ಅನುಶಾಸನ ಪರ್ವ: ದಾನಧರ್ಮ ಪರ್ವ
೯೪
ಪ್ರತಿಗ್ರಹದೋಷಗಳು
ಪ್ರತಿಗ್ರಹದೋಷದ ಕುರಿತಾದ ವೃಷಾದರ್ಭಿ ಮತ್ತು ಸಪ್ತರ್ಷಿಗಳ ಕಥೆ (೧-೪೪).
13094001 ಯುಧಿಷ್ಠಿರ ಉವಾಚ|
13094001a ಬ್ರಾಹ್ಮಣೇಭ್ಯಃ ಪ್ರಯಚ್ಚಂತಿ ದಾನಾನಿ ವಿವಿಧಾನಿ ಚ|
13094001c ದಾತೃಪ್ರತಿಗ್ರಹೀತ್ರೋರ್ವಾ[1] ಕೋ ವಿಶೇಷಃ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಬ್ರಾಹ್ಮಣರಿಗೆ ವಿವಿಧ ದಾನಗಳನ್ನು ಕೊಡುತ್ತಾರೆ. ದಾನವನ್ನು ಕೊಡುವವನು ಅಥವಾ ದಾನವನ್ನು ಸ್ವೀಕರಿಸುವನು ಇವರಲ್ಲಿ ಯಾರು ವಿಶಿಷ್ಠನು?”
13094002 ಭೀಷ್ಮ ಉವಾಚ|
13094002a ಸಾಧೋರ್ಯಃ ಪ್ರತಿಗೃಹ್ಣೀಯಾತ್ತಥೈವಾಸಾಧುತೋ ದ್ವಿಜಃ|
13094002c ಗುಣವತ್ಯಲ್ಪದೋಷಃ ಸ್ಯಾನ್ನಿರ್ಗುಣೇ ತು ನಿಮಜ್ಜತಿ||
ಭೀಷ್ಮನು ಹೇಳಿದನು: “ಬ್ರಾಹ್ಮಣನು ಗುಣಸಂಪನ್ನ ಸಾಧುವಿನಿಂದಲೂ ಗುಣಹೀನ ಅಸಾಧುವಿನಿಂದಲೂ ದಾನವನ್ನು ಸ್ವೀಕರಿಸುತ್ತಾನೆ. ಗುಣಸಂಪನ್ನನಿಂದ ದಾನವನ್ನು ಸ್ವೀಕರಿಸಿದರೆ ಸ್ವಲ್ಪವೇ ದೋಷವು ಅವನಿಗೆ ಪ್ರಾಪ್ತವಾಗುತ್ತದೆ. ಗುಣಹೀನನಿಂದ ದಾನವನ್ನು ತೆಗೆದುಕೊಂಡರೆ ಪಾಪದಲ್ಲಿ ಮುಳುಗಿಹೋಗುತ್ತಾನೆ.
13094003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
13094003c ವೃಷಾದರ್ಭೇಶ್ಚ ಸಂವಾದಂ ಸಪ್ತರ್ಷೀಣಾಂ ಚ ಭಾರತ||
ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ವೃಷಾದರ್ಭಿ ಮತ್ತು ಸಪ್ತರ್ಷಿಗಳ ಸಂವಾದವನ್ನು ಉದಾಹರಿಸುತ್ತಾರೆ.
13094004a ಕಶ್ಯಪೋಽತ್ರಿರ್ವಸಿಷ್ಠಶ್ಚ ಭರದ್ವಾಜೋಽಥ ಗೌತಮಃ|
13094004c ವಿಶ್ವಾಮಿತ್ರೋ ಜಮದಗ್ನಿಃ ಸಾಧ್ವೀ ಚೈವಾಪ್ಯರುಂಧತೀ||
13094005a ಸರ್ವೇಷಾಮಥ ತೇಷಾಂ ತು ಗಂಡಾಭೂತ್ಕರ್ಮಕಾರಿಕಾ|
13094005c ಶೂದ್ರಃ ಪಶುಸಖಶ್ಚೈವ ಭರ್ತಾ ಚಾಸ್ಯಾ ಬಭೂವ ಹ||
13094006a ತೇ ವೈ ಸರ್ವೇ ತಪಸ್ಯಂತಃ ಪುರಾ ಚೇರುರ್ಮಹೀಮಿಮಾಮ್|
13094006c ಸಮಾಧಿನೋಪಶಿಕ್ಷಂತೋ ಬ್ರಹ್ಮಲೋಕಂ ಸನಾತನಮ್||
ಒಮ್ಮೆ ಕಶ್ಯಪ, ಅತ್ರಿ, ವಸಿಷ್ಠ, ಭರದ್ವಾಜ, ಗೌತಮ, ವಿಶ್ವಾಮಿತ್ರ, ಜಮದಗ್ನಿ ಮತ್ತು ಸಾಧ್ವೀ ಅರುಂಧತೀ – ಇವರು ಸಮಾಧಿಯ ಮೂಲಕ ಸನಾತನ ಬ್ರಹ್ಮಲೋಕವನ್ನು ಪಡೆಯುವ ಇಚ್ಛೆಯಿಂದ ತಪಸ್ಸುಮಾಡುತ್ತಾ ಭೂಲೋಕದಲ್ಲಿ ಸಂಚರಿಸುತ್ತಿದ್ದರು. ಗಂಡಾ ಎಂಬ ಸ್ತ್ರೀಯು ಅವರೆಲ್ಲರ ಸೇವೆಗೈಯುತ್ತಿದ್ದಳು. ಅವಳ ಪತಿ ಪಶುಸಖನೆಂಬ ಶೂದ್ರನೂ ಕೂಡ ಸಪ್ತರ್ಷಿಗಳ ಜೊತೆಯಲ್ಲಿಯೇ ಇದ್ದುಕೊಂಡು ಅವರ ಸೇವೆಗೈಯುತ್ತಿದ್ದನು.
13094007a ಅಥಾಭವದನಾವೃಷ್ಟಿರ್ಮಹತೀ ಕುರುನಂದನ|
13094007c ಕೃಚ್ಚ್ರಪ್ರಾಣೋಽಭವದ್ಯತ್ರ ಲೋಕೋಽಯಂ ವೈ ಕ್ಷುಧಾನ್ವಿತಃ||
ಕುರುನಂದನ! ಆಗ ಮಹಾ ಅನಾವುಷ್ಟಿಯುಂಟಾಯಿತು. ಆಗ ಈ ಲೋಕದಲ್ಲಿ ಹಸಿವೆಯಿಂದ ಬಳಲಿದ್ದ ಜನರು ಬಹು ಕಷ್ಟದಿಂದ ಪ್ರಾಣಗಳನ್ನು ಧರಿಸಿಕೊಂಡಿದ್ದರು.
13094008a ಕಸ್ಮಿಂಶ್ಚಿಚ್ಚ ಪುರಾ ಯಜ್ಞೇ ಯಾಜ್ಯೇನ ಶಿಬಿಸೂನುನಾ|
13094008c ದಕ್ಷಿಣಾರ್ಥೇಽಥ ಋತ್ವಿಗ್ಭ್ಯೋ ದತ್ತಃ ಪುತ್ರೋ ನಿಜಃ ಕಿಲ||
ಹಿಂದೆ ಶಿಬಿಯ ಮಗ ಶೈಬ್ಯನು ಯಾವುದೋ ಒಂದು ಯಜ್ಞದಲ್ಲಿ ಯಜ್ಞದಕ್ಷಿಣೆಯನ್ನಾಗಿ ತನ್ನ ಮಗನನ್ನೇ ಋತ್ವಿಜರಿಗೆ ಕೊಟ್ಟಿದ್ದನಷ್ಟೇ?
13094009a ತಸ್ಮಿನ್ಕಾಲೇಽಥ ಸೋಽಲ್ಪಾಯುರ್ದಿಷ್ಟಾಂತಮಗಮತ್ಪ್ರಭೋ|
13094009c ತೇ ತಂ ಕ್ಷುಧಾಭಿಸಂತಪ್ತಾಃ ಪರಿವಾರ್ಯೋಪತಸ್ಥಿರೇ||
ಪ್ರಭೋ! ದುರ್ಭಿಕ್ಷದ ಆ ಸಮಯದಲ್ಲಿ ಅಲ್ಪಾಯುವಾಗಿದ್ದ ರಾಜಕುಮಾರನು ಮರಣಹೊಂದಿದನು. ಹಸಿವೆಯಿಂದ ಸಂತಪ್ತರಾಗಿದ್ದ ಸಪ್ತರ್ಷಿಗಳು ಅವನ ಶವವನ್ನು ಸುತ್ತುವರೆದು ಕುಳಿತುಕೊಂಡರು.
13094010a ಯಾಜ್ಯಾತ್ಮಜಮಥೋ ದೃಷ್ಟ್ವಾ ಗತಾಸುಮೃಷಿಸತ್ತಮಾಃ|
13094010c ಅಪಚಂತ ತದಾ ಸ್ಥಾಲ್ಯಾಂ ಕ್ಷುಧಾರ್ತಾಃ ಕಿಲ ಭಾರತ||
ಭಾರತ! ಹಸಿವೆಯಿಂದ ಬಳಲಿದ್ದ ಅವರು ಯಜ್ಞದ ಯಜಮಾನನ ಮಗನು ಸತ್ತಿರುವುದನ್ನು ನೋಡಿ ಅವನನ್ನು ಒಂದು ಪಾತ್ರೆಯಲ್ಲಿ ಹಾಕಿ ಬೇಯಿಸಿದರು.
13094011a ನಿರಾದ್ಯೇ ಮರ್ತ್ಯಲೋಕೇಽಸ್ಮಿನ್ನಾತ್ಮಾನಂ ತೇ ಪರೀಪ್ಸವಃ|
13094011c ಕೃಚ್ಚ್ರಾಮಾಪೇದಿರೇ ವೃತ್ತಿಮನ್ನಹೇತೋಸ್ತಪಸ್ವಿನಃ||
ಲೋಕವೆಲ್ಲವೂ ಅನಾವೃಷ್ಠಿಯಿಂದ ಪೀಡಿತವಾಗಿರಲು ತಿನ್ನಲು ಅನ್ನವೇ ಇಲ್ಲದಿದ್ದ ಆ ಸಮಯದಲ್ಲಿ ಪ್ರಾಣಗಳನ್ನು ಉಳಿಸಿಕೊಳ್ಳಲು ತಪಸ್ವಿಗಳು ಆ ಅತಿ ಕಷ್ಟಕರ ಘೋರ ವೃತ್ತಿಯನ್ನು ಅವಲಂಬಿಸಬೇಕಾಯಿತು.
13094012a ಅಟಮಾನೋಽಥ ತಾನ್ಮಾರ್ಗೇ ಪಚಮಾನಾನ್ಮಹೀಪತಿಃ|
13094012c ರಾಜಾ ಶೈಬ್ಯೋ ವೃಷಾದರ್ಭಿಃ ಕ್ಲಿಶ್ಯಮಾನಾನ್ದದರ್ಶ ಹ||
ಅದೇ ಮಾರ್ಗವಾಗಿ ಹೋಗುತ್ತಿದ್ದ ಮಹೀಪತಿ ರಾಜಾ ಶೈಬ್ಯನು ಅನ್ನಕ್ಕಾಗಿ ಕಷ್ಟಪಡುತ್ತಾ ಹೆಣವನ್ನು ಬೇಯಿಸುತ್ತಿದ್ದ ಅವರನ್ನು ನೋಡಿದನು.
13094013 ವೃಷಾದರ್ಭಿರುವಾಚ|
[2]13094013a ಪ್ರತಿಗ್ರಹಸ್ತಾರಯತಿ ಪುಷ್ಟಿರ್ವೈ ಪ್ರತಿಗೃಹ್ಣತಾಮ್|
13094013c ಮಯಿ ಯದ್ವಿದ್ಯತೇ ವಿತ್ತಂ ತಚ್ಚೃಣುಧ್ವಂ ತಪೋಧನಾಃ||
ವೃಷಾದರ್ಭಿಯು ಹೇಳಿದನು: “ತಪೋಧನರೇ! ನನ್ನನ್ನು ಕೇಳಿ. ಪ್ರತಿಗ್ರಹವು ಬ್ರಾಹ್ಮಣರನ್ನು ದುರ್ಭಿಕ್ಷೆಯಿಂದ ಪಾರುಮಾಡುತ್ತದೆ. ಪ್ರತಿಗ್ರಹವು ಪುಷ್ಟಿಗೆ ಸಾಧನವಾಗಿದೆ. ನನ್ನಲ್ಲಿರುವ ವಿತ್ತವನ್ನು ಸ್ವೀಕರಿಸಿರಿ.
13094014a ಪ್ರಿಯೋ ಹಿ ಮೇ ಬ್ರಾಹ್ಮಣೋ ಯಾಚಮಾನೋ
ದದ್ಯಾಮಹಂ ವೋಽಶ್ವತರೀಸಹಸ್ರಮ್|
13094014c ಏಕೈಕಶಃ ಸವೃಷಾಃ ಸಂಪ್ರಸೂತಾಃ
ಸರ್ವೇಷಾಂ ವೈ ಶೀಘ್ರಗಾಃ ಶ್ವೇತಲೋಮಾಃ||
ನನ್ನನ್ನು ಯಾಚಿಸುವ ಬ್ರಾಹ್ಮಣನು ನನಗೆ ಅತ್ಯಂತ ಪ್ರಿಯನು. ನಾನು ನಿಮ್ಮಲ್ಲಿ ಒಬ್ಬೊಬ್ಬರಿಗೂ ಒಂದೊಂದು ಸಾವಿರ ಹೇಸರಗತ್ತೆಗಳನ್ನು ಕೊಡುತ್ತೇನೆ. ಎಲ್ಲರಿಗೂ ಬಿಳಿಯ ಕೂದಲಿನ ಶೀಘ್ರವಾಗಿ ಹೋಗುವ ಮತ್ತು ಚೆನ್ನಾಗಿ ಬೆಳೆಸಿರುವ ಹೋರಿಗಳನ್ನು ಕೊಡುತ್ತೇನೆ.
13094015a ಕುಲಂಭರಾನನಡುಹಃ ಶತಂಶತಾನ್
ಧುರ್ಯಾನ್ ಶುಭಾನ್ಸರ್ವಶೋಽಹಂ ದದಾನಿ|
13094015c ಪೃಥ್ವೀವಾಹಾನ್ಪೀವರಾಂಶ್ಚೈವ ತಾವದ್
ಅಗ್ರ್ಯಾ ಗೃಷ್ಟ್ಯೋ ಧೇನವಃ ಸುವ್ರತಾಶ್ಚ||
ಕೃಷಿಯ ಮೂಲಕ ಕುಲವನ್ನು ಧರಿಸುವ, ಬಿಳಿಯ ಬಣ್ಣದ, ಭಾರವನ್ನು ಹೊರುವ ಹತ್ತು ಸಾವಿರ ಎತ್ತುಗಳನ್ನೂ ನಿಮಗೆ ಕೊಡುತ್ತೇನೆ. ಇಷ್ಟು ಮಾತ್ರವಲ್ಲದೇ ನಿಮಗೆಲ್ಲರಿಗೂ ಹೃಷ್ಟ-ಪುಷ್ಟವಾದ, ಮೊದಲನೆಯ ಗರ್ಭಧರಿಸಿರುವ ಅಥವಾ ಮೊದಲನೆಯ ಕರುವನ್ನು ಈಯ್ದಿರುವ ಒಳ್ಳೆಯ ಸ್ವಭಾವದ ಅಷ್ಟೇ ಹಸುಗಳನ್ನೂ ದಾನವಾಗಿ ಕೊಡುತ್ತೇನೆ.
13094016a ವರಾನ್ ಗ್ರಾಮಾನ್ ವ್ರೀಹಿಯವಂ ರಸಾಂಶ್ಚ
ರತ್ನಂ ಚಾನ್ಯದ್ದುರ್ಲಭಂ ಕಿಂ ದದಾನಿ|
13094016c ಮಾ ಸ್ಮಾಭಕ್ಷ್ಯೇ ಭಾವಮೇವಂ ಕುರುಧ್ವಂ
ಪುಷ್ಟ್ಯರ್ಥಂ ವೈ ಕಿಂ ಪ್ರಯಚ್ಚಾಮ್ಯಹಂ ವಃ||
ಶ್ರೇಷ್ಠ ಗ್ರಾಮಗಳನ್ನೂ, ಬತ್ತವನ್ನೂ, ರಸವನ್ನೂ, ಗೋಧಿಯನ್ನೂ, ರತ್ನವನ್ನೂ ಕೊಡುತ್ತೇನೆ. ದುರ್ಲಭವಾದ ಯಾವುದೇ ವಸ್ತುವನ್ನಾದರೂ ಕೊಡುತ್ತೇನೆ. ಯಾವುದು ಬೇಕೆಂದು ಹೇಳಿರಿ. ನಿಮ್ಮ ಪುಷ್ಟಿಗಾಗಿ ಏನನ್ನು ಕೊಡಲಿ. ಆದರೆ ನೀವು ಮಾತ್ರ ಅಭಕ್ಷ್ಯವಾದ ಇದನ್ನು ತಿನ್ನಬೇಡಿ.”
13094017 ಋಷಯ ಊಚುಃ|
13094017a ರಾಜನ್ ಪ್ರತಿಗ್ರಹೋ ರಾಜ್ಞೋ ಮಧ್ವಾಸ್ವಾದೋ ವಿಷೋಪಮಃ|
13094017c ತಜ್ಜಾನಮಾನಃ ಕಸ್ಮಾತ್ತ್ವಂ ಕುರುಷೇ ನಃ ಪ್ರಲೋಭನಮ್||
ಋಷಿಗಳು ಹೇಳಿದರು: “ರಾಜನ್! ರಾಜನು ನೀಡುವ ದಾನವು ಹೊರನೋಟಕ್ಕೆ ಜೇನುತುಪ್ಪದಂತೆ ಇದ್ದರೂ ಸ್ವೀಕರಿಸಿದವನಿಗೆ ಅದು ವಿಷದ ಸಮಾನವಾಗಿರುತ್ತದೆ. ಇದನ್ನು ತಿಳಿದವನಾಗಿದ್ದರೂ ಏಕೆ ನಮ್ಮನ್ನು ಪ್ರಲೋಭನಗೊಳಿಸುತ್ತಿರುವೆ?
13094018a ಕ್ಷತ್ರಂ ಹಿ ದೈವತಮಿವ[3] ಬ್ರಾಹ್ಮಣಂ ಸಮುಪಾಶ್ರಿತಮ್|
13094018c ಅಮಲೋ ಹ್ಯೇಷ ತಪಸಾ ಪ್ರೀತಃ ಪ್ರೀಣಾತಿ ದೇವತಾಃ||
ಏಕೆಂದರೆ ಕ್ಷತ್ರಿಯನು ಬ್ರಾಹ್ಮಣನೆಂಬ ದೇವನನ್ನೇ ಆಶ್ರಯಿಸುತ್ತಾನೆ. ಬ್ರಾಹ್ಮಣನು ತಪಸ್ಸಿನಿಂದ ಅಮಲನೂ ಪ್ರೀತನೂ ಆದರೆ ದೇವತೆಗಳು ಪ್ರಿತರಾಗುತ್ತಾರೆ.
13094019a ಅಹ್ನಾಪೀಹ ತಪೋ ಜಾತು ಬ್ರಾಹ್ಮಣಸ್ಯೋಪಜಾಯತೇ|
13094019c ತದ್ದಾವ ಇವ ನಿರ್ದಹ್ಯಾತ್ ಪ್ರಾಪ್ತೋ ರಾಜಪ್ರತಿಗ್ರಹಃ||
ದಿನವೆಲ್ಲವೂ ತಪಸ್ಸನ್ನು ಮಾಡಿ ಸಂಗ್ರಹಿಸದ ತಪಃ ಫಲವು ರಾಜನ ದಾನವನ್ನು ಸ್ವೀಕರಿಸುವುದರಿಂದ ಕ್ಷಣಮಾತ್ರದಲ್ಲಿ ದಾವಾಗ್ನಿಯಂತೆ ಸುಟ್ಟುಹೋಗುತ್ತದೆ.
13094020a ಕುಶಲಂ ಸಹ ದಾನೇನ ರಾಜನ್ನಸ್ತು ಸದಾ ತವ|
13094020c ಅರ್ಥಿಭ್ಯೋ ದೀಯತಾಂ ಸರ್ವಮಿತ್ಯುಕ್ತ್ವಾ ತೇ ತತೋ ಯಯುಃ||
ರಾಜನ್! ನೀನು ಈ ದಾನದೊಂದಿಗೆ ಸದಾ ಕುಶಲನಾಗಿರು. ನೀನು ಹೇಳಿದ ಎಲ್ಲವನ್ನೂ ಯಾಚಕರಿಗೆ ದಾನಮಾಡು.”
13094021a ಅಪಕ್ವಮೇವ ತನ್ಮಾಂಸಮಭೂತ್ತೇಷಾಂ ಚ ಧೀಮತಾಮ್|
13094021c ಅಥ ಹಿತ್ವಾ ಯಯುಃ ಸರ್ವೇ ವನಮಾಹಾರಕಾಂಕ್ಷಿಣಃ||
ರಾಜಕುಮಾರನ ಮಾಂಸವು ಅಪಕ್ವವಾಗಿಯೇ ಉಳಿಯಿತು. ಹೀಗೆ ಹೇಳಿ ಆ ಧೀಮತರೆಲ್ಲರೂ ವನದಲ್ಲಿ ಆಹಾರವನ್ನು ಹುಡುಕುತ್ತಾ ಹೊರಟು ಹೋದರು.
13094022a ತತಃ ಪ್ರಚೋದಿತಾ ರಾಜ್ಞಾ ವನಂ ಗತ್ವಾಸ್ಯ ಮಂತ್ರಿಣಃ|
13094022c ಪ್ರಚೀಯೋದುಂಬರಾಣಿ ಸ್ಮ ದಾನಂ ದಾತುಂ ಪ್ರಚಕ್ರಮುಃ||
ಅನಂತರ ರಾಜನ ಪ್ರಚೋದನೆಯಂತೆ ಮಂತ್ರಿಗಳು ವನಕ್ಕೆ ಹೋಗಿ ಅತ್ತಿಹಣ್ಣುಗಳನ್ನು ಸಂಗ್ರಹಿಸಿ ಮುನಿಗಳಿಗೆ ಕೊಡಲು ಪ್ರಾರಂಭಿಸಿದರು.
13094023a ಉದುಂಬರಾಣ್ಯಥಾನ್ಯಾನಿ ಹೇಮಗರ್ಭಾಣ್ಯುಪಾಹರನ್|
13094023c ಭೃತ್ಯಾಸ್ತೇಷಾಂ ತತಸ್ತಾನಿ ಪ್ರಗ್ರಾಹಿತುಮುಪಾದ್ರವನ್||
ಅತ್ತಿಯ ಮತ್ತು ಅನ್ಯ ಹಣ್ಣುಗಳಲ್ಲಿ ಅವರು ಚಿನ್ನವನ್ನು ತುಂಬಿದ್ದರು. ರಾಜಸೇವಕರು ಅವುಗಳನ್ನು ಮುನಿಗಳು ಪ್ರತಿಗ್ರಹಿಸುವಂತೆ ಮಾಡಲು ಅವರ ಹಿಂದೆಯೇ ಹೋದರು.
13094024a ಗುರೂಣೀತಿ ವಿದಿತ್ವಾಥ ನ ಗ್ರಾಹ್ಯಾಣ್ಯತ್ರಿರಬ್ರವೀತ್|
13094024c ನ ಸ್ಮ ಹೇ ಮೂಢವಿಜ್ಞಾನಾ ನ ಸ್ಮ ಹೇ ಮಂದಬುದ್ಧಯಃ|
13094024e ಹೈಮಾನೀಮಾನಿ ಜಾನೀಮಃ ಪ್ರತಿಬುದ್ಧಾಃ ಸ್ಮ ಜಾಗೃಮಃ||
ಹಣ್ಣುಗಳು ಭಾರವಾಗಿರುವುದನ್ನು ನೋಡಿ ತಿಳಿದು ಅತ್ರಿಯು ಅವು ಪ್ರತಿಗ್ರಹಕ್ಕೆ ಯೋಗ್ಯವಲ್ಲವೆಂದು ಹೇಳಿದನು: “ನಾವು ಮೂಢರಲ್ಲ. ನಾವು ಮಂದಬುದ್ಧಿಯವರೂ ಅಲ್ಲ. ನಾವು ಎಚ್ಚೆತ್ತೇ ಇದ್ದೇವೆ. ಈ ಹಣ್ಣುಗಳಲ್ಲಿ ಚಿನ್ನವನ್ನು ತುಂಬಲಾಗಿದೆ ಎಂದು ನಮಗೆ ತಿಳಿದಿದೆ.
13094025a ಇಹ ಹ್ಯೇತದುಪಾದತ್ತಂ ಪ್ರೇತ್ಯ ಸ್ಯಾತ್ಕಟುಕೋದಯಮ್|
13094025c ಅಪ್ರತಿಗ್ರಾಹ್ಯಮೇವೈತತ್ಪ್ರೇತ್ಯ ಚೇಹ ಸುಖೇಪ್ಸುನಾ||
ನಾವೇನಾದರು ಇಂದು ಇದನ್ನು ತೆಗೆದುಕೊಂಡರೆ ಪರಲೋಕದಲ್ಲಿ ನಮಗೆ ಇದರಿಂದ ಕೆಟ್ಟ ಪರಿಣಾಮವೇ ಆಗುತ್ತದೆ. ಐಹಿಕ ಮತ್ತು ಆಮುಷ್ಮಿಕ ಫಲಗಳನ್ನು ಅಪೇಕ್ಷಿಸುವವರಿಗೆ ಸುವರ್ಣಭರಿತ ಈ ಹಣ್ಣುಗಳು ಅಗ್ರಾಹ್ಯವಾಗಿದೆ.”
13094026 ವಸಿಷ್ಠ ಉವಾಚ|
13094026a ಶತೇನ ನಿಷ್ಕಂ ಗಣಿತಂ ಸಹಸ್ರೇಣ ಚ ಸಂಮಿತಮ್|
13094026c ಯಥಾ ಬಹು ಪ್ರತೀಚ್ಚನ್ ಹಿ ಪಾಪಿಷ್ಠಾಂ ಲಭತೇ ಗತಿಮ್||
ವಸಿಷ್ಠನು ಹೇಳಿದನು: “ದಾನವನ್ನು ಸ್ವೀಕರಿಸುವವನು ಮೊದಲು ನೂರು, ನಂತರ ಸಾವಿರ ಮತ್ತು ಅಂತರ ಬಹುಸಂಖ್ಯೆಯ ಸುವರ್ಣನಾಣ್ಯಗಳನ್ನು ಅಪೇಕ್ಷಿಸುತ್ತಾ ಪಾಪಿಷ್ಠರ ಗತಿಯನ್ನು ಹೊಂದುತ್ತಾನೆ.”
13094027 ಕಶ್ಯಪ ಉವಾಚ|
13094027a ಯತ್ ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ|
13094027c ಸರ್ವಂ ತನ್ನಾಲಮೇಕಸ್ಯ ತಸ್ಮಾದ್ವಿದ್ವಾನ್ ಶಮಂ ವ್ರಜೇತ್||
ಕಶ್ಯಪನು ಹೇಳಿದನು: “ಭೂಮಿಯಲ್ಲಿರುವ ಧಾನ್ಯಗಳೂ, ಹಿರಣ್ಯವೂ, ಪಶುಗಳೂ, ಸ್ತ್ರೀಯರೂ ಎಲ್ಲವೂ ಆಸೆಬುರುಕನಾದ ಒಬ್ಬನಿಗೇ ಸಾಲದಾಗುತ್ತದೆ. ಆದುದರಿಂದ ವಿದ್ವಾಂಸನು ಮನಸ್ಸಿನ ತೃಷ್ಣೆಯನ್ನು ಶಾಂತಗೊಳಿಸಬೇಕು.”
13094028 ಭರದ್ವಾಜ ಉವಾಚ|
13094028a ಉತ್ಪನ್ನಸ್ಯ ರುರೋಃ ಶೃಂಗಂ ವರ್ಧಮಾನಸ್ಯ ವರ್ಧತೇ|
13094028c ಪ್ರಾರ್ಥನಾ ಪುರುಷಸ್ಯೇವ ತಸ್ಯ ಮಾತ್ರಾ ನ ವಿದ್ಯತೇ||
ಭರದ್ವಾಜನು ಹೇಳಿದನು: “ಹುಟ್ಟಿದ ರುರುವಿನ ಕೋಡು ಬೆಳೆಯುತ್ತಿರುವಂತೆ ಮನುಷ್ಯನ ಬಯಕೆಗಳೂ ವೃದ್ಧಿಸುತ್ತಲೇ ಇರುತ್ತವೆ. ಅದಕ್ಕೆ ಎಲ್ಲೆಯೆಂಬುದೇ ಇರುವುದಿಲ್ಲ.”
13094029 ಗೌತಮ ಉವಾಚ|
13094029a ನ ತಲ್ಲೋಕೇ ದ್ರವ್ಯಮಸ್ತಿ ಯಲ್ಲೋಕಂ ಪ್ರತಿಪೂರಯೇತ್|
13094029c ಸಮುದ್ರಕಲ್ಪಃ ಪುರುಷೋ ನ ಕದಾ ಚನ ಪೂರ್ಯತೇ||
ಗೌತಮನು ಹೇಳಿದನು: “ಮನುಷ್ಯನ ಆಸೆಗಳನ್ನು ಪೂರೈಸಬಲ್ಲ ಯಾವ ವಸ್ತುವೂ ಈ ಲೋಕದಲ್ಲಿಲ್ಲ. ಸಮುದ್ರದಂತಿರುವ ಮನುಷ್ಯನ ಆಸೆಯು ಎಂದೂ ತುಂಬುವುದಿಲ್ಲ.”
13094030 ವಿಶ್ವಾಮಿತ್ರ ಉವಾಚ|
13094030a ಕಾಮಂ ಕಾಮಯಮಾನಸ್ಯ ಯದಾ ಕಾಮಃ ಸಮೃಧ್ಯತೇ|
13094030c ಅಥೈನಮಪರಃ ಕಾಮಸ್ತೃಷ್ಣಾ ವಿಧ್ಯತಿ ಬಾಣವತ್||
ವಿಶ್ವಾಮಿತ್ರನು ಹೇಳಿದನು: “ಒಂದು ಬಯಕೆಯನ್ನು ತೀರಿಸಿಕೊಳ್ಳುತ್ತಿದ್ದಂತೆಯೇ ಇನ್ನೊಂದು ಬಯಕೆಯು ಹುಟ್ಟಿಕೊಳ್ಳುತ್ತದೆ. ಹೀಗೆ ಕಾಮವೆಂಬ ತೃಷ್ಣೆಯು ಬಾಣದಂತೆ ಚುಚ್ಚುತ್ತಲೇ ಇರುತ್ತದೆ.”
13094031 ಜಮದಗ್ನಿರುವಾಚ|
13094031a ಪ್ರತಿಗ್ರಹೇ ಸಂಯಮೋ ವೈ ತಪೋ ಧಾರಯತೇ ಧ್ರುವಮ್|
13094031c ತದ್ಧನಂ ಬ್ರಾಹ್ಮಣಸ್ಯೇಹ ಲುಭ್ಯಮಾನಸ್ಯ ವಿಸ್ರವೇತ್||
ಜಮದಗ್ನಿಯು ಹೇಳಿದನು: “ದಾನವನ್ನು ಸ್ವೀಕರಿಸುವಾಗ ಸಂಯಮವಿರಬೇಕು. ಸಂಯಮಿಯು ತನ್ನ ತಪಸ್ಸನ್ನು ರಕ್ಷಿಸಿಕೊಳ್ಳುವನೆಂಬುವುದು ನಿಜ. ತಪಸ್ಸೇ ಬ್ರಾಹ್ಮಣನ ಧನ. ಆಸೆಯಿಂದ ಅದನ್ನು ಕಳೆದುಕೊಳ್ಳುತ್ತಾನೆ.”
13094032 ಅರುಂಧತ್ಯುವಾಚ|
13094032a ಧರ್ಮಾರ್ಥಂ ಸಂಚಯೋ ಯೋ ವೈ ದ್ರವ್ಯಾಣಾಂ ಪಕ್ಷಸಂಮತಃ|
13094032c ತಪಃಸಂಚಯ ಏವೇಹ ವಿಶಿಷ್ಟೋ ದ್ರವ್ಯಸಂಚಯಾತ್||
ಅರುಂಧತಿಯು ಹೇಳಿದಳು: “ಧರ್ಮಾರ್ಥವಾಗಿ ದ್ರವ್ಯಗಳನ್ನು ಸಂಗ್ರಹಿಸಬೇಕೆಂದು ಒಂದು ಪಕ್ಷದ ಅಭಿಪ್ರಾಯವಾಗಿದೆ. ಆದರೆ ದ್ರವ್ಯಸಂಚಯಕ್ಕಿಂತಲೂ ತಪಃಸಂಚಯವೇ ವಿಶಿಷ್ಠ ಎಂದೂ ಹೇಳಿದ್ದಾರೆ.”
13094033 ಗಂಡೋವಾಚ|
13094033a ಉಗ್ರಾದಿತೋ ಭಯಾದ್ಯಸ್ಮಾದ್ಬಿಭ್ಯತೀಮೇ ಮಮೇಶ್ವರಾಃ|
13094033c ಬಲೀಯಾಂಸೋ ದುರ್ಬಲವದ್ಬಿಭೇಮ್ಯಹಮತಃ ಪರಮ್||
ಗಂಡಾಳು ಹೇಳಿದಳು: “ನನ್ನ ಈ ಯಜಮಾನರು ತಪಸ್ಸಿನಿಂದ ಮಹಾಬಲಿಷ್ಠರಾಗಿದ್ದರೂ ಪ್ರತಿಗ್ರಹವೆಂಬ ಉಗ್ರ ಭಯದಿಂದ ದುರ್ಬಲರಂತೆ ಭೀತರಾಗಿದ್ದಾರೆ. ಆದುದರಿಂದ ಅವರ ಅನುಚರಳಾದ ನಾನೂ ಪ್ರತಿಗ್ರಹಕ್ಕೆ ಭಯಪಡುತ್ತೇನೆ.”
13094034 ಪಶುಸಖ ಉವಾಚ|
13094034a ಯದ್ವೈ ಧರ್ಮೇ ಪರಂ ನಾಸ್ತಿ ಬ್ರಾಹ್ಮಣಾಸ್ತದ್ಧನಂ ವಿದುಃ|
13094034c ವಿನಯಾರ್ಥಂ ಸುವಿದ್ವಾಂಸಮುಪಾಸೇಯಂ ಯಥಾತಥಮ್||
ಪಶುಸಖನು ಹೇಳಿದನು: “ಧರ್ಮಪಾಲನೆಯಿಂದ ದೊರೆಯುವ ಧನಕ್ಕಿಂತ ಶ್ರೇಷ್ಠವಾದ ಧನವಿಲ್ಲವೆಂದು ಬ್ರಾಹ್ಮಣರು ತಿಳಿದಿದ್ದಾರೆ. ಅದನ್ನು ತಿಳಿಯುವ ಸಲುವಾಗಿಯೇ ನಾನು ಉತ್ತಮ ವಿದ್ವಾಂಸರನ್ನು ಯಥಾವತ್ತಾಗಿ ಉಪಾಸಿಸುತ್ತಿದ್ದೇನೆ[4].”
13094035 ಋಷಯ ಊಚುಃ|
13094035a ಕುಶಲಂ ಸಹ ದಾನಾಯ ತಸ್ಮೈ ಯಸ್ಯ ಪ್ರಜಾ ಇಮಾಃ|
13094035c ಫಲಾನ್ಯುಪಧಿಯುಕ್ತಾನಿ ಯ ಏವಂ ನಃ ಪ್ರಯಚ್ಚಸಿ||
ಋಷಿಗಳು ಹೇಳಿದರು: “ಯಾವ ರಾಜನ ಪ್ರಜೆಗಳು ಮೋಸದಿಂದ ನಮಗೆ ಈ ಫಲಗಳನ್ನು ಕೊಟ್ಟು ಫಲಗಳ ವ್ಯಾಜದಿಂದ ಸುವರ್ಣವನ್ನು ದಾನಮಾಡಲು ಪ್ರಯತ್ನಿಸುತ್ತಿರುವರೋ ಅವನು ಈ ಧನವನ್ನು ತನ್ನಲ್ಲಿಯೇ ಇಟ್ಟುಕೊಂಡು ಕುಶಲಿಯಾಗಿರಲಿ!””
13094036 ಭೀಷ್ಮ ಉವಾಚ|
13094036a ಇತ್ಯುಕ್ತ್ವಾ ಹೇಮಗರ್ಭಾಣಿ ಹಿತ್ವಾ ತಾನಿ ಫಲಾನಿ ತೇ|
13094036c ಋಷಯೋ ಜಗ್ಮುರನ್ಯತ್ರ ಸರ್ವ ಏವ ಧೃತವ್ರತಾಃ||
ಭೀಷ್ಮನು ಹೇಳಿದನು: “ಹೀಗೆ ಹೇಳಿ ಆ ಹೇಮಗರ್ಭ ಫಲಗಳನ್ನು ತೊರೆದು ಧೃತವ್ರತ ಋಷಿಗಳು ಎಲ್ಲರೂ ಬೇರೆಕಡೆ ಹೊರಟುಹೋದರು.
13094037 ಮಂತ್ರಿಣಃ ಊಚುಃ|
13094037a ಉಪಧಿಂ ಶಂಕಮಾನಾಸ್ತೇ ಹಿತ್ವೇಮಾನಿ ಫಲಾನಿ ವೈ|
13094037c ತತೋಽನ್ಯೇನೈವ ಗಚ್ಚಂತಿ ವಿದಿತಂ ತೇಽಸ್ತು ಪಾರ್ಥಿವ||
ಮಂತ್ರಿಗಳು ಹೇಳಿದರು: “ಪಾರ್ಥಿವ! ಕಪಟವಿರಬಹುದೆಂಬ ಶಂಕೆಯಿಂದ ಆ ಫಲಗಳನ್ನು ತೊರೆದು ಅವರು ಬೇರೊಂದು ಮಾರ್ಗದಿಂದ ಎಲ್ಲಿಯೋ ಹೊರಟು ಹೋದರು. ಇದನ್ನು ನಾವು ನಿನಗೆ ತಿಳಿಸಿದ್ದೇವೆ.”
13094038a ಇತ್ಯುಕ್ತಃ ಸ ತು ಭೃತ್ಯೈಸ್ತೈರ್ವೃಷಾದರ್ಭಿಶ್ಚುಕೋಪ ಹ|
13094038c ತೇಷಾಂ ಸಂಪ್ರತಿಕರ್ತುಂ ಚ ಸರ್ವೇಷಾಮಗಮದ್ಗೃಹಮ್||
ಸೇವಕರಾಡಿದುದನ್ನು ಕೇಳಿ ವೃಷಾದರ್ಭಿಯು ಕುಪಿತನಾದನು. ಅವರೆಲ್ಲರಿಗೂ ಪ್ರತೀಕಾರವನ್ನೆಸಗಲು ನಿಶ್ಚಯಿಸಿ ತನ್ನ ಮನೆಗೆ ತೆರಳಿದನು.
13094039a ಸ ಗತ್ವಾಹವನೀಯೇಽಗ್ನೌ ತೀವ್ರಂ ನಿಯಮಮಾಸ್ಥಿತಃ|
13094039c ಜುಹಾವ ಸಂಸ್ಕೃತಾಂ ಮಂತ್ರೈರೇಕೈಕಾಮಾಹುತಿಂ ನೃಪಃ||
ಹೋಗಿ ನೃಪನು ತೀವ್ರ ನಿಯಮಾನುಷ್ಠಾನುಗಳನ್ನು ಮಾಡುತ್ತಾ ಸಂಸ್ಕೃತಗೊಳಿಸಿದ ಆಹವನೀಯ ಅಗ್ನಿಯಲ್ಲಿ ಮಂತ್ರಗಳಿಂದ ಒಂದೊಂದೇ ಆಹುತಿಯನ್ನು ನೀಡತೊಡಗಿದನು.
13094040a ತಸ್ಮಾದಗ್ನೇಃ ಸಮುತ್ತಸ್ಥೌ ಕೃತ್ಯಾ ಲೋಕಭಯಂಕರೀ|
13094040c ತಸ್ಯಾ ನಾಮ ವೃಷಾದರ್ಭಿರ್ಯಾತುಧಾನೀತ್ಯಥಾಕರೋತ್||
ಆ ಅಗ್ನಿಯಿಂದ ಲೋಕಭಯಂಕರಿಯಾದ ಕೃತ್ಯೆಯೊಂದು ಪ್ರಾದುರ್ಭವಿಸಿದಳು. ವೃಷಾದರ್ಭಿಯು ಅವಳಿಗೆ ಯಾತುಧಾನೀ ಎಂಬ ನಾಮಕರಣವನ್ನು ಮಾಡಿದನು.
13094041a ಸಾ ಕೃತ್ಯಾ ಕಾಲರಾತ್ರೀವ ಕೃತಾಂಜಲಿರುಪಸ್ಥಿತಾ|
13094041c ವೃಷಾದರ್ಭಿಂ ನರಪತಿಂ ಕಿಂ ಕರೋಮೀತಿ ಚಾಬ್ರವೀತ್||
ಕಾಳರಾತ್ರಿಯಂತಿದ್ದ ಆ ಕೃತ್ಯೆಯು ಅಂಜಲೀಬದ್ಧಳಾಗಿ ನಿಂತು ಏನು ಮಾಡಬೇಕು ಎಂದು ನರಪತಿ ವೃಷಾದರ್ಭಿಯನ್ನು ಕೇಳಿದಳು.
13094042 ವೃಷಾದರ್ಭಿರುವಾಚ|
13094042a ಋಷೀಣಾಂ ಗಚ್ಚ ಸಪ್ತಾನಾಮರುಂಧತ್ಯಾಸ್ತಥೈವ ಚ|
13094042c ದಾಸೀಭರ್ತುಶ್ಚ ದಾಸ್ಯಾಶ್ಚ ಮನಸಾ ನಾಮ ಧಾರಯ||
ವೃಷಾದರ್ಭಿಯು ಹೇಳಿದನು: “ಮನಸ್ಸಿನಲ್ಲಿ ಅವರ ಹೆಸರುಗಳನ್ನು ನೆನಪಿಟ್ಟುಕೊಂಡು ಸಪ್ತ ಋಷಿಗಳು, ಅರುಂಧತಿ, ದಾಸೀ ಸೇವಕಿ ಮತ್ತು ದಾಸನ ಬಳಿ ಹೋಗು.
13094043a ಜ್ಞಾತ್ವಾ ನಾಮಾನಿ ಚೈತೇಷಾಂ ಸರ್ವಾನೇತಾನ್ವಿನಾಶಯ|
13094043c ವಿನಷ್ಟೇಷು ಯಥಾ ಸ್ವೈರಂ ಗಚ್ಚ ಯತ್ರೇಪ್ಸಿತಂ ತವ||
ಅವರ ಹೆಸರುಗಳನ್ನು ತಿಳಿದುಕೊಂಡು ಅವರೆಲ್ಲರನ್ನೂ ನಾಶಗೊಳಿಸು. ಅವರು ನಾಶಹೊಂದಿದ ನಂತರ ನೀನು ಬೇಕಾದಲ್ಲಿಗೆ ಹೊರಟು ಹೋಗು.”
13094044a ಸಾ ತಥೇತಿ ಪ್ರತಿಶ್ರುತ್ಯ ಯಾತುಧಾನೀ ಸ್ವರೂಪಿಣೀ|
13094044c ಜಗಾಮ ತದ್ವನಂ ಯತ್ರ ವಿಚೇರುಸ್ತೇ ಮಹರ್ಷಯಃ||
ಆ ಸ್ವರೂಪಿಣೀ ಯಾತುಧಾನಿಯು ಹಾಗೆಯೇ ಆಗಲೆಂದು ಉತ್ತರಿಸಿ ಮಹರ್ಷಿಗಳು ಸುತ್ತಾಡುತ್ತಿದ್ದ ಆ ವನಕ್ಕೆ ಹೋದಳು.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ವಿಸಸ್ತೈನ್ಯೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ವಿಸಸ್ತೈನ್ಯೋಪಾಖ್ಯಾನ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.
[1] ದಾತೃಪ್ರತಿಗೃಹೀತೋರ್ವೇ (ಭಾರತ ದರ್ಶನ/ಗೀತಾ ಪ್ರೆಸ್).
[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಪ್ರತಿಗ್ರಹೋ ಬ್ರಾಹ್ಮಣಾನಾಂ ಸೃಷ್ಟಾ ವೃತ್ತಿರನಿಂದಿತಾ (ದಕ್ಷಿಣಾತ್ಯ ಪಾಠದಲ್ಲಿರುವಂತೆ ಗೀತಾ ಪ್ರೆಸ್).
[3] ಕ್ಷೇತ್ರಂ ಹಿ ದೈವತಮಿದಂ (ಭಾರತ ದರ್ಶನ/ಗೀತಾ ಪ್ರೆಸ್).
[4] ಈ ಶ್ಲೋಕವನ್ನು ಇನ್ನೊಂದು ರೀತಿಯಲ್ಲಿ ಅನುವಾದಿಸಿದ್ದಾರೆ: ಯಾವ ಧರ್ಮದಲ್ಲಿ ಪರೋಪಕಾರವಿಲ್ಲವೋ ಅದನ್ನೇ ಬ್ರಾಹ್ಮಣರು ಧನವೆಂದು ತಿಳಿಯುತ್ತಾರೆ. ಪ್ರತಿಗ್ರಹವು ಬ್ರಾಹ್ಮಣನಿಗೆ ಧರ್ಮವೆಂದು ಹೇಳುತ್ತಾರೆ. ಆದರೆ ಪ್ರತಿಗ್ರಹವು ಧನವನ್ನು ಗಳಿಸಿಕೊಟ್ಟು ಜೀವಿಕೆಗೆ ಸಾಧಕವಾಗುವುದೇ ಹೊರತು ಪರಲೋಕಕ್ಕೆ ಸಾಧಕವಾಗುವುದಿಲ್ಲ. ಆದುದರಿಂದ ಬ್ರಾಹ್ಮಣರು ಪ್ರತಿಗ್ರಹಧರ್ಮವನ್ನೇ ಧನವೆಂದು ತಿಳಿಯುತ್ತಾರೆ. ಈ ರಹಸ್ಯವನ್ನು ತಿಳಿಯುವ ಸಲುವಾಗಿಯೇ ನಾನು ಯಥಾವತ್ತಾಗಿ ವಿದ್ವಾಂಸರ ಸೇವೆಯನ್ನು ಮಾಡುತ್ತೇನೆ (ಭಾರತ ದರ್ಶನ).