ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
ಶೋಕಾಕುಲ ಚಿತ್ತದ ಶಾಂತಿಗಾಗಿ ರಾಜಾ ಸೇನಜಿತ್ ಮತ್ತು ಓರ್ವ ಬ್ರಾಹ್ಮಣನ ಸಂವಾದದಲ್ಲಿ ಉದಾಹರಿಸಿದ ಈ ಪಿಂಗಲಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 168ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು.
***
ಯುಧಿಷ್ಠಿರನು ಹೇಳಿದನು:
“ಪಿತಾಮಹ! ಪಾರ್ಥಿವ! ಇದೂವರೆಗೆ ನೀನು ರಾಜಧರ್ಮವನ್ನು ಆಶ್ರಯಿಸಿದವರ ಶುಭ ಧರ್ಮಗಳ ಕುರಿತು ಹೇಳಿದೆ. ಈಗ ಆಶ್ರಮಿಗಳ ಶ್ರೇಷ್ಠ ಧರ್ಮದ ಕುರಿತು ಹೇಳಬೇಕು.”
ಭೀಷ್ಮನು ಹೇಳಿದನು:
“ಸರ್ವತ್ರ ಸ್ವರ್ಗಸಂಬಂಧೀ ಸತ್ಯಫಲವನ್ನು ನೀಡುವ ತಪಸ್ಸಿನ ಉಲ್ಲೇಖವಿದೆ. ಧರ್ಮಕ್ಕೆ ಅನೇಕ ದ್ವಾರಗಳಿವೆ. ಇಲ್ಲಿ ಯಾವ ಕ್ರಿಯೆಗಳೂ ವಿಫಲವಾಗುವುದಿಲ್ಲ. ಭರತಸತ್ತಮ! ಯಾರ್ಯಾರು ಯಾವ್ಯಾವ ವಿಷಯಗಳ ಕುರಿತು ಪೂರ್ಣ ನಿಶ್ಚಯವನ್ನು ಪಡೆದಿರುತ್ತಾರೋ ಅವನ್ನೇ ಅವರು ಕರ್ತವ್ಯಗಳೆಂದು ತಿಳಿಯುತ್ತಾರೆ. ಅನ್ಯವನ್ನು ಕರ್ತ್ಯವ್ಯಗಳೆಂದು ತಿಳಿಯುವುದಿಲ್ಲ. ಸಂಸಾರದ ವಿಷಯಗಳು ಸಾರಹೀನವೆಂದು ಅರಿತುಕೊಂಡು ಬಂದಂತೆ ವೈರಾಗ್ಯವು ಹುಟ್ಟಿಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಯುಧಿಷ್ಠಿರ! ಹೀಗೆ ಈ ಲೋಕದಲ್ಲಿ ಅನೇಕ ದೋಷಗಳಿವೆ ಎಂದು ತಿಳಿದುಕೊಂಡು ಮನುಷ್ಯನು ತನ್ನ ಮೋಕ್ಷಕ್ಕೆ ಪ್ರಯತ್ನಿಸಬೇಕು.”
ಯುಧಿಷ್ಠಿರನು ಹೇಳಿದನು:
“ಪಿತಾಮಹ! ಧನನಷ್ಟವಾದಾಗ ಅಥವಾ ಪತ್ನಿ, ಪುತ್ರ ಅಥವಾ ತಂದೆಯ ಮೃತ್ಯುವಾದಾಗ ಯಾವ ಬುದ್ಧಿಯಿಂದ ಮನುಷ್ಯನು ತನ್ನ ಶೋಕವನ್ನು ನಿವಾರಿಸಿಕೊಳ್ಳಬೇಕು. ಅದರ ಕುರಿತು ನನಗೆ ಹೇಳು.”
ಭೀಷ್ಮನು ಹೇಳಿದನು:
“ಧನವು ನಷ್ಟವಾದರೆ ಅಥವಾ ಪತ್ನಿ, ಪುತ್ರ ಅಥವಾ ತಂದೆಯು ಮೃತರಾದರೆ “ಅಯ್ಯೋ ದುಃಖವೇ!” ಎಂದು ಯೋಚಿಸಿ ಶೋಕವನ್ನು ದೂರಗೊಳಿಸುವಂಥದ್ದನ್ನು ಮಾಡಬೇಕು. ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಓರ್ವ ವಿಪ್ರನು ಸೇನಜಿತನಿಗೆ ಹೇಳಿದುದನ್ನು ಉದಾಹರಿಸುತ್ತಾರೆ.
***
ಪುತ್ರಶೋಕಾಭಿಸಂತಪ್ತನಾದ ಮತ್ತು ಶೋಕವಿಹ್ವಲನಾದ ಹಾಗೂ ವಿಷಣ್ಣವದನನಾಗಿದ್ದ ರಾಜನನ್ನು ನೋಡಿ ವಿಪ್ರನು ಈ ಮಾತನ್ನಾಡಿದನು:
“ನೀನು ಮೂಢನಲ್ಲವೇ? ನೀನೇ ಶೋಚನೀಯನಾಗಿರುವಾಗ ಯಾರಿಗಾಗಿ ಶೋಕಿಸುತ್ತಿರುವೆ? ಮುಂದೆ ಒಂದು ದಿನ ಇನ್ನೊಬ್ಬ ಶೋಚನೀಯ ಮನುಷ್ಯನು ನಿನಗೋಸ್ಕರವಾಗಿ ಶೋಕಿಸುತ್ತಾ ಇದೇ ಗತಿಯನ್ನು ಹೊಂದುತ್ತಾನೆ. ರಾಜನ್! ನಾನು, ನೀನು ಮತ್ತು ನಿನ್ನ ಬಳಿ ಇಲ್ಲಿ ಕುಳಿತಿರುವ ಎಲ್ಲರೂ ಎಲ್ಲಿಂದ ನಾವೆಲ್ಲರೂ ಬಂದಿದ್ದೇವೋ ಅಲ್ಲಿಗೇ ಹೋಗುತ್ತೇವೆ.”
ಸೇನಜಿತುವು ಹೇಳಿದನು:
“ತಪೋಧನ! ವಿಪ್ರ! ನಿನ್ನಲ್ಲಿ ಯಾವ ಬುದ್ಧಿಯಿದೆ ಅಥವಾ ತಪಸ್ಸಿದೆ ಅಥವಾ ಸಮಾಧಿ ಅಥವಾ ಶಾಸ್ತ್ರಜ್ಞಾನವಿದೆ ಎಂದು ನಿನಗೆ ಯಾವುದೇ ತರಹದ ವಿಷಾದವೂ ಆಗುತ್ತಿಲ್ಲ?”
ಬ್ರಾಹ್ಮಣನು ಹೇಳಿದನು:
“ನೋಡು! ಈ ಪೃಥ್ವಿಯಲ್ಲಿ ಎಲ್ಲ ಭೂತಗಳೂ ದುಃಖಗ್ರಸ್ತರಾಗುತ್ತಿರುವುದನ್ನು ನೋಡು. ಈ ಶರೀರವೂ ನನ್ನದಲ್ಲ ಅಥವಾ ಇಡೀ ಪೃಥ್ವಿಯೂ ನನ್ನದಲ್ಲ. ಈ ಎಲ್ಲ ವಸ್ತುಗಳು ನನ್ನವು ಹೇಗೋ ಹಾಗೆ ಇತರರಿಗೂ ಸೇರಿವೆ. ಹೀಗೆ ಯೋಚಿಸಿದರೆ ಇವುಗಳಿಗಾಗಿ ನನ್ನ ಮನಸ್ಸಿನಲ್ಲಿ ಯಾವ ವ್ಯಥೆಯೂ ಉಂಟಾಗುವುದಿಲ್ಲ. ಇದೇ ವಿಚಾರದಿಂದ ನನಗೆ ಹರ್ಷವಾಗುತ್ತದೆಯೇ ಹೊರತು ಶೋಕವಾಗುವುದಿಲ್ಲ. ಸಮುದ್ರದಲ್ಲಿ ಹೇಗೆ ಒಂದು ಕಟ್ಟಿಗೆಯ ತುಂಡು ಇನ್ನೊಂದು ಕಟ್ಟಿಗೆಯ ತುಂಡನ್ನು ಸೇರಿ ಮತ್ತೆ ಬೇರಾಗುವುದೋ ಹಾಗೆ ಈ ಲೋಕದಲ್ಲಿ ಪ್ರಾಣಿಗಳ ಸಮಾಗಮವು ನಡೆಯುತ್ತಿರುತ್ತದೆ. ಹೀಗೆಯೇ ಪುತ್ರರು, ಪೌತ್ರರು, ಜ್ಞಾತಿ-ಬಾಂಧವರು ಸಿಗುತ್ತಾರೆ. ಅವರ ಕುರಿತು ಎಂದೂ ಹೆಚ್ಚಿನ ಆಸಕ್ತಿಯನ್ನು ತೋರಿಸಬಾರದು. ಏಕೆಂದರೆ ಒಂದು ದಿನ ಅವರು ಬಿಟ್ಟುಹೋಗುವುದು ನಿಶ್ಚಿತವಾಗಿದೆ. ನಿನ್ನ ಮಗನು ಕಾಣದಲ್ಲಿಂದ ಬಂದಿದ್ದನು ಮತ್ತು ಪುನಃ ಕಾಣದಲ್ಲಿಗೇ ಹೋಗಿದ್ದಾನೆ. ಅವನು ನಿನಗೆ ಪರಿಚಿತನಾಗಿರಲಿಲ್ಲ ಮತ್ತು ನೀನು ಅವನಿಗೆ ಪರಿಚಿತನಾಗಿರಲಿಲ್ಲ. ಆದರೂ ನೀನು ಅವನಿಗೆ ಏನೆಂದು ಶೋಕಿಸುತ್ತಿರುವೆ?
ತೃಷ್ಣೆಯಿಂದ ದುಃಖವು ಹುಟ್ಟುತ್ತದೆ ಮತ್ತು ದುಃಖದ ನಾಶವೇ ಸುಖವು. ಸುಖದ ನಂತರ ದುಃಖವು ಹುಟ್ಟುತ್ತದೆ. ಹೀಗೆ ಪುನಃ ಪುನಃ ದುಃಖವೇ ಆಗುತ್ತಿರುತ್ತದೆ. ಸುಖದ ನಂತರ ದುಃಖವುಂಟಾಗುತ್ತದೆ ಮತ್ತು ದುಃಖದ ನಂತರ ಸುಖವುಂಟಾಗುತ್ತದೆ. ಈಗ ನೀನು ಸುಖದಿಂದ ದುಃಖವನ್ನು ಪಡೆದುಕೊಂಡಿದ್ದೀಯೆ. ಪುನಃ ನಿನಗೆ ಸುಖವುಂಟಾಗುತ್ತದೆ. ಇಲ್ಲಿ ಯಾರಿಗೂ ನಿತ್ಯವೂ ದುಃಖವು ದೊರೆಯುವುದಿಲ್ಲ ಮತ್ತು ನಿತ್ಯ ಸುಖವೂ ದೊರೆಯುವುದಿಲ್ಲ.
ಸುಹೃದನು ಸುಖವನ್ನು ನೀಡಲು ಸಮರ್ಥನಾಗಿರುವುದಿಲ್ಲ. ಶತ್ರುವು ದುಃಖವನ್ನು ನೀಡಲು ಸಮರ್ಥನಾಗಿರುವುದಿಲ್ಲ. ಬುದ್ಧಿಯಲ್ಲಿ ಧನವನ್ನು ನೀಡುವ ಶಕ್ತಿಯಿರುವುದಿಲ್ಲ ಮತ್ತು ಧನಕ್ಕೆ ಸುಖವನ್ನು ನೀಡುವ ಶಕ್ತಿಯಿರುವುದಿಲ್ಲ. ಬುದ್ಧಿಯು ಧನಲಾಭಕ್ಕೆ ಕಾರಣವಲ್ಲ ಮತ್ತು ಮೂರ್ಖತನವು ಬಡತನಕ್ಕೆ ಕಾರಣವಲ್ಲ. ವಾಸ್ತವವಾಗಿ ಸಂಸಾರಚಕ್ರದ ಗತಿಯ ವೃತ್ತಾಂತವನ್ನು ಪ್ರಾಜ್ಞನು ಮಾತ್ರ ತಿಳಿದಿರುತ್ತಾನೆ. ಇತರರಿಗೆ ಇದು ತಿಳಿಯುವುದಿಲ್ಲ. ಬುದ್ಧಿವಂತನಾಗಿರಲಿ, ಮೂಢನಾಗಿರಲಿ, ಶೂರನಾಗಿರಲಿ, ಹೇಡಿಯಾಗಿರಲಿ, ಮೂರ್ಖನಾಗಿರಲಿ, ಕವಿಯಾಗಿರಲಿ, ದುರ್ಬಲನಾಗಿರಲಿ ಮತ್ತು ಬಲವಂತನಾಗಿರಲಿ – ದೈವವು ಯಾರಿಗೆ ಅನುಕೂಲವಾಗಿರುವುದೋ ಅವರಿಗೆ ಪ್ರಯತ್ನವಿಲ್ಲದೇ ಸುಖವು ಪ್ರಾಪ್ತವಾಗುತ್ತದೆ. ಹಾಲುನೀಡುವ ಹಸುವು ಅದರ ಕರುವಿನದ್ದೋ? ಅಥವಾ ಅದರ ಹಾಲುಕರೆಯುವವನದ್ದೋ? ಅದರ ಮಾಲೀಕನದ್ದೋ? ಅದನ್ನು ಕದ್ದುಕೊಂಡು ಹೋದವನದ್ದೋ? ವಾಸ್ತವವಾಗಿ ಯಾರು ಅದರ ಹಾಲನ್ನು ಕುಡಿಯುತ್ತಾನೋ ಹಸುವು ಅವನದಾಗುತ್ತದೆ ಎಂದು ವಿದ್ವಾಂಸರ ನಿಶ್ಚಯವು.
ಈ ಲೋಕದಲ್ಲಿ ಅತ್ಯಂತ ಮೂಢನಾಗಿರುವವನು ಮತ್ತು ಅತ್ಯಂತ ಬುದ್ಧಿವಂತನಾಗಿರುವವನು ಇವರಿಬ್ಬರೇ ಸುಖವನ್ನು ಅನುಭವಿಸುತ್ತಾರೆ. ಮಧ್ಯದಲ್ಲಿರುವ ಜನರು ಕಷ್ಟವನ್ನೇ ಅನುಭವಿಸುತ್ತಾರೆ. ಜ್ಞಾನಿಗಳು ಅಂತ್ಯದಲ್ಲಿ ರಮಿಸುತ್ತಾರೆ. ಮಧ್ಯದಲ್ಲಿ ರಮಿಸುವುದಿಲ್ಲ. ಅಂತ್ಯಪ್ರಾಪ್ತಿಯು ಸುಖವೆಂದು ಹೇಳುತ್ತಾರೆ ಮತ್ತು ಆದಿ ಮತ್ತು ಅಂತ್ಯಗಳ ಮಧ್ಯವು ದುಃಖರೂಪವೆಂದು ಹೇಳುತ್ತಾರೆ. ಆದರೆ ದ್ವಂದ್ವಾತೀತರಾದ ಮತ್ತು ವಿಮತ್ಸರರಾದವರಿಗೆ ಜ್ಞಾನಜನಿತ ಸುಖವು ಪ್ರಾಪ್ತವಾಗುತ್ತದೆ. ಅಂಥವರನ್ನು ಅರ್ಥ ಮತ್ತು ಅನರ್ಥ ಎರಡೂ ಎಂದೂ ಪೀಡಿಸುವುದಿಲ್ಲ. ಮೂಢತೆಯನ್ನು ದಾಟಿರುವ ಆದರೆ ಇನ್ನೂ ಜ್ಞಾನವನ್ನು ಪಡೆದುಕೊಂಡಿರದ ಜನರು ಸುಖದ ಪರಿಸ್ಥಿತಿ ಬಂದಾಗ ಅತ್ಯಂತ ಹರ್ಷದಿಂದ ಬೀಗುತ್ತಾರೆ ಮತ್ತು ದುಃಖದ ಪರಿಸ್ಥಿತಿ ಬಂದಾಗ ಅತಿಶಯ ಸಂತಾಪವನ್ನು ಅನುಭವಿಸುತ್ತಾರೆ. ಮೂಢರು ಸ್ವರ್ಗದಲ್ಲಿರುವ ದೇವತೆಗಳಂತೆ ಸದಾ ವಿಷಯಸುಖದಲ್ಲಿ ಮಗ್ನರಾಗಿರುತ್ತಾರೆ. ಏಕೆಂದರೆ ಅವರ ಚಿತ್ತವು ವಿಷಯಾಸಕ್ತಿಯ ಕೆಸರನ್ನು ಲೇಪಿಸಿಕೊಂಡು ಮಹಾ ಮೋಹಿತಗೊಂಡಿರುತ್ತದೆ.
ಮೊದಮೊದಲು ಆಲಸ್ಯವು ಸುಖವೆಂದೆನಿಸುತ್ತದೆ. ಆದರೆ ಅದು ಅಂತ್ಯದಲ್ಲಿ ದುಃಖದಾಯಿಯಾಗುತ್ತದೆ. ಕಾರ್ಯಕೌಶಲವು ದುಃಖಕರವೆಂದು ತೋರುತ್ತದೆ ಆದರೆ ಅದು ಸುಖವನ್ನು ನೀಡುತ್ತದೆ. ಕಾರ್ಯಕುಶಲ ಪುರುಷನಲ್ಲಿಯೇ ಲಕ್ಷ್ಮೀಸಹಿತ ಐಶ್ವರ್ಯವು ನಿವಾಸಿಸುತ್ತದೆ; ಆಲಸಿಯಲ್ಲಲ್ಲ. ಆದುದರಿಂದ ಸುಖವಾಗಲೀ, ದುಃಖವಾಗಲೀ, ಪ್ರಿಯವಾಗಲೀ, ಅಪ್ರಿಯವಾದುದಾಗಲೀ, ಯಾವುದು ಪ್ರಾಪ್ತವಾಗುತ್ತದೆಯೋ ಅದನ್ನು ಬುದ್ಧಿವಂತನು ಹೃದಯಪೂರ್ವಕವಾಗಿ ಸ್ವಾಗತಿಸಬೇಕು. ಎಂದೂ ಸೋಲಬಾರದು. ಶೋಕದ ಸಾವಿರಾರು ಸ್ಥಾನಗಳಿವೆ ಮತ್ತು ಹರ್ಷದ ನೂರಾರು ಸ್ಥಾನಗಳಿವೆ. ಆದರೆ ಅವು ಪ್ರತಿದಿನವೂ ಮೂರ್ಖರ ಮೇಲೆ ಪ್ರಭಾವ ಬೀರುತ್ತವೆಯೇ ಹೊರತು ಜ್ಞಾನಿಯ ಮೇಲಲ್ಲ. ಬುದ್ಧಿವಂತ, ಕೃತಪ್ರಜ್ಞ, ಕೇಳುವ, ಅನಸೂಯಕ, ದಾಂತ, ಮತ್ತು ಜಿತೇಂದ್ರಿಯ ನರನನ್ನು ಶೋಕವು ಮುಟ್ಟುವುದೂ ಇಲ್ಲ. ವಿದ್ವಾಂಸನು ಇದೇ ಬುದ್ಧಿಯನ್ನು ಆಶ್ರಯಿಸಿ ಕಾಮ-ಕ್ರೋಧಾದಿ ಶತ್ರುಗಳಿಂದ ಚಿತ್ತವನ್ನು ರಕ್ಷಿಸಿಕೊಂಡು ವರ್ತಿಸಬೇಕು. ಉತ್ಪತ್ತಿ ಮತ್ತು ವಿನಾಶಗಳನ್ನು ತತ್ತ್ವತಃ ತಿಳಿದುಕೊಂಡವನನ್ನು ಶೋಕವು ಮುಟ್ಟುವುದಿಲ್ಲ.
ಯಾವುದರಿಂದ ಶೋಕ, ಸಂಕಟ ಅಥವಾ ದುಃಖವುಂಟಾಗುವುದೋ ಅಥವಾ ಆಯಾಸವಾಗುವುದೋ ಅದರ ಮೂಲವು ದೇಹದ ಒಂದು ಅಂಗವೇ ಆಗಿದ್ದರೂ ಅದನ್ನು ತ್ಯಜಿಸಬೇಕು. ಯಾವ ಯಾವ ಕಾಮನೆಗಳನ್ನು ತ್ಯಜಿಸುತ್ತೇವೋ ಅವೇ ಸುಖವನ್ನು ನೀಡುವಂಥಹುದಾಗುತ್ತವೆ. ಕಾಮನೆಗಳನ್ನು ಅನುಸರಿಸಿ ಹೋಗುವ ಪುರುಷನು ಕಾಮನೆಗಳೊಂದಿಗೆ ನಾಶಹೊಂದುತ್ತಾನೆ. ಈ ಲೋಕದಲ್ಲಾಗುವ ಕಾಮ ಸುಖ ಮತ್ತು ಸ್ವರ್ಗಲೋಕದಲ್ಲಿ ದೊರೆಯುವ ಮಹಾ ಸುಖ ಇವುಗಳು ತೃಷ್ಣಾಕ್ಷಯದ ಸುಖದ ಹದಿನಾರನೇ ಒಂದು ಭಾಗಕ್ಕೂ ಹೋಲುವುದಿಲ್ಲ.
ಮನುಷ್ಯನು ಪ್ರಾಜ್ಞನಾಗಿರಲಿ, ಮೂಢನಾಗಿರಲಿ ಅಥವಾ ಶೂರನಾಗಿರಲಿ ಹಿಂದಿನ ಜನ್ಮದಲ್ಲಿ ಮಾಡಿದ ಶುಭಾಶುಭಕರ್ಮಗಳ ಫಲವನ್ನು ಆ ಕರ್ಮಗಳಿಗೆ ತಕ್ಕಂತೆ ಅನುಭವಿಸಲೇ ಬೇಕಾಗುತ್ತದೆ. ಹೀಗೆ ಜೀವಿಗಳಿಗೆ ಪ್ರಿಯ-ಅಪ್ರಿಯ ಮತ್ತು ಸುಖ-ದುಃಖಗಳು ಮತ್ತೆ ಮತ್ತೆ ಕ್ರಮಬದ್ಧವಾಗಿ ಉಂಟಾಗುತ್ತಿರುತ್ತವೆ. ಇದರಲ್ಲಿ ಸಂದೇಹವೇ ಇಲ್ಲ. ಇದೇ ಬುದ್ಧಿಯನ್ನು ಆಶ್ರಯಿಸಿದವನು ಗುಣಾನ್ವಿತನಾಗಿ ಸುಖದಿಂದ ಜೀವಿಸುತ್ತಾನೆ. ಆದುದರಿಂದ ಸರ್ವ ಕಾಮನೆಯಗಳನ್ನೂ ಜುಗುಪ್ಸೆಯಿಂದ ನೋಡಿ ಅದಕ್ಕೆ ಬೆನ್ನು ತೋರಿಸಬೇಕು. ಹೃದಯದಲ್ಲಿ ಉತ್ಪನ್ನವಾದ ಕಾಮನೆಗಳು ಹೃದಯದಲ್ಲಿಯೇ ಪುಷ್ಟಿಗೊಂಡು ಅದೇ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಮೃತ್ಯುವಾಗುತ್ತದೆ. ಆಮೆಯು ಹೇಗೆ ತನ್ನ ಅಂಗಾಗಳನ್ನು ಎಲ್ಲ ಕಡೆಗಳಿಂದ ಒಳಗೆ ಸೆಳೆದುಕೊಳ್ಳುತ್ತದೆಯೋ ಹಾಗೆ ಈ ಜೀವವು ತನ್ನ ಎಲ್ಲ ಕಾಮನೆಗಳನ್ನೂ ಸಂಕೋಚಗೊಳಿಸಿಕೊಂಡಾಗ ತನ್ನ ವಿಶುದ್ಧ ಅಂತಃಕರಣದಲ್ಲಿಯೇ ಸ್ವಯಂ ಪ್ರಕಾಶಿತವಾದ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತದೆ. ಯಾವುದೇ ವಿಷಯದಲ್ಲಿ ಮಮತ್ವವನ್ನು ಕಲ್ಪಿಸಿಕೊಂಡಾಗ ಮನುಷ್ಯನೇ ಆ ವಿಷಯಕ್ಕೆ ಸಮಾನವಾದ ದುಃಖಕ್ಕೆ ಕಾರಣನಾಗುತ್ತಾನೆ. ಯಾವಾಗ ಮನುಷ್ಯನಿಗೆ ಯಾರೊಡನೆಯೂ ಭಯವಿಲ್ಲವೋ ಅಥವಾ ಯಾರೂ ಅವನಿಗೆ ಹೆದರುವುದಿಲ್ಲವೋ, ಯಾವಾಗ ಅವನು ಯಾವುದನ್ನೂ ಬಯಸುವುದಿಲ್ಲವೋ ಮತ್ತು ಯಾರನ್ನೂ ದ್ವೇಷಿಸುವುದಿಲ್ಲವೋ ಆಗ ಅವನು ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾನೆ. ಸತ್ಯ-ಅಸತ್ಯ, ಶೋಕ-ಆನಂದ, ಭಯ-ಅಭಯ ಮತ್ತು ಪ್ರಿಯ-ಅಪ್ರಿಯವಾದವುಗಳನ್ನು ಪರಿತ್ಯಜಿದವನು ಪ್ರಶಾಂತಾತ್ಮನಾಗುತ್ತಾನೆ. ಯಾವ ಧೀರನು ಸರ್ವಭೂತಗಳಿಗೂ ಮನಸಾ-ವಾಚಾ ಮತ್ತು ಕರ್ಮಣಾ ಪಾಪವನ್ನೆಸಗುವುದಿಲ್ಲವೋ ಅವನು ಬ್ರಹ್ಮನನ್ನು ಪಡೆದುಕೊಳ್ಳುತ್ತಾನೆ. ದುರ್ಮತಿಗಳಿಗೆ ತ್ಯಜಿಸಲು ಕಷ್ಟಸಾಧ್ಯವಾದ, ಶರೀರವು ಜೀರ್ಣವಾದರೂ ಜೀರ್ಣವಾಗದ, ಮತ್ತು ಪ್ರಾಣಾಂತಿಕ ರೋಗದಂತಿರುವ ತೃಷ್ಣೆಯನ್ನು ತ್ಯಜಿಸುವವನಿಗೆ ಸುಖವುಂಟಾಗುತ್ತದೆ.
ಪಾರ್ಥಿವ! ಈ ವಿಷಯದಲ್ಲಿ ಪಿಂಗಲೆಯು ಹಾಡಿದ್ದ ಗಾಥೆಗಳು ಕೇಳಿಬರುತ್ತವೆ. ಇದನ್ನು ಅನುಸರಿಸಿ ಅವಳು ಸಂಕಟಕಾಲದಲ್ಲಿಯೂ ಸನಾತನ ಧರ್ಮವನ್ನು ಪಡೆದುಕೊಂಡಿದ್ದಳು. ಒಮ್ಮೆ ವೇಶ್ಯಾ ಪಿಂಗಲೆಯು ಬಹಳ ಹೊತ್ತು ಸಂಕೇತಿಸಿದ ಸ್ಥಾನದಲ್ಲಿ ಕುಳಿತುಕೊಂಡಿದ್ದರೂ ಅವಳ ಪ್ರಿಯತಮನು ಅವಳ ಬಳಿ ಬರಲಿಲ್ಲ. ಆಗ ಸಂಕಟದಲ್ಲಿದ್ದರೂ ಶಾಂತಳಾಗಿದ್ದುಕೊಂಡು ಅವಳು ಹೀಗೆ ಯೋಚಿಸತೊಡಗಿದಳು:
ಪಿಂಗಲೆಯು ಹೇಳಿದಳು:
“ನನ್ನ ನಿಜವಾದ ಪ್ರಿಯತಮನು ದೀರ್ಘಕಾಲದಿಂದ ನನ್ನ ಹತ್ತಿರವೇ ಇದ್ದಾನೆ. ಸದಾ ನಾನು ಅವನ ಜೊತೆಯೇ ಇದ್ದೇನೆ. ಅವನು ಎಂದೂ ಉನ್ಮತ್ತನಾಗುವುದಿಲ್ಲ. ಆದರೆ ನಾನು ಎಷ್ಟು ಉನ್ಮತ್ತಳಾಗಿದ್ದೇನೆಂದರೆ ಇದಕ್ಕೂ ಮೊದಲು ಅವನನ್ನು ನಾನು ಗುರುತಿಸಲೇ ಇಲ್ಲ! ಒಂದೇ ಕಂಭವಿರುವ ಮತ್ತು ಒಂಭತ್ತು ದ್ವಾರಗಳಿರುವ ಈ ಶರೀರವೆಂಬ ಮನೆಯನ್ನು ಇಂದಿನಿಂದ ಇತರರಿಗೆ ಮುಚ್ಚಿಬಿಡುತ್ತೇನೆ. ಇಲ್ಲಿಗೆ ಬಂದಿರುವ ಆ ಸತ್ಯ ಪ್ರಿಯತಮನನ್ನು ತಿಳಿದೂ ಕೂಡ ಯಾವ ನಾರಿಯು ಬೇರೆ ಯಾವುದೋ ಎಲುಬು-ಮಾಂಸಗಳ ಗೊಂಬೆಯನ್ನು ತನ್ನ ಪ್ರಾಣವಲ್ಲಭನೆಂದು ಸ್ವೀಕರಿಸಿಯಾಳು? ಈಗ ನಾನು ಮೋಹನಿದ್ರೆಯಿಂದ ಎಚ್ಚೆತ್ತಿದ್ದೇನೆ ಮತ್ತು ನಿರಂತರವಾಗಿ ಎಚ್ಚೆತ್ತೇ ಇರುತ್ತೇನೆ. ಕಾಮನೆಗಳನ್ನೂ ತ್ಯಜಿಸಿದ್ದೇನೆ. ಆದುದರಿಂದ ಆ ನರಕರೂಪೀ ಧೂರ್ತ ಮನುಷ್ಯರು ಕಾಮದ ರೂಪವನ್ನು ಧರಿಸಿ ಇನ್ನು ನನಗೆ ಮೋಸಮಾಡಲಾರರು. ಭಾಗ್ಯದಿಂದ ಅಥವಾ ಪೂರ್ವಕೃತ ಶುಭಕರ್ಮಗಳ ಪ್ರಭಾವದಿಂದ ಒಮ್ಮೊಮ್ಮೆ ಅನರ್ಥವೂ ಅರ್ಥರೂಪವಾಗುತ್ತದೆ. ನಿರಾಶಳಾದ ನಾನು ಇಂದು ಉತ್ತಮ ಜ್ಞಾನವನ್ನು ಪಡೆದುಕೊಂಡಿದ್ದೇನೆ. ಇಂದು ನಾನು ಅಜಿತೇಂದ್ರಿಯಳಾಗಿಲ್ಲ. ಆಶಯಗಳಿಲ್ಲದವನು ಸುಖವಾಗಿ ನಿದ್ರಿಸುತ್ತಾನೆ. ಆಶಯಗಳಿಲ್ಲದಿರುವುದೇ ಪರಮ ಸುಖವು. ಆಶಯಗಳನ್ನು ನಿರಾಶಯಗಳನ್ನಾಗಿ ಮಾಡಿಕೊಂಡು ಪಿಂಗಲೆಯು ಸುಖವಾಗಿ ನಿದ್ರಿಸುತ್ತಾಳೆ.”””
***
ಭೀಷ್ಮನು ಹೇಳಿದನು:
“ಬ್ರಾಹ್ಮಣನ ಈ ಮತ್ತು ಅನ್ಯ ಯುಕ್ತಿಯುಕ್ತ ಮಾತುಗಳಿಂದ ರಾಜಾ ಸೇತಜಿತುವಿನ ಚಿತ್ತವು ಸ್ಥಿರಗೊಂಡಿತು. ಅವನು ಶೋಕವನ್ನು ತ್ಯಜಿಸಿ ಸುಖಿಯಾದನು ಮತ್ತು ಪ್ರಸನ್ನನಾಗಿರತೊಡಗಿದನು.”
The other spiritual discourses in Mahabharata (Kannada):
- ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
- ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
- ಯುಧಿಷ್ಠಿರ-ಮಾರ್ಕಂಡೇಯ ಸಂವಾದ
- ಸರಸ್ವತೀಗೀತೆ
- ಕೌಶಿಕ-ಪತಿವ್ರತೆ-ಧರ್ಮವ್ಯಾಧ
- ವಿದುರನೀತಿ
- ಸನತ್ಸುಜಾತಿಯ
- ಭೌಮಗುಣಕಥನ
- ಶ್ರೀಮದ್ಭಗವದ್ಗೀತಾ
- ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
- ಪಿತಾಪುತ್ರ ಸಂವಾದ
- ಶಮ್ಯಾಕಗೀತೆ
- ಮಂಕಿಗೀತೆ
- ಭೃಗು-ಭರದ್ವಾಜ ಸಂವಾದ
- ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ
Pingback: ಇಂದ್ರ ಮತ್ತು ತಾಪಸಿಗಳ ಸಂವಾದ: ಗೃಹಸ್ಥಾಶ್ರಮದ ಪ್ರತಿಪಾದನೆ – Vyasa Mahabharata
Pingback: ಜನಕೋಽಪಖ್ಯಾನ – Vyasa Mahabharata
Pingback: ಅಶ್ಮ-ಜನಕ ಸಂವಾದ – Vyasa Mahabharata
Pingback: ಪ್ರಾಯಶ್ಚಿತ್ತಗಳು – Vyasa Mahabharata
Pingback: ಭಕ್ಷ್ಯ-ಅಭಕ್ಷ್ಯಗಳ ಮತ್ತು ದಾನಕ್ಕೆ ಪಾತ್ರ-ಅಪಾತ್ರರ ಕುರಿತು ಮನು ಮತ್ತು ಸಿದ್ಧರ ಸಂವಾದ – Vyasa Mahabharata
Pingback: ಇಂದ್ರ-ಮಾಂಧಾತ ಸಂವಾದ – Vyasa Mahabharata
Pingback: ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 2 – Vyasa Mahabharata
Pingback: ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 3 – Vyasa Mahabharata
Pingback: ಬೃಹಸ್ಪತಿ-ಕೌಸಲ್ಯ ಸಂವಾದ – Vyasa Mahabharata
Pingback: ಪುರೂರವ-ಪವನಸಂವಾದ – Vyasa Mahabharata
Pingback: ಐಲ-ಕಶ್ಯಪಸಂವಾದ – Vyasa Mahabharata
Pingback: ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 5 – Vyasa Mahabharata
Pingback: ಕೈಕೇಯ-ರಾಕ್ಷಸ ಸಂವಾದ – Vyasa Mahabharata