ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೮೧
ವರ್ಣವಿಭಾಗಪೂರ್ವಕವಾಗಿ ಮನುಷ್ಯರ ಮತ್ತು ಸಮಸ್ತ ಪ್ರಾಣಿಗಳ ಸೃಷ್ಟಿವರ್ಣನೆ (೧-೨೦).
12181001 ಭೃಗುರುವಾಚ|
12181001a ಅಸೃಜದ್ಬ್ರಾಹ್ಮಣಾನೇವ ಪೂರ್ವಂ ಬ್ರಹ್ಮಾ ಪ್ರಜಾಪತಿಃ|
12181001c ಆತ್ಮತೇಜೋಭಿನಿರ್ವೃತ್ತಾನ್ ಭಾಸ್ಕರಾಗ್ನಿಸಮಪ್ರಭಾನ್||
ಭೃಗುವು ಹೇಳಿದನು: “ಸೃಷ್ಟಿಯ ಪ್ರಾರಂಭದಲ್ಲಿ ಬ್ರಹ್ಮನು ತನ್ನ ತೇಜಸ್ಸಿನಿಂದ ಸೂರ್ಯಾಗ್ನಿಸಮಾನ ಪ್ರಭೆಯ ಬ್ರಾಹ್ಮಣ ಪ್ರಜಾಪತಿಗಳನ್ನು ಸೃಷ್ಟಿಸಿದನು.
12181002a ತತಃ ಸತ್ಯಂ ಚ ಧರ್ಮಂ ಚ ತಪೋ ಬ್ರಹ್ಮ ಚ ಶಾಶ್ವತಮ್|
12181002c ಆಚಾರಂ ಚೈವ ಶೌಚಂ ಚ ಸ್ವರ್ಗಾಯ ವಿದಧೇ ಪ್ರಭುಃ||
ಅನಂತರ ಪ್ರಭುವು ಸ್ವರ್ಗಪ್ರಾಪ್ತಿಯ ಸಾಧಕಗಳಾದ ಸತ್ಯ, ಧರ್ಮ, ತಪಸ್ಸು, ಸನಾತನ ವೇದ, ಆಚಾರ ಮತ್ತು ಶೌಚಗಳ ನಿಯಮಗಳನ್ನು ಸೃಷ್ಟಿಸಿದನು.
12181003a ದೇವದಾನವಗಂಧರ್ವದೈತ್ಯಾಸುರಮಹೋರಗಾಃ|
12181003c ಯಕ್ಷರಾಕ್ಷಸನಾಗಾಶ್ಚ ಪಿಶಾಚಾ ಮನುಜಾಸ್ತಥಾ||
ಅನಂತರ ದೇವತೆಗಳು, ದಾನವರು, ಗಂಧರ್ವರು, ದೈತ್ಯರು, ಅಸುರರು, ಮಹೋರಗರು, ಯಕ್ಷರು, ರಾಕ್ಷಸರು, ನಾಗರು, ಪಿಶಾಚಿಗಳು ಮತ್ತು ಮನುಷ್ಯರನ್ನು ಸೃಷ್ಟಿಸಿದನು.
12181004a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚ ದ್ವಿಜಸತ್ತಮ|
12181004c ಯೇ ಚಾನ್ಯೇ ಭೂತಸಂಘಾನಾಂ ಸಂಘಾಸ್ತಾಂಶ್ಚಾಪಿ ನಿರ್ಮಮೇ||
ದ್ವಿಜಸತ್ತಮ! ಅನಂತರ ಅವನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರನ್ನೂ ಮತ್ತು ಅನ್ಯ ಪಂಗಡದ ಪ್ರಾಣಿಸಮೂಹಗಳನ್ನೂ ನಿರ್ಮಿಸಿದನು.
12181005a ಬ್ರಾಹ್ಮಣಾನಾಂ ಸಿತೋ ವರ್ಣಃ ಕ್ಷತ್ರಿಯಾಣಾಂ ತು ಲೋಹಿತಃ|
12181005c ವೈಶ್ಯಾನಾಂ ಪೀತಕೋ ವರ್ಣಃ ಶೂದ್ರಾಣಾಮಸಿತಸ್ತಥಾ||
ಬ್ರಾಹ್ಮಣರರ ವರ್ಣವು ಶ್ವೇತ, ಕ್ಷತ್ರಿಯರ ವರ್ಣವು ಕೆಂಪು, ವೈಶ್ಯರ ವರ್ಣವು ಹಳದಿ ಮತ್ತು ಶೂದ್ರರ ವರ್ಣವು ಕಪ್ಪು ಎಂದಾಯಿತು.”
12181006 ಭರದ್ವಾಜ ಉವಾಚ|
12181006a ಚಾತುರ್ವರ್ಣ್ಯಸ್ಯ ವರ್ಣೇನ ಯದಿ ವರ್ಣೋ ವಿಭಜ್ಯತೇ|
12181006c ಸರ್ವೇಷಾಂ ಖಲು ವರ್ಣಾನಾಂ ದೃಶ್ಯತೇ ವರ್ಣಸಂಕರಃ||
ಭರದ್ವಾಜನು ಹೇಳಿದನು: “ನಾಲ್ಕು ವರ್ಣಗಳಲ್ಲಿ ಒಂದೊಂದಕ್ಕೂ ವರ್ಣಭೇದವಿದೆಯೆಂದಾದರೆ ಎಲ್ಲ ವರ್ಣಗಳಲ್ಲಿಯೂ ವಿಭಿನ್ನ ಬಣ್ಣದ ಮನುಷ್ಯರಿರುವುದರಿಂದ ವರ್ಣಸಂಕರವೇ ಕಾಣುತ್ತದೆ.
12181007a ಕಾಮಃ ಕ್ರೋಧೋ ಭಯಂ ಲೋಭಃ ಶೋಕಶ್ಚಿಂತಾ ಕ್ಷುಧಾ ಶ್ರಮಃ|
12181007c ಸರ್ವೇಷಾಂ ನಃ ಪ್ರಭವತಿ ಕಸ್ಮಾದ್ವರ್ಣೋ ವಿಭಜ್ಯತೇ||
ಕಾಮ, ಕ್ರೋಧ, ಭಯ, ಲೋಭ, ಶೋಕ, ಚಿಂತೆ, ಹಸಿವು ಮತ್ತು ಬಳಲಿಕೆ ಎಲ್ಲವೂ ನಮ್ಮೆಲ್ಲರಿಗೂ ಸಮಾನವಾಗಿರುವಾಗ ವರ್ಣಭೇದಕ್ಕೆ ಕಾರಣವೇನು?
12181008a ಸ್ವೇದಮೂತ್ರಪುರೀಷಾಣಿ ಶ್ಲೇಷ್ಮಾ ಪಿತ್ತಂ ಸಶೋಣಿತಮ್|
12181008c ತನುಃ ಕ್ಷರತಿ ಸರ್ವೇಷಾಂ ಕಸ್ಮಾದ್ವರ್ಣೋ ವಿಭಜ್ಯತೇ||
ಎಲ್ಲರ ಶರೀರಗಳಿಂದಲೂ ಬೆವರು, ಮಲ-ಮೂತ್ರಗಳು, ಕಫ, ಪಿತ್ತ, ಮತ್ತು ರಕ್ತಗಳು ಹರಿಯುತ್ತವೆ. ಹೀಗಿರುವಾಗ ವರ್ಣಗಳನ್ನಾಗಿ ವಿಭಾಗಿಸಿರುವುದರ ಕಾರಣವೇನು?
12181009a ಜಂಗಮಾನಾಮಸಂಖ್ಯೇಯಾಃ ಸ್ಥಾವರಾಣಾಂ ಚ ಜಾತಯಃ|
12181009c ತೇಷಾಂ ವಿವಿಧವರ್ಣಾನಾಂ ಕುತೋ ವರ್ಣವಿನಿಶ್ಚಯಃ||
ಪಶು-ಪಕ್ಷಿ-ಮನುಷ್ಯಾದಿ ಜಂಗಮಪ್ರಾಣಿಗಳಲ್ಲಿಯೂ ವೃಕ್ಷವೇ ಮೊದಲಾದ ಸ್ಥಾವರ ಪ್ರಾಣಿಗಳಲ್ಲಿಯೂ ಅಸಂಖ್ಯಾತ ಜಾತಿಗಳಿವೆ. ಎಲ್ಲವೂ ನಾನಾ ಬಣ್ಣಗಳಿಂದ ಕೂಡಿವೆ. ಅವುಗಳಲ್ಲಿ ಬ್ರಾಹ್ಮಣಾದಿ ವರ್ಣಗಳನ್ನು ನಿಶ್ಚಯಿಸುವುದು ಹೇಗೆ?”
12181010 ಭೃಗುರುವಾಚ|
12181010a ನ ವಿಶೇಷೋಽಸ್ತಿ ವರ್ಣಾನಾಂ ಸರ್ವಂ ಬ್ರಾಹ್ಮಮಿದಂ ಜಗತ್|
12181010c ಬ್ರಹ್ಮಣಾ ಪೂರ್ವಸೃಷ್ಟಂ ಹಿ ಕರ್ಮಭಿರ್ವರ್ಣತಾಂ ಗತಮ್||
ಭೃಗುವು ಹೇಳಿದನು: “ಮೊದಲು ವರ್ಣಗಳಲ್ಲಿ ಯಾವ ಅಂತರವೂ ಇರಲಿಲ್ಲ. ಬ್ರಹ್ಮನಿಂದ ಹುಟ್ಟಿದ ಕಾರಣ ಈ ಎಲ್ಲ ಜಗತ್ತೂ ಬ್ರಾಹ್ಮಣವೇ ಆಗಿತ್ತು. ನಂತರ ವಿಭಿನ್ನ ಕರ್ಮಗಳ ಕಾರಣದಿಂದ ಅವುಗಳಲ್ಲಿ ವರ್ಣಭೇದವುಂಟಾಯಿತು.
12181011a ಕಾಮಭೋಗಪ್ರಿಯಾಸ್ತೀಕ್ಷ್ಣಾಃ ಕ್ರೋಧನಾಃ ಪ್ರಿಯಸಾಹಸಾಃ|
12181011c ತ್ಯಕ್ತಸ್ವಧರ್ಮಾ ರಕ್ತಾಂಗಾಸ್ತೇ ದ್ವಿಜಾಃ ಕ್ಷತ್ರತಾಂ ಗತಾಃ||
ಸ್ವಧರ್ಮವನ್ನು ತ್ಯಜಿಸಿ ಕಾಮಭೋಗಗಳ ಪ್ರೇಮೀ, ತೀಕ್ಷ್ಣಸ್ವಭಾವದ, ಕ್ರೋಧೀ ಮತ್ತು ಸಾಹಸಕರ್ಮಗಳನ್ನು ಇಷ್ಟಪಡುವವರ ಶರೀರಗಳು ಈ ಕಾರಣಗಳಿಂದ ಕೆಂಪುಬಣ್ಣವನ್ನು ತಾಳಿತು ಮತ್ತು ಅಂಥಹ ಬ್ರಾಹ್ಮಣರು ಕ್ಷತ್ರಿಯಭಾವವನ್ನು ಪಡೆದುಕೊಂಡರು.
12181012a ಗೋಷು ವೃತ್ತಿಂ ಸಮಾಧಾಯ ಪೀತಾಃ ಕೃಷ್ಯುಪಜೀವಿನಃ|
12181012c ಸ್ವಧರ್ಮಂ ನಾನುತಿಷ್ಠಂತಿ ತೇ ದ್ವಿಜಾ ವೈಶ್ಯತಾಂ ಗತಾಃ||
ಸ್ವಧರ್ಮಗಳನ್ನು ಅನುಷ್ಠಾನಮಾಡದೇ ಗೋಪಾಲನೆ ಮತ್ತು ಕೃಷಿಗಳಿಂದ ಉಪಜೀವನವನ್ನು ನಡೆಸುವವರ ಶರೀರವು ಹಳದೀ ಬಣ್ಣವನ್ನು ತಳೆಯಿತು ಮತ್ತು ಅಂತಹ ಬ್ರಾಹ್ಮಣರು ವೈಶ್ಯತ್ವವನ್ನು ಪಡೆದುಕೊಂಡರು.
12181013a ಹಿಂಸಾನೃತಪ್ರಿಯಾ ಲುಬ್ಧಾಃ ಸರ್ವಕರ್ಮೋಪಜೀವಿನಃ|
12181013c ಕೃಷ್ಣಾಃ ಶೌಚಪರಿಭ್ರಷ್ಟಾಸ್ತೇ ದ್ವಿಜಾಃ ಶೂದ್ರತಾಂ ಗತಾಃ||
ಯಾವ ಬ್ರಾಹ್ಮಣರು ಶೌಚ ಮತ್ತು ಸದಾಚಾರಭ್ರಷ್ಟರಾಗಿ ಹಿಂಸೆ ಮತ್ತು ಸುಳ್ಳಿನಲ್ಲಿ ಆಸಕ್ತರಾಗಿ ಲೋಭವಶರಾಗಿ ಎಲ್ಲಕರ್ಮಗಳಿಂದಲೂ ಜೀವನವನ್ನು ನಡೆಸಿದರೋ ಶರೀರವು ಕಪ್ಪು ಬಣ್ಣವನ್ನು ತಾಳಿತು ಮತ್ತು ಅವರು ಶೂದ್ರತ್ವವನ್ನು ಪಡೆದುಕೊಂಡರು.
12181014a ಇತ್ಯೇತೈಃ ಕರ್ಮಭಿರ್ವ್ಯಸ್ತಾ ದ್ವಿಜಾ ವರ್ಣಾಂತರಂ ಗತಾಃ|
12181014c ಧರ್ಮೋ ಯಜ್ಞಕ್ರಿಯಾ ಚೈಷಾಂ ನಿತ್ಯಂ ನ ಪ್ರತಿಷಿಧ್ಯತೇ||
ಇಂತಹ ಕರ್ಮಗಳಿಂದಲೇ ಬ್ರಾಹ್ಮಣರು ವರ್ಣಾಂತರವನ್ನು ಹೊಂದಿದರು. ಆದರೆ ಅವರಿಗೆ ನಿತ್ಯಧರ್ಮಾನುಷ್ಠಾನ ಮತ್ತು ಯಜ್ಞಕ್ರಿಯೆಗಳನ್ನು ನಿಷೇಧಿಸಿಲ್ಲ.
12181015a ವರ್ಣಾಶ್ಚತ್ವಾರ ಏತೇ ಹಿ ಯೇಷಾಂ ಬ್ರಾಹ್ಮೀ ಸರಸ್ವತೀ|
12181015c ವಿಹಿತಾ ಬ್ರಹ್ಮಣಾ ಪೂರ್ವಂ ಲೋಭಾತ್ತ್ವಜ್ಞಾನತಾಂ ಗತಾಃ||
ಹೀಗೆ ನಾಲ್ಕು ವರ್ಣಗಳುಂಟಾದಾಗ ಅವರಿಗಾಗಿ ಬ್ರಹ್ಮನು ಮೊದಲು ಬ್ರಾಹ್ಮೀ ಸರಸ್ವತಿ ವೇದವಾಣಿಯನ್ನು ಪ್ರಕಟಿಸಿದನು. ಆದರೆ ಲೋಭವಿಶೇಷದ ಕಾರಣ ಅಜ್ಞಾನಭಾವವನ್ನು ಹೊಂದಿದವರು ವೇದಾಧ್ಯಯನದ ಅನಧಿಕಾರಿಗಳಾಗಿಬಿಟ್ಟರು.
12181016a ಬ್ರಾಹ್ಮಣಾ ಧರ್ಮತಂತ್ರಸ್ಥಾಸ್ತಪಸ್ತೇಷಾಂ ನ ನಶ್ಯತಿ|
12181016c ಬ್ರಹ್ಮ ಧಾರಯತಾಂ ನಿತ್ಯಂ ವ್ರತಾನಿ ನಿಯಮಾಂಸ್ತಥಾ||
ವೇದದ ಆಜ್ಞಾನುಸಾರ ಎಲ್ಲ ಕಾರ್ಯಗಳನ್ನೂ ಮಾಡುವ, ವೇದಮಂತ್ರಗಳನ್ನು ಸ್ಮರಿಸಿಕೊಂಡಿರುವ, ಮತ್ತು ಸದಾ ವ್ರತಾದಿ ನಿಯಮಗಳನ್ನು ಪಾಲಿಸುವ ಬ್ರಾಹ್ಮಣರ ತಪಸ್ಸು ಎಂದೂ ನಷ್ಟವಾಗುವುದಿಲ್ಲ.
12181017a ಬ್ರಹ್ಮ ಚೈತತ್ಪುರಾ ಸೃಷ್ಟಂ ಯೇ ನ ಜಾನಂತ್ಯತದ್ವಿದಃ|
12181017c ತೇಷಾಂ ಬಹುವಿಧಾಸ್ತ್ವನ್ಯಾಸ್ತತ್ರ ತತ್ರ ಹಿ ಜಾತಯಃ||
ಈ ಸಂಪೂರ್ಣ ಸೃಷ್ಟಿಯನ್ನೂ ಪರಬ್ರಹ್ಮ ಪರಮಾತ್ಮನ ರೂಪವೆಂದು ತಿಳಿಯದೇ ಇರುವವರು ಬ್ರಾಹ್ಮಣರೆಂದು ಕರೆಯಲ್ಪಡಲು ಅಧಿಕಾರವಿಲ್ಲ. ಇಂಥವರು ಬಹುವಿಧದ ಅನ್ಯ ಯೋನಿಗಳನ್ನು ಜನ್ಮತಾಳಬೇಕಾಗುತ್ತದೆ.
12181018a ಪಿಶಾಚಾ ರಾಕ್ಷಸಾಃ ಪ್ರೇತಾ ಬಹುಧಾ ಮ್ಲೇಚ್ಚಜಾತಯಃ|
12181018c ಪ್ರನಷ್ಟಜ್ಞಾನವಿಜ್ಞಾನಾಃ ಸ್ವಚ್ಚಂದಾಚಾರಚೇಷ್ಟಿತಾಃ||
ಜ್ಞಾನವಿಜ್ಞಾನವಿಹೀನರಾದ ಸ್ವೇಚ್ಛಾಚಾರಿಗಳು ಪಿಶಾಚಿ, ರಾಕ್ಷಸ, ಪ್ರೇತ ಮತ್ತು ನಾನಾವಿಧದ ಮ್ಲೇಚ್ಛಜಾತಿಗಳವರಾಗುತ್ತಾರೆ.
12181019a ಪ್ರಜಾ ಬ್ರಾಹ್ಮಣಸಂಸ್ಕಾರಾಃ ಸ್ವಧರ್ಮಕೃತನಿಶ್ಚಯಾಃ|
12181019c ಋಷಿಭಿಃ ಸ್ವೇನ ತಪಸಾ ಸೃಜ್ಯಂತೇ ಚಾಪರೇ ಪರೈಃ||
ಹಿಂದಿನ ಋಷಿಗಳು ತಮ್ಮ ತಪಸ್ಸಿನ ಬಲದಿಂದ ಬ್ರಾಹ್ಮಣಸಂಸ್ಕಾರ ಸಂಪನ್ನ, ಸ್ವಧರ್ಮದಂತೆ ಮಾಡಬೇಕೆಂಬ ನಿಶ್ಚಯವುಳ್ಳ ಸಂತಾನಗಳನ್ನೇ ಸೃಷ್ಟಿಸಿದರು. ಬೇರೆಯವರು ಇತರರಿಂದ ಸೃಷ್ಟಿಸಲ್ಪಟ್ಟರು.
12181020a ಆದಿದೇವಸಮುದ್ಭೂತಾ ಬ್ರಹ್ಮಮೂಲಾಕ್ಷಯಾವ್ಯಯಾ|
12181020c ಸಾ ಸೃಷ್ಟಿರ್ಮಾನಸೀ ನಾಮ ಧರ್ಮತಂತ್ರಪರಾಯಣಾ||
ಬ್ರಹ್ಮಮೂಲವೂ, ಅಕ್ಷರವೂ, ಅವಿಕಾರಿಯೂ ಮತ್ತು ಧರ್ಮತಂತ್ರವನ್ನೇ ಆಶ್ರಯಿಸಿರುವ ಈ ಸೃಷ್ಟಿಯು ಆದಿದೇವ ಬ್ರಹ್ಮನ ಮನಸ್ಸಿನಿಂದ ಉತ್ಪನ್ನವಾಗಿರುವುದರಿಂದ ಇದನ್ನು ಮಾನಸೀ ಸೃಷ್ಟಿ ಎಂದು ಹೇಳುತ್ತಾರೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ವರ್ಣವಿಭಾಗಕಥನೇ ಏಕಾಶೀತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದೇ ವರ್ಣವಿಭಾಗಕಥನ ಎನ್ನುವ ನೂರಾಎಂಭತ್ತೊಂದನೇ ಅಧ್ಯಾಯವು.