Anushasana Parva: Chapter 139

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೯

ಕಶ್ಯಪನು ಮೂವತ್ತು ಸಾವಿರ ದಿವ್ಯ ವರ್ಷಗಳು ಭೂಮಿಯಾಗಿದ್ದುದು; ಭೂಮಿಯು ಅವನ ಮಗಳಾಗಿ ಹುಟ್ಟಿ ಕಾಶ್ಯಪಿ ಎಂದೆನಿಸಿಕೊಂಡಿದುದು (1-8). ತನ್ನ ಪತ್ನಿಯನ್ನು ವರುಣನು ಅಪಹರಿಸಲು ಉತಥ್ಯನು ಜಲವೆಲ್ಲವನ್ನೂ ಕುಡಿದುಬಿಟ್ಟಿದುದು (9-31).

13139001 ವಾಯುರುವಾಚ|

13139001a ಇಮಾಂ ಭೂಮಿಂ ಬ್ರಾಹ್ಮಣೇಭ್ಯೋ ದಿತ್ಸುರ್ವೈ ದಕ್ಷಿಣಾಂ ಪುರಾ|

13139001c ಅಂಗೋ ನಾಮ ನೃಪೋ ರಾಜಂಸ್ತತಶ್ಚಿಂತಾಂ ಮಹೀ ಯಯೌ||

ವಾಯುವು ಹೇಳಿದನು: “ರಾಜನ್! ಹಿಂದೆ ಅಂಗನೆಂಬ ಹೆಸರಿನ ನೃಪನು ಈ ಭೂಮಿಯನ್ನು ಬ್ರಾಹ್ಮಣರಿಗೆ ದಕ್ಷಿಣೆಯನ್ನಾಗಿ ಕೊಡಲು ಬಯಸಿದನು. ಆಗ ಭೂಮಿಯು ಚಿಂತಾಕ್ರಾಂತಳಾದಳು.

13139002a ಧಾರಣೀಂ ಸರ್ವಭೂತಾನಾಮಯಂ ಪ್ರಾಪ್ಯ ವರೋ ನೃಪಃ|

13139002c ಕಥಮಿಚ್ಚತಿ ಮಾಂ ದಾತುಂ ದ್ವಿಜೇಭ್ಯೋ ಬ್ರಹ್ಮಣಃ ಸುತಾಮ್||

“ಸರ್ವಭೂತಗಳನ್ನೂ ಧರಿಸಿರುವ ಬ್ರಹ್ಮನ ಸುತೆಯಾದ ನನ್ನನ್ನು ಪಡೆದ ಈ ಶ್ರೇಷ್ಠ ನೃಪನು ಹೇಗೆ ತಾನೇ ನನ್ನನ್ನು ಬ್ರಾಹ್ಮಣರಿಗೆ ಕೊಡಲು ಬಯಸುತ್ತಾನೆ?

13139003a ಸಾಹಂ ತ್ಯಕ್ತ್ವಾ ಗಮಿಷ್ಯಾಮಿ ಭೂಮಿತ್ವಂ ಬ್ರಹ್ಮಣಃ ಪದಮ್|

13139003c ಅಯಂ ಸರಾಷ್ಟ್ರೋ ನೃಪತಿರ್ಮಾ ಭೂದಿತಿ ತತೋಽಗಮತ್||

ಭೂಮಿತ್ವವನ್ನೂ ಇವನನ್ನೂ ತ್ಯಜಿಸಿ ನಾನು ಬ್ರಹ್ಮಪದಕ್ಕೆ ಹೊರಟುಹೋಗುತ್ತೇನೆ. ಈ ನೃಪತಿಯೂ ಅವನ ರಾಷ್ಟ್ರವೂ ಏಳ್ಗೆಹೊಂದುವುದಿಲ್ಲ” ಎಂದು ಅವಳು ಹೊರಟೇ ಹೋದಳು.

13139004a ತತಸ್ತಾಂ ಕಶ್ಯಪೋ ದೃಷ್ಟ್ವಾ ವ್ರಜಂತೀಂ ಪೃಥಿವೀಂ ತದಾ|

13139004c ಪ್ರವಿವೇಶ ಮಹೀಂ ಸದ್ಯೋ ಮುಕ್ತ್ವಾತ್ಮಾನಂ ಸಮಾಹಿತಃ||

ಆಗ ಬಿಟ್ಟು ಹೊರಟುಹೋಗುತ್ತಿದ್ದ ಪೃಥ್ವಿಯನ್ನು ನೋಡಿ ಕಶ್ಯಪನು ಕೂಡಲೇ ಯೋಗಯುಕ್ತನಾಗಿ ಶರೀರವನ್ನು ತ್ಯಜಿಸಿ ಭೂಮಿಯನ್ನು ಪ್ರವೇಶಿಸಿದನು.

13139005a ರುದ್ಧಾ ಸಾ ಸರ್ವತೋ ಜಜ್ಞೇ ತೃಣೌಷಧಿಸಮನ್ವಿತಾ|

13139005c ಧರ್ಮೋತ್ತರಾ ನಷ್ಟಭಯಾ ಭೂಮಿರಾಸೀತ್ತತೋ ನೃಪ||

ನೃಪ! ಆಗ ಭೂಮಿಯು ಮೊದಲಿಗಿಂತಲೂ ಸಮೃದ್ಧಶಾಲಿಯಾಯಿತು. ಪೈರುಪಚ್ಚೆಗಳಿಂದ ತುಂಬಿಕೊಂಡಿತು. ಧರ್ಮವು ವೃದ್ಧಿಯಾಯಿತು. ಭೂಮಿಯು ಭಯರಹಿತವಾಯಿತು.

13139006a ಏವಂ ವರ್ಷಸಹಸ್ರಾಣಿ ದಿವ್ಯಾನಿ ವಿಪುಲವ್ರತಃ|

13139006c ತ್ರಿಂಶತಂ ಕಶ್ಯಪೋ ರಾಜನ್ಭೂಮಿರಾಸೀದತಂದ್ರಿತಃ||

ರಾಜನ್! ಹೀಗೆ ವಿಪುಲವ್ರತ ಕಶ್ಯಪನು ಆಯಾಸರಹಿತನಾಗಿ ಮೂವತ್ತು ಸಾವಿರ ದಿವ್ಯ ವರ್ಷಗಳು ಭೂಮಿಯಾಗಿಯೇ ಇದ್ದನು.

13139007a ಅಥಾಗಮ್ಯ ಮಹಾರಾಜ ನಮಸ್ಕೃತ್ಯ ಚ ಕಶ್ಯಪಮ್|

13139007c ಪೃಥಿವೀ ಕಾಶ್ಯಪೀ ಜಜ್ಞೇ ಸುತಾ ತಸ್ಯ ಮಹಾತ್ಮನಃ||

ಮಹಾರಾಜ! ಆಗ ಕಶ್ಯಪನಿಗೆ ನಮಸ್ಕರಿಸಿ ಪೃಥ್ವಿಯು ಆ ಮಹಾತ್ಮನ ಮಗಳಾಗಿ ಹುಟ್ಟಿ ಕಾಶ್ಯಪೀ ಎಂದಾದಳು.

13139008a ಏಷ ರಾಜನ್ನೀದೃಶೋ ವೈ ಬ್ರಾಹ್ಮಣಃ ಕಶ್ಯಪೋಽಭವತ್|

13139008c ಅನ್ಯಂ ಪ್ರಬ್ರೂಹಿ ವಾಪಿ ತ್ವಂ ಕಶ್ಯಪಾತ್ಕ್ಷತ್ರಿಯಂ ವರಮ್||

ರಾಜನ್! ಬ್ರಾಹ್ಮಣ ಕಶ್ಯಪನು ಈ ರೀತಿಯಿದ್ದನು. ಕಶ್ಯಪನಿಗೂ ಶ್ರೇಷ್ಠನಾದ ಅನ್ಯ ಕ್ಷತ್ರಿಯನು ಯಾರಾದರೂ ಇದ್ದರೆ ನೀನು ಹೇಳು.”

13139009a ತೂಷ್ಣೀಂ ಬಭೂವ ನೃಪತಿಃ ಪವನಸ್ತ್ವಬ್ರವೀತ್ಪುನಃ|

13139009c ಶೃಣು ರಾಜನ್ನುತಥ್ಯಸ್ಯ ಜಾತಸ್ಯಾಂಗಿರಸೇ ಕುಲೇ||

ನೃಪತಿ ಅರ್ಜುನನು ಸುಮ್ಮನಾಗಿರಲು ಪವನನು ಪುನಃ ಹೇಳಿದನು: “ರಾಜನ್! ಆಂಗೀರಸ ಕುಲದಲ್ಲಿ ಹುಟ್ಟಿದ ಉತಥ್ಯನ ಕುರಿತು ಕೇಳು.

13139010a ಭದ್ರಾ ಸೋಮಸ್ಯ ದುಹಿತಾ ರೂಪೇಣ ಪರಮಾ ಮತಾ|

13139010c ತಸ್ಯಾಸ್ತುಲ್ಯಂ ಪತಿಂ ಸೋಮ ಉತಥ್ಯಂ ಸಮಪಶ್ಯತ||

ಭದ್ರ ಎಂಬ ಸೋಮನ ಮಗಳು ರೂಪದಲ್ಲಿ ಅತಿಶ್ರೇಷ್ಠಳೆಂದು ಖ್ಯಾತಳಾಗಿದ್ದಳು. ಅವಳಿಗೆ ಸಮನಾದ ಪತಿಯು ಉತಥ್ಯನೆಂದು ಸೋಮನು ತಿಳಿದುಕೊಂಡನು.

13139011a ಸಾ ಚ ತೀವ್ರಂ ತಪಸ್ತೇಪೇ ಮಹಾಭಾಗಾ ಯಶಸ್ವಿನೀ|

13139011c ಉತಥ್ಯಂ ತು ಮಹಾಭಾಗಂ ತತ್ಕೃತೇಽವರಯತ್ತದಾ[1]||

ಮಹಾಭಾಗೇ ಯಶಸ್ವಿನೀ ಭದ್ರೆಯಾದರೋ ಮಹಾಭಾಗ ಉತಥ್ಯನೇ ತನಗೆ ವರನಾಗಬೇಕೆಂದು ತೀವ್ರ ತಪಸ್ಸನ್ನು ತಪಿಸಿದಳು.

13139012a ತತ ಆಹೂಯ ಸೋತಥ್ಯಂ ದದಾವತ್ರ ಯಶಸ್ವಿನೀಮ್|[2]

13139012c ಭಾರ್ಯಾರ್ಥೇ ಸ ಚ ಜಗ್ರಾಹ ವಿಧಿವದ್ಭೂರಿದಕ್ಷಿಣ||

ಆಗ ಸೋಮನು ಉತಥ್ಯನನ್ನು ಆಮಂತ್ರಿಸಿ ಯಶಸ್ವಿನೀ ಭದ್ರೆಯನ್ನು ಅವನಿಗೆ ಕೊಟ್ಟನು. ಉತಥ್ಯನು ಅವಳನ್ನು ವಿಧಿವತ್ತಾಗಿ ಭೂರಿದಕ್ಷಿಣೆಗಳೊಂದಿಗೆ ಭಾರ್ಯೆಯನ್ನಾಗಿ ಸ್ವೀಕರಿಸಿದನು.

13139013a ತಾಂ ತ್ವಕಾಮಯತ ಶ್ರೀಮಾನ್ವರುಣಃ ಪೂರ್ವಮೇವ ಹ|

13139013c ಸ ಚಾಗಮ್ಯ ವನಪ್ರಸ್ಥಂ ಯಮುನಾಯಾಂ ಜಹಾರ ತಾಮ್||

ಆದರೆ ಶ್ರೀಮಾನ್ ವರುಣನು ಅವಳನ್ನು ಮೊದಲೇ ಕಾಮಿಸಿದ್ದನು. ಅವನು ವನದಲ್ಲಿದ್ದ ಮುನಿಯ ಆಶ್ರಮಕ್ಕೆ ಬಂದು ಯಮುನೆಯಲ್ಲಿ ಸ್ನಾನಮಾಡುತ್ತಿದ್ದ ಭದ್ರೆಯನ್ನು ಅಪಹರಿಸಿದನು.

13139014a ಜಲೇಶ್ವರಸ್ತು ಹೃತ್ವಾ ತಾಮನಯತ್ ಸ್ವಪುರಂ ಪ್ರತಿ|

13139014c ಪರಮಾದ್ಭುತಸಂಕಾಶಂ ಷಟ್ಸಹಸ್ರಶತಹ್ರದಮ್[3]||

ಜಲೇಶ್ವರನಾದರೋ ಅವಳನ್ನು ಅಪಹರಿಸಿಕೊಂಡು ಆರು ಸಾವಿರ ಮಿಂಚುಗಳ ಪ್ರಭೆಯಿಂದ ಹೊಳೆಯುತ್ತಿದ್ದ ಪರಮಾದ್ಭುತವಾದ ತನ್ನ ಪುರಿಗೆ ಬಂದನು.

13139015a ನ ಹಿ ರಮ್ಯತರಂ ಕಿಂ ಚಿತ್ತಸ್ಮಾದನ್ಯತ್ಪುರೋತ್ತಮಮ್|

13139015c ಪ್ರಾಸಾದೈರಪ್ಸರೋಭಿಶ್ಚ ದಿವ್ಯೈಃ ಕಾಮೈಶ್ಚ ಶೋಭಿತಮ್|

13139015e ತತ್ರ ದೇವಸ್ತಯಾ ಸಾರ್ಧಂ ರೇಮೇ ರಾಜನ್ ಜಲೇಶ್ವರಃ||

ಪ್ರಾಸಾದಗಳಿಂದಲೂ, ಅಪ್ಸರೆಯರಿಂದಲೂ, ದಿವ್ಯ ಕಾಮಗಳಿಂದಲೂ ಶೋಭಿತವಾದ ಆ ಉತ್ತಮ ಪುರಿಗಿಂತಲೂ ರಮ್ಯತರವಾದ ಬೇರೆ ಯಾವ ಪುರಿಯೂ ಇರಲಿಲ್ಲ. ರಾಜನ್! ಅಲ್ಲಿ ದೇವ ಜಲೇಶ್ವರನು ಅವಳೊಂದಿಗೆ ರಮಿಸಿದನು.

13139016a ಅಥಾಖ್ಯಾತಮುತಥ್ಯಾಯ ತತಃ ಪತ್ನ್ಯವಮರ್ದನಮ್||

13139017a ತಚ್ಚ್ರುತ್ವಾ ನಾರದಾತ್ಸರ್ವಮುತಥ್ಯೋ ನಾರದಂ ತದಾ|

13139017c ಪ್ರೋವಾಚ ಗಚ್ಚ ಬ್ರೂಹಿ ತ್ವಂ ವರುಣಂ ಪರುಷಂ ವಚಃ|

13139017e ಮದ್ವಾಕ್ಯಾನ್ಮುಂಚ ಮೇ ಭಾರ್ಯಾಂ ಕಸ್ಮಾದ್ವಾ ಹೃತವಾನಸಿ||

ಆಗ ಪತ್ನಿಯು ಭ್ರಷ್ಟಳಾದ ವಿಷಯವನ್ನು ನಾರದನು ಉತಥ್ಯನಿಗೆ ಹೇಳಿದನು. ಅದನ್ನು ಕೇಳಿದ ಉತಥ್ಯನು ನಾರದನಿಗೆ ಹೇಳಿದನು: “ನೀನು ಹೋಗಿ ವರುಣನಿಗೆ ಈ ಕಠೋರ ಮಾತನ್ನು ಹೇಳು. “ಅವಳನ್ನು ನೀನು ಏಕೆ ಅಪಹರಿಸಿದ್ದೀಯೆ? ನನ್ನ ಈ ಮಾತಿನಂತೆ ನನ್ನ ಪತ್ನಿಯನ್ನು ಬಿಡುಗಡೆಗೊಳಿಸು.

13139018a ಲೋಕಪಾಲೋಽಸಿ ಲೋಕಾನಾಂ ನ ಲೋಕಸ್ಯ ವಿಲೋಪಕಃ|

13139018c ಸೋಮೇನ ದತ್ತಾ ಭಾರ್ಯಾ ಮೇ ತ್ವಯಾ ಚಾಪಹೃತಾದ್ಯ ವೈ||

ನೀನು ಲೋಕಗಳ ಲೋಕಪಾಲಕನಾಗಿದ್ದೀಯೆ. ಲೋಕದ ವಿಲೋಪಕನಲ್ಲ. ಸೋಮನು ನೀಡಿದ ನನ್ನ ಭಾರ್ಯೆಯನ್ನು ನೀನು ಇಂದು ಅಪಹರಿಸಿದ್ದೀಯೆ!”

13139019a ಇತ್ಯುಕ್ತೋ ವಚನಾತ್ತಸ್ಯ ನಾರದೇನ ಜಲೇಶ್ವರಃ|

13139019c ಮುಂಚ ಭಾರ್ಯಾಮುತಥ್ಯಸ್ಯೇತ್ಯಥ ತಂ ವರುಣೋಽಬ್ರವೀತ್[4]|

13139019e ಮಮೈಷಾ ಸುಪ್ರಿಯಾ ಭಾರ್ಯಾ ನೈನಾಮುತ್ಸ್ರಷ್ಟುಮುತ್ಸಹೇ||

ಉತಥ್ಯನ ಮಾತನ್ನು ನಾರದನು ಜಲೇಶ್ವರನಿಗೆ ತಿಳಿಸಿ “ಉತಥ್ಯನ ಭಾರ್ಯೆಯನ್ನು ಬಿಟ್ಟುಬಿಡು!” ಎಂದು ಹೇಳಿದನು. ಆಗ ವರುಣನು ನಾರದನಿಗೆ ಹೇಳಿದನು: “ಭದ್ರೆಯು ನನ್ನ ಸುಪ್ರಿಯ ಭಾರ್ಯೆಯು. ನಾನಿವಳನ್ನು ಬಿಟ್ಟುಬಿಡಲು ಬಯಸುವುದಿಲ್ಲ.”

13139020a ಇತ್ಯುಕ್ತೋ ವರುಣೇನಾಥ ನಾರದಃ ಪ್ರಾಪ್ಯ ತಂ ಮುನಿಮ್|

13139020c ಉತಥ್ಯಮಬ್ರವೀದ್ವಾಕ್ಯಂ ನಾತಿಹೃಷ್ಟಮನಾ ಇವ||

ವರುಣನು ಹೀಗೆ ಹೇಳಲು ನಾರದನು ಮುನಿಯ ಬಳಿಸಾರಿ ಖಿನ್ನಮನಸ್ಕನಾಗಿ ಉತಥ್ಯನಿಗೆ ಹೇಳಿದನು:

13139021a ಗಲೇ ಗೃಹೀತ್ವಾ ಕ್ಷಿಪ್ತೋಽಸ್ಮಿ ವರುಣೇನ ಮಹಾಮುನೇ|

13139021c ನ ಪ್ರಯಚ್ಚತಿ ತೇ ಭಾರ್ಯಾಂ ಯತ್ತೇ ಕಾರ್ಯಂ ಕುರುಷ್ವ ತತ್||

“ಮಹಾಮುನೇ! ವರುಣನು ನನ್ನನ್ನು ಕತ್ತುಹಿಡಿದು ಹೊರಗೆ ನೂಕಿಬಿಟ್ಟನು. ಅವನು ನಿನ್ನ ಭಾರ್ಯೆಯನ್ನು ಬಿಟ್ಟುಕೊಡುವುದಿಲ್ಲ. ನೀನು ಏನು ಮಾಡಬೇಕೋ ಅದನ್ನು ಮಾಡು.”

13139022a ನಾರದಸ್ಯ ವಚಃ ಶ್ರುತ್ವಾ ಕ್ರುದ್ಧಃ ಪ್ರಾಜ್ವಲದಂಗಿರಾಃ|

13139022c ಅಪಿಬತ್ತೇಜಸಾ ವಾರಿ ವಿಷ್ಟಭ್ಯ ಸುಮಹಾತಪಾಃ||

ನಾರದನ ಮಾತನ್ನು ಕೇಳಿ ಕೃದ್ಧನಾಗಿ ಭುಗಿಲೆದ್ದ ಮಹಾತಪಸ್ವಿ ಅಂಗಿರನು ತನ್ನ ತೇಜಸ್ಸಿನಿಂದ ಜಲವನ್ನು ಸ್ತಬ್ದಗೊಳಿಸಿ ಅದನ್ನು ಕುಡಿಯತೊಡಗಿದನು.

13139023a ಪೀಯಮಾನೇ ಚ ಸರ್ವಸ್ಮಿಂಸ್ತೋಯೇ ವೈ ಸಲಿಲೇಶ್ವರಃ|

13139023c ಸುಹೃದ್ಭಿಃ ಕ್ಷಿಪ್ಯಮಾಣೋಽಪಿ ನೈವಾಮುಂಚತ ತಾಂ ತದಾ||

ಅವನು ಸರ್ವ ಜಲವನ್ನೂ ಕುಡಿಯುತ್ತಿರಲು ಸುಹೃದರು ಒತ್ತಾಯಿಸಿದರೂ ಸಲಿಲೇಶ್ವರ ವರುಣನು ಭದ್ರೆಯನ್ನು ಬಿಟ್ಟುಕೊಡಲಿಲ್ಲ.

13139024a ತತಃ ಕ್ರುದ್ಧೋಽಬ್ರವೀದ್ಭೂಮಿಮುತಥ್ಯೋ ಬ್ರಾಹ್ಮಣೋತ್ತಮಃ|

13139024c ದರ್ಶಯಸ್ವ ಸ್ಥಲಂ ಭದ್ರೇ ಷಟ್ಸಹಸ್ರಶತಹ್ರದಮ್||

ಆಗ ಕ್ರುದ್ಧನಾದ ಬ್ರಾಹ್ಮಣೋತ್ತಮ ಉತಥ್ಯನು ಭೂಮಿಗೆ “ಭದ್ರೇ! ಆರುಸಾವಿರ ಮಿಂಚುಗಳಂತೆ ಬೆಳಗುತ್ತಿರುವ ಆ ಸ್ಥಳವನ್ನು ತೋರಿಸಿಕೊಡು!” ಎಂದನು.

13139025a ತತಸ್ತದಿರಿಣಂ ಜಾತಂ ಸಮುದ್ರಶ್ಚಾಪಸರ್ಪಿತಃ|

13139025c ತಸ್ಮಾದ್ದೇಶಾನ್ನದೀಂ ಚೈವ ಪ್ರೋವಾಚಾಸೌ ದ್ವಿಜೋತ್ತಮಃ||

ಸಮುದ್ರವು ಒಣಗಿ ಹೋಗಿ ಆ ಪ್ರದೇಶವೆಲ್ಲವೂ ಊಷರಭುಮಿಯಾಗಿ ಪರಿವರ್ತಿತವಾಯಿತು. ಆ ಪ್ರದೇಶದಿಂದ ಹರಿಯುತ್ತಿದ್ದ ನದಿಗೆ ದ್ವಿಜೋತ್ತಮ ಉತಥ್ಯನು ಹೇಳಿದನು:

13139026a ಅದೃಶ್ಯಾ ಗಚ್ಚ ಭೀರು ತ್ವಂ ಸರಸ್ವತಿ ಮರುಂ ಪ್ರತಿ|

13139026c ಅಪುಣ್ಯ ಏಷ ಭವತು ದೇಶಸ್ತ್ಯಕ್ತಸ್ತ್ವಯಾ ಶುಭೇ||

“ಸರಸ್ವತಿ! ಭೀರು! ಅದೃಶ್ಯಳಾಗಿ ಮರುಭೂಮಿಯ ಕಡೆ ಹೊರಟು ಹೋಗು. ಶುಭೇ! ನೀನು ತ್ಯಜಿಸಿದ ಈ ಭೂಮಿಯು ಅಪುಣ್ಯವಾಗಲಿ!”

13139027a ತಸ್ಮಿನ್ಸಂಚೂರ್ಣಿತೇ ದೇಶೇ ಭದ್ರಾಮಾದಾಯ ವಾರಿಪಃ|

13139027c ಅದದಾಚ್ಚರಣಂ ಗತ್ವಾ ಭಾರ್ಯಾಮಾಂಗಿರಸಾಯ ವೈ||

ಹೀಗೆ ತನ್ನ ಪ್ರದೇಶವೆಲ್ಲವೂ ಒಣಗಿ ಹೋದಾಗ ವಾರಿಪ ವರುಣನು ಉತಥ್ಯನ ಭಾರ್ಯೆ ಭದ್ರೆಯನ್ನು ಕರೆತಂದು ಅವನ ಚರಣಗಳಲ್ಲಿರಿಸಿದನು.

13139028a ಪ್ರತಿಗೃಹ್ಯ ತು ತಾಂ ಭಾರ್ಯಾಮುತಥ್ಯಃ ಸುಮನಾಭವತ್|

13139028c ಮುಮೋಚ ಚ ಜಗದ್ದುಃಖಾದ್ವರುಣಂ ಚೈವ ಹೈಹಯ||

ಹೈಹಯ! ಆ ಪತ್ನಿಯನ್ನು ಸ್ವೀಕರಿಸಿ ಉತಥ್ಯನು ಸುಮನಸ್ಕನಾದನು ಮತ್ತು ಜಗತ್ತನ್ನೂ ವರುಣನನ್ನೂ ದುಃಖದಿಂದ ಮುಕ್ತಗೊಳಿಸಿದನು.

13139029a ತತಃ ಸ ಲಬ್ಧ್ವಾ ತಾಂ ಭಾರ್ಯಾಂ ವರುಣಂ ಪ್ರಾಹ ಧರ್ಮವಿತ್|

13139029c ಉತಥ್ಯಃ ಸುಮಹಾತೇಜಾ ಯತ್ತಚ್ಚೃಣು ನರಾಧಿಪ||

ನರಾಧಿಪ! ಆ ಪತ್ನಿಯನ್ನು ಪಡೆದು ಧರ್ಮವಿದು ಮಹಾತೇಜಸ್ವೀ ಉತಥ್ಯನು ವರುಣನಿಗೆ ಏನು ಹೇಳಿದನೆಂದು ಕೇಳು.

13139030a ಮಯೈಷಾ ತಪಸಾ ಪ್ರಾಪ್ತಾ ಕ್ರೋಶತಸ್ತೇ ಜಲಾಧಿಪ|

13139030c ಇತ್ಯುಕ್ತ್ವಾ ತಾಮುಪಾದಾಯ ಸ್ವಮೇವ ಭವನಂ ಯಯೌ||

“ಜಲಾಧಿಪ! ನಾನಿವಳನ್ನು ಬಿಟ್ಟುಕೊಡುವುದಿಲ್ಲ ಎಂದು ನೀನು ಕೂಗಿಕೊಳ್ಳುತ್ತಿದ್ದರೂ ನನ್ನ ಈ ತಪಸ್ಸಿನಿಂದ ಇವಳನ್ನು ಪಡೆದುಕೊಂಡೆನು.” ಹೀಗೆ ಹೇಳಿ ಅವಳನ್ನು ಕರೆದುಕೊಂಡು ಅವನು ತನ್ನ ಆಶ್ರಮಕ್ಕೆ ತೆರಳಿದನು.

13139031a ಏಷ ರಾಜನ್ನೀದೃಶೋ ವೈ ಉತಥ್ಯೋ ಬ್ರಾಹ್ಮಣರ್ಷಭಃ|

13139031c ಬ್ರವೀಮ್ಯಹಂ ಬ್ರೂಹಿ ವಾ ತ್ವಮುತಥ್ಯಾತ್ಕ್ಷತ್ರಿಯಂ ವರಮ್||

ರಾಜನ್! ಬ್ರಾಹ್ಮಣರ್ಷಭ ಉತಥ್ಯನು ಎಂತಹ ಪ್ರಭಾವಶಾಲಿಯಾಗಿದ್ದನು ಎನ್ನುವುದನ್ನು ನಾನು ನಿನಗೆ ಹೇಳಿದ್ದೇನೆ. ಇವನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನ್ಯಾರಾದರೂ ಇದ್ದರೆ ಹೇಳು.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಏಕೋನಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾಮೂವತ್ತೊಂಭತ್ತನೇ ಅಧ್ಯಾಯವು.

[1] ಉತಥ್ಯಾರ್ಥೇ ತು ಚಾರ್ವಂಗೀ ಪರಂ ನಿಯಮಮಾಸ್ಥಿತಾ| (ಗೀತಾ ಪ್ರೆಸ್).

[2] ತತ ಆಹೂಯ ಸೋತಥ್ಯಂ ದದಾವತ್ರಿರ್ಯಶಸ್ವಿನೀಮ್| (ಗೀತಾ ಪ್ರೆಸ್).

[3] There are six hundred thousand lakes. (Bibek Debroy)

[4] ಮುಂಚ ಭಾರ್ಯಾಮುತಥ್ಯಸ್ಯ ಕಸ್ಮಾತ್ತ್ವಂ ಹೃತವಾನಸಿ| ಇತಿ ಶ್ರುತ್ವಾ ವಚಸ್ತಸ್ಯ ಸೋಽಥ ತಂ ವರುಣೋಽಬ್ರವೀತ್|| (ಗೀತಾ ಪ್ರೆಸ್).

Comments are closed.