ಅನುಶಾಸನ ಪರ್ವ: ದಾನಧರ್ಮ ಪರ್ವ
೮೬
ತಾರಕವಧೋಪಾಖ್ಯಾನ
ಕಾರ್ತಿಕೇಯನ ಉತ್ಪತ್ತಿ, ಪಾಲನೆ-ಪೋಷಣೆ ಮತ್ತು ದೇವಸೇನಾಪತ್ಯಾಭಿಷೇಕ, ತಾರಕವಧೆ (೧-೩೪).
13086001 ಯುಧಿಷ್ಠಿರ ಉವಾಚ|
13086001a ಉಕ್ತಾಃ ಪಿತಾಮಹೇನೇಹ ಸುವರ್ಣಸ್ಯ ವಿಧಾನತಃ|
13086001c ವಿಸ್ತರೇಣ ಪ್ರದಾನಸ್ಯ ಯೇ ಗುಣಾಃ ಶ್ರುತಿಲಕ್ಷಣಾಃ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಸುವರ್ಣವನ್ನು ವಿಧಿವತ್ತಾಗಿ ದಾನಮಾಡುವುದರಿಂದ ದೊರೆಯುವ ಫಲಗಳನ್ನೂ ಶ್ರುತಿಲಕ್ಷಣಗಳನ್ನೂ ವಿಸ್ತಾರವಾಗಿ ಹೇಳಿದ್ದೀಯೆ.
13086002a ಯತ್ತು ಕಾರಣಮುತ್ಪತ್ತೇಃ ಸುವರ್ಣಸ್ಯೇಹ ಕೀರ್ತಿತಮ್|
13086002c ಸ ಕಥಂ ತಾರಕಃ ಪ್ರಾಪ್ತೋ ನಿಧನಂ ತದ್ಬ್ರವೀಹಿ ಮೇ||
ಯಾವ ಕಾರಣದಿಂದ ಸುವರ್ಣದ ಉತ್ಪತ್ತಿಯಾಯಿತು ಎನ್ನುವುದನ್ನೂ ಹೇಳಿದ್ದೀಯೆ. ತಾರಕನು ಹೇಗೆ ನಿಧನನಾದನು ಎನ್ನುವುದನ್ನು ನನಗೆ ಹೇಳು.
13086003a ಉಕ್ತಃ ಸ ದೇವತಾನಾಂ ಹಿ ಅವಧ್ಯ ಇತಿ ಪಾರ್ಥಿವ|
13086003c ನ ಚ ತಸ್ಯೇಹ ತೇ ಮೃತ್ಯುರ್ವಿಸ್ತರೇಣ ಪ್ರಕೀರ್ತಿತಃ||
ಪಾರ್ಥಿವ! ದೇವತೆಗಳಿಗೂ ಅವನು ಅವಧ್ಯ ಎಂದು ನೀನು ಹೇಳಿದ್ದೆ. ಆದರೆ ಅವನ ಮೃತ್ಯುವು ಹೇಗಾಯಿತೆಂದು ವಿಸ್ತಾರವಾಗಿ ಹೇಳಿಲ್ಲ.
13086004a ಏತದಿಚ್ಚಾಮ್ಯಹಂ ಶ್ರೋತುಂ ತ್ವತ್ತಃ ಕುರುಕುಲೋದ್ವಹ|
13086004c ಕಾರ್ತ್ಸ್ನ್ಯೇನ ತಾರಕವಧಂ ಪರಂ ಕೌತೂಹಲಂ ಹಿ ಮೇ||
ಕುರುಕುಲೋದ್ವಹ! ತಾರಕ ವಧೆಯ ಕುರಿತು ಸಂಪೂರ್ಣವಾಗಿ ತತ್ತ್ವತಃ ಕೇಳಬಯಸುತ್ತೇನೆ. ಅದರ ಕುರಿತು ನನಗೆ ಪರಮ ಕುತೂಹಲವುಂಟಾಗಿದೆ.”
13086005 ಭೀಷ್ಮ ಉವಾಚ|
13086005a ವಿಪನ್ನಕೃತ್ಯಾ ರಾಜೇಂದ್ರ ದೇವತಾ ಋಷಯಸ್ತಥಾ|
13086005c ಕೃತ್ತಿಕಾಶ್ಚೋದಯಾಮಾಸುರಪತ್ಯಭರಣಾಯ ವೈ||
ಭೀಷ್ಮನು ಹೇಳಿದನು: “ರಾಜೇಂದ್ರ! ತಮ್ಮ ಕೆಲಸವು ಆಗಲಿಲ್ಲವೆಂದು ತಿಳಿದ ದೇವತೆಗಳು ಮತ್ತು ಋಷಿಗಳು ಗಂಗೆಯು ತೊರೆದಿದ್ದ ಗರ್ಭವನ್ನು ಪೊರೆಯುವಂತೆ ಕೃತ್ತಿಕೆಯರನ್ನು ಪ್ರಚೋದಿಸಿದರು.
13086006a ನ ದೇವತಾನಾಂ ಕಾ ಚಿದ್ಧಿ ಸಮರ್ಥಾ ಜಾತವೇದಸಃ|
13086006c ಏಕಾಪಿ ಶಕ್ತಾ ತಂ ಗರ್ಭಂ ಸಂಧಾರಯಿತುಮೋಜಸಾ||
ಜಾತವೇದಸನ ಓಜಸ್ಸಿನಿಂದಾದ ಆ ಗರ್ಭವನ್ನು ಧರಿಸಲು ದೇವತೆಗಳಲ್ಲಿ ಯಾರೊಬ್ಬರೂ ಶಕ್ತರಾಗಿರಲಿಲ್ಲ.
13086007a ಷಣ್ಣಾಂ ತಾಸಾಂ ತತಃ ಪ್ರೀತಃ ಪಾವಕೋ ಗರ್ಭಧಾರಣಾತ್|
13086007c ಸ್ವೇನ ತೇಜೋವಿಸರ್ಗೇಣ ವೀರ್ಯೇಣ ಪರಮೇಣ ಚ||
ತನ್ನ ತೇಜಸ್ವಿಸರ್ಗದಿಂದ ಮತ್ತು ಪರಮ ವೀರ್ಯದಿಂದ ಯುಕ್ತವಾದ ಆ ಗರ್ಭವನ್ನು ಧರಿಸಿದುದಕ್ಕಾಗಿ ಆ ಆರು ಕೃತ್ತಿಕೆಯರ ಕುರಿತು ಪಾವಕನು ಪ್ರೀತನಾದನು.
13086008a ತಾಸ್ತು ಷಟ್ಕೃತ್ತಿಕಾ ಗರ್ಭಂ ಪುಪುಷುರ್ಜಾತವೇದಸಃ|
13086008c ಷಟ್ಸು ವರ್ತ್ಮಸು ತೇಜೋಽಗ್ನೇಃ ಸಕಲಂ ನಿಹಿತಂ ಪ್ರಭೋ||
ಆರು ಕೃತ್ತಿಕೆಯರೂ ಜಾತವೇದಸನ ಆ ಗರ್ಭವನ್ನು ಪೋಷಿಸಿದರು. ಪ್ರಭೋ! ಅಗ್ನಿಯ ಆ ತೇಜಸ್ಸು ಎಲ್ಲವೂ ಆರು ಮಾರ್ಗಗಳಲ್ಲಿ ಅವರಲ್ಲಿ ಪ್ರತಿಷ್ಠಿತಗೊಂಡಿತ್ತು.
13086009a ತತಸ್ತಾ ವರ್ಧಮಾನಸ್ಯ ಕುಮಾರಸ್ಯ ಮಹಾತ್ಮನಃ|
13086009c ತೇಜಸಾಭಿಪರೀತಾಂಗ್ಯೋ ನ ಕ್ವ ಚಿಚ್ಚರ್ಮ ಲೇಭಿರೇ||
ಬೆಳೆಯುತ್ತಿರುವ ಆ ಮಹಾತ್ಮ ಕುಮಾರನ ತೇಜಸ್ಸಿನಿಂದ ಪರಿತಪಿಸಿದ ಕೃತ್ತಿಕೆಯರಿಗೆ ಸ್ವಲ್ಪವೂ ನೆಮ್ಮದಿಯಾಗಿರಲಿಲ್ಲ.
13086010a ತತಸ್ತೇಜಃಪರೀತಾಂಗ್ಯಃ ಸರ್ವಾಃ ಕಾಲ ಉಪಸ್ಥಿತೇ|
13086010c ಸಮಂ ಗರ್ಭಂ ಸುಷುವಿರೇ ಕೃತ್ತಿಕಾಸ್ತಾ ನರರ್ಷಭ||
ನರರ್ಷಭ! ಆಗ ಅಂಗಾಂಗಗಳು ತೇಜಸ್ಸಿನಿಂದ ತುಂಬಿದ್ದ ಕೃತ್ತಿಕೆಯರು ಸಮಯ ಬಂದಾಗ ಎಲ್ಲರೂ ಒಟ್ಟಿಗೇ ಆ ಗರ್ಭಕ್ಕೆ ಜನ್ಮವಿತ್ತರು.
13086011a ತತಸ್ತಂ ಷಡಧಿಷ್ಠಾನಂ ಗರ್ಭಮೇಕತ್ವಮಾಗತಮ್|
13086011c ಪೃಥಿವೀ ಪ್ರತಿಜಗ್ರಾಹ ಕಾಂತೀಪುರಸಮೀಪತಃ[1]||
ಆರು ಅಧಿಷ್ಠಾನಗಳಲ್ಲಿ ಬೆಳೆದಿದ್ದ ಆ ಗರ್ಭವು ಹುಟ್ಟುತ್ತಲೇ ಒಂದಾಯಿತು. ಸುವರ್ಣದ ಸಮೀಪದಲ್ಲಿದ್ದ ಶಿಶುವನ್ನು ಪೃಥ್ವಿಯು ಪ್ರತಿಗ್ರಹಿಸಿದಳು.
13086012a ಸ ಗರ್ಭೋ ದಿವ್ಯಸಂಸ್ಥಾನೋ ದೀಪ್ತಿಮಾನ್ಪಾವಕಪ್ರಭಃ|
13086012c ದಿವ್ಯಂ ಶರವಣಂ ಪ್ರಾಪ್ಯ ವವೃಧೇ ಪ್ರಿಯದರ್ಶನಃ||
ಪಾವಕಪ್ರಭೆಯಿಂದ ಬೆಳಗುತ್ತಿದ್ದ ಆ ಗರ್ಭವು ದಿವ್ಯ ಸುಂದರ ದೇಹವನ್ನು ಧರಿಸಿ ದಿವ್ಯ ಶರವಣವನ್ನು ಆಶ್ರಯಿಸಿ ಬೆಳೆಯಿತು.
13086013a ದದೃಶುಃ ಕೃತ್ತಿಕಸ್ತಂ ತು ಬಾಲಂ ವಹ್ನಿಸಮದ್ಯುತಿಮ್[2]|
13086013c ಜಾತಸ್ನೇಹಾಶ್ಚ ಸೌಹಾರ್ದಾತ್ಪುಪುಷುಃ ಸ್ತನ್ಯವಿಸ್ರವೈಃ||
ಆ ಅಗ್ನಿಸಮದ್ಯುತಿ ಬಾಲಕನ್ನು ಕೃತ್ತಿಕೆಯರು ನೋಡಿದರು. ಅವನ ಮೇಲೆ ಸ್ನೇಹವು ಹುಟ್ಟಲು ಅವರು ಸೌಹಾರ್ದತೆಯಿಂದ ಸ್ತನಗಳನ್ನು ಸುರಿಸಿ ಅವನನ್ನು ಪೋಷಿಸಿದರು.
13086014a ಅಭವತ್ಕಾರ್ತ್ತಿಕೇಯಃ ಸ ತ್ರೈಲೋಕ್ಯೇ ಸಚರಾಚರೇ|
13086014c ಸ್ಕನ್ನತ್ವಾತ್ಸ್ಕಂದತಾಂ ಚಾಪ ಗುಹಾವಾಸಾದ್ಗುಹೋಽಭವತ್||
ಆಗ ಅವನು ತ್ರೈಲೋಕ್ಯ ಸಚರಾಚರಗಳಲ್ಲಿ ಕಾರ್ತಿಕೇಯನೆಂದಾದನು. ಸ್ಕಲನದಿಂದ ಸ್ಕಂದನೆಂದಾದನು ಮತ್ತು ಗುಹಾವಾಸದಿಂದ ಗುಹನೆಂದಾದನು.
13086015a ತತೋ ದೇವಾಸ್ತ್ರಯಸ್ತ್ರಿಂಶದ್ದಿಶಶ್ಚ ಸದಿಗೀಶ್ವರಾಃ|
13086015c ರುದ್ರೋ ಧಾತಾ ಚ ವಿಷ್ಣುಶ್ಚ ಯಜ್ಞಃ ಪೂಷಾರ್ಯಮಾ ಭಗಃ||
13086016a ಅಂಶೋ ಮಿತ್ರಶ್ಚ ಸಾಧ್ಯಾಶ್ಚ ವಸವೋ ವಾಸವೋಽಶ್ವಿನೌ|
13086016c ಆಪೋ ವಾಯುರ್ನಭಶ್ಚಂದ್ರೋ ನಕ್ಷತ್ರಾಣಿ ಗ್ರಹಾ ರವಿಃ||
13086017a ಪೃಥಗ್ಭೂತಾನಿ ಚಾನ್ಯಾನಿ ಯಾನಿ ದೇವಾರ್ಪಣಾನಿ ವೈ|
13086017c ಆಜಗ್ಮುಸ್ತತ್ರ ತಂ ದ್ರಷ್ಟುಂ ಕುಮಾರಂ ಜ್ವಲನಾತ್ಮಜಮ್|
13086017e ಋಷಯಸ್ತುಷ್ಟುವುಶ್ಚೈವ ಗಂಧರ್ವಾಶ್ಚ ಜಗುಸ್ತಥಾ||
ಆಗ ಮೂವತ್ಮೂರು ದೇವತೆಗಳೂ, ದಶದಿಕ್ಕುಗಳೂ, ದಿಕ್ಪಾಲಕರೂ, ರುದ್ರ-ಬ್ರಹ್ಮ-ವಿಷ್ಣುವೂ, ಯಜ್ಞ, ಪೂಷ, ಆರ್ಯಮಾ, ಭಗ, ಅಂಶ, ಮಿತ್ರ, ಸಾಧ್ಯರು, ವಸುಗಳು, ವಾಸವ, ಅಶ್ವಿನಿಯರು, ಆಪ, ವಾಯು, ನಭ, ಚಂದ್ರ, ನಕ್ಷತ್ರಗಳು, ಗ್ರಹಗಳು, ರವಿ, ಪ್ರತ್ಯೇಕ ಭೂತಗಳು, ಅನ್ಯ ದೇವಾರ್ಪಣಗಳು ಅಗ್ನಿಯ ಮಗ ಕುಮಾರನನ್ನು ನೋಡಲು ಅಲ್ಲಿಗೆ ಆಗಮಿಸಿದರು. ಋಷಿಗಳು ಅವನನ್ನು ಸ್ತುತಿಸಿದರು ಮತ್ತು ಗಂಧರ್ವರು ಅವನಿಗೆ ಜಯಕಾರಮಾಡಿದರು.
13086018a ಷಡಾನನಂ ಕುಮಾರಂ ತಂ ದ್ವಿಷಡಕ್ಷಂ ದ್ವಿಜಪ್ರಿಯಮ್|
13086018c ಪೀನಾಂಸಂ ದ್ವಾದಶಭುಜಂ ಪಾವಕಾದಿತ್ಯವರ್ಚಸಮ್||
13086019a ಶಯಾನಂ ಶರಗುಲ್ಮಸ್ಥಂ ದೃಷ್ಟ್ವಾ ದೇವಾಃ ಸಹರ್ಷಿಭಿಃ|
13086019c ಲೇಭಿರೇ ಪರಮಂ ಹರ್ಷಂ ಮೇನಿರೇ ಚಾಸುರಂ ಹತಮ್||
ಹನ್ನೆರಡು ಕಣ್ಣುಗಳಿದ್ದ, ಸ್ಥೂಲ ಹೆಗಲುಗಳ, ಹನ್ನೆರಡು ಭುಜಗಳ, ಅಗ್ನಿ-ಆದಿತ್ಯವರ್ಚಸ, ಶರವಣಗಳ ಮೇಲೆ ಮಲಗಿದ್ದ ದ್ವಿಜಪ್ರಿಯ ಷಡಾನನ ಕುಮಾರನನ್ನು ನೋಡಿ ಋಷಿಗಳೊಂದಿಗೆ ದೇವತೆಗಳು ಪರಮ ಹರ್ಷಿತರಾದರು ಮತ್ತು ಅಸುರನು ಹತನಾದನೆಂದೇ ತಿಳಿದನು.
13086020a ತತೋ ದೇವಾಃ ಪ್ರಿಯಾಣ್ಯಸ್ಯ ಸರ್ವ ಏವ ಸಮಾಚರನ್|
13086020c ಕ್ರೀಡತಃ ಕ್ರೀಡನೀಯಾನಿ ದದುಃ ಪಕ್ಷಿಗಣಾಂಶ್ಚ ಹ||
ಆಗ ದೇವತೆಗಳು ಅವನಿಗೆ ಪ್ರಿಯವಾದ ಎಲ್ಲವನ್ನೂ ಮಾಡಿದರು. ಆಡುತ್ತಿದ್ದ ಅವನಿಗೆ ಆಟಿಗೆಗಳನ್ನು ಪಕ್ಷಿಗಳೂ ತಂದುಕೊಟ್ಟವು.
13086021a ಸುಪರ್ಣೋಽಸ್ಯ ದದೌ ಪತ್ರಂ[3] ಮಯೂರಂ ಚಿತ್ರಬರ್ಹಿಣಮ್|
13086021c ರಾಕ್ಷಸಾಶ್ಚ ದದುಸ್ತಸ್ಮೈ ವರಾಹಮಹಿಷಾವುಭೌ||
ಸುಪರ್ಣನು ಅವನಿಗೆ ವಿಚಿತ್ರ ರೆಕ್ಕೆಗಳಿದ್ದ ತನ್ನ ಪುತ್ರ ಮಯೂರನನ್ನು ಕೊಟ್ಟನು. ರಾಕ್ಷಸರು ಅವನಿಗೆ ವರಾಹ-ಮಹಿಷಗಳನ್ನು ಕೊಟ್ಟರು.
13086022a ಕುಕ್ಕುಟಂ ಚಾಗ್ನಿಸಂಕಾಶಂ ಪ್ರದದೌ ವರುಣಃ ಸ್ವಯಮ್|
13086022c ಚಂದ್ರಮಾಃ ಪ್ರದದೌ ಮೇಷಮಾದಿತ್ಯೋ ರುಚಿರಾಂ ಪ್ರಭಾಮ್||
ಸ್ವಯಂ ವರುಣನು ಅವನಿಗೆ ಅಗ್ನಿಸಂಕಾಶ ಕೋಳಿಯನ್ನು ಕೊಟ್ಟನು. ಚಂದ್ರಮನು ಕುರಿಯನ್ನೂ ಆದಿತ್ಯನು ಸುಂದರ ಪ್ರಭೆಯನ್ನೂ ಕೊಟ್ಟರು.
13086023a ಗವಾಂ ಮಾತಾ ಚ ಗಾ ದೇವೀ ದದೌ ಶತಸಹಸ್ರಶಃ|
13086023c ಚಾಗಮಗ್ನಿರ್ಗುಣೋಪೇತಮಿಲಾ ಪುಷ್ಪಫಲಂ ಬಹು||
ಗೋವುಗಳ ಮಾತೆ ಸುರಭಿಯು ಅವನಿಗೆ ಒಂದು ಲಕ್ಷ ಗೋವುಗಳನ್ನು ನೀಡಿದಳು. ಅಗ್ನಿಯು ಗುಣೋಪೇತ ಆಡನ್ನೂ, ಇಲೆಯು ಅನೇಕ ಫಲ-ಪುಷ್ಪಗಳನ್ನೂ ನೀಡಿದರು.
13086024a ಸುಧನ್ವಾ ಶಕಟಂ ಚೈವ ರಥಂ ಚಾಮಿತಕೂಬರಮ್|
13086024c ವರುಣೋ ವಾರುಣಾನ್ದಿವ್ಯಾನ್ ಭುಜಂಗಾನ್[4] ಪ್ರದದೌ ಶುಭಾನ್|
13086024e ಸಿಂಹಾನ್ಸುರೇಂದ್ರೋ ವ್ಯಾಘ್ರಾಂಶ್ಚ ದ್ವೀಪಿನೋಽನ್ಯಾಂಶ್ಚ ದಂಷ್ಟ್ರಿಣಃ||
13086025a ಶ್ವಾಪದಾಂಶ್ಚ ಬಹೂನ್ ಘೋರಾಂಶ್ಚತ್ರಾಣಿ ವಿವಿಧಾನಿ ಚ|
13086025c ರಾಕ್ಷಸಾಸುರಸಂಘಾಶ್ಚ ಯೇಽನುಜಗ್ಮುಸ್ತಮೀಶ್ವರಮ್||
ಸುಧನ್ವನು ಸುಂದರ ಬಂಡಿಯನ್ನೂ ವಿಶಾಲ ಮೂಕಿಯಿರುವ ರಥವನ್ನೂ ಕೊಟ್ಟನು. ವರುಣನು ದಿವ್ಯ ಆನೆಗಳನ್ನೂ ಶುಭ ಸರ್ಪಗಳನ್ನೂ ನೀಡಿದನು. ಸುರೇಂದ್ರನು ಅವನಿಗೆ ಸಿಂಹಗಳನ್ನೂ, ಹುಲಿಗಳನ್ನೂ, ಚಿರತೆಗಳನ್ನೂ, ಅನ್ಯ ದಂಷ್ಟ್ರಮೃಗಗಳನ್ನೂ, ಅನೇಕ ಕ್ರೂರಮೃಗಳನ್ನೂ ಮತ್ತು ವಿವಿಧ ಚತ್ರಗಳನ್ನೂ ನೀಡಿದನು. ರಾಕ್ಷಸ-ಅಸುರ ಸಂಘಗಳೂ ಆ ಈಶ್ವರನ ಅನುಯಾಯಿಗಳಾದವು.
13086026a ವರ್ಧಮಾನಂ ತು ತಂ ದೃಷ್ಟ್ವಾ ಪ್ರಾರ್ಥಯಾಮಾಸ ತಾರಕಃ|
13086026c ಉಪಾಯೈರ್ಬಹುಭಿರ್ಹಂತುಂ ನಾಶಕಚ್ಚಾಪಿ ತಂ ವಿಭುಮ್||
ವರ್ಧಿಸುತ್ತಿರುವ ಅವನನ್ನು ನೋಡಿ ತಾರಕನು ಯುದ್ಧಕ್ಕೆ ಆಹ್ವಾನಿಸಿದನು. ಅನೇಕ ಉಪಾಯಗಳಿಂದಲೂ ಆ ವಿಭುವನ್ನು ಸಂಹರಿಸಲು ಅವನಿಗೆ ಸಾಧ್ಯವಾಗಲಿಲ್ಲ.
13086027a ಸೇನಾಪತ್ಯೇನ ತಂ ದೇವಾಃ ಪೂಜಯಿತ್ವಾ ಗುಹಾಲಯಮ್|
13086027c ಶಶಂಸುರ್ವಿಪ್ರಕಾರಂ ತಂ ತಸ್ಮೈ ತಾರಕಕಾರಿತಮ್||
ದೇವತೆಗಳು ಆ ಗುಹಾಲಯನನ್ನು ಸೇನಾಪತಿಯನ್ನಾಗಿ ಪೂಜಿಸಿ ಅವನಿಗೆ ತಾರಕನು ಮಾಡಿದ್ದ ದುಷ್ಕೃತ್ಯಗಳೆಲ್ಲವನ್ನೂ ವರದಿಮಾಡಿದರು.
13086028a ಸ ವಿವೃದ್ಧೋ ಮಹಾವೀರ್ಯೋ ದೇವಸೇನಾಪತಿಃ ಪ್ರಭುಃ|
13086028c ಜಘಾನಾಮೋಘಯಾ ಶಕ್ತ್ಯಾ ದಾನವಂ ತಾರಕಂ ಗುಹಃ||
ದೇವಸೇನಾಪತಿ ಪ್ರಭು ಮಹಾವೀರ್ಯನು ವರ್ಧಿಸಿದನು ಮತ್ತು ಗುಹನು ಅಮೋಘ ಶಕ್ತಿಯಿಂದ ದಾನವ ತಾರಕನನ್ನು ಸಂಹರಿಸಿದನು.
13086029a ತೇನ ತಸ್ಮಿನ್ಕುಮಾರೇಣ ಕ್ರೀಡತಾ ನಿಹತೇಽಸುರೇ|
13086029c ಸುರೇಂದ್ರಃ ಸ್ಥಾಪಿತೋ ರಾಜ್ಯೇ ದೇವಾನಾಂ ಪುನರೀಶ್ವರಃ||
ಆಡುತ್ತಿದ್ದ ಆ ಕುಮಾರನಿಂದ ಅಸುರನು ಹತನಾಗಲು ಈಶ್ವರ ಸುರೇಂದ್ರನು ಪುನಃ ದೇವರಾಜ್ಯದಲ್ಲಿ ಸ್ಥಾಪಿತನಾದನು.
13086030a ಸ ಸೇನಾಪತಿರೇವಾಥ ಬಭೌ ಸ್ಕಂದಃ ಪ್ರತಾಪವಾನ್|
13086030c ಈಶೋ ಗೋಪ್ತಾ ಚ ದೇವಾನಾಂ ಪ್ರಿಯಕೃಚ್ಚಂಕರಸ್ಯ ಚ||
ಪ್ರತಾಪವಾನ್ ಸ್ಕಂದನು ದೇವತೆಗಳ ಸೇನಾಪತಿಯಾದನು. ಅವರ ಈಶ ಮತ್ತು ರಕ್ಷಕನಾದನು. ಶಂಕರನಿಗೂ ಪ್ರಿಯನಾದನು.
13086031a ಹಿರಣ್ಯಮೂರ್ತಿರ್ಭಗವಾನೇಷ ಏವ ಚ ಪಾವಕಿಃ|
13086031c ಸದಾ ಕುಮಾರೋ ದೇವಾನಾಂ ಸೇನಾಪತ್ಯಮವಾಪ್ತವಾನ್||
ಇವನೇ ಹಿರಣ್ಯಮೂರ್ತಿ. ಭಗವಂತ. ಪಾವಕಿ. ಕುಮಾರನು ಸದಾ ದೇವತೆಗಳ ಸೇನಾಪತ್ಯವನ್ನು ಪಡೆದುಕೊಂಡನು.
13086032a ತಸ್ಮಾತ್ಸುವರ್ಣಂ ಮಂಗಲ್ಯಂ ರತ್ನಮಕ್ಷಯ್ಯಮುತ್ತಮಮ್|
13086032c ಸಹಜಂ ಕಾರ್ತ್ತಿಕೇಯಸ್ಯ ವಹ್ನೇಸ್ತೇಜಃ ಪರಂ ಮತಮ್||
ಆದುದರಿಂದ ಸುವರ್ಣವು ಮಂಗಲಕರವು. ಉತ್ತಮ ಅಕ್ಷಯ ರತ್ನವು. ಕಾರ್ತಿಕೇಯನೊಂದಿಗೆ ಇದು ಅಗ್ನಿಯ ಪರಮ ತೇಜಸ್ಸಿನಿಂದ ಹುಟ್ಟಿತೆಂಬ ಮತವಿದೆ.
13086033a ಏವಂ ರಾಮಾಯ ಕೌರವ್ಯ ವಸಿಷ್ಠೋಽಕಥಯತ್ಪುರಾ|
13086033c ತಸ್ಮಾತ್ಸುವರ್ಣದಾನಾಯ ಪ್ರಯತಸ್ವ ನರಾಧಿಪ||
ಕೌರವ್ಯ! ನರಾಧಿಪ! ಹೀಗೆ ಹಿಂದೆ ವಸಿಷ್ಠನು ರಾಮನಿಗೆ ಹೇಳಿದ್ದನು. ಆದುದರಿಂದ ಸುವರ್ಣದಾನಕ್ಕೆ ಪ್ರಯತ್ನಿಸು.
13086034a ರಾಮಃ ಸುವರ್ಣಂ ದತ್ತ್ವಾ ಹಿ ವಿಮುಕ್ತಃ ಸರ್ವಕಿಲ್ಬಿಷೈಃ|
13086034c ತ್ರಿವಿಷ್ಟಪೇ ಮಹತ್ ಸ್ಥಾನಮವಾಪಾಸುಲಭಂ ನರೈಃ||
ರಾಮನು ಸುವರ್ಣದಾನವನ್ನು ಮಾಡಿ ಸರ್ವಕಿಲ್ಬಿಷಗಳಿಂದ ವಿಮುಕ್ತನಾಗಿ ತ್ರಿವಿಷ್ಟಪದಲ್ಲಿ ನರರಿಗೆ ಸುಲಭವಲ್ಲದ ಮಹಾ ಸ್ಥಾನವನ್ನು ಪಡೆದುಕೊಂಡನು.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ತಾರಕವಧೋಪಾಖ್ಯಾನಂ ನಾಮ ಷಡಾಶೀತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ತಾರಕವಧೋಪಾಖ್ಯಾನ ಎನ್ನುವ ಎಂಭತ್ತಾರನೇ ಅಧ್ಯಾಯವು.
[1] ಕಾರ್ತಸ್ವರಸಮೀಪತಃ| (ಗೀತಾ ಪ್ರೆಸ್).
[2] ಅರ್ಕಸಮದ್ಯುತಿಮ್| (ಗೀತಾ ಪ್ರೆಸ್).
[3] ಪುತ್ರಂ (ಗೀತಾ ಪ್ರೆಸ್).
[4] ಸಗಜಾನ್ (ಗೀತಾ ಪ್ರೆಸ್).