸಿದನು.
13119011 ಕೀಟ ಉವಾಚ|
13119011a ಇದಂ ತದತುಲಂ ಸ್ಥಾನಮೀಪ್ಸಿತಂ ದಶಭಿರ್ಗುಣೈಃ|
13119011c ಯದಹಂ ಪ್ರಾಪ್ಯ ಕೀಟತ್ವಮಾಗತೋ ರಾಜಪುತ್ರತಾಮ್||
ಕ್ಷತ್ರಿಯ ಕುಮಾರನಾಗಿದ್ದ ಕೀಟವು ಹೇಳಿತು: “ಹತ್ತು ಜನ್ಮಗಳ ನಂತರ ನಾನು ಈ ಶ್ರೇಷ್ಠವಾದ ಸ್ಥಾನವನ್ನು ಬಯಸಿದ್ದೆನು. ಕೀಟನಾಗಿದ್ದ ನಾನು ರಾಜಪುತ್ರತ್ವವನ್ನು ಹೊಂದಿ ನಿನ್ನಲ್ಲಿಗೆ ಆಗಮಿಸಿದ್ದೇನೆ.
13119012a ವಹಂತಿ ಮಾಮತಿಬಲಾಃ ಕುಂಜರಾ ಹೇಮಮಾಲಿನಃ|
13119012c ಸ್ಯಂದನೇಷು ಚ ಕಾಂಬೋಜಾ ಯುಕ್ತಾಃ ಪರಮವಾಜಿನಃ||
ಸುವರ್ಣಮಾಲೆಗಳಿಂದ ಸುಶೋಭಿತವಾದ ಮಹಾಬಲಿಷ್ಠ ಆನೆಗಳು ನನ್ನನ್ನು ನಾನು ಬಯಸಿದಲ್ಲಿಗೆ ಕೊಂಡೊಯ್ಯುತ್ತವೆ. ನನ್ನ ರಥಗಳು ಕಾಂಬೋಜದ ಶ್ರೇಷ್ಠ ಕುದುರೆಗಳಿಂದ ಯುಕ್ತವಾಗಿವೆ.
13119013a ಉಷ್ಟ್ರಾಶ್ವತರಯುಕ್ತಾನಿ ಯಾನಾನಿ ಚ ವಹಂತಿ ಮಾಮ್|
13119013c ಸಬಾಂಧವಃ ಸಹಾಮಾತ್ಯಶ್ಚಾಶ್ನಾಮಿ ಪಿಶಿತೌದನಮ್||
ಒಂಟೆಗಳಿಂದಲೂ ಹೇಸರಗತ್ತೆಗಳಿಂದಲೂ ಯುಕ್ತವಾದ ಯಾನಗಳು ನನ್ನನ್ನು ಕೊಂಡೊಯ್ಯುತ್ತವೆ. ಬಾಂಧವರು ಮತ್ತು ಅಮಾತ್ಯರೊಂದಿಗೆ ಮಾಂಸಸಹಿತ ಅನ್ನವನ್ನು ಉಟಮಾಡುತ್ತೇನೆ.
13119014a ಗೃಹೇಷು ಸುನಿವಾಸೇಷು ಸುಖೇಷು ಶಯನೇಷು ಚ|
13119014c ಪರಾರ್ಧ್ಯೇಷು ಮಹಾಭಾಗ ಸ್ವಪಾಮೀಹ ಸುಪೂಜಿತಃ||
ಮಹಾಭಾಗ! ವಾಸಮಾಡಲು ಯೋಗ್ಯವಾದ ಮನೆಗಳಲ್ಲಿ ಬಹುಮೂಲ್ಯ ಸುಖ ಶಯನಗಳಲ್ಲಿ ಸುಪೂಜಿತನಾಗಿ ಮಲಗುತ್ತೇನೆ.
13119015a ಸರ್ವೇಷ್ವಪರರಾತ್ರೇಷು ಸೂತಮಾಗಧಬಂದಿನಃ|
13119015c ಸ್ತುವಂತಿ ಮಾಂ ಯಥಾ ದೇವಂ ಮಹೇಂದ್ರಂ ಪ್ರಿಯವಾದಿನಃ||
ಎಲ್ಲ ಅಪರ ರಾತ್ರಿಗಳಲ್ಲಿ ಸೂತ-ಮಾಗಧ-ಬಂದಿಗಳು ಪ್ರಿಯವಾದಿಗಳು ದೇವ ಮಹೇಂದ್ರನನ್ನು ಹೇಗೋ ಹಾಗೆ ನನ್ನನ್ನು ಸ್ತುತಿಸುತ್ತಾರೆ.
13119016a ಪ್ರಸಾದಾತ್ಸತ್ಯಸಂಧಸ್ಯ ಭವತೋಽಮಿತತೇಜಸಃ|
13119016c ಯದಹಂ ಕೀಟತಾಂ ಪ್ರಾಪ್ಯ ಸಂಪ್ರಾಪ್ತೋ ರಾಜಪುತ್ರತಾಮ್||
ಸತ್ಯಸಂಧನೂ ಅಮಿತತೇಜಸ್ವಿಯೂ ಆದ ನಿನ್ನ ಪ್ರಸಾದದಿಂದ ಕೀಟತ್ವವನ್ನು ಪಡೆದಿದ್ದ ನಾನು ರಾಜಪುತ್ರತ್ವವನ್ನು ಪಡೆದುಕೊಂಡಿದ್ದೇನೆ.
13119017a ನಮಸ್ತೇಽಸ್ತು ಮಹಾಪ್ರಾಜ್ಞ ಕಿಂ ಕರೋಮಿ ಪ್ರಶಾಧಿ ಮಾಮ್|
13119017c ತ್ವತ್ತಪೋಬಲನಿರ್ದಿಷ್ಟಮಿದಂ ಹ್ಯಧಿಗತಂ ಮಯಾ||
ಮಹಾಪ್ರಾಜ್ಞ! ನಿನಗೆ ನಮಸ್ಕಾರವು. ನಾನೀಗ ಏನು ಮಾಡಬೇಕು ಎಂದು ಆಜ್ಞಾಪಿಸು. ನಿನ್ನ ತಪೋಬಲದಿಂದಲೇ ನನಗೆ ಈ ಪದವಿಯು ದೊರಕಿದೆಯೆನ್ನುವುದು ನಿರ್ದಿಷ್ಟವಾಗಿದೆ.”
13119018 ವ್ಯಾಸ ಉವಾಚ|
13119018a ಅರ್ಚಿತೋಽಹಂ ತ್ವಯಾ ರಾಜನ್ವಾಗ್ಭಿರದ್ಯ ಯದೃಚ್ಚಯಾ|
13119018c ಅದ್ಯ ತೇ ಕೀಟತಾಂ ಪ್ರಾಪ್ಯ ಸ್ಮೃತಿರ್ಜಾತಾಜುಗುಪ್ಸಿತಾ||
ವ್ಯಾಸನು ಹೇಳಿದನು: “ರಾಜನ್! ಉತ್ತಮ ಮಾತುಗಳಿಂದ ನೀನು ನನ್ನನ್ನು ಅರ್ಚಿಸಿದ್ದೀಯೆ. ಇಂದು ನಿನಗೆ ಆ ಜುಗುಪ್ಸಿತ ಕೀಟತ್ವದ ಸ್ಮೃತಿಯುಂಟಾಗಿದೆ.
13119019a ನ ತು ನಾಶೋಽಸ್ತಿ ಪಾಪಸ್ಯ ಯತ್ತ್ವಯೋಪಚಿತಂ ಪುರಾ|
13119019c ಶೂದ್ರೇಣಾರ್ಥಪ್ರಧಾನೇನ ನೃಶಂಸೇನಾತತಾಯಿನಾ||
ಹಿಂದೆ ನೀನು ಶೂದ್ರನಾಗಿ ಧನವನ್ನೇ ಪ್ರಧಾನವನ್ನಾಗಿರಿಸಿಕೊಂಡು ಕ್ರೂರಿ ಪಾಪಿಷ್ಟನಾಗಿ ಮಾಡಿದ ಕರ್ಮಗಳ ಪಾಪವು ನಾಶವಾಗುವುದಿಲ್ಲ.
13119020a ಮಮ ತೇ ದರ್ಶನಂ ಪ್ರಾಪ್ತಂ ತಚ್ಚೈವ ಸುಕೃತಂ ಪುರಾ|
13119020c ತಿರ್ಯಗ್ಯೋನೌ ಸ್ಮ ಜಾತೇನ ಮಮ ಚಾಪ್ಯರ್ಚನಾತ್ತಥಾ||
ಹಿಂದೆ ನೀನು ಮಾಡಿದ ಸುಕೃತಗಳಿಂದಾಗಿ ತಿರ್ಯಗ್ಯೋನಿಯಲ್ಲಿ ಜನಿಸಿದ್ದರೂ ನಿನಗೆ ನನ್ನ ದರ್ಶನವಾಗಿತ್ತು. ಈಗ ನನ್ನನ್ನು ಅರ್ಚಿಸಿದ್ದೀಯೆ ಕೂಡ.
13119021a ಇತಸ್ತ್ವಂ ರಾಜಪುತ್ರತ್ವಾದ್ ಬ್ರಾಹ್ಮಣ್ಯಂ ಸಮವಾಪ್ಸ್ಯಸಿ|
13119021c ಗೋಬ್ರಾಹ್ಮಣಕೃತೇ ಪ್ರಾಣಾನ್ ಹುತ್ವಾತ್ಮೀಯಾನ್ರಣಾಜಿರೇ||
ಗೋಬ್ರಾಹ್ಮಣರ ರಕ್ಷಣಾರ್ಥವಾಗಿ ಮಾಡುವ ಯುದ್ಧದಲ್ಲಿ ಪ್ರಾಣಗಳನ್ನು ಆಹುತಿಯನ್ನಾಗಿತ್ತು ನೀನು ರಾಜಪುತ್ರತ್ವದಿಂದ ಬ್ರಾಹ್ಮಣತ್ವವನ್ನು ಪಡೆಯುತ್ತೀಯೆ.
13119022a ರಾಜಪುತ್ರಸುಖಂ ಪ್ರಾಪ್ಯ ಋತೂಂಶ್ಚೈವಾಪ್ತದಕ್ಷಿಣಾನ್|
13119022c ಅಥ ಮೋದಿಷ್ಯಸೇ ಸ್ವರ್ಗೇ ಬ್ರಹ್ಮಭೂತೋಽವ್ಯಯಃ ಸುಖೀ||
ರಾಜಪುತ್ರನಾಗಿ ಸುಖವನ್ನು ಹೊಂದಿ ಆಪ್ತದಕ್ಷಿಣೆಗಳಿಂದೊಡಗೂಡಿದ ಯಜ್ಞಗಳನ್ನು ಮಾಡಿ ಸ್ವರ್ಗದಲ್ಲಿ ಬ್ರಹ್ಮಭೂತವೂ ಅವ್ಯಯವೂ ಆದ ಸುಖವನ್ನು ಹೊಂದುತ್ತೀಯೆ.
13119023a ತಿರ್ಯಗ್ಯೋನ್ಯಾಃ ಶೂದ್ರತಾಮಭ್ಯುಪೈತಿ
ಶೂದ್ರೋ ವೈಶ್ಯತ್ವಂ ಕ್ಷತ್ರಿಯತ್ವಂ ಚ ವೈಶ್ಯಃ|
13119023c ವೃತ್ತಶ್ಲಾಘೀ ಕ್ಷತ್ರಿಯೋ ಬ್ರಾಹ್ಮಣತ್ವಂ
ಸ್ವರ್ಗಂ ಪುಣ್ಯಂ ಬ್ರಾಹ್ಮಣಃ ಸಾಧುವೃತ್ತಃ||
ತಿರ್ಯಗ್ಯೋನಿಯಲ್ಲಿ ಹುಟ್ಟಿದ ಜೀವನು ಮೇಲು-ಮೇಲಿನ ಗತಿಗಳನ್ನು ಹೊಂದಲು ಪ್ರಾರಂಭಿಸಿದಾಗ ಮೊದಲು ಶೂದ್ರತ್ವವನ್ನು ಪಡೆಯುತ್ತಾನೆ. ಶೂದ್ರನು ವೈಶ್ವತ್ವವನ್ನೂ ವೈಶ್ಯನು ಕ್ಷತ್ರಿಯತ್ವವನ್ನೂ ಪಡೆಯುತ್ತಾನೆ. ಶ್ಲಾಘನೀಯ ವರ್ತನೆಯ ಕ್ಷತ್ರಿಯನು ಬ್ರಾಹ್ಮಣತ್ವವನ್ನು ಪಡೆಯುತ್ತಾನೆ. ಸಾಧುನಡತೆಯ ಬ್ರಾಹ್ಮಣನು ಸ್ವರ್ಗದ ಪುಣ್ಯವನ್ನು ಪಡೆಯುತ್ತಾನೆ.””
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಕೀಟೋಪಾಖ್ಯಾನೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಕೀಟೋಪಾಖ್ಯಾನ ಎನ್ನುವ ನೂರಾಹತ್ತೊಂಭತ್ತನೇ ಅಧ್ಯಾಯವು.
[1] ಹಾಸ್ಯತಿ (ಗೀತಾ ಪ್ರೆಸ್).