ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೯೧
ಪರಂಧಾಮಕ್ಕೆ ಅಧಿಕಾರಿಯಾದ ಜಾಪಕನಿಗೆ ದೇವಲೋಕವೂ ನರಕಸದೃಶವೆನ್ನುವುದರ ಪ್ರತಿಪಾದನೆ (೧-೧೧).
12191001 ಯುಧಿಷ್ಠಿರ ಉವಾಚ|
12191001a ಕೀದೃಶೋ ಜಾಪಕೋ ಯಾತಿ ನಿರಯಂ ವರ್ಣಯಸ್ವ ಮೇ|
12191001c ಕೌತೂಹಲಂ ಹಿ ಮೇ ಜಾತಂ ತದ್ಭವಾನ್ವಕ್ತುಮರ್ಹತಿ||
ಯುಧಿಷ್ಠಿರನು ಹೇಳಿದನು: “ಜಾಪಕನು ಎಂತಹ ನರಕಕ್ಕೆ ಹೋಗುತ್ತಾನೆ ಎನ್ನುವುದನ್ನು ವರ್ಣಿಸು. ನನಗೆ ಇದರಲ್ಲಿ ಕುತೂಹಲವುಂಟಾಗಿದೆ. ಅದರ ಕುರಿತು ನೀನು ಹೇಳಬೇಕು.”
12191002 ಭೀಷ್ಮ ಉವಾಚ|
12191002a ಧರ್ಮಸ್ಯಾಂಶಃ ಪ್ರಸೂತೋಽಸಿ ಧರ್ಮಿಷ್ಠೋಽಸಿ ಸ್ವಭಾವತಃ|
12191002c ಧರ್ಮಮೂಲಾಶ್ರಯಂ ವಾಕ್ಯಂ ಶೃಣುಷ್ವಾವಹಿತೋಽನಘ||
ಭೀಷ್ಮನು ಹೇಳಿದನು: “ಅನಘ! ನೀನು ಧರ್ಮನ ಅಂಶದಿಂದ ಹುಟ್ಟಿರುವೆ. ಸ್ವಭಾವತಃ ಧರ್ಮಿಷ್ಠನಾಗಿರುವೆ. ಧರ್ಮಕ್ಕೆ ಮೂಲವಾದ ಈ ಮಾತನ್ನು ಏಕಾಗ್ರಚಿತ್ತನಾಗಿ ಕೇಳು.
12191003a ಅಮೂನಿ ಯಾನಿ ಸ್ಥಾನಾನಿ ದೇವಾನಾಂ ಪರಮಾತ್ಮನಾಮ್|
12191003c ನಾನಾಸಂಸ್ಥಾನವರ್ಣಾನಿ ನಾನಾರೂಪಫಲಾನಿ ಚ||
12191004a ದಿವ್ಯಾನಿ ಕಾಮಚಾರೀಣಿ ವಿಮಾನಾನಿ ಸಭಾಸ್ತಥಾ|
12191004c ಆಕ್ರೀಡಾ ವಿವಿಧಾ ರಾಜನ್ ಪದ್ಮಿನ್ಯಶ್ಚಾಮಲೋದಕಾಃ[1]||
ರಾಜನ್! ಪರಮ ಬುದ್ಧಿಶಾಲೀ ದೇವತೆಗಳಿಗಿರುವ ಸ್ಥಾನಗಳು ಅನೇಕ ರೂಪ-ಬಣ್ಣಗಳಿಂದ ಕೂಡಿವೆ. ಫಲಗಳೂ ನಾನಾರೀತಿಯವು. ಅಲ್ಲಿ ದೇವತೆಗಳಿಗೆ ಇಚ್ಛಾನುಸಾರ ಸಂಚರಿಸಲು ದಿವ್ಯ ವಿಮಾನಗಳು ಮತ್ತು ದಿವ್ಯ ಸಭೆಗಳಿವೆ. ಅಲ್ಲಿ ಅವರಿಗಾಗಿ ನಾನಾ ಪ್ರಕಾರದ ಕ್ರೀಡಾಂಗಣಗಳೂ ಮತ್ತು ಕಾಂಚನ ಪದ್ಮಗಳ ದಿವ್ಯ ಸರೋವರಗಳೂ ಇವೆ.
12191005a ಚತುರ್ಣಾಂ ಲೋಕಪಾಲಾನಾಂ ಶುಕ್ರಸ್ಯಾಥ ಬೃಹಸ್ಪತೇಃ|
12191005c ಮರುತಾಂ ವಿಶ್ವೇದೇವಾನಾಂ ಸಾಧ್ಯಾನಾಮಶ್ವಿನೋರಪಿ||
12191006a ರುದ್ರಾದಿತ್ಯವಸೂನಾಂ ಚ ತಥಾನ್ಯೇಷಾಂ ದಿವೌಕಸಾಮ್|
12191006c ಏತೇ ವೈ ನಿರಯಾಸ್ತಾತ ಸ್ಥಾನಸ್ಯ ಪರಮಾತ್ಮನಃ||
ಅಯ್ಯಾ! ವರುಣ, ಕುಬೇರ, ಇಂದ್ರ ಮತ್ತು ಯಮ – ಈ ನಾಲ್ವರು ಲೋಕಪಾಲಕರು, ಶುಕ್ರ, ಬೃಹಸ್ಪತಿ, ಮರುದ್ಗಣ, ವಿಶ್ವೇದೇವರು, ಸಾಧ್ಯರು, ಅಶ್ವಿನಿಯರು, ರುದ್ರರು, ಆದಿತ್ಯರು, ವಸುಗಳು ಮತ್ತು ಅನ್ಯ ದಿವೌಕಸರು ಇರುವ ಸ್ಥಾನಗಳು ಪರಮಾತ್ಮನ ಪರಂಧಾಮದ ಎದಿರು ನರಕಗಳೇ ಅಲ್ಲವೇ?
12191007a ಅಭಯಂ ಚಾನಿಮಿತ್ತಂ ಚ ನ ಚ ಕ್ಲೇಶಭಯಾವೃತಮ್|
12191007c ದ್ವಾಭ್ಯಾಂ ಮುಕ್ತಂ ತ್ರಿಭಿರ್ಮುಕ್ತಮಷ್ಟಾಭಿಸ್ತ್ರಿಭಿರೇವ ಚ||
ಪರಮಾತ್ಮನ ಪರಂಧಾಮದಲ್ಲಿ ವಿನಾಶದ ಭಯವಿಲ್ಲ. ಏಕೆಂದರೆ ಅದು ಕಾರಣರಹಿತ ನಿತ್ಯಸಿದ್ಧವಾಗಿದೆ[2]. ಅಲ್ಲಿ ಕ್ಲೇಶಗಳಿಲ್ಲ[3]. ಅಲ್ಲಿ ಪ್ರೀತಿ-ಅಪ್ರೀತಿಗಳೆಂಬ ದ್ವಂದ್ವಗಳಿಲ್ಲ[4]. ಮೂರು ಗುಣಗಳಿಂದಲೂ ಮತ್ತು ಎಂಟು ಪುರಿಗಳಿಂದಲೂ[5] ಅದು ಮುಕ್ತವಾಗಿದೆ. ಅದು ಭೂತ-ಭವಿಷ್ಯತ್-ವರ್ತಮಾನಗಳೆಂಬ ಮೂರರಿಂದಲೂ[6] ರಹಿತವಾಗಿದೆ.
12191008a ಚತುರ್ಲಕ್ಷಣವರ್ಜಂ ತು ಚತುಷ್ಕಾರಣವರ್ಜಿತಮ್|
12191008c ಅಪ್ರಹರ್ಷಮನಾನಂದಮಶೋಕಂ ವಿಗತಕ್ಲಮಮ್||
ಪರಮಾತ್ಮನ ಪರಂಧಾಮವು ನಾಲ್ಕು ಲಕ್ಷಣಗಳಿಂದಲೂ[7] ರಹಿತವಾಗಿದೆ. ನಾಲ್ಕು ಕಾರಣಗಳಿಂದಲೂ[8] ವರ್ಜಿತವಾಗಿದೆ. ಅಲ್ಲಿ ಹರ್ಷವಿಲ್ಲ. ಆನಂದವಿಲ್ಲ. ಮತ್ತು ಶೋಕವಿಲ್ಲ. ಶ್ರಮವೂ ಇಲ್ಲ.
12191009a ಕಾಲಃ ಸಂಪಚ್ಯತೇ[9] ತತ್ರ ನ ಕಾಲಸ್ತತ್ರ ವೈ ಪ್ರಭುಃ|
12191009c ಸ ಕಾಲಸ್ಯ ಪ್ರಭೂ ರಾಜನ್ ಸ್ವರ್ಗಸ್ಯಾಪಿ ತಥೇಶ್ವರಃ||
ರಾಜನ್! ಪರಮಾತ್ಮನ ಪರಂಧಾಮದಲ್ಲಿ ಕಾಲವು ಜೀರ್ಣವಾಗುತ್ತದೆ. ಅಲ್ಲಿ ಕಾಲವು ತನ್ನ ಪ್ರಭುತ್ವವನ್ನು ನಡೆಸಲಾರದು. ಅಲ್ಲಿ ಪರಮಾತ್ಮನೇ ಕಾಲದ ಪ್ರಭುವಾಗಿರುತ್ತಾನೆ. ಸ್ವರ್ಗಕ್ಕೂ ಅಧಿಪತಿಯಾಗಿರುತ್ತಾನೆ.
12191010a ಆತ್ಮಕೇವಲತಾಂ ಪ್ರಾಪ್ತಸ್ತತ್ರ ಗತ್ವಾ ನ ಶೋಚತಿ|
12191010c ಈದೃಶಂ ಪರಮಂ ಸ್ಥಾನಂ ನಿರಯಾಸ್ತೇ ಚ ತಾದೃಶಾಃ||
ಕೇವಲಾತ್ಮಭಾವವನ್ನು ಹೊಂದಿದವನು ಅಲ್ಲಿ ಹೋಗಿ ಶೋಕಿಸುವುದಿಲ್ಲ. ಪರಮಾತ್ಮನ ಪರಂಧಾಮವು ಇಂತಹ ಲಕ್ಷಣಗಳಿಂದ ಕೂಡಿದೆ. ಇತರ ಲೋಕಗಳು ಹಿಂದೆ ಹೇಳಿದ ಹಾಗೆ ಇದ್ದರೂ ಹೋಲಿಕೆಯಲ್ಲಿ ಅವು ನರಕಗಳಂತೆಯೇ.
12191011a ಏತೇ ತೇ ನಿರಯಾಃ ಪ್ರೋಕ್ತಾಃ ಸರ್ವ ಏವ ಯಥಾತಥಮ್|
12191011c ತಸ್ಯ ಸ್ಥಾನವರಸ್ಯೇಹ ಸರ್ವೇ ನಿರಯಸಂಜ್ಞಿತಾಃ||
ಹೀಗೆ ನಾನು ನಿನಗೆ ನರಕಗಳ ಕುರಿತು ಯಥಾವತ್ತಾಗಿ ಹೇಳಿದ್ದೇನೆ. ಪರಮಾತ್ಮನ ಪರಂಧಾಮದ ಮುಂದೆ ಉಳಿದೆಲ್ಲ ಲೋಕಗಳೂ ನರಕಗಳೆಂದೇ ಹೇಳಿದ್ದಾರೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ಏಕನವತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾತೊಂಭತ್ತೊಂದನೇ ಅಧ್ಯಾಯವು.
[1] ಪದ್ಮಿನ್ಯಶ್ಚೈವ ಕಾಂಚನಾಃ| (ಗೀತಾ ಪ್ರೆಸ್/ಭಾರತ ದರ್ಶನ).
[2] ಅನಿಮಿತ್ತಂ ಎನ್ನುವುದಕ್ಕೆ ಲಕ್ಷಣಾತೀತ ಎನ್ನುವ ಅನುವಾದವೂ ಇದೆ (ಭಾರತ ದರ್ಶನ).
[3] ಅಲ್ಲಿ ಅವಿದ್ಯಾ, ಅಸ್ಮಿತಾ, ರಾಗ, ದೋಷ ಮತ್ತು ಅಭಿನಿವೇಶ ಎಂಬ ಪಂಚಕ್ಲೇಶಗಳಿಲ್ಲ ಎಂಬ ಅನುವಾದವಿದೆ (ಗೀತಾ ಪ್ರೆಸ್/ಭಾರತ ದರ್ಶನ).
[4] ಅಶರೀರಂ ವಾವಸಂತಂ ನ ಪ್ರಿಯಾಪ್ರಿಯೇ ಸ್ಪೃಶತಃ| ಎಂಬ ಶ್ರುತಿವಾಕ್ಯವಿದೆ. (ಗೀತಾ ಪ್ರೆಸ್/ಭಾರತ ದರ್ಶನ).
[5] ಭೂತೇಂದ್ರಿಯಮನೋಬುದ್ಧಿವಾಸನಾಕರ್ಮವಾಯವಃ| ಅವಿದ್ಯಾ ಚೇತ್ಯಮುಂ ವರ್ಗಮಾಹುಃ ಪುರ್ಯಷ್ಟಕಂ ಬುಧಾಃ|| ಅರ್ಥಾತ್ ಭೂತ, ಇಂದ್ರಿಯ, ಮನಸ್ಸು, ಬುದ್ಧಿ, ಉಪಾಸನೆ, ಕರ್ಮ, ಪ್ರಾಣ, ಮತ್ತು ಅವಿದ್ಯೆ ಇವು ಎಂಟು ಪುರಿಗಳು. (ಗೀತಾ ಪ್ರೆಸ್/ಭಾರತ ದರ್ಶನ).
[6] ಈ ಮೂರನ್ನು ಜ್ಞಾತಾ, ಜ್ಞಾನ ಮತ್ತು ಜ್ಞೇಯ ಎಂದೂ ಅನುವಾದಿಸಿದ್ದಾರೆ (ಗೀತಾ ಪ್ರೆಸ್).
[7] ನಾಲ್ಕು ಲಕ್ಷಣಗಳ ವಿಷಯವಾಗಿ ಶ್ರುತಿಯಲ್ಲಿ ಹೀಗಿದೆ: ನ ದೃಷ್ಟೇರ್ದ್ರಷ್ಟಾರಂ ಪಶ್ಯೇರ್ನ ಶ್ರುತೇಃ ಶ್ರೋತಾರಂ ಶೃಣುಯಾ ನ ಮತೇರ್ಮಂತಾರಮನ್ವೀಯಾ ನ ವಿಜ್ಞಾತೇರ್ವಿಜ್ಞಾತಾರಂ ವಿಜಾನೀಯಾಃ|| (ಗೀತಾ ಪ್ರೆಸ್/ಭಾರತ ದರ್ಶನ).
[8] ಜ್ಞಾನಕ್ಕೆ ಕಾರಣಭೂತಗಳಾದ ಪ್ರತ್ಯಕ್ಷ, ಅನುಮಾನ, ಉಪಮಾನ ಮತ್ತು ಶಬ್ದಗಳೆಂಬ ನಾಲ್ಕು ಪ್ರಮಾಣಗಳು ಎಂಬ ಅನುವಾದವಿದೆ (ಗೀತಾ ಪ್ರೆಸ್/ಭಾರತ ದರ್ಶನ).
[9] ಸಂಪದ್ಯತೇ (ಗೀತಾ ಪ್ರೆಸ್/ಭಾರತ ದರ್ಶನ).