ಅನುಶಾಸನ ಪರ್ವ: ದಾನಧರ್ಮ ಪರ್ವ
೧೧೩
ಪಾಪವನ್ನು ಕಳೆದುಕೊಳ್ಳುವ ವಿಧಾನ; ಅನ್ನದಾನದ ಮಹಿಮೆ (1-28).
13113001 ಯುಧಿಷ್ಠಿರ ಉವಾಚ|
13113001a ಅಧರ್ಮಸ್ಯ ಗತಿರ್ಬ್ರಹ್ಮನ್ಕಥಿತಾ ಮೇ ತ್ವಯಾನಘ|
13113001c ಧರ್ಮಸ್ಯ ತು ಗತಿಂ ಶ್ರೋತುಮಿಚ್ಚಾಮಿ ವದತಾಂ ವರ|
13113001e ಕೃತ್ವಾ ಕರ್ಮಾಣಿ ಪಾಪಾನಿ ಕಥಂ ಯಾಂತಿ ಶುಭಾಂ ಗತಿಮ್||
ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ಅನಘ! ಮಾತನಾಡುವವರಲ್ಲಿ ಶ್ರೇಷ್ಠ! ನೀನು ನನಗೆ ಅಧರ್ಮಿಯು ಹೋಗುವ ಗತಿಯ ಕುರಿತು ಹೇಳಿದೆ. ಧರ್ಮಮಾರ್ಗದಲ್ಲಿರುವವನು ಹೋಗುವ ಗತಿಯ ಕುರಿತು ಕೇಳ ಬಯಸುತ್ತೇನೆ. ಪಾಪ ಕರ್ಮಗಳನ್ನು ಮಾಡಿದವನು ಹೇಗೆ ಶುಭ ಗತಿಯನ್ನು ಪಡೆಯಬಹುದು?”
13113002 ಬೃಹಸ್ಪತಿರುವಾಚ|
13113002a ಕೃತ್ವಾ ಪಾಪಾನಿ ಕರ್ಮಾಣಿ ಅಧರ್ಮವಶಮಾಗತಃ|
13113002c ಮನಸಾ ವಿಪರೀತೇನ ನಿರಯಂ ಪ್ರತಿಪದ್ಯತೇ||
ಬೃಹಸ್ಪತಿಯು ಹೇಳಿದನು: “ಪಾಪಕರ್ಮಗಳನ್ನು ಮಾಡಿ ಅಧರ್ಮವಶನಾಗಿ ವಿಪರೀತ ಮನಸ್ಸುಳ್ಳವನಾಗಿ ಮನುಷ್ಯನು ನರಕಕ್ಕೆ ಹೋಗುತ್ತಾನೆ.
13113003a ಮೋಹಾದಧರ್ಮಂ ಯಃ ಕೃತ್ವಾ ಪುನಃ ಸಮನುತಪ್ಯತೇ|
13113003c ಮನಃಸಮಾಧಿಸಂಯುಕ್ತೋ ನ ಸ ಸೇವೇತ ದುಷ್ಕೃತಮ್||
ಮೋಹದಿಂದ ಅಧರ್ಮವನ್ನೆಸಗಿ ಅದರ ಕುರಿತು ಪಶ್ಚಾತ್ತಾಪ ಪಡುವ ಮನಃಸಮಾಧಿಸಂಯುಕ್ತನು ಪುನಃ ದುಷ್ಕೃತಗಳನ್ನು ಮಾಡುವುದಿಲ್ಲ.
[1]13113004a ಯಥಾ ಯಥಾ ನರಃ ಸಮ್ಯಗಧರ್ಮಮನುಭಾಷತೇ|
13113004c ಸಮಾಹಿತೇನ ಮನಸಾ ವಿಮುಚ್ಯತಿ ತಥಾ ತಥಾ|
13113004e ಭುಜಂಗ ಇವ ನಿರ್ಮೋಕಾತ್ಪೂರ್ವಭುಕ್ತಾಜ್ಜರಾನ್ವಿತಾತ್||
ಮನುಷ್ಯನು ಹೇಗೆ ಹೇಗೆ ಸಮಾಹಿತ ಮನಸ್ಸಿನಿಂದ ಅಧರ್ಮವನ್ನು ನಿಂದಿಸಿ ಪಶ್ಚಾತ್ತಾಪಪಡುತ್ತಾನೋ ಹಾಗೆ ಪೊರೆಯನ್ನು ಕಳಚಿದ ಸರ್ಪದಂತೆ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.
13113005a ಅದತ್ತ್ವಾಪಿ ಪ್ರದಾನಾನಿ[2] ವಿವಿಧಾನಿ ಸಮಾಹಿತಃ|
13113005c ಮನಃಸಮಾಧಿಸಂಯುಕ್ತಃ ಸುಗತಿಂ ಪ್ರತಿಪದ್ಯತೇ||
ಮನಃ ಸಮಾಧಿಸಂಯುಕ್ತನಾಗಿ ಸಮಾಹಿತನಾಗಿ ವಿವಿಧ ದಾನಗಳನ್ನು ಕೊಡುವುದರಿಂದಲೂ ಉತ್ತಮ ಗತಿಯನ್ನು ಪಡೆದುಕೊಳ್ಳುತ್ತಾನೆ.
13113006a ಪ್ರದಾನಾನಿ ತು ವಕ್ಷ್ಯಾಮಿ ಯಾನಿ ದತ್ತ್ವಾ ಯುಧಿಷ್ಠಿರ|
13113006c ನರಃ ಕೃತ್ವಾಪ್ಯಕಾರ್ಯಾಣಿ ತದಾ ಧರ್ಮೇಣ ಯುಜ್ಯತೇ||
ಯುಧಿಷ್ಠಿರ! ಯಾವ ದಾನಗಳನ್ನಿತ್ತು ನರನು ಯಾವುದೇ ಅಕಾರ್ಯಗಳನ್ನು ಮಾಡಿದ್ದರೂ ಧರ್ಮವನ್ನು ಪಡೆದುಕೊಳ್ಳುತ್ತಾನೆ ಎನ್ನುವುದನ್ನು ಹೇಳುತ್ತೇನೆ.
13113007a ಸರ್ವೇಷಾಮೇವ ದಾನಾನಾಮನ್ನಂ ಶ್ರೇಷ್ಠಮುದಾಹೃತಮ್|
13113007c ಪೂರ್ವಮನ್ನಂ ಪ್ರದಾತವ್ಯಮೃಜುನಾ ಧರ್ಮಮಿಚ್ಚತಾ||
ಎಲ್ಲ ದಾನಗಳಿಗಿಂತಲೂ ಅನ್ನದಾನವೇ ಶ್ರೇಷ್ಠವೆಂದು ಹೇಳುತ್ತಾರೆ. ಆದುದರಿಂದ ಧರ್ಮವನ್ನಿಚ್ಛಿಸುವ ಸರಳಬುದ್ಧಿಯು ಮೊದಲು ಅನ್ನದಾನ ಮಾಡಬೇಕು.
13113008a ಪ್ರಾಣಾ ಹ್ಯನ್ನಂ ಮನುಷ್ಯಾಣಾಂ ತಸ್ಮಾಜ್ಜಂತುಶ್ಚ ಜಾಯತೇ|
13113008c ಅನ್ನೇ ಪ್ರತಿಷ್ಠಿತಾ ಲೋಕಾಸ್ತಸ್ಮಾದನ್ನಂ ಪ್ರಕಾಶತೇ||
ಮನುಷ್ಯರಿಗೆ ಅನ್ನವೇ ಪ್ರಾಣಸ್ವರೂಪವಾಗಿದೆ. ಪ್ರಾಣಿಗಳು ಹುಟ್ಟುವುದೂ ಅನ್ನದಿಂದಲೇ. ಲೋಕಗಳು ಅನ್ನದ ಮೇಲೆಯೇ ಪ್ರತಿಷ್ಠಿತಗೊಂಡಿವೆ. ಆದುದರಿಂದ ಅನ್ನವು ಪ್ರಕಾಶಿಸುತ್ತದೆ.
13113009a ಅನ್ನಮೇವ ಪ್ರಶಂಸಂತಿ ದೇವರ್ಷಿಪಿತೃಮಾನವಾಃ|
13113009c ಅನ್ನಸ್ಯ ಹಿ ಪ್ರದಾನೇನ ಸ್ವರ್ಗಮಾಪ್ನೋತಿ ಕೌಶಿಕಃ[3]||
ದೇವ-ಋಷಿ-ಪಿತೃ-ಮಾನವರು ಅನ್ನವನ್ನೇ ಪ್ರಶಂಸಿಸುತ್ತಾರೆ. ಅನ್ನದಾನ ಮಾಡಿಯೇ ಕೌಶಿಕನು ಸ್ವರ್ಗವನ್ನು ಪಡೆದುಕೊಂಡನು.
13113010a ನ್ಯಾಯಲಬ್ಧಂ ಪ್ರದಾತವ್ಯಂ ದ್ವಿಜೇಭ್ಯೋ ಹ್ಯನ್ನಮುತ್ತಮಮ್|
13113010c ಸ್ವಾಧ್ಯಾಯಸಮುಪೇತೇಭ್ಯಃ ಪ್ರಹೃಷ್ಟೇನಾಂತರಾತ್ಮನಾ||
ನ್ಯಾಯವಾಗಿ ಸಂಪಾದಿಸಿದ ಉತ್ತಮ ಅನ್ನವನ್ನು ಅಂತರಾತ್ಮದಲ್ಲಿ ಪ್ರಹೃಷ್ಟರಾದ ಸ್ವಾಧ್ಯಾಯನಿರತ ದ್ವಿಜರಿಗೆ ದಾನಮಾಡಬೇಕು.
13113011a ಯಸ್ಯ ಹ್ಯನ್ನಮುಪಾಶ್ನಂತಿ ಬ್ರಾಹ್ಮಣಾನಾಂ ಶತಾ ದಶ|
13113011c ಹೃಷ್ಟೇನ ಮನಸಾ ದತ್ತಂ ನ ಸ ತಿರ್ಯಗ್ಗತಿರ್ಭವೇತ್||
ಹೃಷ್ಟ ಮನಸ್ಸಿನಿಂದ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನವನ್ನು ನೀಡುವವನು ತಿರ್ಯಗ್ಯೋನಿಗಳಲ್ಲಿ ಜನ್ಮತಾಳಬೇಕಾಗುವುದಿಲ್ಲ.
13113012a ಬ್ರಾಹ್ಮಣಾನಾಂ ಸಹಸ್ರಾಣಿ ದಶ ಭೋಜ್ಯ ನರರ್ಷಭ|
13113012c ನರೋಽಧರ್ಮಾತ್ ಪ್ರಮುಚ್ಯೇತ ಪಾಪೇಷ್ವಭಿರತಃ ಸದಾ[4]||
ನರರ್ಷಭ! ಪಾಪಗಳಲ್ಲಿ ನಿರತನಾಗಿರುವ ನರನು ಹತ್ತು ಸಾವಿರ ಬ್ರಾಹ್ಮಣರಿಗೆ ಭೋಜನ ಮಾಡಿಸಿದರೆ ಅಧರ್ಮದಿಂದ ಮುಕ್ತನಾಗುತ್ತಾನೆ.
13113013a ಭೈಕ್ಷೇಣಾನ್ನಂ ಸಮಾಹೃತ್ಯ ವಿಪ್ರೋ ವೇದಪುರಸ್ಕೃತಃ|
13113013c ಸ್ವಾಧ್ಯಾಯನಿರತೇ ವಿಪ್ರೇ ದತ್ತ್ವೇಹ ಸುಖಮೇಧತೇ||
ವೇದವನ್ನು ಹೇಳಿಕೊಂಡು ಭಿಕ್ಷಾಟನೆಯನ್ನು ಮಾಡಿ ಅನ್ನವನ್ನು ಸಂಗ್ರಹಿಸಿ ಅದನ್ನು ಸ್ವಾಧ್ಯಾಯನಿರತ ಬ್ರಾಹ್ಮಣನಿಗೆ ಭೋಜನ ಮಾಡಿಸಿದರೆ ಅವನು ಈ ಲೋಕದಲ್ಲಿ ಸುಖವಾಗಿರುತ್ತಾನೆ.
13113014a ಅಹಿಂಸನ್ ಬ್ರಾಹ್ಮಣಂ ನಿತ್ಯಂ ನ್ಯಾಯೇನ ಪರಿಪಾಲ್ಯ ಚ|
13113014c ಕ್ಷತ್ರಿಯಸ್ತರಸಾ ಪ್ರಾಪ್ತಮನ್ನಂ ಯೋ ವೈ ಪ್ರಯಚ್ಚತಿ||
13113015a ದ್ವಿಜೇಭ್ಯೋ ವೇದವೃದ್ಧೇಭ್ಯಃ ಪ್ರಯತಃ ಸುಸಮಾಹಿತಃ|
13113015c ತೇನಾಪೋಹತಿ ಧರ್ಮಾತ್ಮಾ ದುಷ್ಕೃತಂ ಕರ್ಮ ಪಾಂಡವ||
ಪಾಂಡವ! ಬ್ರಾಹ್ಮಣರನ್ನು ಹಿಂಸಿಸದೆಯೇ, ನಿತ್ಯವೂ ನ್ಯಾಯದಿಂದ ಪರಿಪಾಲಿಸಿಕೊಂಡು ಸಂಗ್ರಹಿಸಿದ ಅನ್ನವನ್ನು ಪ್ರಯತ್ನಪಟ್ಟು ಸುಸಮಾಹಿತನಾಗಿ ದ್ವಿಜರಿಗೂ ವೇದವೃದ್ಧರಿಗೂ ನೀಡುವ ಧರ್ಮಾತ್ಮಾ ಕ್ಷತ್ರಿಯನು ಮಾಡಿದ ದುಷ್ಕೃತಕರ್ಮಗಳೆಲ್ಲವನ್ನೂ ಕಳೆದುಕೊಳ್ಳುತ್ತಾನೆ.
13113016a ಷಡ್ಭಾಗಪರಿಶುದ್ಧಂ ಚ ಕೃಷೇರ್ಭಾಗಮುಪಾರ್ಜಿತಮ್|
13113016c ವೈಶ್ಯೋ ದದದ್ದ್ವಿಜಾತಿಭ್ಯಃ ಪಾಪೇಭ್ಯಃ ಪರಿಮುಚ್ಯತೇ||
ಕೃಷಿಯ ಆದಾಯದ ಪರಿಶುದ್ಧ ಆರನೇ ಒಂದು ಭಾಗವನ್ನು ದ್ವಿಜರಿಗೆ ನೀಡುವ ವೈಶ್ಯನು ಪಾಪಗಳಿಂದ ಮುಕ್ತನಾಗುತ್ತಾನೆ.
13113017a ಅವಾಪ್ಯ ಪ್ರಾಣಸಂದೇಹಂ ಕಾರ್ಕಶ್ಯೇನ ಸಮಾರ್ಜಿತಮ್|
13113017c ಅನ್ನಂ ದತ್ತ್ವಾ ದ್ವಿಜಾತಿಭ್ಯಃ ಶೂದ್ರಃ ಪಾಪಾತ್ ಪ್ರಮುಚ್ಯತೇ||
ಪ್ರಾಣವನ್ನು ಮುಡುಪಾಗಿಟ್ಟು ಕಾರ್ಕಶ್ಯದಿಂದ ಉತ್ತಮವಾಗಿ ಗಳಿಸಿದ ಅನ್ನವನ್ನು ದ್ವಿಜಾತಿಯರಿಗಿತ್ತ ಶೂದ್ರನು ಪಾಪಗಳಿಂದ ಮುಕ್ತನಾಗುತ್ತಾನೆ.
13113018a ಔರಸೇನ ಬಲೇನಾನ್ನಮರ್ಜಯಿತ್ವಾವಿಹಿಂಸಕಃ|
13113018c ಯಃ ಪ್ರಯಚ್ಚತಿ ವಿಪ್ರೇಭ್ಯೋ ನ ಸ ದುರ್ಗಾಣಿ ಸೇವತೇ||
ಅಹಿಂಸಕನಾಗಿ ತನ್ನದೇ ಬಲದಿಂದ ಶುದ್ಧ ಅನ್ನವನ್ನು ಸಂಪಾದಿಸಿ ಬ್ರಾಹ್ಮಣರಿಗೆ ದಾನಮಾಡುವವನು ನರಕಗಳನ್ನು ಅನುಭವಿಸುವುದಿಲ್ಲ.
13113019a ನ್ಯಾಯೇನಾವಾಪ್ತಮನ್ನಂ ತು ನರೋ ಲೋಭವಿವರ್ಜಿತಃ|
13113019c ದ್ವಿಜೇಭ್ಯೋ ವೇದವೃದ್ಧೇಭ್ಯೋ ದತ್ತ್ವಾ ಪಾಪಾತ್ಪ್ರಮುಚ್ಯತೇ||
ನ್ಯಾಯಪೂರ್ವಕವಾಗಿ ಗಳಿಸಿದ ಅನ್ನವನ್ನು ಲೋಭವರ್ಜಿತ ನರನು ದ್ವಿಜರಿಗೂ ವೇದವೃದ್ಧರಿಗೂ ನೀಡಿ ಪಾಪಗಳಿಂದ ಮುಕ್ತನಾಗುತ್ತಾನೆ.
13113020a ಅನ್ನಮೂರ್ಜಸ್ಕರಂ ಲೋಕೇ ದತ್ತ್ವೋರ್ಜಸ್ವೀ ಭವೇನ್ನರಃ|
13113020c ಸತಾಂ ಪಂಥಾನಮಾಶ್ರಿತ್ಯ ಸರ್ವಪಾಪಾತ್ಪ್ರಮುಚ್ಯತೇ||
ಅನ್ನವು ಲೋಕದಲ್ಲಿ ಬಲವನ್ನು ಹೆಚ್ಚಿಸುತ್ತದೆ. ಆದುದರಿಂದ ಅನ್ನವನ್ನು ನೀಡಿದ ನರನು ಬಲಶಾಲಿಯಾಗುತ್ತಾನೆ. ಸತ್ಪುರುಷರ ಮಾರ್ಗವನ್ನು ಆಶ್ರಯಿಸಿ ಅವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
13113021a ದಾನಕೃದ್ಭಿಃ ಕೃತಃ ಪಂಥಾ ಯೇನ ಯಾಂತಿ ಮನೀಷಿಣಃ|
13113021c ತೇ ಸ್ಮ ಪ್ರಾಣಸ್ಯ ದಾತಾರಸ್ತೇಭ್ಯೋ ಧರ್ಮಃ ಸನಾತನಃ||
ದಾನಿಗಳು ಮಾಡಿಕೊಟ್ಟ ಮಾರ್ಗವನ್ನೇ ಮನೀಷಿಣರೂ ಅನುಸರಿಸುತ್ತಾರೆ. ಅನ್ನದಾನಿಗಳು ಪ್ರಾಣವನ್ನೇ ನೀಡುವವರು. ಅವರ ಧರ್ಮವು ಸನಾತನವಾದುದು.
13113022a ಸರ್ವಾವಸ್ಥಂ ಮನುಷ್ಯೇಣ ನ್ಯಾಯೇನಾನ್ನಮುಪಾರ್ಜಿತಮ್|
13113022c ಕಾರ್ಯಂ ಪಾತ್ರಗತಂ ನಿತ್ಯಮನ್ನಂ ಹಿ ಪರಮಾ ಗತಿಃ||
ಸರ್ವಾವಸ್ಥೆಗಳಲ್ಲಿಯೂ ನ್ಯಾಯದಿಂದ ಸಂಪಾದಿಸಿದ ಅನ್ನವನ್ನು ಮನುಷ್ಯನು ಸತ್ಪಾತ್ರರಲ್ಲಿ ದಾನಮಾಡಬೇಕು. ನಿತ್ಯವೂ ಅನ್ನವೇ ಪರಮ ಗತಿಯು.
13113023a ಅನ್ನಸ್ಯ ಹಿ ಪ್ರದಾನೇನ ನರೋ ದುರ್ಗಂ ನ ಸೇವತೇ|
13113023c ತಸ್ಮಾದನ್ನಂ ಪ್ರದಾತವ್ಯಮನ್ಯಾಯಪರಿವರ್ಜಿತಮ್||
ಅನ್ನದಾನದಿಂದ ನರನು ನರಕಕ್ಕೆ ಹೋಗುವುದಿಲ್ಲ. ಆದುದರಿಂದ ಅನ್ಯಾಯವನ್ನು ತೊರೆದು ಅನ್ನವನ್ನು ದಾನಮಾಡಬೇಕು.
13113024a ಯತೇದ್ಬ್ರಾಹ್ಮಣಪೂರ್ವಂ ಹಿ ಭೋಕ್ತುಮನ್ನಂ ಗೃಹೀ ಸದಾ|
13113024c ಅವಂಧ್ಯಂ ದಿವಸಂ ಕುರ್ಯಾದನ್ನದಾನೇನ ಮಾನವಃ||
ಗೃಹಸ್ಥನಾದವನು ಸದಾ ಮೊದಲು ಬ್ರಾಹ್ಮಣನಿಗೆ ಊಟಮಾಡಿಸಿ ನಂತರ ತಾನು ಊಟಮಾಡಲು ಪ್ರಯತ್ನಿಸಬೇಕು. ಅನ್ನದಾನದಿಂದ ಮಾನವನು ಆ ದಿನವನ್ನು ವ್ಯರ್ಥವಾಗದಂತೆ ಮಾಡಬೇಕು.
13113025a ಭೋಜಯಿತ್ವಾ ದಶಶತಂ ನರೋ ವೇದವಿದಾಂ ನೃಪ|
13113025c ನ್ಯಾಯವಿದ್ಧರ್ಮವಿದುಷಾಮಿತಿಹಾಸವಿದಾಂ ತಥಾ||
13113026a ನ ಯಾತಿ ನರಕಂ ಘೋರಂ ಸಂಸಾರಾಂಶ್ಚ ನ ಸೇವತೇ|
13113026c ಸರ್ವಕಾಮಸಮಾಯುಕ್ತಃ ಪ್ರೇತ್ಯ ಚಾಪ್ಯಶ್ನುತೇ ಫಲಮ್||
ನೃಪ! ವೇದವಿದರಾದ, ನ್ಯಾಯವಿದುಗಳಾದ, ಧರ್ಮವಿದುಷರೂ ಇತಿಹಾಸವಿದುಗಳೂ ಆದ ಒಂದು ಸಾವಿರ ಬ್ರಾಹ್ಮಣರಿಗೆ ಭೋಜನ ಮಾಡಿಸಿದ ನರನು ನರಕಕ್ಕೆ ಹೋಗುವುದಿಲ್ಲ, ಘೋರ ಸಂಸಾರಚಕ್ರದಲ್ಲಿ ಬೀಳುವುದಿಲ್ಲ ಮತ್ತು ಸರ್ವಕಾಮಸಮಾಯುಕ್ತನಾಗಿ ಮರಣಾನಂತರ ಫಲವನ್ನು ಪಡೆಯುತ್ತಾನೆ.
13113027a ಏವಂ ಸುಖಸಮಾಯುಕ್ತೋ ರಮತೇ ವಿಗತಜ್ವರಃ|
13113027c ರೂಪವಾನ್ಕೀರ್ತಿಮಾಂಶ್ಚೈವ ಧನವಾಂಶ್ಚೋಪಪದ್ಯತೇ||
ಹೀಗೆ ಸುಖಸಮಾಯುಕ್ತನಾಗಿ ವಿಗತಜ್ವರನಾಗಿ ರೂಪವಾನನೂ ಕೀರ್ತಿವಂತನೂ ಮತ್ತು ಧನವಂತನೂ ಆಗಿ ರಮಿಸುತ್ತಾನೆ.
13113028a ಏತತ್ತೇ ಸರ್ವಮಾಖ್ಯಾತಮನ್ನದಾನಫಲಂ ಮಹತ್|
13113028c ಮೂಲಮೇತದ್ಧಿ ಧರ್ಮಾಣಾಂ ಪ್ರದಾನಸ್ಯ ಚ ಭಾರತ||
ಭಾರತ! ಇದೋ ನಾನು ಅನ್ನದಾನದ ಮಹಾ ಫಲದ ಕುರಿತು ಎಲ್ಲವನ್ನೂ ಹೇಳಿದ್ದೇನೆ. ದಾನವು ಎಲ್ಲ ಧರ್ಮಗಳ ಮೂಲವೆಂದು ತಿಳಿ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸಂಸಾರಚಕ್ರಂ ನಾಮ ತ್ರಯೋದಶಾಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸಂಸಾರಚಕ್ರ ಎನ್ನುವ ನೂರಾಹದಿಮೂರನೇ ಅಧ್ಯಾಯವು.
[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಯಥಾ ಯಥಾ ಮನಸ್ತಸ್ಯ ದುಷ್ಕೃತಂ ಕರ್ಮ ಗರ್ಹತೇ| ತಥಾ ತಥಾ ಶರೀರಂ ತು ತೇನಾಧರ್ಮೇಣ ಮುಚ್ಯತೇ|| (ಭಾರತ ದರ್ಶನ).
[2] ದತ್ತ್ವಾ ವಿಪ್ರಸ್ಯ ದಾನಾನಿ (ಭಾರತ ದರ್ಶನ).
[3] ರಂತಿದೇವೋ ದಿವಂ ಗತಃ| (ಭಾರತ ದರ್ಶನ).
[4] ಯೋಗೇಷ್ವಭಿರತಃ ಸದಾ| (ಭಾರತ ದರ್ಶನ).