ಶಮ್ಯಾಕ ಗೀತೆಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky

ತ್ಯಾಗದ ಮಹತ್ವವನ್ನು ತಿಳಿಸುವ ಈ ಶಮ್ಯಾಕಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 170ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಧನಿಕ ಮತ್ತು ನಿರ್ಧನಿಕ ಇಬ್ಬರೂ ಸ್ವತಂತ್ರತಾಪೂರ್ವಕ ವ್ಯವಹರಿಸಿದರೆ ಅವರಿಗೆ ಯಾವ ರೂಪದಲ್ಲಿ ಮತ್ತು ಹೇಗೆ ಸುಖದುಃಖಗಳುಂಟಾಗುತ್ತವೆ?”

ಭೀಷ್ಮನು ಹೇಳಿದನು:

“ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶಾಂತಿಯನ್ನು ಪಡೆದುಕೊಂಡು ವಿಮುಕ್ತನಾದ ಶಮ್ಯಾಕನ ಗೀತೆಯನ್ನು ಉದಾಹರಿಸುತ್ತಾರೆ.

***

ಹಿಂದೊಮ್ಮೆ ಕುಪತ್ನಿ ಮತ್ತು ಹಸಿವೆಯಿಂದ ಅತ್ಯಂತ ಕಷ್ಟವನ್ನು ಅನುಭವಿಸುತ್ತಿದ್ದ, ಹಳೆಯ ಹರಿದ ವಸ್ತ್ರಗಳನ್ನುಟ್ಟಿದ್ದ ತ್ಯಾಗೀ ಬ್ರಾಹ್ಮಣನೋರ್ವನು ನನ್ನ ಬಳಿಬಂದು ಹೇಳಿದನು:

“ಈ ಲೋಕದಲ್ಲಿ ಹುಟ್ಟಿದ ಮನುಷ್ಯನಿಗೆ ಹುಟ್ಟಿದಾಗಿನಿಂದ ವಿವಿಧ ಸುಖ ದುಃಖಗಳು ಒಂದರ ನಂತರ ಇನ್ನೊಂದು ಪ್ರಾಪ್ತವಾಗುತ್ತಲೇ ಇರುತ್ತವೆ. ಒಂದು ವೇಳೆ ವಿಧಾತನು ಅವರನ್ನು ಒಂದೇ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದರೆ ಕೇವಲ ಸುಖವನ್ನು ಪಡೆದವನು ಹರ್ಷಿತನಾಗುತ್ತಿರಲಿಲ್ಲ ಮತ್ತು ಕೇವಲ ದುಃಖವನ್ನು ಪಡೆದವನು ಪರಿತಪಿಸುತ್ತಿರಲಿಲ್ಲ. ನೀನು ಕಾಮನಾರಹಿತನಾಗಿದ್ದರೂ ಆತ್ಮಕಲ್ಯಾಣ ಸಾಧಕ ಕಾರ್ಯಗಳನ್ನು ಮಾಡುತ್ತಿಲ್ಲ ಮತ್ತು ನಿನ್ನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಿಲ್ಲ. ಏಕೆಂದರೆ ನೀನು ರಾಜ್ಯಭಾರದ ಸಂಪೂರ್ಣ ಹೊಣೆಯನ್ನು ಹೊತ್ತಿಕೊಂಡಿರುವೆ. ನಿನ್ನಲ್ಲಿರುವ ಎಲ್ಲವನ್ನೂ ತ್ಯಜಿಸಿ ಅಕಿಂಚನನಾದರೆ ನೀನು ನಿಶ್ಚಿಂತೆಯಿಂದ ಎಲ್ಲಕಡೆ ತಿರುಗುತ್ತಾ ಸುಖವನ್ನು ಅನುಭವಿಸುತ್ತೀಯೆ. ಅಕಿಂಚನನ ಬಳಿ ಏನೂ ಇರುವುದಿಲ್ಲದಿರುವುದರಿಂದಲೇ ಅವನು ಸುಖವಾಗಿ ನಿದ್ರಿಸುತ್ತಾನೆ ಮತ್ತು ಸುಖವಾಗಿ ಎಚ್ಚರಗೊಳ್ಳುತ್ತಾನೆ. ಲೋಕದಲ್ಲಿ ಏನೂ ಇಲ್ಲದೇ ಇರುವುದು ಸುಖಕರವಾದುದು, ಹಿತಕರವಾದುದು ಮತ್ತು ಕಲ್ಯಾಣಕರವಾದುದು. ಇದು ಶತ್ರುಗಳಿಲ್ಲದಿರುವಂಥಹುದು. ಇದು ದುರ್ಲಭವಾದುದು ಮತ್ತು ಸತ್ಪುರುಷರಿಗೇ ಸಾಧ್ಯವಾಗುವಂಥಹುದು. ಮೂರು ಲೋಕಗಳಲ್ಲಿ ನೋಡಿದರೂ ನಾನು ಶುದ್ಧ, ವೈರಾಗ್ಯ ಸಂಪನ್ನ ಅಕಿಂಚನನ ಸಮಾನ ಪುರುಷನನ್ನು ಇದೂವರೆಗೂ ಕಂಡಿಲ್ಲ. ಅಕಿಂಚನನನ್ನೂ ರಾಜ್ಯವನ್ನೂ ತಕ್ಕಡಿಯಲ್ಲಿಟ್ಟು ತೂಗಿದರೆ ರಾಜ್ಯಕ್ಕಿಂತ ಅಕಿಂಚನನ ಭಾರವೇ ಹೆಚ್ಚಾಗಿರುತ್ತದೆ. ಅಕಿಂಚನನಿಗೂ ರಾಜ್ಯಕ್ಕೂ ಇರುವ ವಿಶೇಷವಾದ ಒಂದು ಅಂತರವೆಂದರೆ – ಧನವಂತನು ಮೃತ್ಯುವಿನ ಬಾಯಲ್ಲಿ ಬಿದ್ದವನಂತೆ ಸದಾ ಉದ್ವಿಗ್ನನಾಗಿಯೇ ಇರುತ್ತಾನೆ. ಆದರೆ ಧನವನ್ನು ತ್ಯಜಿಸಿ ಧನಸಂಗ್ರಹಣೆಯ ಆಸಕ್ತಿಯಿಂದ ವಿಮುಕ್ತನಾಗಿರುವ ಮತ್ತು ಮನಸ್ಸಿನಲ್ಲಿ ಯಾವವಿಧದ ಕಾಮನೆಗಳನ್ನೂ ಇಟ್ಟುಕೊಂಡಿರದವನಿಗೆ ಅಗ್ನಿಯಿಂದಲೂ ಭಯವಿಲ್ಲ, ಅಶುಭಗಳೂ ಇಲ್ಲ, ಮೃತ್ಯುವಿನ ಭಯವೂ ಇಲ್ಲ ಮತ್ತು ಕಳ್ಳರ ಭಯವೂ ಇಲ್ಲ. ಸ್ವೇಚ್ಛೆಯಿಂದ ಸಂಚರಿಸುತ್ತಿರುವ, ಹಾಸಲು ಯಾವುದೇ ಹಚ್ಚಡವಾಗಲೀ ಹೊದೆಯಲು ಹೊದಿಕೆಯಾಗಲೀ ಇಲ್ಲದೇ ತೋಳುಗಳನ್ನೇ ತಲೆದಿಂಬನ್ನಾಗಿಟ್ಟುಕೊಂಡು ನೆಲದ ಮೇಲೆ ಮಲಗುವ ಶಾಂತಸ್ವಭಾವದ ಮನುಷ್ಯನನ್ನು ದೇವತೆಗಳೂ ಪ್ರಶಂಸಿಸುತ್ತಾರೆ.

ಧನವಂತನು ಕ್ರೋಧ-ಲೋಭಗಳಿಂದ ಆವಿಷ್ಟನಾಗಿ ಬುದ್ಧಿಗೆಟ್ಟಿರುತ್ತಾನೆ. ಯಾವಾಗಲೂ ಕುಟಿಲದೃಷ್ಟಿಯಿಂದಲೇ ಇತರರನ್ನು ನೋಡುತ್ತಿರುತ್ತಾನೆ ಮತ್ತು ಅವನ ಮುಖವು ಯಾವಾಗಲೂ ಬಾಡಿಯೇ ಇರುತ್ತದೆ. ಪಾಪಕಾರ್ಯಗಳಲ್ಲಿ ಮಗ್ನನಾದ ಅವನು ಹುಬ್ಬುಗಳನ್ನು ಗಂಟಿಕ್ಕಿಕೊಂಡಿರುತ್ತಾನೆ. ಕ್ರುದ್ಧನಾದ ಅಂತಹ ಧನವಂತನು ಯಾವಾಗಲೂ ಕೆಳತುಟಿಯನ್ನು ಕಡಿಯುತ್ತಿರುತ್ತಾನೆ. ಕಠೋರವಾಗಿ ಮಾತನಾಡುತ್ತಾನೆ. ಅಂಥವನು ಇಡೀ ಭೂಮಿಯನ್ನೇ ದಾನವಾಗಿ ಕೊಡಲು ಬಂದರೂ ಯಾರು ತಾನೇ ಅವನನ್ನು ನೋಡಲು ಇಚ್ಛಿಸುತ್ತಾರೆ?

ಧನಸಂಪತ್ತಿಯ ನಿರಂತರ ಸಹವಾಸವು ಮೂರ್ಖನನ್ನು ಮೋಹಗೊಳಿಸುತ್ತದೆ. ಗಾಳಿಯು ಶರತ್ಕಾಲದ ಮೇಘಗಳನ್ನು ಚದುರಿಸಿಕೊಂಡು ಹೋಗುವಂತೆ ಅಪಾರ ಸಂಪತ್ತಿಯು ಮೂರ್ಖನ ಬುದ್ಧಿಯನ್ನು ಅಪಹರಿಸಿಬಿಡುತ್ತದೆ. ಆಗ ಅವನನ್ನು ರೂಪ ಮತ್ತು ಧನದ ಅಭಿಮಾನಗಳು ಆವರಿಸುತ್ತವೆ. ಉತ್ತಮ ಕುಲದಲ್ಲಿ ಹುಟ್ಟಿದ್ದೇನೆ, ಸಾಧಿಸಿದವನಾಗಿದ್ದೇನೆ, ಮತ್ತು ನಾನು ಸಾಧಾರಣ ಮನುಷ್ಯನಲ್ಲ ಎಂಬ ಈ ಮೂರು ಕಾರಣಗಳಿಂದ ಅವನ ಮನಸ್ಸು ಎಚ್ಚರತಪ್ಪುತ್ತದೆ. ಭೋಗಾಸಕ್ತನಾಗಿ ದುಂದುವೆಚ್ಚಮಾಡುತ್ತಾ ಪಿತ್ರಾರ್ಜಿತ ಸಂಪತ್ತನ್ನು ಕಳೆದುಕೊಂಡು ದರಿದ್ರನಾಗಿ ಇತರರ ಸ್ವತ್ತನ್ನು ಅಪಹರಿಸುವುದೇ ಯೋಗ್ಯವೆಂದು ಭಾವಿಸುತ್ತಾನೆ. ಹೀಗೆ ಲೋಕಮರ್ಯಾದೆಯನ್ನೂ ಅತಿಕ್ರಮಿಸಿ ಅಲ್ಲಲ್ಲಿ ಕಳ್ಳತನ ಮಾಡಿ ಧನಸಂಪಾದನೆಯನ್ನು ಪ್ರಾರಂಭಿಸುವ ಮನುಷ್ಯನನ್ನು ಬೇಡರು ಜಿಂಕೆಯನ್ನು ಬಾಣಗಳಿಂದ ಪ್ರಹರಿಸುವಂತೆ ರಾಜರು ದಂಡನೆಗಳಿಂದ ತಡೆಯುತ್ತಾರೆ. ಹೀಗೆ ಮನಸ್ಸಿಗೆ ಪರಿತಾಪವನ್ನುಂಟುಮಾಡುವ ಮತ್ತು ಶರೀರಕ್ಕೂ ಘಾಸಿಯಾಗುವಂತೆ ಮಾಡುವ ವಿವಿಧ ದುಃಖಗಳು ಮನುಷ್ಯನಿಗಾಗುತ್ತವೆ. ಅನಿತ್ಯವಾದ ಶರೀರದೊಡನೆ ಸೇರಿಬಂದಿರುವ ಆ ಪರಮದುಃಖಗಳಿಗೆ ಲೋಕಧರ್ಮವನ್ನು ತಿಳಿದುಕೊಂಡು ಬುದ್ಧಿಯ ಮೂಲಕ ಶಾಶ್ವತ ಚಿಕಿತ್ಸೆಯನ್ನು ನಡೆಸಬೇಕು. ತ್ಯಾಗಮಾಡದೇ ಸುಖವನ್ನು ಹೊಂದುವುದಿಲ್ಲ. ತ್ಯಾಗಮಾಡದೇ ಪರಮ ಪದವನ್ನು ಪಡೆಯುವುದಿಲ್ಲ. ತ್ಯಾಗಮಾಡದೇ ಅಭಯನಾಗಿ ನಿದ್ರಿಸುವುದಿಲ್ಲ. ಆದುದರಿಂದ ಎಲ್ಲವನ್ನೂ ತ್ಯಜಿಸಿ ಸುಖಿಯಾಗಿರು.”

***

ಹಿಂದೆ ನಾನು ಹಸ್ತಿನಾಪುರದಲ್ಲಿದ್ದಾಗ ಬ್ರಾಹ್ಮಣ ಶಮ್ಯಾಕನು ನನಗೆ ತ್ಯಾಗದ ಮಹಿಮೆಯನ್ನು ಹೀಗೆ ಹೇಳಿದ್ದನು. ಆದುದರಿಂದ ತ್ಯಾಗವೇ ಪರಮಶ್ರೇಷ್ಠವೆಂಬ ಮತವಿದೆ.”

One Comment

  1. Pingback: ಇಂದ್ರ ಮತ್ತು ತಾಪಸಿಗಳ ಸಂವಾದ: ಗೃಹಸ್ಥಾಶ್ರಮದ ಪ್ರತಿಪಾದನೆ – Vyasa Mahabharata

Leave a Reply

Your email address will not be published. Required fields are marked *